ಒಂದು ಐಕ್ಯವಾದ ಕುಟುಂಬದೋಪಾದಿ ಯೆಹೋವನನ್ನು ಸೇವಿಸುವುದು
ಆಂಟೋನ್ಯೂ ಸಾಂಟೊಲೇರಿ ಹೇಳಿದಂತೆ
ನನ್ನ ತಂದೆಯವರು 1919ರಲ್ಲಿ ಇಟಲಿಯನ್ನು ಬಿಟ್ಟುಬಂದಾಗ, ಅವರು 17 ವರ್ಷ ಪ್ರಾಯದವರಾಗಿದ್ದರು. ಅವರು ಹೆಚ್ಚು ಉತ್ತಮವಾದ ಒಂದು ಜೀವಿತದ ಅನ್ವೇಷಣೆಯಲ್ಲಿ ಬ್ರೆಸಿಲ್ಗೆ ಸ್ಥಳಾಂತರಿಸಿದರು. ಸಕಾಲದಲ್ಲಿ, ಸಾವ್ ಪಾವ್ಲೂವಿನ ರಾಜ್ಯದ ಒಳನಾಡಿನಲ್ಲಿರುವ ಚಿಕ್ಕ ಪಟ್ಟಣವೊಂದರಲ್ಲಿ ಅವರು ಒಂದು ಕ್ಷೌರದಂಗಡಿಯನ್ನು ಮಾಡಿಕೊಂಡರು.
ಒಂದು ದಿನ 1938ರಲ್ಲಿ, ನಾನು ಏಳು ವರ್ಷ ಪ್ರಾಯದವನಾಗಿದ್ದಾಗ, ತಮ್ಮ ಕ್ಷೌರದಂಗಡಿಗೆ ಭೇಟಿನೀಡಿದಂತಹ ಒಬ್ಬ ಮನುಷ್ಯನಿಂದ, ತಂದೆಯವರು ಬೈಬಲಿನ ಬ್ರಾಸಿಲೇರ ಭಾಷಾಂತರವನ್ನು ಪಡೆದುಕೊಂಡರು. ಎರಡು ವರ್ಷಗಳ ಬಳಿಕ ತಾಯಿಯವರು ತೀವ್ರವಾಗಿ ಅಸ್ವಸ್ಥರಾದರು ಮತ್ತು ತಮ್ಮ ಮರಣದ ತನಕ ಶಕ್ತಿಗುಂದಿದ ಸ್ಥಿತಿಯಲ್ಲಿ ಉಳಿದರು. ತಂದೆಯವರು ಸಹ ರೋಗಗ್ರಸ್ಥರಾದರು, ಆದುದರಿಂದ ನಾವೆಲ್ಲರೂ—ತಾಯಿ, ತಂದೆ, ನನ್ನ ಸಹೋದರಿಯಾದ ಆನ, ಮತ್ತು ನಾನು—ಸಾವ್ ಪಾವ್ಲೂವಿನ ನಗರದಲ್ಲಿರುವ ಸಂಬಂಧಿಕರೊಂದಿಗೆ ವಾಸಿಸಲಿಕ್ಕಾಗಿ ಹೋದೆವು.
ಸಾವ್ ಪಾವ್ಲೂವಿನಲ್ಲಿನ ನನ್ನ ಶಾಲಾಶಿಕ್ಷಣದ ಸಮಯದಲ್ಲಿ, ನಾನು ಅತ್ಯಾಸಕ್ತಿಯ ವಾಚಕನಾಗಿ ಪರಿಣಮಿಸಿದೆ—ವಿಶೇಷವಾಗಿ ಐತಿಹಾಸಿಕ ಬರಹಗಳ ಕುರಿತಾಗಿ. ಅವುಗಳಲ್ಲಿ ಬೈಬಲು ಆಗಿಂದಾಗ್ಗೆ ಉಲ್ಲೇಖಿಸಲ್ಪಟ್ಟಿರುವುದನ್ನು ನೋಡಿ ನಾನು ಪ್ರಭಾವಿತನಾದೆ. ಸಾವ್ ಪಾವ್ಲೂವಿನ ಸಾರ್ವಜನಿಕ ಗ್ರಂಥಾಲಯದಿಂದ ನಾನು ಎರವಲಾಗಿ ತಂದಿದ್ದಂತಹ ಕಾಲ್ಪನಿಕ ಕಥೆಯ ಒಂದು ಪುಸ್ತಕವು, ಪರ್ವತ ಪ್ರಸಂಗವನ್ನು ಅನೇಕ ಬಾರಿ ಉಲ್ಲೇಖಿಸಿತು. ಆ ಪ್ರಸಂಗವನ್ನು ಸ್ವತಃ ಓದಿಕೊಳ್ಳಲಿಕ್ಕಾಗಿ ಬೈಬಲೊಂದನ್ನು ಪಡೆದುಕೊಳ್ಳಲು ನಿರ್ಧರಿಸಿದ್ದು ಆಗಲೇ. ಅನೇಕ ವರ್ಷಗಳ ಮೊದಲು ತಂದೆಯವರು ಪಡೆದುಕೊಂಡಿದ್ದ ಬೈಬಲಿಗಾಗಿ ನಾನು ಹುಡುಕಾಟ ನಡೆಸಿದೆ ಮತ್ತು ಅಂತಿಮವಾಗಿ ಅದು ಏಳು ವರ್ಷಗಳ ವರೆಗೆ ಎಲ್ಲಿ ಇಡಲ್ಪಟ್ಟಿತ್ತೋ ಆ ಟ್ರಂಕಿನ ತಳಭಾಗದಲ್ಲಿ ಅದನ್ನು ಕಂಡುಕೊಂಡೆ.
ನಮ್ಮ ಕುಟುಂಬವು ಕ್ಯಾಥೊಲಿಕ್ ಕುಟುಂಬವಾಗಿತ್ತು, ಆದುದರಿಂದ ನಾನೆಂದಿಗೂ ಬೈಬಲನ್ನು ಓದುವಂತೆ ಉತ್ತೇಜಿಸಲ್ಪಟ್ಟಿರಲಿಲ್ಲ. ಈಗ, ನಾನಾಗಿಯೇ, ಅಧ್ಯಾಯಗಳನ್ನು ಹಾಗೂ ವಚನಗಳನ್ನು ತೆರೆದು ನೋಡಲು ಕಲಿತುಕೊಂಡೆ. ನಾನು ಮಹತ್ತಾದ ಆನಂದದಿಂದ—ಪರ್ವತ ಪ್ರಸಂಗವನ್ನು ಮಾತ್ರವಲ್ಲ, ಇಡೀ ಮತ್ತಾಯ ಪುಸ್ತಕವನ್ನು ಹಾಗೂ ಇತರ ಬೈಬಲ್ ಪುಸ್ತಕಗಳನ್ನು ಓದಿದೆ. ನನ್ನನ್ನು ಬಹಳವಾಗಿ ಪ್ರಭಾವಿಸಿದ ವಿಷಯವು ಯಾವುದೆಂದರೆ, ಯೇಸುವಿನ ಬೋಧನೆಗಳು ಹಾಗೂ ಅದ್ಭುತಗಳು ಪ್ರಸ್ತುತಪಡಿಸಲ್ಪಟ್ಟಂತಹ ಸತ್ಯದ ಧಾಟಿಯೇ.
