ಪಟ್ಟುಹಿಡಿಯುವಿಕೆಯು ಪ್ರಗತಿಗೆ ನಡಿಸುತ್ತದೆ
ಸೂಸೆ ಮ್ಯಾಗಾವ್ಲ್ಸ್ಕಿಯವರಿಂದ ಹೇಳಲ್ಪಟ್ಟಂತೆ
ಪೊಲೀಸನು ನನ್ನ ತೋಳನ್ನು ಬಿಗಿಹಿಡಿದಾಗ, ನಾನು ನನ್ನ ತಂದೆಗಾಗಿ ಹುಡುಕಿದೆ. ಆದರೆ, ನನಗೆ ತಿಳಿಯದೆಯೇ ಅವರನ್ನು ಈಗಾಗಲೇ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿತ್ತು. ನಾನು ಅಲ್ಲಿ ಆಗಮಿಸಿದಾಗ, ನಮ್ಮ ಬೈಬಲುಗಳನ್ನು ಒಳಗೂಡಿಸಿ, ಪೊಲೀಸರು ನಮ್ಮ ಎಲ್ಲಾ ಪ್ರಕಾಶನಗಳನ್ನು ಕಸಿದುಕೊಂಡು ನೆಲದ ಮೇಲೆ ರಾಶಿಹಾಕಿದರು. ಇದನ್ನು ನೋಡಿ, ನನ್ನ ತಂದೆ ಕೇಳಿದ್ದು: “ನೀವು ಬೈಬಲುಗಳನ್ನು ಸಹ ನೆಲದ ಮೇಲೆ ಹಾಕುತ್ತೀರೋ?” ಪೊಲೀಸರ ಮುಖ್ಯಸ್ಥನು ಕ್ಷಮೆಯಾಚಿಸಿದನು, ನಂತರ ಬೈಬಲುಗಳನ್ನು ಎತ್ತಿ ಮೇಜಿನ ಮೇಲೆ ಇಟ್ಟನು.
ನಾವು ಪೊಲೀಸ್ ಠಾಣೆಯನ್ನು ಹೇಗೆ ತಲಪಿದೆವು? ನಾವೇನನ್ನು ಮಾಡಿದ್ದೆವು? ನಮ್ಮ ಬೈಬಲುಗಳು ಸಹ ನಮ್ಮಿಂದ ಕಸಿದುಕೊಳ್ಳಲ್ಪಡಲು, ನಾವು ಪೊಲೀಸರಿಂದ ನಿಯಂತ್ರಿಸಲ್ಪಟ್ಟ ಒಂದು ನಾಸ್ತಿಕ ರಾಜ್ಯದಲ್ಲಿದ್ದೆವೋ? ಈ ಪ್ರಶ್ನೆಗಳನ್ನು ಉತ್ತರಿಸಲು, ನಾನು ಹುಟ್ಟುವದಕ್ಕೂ ಮುಂಚೆ, 1925ಕ್ಕೆ ನಾವು ಹಿಂದಕ್ಕೆ ಹೋಗಬೇಕಾಗುವುದು.
ಆ ವರ್ಷದಲ್ಲಿ ನನ್ನ ತಂದೆ ಎಸೆಫ್ಟಾನೊ ಮ್ಯಾಗಾವ್ಲ್ಸ್ಕಿ ಮತ್ತು ನನ್ನ ತಾಯಿ, ಸೂಲಿಯಾನಾ, ಆ ಸಮಯದಲ್ಲಿ ಯಾವುದು ಯೂಗೊಸ್ಲಾವಿಯಾವಾಗಿತ್ತೋ ಅದನ್ನು ಬಿಟ್ಟು ಬ್ರೆಸಿಲ್ಗೆ ಸ್ಥಳಾಂತರಿಸಿ, ಸೌವುನ್ ಪಾವೂದ್ಲಲ್ಲಿ ನೆಲೆಸಿದರು. ತಂದೆ ಒಬ್ಬ ಪ್ರಾಟೆಸ್ಟಂಟ್ ಮತ್ತು ತಾಯಿ ಒಬ್ಬ ಕ್ಯಾತೊಲಿಕರಾಗಿದ್ದರೂ, ಧರ್ಮವು ಅವರ ಮಧ್ಯೆ ಒಂದು ವಿಭಜಿಸುವ ಅಂಶವಾಗಿರಲಿಲ್ಲ. ವಾಸ್ತವದಲ್ಲಿ, ಹತ್ತು ವರ್ಷಗಳ ನಂತರ ಅವರನ್ನು ಧಾರ್ಮಿಕವಾಗಿ ಐಕ್ಯಗೂಡಿಸಿದ ಒಂದು ಸಂಗತಿಯು ನಡೆಯಿತು. ತಂದೆಯ ಮೈದುನನು ಹಂಗೇರಿಯನ್ ಭಾಷೆಯಲ್ಲಿ ಸತ್ತವರ ಪರಿಸ್ಥಿತಿಯನ್ನು ಚರ್ಚಿಸಿದ ಒಂದು ಪೂರ್ಣ ವರ್ಣದ ಪುಸ್ತಿಕೆಯನ್ನು ತಂದನು. ಆತನು ಪುಸ್ತಿಕೆಯನ್ನು ಒಂದು ಉಡುಗೊರೆಯಾಗಿ ಪಡೆದಿದ್ದನು, ಮತ್ತು ತಂದೆಯು ಅದನ್ನು ಓದುವಂತೆ, ಒಳವಿಷಯಗಳ ಮೇಲೆ, ವಿಶೇಷವಾಗಿ “ನರಕ”ದ ಮೇಲಿನ ವಿಷಯದ ಕುರಿತಾದ ತಮ್ಮ ಅಭಿಪ್ರಾಯವನ್ನು ಅವರು ಕೊಡುವಂತೆ ಕೇಳಿದರು. ತಂದೆಯವರು ಇಡೀ ರಾತ್ರಿ ಆ ಪುಸ್ತಿಕೆಯನ್ನು ಓದುವದರಲ್ಲಿ ಮತ್ತು ಪುನಃ ಓದುವದರಲ್ಲಿ ಕಳೆದರು, ಮತ್ತು ಮರುದಿನ, ಅವರ ಅಭಿಪ್ರಾಯಕ್ಕಾಗಿ ಅವರ ಮೈದುನನು ಬಂದಾಗ, ತಂದೆಯು ನಿರುಪಾಧಿಕವಾಗಿ ಘೋಷಿಸಿದ್ದು: “ಸತ್ಯವು ಇಲ್ಲಿದೆ!”
ಚಿಕ್ಕ ಆರಂಭಗಳು
ಪ್ರಕಾಶನವು ಯೆಹೋವನ ಸಾಕ್ಷಿಗಳದ್ದಾಗಿದುದರಿಂದ, ಅವರ ನಂಬಿಕೆಗಳ ಮತ್ತು ಬೋಧನೆಗಳ ಕುರಿತಾಗಿ ಹೆಚ್ಚನ್ನು ಕಲಿಯಲು ಇಬ್ಬರೂ ಅವರಿಗಾಗಿ ಹುಡುಕಿದರು. ಕೊನೆಗೆ ಸಂಪರ್ಕ ಮಾಡಲ್ಪಟ್ಟಾಗ, ನಮ್ಮ ಕುಟುಂಬದ ಅನೇಕ ಸದಸ್ಯರು ಸಾಕ್ಷಿಗಳೊಂದಿಗೆ ಬೈಬಲ್ ಚರ್ಚೆಗಳನ್ನು ಮಾಡಲು ಆರಂಭಿಸಿದರು. ಅದೇ ವರ್ಷದಲ್ಲಿ, 1935 ರಲ್ಲಿ ಸರಾಸರಿ ಎಂಟು ವ್ಯಕ್ತಿಗಳ ಹಾಜರಿಯೊಂದಿಗೆ, ಹಂಗೇರಿಯನ್ ಭಾಷೆಯಲ್ಲಿ ಒಂದು ಕ್ರಮದ ಬೈಬಲ್ ಅಭ್ಯಾಸವು ಆರಂಭಿಸಲ್ಪಟ್ಟಿತ್ತು, ಮತ್ತು ಅಂದಿನಿಂದ ನಮ್ಮ ಮನೆಯಲ್ಲಿ ಕ್ರಮವಾದ ಬೈಬಲ್ ಅಭ್ಯಾಸಗಳು ನಡೆದಿವೆ.
