ಮೈಮಾನಡೀಜ್—ಯೆಹೂದ್ಯಮತವನ್ನು ಪುನರ್ವಿಶದೀಕರಿಸಿದ ವ್ಯಕ್ತಿ
“ಬೈಬಲಿನ ಮೋಶೆಯ ಸಮಯದಿಂದ ಮೋಸಸ್ ಮೈಮಾನಡೀಜ್ನ ಸಮಯದ ವರೆಗೆ, ಮೈಮಾನಡೀಜ್ಗೆ ಸದೃಶರಾದವರು ಯಾರೂ ಇರಲಿಲ್ಲ.” ಅನೇಕ ಯೆಹೂದ್ಯರು ಗಹನವಾದ ಈ ಹೇಳಿಕೆಯನ್ನು, 12 ನೆಯ ಶತಮಾನದ ಯೆಹೂದಿ ತತ್ವಜ್ಞಾನಿ, ಸಂಹಿತೆಕಾರ, ಮತ್ತು ಟ್ಯಾಲ್ಮಡ್ ಹಾಗೂ ಶಾಸ್ತ್ರಗಳ ವ್ಯಾಖ್ಯಾನಕಾರ, ಮೈಮಾನಡೀಜ್ ಎಂತಲೂ ರಾಮ್ಬಾಮ್ ಎಂತಲೂ ಅರಿಯಲ್ಪಟ್ಟ, ಮೋಸಸ್ ಬೆನ್ಮೈಮಾನ್ಗಾಗಿರುವ ಮೆಚ್ಚುಗೆಯ ಒಂದು ಅಭಿವ್ಯಕ್ತಿಯೆಂದು ಗುರುತಿಸುವರು.a ಇಂದು ಅನೇಕರಿಗೆ ಮೈಮಾನಡೀಜ್ನ ಪರಿಚಯವಿರುವುದಿಲ್ಲ, ಆದರೂ ಅವನ ಬರಹಗಳು ತನ್ನ ದಿನದ ಯೆಹೂದಿ, ಮುಸ್ಲಿಂ, ಮತ್ತು ಚರ್ಚಿನ ಆಲೋಚನಾಶಕ್ತಿಯ ಮೇಲೆ ಆಳವಾದ ಪ್ರಭಾವವನ್ನು ಬೀರಿದ್ದವು. ಮೂಲಭೂತ ವಿಧದಲ್ಲಿ ಅವನು ಯೆಹೂದ್ಯಮತವನ್ನು ಪುನರ್ವಿಶದೀಕರಿಸಿದನು. ಮೈಮಾನಡೀಜ್ ಯಾರಾಗಿದ್ದನು, ಮತ್ತು ಅನೇಕ ಯೆಹೂದ್ಯರು ಅವನನ್ನು ಏಕೆ “ಎರಡನೆಯ ಮೋಶೆ” ಎಂದು ಭಾವಿಸುತ್ತಾರೆ?
ಮೈಮಾನಡೀಜ್ ಯಾರಾಗಿದ್ದನು?
ಮೈಮಾನಡೀಜ್ 1135 ರಲ್ಲಿ, ಸ್ಪೇನ್ನ ಕಾರ್ಡಬದಲ್ಲಿ ಜನಿಸಿದನು. ತನ್ನ ಆರಂಭಿಕ ಧಾರ್ಮಿಕ ತರಬೇತಿಯಲ್ಲಿ ಹೆಚ್ಚಿನದನ್ನು ಒದಗಿಸಿದ ಅವನ ತಂದೆಯಾದ ಮೈಮಾನ್, ಪ್ರಖ್ಯಾತ ರಬ್ಬಿ ಕುಟುಂಬದ ಪ್ರಸಿದ್ಧ ಪಂಡಿತನಾಗಿದ್ದನು. 1148 ರಲ್ಲಿ ಅಲ್ಮಹಾಡರು ಕಾರ್ಡಬವನ್ನು ಗೆದ್ದುಕೊಂಡಾಗ, ಯೆಹೂದ್ಯರು ಇಸ್ಲಾಮ್ ಧರ್ಮಕ್ಕೆ ಮತಾಂತರ ಹೊಂದುವ ಅಥವಾ ಓಡಿಹೋಗುವ ಆಯ್ಕೆಯನ್ನು ಎದುರಿಸಿದರು. ಇದು ಮೈಮಾನಡೀಜ್ ಕುಟುಂಬಕ್ಕೆ ಅಲೆದಾಡುವಿಕೆಯ ಒಂದು ದೀರ್ಘ ಅವಧಿಯನ್ನು ಆರಂಭಿಸಿತು. 1160 ರಲ್ಲಿ ಅವರು ಮೊರಾಕೊವಿನ ಫೆಜ್ನಲ್ಲಿ ನೆಲೆಸಿದರು. ಅಲ್ಲಿ ಅವನು ವೈದ್ಯನಾಗಿ ತರಬೇತಿಯನ್ನು ಪಡೆದನು. 1165 ರಲ್ಲಿ ಅವನ ಕುಟುಂಬವು ಪ್ಯಾಲಸ್ಟೀನ್ಗೆ ಓಡಿಹೋಗಬೇಕಾಯಿತು.
