ಉದ್ದೇಶಭರಿತವಾದೊಂದು ಜೀವನ ಮಾರ್ಗ
ಮೆಲ್ವಾ ವೀಲೆಂಡ್ ಹೇಳಿದಂತೆ
ಮಾರ್ಚ್ 1940 ರಲ್ಲಿ, ನಾನು ದೀಕ್ಷಾಸ್ನಾನ ಪಡೆದಾದ ಕೆಲವು ತಿಂಗಳುಗಳ ತರುವಾಯ, ನನ್ನ ತಂಗಿ ಫಿಲಿಸ್ ನನ್ನ ಬಳಿ ಬಂದು ಕೇಳಿದ್ದು: “ನೀನು ಪಯನೀಯರ್ ಸೇವೆಯನ್ನು ಮಾಡಬಾರದೇಕೆ?” “ಪಯನೀಯರ್ ಸೇವೆಯೆ?” ಎಂದು ನಾನು ಕೇಳಿದೆ. “ಅಂದರೆ ಪೂರ್ಣ ಸಮಯ ಸಾರುವುದು, ಬಹುಮಟ್ಟಿಗೆ ಪ್ರತಿ ದಿನ?”
‘ಬೈಬಲಿನ ನನ್ನ ಸೀಮಿತ ಜ್ಞಾನದೊಂದಿಗೆ ಮತ್ತು ಬ್ಯಾಂಕಿನಲ್ಲಿರುವ ಹೆಚ್ಚು ಸೀಮಿತವಾದ ಉಳಿತಾಯಗಳೊಂದಿಗೆ ನಾನೊಬ್ಬ ಪಯನೀಯರಳಾಗುವುದು ಹೇಗೆ ಸಾಧ್ಯ?’ ಎಂದು ನಾನು ನೆನಸಿದೆ. ಆದರೂ, ಫಿಲಿಸ್‌ಳ ಪ್ರಶ್ನೆಯು, ಯೋಚಿಸುವಂತೆ ನನ್ನನ್ನು ಪ್ರೇರಿಸಿತು. ಅದರ ಕುರಿತು ನಾನು ಬಹಳ ಪ್ರಾರ್ಥನೆಯನ್ನೂ ಮಾಡಿದೆ.
ಅಂತಿಮವಾಗಿ ನಾನು ತರ್ಕಿಸಿದ್ದು, ‘ತನ್ನ ರಾಜ್ಯವನ್ನು ಪ್ರಥಮವಾಗಿ ಹುಡುಕುವುದಾದರೆ ನಮ್ಮ ಕಾಳಜಿ ವಹಿಸುವೆನೆಂದು ದೇವರು ವಾಗ್ದಾನಿಸುವಾಗ, ನನಗೆ ಆತನಲ್ಲಿ ಭರವಸೆಯಿಡಲು ಯಾಕೆ ಸಾಧ್ಯವಿಲ್ಲ?’ (ಮತ್ತಾಯ 6:33) ಆದುದರಿಂದ ಜೂನ್ 1940 ರಲ್ಲಿ, ಉಡುಪನ್ನು ತಯಾರಿಸುವ ನನ್ನ ಕೆಲಸವನ್ನು ಬಿಡುವುದಾಗಿ ನಾನು ಸೂಚನೆಯಿತ್ತೆ. ತದನಂತರ ಆಸ್ಟ್ರೇಲಿಯದಲ್ಲಿರುವ ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿಗೆ, ಒಂದು ಪಯನೀಯರ್ ನೇಮಕವನ್ನು ವಿನಂತಿಸುತ್ತಾ, ಪತ್ರ ಬರೆದೆ.
ನನ್ನ ಜೀವಮಾನದ ನೇಮಕ
ಹಲವಾರು ವಾರಗಳ ತರುವಾಯ, ಆಸ್ಟ್ರೇಲಿಯದ ಅತಿ ದೊಡ್ಡ ನಗರ ಸಿಡ್ನಿಯ, ಒಂದು ಉಪನಗರವಾದ ಸ್ಟ್ರ್ಯಾತ್‌ಫೀಲ್ಡ್‌ನಲ್ಲಿದ್ದ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯದ ಬಯಲಿನಲ್ಲಿ ಜರುಗಲಿದ್ದ ಅಧಿವೇಶನವನ್ನು ನಾನು ಹಾಜರಾದ ಬಳಿಕ, ನನಗೊಂದು ನೇಮಕವು ಕೊಡಲಾಗುವುದೆಂದು ತಿಳಿಸಿದ ಒಂದು ಉತ್ತರವನ್ನು ನಾನು ಪಡೆದೆ. ಅಧಿವೇಶನ ಮುಗಿದಾದ ಮೇಲೆ, ಮರುದಿನ ಬೆಳಗ್ಗೆ, ನನ್ನ ನೇಮಕವನ್ನು ಪಡೆಯಲು ನಾನು ಆಫೀಸಿಗೆ ಹೋದೆ.
ಆಫೀಸಿನಲ್ಲಿದ್ದ ವ್ಯಕ್ತಿಯು ವಿವರಿಸಿದ್ದು: “ಈಗ ನಾವು ದೋಬಿಖಾನೆಯಲ್ಲಿ ಬಹಳ ಕಾರ್ಯಮಗ್ನರಾಗಿದ್ದೇವೆ. ನೀವು ಇಲ್ಲಿದ್ದು ಕೆಲವು ವಾರಗಳ ವರೆಗೆ ನೆರವು ನೀಡಲು ಶಕ್ತರಾಗಿರುವಿರೊ?” ಅದು ಆಗಸ್ಟ್ 1940 ರಲ್ಲಿ ಸಂಭವಿಸಿತು—ಮತ್ತು ನಾನು ಇನ್ನೂ ದೋಬಿಖಾನೆಯಲ್ಲಿಯೇ ಕೆಲಸಮಾಡುತ್ತಿದ್ದೇನೆ! ಆಗ ಮುಖ್ಯ ಕಾರ್ಯಾಲಯದಲ್ಲಿ ಕೇವಲ 35 ಜನರಿದ್ದರು; ಈಗ 276 ಜನರಿದ್ದಾರೆ.
ಇದು ವಿಶೇಷವಾಗಿ ಈಗ 50 ಕ್ಕಿಂತಲೂ ಅಧಿಕ ವರ್ಷಗಳಿಂದ ನನ್ನ ಕೆಲಸವಾಗಿರುವುದರಿಂದ, ದೋಬಿಖಾನೆಯಲ್ಲಿ ಕೆಲಸಮಾಡುವುದನ್ನು ನಾನು “ಉದ್ದೇಶಭರಿತವಾದೊಂದು ಜೀವನ ಮಾರ್ಗ” ವೆಂದು ಏಕೆ ಪರಿಗಣಿಸುತ್ತೇನೆ ಎಂಬುದಾಗಿ ನೀವು ಕುತೂಹಲ ಪಡಬಹುದು. ಅದನ್ನು ವಿವರಿಸುವ ಮೊದಲು, ನನ್ನ ಆರಂಭಿಕ ಬೆನ್ನಟ್ಟುವಿಕೆಗಳ ಕುರಿತು ನಾನು ಹೇಳುತ್ತೇನೆ.
