ಮ್ಯಾಸರೀಟರು—ಯಾರಾಗಿದ್ದರು?
“ಸತ್ಯದ ದೇವರಾದ” ಯೆಹೋವನು ತನ್ನ ವಾಕ್ಯವಾದ ಬೈಬಲನ್ನು ಕಾಪಾಡಿ ಉಳಿಸಿದ್ದಾನೆ. (ಕೀರ್ತನೆ 31:5, NW) ಆದರೆ ಸತ್ಯದ ಶತ್ರುವಾದ ಸೈತಾನನು ಅದನ್ನು ಭ್ರಷ್ಟಗೊಳಿಸಲು ಮತ್ತು ನಾಶಮಾಡಲು ಪ್ರಯತ್ನಿಸಿದುದರಿಂದ, ಬೈಬಲು ಮೂಲತಃ ಬರೆಯಲ್ಪಟ್ಟಂತೆಯೇ ನಮಗೆ ತಲಪಿದುದು ಹೇಗೆ?—ನೋಡಿ ಮತ್ತಾಯ 13:39.
ಆಂಶಿಕ ಉತ್ತರವನ್ನು ಪ್ರೊಫೆಸರ್ ರಾಬರ್ಟ್ ಗಾರ್ಡಿಸ್ ಇವರ ಒಂದು ಹೇಳಿಕೆಯಲ್ಲಿ ಕಂಡುಕೊಳ್ಳಸಾಧ್ಯವಿದೆ: “ಮ್ಯಾಸರೀಟರು ಅಥವಾ ‘ಸಂಪ್ರದಾಯದ ಸಂರಕ್ಷಕರು’ ಎಂದು ಕರೆಯಲ್ಪಟ್ಟ ಹೀಬ್ರು ಶಾಸ್ತ್ರಿಗಳ ಸಾಧನೆಯು, ಸಾಕಷ್ಟು ಗಣ್ಯತೆಯನ್ನು ಪಡೆಯಲಿಲ್ಲ. ಈ ಅನಾಮಧೇಯ ಶಾಸ್ತ್ರಿಗಳು ಪವಿತ್ರ ಗ್ರಂಥವನ್ನು ಸೂಕ್ಷ್ಮವಾದ ಮತ್ತು ಪ್ರೀತಿಯ ಆಸಕ್ತಿಯಿಂದ ನಕಲು ಮಾಡಿದರು.” ನಕಲು ಮಾಡಿದ ಈ ಅಧಿಕಾಂಶ ಜನರು ನಮಗಿಂದು ಅನಾಮಧೇಯರಾಗಿ ಉಳಿದರೂ, ಮ್ಯಾಸರೀಟರ ಒಂದು ಕುಟುಂಬವು—ಬೆನ್ ಆ್ಯಶರ್—ಸ್ಪಷ್ಟವಾಗಿಗಿ ದಾಖಲೆಯಾಗಿರುತ್ತದೆ. ಅವರ ಕುರಿತು ಮತ್ತು ಅವರ ಜೊತೆ ಮ್ಯಾಸರೀಟರ ಕುರಿತು ನಮಗೇನು ತಿಳಿದಿದೆ?
ಬೆನ್ ಆ್ಯಶರ್ ಕುಟುಂಬ
ಹೆಚ್ಚಾಗಿ ಹಳೆಯ ಒಡಂಬಡಿಕೆಯೆಂದು ಕರೆಯಲ್ಪಡುವ, ಮೂಲತಃ ಹೀಬ್ರುವಿನಲ್ಲಿ ಬರೆಯಲ್ಪಟ್ಟ ಭಾಗವು ಯೆಹೂದಿ ಶಾಸ್ತ್ರಿಗಳಿಂದ ನಂಬಿಗಸ್ತಿಕೆಯಿಂದ ನಕಲು ಮಾಡಲ್ಪಟ್ಟಿತು. ಸಾ.ಶ. ಆರರಿಂದ ಹತ್ತನೆಯ ಶತಮಾನದ ವರೆಗೆ, ನಕಲು ಮಾಡುವ ಇವರು ಮ್ಯಾಸರೀಟರೆಂದು ಕರೆಯಲ್ಪಟ್ಟರು. ಅವರ ಕೆಲಸದಲ್ಲಿ ಏನು ಒಳಗೂಡಿತ್ತು?