ಹಾಗಿದ್ದರೂ, ಇಸ್ರಾಯೇಲ್ನಲ್ಲಿ ಸನ್ನಿವೇಶವು ಅಸ್ಥಿರವಾಗಿತ್ತು. ಚಿಕ್ಕದಾದ ಯೆಹೂದಿ ಸಮುದಾಯವು ಏಕಸಮಾನವಾಗಿ ಕ್ರೈಸ್ತಪ್ರಪಂಚದ ಧಾರ್ಮಿಕಯೋಧರಿಂದ ಮತ್ತು ಮುಸ್ಲಿಂ ಶಕಿಗ್ತಳಿಂದ ಅಪಾಯವನ್ನು ಎದುರಿಸಿತು. “ಪರಿಶುದ್ಧ ನಾಡಿ” ನಲ್ಲಿ ಆರು ತಿಂಗಳುಗಳಿಗಿಂತಲೂ ಕಡಿಮೆ ಸಮಯಾನಂತರ, ಮೈಮಾನಡೀಜ್ ಮತ್ತು ಕುಟುಂಬವು ಈಜಿಪ್ಟ್ನ ಕೈರೊವಿನ ಹಳೆಯ ಪಟ್ಟಣವಾದ ಫುಸ್ಟಾಟ್ನಲ್ಲಿ ಆಶ್ರಯ ಕಂಡುಕೊಂಡಿತು. ಮೈಮಾನಡೀಜ್ನ ಮೇಧಾಶಕ್ತಿಗಳು ಪೂರ್ಣವಾಗಿ ಗುರುತಿಸಲ್ಪಟ್ಟದ್ದು ಇಲ್ಲಿಯೇ. 1177 ರಲ್ಲಿ ಅವನು ಯೆಹೂದಿ ಸಮುದಾಯದ ಶಿರಸ್ಸಾದನು, ಮತ್ತು 1185 ರಲ್ಲಿ, ಜನಪ್ರಿಯ ಮುಸ್ಲಿಂ ನಾಯಕನಾದ ಸ್ಯಾಲಡನ್ನ ದರ್ಬಾರಿನಲ್ಲಿ ವೈದ್ಯನಾಗಿ ನೇಮಿಸಲ್ಪಟ್ಟನು. ಮೈಮಾನಡೀಜ್ ಈ ಎರಡೂ ಸ್ಥಾನಗಳನ್ನು 1204 ರಲ್ಲಿ ತನ್ನ ಮರಣದ ತನಕ ಇರಿಸಿಕೊಂಡನು. ಅವನ ವೈದ್ಯಕೀಯ ನೈಪುಣ್ಯವು ಎಷ್ಟು ಪ್ರಸಿದ್ಧವಾಗಿತ್ತೆಂದರೆ, ಇಂಗ್ಲೆಂಡ್ನಷ್ಟು ದೂರದಿಂದ ಧೈರ್ಯಶಾಲಿ (ಲೈಅನ್ ಹಾರ್ಟಡ್) ರಿಚರ್ಡ್ ಅರಸನು, ಮೈಮಾನಡೀಜ್ನನ್ನು ತನ್ನ ವೈಯಕ್ತಿಕ ವೈದ್ಯನಾಗಿ ದೊರಕಿಸಿಕೊಳ್ಳಲು ಪ್ರಯತ್ನಿಸಿದನೆಂದು ಹೇಳಲಾಗುತ್ತದೆ.
ಅವನು ಏನನ್ನು ಬರೆದನು?
ಮೈಮಾನಡೀಜ್ ಫಲಭರಿತ ಬರಹಗಾರನಾಗಿದ್ದನು. ಮುಸ್ಲಿಂ ಹಿಂಸೆಯಿಂದ ಓಡಿಹೋಗುವಾಗ, ಪರದೇಶದಲ್ಲಿ ಆಶ್ರಯವನ್ನು ಪಡೆದುಕೊಂಡಿದ್ದಾಗ, ಕಾಮೆಂಟರಿ ಆನ್ ದ ಮಿಷ್ನಾ ಎಂಬ ತನ್ನ ಪ್ರಥಮ ಪ್ರಮುಖ ಗ್ರಂಥದ ಹೆಚ್ಚಿನ ಭಾಗವನ್ನು ಅವನು ಸಂಕಲಿಸಿದನು.b ಆ್ಯರಬಿಕ್ ಭಾಷೆಯಲ್ಲಿ ಬರೆಯಲ್ಪಟ್ಟ ಆ ಗ್ರಂಥವು, ಕೆಲವೊಮ್ಮೆ ಯೆಹೂದ್ಯಮತದ ಕುರಿತಾದ ಮೈಮಾನಡೀಜ್ನ ತತ್ವಜ್ಞಾನದ ವಿವರಣೆಗಳೊಳಗೆ ವಿಷದಪಡಿಸುತ್ತಾ, ಮಿಷ್ನಾದಲ್ಲಿರುವ ಅನೇಕ ಪರಿಕಲ್ಪನೆಗಳನ್ನು ಮತ್ತು ಪದಗಳನ್ನು ವಿವರಿಸುತ್ತದೆ. ಸ್ಯಾನ್ಹೆಡ್ರಿನ್ ಎಂಬ ನಿರ್ದಿಷ್ಟ ಲೇಖನವನ್ನು ವಿವರಿಸುವ ಭಾಗದಲ್ಲಿ, ಯೆಹೂದಿ ನಂಬಿಕೆಯ 13 ಮೂಲಭೂತ ತತ್ವಗಳನ್ನು ಮೈಮಾನಡೀಜ್ ಸೂತ್ರೀಕರಿಸಿದನು. ಯೆಹೂದ್ಯಮತವು ಎಂದಿಗೂ ಔಪಚಾರಿಕ ಸೂತ್ರಗಳನ್ನು ಅಥವಾ ನಂಬಿಕೆಗಳ ಘೋಷಣೆಯನ್ನು ವಿಶದೀಕರಿಸಿರಲಿಲ್ಲ. ಈಗ, ಮೈಮಾನಡೀಜ್ನ 13 ನಂಬಿಕೆಯ ತತ್ವಗಳು, ಯೆಹೂದಿ ಮತದ ಸೂತ್ರಗಳ ಶ್ರೇಣಿಯ ಮೂಲರೂಪವಾದವು.—ಪುಟ 23ರ ರೇಖಾಚೌಕ ನೋಡಿರಿ.
