ನಾಕ್ಮನಡೀಸ್ ಅವನು ಕ್ರೈಸ್ತತ್ವವನ್ನು ತಪ್ಪೆಂದು ರುಜುಪಡಿಸಿದನೊ?
ಮಧ್ಯ ಯುಗಗಳು. ಅವು ಏನನ್ನು ಮನಸ್ಸಿಗೆ ತರುತ್ತವೆ? ಧಾರ್ಮಿಕ ಯುದ್ಧಗಳನ್ನೊ? ಮಠೀಯ ವಿಚಾರಣೆಗಳನ್ನೊ? ಚಿತ್ರಹಿಂಸೆಯನ್ನೊ? ಆ ಒಂದು ಕಾಲಾವಧಿಯು ಸಾಮಾನ್ಯವಾಗಿ ಬಿಚ್ಚುಮನಸ್ಸಿನ ಧಾರ್ಮಿಕ ಚರ್ಚೆಯೊಂದಿಗೆ ಸಂಬಂಧಿಸಿದ್ದಾಗಿರಲಿಲ್ಲವಾದರೂ, ಆ ಸಮಯದಲ್ಲಿ, 1263ನೆಯ ವರ್ಷದಲ್ಲಿ, ಐರೋಪ್ಯ ಇತಿಹಾಸದ ಯೆಹೂದ್ಯ-ಕ್ರೈಸ್ತ ವಾಗ್ವಾದಗಳಲ್ಲೇ ಅತ್ಯಂತ ಅಮೋಘವಾದ ಒಂದು ವಾಗ್ವಾದವು ಸಂಭವಿಸಿತು. ಅದರಲ್ಲಿ ಯಾರು ಒಳಗೂಡಿದ್ದರು? ಯಾವ ವಾದಾಂಶಗಳು ಎಬ್ಬಿಸಲ್ಪಟ್ಟವು? ಇಂದು ನಾವು ಸತ್ಯ ಧರ್ಮವನ್ನು ಗುರುತಿಸುವಂತೆ ಅದು ನಮಗೆ ಹೇಗೆ ಸಹಾಯ ಮಾಡಬಲ್ಲದು?
ಯಾವುದು ವಾಗ್ವಾದವನ್ನು ಹೊತ್ತಿಸಿತು?
ಮಧ್ಯ ಯುಗಗಳಾದ್ಯಂತ, ರೋಮನ್ ಕ್ಯಾಥೊಲಿಕ್ ಚರ್ಚು ತನ್ನನ್ನು ಸತ್ಯ ಧರ್ಮದೋಪಾದಿ ಪ್ರಸ್ತುತಪಡಿಸಿಕೊಂಡಿತು. ಆದಾಗಲೂ, ತಾವು ದೇವರಾದುಕೊಂಡ ಜನರಾಗಿದ್ದೇವೆಂಬ ಪ್ರತಿಪಾದನೆಯನ್ನು ಯೆಹೂದ್ಯರು ಎಂದೂ ತೊರೆದಿರಲಿಲ್ಲ. ಮತಾಂತರಹೊಂದಲಿಕ್ಕಾಗಿರುವ ಅಗತ್ಯವನ್ನು ಯೆಹೂದ್ಯರಿಗೆ ಮನಗಾಣಿಸುವ ಚರ್ಚಿನ ಅಸಾಮರ್ಥ್ಯವು, ಚರ್ಚಿನ ಆಶಾಭಂಗಕ್ಕೆ ಹಾಗೂ ಆಗಿಂದಾಗ್ಗೆ ಹಿಂಸಾಚಾರ ಮತ್ತು ಹಿಂಸೆಗೆ ನಡೆಸಿತು. ಧಾರ್ಮಿಕ ಯುದ್ಧಗಳ ಸಮಯದಲ್ಲಿ, ದೀಕ್ಷಾಸ್ನಾನ ಅಥವಾ ಮರಣದ ಆಯ್ಕೆಯು ಮುಂದಿಡಲ್ಪಟ್ಟಾಗ, ನೂರಾರು ಸಾವಿರ ಯೆಹೂದ್ಯರು ಸಾಮೂಹಿಕವಾಗಿ ಹತ್ಯೆಗೈಯಲ್ಪಟ್ಟರು ಅಥವಾ ಸುಡುಗಂಬದಲ್ಲಿ ಸುಡಲ್ಪಟ್ಟರು. ಅನೇಕ ದೇಶಗಳಲ್ಲಿ ಚರ್ಚಿನಿಂದ ಪ್ರೇರಿತವಾದ ಯೆಹೂದಿ ದ್ವೇಷವು ಪ್ರಚಲಿತವಾಗಿತ್ತು.
ಆದರೂ, 12ನೆಯ ಹಾಗೂ 13ನೆಯ ಶತಮಾನಗಳ ಕ್ಯಾಥೊಲಿಕ್ ಸ್ಪೆಯ್ನ್ನಲ್ಲಿ ಭಿನ್ನ ರೀತಿಯ ಮನೋವೃತ್ತಿಯು ಚಾಲ್ತಿಯಲ್ಲಿತ್ತು. ಯೆಹೂದ್ಯರು ಕ್ರೈಸ್ತ ನಂಬಿಕೆಯ ಮೇಲೆ ಆಕ್ರಮಣ ಮಾಡದಿರುವಷ್ಟು ಸಮಯದ ವರೆಗೆ, ಅವರಿಗೆ ಧಾರ್ಮಿಕ ಸ್ವಾತಂತ್ರ್ಯವು ಕೊಡಲ್ಪಟ್ಟಿತ್ತು ಮತ್ತು ರಾಜನ ಆಸ್ಥಾನದಲ್ಲಿ ಅವರಿಗೆ ಪ್ರಧಾನ ಸ್ಥಾನಗಳೂ ಕೊಡಲ್ಪಟ್ಟಿದ್ದವು. ಆದರೆ ಅಂತಹ ಅನುಗ್ರಹದ ಒಂದು ಶತಮಾನವು ಕಳೆದ ಬಳಿಕ, ಡಾಮಿನಿಕ್ ಪಂಥದ ಪಾದ್ರಿಗಳು, ಸಮಾಜದಲ್ಲಿ ಯೆಹೂದಿ ಪ್ರಭಾವವನ್ನು ಕಡಿಮೆಗೊಳಿಸಿ, ಯೆಹೂದ್ಯರನ್ನು ಕ್ಯಾಥೊಲಿಕ್ಮತಕ್ಕೆ ಮತಾಂತರಿಸಲು ಕ್ರಮಗಳನ್ನು ಕೈಕೊಂಡರು. ಡಾಮಿನಿಕ್ ಪಂಥದವರು, ಒಂದು ಅಧಿಕೃತ ವಾಗ್ವಾದಕ್ಕಾಗಿ ಏರ್ಪಾಡನ್ನು ಮಾಡುವಂತೆ ಆರಗಾನ್ನ ರಾಜನಾದ Iನೆಯ ಜೇಮ್ಸ್ನನ್ನು ಒತ್ತಾಯಿಸಿದರು. ಯೆಹೂದಿ ಧರ್ಮದ ಕೀಳುಮಟ್ಟವನ್ನೂ ಎಲ್ಲಾ ಯೆಹೂದ್ಯರು ಮತಾಂತರಹೊಂದುವ ಅಗತ್ಯವನ್ನೂ ರುಜುಪಡಿಸುವುದೇ ಇದರ ಉದ್ದೇಶವಾಗಿತ್ತು.
