“ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು”
“ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ.”—ಮತ್ತಾಯ 11:29.
1, 2. (ಎ) ನಿಮಗೆ ವಿಶ್ರಾಂತಿಯನ್ನು ತರುವ ಯಾವ ಸಂಗತಿಯನ್ನು ನೀವು ಜೀವನದಲ್ಲಿ ಅನುಭವಿಸಿದ್ದೀರಿ? (ಬಿ) ಯೇಸು ವಾಗ್ದಾನಿಸಿದ ವಿಶ್ರಾಂತಿಯನ್ನು ಪಡೆದುಕೊಳ್ಳಲು ಒಬ್ಬನು ಏನು ಮಾಡಬೇಕು?
ಬಿಸಿಯೂ ತೇವವೂ ಉಳ್ಳ ದಿನದಂತ್ಯದಲ್ಲಿ ತಣ್ಣಗಿನ ಒಂದು ಸ್ನಾನ, ಅಥವಾ ದೀರ್ಘವೂ ಆಯಾಸಕರವೂ ಆದ ಪ್ರಯಾಣದ ಬಳಿಕ ರಾತ್ರಿಯ ಗಾಢ ನಿದ್ರೆಯು—ಓ ಅದೆಷ್ಟು ವಿಶ್ರಾಂತಿಕರ! ಒಂದು ಭಾರವಾದ ಹೊರೆಯು ತೆಗೆದುಬಿಡಲ್ಪಟ್ಟಾಗ ಅಥವಾ ಪಾಪಗಳೂ ದ್ರೋಹಗಳೂ ಕ್ಷಮಿಸಲ್ಪಟ್ಟಾಗ ಅದೇ ಅನಿಸಿಕೆಯಾಗುತ್ತದೆ. (ಜ್ಞಾನೋಕ್ತಿ 25:25; ಅ. ಕೃತ್ಯಗಳು 3:19) ಅಂತಹ ಉಲ್ಲಾಸಕರ ಅನುಭವಗಳಿಂದ ತರಲ್ಪಟ್ಟ ಚೈತನ್ಯವು ನಮ್ಮನ್ನು ಪುನರುಜ್ಜೀವನಗೊಳಿಸಿ, ನಾವು ಮುಂದಕ್ಕೆ ಸಾಗುವಂತೆ ಶಕ್ತಿಯನ್ನು ತುಂಬುತ್ತದೆ.
2 ಹೊರೆಹೊತ್ತವರೂ ಬಳಲಿದವರೂ ಆಗಿದ್ದೇವೆಂದು ಎಣಿಸುವವರೆಲ್ಲರೂ ಯೇಸುವಿನ ಬಳಿಗೆ ಬರಬಲ್ಲರು, ಯಾಕೆಂದರೆ ಅವನು ಅವರಿಗೆ ಅದನ್ನೇ—ವಿಶ್ರಾಂತಿಯನ್ನು—ವಾಗ್ದಾನಿಸಿದ್ದಾನೆ. ಆದರೂ ಅಷ್ಟು ಅಪೇಕ್ಷಣೀಯವಾದ ವಿಶ್ರಾಂತಿಯನ್ನು ಕಂಡುಕೊಳ್ಳಲಿಕ್ಕಾಗಿ ಒಬ್ಬನು ಮಾಡಲು ಸಿದ್ಧನಾಗಿರಬೇಕಾದ ಒಂದು ವಿಷಯವಿದೆ: “ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ,” ಅಂದನು ಯೇಸು. “ಆಗ ನಿಮ್ಮ ಆತ್ಮ [“ಪ್ರಾಣ,” NW] ಗಳಿಗೆ ವಿಶ್ರಾಂತಿಸಿಕ್ಕುವದು.” (ಮತ್ತಾಯ 11:29) ಈ ನೊಗವು ಯಾವುದು? ಅದು ವಿಶ್ರಾಂತಿಯನ್ನು ತರುವುದು ಹೇಗೆ?
ಒಂದು ಮೃದುವಾದ ನೊಗ
3. (ಎ) ಬೈಬಲ್ ಕಾಲದಲ್ಲಿ ಯಾವ ವಿಧದ ನೊಗಗಳು ಬಳಸಲ್ಪಡುತ್ತಿದ್ದವು? (ಬಿ) ನೊಗದೊಂದಿಗೆ ಯಾವ ಸಾಂಕೇತಿಕ ಅರ್ಥವು ಜತೆಗೂಡುತ್ತದೆ?
3 ಒಂದು ವ್ಯವಸಾಯಿಕ ಸಮಾಜದಲ್ಲಿ ಜೀವಿಸಿದ ಯೇಸುವಿಗೆ ಮತ್ತು ಆತನ ಕೇಳುಗರಿಗೆ ನೊಗದ ಸುಪರಿಚಯವಿತ್ತು. ಮೂಲತಃ ನೊಗವು, ಒಂದು ಉದ್ದವಾದ ದಂಡವಾಗಿದ್ದು ಅದರ ಕೆಳಪಕ್ಕದಲ್ಲಿ, ಭಾರವನ್ನೆಳೆಯುವ ಪಶುಗಳ ಜೋಡಿಯ ಹೆಗಲಿಗೆ ಸರಿಯಾಗಿ ಹಿಡಿಸುವ ಎರಡು ಹಿಂದೆಸರಿದ ಹರವುಗಳಿವೆ. ಸಾಮಾನ್ಯವಾಗಿ ಜೋಡೆತ್ತುಗಳ ಹೆಗಲಿಗೆ ಅದನ್ನು ಹೂಡಿ ಒಂದು ನೇಗಿಲನ್ನು, ಬಂಡಿಯನ್ನು, ಅಥವಾ ಬೇರೆ ಯಾವುದೇ ಹೊರೆಯನ್ನು ಒಟ್ಟುಗೂಡಿ ಎಳೆಯುವಂತೆ ಸಜ್ಜುಗೊಳಿಸಲಾಗುತ್ತದೆ. (1 ಸಮುವೇಲ 6:7) ಮನುಷ್ಯರಿಗಾಗಿಯೂ ನೊಗಗಳು ಬಳಸಲ್ಪಟ್ಟಿದ್ದವು. ಇವು ಪ್ರತಿಯೊಂದು ತುದಿಗೆ ಹೊರೆಯು ಬಂಧಿಸಲ್ಪಟ್ಟಿರುವ ಸರಳವಾದ ದಂಡಗಳು ಅಥವಾ ಕಂಬಗಳಾಗಿದ್ದು, ಅವನ್ನು ಹೆಗಲಿಗೆ ಅಡಲ್ಡಾಗಿ ಹಾಕಿಕೊಂಡು ಹೊರಲಾಗುತ್ತಿತ್ತು. ಜೀತಗಾರರು ಅವುಗಳೊಂದಿಗೆ ಭಾರವಾದ ಹೊರೆಗಳನ್ನು ಹೊತ್ತುಕೊಂಡು ಹೋಗಲು ಶಕ್ತರಾಗುತ್ತಿದ್ದರು. (ಯೆರೆಮೀಯ 27:2; 28:10, 13) ಹೊರೆಗಳು ಮತ್ತು ಜೀತದೊಂದಿಗೆ ಅದರ ಸಂಬಂಧದಿಂದ, ಬೈಬಲಿನಲ್ಲಿ ನೊಗವು, ದಬ್ಬಾಳಿಕೆ ಮತ್ತು ನಿಯಂತ್ರಣವನ್ನು ಸಾಂಕೇತಿಕವಾಗಿ ಸೂಚಿಸಲು ಆಗಿಂದಾಗ್ಗೆ ಬಳಸಲ್ಪಟ್ಟಿರುತ್ತದೆ.—ಧರ್ಮೋಪದೇಶಕಾಂಡ 28:48; 1 ಅರಸುಗಳು 12:4; ಅ. ಕೃತ್ಯಗಳು 15:10.
