ಮಣ್ಣಿನಿಂದ ಮಾಡಲ್ಪಟ್ಟಿರುವುದಾದರೂ, ದೃಢಸಂಕಲ್ಪದಿಂದ ಮುನ್ನಡೆಯಿರಿ!
“ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.”—ಕೀರ್ತನೆ 103:14.
1. ಮಾನವರು ಮಣ್ಣಿನಿಂದ ಮಾಡಲ್ಪಟ್ಟಿದ್ದಾರೆ ಎಂಬುದಾಗಿ ಹೇಳುವುದರಲ್ಲಿ ಬೈಬಲ್ ವೈಜ್ಞಾನಿಕವಾಗಿ ಸರಿಯಾಗಿದೆಯೊ? ವಿವರಿಸಿರಿ.
ಭೌತಿಕವಾದ ರೀತಿಯಲ್ಲಿ, ನಾವು ಧೂಳಿಯಾಗಿದ್ದೇವೆ. “ಹೀಗಿರಲು ಯೆಹೋವದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು; ಆಗ ಮನುಷ್ಯನು ಬದುಕುವ ಪ್ರಾಣಿಯಾದನು.” (ಆದಿಕಾಂಡ 2:7) ಮನುಷ್ಯನ ಸೃಷ್ಟಿಯ ಕುರಿತಾದ ಈ ಸರಳವಾದ ವರ್ಣನೆಯು ವೈಜ್ಞಾನಿಕ ಸತ್ಯದೊಂದಿಗೆ ಹೊಂದಾಣಿಕೆಯಲ್ಲಿದೆ. ಮಾನವ ದೇಹವು ರಚಿತವಾಗಿರುವ 90 ಕ್ಕಿಂತಲೂ ಅಧಿಕ ಘಟಕಾಂಶಗಳಲ್ಲಿ ಎಲ್ಲವೂ “ನೆಲದ ಮಣ್ಣಿ” ನಲ್ಲಿ ಕಂಡುಕೊಳ್ಳಲ್ಪಡುತ್ತವೆ. ಒಂದು ವಯಸ್ಕ ಮಾನವ ದೇಹವು 65 ಪ್ರತಿಶತ ಆಮ್ಲಜನಕ, 18 ಪ್ರತಿಶತ ಇಂಗಾಲ, 10 ಪ್ರತಿಶತ ಜಲಜನಕ, 3 ಪ್ರತಿಶತ ಸಾರಜನಕ, 1.5 ಪ್ರತಿಶತ ಕ್ಯಾಲ್ಸಿಯಂ, ಮತ್ತು 1 ಪ್ರತಿಶತ ರಂಜಕ, ಉಳಿದದ್ದು ಇತರ ಘಟಕಾಂಶಗಳಿಂದ ಕೂಡಿದೆ ಎಂಬುದಾಗಿ ಒಬ್ಬ ರಸಾಯನ ವಿಜ್ಞಾನಿಯು ಒಮ್ಮೆ ವಾದಿಸಿದನು. ಈ ಅಂದಾಜುಗಳು ಸಂಪೂರ್ಣವಾಗಿ ನಿಷ್ಕೃಷ್ಟವಾಗಿವೆಯೊ ಎಂಬುದು ಅಪ್ರಾಮುಖ್ಯವಾದದ್ದು. ನಿಜಸಂಗತಿಯು ಉಳಿಯುತ್ತದೆ: “ನಾವು ಧೂಳಿಯಾಗಿದ್ದೇವೆ”!
2. ದೇವರು ಮಾನವರನ್ನು ಸೃಷ್ಟಿಸಿದ ರೀತಿಯು ನಿಮ್ಮಲ್ಲಿ ಯಾವ ಪ್ರತಿಕ್ರಿಯೆಯನ್ನು ಉತ್ಪಾದಿಸುತ್ತದೆ, ಮತ್ತು ಯಾಕೆ?
2 ಕೇವಲ ಮಣ್ಣಿನಿಂದ ಮಾತ್ರ ಇಂತಹ ಜಟಿಲ ಜೀವಿಗಳನ್ನು ಯೆಹೋವನಲ್ಲದೆ ಬೇರೆ ಯಾರು ತಾನೇ ಸೃಷ್ಟಿಸಬಹುದಿತ್ತು? ದೇವರ ಕೆಲಸಗಳು ಪರಿಪೂರ್ಣವೂ ದೋಷವಿಲ್ಲದ್ದೂ ಆಗಿವೆ, ಆದುದರಿಂದ ಈ ವಿಧದಲ್ಲಿ ಮನುಷ್ಯನನ್ನು ಸೃಷ್ಟಿಸುವ ಆತನ ಆಯ್ಕೆಯು ಖಂಡಿತವಾಗಿಯೂ ದೂರಿಗೆ ಕಾರಣವಾಗಿರುವುದಿಲ್ಲ. ನಿಶ್ಚಯವಾಗಿಯೂ, ಮಹಾ ಸೃಷ್ಟಿಕರ್ತನು ಮನುಷ್ಯನನ್ನು ನೆಲದ ಮಣ್ಣಿನಿಂದ ಭಯ ಹುಟ್ಟಿಸುವ ಮತ್ತು ಅದ್ಭುತವಾದ ರೀತಿಯಲ್ಲಿ ಸೃಷ್ಟಿಸಶಕ್ತನಾದನೆಂಬ ಸಂಗತಿಯು, ಆತನ ಅಸೀಮಿತ ಶಕ್ತಿ, ಕೌಶಲ, ಮತ್ತು ಪ್ರಾಯೋಗಿಕ ವಿವೇಕಕ್ಕಾಗಿ ನಮ್ಮ ಗಣ್ಯತೆಯನ್ನು ಹೆಚ್ಚಿಸುತ್ತದೆ.—ಧರ್ಮೋಪದೇಶಕಾಂಡ 32:4, ಪಾದಟಿಪ್ಪಣಿ; ಕೀರ್ತನೆ 139:14.
ಪರಿಸ್ಥಿತಿಗಳ ಒಂದು ಬದಲಾವಣೆ
3, 4. (ಎ) ಮನುಷ್ಯನನ್ನು ಮಣ್ಣಿನಿಂದ ಸೃಷ್ಟಿಸುವುದರಲ್ಲಿ, ಯಾವುದನ್ನು ದೇವರು ಉದ್ದೇಶಿಸಲಿಲ್ಲ? (ಬಿ) ಕೀರ್ತನೆ 103:14 ರಲ್ಲಿ ದಾವೀದನು ಏನನ್ನು ಸೂಚಿಸುತ್ತಿದ್ದನು, ಮತ್ತು ಈ ಸಮಾಪ್ತಿಯನ್ನು ತಲಪುವಂತೆ ನಮಗೆ ಪೂರ್ವಾಪರವು ಹೇಗೆ ಸಹಾಯ ಮಾಡುತ್ತದೆ?