ಇದು ಪ್ರಪ್ರಥಮ ಯೆಹೂದ್ಯ-ಕ್ರೈಸ್ತ ವಾಗ್ವಾದವಾಗಿರಲಿಲ್ಲ. 1240ನೆಯ ವರ್ಷದಲ್ಲಿ, ಒಂದು ಅಧಿಕೃತ ವಾಗ್ವಾದವು ಫ್ರಾನ್ಸಿನ ಪ್ಯಾರಿಸ್ನಲ್ಲಿ ನಡೆಸಲ್ಪಟ್ಟಿತು. ಅದರ ಪ್ರಮುಖ ಉದ್ದೇಶವು, ಯೆಹೂದ್ಯರಿಗೆ ಪವಿತ್ರವಾಗಿದ್ದ ಒಂದು ಪುಸ್ತಕವಾದ ಟ್ಯಾಲ್ಮುಡನ್ನು ವಿಚಾರಣೆಗೆ ಒಳಪಡಿಸುವುದೇ ಆಗಿತ್ತು. ಆದಾಗ್ಯೂ, ಅದರಲ್ಲಿ ಭಾಗವಹಿಸಿದ ಯೆಹೂದ್ಯರಿಗೆ ಕೊಂಚವೇ ವಾಕ್ಸ್ವಾತಂತ್ರ್ಯವು ಕೊಡಲ್ಪಟ್ಟಿತು. ಈ ವಾಗ್ವಾದದಲ್ಲಿ ಚರ್ಚು ತನ್ನ ವಿಜಯವನ್ನು ಘೋಷಿಸಿದ ಬಳಿಕ, ಸಾರ್ವಜನಿಕ ಚೌಕಗಳಲ್ಲಿ ಟ್ಯಾಲ್ಮುಡ್ನ ಪ್ರತಿಗಳು ಹೆಚ್ಚಿನ ಪ್ರಮಾಣಗಳಲ್ಲಿ ಸುಡಲ್ಪಟ್ಟವು.
ಆದರೆ ಆರಗಾನ್ನ ರಾಜನಾದ Iನೆಯ ಜೇಮ್ಸನ ಹೆಚ್ಚು ಸಹನಶೀಲ ಮನೋವೃತ್ತಿಯು, ಅಂತಹ ಅಣಕದ ವಿಚಾರಣೆಗೆ ಆಸ್ಪದಕೊಡಲಿಲ್ಲ. ಇದನ್ನು ಗ್ರಹಿಸಿದವರಾಗಿ, ಡಾಮಿನಿಕ್ ಪಂಥದವರು ಒಂದು ಭಿನ್ನ ಮಾರ್ಗವನ್ನು ಪ್ರಯತ್ನಿಸಿದರು. ಕೈಯಾಮ್ ಮಾಕೋಬೀಯು ಯೆಹೂದ್ಯಮತದ ನ್ಯಾಯವಿಚಾರಣೆ (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ ವರ್ಣಿಸಿರುವಂತೆ, ಡಾಮಿನಿಕ್ ಪಂಥದವರು ಯೆಹೂದ್ಯರನ್ನು, “ಪ್ಯಾರಿಸಿನಲ್ಲಿ ಮಾಡಿದಂತೆ ದೂಷಣೆಮಾಡುವ ಬದಲಿಗೆ, ಸೌಜನ್ಯ ಹಾಗೂ ದೃಢನಂಬಿಕೆಯ ಸೋಗಿನಲ್ಲಿ” ವಾಗ್ವಾದಮಾಡುವಂತೆ ಕರೆಕೊಟ್ಟರು. ಡಾಮಿನಿಕ್ ಪಂಥದವರು, ಪಾಬ್ಲೋ ಕ್ರೀಸ್ಟಿಯಾನೀಯನ್ನು ತಮ್ಮ ಪ್ರಮುಖ ಪ್ರತಿನಿಧಿಯಾಗಿ ನೇಮಿಸಿದರು. ಅವನು ಕ್ಯಾಥೊಲಿಕ್ಮತಕ್ಕೆ ಮತಾಂತರಗೊಂಡಿದ್ದು, ಡಾಮಿನಿಕ್ ಪಂಥದ ಒಬ್ಬ ಪಾದ್ರಿಯಾಗಿ ಪರಿಣಮಿಸಿದ್ದ ಯೆಹೂದ್ಯನಾಗಿದ್ದನು. ಟ್ಯಾಲ್ಮುಡ್ಸಂಬಂಧಿತವಾದ ಹಾಗೂ ರಬ್ಬಿಸಂಬಂಧಿತವಾದ ಬರಹಗಳ ಕುರಿತಾದ ಪಾಬ್ಲೋ ಕ್ರೀಸ್ಟಿಯಾನೀಯ ಜ್ಞಾನವನ್ನು ಉಪಯೋಗಿಸುವ ಮೂಲಕ, ಡಾಮಿನಿಕ್ ಪಂಥದವರು ತಾವು ತಮ್ಮ ವಾದವನ್ನು ರುಜುಪಡಿಸಲು ಸಾಧ್ಯವಿದೆ ಎಂಬ ನಿಶ್ಚಿತಾಭಿಪ್ರಾಯದಿಂದಿದ್ದರು.
ನಾಕ್ಮನಡೀಸನನ್ನೇ ಏಕೆ ಆಯ್ಕೆಮಾಡಲಾಯಿತು?
