ದೇವರ ಪ್ರವಾದಿಗಳನ್ನು ಒಂದು ನಮೂನೆಯೋಪಾದಿ ತೆಗೆದುಕೊಳ್ಳಿರಿ
“ಸಹೋದರರೇ, ಬಾಧೆಯನ್ನು ಸಹಿಸಿಕೊಳ್ಳುವ ವಿಷಯದಲ್ಲಿ ಮತ್ತು ತಾಳ್ಮೆಯನ್ನು ಅಭ್ಯಸಿಸುವ ವಿಷಯದಲ್ಲಿ, ಯೆಹೋವನ ಹೆಸರಿನಲ್ಲಿ ಮಾತಾಡಿದ ಪ್ರವಾದಿಗಳನ್ನು ಒಂದು ನಮೂನೆಯೋಪಾದಿ ತೆಗೆದುಕೊಳ್ಳಿರಿ.”—ಯಾಕೋಬ 5:10, NW.
1. ಯೆಹೋವನ ಸೇವಕರು, ಅವರು ಹಿಂಸಿಸಲ್ಪಟ್ಟಾಗ ಕೂಡ ಆನಂದಭರಿತರಾಗಿರುವಂತೆ ಯಾವುದು ಸಹಾಯ ಮಾಡುತ್ತದೆ?
ಯೆಹೋವನ ಸೇವಕರು ಈ ಕಡೇ ದಿನಗಳಲ್ಲಿ ಲೋಕವ್ಯಾಪಕವಾಗಿ ಹಬ್ಬಿರುವ ವಿಷಣ್ಣತೆಯ ಹೊರತೂ, ಆನಂದವನ್ನು ಪ್ರಸರಿಸುತ್ತಾರೆ. ಇದು ಯಾಕೆಂದರೆ ತಾವು ದೇವರನ್ನು ಮೆಚ್ಚಿಸುತ್ತಿದ್ದೇವೆಂದು ಅವರು ಬಲ್ಲವರಾಗಿದ್ದಾರೆ. ನೀತಿಯ ಸಲುವಾಗಿ ತಾವು ಕಷ್ಟಾನುಭವಿಸುತ್ತಿದ್ದೇವೆಂದು ಗ್ರಹಿಸುವುದರಿಂದ, ತಮ್ಮ ಬಹಿರಂಗ ಶುಶ್ರೂಷೆಗೆ ಬರುವ ವಿರೋಧವನ್ನು ಮತ್ತು ಹಿಂಸೆಯನ್ನು ಸಹ ಯೆಹೋವನ ಸಾಕ್ಷಿಗಳು ಸಹಿಸಿಕೊಳ್ಳುತ್ತಾರೆ. ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಹೇಳಿದ್ದು: “ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು. ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವದು; ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನೂ ಹೀಗೆಯೇ ಹಿಂಸೆಪಡಿಸಿದರಲ್ಲಾ.” (ಮತ್ತಾಯ 5:10-12) ನಿಶ್ಚಯವಾಗಿ, ದೇವರ ಸೇವಕರು ನಂಬಿಕೆಯ ಪರೀಕ್ಷೆಗಳನ್ನು ಎದುರಿಸುವಾಗಲೆಲ್ಲಾ, ಇವುಗಳನ್ನು ಒಂದು ಆನಂದವೆಂದು ಅವರು ಪರಿಗಣಿಸುತ್ತಾರೆ.—ಯಾಕೋಬ 1:2, 3.
2. ಯಾಕೋಬ 5:10 ಕ್ಕನುಸಾರ, ತಾಳ್ಮೆಯನ್ನು ಅಭ್ಯಸಿಸುವಂತೆ ಯಾವುದು ನಮಗೆ ಸಹಾಯ ಮಾಡಬಲ್ಲದು?
2 ಶಿಷ್ಯ ಯಾಕೋಬನು ಬರೆದದ್ದು: “ಸಹೋದರರೇ, ಬಾಧೆಯನ್ನು ಸಹಿಸಿಕೊಳ್ಳುವ ವಿಷಯದಲ್ಲಿ ಮತ್ತು ತಾಳ್ಮೆಯನ್ನು ಅಭ್ಯಸಿಸುವ ವಿಷಯದಲ್ಲಿ, ಯೆಹೋವನ ಹೆಸರಿನಲ್ಲಿ ಮಾತಾಡಿದ ಪ್ರವಾದಿಗಳನ್ನು ಒಂದು ನಮೂನೆಯೋಪಾದಿ ತೆಗೆದುಕೊಳ್ಳಿರಿ.” (ಯಾಕೋಬ 5:10, NW) ಇಲ್ಲಿ ತರ್ಜುಮೆ ಮಾಡಲಾದ “ನಮೂನೆ” (ಹೈಪೊಡೀಗ್ಮಾ) ಎಂಬ ಗ್ರೀಕ್ ಪದವನ್ನು ಡಬ್ಲ್ಯೂ. ಎಫ್. ಆರ್ನ್ಟ್ ಮತ್ತು ಎಫ್. ಡಬ್ಲ್ಯೂ. ಗಿಂಗ್ರಿಚ್, “ಒಂದು ಒಳ್ಳೆಯ ಅರ್ಥದಲ್ಲಿ, ಅದನ್ನು ಅನುಕರಿಸುವಂತೆ ಒಬ್ಬನನ್ನು ಪ್ರೇರಿಸುವ ಯಾ ಪ್ರೇರಿಸಬೇಕಾದ ಉದಾಹರಣೆ, ಮಾದರಿ, ನಮೂನೆ,” ಯಂತೆ ವ್ಯಾಖ್ಯಾನಿಸುತ್ತಾರೆ. ಯೋಹಾನ 13:15 ರಲ್ಲಿ ತೋರಿಸಲಾದಂತೆ, “ಇದು ಒಂದು ಉದಾಹರಣೆಗಿಂತಲೂ ಹೆಚ್ಚಿನದ್ದಾಗಿದೆ. ಅದೊಂದು ನಿಶ್ಚಿತವಾದ ಮಾದರಿಯಾಗಿದೆ.” (ತಿಯೊಲಾಜಿಕಲ್ ಡಿಕ್ಷನೆರಿ ಆಫ್ ದ ನ್ಯೂ ಟೆಸ್ಟಮೆಂಟ್) ಹಾಗಾದರೆ, ಯೆಹೋವನ ಆಧುನಿಕ ದಿನದ ಸೇವಕರು ‘ಬಾಧೆಯನ್ನು ಸಹಿಸುವ’ ಮತ್ತು ‘ತಾಳ್ಮೆಯನ್ನು ಅಭ್ಯಸಿಸುವ’ ಸಂಬಂಧದಲ್ಲಿ, ಆತನ ನಂಬಿಗಸ್ತ ಪ್ರವಾದಿಗಳನ್ನು ಒಂದು ನಮೂನೆಯಂತೆ ತೆಗೆದುಕೊಳ್ಳಬಲ್ಲರು. ಅವರ ಜೀವಿತಗಳನ್ನು ಅಭ್ಯಸಿಸುವಾಗ ಇನ್ನೇನನ್ನು ನಾವು ಕಂಡುಕೊಳ್ಳಬಲ್ಲೆವು? ನಮ್ಮ ಸಾರುವ ಚಟುವಟಿಕೆಯಲ್ಲಿ ಇದು ನಮಗೆ ಹೇಗೆ ಸಹಾಯ ಮಾಡಬಲ್ಲದು?
ಅವರು ಬಾಧೆಯನ್ನು ಅನುಭವಿಸಿದರು
3, 4. ಅಮಚ್ಯನಿಂದ ಬಂದ ವಿರೋಧಕ್ಕೆ ಪ್ರವಾದಿಯಾದ ಆಮೋಸನು ಹೇಗೆ ಪ್ರತಿಕ್ರಿಯಿಸಿದನು?