ಕ್ರೀಡೆಗಳು ಜೀವನದ ಒಂದು ಮಾರ್ಗವಾದವು
1914 ಜನವರಿ 1 ರಂದು ಮೆಲ್ಬರ್ನ್‌ನಲ್ಲಿ, ಐದು ಮಕ್ಕಳಲ್ಲಿ ಮೊದಲನೆಯವಳಾಗಿ ನಾನು ಜನಿಸಿದೆ. ಉನ್ನತ ತತ್ವಗಳಿಗನುಸಾರವಾಗಿ ಜೀವಿಸಿದ ಮತ್ತು ಬೇಕಾದಾಗ ನೀತಿಶಿಕ್ಷಣವನ್ನು ನೀಡಿದ ಪ್ರೀತಿಯ ಹೆತ್ತವರು ನಮಗಿದ್ದರು. ಅನಿಯತವೆಂದು ಕರೆಯಬಹುದಾದ ಧಾರ್ಮಿಕ ಪಾಲನೆಯನ್ನೂ ನಾವು ಪಡೆದೆವು, ಯಾಕೆಂದರೆ ನಮ್ಮ ಹೆತ್ತವರು ಚರ್ಚಿಗೆ ಹೋಗುವವರಾಗಿರಲಿಲ್ಲ. ಆದರೂ, ಮಕ್ಕಳಾದ ನಾವು ಚರ್ಚ್ ಆಫ್ ಇಂಗ್ಲೆಂಡ್‌ನ ಸಂಡೆ ಸ್ಕೂಲ್ ತರಗತಿಗಳನ್ನು ಹಾಜರಾಗುವಂತೆ ಅವರು ಒತ್ತಾಯಿಸಿದರು.
1928 ರಲ್ಲಿ ನಾನು ಶಾಲೆಯನ್ನು ಮುಗಿಸಿ, ಬಟ್ಟೆ ಹೊಲಿಯುವವಳಾಗಿ ಕೆಲಸ ಮಾಡುವುದನ್ನು ಆರಂಭಿಸಿದಾಗ, ನನ್ನ ನಾಚಿಕೆಯನ್ನು ಜಯಿಸಲು ಇದು ನನಗೆ ಸಹಾಯ ಮಾಡಬಹುದೆಂದು ನಂಬುತ್ತಾ, ನನ್ನ ಹೆಚ್ಚಿನ ಬಿಡುವಿನ ಸಮಯವನ್ನು ಕ್ರೀಡೆಗಳನ್ನು ಆಡುವುದರಲ್ಲಿ ವ್ಯಯಿಸಲು ನಾನು ನಿರ್ಧರಿಸಿದೆ. ಒಂದು ಟೆನಿಸ್ ಕ್ಲಬ್ಬನ್ನು ಸೇರಿ ವರ್ಷವಿಡೀ ನಾನು ಆಡಿದೆ. ಚಳಿಗಾಲದಲ್ಲಿ ನಾನು ಬಾಸ್ಕಿಟ್‌ಬಾಲ್ ಮತ್ತು ಬೇಸ್‌ಬಾಲ್ ಆಟವನ್ನೂ ಆಡಿದೆ, ಮತ್ತು ಬೇಸಗೆಯಲ್ಲಿ ಹೆಂಗಸರ ಕ್ರಿಕೆಟ್ ತಂಡದಲ್ಲಿ ನಾನು ಆಡಿದೆ. ಕ್ರಿಕೆಟ್ ನನ್ನ ನಿಜವಾದ ಒಲವಾಯಿತು, ಮತ್ತು ರಾಜ್ಯಗಳ ನಡುವಿನ ಪಂದ್ಯಗಳಿಗಾಗಿ ಅರ್ಹಳಾಗುವ ಉದ್ದೇಶದಿಂದ, ವೇಗದ ಚೆಂಡೆಸೆಯುವವಳೋಪಾದಿ ನನ್ನ ಕೌಶಲವನ್ನು ಉತ್ತಮಗೊಳಿಸಲು ನಾನು ಕಷ್ಟಪಟ್ಟು ಪ್ರಯತ್ನಿಸಿದೆ.
ಕ್ರೀಡೆಗಳಿಗಿಂತ ಭಿನ್ನವಾದೊಂದು ಉದ್ದೇಶ
ಪ್ರೀತಿಯ ದೇವರಿಗೆ ನರಕವೆಂದು ಕರೆಯಲ್ಪಡುವ ಸ್ಥಳವೊಂದಿತ್ತು ಮತ್ತು ಕೆಟ್ಟ ವಿಷಯಗಳನ್ನು ಮಾಡುವವರು ಅಲ್ಲಿ ಅಂತ್ಯವಿಲ್ಲದೆ ಯಾತನೆಗೊಳಪಡುತ್ತಾರೆಂಬ ಬೋಧನೆಯಿಂದ, ನಾನು ಜೀವಿತದ ಆರಂಭಿಕ ವರ್ಷಗಳಲ್ಲಿಯೇ ಕಳವಳಗೊಂಡಿದ್ದೆ. ಇದು ನನಗೆ ತರ್ಕಸಮ್ಮತವಾದ ವಿಚಾರವಾಗಿ ತೋರಲೇ ಇಲ್ಲ. ಆದುದರಿಂದ “ನರಕ”ದ ನಿಜವಾದ ಅರ್ಥವನ್ನು ನಾನು ಬೈಬಲಿನಿಂದ ಅನಿರೀಕ್ಷಿತವಾಗಿ ಕಲಿತಾಗ ನನ್ನ ಹರ್ಷವನ್ನು ಊಹಿಸಿರಿ. ಅದು ಈ ರೀತಿಯಲ್ಲಿ ಸಂಭವಿಸಿತು:
ನನಗಿಂತ ಐದು ವರ್ಷಗಳು ಎಳೆಯವಳಾಗಿರುವ ನನ್ನ ತಂಗಿ ಫಿಲಿಸ್ ಕೂಡ ಕ್ರೀಡೆಗಳನ್ನು ಆಡುವುದರಲ್ಲಿ ಆನಂದಿಸಿದಳು ಮತ್ತು ನಾವು ಒಂದೇ ಹೆಂಗಸರ ಕ್ರಿಕೆಟ್ ತಂಡದಲ್ಲಿದ್ದೆವು. 1936 ರಲ್ಲಿ ತಂಡದ ಒಬ್ಬ ಸದಸ್ಯೆ ಫಿಲಿಸಳನ್ನು, ಬಹಳ ಧಾರ್ಮಿಕನೆಂದು ಪ್ರಸಿದ್ಧವಾಗಿದ್ದ ಜಿಮ್ ಎಂಬ ಹೆಸರಿನ ಯುವ ಪುರುಷನಿಗೆ ಪರಿಚಯಿಸಿದಳು. ಕೂಡಲೆ ಜಿಮ್ ಬೈಬಲಿನ ಬೋಧನೆಗಳ ಕುರಿತು ಫಿಲಿಸಳೊಂದಿಗೆ ಮಾತಾಡಲು ತೊಡಗಿದನು. ಅವಳ ಕುತೂಹಲ ಕೆರಳಿಸಲ್ಪಟ್ಟಿತು. “ಅದು ಎಷ್ಟೊಂದು ತರ್ಕಬದ್ಧವೂ ವಿವೇಚನಾಯುಕ್ತವೂ ಆಗಿದೆ,” ಎಂದು ಆಕೆ ನನಗೆ ಹೇಳುತ್ತಿದ್ದಳು.
