ಪ್ರವಾದಿಗಳನ್ನು ಮಾದರಿ ಮಾಡಿಕೊಳ್ಳಿ—ಆಮೋಸ
1. ಆಮೋಸನ ಉದಾಹರಣೆ ನಮಗೆ ಪ್ರೋತ್ಸಾಹದ ಚಿಲುಮೆ. ಯಾಕೆ?
1 ಜಾಸ್ತಿ ವಿದ್ಯಾಭ್ಯಾಸ ಇಲ್ಲದ ಕಾರಣ ನಿಮಗೆ ಯಾವಾಗಲಾದರೂ ‘ನನಗೆ ಸುವಾರ್ತೆ ಸಾರಕ್ಕೆ ಯಾವ ಅರ್ಹತೆನೂ ಇಲ್ಲ’ ಅಂತ ಅನಿಸಿದೆಯಾ? ಹಾಗಿದ್ದರೆ ಆಮೋಸನ ಉದಾಹರಣೆ ಧೈರ್ಯ ತುಂಬುತ್ತೆ. ಅವನೊಬ್ಬ ಕುರಿ ಕಾಯುವವ ಮತ್ತು ಅತ್ತಿ ಹಣ್ಣು ಕೀಳುವವನಾಗಿದ್ದ. ಹಾಗಿದ್ದರೂ ಯೆಹೋವ ದೇವರು ಅವನಿಗೆ ಪ್ರಾಮುಖ್ಯವಾದ ಸಂದೇಶವೊಂದನ್ನು ಸಾರಿ ಹೇಳುವ ಜವಾಬ್ದಾರಿ ಕೊಟ್ಟನು. (ಆಮೋ. 1:1; 7:14, 15) ಹಾಗೇ ಇವತ್ತು ಸಹ ಯಾರು ನಮ್ರ ಜನರಾಗಿರುತ್ತಾರೊ ಅವರನ್ನೇ ಯೆಹೋವನು ತನ್ನ ಕೆಲಸಕ್ಕೆ ಉಪಯೋಗಿಸಿಕೊಳ್ಳುವುದು. (1 ಕೊರಿಂ. 1:27-29) ಪ್ರವಾದಿ ಆಮೋಸನ ಬಗ್ಗೆ ಕಲಿಯುವುದರಿಂದ ಇಂದು ಸುವಾರ್ತೆ ಸಾರುವ ವಿಷಯಕ್ಕೆ ಏನೆಲ್ಲ ಪಾಠ ಇದೆ?
2. ಸುವಾರ್ತೆ ವಿಷಯದಲ್ಲಿ ನಮಗೆ ಹಿಂಸೆ ಬಂದರೆ ಭಯಪಡಬಾರದು ಯಾಕೆ?
2 ವಿರೋಧ ಎದುರಾದಾಗ ಧೈರ್ಯದಿಂದಿರಿ: ಇಸ್ರಾಯೇಲಿನ ಉತ್ತರದ ಹತ್ತು ಕುಲಗಳ ಯಾಜಕನಾಗಿದ್ದ ಅಮಚ್ಯ ಬಸವಾರಾಧನೆ ಮಾಡುವವನಾಗಿದ್ದ. ಆಮೋಸ ಪ್ರವಾದನೆ ಮಾಡುವುದು ಅವನಿಗೆ ಗೊತ್ತಾದಾಗ ತುಂಬ ಸಿಟ್ಟಿಂದ ಹೀಗೆ ಹೇಳಿದಂತಿತ್ತು: ‘ಓಡು ಮನೆಗೆ! ನಮ್ಮ ಸಹವಾಸಕ್ಕೆ ಬರಬೇಡ! ನಮಗೆ ನಮ್ಮದೇ ಆದ ಧರ್ಮ ಇದೆ!’ (ಆಮೋ. 7:12, 13) ಇಷ್ಟು ಸಾಲದು ಎಂದು ಪ್ರವಾದಿಯ ಕೆಲಸಕ್ಕೆ ತಡೆ ಹಾಕಲು ಅರಸ ಯಾರೊಬ್ಬಾಮನ ಹತ್ತಿರ ಆಮೋಸನ ಮಾತುಗಳನ್ನೇ ತಿರುಚಿ ಹೇಳುತ್ತಾನೆ. (ಆಮೋ. 7:7-11) ಆದರೆ ಆಮೋಸ ಹೆದರಲಿಲ್ಲ. ಇಂದು ಸಹ ಕೆಲವು ಪಾದ್ರಿಗಳು ಯೆಹೋವನ ಜನರನ್ನು ಹಿಂಸಿಸಲು ರಾಜಕೀಯದ ಮೊರೆ ಹೋಗುತ್ತಾರೆ. ಯೆಹೋವ ದೇವರು ತನ್ನ ಜನರಿಗೆ ಭರವಸೆ ನೀಡುವುದು, ತನ್ನ ಜನರ ವಿರುದ್ಧ ಯಾವುದೇ ಆಯುಧ ಎದ್ದರೂ ಅದು ಜಯಿಸಲ್ಲ ಎಂದು.—ಯೆಶಾ. 54:17.