ನಾನು ಬೈಬಲಿನಲ್ಲಿ ಓದಿದ ವಿಷಯದಿಂದ ಕ್ಯಾಥೊಲಿಕ್ ಧರ್ಮವು ಎಷ್ಟು ವಿಭಿನ್ನವಾಗಿತ್ತೆಂಬುದನ್ನು ಗ್ರಹಿಸಿಕೊಂಡವನಾಗಿ, ನಾನು ಪ್ರೆಸ್ಬಿಟೇರಿಯನ್ ಚರ್ಚಿಗೆ ಹಾಜರಾಗಲಾರಂಭಿಸಿದೆ, ಮತ್ತು ಆನ ನನ್ನ ಜೊತೆಗೂಡಿದಳು. ಆದರೂ, ಇನ್ನೂ ನನ್ನ ಮನಸ್ಸಿನಲ್ಲಿ ನನಗೆ ಶೂನ್ಯಭಾವದ ಅನಿಸಿಕೆಯಾಯಿತು. 17 ವರ್ಷಗಳಿಂದ ನಾನು ದೇವರಿಗಾಗಿ ಅತ್ಯಾಸಕ್ತಿಯಿಂದ ಹುಡುಕುತ್ತಿದ್ದೆ. (ಅ. ಕೃತ್ಯಗಳು 17:27) ನಕ್ಷತ್ರಮಯವಾದ ಒಂದು ರಾತ್ರಿಯಂದು, ನಾನು ಚಿಂತಾಕ್ರಾಂತ ಮನಃಸ್ಥಿತಿಯಲ್ಲಿದ್ದಾಗ, ‘ನಾನು ಏಕೆ ಇಲ್ಲಿದ್ದೇನೆ? ಜೀವಿತದ ಉದ್ದೇಶವೇನು?’ ಎಂಬುದಾಗಿ ನಾನು ಕೌತುಕಗೊಂಡೆ. ನಾನು ಹಿತ್ತಿಲಿನಲ್ಲಿ ಪ್ರತ್ಯೇಕವಾದ ಸ್ಥಳವನ್ನು ಆರಿಸಿಕೊಂಡು, ಮೊಣಕಾಲೂರಿ, ‘ಕರ್ತನಾದ ದೇವರೇ! ನೀನು ಯಾರು? ನಾನು ನಿನ್ನನ್ನು ಹೇಗೆ ತಿಳಿದುಕೊಳ್ಳಸಾಧ್ಯವಿದೆ?’ ಎಂಬುದಾಗಿ ಪ್ರಾರ್ಥಿಸಿದೆ. ತದನಂತರ ಸ್ವಲ್ಪದರಲ್ಲಿಯೇ ಉತ್ತರವು ಬಂತು.
ಬೈಬಲ್ ಸತ್ಯವನ್ನು ಕಲಿಯುವುದು
1949ರಲ್ಲಿ ಒಂದು ದಿನ, ತಂದೆಯವರು ಒಂದು ಸ್ಟ್ರೀಟ್ಕಾರಿನಿಂದ ಕೆಳಗಿಳಿಯುತ್ತಿದ್ದಂತೆ, ಒಬ್ಬ ಯುವ ಸ್ತ್ರೀಯು ಅವರನ್ನು ಸಮೀಪಿಸಿದಳು. ಅವಳು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಅವರಿಗೆ ನೀಡಿದಳು. ಅವರು ಕಾವಲಿನಬುರುಜು ಪತ್ರಿಕೆಯ ಚಂದಾಮಾಡಿದರು ಮತ್ತು ಪ್ರೆಸ್ಬಿಟೇರಿಯನ್ ಚರ್ಚಿಗೆ ಹಾಜರಾದ ಇಬ್ಬರು ಮಕ್ಕಳು ತನಗಿದ್ದಾರೆಂಬುದನ್ನು ವಿವರಿಸುತ್ತಾ, ನಮ್ಮ ಮನೆಗೆ ಭೇಟಿ ನೀಡುವಂತೆ ಅವಳನ್ನು ಕೇಳಿಕೊಂಡರು. ಆ ಸ್ತ್ರೀಯ ಭೇಟಿಯ ಸಮಯದಲ್ಲಿ, ಅವಳು ಆನಳೊಂದಿಗೆ ಮಕ್ಕಳು (ಇಂಗ್ಲಿಷ್) ಎಂಬ ಪುಸ್ತಕವನ್ನು ಬಿಟ್ಟುಹೋದಳು ಮತ್ತು ಅವಳೊಂದಿಗೆ ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸಿದಳು. ತದನಂತರ ನಾನೂ ಆ ಅಭ್ಯಾಸದಲ್ಲಿ ಜೊತೆಗೂಡಿದೆ.
1950ರ ನವೆಂಬರ್ ತಿಂಗಳಿನಲ್ಲಿ ನಮ್ಮ ಪ್ರಥಮ ಯೆಹೋವನ ಸಾಕ್ಷಿಗಳ ಅಧಿವೇಶನಕ್ಕೆ ನಾವು ಹಾಜರಾದೆವು. ಅಲ್ಲಿ “ದೇವರು ಸತ್ಯವಂತನೇ ಸರಿ” ಎಂಬ ಪುಸ್ತಕವು ಬಿಡುಗಡೆಮಾಡಲ್ಪಟ್ಟಿತು, ಮತ್ತು ಆ ಪುಸ್ತಕವನ್ನು ನಮ್ಮ ಮಾರ್ಗದರ್ಶಕವಾಗಿ ಉಪಯೋಗಿಸುತ್ತಾ ನಾವು ನಮ್ಮ ಬೈಬಲ್ ಅಭ್ಯಾಸವನ್ನು ಮುಂದುವರಿಸಿದೆವು. ತದನಂತರ ನಾವು ಬೇಗನೆ ಸತ್ಯವನ್ನು ಕಂಡುಕೊಂಡಿದ್ದೇವೆಂದು ವಿವೇಚಿಸಿ, ಯೆಹೋವನಿಗೆ ನಮ್ಮ ಸಮರ್ಪಣೆಯ ಸಂಕೇತವಾಗಿ 1951ರ ಎಪ್ರಿಲ್ ತಿಂಗಳಿನಲ್ಲಿ ನಾವು ದೀಕ್ಷಾಸ್ನಾನ ಪಡೆದುಕೊಂಡೆವು. ಕೆಲವು ವರ್ಷಗಳ ತರುವಾಯ ತಂದೆಯವರು ತಮ್ಮ ಸಮರ್ಪಣೆಯನ್ನು ಮಾಡಿಕೊಂಡು, ದೇವರಿಗೆ ನಂಬಿಗಸ್ತರಾಗಿದ್ದು, 1982ರಲ್ಲಿ ಮರಣಪಟ್ಟರು.