ಆ ಸಮಯದಲ್ಲಿ ಫಿಲಿಸ್ ಮತ್ತು ನಾನು ಮನೆಯಲ್ಲಿ ಒಂದೇ ಕೋಣೆಯಲ್ಲಿದ್ದೆವು, ಮತ್ತು ದೇವರ ರಾಜ್ಯದ ಕುರಿತು ಜಿಮ್ ಆಕೆಗೆ ಹೇಳುತ್ತಿದ್ದ ವಿಷಯಗಳಲ್ಲಿ ನನ್ನ ಆಸಕ್ತಿಯನ್ನು ಕೆರಳಿಸಲು ಆಕೆ ಪ್ರಯತ್ನಿಸಿದಳು. “ಮನುಷ್ಯನ ಸರಕಾರಗಳು ಏನನ್ನು ಮಾಡಲು ತಪ್ಪಿಹೋಗಿವೆಯೋ, ಅದನ್ನು ದೇವರ ರಾಜ್ಯವು ಮಾಡುವುದು,” ಎಂದು ಆಕೆ ಉತ್ತೇಜಿತಳಾಗಿ ಹೇಳಿದಳು. ಹಾಗಿದ್ದರೂ, ಇದು ಕೇವಲ ನಮ್ಮನ್ನು ಗಲಿಬಿಲಿಗೊಳಿಸುವ ಇನ್ನೊಂದು ಧರ್ಮವೆಂದು ಮತ್ತು ಭವಿಷ್ಯದ ಕುರಿತು ನಿಜವಾಗಿಯೂ ಯಾರಿಗೂ ಗೊತ್ತಿಲ್ಲವೆಂದು ಹೇಳುತ್ತಾ, ನಾನು ಅವಳೊಂದಿಗೆ ವಾದಿಸಿದೆ. ಆದರೆ ಫಿಲಿಸ್ ಹಿಡಿದ ಪಟ್ಟನ್ನು ಬಿಡದವಳಾಗಿದ್ದಳು ಮತ್ತು ನಾನು ಅವುಗಳನ್ನು ಓದಬಹುದೆಂದು ನಿರೀಕ್ಷಿಸುತ್ತಾ, ಕೋಣೆಯ ಹಲವಾರು ಸ್ಥಳಗಳಲ್ಲಿ ಸಾಹಿತ್ಯವನ್ನು ಇಟ್ಟಳು.
ಈ ನವೀನ ವಿಶ್ವಾಸದ ಕುರಿತು ಫಿಲಿಸ್ ಯಾಕೆ ಇಷ್ಟೊಂದು ಉತ್ಸುಕಳಾಗಿದ್ದಳು ಎಂಬುದರ ಬಗ್ಗೆ ನಾನು ಕುತೂಹಲವುಳ್ಳವಳಾಗಿದ್ದೆ, ಆದುದರಿಂದ ಒಂದು ದಿನ ನಾನು ಒಂದು ಪುಸ್ತಿಕೆಯನ್ನು ಕೈಗೆತ್ತಿಕೊಂಡೆ. ಹಿಯರ್‌ಆಫ್ಟರ್ (ಇಂಗ್ಲಿಷ್‌ನಲ್ಲಿ) ಎಂಬ ಕುತೂಹಲ ಕೆರಳಿಸುವ ತಲೆಬರಹ ಅದಕ್ಕಿತ್ತು. ಅದರ ಪುಟಗಳನ್ನು ತಿರುವಿಹಾಕುತ್ತಿದ್ದಾಗ, “ನರಕ” ಎಂಬ ಪದವನ್ನು ಕಂಡು ‘ನನ್ನ ಆಸಕ್ತಿ ಕೆರಳಿಸಲ್ಪಟ್ಟಿತು’. ನನಗೆ ಆಶ್ಚರ್ಯವಾಗುವಂತೆ, ಬೈಬಲ್ ಪದವಾದ “ನರಕ” ನಿಜವಾಗಿಯೂ ಮಾನವಜಾತಿಯ ಸಾಮಾನ್ಯ ಸಮಾಧಿಗೆ ಸೂಚಿಸುತ್ತದೆ ಮತ್ತು ಒಳ್ಳೆಯ ಹಾಗೂ ಕೆಟ್ಟ ಜನರು—ಇಬ್ಬರೂ—ಅಲ್ಲಿಗೆ ಹೋಗುತ್ತಾರೆಂದು ನಾನು ಕಲಿತೆ. ನರಕವು ಯಾತನೆಯ ಸ್ಥಳವಾಗಿಲ್ಲವೆಂದೂ ನಾನು ಕಲಿತೆ; ಮೃತರು ಪ್ರಜ್ಞೆಯಿಲ್ಲದವರಾಗಿದ್ದು, ಯಾವ ಅರಿವೂ ಅವರಿಗಿರುವುದಿಲ್ಲ.—ಪ್ರಸಂಗಿ 9:5, 10; ಕೀರ್ತನೆ 146:3, 4.
ಒಬ್ಬ ಪ್ರೀತಿಯ ಹಾಗೂ ಶಕ್ತನಾದ ದೇವರು ಮೃತರನ್ನು ಪುನರುತ್ಥಾನವೆಂದು ಕರೆಯಲ್ಪಡುವ ಅದ್ಭುತದಿಂದ ಪುನಃ ಜೀವಿತಕ್ಕೆ ತರುವ ವಾಗ್ದಾನವನ್ನು ಮಾಡಿದ್ದಾನೆಂದು ಪುಸ್ತಿಕೆಯು ವಿಶೇಷವಾಗಿ ವಿವರಿಸಿದಾಗ, ಅದು ನನಗೆ ತರ್ಕಸಮ್ಮತವಾಗಿ ತೋರಿತು. (ಯೋಹಾನ 5:28, 29) ಫಿಲಿಸಳಿಗೆ ಜಿಮ್ ಹೇಳುತ್ತಿದ್ದ ವಿಷಯಗಳಲ್ಲಿ ಹೆಚ್ಚಿನವುಗಳ ಕುರಿತು ಕಂಡುಹಿಡಿಯಲು ನಾನೂ ಬಯಸಿದೆ. ನಾನು ಮಗುವಾಗಿದ್ದಾಗ ನನ್ನ ತಂದೆ ನನಗೆ ಕೊಟ್ಟಿದ್ದ ಚಿಕ್ಕ ಕಿಂಗ್ ಜೇಮ್ಸ್ ವರ್ಷನ್ ಬೈಬಲನ್ನು ನಾನು ಕಂಡುಹಿಡಿದು, ಪುಸ್ತಿಕೆಯಲ್ಲಿ ಪಟ್ಟಿಮಾಡಲಾದ ವಚನಗಳನ್ನು ತೆಗೆದು ನೋಡಿದೆ. ನರಕದ ಕುರಿತು ಮತ್ತು ಮೃತರ ಸ್ಥಿತಿಯ ಕುರಿತು ಹೇಳಲಾದ ವಿಷಯವನ್ನು ಇದು ದೃಢೀಕರಿಸಿತು.