ಬೈಬಲನ್ನು ಎರಡು ವರ್ಷ ಅಭ್ಯಾಸಿಸಿದ ನಂತರ, ತಂದೆಯವರು 1937 ರಲ್ಲಿ ದೀಕ್ಷಾಸ್ನಾನ ಹೊಂದಿದರು ಮತ್ತು ಮನೆಮನೆಯ ಸಾರುವ ಕಾರ್ಯದಲ್ಲಿ ಭಾಗವಹಿಸುತ್ತಾ, ಒಬ್ಬ ನೇಮಿತ ಸೇವಕನು ಹಾಗೂ ಅಭ್ಯಾಸ ಚಾಲಕನಾಗಿ ಸೇವಿಸುತ್ತಾ, ಯೆಹೋವನ ಒಬ್ಬ ಉತ್ಸಾಹಿ ಸಾಕ್ಷಿಯಾದರು. ಸೌವುನ್ ಪಾವೂದ್ಲಲ್ಲಿ, ವಿಲಾ ಮಾರಿಯಾನಾದ ವಿಭಾಗದಲ್ಲಿ ಪ್ರಥಮ ಸಭೆಯ ರಚಿಸುವಿಕೆಯಲ್ಲಿ ಅವರು ಸಹಾಯಮಾಡಿದರು. ಆ ಸಭೆಯನ್ನು ನಂತರ ನಗರ ಮಧ್ಯಕ್ಕೆ ಸ್ಥಳಾಂತರಿಸಲಾಯಿತು ಮತ್ತು ಅದು ಸೆಂಟ್ರಲ್ ಕಾಂಗ್ರಿಗೇಷನ್ ಎಂಬ ಹೆಸರುಳ್ಳದಾಯ್ದಿತು. ಹತ್ತು ವರ್ಷಗಳ ಬಳಿಕ, ಈಪಿರಾಂಗ ಕ್ಷೇತ್ರದಲ್ಲಿ, ಎರಡನೆಯ ಸಭೆಯನ್ನು ಸ್ಥಾಪಿಸಲಾಯಿತು ಮತ್ತು ಅಲ್ಲಿ ತಂದೆಯನ್ನು ಸಭಾ ಸೇವಕರಾಗಿ ನೇಮಿಸಲಾಯಿತು. 1954 ರಲ್ಲಿ ಮೊಇನ್ಯೊ ವೆಲ್ಯೊ ವಿಭಾಗದಲ್ಲಿ, ಮೂರನೆಯ ಸಭೆಯನ್ನು ರಚಿಸಲಾಯಿತು, ಮತ್ತು ಅಲಿಯ್ಲೂ ಅವರು ಸಭಾ ಸೇವಕರಾಗಿ ಸೇವೆ ಸಲ್ಲಿಸಿದರು.
ಈ ಗುಂಪು ಚೆನ್ನಾಗಿ ಬಲಪಡಿಸಲ್ಪಟ್ಟ ಕೂಡಲೇ, ಅವರು ಸಾವುನ್ ಬರ್ನಾರ್ಡೊ ಡೊ ಕಾಂಪೊದಲ್ಲಿರುವ ಹತ್ತಿರದ ಒಂದು ಗುಂಪಿಗೆ ಸಹಾಯಮಾಡಲು ಆರಂಭಿಸಿದರು. ವರ್ಷಗಳಲ್ಲೆಲ್ಲಾ ಸಾಕ್ಷಿಗಳ ಈ ಚಿಕ್ಕ ಗುಂಪುಗಳ ಪ್ರಯತ್ನಗಳ ಮೇಲೆ ಯೆಹೋವನ ಆಶೀರ್ವಾದಗಳ ಫಲವಾಗಿ, ಅಭಿವೃದ್ಧಿಯು ಅತಿಶಯವಾಗಿದೆ. ಆದುದರಿಂದ 1994 ರಲ್ಲಿ ಬೃಹತ್ ಸಾವುನ್ ಪಾವೂದ್ಲಲಿನ್ಲ 760 ಸಭೆಗಳಲ್ಲಿ 70,000 ಕ್ಕಿಂತ ಹೆಚ್ಚಿನ ಪ್ರಚಾರಕರಿದ್ದರು. ದುಃಖಕರವಾಗಿ, ಈ ಅಭಿವೃದ್ಧಿಯನ್ನು ಕಾಣಲು ತಂದೆಯವರು ಬದುಕಿರಲಿಲ್ಲ. ಅವರು 57ರ ವಯಸ್ಸಿನಲ್ಲಿ 1958 ರಲ್ಲಿ ಸತ್ತರು.
ತಂದೆಯ ಮಾದರಿಯನ್ನು ಅನುಸರಿಸಲು ಶ್ರಮಿಸುವುದು
ಇತರ ಪ್ರೌಢ ಕ್ರೈಸ್ತರಂತೆ, ನನ್ನ ತಂದೆಯ ಒಂದು ಗಮನಾರ್ಹವಾದ ವೈಶಿಷ್ಟ್ಯವು, ಅವರ ಅತಿಥಿಸತ್ಕಾರವಾಗಿತ್ತು. (3 ಯೋಹಾನ 1, 5-8ನ್ನು ನೋಡಿರಿ.) ಪರಿಣಾಮವಾಗಿ, 1936 ರಲ್ಲಿ ಸಹೋದರ ಮತ್ತು ಸಹೋದರಿ ಯೂಲ್ರೊಂದಿಗೆ ಅಮೆರಿಕದಿಂದ ಬ್ರೆಸಿಲ್ಗೆ ಬಂದಂತಹ ಆಂಟಾನ್ಯೊ ಆಂಡ್ರಾಡೆ ಮತ್ತು ಅವರ ಹೆಂಡತಿ ಹಾಗೂ ಮಗ, ನಮ್ಮ ಅತಿಥಿಗಳಾಗಿರುವ ಸುಯೋಗವನ್ನು ನಾವು ಹೊಂದಿದೆವು. 1945 ರಲ್ಲಿ ಬ್ರೆಸಿಲ್ಗೆ ನೇಮಿಸಲ್ಪಟ್ಟ ಪ್ರಥಮ ಮಿಷನೆರಿಗಳು, ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ ಇಬ್ಬರು ಪದವೀಧರರಾದ ಹಾರಿ ಬ್ಲ್ಯಾಕ್ ಮತ್ತು ಡಿಲರ್ಡ್ ಲೆತ್ಕೊ ಸಹ ನಮ್ಮ ಮನೆಯಲ್ಲಿ ಅತಿಥಿಗಳಾಗಿದ್ದರು. ಇನ್ನೂ ಅನೇಕರು ಅವರನ್ನು ಹಿಂಬಾಲಿಸಿ ಬಂದರು. ಈ ಸಹೋದರಸಹೋದರಿಯರು ನಮ್ಮ ಕುಟುಂಬದಲ್ಲಿರುವ ಪ್ರತಿಯೊಬ್ಬರಿಗೆ ಉತ್ತೇಜನದ ಒಂದು ಸತತ ಮೂಲವಾಗಿದ್ದರು. ಇದನ್ನು ಗಣ್ಯಮಾಡುತ್ತಾ ಮತ್ತು ನನ್ನ ಕುಟುಂಬದ ಪ್ರಯೋಜನಕ್ಕಾಗಿ, ಅತಿಥಿಸತ್ಕಾರದ ಕ್ರಿಸ್ತೀಯ ಗುಣದ ಸಂಬಂಧದಲ್ಲಿ ನನ್ನ ತಂದೆಯ ಮಾದರಿಯನ್ನು ಅನುಕರಿಸಲು ನಾನು ಪ್ರಯತ್ನಿಸಿದ್ದೇನೆ.
