ಯೆಹೋವನ ಸಂಸ್ಥೆಯು ನಿಮ್ಮ ಶುಶ್ರೂಷೆಗೆ ಬೆಂಬಲ ನೀಡುತ್ತದೆ
“ಮತ್ತೊಬ್ಬ ದೇವದೂತನು ಆಕಾಶಮಧ್ಯದಲ್ಲಿ ಹಾರಿಹೋಗುವದನ್ನು ಕಂಡೆನು. . . . ಸಾರಿಹೇಳುವದಕ್ಕೆ ನಿತ್ಯವಾದ ಶುಭವರ್ತಮಾನವು ಅವನಲ್ಲಿತ್ತು.”—ಪ್ರಕಟನೆ 14:6.
1. ಯೆಹೋವನ ಸಾಕ್ಷಿಗಳು ಹೇಗೆ ಪರೀಕ್ಷಿಸಲ್ಪಟ್ಟಿದ್ದಾರೆ, ಮತ್ತು ಅವರು ಏಕೆ ಪಾರಾಗಿ ಉಳಿದಿದ್ದಾರೆ?
ಕ್ರೈಸ್ತ ಶುಶ್ರೂಷೆಗೆ ಬೆಂಬಲ ನೀಡುವುದರಲ್ಲಿ, ಯೆಹೋವನ ಸ್ವರ್ಗೀಯ ಸಂಸ್ಥೆಯ ಪಾತ್ರವನ್ನು ಅಂಗೀಕರಿಸುವುದು ಅಷ್ಟೊಂದು ಪ್ರಾಮುಖ್ಯವಾದದ್ದಾಗಿದೆ ಏಕೆ? ಯೆಹೋವನ ಸ್ವರ್ಗೀಯ ಸೈನ್ಯಗಳ ಬೆಂಬಲವು ಇಲ್ಲದಿರುತ್ತಿದ್ದಲ್ಲಿ, ಹಗೆತನವಿರುವ ಈ ಲೋಕದಾದ್ಯಂತ ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಕೆಲಸವನ್ನು ಯೆಹೋವನ ಸಾಕ್ಷಿಗಳು ಪೂರೈಸಸಾಧ್ಯವಿತ್ತೊ? ಸಾಕ್ಷಿಗಳು ಅಂತಹ ಸಾರುವಿಕೆಯನ್ನು, ವಿಪರೀತ ರಾಷ್ಟ್ರೀಯತೆ, ಸರ್ವಾಧಿಕಾರಿ ಪದ್ಧತಿಯಿರುವ ರಾಜಕೀಯ ವ್ಯವಸ್ಥೆಗಳು, ಲೋಕ ಯುದ್ಧಗಳು, ಮತ್ತು ವಿವಿಧ ವಿಪತ್ತುಗಳ ಒಂದು ಶತಮಾನದಲ್ಲಿ ಮಾಡಿದ್ದಾರೆ. ಯೆಹೋವನ ಸಹಾಯವಿಲ್ಲದೆ, ಸಾಕ್ಷಿಗಳು ತಮ್ಮ ವಿರುದ್ಧವಾಗಿ ಯೋಜಿಸಲ್ಪಟ್ಟಿರುವ ಪೂರ್ವಕಲ್ಪಿತ ಅಭಿಪ್ರಾಯದ ಅಂತಾರಾಷ್ಟ್ರೀಯ ನಿಷೇಧ, ಪಕ್ಷಪಾತ, ಮತ್ತು ಅನೇಕವೇಳೆ ಕ್ರೂರವಾದ ಹಿಂಸೆಯಿಂದ ಪಾರಾಗಸಾಧ್ಯವಿತ್ತೊ?—ಕೀರ್ತನೆ 34:7.
ಲೋಕವ್ಯಾಪಕವಾದ ವಿರೋಧದ ಎದುರಿನಲ್ಲೂ ಪಾರಾಗಿ ಉಳಿಯುವುದು
2. ಪ್ರಥಮ ಶತಮಾನದ ಹಾಗೂ ಇಂದಿನ ದಿನದ ನಿಜ ಕ್ರೈಸ್ತರ ನಡುವೆ ಯಾವ ಸಮಾನಾಂತರವಿದೆ?
2 ಇಪ್ಪತ್ತನೆಯ ಶತಮಾನದಲ್ಲಿ, ಯೆಹೋವನ ಕೆಲಸವನ್ನು ತಡೆಗಟ್ಟುವ ಅಥವಾ ನಿಗ್ರಹಿಸುವ ಪ್ರಯತ್ನದಿಂದ, ಧಾರ್ಮಿಕ ಹಾಗೂ ರಾಜಕೀಯ ವಿರೋಧಿಗಳು, ಸಾಧ್ಯವಿರುವ ಪ್ರತಿಯೊಂದು—ಶಾಸನಬದ್ಧವಾದ ಹಾಗೂ ಇನ್ನಿತರ—ಅಡಚಣೆಯನ್ನೂ ತಂದೊಡ್ಡಿದ್ದಾರೆ. ಅನೇಕವೇಳೆ ಮಹಾ ಬಾಬೆಲಿನ ಪಾದ್ರಿಗಳ ಪ್ರೇರಣೆಯಿಂದಾಗಿ, ಕ್ರೈಸ್ತ ಸಹೋದರ ಸಹೋದರಿಯರನ್ನು ಹಿಂಸಿಸಲಾಗಿದೆ, ತಪ್ಪಾಗಿ ಪ್ರತಿನಿಧಿಸಲಾಗಿದೆ, ಮೊಕದ್ದಮೆ ಹೂಡಲಾಗಿದೆ ಮತ್ತು ಮಿಥ್ಯಾಪವಾದ ಹೊರಿಸಲಾಗಿದೆ. ಅನೇಕರನ್ನು ಕೊಲ್ಲಲಾಗಿದೆ. “ಆ ಮತದ ವಿಷಯದಲ್ಲಿ ಜನರು ಎಲ್ಲೆಲ್ಲಿಯೂ ವಿರುದ್ಧವಾಗಿ ಮಾತಾಡುತ್ತಾರೆಂಬುದೊಂದೇ ನಮಗೆ ಗೊತ್ತದೆ” ಎಂದು ಆದಿ ಕ್ರೈಸ್ತರ ವಿಷಯದಲ್ಲಿ ಹೇಳಸಾಧ್ಯವಿದ್ದಂತೆಯೇ ಇಂದೂ ಹೇಳಸಾಧ್ಯವಿದೆ. ಕ್ರಿಸ್ತನ ಶುಶ್ರೂಷೆಯನ್ನು ನಿಲ್ಲಿಸಲಿಕ್ಕಾಗಿ, ಅವನ ಸಮಯದ ಯೆಹೂದಿ ವೈದಿಕರು ಪಟ್ಟುಹಿಡಿದು ಹೋರಾಡಿದಂತೆಯೇ, ತಮ್ಮ ರಾಜಕೀಯ ಪ್ರೇಮಿಗಳೊಂದಿಗೆ ಜೊತೆಗೂಡಿರುವ ವೈದಿಕರು ಹಾಗೂ ಧರ್ಮಭ್ರಷ್ಟರು, ಯೆಹೋವನ ಜನರ ಶೈಕ್ಷಣಿಕ ಸಾಕ್ಷಿ ಕಾರ್ಯಕ್ಕೆ ಅಡ್ಡಿಯನ್ನು ಉಂಟುಮಾಡಲು ಪ್ರಯತ್ನಿಸಿದ್ದಾರೆ.—ಅ. ಕೃತ್ಯಗಳು 28:22; ಮತ್ತಾಯ 26:59, 65-67.
3. ಹೆನ್ರಿಕ ಸುರ್ಳ ಯಥಾರ್ಥತೆಯಿಂದ ನಾವು ಏನನ್ನು ಕಲಿಯಸಾಧ್ಯವಿದೆ?
