ರಾಜ್ಯ ಘೋಷಕರು ವರದಿ ಮಾಡುತ್ತಾರೆ
ದೇವರ ವಾಕ್ಯವು ಬಲವನ್ನು ಪ್ರಯೋಗಿಸುತ್ತದೆ
“ದೇವರ ವಾಕ್ಯವು ಸಜೀವವಾಗಿದೆ ಮತ್ತು ಬಲವನ್ನು ಪ್ರಯೋಗಿಸುತ್ತದೆ.” (ಇಬ್ರಿಯ 4:12, NW) ಸುಳ್ಳು ಧರ್ಮದ ಮೂಲಕ ಮೋಸಗೊಳಿಸಲ್ಪಟ್ಟ ಜನರು ಬೈಬಲ್ ಸತ್ಯಗಳಿಗೆ ಒಡ್ಡಲ್ಪಟ್ಟಾಗ, ಈ ಮಾತುಗಳು ಅನೇಕ ಬಾರಿ ಸತ್ಯವೆಂದು ರುಜುವಾಗಿವೆ. ಡೊಮಿನಿಕನ್ ರಿಪಬ್ಲಿಕ್ನಿಂದ ಬಂದ ಈ ಮುಂದಿನ ಅನುಭವವು ತೋರಿಸುವಂತೆ, ಬೈಬಲಿನ ಬಲವು ಜನರ ಜೀವಿತಗಳನ್ನು ಬದಲಾಯಿಸಬಲ್ಲದು ಮತ್ತು ನಿರೀಕ್ಷೆಯನ್ನು ಕೊಡಬಲ್ಲದು.
ಇತ್ತೀಚೆಗೆ ಮರಣದಲ್ಲಿ ಇಬ್ಬರು ಚಿಕ್ಕ ಮಕ್ಕಳನ್ನು ಕಳೆದುಕೊಂಡಿದ್ದ ಒಬ್ಬಾಕೆ ಪ್ರಖ್ಯಾತ ಕ್ಯಾತೊಲಿಕ್ ಸ್ತ್ರೀಯನ್ನು ಯೆಹೋವನ ಸಾಕ್ಷಿಗಳು ಸಂದರ್ಶಿಸಿದರು. ಅವಳು ದುಃಖಿತಳಾಗಿದಳ್ದು ಮತ್ತು ಪ್ರತಿದಿನ ತನ್ನ ದುರಂತದ ವಿಷಯದಲ್ಲಿ ಪ್ರಲಾಪಿಸಿದಳು. ಪುನರುತ್ಥಾನದ ನಿರೀಕ್ಷೆಯ ಕುರಿತು ಬೈಬಲ್ ಯೋಹಾನ 5:28, 29 ರಲ್ಲಿ ಹೇಳುವ ವಿಷಯವನ್ನು ಸಾಕ್ಷಿಗಳು ಆಕೆಗೆ ತೋರಿಸಿದರು. ಸಾಕ್ಷಿಗಳೊಂದಿಗೆ ಇನ್ನೂ ಹೆಚ್ಚಿನ ಚರ್ಚೆಗಳಾನಂತರ, ಆಕೆ ಪುನರುತ್ಥಾನದ ನಿರೀಕ್ಷೆಯಲ್ಲಿ ಸಾಂತ್ವನವನ್ನು ಕಂಡುಕೊಂಡಳು ಮಾತ್ರವಲ್ಲ, ಆಕೆಯನ್ನು ಆಕೆಯ ಕ್ಯಾತೊಲಿಕ್ ಧಾರ್ಮಿಕ ನಾಯಕರು ವಂಚಿಸುತ್ತಿದ್ದರೆಂದು ಸಹ ಆಕೆ ಗ್ರಹಿಸಿದಳು.