1935 ರಲ್ಲಿ ನನ್ನ ತಂದೆಯು ಸತ್ಯವನ್ನು ಕಲಿತಾಗ ನಾನು ಕೇವಲ ಒಂಬತ್ತು ವರ್ಷ ಪ್ರಾಯದವನಾಗಿದ್ದರೂ, ಹಿರಿಯ ಮಗನಾಗಿ ನಾನು ಅವರ ದೇವಪ್ರಭುತ್ವ ಚಟುವಟಿಕೆಗಳಲ್ಲಿ ಅವರನ್ನು ಜೊತೆಗೂಡಲಾರಂಭಿಸಿದೆ. ಸಾವುನ್ ಪಾವೂದ್ಲಲ್ಲಿದ್ದ ಎಸಾ ಡೆ ಕೇರಾಸ್ ಸ್ಟ್ರೀಟ್, ನಂಬರ್ 141 ರಲ್ಲಿ ಯೆಹೋವನ ಸಾಕ್ಷಿಗಳ ಮುಖ್ಯಕಾರ್ಯಾಲಯದಲ್ಲಿ, ರಾಜ್ಯ ಸಭಾಗೃಹದಲ್ಲಿದ್ದ ಕೂಟಗಳನ್ನು ನಾವೆಲ್ಲರು ಅವರೊಂದಿಗೆ ಹಾಜರಾದೆವು. ತಂದೆಯು ನನಗೆ ಕೊಟ್ಟ ಬೋಧನೆ ಮತ್ತು ಶಿಕ್ಷಣದ ಫಲವಾಗಿ, ಯೆಹೋವನನ್ನು ಸೇವಿಸುವ ಒಂದು ತೀವ್ರ ಆಶೆಯು ನನ್ನಲ್ಲಿ ಬೆಳೆಯಿತು, ಮತ್ತು 1940 ರಲ್ಲಿ ಸಾವುನ್ ಪಾವ್ಲೂ ನಗರದ ಮಧ್ಯದಲ್ಲಿ ಹರಿಯುವ, ಈಗ ಮಲಿನಗೊಂಡಿರುವ ಟ್ಯಟೆ ನದಿಯಲ್ಲಿ ನೀರಿನ ನಿಮಜ್ಜನದ ಮೂಲಕ ಸಂಕೇತಿಸುತ್ತಾ ನನ್ನನ್ನು ಯೆಹೋವನಿಗೆ ಸಮರ್ಪಿಸಿಕೊಂಡೆ.
ಇತರರಲ್ಲಿ ಸತ್ಯದ ಸಂದೇಶವನ್ನು ನೆಡುವ ಮತ್ತು ನೀರುಡಿಸುವದನ್ನು ಮತ್ತು ಅವರೊಂದಿಗೆ ಮನೆ ಬೈಬಲ್ ಅಭ್ಯಾಸಗಳನ್ನು ನಡಿಸುತ್ತಾ, ಸುವಾರ್ತೆಯ ಒಬ್ಬ ಕ್ರಮದ ಪ್ರಚಾರಕನಾಗಿರುವದರ ಅರ್ಥವೇನೆಂದು ನಾನು ಬೇಗನೆ ಕಲಿತೆ. ಈಗ, ಬ್ರೆಸಿಲ್ನಲ್ಲಿರುವ ಸಾವಿರಾರು ಸಮರ್ಪಿತ ಸಾಕ್ಷಿಗಳನ್ನು ನಾನು ನೋಡುವಾಗ, ಅವರಲ್ಲಿ ಅನೇಕರು ಸತ್ಯದ ಜ್ಞಾನಕ್ಕೆ ಬರಲು ಅಥವಾ ಅದಕ್ಕಾಗಿ ಅವರ ಗಣ್ಯತೆಯನ್ನು ಆಳಗೊಳಿಸುವಂತೆ ಸಹಾಯಮಾಡಲು ನಾನು ಆತನಿಂದ ಉಪಯೋಗಿಸಲ್ಪಟ್ಟಿದ್ದೆ ಎಂಬದನ್ನು ತಿಳಿಯುವದರಲ್ಲಿ ನನಗೆ ಗಾಢವಾದ ಆನಂದದ ಅನಿಸಿಕೆಯಾಗುತ್ತದೆ.
ನಾನು ಸಹಾಯ ಮಾಡಿದವರಲ್ಲಿ, ಮನೆಮನೆಯ ಶುಶ್ರೂಷೆಯಲ್ಲಿ ನಾನು ಭೇಟಿಮಾಡಿದ ಸಾಕ್ವೀಮ್ ಮೆಲೊ ಒಬ್ಬನಾಗಿದ್ದಾನೆ. ನಾನು ಬೇರೆ ಮೂವರು ಪುರುಷರೊಂದಿಗೆ ಮಾತಾಡುತ್ತಿದ್ದೆ, ಅವರು ಕೇಳುತ್ತಿದ್ದರೂ ಅವರಿಗೆ ಹೆಚ್ಚು ಆಸಕ್ತಿಯಿರಲಿಲ್ಲ. ಅನಂತರ, ನಮ್ಮನ್ನು ಜೊತೆಗೂಡಿದ ಮತ್ತು ಶ್ರದ್ಧೆಯಿಂದ ಕಿವಿಗೊಡುತ್ತಿದ್ದ ಒಬ್ಬ ಯುವ ಹುಡುಗನನ್ನು ನಾನು ಗಮನಿಸಿದೆ. ಅವನ ಆಸಕ್ತಿಯನ್ನು ನೋಡಿ, ನಾನು ನನ್ನ ಗಮನವನ್ನು ಅವನ ಕಡೆಗೆ ನಿರ್ದೇಶಿಸಿದೆ ಮತ್ತು ಒಂದು ಒಳ್ಳೆಯ ಸಾಕ್ಷಿಯನ್ನು ಕೊಟ್ಟ ಬಳಿಕ, ಅವನನ್ನು ಸಭಾ ಪುಸ್ತಕ ಅಭ್ಯಾಸಕ್ಕೆ ಆಮಂತ್ರಿಸಿದೆ. ಅವನು ಅಭ್ಯಾಸಕ್ಕೆ ಹಾಜರಾಗಲಿಲ್ಲ, ಆದರೆ ದೇವಪ್ರಭುತ್ವ ಶುಶ್ರೂಷಾ ಶಾಲೆಗೆ ಬಂದನು ಮತ್ತು ತದನಂತರ ಅವನು ಕೂಟಗಳಿಗೆ ಕ್ರಮವಾಗಿ ಹಾಜರಾದನು. ಅವನು ಒಳ್ಳೆಯ ಪ್ರಗತಿಯನ್ನು ಮಾಡಿದನು, ದೀಕ್ಷಾಸ್ನಾನ ಪಡೆದನು, ಮತ್ತು ಅನೇಕ ವರ್ಷಗಳ ತನಕ ತನ್ನ ಪತ್ನಿಯೊಂದಿಗೆ ಒಬ್ಬ ಸಂಚರಣ ಶುಶ್ರೂಷಕನಾಗಿ ಸೇವೆ ಸಲ್ಲಿಸಿದನು.