3 ಯೆಹೋವನ ಪ್ರವಾದಿಗಳು ಅನೇಕ ವೇಳೆ ಬಾಧೆಯನ್ನು ಯಾ ಪೀಡನೆಯನ್ನು ಅನುಭವಿಸಿದರು. ಉದಾಹರಣೆಗೆ, ಸಾ.ಶ.ಪೂ. ಒಂಬತ್ತನೆಯ ಶತಮಾನದಲ್ಲಿ, ಬಸವನನ್ನು ಆರಾಧಿಸುತ್ತಿದ್ದ ಯಾಜಕನಾದ ಅಮಚ್ಯನು, ಪ್ರವಾದಿಯಾದ ಆಮೋಸನನ್ನು ದುಷ್ಟತನದಿಂದ ವಿರೋಧಿಸಿದನು. ಅರಸನು ಖಡ್ಗದಿಂದ ಸಾಯುವನು ಮತ್ತು ಇಸ್ರಾಯೇಲ್ ಸೆರೆಹಿಡಿಯಲ್ಪಡುವುದೆಂದು ಪ್ರವಾದಿಸುವ ಮೂಲಕ ಆಮೋಸನು II ನೆಯ ಯಾರೊಬ್ಬಾಮನ ವಿರುದ್ಧ ಒಳಸಂಚನ್ನು ಮಾಡಿದ್ದಾನೆಂದು ಅಮಚ್ಯನು ಅಸತ್ಯವಾಗಿ ವಾದಿಸಿದನು. ದುರಹಂಕಾರದಿಂದ, ಅಮಚ್ಯನು ಆಮೋಸನಿಗೆ ಹೇಳಿದ್ದು: “ಕಣಿಯವನೇ, ನಡೆ, ಯೆಹೂದದೇಶಕ್ಕೆ ಓಡಿಹೋಗು; ಅಲ್ಲೇ ಪ್ರವಾದನೆಮಾಡುತ್ತಾ ಹೊಟ್ಟೆಹೊರಕೋ; ಆದರೆ ಬೇತೇಲಿನಲ್ಲಿ ಇನ್ನು ಪ್ರವಾದನೆಮಾಡಬೇಡ; ಇದು ರಾಜಕೀಯ ಪವಿತ್ರಾಲಯ, ಇದು ಅರಮನೆ.” ಈ ಶಾಬ್ದಿಕ ಆಕ್ರಮಣದಿಂದ ಧೈರ್ಯಗುಂದದೆ, ಆಮೋಸನು ಉತ್ತರಿಸಿದ್ದು: “ನಾನು ಪ್ರವಾದಿಯಲ್ಲ, ಪ್ರವಾದಿ ಮಂಡಲಿಗೆ ಸೇರಿದವನೂ ಅಲ್ಲ, ನಾನು ಗೊಲ್ಲನು, ಅತಿಹ್ತಣ್ಣು ಕೀಳುವವನು; ಯೆಹೋವನು ನನ್ನನ್ನು ಮಂದೆಕಾಯುವದರಿಂದ ತಪ್ಪಿಸಿ—ನೀನು ಹೋಗಿ ನನ್ನ ಜನರಾದ ಇಸ್ರಾಯೇಲ್ಯರಿಗೆ ಪ್ರವಾದನೆಮಾಡು ಎಂದು ನನಗೆ ಅಪ್ಪಣೆಕೊಟ್ಟನು.”—ಆಮೋಸ 7:10-15.
4 ಧೈರ್ಯವಾಗಿ ಪ್ರವಾದಿಸಲು ಯೆಹೋವನ ಆತ್ಮವು ಆಮೋಸನಿಗೆ ಅಧಿಕಾರಕೊಟ್ಟಿತು. ಆಮೋಸನು ಹೀಗೆ ಹೇಳಿದಾಗ ಅಮಚ್ಯನ ಪ್ರತಿಕ್ರಿಯೆಯನ್ನು ಊಹಿಸಿರಿ: “ಈಗ ಯೆಹೋವನ ವಾಕ್ಯವನ್ನು ಕೇಳು; ಇಸ್ರಾಯೇಲಿಗೆ ವಿರುದ್ಧವಾಗಿ ಪ್ರವಾದನೆಮಾಡಬೇಡ, ಇಸಾಕನ ವಂಶಕ್ಕೆ ಖಂಡನೆಯಾಗಿ ಬಾಯೆತಬ್ತೇಡ ಎಂದು ನೀನು ಹೇಳಿದಕಾರಣ ಯೆಹೋವನು ಇಂತೆನ್ನುತ್ತಾನೆ—ನಿನ್ನ ಹೆಂಡತಿಯು ಈ ಪಟ್ಟಣದಲ್ಲಿ ಸೂಳೆಯಾಗುವಳು, ನಿನ್ನ ಗಂಡುಹೆಣ್ಣುಮಕ್ಕಳು ಖಡ್ಗದಿಂದ ಹತರಾಗುವರು, ನಿನ್ನ ದೇಶವನ್ನು [ಶತ್ರುಗಳು] ನೂಲೆಳೆದು ಭಾಗಿಸಿಕೊಳ್ಳುವರು, ನೀನಂತು ಅಪವಿತ್ರದೇಶದಲ್ಲಿ ಸಾಯುವಿ, ಇಸ್ರಾಯೇಲು ಸ್ವದೇಶದಿಂದ ಸೆರೆಯಾಗಿ ಒಯ್ಯಲ್ಪಡುವದು ಖಂಡಿತ.” ಆ ಪ್ರವಾದನೆಯು ನೆರವೇರಿತು. (ಆಮೋಸ 7:16, 17) ಧರ್ಮಭ್ರಷ್ಟ ಅಮಚ್ಯನು ಎಷ್ಟು ತಲ್ಲಣಗೊಂಡಿರಬೇಕು!
5. ಯೆಹೋವನ ಆಧುನಿಕ ದಿನದ ಸೇವಕರ ಹಾಗೂ ಪ್ರವಾದಿಯಾದ ಆಮೋಸನ ಸನ್ನಿವೇಶದ ಮಧ್ಯೆ ಯಾವ ಹೋಲಿಕೆಯನ್ನು ನಿರೂಪಿಸಸಾಧ್ಯವಿದೆ?
5 ಇಂದು ಯೆಹೋವನ ಜನರ ಸನ್ನಿವೇಶಕ್ಕೆ ಇದು ಸದೃಶವಾಗಿದೆ. ದೇವರ ಸಂದೇಶಗಳನ್ನು ಘೋಷಿಸುವವರೋಪಾದಿ ನಾವು ಬಾಧೆಯನ್ನು ಅನುಭವಿಸುತ್ತೇವೆ, ಮತ್ತು ಅನೇಕ ಜನರು ನಮ್ಮ ಸಾರುವ ಚಟುವಟಿಕೆಯ ಕುರಿತು ತಿರಸ್ಕಾರಭಾವದಿಂದ ಮಾತಾಡುತ್ತಾರೆ. ಸಾರಲಿರುವ ನಮ್ಮ ಅಧಿಕಾರವು ಒಂದು ದೇವತಾ ಶಾಸ್ತ್ರದ ಶಾಲೆಯಿಂದ ಬರುವುದಿಲ್ಲ ನಿಜ. ಬದಲಿಗೆ, ರಾಜ್ಯದ ಸುವಾರ್ತೆಯನ್ನು ಘೋಷಿಸುವಂತೆ ಯೆಹೋವನ ಪವಿತ್ರಾತ್ಮವು ನಮ್ಮನ್ನು ಪ್ರಚೋದಿಸುತ್ತದೆ. ದೇವರ ಸಂದೇಶವನ್ನು ನಾವು ಬದಲಿಸುವುದೂ ಇಲ್ಲ ಶಕ್ತಿಗುಂದಿಸುವುದೂ ಇಲ್ಲ. ಬದಲಿಗೆ, ಆಮೋಸನಂತೆ, ನಮ್ಮ ಕೇಳುಗರ ಪ್ರತಿಕ್ರಿಯೆಯು ಏನೇ ಆಗಿರಲಿ, ನಾವು ವಿಧೇಯತೆಯಿಂದ ಅದನ್ನು ಘೋಷಿಸುತ್ತೇವೆ.—2 ಕೊರಿಂಥ 2:15-17.