3 ಧೂಳಿನ ಜೀವಿಗಳಿಗೆ ಮಿತಿಗಳುಂಟು. ಆದರೆ ಇವು ಹೊರೆಯಾಗಿರುವಂತೆ ಯಾ ಅತಿಯಾಗಿ ನಿರ್ಬಂಧ ಪಡಿಸುವವುಗಳಾಗಿರುವಂತೆ ದೇವರು ಎಂದೂ ಉದ್ದೇಶಿಸಲಿಲ್ಲ. ಅವು ನಿರಾಶೆಯನ್ನು ಉಂಟುಮಾಡುವ ಅಥವಾ ಅಸಂತೋಷದಲ್ಲಿ ಫಲಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಆದರೂ, ಕೀರ್ತನೆ 103:14 ರಲ್ಲಿರುವ ದಾವೀದನ ಮಾತುಗಳ ಸಂದರ್ಭವು ಸೂಚಿಸುವಂತೆ, ಮಾನವರು ಅಧೀನರಾಗಿರುವ ಮಿತಿಗಳು ಖಂಡಿತವಾಗಿಯೂ ನಿರಾಶೆಯನ್ನು ಉಂಟುಮಾಡುತ್ತವೆ ಮತ್ತು ಅಸಂತೋಷದಲ್ಲಿ ಪರಿಣಮಿಸುತ್ತವೆ. ಏಕೆ? ಆದಾಮ ಮತ್ತು ಹವ್ವರು ದೇವರಿಗೆ ಅವಿಧೇಯರಾದಾಗ, ಅವರು ತಮ್ಮ ಭವಿಷ್ಯದ ಕುಟುಂಬಕ್ಕಾಗಿ ಒಂದು ಬದಲಾದ ಸನ್ನಿವೇಶವನ್ನು ಉಂಟುಮಾಡಿದರು. ಮಣ್ಣಿನಿಂದ ಮಾಡಲಾದ ಸಂಗತಿಯು ಆಗ ಹೊಸ ಅರ್ಥಗಳನ್ನು ವಹಿಸಿಕೊಂಡಿತು.a
4 ಮಣ್ಣಿನಿಂದ ಮಾಡಲಾದ ಪರಿಪೂರ್ಣ ಮನುಷ್ಯರು ಸಹ ಹೊಂದಿರಬಹುದಾದ ನೈಸರ್ಗಿಕ ಮಿತಿಗಳ ಕುರಿತು ಅಲ್ಲ, ಬದಲಿಗೆ ಪಿತ್ರಾರ್ಜಿತವಾಗಿ ಪಡೆದ ಅಸಂಪೂರ್ಣತೆಯ ಮೂಲಕ ಉಂಟಾದ ಮಾನವ ಕೊರತೆಗಳ ಕುರಿತು ದಾವೀದನು ಮಾತಾಡುತ್ತಾ ಇದ್ದನು. ಇಲ್ಲದಿದ್ದರೆ ಯೆಹೋವನ ಕುರಿತು ಅವನು ಹೀಗೆ ಹೇಳುತ್ತಿರಲಿಲ್ಲ: “ಆತನು ನಿನ್ನ ಎಲ್ಲಾ ಅಪರಾಧಗಳನ್ನು ಕ್ಷಮಿಸುವವನೂ ಸಮಸ್ತರೋಗಗಳನ್ನು ವಾಸಿಮಾಡುವವನೂ ನಿನ್ನ ಜೀವವನ್ನು ನಾಶದಿಂದ ತಪ್ಪಿಸುವವನೂ ಆಗಿದ್ದಾನೆ. ಆತನು ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸಲಿಲ್ಲ; ನಮ್ಮ ಅಪರಾಧಗಳಿಗೆ ತಕ್ಕಂತೆ ದಂಡಿಸಲಿಲ್ಲ.” (ಕೀರ್ತನೆ 103:2-4, 10) ಮಣ್ಣಿನಿಂದ ಮಾಡಲ್ಪಟ್ಟಿರುವುದಾದರೂ, ಪರಿಪೂರ್ಣ ಮಾನವರು ನಂಬಿಗಸ್ತರಾಗಿ ಉಳಿದಿದ್ದರೆ, ಅವರು ಎಂದಿಗೂ ಕ್ಷಮಾಪಣೆಯ ಅಗತ್ಯವಿರುವಂತೆ ತಪ್ಪುಮಾಡುತ್ತಿರಲಿಲ್ಲ, ಪಾಪಗೈಯುತ್ತಿರಲಿಲ್ಲ; ಅಷ್ಟೇ ಅಲ್ಲದೆ ಗುಣಹೊಂದುವಿಕೆಯನ್ನು ಅಗತ್ಯಪಡಿಸುವ ವ್ಯಾಧಿಗಳನ್ನು ಅವರು ಎಂದಿಗೂ ಪಡೆಯುತ್ತಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಅವರನ್ನು ಒಂದು ಪುನರುತ್ಥಾನದ ಮೂಲಕ ಮಾತ್ರ ಪುನಃ ಪಡೆಯಬಹುದಾದ ಮರಣದ ಹೊಂಡದೊಳಗೆ ಅವರು ಎಂದಿಗೂ ಇಳಿದುಹೋಗಬೇಕಾಗಿರುತ್ತಿರಲಿಲ್ಲ.
5. ದಾವೀದನ ಮಾತುಗಳನ್ನು ಅರ್ಥಮಾಡಿಕೊಳ್ಳುವುದು ನಮಗೆ ಯಾಕೆ ಕಷ್ಟಕರವಾಗಿರುವುದಿಲ್ಲ?
5 ಅಪರಿಪೂರ್ಣರಾಗಿರುವ ಕಾರಣ, ದಾವೀದನು ಮಾತಾಡಿರುವ ವಿಷಯಗಳನ್ನು ನಾವೆಲ್ಲರೂ ಅನುಭವಿಸಿದ್ದೇವೆ. ಅಪರಿಪೂರ್ಣತೆಯ ಕಾರಣ ನಮ್ಮ ಮಿತಿಗಳ ಕುರಿತು ನಾವು ಸಂತತವಾಗಿ ಬಲ್ಲವರಾಗಿದ್ದೇವೆ. ಕೆಲವೊಮ್ಮೆ ಅವು ಯೆಹೋವನೊಂದಿಗೆ ಯಾ ನಮ್ಮ ಕ್ರೈಸ್ತ ಸಹೋದರರೊಂದಿಗೆ ಇರುವ ನಮ್ಮ ಸಂಬಂಧವನ್ನು ದುರ್ಬಲಗೊಳಿಸುವಂತೆ ತೋರಿದಾಗ ನಾವು ದುಃಖಿತರಾಗುತ್ತೇವೆ. ನಮ್ಮ ಅಪರಿಪೂರ್ಣತೆಗಳು ಮತ್ತು ಸೈತಾನನ ಲೋಕದ ಒತ್ತಡಗಳು ನಮ್ಮನ್ನು ಕೆಲವು ಸಂದರ್ಭಗಳಲ್ಲಿ ನಿರುತ್ಸಾಹದೊಳಗೆ ತಳ್ಳುತ್ತವೆ ಎಂಬುದನ್ನು ನಾವು ವಿಷಾದಿಸುತ್ತೇವೆ. ಸೈತಾನನ ಆಳಿಕೆಯು ಅದರ ಸಮಾಪ್ತಿಯನ್ನು ಸಮೀಪಿಸುತ್ತಿರುವುದರಿಂದ, ಅವನ ಲೋಕವು ಹಿಂದೆಂದಿಗಿಂತಲೂ ಹೆಚ್ಚಿನ ಒತ್ತಡವನ್ನು ಜನರ ಮೇಲೆ ಸಾಮಾನ್ಯವಾಗಿ ಮತ್ತು ಕ್ರೈಸ್ತರ ಮೇಲೆ ವಿಶೇಷವಾಗಿ ಹಾಕುತ್ತಿದೆ.—ಪ್ರಕಟನೆ 12:12.
6. ಕೆಲವು ಕ್ರೈಸ್ತರು ನಿರಾಶರಾಗಬಹುದೇಕೆ, ಮತ್ತು ಸೈತಾನನು ಈ ರೀತಿಯ ಅನಿಸಿಕೆಯ ಲಾಭವನ್ನು ಹೇಗೆ ತೆಗೆದುಕೊಳ್ಳಬಹುದು?