ಅನಂತರ, ನನ್ನ ಕೆಲಸದ ಜಾಗದಲ್ಲಿ ನಾನು ಭೇಟಿಯಾದ ಆರ್ನಾಲ್ಡೊ ಆರ್ಸಿ ಎಂಬವನು ಇದ್ದನು. ನಾನು ಕ್ರಮವಾಗಿ ಒಬ್ಬ ಸಹೋದ್ಯೋಗಿಗೆ ಸಾಕ್ಷಿಕೊಡುತ್ತಿದ್ದೆ, ಆದರೆ ಒಬ್ಬ ಗಡ್ಡಧಾರಿ ಯುವ ಪುರುಷನು ಯಾವಾಗಲೂ ಆಲಿಸುತ್ತಿರುವದನ್ನು ಗಮನಿಸಿದೆ, ಆದುದರಿಂದ ನಾನು ಅವನೊಂದಿಗೇ ನೇರವಾಗಿ ಮಾತಾಡಲಾರಂಭಿಸಿದೆ. ಅವನೊಬ್ಬ ಕಟ್ಟುನಿಟ್ಟಿನ ಕ್ಯಾತೊಲಿಕ್ ಕುಟುಂಬದವನಾಗಿದ್ದನು, ಆದರೆ ಧೂಮಪಾನ, ಅಶ್ಲೀಲ ಚಲನಚಿತ್ರಗಳನ್ನು ವೀಕ್ಷಿಸುವುದು ಮತ್ತು ಜೂಡೊ ಯುದ್ಧೋಚಿತ ಕ್ರೀಡೆಯನ್ನು ಅಭ್ಯಾಸಿಸುವುದರ ಕುರಿತಾದಂತಹ ಅನೇಕ ಪ್ರಶ್ನೆಗಳನ್ನು ಕೇಳಿದನು. ಬೈಬಲಿಗೆ ಅದರ ಕುರಿತಾಗಿ ಏನನ್ನು ಹೇಳಲಿಕ್ಕಿತ್ತು ಎಂಬದನ್ನು ನಾನು ತೋರಿಸಿದೆ, ಮತ್ತು ನನ್ನ ಆನಂದಕರ ಆಶ್ಚರ್ಯಕ್ಕೆ, ಮರುದಿನ ಅವನು ತನ್ನ ಚುಂಗಾಣಿ ಮತ್ತು ಲೈಟರನ್ನು ತನ್ನ ಕ್ರೂಜೆಯೊಂದಿಗೆ ಮುರಿದಾಗ, ತನ್ನ ಅಶ್ಲೀಲ ಚಲನಚಿತ್ರಗಳನ್ನು ನಾಶಮಾಡಿದಾಗ, ಮತ್ತು ತನ್ನ ಗಡ್ಡವನ್ನು ಬೋಳಿಸಿದಾಗ ನೋಡುವಂತೆ ನನ್ನನ್ನು ಕರೆಕಳುಹಿಸಿದನು. ಕೆಲವೇ ನಿಮಿಷಗಳಲ್ಲಿ ಒಬ್ಬ ಬದಲಾದ ಮನುಷ್ಯ! ಅವನು ಜೂಡೊ ಅಭ್ಯಾಸಿಸುವದನ್ನೂ ನಿಲ್ಲಿಸಿದನು ಮತ್ತು ನನ್ನೊಂದಿಗೆ ಬೈಬಲನ್ನು ದಿನಾಲೂ ಅಭ್ಯಾಸಿಸಲು ಕೇಳಿಕೊಂಡನು. ತನ್ನ ಹೆಂಡತಿ ಮತ್ತು ತಂದೆಯಿಂದ ವಿರೋಧದ ಮಧ್ಯೆಯೂ, ತನ್ನ ಸಮೀಪದಲ್ಲಿ ಜೀವಿಸುತ್ತಿದ್ದ ಸಹೋದರರ ಸಹಾಯದಿಂದ ಅವನು ಆತ್ಮಿಕವಾಗಿ ಒಳ್ಳೆಯ ಪ್ರಗತಿಯನ್ನು ಮಾಡಿದನು. ಸ್ವಲ್ಪ ಸಮಯದಲ್ಲಿ, ಅವನು ದೀಕ್ಷಾಸ್ನಾನಹೊಂದಿದನು ಮತ್ತು ಇಂದು ಒಬ್ಬ ಸಭಾ ಹಿರಿಯನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಆತನ ಹೆಂಡತಿ ಮತ್ತು ಮಕ್ಕಳು ಸಹ ಸತ್ಯವನ್ನು ಸ್ವೀಕರಿಸಿದರು.
ರಾಜ್ಯ ಸೇವೆಯಲ್ಲಿ ಭಾಗವಹಿಸುವುದು
ಸುಮಾರು 14 ವರ್ಷ ಪ್ರಾಯದವನಾಗಿದ್ದಾಗ, ನಾನು ಲಾಂಛನಗಳನ್ನು ಚಿತ್ರಿಸಲು ಕಲಿತ ಜಾಹೀರಾತು ಸಂಸ್ಥೆಯೊಂದರಲ್ಲಿ ಕೆಲಸಮಾಡಲು ಆರಂಭಿಸಿದೆ. ಇದು ತುಂಬಾ ಉಪಯೋಗಕಾರಿಯಾಗಿ ಪರಿಣಮಿಸಿತು, ಮತ್ತು ಹಲವಾರು ವರ್ಷಗಳ ವರೆಗೆ ಸಾವುನ್ ಪಾವೂದ್ಲಲ್ಲಿ, ಬಹಿರಂಗ ಭಾಷಣಗಳನ್ನು ಮತ್ತು ಯೆಹೋವನ ಸಾಕ್ಷಿಗಳ ಅಧಿವೇಶನಗಳನ್ನು ಪ್ರಚಾರಮಾಡುವ ಪ್ರಕಟನಪತ್ರಗಳನ್ನು ಮತ್ತು ಬೀದಿಗಳಲ್ಲಿ ಎತ್ತರದಲ್ಲಿ ಹಾಕುವ ಲಾಂಛನಗಳನ್ನು ಚಿತ್ರಿಸುತ್ತಿದ್ದ ಏಕಮಾತ್ರ ಸಹೋದರನು ನಾನಾಗಿದ್ದೆ. ಹತ್ತಿರ ಹತ್ತಿರ 30 ವರ್ಷಗಳ ವರೆಗೆ, ಅಧಿವೇಶನದ ಲಾಂಛನ (ಸೈನ್) ಡಿಪಾರ್ಟ್ಮೆಂಟಿನ ಮೇಲ್ವಿಚಾರಕನಾಗಿ ಸೇವೆ ಸಲ್ಲಿಸುವ ಸುಯೋಗ ನನಗಿತ್ತು. ಅಧಿವೇಶನಗಳಲ್ಲಿ ಕೆಲಸ ಮಾಡಲಾಗುವಂತೆ ನಾನು ಯಾವಾಗಲೂ ನನ್ನ ರಜೆಗಳನ್ನು ಉಳಿಸುತ್ತಿದ್ದೆ, ಲಾಂಛನಗಳನ್ನು ಸಕಾಲದಲ್ಲಿ ತಯಾರಾಗಿಸಲು ಅಧಿವೇಶನದ ಹಾಲ್ನಲ್ಲಿ ಮಲಗುತ್ತಿದ್ದೆ ಕೂಡ.
ಆ ಸಮಯದಲ್ಲಿ ಒಂದು ನವೀನತೆಯಾಗಿದ್ದ ಸಂಸ್ಥೆಯ ಧ್ವನಿಪ್ರಸಾರಣ ವಾಹನದಲ್ಲಿ (ಸೌಂಡ್ ಕಾರ್) ಕೆಲಸಮಾಡಲು ನನಗೆ ಅವಕಾಶವಿತ್ತು. ನಾವು ನಮ್ಮ ಬೈಬಲ್ ಪ್ರಕಾಶನಗಳನ್ನು ಒಂದು ಮಳಿಗೆಯ ಮೇಲೆ ಇಡುತ್ತಿದ್ದೆವು, ಮತ್ತು ಧ್ವನಿಪ್ರಸಾರಣ ವಾಹನವು ಒಂದು ರೆಕಾರ್ಡುಮಾಡಲ್ಪಟ್ಟ ಸಂದೇಶವನ್ನು ಪ್ರಸರಿಸಿದಂತೆ, ಏನು ನಡೆಯುತ್ತಿದೆಯೆಂದು ನೋಡಲು ತಮ್ಮ ಮನೆಗಳಿಂದ ಹೊರಬಂದಂತಹ ಜನರೊಂದಿಗೆ ನಾವು ಮಾತಾಡುತ್ತಿದ್ದೆವು. ರಾಜ್ಯದ ಸುವಾರ್ತೆಯನ್ನು ತಿಳಿಯಪಡಿಸಲು ನಾವು ಉಪಯೋಗಿಸಿದ ಇನ್ನೊಂದು ಮಾಧ್ಯಮವು ಒಯ್ಯಲಾಗುತ್ತಿದ್ದ ಗ್ರಾಮಫೋನ್ ಆಗಿತ್ತು, ಮತ್ತು ಸಂಸ್ಥೆಯ ಪ್ರಕಾಶನಗಳನ್ನು ನೀಡಲು ಉಪಯೋಗಿಸಲಾಗುತ್ತಿದ್ದ ರೆಕಾರ್ಡುಗಳು ಇನ್ನೂ ನನ್ನ ಬಳಿ ಇವೆ. ಫಲಿತಾಂಶವಾಗಿ ತುಂಬ ಬೈಬಲ್ ಸಾಹಿತ್ಯವನ್ನು ಹಂಚಲಾಗುತ್ತಿತ್ತು.