4. ತನ್ನ ಬಳಿಗೆ ಬರುವವರಿಗೆ ಯೇಸು ನೀಡುವ ನೊಗದಿಂದ ಯಾವುದು ಸೂಚಿತವಾಗಿದೆ?
4 ಹೀಗಿರಲಾಗಿ, ವಿಶ್ರಾಂತಿಗಾಗಿ ತನ್ನ ಬಳಿಗೆ ಬರುವವರು ತಮ್ಮ ಮೇಲೆ ತೆಗೆದುಕೊಳ್ಳುವಂತೆ ಯೇಸು ಹೇಳಿದ ನೊಗವು ಯಾವುದು? “ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ,” ಎಂದು ಆತನಂದನೆಂಬುದನ್ನು ಜ್ಞಾಪಿಸಿಕೊಳ್ಳಿ. (ಮತ್ತಾಯ 11:29) ಕಲಿಯುವ ಒಬ್ಬ ವ್ಯಕ್ತಿಯು ಶಿಷ್ಯನಾಗಿದ್ದಾನೆ. ಆದಕಾರಣ, ಯೇಸುವಿನ ನೊಗವನ್ನು ತೆಗೆದುಕೊಳ್ಳಲಿಕ್ಕಾಗಿ ಅವನು ಆತನ ಶಿಷ್ಯನಾಗಬೇಕೆಂದೇ ಇದರ ಸರಳಾರ್ಥ. (ಫಿಲಿಪ್ಪಿ 4:3) ಆದರೂ ಇದು, ಆತನ ಬೋಧನೆಗಳನ್ನು ಕೇವಲ ತಿಳಿಯುವುದಕ್ಕಿಂತ ಹೆಚ್ಚಿನದ್ದನ್ನು ಆವಶ್ಯಪಡಿಸುತ್ತದೆ. ಅವುಗಳೊಂದಿಗೆ ಹೊಂದಿಕೆಯಲ್ಲಿ ಕ್ರಿಯೆಗಳನ್ನು—ಆತನು ಮಾಡಿದ ಕೆಲಸವನ್ನು ಮಾಡುವುದನ್ನು ಮತ್ತು ಆತನು ಜೀವಿಸಿದ ತೆರನಾಗಿ ಜೀವಿಸುವುದನ್ನು ಆವಶ್ಯಪಡಿಸುತ್ತದೆ. (1 ಕೊರಿಂಥ 11:1; 1 ಪೇತ್ರ 2:21) ಆತನ ಅಧಿಕಾರಕ್ಕೆ ಮತ್ತು ಆತನು ಯಾರಿಗೆ ಅಧಿಕಾರವನ್ನು ವಹಿಸುತ್ತಾನೋ ಅವರಿಗೆ ಇಚ್ಛಾಪೂರ್ವಕವಾದ ಅಧೀನತೆಯನ್ನು ಅದು ಕೇಳಿಕೊಳ್ಳುತ್ತದೆ. (ಎಫೆಸ 5:21; ಇಬ್ರಿಯ 13:17) ಅದು ಒಬ್ಬ ಸಮರ್ಪಿತ, ಸ್ನಾನಿತ ಕ್ರೈಸ್ತನಾಗಿ ಅಂಥ ಒಂದು ಸಮರ್ಪಣೆಯೊಂದಿಗೆ ಬರುವ ಸುಯೋಗಗಳು ಮತ್ತು ಜವಾಬ್ದಾರಿಗಳೆಲ್ಲವನ್ನು ಸ್ವೀಕರಿಸುವ ಅರ್ಥದಲ್ಲಿದೆ. ಸಾಂತ್ವನ ಮತ್ತು ವಿಶ್ರಾಂತಿಗಾಗಿ ತನ್ನ ಬಳಿಗೆ ಬರುವವರೆಲ್ಲರಿಗೆ ಯೇಸು ನೀಡುವ ನೊಗವು ಅದೇ. ಅದನ್ನು ಸ್ವೀಕರಿಸಲು ನೀವು ಸಿದ್ಧರೊ?—ಯೋಹಾನ 8:31, 32.
5. ಯೇಸುವಿನ ನೊಗವನ್ನು ತೆಗೆದುಕೊಳ್ಳುವುದು ಒಂದು ಕಟು ಅನುಭವವಾಗಿರದೇಕೆ?
5 ಒಂದು ನೊಗವನ್ನು ಹೊತ್ತುಕೊಳ್ಳುವುದರಿಂದ ವಿಶ್ರಾಂತಿಸಿಗುವುದು—ಎಂಬುದು ವಿರೋಧೋಕ್ತಿಯಾಗಿಲ್ಲವೇ? ಕಾರ್ಯತಃ ಇಲ್ಲ, ಯಾಕೆಂದರೆ ತನ್ನ ನೊಗವು “ಮೃದುವಾದದ್ದು,” ಎಂದು ಯೇಸು ಹೇಳಿದ್ದಾನೆ. ಈ ಶಬ್ದಕ್ಕೆ ಸೌಮ್ಯವಾದ, ಹಿತಕರವಾದ, ಒಗ್ಗುವಂಥ, ಎಂಬರ್ಥವಿದೆ. (ಮತ್ತಾಯ 11:30; ಲೂಕ 5:39; ರೋಮಾಪುರ 2:4; 1 ಪೇತ್ರ 2:3) ಕಸಬುದಾರ ಬಡಗಿಯೋಪಾದಿ ಯೇಸು ನೇಗಿಲುಗಳನ್ನೂ ನೊಗಗಳನ್ನೂ ಮಾಡಿದ್ದನೆಂಬುದು ಅತಿ ಸಂಭಾವ್ಯ, ಮತ್ತು ಒಂದು ನೊಗವನ್ನು ಹೊಂದಿಸುವಂತೆ ರೂಪಿಸಿ, ಸಾಧ್ಯವಾದಷ್ಟು ಆರಾಮದಿಂದ ಅಧಿಕಾಂಶ ಕೆಲಸವನ್ನು ನಡೆಸುವಂತೆ ಮಾಡುವುದು ಹೇಗೆಂದು ಅವನಿಗೆ ಗೊತ್ತಿತ್ತು. ನೊಗಗಳ ಕೆಳಪಕ್ಕಕ್ಕೆ ಅವನು ಬಟ್ಟೆಯನ್ನು ಅಥವಾ ಚರ್ಮದ ಒಳ ಆವರಣವನ್ನು ಹಾಕಬಹುದು. ಹೆಗಲು ಅತಿರೇಕವಾಗಿ ಉಜ್ಜಿ ಅಥವಾ ತೀಡಿ ಗಾಯವಾಗದಂತೆ ಹೆಚ್ಚಿನವು ಹಾಗೆಯೇ ಮಾಡಲ್ಪಡುತ್ತವೆ. ತತ್ಸಮಾನವಾಗಿ ಯೇಸು ನಮಗೆ ನೀಡುವ ಸಾಂಕೇತಿಕ ನೊಗವು “ಮೃದುವಾದದ್ದು.” ಆತನ ಶಿಷ್ಯನಾಗಿರುವುದರಲ್ಲಿ ನಿರ್ದಿಷ್ಟವಾದ ಹಂಗುಗಳೂ ಜವಾಬ್ದಾರಿಗಳೂ ಒಳಗೂಡುತ್ತವಾದರೂ, ಅದು ಕಟುವಾದ ಅಥವಾ ದಬ್ಬಾಳಿಕೆಯ ಅನುಭವವಲ್ಲ, ಬದಲಾಗಿ ವಿಶ್ರಾಂತಿ ಕೊಡುವಂತಹದ್ದಾಗಿದೆ. ಆತನ ಸ್ವರ್ಗೀಯ ತಂದೆಯಾದ ಯೆಹೋವನ ಆಜ್ಞೆಗಳೂ ಭಾರವಾದವುಗಳಲ್ಲವಲ್ಲಾ.—ಧರ್ಮೋಪದೇಶಕಾಂಡ 30:11; 1 ಯೋಹಾನ 5:3.
