ಲೋಕದ ಸುತ್ತಲೂ ಯೆಹೋವನ ಸಾಕ್ಷಿಗಳು—ಬ್ರೆಸಿಲ್
ಬ್ರೆಸಿಲ್ ಅನೇಕ ವಿಧಗಳಲ್ಲಿ ಒಂದು ದೈತ್ಯ ದೇಶ. ಗಾತ್ರ ಮತ್ತು ಜನಸಂಖ್ಯೆ ಇವೆರಡರಲ್ಲೂ ಅದು ಲೋಕದಲ್ಲಿ ಐದನೆಯ ಅತ್ಯಂತ ದೊಡ್ಡ ನಾಡು. ಅದು ದಕ್ಷಿಣ ಅಮೆರಿಕದ ಸುಮಾರು ಅರ್ಧ ನೆಲ ಪ್ರದೇಶವನ್ನು ಆವರಿಸುತ್ತದೆ ಮತ್ತು ಆ ಭೂಖಂಡದ ಬೇರೆ ಎಲ್ಲ ದೇಶಗಳ ಒಟ್ಟು ಜನಸಂಖ್ಯೆಗಿಂತ ಅದು ಅಧಿಕ ಜನರ ಬೀಡಾಗಿರುತ್ತದೆ. ಲೋಕದಲ್ಲಿ ಅತಿ ದೊಡ್ಡದಾದ ಮಳೆಕಾಡು ಸಹ ಬ್ರೆಸಿಲ್ನಲ್ಲಿದೆ. ಆ ಕಾಡಿನ ಮೂಲಕ ಭೂಮಿಯಲ್ಲಿ ಅತಿ ಪ್ರಚಂಡವಾದ—ಆ್ಯಮಜಾನ್ ನದಿಯು ಪ್ರವಹಿಸುತ್ತದೆ.
ಬ್ರೆಸಿಲ್ ಇನ್ನೊಂದು ಅರ್ಥದಲ್ಲೂ ಒಂದು ದೈತ್ಯವಾಗಿದೆ. ಅದರ ದೇವರ ರಾಜ್ಯದ ಸುವಾರ್ತಾ ಪ್ರಚಾರಕರ ಸಂಖ್ಯೆಯು 4,00,000ಕ್ಕೆ ಹತ್ತಿರವಾಗಿದೆ, ಮತ್ತು ಕಳೆದ ವರ್ಷ 10,00,000 ಕ್ಕಿಂತಲೂ ಹೆಚ್ಚು ಜನರು ಕ್ರಿಸ್ತನ ಮರಣದ ಸ್ಮಾರಕಕ್ಕೆ ಉಪಸ್ಥಿತರಾದರು. ಆದುದರಿಂದ ಈ ದೇಶವು ರಾಜ್ಯ ಸಾರುವಿಕೆಯ ಕಾರ್ಯದ ಸಂಬಂಧದಲ್ಲಿಯಾದರೊ ವಿಶೇಷವಾಗಿ ಎದ್ದುಕಾಣುತ್ತದೆ. ಇತ್ತೀಚಿನ ಅನುಭವಗಳು ಈ ವಿಷಯವನ್ನು ಚಿತ್ರಿಸುತ್ತವೆ.