ಶತಮಾನಗಳಿಂದ ಹೀಬ್ರು ಭಾಷೆಯು ಕೇವಲ ವ್ಯಂಜನಗಳಿಂದ ಬರೆಯಲ್ಪಡುತ್ತಿತ್ತು, ಸರ್ವಗಳನ್ನು ವಾಚಕನು ಒದಗಿಸುತ್ತಿದ್ದನು. ಆದರೆ ಮ್ಯಾಸರೀಟರ ಸಮಯದೊಳಗೆ, ಹೀಬ್ರುವಿನ ಯೋಗ್ಯ ಉಚ್ಚಾರವು ಕಳೆದುಹೋಗಲ್ಪಡುತ್ತಿತ್ತು, ಯಾಕೆಂದರೆ ಹೆಚ್ಚಿನ ಯೆಹೂದ್ಯರು ಆ ಭಾಷೆಯಲ್ಲಿ ಆಗ ಪ್ರವೀಣರಾಗಿರಲಿಲ್ಲ. ಬಾಬೆಲಿನಲ್ಲಿ ಮತ್ತು ಇಸ್ರಾಯೇಲಿನಲ್ಲಿ ಮ್ಯಾಸರೀಟರ ಗುಂಪುಗಳು, ಲಿಖಿತ ಚಿಹ್ನೆಗಳನ್ನು ಸಂಶೋಧಿಸಿ, ಅವುಗಳನ್ನು ವ್ಯಂಜನಗಳ ಸುತ್ತಲೂ ಇಟ್ಟು, ಸರ್ವ ಹಾಕುವ ರೀತಿ ಮತ್ತು ಯೋಗ್ಯ ಉಚ್ಚಾರವನ್ನು ಸೂಚಿಸಿದವು. ಕಡಿಮೆಪಕ್ಷ ಮೂರು ಬೇರೆ ಬೇರೆ ಪದ್ಧತಿಗಳನ್ನು ವಿಕಸಿಸಲಾಯಿತು, ಆದರೆ ಅತ್ಯಂತ ಪ್ರಭಾವಶಾಲಿಯಾಗಿ ಪರಿಣಮಿಸಿದ್ದು ಗಲಿಲಾಯ ಸಮುದ್ರದ ಬಳಿಯ ತಿಬೇರಿಯದಲ್ಲಿನ ಮ್ಯಾಸರೀಟರ, ಬೆನ್ ಆ್ಯಶರ್ ಕುಟುಂಬದ ಬೀಡು.