ಅವರು ತಾಳ್ಮೆಯನ್ನು ಅಭ್ಯಸಿಸಿದರು
6, 7. (ಎ) ಯೆಶಾಯನ ಪ್ರವಾದಿಸುವಿಕೆಯನ್ನು ಯಾವುದು ವೈಶಿಷ್ಟ್ಯಗೊಳಿಸಿತು? (ಬಿ) ಯೆಹೋವನ ಆಧುನಿಕ ದಿನದ ಸೇವಕರು ಯೆಶಾಯನಂತೆ ಹೇಗೆ ವರ್ತಿಸುತ್ತಾರೆ?
6 ದೇವರ ಪ್ರವಾದಿಗಳು ತಾಳ್ಮೆಯನ್ನು ಅಭ್ಯಸಿಸಿದರು. ಉದಾಹರಣೆಗೆ, ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ ಯೆಹೋವನ ಪ್ರವಾದಿಯಂತೆ ಸೇವೆ ಸಲ್ಲಿಸಿದ ಯೆಶಾಯನ ಮೂಲಕ ತಾಳ್ಮೆಯು ಪ್ರದರ್ಶಿಸಲ್ಪಟ್ಟಿತು. ದೇವರು ಅವನಿಗೆ ಹೇಳಿದ್ದು: “ನೀನು ಈ ಜನರ ಬಳಿಗೆ ಹೋಗಿ—ನೀವು ಕಿವಿಯಾರೆ ಕೇಳಿದರೂ ತಿಳಿಯಬಾರದು, ಕಣ್ಣಾರೆ ಕಂಡರೂ ಗ್ರಹಿಸಬಾರದು ಎಂದು ತಿಳಿಸಿ, ಕಣ್ಣಿನಿಂದ ಕಂಡು ಕಿವಿಯಿಂದ ಕೇಳಿ ಹೃದಯದಿಂದ ಗ್ರಹಿಸಿ ನನ್ನ ಕಡೆಗೆ ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೇಗೂ ಹೊಂದದ ಹಾಗೆ ಈ ಜನರ ಹೃದಯಕ್ಕೆ ಕೊಬ್ಬೇರಿಸಿ ಕಿವಿಯನ್ನು ಮಂದಮಾಡಿ ಕಣ್ಣಿಗೆ ಅಂಟುಬಳಿ.” (ಯೆಶಾಯ 6:9, 10) ಜನರು ನಿಶ್ಚಯವಾಗಿಯೂ ಆ ರೀತಿಯಲ್ಲಿ ಪ್ರತಿಕ್ರಿಯಿಸಿದರು. ಆದರೆ ಯೆಶಾಯನು ಕಾರ್ಯ ತ್ಯಜಿಸುವಂತೆ ಇದು ಮಾಡಿತೊ? ಇಲ್ಲ. ಬದಲಿಗೆ, ಅವನು ತಾಳ್ಮೆಯಿಂದ ಮತ್ತು ಹುರುಪಿನಿಂದ ಯೆಹೋವನ ಎಚ್ಚರಿಕೆಯ ಸಂದೇಶಗಳನ್ನು ಘೋಷಿಸಿದನು. ಇದೀಗ ನಮೂದಿಸಲಾದ ದೇವರ ಮಾತುಗಳ ಹೀಬ್ರು ಶಬ್ದ ರಚನೆಯು, ಜನರು “ಪುನಃ ಪುನಃ” ಕೇಳಿದ ಪ್ರವಾದಿಯ ಘೋಷಣೆಗಳ “ದೀರ್ಘ ಮುಂದುವರಿಕೆ”ಯ ಆಲೋಚನೆಯನ್ನು ಬೆಂಬಲಿಸುತ್ತದೆ.—ಜೆಸಿನೀಯುಸ್ ಹೀಬ್ರು ವ್ಯಾಕರಣ (ಇಂಗ್ಲಿಷ್).
7 ಯೆಶಾಯನ ಮೂಲಕ ಒಯ್ಯಲ್ಪಟ್ಟ ಯೆಹೋವನ ಮಾತುಗಳಿಗೆ ಜನರು ಪ್ರತಿಕ್ರಿಯಿಸಿದಂತೆಯೇ ಇಂದು ಅನೇಕರು ಸುವಾರ್ತೆಗೆ ಪ್ರತಿಕ್ರಿಯಿಸುತ್ತಾರೆ. ಹಾಗಿದ್ದರೂ, ಆ ನಂಬಿಗಸ್ತ ಪ್ರವಾದಿಯಂತೆ, ನಾವು ರಾಜ್ಯ ಸಂದೇಶವನ್ನು “ಪುನಃ ಪುನಃ” ಹೇಳುತ್ತೇವೆ. ನಾವು ಹಾಗೆ ಹುರುಪಿನಿಂದ ಮತ್ತು ತಾಳ್ಮೆಯ ಪಟ್ಟುಹಿಡಿದಿರುವಿಕೆಯೊಂದಿಗೆ ಮಾಡುತ್ತೇವೆ ಯಾಕೆಂದರೆ ಇದು ಯೆಹೋವನ ಚಿತ್ತವಾಗಿದೆ.
“ಆಜ್ಞೆಯಂತೆಯೇ . . . ಮಾಡಿದರು”
8, 9. ಯಾವ ವಿಧಗಳಲ್ಲಿ ಯೆಹೋವನ ಪ್ರವಾದಿಯಾದ ಮೋಶೆಯು ಒಬ್ಬ ಉತ್ತಮ ಉದಾಹರಣೆಯಾಗಿದ್ದಾನೆ?
8 ಪ್ರವಾದಿಯಾದ ಮೋಶೆಯು ತಾಳ್ಮೆ ಮತ್ತು ವಿಧೇಯತೆಯಲ್ಲಿ ಆದರ್ಶಪ್ರಾಯನಾಗಿದ್ದನು. ಗುಲಾಮರಾಗಿದ್ದ ಇಸ್ರಾಯೇಲ್ಯರೊಂದಿಗೆ ಪಕ್ಷ ವಹಿಸಲು ಅವನು ಆರಿಸಿಕೊಂಡನು ಆದರೆ ಅವರ ಬಿಡುಗಡೆಯ ಸಮಯಕ್ಕಾಗಿ ಅವನು ತಾಳ್ಮೆಯಿಂದ ಕಾಯಬೇಕಿತ್ತು. ದೇವರು ಇಸ್ರಾಯೇಲಿನ ಜನರನ್ನು ದಾಸತ್ವದಿಂದ ಬಿಡಿಸಲು ಅವನನ್ನು ಉಪಯೋಗಿಸುವ ತನಕ, ಅವನು ಮಿದ್ಯಾನಿನಲ್ಲಿ 40 ವರ್ಷಗಳ ಕಾಲ ಜೀವಿಸಿದನು. ಮೋಶೆ ಮತ್ತು ಅವನ ಅಣನ್ಣಾದ ಆರೋನನು ಐಗುಪ್ತದ ಅರಸನ ಮುಂದೆ ಇದ್ದಾಗ, ದೇವರು ಆಜ್ಞಾಪಿಸಿದ್ದನ್ನು ಅವರು ವಿಧೇಯತೆಯಿಂದ ಹೇಳಿದರು ಮತ್ತು ಮಾಡಿದರು. ವಾಸ್ತವದಲ್ಲಿ, ಯೆಹೋವನ ‘ಆಜ್ಞೆಯಂತೆಯೇ ಅವರು ಮಾಡಿದರು.’—ವಿಮೋಚನಕಾಂಡ 7:1-6; ಇಬ್ರಿಯ 11:24-29.
