ವಾಚಕರಿಂದ ಪ್ರಶ್ನೆಗಳು
“ನನ್ನ ಸಹೋದರರೇ, ಬೋಧಕರಾದ ನಮಗೆ ಕಠಿನವಾದ ತೀರ್ಪು ಆಗುವದೆಂದು ತಿಳಿದುಕೊಂಡು ಬಹುಮಂದಿ ಬೋಧಕರಾಗಬೇಡಿರಿ,” ಎಂದು ಶಿಷ್ಯ ಯಾಕೋಬನು ಹೇಳಿದಾಗ ಅವನು ಅರ್ಥೈಸಿದ್ದೇನು?—ಯಾಕೋಬ 3:1.
ನಿಶ್ಚಯವಾಗಿ ಯಾಕೋಬನು ಕ್ರೈಸ್ತರನ್ನು ಅವರು ಇತರರಿಗೆ ಸತ್ಯವನ್ನು ಕಲಿಸುವುದರಿಂದ ನಿರುತ್ತೇಜಿಸತ್ತಿರಲಿಲ್ಲ. ಮತ್ತಾಯ 28:19, 20 ರಲ್ಲಿ, “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶಮಾಡಿರಿ,” ಎಂದು ಯೇಸು ತನ್ನ ಶಿಷ್ಯರಿಗೆ ಆಜ್ಞಾಪಿಸಿದನು. ಆದುದರಿಂದ, ಕ್ರೈಸ್ತರೆಲ್ಲರು ಬೋಧಕರಾಗಿರತಕ್ಕದು. ಇಬ್ರಿಯ ಕ್ರೈಸ್ತರು ಇನ್ನೂ ಬೋಧಕರಾಗಿರದಿದುದ್ದಕ್ಕಾಗಿ ಅಪೊಸ್ತಲ ಪೌಲನು ಅವರಿಗೆ ಬುದ್ಧಿಹೇಳಿದನು. ಅವನು ಬರೆದದ್ದು: “ಕಾಲವನ್ನು ನೋಡಿದರೆ ನೀವು ಇಷ್ಟರೊಳಗೆ ಬೋಧಕರಾಗಿರಬೇಕಾಗಿದ್ದರೂ ಒಬ್ಬನು ನಿಮಗೆ ದೈವೋಕ್ತಿಗಳ ಮೂಲಪಾಠಗಳನ್ನು ತಿರಿಗಿ ಕಲಿಸಿಕೊಡಬೇಕಾಗಿದೆ.”—ಇಬ್ರಿಯ 5:12.
ಹೀಗಿರಲಾಗಿ, ಯಾಕೋಬನು ಯಾವುದರ ಕುರಿತಾಗಿ ಮಾತಾಡುತ್ತಿದ್ದನು? ಸಭೆಯಲ್ಲಿ ಕಲಿಸುವ ವಿಶೇಷ ಸುಯೋಗಗಳಿರುವವರನ್ನು ಅವನು ಸೂಚಿಸುತ್ತಿದ್ದನು. ಎಫೆಸ 4:11 ರಲ್ಲಿ ನಾವು ಓದುವುದು: “ಆತನು [ಸಭೆಯ ಶಿರಸ್ಸಾದ ಯೇಸು ಕ್ರಿಸ್ತನು] ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸೌವಾರ್ತಿಕರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಉಪದೇಶಿಗಳನ್ನಾಗಿಯೂ ಅನುಗ್ರಹಿಸಿದನು.” ಇಂದಿರುವಂತೆಯೆ, ಕಲಿಸುವ ವಿಶೇಷ ಸುಯೋಗಗಳು ಒಂದನೆಯ ಶತಕದ ಸಭೆಗಳಲ್ಲೂ ಇದ್ದವು. ದೃಷ್ಟಾಂತಕ್ಕೆ, ಆಡಳಿತ ಮಂಡಲಿಯು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳ”ನ್ನು ಪ್ರತಿನಿಧಿಸುತ್ತದೆ ಮತ್ತು ಜಗದ್ವ್ಯಾಪಕ ಸಭೆಯ ಕಲಿಸುವಿಕೆಯ ಮೇಲ್ವಿಚಾರಣೆಯನ್ನು ಮಾಡುವ ವಿಶೇಷ ಜವಾಬ್ದಾರಿ ಅದಕ್ಕಿದೆ. (ಮತ್ತಾಯ 24:45) ಸಂಚರಣ ಮೇಲ್ವಿಚಾರಕರಿಗೆ ಮತ್ತು ಸಭಾ ಹಿರಿಯರಿಗೆ ಸಹ ಕಲಿಸುವ ವಿಶೇಷ ಜವಾಬ್ದಾರಿಗಳಿವೆ.