ಸ್ಪೆಯ್ನಿನಲ್ಲಿ ಒಬ್ಬನೇ ಒಬ್ಬ ಗಣ್ಯ ಪುರುಷನು, ವಾಗ್ವಾದದ ಯೆಹೂದಿ ಪಕ್ಷವನ್ನು ಪ್ರತಿನಿಧಿಸುವಷ್ಟು ಆತ್ಮಿಕ ವ್ಯಕ್ತಿತ್ವವಿದ್ದವನಾಗಿದ್ದನು—ಅವನೇ ಮೋಸೆಸ್ ಬೆನ್ ನಾಕ್ಮಾನ್, ಅಥವಾ ನಾಕ್ಮನಡೀಸ್.a ಹೆರೋನ ನಗರದಲ್ಲಿ ಸುಮಾರು 1194ರಲ್ಲಿ ಜನಿಸಿದವನಾಗಿದ್ದು, ನಾಕ್ಮನಡೀಸನು ಹದಿಪ್ರಾಯದವನಾಗಿದ್ದಾಗಲೇ, ತನ್ನನ್ನು ಒಬ್ಬ ಬೈಬಲ್ಸಂಬಂಧಿತ ಹಾಗೂ ಟ್ಯಾಲ್ಮುಡ್ಸಂಬಂಧಿತ ವಿದ್ವಾಂಸನನ್ನಾಗಿ ತೋರ್ಪಡಿಸಿಕೊಂಡಿದ್ದನು. 30ರ ಪ್ರಾಯದಷ್ಟಕ್ಕೆ ಅವನು, ಟ್ಯಾಲ್ಮುಡ್ನ ಹೆಚ್ಚಿನ ಭಾಗದ ಕುರಿತು ವ್ಯಾಖ್ಯಾನಗಳನ್ನು ಬರೆದಿದ್ದನು, ಮತ್ತು ತದನಂತರ ಯೆಹೂದಿ ಸಮುದಾಯವನ್ನು ವಿಭಾಗಿಸುವ ಬೆದರಿಕೆಯನ್ನುಂಟುಮಾಡಿದ, ಮೈಮಾನಡೀಸ್ನ ಬರಹಗಳ ವಾದವಿವಾದದ ಮಧ್ಯಸ್ಥಿಕೆವಹಿಸುವುದರಲ್ಲಿ ಅವನು ಅಗ್ರಗಣ್ಯ ವದನಕನಾಗಿದ್ದನು.b ನಾಕ್ಮನಡೀಸನು, ತನ್ನ ಸಂತತಿಯ ಅತ್ಯಂತ ದೊಡ್ಡ ಯೆಹೂದಿ ಬೈಬಲ್ಸಂಬಂಧಿತ ಹಾಗೂ ಟ್ಯಾಲ್ಮುಡ್ಸಂಬಂಧಿತ ವಿದ್ವಾಂಸನಾಗಿ ಪರಿಗಣಿಸಲ್ಪಟ್ಟಿದ್ದಾನೆ. ಮತ್ತು ಆ ಸಮಯದಲ್ಲಿ ಯೆಹೂದ್ಯಮತದ ಮೇಲಿನ ತನ್ನ ಪ್ರಭಾವದಲ್ಲಿ ಅವನು ಮೈಮಾನಡೀಸನಿಗೆ ಬಹುಶಃ ಎರಡನೆಯ ಸ್ಥಾನದಲ್ಲಿದ್ದನು.
ಕ್ಯಾಟಲೋನಿಯದಲ್ಲಿನ ಯೆಹೂದಿ ಸಮುದಾಯದ ಮೇಲೆ ನಾಕ್ಮನಡೀಸನು ವ್ಯಾಪಕವಾದ ಪ್ರಭಾವವನ್ನು ಬೀರಿದನು. ಮತ್ತು ಸರಕಾರದ ವಿವಿಧ ವಿಷಯಗಳ ಕುರಿತಾಗಿ ತಿಳಿದುಕೊಳ್ಳಲು, ರಾಜನಾದ Iನೆಯ ಜೇಮ್ಸ್ ಸಹ ಅವನನ್ನು ಸಂಪರ್ಕಿಸಿದನು. ಅವನ ತೀಕ್ಷ್ಣವಾದ ಯೋಚನಾ ಸಾಮರ್ಥ್ಯಗಳು, ಏಕಪ್ರಕಾರವಾಗಿ ಯೆಹೂದ್ಯರಿಂದಲೂ ಯೆಹೂದ್ಯೇತರರಿಂದಲೂ ಗೌರವಿಸಲ್ಪಟ್ಟವು. ಯೆಹೂದ್ಯರನ್ನು ಪರಿಣಾಮಕಾರಿಯಾದ ರೀತಿಯಲ್ಲಿ ಅಪಮಾನಿಸಲಿಕ್ಕಾಗಿ, ಅವರ ಅಗ್ರಗಣ್ಯ ರಬ್ಬಿಯಾದ ಅವನೇ ವಾದಿಯಾಗಿರಬೇಕೆಂದು ಡಾಮಿನಿಕ್ ಪಂಥದವರು ಗ್ರಹಿಸಿದರು.