6 ಒಂದು ಕ್ರೈಸ್ತ ಜೀವಿತವನ್ನು ನಡೆಸುವುದು ಅಧಿಕ ಕಷ್ಟಕರವಾಗುತ್ತಿದೆ ಎಂದು ನಿಮಗನಿಸುತ್ತದೊ? ಸತ್ಯದಲ್ಲಿ ಹೆಚ್ಚಿನ ಸಮಯ ಇದ್ದಷ್ಟು ಅವರು ಅಧಿಕ ಅಪರಿಪೂರ್ಣರಾಗುತ್ತಿರುವುದು ವ್ಯಕ್ತವಾಗುತ್ತಿದೆ ಎಂದು ಕೆಲವು ಕ್ರೈಸ್ತರು ಹೇಳಿದ್ದನ್ನು ಕೇಳಲಾಗಿದೆ. ಬಹುಶಃ ಅದು, ಅವರು ತಮ್ಮ ಸ್ವಂತ ಅಪರಿಪೂರ್ಣತೆಗಳ ಕುರಿತು ಹೆಚ್ಚಾಗಿ ಬಲ್ಲವರಾಗಿದ್ದಾರೆ ಮತ್ತು ಅವರು ಬಯಸುವ ರೀತಿಯಲ್ಲಿ ಯೆಹೋವನ ಪರಿಪೂರ್ಣ ಮಟ್ಟಗಳಿಗೆ ಅನುವರ್ತಿಸಲು ಅವರು ಅಸಮರ್ಥರಾಗಿದ್ದಾರೆ ಎಂಬ ವಿಷಯವಾಗಿರಬಹುದು. ನಿಜವಾಗಿಯಾದರೊ, ಇದು ಬಹುಶಃ ಕ್ರೈಸ್ತರು ಜ್ಞಾನದಲ್ಲಿ ಮತ್ತು ಯೆಹೋವನ ನೀತಿಯ ಆವಶ್ಯಕತೆಗಳ ಗಣ್ಯತೆಯಲ್ಲಿ ಬೆಳೆಯಲು ಮುಂದುವರಿಯುವುದರ ಒಂದು ಪರಿಣಾಮವಾಗಿದೆ. ಇಂತಹ ಯಾವುದೇ ಅರಿವು ನಮ್ಮನ್ನು ಪಿಶಾಚನ ಕೈಗಳಲ್ಲಿ ಸಿಕ್ಕಿಬೀಳುವಷ್ಟರ ಮಟ್ಟಿಗೆ ನಿರಾಶೆಗೊಳಿಸುವಂತೆ ನಾವು ಎಂದಿಗೂ ಅನುಮತಿಸದಿರುವುದು ಪ್ರಾಮುಖ್ಯವಾಗಿದೆ. ಸತ್ಯ ಆರಾಧನೆಯನ್ನು ಯೆಹೋವನ ಸೇವಕರು ತೊರೆಯುವಂತೆ ಮಾಡುವ ಸಲುವಾಗಿ ಶತಮಾನಗಳ ಉದ್ದಕ್ಕೂ ಅವನು ನಿರಾಶೆಯನ್ನು ಸತತವಾಗಿ ಉಪಯೋಗಿಸಲು ಪ್ರಯತ್ನಿಸಿದ್ದಾನೆ. ಆದರೂ, ದೇವರಿಗಾಗಿ ಯಥಾರ್ಥವಾದ ಪ್ರೀತಿ, ಅಷ್ಟೇ ಅಲ್ಲದೆ ಪಿಶಾಚನ ಕಡೆಗೆ “ಸಂಪೂರ್ಣವಾದ ದ್ವೇಷ”ವು, ಅನೇಕರನ್ನು ಹಾಗೆ ಮಾಡುವುದರಿಂದ ತಡೆದಿದೆ.—ಕೀರ್ತನೆ 139:21, 22; ಜ್ಞಾನೋಕ್ತಿ 27:11.
7. ಯಾವ ಸಂಬಂಧದಲ್ಲಿ ನಾವು ಕೆಲವೊಮ್ಮೆ ಯೋಬನಂತೆ ಇರಬಲ್ಲೆವು?
7 ಆದರೂ, ಯೆಹೋವನ ಸೇವಕರು ಒಂದಲ್ಲ ಒಂದು ಸಮಯ ನಿರಾಶೆಗೊಳ್ಳಬಹುದು. ನಮ್ಮ ಸ್ವಂತ ಸಾಧನೆಗಳಲ್ಲಿ ಅತೃಪ್ತಿಯು ಒಂದು ಕಾರಣವಾಗಿರಬಲ್ಲದು. ಭೌತಿಕ ಸಂಗತಿಗಳು ಅಥವಾ ಕುಟುಂಬ ಸದಸ್ಯರೊಂದಿಗೆ, ಮಿತ್ರರೊಂದಿಗೆ, ಯಾ ಕೆಲಸದ ಸಂಗಾತಿಗಳೊಂದಿಗೆ ವಿಷಮವಾದ ಸಂಬಂಧವು ಒಳಗೊಂಡಿರಬಹುದು. ನಂಬಿಗಸ್ತನಾದ ಯೋಬನು ಎಷ್ಟು ನಿರಾಶೆಗೊಂಡನೆಂದರೆ, ಅವನು ದೇವರನ್ನು ಬೇಡಿಕೊಂಡದ್ದು: “ನೀನು ನನ್ನನ್ನು ಪಾತಾಳದಲ್ಲಿ ಬಚ್ಚಿಟ್ಟು ನಿನ್ನ ಕೋಪವು ಇಳಿಯುವ ಪರ್ಯಂತ ನನ್ನನ್ನು ಮರೆಮಾಡಿ ನನಗೆ ಅವಧಿಯನ್ನು ಗೊತ್ತುಮಾಡಿ [ಕಡೆಯಲ್ಲಿ] ನನ್ನನ್ನು ಜ್ಞಾಪಿಸಿಕೊಂಡರೆ ಎಷ್ಟೋ ಒಳ್ಳೇದು!” ಕಷ್ಟಕರ ಪರಿಸ್ಥಿತಿಗಳು “ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದ” ಯೋಬನನ್ನು ನಿರಾಶೆಯ ಸರದಿಗಳನ್ನು ಅನುಭವಿಸುವಂತೆ ಮಾಡಿದ್ದಲ್ಲಿ, ಅದೇ ವಿಷಯವು ನಮಗೂ ಸಂಭವಿಸಬಲ್ಲದೆಂಬ ಸಂಗತಿಯು ಆಶ್ಚರ್ಯಕರವಾಗಿಲ್ಲ.—ಯೋಬ 1:8, 13-19; 2:7-9, 11-13; 14:13.
8. ಆಗಾಗ ಸಂಭವಿಸುವ ನಿರಾಶೆಯು ಒಂದು ಸಕಾರಾತ್ಮಕ ಚಿಹ್ನೆಯಾಗಿರಬಲ್ಲದು ಏಕೆ?
8 ಯೆಹೋವನು ಹೃದಯಗಳೊಳಗೆ ನೋಡುತ್ತಾನೆ ಮತ್ತು ಸದುದ್ದೇಶಗಳನ್ನು ಲಕ್ಷಿಸದೆ ಇರುವುದಿಲ್ಲ ಎಂದು ಅರಿಯುವುದು ಎಷ್ಟು ಸಾಂತ್ವನದಾಯಕವಾಗಿದೆ! ಆತನನ್ನು ಮೆಚ್ಚಿಸಲು ಸಂಪೂರ್ಣ ಯಥಾರ್ಥತೆಯಲ್ಲಿ ಶ್ರಮಿಸುವವರನ್ನು ಆತನು ಎಂದಿಗೂ ತಿರಸ್ಕರಿಸುವುದಿಲ್ಲ. ಆಗಾಗ ಉಂಟಾಗುವ ನಿರಾಶೆಯು, ನಿಜತ್ವದಲ್ಲಿ, ಯೆಹೋವನಿಗೆ ಸಲ್ಲಿಸುವ ನಮ್ಮ ಸೇವೆಯನ್ನು ನಾವು ಲಘುವಾಗಿ ತೆಗೆದುಕೊಳ್ಳುತ್ತಿಲ್ಲ ಎಂಬುದನ್ನು ಸೂಚಿಸುತ್ತಾ, ಒಂದು ಸಕಾರಾತ್ಮಕ ಚಿಹ್ನೆ ಆಗಿರಬಹುದು. ಈ ದೃಷ್ಟಿಕೋನದಿಂದ ವೀಕ್ಷಿಸಲ್ಪಟ್ಟಾಗ, ನಿರಾಶೆಯಿಂದ ಎಂದಿಗೂ ಕಷ್ಟಪಡದವನು, ಇತರರು ತಮ್ಮ ಬಲಹೀನತೆಗಳ ಬಗ್ಗೆ ಆತ್ಮಿಕವಾಗಿ ಅರಿವುಳ್ಳವರಾಗಿರುವಂತೆ ತನ್ನ ಬಲಹೀನತೆಗಳ ಬಗ್ಗೆ ಅವನು ಅರಿವಿಲ್ಲದವನಾಗಿರಬಹುದು. ನೆನಪಿನಲ್ಲಿಡಿ: “ಆದಕಾರಣ ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ.”—1 ಕೊರಿಂಥ 10:12; 1 ಸಮುವೇಲ 16:7; 1 ಅರಸು 8:39; 1 ಪೂರ್ವಕಾಲವೃತ್ತಾಂತ 28:9.