6. “ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊ” ಳ್ಳಿರಿ ಎಂದು ಯೇಸು ಹೇಳಿದಾಗ ಅವನು ಏನನ್ನು ಅರ್ಥೈಸಿರಬಹುದು?
6 ಯೇಸುವಿನ ನೊಗವನ್ನು “ಮೃದು” ವಾಗಿ ಅಥವಾ ಹೊರಲು ಸುಲಭವಾಗಿ ಮಾಡುವ ಇನ್ನೊಂದು ವಿಷಯವಿದೆ. “ನನ್ನ ನೊಗವನ್ನು . . . ತೆಗೆದು” ಕೊಳ್ಳಿರಿ ಎಂದಾತನು ಹೇಳಿದಾಗ ಎರಡರಲ್ಲೊಂದನ್ನು ಆತನು ಅರ್ಥೈಸಿದ್ದಿರಬಹುದು. ಜೋಡು ನೊಗವನ್ನು, ಅಂದರೆ ಭಾರವೆಳೆಯಲು ಎರಡು ಪಶುಗಳನ್ನು ಹೂಡುವಂತಹ ನೊಗವನ್ನು ಅವನು ಅಭಿಪ್ರಯಿಸಿದ್ದನಾದರೆ, ತನ್ನೊಂದಿಗೆ ಅದೇ ನೊಗದ ಕೆಳಗೆ ಬರುವಂತೆ ನಮ್ಮನ್ನು ಆಮಂತ್ರಿಸುತ್ತಿದ್ದಾನೆ. ಅದೆಂತಹ ಆಶೀರ್ವಾದವಾಗಿರಲಿದೆ—ಯೇಸು ನಮ್ಮ ಪಕ್ಕದಲ್ಲಿ ನಮ್ಮ ಹೊರೆಯನ್ನೆಳೆಯಲು ನಮ್ಮೊಂದಿಗಿರುವುದು! ಇನ್ನೊಂದು ಕಡೆ, ಸಾಮಾನ್ಯ ಜೀತಗಾರನಿಂದ ಬಳಸಲ್ಪಡುವ ನೊಗ ದಂಡವನ್ನು ಯೇಸು ಅಭಿಪ್ರಯಿಸಿದ್ದನಾದರೆ, ನಾವು ಹೊರಬೇಕಾದ ಯಾವುದೇ ಹೊರೆಯನ್ನು ಸುಲಭವಾಗಿಯೂ ನಿಯಂತ್ರಿಸಸಾಧ್ಯವಾದದ್ದಾಗಿಯೂ ಮಾಡಬಲ್ಲ ಸಾಧನಗಳನ್ನು ನಮಗೆ ನೀಡುತ್ತಲಿದ್ದಾನೆ. ಎರಡೂ ವಿಧದಲ್ಲಿ, ಆತನ ನೊಗವು ನಿಜ ವಿಶ್ರಾಂತಿಯ ಮೂಲವಾಗಿದೆ ಯಾಕೆಂದರೆ ಆತನು ನಮಗೆ ಆಶ್ವಾಸನೆ ಕೊಡುವುದು: “ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿ” ದ್ದೇನೆ.
7, 8. ಒತ್ತಡದ ಅನಿಸಿಕೆಯಾಗುವಾಗ ಕೆಲವರು ಯಾವ ತಪ್ಪನ್ನು ಮಾಡುತ್ತಾರೆ?
7 ಹೀಗಿರಲಾಗಿ, ನಾವು ಹೊರುತ್ತಿರುವ ಜೀವನದ ಸಮಸ್ಯೆಗಳ ಹೊರೆಯು ಸಹಿಸಲಸಾಧ್ಯವಾಗುತ್ತಾ ಬರುತ್ತಿದೆ ಮತ್ತು ಕುಸಿದು ಬೀಳುವಷ್ಟರ ಮಟ್ಟಿಗೆ ನಾವು ಒತ್ತಡಕ್ಕೆ ಒಳಪಟ್ಟಿದ್ದೇವೆಂದು ಭಾವಿಸುವುದಾದರೆ ಆಗೇನು? ಜೀವನದ ಅನುದಿನದ ಚಿಂತೆಗಳು ಅವರ ಹೊರೆಗಳಿಗೆ ನಿಜ ಕಾರಣವಾಗಿದ್ದಾಗ್ಯೂ, ಯೇಸು ಕ್ರಿಸ್ತನ ಶಿಷ್ಯನಾಗಿರುವ ನೊಗವು ತೀರ ಕಠಿನವೂ ತೀರ ನಿರ್ಬಂಧಕವೂ ಆಗಿದೆಯೆಂದು ಕೆಲವರು ತಪ್ಪಭಿಪ್ರಯಿಸಬಹುದು. ಆ ಸನ್ನಿವೇಶದಲ್ಲಿ ಕೆಲವು ವ್ಯಕ್ತಿಗಳು, ತಮಗೆ ಸ್ವಲ್ಪ ಉಪಶಮನವು ಲಭಿಸಬಹುದೆಂದು ನೆನಸಿ, ಕೂಟಗಳಿಗೆ ಉಪಸ್ಥಿತರಾಗುವುದನ್ನು ನಿಲ್ಲಿಸುತಾರ್ತೆ, ಅಥವಾ ಕ್ಷೇತ್ರ ಶುಶ್ರೂಷೆಯಲ್ಲಿ ಪಾಲಿಗರಾಗುವುದನ್ನು ವರ್ಜಿಸುತ್ತಾರೆ. ಇದು ಮಾತ್ರ ಒಂದು ಗಂಭೀರ ತಪ್ಪಾಗಿದೆ.