ಪೂರ್ಣ ಸಮಯದ ಸೇವೆಯಲ್ಲಿ ಸಂತೋಷಿತನು
1954ರ ಜನವರಿ ತಿಂಗಳಿನಲ್ಲಿ, ನಾನು ಇನ್ನೂ ಕೇವಲ 22 ವರ್ಷ ಪ್ರಾಯದವನಿದ್ದಾಗ, ಬೆತೆಲ್ ಎಂದು ಕರೆಯಲ್ಪಡುವ, ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿನಲ್ಲಿನ ಸೇವೆಗಾಗಿ ನಾನು ಅಂಗೀಕರಿಸಲ್ಪಟ್ಟೆ. ಅಲ್ಲಿಗೆ ಆಗಮಿಸಿದಾಗ, ನನಗಿಂತ ಎರಡೇ ವರ್ಷಗಳಷ್ಟು ಹಿರಿಯನಾಗಿದ್ದ ರಿಕಾರ್ಟ್ ಮೂಕ ಎಂಬ ವ್ಯಕ್ತಿಯು, ಬ್ರಾಂಚ್ ಮೇಲ್ವಿಚಾರಕನಾಗಿದ್ದನೆಂಬುದನ್ನು ಕಂಡು ನಾನು ಆಶ್ಚರ್ಯಚಕಿತನಾದೆ. 1955ರಲ್ಲಿ, ಆಗ ಸಂಚಾರ ಮೇಲ್ವಿಚಾರಕರೆಂದು ಕರೆಯಲ್ಪಡುತ್ತಿದ್ದ ಸರ್ಕಿಟ್ ಸೇವಕರಿಗಾಗಿ ಒಂದು ಆವಶ್ಯಕತೆಯು ಕಂಡುಬಂದಾಗ, ಈ ಸೇವೆಯಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಿಸಲ್ಪಟ್ಟಿದ್ದ ಐವರಲ್ಲಿ ನಾನೂ ಇದ್ದೆ.
ನನ್ನ ನೇಮಕವು ರೀಯೊ ಗ್ರಾಂಡಿ ಡೋ ಸೂಲ್ನ ರಾಜ್ಯವಾಗಿತ್ತು. ಅಲ್ಲಿ ನಾನು ಸರ್ಕಿಟ್ ಕೆಲಸವನ್ನು ಆರಂಭಿಸಿದಾಗ ಯೆಹೋವನ ಸಾಕ್ಷಿಗಳ 8 ಸಭೆಗಳು ಮಾತ್ರವೇ ಇದ್ದವು, ಆದರೆ 18 ತಿಂಗಳುಗಳೊಳಗೆ 2 ಹೊಸ ಸಭೆಗಳು ಹಾಗೂ 20 ಪ್ರತ್ಯೇಕ ಗುಂಪುಗಳು ಸ್ಥಾಪಿಸಲ್ಪಟ್ಟವು. ಈ ಕ್ಷೇತ್ರದಲ್ಲಿ ಇಂದು, ಯೆಹೋವನ ಸಾಕ್ಷಿಗಳ 15 ಸರ್ಕಿಟುಗಳಿದ್ದು, ಅವುಗಳಲ್ಲಿ ಪ್ರತಿಯೊಂದರಲ್ಲಿ ಸುಮಾರು 20 ಸಭೆಗಳಿವೆ! 1956ರ ಅಂತ್ಯ ಭಾಗದಷ್ಟಕ್ಕೆ, ನನ್ನ ಸರ್ಕಿಟು ನಾಲ್ಕು ಚಿಕ್ಕ ಸರ್ಕಿಟುಗಳಾಗಿ ವಿಭಾಗಿಸಲ್ಪಟ್ಟಿದ್ದು, ನಾಲ್ಕು ಸರ್ಕಿಟ್ ಸೇವಕರಿಂದ ಅವುಗಳು ನಿರ್ವಹಿಸಲ್ಪಡುವವು ಎಂದು ನನಗೆ ಹೇಳಲ್ಪಟ್ಟಿತು. ಆ ಸಮಯದಲ್ಲಿ ಒಂದು ಹೊಸ ನೇಮಕಕ್ಕಾಗಿ ಬೆತೆಲ್ಗೆ ಹಿಂದಿರುಗುವಂತೆ ನಾನು ನಿರ್ದೇಶಿಸಲ್ಪಟ್ಟೆ.
ನನ್ನ ಆಶ್ಚರ್ಯ ಹಾಗೂ ಆನಂದಕ್ಕೆ, ನಾನು ಅನೇಕ ಸರ್ಕಿಟುಗಳನ್ನು ನಿರ್ವಹಿಸುವ ಒಬ್ಬ ಸಂಚಾರ ಶುಶ್ರೂಷಕನಾದ ಡಿಸ್ಟ್ರಿಕ್ಟ್ ಮೇಲ್ವಿಚಾರಕನಾಗಿ ಉತ್ತರ ಬ್ರೆಸಿಲ್ಗೆ ನೇಮಿಸಲ್ಪಟ್ಟೆ. ಆಗ ಬ್ರೆಸಿಲ್ನಲ್ಲಿ ಯೆಹೋವನ ಸಾಕ್ಷಿಗಳ 12,000 ಶುಶ್ರೂಷಕರಿದ್ದರು, ಮತ್ತು ಆ ದೇಶದಲ್ಲಿ ಎರಡು ಡಿಸ್ಟ್ರಿಕ್ಟ್ಗಳಿದ್ದವು. ದಕ್ಷಿಣ ಭಾಗದಲ್ಲಿ ರಿಕಾರ್ಟ್ ವುಟ್ಕೆ ಸೇವೆಮಾಡುತ್ತಿದ್ದನು, ಮತ್ತು ಉತ್ತರದಲ್ಲಿನ ಡಿಸ್ಟ್ರಿಕ್ಟ್ ನನಗಾಗಿತ್ತು. ಯೆಹೋವನ ಸಾಕ್ಷಿಗಳಿಂದ ಉತ್ಪಾದಿಸಲ್ಪಟ್ಟ, ನೂತನ ಲೋಕ ಸಮಾಜವು ಕ್ರಿಯೆಯಲ್ಲಿ ಮತ್ತು ನೂತನ ಲೋಕ ಸಮಾಜದ ಸಂತೋಷ (ಇಂಗ್ಲಿಷ್) ಎಂಬ ಫಿಲ್ಮ್ಗಳನ್ನು ತೋರಿಸಲಿಕ್ಕಾಗಿ ಪ್ರೊಜೆಕ್ಟರನ್ನು ಉಪಯೋಗಿಸಲು ನಮಗೆ ಬೆತೆಲಿನಲ್ಲಿ ತರಬೇತಿ ನೀಡಲ್ಪಟ್ಟಿತು.