ಆಕರ ಗ್ರಂಥಗಳು ಈ ಅಸದೃಶ ಕುಟುಂಬದಿಂದ, ಸಾ.ಶ. ಎಂಟನೆಯ ಶತಕದ ಆ್ಯಶರ್ ದಿ ಎಲರ್ಡ್‌ನಿಂದ ಪ್ರಾರಂಭಿಸಿ, ಐದು ಸಂತತಿಗಳನ್ನು ಪಟ್ಟಿಮಾಡುತ್ತವೆ. ಇತರರು ಯಾರೆಂದರೆ ನೆಹೆಮಾಯ ಬೆನ್ ಆ್ಯಶರ್, ಆ್ಯಶರ್ ಬೆನ್ ನೆಹೆಮಾಯ, ಮೋಸಸ್ ಬೆನ್ ಆ್ಯಶರ್, ಮತ್ತು ಕೊನೆಗೆ, ಸಾ.ಶ. ಹತ್ತನೆಯ ಶತಮಾನದ ಏರನ್ ಬೆನ್ ಮೋಸಸ್ ಬೆನ್ ಆ್ಯಶರ್.a ಈ ಪುರುಷರು, ಆ ಲಿಖಿತ ಚಿಹ್ನೆಗಳನ್ನು—ಯಾವುದು ಹೀಬ್ರು ಬೈಬಲ್ ಮೂಲಗ್ರಂಥದ ಯೋಗ್ಯವಾದ ಉಚ್ಚಾರವಾಗಿರುವುದೆಂದು ಅವರು ತಿಳಿದರೋ ಅದನ್ನು ಅತ್ಯುತ್ತಮವಾಗಿ ವ್ಯಕ್ತಪಡಿಸುವ ಲಿಖಿತ ಚಿಹ್ನೆಗಳನ್ನು—ಪರಿಪೂರ್ಣತೆಗೆ ತಂದವರಲ್ಲಿ ಮುಂದಾಳುಗಳಾಗಿದ್ದರು. ಈ ಚಿಹ್ನೆಗಳನ್ನು ವಿಕಸಿಸಲಿಕ್ಕಾಗಿ, ಹೀಬ್ರು ವ್ಯಾಕರಣ ಪದ್ಧತಿಯ ಮೂಲವನ್ನು ಅವರಿಗೆ ನಿರ್ಧರಿಸಲಿಕ್ಕಿತ್ತು. ಹೀಬ್ರು ವ್ಯಾಕರಣದ ಯಾವುದೇ ಖಚಿತ ನಿಯಮಗಳ ಪದ್ಧತಿಯು ಎಂದೂ ದಾಖಲೆಯಾದದ್ದಿಲ್ಲ. ಆದುದರಿಂದ, ಈ ಮ್ಯಾಸರೀಟರು ಹೀಬ್ರು ವ್ಯಾಕರಣಗಾರರಲ್ಲಿ ಮೊದಲಿಗರೆಂದು ಒಬ್ಬನು ಹೇಳಬಹುದು.
ಈ ಮಾಹಿತಿಯನ್ನು ದಾಖಲೆಮಾಡಿ ಸಂಕಲಿಸಿದವರಲ್ಲಿ, ಬೆನ್ ಆ್ಯಶರ್ ಕುಟುಂಬ ಪರಂಪರೆಯ ಕೊನೆಯ ಮ್ಯಾಸರೀಟನಾದ ಏರನ್ ಮೊದಲಿಗನು. ಅವನು ಹಾಗೆ ಮಾಡಿದ್ದು ಹೀಬ್ರು ವ್ಯಾಕರಣ ನಿಯಮಗಳ ಮೊದಲನೆಯ ಪುಸ್ತಕವಾದ, “ಸಿಫರ್ ಡಿಕ್‌ಡ್ಯುಕೈ ಹಾತೆಆಮಿಮ್,” ಎಂಬ ಶೀರ್ಷಿಕೆಯ ಒಂದು ಕೃತಿಯಲ್ಲಿ. ಈ ಪುಸ್ತಕವು ಮುಂದಿನ ಶತಮಾನಗಳಲ್ಲಿ ಬೇರೆ ಹೀಬ್ರು ವ್ಯಾಕರಣಗಾರರ ಕೃತಿಗೆ ಮೂಲಾಧಾರವಾಗಿ ಪರಿಣಮಿಸಿತು. ಆದರೆ ಇದು ಮ್ಯಾಸರೀಟರ ಅಧಿಕ ಪ್ರಾಮುಖ್ಯ ಕೃತಿಯ ಕೇವಲ ಒಂದು ಉಪ ಕೃತಿಯಾಗಿತ್ತು. ಅದು ಯಾವುದಾಗಿತ್ತು?