ಆ ದಿನಗಳಲ್ಲಿ ಸಾವುನ್ ಪಾವೂವ್ಲಿನ ಬೀದಿಗಳಲ್ಲಿ ಕ್ಯಾತೊಲಿಕ್ ಚರ್ಚಿನ ಉದ್ದದ ಮೆರವಣಿಗೆಗಳು ಇರುತ್ತಿದ್ದವು. ಮಾರ್ಗವನ್ನು ತಡೆಯಿಲ್ಲದ್ದಾಗಿಸಲು ಮುಂದಿನಿಂದ ಅನೇಕ ವೇಳೆ ಪುರುಷರು ಹೋಗುತ್ತಿದ್ದರು. ಒಂದು ಆದಿತ್ಯವಾರ, ತಂದೆ ಮತ್ತು ನಾನು ಬೀದಿಯಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ವನ್ನು ನೀಡುತ್ತಿದ್ದಾಗ ಒಂದು ಉದ್ದ ಮೆರವಣಿಗೆಯು ಗೋಚರಿಸಿತು. ತಮ್ಮ ಪದ್ಧತಿಯಂತೆ ತಂದೆಯವರು, ಒಂದು ಹ್ಯಾಟನ್ನು ಧರಿಸಿದ್ದರು. ಮೆರವಣಿಗೆಯಲ್ಲಿ ಮುಂದೆ ಇದ್ದ ಒಬ್ಬ ಪುರುಷನು, “ನಿನ್ನ ಹ್ಯಾಟನ್ನು ತೆಗಿ! ಒಂದು ಮೆರವಣಿಗೆ ಬರುತ್ತಾ ಇರುವುದು ನಿನಗೆ ಕಾಣಿಸುವದಿಲ್ಲವೋ?” ಎಂದು ಕೂಗಿದನು. ತಂದೆ ತಮ್ಮ ಹ್ಯಾಟನ್ನು ತೆಗೆಯದಿದ್ದಾಗ, ಇನ್ನೂ ಹೆಚ್ಚು ಪುರುಷರು ಬಂದು, ನಮ್ಮನ್ನು ಒಂದು ಅಂಗಡಿಯ ಕಿಟಿಕಿಗೆ ಒತ್ತಿಹಿಡಿದು ಗಲಭೆಯನ್ನು ಉಂಟುಮಾಡಿದರು. ಇದು ಒಬ್ಬ ಪೊಲೀಸನ ಗಮನವನ್ನು ಸೆಳೆಯಿತು, ಮತ್ತು ಅವನು ಏನು ನಡೆಯುತ್ತಿದೆಯೆಂದು ನೋಡಲು ಬಂದನು. ಒಬ್ಬ ಮನುಷ್ಯನು ಅವನೊಂದಿಗೆ ಮಾತಾಡಲು ಬಯಸುತ್ತಾ, ಅವನ ತೋಳನ್ನು ಹಿಡಿದನು. ಆ ಮನುಷ್ಯನ ಕೈಯನ್ನು ಹೊಡೆಯುತ್ತಾ, “ನನ್ನ ಸಮವಸ್ತ್ರದ ಮೇಲಿಂದ ನಿನ್ನ ಕೈಯನ್ನು ತೆಗಿ!” ಎಂದು ಪೊಲೀಸನು ಆಜ್ಞಾಪಿಸಿದನು. ಅನಂತರ ಏನು ನಡೆಯುತ್ತಾ ಇದೆಯೆಂದು ಅವನು ಕೇಳಿದನು. ತಂದೆಯು ಮೆರವಣಿಗೆಗೆ ತನ್ನ ಹ್ಯಾಟನ್ನು ತೆಗೆಯಲಿಲ್ಲವೆಂದು ಆ ಮನುಷ್ಯನು ವಿವರಿಸಿದನು ಮತ್ತು ಕೂಡಿಸಿದ್ದು: “ನಾನೊಬ್ಬ ಆ್ಯಪೊಸಾಲ್ಟಿಕ್ ರೋಮನ್ ಕ್ಯಾತೊಲಿಕನಾಗಿದ್ದೇನೆ.” ಅನಿರೀಕ್ಷಿತ ಉತ್ತರವು ಹೀಗಿತ್ತು: “ನೀನೊಬ್ಬ ರೋಮನ್ ಎಂದು ಹೇಳುತ್ತೀಯೋ? ಹಾಗಿದ್ದಲ್ಲಿ ರೋಮ್ಗೆ ಹಿಂದಿರುಗಿ ಹೋಗು! ಇದು ಬ್ರೆಸಿಲ್.” ಅನಂತರ ಅವನು ನಮ್ಮೆಡೆಗೆ ತಿರುಗಿ, ಕೇಳಿದನು: “ಇಲ್ಲಿ ಯಾರು ಮೊದಲು ಇದ್ದರು?” ನಾವಿದ್ದೆವು ಎಂದು ತಂದೆ ಉತ್ತರಿಸಿದಾಗ, ಪೊಲೀಸನು ಆ ಮನುಷ್ಯರನ್ನು ಕಳುಹಿಸಿಬಿಟ್ಟನು ಮತ್ತು ನಾವು ನಮ್ಮ ಕೆಲಸದೊಂದಿಗೆ ಮುಂದುವರಿಯುವಂತೆ ಹೇಳಿದನು. ಇಡೀ ಮೆರವಣಿಗೆಯು ದಾಟಿಹೋಗುವ ತನಕ ಆತನು ನಮ್ಮೊಂದಿಗೆ ಉಳಿದನು—ಮತ್ತು ತಂದೆಯ ಹ್ಯಾಟು ಹಾಗೆಯೇ ಉಳಿಯಿತು!
ಇದರಂತಹ ಪ್ರಕರಣಗಳು ವಿರಳವಾಗಿದ್ದವು. ಆದರೆ ಅವು ಸಂಭವಿಸಿದಾಗ, ಅಲ್ಪಸಂಖ್ಯಾತರಿಗಾಗಿ ನ್ಯಾಯವನ್ನು ಆಶಿಸಿದ ಮತ್ತು ಕ್ಯಾತೊಲಿಕ್ ಚರ್ಚಿಗೆ ಶರಣಾಗತರಾಗದ ಜನರಿದ್ದಿರೆಂದು ತಿಳಿದುಬರುವದು ಉತ್ತೇಜನಕಾರಿಯಾಗಿತ್ತು.