ಅವರು ಸಹ ಮಣ್ಣಿನಿದ ಮಾಡಲ್ಪಟ್ಟಿದ್ದರು
9, 10. (ಎ) ಯಾರ ನಂಬಿಕೆಯನ್ನು ಕ್ರೈಸ್ತರು ಅನುಕರಿಸಬೇಕು? (ಬಿ) ಮೋಶೆಯು ತನ್ನ ನೇಮಕಕ್ಕೆ ಹೇಗೆ ಪ್ರತಿಕ್ರಿಯಿಸಿದನು?
9 ಇಬ್ರಿಯ 11 ನೆಯ ಅಧ್ಯಾಯವು, ಬಲವಾದ ನಂಬಿಕೆಯನ್ನು ಅಭ್ಯಸಿಸಿದ ಅನೇಕ ಕ್ರೈಸ್ತ ಪೂರ್ವ ಯೆಹೋವನ ಸಾಕ್ಷಿಗಳನ್ನು ಪಟ್ಟಿಮಾಡುತ್ತದೆ. ಪ್ರಥಮ ಶತಮಾನದ ಮತ್ತು ಆಧುನಿಕ ಸಮಯಗಳ ಕ್ರೈಸ್ತರು ತದ್ರೀತಿಯಲ್ಲಿ ನಡೆದುಕೊಂಡಿದ್ದಾರೆ. ಅವರಿಂದ ಕಲಿಯತಕ್ಕಂಥ ಪಾಠಗಳು ಅಮೂಲ್ಯವಾದವುಗಳು. (ಹೋಲಿಸಿ ಇಬ್ರಿಯ 13:7.) ಉದಾಹರಣೆಗೆ, ಮೋಶೆಯ ನಂಬಿಕೆಗಿಂತ ಬೇರೆ ಯಾರ ನಂಬಿಕೆಯನ್ನು ಕ್ರೈಸ್ತರು ಉತ್ತಮವಾಗಿ ಅನುಕರಿಸಬಹುದಿತ್ತು? ತನ್ನ ಸಮಯದ ಅತ್ಯಂತ ಶಕ್ತಿಶಾಲಿ ಲೋಕ ಅರಸನಾದ ಐಗುಪ್ತ್ಯದ ಫರೋಹನಿಗೆ ನ್ಯಾಯತೀರ್ಪಿನ ಸಂದೇಶಗಳನ್ನು ಘೋಷಿಸಲು ಅವನು ಆಹ್ವಾನಿಸಲ್ಪಟ್ಟಿದ್ದನು. ಇಂದು, ಯೆಹೋವನ ಸಾಕ್ಷಿಗಳು ಸುಳ್ಳು ಧರ್ಮ ಮತ್ತು ಕ್ರಿಸ್ತನ ಸ್ಥಾಪಿತವಾದ ರಾಜ್ಯದ ವಿರೋಧದಲ್ಲಿರುವ ಇತರ ಸಂಸ್ಥೆಗಳ ವಿರುದ್ಧ ಅದೇ ರೀತಿಯ ನ್ಯಾಯತೀರ್ಪಿನ ಸಂದೇಶಗಳನ್ನು ಘೋಷಿಸಬೇಕು.—ಪ್ರಕಟನೆ 16:1-15.
10 ಮೋಶೆಯು ತೋರಿಸಿದಂತೆ, ಈ ನಿಯೋಗವನ್ನು ನೆರವೇರಿಸುವುದು ಸುಲಭವಾದ ನೇಮಕವಾಗಿಲ್ಲ. “ಫರೋಹನ ಸನ್ನಿಧಾನಕ್ಕೆ ಹೋಗುವದಕ್ಕೂ ಇಸ್ರಾಯೇಲ್ಯರನ್ನು ಐಗುಪ್ತದೇಶದಿಂದ ಕರೆದುಕೊಂಡುಬರುವದಕ್ಕೂ ನಾನು ಎಷ್ಟರವನು” ಎಂದು ಅವನು ಕೇಳಿದನು. ಕೊರತೆಯ ಅವನ ಅನಿಸಿಕೆಗಳನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು. ಜೊತೆ ಇಸ್ರಾಯೇಲ್ಯರು ಹೇಗೆ ಪ್ರತಿಕ್ರಿಯಿಸುವರು ಎಂಬುದರ ಕುರಿತು ಸಹ ಅವನು ಚಿಂತಿಸಿದನು: ‘ಅವರು ನನ್ನನ್ನು ನಂಬದೆ ನನ್ನ ಮಾತಿಗೆ ಕಿವಿಗೊಡದೆ ಹೋದರೆ?’ ತನ್ನ ಅಧಿಕಾರಯುಕ್ತತೆಯನ್ನು ಅವನು ಹೇಗೆ ರುಜುಪಡಿಸಬಹುದಿತ್ತೆಂದು ಆಗ ಯೆಹೋವನು ವಿವರಿಸಿದನು, ಆದರೆ ಮೋಶೆಗೆ ಇನ್ನೊಂದು ಸಮಸ್ಯೆ ಇತ್ತು. ಅವನಂದದ್ದು: “ಸ್ವಾಮೀ, ನಾನು ಮೊದಲಿನಿಂದಲೂ ನೀನು ದಾಸನ ಸಂಗಡ ಮಾತಾಡಿದ ಮೇಲೆಯೂ ವಾಕ್ಜಾತುರ್ಯವಿಲ್ಲದವನು; ನನ್ನ ಮಾತೂ ನಾಲಿಗೆಯೂ ಮಂದವಾಗಿವೆ.”—ವಿಮೋಚನಕಾಂಡ 3:11; 4:1, 10.
11. ಮೋಶೆಯಂತೆ, ದೇವಪ್ರಭುತ್ವ ಕರ್ತವ್ಯಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬಹುದು, ಆದರೆ ನಂಬಿಕೆಯನ್ನು ನಿರ್ವಹಿಸುವ ಮೂಲಕ, ನಾವು ಯಾವುದರ ಕುರಿತು ಭರವಸೆಯಿಂದಿರಬಲ್ಲೆವು?