ಹೆಚ್ಚು ಅಗತ್ಯವಿರುವಲ್ಲಿ ಸೇವೆ ಮಾಡುವುದು
ಆಂಟಾನ್ಯೊ ಮತ್ತು ಅವನ ಪತ್ನಿಯು ತಮ್ಮ ಸಂಬಂಧಿಕರನ್ನೂ, ಸಾವ್ ಪೌಲೊದಲ್ಲಿನ ಒಂದು ಭದ್ರವಾದ ಹಾಗೂ ಒಳ್ಳೇ ವೇತನದ ಕೆಲಸವನ್ನೂ ಬಿಡುವ ಕಷ್ಟದ ನಿರ್ಣಯವನ್ನು ಮಾಡಿ, ಎಲ್ಲಿ ರಾಜ್ಯ ಘೋಷಕರಿಗಾಗಿ ಹೆಚ್ಚಿನ ಅಗತ್ಯವಿತ್ತೊ, ಆ ಮಿನಸ ರೈಸ್ ರಾಜ್ಯದಲ್ಲಿ ಸೇವೆಮಾಡಲು ಹೋದರು. ಅವರ ಟೆರಿಟೊರಿಯಲ್ಲಿ ಸಕ್ಕರೆ ಶುದ್ಧೀಕರಣ ಕಾರ್ಖಾನೆಯ ಕಾರ್ಮಿಕರ ವಸಾಹತು ಒಳಗೂಡಿತ್ತು. ಅಲ್ಲಿ ಅವರು ಸಾಕ್ಷಿನೀಡಿದ ಮೊದಲನೆಯ ದಿನದಲ್ಲಿ ಒಂಬತ್ತು ಬೈಬಲಧ್ಯಯನಗಳನ್ನು ಪ್ರಾರಂಭಿಸಿದರು. ಹದಿನೆಂಟು ತಿಂಗಳುಗಳೊಳಗೆ 40 ಕ್ಕಿಂತಲೂ ಹೆಚ್ಚು ಅಧ್ಯಯನಗಳನ್ನು ಅವರು ನಡಿಸುತ್ತಿದ್ದರು.
ಮೊದಮೊದಲು ಕೂಟಗಳು ಶುದ್ಧೀಕರಣದ ಕಾರ್ಖಾನೆಯಲ್ಲಿ ನಡೆದವು. ಆದಾಗಲೂ, ಒಂದು ನಿಜ ರಾಜ್ಯ ಸಭಾಗೃಹವನ್ನು ನೋಡಲು ಹೊಸ ಪ್ರಚಾರಕರು ಬಯಸಿದರು. ಆದಕಾರಣ, 75 ಮಂದಿಯನ್ನು ಸಮೀಪದ ಸಭೆಗೆ ಒಯ್ಯಲು ಒಂದು ಬಸ್ಸನ್ನು ಬಾಡಿಗೆಗೆ ಹಿಡಿಯಲಾಯಿತು. ಅನಂತರ ಒಂದು ಅಧಿವೇಶನ ಬಂತು; ಈ ಹೊಸ ಬೈಬಲ್ ವಿದ್ಯಾರ್ಥಿಗಳಲ್ಲಿ 45 ಮಂದಿ ಉಪಸ್ಥಿತರಾದರು ಮತ್ತು ಅವರನ್ನು ಸಂದರ್ಶನ ಮಾಡಲಾಯಿತು. ಆ ಸಂದರ್ಭದಲ್ಲಿ ಇವರಲ್ಲಿ ಹದಿನೈದು ಮಂದಿ ಸ್ನಾನಿತರಾದರು. ಆನಂದಾಶ್ರುಗಳು ನಿರರ್ಗಳವಾಗಿ ಸುರಿದವೆಂದು ಹೇಳುವ ಅಗತ್ಯವಿಲ್ಲ!