ಒಂದು ಅಸಾಧಾರಣ ಜ್ಞಾಪಕಶಕ್ತಿ ಬೇಕಿತ್ತು
ಬೈಬಲ್ ಮೂಲಗ್ರಂಥದ ಪ್ರತಿಯೊಂದು ಶಬ್ದದ—ಪ್ರತಿಯೊಂದು ಅಕ್ಷರದ ಸಹ—ನಿಷ್ಕೃಷ್ಟ ವಹನವು ಮ್ಯಾಸರೀಟರ ಮುಖ್ಯ ಚಿಂತೆಯಾಗಿತ್ತು. ನಿಷ್ಕೃಷ್ಟತೆಯನ್ನು ನಿಶ್ಚಿತಮಾಡಲು, ಹಿಂದೆ ನಕಲು ಮಾಡಿದವರು ತಿಳಿದೋ ತಿಳಿಯದೆಯೋ ಮೂಲಗ್ರಂಥದಲ್ಲಿ ಮಾಡಿದ ಯಾವುದೇ ಸಂಭಾವ್ಯ ಬದಲಾವಣೆಯನ್ನು ಸೂಚಿಸುವ ಮಾಹಿತಿಯನ್ನು ದಾಖಲಿಸಲು, ಮ್ಯಾಸರೀಟರು ಪ್ರತಿ ಪುಟದ ಪಕ್ಕ ಅಂಚುಗಳನ್ನು ಬಳಸಿದರು. ಈ ಪಕ್ಕ ಅಂಚಿನ ಟಿಪ್ಪಣಿಗಳಲ್ಲಿ ಮ್ಯಾಸರೀಟರು ಅಸಾಮಾನ್ಯ ಪದರೂಪಗಳನ್ನು ಮತ್ತು ಸಂಯುಕ್ತ ಪದಗಳನ್ನು ಸಹ ಬರೆದು, ಅವು ಒಂದು ಪುಸ್ತಕದಲ್ಲಿ ಅಥವಾ ಇಡೀ ಹೀಬ್ರು ಶಾಸ್ತ್ರದಲ್ಲಿ ಎಷ್ಟು ಬಾರಿ ತೋರಿಬರುತ್ತವೆಂದೂ ಗುರುತು ಮಾಡಿದರು. ಸ್ಥಳದ ಪರಿಮಿತಿಯಿಂದಾಗಿ ಈ ಹೇಳಿಕೆಗಳು ಅತಿ ಸಂಕ್ಷಿಪ್ತವಾದ ಸಂಕೇತಾಕ್ಷರಗಳಲ್ಲಿ ದಾಖಲಿಸಲ್ಪಟ್ಟವು. ಒಂದು ಅಡ್ಡ ಪರೀಕ್ಷೆಯ ಇನ್ನೊಂದು ಸಾಧನವಾಗಿ, ನಿರ್ದಿಷ್ಟ ಪುಸ್ತಕಗಳ ಮಧ್ಯ ಶಬ್ದವನ್ನು ಮತ್ತು ಅಕ್ಷರವನ್ನು ಅವರು ಗುರುತು ಮಾಡಿದರು. ನಿಷ್ಕೃಷ್ಟವಾದ ನಕಲನ್ನು ನಿಶ್ಚಿತಗೊಳಿಸಲಿಕ್ಕಾಗಿ ಅವರು ಬೈಬಲಿನ ಪ್ರತಿಯೊಂದು ಅಕ್ಷರವನ್ನು ಸಹ ಎಣಿಕೆಮಾಡುವ ಮಟ್ಟಿಗೂ ಹೋದರು.