11 ಕೆಲವೊಮ್ಮೆ, ನಮಗೆ ಮೋಶೆಯಂತೆ ಅನಿಸಬಹುದು. ನಮ್ಮ ದೇವಪ್ರಭುತ್ವ ಹಂಗುಗಳನ್ನು ಗುರುತಿಸುವುದಾದರೂ, ಅವುಗಳನ್ನು ಎಂದಾದರೂ ಹೇಗೆ ನೆರವೇರಿಸುವೆವು ಎಂದು ನಾವು ಆಶ್ಚರ್ಯಗೊಳ್ಳಬಹುದು. ‘ಜನರನ್ನು—ಕೆಲವರು ಉನ್ನತ ಸಾಮಾಜಿಕ, ಆರ್ಥಿಕ, ಯಾ ಶೈಕ್ಷಣಿಕ ಶ್ರೇಣಿಯವರು—ಸಮೀಪಿಸಿ, ಅವರಿಗೆ ದೇವರ ಮಾರ್ಗಗಳಲ್ಲಿ ಶಿಕ್ಷಣ ಕೊಡುವವನಂತೆ ಭಾವಿಸಲು ನಾನು ಯಾರು? ಕ್ರೈಸ್ತ ಕೂಟಗಳಲ್ಲಿ ನಾನು ಹೇಳಿಕೆಗಳನ್ನು ಮಾಡುವಾಗ ಯಾ ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ವೇದಿಕೆಯಿಂದ ನಿರೂಪಣೆಗಳನ್ನು ನೀಡುವಾಗ ನನ್ನ ಆತ್ಮಿಕ ಸಹೋದರರು ಹೇಗೆ ಪ್ರತಿಕ್ರಿಯಿಸುವರು? ಅವರು ನನ್ನ ನ್ಯೂನತೆಗಳನ್ನು ನೋಡಲಾರರೊ?’ ಆದರೆ ಮೋಶೆಯು ನಂಬಿಕೆಯನ್ನು ನಿರ್ವಹಿಸಿದ್ದರಿಂದ ಯೆಹೋವನು ಅವನೊಂದಿಗೆ ಇದ್ದನು ಮತ್ತು ಅವನ ನೇಮಕಕ್ಕಾಗಿ ಅವನನ್ನು ಸಿದ್ಧಮಾಡಿದನೆಂಬುದನ್ನು ನೆನಪಿನಲ್ಲಿಡಿ. (ವಿಮೋಚನಕಾಂಡ 3:12; 4:2-5, 11, 12) ನಾವು ಮೋಶೆಯ ನಂಬಿಕೆಯನ್ನು ಅನುಕರಿಸುವುದಾದರೆ, ಯೆಹೋವನು ನಮ್ಮೊಂದಿಗೆ ಇರುವನು ಮತ್ತು ನಮ್ಮ ಕೆಲಸಕ್ಕಾಗಿ ಕೂಡ ನಮ್ಮನ್ನು ಸಿದ್ಧಮಾಡುವನು.
12. ಪಾಪಗಳ ಯಾ ನ್ಯೂನತೆಗಳ ಬಗ್ಗೆ ನಿರಾಶೆಯ ಎದುರಿನಲ್ಲಿ ದಾವೀದನ ನಂಬಿಕೆಯು ನಮ್ಮನ್ನು ಹೇಗೆ ಉತ್ತೇಜಿಸಬಲ್ಲದು?
12 ಪಾಪಗಳಿಂದ ಯಾ ನ್ಯೂನತೆಗಳಿಂದ ಆಶಾಭಂಗ ಅಥವಾ ನಿರಾಶೆಗೊಳ್ಳುವ ಯಾರಾದರೂ, ಖಂಡಿತವಾಗಿಯೂ ದಾವೀದನೊಡನೆ, ಅವನು ಹೀಗೆ ಹೇಳಿದಾಗ ಸಂಬಂಧ ಕಲ್ಪಿಸಬಲ್ಲರು: “ನಾನು ದ್ರೋಹಿ ಎಂದು ನಾನೇ ಒಪ್ಪಿಕೊಂಡಿದ್ದೇನೆ; ನನ್ನ ಪಾಪವು ಯಾವಾಗಲೂ ನನ್ನ ಮುಂದೆ ಇದೆ.” ಯೆಹೋವನಲ್ಲಿ ಬೇಡಿಕೊಳ್ಳುತ್ತಾ, ದಾವೀದನು ಹೀಗೆ ಸಹ ಹೇಳಿದ್ದು: “ನನ್ನ ದೋಷಕ್ಕೆ ವಿಮುಖನಾಗು; ನನ್ನ ಪಾಪಗಳನ್ನೆಲ್ಲಾ ಅಳಿಸಿಬಿಡು.” ಆದರೂ, ಯೆಹೋವನನ್ನು ಸೇವಿಸುವ ಬಯಕೆಯನ್ನು ನಿರಾಶೆಯು ತನ್ನಿಂದ ಕಸಿದುಕೊಳ್ಳುವಂತೆ ಅವನು ಎಂದಿಗೂ ಅನುಮತಿಸಲಿಲ್ಲ. “ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಬೇಡ; ನಿನ್ನ ಪರಿಶುದ್ಧಾತ್ಮವನ್ನು ನನ್ನಿಂದ ತೆಗೆಯಬೇಡ.” ದಾವೀದನು ಸ್ಪಷ್ಟವಾಗಿಗಿ “ಧೂಳಿ” ಆಗಿದ್ದನು, ಆದರೆ “ಕುಗ್ಗಿದ . . . ಜಜ್ಜಿಹೋದ ಮನಸ್ಸನ್ನು” ತಿರಸ್ಕರಿಸುವುದಿಲ್ಲ ಎಂಬ ಯೆಹೋವನ ವಾಗ್ದಾನದಲ್ಲಿ ದಾವೀದನು ನಂಬಿಕೆಯನ್ನು ಅಭ್ಯಸಿಸಿದರ್ದಿಂದ ಯೆಹೋವನು ಅವನಿಂದ ವಿಮುಖನಾಗಲಿಲ್ಲ.—ಕೀರ್ತನೆ 38:1-9; 51:3, 9, 11, 17.
13, 14. (ಎ) ನಾವು ಯಾಕೆ ಮನುಷ್ಯರ ಹಿಂಬಾಲಕರಾಗಬಾರದು? (ಬಿ) ಅವರು ಸಹ ಮಣ್ಣಿನಿಂದ ಮಾಡಲ್ಪಟ್ಟಿದ್ದರೆಂದು ಪೌಲ ಮತ್ತು ಪೇತ್ರರ ಉದಾಹರಣೆಗಳು ಹೇಗೆ ತೋರಿಸುತ್ತವೆ?
13 ‘ಇಷ್ಟುಮಂದಿ ಸಾಕ್ಷಿಯವರ ಮೇಘ’ ವನ್ನು ನಾವು “ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡಲು,” ಒಂದು ಉತ್ತೇಜನದೋಪಾದಿಯಲ್ಲಿ ವೀಕ್ಷಿಸಬೇಕಾದರೂ, ಅವರ ಹಿಂಬಾಲಕರಾಗುವಂತೆ ನಾವು ಹೇಳಲ್ಪಟ್ಟಿಲ್ಲ. “ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ” ಹೆಜ್ಜೆಗಳನ್ನು—ಅಪರಿಪೂರ್ಣ ಮನುಷ್ಯರದ್ದಲ್ಲ, ಪ್ರಥಮ ಶತಮಾನದ ನಂಬಿಗಸ್ತ ಅಪೊಸ್ತಲರದ್ದೂ ಅಲ್ಲ—ಅನುಕರಿಸುವಂತೆ ನಾವು ಹೇಳಲ್ಪಡುತ್ತೇವೆ.—ಇಬ್ರಿಯ 12:1, 2; 1 ಪೇತ್ರ 2:21.
14 ಕ್ರೈಸ್ತ ಸಭೆಯಲ್ಲಿ ಸ್ತಂಭಗಳಾಗಿದ್ದ ಅಪೊಸ್ತಲ ಪೌಲ ಮತ್ತು ಪೇತ್ರರೂ ಕೆಲವೊಮ್ಮೆ ಎಡವಿದರು. “ನಾನು ಮೆಚ್ಚುವ ಒಳ್ಳೇ ಕಾರ್ಯವನ್ನು ಮಾಡದೆ ಮೆಚ್ಚದಿರುವ ಕೆಟ್ಟ ಕಾರ್ಯವನ್ನೇ ಮಾಡುವವನಾಗಿದ್ದೇನೆ,” ಎಂದು ಪೌಲನು ಬರೆದನು. “ಅಯ್ಯೋ, ನಾನು ಎಂಥ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು!” (ರೋಮಾಪುರ 7:19, 24) ಮತ್ತು ವಿಪರೀತ ಭರವಸೆಯ ಒಂದು ಗಳಿಗೆಯಲ್ಲಿ ಪೇತ್ರನು ಯೇಸುವಿಗೆ ಹೇಳಿದ್ದು: “ಎಲ್ಲರೂ ನಿನ್ನ ವಿಷಯದಲ್ಲಿ ದಿಗಿಲುಪಟ್ಟು ಹಿಂಜರಿದರೂ ನಾನು ಎಂದಿಗೂ ಹಿಂಜರಿಯುವದಿಲ್ಲ.” ಪೇತ್ರನು ಅವನನ್ನು ಮೂರು ಬಾರಿ ಅಲ್ಲಗಳೆಯುವನೆಂದು ಯೇಸು ಅವನನ್ನು ಎಚ್ಚರಿಸಿದಾಗ, ಪೇತ್ರನು ಬಡಾಯಿಕೊಚ್ಚುತ್ತಾ, ತನ್ನ ಯಜಮಾನನನ್ನು ದುರಹಂಕಾರದಿಂದ ವಿರೋಧಿಸಿದನು: “ನಾನು ನಿನ್ನ ಸಂಗಡ ಸಾಯಬೇಕಾದರೂ ನಿನ್ನನ್ನು ಅರಿಯೆನೆಂಬದಾಗಿ ಹೇಳುವದೇ ಇಲ್ಲ.” ಆದರೆ ಅವನು ಯೇಸುವನ್ನು ಅಲ್ಲಗಳೆದನು—ಬಹು ವ್ಯಥೆಪಟ್ಟು ಅಳುವಂತೆ ಮಾಡಿದ ಒಂದು ತಪ್ಪು. ಹೌದು, ಪೌಲ ಮತ್ತು ಪೇತ್ರರು ಮಣ್ಣಿನಿಂದ ಮಾಡಲ್ಪಟ್ಟಿದ್ದರು.—ಮತ್ತಾಯ 26:33-35.