ಇನ್ನೊಂದು ಸಂದರ್ಭದಲ್ಲಿ, ಆಸಕ್ತಿಯನ್ನು ತೋರಿಸಿದ ಮತ್ತು ಮುಂದಿನ ವಾರದಲ್ಲಿ ಹಿಂದಿರುಗಿ ಬರಲು ಕೇಳಿಕೊಂಡ ಒಬ್ಬ ಹದಿವಯಸ್ಕನನ್ನು ನಾನು ಭೇಟಿಯಾದೆ. ನಾನು ಹಿಂದಿರುಗಿ ಹೋದಾಗ ಅವನು ನನ್ನನ್ನು ತುಂಬ ಉದಾರವಾಗಿ ಸ್ವಾಗತಿಸಿದನು ಮತ್ತು ನನಗೆ ಒಳಗೆ ಬರಲು ಹೇಳಿದನು. ಆದರೆ ನನ್ನನ್ನು ಅಪಹಾಸ್ಯಮಾಡುತ್ತಿದ್ದ ಮತ್ತು ಕೆರಳಿಸಲು ಪ್ರಯತ್ನಿಸುತ್ತಿದ್ದ ಯುವಕರ ಒಂದು ತಂಡದಿಂದ ಸ್ವತಃ ಸುತ್ತುವರಿಯಲ್ಪಟ್ಟಿರುವದನ್ನು ಕಾಣಲು ನಾನು ಎಷ್ಟು ಚಕಿತನಾದೆ! ಪರಿಸ್ಥಿತಿಯು ಕೆಟ್ಟಿತು, ಮತ್ತು ಅವರು ನನ್ನನ್ನು ಬೇಗನೇ ಆಕ್ರಮಿಸುವರೆಂದು ನನಗೆ ಅನಿಸಿತು. ನನಗೆ ಏನಾದರೂ ಸಂಭವಿಸಿದ್ದಲ್ಲಿ ಅವನೊಬ್ಬನೇ ಅದಕ್ಕೆ ಜವಾಬ್ದಾರನಾಗಿರುವನೆಂದು ಮತ್ತು ನಾನು ಎಲ್ಲಿ ಇದ್ದೇನೆಂದು ನನ್ನ ಕುಟುಂಬಕ್ಕೆ ತಿಳಿದಿದೆಯೆಂದು, ನನ್ನನ್ನು ಒಳಗೆ ಆಮಂತ್ರಿಸಿದವನಿಗೆ ನಾನು ಹೇಳಿದೆ. ನನ್ನನ್ನು ಹೋಗುವಂತೆ ಬಿಡಲು ಕೇಳಿಕೊಂಡೆ ಮತ್ತು ಅವರು ಸಮ್ಮತಿಸಿದರು. ಆದಾಗಲೂ ಹೊರಡುವ ಮುಂಚೆ, ಅವರಲ್ಲಿ ಯಾರಾದರೂ ನನ್ನೊಂದಿಗೆ ಒಬ್ಬಂಟಿಗರಾಗಿ ಮಾತಾಡಲು ಬಯಸುವಲ್ಲಿ, ನಾನು ಸಿದ್ಧನಿದ್ದೇನೆಂದು ಹೇಳಿದೆ. ಅವರು ಮತಭ್ರಾಂತರ ಒಂದು ಗುಂಪಾಗಿದ್ದು, ಯಾರು ಈ ಕೂಟವನ್ನು ಏರ್ಪಡಿಸುವಂತೆ ಅವರನ್ನು ಪ್ರೋತ್ಸಾಹಿಸಿದ್ದನೊ ಆ ಸ್ಥಳೀಯ ಪಾದ್ರಿಯ ಮಿತ್ರರಾಗಿದ್ದರೆಂದು ನನಗೆ ಅನಂತರ ತಿಳಿದುಬಂತು. ಅವರ ಹಿಡಿತದಿಂದ ಹೊರಬಂದದ್ದಕ್ಕಾಗಿ ನಾನು ಸಂತೋಷಿತನಾಗಿದ್ದೆ.
ಖಂಡಿತವಾಗಿಯೂ, ಆರಂಭದಲ್ಲಿ ಬ್ರೆಸಿಲ್ನಲ್ಲಿ ಪ್ರಗತಿಯು ನಿಧಾನವಾಗಿತ್ತು, ಬಹುಮಟ್ಟಿಗೆ ಅಗೋಚರವಾಗಿತ್ತು. ನಮ್ಮ ದುಡಿಮೆಯ ಫಲಗಳನ್ನು “ಬೆಳೆಸಲು” ಮತ್ತು “ಕೊಯ್ಯಲು” ಸ್ವಲ್ಪವೇ ಸಮಯ ಲಭ್ಯವಿರುವವರಾಗಿ, ನಾವು “ನೆಡುವಿಕೆ”ಯ ಆರಂಭದ ದಶೆಯಲ್ಲಿದ್ದೆವು. ಅಪೊಸ್ತಲ ಪೌಲನು ಬರೆದಂತಹ ವಿಷಯವನ್ನು ನಾವು ಯಾವಾಗಲೂ ನೆನಪಿಸಿಕೊಂಡೆವು: “ನಾನು ಸಸಿಯನ್ನು ನೆಟ್ಟೆನು, ಅಪೊಲ್ಲೋಸನು ನೀರುಹೊಯಿದನು, ಆದರೆ ಬೆಳೆಸುತ್ತಾ ಬಂದವನು ದೇವರು.” (1 ಕೊರಿಂಥ 3:6, 7) 1945 ರಲ್ಲಿ ಗಿಲ್ಯಡ್ನಿಂದ ಮೊದಲ ಇಬ್ಬರು ಪದವೀಧರರ ಆಗಮನದೊಂದಿಗೆ, ಬಹುಕಾಲದಿಂದ ನಿರೀಕ್ಷಿಸಲ್ಪಟ್ಟಿದ್ದ ಈ ಬೆಳವಣಿಗೆಗೆ ಸಮಯವು ಆಗಮಿಸಿತ್ತೆಂದು ನಮಗನಿಸಿತು.
ವಿರೋಧದ ಎದುರಿನಲ್ಲಿ ಧೈರ್ಯ
ಆದಾಗಲೂ, ವಿಶೇಷವಾಗಿ ಯೂರೋಪಿನಲ್ಲಿ IIನೇ ಲೋಕ ಯುದ್ಧ ಆರಂಭವಾದಾಗ ಬೆಳವಣಿಗೆಯು ವಿರೋಧವಿಲ್ಲದೆ ಬರಲಿಕ್ಕಿರಲಿಲ್ಲ. ಸಾಮಾನ್ಯವಾಗಿ ಜನರು ಮತ್ತು ಕೆಲವು ಅಧಿಕಾರಿಗಳು ನಮ್ಮ ತಟಸ್ಥ ನಿಲುವನ್ನು ಅರ್ಥೈಸಲು ಶಕ್ತರಾಗದಿದ್ದ ಕಾರಣದಿಂದ ಮುಚ್ಚುಮರೆಯಿಲ್ಲದ ಹಿಂಸೆಯು ಬಂತು. ಒಂದು ಸಂದರ್ಭದಲ್ಲಿ, 1940 ರಲ್ಲಿ, ಸಾವುನ್ ಪಾವೂವ್ಲಿನ ಮಧ್ಯದಲ್ಲಿ ನಾವು ಪ್ರಕಟನಪತ್ರಗಳೊಂದಿಗೆ ಬೀದಿ ಕಾರ್ಯವನ್ನು ಮಾಡುತ್ತಿದ್ದಾಗ, ಒಬ್ಬ ಪೊಲೀಸನು ನನ್ನ ಹಿಂದಿನಿಂದ ಸಮೀಪಿಸಿ, ಪ್ರಕಟನಪತ್ರವನ್ನು ಕಿತ್ತುಹಾಕಿ, ನನ್ನನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯಲು ನನ್ನ ತೋಳನ್ನು ಬಿಗಿಹಿಡಿದನು. ನಾನು ನನ್ನ ತಂದೆಗಾಗಿ ಹುಡುಕಾಡಿದೆ ಆದರೆ ಅವರು ಎಲ್ಲಿಯೂ ಕಾಣಸಿಗಲಿಲ್ಲ. ನನಗೆ ತಿಳಿಯದೆ, ಅವರು ಮತ್ತು ಬ್ರೆಸಿಲ್ನಲ್ಲಿನ ಕೆಲಸದ ಮೇಲ್ವಿಚಾರಣೆ ನಡಿಸುತ್ತಿದ್ದ ಸಹೋದರ ಯೂಲ್ರನ್ನು ಒಳಗೊಂಡು ಇತರ ಹಲವಾರು ಸಹೋದರಸಹೋದರಿಯರನ್ನು ಈಗಾಗಲೇ ಪೊಲೀಸ್ ಠಾಣೆಗೆ ಒಯ್ಯಲಾಗಿತ್ತು. ಮೊದಲ ಪ್ಯಾರಗ್ರಾಫ್ನಲ್ಲಿ ಸೂಚಿಸಲಾದಂತೆ, ಅಲ್ಲಿ ನಾನು ನನ್ನ ತಂದೆಯನ್ನು ಪುನಃ ಭೇಟಿಯಾದೆ.