ವಿಷಯಗಳು ಭೌತಿಕವಾಗಿರಲಿ ಅಥವಾ ಆತ್ಮಿಕವಾಗಿರಲಿ, ಅವೆಲ್ಲವುಗಳ ತರ್ಕಬದ್ಧವಾದ ಅನುಕ್ರಮವನ್ನು ವಿಶದೀಕರಿಸಲು ಮೈಮಾನಡೀಜ್ ಪ್ರಯತ್ನಿಸಿದನು. ಅವನು ಏನನ್ನು ನ್ಯಾಯವಾದ ರುಜುವಾತುಗಳು ಮತ್ತು ಸಾಮರ್ಥ್ಯಯುಕ್ತ ವಾದಗಳೆಂದು ವೀಕ್ಷಿಸಿದನೊ ಅದರ ಆಧಾರದ ಮೇಲೆ ಎಲ್ಲ ವಿಷಯಗಳಿಗೆ ವಿವರಣೆಗಳನ್ನು ಕೋರುತ್ತಾ, ಅವಿಚಾರಿತ ನಂಬಿಕೆಯನ್ನು ತಿರಸ್ಕರಿಸಿದನು. ಈ ಸ್ವಾಭಾವಿಕ ಒಲವು, ಮಿಷ್ ಟೋರಾ ಎಂಬ ಅವನ ಮಹತ್ವದ ಕೃತಿಯ ಬರವಣಿಗೆಗೆ ನಡೆಸಿತು.c
ಮೈಮಾನಡೀಜ್ನ ದಿನದಲ್ಲಿ ಯೆಹೂದ್ಯರು, “ಟೋರಾ” ಅಥವಾ “ಧರ್ಮಶಾಸ್ತ್ರ” ವನ್ನು, ಕೇವಲ ಮೋಶೆಯ ಮೂಲಕ ದಾಖಲಿಸಲ್ಪಟ್ಟ ಲಿಖಿತ ಮಾತುಗಳಿಗೆ ಮಾತ್ರವಲ್ಲ, ಶತಮಾನಗಳ ಉದ್ದಕ್ಕೂ ಈ ಧರ್ಮಶಾಸ್ತ್ರದ ರಬ್ಬಿ ಸಂಬಂಧಿತ ಎಲ್ಲ ಅರ್ಥವಿವರಣೆಗಳಿಗೂ ಅನ್ವಯಿಸುವಂತೆ ವೀಕ್ಷಿಸಿದರು. ಈ ವಿಚಾರಗಳು ಟ್ಯಾಲ್ಮಡ್ನಲ್ಲಿ ಮತ್ತು ಟ್ಯಾಲ್ಮಡ್ನ ಕುರಿತಾದ ಸಾವಿರಾರು ರಬ್ಬಿ ಸಂಬಂಧಿತ ನಿರ್ಣಯಗಳಲ್ಲಿ ಮತ್ತು ಬರಹಗಳಲ್ಲಿ ದಾಖಲಿಸಲ್ಪಟ್ಟಿವೆ. ಈ ಎಲ್ಲ ಮಾಹಿತಿಯ ಬರಿಯ ಗಾತ್ರ ಮತ್ತು ಅಸ್ತವ್ಯಸ್ತತೆಯು, ಸಾಮಾನ್ಯ ಯೆಹೂದ್ಯನನ್ನು ತನ್ನ ದೈನಿಕ ಜೀವಿತವನ್ನು ಪ್ರಭಾವಿಸಿದ ನಿರ್ಣಯಗಳನ್ನು ಮಾಡುವಲ್ಲಿ ಅಶಕ್ತನನ್ನಾಗಿ ಮಾಡಿತೆಂದು ಮೈಮಾನಡೀಜ್ ಗ್ರಹಿಸಿದನು. ಹೆಚ್ಚಿನವರು, ಎಲ್ಲ ರಬ್ಬಿ ಸಂಬಂಧಿತ ಸಾಹಿತ್ಯದ ಜೀವಾವಧಿಯ ಅಧ್ಯಯನವನ್ನು ಮಾಡುವ ಸ್ಥಾನದಲ್ಲಿ ಇರಲಿಲ್ಲ, ಅದರ ಹೆಚ್ಚಿನ ಭಾಗವು ಕಠಿನ ಅ್ಯರಮೇಯಿಕ್ ಭಾಷೆಯಲ್ಲಿ ಬರೆಯಲ್ಪಟ್ಟಿತ್ತು. ಮೈಮಾನಡೀಜ್ನ ಪರಿಹಾರವು, ಅದನ್ನು ವಿಷಯದ ಅನುಸಾರ ವಿಭಾಗಿಸಲ್ಪಟ್ಟ 14 ಪುಸ್ತಕಗಳ ಒಂದು ಅನುಕ್ರಮವಾದ ವ್ಯವಸ್ಥೆಯಾಗಿ ಸಂಘಟಿಸಿ, ಪ್ರಾಯೋಗಿಕ ನಿರ್ಣಯಗಳನ್ನು ಅತ್ಯುಜಲ್ವಪಡಿಸುತ್ತಾ, ಈ ಮಾಹಿತಿಯನ್ನು ಪರಿಷ್ಕರಿಸಿ ಮುದ್ರಿಸುವಂತಹದ್ದಾಗಿತ್ತು. ಅದನ್ನು ಅವನು ನಿಪುಣವಾದ ರೀತಿಯಲ್ಲಿ ಸ್ಪಷ್ಟವಾಗಿದ, ನಿರರ್ಗಳವಾದ ಹೀಬ್ರು ಭಾಷೆಯಲ್ಲಿ ಬರೆದನು.
ಮಿಷ್ನೆ ಟೋರಾ ಎಂತಹ ಪ್ರಾಯೋಗಿಕ ಮಾರ್ಗದರ್ಶಕವಾಗಿತ್ತೆಂದರೆ, ಅದು ಟ್ಯಾಲ್ಮಡ್ ಗ್ರಂಥವನ್ನು ಸಂಪೂರ್ಣವಾಗಿ ಸ್ಥಾನಪಲ್ಲಟಗೊಳಿಸುವುದೆಂದು ಕೆಲವು ಯೆಹೂದಿ ನಾಯಕರು ಭಯಪಟ್ಟರು. ಆದರೂ, ಆಕ್ಷೇಪಿಸಿದವರೂ ಆ ಕೃತಿಯ ಭಾವಪರವಶಗೊಳಿಸುವ ಪಾಂಡಿತ್ಯವನ್ನು ಅಂಗೀಕರಿಸಿದರು. ಸಾಮಾನ್ಯ ಪುರುಷನು ಇನ್ನು ಮುಂದೆ ಬೇರೊಂದು ವಿಷಯದೊಂದಿಗೆ ಸಂಬಂಧ ಕಲ್ಪಿಸಲಾಗದಂತಹ ಅಥವಾ ಹೋಲಿಸಲಾಗದಂತಹ ಯೆಹೂದ್ಯಮತದ ವ್ಯವಸ್ಥೆಗೆ ಹೊಸ ಜೀವವನ್ನು ಕೊಡುತ್ತಾ, ಉನ್ನತವಾಗಿ ಸಂಘಟಿಸಲ್ಪಟ್ಟ ಈ ನಿಯಮಾವಳಿಯು ಕ್ರಾಂತಿಕಾರಕ ಸಾಧನವಾಗಿತ್ತು.
ಅನಂತರ, ಮೈಮಾನಡೀಜ್ ದ ಗೈಡ್ ಫಾರ್ ದ ಪರ್ಪ್ಲೆಕ್ಸ್ಡ್ (ಇಂಗ್ಲಿಷ್ನಲ್ಲಿ) ಎಂಬ ಇನ್ನೊಂದು ಮಹಾ ಕೃತಿಯನ್ನು ಬರೆಯಲು ಪ್ರಾರಂಭಿಸಿದನು. ಗ್ರೀಕ್ನ ಶ್ರೇಷ್ಠ ಸಾಹಿತ್ಯಕೃತಿಗಳು ಆ್ಯರಬಿಕ್ ಭಾಷೆಯಲ್ಲಿ ಭಾಷಾಂತರ ಹೊಂದಿದ್ದರಿಂದ, ಅನೇಕ ಯೆಹೂದ್ಯರು ಆ್ಯರಿಸ್ಟಾಟಲ್ ಮತ್ತು ಇತರ ತತ್ವಜ್ಞಾನಿಗಳೊಂದಿಗೆ ಪರಿಚಿತರಾಗುತ್ತಿದ್ದರು. ಬೈಬಲಿನ ಪದಗಳ ಅಕ್ಷರಾರ್ಥಕ ಅರ್ಥವನ್ನು ತತ್ವಜ್ಞಾನದೊಂದಿಗೆ ಸರಿಹೊಂದಿಸುವುದು ಕಷ್ಟಕರವೆಂದು ಕಂಡುಕೊಳ್ಳುತ್ತಾ, ಕೆಲವರು ಗಲಿಬಿಲಿಗೊಂಡರು. ದ ಗೈಡ್ ಫಾರ್ ದ ಪರ್ಪ್ಲೆಕ್ಸ್ಡ್ ಎಂಬ ಪುಸ್ತಕದಲ್ಲಿ, ಆ್ಯರಿಸ್ಟಾಟಲನನ್ನು ಬಹಳವಾಗಿ ಮೆಚ್ಚಿದ ಮೈಮಾನಡೀಜ್, ತತ್ವಜ್ಞಾನದ ವಿಚಾರ ಮತ್ತು ತರ್ಕದೊಂದಿಗೆ ಹೊಂದಿಕೆಯಾಗುವ ವಿಧದಲ್ಲಿ ಬೈಬಲಿನ ಮತ್ತು ಯೆಹೂದ್ಯಮತದ ಸಾರಾಂಶವನ್ನು ವಿವರಿಸಲು ಪ್ರಯತ್ನಿಸಿದನು.—ಹೋಲಿಸಿ 1 ಕೊರಿಂಥ 2:1-5, 11-16.