9 ಮೋಶೆಯು ಅರಣ್ಯದಲ್ಲಿ ಇಸ್ರಾಯೇಲಿನ 40 ಕಠಿನ ವರ್ಷಗಳನ್ನು ತಾಳ್ಮೆಯಿಂದ ತಾಳಿಕೊಂಡನು. ಇಸ್ರಾಯೇಲಿನ ಸಾಕ್ಷಿಗುಡಾರದ ನಿರ್ಮಾಣದಲ್ಲಿ ಮತ್ತು ಯೆಹೋವನ ಆರಾಧನೆಯಲ್ಲಿ ಉಪಯೋಗಿಸಲ್ಪಡುವ ಇತರ ವಿಷಯಗಳ ತಯಾರಿಸುವಿಕೆಯಲ್ಲಿ ಸಹ, ಅವನು ದೈವಿಕ ನಿರ್ದೇಶನವನ್ನು ವಿಧೇಯತೆಯಿಂದ ಪಾಲಿಸಿದನು. ಪ್ರವಾದಿಯು ದೇವರ ಉಪದೇಶಗಳನ್ನು ಎಷ್ಟು ನಿಕಟವಾಗಿ ಪಾಲಿಸಿದನೆಂದರೆ, ನಾವು ಹೀಗೆ ಓದುತ್ತೇವೆ: “ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಎಲ್ಲವನ್ನು ಮಾಡಿದನು.” (ವಿಮೋಚನಕಾಂಡ 40:16) ಯೆಹೋವನ ಸಂಸ್ಥೆಯ ಸಹವಾಸದೊಂದಿಗೆ ನಮ್ಮ ಶುಶ್ರೂಷೆಯನ್ನು ಪೂರೈಸುವುದರಲ್ಲಿ, ನಾವು ಮೋಶೆಯ ವಿಧೇಯತೆಯನ್ನು ಜ್ಞಾಪಕದಲ್ಲಿಟ್ಟುಕೊಳ್ಳೋಣ ಮತ್ತು ‘ನಮ್ಮಲ್ಲಿ ನಾಯಕತ್ವವನ್ನು ತೆಗೆದುಕೊಳ್ಳುವವರಿಗೆ ವಿಧೇಯರಾಗಿರುವ’ ಅಪೊಸ್ತಲ ಪೌಲನ ಸಲಹೆಯನ್ನು ಅನ್ವಯಿಸೋಣ.—ಇಬ್ರಿಯ 13:17.
ಅವರಿಗೆ ಸಕಾರಾತ್ಮಕ ಮನೋಭಾವವಿತ್ತು
10, 11. (ಎ) ಪ್ರವಾದಿಯಾದ ಹೋಶೇಯನಿಗೆ ಒಂದು ಸಕಾರಾತ್ಮಕ ಹೊರನೋಟವಿತ್ತೆಂದು ಯಾವುದು ಸೂಚಿಸುತ್ತದೆ? (ಬಿ) ನಮ್ಮ ಟೆರಿಟೊರಿಗಳಲ್ಲಿ ನಾವು ಜನರನ್ನು ಸಮೀಪಿಸುವಾಗ, ಒಂದು ಸಕಾರಾತ್ಮಕ ಮನೋಭಾವವನ್ನು ನಾವು ಹೇಗೆ ಕಾಪಾಡಿಕೊಳ್ಳಬಲ್ಲೆವು?
10 ಇಸ್ರಾಯೇಲಿನಲ್ಲಿ ಹರಡಿದ್ದ ನಂಬಿಗಸ್ತರಿಗಾಗಿ ದೇವರ ಪ್ರೀತಿಪರ ಚಿಂತೆಯನ್ನು ಪ್ರತಿಬಿಂಬಿಸುವ ಪ್ರವಾದನೆಗಳನ್ನು ಅಷ್ಟೇ ಅಲ್ಲದೆ ನ್ಯಾಯತೀರ್ಪಿನ ಸಂದೇಶಗಳನ್ನು ಅವರು ಪ್ರಕಟಿಸಿದಂತೆ, ಪ್ರವಾದಿಗಳಿಗೆ ಒಂದು ಸಕಾರಾತ್ಮಕ ಮನೋಭಾವವಿರುವ ಅಗತ್ಯವಿತ್ತು. ಇದು 59 ವರ್ಷಗಳಿಗಿಂತ ಹೆಚ್ಚು ಸಮಯದ ವರೆಗೆ ಒಬ್ಬ ಪ್ರವಾದಿಯಾಗಿದ್ದ ಹೋಶೇಯನ ವಿಷಯದಲ್ಲಿ ಸತ್ಯವಾಗಿತ್ತು. ಒಂದು ಸಕಾರಾತ್ಮಕ ವಿಧದಲ್ಲಿ, ಅವನು ಯೆಹೋವನ ಸಂದೇಶಗಳನ್ನು ಪ್ರಕಟಿಸುತ್ತಾ ಇದ್ದನು ಮತ್ತು ತನ್ನ ಪ್ರವಾದನಾತ್ಮಕ ಪುಸ್ತಕವನ್ನು ಈ ಮಾತುಗಳಿಂದ ಕೊನೆಗೊಳಿಸಿದನು: “ಜ್ಞಾನಿಗಳು ಈ ಸಂಗತಿಗಳನ್ನು ಗ್ರಹಿಸುವರು; ವಿವೇಕಿಗಳು ಅವುಗಳನ್ನು ತಿಳಿದುಕೊಳ್ಳುವರು; ಯೆಹೋವನ ಮಾರ್ಗಗಳು ರುಜುವಾದವುಗಳು; ಅವುಗಳಲ್ಲಿ ಸನ್ಮಾರ್ಗಿಗಳು ನಡೆಯುವರು, ದುರ್ಮಾರ್ಗಿಗಳು ಎಡವಿಬೀಳುವರು.” (ಹೋಶೇಯ 14:9) ಸಾಕ್ಷಿನೀಡುವಂತೆ ಯೆಹೋವನು ನಮ್ಮನ್ನು ಅನುಮತಿಸುವ ವರೆಗೆ, ನಮಗೊಂದು ಸಕಾರಾತ್ಮಕ ಮನೋಭಾವವು ಇರಲಿ ಮತ್ತು ನಾವು ದೇವರ ಅಪಾತ್ರ ದಯೆಯನ್ನು ವಿವೇಕದಿಂದ ಸ್ವೀಕರಿಸುವವರಿಗಾಗಿ ಹುಡುಕುತ್ತಾ ಇರೋಣ.
11 ‘ಯೋಗ್ಯರನ್ನು ಹುಡುಕಲು,’ ನಾವು ಪಟ್ಟುಹಿಡಿದಿರಬೇಕು ಮತ್ತು ವಿಷಯಗಳನ್ನು ಸಕಾರಾತ್ಮಕವಾಗಿ ವೀಕ್ಷಿಸಬೇಕು. (ಮತ್ತಾಯ 10:11) ಉದಾಹರಣೆಗೆ, ನಮ್ಮ ಕೀಲಿ ಕೈಗಳನ್ನು ನಾವು ತಪ್ಪು ಸ್ಥಳದಲ್ಲಿಡುವುದಾದರೆ, ನಾವು ಹೋಗಿದ್ದ ಹಲವಾರು ಸ್ಥಳಗಳಿಗೆ ಹಿಂದೆ ಹೋಗಿ ಅವುಗಳನ್ನು ಹುಡುಕಬಹುದು. ಇದನ್ನು ಸತತವಾಗಿ ಮಾಡಿದ ಬಳಿಕ ಮಾತ್ರ ನಾವು ಅವುಗಳನ್ನು ಕಂಡುಕೊಳ್ಳಬಹುದು. ಕುರಿಗಳಂತಹ ಜನರನ್ನು ಹುಡುಕುವುದರಲ್ಲಿ ನಾವು ತದ್ರೀತಿ ಪಟ್ಟುಹಿಡಿದಿರುವವರಾಗಿರೋಣ. ಆಗಿಂದಾಗ್ಗೆ ಕೆಲಸಮಾಡಿದ ಟೆರಿಟೊರಿಯಲ್ಲಿ ಸುವಾರ್ತೆಗೆ ಅವರು ಪ್ರತಿಕ್ರಿಯಿಸುವಾಗ ನಮಗೆ ಎಷ್ಟೊಂದು ಆನಂದವಾಗುತ್ತದೆ! ನಮ್ಮ ಬಹಿರಂಗ ಶುಶ್ರೂಷೆಯನ್ನು ಪೂರ್ವದಲ್ಲಿ ನಿರ್ಬಂಧಗಳು ಸೀಮಿತಗೊಳಿಸಿದ್ದ ದೇಶಗಳಲ್ಲಿ ದೇವರು ನಮ್ಮ ಕೆಲಸವನ್ನು ಆಶೀರ್ವದಿಸುತ್ತಿದ್ದಾನೆ ಎಂಬುದಕ್ಕೆ ನಾವೆಷ್ಟು ಹರ್ಷಿಸುತ್ತೇವೆ!—ಗಲಾತ್ಯ 6:10.