ಆ ದಿನಗಳಲ್ಲಿ ಪ್ರಯಾಣವು ತುಂಬಾ ಭಿನ್ನವಾಗಿತ್ತು. ಸಾಕ್ಷಿಗಳಲ್ಲಿ ಯಾರ ಬಳಿಯೂ ಒಂದು ಮೋಟಾರುಗಾಡಿಯಿರಲಿಲ್ಲ, ಆದುದರಿಂದ ನಾನು ತೋಡುದೋಣಿ, ಹುಟ್ಟುದೋಣಿ, ಎತ್ತಿನಗಾಡಿ, ಕುದುರೆಯ ಮೇಲೆ, ವ್ಯಾಗನ್ ರೈಲುಬಂಡಿ, ಟ್ರಕ್ಕು, ಮತ್ತು ಒಮ್ಮೆ ವಿಮಾನದ ಮೂಲಕ ಪ್ರಯಾಣಿಸಿದೆ. ಆ್ಯಮಸಾನಸ್ ರಾಜ್ಯದ ರಾಜಧಾನಿ, ಆ್ಯಮಸಾನ್ ಮತ್ತು ಮನೌಸ್ನ ಬಾಯಿಯ ಬಳಿಯ ಬೆಲೆಮ್ನ ನಡುವೆ ಇರುವ ಒಂದು ನಗರವಾದ, ಸಾಂಟರೆಮ್ನಲ್ಲಿ ಬಂದಿಳಿಯಲಿಕ್ಕಾಗಿ, ಆ್ಯಮಸಾನ್ ಕಾಡಿನ ಮೇಲಿನಿಂದ ಹಾರುವುದು ರೋಮಾಂಚಕವಾಗಿತ್ತು. ಆಗ ಡಿಸ್ಟ್ರಿಕ್ಟ್ ಮೇಲ್ವಿಚಾರಕರಿಗೆ ಕಾರ್ಯನಡಿಸಲಿಕ್ಕಾಗಿ ಕೆಲವೇ ಸರ್ಕಿಟ್ ಸಮ್ಮೇಳನಗಳಿದ್ದವು, ಆದುದರಿಂದ ನಾನು ನನ್ನ ಹೆಚ್ಚಿನ ಸಮಯವನ್ನು ಸೊಸೈಟಿಯ ಫಿಲ್ಮ್ಗಳನ್ನು ತೋರಿಸುವುದರಲ್ಲಿ ವ್ಯಯಿಸಿದೆ. ಹೆಚ್ಚು ದೊಡ್ಡ ನಗರಗಳಲ್ಲಿ, ನೂರಾರು ಮಂದಿ ಹಾಜರಾದರು.
ಉತ್ತರ ಬ್ರೆಸಿಲ್ನಲ್ಲಿ ನನ್ನನ್ನು ಬಹಳವಾಗಿ ಪ್ರಭಾವಿಸಿದ್ದು, ಆ್ಯಮಸಾನ್ ಪ್ರಾಂತವಾಗಿತ್ತು. 1957ರ ಎಪ್ರಿಲ್ ತಿಂಗಳಿನಲ್ಲಿ ನಾನು ಅಲ್ಲಿ ಸೇವೆಮಾಡುತ್ತಿದ್ದಾಗ, ಆ್ಯಮಸಾನ್ ನದಿ ಹಾಗೂ ಅದರ ಉಪನದಿಗಳು ತಮ್ಮ ದಡಗಳಿಂದ ಉಕ್ಕಿಹರಿದವು. ಕಾಡಿನಲ್ಲಿ, ಎರಡು ಮರಗಳ ನಡುವೆ ಪರದೆಯನ್ನು ನಿರ್ಮಿಸಿ, ಫಿಲ್ಮ್ಗಳಲ್ಲಿ ಒಂದನ್ನು ತೋರಿಸುವ ಸುಯೋಗವು ನನಗಿತ್ತು. ಪ್ರೊಜೆಕ್ಟರ್ಗಾಗಿದ್ದ ವಿದ್ಯುಚ್ಛಕ್ತಿಯು, ಸಮೀಪದ ನದಿಯಲ್ಲಿ ಲಂಗರುಹಾಕಲ್ಪಟ್ಟಿದ್ದ ಮೋಟಾರುದೋಣಿಯೊಂದರಿಂದ ಬಂತು. ಇದು ಸಭಿಕರಲ್ಲಿ ಹೆಚ್ಚಿನವರು ಎಂದಾದರೂ ನೋಡಿದ್ದ ಫಿಲ್ಮ್ಗಳಲ್ಲಿ ಪ್ರಥಮ ಫಿಲ್ಮ್ ಆಗಿತ್ತು.
ತದನಂತರ ಸ್ವಲ್ಪದರಲ್ಲಿಯೇ ನಾನು ಬೆತೆಲ್ ಸೇವೆಗಾಗಿ ಹಿಂದಿರುಗಿದೆ, ಮತ್ತು ಹಿಂಬಾಲಿಸಿದ ವರ್ಷವಾದ 1958ರಲ್ಲಿ, ನ್ಯೂ ಯಾರ್ಕ್ ನಗರದಲ್ಲಿನ ಯೆಹೋವನ ಸಾಕ್ಷಿಗಳ ಇತಿಹಾಸ ಪ್ರಸಿದ್ಧವಾದ “ದೈವಿಕ ಇಚ್ಛೆ” ಎಂಬ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಹಾಜರಾಗುವ ಸುಯೋಗವು ನನಗಿತ್ತು. ಎಂಟು ದಿನದ ಆ ಅಧಿವೇಶನದ ಕೊನೆಯ ದಿನದಂದು, ಯಾಂಕೀ ಸ್ಟೇಡಿಯಮ್ ಹಾಗೂ ಸಮೀಪದ ಪೊಲೋ ಗ್ರೌಂಡ್ಸ್ನಲ್ಲಿ ನೆರೆದಿದ್ದ, 2,53,922 ಮಂದಿಯ ನಡುವೆ, 123 ದೇಶಗಳಿಂದ ಬಂದ ಪ್ರತಿನಿಧಿಗಳಿದ್ದರು.
ನನ್ನ ಜೀವನದಲ್ಲಿನ ಬದಲಾವಣೆಗಳಲ್ಲಿ ಆನಂದಿಸುವುದು
ಬೆತೆಲಿಗೆ ಹಿಂದಿರುಗಿದ ಸ್ವಲ್ಪಸಮಯದಲ್ಲಿಯೇ, ನಾನು ಕ್ಲಾರ ಬರ್ನ್ಟ್ಳೊಂದಿಗೆ ಪರಿಚಿತನಾದೆ, ಮತ್ತು 1959ರ ಮಾರ್ಚ್ ತಿಂಗಳಿನಲ್ಲಿ ನಾವು ವಿವಾಹವಾದೆವು. ನಾವು ಬಹೀಯದ ರಾಜ್ಯದಲ್ಲಿ ಸರ್ಕಿಟ್ ಕೆಲಸಕ್ಕಾಗಿ ನೇಮಿಸಲ್ಪಟ್ಟೆವು; ಅಲ್ಲಿ ನಾವು ಸುಮಾರು ಒಂದು ವರ್ಷದ ವರೆಗೆ ಸೇವೆಮಾಡಿದೆವು. ಕ್ಲಾರ ಮತ್ತು ನಾನು, ಅಲ್ಲಿನ ಸಹೋದರರ ದೈನ್ಯಭಾವ, ಅತಿಥಿಸತ್ಕಾರ, ಹುರುಪು ಮತ್ತು ಪ್ರೀತಿಯನ್ನು ಇನ್ನೂ ಜ್ಞಾಪಿಸಿಕೊಳ್ಳುತ್ತೇವೆ; ಅವರು ಪ್ರಾಪಂಚಿಕವಾಗಿ ಬಡವರಾಗಿದ್ದರು, ಆದರೆ ರಾಜ್ಯ ಫಲದಲ್ಲಿ ಐಶ್ವರ್ಯವಂತರಾಗಿದ್ದರು. ತದನಂತರ ನಾವು ಸಾವ್ ಪಾವ್ಲೂ ರಾಜ್ಯಕ್ಕೆ ವರ್ಗಾಯಿಸಲ್ಪಟ್ಟೆವು. 1960ರಲ್ಲಿ, ನನ್ನ ಹೆಂಡತಿಯು ಗರ್ಭಿಣಿಯಾದದ್ದು ಅಲ್ಲಿಯೇ, ಮತ್ತು ನಾವು ಪೂರ್ಣ ಸಮಯದ ಶುಶ್ರೂಷೆಯನ್ನು ಬಿಡಬೇಕಾಯಿತು.