ಈ ಮಹಾ ಕೃತಿಗಳು ಮತ್ತು ಇತರ ಧಾರ್ಮಿಕ ಬರಹಗಳು ಮಾತ್ರವಲ್ಲದೆ, ಮೈಮಾನಡೀಜ್ ವೈದ್ಯಕೀಯ ಮತ್ತು ಜ್ಯೋತಿಷದ ಕ್ಷೇತ್ರಗಳಲ್ಲೂ ಅಧಿಕಾರಯುಕ್ತವಾಗಿ ಬರೆದನು. ಅವನ ಫಲಭರಿತ ಬರಹಗಳ ಇನ್ನೊಂದು ರೂಪವನ್ನು ಕಡೆಗಣಿಸುವಂತಿಲ್ಲ. ಎನ್ಸೈಕ್ಲೊಪೀಡಿಯ ಜುಡೈಕಾ ಹೇಳುವುದು: “ಮೈಮಾನಡೀಜ್ನ ಪತ್ರಗಳು, ಪತ್ರ ಬರವಣಿಗೆಯಲ್ಲಿ ಒಂದು ಯುಗಾರಂಭವನ್ನು ಗುರುತಿಸುತ್ತವೆ. ಯಾರ ಪತ್ರವ್ಯವಹಾರವು ಹೆಚ್ಚುಮಟ್ಟಿಗೆ ಸುರಕ್ಷಿತವಾಗಿದೆಯೊ ಅಂತಹ ಯೆಹೂದಿ ಪತ್ರ ಬರಹಗಾರರಲ್ಲಿ ಅವನು ಮೊದಲಿಗನು. . . . ಅವನ ಪತ್ರಗಳು ತನ್ನ ಪತ್ರವ್ಯವಹಾರಿಗಳ ಮನಸ್ಸನ್ನು ಮತ್ತು ಹೃದಯವನ್ನು ರಂಜಿಸಿದವು, ಮತ್ತು ಅವರಿಗೆ ಒಪ್ಪುವಂತೆ ಅವನು ತನ್ನ ಶೈಲಿಯನ್ನು ಮಾರ್ಪಡಿಸಿದನು.”
ಅವನು ಏನನ್ನು ಬೋಧಿಸಿದನು?
ನಂಬಿಕೆಯ 13 ತತ್ವಗಳಲ್ಲಿ, ಮೈಮಾನಡೀಜ್ ವಿಶ್ವಾಸದ ಸ್ಪಷ್ಟವಾಗಿದ ರೂಪರೇಖೆಯನ್ನು ಒದಗಿಸಿದನು, ಅವುಗಳಲ್ಲಿ ಕೆಲವು ಶಾಸ್ತ್ರದಲ್ಲಿ ಬೇರೂರಿದ್ದವು. ಹಾಗಿದ್ದರೂ, ಏಳನೆಯ ಮತ್ತು ಒಂಬತ್ತನೆಯ ತತ್ವಗಳು, ಮೆಸ್ಸೀಯನೋಪಾದಿ ಯೇಸುವಿನಲ್ಲಿ ಶಾಸ್ತ್ರೀಯವಾಗಿ ಆಧರಿತವಾದ ನಂಬಿಕೆಯ ಸಾರಾಂಶಕ್ಕೆ ತದ್ವಿರುದ್ಧವಾಗಿವೆ.d ತ್ರಯೈಕ್ಯದಂತಹ ಕ್ರೈಸ್ತಪ್ರಪಂಚದ ಧರ್ಮಭ್ರಷ್ಟ ಬೋಧನೆಗಳನ್ನು ಮತ್ತು ಧಾರ್ಮಿಕಯುದ್ಧಗಳ ಕಗ್ಗೊಲೆಯಿಂದ ದೃಷ್ಟಾಂತಿಸಲ್ಪಟ್ಟ ಎದ್ದುಕಾಣುವ ಸೋಗನ್ನು ಗಣನೆಗೆ ತೆಗೆದುಕೊಳ್ಳುತ್ತಾ, ಯೇಸುವಿನ ಮೆಸ್ಸೀಯತನದ ಪ್ರಶ್ನೆಯ ಕುರಿತು ಮೈಮಾನಡೀಜ್ ಇನ್ನೂ ಹೆಚ್ಚಾಗಿ ಪರಿಶೋಧಿಸಲಿಲ್ಲವೆಂಬುದು ಆಶ್ಚರ್ಯಕರವೇನೂ ಅಲ್ಲ.—ಮತ್ತಾಯ 7:21-23; 2 ಪೇತ್ರ 2:1, 2.