ತದ್ರೀತಿಯ ಸಂಚಾರಗಳಿಗಾಗಿ ಅದೇ ಬಸ್ ಕಂಪೆನಿಯನ್ನು ಬಳಸಲಾಯಿತಾದರ್ದಿಂದ ಅಧಿಕಾರಿಗಳು ದರ ಕಡಿಮೆ ಮಾಡಿದರು. ಗಣ್ಯತೆಯಲ್ಲಿ ಆಂಟಾನ್ಯೊ ಬಸ್ ಕಂಪೆನಿಯ ಮಾಲಿಕನಿಗೆ ಒಂದು ಬೈಬಲ್ ಅಧ್ಯಯನ ಪುಸ್ತಕವನ್ನು ಕೊಟ್ಟನು. ಅದೇ ಸಂಜೆ ಬೈಬಲ್ ಅಧ್ಯಯನ ಪ್ರಾರಂಭಿಸಲು ಅವನು ಒಪ್ಪಿದನು ಮತ್ತು ಹಲವಾರು ತಿಂಗಳುಗಳ ಶ್ರದ್ಧಾಯುಕ್ತ ಅಧ್ಯಯನದ ಬಳಿಕ ಅವನು ಸ್ನಾನಿತನಾದನು. ಮೊದಮೊದಲು ಅವನ ಪತ್ನಿ ಅಭ್ಯಾಸವನ್ನು ವಿರೋಧಿಸಿದಳಾದರೂ ಸಕಾಲದಲ್ಲಿ ಅವಳ ಮನೋಭಾವ ಮೃದುಗೊಂಡಿತು. ಇಂದು ಅವಳೂ ಯೆಹೋವನ ಒಬ್ಬ ಸ್ನಾನಿತ ಸಾಕ್ಷಿ.
ಫೆಬ್ರವರಿ 1992 ರಲ್ಲಿ 22 ಮಂದಿ ಸಕ್ರಿಯ ಪ್ರಚಾರಕರೊಂದಿಗೆ ಒಂದು ಸಭೆಯು ಸ್ಥಾಪಿಸಲ್ಪಟ್ಟಿತು. 1994 ರೊಳಗೆ, 4 ಕ್ರಮದ ಪಯನೀಯರರು ಅಥವಾ ಪೂರ್ಣ ಸಮಯ ಸುವಾರ್ತೆ ಸಾರುವವರೊಂದಿಗೆ ಈ ಸಂಖ್ಯೆಯು 42ಕ್ಕೆ ಏರಿತ್ತು. ಪರಿಣಾಮವಾಗಿ, ಆಂಟಾನ್ಯೊ ತೀರ್ಮಾನಿಸಿದ್ದು: “ಮಲಾಕಿಯ 3:10 ಹೇಳುವಂತೆ, ನಾವು ‘ಯೆಹೋವನನ್ನು ಪರೀಕ್ಷಿಸಿ’ ನೋಡುವುದಾದರೆ, ಆತನು ‘ನಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಸುವನು’ ಎಂಬುದನ್ನು ನಾನೂ ನನ್ನ ಪತ್ನಿಯೂ ಕಂಡೆವು.”
ಬೈಬಲ್ ಸಾಹಿತ್ಯವನ್ನು ನೀಡುವುದು
ಬ್ರೆಸಿಲ್ನಲ್ಲಿ ಸಾರುವ ಕಾರ್ಯವು ಅಂತಹ ದೈತ್ಯ ದಾಟುಗಾಲನ್ನು ಹಾಕಲು ಪ್ರಾಯಶಃ ಇನ್ನೊಂದು ಕಾರಣವು ಬೈಬಲ್ ಸಾಹಿತ್ಯವನ್ನು ಸಾಕ್ಷಿಗಳು ಪ್ರತಿಯೊಂದು ಸಂದರ್ಭದಲ್ಲಿ ನೀಡುವುದು. ಉದಾಹರಣೆಗೆ, ಒಂದು ಸಭೆಯು ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿಗೆ ಬರೆದು ಯುವಜನರು ಕೇಳುವ ಪ್ರಶ್ನೆಗಳು—ಕಾರ್ಯಸಾಧ್ಯ ಉತ್ತರಗಳು (ಇಂಗ್ಲಿಷ್) ಪುಸ್ತಕದ 250 ಪ್ರತಿಗಳಿಗಾಗಿ ಕೇಳಿಕೊಂಡಿತು. ಅಷ್ಟು ದೊಡ್ಡ ಆರ್ಡರ್ ಏಕೆ?
