ಕ್ರಿಸ್ಮಸ್ ನಿಮಗೆ ಯಾವ ಅರ್ಥದಲ್ಲಿದೆ?
ನೀವು ಹೇಗೆ ಉತ್ತರಿಸುವಿರಿ? ಕ್ರಿಸ್ಮಸ್ (1)ನಿಮ್ಮ ಕುಟುಂಬದೊಂದಿಗಿರಲು ಒಂದು ಸಮಯ; (2) ಸಂತೋಷಗೋಷ್ಠಿಗಳಿಗೆ ಒಂದು ಸಮಯ; (3) ಒಂದು ಧಾರ್ಮಿಕ ಸಮಯ; (4) ಒತ್ತಡದ ಒಂದು ಸಮಯ; (5) ಮನೋವ್ಯಥೆಯ ಒಂದು ಸಮಯ; (6) ಗದ್ದಲದ ವ್ಯಾಪಾರದ ಒಂದು ಸಮಯವಾಗಿದೆ.
ಅದು ಆಶ್ಚರ್ಯಕರವಾಗಿ ತೋರಿದರೂ, ಬ್ರಿಟನ್ನಲ್ಲಿ ಸಮೀಕ್ಷಿಸಲ್ಪಟ್ಟ 1,000 ಕ್ಕಿಂತ ಹೆಚ್ಚಿನ ಜನರಲ್ಲಿ ಕೇವಲ 6 ಪ್ರತಿಶತದಷ್ಟು ಜನರು ಕ್ರಿಸ್ಮಸನ್ನು ಪ್ರಾಮುಖ್ಯವಾಗಿ ಒಂದು ಧಾರ್ಮಿಕ ಸಂದರ್ಭವಾಗಿ ಪರಿಗಣಿಸಿದರು. ವ್ಯತಿರಿಕ್ತವಾಗಿ, 48 ಪ್ರತಿಶತ ಜನರು ಕ್ರಿಸ್ಮಸನ್ನು, ಮುಖ್ಯವಾಗಿ ತಮ್ಮ ಕುಟುಂಬದೊಂದಿಗಿರಲು ಒಂದು ಸಮಯವೆಂದು ಯೋಚಿಸಿದರು. ನಿಶ್ಚಯವಾಗಿಯೂ, ಅದು ಮಕ್ಕಳಿಗಾಗಿ ಒಂದು ವಿಶೇಷ ಸಮಯವೆಂದು ಅನೇಕರು ಸಮರ್ಥಿಸುತ್ತಾರೆ. ಲಾಕ್ಷಣಿಕವಾಗಿ, 11 ವರ್ಷ ಪ್ರಾಯದ ಹುಡುಗಿಯೊಬ್ಬಳು, ಕ್ರಿಸ್ಮಸಿನ ವಿಷಯದಲ್ಲಿ ಅವಳಿಗೆ ಯಾವುದು ತುಂಬಾ ಇಷ್ಟವಾಗುತ್ತದೆಂದು ಕೇಳಲ್ಪಟ್ಟಾಗ, ಉತ್ತರಿಸಿದ್ದು: “ಅದರ ಸಂಭ್ರಮ, ಸಂತೋಷದ ಅನಿಸಿಕೆ [ಮತ್ತು] ಇನಾಮುಗಳನ್ನು ಕೊಡುವದು.” “‘ಸಾಂಪ್ರದಾಯಿಕ’ ಕ್ರಿಸ್ಮಸಿನ ಅತಿ ಬಲವಾದ ಒತ್ತು . . . ನಿಸ್ಸಂದೇಹವಾಗಿ ಮನೆ, ಕುಟುಂಬ ಮತ್ತು ನಿರ್ದಿಷ್ಟವಾಗಿ ಮಕ್ಕಳ ಮೇಲೆ ಇರುತ್ತದೆ” ಎಂದು ದ ಮೇಕಿಂಗ್ ಆಫ್ ದ ಮಾರ್ಡನ್ ಕ್ರಿಸ್ಮಸ್ ಪುಸ್ತಕ ಒಪ್ಪುತ್ತದೆ.