ಮೈಮಾನಡೀಜ್ ಬರೆಯುವುದು: “[ಕ್ರೈಸ್ತತ್ವ] ಕ್ಕಿಂತ ಹೆಚ್ಚಾದ ಅಡಚಣೆ ಇರಬಲ್ಲದೊ? ಎಲ್ಲ ಪ್ರವಾದಿಗಳು ಮೆಸ್ಸೀಯನ ಕುರಿತು, ಇಸ್ರಾಯೇಲಿನ ವಿಮೋಚಕನಂತೆ ಮತ್ತು ಅದರ ರಕ್ಷಕನಂತೆ ಮಾತಾಡಿದರು. [ತದ್ವಿರುದ್ಧವಾಗಿ, ಕ್ರೈಸ್ತತ್ವವು] ಖಡ್ಗದಿಂದ ಯೆಹೂದ್ಯರು ಕೊಲ್ಲಲ್ಪಡುವಂತೆ, ಅವರಲ್ಲಿ ಉಳಿದವರು ಚದರಿಹೋಗುವಂತೆ ಮತ್ತು ಕೀಳು ಸ್ಥಿತಿಗೆ ತರಲ್ಪಡುವಂತೆ, ಟೋರಾವನ್ನು ಬದಲಾಯಿಸುವಂತೆ, ಮತ್ತು ಲೋಕದಲ್ಲಿರುವ ಹೆಚ್ಚಿನವರು ತಪ್ಪು ಮಾಡುವಂತೆ ಮತ್ತು ಕರ್ತನನ್ನು ಬಿಟ್ಟು ಇತರ ದೇವರನ್ನು ಸೇವಿಸುವಂತೆ ಮಾಡಿತು.”—ಮಿಷ್ನೆ ಟೋರಾ, “ಅರಸರ ಮತ್ತು ಅವರ ಯುದ್ಧಗಳ ನಿಯಮಗಳು,” ಅಧ್ಯಾಯ 11.
ಆದರೂ, ಅವನಿಗೆ ತೋರಿಸಲ್ಪಟ್ಟ ಎಲ್ಲ ಗೌರವದ ಹೊರತೂ, ಅವನು ಬಹಳ ನಿರ್ದಾಕ್ಷಿಣ್ಯವಾಗಿ ಮಾತಾಡಿದ ಕೆಲವೊಂದು ವಿವಾದಾಂಶಗಳ ಮೇಲೆ ಅನೇಕ ಯೆಹೂದ್ಯರು ಮೈಮಾನಡೀಜ್ನನ್ನು ಕಡೆಗಣಿಸಲು ಇಷ್ಟಪಡುತ್ತಾರೆ. ರಹಸ್ಯಾರ್ಥವುಳ್ಳ ಯೆಹೂದ್ಯಮತ (ಕ್ಯಾಬಲ)ದ ಅಭಿವೃದ್ಧಿ ಹೊಂದುತ್ತಿದ್ದ ಪ್ರಭಾವದಿಂದ, ಜ್ಯೋತಿಷವು ಯೆಹೂದ್ಯರಲ್ಲಿ ಬಹಳ ಜನಪ್ರಿಯವಾಗುತ್ತಿತ್ತು. ಮೈಮಾನಡೀಜ್ ಬರೆದದ್ದು: “ಜ್ಯೋತಿಷದಲ್ಲಿ ಒಳಗೊಂಡಿರುವ ಮತ್ತು ಜ್ಯೋತಿಷಿಗಳ ಮೂಲಕ ಸ್ಥಾಪಿಸಲಾದ ಸಮಯವನ್ನಾಧಾರಿಸಿ ತನ್ನ ಕೆಲಸ ಅಥವಾ ಒಂದು ಸಂಚಾರವನ್ನು ಯೋಜಿಸುವ ಯಾವನಾದರೊಬ್ಬನು ಚಾವಟಿಯಿಂದ ಹೊಡೆಯಲ್ಪಡಲು ಬದ್ಧನಾಗಿದ್ದಾನೆ. . . . ಈ ಎಲ್ಲ ವಿಷಯಗಳು ಸುಳ್ಳುಗಳೂ ವಂಚನೆಯೂ ಆಗಿವೆ. . . . ಈ ವಿಷಯಗಳಲ್ಲಿ ನಂಬಿಕೆಯನ್ನಿಡುವ ಯಾವನಾದರೂ . . . ಮೂರ್ಖನೂ ವಿವೇಕವಿಲ್ಲದವನೂ ಆಗಿದ್ದಾನೆ.”—ಮಿಷ್ನೆ ಟೋರಾ, “ಮೂರ್ತಿಪೂಜೆಯ ನಿಯಮಗಳು,” ಅಧ್ಯಾಯ 11; ಹೋಲಿಸಿ ಯಾಜಕಕಾಂಡ 19:26; ಧರ್ಮೋಪದೇಶಕಾಂಡ 18:9-13.
ಮೈಮಾನಡೀಜ್ ಇನ್ನೊಂದು ಆಚರಣೆಯನ್ನೂ ತೀಕ್ಷೈವಾಗಿ ಟೀಕಿಸಿದನು: “[ರಬ್ಬಿಗಳು] ತಮಗಾಗಿ ವ್ಯಕ್ತಿಗಳಿಂದ ಮತ್ತು ಸಮುದಾಯಗಳಿಂದ ಹಣಕಾಸಿನ ಹಕ್ಕು ಕೇಳಿಕೆಗಳನ್ನು ನಿರ್ಣಯಿಸಿದರು ಮತ್ತು ಇದು ಶುದ್ಧ ಮೂರ್ಖತನವಾದರೂ, ಅದು ಬಂಧಕವಾದದ್ದೂ ಯೋಗ್ಯವೂ ಎಂದು ಜನರು ಯೋಚಿಸುವಂತೆ ಮಾಡಿದರು. . . . ಇದೆಲ್ಲವೂ ತಪ್ಪಾಗಿದೆ. ಈ ವಿಶ್ವಾಸಕ್ಕೆ ಬೆಂಬಲವನ್ನು ನೀಡಲು, ಟೋರಾದಲ್ಲಾಗಲಿ [ಟ್ಯಾಲ್ಮಡ್ನ] ಜ್ಞಾನಿಗಳ ಹೇಳಿಕೆಗಳಲ್ಲಾಗಲಿ ಒಂದು ಮಾತೂ ಇರುವುದಿಲ್ಲ.” (ಕಾಮೆಂಟರಿ ಆನ್ ದ ಮಿಷ್ನಾ, ಅವೊಟ್ 4:5) ಈ ರಬ್ಬಿಗಳಿಗೆ ಪ್ರತಿಕೂಲವಾಗಿ, ಧಾರ್ಮಿಕ ಸೇವೆಗಳಿಗಾಗಿ ವೇತನವನ್ನು ಎಂದೂ ಸ್ವೀಕರಿಸದೆ, ತನ್ನ ಸಂರಕ್ಷಣೆಗಾಗಿ ಮೈಮಾನಡೀಜ್ ಕಷ್ಟಪಟ್ಟು ಒಬ್ಬ ವೈದ್ಯನಂತೆ ದುಡಿದನು.—ಹೋಲಿಸಿ 2 ಕೊರಿಂಥ 2:17; 1 ಥೆಸಲೊನೀಕ 2:9.
ಯೆಹೂದ್ಯಮತ ಮತ್ತು ಇತರ ವಿಶ್ವಾಸಗಳು ಹೇಗೆ ಪ್ರಭಾವಿಸಲ್ಪಟ್ಟವು?