ಪ್ರೋತ್ಸಾಹನೆಯ ಮೂಲಗಳು
12. ಯೋವೇಲನ ಯಾವ ಪ್ರವಾದನೆಯು 20 ನೆಯ ಶತಮಾನದ ನೆರವೇರಿಕೆಯನ್ನು ಪಡೆಯುತ್ತಿದೆ, ಮತ್ತು ಹೇಗೆ?
12 ಯೆಹೋವನ ಪ್ರವಾದಿಗಳ ಮಾತುಗಳು ನಮ್ಮ ಶುಶ್ರೂಷೆಯಲ್ಲಿ ನಮಗೆ ಮಹಾ ಪ್ರೋತ್ಸಾಹನೆಯಾಗಿರಬಲ್ಲವು. ದೃಷ್ಟಾಂತಕ್ಕೆ, ಯೋವೇಲನ ಪ್ರವಾದನೆಯನ್ನು ಪರಿಗಣಿಸಿರಿ. ಅದರಲ್ಲಿ ಸಾ.ಶ.ಪೂ. ಒಂಬತ್ತನೆಯ ಶತಮಾನದಲ್ಲಿದ್ದ ಭ್ರಷ್ಟ ಇಸ್ರಾಯೇಲ್ಯರಿಗೆ ಮತ್ತು ಇತರರಿಗೆ ನಿರ್ದೇಶಿಸಲಾದ ನ್ಯಾಯತೀರ್ಪಿನ ಸಂದೇಶಗಳು ಇವೆ. ಆದರೂ, ಯೋವೇಲನು ಹೀಗೆ ಪ್ರವಾದಿಸುವಂತೆ ಪ್ರೇರೇಪಿಸಲ್ಪಟ್ಟನು: “ತರುವಾಯ ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ನಿಮ್ಮಲ್ಲಿರುವ ಗಂಡಸರೂ ಹೆಂಗಸರೂ ಪ್ರವಾದಿಸುವರು; ನಿಮ್ಮ ಹಿರಿಯರಿಗೆ ಕನಸುಗಳು ಬೀಳುವವು, ನಿಮ್ಮ ಯೌವನಸ್ಥರಿಗೆ ದಿವ್ಯದರ್ಶನಗಳಾಗುವವು; ಇದಲ್ಲದೆ ಆ ದಿನಗಳಲ್ಲಿ ದಾಸದಾಸಿಯರ ಮೇಲೆಯೂ ನನ್ನ ಆತ್ಮವನ್ನು ಸುರಿಸುವೆನು.” (ಯೋವೇಲ 2:28, 29) ಸಾ.ಶ. 33 ನೆಯ ಪಂಚಾಶತ್ತಮದಿಂದ ಇದು ಯೇಸುವಿನ ಹಿಂಬಾಲಕರ ವಿಷಯದಲ್ಲಿ ಸತ್ಯವಾಗಿ ಪರಿಣಮಿಸಿತು. ಮತ್ತು ಈ 20 ನೆಯ ಶತಮಾನದಲ್ಲಿ, ಈ ಪ್ರವಾದನೆಯ ಎಂತಹ ಮಹಾ ನೆರವೇರಿಕೆಯನ್ನು ನಾವು ನೋಡುತ್ತೇವೆ! ಇಂದು “ಪ್ರವಾದಿಸುವ” ಯಾ ಯೆಹೋವನ ಸಂದೇಶವನ್ನು ಘೋಷಿಸುವ ಲಕ್ಷಾಂತರ ಜನರು ಇದ್ದಾರೆ—ಅವರೊಳಗೆ 6,00,000 ಕ್ಕಿಂತಲೂ ಅಧಿಕ ಮಂದಿ ಪೂರ್ಣ ಸಮಯದ ಪಯನೀಯರ್ ಸೇವೆಯಲ್ಲಿದ್ದಾರೆ.
13, 14. ಕ್ಷೇತ್ರ ಶುಶ್ರೂಷೆಯಲ್ಲಿ ಆನಂದವನ್ನು ಕಂಡುಕೊಳ್ಳುವಂತೆ ಎಳೆಯ ಕ್ರೈಸ್ತರಿಗೆ ಯಾವುದು ಸಹಾಯ ಮಾಡಬಲ್ಲದು?
13 ಅನೇಕ ರಾಜ್ಯ ಘೋಷಕರು ಯುವ ಜನರಾಗಿದ್ದಾರೆ. ಬೈಬಲಿನ ಕುರಿತು ವೃದ್ಧರೊಂದಿಗೆ ಮಾತಾಡುವುದು ಯಾವಾಗಲೂ ಅವರಿಗೆ ಸುಲಭವಾಗಿರುವುದಿಲ್ಲ. ಕೆಲವೊಮ್ಮೆ ಯೆಹೋವನ ಯುವ ಸೇವಕರಿಗೆ ಹೀಗೆ ಹೇಳಲಾಗುತ್ತದೆ: ‘ಸಾರುತ್ತಾ ನೀನು ನಿನ್ನ ಸಮಯವನ್ನು ಹಾಳುಮಾಡುತ್ತಿರುವೆ,’ ಮತ್ತು ‘ನೀನು ಇನ್ನೇನನ್ನಾದರೂ ಮಾಡುತ್ತಿರಬೇಕು.’ ವ್ಯಕ್ತಿಯು ಆ ರೀತಿಯಾಗಿ ಭಾವಿಸುವುದಕ್ಕೆ ತಾವು ವ್ಯಸನಿಸುತ್ತೇವೆಂದು ಯೆಹೋವನ ಎಳೆಯ ಸಾಕ್ಷಿಗಳು ಜಾಣ್ಮೆಯಿಂದ ಉತ್ತರಿಸಬಹುದು. ಸುವಾರ್ತೆಯ ಒಬ್ಬ ಯುವ ಪ್ರಚಾರಕನು, ಹೀಗೆ ಕೂಡಿಸುವುದನ್ನು ಸಹಾಯಕರವೆಂದು ಕಾಣುತ್ತಾನೆ: “ನಿಮ್ಮಂಥ ವೃದ್ಧ ಜನರೊಂದಿಗೆ ಮಾತಾಡುವುದರಿಂದ ನಾನು ನಿಜವಾಗಿಯೂ ಪ್ರಯೋಜನ ಪಡೆಯುತ್ತೇನೆಂದು ನಾನು ಭಾವಿಸುತ್ತೇನೆ, ಮತ್ತು ಅದನ್ನು ನಾನು ಆನಂದಿಸುತ್ತೇನೆ.” ಸುವಾರ್ತೆಯನ್ನು ಸಾರುವುದು, ನಿಶ್ಚಯವಾಗಿಯೂ ಸಮಯದ ಹಾಳುಮಾಡುವಿಕೆಯಾಗಿರುವುದಿಲ್ಲ. ಜೀವಗಳು ಗಂಡಾಂತರದಲ್ಲಿವೆ. ಯೋವೇಲನ ಮುಖಾಂತರ, ದೇವರು ಇನ್ನೂ ಘೋಷಿಸಿದ್ದು: “ಆದರೂ ಯೆಹೋವನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದು.”—ಯೋವೇಲ 2:32.