15. ನಾವು ಮಣ್ಣಿನಿಂದ ಮಾಡಲ್ಪಟ್ಟಿದ್ದೇವೆ ಎಂಬ ನಿಜತ್ವದ ಹೊರತೂ, ಮುನ್ನಡೆಯಲು ನಮಗೆ ಯಾವ ಉತ್ತೇಜನವಿದೆ?
15 ಅವರ ಕೊರತೆಗಳ ಹೊರತೂ, ಮೋಶೆ, ದಾವೀದ, ಪೌಲ, ಮತ್ತು ಪೇತ್ರರು, ಮತ್ತು ಅವರಂತೆ ಇತರರು ಜಯಶಾಲಿಗಳಾಗಿ ಬಂದರು. ಯಾಕೆ? ಯಾಕೆಂದರೆ ಅವರು ಯೆಹೋವನಲ್ಲಿ ಬಲವಾದ ನಂಬಿಕೆಯನ್ನು ಅಭ್ಯಸಿಸಿದರು, ಆತನಲ್ಲಿ ಸಂಪೂರ್ಣವಾಗಿ ಭರವಸೆಯನ್ನಿಟ್ಟರು, ಮತ್ತು ಪ್ರತಿಬಂಧಗಳ ಹೊರತೂ ಆತನಿಗೆ ನಿಕಟವಾಗಿ ಅಂಟಿಕೊಂಡರು. “ಬಲಾಧಿಕ್ಯ” ವನ್ನು ಒದಗಿಸಲು ಅವರು ಆತನ ಮೇಲೆ ಆತುಕೊಂಡರು. ಮತ್ತು ಆತನು ಹಾಗೆ ಮಾಡಿದನು, ಚೇತರಿಸಿಕೊಳ್ಳದಂತೆ ಬೀಳಲು ಎಂದಿಗೂ ಅವರನ್ನು ಬಿಡಲಿಲ್ಲ. ನಾವು ನಂಬಿಕೆಯನ್ನು ನಿರ್ವಹಿಸುತ್ತಾ ಇರುವುದಾದರೆ, ನಮ್ಮ ವಿಷಯದಲ್ಲಿ ನ್ಯಾಯತೀರ್ಪನ್ನು ವಿಧಿಸುವಾಗ, ಅದು ಈ ಮಾತುಗಳೊಂದಿಗೆ ಹೊಂದಾಣಿಕೆಯಲ್ಲಿರುವುದು ಎಂಬುದರ ಕುರಿತು ನಾವು ನಿಶ್ಚಿತರಾಗಿರಬಲ್ಲೆವು: “ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.” ನಾವು ಮಣ್ಣಿನಿಂದ ಮಾಡಲ್ಪಟ್ಟಿದ್ದೇವೆ ಎಂಬ ನಿಜತ್ವದ ಹೊರತೂ ಮುನ್ನಡೆಯುವಂತೆ ನಮಗೆ ಇದು ಎಂತಹ ಉತ್ತೇಜನವನ್ನು ನೀಡುತ್ತದೆ!—2 ಕೊರಿಂಥ 4:7; ಇಬ್ರಿಯ 6:10.
ಮಣ್ಣಿನಿಂದ ಮಾಡಲ್ಪಟ್ಟಿರುವುದು ನಮಗೆ ವೈಯಕ್ತಿಕವಾಗಿ ಯಾವ ಅರ್ಥದಲ್ಲಿದೆ?
16, 17. ನ್ಯಾಯತೀರಿಸುವ ವಿಷಯ ಬರುವಾಗ, ಗಲಾತ್ಯ 6:4 ರಲ್ಲಿ ವಿವರಿಸಲಾಗಿರುವ ತತ್ವವನ್ನು ಯೆಹೋವನು ಹೇಗೆ ಅನ್ವಯಿಸುತ್ತಾನೆ?
16 ಮಕ್ಕಳನ್ನು ಯಾ ವಿದ್ಯಾರ್ಥಿಗಳನ್ನು ವೈಯಕ್ತಿಕ ಸಾಮರ್ಥ್ಯಕ್ಕನುಸಾರ—ಸಹೋದರ ಸಹೋದರಿಯರೊಂದಿಗೆ ಯಾ ಶಾಲಾಸಂಗಾತಿಗಳೊಂದಿಗೆ ಹೋಲಿಕೆಗಳ ಆಧಾರದ ಮೇಲಲ್ಲ—ನ್ಯಾಯತೀರಿಸುವ ವಿವೇಕವನ್ನು ಅನೇಕ ಹೆತ್ತವರಿಗೆ ಮತ್ತು ಶಿಕ್ಷಕರಿಗೆ ಅನುಭವವು ಕಲಿಸಿದೆ. ಇದು ಕ್ರೈಸ್ತರು ಅನುಸರಿಸಬೇಕೆಂದು ಹೇಳಲ್ಪಟ್ಟಿರುವ ಒಂದು ಬೈಬಲ್ ತತ್ವದ ಹೊಂದಾಣಿಕೆಯಲ್ಲಿ ಇದೆ: “ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರಿಶೋಧಿಸಲಿ; ಆಗ ಅವನು ತನ್ನ ನಿಮಿತ್ತದಿಂದ ಹೆಚ್ಚಳಪಡುವದಕ್ಕೆ ಆಸ್ಪದವಾಗುವದೇ ಹೊರತು ಮತ್ತೊಬ್ಬರ ನಿಮಿತ್ತದಿಂದಾಗುವದಿಲ್ಲ.”—ಗಲಾತ್ಯ 6:4.