3 ಪೋಲೆಂಡ್ನಲ್ಲಿ 1946, ಮಾರ್ಚ್ 1ರಂದು ಸಂಭವಿಸಿದ ಸಂಗತಿಯನ್ನು ಒಂದು ಉದಾಹರಣೆಯಾಗಿ ಪರಿಗಣಿಸಿರಿ. ಕೆಲ್ಮ್ ಊರಿನ ಸಮೀಪದಿಂದ ಬಂದ ಹೆನ್ರಿಕ ಸುರ್ ಎಂಬ ಹೆಸರಿನ 15 ವರ್ಷ ಪ್ರಾಯದ ಸಾಕ್ಷಿ ಹುಡುಗಿಯೊಬ್ಬಳು, ಹತ್ತಿರದ ಹಳ್ಳಿಯಲ್ಲಿದ್ದ ಆಸಕ್ತ ಜನರನ್ನು ಭೇಟಿಮಾಡಲಿಕ್ಕಾಗಿ, ಇನ್ನೊಬ್ಬ ಸಾಕ್ಷಿ ಸಹೋದರನೊಂದಿಗೆ ಹೋದಳು. ಅವರು ನಾರಡವೆ ಶೀವಿ ಸ್ಬ್ರೈನೆ (ರಾಷ್ಟ್ರೀಯ ಶಸ್ತ್ರಸಜ್ಜಿತ ಪಡೆಗಳು) ಎಂದು ಕರೆಯಲ್ಪಡುವ ಒಂದು ಕ್ಯಾಥೊಲಿಕ್ ಮಿಲಿಟರಿ ತಂಡದ ಸದಸ್ಯರಿಂದ ಹಿಡಿದೊಯ್ಯಲ್ಪಟ್ಟರು. ಆ ಸಹೋದರನು ತುಂಬ ಹೊಡೆಯಲ್ಪಟ್ಟನಾದರೂ, ಅವನು ಜೀವಸಹಿತ ಪಾರಾದನು. ಆದರೆ ಹೆನ್ರಿಕಳ ವಿಷಯದಲ್ಲಿ ಹಾಗಿರಲಿಲ್ಲ. ಶಿಲುಬೆಯಾಕಾರದ ಕ್ಯಾಥೊಲಿಕ್ ಚಿಹ್ನೆಯನ್ನು ಮಾಡುವಂತೆ ಅವಳನ್ನು ಅವರು ಒತ್ತಾಯಿಸುತ್ತಿದ್ದಾಗ, ಅನೇಕ ತಾಸುಗಳ ವರೆಗೆ ಅವರು ಅವಳಿಗೆ ಭಯಂಕರವಾಗಿ ಚಿತ್ರಹಿಂಸೆ ನೀಡಿದರು. ಅವಳಿಗೆ ಚಿತ್ರಹಿಂಸೆ ನೀಡಿದವರಲ್ಲಿ ಒಬ್ಬನು ಹೇಳಿದ್ದು: “ನಿನ್ನ ಮನಸ್ಸಿನೊಳಗೆ ನೀನು ಏನು ಬೇಕಾದರೂ ನಂಬು, ಆದರೆ ಕೇವಲ ಶಿಲುಬೆಯಾಕಾರದ ಕ್ಯಾಥೊಲಿಕ್ ಚಿಹ್ನೆಯನ್ನು ಮಾಡಿ ತೋರಿಸು. ಇಲ್ಲದಿದ್ದರೆ ಒಂದು ಗುಂಡು ನಿನಗಾಗಿ ಕಾದಿದೆ!” ಅವಳು ತನ್ನ ಯಥಾರ್ಥತೆಯನ್ನು ಸಡಿಲಿಸಿದಳೊ? ಇಲ್ಲ. ಧಾರ್ಮಿಕ ಹೇಡಿಗಳು ಅವಳನ್ನು ಸಮೀಪದಲ್ಲಿದ್ದ ಕಾಡಿಗೆ ಎಳೆದೊಯ್ದು, ಅಲ್ಲಿ ಅವಳ ಮೇಲೆ ಗುಂಡುಹಾರಿಸಿದರು. ಆದರೂ, ಅವಳೇ ಜಯಶಾಲಿಯಾದಳು! ಅವಳ ಯಥಾರ್ಥತೆಯನ್ನು ಮುರಿಯುವುದರಲ್ಲಿ ಅವರು ವಿಫಲರಾಗಿದ್ದರು.a—ರೋಮಾಪುರ 8:35-39.
4. ರಾಜಕೀಯ ಹಾಗೂ ಧಾರ್ಮಿಕ ಜನವಿಭಾಗಗಳು, ರಾಜ್ಯ ಸಾರುವಿಕೆಯ ಕೆಲಸವನ್ನು ನಿಗ್ರಹಿಸಲು ಹೇಗೆ ಪ್ರಯತ್ನಿಸಿವೆ?
4 ಒಂದು ನೂರು ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ, ದೇವರ ಆಧುನಿಕ ದಿನದ ಸೇವಕರು ನಿಷ್ಠುರವಾಗಿ ಹಾಗೂ ಅಗೌರವದಿಂದ ಉಪಚರಿಸಲ್ಪಟ್ಟಿದ್ದಾರೆ. ಯೆಹೋವನ ಸಾಕ್ಷಿಗಳು ಸೈತಾನನ ಪ್ರಧಾನ ಧರ್ಮಗಳ ಒಂದು ಭಾಗವಾಗಿರದ ಕಾರಣ, ಹಾಗೂ ಅದರ ಭಾಗವಾಗಿರಲು ಬಯಸದಿರುವ ಕಾರಣದಿಂದಲೇ, ಅವರು ಯಾವುದೇ ರೀತಿಯ ಪಕ್ಷಪಾತಭರಿತ ವಿಮರ್ಶಕನಿಗೆ ಅಥವಾ ಮತಾಂಧ ಎದುರಾಳಿಗೆ ಸರಿಯಾದ ಬಲಿಪಶುವಾಗಿ ವೀಕ್ಷಿಸಲ್ಪಡುತ್ತಾರೆ. ರಾಜಕೀಯ ಜನವಿಭಾಗಗಳಿಂದ ಅವರು ಕ್ರೂರವಾಗಿ ಆಕ್ರಮಣಕ್ಕೊಳಗಾಗಿದ್ದಾರೆ. ಅನೇಕ ಸಾಕ್ಷಿಗಳು ತಮ್ಮ ನಂಬಿಕೆಯ ಕಾರಣದಿಂದ ಕೊಲ್ಲಲ್ಪಟ್ಟಿದ್ದಾರೆ. ಪ್ರಜಾಪ್ರಭುತ್ವಗಳೆಂದು ಕರೆಯಲ್ಪಡುವಂತಹ ದೇಶಗಳು ಸಹ, ಸುವಾರ್ತೆಯ ಸಾರುವಿಕೆಯನ್ನು ತಡೆಯಲು ಪ್ರಯತ್ನಿಸಿವೆ. 1917ರಷ್ಟು ಹಿಂದೆ, ಕೆನಡ ಮತ್ತು ಅಮೆರಿಕದಲ್ಲಿ, ಬೈಬಲ್ ವಿದ್ಯಾರ್ಥಿಗಳ—ಆಗ ಸಾಕ್ಷಿಗಳು ಹೀಗೆಂದು ಪ್ರಸಿದ್ಧರಾಗಿದ್ದರು—ವಿರುದ್ಧವಾಗಿ ಪಾದ್ರಿಗಳು, ಅವರು ಸರಕಾರವನ್ನು ಉರುಳಿಸುತ್ತಾರೆಂಬ ಆಪಾದನೆಗಳನ್ನು ಹೊರಿಸಿದರು. ವಾಚ್ ಟವರ್ ಸೊಸೈಟಿಯ ಅಧಿಕಾರಿಗಳು, ಸುಳ್ಳು ಕಾರಣಕ್ಕಾಗಿ ಬಂಧಿಸಲ್ಪಟ್ಟರು, ಆದರೆ ನಂತರ ಬಿಡುಗಡೆಮಾಡಲ್ಪಟ್ಟರು.—ಪ್ರಕಟನೆ 11:7-9; 12:17.
5. ಯೆಹೋವನ ಸೇವಕರನ್ನು ಪ್ರೋತ್ಸಾಹಿಸಲು ಯಾವ ಮಾತುಗಳು ಕಾರ್ಯಸಾಧಿಸಿವೆ?