ಜೆರೂಸಲೇಮಿನ ಹೀಬ್ರು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಯಶೈಅಹು ಲೈಬೊವಿಟ್ಸ್ ಹೇಳಿದ್ದು: “ಪೂರ್ವಜರ ಮತ್ತು ಪ್ರವಾದಿಗಳ ಯುಗದಿಂದ ಸದ್ಯದ ಯುಗದ ವರೆಗೆ, ಯೆಹೂದ್ಯಮತದ ಇತಿಹಾಸದಲ್ಲಿ, ಮೈಮಾನಡೀಜ್ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದಾನೆ.” ಎನ್ಸೈಕ್ಲೊಪೀಡಿಯ ಜುಡೈಕಾ ಹೇಳುವುದು: “ಯೆಹೂದ್ಯಮತದ ಭವಿಷ್ಯತ್ತಿನ ವಿಕಸನದ ಮೇಲೆ ಮೈಮಾನಡೀಜ್ನ ಪ್ರಭಾವವು ಅಗಣ್ಯವಾಗಿದೆ. . . . ಮೈಮಾನಡೀಜ್ ಇಲ್ಲದೆ ಹೋಗಿದ್ದರೆ, ಯೆಹೂದ್ಯಮತವು ವಿಭಿನ್ನ ಪಂಗಡಗಳಾಗಿ ಮತ್ತು ವಿಶ್ವಾಸಗಳಾಗಿ ಒಡೆದು ಹೋಗಿರುತ್ತಿತ್ತು ಎಂದು ಸಹ . . . ಸಿ. ಚಿರ್ನಾವಿಟ್ಸ್ ಹೇಳುತ್ತಾರೆ. . . . ಹಲವಾರು ಪ್ರವೃತ್ತಿಗಳನ್ನು ಒಟ್ಟುಗೂಡಿಸಿದ್ದು ಅವನ ಮಹಾ ಸಾಧನೆಯಾಗಿತ್ತು.”
ಯೆಹೂದಿ ಆಲೋಚನೆಯನ್ನು, ಅನುಕ್ರಮ ಮತ್ತು ತರ್ಕದ ಕುರಿತಾದ ತನ್ನ ಸ್ವಂತ ವಿಚಾರಗಳಿಗೆ ಸರಿಹೊಂದುವಂತೆ ಪುನರ್ಸಂಘಟಿಸುವ ಮೂಲಕ, ಮೈಮಾನಡೀಜ್ ಯೆಹೂದ್ಯಮತವನ್ನು ಪುನರ್ವಿಶದೀಕರಿಸಿದನು. ಪಂಡಿತರು ಮತ್ತು ಸಾಮಾನ್ಯ ಜನರು ಏಕಸಮಾನವಾಗಿ ಈ ಹೊಸ ಅರ್ಥ ನಿರೂಪಣೆಯನ್ನು ಪ್ರಾಯೋಗಿಕವೂ ಹಿಡಿಸುವಂತಹದ್ದಾಗಿಯೂ ಕಂಡುಕೊಂಡರು. ಮೈಮಾನಡೀಜ್ನ ವಿರೋಧಿಗಳು ಕೂಡ ಕಟ್ಟಕಡೆಗೆ ಅವನ ಪ್ರಸ್ತಾವನೆಗಳಲ್ಲಿ ಹೆಚ್ಚನ್ನು ಸ್ವೀಕರಿಸಿದರು. ಅಂತ್ಯರಹಿತ ಟಿಪ್ಪಣಿಗಳ ಮೇಲೆ ಅವಲಂಬಿಸಬೇಕಾದ ಅಗತ್ಯದಿಂದ ಯೆಹೂದ್ಯರನ್ನು ಸ್ವತಂತ್ರ್ಯಗೊಳಿಸುವ ಉದ್ದೇಶದಿಂದ ಅವನ ಬರಹಗಳು ಬರೆಯಲ್ಪಟ್ಟಿದ್ದರೂ, ಅವನ ಕೃತಿಗಳ ಕುರಿತು ದೀರ್ಘವಾದ ವ್ಯಾಖ್ಯಾನಗಳು ಬೇಗನೆ ಬರೆಯಲ್ಪಟ್ಟವು.
ಎನ್ಸೈಕ್ಲೊಪೀಡಿಯ ಜುಡೈಕಾ ಹೇಳಿಕೆ ನೀಡುವುದು: “ಮೈಮಾನಡೀಜ್ . . . ಮಧ್ಯ ಯುಗಗಳ ಅತ್ಯಂತ ಪ್ರಾಮುಖ್ಯ ಯೆಹೂದಿ ತತ್ವಜ್ಞಾನಿಯಾಗಿದ್ದನು, ಮತ್ತು ಅವನ ದ ಗೈಡ್ ಫಾರ್ ದ ಪರ್ಪ್ಲೆಕ್ಸ್ಡ್ ಎಂಬ ಪುಸ್ತಕವು, ಒಬ್ಬ ಯೆಹೂದ್ಯನಿಂದ ತಯಾರಿಸಲ್ಪಟ್ಟ ಅತ್ಯಂತ ಪ್ರಮುಖವಾದ ತತ್ವಶಾಸ್ತ್ರದ ಕೃತಿಯಾಗಿದೆ.” ಆ್ಯರಬಿಕ್ ಭಾಷೆಯಲ್ಲಿ ಬರೆಯಲ್ಪಟ್ಟಿರುವುದಾದರೂ, ದ ಗೈಡ್ ಫಾರ್ ದ ಪರ್ಪ್ಲೆಕ್ಸ್ಡ್ ಎಂಬ ಪುಸ್ತಕವು, ಮೈಮಾನಡೀಜ್ನ ಜೀವಮಾನಕಾಲದೊಳಗೆ ಹೀಬ್ರು ಭಾಷೆಯಲ್ಲಿ ಮತ್ತು ತದನಂತರ ಸ್ವಲ್ಪ ಸಮಯದಲ್ಲಿ ಲ್ಯಾಟಿನ್ ಭಾಷೆಯಲ್ಲಿ ಭಾಷಾಂತರಗೊಂಡು, ಯೂರೋಪಿನ ಉದ್ದಕ್ಕೂ ಅಧ್ಯಯನಕ್ಕಾಗಿ ಲಭ್ಯವಾಯಿತು. ಇದರ ಪರಿಣಾಮವಾಗಿ, ಯೆಹೂದಿ ಮತದ ವಿಚಾರದೊಂದಿಗೆ ಆ್ಯರಿಸ್ಟಾಟಲನ ತತ್ವಜ್ಞಾನದ ಅಪೂರ್ವ ಸಂಯೋಜನೆಯು, ಬೇಗನೆ ಕ್ರೈಸ್ತಪ್ರಪಂಚದ ಆಲೋಚನೆಯ ಮುಖ್ಯಪ್ರವಾಹದಲ್ಲಿ ಅದರ ಮಾರ್ಗವನ್ನು ಕಂಡುಕೊಂಡಿತು. ಆ್ಯಲ್ಬರ್ಟಸ್ ಮ್ಯಾಗ್ನುಸ್ ಮತ್ತು ಥಾಮಸ್ ಅಕ್ವೈನಸ್ರಂತಹ ಆ ಸಮಯದ ಕ್ರೈಸ್ತಪ್ರಪಂಚದ ಪಂಡಿತರು, ಅನೇಕ ಬಾರಿ ಮೈಮಾನಡೀಜ್ನ ದೃಷ್ಟಿಕೋನಗಳ ಕುರಿತು ಸೂಚಿಸಿ ಹೇಳುತ್ತಾರೆ. ಇಸ್ಲಾಮ್ ಧರ್ಮದ ಪಂಡಿತರು ಸಹ ಪ್ರಭಾವಿತರಾದರು. ಆರ್ತೊಡಾಕ್ಸ್ ಯೆಹೂದ್ಯಮತದಿಂದ ಸಂಪೂರ್ಣ ಬೇರ್ಪಡಿಕೆಯೊಂದನ್ನು ಮಾಡುವಂತೆ ಬಾರೂಕ್ ಸ್ಪಿನೋಜ ಎಂಬ ತದನಂತರದ ಯೆಹೂದಿ ತತ್ವಜ್ಞಾನಿಯನ್ನು, ಮೈಮಾನಡೀಜ್ನ ತತ್ವಶಾಸ್ತ್ರದ ಪ್ರಸ್ತಾವನೆಯು ಪ್ರಭಾವಿಸಿತು.