ಡಾಮಿನಿಕ್ ಪಂಥದವರು ಒಂದು ಒಳ್ಳೆಯ ವಿಚಾರವಿನಿಮಯ ಮಾಡಿಕೊಳ್ಳುವ ಉದ್ದೇಶವನ್ನು ಹೊಂದಿರಲಿಲ್ಲ ಎಂಬುದನ್ನು ಅರ್ಥಮಾಡಿಕೊಂಡವನಾಗಿದ್ದು, ಆ ವಾಗ್ವಾದಕ್ಕೆ ಒಪ್ಪಿಕೊಳ್ಳಲು ನಾಕ್ಮನಡೀಸನಿಗೆ ಮನಸ್ಸಿರಲಿಲ್ಲ. ಅವನು ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತಾದರೂ, ಯಾವುದೇ ಪ್ರಶ್ನೆಯನ್ನು ಕೇಳಸಾಧ್ಯವಿರಲಿಲ್ಲ. ಆದರೂ, ತನ್ನ ಪ್ರತ್ಯುತ್ತರಗಳನ್ನು ಕೊಡುವುದರಲ್ಲಿ ತನಗೆ ಸ್ವತಂತ್ರವಾಗಿ ಮಾತಾಡುವ ಅನುಮತಿಯು ಕೊಡಲ್ಪಡಬೇಕೆಂದು ಕೇಳಿಕೊಳ್ಳುತ್ತಾ, ಅವನು ರಾಜನ ಕೋರಿಕೆಗೆ ಸಮ್ಮತಿಸಿದನು. ರಾಜನಾದ Iನೆಯ ಜೇಮ್ಸ್ ಇದಕ್ಕೆ ಒಪ್ಪಿದನು. ಸಂಬಂಧಸೂಚಕವಾದ ವಾಕ್ಸ್ವಾತಂತ್ರ್ಯಕ್ಕಾಗಿ ಕೊಡಲ್ಪಟ್ಟ ಅಂತಹ ಅನುಮತಿಯು, ಹಿಂದೆಂದೂ ಸಂಭವಿಸಿರಲಿಲ್ಲ ಮತ್ತು ಮಧ್ಯ ಯುಗಗಳಾದ್ಯಂತ ಪುನಃ ಎಂದೂ ಸಂಭವಿಸಸಾಧ್ಯವಿರಲಿಲ್ಲ. ಇದು ನಾಕ್ಮನಡೀಸನ ಕಡೆಗೆ ರಾಜನಿಗಿದ್ದ ಅಭಿಮಾನದ ಸ್ಪಷ್ಟವಾದ ಪುರಾವೆಯಾಗಿದೆ. ಆದರೂ, ನಾಕ್ಮನಡೀಸನು ಆತಂಕಗೊಂಡಿದ್ದನು. ಈ ವಾಗ್ವಾದದಲ್ಲಿ ಅವನು ವಿಪರೀತ ವಿರೋಧಕನೆಂದು ಪರಿಗಣಿಸಲ್ಪಟ್ಟರೆ, ಅವನಿಗೂ ಯೆಹೂದಿ ಸಮುದಾಯಕ್ಕೂ ವಿಪತ್ಕಾರಕ ಪರಿಣಾಮವು ಕಾದಿರಸಾಧ್ಯವಿತ್ತು. ಯಾವುದೇ ಸಮಯದಲ್ಲಿ ಹಿಂಸಾಚಾರವು ತಲೆದೋರಸಾಧ್ಯವಿತ್ತು.
ಪಾಬ್ಲೋ ಕ್ರೀಸ್ಟಿಯಾನೀಗೆ ಪ್ರತಿಯಾಗಿ ನಾಕ್ಮನಡೀಸನು
ವಾಗ್ವಾದಕ್ಕಾಗಿದ್ದ ಪ್ರಮುಖ ಸನ್ನಿವೇಶ (ಸೆಟ್ಟಿಂಗ್)ವು, ಬಾರ್ಸೆಲೋನದಲ್ಲಿದ್ದ ರಾಜನ ಅರಮನೆಯಾಗಿತ್ತು. ನಾಲ್ಕು ಅಧಿವೇಶನಗಳು ನಡೆಸಲ್ಪಟ್ಟವು—1263ರ ಜುಲೈ 20, 23, 26, ಹಾಗೂ 27. ವೈಯಕ್ತಿಕವಾಗಿ ರಾಜನೇ ಪ್ರತಿಯೊಂದು ಅಧಿವೇಶನದ ಅಧ್ಯಕ್ಷತೆ ವಹಿಸಿದನು, ಮತ್ತು ಚರ್ಚಿನ ಹಾಗೂ ಸರಕಾರದ ಬೇರೆ ಬೇರೆ ಪ್ರತಿಷ್ಠಿತ ವ್ಯಕ್ತಿಗಳೂ ಸ್ಥಳಿಕ ಸಮುದಾಯದ ಯೆಹೂದ್ಯರೂ ಅದಕ್ಕೆ ಹಾಜರಾದರು.
ಚರ್ಚಿಗಾದರೋ ವಾಗ್ವಾದದ ಪರಿಣಾಮವು ನಿಶ್ಚಿತವಾಗಿತ್ತು. ತಮ್ಮ ಅಧಿಕೃತ ವೃತ್ತಾಂತದಲ್ಲಿ ಡಾಮಿನಿಕ್ ಪಂಥದವರು ಹೇಳಿದ್ದೇನೆಂದರೆ, ಈ ವಾಗ್ವಾದದ ಉದ್ದೇಶವು, ‘ನಂಬಿಕೆಯು ಸಂಶಯಾಸ್ಪದವಾದ ವಿಷಯವೋ ಎಂಬಂತೆ ಅದನ್ನು ವಾಗ್ವಾದಕ್ಕೆ ಒಡ್ಡುವುದಾಗಿರಲಿಲ್ಲ ಬದಲಾಗಿ ಯೆಹೂದ್ಯರ ಲೋಪದೋಷಗಳನ್ನು ನಾಶಪಡಿಸಿ, ಅನೇಕ ಯೆಹೂದ್ಯರ ದೃಢ ನಂಬಿಕೆಯನ್ನು ಇಲ್ಲವಾಗಿಸುವುದೇ’ ಆಗಿತ್ತು.