ಪತ್ರವು ವಿವರಿಸಿದ್ದು: ‘ಪಟ್ಟಣದ ಶಾಲೆಗಳಲ್ಲೊಂದು ಈ ಪುಸ್ತಕವನ್ನು ಶೈಕ್ಷಣಿಕ ಸಮಾಚಾರವಾಗಿ ತರಗತಿಯೊಂದರಲ್ಲಿ ಬಳಸಲು ನಿರ್ಣಯಿಸಿದೆ. ಯೆಹೋವನ ಸಾಕ್ಷಿಗಳಾದ ವಿದ್ಯಾರ್ಥಿಗಳ ಹೆತ್ತವರಿಂದ ಮತ್ತು ಶಾಲಾ ಮೇಲ್ವಿಚಾರಕರೊಬ್ಬರಿಂದ ಕೊಡಲ್ಪಟ್ಟ ಅನೌಪಚಾರಿಕ ಸಾಕ್ಷಿಯು ಶಾಲಾ ಅಧಿಕಾರಿಗಳ ಈ ನಿರ್ಣಯಕ್ಕೆ ಕಾರಣ. ಈ ಪುಸ್ತಕದೊಂದಿಗೆ ಸದ್ಬೋಧನೆಯನ್ನು ಅವರು ಒದಗಿಸುವಾಗ ಯೆಹೋವನು ತನ್ನ ಸೇವಕರನ್ನು ಆಶೀರ್ವದಿಸುತ್ತಾ ಮುಂದುವರಿಯಲಿ.’ ಹೌದು, ಆ ದೈತ್ಯ ದೇಶವಾದ ಬ್ರೆಸಿಲ್ನಲ್ಲಿ ರಾಜ್ಯ ಸಾರುವಿಕೆಯ ಕಾರ್ಯದ ಉತ್ತಮ ಪ್ರಗತಿಯನ್ನು ಯೆಹೋವನು ಸದಾ ಆಶೀರ್ವದಿಸುವಂತಾಗಲಿ.
[ಪುಟ 8 ರಲ್ಲಿರುವ ಚೌಕ]
ದೇಶದ ಪಾರ್ಶ್ವದೃಶ್ಯ
1994ರ ಸೇವಾ ವರ್ಷ
ಸಾಕ್ಷಿನೀಡುತ್ತಿರುವವರ ಉಚ್ಚಾಂಕ: 3,85,099
ಪ್ರಮಾಣ: 1 ಸಾಕ್ಷಿಗೆ 404
ಜ್ಞಾಪಕದ ಹಾಜರಿ: 10,18,210
ಸರಾಸರಿ ಪಯನೀಯರ್ ಪ್ರಚಾರಕರು: 38,348
ಸರಾಸರಿ ಬೈಬಲ್ ಅಧ್ಯಯನಗಳು: 4,61,343
ದೀಕ್ಷಾಸ್ನಾನ ಪಡೆದವರ ಸಂಖ್ಯೆ: 24,634
ಸಭೆಗಳ ಸಂಖ್ಯೆ: 5,928
ಶಾಖಾ ಆಫೀಸ್: ಸೆಸಾರಿಯೊ ಲಾಂಸೇ
[ಪುಟ 9 ರಲ್ಲಿರುವ ಚಿತ್ರ]
ಸುಮಾರು 1940 ರಲ್ಲಿ ಸಾವ್ ಪೌಲೂದಲ್ಲಿ ಸೌಂಡ್ ಕಾರಿನ ಬಳಕೆ
[ಪುಟ 9 ರಲ್ಲಿರುವ ಚಿತ್ರ]
ರಿಯೊ ಡಿ ಜನೆರೊದ ಬ್ಯೊಟ್ಯಾನಿಕಲ್ ಗಾರ್ಡನ್ನಲ್ಲಿ ಸಾಕ್ಷಿಕೊಡುವುದು
[ಪುಟ 9 ರಲ್ಲಿರುವ ಚಿತ್ರ]
ಸೆಸಾರಿಯೊ ಲಾಂಸೇನಲ್ಲಿ ಶಾಖಾ ಆಫೀಸ್