ದೇವರ ಕಠಿನವಾದ ತೀರ್ಪಿನ ಭಯದಿಂದಾಗಿ ಯೋಗ್ಯತೆಯುಳ್ಳ ಕ್ರೈಸ್ತ ಪುರುಷರು ಬೋಧಕನ ಪಾತ್ರವನ್ನು ಸ್ವೀಕರಿಸಬಾರದೆಂದು ಯಾಕೋಬನು ಹೇಳುತ್ತಿದ್ದನೋ? ನಿಶ್ಚಯವಾಗಿಯೂ ಅಲ್ಲ. ಹಿರಿಯನ ಸ್ಥಾನವು ಒಂದು ಮಹಾ ಸುಯೋಗವೆಂದು ಸೂಚಿಸುತ್ತಾ, 1 ತಿಮೊಥೆಯ 3:1 ಹೇಳುವುದು: “ಸಭಾಧ್ಯಕ್ಷನ ಉದ್ಯೋಗವನ್ನು ಪಡಕೊಳ್ಳಬೇಕೆಂದಿರುವವನು ಒಳ್ಳೇ ಕೆಲಸವನ್ನು ಅಪೇಕ್ಷಿಸುವವನಾಗಿದ್ದಾನೆಂಬ ಮಾತು ನಂಬತಕ್ಕದ್ದಾಗಿದೆ.” ಸಭಾ ಹಿರಿಯನಾಗಿ ನೇಮಕಹೊಂದಲಿಕ್ಕೆ ಇರುವ ಆವಶ್ಯಕತೆಗಳಲ್ಲಿ ಒಂದು, ಒಬ್ಬ ಪುರುಷನು “ಬೋಧಿಸುವದರಲ್ಲಿ ಪ್ರವೀಣ” ನಾಗಿರುವುದೇ. (1 ತಿಮೊಥೆಯ 3:2) ಪೌಲನ ಪ್ರೇರಿತ ಮಾತುಗಳನ್ನು ಯಾಕೋಬನು ಪ್ರತಿಷೇಧಿಸಲಿಲ್ಲ.
ಆದರೂ, ಸಾ.ಶ. ಒಂದನೆಯ ಶತಮಾನದಲ್ಲಿ ಕೆಲವರು, ಯೋಗ್ಯತೆ ಪಡೆಯದಿದ್ದರೂ ನೇಮಿಸಲ್ಪಡದಿದ್ದರೂ, ತಮ್ಮನ್ನು ಬೋಧಕರನ್ನಾಗಿ ನೇಮಿಸಿಕೊಳ್ಳುತ್ತಿದ್ದರೆಂದು ತೋರುತ್ತದೆ. ಆ ಪಾತ್ರದಲ್ಲಿ ಸ್ವಲ್ಪ ಪ್ರಾಧಾನ್ಯವಿತ್ತೆಂದು ಅವರು ಭಾವಿಸಿರುವ ಸಂಭಾವ್ಯತೆ ಇದೆ, ಮತ್ತು ಅವರು ವೈಯಕ್ತಿಕ ಹಿರಿಮೆಯನ್ನು ಬಯಸಿದರು. (ಹೋಲಿಸಿ ಮಾರ್ಕ 12:38-40; 1 ತಿಮೊಥೆಯ 5:17.) ‘ಸಭೆಯಲ್ಲಿ ಪ್ರಮುಖನಾಗಿರಲು ಬಯಸಿದ ಆದರೆ ಯೋಹಾನನ ಮಾತನ್ನು [“ಗೌರವದಿಂದ,” NW] ಅಂಗೀಕರಿಸದಿದ್ದ’ ದಿಯೊತ್ರೇಫನ ಕುರಿತು ಅಪೊಸ್ತಲ ಯೋಹಾನನು ತಿಳಿಸಿದನು. (3 ಯೋಹಾನ 9) ‘ಧರ್ಮೋಪದೇಶಕರಾಗಿರಲು ಬಯಸಿದರೂ ತಾವು ಹೇಳುವದಾಗಲಿ ತಾವು ದೃಢವಾಗಿ ಮಾತಾಡುವ ವಿಷಯವಾಗಲಿ ಏನೆಂದು ಗ್ರಹಿಸಿಕೊಳ್ಳದ’ ನಿರ್ದಿಷ್ಟ ಜನರ ಕುರಿತು ಒಂದನೆಯ ತಿಮೊಥೆಯ 1:7 (NW) ಹೇಳುತ್ತದೆ. ಯಾಕೋಬ 3:1ರ ಮಾತುಗಳು, ಬೋಧಕರಾಗಿರಲು ಅಪೇಕ್ಷಿಸಿದರೂ ದುರುದ್ದೇಶವಿರುವವರಿಗೆ ವಿಶೇಷವಾಗಿ ಸೂಕ್ತವಾಗಿವೆ. ಅಂಥವರು ಹಿಂಡಿಗೆ ಗಂಭೀರ ಹಾನಿಯನ್ನು ಮಾಡಬಲ್ಲರು ಮತ್ತು ಅದಕ್ಕನುಸಾರ ಕಠಿನವಾದ ತೀರ್ಪನ್ನು ಪಡೆಯುವರು.—ರೋಮಾಪುರ 2:17-21; 14:12.