ಕ್ಯಾತೊಲಿಕ್ ಚರ್ಚಿಗೆ ಆಕೆ ಬೇಗನೆ ರಾಜೀನಾಮೆ ಕೊಟ್ಟಳು, ಮತ್ತು ಯೆಹೋವನ ಸಾಕ್ಷಿಗಳೊಂದಿಗೆ ಕ್ರಮವಾದೊಂದು ಬೈಬಲ್ ಅಧ್ಯಯನವನ್ನು ಸ್ವೀಕರಿಸಿದಳು. ಆಕೆಯ ಗಂಡನಾದರೊ, ಆಕೆಯ ದೃಷ್ಟಿಕೋನಗಳನ್ನು ಒಪ್ಪಲಿಲ್ಲ. ಅವನು ಸಹ ಒಬ್ಬ ಬಹಳ ಪ್ರಖ್ಯಾತ ಕ್ಯಾತೊಲಿಕನಾಗಿದ್ದರಿಂದ, ಅವನ ಹೆಂಡತಿಯನ್ನು ಆಕೆಯ ಮಾರ್ಗದಿಂದ ತಿರುಗಿಸುವ ಮತ್ತು ಕ್ಯಾತೊಲಿಕ್ ಧರ್ಮದೊಳಗೆ ಆಕೆಯನ್ನು ಮತ್ತೆ ತರುವ ಒಂದು ಪ್ರಯತ್ನದಲ್ಲಿ, ಅವಳನ್ನು ಸುಪ್ರಸಿದ್ಧ ರಾಜಕೀಯ ಹಾಗೂ ಧಾರ್ಮಿಕ ಸ್ನೇಹಿತರು ಸಂದರ್ಶಿಸುವಂತೆ ಅವನು ಏರ್ಪಡಿಸಿದನು. ಒಂದು ಸಂದರ್ಭದಲ್ಲಿ ತಾವು ವಿವಾಹ ವಿಚ್ಛೇದನವನ್ನು ಪಡೆಯುತ್ತಿದ್ದೇವೆಂದು ಸಹ ತನ್ನ ಸಂಬಂಧಿಕರಿಗೆ ಮತ್ತು ಚರ್ಚಿನ ಜೊತೆ ಸದಸ್ಯರಿಗೆ ಸೂಚಿಸುತ್ತಾ, ಅವನು ತದನಂತರ ಆಕೆಗೆ ವಿವಾಹ ವಿಚ್ಛೇದನದ ಬೆದರಿಕೆಯನ್ನು ನೀಡಿದನು.
ಆದರೆ ಅವನ ಉಪಾಯವು ಯಶಸ್ವಿಯಾಗಲಿಲ್ಲ. ಪ್ರತಿಕೂಲವಾಗಿ, ತನ್ನ ಬೈಬಲ್ ಅಧ್ಯಯನಗಳನ್ನು ಮುಂದುವರಿಸಲು ಆಕೆ ಇನ್ನೂ ಅಧಿಕ ದೃಢಸಂಕಲ್ಪವುಳ್ಳವಳಾದಳು. ಆಕೆಯ ಆತ್ಮಿಕ ಬೆಳವಣಿಗೆ ಮತ್ತು ಉತ್ತಮ ಕ್ರಿಸ್ತೀಯ ಗುಣಗಳ ವಿಕಸನೆಯಿಂದಾಗಿ, ಒಂದು ವಿಚ್ಛೇದನವನ್ನು ಪಡೆಯುವ ಬದಲಿಗೆ ಆಕೆಯೊಂದಿಗೆ ಉಳಿಯಲು ಗಂಡನು ನಿರ್ಣಯಿಸಿದನು. ಒಂದು ದಿನ ಆಕೆ ಅಭ್ಯಸಿಸುತ್ತಿದ್ದ ಬೈಬಲ್ ಸಾಹಿತ್ಯವನ್ನು ಪರೀಕ್ಷಿಸಲು ಕೂಡ ಅವನು ಒಪ್ಪಿದನು—ಆದರೆ ಒಂದು ಷರತ್ತಿನ ಮೇಲೆ. ಬೈಬಲಿನ ತನ್ನ ಸ್ವಂತ ಕ್ಯಾತೊಲಿಕ್ ತರ್ಜುಮೆಯನ್ನು ಉಪಯೋಗಿಸಲು ಅವನು ಬಯಸಿದನು.