ಆದರೆ ವಿಶೇಷವಾಗಿ ಪಾಶ್ಚಾತ್ಯ ಕ್ರೈಸ್ತಪ್ರಪಂಚದಲ್ಲಿ ಕ್ರಿಸ್ಮಸ್ ಒಂದು ಕುಟುಂಬ ವ್ಯವಹಾರವಾಗಿರುತ್ತದೆ, ಆಗ ಸಂಬಂಧಿಕರು ಕೊಡುಗೆಗಳನ್ನು ವಿನಿಮಯ ಮಾಡಲು ಜತೆಗೂಡುತ್ತಾರೆ. ಈಸರ್ನ್ಟ್ ಆರ್ತೊಡಾಕ್ಸ್ ಚರ್ಚ್ ಪ್ರಭುತ್ವ ನಡಿಸುವ ದೇಶಗಳಲ್ಲಿ, ಜನರು ಈಸ್ಟರ್ನ ಮೇಲೆ ಹೆಚ್ಚು ಒತ್ತನ್ನು ಹಾಕುತ್ತಾರೆ; ಆದರೂ ಸಾಮಾನ್ಯವಾಗಿ ಕ್ರಿಸ್ಮಸ್ ಸಮಯ ಒಂದು ರಜೆಯ ಅವಧಿಯಾಗಿರುತ್ತದೆ.
ಒಂದು “ವಾಣಿಜ್ಯ ಕಾರ್ಯಾಚರಣೆ”
ಕ್ರಿಸ್ಮಸ್ “ವ್ಯಾಪಾರೀಕರಣದ . . . ಒಂದು ಗಮನಾರ್ಹ ಪ್ರಕ್ರಿಯೆಗೆ ಒಳಗಾಗಿದೆ” ಎಂದು ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟಾನಿಕ ತಿಳಿಸುತ್ತದೆ. ಇದು ಪ್ರಾಯಶಃ ಜಪಾನಿನಲ್ಲಿ ಸತ್ಯವಾಗಿರುವಷ್ಟು ಬೇರೆಲಿಯ್ಲೂ ಇರುವದಿಲ್ಲ.
“ಜಪಾನೀಯರು ಧರ್ಮದ ಎಲ್ಲಾ ಆಡಂಬರವನ್ನು ಬಿಟ್ಟುಬಿಟ್ಟಿದ್ದಾರೆ ಮತ್ತು ಕ್ರಿಸ್ಮಸನ್ನು ನಿಶ್ಚಿತವಾದ ಒಂದು ವಾಣಿಜ್ಯ ಕಾರ್ಯಾಚರಣೆಯಾಗಿ ಮಾರ್ಪಡಿಸಿದ್ದಾರೆ” ಎಂದು ವಾಷಿಂಗ್ಟನ್ನ ಡೇಲಿ ರೆಕಾರ್ಡ್ ವರದಿಸುತ್ತದೆ. ಅದು ಕೂಡಿಸುವದು, ಜಪಾನಿನಲ್ಲಿ ಕ್ರಿಸ್ಮಸ್ “ವ್ಯಾಪಾರೀ ತತ್ವದ ಮೇಲೆ ಹೆಚ್ಚು ಒತ್ತನ್ನು, ಮತ್ತು ಧಾರ್ಮಿಕ ಅಂಶದ ಮೇಲೆ ಕಡಿಮೆ ಒತ್ತನ್ನು ಹಾಕುವ ಒಂದು ದೊಡ್ಡ ಉತ್ಸವ” ವಾಗಿರುತ್ತದೆ.