8 ಯೇಸು ನೀಡುವ ನೊಗವು “ಮೃದುವಾದದ್ದು” ಎಂಬುದನ್ನು ನಾವು ಗಣ್ಯಮಾಡುತ್ತೇವೆ. ನಾವು ಅದನ್ನು ಸರಿಯಾಗಿ ಹಾಕಿಕೊಳ್ಳದಿದ್ದಲ್ಲಿ, ಅದು ಉಜ್ಜಿ ಗಾಯಮಾಡಬಲ್ಲದು. ಅಂತಹ ಸನ್ನಿವೇಶದಲ್ಲಿ, ನಮ್ಮ ಹೆಗಲ ಮೇಲಿರುವ ನೊಗವನ್ನು ನಾವು ಹೆಚ್ಚು ನಿಕಟವಾಗಿ ಪರೀಕ್ಷಿಸಬೇಕು. ಯಾವುದೇ ಕಾರಣದಿಂದ ನೊಗವು ದುರಸ್ತಿಯಲ್ಲಿಲ್ಲದಿದ್ದರೆ ಅಥವಾ ಸರಿಯಾಗಿ ಹೊಂದಿಕೊಳ್ಳದಿದ್ದರೆ, ಅದನ್ನು ಉಪಯೋಗಿಸುವುದು ನಮ್ಮ ಪಾಲಿನ ಹೆಚ್ಚು ಪ್ರಯತ್ನವನ್ನು ಆವಶ್ಯಪಡಿಸುವುದು ಮಾತ್ರವಲ್ಲ, ಪರಿಣಾಮವಾಗಿ ತುಸು ನೋವನ್ನೂ ಉಂಟುಮಾಡುವುದು. ಬೇರೊಂದು ಮಾತಿನಲ್ಲಿ, ದೇವಪ್ರಭುತ್ವ ಚಟುವಟಿಕೆಗಳು ನಮಗೆ ಹೊರೆಯಾಗಿ ಕಾಣಿಸತೊಡಗಿದರೆ, ಅವನ್ನು ಯೋಗ್ಯರೀತಿಯಲ್ಲಿ ನಾವು ನಿರ್ವಹಿಸುತ್ತಿದ್ದೇವೊ ಎಂಬುದನ್ನು ನಾವು ಪರೀಕ್ಷಿಸಿ ನೋಡತಕ್ಕದ್ದು. ನಾವು ಏನು ಮಾಡುತ್ತೇವೊ ಅದನ್ನು ಮಾಡುವುದರಲ್ಲಿ ನಮ್ಮ ಹೇತುವೇನು? ಕೂಟಗಳಿಗೆ ಹೋಗುವಾಗ ನಾವು ಸರಿಯಾಗಿ ತಯಾರಿಸಿಕೊಂಡು ಹೋಗುತ್ತೇವೊ? ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುವಾಗ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ತಯಾರಿದ್ದೇವೊ? ಒಂದು ಆಪ್ತವಾದ ಮತ್ತು ಸ್ವಸ್ಥ ಸಂಬಂಧವನ್ನು ಸಭೆಯಲ್ಲಿ ಇತರರೊಂದಿಗೆ ಆನಂದಿಸುತ್ತೇವೊ? ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಯೆಹೋವ ದೇವರೊಂದಿಗೆ ಮತ್ತು ಆತನ ಪುತ್ರ ಯೇಸು ಕ್ರಿಸ್ತನೊಂದಿಗೆ ನಮ್ಮ ವೈಯಕ್ತಿಕ ಸಂಬಂಧ ಹೇಗಿದೆ?
9. ಕ್ರೈಸ್ತ ನೊಗವು ಎಂದೂ ಒಂದು ಹೊರಲಾರದ ಹೊರೆಯಾಗಿರಬಾರದೇಕೆ?
9 ನಾವು ಪೂರ್ಣಹೃದಯದಿಂದ ಯೇಸುವಿನ ನೊಗವನ್ನು ಸ್ವೀಕರಿಸಿ ಅದನ್ನು ಯೋಗ್ಯವಾಗಿ ಹೊತ್ತುಕೊಳ್ಳಲು ಕಲಿಯುವಾಗ, ಅದೆಂದಾದರೂ ಹೊರಲಾರದ ಹೊರೆಯಾಗಿ ಕಾಣುವುದಕ್ಕೆ ಯಾವ ಕಾರಣವೂ ಇಲ್ಲ. ವಾಸ್ತವದಲ್ಲಿ, ಆ ಸನ್ನಿವೇಶವನ್ನು—ಅಂದರೆ ಯೇಸು ಅದೇ ನೊಗದ ಕೆಳಗೆ ನಮ್ಮೊಂದಿಗೆ ಇರುವುದನ್ನು—ನಾವು ಚಿತ್ರಸಿಕೊಳ್ಳಬಲ್ಲೆವಾದರೆ, ಹೆಚ್ಚು ಭಾರವನ್ನು ನಿಜವಾಗಿ ಯಾರು ಹೊರುತ್ತಿದ್ದಾರೆಂದು ಕಾಣಲು ನಮಗೆ ಕಷ್ಟವಾಗದು. ತನ್ನ ಅಡಾಟ್ಡದ ಬಂಡಿಯ ಕೈದಂಡದ ಮೇಲೆ ಬಾಗಿರುವ ಒಂದು ಮಗುವು, ನಿಜವಾಗಿ ಅದನ್ನು ಮುಂದೆ ದೂಡುವವನು ನಿಶ್ಚಯವಾಗಿ ಅದರ ಹೆತ್ತವನಾಗಿದ್ದರೂ, ತಾನೇ ಅದನ್ನು ಮುಂದೆ ದೂಡುತ್ತಿದ್ದೇನೆಂದು ಭಾವಿಸುವುದಕ್ಕೆ ಸಮಾನವಾಗಿದೆ. ಪ್ರೀತಿಯ ತಂದೆಯೋಪಾದಿ ಯೆಹೋವನು ನಮ್ಮ ಪರಿಮಿತಿಗಳನ್ನು ಮತ್ತು ದೌರ್ಬಲ್ಯಗಳನ್ನು ಚೆನ್ನಾಗಿ ಬಲ್ಲನು ಮತ್ತು ಯೇಸು ಕ್ರಿಸ್ತನ ಮೂಲಕ ನಮ್ಮ ಅಗತ್ಯಗಳಿಗೆ ಆತನು ಪ್ರತಿಕ್ರಿಯಿಸುತ್ತಾನೆ. “ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು” ಎಂದು ಪೌಲನು ಹೇಳಿದನು.—ಫಿಲಿಪ್ಪಿ 4:19; ಹೋಲಿಸಿ ಯೆಶಾಯ 65:24.
10. ಶಿಷ್ಯತನವನ್ನು ಗಂಭೀರವಾಗಿ ತೆಗೆದುಕೊಳ್ಳುವವರ ಅನುಭವವು ಏನಾಗಿರುತ್ತದೆ?
10 ಅನೇಕ ಸಮರ್ಪಿತ ಕ್ರೈಸ್ತರು ವೈಯಕ್ತಿಕ ಅನುಭವದಿಂದ ಇದನ್ನು ಗಣ್ಯಮಾಡತೊಡಗಿದ್ದಾರೆ. ಉದಾಹರಣೆಗೆ, ಜೆನಿ ಎಂಬವಳು, ಪ್ರತಿ ತಿಂಗಳ ತನ್ನ ಆಕ್ಸಿಲಿಯರಿ ಪಯನೀಯರ್ ಸೇವೆ ಮತ್ತು ಹೆಚ್ಚೊತ್ತಡದ ಪೂರ್ಣಸಮಯದ ಐಹಿಕ ಉದ್ಯೋಗವು ಅವಳನ್ನು ಬಹಳ ಒತ್ತಡಕ್ಕೆ ಹಾಕುವುದನ್ನು ಕಾಣುತ್ತಾಳೆ. ಆದರೂ ಪಯನೀಯರ್ ಸೇವೆಯು ಕಾರ್ಯತಃ ಅವಳ ಮಾನಸಿಕ ಸಮತೆಯನ್ನಿಡಲು ನೆರವಾಗುತ್ತದೆಂದು ಅವಳ ಅನಿಸಿಕೆ. ಜನರಿಗೆ ಬೈಬಲ್ ಸತ್ಯವನ್ನು ಕಲಿಸಲು ಸಹಾಯ ಮಾಡುವುದು ಮತ್ತು ಅವರು ದೇವರ ಒಪ್ಪಿಗೆಯನ್ನು ಗಳಿಸಲಿಕ್ಕಾಗಿ ತಮ್ಮ ಜೀವಿತವನ್ನು ಬದಲಾಯಿಸುವುದನ್ನು ಕಾಣುವುದು—ಇದೇ ಅವಳ ಕಾರ್ಯಮಗ್ನ ಜೀವಿತದಲ್ಲಿ ಅತ್ಯಂತ ಮಹಾನ್ ಸಂತೋಷವನ್ನು ತರುತ್ತದೆ. ಜ್ಞಾನೋಕ್ತಿಯ ಈ ಮಾತುಗಳೊಂದಿಗೆ ಅವಳು ಪೂರ್ಣ ಸಹಮತದಿಂದಿದ್ದಾಳೆ: “ಯೆಹೋವನ ಆಶೀರ್ವಾದವು ಭಾಗ್ಯದಾಯಕವು; ಅದು ವ್ಯಸನವನ್ನು ಸೇರಿಸದು.”—ಜ್ಞಾನೋಕ್ತಿ 10:22.