14 ರಾಜ್ಯ ಸಾರುವಿಕೆಯ ಚಟುವಟಿಕೆಯಲ್ಲಿ ತಮ್ಮ ಹೆತ್ತವರನ್ನು ಜೊತೆಗೂಡುವ ಮಕ್ಕಳು, ವೈಯಕ್ತಿಕ ಗುರಿಗಳನ್ನು ಇಡುವುದರಲ್ಲಿ ಹೆತ್ತವರ ಸಹಾಯವನ್ನು ಸ್ವಾಗತಿಸುತ್ತಾರೆ. ಇಂತಹ ಯುವ ಜನರು ಒಂದು ಶಾಸ್ತ್ರವಚನವನ್ನು ಓದುವುದರಿಂದ ತಮ್ಮ ಬೈಬಲಾಧಾರಿತ ನಿರೀಕ್ಷೆಯನ್ನು ವಿವರಿಸುವ ಮತ್ತು ಅಭಿರುಚಿವುಳ್ಳ ಜನರಿಗೆ ಸೂಕ್ತ ಸಾಹಿತ್ಯವನ್ನು ನೀಡುವ ವರೆಗೆ ಹೆಜ್ಜೆ ಹೆಜ್ಜೆಯಾಗಿ ಪ್ರಗತಿ ಮಾಡುತ್ತಾರೆ. ತಮ್ಮ ಸ್ವಂತ ಪ್ರಗತಿಯನ್ನು ಮತ್ತು ಯೆಹೋವನ ಆಶೀರ್ವಾದವನ್ನು ಅವರು ನೋಡುವಾಗ, ಯುವ ರಾಜ್ಯ ಪ್ರಚಾರಕರು ಸುವಾರ್ತೆಯನ್ನು ಸಾರುವುದರಲ್ಲಿ ಮಹಾ ಆನಂದವನ್ನು ಕಂಡುಕೊಳ್ಳುತ್ತಾರೆ.—ಕೀರ್ತನೆ 110:3; 148:12, 13.
ಹುರುಪು ಮತ್ತು ಕಾಯುವ ಮನೋಭಾವ
15. ರಾಜ್ಯ ಸಾರುವಿಕೆಯ ಕೆಲಸಕ್ಕಾಗಿ ನಮ್ಮ ಹುರುಪನ್ನು ಪುನಃ ಕೆರಳಿಸುವಂತೆ, ಯೆಹೆಜ್ಕೇಲನ ಮಾದರಿಯು ನಮಗೆ ಹೇಗೆ ಸಹಾಯ ಮಾಡಬಲ್ಲದು?
15 ದೇವರ ಪ್ರವಾದಿಗಳು, ಇಂದು ನಮ್ಮ ಶುಶ್ರೂಷೆಯಲ್ಲಿ ನಮಗೆ ಬೇಕಾದ ಗುಣಗಳನ್ನು—ಹುರುಪು ಮತ್ತು ಕಾಯುವ ಮನೋಭಾವ—ಇವೆರಡನ್ನೂ ಪ್ರದರ್ಶಿಸುವುದರಲ್ಲಿ ಕೂಡ ಆದರ್ಶಪ್ರಾಯರಾಗಿದ್ದರು. ದೇವರ ವಾಕ್ಯದಿಂದ ನಾವು ಮೊದಲು ಸತ್ಯವನ್ನು ಕಲಿತಾಗ, ಧೈರ್ಯವಾಗಿ ಮಾತಾಡುವಂತೆ ನಮ್ಮನ್ನು ಪ್ರೇರೇಪಿಸಿದ ಹುರುಪಿನಿಂದ ಬಹುಶಃ ನಾವು ಹುರಿದುಂಬಿಸಲ್ಪಟ್ಟಿದ್ದೆವು. ಆದರೆ ಆ ಸಮಯದಂದಿನಿಂದ ವರ್ಷಗಳು ದಾಟಿಹೋಗಿರಬಹುದು, ಮತ್ತು ನಾವು ನಮ್ಮ ಸಾಕ್ಷಿನೀಡುವ ಟೆರಿಟೊರಿಯನ್ನು ಅನೇಕ ಬಾರಿ ಆವರಿಸಿರಬಹುದು. ರಾಜ್ಯ ಸಂದೇಶವನ್ನು ಈಗ ಕೊಂಚ ಜನರು ಸ್ವೀಕರಿಸುತ್ತಿರಬಹುದು. ಇದು ನಮ್ಮ ಹುರುಪನ್ನು ಕುಂದಿಸಿದೆಯೊ? ಹಾಗಿರುವಲ್ಲಿ, “ದೇವರು ಬಲಪಡಿಸುತ್ತಾನೆ” ಎಂಬ ಅರ್ಥವುಳ್ಳ ಹೆಸರಿನ ಪ್ರವಾದಿಯಾದ ಯೆಹೆಜ್ಕೇಲನನ್ನು ಪರಿಗಣಿಸಿರಿ. ಯೆಹೆಜ್ಕೇಲನು ಪ್ರಾಚೀನ ಇಸ್ರಾಯೇಲಿನಲ್ಲಿ ಕಠಿನ ಹೃದಯದ ಜನರನ್ನು ಎದುರಿಸಿದರೂ, ದೇವರು ಅವನನ್ನು ಬಲಪಡಿಸಿದನು ಮತ್ತು ಅವನ ಹಣೆಯನ್ನು ಸಾಂಕೇತಿಕವಾಗಿ ಕಲ್ಲಿಗಿಂತ ಕಠಿನಗೊಳಿಸಿದನು. ಹೀಗೆ, ಯೆಹೆಜ್ಕೇಲನು ಜನರು ಆಲಿಸಲಿ ಇಲ್ಲದಿರಲಿ, ಅನೇಕಾನೇಕ ವರ್ಷಗಳ ವರೆಗೆ ತನ್ನ ಶುಶ್ರೂಷೆಯನ್ನು ಪೂರೈಸಲು ಶಕ್ತನಾಗಿದ್ದನು. ನಾವು ತದ್ರೀತಿಯಲ್ಲಿ ಮಾಡಬಲ್ಲೆವೆಂದು ಅವನ ಉದಾಹರಣೆಯು ತೋರಿಸುತ್ತದೆ, ಮತ್ತು ಸಾರುವ ಕೆಲಸಕ್ಕಾಗಿ ನಮ್ಮ ಹುರುಪನ್ನು ಪುನಃ ಕೆರಳಿಸಲು ಅದು ನಮಗೆ ಸಹಾಯ ಮಾಡಬಲ್ಲದು.—ಯೆಹೆಜ್ಕೇಲ 3:8, 9; 2 ತಿಮೊಥೆಯ 4:5.
16. ಮೀಕನ ಯಾವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು?
16 ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ ಪ್ರವಾದಿಸಿದ ಮೀಕನು ಅವನ ತಾಳ್ಮೆಗಾಗಿ ಪ್ರಸಿದ್ಧನಾಗಿದ್ದನು. “ನಾನಂತು,” ಅವನು ಬರೆದನು, “ಯೆಹೋವನನ್ನು ಎದುರುನೋಡುವೆನು; ನನ್ನ ರಕ್ಷಕನಾದ ದೇವರನ್ನು ಕಾದುಕೊಳ್ಳುವೆನು; ನನ್ನ ದೇವರು ನನ್ನ ಕಡೆಗೆ ಕಿವಿಗೊಡುವನು.” (ಮೀಕ 7:7) ಮೀಕನ ಭರವಸೆಯು ಅವನ ಬಲವಾದ ನಂಬಿಕೆಯಲ್ಲಿ ಬೇರೂರಿತ್ತು. ಯೆಹೋವನು ಏನನ್ನು ಉದ್ದೇಶಿಸಿರುವನೊ ಅದನ್ನು ಆತನು ಖಂಡಿತವಾಗಿ ನೆರವೇರಿಸುವನೆಂದು, ಪ್ರವಾದಿಯಾದ ಯೆಶಾಯನಂತೆ ಮೀಕನಿಗೆ ಗೊತ್ತಿತ್ತು. (ಯೆಶಾಯ 55:11) ಆದುದರಿಂದ ನಾವು ದೇವರ ವಾಗ್ದಾನಗಳ ನೆರವೇರಿಕೆಯ ಕಡೆಗೆ ಕಾಯುವ ಮನೋಭಾವವನ್ನು ಬೆಳೆಸಿಕೊಳ್ಳೋಣ. ಮತ್ತು ರಾಜ್ಯ ಸಂದೇಶದಲ್ಲಿ ಕಡಿಮೆ ಆಸಕ್ತಿಯನ್ನು ಜನರು ತೋರಿಸುವ ಪ್ರದೇಶಗಳಲ್ಲಿಯೂ, ನಾವು ಸುವಾರ್ತೆಯನ್ನು ಹುರುಪಿನಿಂದ ಸಾರೋಣ.—ತೀತ 2:14; ಯಾಕೋಬ 5:7-10.