5 ಕ್ರಿಸ್ತನ ಸಹೋದರರ ಹಾಗೂ ಅವರ ನಿಷ್ಠಾವಂತ ಸಹವಾಸಿಗಳ ಸಾರುವ ಕಾರ್ಯವನ್ನು ನಿಲ್ಲಿಸಲು ಪ್ರಯತ್ನಿಸಲಿಕ್ಕಾಗಿ, ಸೈತಾನನು ತನ್ನ ವಶದಲ್ಲಿರುವ ಸರ್ವ ಮಾಧ್ಯಮಗಳನ್ನೂ ಉಪಯೋಗಿಸಿದ್ದಾನೆ. ಆದರೂ, ಬಹಳಷ್ಟು ಅನುಭವಗಳು ತೋರಿಸುವಂತೆ, ಬೆದರಿಕೆಗಳಾಗಲಿ, ಭಯಹುಟ್ಟಿಸುವಿಕೆಗಳಾಗಲಿ, ಶಾರೀರಿಕ ಹಿಂಸಾಚಾರವಾಗಲಿ, ಸೆರೆವಾಸಗಳಾಗಲಿ, ಕೂಟ ಶಿಬಿರಗಳಾಗಲಿ, ಮರಣವಾಗಲಿ, ಯೆಹೋವನ ಸಾಕ್ಷಿಗಳನ್ನು ಮೌನವಾಗಿಸಿಲ್ಲ. ಮತ್ತು ಇತಿಹಾಸದಾದ್ಯಂತ ಇದೇ ನಿಜಾಂಶವಾಗಿ ಪರಿಣಮಿಸಿದೆ. ಪದೇ ಪದೇ ಎಲೀಷನ ಮಾತುಗಳು ಒಂದು ಉತ್ತೇಜನದೋಪಾದಿ ಕಾರ್ಯನಡಿಸಿವೆ: “ಹೆದರಬೇಡ; ಅವರ ಕಡೆಯಲ್ಲಿರುವವರಿಗಿಂತಲೂ ನಮ್ಮ ಕಡೆಯಲ್ಲಿರುವವರು ಹೆಚ್ಚಾಗಿದ್ದಾರೆ.” ಒಂದು ಕಾರಣವೇನೆಂದರೆ, ಪಿಶಾಚನ ತಂಡಗಳಿಗಿಂತಲೂ ನಂಬಿಗಸ್ತ ದೇವದೂತರ ಸಂಖ್ಯೆಯು ಅತ್ಯಧಿಕವಾಗಿದೆ.—2 ಅರಸುಗಳು 6:16; ಅ. ಕೃತ್ಯಗಳು 5:27-32, 41, 42.
ಹುರುಪಿನ ಸಾರುವಿಕೆಯನ್ನು ಯೆಹೋವನು ಆಶೀರ್ವದಿಸುತ್ತಾನೆ
6, 7. (ಎ) ಸುವಾರ್ತೆಯನ್ನು ಸಾರಲಿಕ್ಕಾಗಿ ಯಾವ ಆರಂಭದ ಪ್ರಯತ್ನಗಳು ಮಾಡಲ್ಪಟ್ಟಿದ್ದವು? (ಬಿ) 1943ರಿಂದ ಆರಂಭಿಸಿ ಯಾವ ಪ್ರಯೋಜನಕರವಾದ ಬದಲಾವಣೆಯು ಸಂಭವಿಸಿತು?
6 ಇಪ್ಪತ್ತನೆಯ ಶತಮಾನದಲ್ಲಿ ಯೆಹೋವನ ಸಾಕ್ಷಿಗಳು, ಅಂತ್ಯವು ಬರುವುದಕ್ಕೆ ಮುಂಚೆ ಸಾಕ್ಷಿನೀಡುವ ಭಾರಿ ಕೆಲಸವನ್ನು ವಿಸ್ತರಿಸಲಿಕ್ಕಾಗಿ ಹಾಗೂ ತ್ವರೆಗೊಳಿಸಲಿಕ್ಕಾಗಿ, ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿದ್ದಾರೆ. 1914ರಷ್ಟು ಹಿಂದೆ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಪ್ರಥಮ ಅಧ್ಯಕ್ಷರಾದ ಪಾಸ್ಟರ್ ರಸಲರು, ಸ್ಲೈಡ್ಗಳು ಹಾಗೂ ಚಲನ ಚಿತ್ರಗಳ ಆರಂಭದ ಉಪಯೋಗವನ್ನು ಪ್ರವರ್ಧಿಸಿದರು. ಅದರೊಂದಿಗೆ “ದ ಫೋಟೊ ಡ್ರಾಮ ಆಫ್ ಕ್ರಿಯೇಷನ್” ಎಂದು ಕರೆಯಲ್ಪಟ್ಟ, ಎಂಟು ತಾಸುಗಳ ಒಂದು ಬೈಬಲ್ ತಯಾರಿಕೆಯಲ್ಲಿ, ಫೋನೋಗ್ರಾಫ್ ರೆಕಾರ್ಡ್ಗಳೊಂದಿಗೆ ಒಂದು ಬೈಬಲಾಧಾರಿತವಾದ ವ್ಯಾಖ್ಯಾನವನ್ನು ಏಕಕಾಲದಲ್ಲಿ ತೋರಿಸಿದರು. ಆ ಸಮಯದಲ್ಲಿ ಅದು ಅನೇಕ ದೇಶಗಳಲ್ಲಿನ ಸಭಿಕರನ್ನು ಆಶ್ಚರ್ಯಗೊಳಿಸಿತು. ತದನಂತರ, 1930ಗಳು ಹಾಗೂ 1940ಗಳಲ್ಲಿ, ಸುಲಭವಾಗಿ ಒಯ್ಯಸಾಧ್ಯವಿರುವ ಫೋನೋಗ್ರಾಫ್ಗಳೊಂದಿಗೆ—ಸೊಸೈಟಿಯ ಎರಡನೆಯ ಅಧ್ಯಕ್ಷರಾದ ಜೆ. ಎಫ್. ರದರ್ಫರ್ಡರಿಂದ ಕೊಡಲ್ಪಟ್ಟ ಬೈಬಲ್ ಭಾಷಣಗಳ ರೆಕಾರ್ಡಿಂಗ್ಗಳನ್ನು ಉಪಯೋಗಿಸುತ್ತಾ—ಸಾಕ್ಷಿಗಳು ತಮ್ಮ ಮನೆಯಿಂದ ಮನೆಯ ಸಾರುವಿಕೆಗಾಗಿ ಪ್ರಸಿದ್ಧರಾದರು.
7 ಸೊಸೈಟಿಯ ಮೂರನೆಯ ಅಧ್ಯಕ್ಷರಾದ ನೇತನ್ ಏಚ್. ನಾರ್ ಅವರ ಮಾರ್ಗದರ್ಶನದ ಕೆಳಗೆ, 1943ರಲ್ಲಿ ಒಂದು ದಿಟ್ಟ ಹೆಜ್ಜೆಯನ್ನು ತೆಗೆದುಕೊಳ್ಳಲಾಯಿತು. ಆಗ ಪ್ರತಿಯೊಂದು ಸಭೆಯಲ್ಲಿ ಶುಶ್ರೂಷಕರಿಗಾಗಿ ಒಂದು ಶಾಲೆಯನ್ನು ಸ್ಥಾಪಿಸುವ ನಿರ್ಧಾರವನ್ನು ಮಾಡಲಾಯಿತು. ಫೋನೋಗ್ರಾಫ್ ರೆಕಾರ್ಡಿಂಗ್ಗಳನ್ನು ಉಪಯೋಗಿಸದೆ, ಮನೆಯಿಂದ ಮನೆಗೆ ಸಾರುವಂತೆ ಹಾಗೂ ಕಲಿಸುವಂತೆ ಸಾಕ್ಷಿಗಳನ್ನು ತರಬೇತುಗೊಳಿಸಸಾಧ್ಯವಿತ್ತು. ಅಂದಿನಿಂದ, ಮಿಷನೆರಿಗಳು, ಪೂರ್ಣ ಸಮಯದ ಪಯನೀಯರ್ ಶುಶ್ರೂಷಕರು, ಸಭಾ ಹಿರಿಯರು, ಮತ್ತು ವಾಚ್ ಟವರ್ ಸೊಸೈಟಿಯ ಬ್ರಾಂಚ್ಗಳಲ್ಲಿರುವ ಜವಾಬ್ದಾರಿಯುತ ಹಿರಿಯರನ್ನು ತರಬೇತಿಗೊಳಿಸಲಿಕ್ಕಾಗಿ, ಇನ್ನಿತರ ಶಾಲೆಗಳು ಸಂಸ್ಥಾಪಿಸಲ್ಪಟ್ಟಿವೆ. ಇವೆಲ್ಲದರ ಫಲಿತಾಂಶವೇನಾಗಿದೆ?
8. ಸಾಕ್ಷಿಗಳು 1943ರಲ್ಲಿ ಹೇಗೆ ಭಾರಿ ನಂಬಿಕೆಯನ್ನು ತೋರಿಸಿದರು?
8 ಎರಡನೆಯ ಲೋಕ ಯುದ್ಧದ ಮಧ್ಯದಲ್ಲಿ, 1943ರಷ್ಟು ಹಿಂದೆ, 54 ದೇಶಗಳಲ್ಲಿ 1,29,000 ಸಾಕ್ಷಿಗಳು ಮಾತ್ರ ಕ್ರಿಯಾಶೀಲರಾಗಿದ್ದರು. ಆದರೂ, ಅಂತ್ಯವು ಬರುವುದರೊಳಗಾಗಿ ಮತ್ತಾಯ 24:14 ನೆರವೇರುವುದು ಎಂಬ ನಂಬಿಕೆ ಹಾಗೂ ದೃಢನಿಶ್ಚಯ ಅವರಿಗಿತ್ತು. ಈ ಭ್ರಷ್ಟ ವಿಷಯಗಳ ವ್ಯವಸ್ಥೆಗೆ ಅಂತ್ಯವನ್ನು ತರಲಿರುವ ಘಟನೆಗಳ ಕ್ರಮಾನುಗತಿಯು ಸಂಭವಿಸುವುದಕ್ಕೆ ಮೊದಲು, ಪ್ರಾಮುಖ್ಯವಾದ ಎಚ್ಚರಿಕೆಯ ಸಂದೇಶವು ಮೊದಲಾಗಿ ಘೋಷಿಸಲ್ಪಡುವಂತೆ ಯೆಹೋವನು ಮಾಡುತ್ತಾನೆ ಎಂದು ಅವರು ಮನಗಂಡಿದ್ದರು. (ಮತ್ತಾಯ 24:21; ಪ್ರಕಟನೆ 16:16; 19:11-16, 19-21; 20:1-3) ಅವರ ಪ್ರಯತ್ನಗಳಿಗೆ ಪ್ರತಿಫಲ ದೊರಕಿತೊ?
9. ಸಾಕ್ಷಿಕಾರ್ಯವು ಏಳಿಗೆಹೊಂದಿದೆ ಎಂಬುದನ್ನು ಯಾವ ನಿಜತ್ವಗಳು ತೋರಿಸುತ್ತವೆ?
9 ಈಗ ಕಡಿಮೆಪಕ್ಷ 13 ದೇಶಗಳಲ್ಲಿ—ಪ್ರತಿಯೊಂದರಲ್ಲಿಯೂ—1,00,000ಕ್ಕಿಂತಲೂ ಹೆಚ್ಚು ಕ್ರಿಯಾಶೀಲ ಸಾಕ್ಷಿಗಳಿದ್ದಾರೆ. ಇವುಗಳಲ್ಲಿ ಅನೇಕ ದೇಶಗಳು, ಕ್ಯಾಥೊಲಿಕ್ ಚರ್ಚಿನ ಅಧಿಕಾರದ ಕೆಳಗೆ ಆಳಲ್ಪಡುತ್ತಿವೆ. ಆದರೂ, ಸನ್ನಿವೇಶದ ಕಡೆಗೆ ಗಮನಹರಿಸಿರಿ. ಬ್ರೆಸಿಲ್ನಲ್ಲಿ ಸುಮಾರು 4,50,000 ಮಂದಿ ಸುವಾರ್ತಾ ಪ್ರಚಾರಕರಿದ್ದಾರೆ, ಮತ್ತು 1997ರಲ್ಲಿ ಕ್ರಿಸ್ತನ ಮರಣದ ಜ್ಞಾಪಕಕ್ಕೆ 12,00,000ಕ್ಕಿಂತಲೂ ಹೆಚ್ಚು ಮಂದಿ ಹಾಜರಾದರು. ಮೆಕ್ಸಿಕೊ ಇನ್ನೊಂದು ಉದಾಹರಣೆಯಾಗಿದೆ; ಅಲ್ಲಿ ಬಹುಮಟ್ಟಿಗೆ 5,00,000 ಮಂದಿ ಸಾಕ್ಷಿಗಳಿದ್ದು, 16,00,000ಕ್ಕಿಂತಲೂ ಹೆಚ್ಚು ಮಂದಿ ಜ್ಞಾಪಕಾಚರಣೆಗೆ ಹಾಜರಾದರು. ಇನ್ನಿತರ ಕ್ಯಾಥೊಲಿಕ್ ದೇಶಗಳು ಯಾವುವೆಂದರೆ, ಇಟಲಿ (ಸುಮಾರು 2,25,000 ಸಾಕ್ಷಿಗಳು), ಫ್ರಾನ್ಸ್ (ಸುಮಾರು 1,25,000 ಮಂದಿ), ಸ್ಪೆಯ್ನ್ (1,05,000ಕ್ಕಿಂತಲೂ ಹೆಚ್ಚು ಮಂದಿ), ಮತ್ತು ಆರ್ಜೆಂಟೀನ (1,15,000ಕ್ಕಿಂತಲೂ ಹೆಚ್ಚು ಮಂದಿ). ಪ್ರಾಟೆಸ್ಟಂಟ್, ಕ್ಯಾಥೊಲಿಕ್, ಮತ್ತು ಯೆಹೂದಿ ಧರ್ಮಗಳು ಮೇಲುಗೈ ಪಡೆದಿರುವ ಅಮೆರಿಕದಲ್ಲಿ, ಸುಮಾರು 9,75,000 ಸಾಕ್ಷಿಗಳಿದ್ದು, 20,00,000ಕ್ಕಿಂತಲೂ ಹೆಚ್ಚು ಮಂದಿ ಜ್ಞಾಪಕಾಚರಣೆಗೆ ಹಾಜರಾದರು. ಖಂಡಿತವಾಗಿಯೂ, ಮಹಾ ಸಮೂಹಗಳು, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿರುವ ಮಹಾ ಬಾಬೆಲಿನಿಂದ, ಅದರ ರಹಸ್ಯಾರ್ಥವುಳ್ಳ ಬೋಧನೆಗಳಿಂದ ಹೊರಗೆ ಪ್ರವಾಹದಂತೆ ಬರುತ್ತಿದ್ದಾರೆ. ಮತ್ತು ‘ನೂತನಾಕಾಶಮಂಡಲದ ಹಾಗೂ ನೂತನಭೂಮಂಡಲದ’ ಕುರಿತ ದೇವರ ಸರಳ ಹಾಗೂ ಖಂಡಿತವಾದ ವಾಗ್ದಾನಗಳ ಕಡೆಗೆ ತಿರುಗುತ್ತಿದ್ದಾರೆ.—2 ಪೇತ್ರ 3:13; ಯೆಶಾಯ 2:3, 4; 65:17; ಪ್ರಕಟನೆ 18:4, 5; 21:1-4.
ಜನರ ಆವಶ್ಯಕತೆಗಳಿಗೆ ತಕ್ಕಂತೆ ಹೊಂದಿಕೊಳ್ಳುವುದು
10. ಕೆಲವು ಕ್ಷೇತ್ರಗಳಲ್ಲಿ ಸನ್ನಿವೇಶಗಳು ಹೇಗೆ ಬದಲಾಗಿವೆ?