ಒಂದು ಹೌರವಾದ ಹೊರೆ
11, 12. “ನನ್ನ ಹೊರೆಯು ಹೌರವಾದದ್ದು,” ಎಂದು ಯೇಸು ಹೇಳಿದ್ದು ಯಾವ ಅರ್ಥದಲ್ಲಿ?
11 ಒಂದು “ಮೃದುವಾದ” ನೊಗವನ್ನು ನಮಗೆ ವಾಗ್ದಾನಿಸುವುದಲ್ಲದೆ ಯೇಸು ಈ ಆಶ್ವಾಸನೆಯನ್ನೂ ಕೊಡುತ್ತಾನೆ: “ನನ್ನ ಹೊರೆಯು ಹೌರವಾದದ್ದು.” ಒಂದು “ಮೃದುವಾದ” ನೊಗವು ಈಗಾಗಲೆ ಕೆಲಸವನ್ನು ಹೆಚ್ಚು ಸುಲಭವಾಗಿ ಮಾಡುತ್ತದೆ; ಹೊರೆಯು ಸಹ ಹೌರವಾದಲ್ಲಿ, ಕೆಲಸವು ನಿಜವಾಗಿಯೂ ಉಲ್ಲಾಸಕರ. ಆದರೂ ಆ ಹೇಳಿಕೆಯಿಂದ ಯೇಸುವಿನ ಮನಸ್ಸಿನಲ್ಲಿ ಯಾವ ವಿಷಯವಿತ್ತು?
12 ಒಬ್ಬ ರೈತನು ತನ್ನ ಪಶುಗಳ ಕೆಲಸವನ್ನು ಬದಲಾಯಿಸಲು ಬಯಸಿದಾಗ ಏನು ಮಾಡುವನೆಂಬುದನ್ನು ಪರಿಗಣಿಸಿರಿ. ಹೊಲವನ್ನುಳುವ ಬದಲಿಗೆ ಬಂಡಿಯನ್ನೆಳೆಯುವ ಕೆಲಸಕ್ಕೆ ಬದಲಾಯಿಸುತ್ತಾನೆ ಎಂದುಕೊಳ್ಳೋಣ. ಅವನು ಪ್ರಥಮವಾಗಿ ನೇಗಿಲನ್ನು ತೆಗೆದು ಅನಂತರ ಬಂಡಿಯನ್ನು ಜೋಡಿಸುವನು. ನೇಗಿಲು ಮತ್ತು ಬಂಡಿ ಇವೆರಡನ್ನೂ ಪಶುಗಳಿಗೆ ಬಂಧಿಸುವುದು ಹುಚ್ಚತನವೇ ಸರಿ. ತದ್ರೀತಿ, ಅವರು ಈಗಾಗಲೆ ಹೊತ್ತಿರುವ ಹೊರೆಯ ಮೇಲೆ ತನ್ನ ಹೊರೆಯನ್ನೂ ಹೇರುವಂತೆ ಯೇಸು ಜನರಿಗೆ ಹೇಳುತ್ತಿರಲಿಲ್ಲ. ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ಯಾವ ಆಳಾದರೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು.” (ಲೂಕ 16:13) ಹೀಗೆ ಯೇಸು, ಜನರಿಗೆ ಒಂದು ಆಯ್ಕೆಯನ್ನು ನೀಡುತ್ತಲಿದ್ದನು. ಅವರು ತಮಗಿದ್ದ ಭಾರವಾದ ಹೊರೆಯನ್ನೇ ಹೊತ್ತುಕೊಂಡು ಮುಂದುವರಿಯಲು ಇಷ್ಟೈಸುವರೊ, ಇಲ್ಲವೇ ಅದನ್ನು ಕೆಳಗಿಳಿಸಿ, ಆತನು ಏನನ್ನು ನೀಡುತ್ತಿದ್ದನೋ ಅದನ್ನು ಸ್ವೀಕರಿಸುವರೊ? ಯೇಸು ಅವರಿಗೆ ಪ್ರೀತಿಯ ಪ್ರಚೋದನೆಯನ್ನಿತ್ತನು: “ನನ್ನ ಹೊರೆಯು ಹೌರವಾದದ್ದು.”
13. ಯೇಸುವಿನ ಕಾಲದಲ್ಲಿ ಜನರು ಯಾವ ಹೊರೆಯನ್ನು ಹೊತ್ತಿದ್ದರು, ಮತ್ತು ಯಾವ ಫಲಿತಾಂಶದೊಂದಿಗೆ?
13 ಯೇಸುವಿನ ಕಾಲದಲ್ಲಿ, ಜನರು ದಬ್ಬಾಳಿಕೆಯ ರೋಮನ್ ಪ್ರಭುಗಳಿಂದ ಮತ್ತು ಸಂಪ್ರದಾಯಬದ್ಧ, ಕಪಟಾಚರಣೆಯ ಫರಿಸಾಯರಿಂದ ಹೊರಿಸಲ್ಪಟ್ಟ ಭಾರವಾದ ಹೊರೆಯ ಕೆಳಗೆ ಒದ್ದಾಡುತ್ತಿದ್ದರು. (ಮತ್ತಾಯ 23:23) ರೋಮನ್ ಆಳಿಕೆಯ ಹೊರೆಯನ್ನು ಕಿತ್ತುಹಾಕುವ ಯತ್ನದಲ್ಲಿ, ಕೆಲವರು ವೈಯಕ್ತಿಕವಾಗಿ ಬದಲಾವಣೆಗಳನ್ನು ತರಲು ಪ್ರಯತ್ನಿಸಿದರು. ರಾಜಕೀಯ ಹೋರಾಟಗಳಲ್ಲಿ ಅವರು ತಮ್ಮನ್ನು ಒಳಗೂಡಿಸಿಕೊಂಡರು, ಆದರೆ ವಿಪತ್ಕಾರಕವಾಗಿ ಅಂತ್ಯಗೊಳ್ಳಲು ಮಾತ್ರ. (ಅ. ಕೃತ್ಯಗಳು 5:36, 37) ಇತರರಾದರೋ ಪ್ರಾಪಂಚಿಕತೆಯ ಬೆನ್ನಟ್ಟುವಿಕೆಗಳಲ್ಲಿ ಆಳವಾಗಿ ಒಳಗೊಳ್ಳುವ ಮೂಲಕ, ತಮ್ಮ ಪಾಡನ್ನು ಮೇಲ್ಪಡಿಸುವ ದೃಢನಿಶ್ಚಯದಿಂದಿದ್ದರು. (ಮತ್ತಾಯ 19:21, 22; ಲೂಕ 14:18-20) ತನ್ನ ಶಿಷ್ಯರಾಗುವಂತೆ ಅವರನ್ನು ಆಮಂತ್ರಿಸುವ ಮೂಲಕ ಯೇಸು ಅವರಿಗೆ ಪರಿಹಾರ ಮಾರ್ಗವನ್ನು ನೀಡಿದಾಗ, ಅದನ್ನು ಸ್ವೀಕರಿಸಲು ಎಲ್ಲರೂ ಸಿದ್ಧರಾಗಿರಲಿಲ್ಲ. ತಾವು ಹೊತ್ತಿದ್ದ ಹೊರೆಯನ್ನು, ಅದು ಭಾರವಾಗಿದ್ದರೂ, ಅದನ್ನು ಕೆಳಗಿಟ್ಟು ಯೇಸುವಿನ ಹೊರೆಯನ್ನು ಎತ್ತಿಕೊಳ್ಳಲು ಅವರು ಹಿಂಜರಿದರು. (ಲೂಕ 9:59-62) ಎಂತಹ ದುರಂತ ಪ್ರಮಾದ!