ಆಶ್ಚರ್ಯಕರವಾಗಿ, ಯೆಹೋವನ ಸಾಕ್ಷಿಗಳಿಂದ ಪಡೆದ ಸಾಹಿತ್ಯದ ಸಹಾಯದಿಂದ, ಅವನು ತನ್ನ ಸ್ವಂತ ಬೈಬಲಿನಿಂದ ನೇರವಾಗಿ ಹೊಸ ವಿಷಯಗಳನ್ನು ಕಲಿಯಲು ಆರಂಭಿಸಿದನು. ತನ್ನ ಹೆಂಡತಿಯು ಸರಿಯಾದ ಮಾರ್ಗವನ್ನು ಆರಿಸಿದ್ದಳೆಂದು ಅವನು ಗ್ರಹಿಸಿದನು, ಮತ್ತು ಬೇಗನೆ ಆಕೆಯ ಉದಾಹರಣೆಯನ್ನು ಅನುಸರಿಸಲು ಅವನು ಸಿದ್ಧನಾಗಿದ್ದನು. ನಿಶ್ಚಯವಾಗಿಯೂ, ತನ್ನ ಸ್ವಂತ ಜೀವಿತದಲ್ಲಿ ಬದಲಾವಣೆಗಳನ್ನು ಮಾಡುವ ಅಗತ್ಯವನ್ನು ಅವನು ಕಂಡುಕೊಂಡನು. ಕಠಿನವಾದೊಂದು ಸವಾಲು, ತನ್ನ ಹೊಗೆಸೊಪ್ಪು ಸೇದುವ ಹವ್ಯಾಸವನ್ನು ಬಿಡುವುದಾಗಿತ್ತು. “ಮಾರಾಟಕ್ಕಿರುವ ಮರಣ—ಹೊಗೆಸೊಪ್ಪು ಸೇದುವುದನ್ನು ನಿಲ್ಲಿಸಲಿಕ್ಕಾಗಿರುವ ಹತ್ತು ಮಾರ್ಗಗಳು,” ಎಂಬ ಮುಖಪುಟದ ಶೀರ್ಷಿಕೆಯೊಂದಿಗಿದ್ದ ಅವೇಕ್! ಪತ್ರಿಕೆಯ ಜುಲೈ 8, 1989ರ ಸಂಚಿಕೆಯನ್ನು ಓದಿದ ಬಳಿಕ, ಈ ಅಶಾಸ್ತ್ರೀಯ ಹವ್ಯಾಸವನ್ನು ಬಿಟ್ಟುಬಿಡಲು ಅವನು ನಿರ್ಧರಿಸಿದನು. ಅವನ ಜೇಬಿನಲ್ಲಿ ಅನೇಕ ವೇಳೆ ಕಂಡುಕೊಳ್ಳಲ್ಪಡುವ ವಾಡಿಕೆಯ ಸಿಗರೇಟಿನ ಕಟ್ಟಿನ ಸ್ಥಳದಲ್ಲಿ, ಅವೇಕ್! ಪತ್ರಿಕೆಯ ಆ ಸಂಚಿಕೆಯನ್ನು ಅವನು ಒಯ್ಯತೊಡಗಿದನು. ಪ್ರತಿಸಲ ಸೇದುವ ಬಯಕೆಯಾದಾಗ, ಸೇದುವುದರ ಕುರಿತಿದ್ದ ಲೇಖನಗಳನ್ನು ಅವನು ಓದಿದನು. ಈ ವಿಧಾನವು ಯಶಸ್ವಿಯಾಯಿತು! ಲೇಖನಗಳನ್ನು ಅನೇಕ ಬಾರಿ ಓದಿದ ಬಳಿಕ, ಸೇದುವುದನ್ನು ಅವನು ನಿಲ್ಲಿಸಲು ಶಕ್ತನಾದನು.
ಇಂದು ಗಂಡ ಮತ್ತು ಹೆಂಡತಿ—ಇಬ್ಬರೂ—ದೀಕ್ಷಾಸ್ನಾನ ಪಡೆದ ಶುಶ್ರೂಷಕರಾಗಿ ಯೆಹೋವನನ್ನು ಸೇವಿಸುತ್ತಾರೆ. ಪರಿಸ್ಥಿತಿಗಳು ಅನುಮತಿಸುವಾಗ, ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ತನ್ನ ಹೆಚ್ಚಿನ ಸಮಯವನ್ನು ಸಮರ್ಪಿಸುತ್ತಾ, ಅವನು ಪೂರ್ಣ ಸಮಯದ ಶುಶ್ರೂಷಕನಂತೆ ಸೇವೆ ಮಾಡುತ್ತಾನೆ, ಮತ್ತು ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಯಲ್ಲಿ ಒಬ್ಬ ಶುಶ್ರೂಷಾ ಸೇವಕನಾಗಿ ಅವನು ಸೇವೆ ಮಾಡುತ್ತಾನೆ. ಒಂದು ಹೊಸ ಲೋಕದಲ್ಲಿ ತಮ್ಮ ಮಕ್ಕಳನ್ನು ಪುನಃ ಜೀವಿತಕ್ಕೆ ಅವರು ಸ್ವಾಗತಿಸಬಲ್ಲ ಪುನರುತ್ಥಾನದ ಕಡೆಗೆ ಅವನು ಮತ್ತು ಅವನ ಹೆಂಡತಿಯು ಎದುರುನೋಡುತ್ತಾರೆ. ಹೌದು, ದೇವರ ವಾಕ್ಯವಾದ ಬೈಬಲ್ ಸಜೀವವಾಗಿದೆ ಮತ್ತು ಬಲವನ್ನು ಪ್ರಯೋಗಿಸುತ್ತದೆ!