10 ಕ್ರಿಸ್ತ ಯೇಸುವಿನ ಮೂಲಕ ಯೆಹೋವನ ಕಡೆಗೆ ತಿರುಗಿಕೊಂಡಿರುವವರಲ್ಲಿ ಅನೇಕರು, ಮನೆಯಿಂದ ಮನೆಯ ಸಾಕ್ಷಿಕಾರ್ಯದಲ್ಲಿ ಕಂಡುಕೊಳ್ಳಲ್ಪಟ್ಟವರಾಗಿದ್ದರು. (ಯೋಹಾನ 3:16; ಅ. ಕೃತ್ಯಗಳು 20:20) ಆದರೆ ಇನ್ನಿತರ ವಿಧಾನಗಳೂ ಉಪಯೋಗಿಸಲ್ಪಟ್ಟಿವೆ. ಪರಿಸ್ಥಿತಿಗಳು ಬದಲಾಗಿವೆ, ಮತ್ತು ಆರ್ಥಿಕ ಸನ್ನಿವೇಶಗಳು ಹೇಗಿವೆಯೆಂದರೆ, ಇಂದು ಅನೇಕ ಸ್ತ್ರೀಯರು ಮನೆಯಿಂದ ಹೊರಗೆ ಕೆಲಸಮಾಡುತ್ತಾರೆ. ಅನೇಕವೇಳೆ, ವಾರದ ಸಮಯದಲ್ಲಿ, ಕೊಂಚವೇ ಜನರನ್ನು ಮನೆಯಲ್ಲಿ ಕಂಡುಕೊಳ್ಳಸಾಧ್ಯವಿದೆ. ಹೀಗೆ, ಯೆಹೋವನ ಸಾಕ್ಷಿಗಳು ಆ ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಂಡಿದ್ದಾರೆ. ಯೇಸುವಿನಂತೆ ಹಾಗೂ ಆದಿ ಶಿಷ್ಯರಂತೆ, ಅವರು ಜನರನ್ನು ಎಲ್ಲಿ ಮತ್ತು ಯಾವಾಗ ಕಂಡುಕೊಳ್ಳುತ್ತಾರೋ ಅಲ್ಲಿ ಸಾರುತ್ತಾರೆ.—ಮತ್ತಾಯ 5:1, 2; 9:35; ಮಾರ್ಕ 6:34; 10:1; ಅ. ಕೃತ್ಯಗಳು 2:14; 17:16, 17.
11. ಇಂದು ಯೆಹೋವನ ಸಾಕ್ಷಿಗಳು ಎಲ್ಲಿ ಸಾರುತ್ತಿದ್ದಾರೆ, ಮತ್ತು ಯಾವ ಫಲಿತಾಂಶಗಳೊಂದಿಗೆ?
11 ಸಾಕ್ಷಿಗಳು ಆರಂಭದ ಹೆಜ್ಜೆಯನ್ನು ತೆಗೆದುಕೊಂಡು, ದೊಡ್ಡ ವಾಹನ ನಿಲುಗಡೆ (ಪಾರ್ಕಿಂಗ್) ಕ್ಷೇತ್ರಗಳಲ್ಲಿ, ಶಾಪಿಂಗ್ ಮಳಿಗೆಗಳಲ್ಲಿ, ಕಾರ್ಖಾನೆಗಳಲ್ಲಿ, ಆಫೀಸುಗಳಲ್ಲಿ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ, ಶಾಲೆಗಳಲ್ಲಿ, ಪೋಲಿಸ್ ಠಾಣೆಗಳಲ್ಲಿ, ಪೆಟ್ರೋಲ್ ಬಂಕ್ಗಳಲ್ಲಿ, ಹೋಟೆಲ್ಗಳಲ್ಲಿ ಮತ್ತು ರೆಸ್ಟೊರೆಂಟ್ಗಳಲ್ಲಿ, ಹಾಗೂ ಬೀದಿಗಳಲ್ಲಿರುವ ಜನರಿಗೆ ವಿವೇಚನೆಯಿಂದ ಸಾರುತ್ತಿದ್ದಾರೆ. ವಾಸ್ತವದಲ್ಲಿ, ಎಲ್ಲೆಲ್ಲಿ ಜನರನ್ನು ಕಂಡುಕೊಳ್ಳಸಾಧ್ಯವಿದೆಯೋ ಅಲ್ಲೆಲ್ಲ ಅವರು ಸಾರುತ್ತಾರೆ. ಮತ್ತು ಜನರು ಮನೆಯಲ್ಲಿರುವಾಗ, ಸಾಕ್ಷಿಗಳು ಅವರನ್ನು ಅಲ್ಲಿಯೇ ಸಂದರ್ಶಿಸುತ್ತಾ ಇರುತ್ತಾರೆ. ಈ ಹೊಂದಿಕೊಳ್ಳುವ ಹಾಗೂ ವ್ಯಾವಹಾರಿಕ ಸಮೀಪಿಸುವಿಕೆಯಿಂದಾಗಿ, ಬೈಬಲ್ ಸಾಹಿತ್ಯದ ಅತ್ಯಧಿಕ ವಿತರಣೆಯು ಸಾಧ್ಯವಾಗಿದೆ. ಕುರಿಗಳಂತಹ ಜನರನ್ನು ಕಂಡುಕೊಳ್ಳಲಾಗುತ್ತಿದೆ. ಹೊಸ ಬೈಬಲ್ ಅಭ್ಯಾಸಗಳನ್ನು ಆರಂಭಿಸಲಾಗುತ್ತಿದೆ. ಐವತ್ತು ಲಕ್ಷಕ್ಕಿಂತಲೂ ಹೆಚ್ಚಿನ ಸ್ವಯಂ ಶುಶ್ರೂಷಕರಿಂದ, ಮಾನವ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಶೈಕ್ಷಣಿಕ ಕೆಲಸವು ಹುರುಪಿನಿಂದ ನಡೆಸಲ್ಪಡುತ್ತಿದೆ! ಅವರಲ್ಲಿ ಒಬ್ಬರಾಗಿರುವ ಸುಯೋಗವು ನಿಮಗಿದೆಯೊ?—2 ಕೊರಿಂಥ 2:14-17; 3:5, 6.
ಯೆಹೋವನ ಸಾಕ್ಷಿಗಳನ್ನು ಯಾವುದು ಪ್ರಚೋದಿಸುತ್ತದೆ?
12. (ಎ) ಯೆಹೋವನು ತನ್ನ ಜನರಿಗೆ ಹೇಗೆ ಬೋಧಿಸುತ್ತಿದ್ದಾನೆ? (ಬಿ) ಈ ಬೋಧನೆಯು ಯಾವ ಪರಿಣಾಮವನ್ನು ಉಂಟುಮಾಡಿದೆ?
12 ಈ ಎಲ್ಲ ವಿಷಯಗಳಲ್ಲಿ ದೇವರ ಸ್ವರ್ಗೀಯ ಸಂಸ್ಥೆಯು ಯಾವ ಪಾತ್ರವನ್ನು ನಿರ್ವಹಿಸುತ್ತದೆ? ಯೆಶಾಯನು ಪ್ರವಾದಿಸಿದ್ದು: “ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು, ಅವರಿಗೆ ಅಧಿಕ ಸುಕ್ಷೇಮವಾಗುವದು.” (ಯೆಶಾಯ 54:13) ಭೂಮಿಯಲ್ಲಿರುವ ಆತನ ದೃಶ್ಯ ಸಂಸ್ಥೆಯ ಮೂಲಕ ಯೆಹೋವನು, ರಾಜ್ಯ ಸಭಾಗೃಹಗಳಲ್ಲಿ, ಅಧಿವೇಶನಗಳಲ್ಲಿ ಹಾಗೂ ಸಮ್ಮೇಳನಗಳಲ್ಲಿ, ಈ ಲೋಕವ್ಯಾಪಕವಾದ ಐಕ್ಯ ಸಹೋದರತ್ವಕ್ಕೆ ಬೋಧಿಸುತ್ತಿದ್ದಾನೆ. ಇದರಿಂದ ಐಕ್ಯಭಾವ ಹಾಗೂ ಶಾಂತಿಯು ಫಲಿಸುತ್ತದೆ. ಯೆಹೋವನ ಬೋಧನೆಯು, ಈ ಅನೈಕ್ಯವುಳ್ಳ ಹಾಗೂ ವಿಭಾಗಿತ ಲೋಕದಲ್ಲಿ ಅವರು ಎಲ್ಲಿಯೇ ಜೀವಿಸುತ್ತಿರಲಿ, ತಮ್ಮ ನೆರೆಯವರನ್ನು ದ್ವೇಷಿಸಲಿಕ್ಕಾಗಿ ಅಲ್ಲ, ಬದಲಾಗಿ ಒಬ್ಬರನ್ನೊಬ್ಬರು ಪ್ರೀತಿಸುವಂತೆ ಹಾಗೂ ತಮ್ಮಂತೆಯೇ ತಮ್ಮ ನೆರೆಯವರನ್ನು ಪ್ರೀತಿಸುವಂತೆ ಕಲಿಸಲ್ಪಟ್ಟಿರುವ ಒಂದು ಅಪೂರ್ವ ಜನರನ್ನು ಉತ್ಪಾದಿಸಿದೆ.—ಮತ್ತಾಯ 22:36-40.