ಬಹುಮಟ್ಟಿಗೆ 70 ವರ್ಷ ಪ್ರಾಯದವನಾಗಿದ್ದರೂ, ಆ ಚರ್ಚೆಯನ್ನು ಮೂಲಭೂತ ವಾದಾಂಶಗಳಿಗೆ ಮಾತ್ರವೇ ಸೀಮಿತಗೊಳಿಸಲು ಪ್ರಯತ್ನಿಸುವ ಮೂಲಕ, ನಾಕ್ಮನಡೀಸನು ತನ್ನ ತೀಕ್ಷ್ಣವಾದ ಯೋಚನಾ ಸಾಮರ್ಥ್ಯವನ್ನು ತೋರಿಸಿಕೊಟ್ಟನು. ಅವನು ಹೀಗೆ ಹೇಳುವ ಮೂಲಕ ಆರಂಭಿಸಿದನು: “ಯೆಹೂದ್ಯೇತರರು ಹಾಗೂ ಯೆಹೂದ್ಯರ ನಡುವಿನ [ಮುಂಚಿನ] ವಾದವಿವಾದಗಳು, ಯಾವುದರ ಮೇಲೆ ನಂಬಿಕೆಯ ಮೂಲಭೂತ ತತ್ವವು ಅವಲಂಬಿಸಿರುವುದಿಲ್ಲವೋ ಆ ಧಾರ್ಮಿಕ ಮತಸಂಸ್ಕಾರಗಳ ಅನೇಕ ಅಂಶಗಳ ಕುರಿತಾಗಿದ್ದವು. ಆದರೂ, ರಾಜನ ಈ ಆಸ್ಥಾನದಲ್ಲಿ, ಇಡೀ ವಿವಾದವು ಅವಲಂಬಿಸಿರುವ ವಿಷಯಗಳ ಕುರಿತಾಗಿ ಮಾತ್ರವೇ ನಾನು ವಾಗ್ವಾದಿಸಲು ಬಯಸುತ್ತೇನೆ.” ಆಗ, ಮೆಸ್ಸೀಯನು ಈಗಾಗಲೇ ಬಂದಿದ್ದನೋ ಇಲ್ಲವೋ, ಅವನು ದೇವರಾಗಿದ್ದನೊ ಅಥವಾ ಮನುಷ್ಯನಾಗಿದ್ದನೊ, ಹಾಗೂ ಸತ್ಯ ನಿಯಮವು ಯೆಹೂದ್ಯರಲ್ಲಿದೆಯೊ ಅಥವಾ ಕ್ರೈಸ್ತರಲ್ಲಿದೆಯೊ ಎಂಬ ವಿಷಯಗಳಿಗೆ ಮಾತ್ರ ವಾಗ್ವಾದವು ಸೀಮಿತಗೊಳಿಸಲ್ಪಡುವುದೆಂದು ಒಪ್ಪಿಕೊಳ್ಳಲಾಯಿತು.
ತನ್ನ ಆರಂಭದ ವಾದದಲ್ಲಿ, ಮೆಸ್ಸೀಯನು ಈಗಾಗಲೇ ಬಂದಿದ್ದನೆಂಬುದನ್ನು ತಾನು ಟ್ಯಾಲ್ಮುಡ್ನಿಂದಲೇ ರುಜುಪಡಿಸುತ್ತೇನೆಂದು ಪಾಬ್ಲೋ ಕ್ರೀಸ್ಟಿಯಾನೀ ಘೋಷಿಸಿದನು. ಇದು ಸತ್ಯವಾಗಿರುತ್ತಿದ್ದಲ್ಲಿ, ಟ್ಯಾಲ್ಮುಡನ್ನು ಅಂಗೀಕರಿಸಿದ ರಬ್ಬಿಗಳು ಯೇಸುವನ್ನು ಏಕೆ ಅಂಗೀಕರಿಸಲಿಲ್ಲ ಎಂದು ನಾಕ್ಮನಡೀಸ್ ಮರುಪ್ರಶ್ನೆ ಹಾಕಿದನು. ಸ್ಪಷ್ಟವಾದ ಶಾಸ್ತ್ರೀಯ ತರ್ಕದ ಮೇಲೆ ತನ್ನ ವಾದವನ್ನು ಕೇಂದ್ರೀಕರಿಸುವುದಕ್ಕೆ ಬದಲಾಗಿ, ತನ್ನ ವಾದಗಳನ್ನು ದೃಢಪಡಿಸಲಿಕ್ಕಾಗಿ ಕ್ರೀಸ್ಟಿಯಾನೀ ಆಗಿಂದಾಗ್ಗೆ ಅಸ್ಪಷ್ಟವಾದ ರಬ್ಬಿಸಂಬಂಧಿತ ಭಾಗಗಳಿಗೆ ನಿರ್ದೇಶಿಸಿದನು. ಆ ರಬ್ಬಿಸಂಬಂಧಿತ ಭಾಗಗಳು, ಪೂರ್ವಾಪರವಚನಗಳಿಗೆ ಹೊಂದಿಕೆಯಿಲ್ಲದೆ ಉಲ್ಲೇಖಿಸಲ್ಪಟ್ಟಿವೆ ಎಂದು ತೋರಿಸುವ ಮೂಲಕ, ಆ ವಾದಗಳು ತಪ್ಪೆಂಬುದನ್ನು ನಾಕ್ಮನಡೀಸನು ಒಂದೊಂದಾಗಿ ರುಜುಪಡಿಸಿದನು. ನಾಕ್ಮನಡೀಸನು ತನ್ನ ಜೀವನಾವಧಿಯನ್ನು ಅಧ್ಯಯನಕ್ಕಾಗಿ ಮೀಸಲಾಗಿಟ್ಟಿದ್ದರಿಂದ, ಈ ಬರಹಗಳ ವಿಷಯದಲ್ಲಿ ವಾಗ್ವಾದಮಾಡುವುದರಲ್ಲಿ ತನ್ನನ್ನು ಹೆಚ್ಚು ಸಮರ್ಥನನ್ನಾಗಿ ಗುರುತಿಸಿಕೊಳ್ಳಸಾಧ್ಯವಿದ್ದದ್ದು ಸಮಂಜಸವಾದದ್ದಾಗಿತ್ತು. ಕ್ರೀಸ್ಟಿಯಾನೀ ಶಾಸ್ತ್ರಕ್ಕೆ ನಿರ್ದೇಶಿಸಿದಾಗಲೂ, ಅವನ ವಾದಸರಣಿಯು ತಪ್ಪೆಂದು ಸುಲಭವಾಗಿ ರುಜುಪಡಿಸಶಕ್ತವಾಗಿದ್ದ ಅಂಶಗಳನ್ನೇ ಎತ್ತಿತೋರಿಸಿತು.