ಇಂದು ತಾಳ್ಮೆಯನ್ನು ಅಭ್ಯಸಿಸುವುದು
17, 18. ತಾಳ್ಮೆಯನ್ನು ಅಭ್ಯಸಿಸುವಂತೆ ಯಾವ ಪ್ರಾಚೀನ ಮತ್ತು ಆಧುನಿಕ ಉದಾಹರಣೆಗಳು ನಮಗೆ ಸಹಾಯ ನೀಡಬಲ್ಲವು?
17 ಯೆಹೋವನ ಪ್ರವಾದಿಗಳಲ್ಲಿ ಕೆಲವರು, ವರ್ಷಗಳ ವರೆಗೆ ತಮ್ಮ ನೇಮಕಗಳಲ್ಲಿ ತಾಳ್ಮೆಯಿಂದ ಮುಂದುವರಿದರು ಆದರೆ ತಮ್ಮ ಪ್ರವಾದನೆಗಳ ನೆರವೇರಿಕೆಯನ್ನು ನೋಡಲಿಲ್ಲ. ಆದರೂ, ಅವರ ತಾಳ್ಮೆಯ ಪಟ್ಟುಹಿಡಿದಿರುವಿಕೆಯು—ಅನೇಕ ವೇಳೆ ಪೀಡನೆಯನ್ನು ಅನುಭವಿಸುವಾಗ—ನಮ್ಮ ಶುಶ್ರೂಷೆಯನ್ನು ನಾವು ನೆರವೇರಿಸಬಲ್ಲೆವೆಂದು ಗ್ರಹಿಸುವಂತೆ ನಮಗೆ ಸಹಾಯಮಾಡುತ್ತದೆ. ಇಪ್ಪತ್ತನೆಯ ಶತಮಾನದ ಆದಿ ದಶಕಗಳಲ್ಲಿದ್ದ ನಂಬಿಗಸ್ತ ಅಭಿಷಿಕ್ತರ ಉದಾಹರಣೆಯಿಂದ ಕೂಡ ನಾವು ಪ್ರಯೋಜನಪಡೆಯಬಲ್ಲೆವು. ಅವರು ನಿರೀಕ್ಷಿಸಿದಷ್ಟು ಬೇಗನೆ ಅವರ ಸ್ವರ್ಗೀಯ ನಿರೀಕ್ಷೆಗಳು ನೆರವೇರದಿದ್ದಾಗ್ಯೂ, ಒಂದು ತೋರಿಕೆಯ ವಿಳಂಬದಿಂದ ಉಂಟಾದ ನಿರಾಶೆಯು, ದೇವರು ಅವರಿಗೆ ಪ್ರಕಟಿಸಿರುವಂತೆ ಆತನ ಚಿತ್ತವನ್ನು ಮಾಡುವುದಕ್ಕಾಗಿರುವ ಅವರ ಹುರುಪನ್ನು ಕುಗ್ಗಿಸುವಂತೆ ಅವರು ಅನುಮತಿಸಲಿಲ್ಲ.
18 ಅನೇಕ ವರ್ಷಗಳ ವರೆಗೆ, ಈ ಕ್ರೈಸ್ತರಲ್ಲಿ ಅನೇಕರು ಕ್ರಮವಾಗಿ ಕಾವಲಿನಬುರುಜು ಮತ್ತು ಅದರ ಜೊತೆ ಪತ್ರಿಕೆಯಾದ ಎಚ್ಚರ! ವನ್ನು (ಹಿಂದೆ, ದ ಗೋಲ್ಡನ್ ಏಜ್ ಮತ್ತು ತದನಂತರ ಕಾನ್ಸೊಲೇಷನ್) ಹಂಚಿದರು. ಅವರು ಹುರುಪಿನಿಂದ ಈ ಬಹುಮೂಲ್ಯ ಪತ್ರಿಕೆಗಳನ್ನು ಜನರಿಗೆ ರಸ್ತೆಗಳ ಮೇಲೆ ಮತ್ತು ತಮ್ಮ ಮನೆಗಳಲ್ಲಿ ದೊರಕುವಂತೆ ಮಾಡಿದರು, ಇಂದು ನಾವು ಇವುಗಳನ್ನು ಪತ್ರಿಕಾ ಪಥಗಳೆಂದು ಕರೆಯುತ್ತೇವೆ. ತನ್ನ ಭೂಜೀವಿತವನ್ನು ಮುಗಿಸಿರುವ ಒಬ್ಬಾಕೆ ವೃದ್ಧ ಸಹೋದರಿಯನ್ನು, ರಸ್ತೆಯ ಮೇಲೆ ಆಕೆ ಸಾಕ್ಷಿನೀಡುತ್ತಿರುವುದನ್ನು ನೋಡುವ ರೂಢಿಯಿದ್ದ ದಾರಿಹೋಕರು, ಆಕೆ ಅಲಿಲ್ಲದ್ದಕ್ಕೆ ಬಹಳ ವಿಷಾದಿಸಿದರು. ಆಕೆಯ ಬಹಿರಂಗ ಶುಶ್ರೂಷೆಯನ್ನು ಗಮನಿಸಿದ್ದ ಜನರ ಗುಣಗ್ರಾಹಿ ಹೇಳಿಕೆಗಳ ಮೂಲಕ ತೋರಿಸಲ್ಪಟ್ಟಂತೆ, ಆಕೆಯ ನಂಬಿಗಸ್ತ ಸೇವೆಯ ಅನೇಕ ವರ್ಷಗಳ ಸಮಯದಲ್ಲಿ ಎಂತಹ ಸಾಕ್ಷಿಯನ್ನು ಆಕೆ ನೀಡಿದಳು! ಒಬ್ಬ ರಾಜ್ಯ ಘೋಷಕರಂತೆ, ನಿಮ್ಮ ಶುಶ್ರೂಷೆಯಲ್ಲಿ ನೀವು ಭೇಟಿಯಾಗುವವರ ಕೈಗಳಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಕ್ರಮವಾಗಿ ನೀಡುತ್ತಿದ್ದೀರೊ?
19. ಇಬ್ರಿಯ 6:10-12 ಯಾವ ಉತ್ತೇಜನವನ್ನು ನಮಗೆ ನೀಡುತ್ತದೆ?