ಕ್ರೈಸ್ತರೆಂದು ಹೇಳಿಕೊಳ್ಳುವ ಅನೇಕ ದೇಶಗಳಲ್ಲೂ, ಈ “ಧಾರ್ಮಿಕ ಅಂಶ” ವನ್ನು ಅನೇಕ ಸಲ ಪತ್ತೆ ಹಚ್ಚುವದು ಕಷ್ಟಕರವಾಗಿದೆ. ಸುಮಾರು 40 ವರ್ಷಗಳ ಹಿಂದೆ ಒಂದು ಕ್ರಿಸ್ಮಸ್ ವಿರೋಧಿ ಲಘುಪುಸ್ತಕವು ಪ್ರಲಾಪಿಸಿದ್ದು: “ವಾಣಿಜ್ಯ ಲೋಕದಿಂದ ಕ್ರಿಸ್ಮಸ್ ವರ್ಧಿಸಲ್ಪಡುತ್ತದೆ. ಅದು ವರ್ಷದ ಅತ್ಯಂತ ಮಹತ್ತಾದ ಹಣ ಮಾಡುವ ಕಾಲವಾಗಿರುತ್ತದೆ. ಕ್ರೈಸ್ತರೆಂದು ಹೇಳಿಕೊಳ್ಳುವ ವ್ಯಾಪಾರಸ್ಥರು ಕ್ರಿಸ್ತನಿಗಾಗಿ ಅಲ್ಲ, ಬದಲಾಗಿ ಹಣಕಾಸಿನ ಲಾಭಕ್ಕಾಗಿ ಕ್ರಿಸ್ಮಸ್ ಕಾಲವನ್ನು ಎದುರುನೋಡುತ್ತಾರೆ.” ಆ ಮಾತುಗಳು ಇಂದು ಎಷ್ಟು ಸತ್ಯವಾಗಿವೆ! ಅನೇಕ ದೇಶಗಳಲ್ಲಿ, ವರ್ಷದ ಕೊನೆಯ ಮೂರು ತಿಂಗಳುಗಳ ಆರಂಭವನ್ನು ಮುಟ್ಟುವದೇ ತಡ, ಮುಂದಿನ ಕ್ರಿಸ್ಮಸಿಗಾಗಿ ಕೊಡುಗೆಗಳನ್ನು ಖರೀದಿಸಲು ಎಷ್ಟು ದಿನಗಳು ಉಳಿದಿವೆ ಎಂಬ ಮರುಜ್ಞಾಪನಗಳನ್ನು ನಾವು ಕೇಳುತ್ತೇವೆ. ವರ್ಷ ಕೊನೆಗೊಳ್ಳುತ್ತಿರುವಂತೆ, ವ್ಯಾಪಾರವು ಹೆಚ್ಚು ಚುರುಕಾಗುತ್ತದೆ. ಅಂಗಡಿಗಳ ವಾರ್ಷಿಕ ಮಾರಾಟಗಳಲ್ಲಿ ಸುಮಾರು ಮುಕ್ಕಾಲು ಭಾಗ ಕ್ರಿಸ್ಮಸ್ ಸಮಯದಲ್ಲಿ ಆಗುತ್ತದೆ.
ನಿಮಗೆ ಕ್ರಿಸ್ಮಸ್ ಈಗ ಯಾವುದೇ ಅರ್ಥದಲ್ಲಿದ್ದರೂ, ಅದು ಹೇಗೆ ಆರಂಭಿಸಿತೆಂದು ನೀವು ಕೌತುಕಪಡಬಹುದು. ವಾಸ್ತವದಲ್ಲಿ, ಬೈಬಲು ಕ್ರಿಸ್ಮಸ್ ಕೊಡುಗೆ ಕೊಡುವಿಕೆಯನ್ನು ಬೆಂಬಲಿಸುತ್ತದೋ? ಇಂದಿನ ಕ್ರಿಸ್ಮಸ್ ಉತ್ಸವಗಳು ನಿಜವಾಗಿ ಕ್ರೈಸ್ತೋಚಿತವೋ? ನಾವು ನೋಡೋಣ.
[ಪುಟ 2 ರಲ್ಲಿರುವ ಚಿತ್ರ ಕೃಪೆ]
Cover: Thomas Nast/Dover Publications, Inc., 1978