ಮೈಮಾನಡೀಜ್ನನ್ನು ಪುನರುಜ್ಜೀವನದ ಕಾಲದ ಮೊದಲು ಜೀವಿಸಿದ ಪುನರುಜ್ಜೀವನ (ರಿನೇಸನ್ಸ್) ವ್ಯಕ್ತಿಯೆಂದು ಪರಿಗಣಿಸಬಹುದು. ನಂಬಿಕೆಯು ವಿವೇಚನೆಯೊಂದಿಗೆ ಸುಸಂಗತವಾಗಿರಬೇಕೆಂಬ ಅವನ ಒತ್ತಾಯವು ಇನ್ನೂ ಒಂದು ನ್ಯಾಯಸಮ್ಮತವಾದ ತತ್ವವಾಗಿದೆ. ಈ ತತ್ವವು ಧಾರ್ಮಿಕ ಮೂಢನಂಬಿಕೆಯ ವಿರುದ್ಧ ಆವೇಶಪೂರಿತವಾಗಿ ಮಾತಾಡುವಂತೆ ಅವನನ್ನು ನಡೆಸಿತು. ಆದರೂ, ಕ್ರೈಸ್ತಪ್ರಪಂಚದ ಕೆಟ್ಟ ಮಾದರಿಯು ಮತ್ತು ಆ್ಯರಿಸ್ಟಾಟಲನ ತತ್ವಶಾಸ್ತ್ರದ ಪ್ರಭಾವವು ಅನೇಕ ವೇಳೆ ಅವನನ್ನು ಬೈಬಲ್ ಸತ್ಯದೊಂದಿಗೆ ಪೂರ್ಣವಾಗಿ ಹೊಂದಿಕೆಯಲ್ಲಿರುವ ತೀರ್ಮಾನಕ್ಕೆ ಬರುವುದರಿಂದ ತಡೆಯಿತು. “ಬೈಬಲಿನ ಮೋಶೆಯ ಸಮಯದಿಂದ ಮೋಸಸ್ ಮೈಮಾನಡೀಜ್ನ ಸಮಯದ ವರೆಗೆ, ಮೈಮಾನಡೀಜ್ಗೆ ಸದೃಶರಾದವರು ಯಾರೂ ಇರಲಿಲ್ಲ,” ಎಂಬುದಾಗಿ ಮೈಮಾನಡೀಜ್ನ ಸಮಾಧಿಯ ಮೇಲೆ ಕೆತ್ತಲ್ಪಟ್ಟ ಹೇಳಿಕೆಯೊಂದಿಗೆ ಎಲ್ಲರೂ ಒಪ್ಪದಿದ್ದರೂ, ಅವನು ಯೆಹೂದ್ಯಮತದ ರಚನೆಯನ್ನು ಪುನರ್ವಿಶದೀಕರಿಸಿದನೆಂಬುದನ್ನು ಒಪ್ಪಲೇಬೇಕು.
[ಅಧ್ಯಯನ ಪ್ರಶ್ನೆಗಳು]
a “ರಾಮ್ಬಾಮ್” ಹೀಬ್ರೂ ಪ್ರಥಮಾಕ್ಷರಕವಾಗಿದೆ. ಅದು “ರ್ಯಾಬೈ ಮೋಸಸ್ ಬೆನ್ ಮೈಮಾನ್” ಎಂಬ ಪದಗಳ ಪ್ರಥಮ ಅಕ್ಷರಗಳಿಂದ ರೂಪಿಸಲ್ಪಟ್ಟ ಒಂದು ಹೆಸರಾಗಿದೆ.
b ಮಿಷ್ನಾ, ವಾಚಿಕ ಧರ್ಮಶಾಸ್ತ್ರವೆಂದು ಯೆಹೂದ್ಯರು ಪರಿಗಣಿಸುವ ವಿಷಯದ ಮೇಲೆ ಆಧರಿಸಿರುವ ರಬ್ಬಿ ಸಂಬಂಧಿತ ಟಿಪ್ಪಣಿಗಳ ಸಂಗ್ರಹವಾಗಿದೆ. ಟ್ಯಾಲ್ಮಡ್ನ ಆರಂಭವನ್ನು ರೂಪಿಸುತ್ತಾ, ಅದನ್ನು ಸಾ.ಶ. ಎರಡನೆಯ ಶತಮಾನದ ಕೊನೆಯ ಭಾಗದಲ್ಲಿ ಮತ್ತು ಮೂರನೆಯ ಶತಮಾನದ ಆದಿ ಭಾಗದಲ್ಲಿ ಬರೆಯಲಾಯಿತು. ಹೆಚ್ಚಿನ ಮಾಹಿತಿಗಾಗಿ, ವಾಟ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್ ಇವರಿಂದ ಪ್ರಕಾಶಿಸಲಾದ ವಿಲ್ ದೇರ್ ಎವರ್ ಬಿ ಎ ವರ್ಲ್ಡ್ ವಿತ್ಔಟ್ ವಾರ್? (ಇಂಗ್ಲಿಷ್ನಲ್ಲಿ) ಎಂಬ ಬ್ರೋಷರ್, ಪುಟ 10 ನೋಡಿರಿ.