ನಾನು ಇನ್ನೂ ಅಪ್ರಾಪ್ತ ವಯಸ್ಕನಾಗಿದುದ್ದರಿಂದ, ನನ್ನನ್ನು ಸೆರೆಯಲ್ಲಿಡಲು ಸಾಧ್ಯವಿರಲಿಲ್ಲ ಮತ್ತು ಬೇಗನೇ ಒಬ್ಬ ಪೊಲೀಸನು ನನ್ನನ್ನು ನನ್ನ ಮನೆಗೆ ಕೊಂಡೊಯ್ದು ನನ್ನ ತಾಯಿಗೆ ಒಪ್ಪಿಸಿದನು. ಅದೇ ಸಾಯಂಕಾಲ ಸಹೋದರಿಯರನ್ನೂ ಬಿಡುಗಡೆ ಮಾಡಲಾಯಿತು. ಸಹೋದರ ಯೂಲ್ರನ್ನು ಬಿಟ್ಟು ಬೇರೆ ಎಲ್ಲಾ ಸಹೋದರರನ್ನು, ಸುಮಾರು ಹತ್ತು ಜನರನ್ನು, ಬಿಡುಗಡೆಗೊಳಿಸಲು ಪೊಲೀಸರು ನಂತರ ನಿರ್ಣಯಿಸಿದರು. ಆದಾಗಲೂ, ಸಹೋದರರು ಪಟ್ಟುಹಿಡಿದರು: “ಒಂದೇ ನಾವೆಲ್ಲರೂ ಬಿಡುಗಡೆಯಾಗಬೇಕು ಇಲ್ಲದಿದ್ದಲ್ಲ ಯಾರೂ ಹೋಗುವದಿಲ್ಲ.” ಪೊಲೀಸರು ಅನಮ್ಯರಾಗಿದ್ದರು, ಆದುದರಿಂದ ಸಿಮೆಂಟ್ ನೆಲದ ಮೇಲೆ ಒಂದು ತಣ್ಣಗಿನ ಕೋಣೆಯಲ್ಲಿ ಎಲ್ಲರೂ ಜೊತೆಯಾಗಿ ಆ ರಾತ್ರಿಯನ್ನು ಕಳೆದರು. ಮರುದಿನ ಎಲ್ಲರೂ ಯಾವ ಷರತ್ತುಗಳಿಲ್ಲದೆ ಬಿಡುಗಡೆಮಾಡಲ್ಪಟ್ಟರು. ಹಲವಾರು ಸಲ ಸಹೋದರರನ್ನು ಪ್ರಕಟನಪತ್ರಗಳೊಂದಿಗೆ ಸಾರುತ್ತಿದ್ದುದಕ್ಕಾಗಿ ದಸ್ತಗಿರಿಮಾಡಲಾಯಿತು. ಲಾಂಛನಗಳು ಒಂದು ಬಹಿರಂಗ ಭಾಷಣ ಮತ್ತು ಫ್ಯಾಸಿಸಮ್ ಆರ್ ಫ್ರೀಡಮ್ (ಸರ್ವಾಧಿಕಾರವೋ ಸ್ವಾತಂತ್ರ್ಯವೋ) ಎಂಬ ಪುಸ್ತಿಕೆಯನ್ನು ಸಹ ಪ್ರಕಟಿಸಿದವು ಮತ್ತು ಕೆಲವು ಅಧಿಕಾರಿಗಳು ಅದನ್ನು, ನಾವು ಸರ್ವಾಧಿಕಾರದ ಪರವಾಗಿದ್ದೇವೆಂದು ಅರ್ಥೈಸಿದರು, ಇದು ಸ್ವಾಭಾವಿಕವಾಗಿ ಮನಸ್ತಾಪಗಳಿಗೆ ನಡಿಸಿತು.
ನಿರ್ಬಂಧದ ಮಿಲಿಟರಿ ಸೇವೆಯು ಯುವ ಸಹೋದರರಿಗೆ ಸಮಸ್ಯೆಗಳನ್ನು ಸಾದರಪಡಿಸಿತು. 1948 ರಲ್ಲಿ, ಈ ವಾದಾಂಶದ ಸಂಬಂಧದಲ್ಲಿ ಬ್ರೆಸಿಲ್ನಲ್ಲಿ ಸೆರೆಮನೆಗೆ ಹಾಕಲ್ಪಟ್ಟವರಲ್ಲಿ ನಾನು ಮೊದಲಿಗನಾಗಿದ್ದೆ. ಕಾಸಪಾವಾದಲ್ಲಿದ್ದ ಸೈನ್ಯ ಪಾಳೆಯಗಳಿಗೆ ನನ್ನನ್ನು ವರ್ಗಾಯಿಸಲಾಯಿತು ಮತ್ತು ಗಿಡಗಳನ್ನು ನೆಡಲು ಮತ್ತು ತೋಟದಲ್ಲಿರುವ ತರಕಾರಿಗಳನ್ನು ನೋಡಿಕೊಳ್ಳಲು ಹಾಗೂ ಕತ್ತಿವರಿಸೆಗಾಗಿ ಸೈನ್ಯಾಧಿಕಾರಿಗಳಿಂದ ಬಳಸಲ್ಪಟ್ಟ ಕೋಣೆಯನ್ನು ಶುಚಿಗೊಳಿಸುವ ಕೆಲಸ ಮಾಡಲು ಹಾಕಲಾಯಿತು. ಆ ಪುರುಷರಿಗೆ ಸಾಕ್ಷಿಕೊಡಲು ಮತ್ತು ಪ್ರಕಾಶನಗಳನ್ನು ನೀಡಲು ನನಗೆ ಅನೇಕ ಅವಕಾಶಗಳಿದ್ದವು. ಮೇಲ್ವಿಚಾರಣೆ ನಡಿಸುವ ಅಧಿಕಾರಿಯು ಸಂಸ್ಥೆಯ ಚಿಲ್ಡ್ರ್ನ್ ಎಂಬ ಪುಸ್ತಕದ ಒಂದು ಪ್ರತಿಯನ್ನು ಸ್ವೀಕರಿಸಿದ ಪ್ರಥಮ ವ್ಯಕ್ತಿಯಾಗಿದ್ದನು. ಅನಂತರ ನನ್ನನ್ನು, ಒಂದು ಕೋಣೆಗೆ ನಿರ್ಬಂಧಿಸಲ್ಪಟ್ಟಿದ್ದ, ವ್ಯಾಯಾಮ ಮಾಡಲು ಅಶಕ್ತರಾಗಿದ್ದ 30 ಅಥವಾ 40 ಸೈನಿಕರಿಗೆ ಧರ್ಮದ ಕುರಿತಾಗಿ ಕಲಿಸಲು ನೇಮಿಸಲಾಯಿತು. ಕೊನೆಗೆ, ಸೆರೆಮನೆಯಲ್ಲಿ ಹತ್ತು ತಿಂಗಳುಗಳ ನಂತರ ನನ್ನನ್ನು ಪರೀಕ್ಷಣೆಗೆ ಒಳಪಡಿಸಿ ಬಿಡುಗಡೆಗೊಳಿಸಲಾಯಿತು. ಕೆಲವು ಮನುಷ್ಯರಿಂದ ನಾನು ಪಡೆದಂತಹ ಬೆದರಿಕೆಗಳು, ತಿರಸ್ಕಾರಗಳು, ಮತ್ತು ಪರಿಹಾಸ್ಯಗಳನ್ನು ಎದುರಿಸಲು ನನಗೆ ಬಲವನ್ನು ಕೊಟ್ಟ ಯೆಹೋವನಿಗೆ ನಾನು ಅಭಾರಿಯಾಗಿದ್ದೇನೆ.