ನಾವು ಸಾಂಟ ಕಾಟರೀನ ರಾಜ್ಯದಲ್ಲಿರುವ ಸ್ಥಳವೊಂದಕ್ಕೆ ಸ್ಥಳಾಂತರಿಸಲು ನಿರ್ಧರಿಸಿದೆವು, ನನ್ನ ಹೆಂಡತಿಯು ಹುಟ್ಟಿದ್ದು ಅದೇ ಸ್ಥಳದಲ್ಲಿ. ನಮ್ಮ ಐವರು ಮಕ್ಕಳಲ್ಲಿ ನನ್ನ ಮಗನಾದ ಗೆರ್ಸೋನ್ ಮೊದಲನೆಯವನಾಗಿದ್ದನು. ಅವನ ನಂತರ 1962ರಲ್ಲಿ ಗೀಲ್ಸನ್, 1965ರಲ್ಲಿ ಟೇಲೀಟ, 1969ರಲ್ಲಿ ಟಾರ್ಸ್ಯೊ, ಮತ್ತು 1974ರಲ್ಲಿ ಜಾನೀಸೀ ಹುಟ್ಟಿದರು. ಯೆಹೋವನ ಹಾಗೂ ಆತನು ಒದಗಿಸುವ ಅತ್ಯುತ್ತಮ ಸಲಹೆಯ ಪರಿಣಾಮವಾಗಿ, ಅವರನ್ನು “ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆ”ಯಲ್ಲಿ ಬೆಳೆಸುವ ಪಂಥಾಹ್ವಾನವನ್ನು ಎದುರಿಸಲು ನಾವು ಶಕ್ತರಾಗಿದ್ದೆವು.—ಎಫೆಸ 6:4, NW.
ನಮ್ಮ ಮಕ್ಕಳಲ್ಲಿ ಪ್ರತಿಯೊಬ್ಬರನ್ನೂ ನಾವು ಅಮೂಲ್ಯವಾಗಿ ಪರಿಗಣಿಸುತ್ತೇವೆ. ನಮ್ಮ ಅನಿಸಿಕೆಗಳನ್ನು ಕೀರ್ತನೆಗಾರನು ಬಹಳ ಚೆನ್ನಾಗಿ ವ್ಯಕ್ತಪಡಿಸಿದ್ದಾನೆ: “ಪುತ್ರಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯವು.” (ಕೀರ್ತನೆ 127:3) ಸಮಸ್ಯೆಗಳ ಹೊರತಾಗಿಯೂ, “ಯೆಹೋವನಿಂದ ಬಂದ” ಯಾವುದೇ “ಸ್ವಾಸ್ತ್ಯ”ವನ್ನು ನಾವು ನೋಡಿಕೊಳ್ಳುತ್ತಿದ್ದಂತೆಯೇ, ಆತನ ವಾಕ್ಯದಲ್ಲಿ ಕಂಡುಬರುವ ಬೋಧನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡವರಾಗಿ ನಾವು ನಮ್ಮ ಮಕ್ಕಳ ಆರೈಕೆಮಾಡಿದ್ದೇವೆ. ಅನೇಕ ಪ್ರತಿಫಲಗಳು ದೊರಕಿವೆ. ಯೆಹೋವನಿಗೆ ತಮ್ಮ ಸಮರ್ಪಣೆಯ ಸಂಕೇತವಾಗಿರುವ ದೀಕ್ಷಾಸ್ನಾನ ಪಡೆದುಕೊಳ್ಳಲಿಕ್ಕಾಗಿ, ಐದು ಮಂದಿ ಮಕ್ಕಳೆಲ್ಲರೂ ಅನುಕ್ರಮವಾಗಿ, ಪ್ರತ್ಯೇಕವಾಗಿ, ಹಾಗೂ ತಮ್ಮ ಸ್ವಂತ ಇಚ್ಛೆಯಿಂದ ತಮ್ಮ ಬಯಕೆಯನ್ನು ವ್ಯಕ್ತಪಡಿಸಿಕೊಂಡಾಗ, ಅದು ನಮಗೆ ಅವರ್ಣನೀಯ ಆನಂದವನ್ನು ಕೊಟ್ಟಿತು.—ಪ್ರಸಂಗಿ 12:1.
ನಮ್ಮ ಮಕ್ಕಳ ಆಯ್ಕೆಗಳು
ಡೇಟ ಪ್ರೊಸೆಸಿಂಗ್ನಲ್ಲಿ ಒಂದು ಕೋರ್ಸನ್ನು ಪೂರ್ಣಗೊಳಿಸಿದ ಕೂಡಲೆ ಗೆರ್ಸೋನ್, ಒಂದು ವೃತ್ತಿಪರ ಜೀವನೋಪಾಯಕ್ಕೆ ಬದಲಾಗಿ ಪೂರ್ಣ ಸಮಯದ ಶುಶ್ರೂಷೆಯನ್ನು ಆರಿಸಿಕೊಳ್ಳುತ್ತಾ, ತಾನು ಬೆತೆಲ್ನಲ್ಲಿ ಸೇವೆಮಾಡಲು ಬಯಸುತ್ತೇನೆಂದು ಹೇಳಿದಾಗ ನಾವು ಅಪಾರವಾಗಿ ಆನಂದಪಟ್ಟೆವು. ಆದರೂ ಆರಂಭದಲ್ಲಿ ಗೆರ್ಸೋನ್ಗೆ ಬೆತೆಲ್ ಜೀವನವು ಸುಲಭವಾದದ್ದಾಗಿರಲಿಲ್ಲ. ಅವನು ಬೆತೆಲಿಗೆ ಹೋಗಿ ಕೇವಲ ನಾಲ್ಕು ತಿಂಗಳುಗಳಾದಾಗ, ಅವನನ್ನು ಸಂದರ್ಶಿಸಿದ ಬಳಿಕ, ನಾವು ಅಲ್ಲಿಂದ ಹೊರಟಾಗ ಅವನ ಮುಖದಲ್ಲಿ ಪ್ರತಿಫಲಿತವಾದ ದುಃಖಭಾವದಿಂದ ನಾನು ಗಾಢವಾಗಿ ಪ್ರಭಾವಿಸಲ್ಪಟ್ಟೆ. ನಾವು ರಸ್ತೆಯಲ್ಲಿ ಮೊದಲನೆಯ ತಿರುವನ್ನು ದಾಟುವ ವರೆಗೆ ಅವನು ನಮ್ಮನ್ನು ವೀಕ್ಷಿಸುತ್ತಿದುದನ್ನು, ನಮ್ಮ ಕಾರಿನ ರಿಯರ್ವ್ಯೂ ಕನ್ನಡಿಯಲ್ಲಿ ನಾನು ನೋಡಿದೆ. ನನ್ನ ಕಣ್ಣುಗಳು ಕಣ್ಣೀರಿನಿಂದ ಎಷ್ಟು ತುಂಬಿದ್ದವೆಂದರೆ, ನಮ್ಮ 700 ಕಿಲೊಮೀಟರ್ ದೂರದ ಮನೆಯ ಪ್ರಯಾಣಕ್ಕೆ ಮುಂದುವರಿಯುವುದಕ್ಕೆ ಮೊದಲು, ರಸ್ತೆಯ ಬದಿಯಲ್ಲಿ ನಾನು ಕಾರನ್ನು ನಿಲ್ಲಿಸಬೇಕಾಯಿತು.