19 ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯ ಸದಸ್ಯರಂತೆ ಸೇವೆ ಮಾಡುವ ಸಹೋದರರ ತಾಳ್ಮೆ ಮತ್ತು ನಂಬಿಗಸ್ತ ಸೇವೆಯನ್ನು ಸಹ ಪರಿಗಣಿಸಿರಿ. ಅವರಲ್ಲಿ ಅನೇಕರು ತಮ್ಮ ಜೀವಿತದ ಒಂಬತ್ತನೆಯ ಯಾ ಹತ್ತನೆಯ ದಶಕದಲ್ಲಿದ್ದಾರೆ, ಆದರೆ ಅವರು ಇನ್ನೂ ತಮ್ಮ ನೇಮಿತ ಕರ್ತವ್ಯಗಳಿಗಾಗಿ ಹುರುಪಿನಿಂದ ಕಾಳಜಿವಹಿಸುವ ರಾಜ್ಯ ಘೋಷಕರಾಗಿದ್ದಾರೆ. (ಇಬ್ರಿಯ 13:7) ಸ್ವರ್ಗೀಯ ನಿರೀಕ್ಷೆಯಿರುವ ಇತರ ವೃದ್ಧರ ಹಾಗೂ “ಬೇರೆ ಕುರಿ” ಗಳೊಳಗೆ ಕೂಡ ವಯಸ್ಸಾಗುತ್ತಿರುವ ಕೆಲವರ ಕುರಿತೇನು? (ಯೋಹಾನ 10:16) ತಮ್ಮ ಕೆಲಸವನ್ನು ಮತ್ತು ಆತನ ಹೆಸರಿಗಾಗಿ ತಾವು ತೋರಿಸುವ ಪ್ರೀತಿಯನ್ನು ಮರೆಯಲು, ದೇವರು ಅನೀತಿವಂತನಲ್ಲ ಎಂದು ಅವರು ನಿಶ್ಚಿತರಾಗಿರಬಲ್ಲರು. ಎಳೆಯ ಜೊತೆ ವಿಶ್ವಾಸಿಗಳೊಂದಿಗೆ, ಯೆಹೋವನ ವಯಸ್ಸಾದ ಸಾಕ್ಷಿಗಳು ತಾವು ಮಾಡಬಲ್ಲ ವಿಷಯದಲ್ಲಿ, ನಂಬಿಕೆಯನ್ನು ಅಭ್ಯಸಿಸುತ್ತಾ ಮತ್ತು ದೇವರ ಸೇವೆಯಲ್ಲಿ ತಾಳ್ಮೆಯನ್ನು ತೋರಿಸುತ್ತಾ ಮುಂದುವರಿಯಲಿ. (ಇಬ್ರಿಯ 6:10-12) ಆಮೇಲೆ, ಹಳೆಯ ಕಾಲದ ಪ್ರವಾದಿಗಳ ವಿಷಯದಲ್ಲಿರುವಂತೆ ಪುನರುತ್ಥಾನದ ಮೂಲಕವಾಗಲಿ, ಯಾ ಬರಲಿರುವ “ಮಹಾ ಸಂಕಟ” ದಿಂದ ಪಾರಾಗಿ ಉಳಿಯುವ ಮೂಲಕವಾಗಲಿ, ಅನಂತ ಜೀವನದ ಸಮೃದ್ಧ ಬಹುಮಾನವನ್ನು ಅವರು ಕೊಯ್ಯುವರು.—ಮತ್ತಾಯ 24:21.
20. (ಎ) ಪ್ರವಾದಿಗಳ “ನಮೂನೆ” ಯಿಂದ ನೀವು ಏನನ್ನು ಕಲಿತಿದ್ದೀರಿ? (ಬಿ) ಪ್ರವಾದಿಗಳಂತಹ ತಾಳ್ಮೆಯು ನಮಗೆ ಹೇಗೆ ಸಹಾಯ ಮಾಡಬಲ್ಲದು?
20 ಎಂತಹ ಉತ್ತಮ ನಮೂನೆಯನ್ನು ದೇವರ ಪ್ರವಾದಿಗಳು ನಮಗೆ ಬಿಟ್ಟು ಹೋಗಿದ್ದಾರೆ! ಅವರು ಕಷ್ಟಾನುಭವವನ್ನು ತಾಳಿಕೊಂಡಿದ್ದರಿಂದ, ತಾಳ್ಮೆಯನ್ನು ಅಭ್ಯಸಿಸಿದರ್ದಿಂದ, ಮತ್ತು ಇತರ ದೈವಿಕ ಗುಣಗಳನ್ನು ಪ್ರದರ್ಶಿಸಿದ್ದರಿಂದ, ಯೆಹೋವನ ಹೆಸರಿನಲ್ಲಿ ಮಾತಾಡುವ ಸುಯೋಗವನ್ನು ಅವರು ಪಡೆದರು. ಆತನ ಆಧುನಿಕ ದಿನದ ಸಾಕ್ಷಿಗಳೋಪಾದಿ, ನಾವು ಅವರಂತೆ ಇರೋಣ ಮತ್ತು ಹೀಗೆ ಘೋಷಿಸಿದ ಪ್ರವಾದಿಯಾದ ಹಬಕ್ಕೂಕನಂತೆ ದೃಢ ಸಂಕಲ್ಪದವರಾಗಿರೋಣ: “ನನ್ನ ಕೋವರದಲ್ಲಿ ನಿಂತುಕೊಳ್ಳುವೆನು, ಬುರುಜಿನ ಮೇಲೆ ನೆಲೆಯಾಗಿರುವೆನು, ಯೆಹೋವನು ನನಗೆ ಏನು ಹೇಳುವನೋ, . . . ಎಂದು ಎದುರುನೋಡುವೆನು.” (ಹಬಕ್ಕೂಕ 2:1) ನಾವು ತಾಳ್ಮೆಯನ್ನು ಅಭ್ಯಸಿಸಿ, ನಮ್ಮ ಮಹಾ ಸೃಷ್ಟಿಕರ್ತನಾದ ಯೆಹೋವನ ಸುಪ್ರಸಿದ್ಧ ಹೆಸರಿಗೆ ಬಹಿರಂಗ ಘೋಷಣೆಯನ್ನು ಮಾಡಲು ಆನಂದದಿಂದ ಮುಂದುವರಿಯುವಾಗ ನಮಗೆ ತದ್ರೀತಿಯ ದೃಢಸಂಕಲ್ಪ ಇರಲಿ!—ನೆಹಮೀಯ 8:10; ರೋಮಾಪುರ 10:10.
ಈ ಅಂಶಗಳನ್ನು ನೀವು ಗ್ರಹಿಸಿದಿರೊ?
▫ ಯಾವ ಧೈರ್ಯವಂತ ಮಾದರಿಯನ್ನು ಪ್ರವಾದಿಯಾದ ಆಮೋಸನು ಸ್ಥಾಪಿಸಿದನು?
▫ ಯಾವ ವಿಧಗಳಲ್ಲಿ ಪ್ರವಾದಿಯಾದ ಮೋಶೆಯು ಆದರ್ಶಪ್ರಾಯನಾಗಿದ್ದನು?
▫ ಯೆಹೋವನ ಆಧುನಿಕ ದಿನದ ಸಾಕ್ಷಿಗಳು ಆಮೋಸ ಮತ್ತು ಯೆಶಾಯರಂತೆ ಹೇಗೆ ವರ್ತಿಸಬಲ್ಲರು?
▫ ಹೋಶೇಯನ ಮತ್ತು ಯೋವೇಲನ ನಡವಳಿಯಿಂದ ಕ್ರೈಸ್ತ ಶುಶ್ರೂಷಕರು ಏನನ್ನು ಕಲಿಯಬಲ್ಲರು?
▫ ಯೆಹೆಜ್ಕೇಲನ ಮತ್ತು ಮೀಕನ ಉದಾಹರಣೆಗಳಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?
[ಪುಟ 16 ರಲ್ಲಿರುವ ಚಿತ್ರ]
ಅಮಚ್ಯನ ಉಗ್ರವಾದ ವಿರೋಧದ ಹೊರತೂ, ಧೈರ್ಯವಾಗಿ ಪ್ರವಾದಿಸುವಂತೆ ಯೆಹೋವನ ಆತ್ಮವು ಆಮೋಸನನ್ನು ಶಕ್ತಗೊಳಿಸಿತು
[ಪುಟ 18 ರಲ್ಲಿರುವ ಚಿತ್ರ]
ನಂಬಿಗಸ್ತ ಅಭಿಷಿಕ್ತ ಜನರು ಯೆಹೋವನ ಸೇವೆಯಲ್ಲಿ ತಾಳ್ಮೆಯನ್ನು ಅಭ್ಯಸಿಸುವ ಮೂಲಕ, ಒಂದು ಉತ್ತಮ ಮಾದರಿಯನ್ನು ಸ್ಥಾಪಿಸಿದ್ದಾರೆ