ಯಾಕೋಬ 3:1, ಯೋಗ್ಯತೆ ಪಡೆದವರಿಗೆ ಮತ್ತು ಬೋಧಕರಾಗಿ ಸೇವೆಮಾಡುವವರಿಗೆ ಸಹ ಉತ್ತಮ ಮರುಜ್ಞಾಪನವಾಗಿದೆ. ಅವರ ವಶಕ್ಕೆ ಬಹಳವಾಗಿ ಕೊಡಲ್ಪಟ್ಟಿರುವುದರಿಂದ, ಅವರಿಂದ ಬಹಳವಾಗಿ ನಿರೀಕ್ಷಿಸಲ್ಪಡುವುದು. (ಲೂಕ 12:48) ಯೇಸುವಂದದ್ದು: “ಮನುಷ್ಯರು ಸುಮ್ಮನೆ ಆಡುವ ಪ್ರತಿಯೊಂದು ಮಾತಿನ ವಿಷಯವಾಗಿ ನ್ಯಾಯವಿಚಾರಣೆಯ ದಿನದಲ್ಲಿ ಉತ್ತರಕೊಡಬೇಕು.” (ಮತ್ತಾಯ 12:36) ಯಾರ ಮಾತುಗಳು ಹೆಚ್ಚು ಪ್ರಭಾವವನ್ನು ಬೀರುತ್ತವೋ ಆ ನೇಮಿತ ಹಿರಿಯರ ವಿಷಯದಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ.
ಯೆಹೋವನ ಕುರಿಗಳೊಂದಿಗೆ ತಾವು ವ್ಯವಹರಿಸುವ ರೀತಿಗಾಗಿ ಹಿರಿಯರು ಲೆಕ್ಕ ಒಪ್ಪಿಸುವರು. (ಇಬ್ರಿಯ 13:17) ಅವರು ಏನು ಹೇಳುತ್ತಾರೋ ಅದು ಜೀವಗಳನ್ನು ಪ್ರಭಾವಿಸುತ್ತದೆ. ಆದುದರಿಂದ ಹಿರಿಯನೊಬ್ಬನು, ತನ್ನ ಸ್ವಂತ ಅಭಿಪ್ರಾಯಗಳನ್ನು ಪ್ರವರ್ಧಿಸದಿರಲು ಮತ್ತು ಕುರಿಗಳನ್ನು ಫರಿಸಾಯರಂತೆ ದುರುಪಚರಿಸದಿರಲು ಜಾಗ್ರತೆವಹಿಸಬೇಕು. ಯೇಸು ತೋರಿಸಿದ್ದಂತಹದ್ದೇ ರೀತಿಯ ಆಳವಾದ ಪ್ರೀತಿಯನ್ನು ತೋರಿಸಲು ಅವನು ಪರಿಶ್ರಮಪಡಬೇಕು. ಕಲಿಸುವ ಪ್ರತಿಯೊಂದು ಸನ್ನಿವೇಶದಲ್ಲಿ, ವಿಶೇಷವಾಗಿ ನ್ಯಾಯನಿರ್ಣಾಯಕ ವಿಷಯಗಳಲ್ಲಿ ಒಳಗೂಡಿರುವಾಗ, ತಿರುಳಿಲ್ಲದ ಮಾತುಗಳನ್ನು ಬಳಸದಂತೆ ಮತ್ತು ತನ್ನದೇ ಆದ ವೈಯಕ್ತಿಕ ವಿಚಾರಗಳನ್ನು ವ್ಯಕ್ತಪಡಿಸದಂತೆ ಹಿರಿಯನು ತನ್ನ ಮಾತುಗಳನ್ನು ತೂಗಿನೋಡಬೇಕು. ಯೆಹೋವನ ಮೇಲೆ, ಆತನ ವಾಕ್ಯ ಮತ್ತು ಆತನ ಸಂಸ್ಥೆಯಿಂದ ಬರುವ ಮಾರ್ಗದರ್ಶನಗಳ ಮೇಲೆ ಆಳವಾಗಿ ಆತುಕೊಳ್ಳುವ ಮೂಲಕ, ಕುರುಬನು ದೇವರ ಹೇರಳವಾದ ಆಶೀರ್ವಾದವನ್ನು ಹೊಂದುವನೇ ಹೊರತು ‘ಕಠಿನವಾದ ತೀರ್ಪನ್ನು’ ಅಲ್ಲ.