ನಿಜವಾಗಿಯೂ ಗೆರ್ಸೋನ್ ಬೆತೆಲ್ ಸೇವೆಯಲ್ಲಿ ಆನಂದಿಸಲಾರಂಭಿಸಿದನು. ಅಲ್ಲಿ ಬಹುಮಟ್ಟಿಗೆ ಆರು ವರ್ಷಗಳಿದ್ದ ಬಳಿಕ, ಅವನು ಹೈಡೀ ಬೆಸರ್ಳನ್ನು ವಿವಾಹವಾಗಿ, ಅವರಿಬ್ಬರೂ ಒಟ್ಟಿಗೆ ಇನ್ನೂ ಎರಡು ವರ್ಷಗಳ ವರೆಗೆ ಬೆತೆಲ್ನಲ್ಲಿ ಸೇವೆಮಾಡಿದರು. ತದನಂತರ ಹೈಡೀ ಗರ್ಭಿಣಿಯಾದಳು, ಮತ್ತು ಅವರು ಬೆತೆಲನ್ನು ಬಿಡಬೇಕಾಯಿತು. ಈಗ ಆರು ವರ್ಷ ಪ್ರಾಯದವಳಾಗಿರುವ ಅವರ ಮಗಳಾದ ಸೀಂಟ್ಯ, ಅವರ ರಾಜ್ಯ ಚಟುವಟಿಕೆಗಳಲ್ಲಿ ಅವರೊಂದಿಗೆ ಜೊತೆಗೂಡುತ್ತಾಳೆ.
ನಾವು ಬೆತೆಲಿನಲ್ಲಿ ಗೆರ್ಸೋನ್ನನ್ನು ಪ್ರಥಮವಾಗಿ ಸಂದರ್ಶಿಸಿದ ಬಳಿಕ ಸ್ವಲ್ಪಸಮಯದಲ್ಲಿಯೇ, ವ್ಯಾಪಾರ ಕಾರ್ಯಭಾರದಲ್ಲಿ ತನ್ನ ಪ್ರಥಮ ವರ್ಷವನ್ನು ಇತ್ತೀಚೆಗೆ ಪೂರ್ಣಗೊಳಿಸಿದ್ದ ಗೀಲ್ಸನ್, ತಾನು ಸಹ ಅಲ್ಲಿ ಸೇವೆಮಾಡಲು ಬಯಸುತ್ತೇನೆಂದು ಹೇಳಿದನು. ಬೆತೆಲ್ನಲ್ಲಿ ಒಂದು ವರ್ಷ ಸೇವೆಮಾಡಿದ ಬಳಿಕ ತನ್ನ ಬಿಸ್ನೆಸ್ ಕೋರ್ಸನ್ನು ಪುನಃ ಆರಂಭಿಸುವುದು ಅವನ ಯೋಜನೆಗಳಾಗಿದ್ದವು. ಆದರೆ ಅವನ ಯೋಜನೆಗಳು ಬದಲಾಯಿಸಲ್ಪಟ್ಟವು, ಮತ್ತು ಅವನು ಬೆತೆಲ್ ಸೇವೆಯಲ್ಲಿಯೇ ಉಳಿದನು. 1988ರಲ್ಲಿ, ಅವನು ಒಬ್ಬ ಪಯನೀಯರಳಾದ—ಪೂರ್ಣ ಸಮಯದ ಶುಶ್ರೂಷಕರು ಹೀಗೆ ಕರೆಯಲ್ಪಡುತ್ತಾರೆ—ವೀವೀಯಾನ್ ಗೊನ್ಸಾಲ್ವಿಸ್ಳನ್ನು ವಿವಾಹವಾದನು. ಅಂದಿನಿಂದ, ಅವರು ಒಟ್ಟಿಗೆ ಬೆತೆಲಿನಲ್ಲಿ ಸೇವೆಮಾಡುತ್ತಿದ್ದಾರೆ.
ನಮ್ಮ ಮೂರನೆಯ ಮಗುವಾದ ಟೇಲೀಟಳು, ಡ್ರಾಫ್ಟಿಂಗ್ನಲ್ಲಿ ಒಂದು ಕೋರ್ಸನ್ನು ತೆಗೆದುಕೊಂಡ ಬಳಿಕ, 1986ರಲ್ಲಿ ಪಯನೀಯರ್ ಸೇವೆಯನ್ನು ಪ್ರವೇಶಿಸಲು ಆರಿಸಿಕೊಂಡಾಗ, ನಮ್ಮ ಹರ್ಷಗಳು ಮುಂದುವರಿದವು. ಮೂರು ವರ್ಷಗಳ ಬಳಿಕ ಅವಳೂ ಬೆತೆಲಿಗೆ ಆಮಂತ್ರಿಸಲ್ಪಟ್ಟಳು. 1991ರಲ್ಲಿ, ಅವಳು ಹತ್ತು ವರ್ಷಗಳಿಂದ ಬೆತೆಲಿನಲ್ಲಿ ಸೇವೆಮಾಡುತ್ತಿದ್ದ ಸೂಸೆ ಕೋಸೀಯನ್ನು ವಿವಾಹವಾದಳು. ಅವರು ಅಲ್ಲಿ ಒಬ್ಬ ವಿವಾಹಿತ ದಂಪತಿಗಳೋಪಾದಿ ಕಾರ್ಯನಡಿಸುವುದನ್ನು ಮುಂದುವರಿಸಿದ್ದಾರೆ.
ಸಾಲಿನಲ್ಲಿ ನಂತರ ಇದ್ದ ಟಾರ್ಸ್ಯೊ, ಈಗಾಗಲೇ ನಾವು ಮೂರು ಬಾರಿ ಕೇಳಿದ್ದ, “ಅಪ್ಪಾ, ನಾನು ಬೆತೆಲಿಗೆ ಹೋಗಲು ಬಯಸುತ್ತೇನೆ” ಎಂಬ ಅದೇ ವಾಕ್ಸರಣಿಯನ್ನು ಪುನರಾವರ್ತಿಸಿದಾಗ, ನನ್ನ ಹೆಂಡತಿಯೂ ನಾನೂ ಪುನಃ ಹರ್ಷಗೊಂಡೆವು. ಅವನ ಅರ್ಜಿಯು ಅಂಗೀಕರಿಸಲ್ಪಟ್ಟಿತು, ಮತ್ತು 1991ರಲ್ಲಿ ಅವನೂ ಬೆತೆಲ್ ಸೇವೆಯನ್ನು ಪ್ರಾರಂಭಿಸಿ, ಅಲ್ಲಿ ಅವನು 1995ರ ವರೆಗೆ ಉಳಿದನು. ಅವನು ತನ್ನ ಯೌವನಭರಿತ ಓಜಸ್ಸನ್ನು, ಮೂರು ವರ್ಷಗಳಿಗಿಂತಲೂ ಹೆಚ್ಚು ಸಮಯದ ವರೆಗೆ, ಈ ರೀತಿಯಲ್ಲಿ ಯೆಹೋವನ ರಾಜ್ಯಾಭಿರುಚಿಗಳನ್ನು ಪ್ರವರ್ಧಿಸಲು ಉಪಯೋಗಿಸಿದುದಕ್ಕಾಗಿ ನಾವು ಸಂತೋಷಿತರಾಗಿದ್ದೇವೆ.