17 ಈ ತತ್ವದೊಂದಿಗೆ ಹೊಂದಾಣಿಕೆಯಲ್ಲಿ, ಯೆಹೋವನು ಆತನ ಜನರೊಂದಿಗೆ ಒಂದು ಸುಸಂಘಟಿತ ಗುಂಪಿನೋಪಾದಿ ವ್ಯವಹರಿಸುವುದಾದರೂ, ಅವರನ್ನು ಆತನು ವ್ಯಕ್ತಿಗಳೋಪಾದಿ ನ್ಯಾಯತೀರಿಸುತ್ತಾನೆ. ರೋಮಾಪುರ 14:12 ಹೇಳುವುದು: “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು.” ಆತನ ಸೇವಕರಲ್ಲಿ ಪ್ರತಿಯೊಬ್ಬರ ಆನುವಂಶೀಯ ರಚನೆಯನ್ನು ಯೆಹೋವನು ಚೆನ್ನಾಗಿ ಬಲ್ಲವನಾಗಿದ್ದಾನೆ. ಅವರ ಶಾರೀರಿಕ ಮತ್ತು ಮಾನಸಿಕ ರಚನೆಯನ್ನು, ಅವರ ಸಾಮರ್ಥ್ಯಗಳನ್ನು, ಪಿತ್ರಾರ್ಜಿತವಾಗಿ ಪಡೆದ ಅವರ ಬಲಗಳನ್ನು ಮತ್ತು ಬಲಹೀನತೆಗಳನ್ನು, ಅವರಿಗೆ ಇರುವ ಸಾಧ್ಯತೆಗಳನ್ನು, ಅಷ್ಟೇ ಅಲ್ಲದೆ ಕ್ರಿಸ್ತೀಯ ಫಲವನ್ನು ಉತ್ಪಾದಿಸಲು ಈ ಸಾಧ್ಯತೆಗಳ ಲಾಭವನ್ನು ಅವರು ತೆಗೆದುಕೊಳ್ಳುವ ಮಟ್ಟವನ್ನು ಆತನು ಬಲ್ಲವನಾಗಿದ್ದಾನೆ. ಬುದ್ಧಿಹೀನರಾಗಿ ತಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದರಿಂದ ಹತಾಶರಾಗುವ ಕ್ರೈಸ್ತರಿಗೆ, ದೇವಾಲಯದ ಬೊಕ್ಕಸದೊಳಗೆ ಎರಡು ಸಣ್ಣ ನಾಣ್ಯಗಳನ್ನು ಹಾಕಿದ ವಿಧವೆಯ ಕುರಿತಾದ ಯೇಸುವಿನ ಹೇಳಿಕೆಗಳು ಮತ್ತು ಒಳ್ಳೆಯ ನೆಲದಲ್ಲಿ ಬಿತ್ತಿದ ಬೀಜದ ಕುರಿತಾದ ಅವನ ದೃಷ್ಟಾಂತವು, ಉತ್ತೇಜನದಾಯಕ ಉದಾಹರಣೆಗಳಾಗಿವೆ.—ಮಾರ್ಕ 4:20; 12:42-44.
18. (ಎ) ಧೂಳಿಯಾಗಿರುವುದು ನಮಗೆ ವೈಯಕ್ತಿಕವಾಗಿ ಯಾವ ಅರ್ಥದಲ್ಲಿದೆ ಎಂಬುದನ್ನು ನಾವು ಯಾಕೆ ನಿರ್ಧರಿಸಬೇಕು? (ಬಿ) ಯಥಾರ್ಥವಾದ ಸ್ವಪರಿಶೀಲನೆಯು ನಮ್ಮನ್ನು ಯಾಕೆ ಹತಾಶರನ್ನಾಗಿ ಮಾಡಬಾರದು?
18 ನಮ್ಮ ಪೂರ್ಣ ಸಾಮರ್ಥ್ಯಕ್ಕನುಸಾರ ನಾವು ಸೇವಿಸಸಾಧ್ಯವಿರುವುದರಿಂದ, ನಮ್ಮ ಸ್ವಂತ ವೈಯಕ್ತಿಕ ವಿಷಯದಲ್ಲಿ ಧೂಳಿಯಾಗಿರುವುದು ಏನನ್ನು ಅರ್ಥೈಸುತ್ತದೆ ಎಂಬುದನ್ನು ನಿರ್ಧರಿಸುವುದು ಪ್ರಾಮುಖ್ಯವಾಗಿದೆ. (ಜ್ಞಾನೋಕ್ತಿ 10:4; 12:24; 18:9; ರೋಮಾಪುರ 12:1) ನಮ್ಮ ವೈಯಕ್ತಿಕ ಕೊರತೆಗಳ ಮತ್ತು ಬಲಹೀನತೆಗಳ ಕುರಿತು ತೀಕ್ಷೈವಾಗಿ ಬಲ್ಲವರಾಗಿರುವ ಮೂಲಕ ಮಾತ್ರ ಅಭಿವೃದ್ಧಿಯ ಅಗತ್ಯಕ್ಕೆ ಮತ್ತು ಸಾಧ್ಯತೆಗಳಿಗೆ ನಾವು ಜಾಗರೂಕರಾಗಿ ಉಳಿಯಬಲ್ಲೆವು. ಸ್ವಪರಿಶೀಲನೆಯೊಂದನ್ನು ಮಾಡುವುದರಲ್ಲಿ, ಅಭಿವೃದ್ಧಿಯನ್ನು ಮಾಡುವಂತೆ ನಮಗೆ ಸಹಾಯಿಸುವುದರಲ್ಲಿ ಪವಿತ್ರಾತ್ಮನ ಶಕ್ತಿಯನ್ನು ನಾವು ಎಂದೂ ಕಡೆಗಣಿಸದೆ ಇರೋಣ. ಅದರ ಮೂಲಕ, ವಿಶ್ವವು ಸೃಷ್ಟಿಸಲ್ಪಟ್ಟಿತು, ಬೈಬಲ್ ಬರೆಯಲ್ಪಟ್ಟಿತು, ಮತ್ತು ಸಾಯುವ ಲೋಕದ ಮಧ್ಯದಲ್ಲಿ, ಒಂದು ಶಾಂತಿಭರಿತ ನೂತನ ಲೋಕ ಸಮಾಜವು ಅಸ್ತಿತ್ವಕ್ಕೆ ತರಲ್ಪಟ್ಟಿದೆ. ಆದುದರಿಂದ ಸಮಗ್ರತೆಯನ್ನು ಕಾಪಾಡಲು ಬೇಕಾದ ವಿವೇಕವನ್ನು ಮತ್ತು ಬಲವನ್ನು ಕೇಳುವವರಿಗೆ ನೀಡಲು, ದೇವರ ಪವಿತ್ರಾತ್ಮವು ಖಂಡಿತವಾಗಿಯೂ ಸಾಕಷ್ಟು ಶಕ್ತಿಶಾಲಿಯಾಗಿದೆ.—ಮೀಕ 3:8; ರೋಮಾಪುರ 15:13; ಎಫೆಸ 3:16.
19. ಯಾವ ವಿಷಯಕ್ಕೆ ನಾವು ಮಣ್ಣಿನಿಂದ ಮಾಡಲ್ಪಟ್ಟಿರುವ ಸಂಗತಿಯು ನೆವವಾಗಿಲ್ಲ?
19 ನಾವು ಧೂಳಿಯಾಗಿದ್ದೇವೆಂದು ಯೆಹೋವನು ಜ್ಞಾಪಿಸಿಕೊಳ್ಳುತ್ತಾನೆ ಎಂಬುದನ್ನು ಅರಿಯುವುದು ಎಷ್ಟು ಸಾಂತ್ವನದಾಯಕವಾಗಿದೆ! ಹಾಗಿದ್ದರೂ, ಕಡಿಮೆ ಶ್ರಮಶೀಲರಾಗಲು ಯಾ ಬಹುಶಃ ತಪ್ಪನ್ನು ಸಹ ಮಾಡಲು ಇದೊಂದು ಯುಕ್ತವಾದ ನೆವವಾಗಿದೆ ಎಂದು ನಾವು ಎಂದಿಗೂ ವಿವೇಚಿಸಬಾರದು. ಹಾಗೆ ಮಾಡಲೇ ಬಾರದು! ನಾವು ಧೂಳಿಯಾಗಿದ್ದೇವೆಂದು ಯೆಹೋವನು ಜ್ಞಾಪಿಸಿಕೊಳ್ಳುವುದು ಆತನ ಅಪಾತ್ರ ದಯೆಯ ಅಭಿವ್ಯಕ್ತಿಯಾಗಿದೆ. ಆದರೆ ನಾವು “ನಮ್ಮ ದೇವರ ಕೃಪೆಯನ್ನು ನೆವಮಾಡಿಕೊಂಡು ನಾಚಿಕೆಗೆಟ್ಟ ಕೃತ್ಯಗಳನ್ನು ನಡಿಸುವವರೂ ನಮ್ಮ ಒಬ್ಬನೇ ಒಡೆಯನೂ ಕರ್ತನೂ ಆಗಿರುವ ಯೇಸು ಕ್ರಿಸ್ತನನ್ನು ಅರಿಯದವರೂ ಆಗಿರುವ ಭಕ್ತಿಹೀನ” ರಂತೆ ಆಗಲು ಬಯಸುವುದಿಲ್ಲ. (ಯೂದ 4) ಮಣ್ಣಿನಿಂದ ಮಾಡಲ್ಪಟ್ಟಿರುವುದು ಭಕ್ತಿಹೀನರಾಗಿ ಇರಲು ಒಂದು ನೆವವಾಗಿರಬೇಕಾಗಿಲ್ಲ. “ದೇವರ ಪವಿತ್ರಾತ್ಮನನ್ನು ದುಃಖಪಡಿಸು” ವುದನ್ನು ತೊರೆಯುವ ಸಲುವಾಗಿ, ಒಬ್ಬ ಕ್ರೈಸ್ತನು ತನ್ನ ಶರೀರವನ್ನು ಗುದ್ದುತ್ತಾ ಮತ್ತು ಅದನ್ನು ಒಬ್ಬ ದಾಸನಂತೆ ನಡೆಸುತ್ತಾ, ತಪ್ಪು ಪ್ರವೃತ್ತಿಗಳೊಂದಿಗೆ ಹೋರಾಡಲು ಶ್ರಮಿಸುತ್ತಾನೆ.—ಎಫೆಸ 4:30; 1 ಕೊರಿಂಥ 9:27.