ಪ್ರಶ್ನೆಗಳಿಗೆ ಉತ್ತರಿಸುವಂತೆ ನಿರ್ಬಂಧಿಸಲ್ಪಟ್ಟಿದ್ದಾಗ್ಯೂ, ನಾಕ್ಮನಡೀಸನು ಪ್ರಬಲವಾದ ವಾದಸರಣಿಯನ್ನು ಪ್ರಸ್ತುತಪಡಿಸಲು ಶಕ್ತನಾಗಿದ್ದನು. ಇದು, ಕ್ಯಾಥೊಲಿಕ್ ಚರ್ಚಿನ ಸ್ಥಾನವು, ಯೆಹೂದ್ಯರಿಗೂ ವಿವೇಚನಾಶೀಲರಾದ ಇತರ ಜನರಿಗೂ ಅನಂಗೀಕೃತವಾಗಿದ್ದುದಕ್ಕೆ ಕಾರಣವೇನೆಂಬುದನ್ನು ತೋರಿಸಿತು. ತ್ರಯೈಕ್ಯ ಸಿದ್ಧಾಂತದ ಕುರಿತಾಗಿ ಅವನು ಪ್ರಕಟಿಸಿದ್ದು: “ಯಾವನೇ ಯೆಹೂದ್ಯನ ಅಥವಾ ಯಾವುದೇ ಮನುಷ್ಯನ ಮನಸ್ಸು, ಭೂಪರಲೋಕಗಳ ಸೃಷ್ಟಿಕರ್ತನು . . . ಒಬ್ಬ ಯೆಹೂದಿ ಸ್ತ್ರೀಯ ಗರ್ಭದಲ್ಲಿ ಜನಿಸಿ, . . . ತದನಂತರ ತನ್ನನ್ನು ಕೊಂದಂತಹ . . . ತನ್ನ ವೈರಿಗಳ ವಶಕ್ಕೆ ಸಿಕ್ಕಿಕೊಳ್ಳ[ಸಾಧ್ಯವಿತ್ತು] ಎಂಬುದನ್ನು ನಂಬುವಂತೆ ಅವನನ್ನು ಅನುಮತಿಸುವುದಿಲ್ಲ.” ನಾಕ್ಮನಡೀಸನು ಸಂಕ್ಷೇಪವಾಗಿ ಹೇಳಿದ್ದು: “ನೀವು ನಂಬುವ—ಮತ್ತು ಇದು ನಿಮ್ಮ ನಂಬಿಕೆಗೆ ತಳಹದಿಯಾಗಿದೆ—ವಿಷಯವು, [ವಿಚಾರಶಕ್ತಿಯುಳ್ಳ] ಮನಸ್ಸಿಗೆ ಹಿಡಿಸುವಂತಹದ್ದಾಗಿರುವುದಿಲ್ಲ.”
ಈ ದಿನದ ತನಕವೂ, ಯೇಸು ಮೆಸ್ಸೀಯನಾಗಿರುವುದರ ಸಂಭವನೀಯತೆಯನ್ನು ಪರಿಗಣಿಸುವುದರಿಂದ ಅನೇಕ ಯೆಹೂದ್ಯರನ್ನು ತಡೆದಿರುವ ಅಸಂಬದ್ಧತೆಯನ್ನು ಎತ್ತಿಹೇಳುತ್ತಾ, ನಾಕ್ಮನಡೀಸನು ಚರ್ಚಿನ ವಿಪರೀತವಾದ ರಕ್ತಾಪರಾಧವನ್ನು ಒತ್ತಿಹೇಳಿದನು. ಅವನು ಹೇಳಿದ್ದು: “ಮೆಸ್ಸೀಯನ ಸಮಯದಲ್ಲಿ, . . . ಅವರೋ ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ ಎಂದು ಪ್ರವಾದಿಯು ಹೇಳುತ್ತಾನೆ. ಆ ನಜರೇತಿನವನ ದಿನಗಳಿಂದ ಇಂದಿನ ವರೆಗೆ, ಇಡೀ ಭೂಮಿಯು ಹಿಂಸಾಚಾರ ಹಾಗೂ ಕಳ್ಳತನದಿಂದ ತುಂಬಿಹೋಗಿದೆ. [ವಾಸ್ತವವಾಗಿ], ಉಳಿದ ಜನಾಂಗಗಳಿಗಿಂತಲೂ ಕ್ರೈಸ್ತರು ಹೆಚ್ಚು ರಕ್ತವನ್ನು ಸುರಿಸುತ್ತಾರೆ, ಮತ್ತು ಅವರು ಅನೈತಿಕ ಜೀವಿತಗಳನ್ನೂ ನಡೆಸುತ್ತಾರೆ. ನನ್ನೊಡೆಯನಾದ ನಿನಗೆ, ಹಾಗೂ ಈ ನಿನ್ನ ವೀರ ಪುರುಷರಿಗೆ, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲವಾಗುವುದಾದರೆ, ಅದೆಷ್ಟು ಕಷ್ಟಕರವಾದದ್ದಾಗಿರಸಾಧ್ಯವಿದೆ!”—ಯೆಶಾಯ 2:4.
ನಾಲ್ಕನೆಯ ಅಧಿವೇಶನದ ಬಳಿಕ, ರಾಜನು ವಾಗ್ವಾದವನ್ನು ನಿಲ್ಲಿಸಿದನು. ಅವನು ನಾಕ್ಮನಡೀಸನಿಗೆ ಹೇಳಿದ್ದು: “ನೀನು ವಾಗ್ವಾದಮಾಡಿದಷ್ಟು ಹೆಚ್ಚು ವಿರೋಧಾತ್ಮಕವಾಗಿ ವಾಗ್ವಾದಮಾಡಿರುವ ಒಬ್ಬ ವ್ಯಕ್ತಿಯನ್ನು ನಾನು ನೋಡೇ ಇಲ್ಲ.” ತಾನು ಕೊಟ್ಟ ಮಾತಿಗನುಸಾರವಾಗಿ, ಆರಗಾನ್ನ ರಾಜನಾದ Iನೆಯ ಜೇಮ್ಸ್ ನಾಕ್ಮನಡೀಸನಿಗೆ ವಾಕ್ಸ್ವಾತಂತ್ರ್ಯವನ್ನೂ ಸಂರಕ್ಷಣೆಯನ್ನೂ ಒದಗಿಸುವ ಖಾತ್ರಿಕೊಟ್ಟದ್ದಲ್ಲದೆ, 300 ದಿನಾರುಗಳ ಉಡುಗೊರೆಯೊಂದಿಗೆ ಅವನನ್ನು ಮನೆಗೆ ಕಳುಹಿಸಿದನು. ಹೆರೋನದ ಬಿಷಪನ ಕೋರಿಕೆಯ ಮೇರೆಗೆ, ನಾಕ್ಮನಡೀಸನು ಆ ವಾಗ್ವಾದದ ಲಿಖಿತ ದಾಖಲೆಯನ್ನು ಮಾಡಿದನು.