ನಮ್ಮ ಅತ್ಯಂತ ಕಿರಿಯ ಮಗಳಾದ ಜಾನೀಸೀ, ಯೆಹೋವನ ಸೇವೆಮಾಡಲಿಕ್ಕಾಗಿರುವ ತನ್ನ ನಿರ್ಧಾರವನ್ನು ಮಾಡಿ, 13 ವರ್ಷ ಪ್ರಾಯದಲ್ಲಿ ದೀಕ್ಷಾಸ್ನಾನ ಪಡೆದುಕೊಂಡಳು. ಅವಳ ಶಾಲಾಶಿಕ್ಷಣದ ಸಮಯದಲ್ಲಿ, ಅವಳು ಒಬ್ಬ ಆಕ್ಸಿಲಿಯರಿ ಪಯನೀಯರಳೋಪಾದಿ ಒಂದು ವರ್ಷದ ವರೆಗೆ ಸೇವೆಮಾಡಿದಳು. ತದನಂತರ, 1993ರ ಸೆಪ್ಟೆಂಬರ್ 1ರಂದು, ಗಾಸ್ಪಾರ್ ನಗರದಲ್ಲಿನ ನಮ್ಮ ಸಭೆಯಲ್ಲಿ ಒಬ್ಬ ಕ್ರಮದ ಪಯನೀಯರಳೋಪಾದಿ ಸೇವೆಯನ್ನು ಆರಂಭಿಸಿದಳು.
ಸಾಫಲ್ಯದ ಮಾರ್ಗ
ಒಂದು ಕುಟುಂಬವನ್ನು ಯೆಹೋವನ ಆರಾಧನೆಯಲ್ಲಿ ಐಕ್ಯವಾಗಿರಿಸುವುದರ ರಹಸ್ಯವೇನಾಗಿದೆ? ಯಾವುದೋ ಮಾಂತ್ರಿಕ ಸೂತ್ರವಿದೆಯೆಂಬುದನ್ನು ನಾನು ನಂಬುವುದಿಲ್ಲ. ಕ್ರೈಸ್ತ ಹೆತ್ತವರು ಅನುಸರಿಸಲಿಕ್ಕಾಗಿ ಯೆಹೋವನು ತನ್ನ ವಾಕ್ಯದಲ್ಲಿ ಸಲಹೆಯನ್ನು ಒದಗಿಸಿದ್ದಾನೆ, ಆದುದರಿಂದ ನಾವು ಅನುಭವಿಸಿರುವ ಅತ್ಯುತ್ತಮವಾದ ಫಲಿತಾಂಶಗಳಿಗಾಗಿರುವ ಎಲ್ಲಾ ಕೀರ್ತಿಯು ಆತನಿಗೇ ಸಲ್ಲಬೇಕು. ನಾವು ಆತನ ಮಾರ್ಗದರ್ಶನಗಳನ್ನು ಅನುಸರಿಸಲು ಮಾತ್ರವೇ ಪ್ರಯತ್ನಿಸಿದ್ದೇವೆ. (ಜ್ಞಾನೋಕ್ತಿ 22:6) ನಮ್ಮ ಮಕ್ಕಳೆಲ್ಲರೂ ನನ್ನಿಂದ ಲ್ಯಾಟಿನ್ ಭಾವಾತಿರೇಕವನ್ನೂ ತಮ್ಮ ತಾಯಿಯಿಂದ ಜರ್ಮನರ ಪ್ರಾಯೋಗಿಕ ಮನೋಭಾವವನ್ನು ಬಾಧ್ಯತೆಯಾಗಿ ಪಡೆದುಕೊಂಡರು. ಆದರೆ ಅವರು ನಮ್ಮಿಂದ ಪಡೆದುಕೊಂಡ ಅತ್ಯಂತ ಪ್ರಾಮುಖ್ಯವಾದ ವಿಚಾರವು, ಒಂದು ಆತ್ಮಿಕ ಸ್ವಾಸ್ಥ್ಯವೇ ಆಗಿತ್ತು.
ನಮ್ಮ ಮನೆಜೀವಿತವು ರಾಜ್ಯಾಭಿರುಚಿಗಳ ಸುತ್ತಲೂ ಆವೃತವಾಗಿತ್ತು. ಈ ಅಭಿರುಚಿಗಳನ್ನು ಪ್ರಧಾನವಾಗಿಡುವುದು ಸುಲಭವಾದದ್ದಾಗಿರಲಿಲ್ಲ. ಉದಾಹರಣೆಗಾಗಿ, ಒಂದು ಕ್ರಮವಾದ ಕುಟುಂಬ ಬೈಬಲ್ ಅಭ್ಯಾಸವನ್ನು ಕಾಪಾಡಿಕೊಳ್ಳುವುದರಲ್ಲಿ ನಮಗೆ ಯಾವಾಗಲೂ ತೊಂದರೆಯಿತ್ತು, ಆದರೂ ನಾವು ಎಂದೂ ಬಿಟ್ಟುಕೊಡಲಿಲ್ಲ. ಅವರ ಜೀವಿತದ ಆರಂಭದ ದಿನಗಳಿಂದಲೇ, ಪ್ರತಿಯೊಂದು ಮಗುವನ್ನು ಕ್ರೈಸ್ತ ಕೂಟಗಳಿಗೆ ಹಾಗೂ ಸಮ್ಮೇಳನಗಳಿಗೆ ಮತ್ತು ಅಧಿವೇಶನಗಳಿಗೆ ಕರೆದೊಯ್ಯಲಾಗುತ್ತಿತ್ತು. ಅಸ್ವಸ್ಥತೆ ಅಥವಾ ಇತರ ತುರ್ತುಪರಿಸ್ಥಿತಿಯು ಮಾತ್ರ ನಮ್ಮನ್ನು ಹಾಜರಾಗುವುದರಿಂದ ತಡೆಯಿತು. ಇದಕ್ಕೆ ಕೂಡಿಸಿ, ಎಳೆಯ ಪ್ರಾಯದಲ್ಲಿಯೇ, ಮಕ್ಕಳು ಕ್ರೈಸ್ತ ಶುಶ್ರೂಷೆಯಲ್ಲಿ ನಮ್ಮನ್ನು ಜೊತೆಗೂಡಿದರು.