ದೇವರಿಗೆ ಯೆಹೋವ ಎಂಬ ಒಂದು ವೈಯಕ್ತಿಕ ಹೆಸರಿದೆ ಎಂದು ಕಲಿಯುವುದು, ನನ್ನ ಪಾಲಿಗೆ ಇನ್ನೊಂದು ಆಕರ್ಷಕ ವಿಸ್ಮಯವಾಗಿತ್ತು. (ಕೀರ್ತನೆ 83:18) ತಾನು ಮಾಡಿದ ಯಾ ಸಂಭವಿಸುವಂತೆ ಅನುಮತಿಸಿದ ಎಲ್ಲ ವಿಷಯಗಳಿಗೆ ಒಂದು ಉದ್ದೇಶ, ಯಾ ಕಾರಣ, ದೇವರಿಗಿತ್ತೆಂದು ಸಹ ನಾನು ನೋಡಬಹುದಿತ್ತು. ಇದು ನನ್ನನ್ನು ಹೀಗೆ ಕೇಳಿಕೊಳ್ಳುವಂತೆ ಮಾಡಿತು, ‘ಜೀವಿತದಲ್ಲಿ ನನ್ನ ಉದ್ದೇಶವು ನಿಜವಾಗಿಯೂ ಏನಾಗಿದೆ?’ ಆ ಸಮಯದಿಂದ, ಕ್ರೀಡೆಗಳನ್ನು ಅಷ್ಟು ಗಂಭೀರವಾಗಿ—ಬಹುಮಟ್ಟಿಗೆ ಇತರ ಎಲ್ಲ ವಿಷಯಗಳನ್ನು ಕಡೆಗಣಿಸುವ ಮಟ್ಟಿಗೆ—ತೆಗೆದುಕೊಳ್ಳುವುದು ನನಗೆ ಅತ್ಯಂತ ಪ್ರಯೋಜನಕಾರಿಯಾಗಿತ್ತೊ ಎಂದು ಯೋಚಿಸಲು ನಾನು ಆರಂಭಿಸಿದೆ.
ನಿರ್ಧಾರಗಳನ್ನು ಕಾರ್ಯರೂಪಕ್ಕೆ ಹಾಕುವುದು
ಜೀವಿತದ ಕುರಿತಾದ ನನ್ನ ಮನೋಭಾವವು ಬದಲಾಗಿತ್ತೆಂದು ಜಿಮ್ ಮತ್ತು ಫಿಲಿಸ್‌ಗೆ ಗೊತ್ತೇ ಇರಲಿಲ್ಲ, ಆದರೆ ನಮ್ಮ ಕುಟುಂಬವು ಸ್ನೇಹಿತರೊಬ್ಬರ ಗೋಷ್ಠಿಗೆ ಆಮಂತ್ರಿಸಲ್ಪಟ್ಟಾಗ ಅವರು ಅದನ್ನು ಕಂಡುಹಿಡಿದರು. ಆ ದಿನಗಳಲ್ಲಿ ಇಂತಹ ಸಂದರ್ಭಗಳಲ್ಲಿ, ಉಪಸ್ಥಿತರಿದ್ದವರೆಲ್ಲರು ಎದ್ದುನಿಲ್ಲುತ್ತಿದ್ದರು ಮತ್ತು ಇಂಗ್ಲೆಂಡ್‌ನ ರಾಜನಿಗೆ ಸ್ವಸ್ತಿಪಾನವು ಅರ್ಪಿಸಲಾಗುತ್ತಿತ್ತು, ಮತ್ತು ರಾಜನ ಮಹಿಮೆಗಾಗಿ ಕುಡಿಯಲು ಎಲ್ಲರು ತಮ್ಮ ಗ್ಲಾಸ್‌ಗಳನ್ನು ಮೇಲೆತ್ತುತ್ತಿದ್ದರು. ಆದರೆ, ನಾನು ಜಿಮ್ ಮತ್ತು ಫಿಲಿಸಳೊಂದಿಗೆ ಕುಳಿತುಕೊಂಡಿರಲು ನಿರ್ಧರಿಸಿದೆ. ನಾನು ಇನ್ನೂ ಕುಳಿತುಕೊಂಡಿರುವುದನ್ನು ಅವರು ನೋಡಿದಾಗ, ಅವರು ಆಶ್ಚರ್ಯಚಕಿತರಾದರು! ನಾವಾದರೊ, ಯಾವುದೇ ಅಗೌರವವನ್ನು ಅರ್ಥೈಸಲಿಲ್ಲ, ಆದರೆ ಕ್ರೈಸ್ತರೋಪಾದಿ ನಾವು ತಟಸ್ಥರಾಗಿರಬೇಕೆಂದು ಮತ್ತು ಇಂತಹ ರಾಷ್ಟ್ರೀಯ ಆಚರಣೆಗಳಲ್ಲಿ ಭಾಗವಹಿಸಬಾರದೆಂದು ನಮಗನಿಸಿತು.—ಯೋಹಾನ 17:16.
ಆದರೂ, ನನ್ನ ಹೆತ್ತವರು ಮತ್ತು ಕುಟುಂಬದ ಉಳಿದ ಸದಸ್ಯರು ಗಾಬರಿಪಟ್ಟರು. ನಾವು ರಾಜದ್ರೋಹಿಗಳೆಂದು, ಯಾ ಹುಚ್ಚರೆಂದು—ಅಥವಾ ಎರಡೂ ಆಗಿರಬಹುದೆಂದು ಅವರು ಹೇಳಿದರು! ತದನಂತರ, ಫಿಲಿಸ್ ಮತ್ತು ನಾನು ಹೆಂಗಸರ ಕ್ರಿಕೆಟ್ ತಂಡಕ್ಕಾಗಿ ವಾರ್ಷಿಕ ಬಹುಮಾನ ವಿತರಣೆ ಸಮಾರಂಭವನ್ನು ಹಾಜರಾದಾಗ, ತದ್ರೀತಿಯ ಘಟನೆಯೊಂದು ರಾಷ್ಟ್ರೀಯ ಉತ್ಸವದ ಸಮಯದಲ್ಲಿ ನಡೆಯಿತು. ಅದರ ಪರಿಣಾಮವಾಗಿ ನಾವಿಬ್ಬರೂ ತಂಡಕ್ಕೆ ರಾಜೀನಾಮೆಯನ್ನು ಸಲ್ಲಿಸಿದೆವು. ಇದು ನಾನು ನೆನಸಿದಷ್ಟು ಕಷ್ಟಕರವಾಗಿರಲಿಲ್ಲ, ಯಾಕೆಂದರೆ ನನ್ನ ಸ್ವಾಮಿನಿಷ್ಠೆ ಮತ್ತು ಕರ್ತವ್ಯ ನಿಷ್ಠೆಯು ದೇವರ ಸ್ವರ್ಗೀಯ ರಾಜ್ಯದ ರಾಜನಾದ ಕ್ರಿಸ್ತ ಯೇಸುವಿಗಾಗಿತ್ತೆಂದು ನಾನು ಗ್ರಹಿಸಿದೆ.
ಹೆಚ್ಚಿನ ಬೈಬಲ್ ಜ್ಞಾನದಿಂದ ನನ್ನ ನಂಬಿಕೆಯನ್ನು ಕಟ್ಟಲು ಯೆಹೋವನ ಸಾಕ್ಷಿಗಳ ಕೂಟಗಳನ್ನು ಕ್ರಮವಾಗಿ ಹಾಜರಾಗುವ ಅಗತ್ಯ ನನಗಿದೆಯೆಂದು ಫಿಲಿಸ್ ವಿವರಿಸಿದಳು. ಆ ಸಮಯದಲ್ಲಿ ಮೆಲ್ಬರ್ನ್‌ನಲ್ಲಿ ಒಂದೇ ಒಂದು ಸಭೆಯಿತ್ತು, ಆದುದರಿಂದ ಪ್ರತಿ ಆದಿತ್ಯವಾರ ಮಧ್ಯಾಹ್ನ ನಾನು ಅಲ್ಲಿ ಕೂಟಗಳನ್ನು ಹಾಜರಾಗಲು ತೊಡಗಿದೆ. ಇದು ದೇವರ ಸತ್ಯವಾದ ಭೂಸಂಸ್ಥೆಯಾಗಿತ್ತೆಂದು ನನಗೆ ಬೇಗನೆ ಮನವರಿಕೆಯಾಯಿತು.