3. ನಾವಿಂದು ಯಾವ ಎರಡು ವಿಷಯಗಳ ಬಗ್ಗೆ ಸಾರುತ್ತೇವೆ?
3 ದೇವರ ನ್ಯಾಯತೀರ್ಪು ಮತ್ತು ಭವಿಷ್ಯದಲ್ಲಿ ಸಿಗಲಿರುವ ಆಶೀರ್ವಾದಗಳ ಬಗ್ಗೆ ಸಾರಿ: ತನ್ನ ಹೆಸರಿನಲ್ಲಿರುವ ಬೈಬಲ್ ಪುಸ್ತಕದಲ್ಲಿ ಆಮೋಸ ಇಸ್ರಾಯೇಲಿನ ಹತ್ತು ಕುಲಗಳಿಗೆ ಬರಲಿರುವ ನ್ಯಾಯತೀರ್ಪಿನ ಬಗ್ಗೆ ಪ್ರವಾದನೆಗಳನ್ನು ಬರೆದಿದ್ದಾನೆ. ಆದರೂ ಯೆಹೋವನು ಮಾಡಲಿರುವ ಪುನಃಸ್ಥಾಪನೆ ಮತ್ತು ತರಲಿರುವ ಆಶೀರ್ವಾದಗಳ ಬಗ್ಗೆ ಹೇಳಿ ಮುಕ್ತಾಯಗೊಳಿಸಿದ್ದಾನೆ. (ಆಮೋ. 9:13-15) ನಾವೂ ಸಹ ದೇವರು ತರಲಿರುವ “ನ್ಯಾಯತೀರ್ಪಿನ” ಬಗ್ಗೆ ಮಾತಾಡುತ್ತೇವೆ. ಆದರೆ ಅದು ನಾವು ಸಾರಲೇಬೇಕಾದ ‘ರಾಜ್ಯದ ಸುವಾರ್ತೆಯ’ ಒಂದು ಭಾಗ. (2 ಪೇತ್ರ 3:7; ಮತ್ತಾ. 24:14) ಯೆಹೋವನು ಅರ್ಮಗೆದೋನ್ನಲ್ಲಿ ದುಷ್ಟತನವನ್ನು ತೆಗೆದು ಹಾಕಿ ಭೂಮಿಯನ್ನು ಪರದೈಸಾಗಿ ಮಾಡಲಿದ್ದಾನೆ.—ಕೀರ್ತ. 37:34.
4. ಯೆಹೋವನ ಇಷ್ಟವನ್ನು ಮಾಡುವ ವಿಷಯದಲ್ಲಿ ನಮಗೆ ಯಾವ ಆಶ್ವಾಸನೆ ಇದೆ?
4 ನಮ್ಮನ್ನು ದ್ವೇಷಿಸುವವರೇ ಹೆಚ್ಚು ತುಂಬಿಕೊಂಡಿರುವ ಈ ಭೂಮಿಯಲ್ಲಿ ನಾವು ಸುವಾರ್ತೆ ಸಾರುತ್ತಿದ್ದೇವೆ. ಹೀಗಿರುವಾಗ ಸಮರ್ಪಣೆಗೆ ತಕ್ಕಂತೆ ಜೀವಿಸುವ ಮತ್ತು ದೇವರ ಇಷ್ಟವನ್ನು ಮಾಡುವ ನಮ್ಮ ದೃಢತೆ ಪರೀಕ್ಷೆಗೆ ಒಳಗಾಗೇ ಆಗುತ್ತೆ. (ಯೋಹಾ. 15:19) ಹಾಗಿದ್ದರೂ ಆಮೋಸನಿಗೆ ಮಾಡಿದಂತೆ ದೇವರ ಇಷ್ಟವನ್ನು ಮಾಡಲು ನಮಗೆ ಬೇಕಾಗುವ ಸಹಾಯವನ್ನು ಆತನು ಕೊಟ್ಟೇ ಕೊಡುತ್ತಾನೆ.—2 ಕೊರಿಂ. 3:5.