c ಮಿಷ್ನೆ ಟೋರಾ ಎಂಬ ಹೆಸರು, ಧರ್ಮೋಪದೇಶಕಾಂಡ 17:18 ರಿಂದ ತೆಗೆಯಲ್ಪಟ್ಟ ಹೀಬ್ರೂ ಪದವಾಗಿದೆ. ಅದರ ಅರ್ಥ, ಧರ್ಮಶಾಸ್ತ್ರದ ಒಂದು ಪ್ರತಿ ಅಥವಾ ಪುನರಾವೃತ್ತಿ ಎಂದಾಗಿದೆ.
d ವಾಗ್ದತ್ತ ಮೆಸ್ಸೀಯನೋಪಾದಿ ಯೇಸುವಿನ ಕುರಿತಾದ ಸಾಕ್ಷ್ಯದ ಹೆಚ್ಚಿನ ಮಾಹಿತಿಗಾಗಿ, ವಾಟ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್ ಇವರಿಂದ ಪ್ರಕಾಶಿಸಲಾದ ವಿಲ್ ದೇರ್ ಎವರ್ ಬಿ ಎ ವರ್ಲ್ಡ್ ವಿತ್ಔಟ್ ವಾರ್? ಎಂಬ ಬ್ರೋಷರ್, ಪುಟಗಳು 24-30 ನೋಡಿರಿ.
[ಪುಟ 23 ರಲ್ಲಿರುವ ಚೌಕ]
ಮೈಮಾನಡೀಜ್ನ ನಂಬಿಕೆಯ 13 ಮೂಲ ಸೂತ್ರಗಳುe
1. ದೇವರು ಎಲ್ಲ ವಿಷಯಗಳ ಸೃಷ್ಟಿಕರ್ತನೂ ಅರಸನೂ ಆಗಿದ್ದಾನೆ. ಆತನೊಬ್ಬನೇ ಎಲ್ಲ ವಿಷಯಗಳನ್ನು ಮಾಡಿದ್ದಾನೆ, ಮಾಡುತ್ತಾನೆ, ಮತ್ತು ಮಾಡುವನು.
2. ದೇವರು ಒಬ್ಬನೇ. ಅವನ ಐಕ್ಯದಂತೆ ಇರುವ ಯಾವುದೇ ವಿಧದ ಐಕ್ಯವೂ ಇರುವುದಿಲ್ಲ.
3. ದೇವರಿಗೆ ಶರೀರವೊಂದು ಇರುವುದಿಲ್ಲ. ಭೌತಿಕ ಪರಿಕಲ್ಪನೆಗಳು ಆತನಿಗೆ ಅನ್ವಯಿಸುವುದಿಲ್ಲ.
4. ದೇವರು ಆದಿಯೂ ಅಂತ್ಯವೂ ಆಗಿದ್ದಾನೆ.
5. ದೇವರಿಗೆ ಮಾತ್ರ ಪ್ರಾರ್ಥಿಸುವುದು ಯೋಗ್ಯವಾಗಿದೆ. ಬೇರೆ ಯಾವುದೇ ವ್ಯಕ್ತಿಗಾಗಲಿ ವಸ್ತುವಿಗಾಗಲಿ ಒಬ್ಬನು ಪ್ರಾರ್ಥಿಸಬಾರದು.
6. ಪ್ರವಾದಿಗಳ ಎಲ್ಲ ಮಾತುಗಳು ಸತ್ಯ.
7. ಮೋಶೆಯ ಪ್ರವಾದನೆಯು ಖಂಡಿತವಾಗಿಯೂ ಸತ್ಯವಾಗಿದೆ. ಅವನು ತನ್ನ ಮುಂಚೆ ಮತ್ತು ಅನಂತರವಿದ್ದ ಎಲ್ಲ ಪ್ರವಾದಿಗಳಿಗೆ ಪ್ರಧಾನನಾಗಿದ್ದನು.
8. ನಮ್ಮಲ್ಲಿ ಈಗ ಇರುವ ಸಂಪೂರ್ಣ ಟೋರಾ, ಮೋಶೆಗೆ ಕೊಡಲ್ಪಟ್ಟ ಟೋರಾವಾಗಿದೆ.
9. ಟೋರಾ ಬದಲಾವಣೆ ಹೊಂದುವುದಿಲ್ಲ, ಮತ್ತು ದೇವರಿಂದ ಇನ್ನೊಂದು ಎಂದಿಗೂ ಕೊಡಲ್ಪಡುವುದಿಲ್ಲ.
10. ಮನುಷ್ಯನ ಎಲ್ಲ ಕೃತ್ಯಗಳ ಮತ್ತು ಆಲೋಚನೆಗಳ ಅರಿವು ದೇವರಿಗಿದೆ.
11. ತನ್ನ ಆಜ್ಞೆಗಳನುಸಾರ ನಡೆಯುವವರಿಗೆ ದೇವರು ಪ್ರತಿಫಲ ಕೊಡುತ್ತಾನೆ, ಮತ್ತು ಆತನ ವಿರುದ್ಧ ಪಾಪಮಾಡುವವರನ್ನು ದಂಡಿಸುತ್ತಾನೆ.
12. ಮೆಸ್ಸೀಯನು ಬರುವನು.
13. ಸತ್ತವರು ಜೀವಿತಕ್ಕೆ ಪುನಃ ತರಲ್ಪಡುವರು.
[ಅಧ್ಯಯನ ಪ್ರಶ್ನೆಗಳು]
e ತನ್ನ ಕಾಮೆಂಟರಿ ಆನ್ ದ ಮಿಷ್ನಾ, (ಸ್ಯಾನ್ಹೆಡ್ರಿನ್ 10:1) ಎಂಬ ಪುಸ್ತಕದಲ್ಲಿ ಮೈಮಾನಡೀಜ್ ಈ ತತ್ವಗಳನ್ನು ವಿಶದೀಕರಿಸಿದನು. ಅನಂತರ ಯೆಹೂದ್ಯಮತವು ಅವುಗಳನ್ನು ಅಧಿಕೃತ ಸೂತ್ರಗಳೋಪಾದಿ ಸ್ವೀಕರಿಸಿತು. ಮೇಲಿನ ಮೂಲಪಾಠವು, ಅವು ಯೆಹೂದಿ ಪ್ರಾರ್ಥನಾ ಪುಸ್ತಕದಲ್ಲಿ ಹೇಗೆ ತೋರಿಬರುತ್ತವೊ ಅದರಿಂದ ಸಂಕ್ಷೇಪಿಸಲ್ಪಟ್ಟಿವೆ.
[ಪುಟ 21 ರಲ್ಲಿರುವ ಚಿತ್ರ ಕೃಪೆ]
Jewish Division / The New York Public Library / Astor, Lenox, and Tilden Foundations