ನಿರ್ಣಾಯಕ ವಿಜಯವೊಂದನ್ನು ಘೋಷಿಸುವಾಗ, ಡಾಮಿನಿಕ್ ಪಂಥದವರು ಬಹಳವಾಗಿ ಕ್ಷೋಭೆಗೊಂಡಿದ್ದರು. ತದನಂತರ ಅವರು, ವಾಗ್ವಾದದ ಕುರಿತಾದ ಅವನ ಬರಹಗಳನ್ನು ಸಾಕ್ಷ್ಯವಾಗಿ ಉಪಯೋಗಿಸುತ್ತಾ, ನಾಕ್ಮನಡೀಸನು ಚರ್ಚಿನ ವಿರುದ್ಧ ದೇವದೂಷಣೆಗಳನ್ನು ಮಾಡಿದನೆಂದು ಅವನ ವಿರುದ್ಧ ಆರೋಪ ಹೊರಿಸಿದರು. ರಾಜನು ನಾಕ್ಮನಡೀಸನಿಗೆ ತೋರಿಸಿದ ಅನುಗ್ರಹದಿಂದ ಅಸಂತೃಪ್ತರಾಗಿದ್ದ ಡಾಮಿನಿಕ್ ಪಂಥದವರು, IVನೆಯ ಪೋಪ್ ಕ್ಲೆಮೆಂಟನಿಗೆ ಮನವಿ ಸಲ್ಲಿಸಿದರು. ನಾಕ್ಮನಡೀಸನು 70ಕ್ಕಿಂತಲೂ ಹೆಚ್ಚು ವರ್ಷ ಪ್ರಾಯದವನಾಗಿದ್ದರೂ, ಅವನನ್ನು ಸ್ಪೆಯ್ನಿನಿಂದ ಗಡೀಪಾರುಮಾಡಲಾಯಿತು.c
ಸತ್ಯವು ಎಲ್ಲಿ ಅಡಗಿದೆ?
ಎರಡು ಪಕ್ಷಗಳಲ್ಲಿ ಯಾವುದಾದರೂ ಒಂದು ಪಕ್ಷದ ವಾದವು, ಸತ್ಯ ಧರ್ಮವನ್ನು ಗುರುತಿಸಲು ಸಹಾಯ ಮಾಡಿತೊ? ಪ್ರತಿಯೊಂದು ಪಕ್ಷವು ಇನ್ನೊಂದು ಪಕ್ಷದ ಲೋಪದೋಷಗಳನ್ನು ಎತ್ತಿತೋರಿಸಿತೇ ಹೊರತು, ಯಾವ ಪಕ್ಷವೂ ಸತ್ಯದ ಸ್ಪಷ್ಟ ಸಂದೇಶವನ್ನು ಪ್ರಸ್ತುತಪಡಿಸಲಿಲ್ಲ. ನಾಕ್ಮನಡೀಸನು ಅಷ್ಟು ಜಾಣ್ಮೆಯಿಂದ ಯಾವುದನ್ನು ತಪ್ಪೆಂದು ರುಜುಪಡಿಸಿದನೋ ಅದು, ನಿಜ ಕ್ರೈಸ್ತತ್ವವಾಗಿರಲಿಲ್ಲ, ಬದಲಾಗಿ ಯೇಸುವಿನ ಬಳಿಕ ಶತಮಾನಗಳಾನಂತರದಲ್ಲಿ ಕ್ರೈಸ್ತಪ್ರಪಂಚದಿಂದ ಕಲ್ಪಿಸಲ್ಪಟ್ಟ ತ್ರಯೈಕ್ಯ ಬೋಧನೆಯಂತಹ ಮಾನವನಿರ್ಮಿತ ಸಿದ್ಧಾಂತವಾಗಿತ್ತು. ಕ್ರೈಸ್ತಪ್ರಪಂಚದ ಅನೈತಿಕ ನಡವಳಿಕೆ ಹಾಗೂ ಉದ್ದೇಶಪೂರ್ವಕ ರಕ್ತಪಾತವು ನಾಕ್ಮನಡೀಸನಿಂದ ಬಹಳಷ್ಟು ನಿರ್ಭೀತವಾಗಿ ಎತ್ತಿತೋರಿಸಲ್ಪಟ್ಟಿರುವುದು ಸಹ, ನಿರ್ವಿವಾದಾತ್ಮಕವಾದ ದಾಖಲಿತ ಇತಿಹಾಸವಾಗಿದೆ.
ಈ ಸನ್ನಿವೇಶಗಳ ಕೆಳಗೆ, ನಾಕ್ಮನಡೀಸನೂ ಇನ್ನಿತರ ಯೆಹೂದ್ಯರೂ ಕ್ರೈಸ್ತತ್ವದ ಪಕ್ಷದಲ್ಲಿದ್ದ ವಾದಗಳಿಂದ ಪ್ರಭಾವಿತರಾಗಲು ತಪ್ಪಿಹೋದದ್ದರ ಕಾರಣವನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿರುವುದಿಲ್ಲ. ಇದಕ್ಕೆ ಕೂಡಿಸಿ, ಪಾಬ್ಲೋ ಕ್ರೀಸ್ಟಿಯಾನೀಯ ವಾದಗಳು, ಹೀಬ್ರು ಶಾಸ್ತ್ರವಚನಗಳಿಂದ ತೆಗೆಯಲ್ಪಟ್ಟ ಸ್ಪಷ್ಟವಾದ ತರ್ಕದ ಮೇಲೆ ಆಧಾರಿತವಾಗಿರಲಿಲ್ಲ, ಬದಲಾಗಿ ರಬ್ಬಿಸಂಬಂಧಿತ ಬರಹಗಳ ದುರನ್ವಯದ ಮೇಲೆ ಆಧಾರಿತವಾಗಿದ್ದವು.
ವಾಸ್ತವವಾಗಿ ನಾಕ್ಮನಡೀಸನು ನಿಜ ಕ್ರೈಸ್ತತ್ವವನ್ನು ತಪ್ಪೆಂದು ರುಜುಪಡಿಸಲಿಲ್ಲ. ಅವನ ಸಮಯದಷ್ಟಕ್ಕೆ ಯೇಸುವಿನ ಬೋಧನೆಗಳ ನಿಜ ಬೆಳಕು ಹಾಗೂ ಅವನ ಮೆಸ್ಸೀಯತನದ ರುಜುವಾತುಗಳು, ಸುಳ್ಳು ಪ್ರತಿನಿಧಿಸುವಿಕೆಯಿಂದ ಅಸ್ಪಷ್ಟಗೊಳಿಸಲ್ಪಟ್ಟಿದ್ದವು. ಧರ್ಮಭ್ರಷ್ಟ ಬೋಧನೆಯ ಅಂತಹ ತೋರಿಬರುವಿಕೆಯು, ಯೇಸುವಿನಿಂದ ಹಾಗೂ ಅಪೊಸ್ತಲರಿಂದ ನಿಜವಾಗಿಯೂ ಪ್ರವಾದಿಸಲ್ಪಟ್ಟಿತ್ತು.—ಮತ್ತಾಯ 7:21-23; 13:24-30, 37-43; 1 ತಿಮೊಥೆಯ 4:1-3; 2 ಪೇತ್ರ 2:1, 2.