13. ಸಾರುವ ಕೆಲಸದಲ್ಲಿ ದೇವದೂತರ ಮಾರ್ಗದರ್ಶನೆಯು ಒಳಗೂಡಿದೆ ಎಂಬ ವಿಷಯದಲ್ಲಿ ನಾವು ಹೇಗೆ ಖಾತ್ರಿಯಿಂದಿರಬಲ್ಲೆವು?
13 ನಿರುತ್ಸಾಹ ಅಥವಾ ಹಿಂಸೆಯ ಎದುರಿನಲ್ಲೂ, ಸಾರುವುದನ್ನು ಮುಂದುವರಿಸುವಂತೆ ಯೆಹೋವನ ಸಾಕ್ಷಿಗಳನ್ನು ಪ್ರಚೋದಿಸುವಂತಹದ್ದು ಪ್ರೀತಿಯೇ ಆಗಿದೆ. (1 ಕೊರಿಂಥ 13:1-8) ಪ್ರಕಟನೆ 14:6 ಹೇಳುವಂತೆ, ತಮ್ಮ ಜೀವಸಂರಕ್ಷಕ ಕಾರ್ಯವು ಸ್ವರ್ಗದಿಂದ ಮಾರ್ಗದರ್ಶಿಸಲ್ಪಡುತ್ತಿದೆ ಎಂಬುದು ಅವರಿಗೆ ತಿಳಿದಿದೆ. ದೇವದೂತರ ಮಾರ್ಗದರ್ಶನದ ಕೆಳಗೆ ಘೋಷಿಸಲ್ಪಡುತ್ತಿರುವ ಸಂದೇಶವು ಯಾವುದಾಗಿದೆ? “ನೀವೆಲ್ಲರು ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ, ಆತನು ನ್ಯಾಯತೀರ್ಪುಮಾಡುವ ಗಳಿಗೆಯು ಬಂದಿದೆ. ಭೂಲೋಕ ಪರಲೋಕಗಳನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದಾತನಿಗೆ ನಮಸ್ಕಾರ ಮಾಡಿರಿ.” ರಾಜ್ಯದ ಸುವಾರ್ತೆಯ ಸಾರುವಿಕೆಯು, ಯೆಹೋವನ ಹೆಸರನ್ನು ಘನತೆಗೇರಿಸುತ್ತದೆ. ಜನರು ಸೃಷ್ಟಿಜೀವಿಗಳಿಗೆ ಹಾಗೂ ಅಂಧ ವಿಕಾಸವಾದಕ್ಕಲ್ಲ, ಬದಲಾಗಿ ಸೃಷ್ಟಿಕರ್ತನಾದ ದೇವರಿಗೆ ಮಹಿಮೆಯನ್ನು ಕೊಡುವಂತೆ ಆಮಂತ್ರಿಸಲ್ಪಡುತ್ತಿದ್ದಾರೆ. ಮತ್ತು ಸಾರುವ ಕೆಲಸವು ಏಕೆ ಅಷ್ಟು ತುರ್ತಿನದ್ದಾಗಿದೆ? ಏಕೆಂದರೆ ನ್ಯಾಯತೀರ್ಪಿನ—ಮಹಾ ಬಾಬೆಲು ಹಾಗೂ ಸೈತಾನನ ದೃಶ್ಯ ವಿಷಯಗಳ ವ್ಯವಸ್ಥೆಯ ಇತರ ಎಲ್ಲ ಅಂಶಗಳ ವಿರುದ್ಧವಾದ ನ್ಯಾಯತೀರ್ಪು—ಗಳಿಗೆಯು ಆಗಮಿಸಿದೆ.—ಪ್ರಕಟನೆ 14:7; 18:8-10.
14. ಈ ದೊಡ್ಡ ಬೋಧನಾ ಕಾರ್ಯಾಚರಣೆಯಲ್ಲಿ ಯಾರು ಒಳಗೂಡಿದ್ದಾರೆ?
14 ಯಾವುದೇ ಸಮರ್ಪಿತ ಕ್ರೈಸ್ತನಿಗೆ ಈ ಸಾರುವ ಕೆಲಸದಿಂದ ವಿನಾಯಿತಿ ಇಲ್ಲ. ಸಭೆಯೊಂದಿಗೆ ಸಾರುವ ಕಾರ್ಯದಲ್ಲಿ ಆತ್ಮಿಕ ಹಿರಿಯರು ನಾಯಕತ್ವವನ್ನು ವಹಿಸುತ್ತಾರೆ. ತರಬೇತಿ ಪಡೆದ ಪಯನೀಯರರು ಈ ಕೆಲಸದಲ್ಲಿ ಸಂಪೂರ್ಣರಾಗಿ ತಲ್ಲೀನರಾಗಿದ್ದಾರೆ. ರಾಜ್ಯ ಸಂದೇಶದ ಹುರುಪಿನ ಪ್ರಚಾರಕರು, ಸಾರುವಿಕೆಯಲ್ಲಿ ಒಂದು ತಿಂಗಳಿಗೆ ಕೆಲವೇ ತಾಸುಗಳನ್ನು ವ್ಯಯಿಸಲು ಶಕ್ತರಾಗಿರಲಿ ಅಥವಾ ಅನೇಕ ತಾಸುಗಳನ್ನು ವ್ಯಯಿಸಲು ಶಕ್ತರಾಗಿರಲಿ, ಅವರು ಭೂಮಿಯ ಪ್ರತಿಯೊಂದು ಮೂಲೆಯಲ್ಲಿಯೂ ಈ ಸಂದೇಶವನ್ನು ಹಬ್ಬಿಸುತ್ತಿದ್ದಾರೆ.—ಮತ್ತಾಯ 28:19, 20; ಇಬ್ರಿಯ 13:7, 17.
15. ಯೆಹೋವನ ಸಾಕ್ಷಿಗಳ ಸಾರುವಿಕೆಯ ಪರಿಣಾಮದ ಒಂದು ಸೂಚನೆಯು ಯಾವುದಾಗಿದೆ?
15 ಈ ಎಲ್ಲ ಪ್ರಯತ್ನವೂ ಲೋಕದ ಮೇಲೆ ಪರಿಣಾಮವನ್ನು ಉಂಟುಮಾಡಿದೆಯೊ? ಅದು ಪರಿಣಾಮವನ್ನು ಉಂಟುಮಾಡಿದೆ ಎಂಬುದಕ್ಕಿರುವ ಒಂದು ಸರಳವಾದ ರುಜುವಾತು ಏನೆಂದರೆ, ಅನೇಕಬಾರಿ ಯೆಹೋವನ ಸಾಕ್ಷಿಗಳು ಟಿವಿ ಕಾರ್ಯಕ್ರಮಗಳು ಹಾಗೂ ವಾರ್ತಾ ಅಂಕಣಗಳಲ್ಲಿ ಪ್ರದರ್ಶಿಸಲ್ಪಟ್ಟಿದ್ದಾರೆ. ಇವು ಅನೇಕವೇಳೆ, ಪ್ರತಿಯೊಬ್ಬರನ್ನೂ ಸಂಧಿಸಲಿಕ್ಕಾಗಿರುವ ನಮ್ಮ ಪಟ್ಟುಹಿಡಿಯುವಿಕೆ ಹಾಗೂ ದೃಢನಿರ್ಧಾರವನ್ನು ಎತ್ತಿತೋರಿಸುತ್ತವೆ. ಹೌದು, ಅಧಿಕಾಂಶ ಜನರು ನಮ್ಮ ಸಂದೇಶವನ್ನೂ ಸಂದೇಶವಾಹಕರನ್ನೂ ಅಲಕ್ಷಿಸುತ್ತಾರಾದರೂ, ನಮ್ಮ ಹುರುಪು ಹಾಗೂ ಸತತವಾದ ಉಪಸ್ಥಿತಿಯು, ಅವರ ಮೇಲೆ ಗಾಢವಾದ ಒಂದು ಪ್ರಭಾವವನ್ನು ಬೀರುತ್ತದೆ.