ಪುಟದ ತುದಿಯ ಮತ್ತು ಕೆಳಗಿನ ಅಂಚುಗಳಲ್ಲಿ, ಮ್ಯಾಸರೀಟರು ಪಕ್ಕ ಅಂಚುಗಳ ಕೆಲವು ಸಂಕ್ಷಿಪ್ತ ಟಿಪ್ಪಣಿಗಳ ಕುರಿತು ಹೆಚ್ಚು ವಿಸ್ತಾರವಾದ ಹೇಳಿಕೆಗಳನ್ನು ದಾಖಲಿಸಿದರು.b ಇವು ಅವರ ಕೃತಿಯನ್ನು ಅಡ್ಡ ಪರೀಕೆಮ್ಷಾಡಲು ಸಹಾಯಕಾರಿಯಾಗಿದ್ದವು. ಆಗ ವಚನಗಳಿಗೆ ಸಂಖ್ಯೆಯು ಕೊಡಲ್ಪಟ್ಟಿರಲಿಲ್ಲವಾದುದರಿಂದ ಮತ್ತು ಯಾವ ಬೈಬಲ್ ಕನ್‌ಕಾರ್ಡನ್ಸ್‌ಗಳೂ ಇರದಿದುದ್ದರಿಂದ, ಈ ಅಡ್ಡ ಪರೀಕ್ಷೆಯನ್ನು ಮಾಡಲು ಬೈಬಲಿನ ಬೇರೆ ಭಾಗಗಳಿಗೆ ಮ್ಯಾಸರೀಟರು ನಿರ್ದೇಶಿಸಿದ್ದು ಹೇಗೆ? ತುದಿಯ ಮತ್ತು ಕೆಳ ಅಂಚುಗಳಲ್ಲಿ, ಒಂದು ಸಮಾಂತರ ವಚನದ ಅಂಶವನ್ನು ಬರೆದು, ಸೂಚಿಸಲ್ಪಟ್ಟ ಆ ಶಬ್ದ ಅಥವಾ ಶಬ್ದಗಳು ಬೈಬಲಿನಲ್ಲಿ ಬೇರೆ ಕಡೆಯಲ್ಲಿ ಕಂಡುಬಂದಿವೆಯೆಂದು ತಮಗೆ ನೆನಪಾಗುವಂತೆ ಅವರು ಪಟ್ಟಿಮಾಡಿದರು. ಸ್ಥಳದ ಪರಿಮಿತಿಗಳಿಂದಾಗಿ ಅನೇಕಸಾರಿ, ಪ್ರತಿಯೊಂದು ಸಮಾಂತರ ವಚನವು ತಮಗೆ ನೆನಪಾಗುವಂತೆ ಕೇವಲ ಒಂದೇ ಮುಖ್ಯ ಶಬ್ದವನ್ನು ಅವರು ಬರೆದರು. ಈ ಪಕ್ಕ ಅಂಚಿನ ಟಿಪ್ಪಣಿಗಳು ಉಪಯುಕ್ತವಾಗಿರಬೇಕಾದರೆ, ಈ ನಕಲುಗಾರರಿಗೆ ಕಾರ್ಯತಃ ಇಡೀ ಹೀಬ್ರು ಬೈಬಲ್ ಕಂಠಪಾಠವಾಗಿರಬೇಕಿತ್ತು.
ಅಂಚುಗಳಿಗೆ ತೀರ ಉದ್ದವಾದ ಪಟ್ಟಿಗಳು ಹಸ್ತಪ್ರತಿಯ ಇನ್ನೊಂದು ಭಾಗಕ್ಕೆ ಸ್ಥಳಾಂತರಿಸಲ್ಪಟ್ಟವು. ದೃಷ್ಟಾಂತಕ್ಕೆ, ಆದಿಕಾಂಡ 18:3ರ ಪಕ್ಕ ಅಂಚಿನ ಮ್ಯಾಸರೀಟರ ಟಿಪ್ಪಣಿಯು ಮೂರು ಹೀಬ್ರು ಅಕ್ಷರಗಳನ್ನು קלד ತೋರಿಸುತ್ತದೆ. ಇದು ಹೀಬ್ರು ಸಂಖ್ಯೆಯಾದ 134ಕ್ಕೆ ಸಮಾನವಾಗಿದೆ. ಹಸ್ತಪ್ರತಿಯ ಇನ್ನೊಂದು ಭಾಗದಲ್ಲಿ, ಮ್ಯಾಸರೀಟರಿಗಿಂತ ಮುಂಚೆ ನಕಲು ಬರೆದವರು, ಯೆಹೋವನ ನಾಮವನ್ನು ಹೀಬ್ರು ಮೂಲಗ್ರಂಥದಿಂದ ಬುದ್ಧಿಪೂರ್ವಕವಾಗಿ ತೆಗೆದು “ಕರ್ತ” ಎಂಬ ಪದದಿಂದ ಭರ್ತಿಮಾಡಿರುವ 134 ಸ್ಥಳಗಳನ್ನು ಸೂಚಿಸುವ ಒಂದು ಪಟ್ಟಿ ತೋರಿಬರುತ್ತದೆ.c ಈ ಬದಲಾವಣೆಗಳ ಅರಿವಿದ್ದರೂ ಮ್ಯಾಸರೀಟರು ತಮಗೆ ದಾಟಿಸಲ್ಪಟ್ಟ ಈ ಹೀಬ್ರು ಮೂಲಗ್ರಂಥವನ್ನು ಅಳವಡಿಸುವ ಸ್ವಾತಂತ್ರ್ಯವನ್ನು ತೆಗೆದುಕೊಳ್ಳಲಿಲ್ಲ. ಬದಲಾಗಿ, ಈ ಬದಲಾವಣೆಗಳನ್ನು ತಮ್ಮ ಪಕ್ಕ ಅಂಚಿನ ಟಿಪ್ಪಣಿಗಳಲ್ಲಿ ಅವರು ಸೂಚಿಸಿದರು. ಆದರೆ ಹಿಂದಿನ ನಕಲುಗಾರರು ಅದನ್ನು ಅಳವಡಿಸಿದಿರ್ದಲಾಗಿ, ಮ್ಯಾಸರೀಟರಾದರೋ ಆ ಮೂಲಗ್ರಂಥದ ತಿದ್ದುವಿಕೆಯನ್ನು ಮಾಡದಿರಲು ಅಂತಹ ವಿಪರೀತ ಜಾಗ್ರತೆಯನ್ನು ವಹಿಸಿದ್ದೇಕೆ? ಅವರ ಯೆಹೂದಿ ನಂಬಿಕೆಯ ಪದ್ಧತಿಯು ಅವರ ಪೂರ್ವಿಕರಿಗಿಂತ ಬೇರೆಯಾಗಿತ್ತೋ?
ಅವರು ನಂಬಿದ್ದೇನು?
ಮ್ಯಾಸರೀಟರ ಪ್ರವರ್ಧಮಾನದ ಈ ಕಾಲಾವಧಿಯಲ್ಲಿ, ಯೆಹೂದಿಮತವು ಆಳವಾಗಿ ಬೇರೂರಿದ್ದ ವಿಚಾರಶಾಸ್ತ್ರ ಸಂಬಂಧದ ಹೋರಾಟದಲ್ಲಿ ಒಳಗೂಡಿತ್ತು. ಸಾ.ಶ. ಒಂದನೆಯ ಶತಮಾನದಿಂದ, ರಬ್ಬಿಗಳ ಯೆಹೂದಿ ಮತವು ತನ್ನ ನಿಯಂತ್ರಣವನ್ನು ಹೆಚ್ಚಿಸುತ್ತಾ ಬರುತ್ತಿತ್ತು. ಟ್ಯಾಲ್ಮಡ್‌ನ ಬರೆಯುವಿಕೆ ಮತ್ತು ರಬ್ಬಿಗಳ ಅರ್ಥವಿವರಣೆಗಳೊಂದಿಗೆ, ಬೈಬಲ್ ಮೂಲಗ್ರಂಥವು, ರಬ್ಬಿಗಳ ಮೌಖಿಕ ನಿಯಮಗಳ ಅರ್ಥವಿವರಣೆಯ ಕೆಳಗೆ ದ್ವಿತೀಯ ಸ್ಥಾನಕ್ಕೆ ಬೀಳತೊಡಗಿತು.d ಆದುದರಿಂದ, ಬೈಬಲ್ ಮೂಲಗ್ರಂಥದ ಜಾಗ್ರತೆಯ ಸಂರಕ್ಷಿಸುವಿಕೆಯು ಅದರ ಪ್ರಾಧಾನ್ಯವನ್ನು ಕಳೆದುಕೊಂಡಿದಿರ್ದಸಾಧ್ಯವಿತ್ತು.