ಬೇಗನೆ ನಾನು ಸಭೆಯ ಮನೆಯಿಂದ ಮನೆಗೆ ಸಾರುವ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಆಮಂತ್ರಿಸಲ್ಪಟ್ಟೆ. ಆರಂಭದಲ್ಲಿ ನಾನು ಹಿಂಜರಿದೆ, ಆದರೆ ಅದನ್ನು ಹೇಗೆ ಮಾಡಲಾಗುತ್ತದೆ ಎಂಬುದನ್ನು ನೋಡಲಿಕ್ಕಾಗಿ ಒಂದು ಆದಿತ್ಯವಾರ ಬೆಳಗ್ಗೆ ಅವರೊಂದಿಗೆ ಜೊತೆಗೂಡಲು ನಾನು ನಿರ್ಧರಿಸಿದೆ. ಮೊದಲನೆಯ ಮನೆಯಲ್ಲಿ ಭರವಸೆಯಿಂದ ಮಾತಾಡಿದ ಮತ್ತು ಮನೆಯವರಿಂದ ಹಿತಕರವಾದ ಪ್ರತಿಕ್ರಿಯೆಯನ್ನು ಪಡೆದ ಒಬ್ಬ ಅನುಭವಸ್ಥ ಸಾಕ್ಷಿಯೊಂದಿಗೆ ಹೋಗುವಂತೆ ನನ್ನನ್ನು ನೇಮಿಸಿದಾಗ ನಾನು ಸಂತೋಷಪಟ್ಟೆ. ನನ್ನಷ್ಟಕ್ಕೆ ನಾನು ಹೀಗೆ ಯೋಚಿಸಿದೆ, ‘ಒಳ್ಳೆಯದು, ಅದು ತೀರ ಕಠಿನವಾಗಿರಲಿಲ್ಲ, ಆದರೆ ಅದರಷ್ಟು ಚೆನ್ನಾಗಿ ಮಾತಾಡಲು ಸಾಧ್ಯವಾಗುವ ಮೊದಲು ನನಗೆ ಬಹಳಷ್ಟು ಅಭ್ಯಾಸದ ಅಗತ್ಯವಿದೆ.’ ಆದುದರಿಂದ, ಆ ಮೊದಲನೆಯ ಮನೆಯ ತರುವಾಯ ಸಾಕ್ಷಿಯು ನನಗೆ, “ಸಹಾಯವಿಲ್ಲದೆ ನೀನು ಈಗ ಒಬ್ಬಳೇ ಸಾರಬಹುದು,” ಎಂದು ಹೇಳಿದಾಗ ನನ್ನ ಆಶ್ಚರ್ಯವನ್ನು ಊಹಿಸಿರಿ.
“ಸಹಾಯವಿಲ್ಲದೆಯೆ?” ಎಂದು ನಾನು ಆಶ್ಚರ್ಯಚಕಿತಳಾಗಿ ಕೇಳಿದೆ! “ನೀವು ತಮಾಷೆ ಮಾಡುತ್ತಿರಬೇಕು! ಯಾರಾದರೂ ಒಂದು ಪ್ರಶ್ನೆಯನ್ನು ಕೇಳುವಾಗ ನನಗೆ ಉತ್ತರವು ಗೊತ್ತಿಲ್ಲದಿದ್ದರೆ ನಾನು ಏನು ಹೇಳುವೆ?” ಆದರೆ ನನ್ನ ಸಂಗಾತಿ ಪಟ್ಟು ಹಿಡಿದಳು. ಆದುದರಿಂದ, ಅಕ್ಷರಾರ್ಥಕವಾಗಿ ನಡುಗುತ್ತಾ, ನಾನು ಸಹಾಯವಿಲ್ಲದೆ ಮುಂದುವರಿದೆ, ಆಕೆಯಾದರೋ ರಸ್ತೆಯ ಇನ್ನೊಂದು ಪಕ್ಕದ ಜನರಿಗೆ ಸಾಕ್ಷಿನೀಡುವುದನ್ನು ಮುಂದುವರಿಸಿದಳು. ಹೇಗೊ ಆ ಮೊದಲನೆಯ ಬೆಳಗ್ಗೆ ನಾನು ಬಚಾವಾದೆ.
ಆ ಸಮಯದಿಂದ ನಾನು ಪ್ರತಿ ಆದಿತ್ಯವಾರ ಬೆಳಗ್ಗೆ ಸಾರುವ ಕಾರ್ಯದಲ್ಲಿ ಭಾಗವಹಿಸಲು ಆರಂಭಿಸಿದೆ. ಮನೆಗಳಲ್ಲಿ ನನಗೆ ಉತ್ತರಿಸಲು ಸಾಧ್ಯವಾಗದ ಪ್ರಶ್ನೆಯನ್ನು ಯಾರಾದರೂ ಕೇಳುವಾಗ, “ಆ ವಿಷಯದ ಮೇಲೆ ನಾನು ಸಂಶೋಧನೆಯನ್ನು ಮಾಡಿ, ನಿಮ್ಮನ್ನು ನೋಡಲು ಹಿಂದಿರುಗುವೆ,” ಎಂದು ಹೇಳುತ್ತಿದ್ದೆ. ಸಂತೋಷಕರವಾಗಿ, ನನ್ನ ಹೊಸ ಉದ್ದೇಶಭರಿತವಾದ ಜೀವನ ಮಾರ್ಗವನ್ನು ಕಾಪಾಡಿಕೊಂಡು ಹೋಗಲು ಯೆಹೋವನು ನನಗೆ ಬಲವನ್ನು ಮತ್ತು ಧೈರ್ಯವನ್ನು ನೀಡುತ್ತಾ ಇದ್ದನು. ನಾನು ನನ್ನ ಜೀವಿತವನ್ನು ಆತನಿಗೆ ಸಮರ್ಪಿಸಿದೆ, ಮತ್ತು ಅಕ್ಟೋಬರ 1939 ರಲ್ಲಿ ನಾನು ಮೆಲ್ಬರ್ನ್‌ನ ಸಿಟಿ ಬಾತ್ಸ್‌ನಲ್ಲಿ ದೀಕ್ಷಾಸ್ನಾನ ಪಡೆದೆ. ಆದಾದ ಕೂಡಲೆ, ಈಗಾಗಲೇ ಜಿಮ್‌ನನ್ನು ಮದುವೆಯಾಗಿದ್ದ ಫಿಲಿಸ್ ನಾನು ಪಯನೀಯರ್ ಸೇವೆಯನ್ನು ಯಾಕೆ ಆರಂಭಿಸಲಿಲ್ಲವೆಂದು ಕೇಳಿದಳು.