20. (ಎ) ಯಾವ ಎರಡು ಕ್ಷೇತ್ರಗಳಲ್ಲಿ ನಮಗೆ “ಕರ್ತನ ಕೆಲಸದಲ್ಲಿ ಹೆಚ್ಚಿನದನ್ನು ಮಾಡಲಿಕ್ಕಿದೆ”? (ಬಿ) ಆಶಾವಾದಕ್ಕೆ ನಮಗೆ ಕಾರಣವಿರುವುದೇಕೆ?
20 ಈಗ, ಸೈತಾನನ ಲೋಕ ವ್ಯವಸ್ಥೆಯ ಸಮಾಪ್ತಿಯ ವರ್ಷಗಳ ಸಮಯದಲ್ಲಿ, ರಾಜ್ಯದ ಸಾರುವಿಕೆಯ ಸಂಬಂಧದಲ್ಲಿ ಮತ್ತು ದೇವರ ಆತ್ಮದ ಫಲವನ್ನು ಅಧಿಕ ಸಂಪೂರ್ಣವಾಗಿ ಬೆಳೆಸಿಕೊಳ್ಳುವುದರ ಸಂಬಂಧದಲ್ಲಿ, ನಿಧಾನರಾಗುವ ಸಮಯ ಇದಾಗಿಲ್ಲ. ಎರಡೂ ಕ್ಷೇತ್ರಗಳಲ್ಲಿ “ಹೆಚ್ಚನ್ನು” ನಮಗೆ ಮಾಡಲಿಕ್ಕಿದೆ. ನಮ್ಮ “ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು” ನಮಗೆ ತಿಳಿದಿರುವುದರಿಂದ ಮುನ್ನಡೆಯುವ ಸಮಯವು ಇದೇ ಆಗಿದೆ. (1 ಕೊರಿಂಥ 15:58) ಯೆಹೋವನು ನಮ್ಮನ್ನು ಪೋಷಿಸುವನು, ಯಾಕೆಂದರೆ ಆತನ ಕುರಿತು ದಾವೀದನು ಹೇಳಿದ್ದು: “ನೀತಿವಂತನನ್ನು ಎಂದಿಗೂ ಕದಲಗೊಡಿಸನು.” (ಕೀರ್ತನೆ 55:22) ಅಪರಿಪೂರ್ಣ ಮಾನವ ಜೀವಿಗಳು ಎಂದಾದರೂ ಮಾಡುವಂತೆ ನೇಮಿಸಲ್ಪಟ್ಟಿರುವ ಅತ್ಯಂತ ಮಹಾ ಕೆಲಸದಲ್ಲಿ ಭಾಗವಹಿಸಲು ಯೆಹೋವನು ನಮ್ಮನ್ನು ವೈಯಕ್ತಿಕವಾಗಿ ಅನುಮತಿಸುತ್ತಿದ್ದಾನೆ—ಮತ್ತು ಇದು ನಾವು ಮಣ್ಣಿನಿಂದ ಮಾಡಲ್ಪಟ್ಟಿರುವ ಹೊರತೂ—ಎಂದು ತಿಳಿಯುವುದು ಎಂತಹ ಒಂದು ಆನಂದವಾಗಿದೆ!
[ಅಧ್ಯಯನ ಪ್ರಶ್ನೆಗಳು]
a ಕೀರ್ತನೆ 103:14ರ ಮೇಲೆ ಹೇಳಿಕೆಯನ್ನು ನೀಡುತ್ತಾ, ಬೈಬಲ್ ವಿವರಣೆ ಗ್ರಂಥವಾದ ಹರ್ಡರ್ಸ್ ಬೀಬಲ್ಕಾಮೆಂಟಾರ್, ಗಮನಿಸುವುದು: “ನೆಲದ ಮಣ್ಣಿನಿಂದ ಮನುಷ್ಯರನ್ನು ಆತನು ಸೃಷ್ಟಿಸಿದನೆಂದು ಆತನು ಚೆನ್ನಾಗಿ ಬಲ್ಲವನಾಗಿದ್ದಾನೆ, ಮೂಲಭೂತ ಪಾಪದಂದಿನಿಂದ ಅವರ ಮೇಲೆ ಭಾರವಾಗಿ ತೂಗುವ ಬಲಹೀನತೆಗಳನ್ನು ಮತ್ತು ಅವರ ಜೀವಿತದ ಅಶಾಶ್ವತ ಸ್ವರೂಪವನ್ನು ಆತನು ಬಲ್ಲವನಾಗಿದ್ದಾನೆ.”—ಓರೆಅಕ್ಷರಗಳು ನಮ್ಮವು.
ನೀವು ವಿವರಿಸಬಲ್ಲಿರೊ?
▫ ಮಣ್ಣಿನಿಂದ ಮಾಡಲ್ಪಟ್ಟವರಂತೆ ಮನುಷ್ಯರನ್ನು ಸೂಚಿಸುವಲ್ಲಿ ಆದಿಕಾಂಡ 2:7 ಮತ್ತು ಕೀರ್ತನೆ 103:14 ಹೇಗೆ ಭಿನ್ನವಾಗಿವೆ?
▫ ಇಂದಿನ ಕ್ರೈಸ್ತರಿಗೆ ಇಬ್ರಿಯ 11 ನೆಯ ಅಧ್ಯಾಯವು ಯಾಕೆ ಉತ್ತೇಜನದ ಮೂಲವಾಗಿದೆ?
▫ ಗಲಾತ್ಯ 6:4 ರಲ್ಲಿ ಸ್ಥಾಪಿಸಲಾಗಿರುವ ತತ್ವವನ್ನು ಅನ್ವಯಿಸಲು ನಾವು ಯಾಕೆ ವಿವೇಕವುಳ್ಳವರಾಗಿದ್ದೇವೆ?
▫ ಇಬ್ರಿಯ 6:10 ಮತ್ತು 1 ಕೊರಿಂಥ 15:58 ನಿರಾಶೆಯನ್ನು ತಡೆಯಲು ಹೇಗೆ ಸಹಾಯ ಮಾಡಬಲ್ಲವು?
[ಪುಟ 10 ರಲ್ಲಿರುವ ಚಿತ್ರಗಳು]
ಕ್ರೈಸ್ತರು ಜೊತೆ ಆರಾಧಕರ ನಂಬಿಕೆಯನ್ನು ಅನುಕರಿಸುತ್ತಾರೆ, ಆದರೆ ಅವರು ತಮ್ಮ ನಂಬಿಕೆಯನ್ನು ಪೂರೈಸುವವನಾದ ಯೇಸುವನ್ನು ಹಿಂಬಾಲಿಸುತ್ತಾರೆ