ಒಬ್ಬ ನಂಬಿಗಸ್ತ ಮತ್ತು ನಿಷ್ಠಾವಂತ ಸಹಾಯಕಿ
ಜೂನ್ 2, 1951 ರಂದು ನಾನು ಬಾರ್ಬ್ರಳನ್ನು ಮದುವೆಯಾದೆ, ಮತ್ತು ಅಂದಿನಿಂದ ಅವಳು ನಮ್ಮ ಮಕ್ಕಳನ್ನು ತರಬೇತಿಗೊಳಿಸುವದರಲ್ಲಿ ಮತ್ತು ‘ಯೆಹೋವನಿಗೆ ಮೆಚ್ಚಿಕೆಯಾಗುವ ಬಾಲಶಿಕ್ಷೆ ಮತ್ತು ಬಾಲೋಪದೇಶ’ ದಲ್ಲಿ ಅವರನ್ನು ಬೆಳೆಸುವದರಲ್ಲಿ ಒಬ್ಬ ನಿಷ್ಠಾವಂತ ಮತ್ತು ನಂಬಿಗಸ್ತ ಜೊತೆಗಾರ್ತಿಯಾಗಿದ್ದಾಳೆ. (ಎಫೆಸ 6:4) ನಮ್ಮ ಐದು ಮಕ್ಕಳಲ್ಲಿ, ನಾಲ್ವರು ವಿಭಿನ್ನ ಸ್ಥಾನಗಳಲ್ಲಿ ಯೆಹೋವನನ್ನು ಆನಂದಪೂರ್ವಕವಾಗಿ ಸೇವಿಸುತ್ತಿದ್ದಾರೆ. ನಮ್ಮೊಂದಿಗೆ, ಅವರೂ ಸತ್ಯದಲ್ಲಿ ಪಟ್ಟುಹಿಡಿಯುತ್ತಾ ಮುಂದುವರಿಯುವರು ಮತ್ತು ಸಂಸ್ಥೆಯ ಪ್ರಗತಿ ಹಾಗೂ ಮಾಡಲ್ಪಟ್ಟಿರುವ ಕೆಲಸಕ್ಕೆ ಕೂಡಿಸುವರೆಂಬದು ನಮ್ಮ ಆಶೆಯಾಗಿದೆ. ಜೊತೆಯಲ್ಲಿರುವ ಛಾಯಾಚಿತ್ರದಲ್ಲಿರುವ ಕುಟುಂಬ ಸದಸ್ಯರಲ್ಲಿ, ಅತ್ಯಂತ ಕಿರಿದಾದ, ಕೈಯಲ್ಲಿರುವ ಮಗುವನ್ನು ಬಿಟ್ಟು, ಎಲ್ಲರೂ ಯೆಹೋವನ ಸಮರ್ಪಿತ ಸೇವಕರಾಗಿದ್ದಾರೆ. ನಾಲ್ವರು ಹಿರಿಯರಾಗಿದ್ದಾರೆ ಮತ್ತು ಇಬ್ಬರು ಕ್ರಮದ ಪಯನೀಯರರು ಸಹ ಆಗಿದ್ದಾರೆ. ಇದು ಜ್ಞಾನೋಕ್ತಿ 17:6ರ ಸತ್ಯತೆಯನ್ನು ದೃಷ್ಟಾಂತಿಸುತ್ತದೆ: “ಮಕ್ಕಳ ಸಂತತಿಯವರು ವೃದ್ಧರಿಗೆ ಕಿರೀಟ; ಹೆತ್ತವರು ಮಕ್ಕಳಿಗೆ ಭೂಷಣ.”
ಈಗ, 68 ವರ್ಷ ಪ್ರಾಯದಲ್ಲಿ ನನ್ನ ಆರೋಗ್ಯವು ಸಂಪೂರ್ಣವಾಗಿ ತೃಪ್ತಿಕರವಾಗಿಲ್ಲ. 1991 ರಲ್ಲಿ ನಾನು ಒಂದು ತ್ರಿಗುಣ ಅಡ-ಕೊಳವಿ (ಟ್ರಿಪಲ್ ಬೈಪಾಸ್) ಶಸ್ತ್ರಚಿಕಿತ್ಸೆಗೆ ಒಳಗಾದೆ ಮತ್ತು ಅನಂತರ ಆಂಜಿಅಪಾಸ್ಲಿಯ್ಟನ್ನು ಒಳಗಾದೆ. ಆದಾಗಲೂ, ನನ್ನ ತಂದೆಯವರು ಎಲ್ಲಿ ಕಾರ್ಯವನ್ನು ಆರಂಭಿಸಿದ ಮೊದಲ ವ್ಯಕ್ತಿಗಳೊಳಗೆ ಇದ್ದರೊ, ಅವರ ಹೆಜ್ಜೆಜಾಡುಗಳನ್ನು ಅನುಸರಿಸುತ್ತಾ, ಸಾವುನ್ ಬರ್ನಾರ್ಡೊ ಡೊ ಕಾಂಪೋವಿನಲ್ಲಿನ ಸಭೆಯಲ್ಲಿ ಒಬ್ಬ ಅಧ್ಯಕ್ಷ ಮೇಲ್ವಿಚಾರಕನಾಗಿ ಸೇವೆ ಮಾಡುತ್ತಾ ಮುಂದುವರಿಯಲು ಶಕ್ತನಾದುದಕ್ಕಾಗಿ ನಾನು ಸಂತೋಷಿತನಾಗಿದ್ದೇನೆ. ಯೆಹೋವನ ಮೆಸ್ಸೀಯ ಸಂಬಂಧಿತ ರಾಜ್ಯದ ಸ್ಥಾಪನೆಯನ್ನು ಪ್ರಕಟಿಸುವ ಕುರಿತು ಎಂದಿಗೂ ಪುನರಾವೃತ್ತಿಸಲ್ಪಡದ ಸುಯೋಗದಲ್ಲಿ ಭಾಗವಹಿಸುವ ಅವಕಾಶವಿದ್ದವರಾಗಿ, ನಮ್ಮ ಸಂತತಿಯು ನಿಜವಾಗಿಯೂ ಅಪೂರ್ವವಾದುದಾಗಿದೆ. ಆದುದರಿಂದ ತಿಮೊಥೆಯನಿಗೆ ಹೇಳಿದ ಪೌಲನ ಮಾತುಗಳನ್ನು ನಾವೆಂದೂ ಮರೆಯಬಾರದು: “ನೀನಾದರೋ . . . ಸೌವಾರ್ತಿಕನ ಕೆಲಸವನ್ನು ಮಾಡು; ನಿನ್ನ ಶುಶ್ರೂಷೆಯನ್ನು ಪೂರ್ತಿಯಾಗಿ ನೆರವೇರಿಸು.”—2 ತಿಮೊಥೆ 4:5, NW
[ಪುಟ 23 ರಲ್ಲಿರುವ ಚಿತ್ರ]
ನನ್ನ ಹೆತ್ತವರು, ಎಸೆಫ್ಟಾನೊ ಮತ್ತು ಸೂಲಿಯಾನಾ ಮ್ಯಾಗಾವ್ಲ್ಸ್ಕಿ
[ಪುಟ 26 ರಲ್ಲಿರುವ ಚಿತ್ರ]
ಸೂಸೆ ಮತ್ತು ಬಾರ್ಬ್ರ, ಯೆಹೋವನ ಸಮರ್ಪಿತ ಸೇವಕರಾದ ತಮ್ಮ ಕುಟುಂಬ ಸದಸ್ಯರೊಂದಿಗೆ