ಸಾಕ್ಷಿಕಾರ್ಯವನ್ನು ಪೂರ್ಣಗೊಳಿಸಲಿಕ್ಕಾಗಿರುವ ನಮ್ಮ ಹುರುಪು
16. ಈಗ ಉಳಿದಿರುವ ಪರಿಮಿತ ಸಮಯದಲ್ಲಿ, ನಾವು ಯಾವ ಮನೋಭಾವವನ್ನು ಪ್ರದರ್ಶಿಸತಕ್ಕದ್ದು?
16 ಈ ವಿಷಯಗಳ ವ್ಯವಸ್ಥೆಗೆ ಇನ್ನೆಷ್ಟು ಸಮಯವು ಉಳಿದಿದೆ ಎಂಬುದು ನಮಗೆ ತಿಳಿದಿಲ್ಲ, ಅಥವಾ ಯೆಹೋವನನ್ನು ಸೇವಿಸುವುದರಲ್ಲಿನ ನಮ್ಮ ಉದ್ದೇಶವು ನಿಷ್ಕಪಟವಾಗಿರುವ ತನಕ ಅದನ್ನು ತಿಳಿಯುವ ಆವಶ್ಯಕತೆಯೂ ಇಲ್ಲ. (ಮತ್ತಾಯ 24:36; 1 ಕೊರಿಂಥ 13:1-3) ಆದರೆ ಯೆಹೋವನ ಪ್ರೀತಿ, ಶಕ್ತಿ, ಹಾಗೂ ನ್ಯಾಯಗಳು ಪ್ರದರ್ಶಿಸಲ್ಪಡಬೇಕಾದರೆ, “ಮೊದಲು” ಸುವಾರ್ತೆಯು ಸಾರಲ್ಪಡಲೇಬೇಕು ಎಂಬುದು ನಮಗೆ ಗೊತ್ತಿದೆ. (ಮಾರ್ಕ 13:10) ಆದುದರಿಂದ, ಈ ದುಷ್ಟ, ಅನ್ಯಾಯಭರಿತ, ಹಾಗೂ ಹಿಂಸಾತ್ಮಕ ಲೋಕದ ಅಂತ್ಯಕ್ಕಾಗಿ, ಅನೇಕ ವರ್ಷಗಳಿಂದ ನಾವು ಎಷ್ಟೇ ತವಕದಿಂದ ಕಾದಿರಲಿ, ನಮ್ಮ ಪರಿಸ್ಥಿತಿಗಳಿಗನುಸಾರ ನಾವು ಹುರುಪಿನಿಂದ ನಮ್ಮ ಸಮರ್ಪಣೆಗನುಸಾರ ಜೀವನ ನಡೆಸಬೇಕು. ನಾವು ವೃದ್ಧರಾಗಿರಬಹುದು ಅಥವಾ ಅಸ್ವಸ್ಥರಾಗಿರಬಹುದು, ಆದರೆ ನಮ್ಮ ಎಳೆಯಪ್ರಾಯದಲ್ಲಿ ಅಥವಾ ಆರೋಗ್ಯಕರವಾದ ದಿನಗಳಲ್ಲಿ ನಮಗಿದ್ದ ಹುರುಪಿನಿಂದಲೇ ನಾವು ಈಗಲೂ ಯೆಹೋವನನ್ನು ಸೇವಿಸಸಾಧ್ಯವಿದೆ. ನಾವು ಈ ಹಿಂದೆ ಮಾಡಿದಂತೆ, ಶುಶ್ರೂಷೆಯಲ್ಲಿ ಸಾಕಷ್ಟು ಹೆಚ್ಚು ಸಮಯವನ್ನು ವ್ಯಯಿಸಲು ಇನ್ನೆಂದಿಗೂ ಸಾಧ್ಯವಿಲ್ಲದಿರಬಹುದು, ಆದರೆ ಯೆಹೋವನಿಗೆ ನಾವು ಸಲ್ಲಿಸುವ ನಮ್ಮ ಸ್ತೋತ್ರಯಜ್ಞದ ಗುಣಮಟ್ಟವನ್ನು ನಾವು ನಿಶ್ಚಯವಾಗಿಯೂ ಕಾಪಾಡಿಕೊಳ್ಳಸಾಧ್ಯವಿದೆ.—ಇಬ್ರಿಯ 13:15.
17. ನಮ್ಮೆಲ್ಲರಿಗೂ ಸಹಾಯ ಮಾಡಬಹುದಾದಂತಹ ಒಂದು ಉತ್ತೇಜನದಾಯಕ ಅನುಭವವನ್ನು ತಿಳಿಸಿರಿ.
17 ಆದುದರಿಂದ, ಎಳೆಯರಾಗಿರಲಿ ವೃದ್ಧರಾಗಿರಲಿ, ನಾವು ಹುರುಪನ್ನು ತೋರಿಸೋಣ ಮತ್ತು ನಾವು ಸಂಧಿಸುವ ಎಲ್ಲರೊಂದಿಗೆ ಹೊಸ ಲೋಕದ ಕುರಿತಾದ ನಮ್ಮ ಸಕಾರಾತ್ಮಕ ಸಂದೇಶವನ್ನು ಹಂಚಿಕೊಳ್ಳೋಣ. ನಾವು ಆಸ್ಟ್ರೇಲಿಯದಲ್ಲಿರುವ ಏಳು ವರ್ಷಪ್ರಾಯದ ಹುಡುಗಿಯಂತಿರೋಣ. ಅವಳು ತನ್ನ ತಾಯಿಯೊಂದಿಗೆ ಅಂಗಡಿಗೆ ಹೋದಳು. ಎಲ್ಲರಿಗೂ ಸಾರುವುದು ಎಷ್ಟೊಂದು ಪ್ರಾಮುಖ್ಯವಾದ ವಿಷಯವಾಗಿದೆ ಎಂಬುದನ್ನು ರಾಜ್ಯ ಸಭಾಗೃಹದಲ್ಲಿ ಅವಳು ಕೇಳಿಸಿಕೊಂಡಿದ್ದಳು. ಆದುದರಿಂದ ಎರಡು ಬೈಬಲ್ ಬ್ರೋಷರ್ಗಳನ್ನು ಅವಳು ತನ್ನ ಬ್ಯಾಗಿನಲ್ಲಿ ಇಟ್ಟುಕೊಂಡಳು. ಅವಳ ತಾಯಿಯು ಕೌಂಟರ್ನಲ್ಲಿ ಕಾರ್ಯಮಗ್ನಳಾಗಿದ್ದಾಗ, ಈ ಚಿಕ್ಕ ಹುಡುಗಿಯು ಅಲ್ಲಿಂದ ಕಾಣೆಯಾದಳು. ಅವಳ ತಾಯಿಯು ಅವಳನ್ನು ಹುಡುಕುತ್ತಿದ್ದಾಗ, ಒಬ್ಬ ಸ್ತ್ರೀಗೆ ಅವಳು ಒಂದು ಬ್ರೋಷರನ್ನು ನೀಡುತ್ತಿದ್ದಳು! ತನ್ನ ಮಗಳು ಉಂಟುಮಾಡಿರಬಹುದಾದ ಯಾವುದೇ ರೀತಿಯ ರೇಗಿಸುವಿಕೆಗಾಗಿ ಕ್ಷಮೆಯಾಚಿಸಲು, ಅವಳ ತಾಯಿಯು ಆ ಸ್ತ್ರೀಯ ಬಳಿಗೆ ಹೋದಳು. ಆದರೆ ಆ ಸ್ತ್ರೀಯು ಸಂತೋಷದಿಂದಲೇ ಆ ಬ್ರೋಷರನ್ನು ಸ್ವೀಕರಿಸಿದ್ದಳು. ಆ ತಾಯಿಯು ತನ್ನ ಮಗಳೊಂದಿಗೆ ಜೊತೆಗೂಡಿ ಹೋಗುತ್ತಿದ್ದಾಗ, ಒಬ್ಬ ಅಪರಿಚಿತ ವ್ಯಕ್ತಿಯನ್ನು ಸಮೀಪಿಸಲಿಕ್ಕಾಗಿ ಅವಳಿಗೆ ಹೇಗೆ ಧೈರ್ಯಬಂತೆಂದು ತಾಯಿಯು ಅವಳನ್ನು ಕೇಳಿದಳು. “ನಾನು ರೆಡಿ, ಒನ್, ಟೂ, ತ್ರೀ ಎಂದು ಹೇಳಿದೆ! ಆಮೇಲೆ ಅವರನ್ನು ಸಮೀಪಿಸಿದೆ!”