ಬ್ರಾಂಚ್‌ನಲ್ಲಿ ಸೇವೆ
ಜನವರಿ 1941 ರಲ್ಲಿ, ನಾನು ಬೆತೆಲ್‌ನಲ್ಲಿ—ಬ್ರಾಂಚ್ ಆಫೀಸನ್ನು ನಾವು ಹಾಗೆಂದು ಕರೆದೆವು—ಕೆಲಸ ಮಾಡುವುದನ್ನು ಆರಂಭಿಸಿದ ಕೂಡಲೆ, ಆಸ್ಟ್ರೇಲಿಯದಲ್ಲಿದ್ದ ಯೆಹೋವನ ಸಾಕ್ಷಿಗಳ ಕೆಲಸದ ಮೇಲೆ ನಿಷೇಧವೊಂದನ್ನು ಹಾಕಲಾಯಿತು. ತದನಂತರ ಸ್ಟ್ರ್ಯಾತ್‌ಫೀಲ್ಡ್‌ನಲ್ಲಿದ್ದ ನಮ್ಮ ಬೆತೆಲ್ ಗೃಹವನ್ನು ಸೈನ್ಯವು ಅಧೀನಪಡಿಸಿಕೊಂಡಿತು, ಮತ್ತು ನನ್ನನ್ನು ನಗರದ ಹೊರಗೆ ಸುಮಾರು 48 ಕಿಲೊಮೀಟರುಗಳ ದೂರದಲ್ಲಿ, ಇಂಗ್‌ಲ್‌ಬರ್ನ್‌ನಲ್ಲಿರುವ ಸೊಸೈಟಿಯ ಫಾರ್ಮ್‌ಗೆ ಕಳುಹಿಸಲಾಯಿತು. ಜೂನ್ 1943 ರಲ್ಲಿ ನ್ಯಾಯಾಲಯಗಳು ವಾಚ್ ಟವರ್ ಸೊಸೈಟಿಯನ್ನು ದೋಷ ಮುಕ್ತಗೊಳಿಸಿದವು ಮತ್ತು ನಿಷೇಧವನ್ನು ರದ್ದುಗೊಳಿಸಿದವು. ಆ ವರ್ಷದ ಅಂತ್ಯದೊಳಗೆ, ನಮ್ಮಲ್ಲಿ 25 ಜನರು ಪುನಃ ಸ್ಟ್ರ್ಯಾತ್‌ಫೀಲ್ಡ್ ಬೆತೆಲ್‌ಗೆ ಆಮಂತ್ರಿಸಲ್ಪಟ್ಟೆವು. ಅಲ್ಲಿ ನಾನು ದೋಬಿಖಾನೆಯಲ್ಲಿ ಕೆಲಸಮಾಡುವುದನ್ನು, ಅಷ್ಟೇ ಅಲ್ಲದೆ ಬೆತೆಲ್ ಗೃಹದಲ್ಲಿ ಇತರ ಕರ್ತವ್ಯಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸಿದೆ.
ಮುಂದಿನ ದಶಕವು ಬಹಳ ಬೇಗನೆ ದಾಟಿಹೋದಂತೆ ಭಾಸವಾಯಿತು. ತದನಂತರ 1956 ರಲ್ಲಿ, ನಾನು ಜೊತೆ ಬೆತೆಲ್ ಕೆಲಸಗಾರರಾದ ಟೆಡ್ ವೀಲೆಂಡ್‌ರನ್ನು ಮದುವೆಯಾದೆ. ಟೆಡ್ ಬಹಳ ಶಾಂತ, ಸೈರಣೆಯುಳ್ಳ ಮನುಷ್ಯನಾಗಿದ್ದರು, ಮತ್ತು ಪತಿ ಪತ್ನಿಯರಂತೆ ಬೆತೆಲ್‌ನಲ್ಲಿ ಜೀವಿಸುವುದನ್ನು ಮುಂದುವರಿಸಲು ನಮಗೆ ಸಮ್ಮತಿ ದೊರೆತಾಗ ನಾವು ಹರ್ಷಿಸಿದೆವು. ಆಸ್ಟ್ರೇಲಿಯನ್ ಬ್ರಾಂಚ್‌ನಲ್ಲಿ ಸೇವೆ ಮಾಡುವುದರ ಸುಯೋಗಕ್ಕಾಗಿ ಸಂತೋಷಪಡುತ್ತಾ, ನಮ್ಮ ಉದ್ದೇಶಭರಿತ ಜೀವನ ಮಾರ್ಗವನ್ನು ನಾವಿಬ್ಬರೂ ಅಮೂಲ್ಯವಾದದ್ದೆಂದೆಣಿಸಿದೆವು. ನಿಸ್ಸಂದೇಹವಾಗಿ, ನಮ್ಮ ಬೆತೆಲ್ ಕೆಲಸಕ್ಕೆ ಕೂಡಿಸಿ, ಕ್ರಿಸ್ತನ ಶಿಷ್ಯರಾಗುವಂತೆ ಇತರರಿಗೆ ಸಹಾಯ ಮಾಡಲು ಒಟ್ಟಿಗೆ ಕೆಲಸಮಾಡುವುದರ ಆನಂದವನ್ನೂ ನಾವು ಅನುಭವಿಸಿದೆವು. ಒಂದು ಉದಾಹರಣೆಯಂತೆ ನೀವು ಅವೇಕ್!ನ ಅಕ್ಟೋಬರ 22, 1993ರ ಸಂಚಿಕೆಯಲ್ಲಿ ವೀಕ್ಸ್ ಕುಟುಂಬದ ಕುರಿತು ಓದಸಾಧ್ಯವಿದೆ.
ರಾಜ್ಯ ಸಾರುವಿಕೆಯ ಸ್ಥಿರವಾದ ಬೆಳವಣಿಗೆಯು, ಬೆತೆಲ್‌ನಲ್ಲಿ ನನ್ನ ಪ್ರಥಮ 30 ವರ್ಷಗಳ ಸಮಯದಲ್ಲಿ ನಮ್ಮ ಸಿಬ್ಬಂದಿ ವರ್ಗಕ್ಕೆ ಕೇವಲ 10 ಯಾ 12 ಜನರ ಜೋಡಣೆಯನ್ನು ಅಗತ್ಯಪಡಿಸಿತು. ಆದರೆ 1970 ಗಳಲ್ಲಿ ವಾಚ್‌ಟವರ್ ಮತ್ತು ಅವೇಕ್! ಪತ್ರಿಕೆಗಳನ್ನು ನಾವು ಇಲ್ಲಿ ಮುದ್ರಿಸಲು ಆರಂಭಿಸಿದಾಗ, ಸನ್ನಿವೇಶವು ತೀವ್ರವಾಗಿ ಬದಲಿಸಿತು. ಒಂದು ಹೊಸ ಮುದ್ರಣಾಲಯಕ್ಕಾಗಿ ನಿರ್ಮಾಣವು ಜನವರಿ 1972 ರಲ್ಲಿ ಆರಂಭಿಸಲ್ಪಟ್ಟಿತು. ಬೇಗನೆ ಜಪಾನಿನಿಂದ 40 ಟನ್ ತೂಕದ ಮುದ್ರಣ ಯಂತ್ರವು ಬಂದು ತಲಪಿತು, ಮತ್ತು 1973 ರೊಳಗಾಗಿ ಪ್ರತಿ ತಿಂಗಳಿಗೆ ನಾವು ಸುಮಾರು 7,00,000 ಪತ್ರಿಕೆಗಳನ್ನು ಮುದ್ರಿಸುತ್ತಾ ಇದ್ದೆವು. ನಮ್ಮ ಬೆತೆಲ್ ಕುಟುಂಬವು ಈಗ ನಿಜವಾಗಿಯೂ ವಿಕಸಿಸಲು ತೊಡಗಿತು.