14. ಜೀವನದ ಚಿಂತೆಗಳು ಮತ್ತು ಪ್ರಾಪಂಚಿಕ ಆಶೆಗಳು ನಮ್ಮನ್ನು ಹೇಗೆ ಭಾರಗೊಳಿಸಬಲ್ಲವು?
14 ನಾವು ಜಾಗರೂಕರಾಗಿಲದ್ಲಿರುವಲ್ಲಿ, ಇಂದು ಅದೇ ತಪ್ಪನ್ನು ನಾವು ಸಹ ಮಾಡಬಲ್ಲೆವು. ಯೇಸುವಿನ ಶಿಷ್ಯರಾಗುವುದು ನಮ್ಮನ್ನು, ಲೋಕದ ಜನರು ಮಾಡುವ ಅವೇ ಗುರಿಗಳನ್ನು ಮತ್ತು ಮೌಲ್ಯಗಳನ್ನು ಬೆನ್ನಟ್ಟುವುದರಿಂದ ಮುಕ್ತಗೊಳಿಸುತ್ತದೆ. ಅನುದಿನದ ಆವಶ್ಯಕತೆಗಳನ್ನು ಪಡೆದುಕೊಳ್ಳುವುದಕ್ಕೆ ನಮಗಿನ್ನೂ ಕಷ್ಟಪಟ್ಟು ದುಡಿಯಬೇಕಾದರೂ, ನಾವು ಈ ವಿಷಯಗಳನ್ನು ನಮ್ಮ ಜೀವಿತದ ಕೇಂದ್ರಬಿಂದುವಾಗಿ ಮಾಡುವುದಿಲ್ಲ. ಆದರೂ, ಜೀವನದ ಚಿಂತೆಗಳು ಮತ್ತು ಐಹಿಕ ಭೋಗಗಳು ನಮ್ಮ ಮೇಲೆ ಹಿಡಿತವನ್ನು ಹಾಕಬಲ್ಲವು. ನಾವು ಬಿಟ್ಟುಕೊಟ್ಟಲ್ಲಿ, ಅಂತಹ ಆಶೆಗಳು ನಾವು ಆತುರದಿಂದ ಸ್ವೀಕರಿಸಿದ ಸತ್ಯವನ್ನೂ ಅದುಮಿಬಿಡಬಲ್ಲವು. (ಮತ್ತಾಯ 13:22) ಅಂತಹ ಅಪೇಕ್ಷೆಗಳನ್ನು ಪೂರೈಸುವುದರಲ್ಲಿ ನಾವೆಷ್ಟು ತಲ್ಲೀನರಾಗಬಲ್ಲೆವೆಂದರೆ, ನಮ್ಮ ಕ್ರೈಸ್ತ ಜವಾಬ್ದಾರಿಗಳು, ಬೇಗನೆ ಕೆಲಸಮುಗಿದರೆ ಸಾಕೆಂದು ನಾವು ಬಯಸುವ ಬೇಸರದ ಹಂಗುಗಳಾಗಿ ಪರಿಣಮಿಸುತ್ತವೆ. ಆ ಮನೋಭಾವದಿಂದ ನಾವು ದೇವರ ಸೇವೆಯನ್ನು ಮಾಡುವಲ್ಲಿ, ಅದರಿಂದ ಯಾವ ವಿಶ್ರಾಂತಿಯನ್ನೂ ನಾವು ನಿರೀಕ್ಷಿಸಸಾಧ್ಯವಿಲ್ಲ ಖಂಡಿತ.
15. ಪ್ರಾಪಂಚಿಕ ಆಶೆಗಳ ವಿಷಯದಲ್ಲಿ ಯೇಸು ಯಾವ ಎಚ್ಚರಿಕೆಯನ್ನು ಕೊಟ್ಟನು?
15 ನಮ್ಮೆಲ್ಲಾ ಬಯಕೆಗಳನ್ನು ಪೂರೈಸಲು ಶ್ರಮಿಸುವುದರಿಂದಲ್ಲ, ಬದಲಾಗಿ ಜೀವನದಲ್ಲಿ ಪ್ರಾಮುಖ್ಯ ವಿಷಯಗಳು ಯಾವುವೆಂದು ಖಾತರಿಮಾಡಿಕೊಳ್ಳುವ ಮೂಲಕ ಸಂತುಷ್ಟಿಯ ಜೀವನವು ಲಭಿಸುತ್ತದೆಂದು ಯೇಸು ಸೂಚಿಸಿದನು. “ನಮ್ಮ ಪ್ರಾಣಧಾರಣೆಗೆ ಏನು ಊಟಮಾಡಬೇಕು, ಏನು ಕುಡಿಯಬೇಕು, ನಮ್ಮ ದೇಹರಕ್ಷಣೆಗೆ ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ,” ಎಂದು ಬೋಧಿಸಿದನಾತನು. “ಊಟಕ್ಕಿಂತ ಪ್ರಾಣವು ಉಡುಪಿಗಿಂತ ದೇಹವು ಮೇಲಾದದ್ದಲ್ಲವೇ.” ಬಳಿಕ ಆಕಾಶದ ಪಕ್ಷಿಗಳ ಕಡೆಗೆ ಗಮನಸೆಳೆದು ಆತನಂದದ್ದು: “ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ, ಕಣಜಗಳಲ್ಲಿ ತುಂಬಿಟ್ಟುಕೊಳ್ಳುವದಿಲ್ಲ; ಆದಾಗ್ಯೂ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ.” ಹೊಲದ ಹೂವುಗಳ ಕುರಿತು ಸೂಚಿಸುತ್ತಾ, ಅವನು ಹೇಳಿದ್ದು: “ಅವು ದುಡಿಯುವದಿಲ್ಲ, ನೂಲುವದಿಲ್ಲ; ಆದಾಗ್ಯೂ ಈ ಹೂವುಗಳಲ್ಲಿ ಒಂದಕ್ಕಿರುವಷ್ಟು ಅಲಂಕಾರವು ಅರಸನಾದ ಸೊಲೊಮೋನನಿಗೆ ಸಹ ಅವನು ತನ್ನ ಸಕಲ ವೈಭವದಿಂದಿರುವಾಗಲೂ ಇರಲಿಲ್ಲ.”—ಮತ್ತಾಯ 6:25-29.
16. ಐಹಿಕ ಬೆನ್ನಟ್ಟುವಿಕೆಗಳ ಪರಿಣಾಮಗಳ ಸಂಬಂಧದಲ್ಲಿ ಅನುಭವವು ಏನನ್ನು ತೋರಿಸಿಯದೆ?