ಅವರು ಸುಮಾರು ಹತ್ತು ವರ್ಷ ಪ್ರಾಯದವರಾಗಿದ್ದಾಗ, ಮಕ್ಕಳು ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಭಾಷಣಗಳನ್ನು ಕೊಡಲಾರಂಭಿಸಿದರು. ಹಸ್ತಪ್ರತಿಯೊಂದಕ್ಕೆ ಬದಲಾಗಿ ಹೊರಮೇರೆಯನ್ನು ಉಪಯೋಗಿಸುವಂತೆ ಅವರಿಗೆ ಉತ್ತೇಜಿಸುತ್ತಾ, ಅವರು ಪ್ರಥಮ ಭಾಷಣಗಳನ್ನು ತಯಾರುಮಾಡಲಿಕ್ಕಾಗಿ ನಾವು ಅವರಿಗೆ ಸಹಾಯ ಮಾಡಿದೆವು. ತದನಂತರ, ಪ್ರತಿಯೊಬ್ಬರೂ ತಮ್ಮ ಸ್ವಂತ ಭಾಷಣವನ್ನು ಸ್ವತಃ ತಯಾರುಮಾಡಿದರು. ಹಾಗೂ, ಅವರು 10 ಮತ್ತು 12ರ ನಡುವಣ ವಯಸ್ಸಿನವರಾಗಿದ್ದಾಗ, ಅವರು ಪ್ರತಿಯೊಬ್ಬರೂ ಶುಶ್ರೂಷೆಯಲ್ಲಿ ಕ್ರಮವಾಗಿ ಪಾಲ್ಗೊಳ್ಳಲಾರಂಭಿಸಿದರು. ಅವರಿಗೆ ತಿಳಿದಿದ್ದಂತಹ ಜೀವನ ರೀತಿಯು ಇದೊಂದೇ ಆಗಿತ್ತು.
ನನ್ನ ಹೆಂಡತಿಯಾದ ಕ್ಲಾರ, ನಮ್ಮ ಮಕ್ಕಳನ್ನು ಬೆಳೆಸುವುದರಲ್ಲಿ ಒಂದು ಅತ್ಯಾವಶ್ಯಕವಾದ ಪಾತ್ರವನ್ನು ವಹಿಸಿದಳು. ಪ್ರತಿ ರಾತ್ರಿ, ಅವರು ತೀರ ಎಳೆಯ ಪ್ರಾಯದವರಾಗಿದ್ದಾಗ, ಒಂದು ಮಗುವು ತನಗೆ ಕಲಿಸಲ್ಪಡುವಂತಹ ಎಲ್ಲಾ ವಿಷಯಗಳನ್ನು ಒಂದು ಸ್ಪಂಜಿನಂತೆ ಹೀರಿಕೊಳ್ಳುವ ಒಂದು ಸಮಯದಲ್ಲಿ, ಕ್ಲಾರ ಅವರಿಗೆ ಬೈಬಲ್ ಕಥೆಯೊಂದನ್ನು ಓದಿ, ಪ್ರತಿಯೊಬ್ಬರೊಂದಿಗೆ ಪ್ರಾರ್ಥಿಸಿದಳು. ಅವಳು, ಕಳೆದುಕೊಂಡ ಪ್ರಮೋದವನದಿಂದ ಮತ್ತೆ ಪಡೆದುಕೊಂಡ ಪ್ರಮೋದವನಕ್ಕೆ (ಇಂಗ್ಲಿಷ್), ಮಹಾ ಬೋಧಕನಿಗೆ ಕಿವಿಗೊಡುವುದು, ಮತ್ತು ಬೈಬಲ್ ಕಥೆಗಳ ನನ್ನ ಪುಸ್ತಕ (ಇಂಗ್ಲಿಷ್) ಎಂಬ ಪುಸ್ತಕಗಳ ಸದುಪಯೋಗಮಾಡಿದ್ದಾಳೆ.a ಯೆಹೋವನ ಸಾಕ್ಷಿಗಳಿಂದ ಒದಗಿಸಲ್ಪಟ್ಟ ಶ್ರವಣ ಹಾಗೂ ದರ್ಶನ ಸಹಾಯಕಗಳು ಲಭ್ಯವಾದಾಗ, ನಾವು ಅವುಗಳನ್ನೂ ಉಪಯೋಗಿಸಿದೆವು.
ಕ್ರೈಸ್ತ ಹೆತ್ತವರೋಪಾದಿ ನಮ್ಮ ಅನುಭವವು, ಮಕ್ಕಳಿಗೆ ದೈನಂದಿನ ಗಮನದ ಅಗತ್ಯವಿದೆ ಎಂಬುದನ್ನು ದೃಢಪಡಿಸುತ್ತದೆ. ಗಾಢವಾದ ಪ್ರೀತಿ, ವ್ಯಕ್ತಿಪರ ಆಸಕ್ತಿ, ಹಾಗೂ ಬಹಳಷ್ಟು ಸಮಯ—ಇವು ಎಳೆಯರ ಮೂಲಭೂತ ಆವಶ್ಯಕತೆಗಳಲ್ಲಿ ಸೇರಿವೆ. ಈ ಆವಶ್ಯಕತೆಗಳನ್ನು ನಮ್ಮ ಸಾಮರ್ಥ್ಯಕ್ಕೂ ಮೀರಿ ತೃಪ್ತಿಪಡಿಸುವುದು, ತಾಯ್ತಂದೆಗಳೋಪಾದಿ ನಮ್ಮ ಜವಾಬ್ದಾರಿಯಾಗಿದೆಯೆಂದು ನಾವು ವೀಕ್ಷಿಸಿದೆವು ಮಾತ್ರವಲ್ಲ, ಹಾಗೆ ಮಾಡುವುದರಿಂದ ಮಹತ್ತಾದ ಸಂತೋಷವನ್ನೂ ಪಡೆದುಕೊಂಡೆವು.
ನಿಜವಾಗಿಯೂ, ಕೀರ್ತನೆ 127:3-5ರಲ್ಲಿನ ಮಾತುಗಳ ನೆರವೇರಿಕೆಯನ್ನು ಗ್ರಹಿಸುವುದು, ಹೆತ್ತವರಿಗೆ ತೃಪ್ತಿದಾಯಕವಾದದ್ದಾಗಿದೆ: “ಪುತ್ರಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯವು; ಗರ್ಭಫಲವು ಆತನ ಬಹುಮಾನವೇ. ಯೌವನದಲ್ಲಿ ಹುಟ್ಟಿದ ಮಕ್ಕಳು ಯುದ್ಧವೀರನ ಕೈಯಲ್ಲಿರುವ ಅಂಬುಗಳಂತಿದ್ದಾರೆ; ಇವುಗಳಿಂದ ತನ್ನ ಬತ್ತಳಿಕೆಯನ್ನು ತುಂಬಿದವನು ಧನ್ಯನು.” ಒಂದು ಐಕ್ಯವಾದ ಕುಟುಂಬದೋಪಾದಿ ಯೆಹೋವನನ್ನು ಸೇವಿಸುವುದು, ನಿಶ್ಚಯವಾಗಿಯೂ ನಮಗೆ ಸಂತೋಷವನ್ನು ಉಂಟುಮಾಡಿದೆ!
[ಪಾದಟಿಪ್ಪಣಿ]
a ಎಲ್ಲಾ ಪುಸ್ತಕಗಳು ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿವೆ.
[ಪುಟ 26 ರಲ್ಲಿರುವ ಚಿತ್ರ]
ತನ್ನ ಕುಟುಂಬದೊಂದಿಗೆ ಆಂಟೋನ್ಯೂ ಸಾಂಟೊಲೇರಿ