1970 ಗಳು ನನಗೆ ವೈಯಕ್ತಿಕ ವ್ಯಥೆಯನ್ನೂ ತಂದವು. ಪ್ರಥಮವಾಗಿ, ನನ್ನ ಪ್ರಿಯ ಗಂಡ ಟೆಡ್, 1975 ರಲ್ಲಿ 80ರ ಪ್ರಾಯದಲ್ಲಿ ಮರಣ ಹೊಂದಿದರು. ಆಮೇಲೆ, ಒಂದು ವರ್ಷದೊಳಗೆ ನನ್ನ ವೃದ್ಧ ತಂದೆಯು ಸಹ ಮರಣದಲ್ಲಿ ನಿದ್ದೆಹೋದರು. ನಾನು ಬಹಳಷ್ಟು ಸಾಂತ್ವನವನ್ನು ಯೆಹೋವ ಮತ್ತು ಆತನ ವಾಕ್ಯವಾದ ಬೈಬಲಿನಿಂದ ಮತ್ತು ನನ್ನ ಆತ್ಮಿಕ ಸಹೋದರ ಹಾಗೂ ಸಹೋದರಿಯರಿಂದ ಪಡೆದೆ. ನನ್ನ ಜೀವಿತದ ಅತ್ಯಂತ ದುಃಖಕರವಾದ ಈ ಸಮಯದಲ್ಲಿ, ಬೆತೆಲ್‌ನಲ್ಲಿ ನನ್ನ ಉದ್ದೇಶಭರಿತ ಚಟುವಟಿಕೆಯೊಂದಿಗೆ ಕಾರ್ಯಮಗ್ನಳಾಗಿರುವುದೂ ಬಹಳವಾಗಿ ಸಹಾಯ ಮಾಡಿತು.
ಆದರೂ, ಜೀವಿತವು ನಿಲ್ಲದೆ ಮುಂದುವರಿಯುತ್ತದೆ, ಮತ್ತು ನಾನು ಪುನಃ ಸಂತೃಪ್ತಿಯನ್ನು ಮತ್ತು ಆಶೀರ್ವಾದಗಳನ್ನು—ಈಗ ಒಬ್ಬ ವಿಧವೆಯೋಪಾದಿ—ಅನುಭವಿಸಲು ತೊಡಗಿದೆ. 1978 ರಲ್ಲಿ ಇಂಗ್ಲೆಂಡ್‌ನ ಲಂಡನ್‌ನಲ್ಲಿ ಜರುಗಿದ ಅಧಿವೇಶನವನ್ನು ನಾನು ಹಾಜರಾದೆ, ಮತ್ತು ತದನಂತರ ನ್ಯೂ ಯಾರ್ಕ್ ಬ್ರೂಕ್ಲಿನ್‌ನಲ್ಲಿರುವ ವಾಚ್ ಟವರ್ ಸೊಸೈಟಿಯ ಲೋಕ ಮುಖ್ಯಕಾರ್ಯಾಲಯಕ್ಕೆ ಭೇಟಿನೀಡಿದೆ. ಬ್ರೂಕ್ಲಿನ್ ಬೆತೆಲ್‌ನಲ್ಲಿ ನನ್ನ ನೂರಾರು ಸಹೋದರ ಸಹೋದರಿಯರು ಸಂತೋಷದಿಂದ ಕೆಲಸಮಾಡುತ್ತಿರುವುದನ್ನು ನೋಡುವುದು ಈ ದಿನದ ವರೆಗೆ ನನಗೊಂದು ಪ್ರೇರಣೆಯಾಗಿ ಉಳಿದಿದೆ.
1970 ಗಳು ಕೊನೆಗೊಂಡಂತೆ, ಆಸ್ಟ್ರೇಲಿಯದ ಬೆತೆಲ್ ಕಟ್ಟಡಕ್ಕಾಗಿ ಹೆಚ್ಚಿನ ವಿಸ್ತರಣೆಯನ್ನು ಯೋಜಿಸಲಾಗುತ್ತಿತ್ತು ಎಂದು ನಮಗೆ ತಿಳಿದುಬಂದಿತು. ಹಾಗಿದ್ದರೂ, ವಿಸ್ತರಣೆಯು ಸ್ಥಳದ ಕೊರತೆಯಿದ್ದ ಸ್ಟ್ರ್ಯಾತ್‌ಫೀಲ್ಡ್‌ನಲ್ಲಿ ಆಗುವ ಯೋಜನೆ ಇರಲಿಲ್ಲ. ಬದಲಿಗೆ, 1940 ಗಳ ಆರಂಭಿಕ ವರ್ಷಗಳ ನಿಷೇಧದ ಸಮಯದಲ್ಲಿ ನಾನು ಕೆಲಸಮಾಡಿದ್ದ ಇಂಗ್‌ಲ್‌ಬರ್ನ್‌ನಲ್ಲಿರುವ ನಮ್ಮ ಆಸ್ತಿಯ ಮೇಲೆ ಒಂದು ನವೀನ, ಹೆಚ್ಚು ದೊಡ್ಡದಾದ ಕಟ್ಟಡವನ್ನು ಕಟ್ಟುವ ಯೋಜನೆಯಿತ್ತು.
ಮುಂದುವರಿದ ಉದ್ದೇಶಭರಿತ ಜೀವನ ಮಾರ್ಗ
ನಮ್ಮ ಹೊಸ ಸೌಕರ್ಯಗಳಿಗೆ ನಾವು ಜನವರಿ 1982 ರಲ್ಲಿ ಸ್ಥಳಾಂತರಿಸಿದಾಗ ಎಂತಹ ಸಂಭ್ರಮ ಅಲ್ಲಿತ್ತು! ಪರಿಚಿತ ಪರಿಸರಗಳನ್ನು ಬಿಡುವಾಗ ಮೊದಲಿಗೆ ಸ್ವಲ್ಪ ದುಃಖವಾಯಿತು ನಿಜ, ಆದರೆ ಬೇಗನೆ ಸುಂದರವಾದ 73 ಮಲಗುವ ಕೋಣೆಗಳ ನಮ್ಮ ಹೊಸ ಮನೆಯಿಂದ ನಾವು ಪುಳಕಿತರಾದೆವು. ಹೊರಗೆ ಇಟ್ಟಿಗೆಯ ಗೋಡೆಗಳನ್ನು ಮತ್ತು ಉಪನಗರದ ರಸ್ತೆಗಳನ್ನು ನೋಡುವ ಬದಲಿಗೆ ನಾವು ಈಗ ಹಸಿರು ಹೊಲಗಳನ್ನು ಮತ್ತು ಮರಗಳನ್ನು, ಮೇಯುತ್ತಿರುವ ದನಕರುಗಳನ್ನು, ಮತ್ತು ಮಹಿಮಾಭರಿತ ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು—ಅತ್ಯಂತ ಆನಂದದಾಯಕ ಹಿನ್ನೆಲೆ—ನೋಡುತ್ತೇವೆ.