18. ನಾವು ಹೇಗೆ ಒಂದು ಪ್ರಶಂಸಾರ್ಹ ಮನೋಭಾವವನ್ನು ತೋರಿಸಸಾಧ್ಯವಿದೆ?
18 ನಮಗೆಲ್ಲರಿಗೂ ಆಸ್ಟ್ರೇಲಿಯದ ಹುಡುಗಿಯಲ್ಲಿದ್ದಂತಹದ್ದೇ ಮನೋಭಾವವು ಇರಬೇಕಾಗಿದೆ. ವಿಶೇಷವಾಗಿ ಸುವಾರ್ತೆಯೊಂದಿಗೆ ಅಪರಿಚಿತರನ್ನು ಅಥವಾ ಅಧಿಕಾರಿಗಳನ್ನು ಸಹ ಸಮೀಪಿಸಲಿಕ್ಕಾಗಿ ಈ ಮನೋಭಾವವು ಬೇಕಾಗಿದೆ. ತಿರಸ್ಕರಿಸಲ್ಪಡುತ್ತೇವೆಂಬ ಭಯವು ನಮ್ಮಲ್ಲಿರಬಹುದು. ನಾವು ಯೇಸು ಹೇಳಿದ ವಿಷಯವನ್ನು ಮರೆಯದಿರೋಣ: “ಹೇಗೆ ಉತ್ತರ ಕೊಡಬೇಕು? ಏನು ಉತ್ತರಕೊಡಬೇಕು? ಏನು ಹೇಳಬೇಕು ಎಂದು ಚಿಂತೆಮಾಡಬೇಡಿರಿ. ಯಾಕಂದರೆ ನೀವು ಹೇಳತಕ್ಕದ್ದನ್ನು ಪವಿತ್ರಾತ್ಮನು ಆ ಗಳಿಗೆಯಲ್ಲಿಯೇ ನಿಮಗೆ ಕಲಿಸಿಕೊಡುವನು ಅಂದನು.”—ಲೂಕ 12:11, 12.
19. ನಿಮ್ಮ ಶುಶ್ರೂಷೆಯ ಕುರಿತಾಗಿ ನಿಮ್ಮ ದೃಷ್ಟಿಕೋನವೇನು?
19 ಆದುದರಿಂದ, ನೀವು ಸುವಾರ್ತೆಯೊಂದಿಗೆ ದಯಾಪರ ರೀತಿಯಲ್ಲಿ ಜನರನ್ನು ಸಮೀಪಿಸುವಾಗ, ದೇವರ ಆತ್ಮದ ಸಹಾಯದಲ್ಲಿ ಭರವಸೆಯಿಡಿರಿ. ಅನೇಕವೇಳೆ ಕೋಟಿಗಟ್ಟಲೆ ಜನರು ಅಯೋಗ್ಯ ಸ್ತ್ರೀಪುರುಷರ—ಇಂದು ಇದ್ದು ನಾಳೆ ಇಲ್ಲದೇ ಹೋಗುವಂತಹ ಜನರ—ಮೇಲೆ ತಮ್ಮ ಭರವಸೆಯನ್ನು ಇಡುತ್ತಾರೆ. ನಾವು ಯೆಹೋವನಲ್ಲಿ ಹಾಗೂ ಆತನ ಸ್ವರ್ಗೀಯ ಸಂಸ್ಥೆಯಲ್ಲಿ—ಯೇಸು ಕ್ರಿಸ್ತನು, ಪವಿತ್ರ ದೇವದೂತರು, ಮತ್ತು ಪುನರುತ್ಥಾನಗೊಂಡ ಅಭಿಷಿಕ್ತ ಕ್ರೈಸ್ತರಲ್ಲಿ—ಭರವಸೆಯಿಡುತ್ತೇವೆ! ಆದುದರಿಂದ, ನೆನಪಿನಲ್ಲಿಡಿರಿ: “ಅವರ ಕಡೆಯಲ್ಲಿರುವವರಿಗಿಂತಲೂ ನಮ್ಮ ಕಡೆಯಲ್ಲಿರುವವರು ಹೆಚ್ಚಾಗಿದ್ದಾರೆ.”—2 ಅರಸುಗಳು 6:16.
[ಪಾದಟಿಪ್ಪಣಿ]
a ಇನ್ನೂ ಹೆಚ್ಚಿನ ಉದಾಹರಣೆಗಳಿಗಾಗಿ, 1994 ಯಿಯರ್ಬುಕ್ ಆಫ್ ಜೆಹೋವಾಸ್ ವಿಟ್ನೆಸಸ್ ಪುಸ್ತಕದ 217-20ನೆಯ ಪುಟಗಳನ್ನು ನೋಡಿರಿ.
ನೀವು ಹೇಗೆ ಉತ್ತರಿಸುವಿರಿ?
◻ ಯೆಹೋವನ ಜನರ ಪಾರಾಗುವಿಕೆಯಲ್ಲಿ, ದೇವರ ಸ್ವರ್ಗೀಯ ಸಂಸ್ಥೆಯು ಯಾವ ಪಾತ್ರವನ್ನು ನಿರ್ವಹಿಸಿದೆ?
◻ ಇಪ್ಪತ್ತನೆಯ ಶತಮಾನದಲ್ಲಿ ಯಾವ ರಾಜಕೀಯ ಹಾಗೂ ಧಾರ್ಮಿಕ ಜನವಿಭಾಗಗಳು ಯೆಹೋವನ ಸಾಕ್ಷಿಗಳ ಮೇಲೆ ಆಕ್ರಮಣವನ್ನು ಮಾಡಿವೆ?
◻ ಸಮಯಗಳ ಆವಶ್ಯಕತೆಗನುಸಾರ ಯೆಹೋವನ ಸಾಕ್ಷಿಗಳು ಹೇಗೆ ತಮ್ಮ ಶುಶ್ರೂಷೆಯನ್ನು ಹೊಂದಿಸಿಕೊಂಡಿದ್ದಾರೆ?
◻ ಸಾರುವಂತೆ ಯಾವುದು ನಿಮ್ಮನ್ನು ಪ್ರಚೋದಿಸುತ್ತದೆ?
[ಪುಟ 17 ರಲ್ಲಿರುವ ಚಿತ್ರ]
ಹೆನ್ರಿಕ ಸುರ್
[ಪುಟ 18 ರಲ್ಲಿರುವ ಚಿತ್ರ]
ಜಪಾನ್
ಮಾರ್ಟಿನೀಕ್
ಅಮೆರಿಕ
ಕೆನ್ಯ
ಅಮೆರಿಕ
ಜನರನ್ನು ಯಾವಾಗ ಹಾಗೂ ಎಲ್ಲಿ ಕಂಡುಕೊಳ್ಳಲಾಗುತ್ತದೋ ಅಲ್ಲಿ ಯೆಹೋವನ ಸಾಕ್ಷಿಗಳು ಸಾರುತ್ತಾರೆ
[ಪುಟ 20 ರಲ್ಲಿರುವ ಚಿತ್ರ]
ಈ ಶತಮಾನದ ಆರಂಭದಲ್ಲಿ, ರಾಜ್ಯ ಸಂದೇಶವನ್ನು ಹಬ್ಬಿಸಲಿಕ್ಕಾಗಿ ಫೋನೋಗ್ರಾಫ್ಗಳು ಉಪಯೋಗಿಸಲ್ಪಟ್ಟವು