ಹಾಗಿದ್ದರೂ, ಇಂದು ಸತ್ಯ ಧರ್ಮವು ಸ್ಪಷ್ಟವಾಗಿ ಗುರುತಿಸಲ್ಪಡಶಕ್ತವಾಗಿದೆ. ತನ್ನ ನಿಜ ಹಿಂಬಾಲಕರ ಕುರಿತಾಗಿ ಯೇಸು ಹೇಳಿದ್ದು: “ಅವರ ಫಲಗಳಿಂದ ಅವರನ್ನು ತಿಳುಕೊಳ್ಳುವಿರಿ. . . . ಹಾಗೆಯೇ ಒಳ್ಳೇ ಮರಗಳೆಲ್ಲಾ ಒಳ್ಳೇ ಫಲವನ್ನು ಕೊಡುವವು; ಹುಳುಕು ಮರವು ಕೆಟ್ಟ ಫಲವನ್ನು ಕೊಡುವದು.” (ಮತ್ತಾಯ 7:16, 17) ಆ ಗುರುತಿಸುವಿಕೆಯನ್ನು ನೀವು ಮಾಡುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ. ಶಾಸ್ತ್ರೀಯ ರುಜುವಾತುಗಳ ವಾಸ್ತವಿಕ ಪರೀಕ್ಷೆಯನ್ನು ಕೈಕೊಳ್ಳುವಂತೆ ಯೆಹೋವನ ಸಾಕ್ಷಿಗಳು ನಿಮಗೆ ಸಹಾಯ ಮಾಡಲಿ. ಹೀಗೆ ನೀವು ಮೆಸ್ಸೀಯನಿಗೂ ಅವನ ಆಳ್ವಿಕೆಗೂ ಸಂಬಂಧಪಟ್ಟ ದೇವರ ಎಲ್ಲಾ ವಾಗ್ದಾನಗಳ ನಿಜ ಅರ್ಥವನ್ನು ಕಲಿಯುವಿರಿ.
[ಅಧ್ಯಯನ ಪ್ರಶ್ನೆಗಳು]
a ಅನೇಕ ಯೆಹೂದ್ಯರು ನಾಕ್ಮನಡೀಸನನ್ನು “ರಾಂಬಾನ್” ಎಂದು ಸೂಚಿಸುತ್ತಾರೆ. ಇದು “ರಬ್ಬಿ ಮೋಸೆಸ್ ಬೆನ್ ನಾಕ್ಮಾನ್” ಎಂಬ ಶಬ್ದದ ಮೊದಲ ಅಕ್ಷರಗಳಿಂದ ರೂಪಿತವಾದ ಒಂದು ಹೀಬ್ರು ಪ್ರಥಮಾಕ್ಷರಿಯಾಗಿದೆ.
b ಮಾರ್ಚ್ 1, 1995ರ ಕಾವಲಿನಬುರುಜು ಪತ್ರಿಕೆಯಲ್ಲಿ, 20-3ನೆಯ ಪುಟಗಳಲ್ಲಿರುವ, “ಮೈಮಾನಡೀಸ್—ಯೆಹೂದ್ಯಮತವನ್ನು ಪುನರ್ವಿಶದೀಕರಿಸಿದ ವ್ಯಕ್ತಿ” ಎಂಬ ಲೇಖನವನ್ನು ನೋಡಿರಿ.
c 1267ರಲ್ಲಿ, ಈಗ ಇಸ್ರೇಲ್ ಎಂಬುದಾಗಿ ಪ್ರಸಿದ್ಧವಾಗಿರುವ ದೇಶಕ್ಕೆ ನಾಕ್ಮನಡೀಸನು ಆಗಮಿಸಿದನು. ಅವನ ಅಂತಿಮ ವರ್ಷಗಳು ಸಾಧನೆಯಿಂದ ತುಂಬಿದ್ದವು. ಅವನು ಯೆರೂಸಲೇಮಿನಲ್ಲಿ ಯೆಹೂದ್ಯರ ನೆಲೆಯನ್ನು ಪುನಸ್ಸ್ಥಾಪಿಸಿ, ಅಧ್ಯಯನಕ್ಕಾಗಿ ಒಂದು ಕೇಂದ್ರವನ್ನೂ ಸ್ಥಾಪಿಸಿದನು. ಬೈಬಲಿನ ಮೊದಲ ಐದು ಪುಸ್ತಕಗಳಾದ ಟೋರಾದ ಮೇಲಿನ ಒಂದು ವ್ಯಾಖ್ಯಾನವನ್ನೂ ಅವನು ಪೂರ್ಣಗೊಳಿಸಿದನು, ಮತ್ತು ಆಕರ್ನ ಉತ್ತರಭಾಗದ ಕರಾವಳಿಯ ನಗರದಲ್ಲಿನ ಯೆಹೂದಿ ಸಮುದಾಯದ ಆತ್ಮಿಕ ಮುಖಂಡನಾಗಿ ಪರಿಣಮಿಸಿದನು. ಅಲ್ಲಿ ಅವನು 1270ರಲ್ಲಿ ಮರಣಹೊಂದಿದನು.
[ಪುಟ 20 ರಲ್ಲಿರುವ ಚಿತ್ರ]
ನಾಕ್ಮನಡೀಸ್ ತನ್ನ ವಾದವನ್ನು ಬಾರ್ಸೆಲೋನದಲ್ಲಿ ಮಂಡಿಸಿದನು
[ಪುಟ 19 ರಲ್ಲಿರುವ ಚಿತ್ರ ಕೃಪೆ]
ಪುಟಗಳು 19-20ರಲ್ಲಿರುವ ಚಿತ್ರಗಳು: Illustrite Pracht - Bible/Heilige Schrift des Alten und Neuen Testaments, nach der deutschen Uebersetzung D. Martin Luther’sನಿಂದ ಪುನರ್ಮುದ್ರಿತ