1983 ಮಾರ್ಚ್ 19 ರಂದು, ಸುಂದರವಾದ ಶರತ್ಕಾಲದ ಬಿಸಿಲಿನಲ್ಲಿ ನವೀನ ಕಟ್ಟಡದ ಹರ್ಷಭರಿತ ಸಮರ್ಪಣೆಯಿತ್ತು. ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಲಾಯ್ಡ್ ಬ್ಯಾರಿ, ಪ್ರೇರಿಸುವ ಸಮರ್ಪಣೆಯ ಭಾಷಣವನ್ನು ನೀಡಿದರು. ಸಮರ್ಪಣೆಯ ಕಾರ್ಯಕ್ರಮಕ್ಕೆ ಅವರೂ ಅವರ ಹೆಂಡತಿಯೂ ಇರುವುದನ್ನು ನಾನು ವೈಯಕ್ತಿಕವಾಗಿ ಗಣ್ಯಮಾಡಿದೆ, ಯಾಕೆಂದರೆ ನಾವೆಲ್ಲರೂ ಇನ್ನೂ ಎಳೆಯವರಾಗಿದ್ದಾಗ ಸ್ಟ್ರ್ಯಾತ್‌ಫೀಲ್ಡ್ ಬೆತೆಲ್‌ನಲ್ಲಿ ನಾನು ಅವರೊಂದಿಗೆ ಕೆಲಸಮಾಡಿದ್ದೆ.
ರಾಜ್ಯ ಸಾರುವ ಚಟುವಟಿಕೆಯ ಮುಂದುವರಿದ ಬೆಳವಣಿಗೆಯು, ಇಂಗ್‌ಲ್‌ಬರ್ನ್‌ನಲ್ಲಿರುವ ನಮ್ಮ ಸೌಕರ್ಯಗಳ ಇನ್ನೂ ಹೆಚ್ಚಿನ ವಿಸ್ತರಣೆಯನ್ನು ಅಗತ್ಯಪಡಿಸಿತು. 1987 ರಲ್ಲಿ, ಆಫೀಸನ್ನು ವಿಸ್ತರಿಸಲಾಯಿತು. ಆಮೇಲೆ, 1989 ನವಂಬರ 25 ರಂದು, ಒಂದು ಹೊಸ ಐದು ಮಹಡಿಯ ನಿವಾಸ ಕಟ್ಟಡ ಮತ್ತು ಮೂರು ಮಹಡಿಯ ಹೊಸ ಫ್ಯಾಕ್ಟರಿ ಜೋಡಣೆಯು ಸಮರ್ಪಿಸಲ್ಪಟ್ಟವು. ನಾವು ಹೇಗೆ ಬೆಳೆದಿದ್ದೇವೆ—ನನ್ನ ಶುಶ್ರೂಷೆಯನ್ನು ನಾನು ಆಸ್ಟ್ರೇಲಿಯದಲ್ಲಿ ಆರಂಭಿಸಿದಾಗ ಇದ್ದ 4,000 ಕ್ಕಿಂತಲೂ ಕಡಿಮೆ ಶುಶ್ರೂಷಕರಿಂದ ಸುಮಾರು 59,000ಕ್ಕೆ!
ಇತ್ತೀಚೆಗೆ ಆಸ್ಟ್ರೇಲಿಯ ಬ್ರಾಂಚನ್ನು ಜಪಾನ್ ಮತ್ತು ಜರ್ಮನಿಯೊಂದಿಗೆ ಸೊಸೈಟಿಯ ಮೂರು ರೀಜನಲ್ ಇಂಜಿನಿಯರಿಂಗ್ ಆಫೀಸುಗಳಲ್ಲಿ ಒಂದಾಗಿ ಮಾಡಲಾಗಿದೆ. ಇದು ಬೆತೆಲ್ ಕಟ್ಟಡದ ಇನ್ನೂ ಹೆಚ್ಚಿನ ವಿಸ್ತರಣೆಯನ್ನು ಅಗತ್ಯಪಡಿಸಿದೆ. ಇನ್ನೊಂದು ಮೂರು ಮಹಡಿಯ ಆಫೀಸ್ ಕಟ್ಟಡವು ಈಗ ಪೂರ್ಣಗೊಂಡಿದೆ ಮತ್ತು ಸತತವಾಗಿ ಬೆಳೆಯುತ್ತಿರುವ ನಮ್ಮ ಕುಟುಂಬಕ್ಕೆ ವಾಸಸ್ಥಾನವನ್ನು ಒದಗಿಸಲು ಇನ್ನೂ 80 ಕೋಣೆಗಳಿರುವ ಐದು ಮಹಡಿಯ ವಾಸಸ್ಥಳದ ಕೆಲಸವು ಮುಗಿಯುವುದರಲ್ಲಿದೆ.
ದೋಬಿಖಾನೆಯಲ್ಲಿ ಕೆಲಸದ ಹೊರೆಯನ್ನು ನಿರ್ವಹಿಸಲು ದೊಡ್ಡ ಸಿಬ್ಬಂದಿ ನಮ್ಮಲ್ಲಿದೆ, ಆದರೆ ಎರಡು ವಾರಗಳಿಗಾಗಿ ಈ ವಿಭಾಗದಲ್ಲಿ ಸಹಾಯ ಮಾಡುವಂತೆ ಆಮಂತ್ರಿಸಲ್ಪಟ್ಟ 1940ರ ಆ ಆಗಸ್ಟ್ ದಿನವನ್ನು ನಾನು ಅನೇಕ ವೇಳೆ ಜ್ಞಾಪಿಸಿಕೊಳ್ಳುತ್ತೇನೆ. ಆ ಎರಡು ವಾರಗಳು 50 ಕ್ಕಿಂತಲೂ ಹೆಚ್ಚು ವರ್ಷಗಳಾಗಿ ವಿಸ್ತರಿಸಿರುವುದಕ್ಕಾಗಿ ಮತ್ತು ಇಂತಹ ಉದ್ದೇಶಭರಿತವಾದೊಂದು ಜೀವನ ಮಾರ್ಗಕ್ಕೆ ನನ್ನ ಹೆಜ್ಜೆಗಳನ್ನು ಯೆಹೋವ ದೇವರು ಮಾರ್ಗದರ್ಶಿಸಿದಕ್ಕಾಗಿ ನಾನು ಬಹಳಷ್ಟು ಕೃತಜ್ಞತೆಯುಳ್ಳವಳು.
[ಪುಟ 21 ರಲ್ಲಿರುವ ಚಿತ್ರ]
ನಾನು 25 ವರ್ಷ ವಯಸ್ಸಿನವಳಾಗಿದ್ದಾಗ
[ಪುಟ 23 ರಲ್ಲಿರುವ ಚಿತ್ರ]
1956 ರಲ್ಲಿ ನಮ್ಮ ಮದುವೆಯ ದಿನ
[ಪುಟ 24 ರಲ್ಲಿರುವ ಚಿತ್ರಗಳು]
1938 ರಲ್ಲಿ ನನ್ನ ತಂಗಿ ಮತ್ತು ನಾನು ಕ್ರೀಡೆಗಳಲ್ಲಿ ಬಹಳವಾಗಿ ಒಳಗೊಂಡಿದ್ದೆವು, ಆದರೆ ನನ್ನ ಜೀವಿತವು ಈಗ ಅತ್ಯಧಿಕ ಉತ್ಪನ್ನಕಾರಕವಾಗಿದೆ