16 ಈ ಸರಳವಾದ ವಸ್ತುಪಾಠಗಳಿಂದ ನಾವೇನನ್ನಾದರೂ ಕಲಿಯಬಲ್ಲೆವೊ? ಒಬ್ಬ ವ್ಯಕ್ತಿಯು ಐಹಿಕವಾಗಿ ತನ್ನ ಪಾಡನ್ನು ಮೇಲ್ಪಡಿಸಲು ಎಷ್ಟು ಹೆಚ್ಚು ಶ್ರಮಿಸುತ್ತಾನೋ ಅಷ್ಟು ಹೆಚ್ಚಾಗಿ ಅವನು ಲೌಕಿಕ ಬೆನ್ನಟ್ಟುವಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ ಮತ್ತು ಅವನ ಹೆಗಲ ಮೇಲಿನ ಹೊರೆಯು ಇನ್ನೂ ಭಾರವಾಗುತ್ತದೆಂಬುದು ಒಂದು ಸಾಮಾನ್ಯ ಅನುಭವ. ತಮ್ಮ ಪ್ರಾಪಂಚಿಕ ಸಾಫಲ್ಯಗಳಿಗಾಗಿ—ಒಡೆದ ಕುಟುಂಬಗಳು, ಮುರಿದ ವಿವಾಹಗಳು, ಕೆಟ್ಟ ದೇಹಸ್ಥಿತಿ ಮತ್ತು ಇನ್ನೂ ಹೆಚ್ಚನ್ನು ಬೆಲೆಯಾಗಿ ತೆತ್ತಿರುವ ವ್ಯವಸ್ಥಾಪಕರು ಲೋಕದಲ್ಲಿ ತುಂಬಿದ್ದಾರೆ. (ಲೂಕ 9:25; 1 ತಿಮೊಥೆಯ 6:9, 10) ನೊಬೆಲ್ ಪ್ರಶಸ್ತಿ ಪಡೆದ ಆಲ್ಬರ್ಟ್ ಐನ್ಸ್ಟೈನ್ ಒಮ್ಮೆ ಹೇಳಿದ್ದು: “ಸ್ವತ್ತುಗಳು, ಬಾಹ್ಯ ಸಾಫಲ್ಯ, ಪ್ರಸಿದ್ಧಿ, ಸುಖಭೋಗ—ಇವೆಲ್ಲ ನನಗೆ ಯಾವಾಗಲೂ ತಿರಸ್ಕಾರಾರ್ಹವಾಗಿವೆ. ಪ್ರತಿಯೊಬ್ಬರಿಗೆ ಸರಳವೂ ನಿಗರ್ವಿಯೂ ಆದ ಜೀವನ ಮಾರ್ಗವೇ ಅತ್ಯುತ್ತಮವೆಂದು ನನ್ನ ನಂಬಿಕೆ.” ಇದು ಅಪೊಸ್ತಲ ಪೌಲನ ಸರಳವಾದ ಸಲಹೆಯನ್ನು ಕೇವಲ ಪ್ರತಿಧ್ವನಿಸುತ್ತದೆ: “ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ.”—1 ತಿಮೊಥೆಯ 6:6.
17. ಬೈಬಲ್ ಯಾವ ಜೀವನ ಮಾರ್ಗವನ್ನು ಶಿಫಾರಸ್ಸು ಮಾಡುತ್ತದೆ?
17 ನಾವು ಅಲಕ್ಷಿಸಬಾರದಾದ ಒಂದು ಪ್ರಾಮುಖ್ಯ ವಿಷಯವೂ ಇದೆ. “ಸರಳವೂ ನಿಗರ್ವಿಯೂ ಆದ ಜೀವನ ಮಾರ್ಗ” ದಲ್ಲಿ ಅನೇಕ ಪ್ರಯೋಜನಗಳಿವೆಯಾದರೂ, ಅದು ಮಾತ್ರ ಸಂತುಷ್ಟಿಯನ್ನು ತರುವ ಮಾರ್ಗವಲ್ಲ. ಪರಿಸ್ಥಿತಿಗಳ ಒತ್ತಡದಿಂದಾಗಿ ಸರಳವಾದ ಜೀವನ ರೀತಿಯನ್ನು ನಡೆಸುವ ಅನೇಕರಿದ್ದಾರಾದರೂ, ಅವರು ಎಷ್ಟು ಮಾತ್ರಕ್ಕೂ ಸಂತುಷ್ಟರು ಯಾ ಸಂತೋಷಿತರಲ್ಲ. ಐಹಿಕ ಸಂತೋಷಗಳನ್ನು ತ್ಯಜಿಸಿಬಿಟ್ಟು ಸಂನ್ಯಾಸಿಯ ಜೀವನವನ್ನು ನಡಿಸಬೇಕೆಂದು ನಮ್ಮನ್ನು ಬೈಬಲು ಪ್ರಚೋದಿಸುವುದಿಲ್ಲ. ಒತ್ತು ಇರುವುದು ದಿವ್ಯ ಭಕ್ತಿಯ ಮೇಲೆ, ಸ್ವಸಂತುಷ್ಟಿಯಲ್ಲಲ್ಲ. ನಾವು ಎರಡನ್ನೂ ಒಂದುಗೂಡಿಸುವಾಗ ಮಾತ್ರ “ದೊಡ್ದ ಲಾಭ”ವು ನಮಗಿದೆ. ಯಾವ ಲಾಭ? ಅದೇ ಪತ್ರದಲ್ಲಿ ತುಸು ಮುಂದಕ್ಕೆ, ಪೌಲನು ತಿಳಿಸುವುದೇನಂದರೆ ಯಾರು “ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ . . . ದೇವರ ಮೇಲೆ ನಿರೀಕ್ಷೆಯನ್ನಿಡು” ತಾರ್ತೊ ಅವರು “ವಾಸ್ತವವಾದ ಜೀವವನ್ನು ಹೊಂದುವದಕ್ಕೋಸ್ಕರ . . . ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರವಾಗುವಂಥವುಗಳನ್ನು ತಮಗೆ ಕೂಡಿಸಿಟ್ಟು” ಕೊಳ್ಳುವವರಾಗಿದ್ದಾರೆ.—1 ತಿಮೊಥೆಯ 6:17-19.
18. (ಎ) ನಿಜ ವಿಶ್ರಾಂತಿಯನ್ನು ಒಬ್ಬನು ಹೇಗೆ ಕಂಡುಕೊಳ್ಳಬಹುದು? (ಬಿ) ನಾವು ಮಾಡಬೇಕಾಗಬಹುದಾದ ಬದಲಾವಣೆಗಳನ್ನು ನಾವು ಹೇಗೆ ವೀಕ್ಷಿಸಬೇಕು?
18 ನಾವು ಹೊತ್ತಿರಬಹುದಾದ ನಮ್ಮ ವೈಯಕ್ತಿಕ ಭಾರದ ಹೊರೆಯನ್ನು ಕೆಳಗಿಡಲು ಕಲಿತು, ಯೇಸು ನೀಡುವ ಹೌರವಾದ ಹೊರೆಯನ್ನು ತೆಗೆದುಕೊಳ್ಳುವುದಾದರೆ, ವಿಶ್ರಾಂತಿಯು ನಮಗೆ ಸಿಗುವುದು. ರಾಜ್ಯ ಸೇವೆಯಲ್ಲಿ ಹೆಚ್ಚು ಪೂರ್ಣವಾಗಿ ಪಾಲಿಗರಾಗುವುದಕ್ಕಾಗಿ ತಮ್ಮ ಜೀವಿತಗಳನ್ನು ಸಂಘಟಿಸಿಕೊಂಡಿರುವ ಅನೇಕರು ಒಂದು ಸಂತೋಷದ ಮತ್ತು ಸಂತೃಪ್ತಿಯ ಜೀವನಕ್ಕೆ ದಾರಿಯನ್ನು ಕಂಡುಕೊಂಡಿದ್ದಾರೆ. ನಿಶ್ಚಯವಾಗಿ ಅಂತಹ ಒಂದು ಮುನ್ನಡೆಯನ್ನು ಮಾಡುವವರಿಗೆ ನಂಬಿಕೆ ಮತ್ತು ಧೈರ್ಯವು ಬೇಕಾಗಿದೆ, ಮತ್ತು ದಾರಿಯಲ್ಲಿ ಅಡಚಣೆಗಳೂ ಇದಾವ್ದು. ಆದರೆ ಬೈಬಲು ನಮಗೆ ಜ್ಞಾಪಕ ಕೊಡುವುದು: “ಗಾಳಿಯನ್ನು ನೋಡುತ್ತಲೇ ಇರುವವನು ಬೀಜಬಿತ್ತನು; ಮೋಡಗಳನ್ನು ಗಮನಿಸುತ್ತಲೇ ಇರುವವನು ಪೈರು ಕೊಯ್ಯನು.” (ಪ್ರಸಂಗಿ 11:4) ಒಮ್ಮೆ ಅವನ್ನು ಮಾಡಲು ನಾವು ನಿರ್ಧಾರಮಾಡಿದೆವೆಂದರೆ, ನಿಜವಾಗಿ ಅನೇಕ ಸಂಗತಿಗಳು ಅಷ್ಟೇನೂ ಕಷ್ಟಕರವಾಗಿರುವುದಿಲ್ಲ. ನಾವು ಮನಸ್ಸು ಮಾಡುವ ವಿಷಯವೇ ಅತಿ ಕಷ್ಟಕರವಾದ ಭಾಗವೆಂದು ತೋರುತ್ತದೆ. ಕಷ್ಟಕರವಾದ ಕೆಲಸವನ್ನು ಅಂಗೀಕರಿಸುವ ವಿಷಯದೊಂದಿಗೆ ಹೋರಾಡುವ ಅಥವಾ ಅದನ್ನೆದುರಿಸುವ ಮೂಲಕ ನಾವು ನಮ್ಮನ್ನು ಬಳಲಿಸಿಕೊಳ್ಳಬಹುದು. ನಾವು ನಮ್ಮ ಮನಸ್ಸುಗಳನ್ನು ಬಲಪಡಿಸಿಕೊಂಡು ಆ ಪಂಥಾಹ್ವಾನವನ್ನು ಸ್ವೀಕರಿಸುವಲ್ಲಿ, ಅದೆಂತಹ ಆಶೀರ್ವಾದವಾಗಿ ಪರಿಣಮಿಸಬಲ್ಲದೆಂದು ಕಾಣಲು ನಾವು ಆಶ್ಚರ್ಯಪಟ್ಟೇವು. ಕೀರ್ತನೆಗಾರನು ಪ್ರಚೋದಿಸಿದ್ದು: “ಯೆಹೋವನು ಸರ್ವೂತಮ್ತನೆಂದು ಅನುಭವ ಸವಿದು ನೋಡಿರಿ.”—ಕೀರ್ತನೆ 34:8; 1 ಪೇತ್ರ 1:13.
“ನಿಮ್ಮ ಪ್ರಾಣಗಳಿಗೆ ವಿಶ್ರಾಂತಿ”
19. (ಎ) ಲೋಕದ ಪರಿಸ್ಥಿತಿಯು ಕೆಡುತ್ತಾ ಬರುವಾಗ ನಾವೇನನ್ನು ನಿರೀಕ್ಷಿಸಬಲ್ಲೆವು? (ಬಿ) ಯೇಸುವಿನ ನೊಗದ ಕೆಳಗಿರುವಾಗ, ಯಾವುದರ ಆಶ್ವಾಸನೆ ನಮಗೆ ಕೊಡಲ್ಪಟ್ಟಿದೆ?
19 ಒಂದನೆಯ ಶತಕದ ಶಿಷ್ಯರಿಗೆ ಪೌಲನು ಜ್ಞಾಪಕಕೊಟ್ಟದ್ದು: “ನಾವು ಬಹು ಸಂಕಟಗಳನ್ನು ತಾಳಿ ದೇವರ ರಾಜ್ಯದೊಳಗೆ ಸೇರಬೇಕು.” (ಅ. ಕೃತ್ಯಗಳು 14:22) ಇಂದು ಅದಿನ್ನೂ ಅನ್ವಯಿಸುತ್ತದೆ. ಲೋಕದ ಪರಿಸ್ಥಿತಿಗಳು ಕೆಡುತ್ತಾ ಮುಂದುವರಿಯುವಾಗ, ನೀತಿ ಮತ್ತು ದಿವ್ಯ ಭಕ್ತಿಯ ಜೀವನವನ್ನು ಜೀವಿಸಲು ದೃಢನಿಶ್ಚಯ ಮಾಡುವವರೆಲ್ಲರ ಮೇಲೆ ಬರುವ ಒತ್ತಡಗಳು ಇನ್ನೂ ಹೆಚ್ಚಾಗುವವು. (2 ತಿಮೊಥೆಯ 3:12; ಪ್ರಕಟನೆ 13:16, 17) ಆದರೂ, ಪೌಲನಿಗಾದ ಅದೇ ಅನಿಸಿಕೆ ನಮಗಾಗುತ್ತದೆ, ಅವನಂದದ್ದು: “ಸರ್ವ ವಿಧದಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಅತಿ ಸಂಕಟಪಡುವವರಲ್ಲ; ನಾವು ದಿಕ್ಕುಕಾಣದವರಾಗಿದ್ದರೂ ಕೇವಲ ದೆಸೆಗೆಟ್ಟವರಲ್ಲ; ಹಿಂಸೆಪಡುವವರಾಗಿದ್ದರೂ ಕೈಬಿಡಲ್ಪಟ್ಟವರಲ್ಲ; ಕೆಡವಲ್ಪಟ್ಟವರಾಗಿದ್ದರೂ ಪ್ರಾಣನಷ್ಟಪಡುವವರಲ್ಲ.” ಇದಕ್ಕೆ ಕಾರಣ, ನಮಗೆ ಬಲಾಧಿಕ್ಯವನ್ನು ಕೊಡುವಂತೆ ಯೇಸು ಕ್ರಿಸ್ತನಲ್ಲಿ ಆತುಕೊಳ್ಳಶಕ್ತರಾಗಿರುವುದೇ. (2 ಕೊರಿಂಥ 4:7-9) ಶಿಷ್ಯತನದ ನೊಗವನ್ನು ಹೃದಯಪೂರ್ವಕವಾಗಿ ಸ್ವೀಕರಿಸುವ ಮೂಲಕ, “ನಿಮ್ಮ ಪ್ರಾಣಗಳಿಗೆ ವಿಶ್ರಾಂತಿಸಿಕ್ಕುವದು” ಎಂಬ ಯೇಸುವಿನ ವಾಗ್ದಾನದ ನೆರವೇರಿಕೆಯನ್ನು ನಾವು ಅನುಭವಿಸುವೆವು.—ಮತ್ತಾಯ 11:29.
ನೀವು ವಿವರಿಸಬಲ್ಲಿರೊ?
◻ ಯೇಸು ನೀಡಿರುವ ಮೃದುವಾದ ನೊಗವು ಯಾವುದು?
◻ ನಮ್ಮ ನೊಗವು ಒಂದು ಹೊರೆಯಾಗಿದೆ ಎಂದು ಎಣಿಸುವಾಗ, ನಾವೇನು ಮಾಡಬೇಕು?
◻ “ನನ್ನ ಹೊರೆಯು ಹೌರವಾದದ್ದು,” ಎಂದು ಯೇಸು ಹೇಳಿದ್ದು ಯಾವ ಅರ್ಥದಲ್ಲಿ?
◻ ನಮ್ಮ ಹೊರೆಯು ಹೌರವಾಗಿ ಉಳಿಯುವಂತೆ ನಾವು ಹೇಗೆ ಖಾತರಿಮಾಡಬಲ್ಲೆವು?