ಎಂಟನೆಯ ಶತಮಾನದಲ್ಲಿ ಕಾರೈಟರೆಂದು ಜ್ಞಾತರಾಗಿದ್ದ ಒಂದು ಗುಂಪು ಈ ಪ್ರವೃತ್ತಿಯ ವಿರುದ್ಧ ದಂಗೆಯೆದಿತ್ದು. ವೈಯಕ್ತಿಕ ಬೈಬಲಧ್ಯಯನದ ಪ್ರಮುಖತೆಯನ್ನು ಒತ್ತಿಹೇಳುತ್ತಾ, ಅವರು ರಬ್ಬಿಗಳ ಅಧಿಕಾರ ಹಾಗೂ ಅರ್ಥವಿವರಣೆಗಳನ್ನು ಮತ್ತು ಟ್ಯಾಲ್ಮಡನ್ನು ತಿರಸ್ಕರಿಸಿದರು. ಬೈಬಲ್ ಮೂಲಗ್ರಂಥವನ್ನು ಮಾತ್ರ ತಮ್ಮ ಪ್ರಮಾಣ ಗ್ರಂಥವಾಗಿ ಅವರು ಸ್ವೀಕರಿಸಿದರು. ಇದು ಆ ಮೂಲಗ್ರಂಥದ ನಿಷ್ಕೃಷ್ಟ ವಹನದ ಅಗತ್ಯವನ್ನು ಹೆಚ್ಚಿಸಿತು, ಮತ್ತು ಮ್ಯಾಸರೀಟರ ಅಧ್ಯಯನಗಳು ಹೊಸತಾದ ಪ್ರಚೋದನೆಯನ್ನು ಪಡೆದವು.
ರಬ್ಬಿಗಳ ಅಥವಾ ಕಾರೈಟರ ನಂಬಿಕೆಯು ಮ್ಯಾಸರೀಟರನ್ನು ಎಷ್ಟರ ಮಟ್ಟಿಗೆ ಪ್ರಭಾವಿಸಿತು? ಹೀಬ್ರು ಬೈಬಲ್ ಹಸ್ತಪ್ರತಿಗಳ ತಜ್ಞರಾದ ಎಮ್. ಏಚ್. ಗೋಷನ್-ಗಾಟ್‌ಸ್ಟೈನ್ ಹೇಳುವುದು: “ತಾವೊಂದು ಪುರಾತನ ಸಂಪ್ರದಾಯವನ್ನು ಎತ್ತಿಹಿಡಿಯುತ್ತಿದ್ದೇವೆ ಮತ್ತು ಬುದ್ಧಿಪೂರ್ವಕವಾಗಿ ಅದರಲ್ಲಿ ಹಸ್ತಕ್ಷೇಪಮಾಡುವುದು ತಮಗೆ ಸಾಧ್ಯವಿರುವ ಅತಿ ಕೆಟ್ಟ ಪಾತಕವಾಗಿರತ್ತಿತ್ತೆಂದು . . . ಮ್ಯಾಸರೀಟರು ಮನಗಂಡಿದ್ದರು.”
ಮ್ಯಾಸರೀಟರು ಬೈಬಲ್ ಮೂಲಗ್ರಂಥದ ಯೋಗ್ಯ ನಕಲು ಮಾಡುವಿಕೆಯನ್ನು ಪವಿತ್ರ ಕಾರ್ಯವಾಗಿ ವೀಕ್ಷಿಸಿದರು. ವೈಯಕ್ತಿಕವಾಗಿ ಅವರು ಬೇರೆ ಧಾರ್ಮಿಕ ಪರಿಗಣನೆಗಳಿಂದ ಬಹಳವಾಗಿ ಪ್ರೇರಿಸಲ್ಪಟ್ಟಿರಬಹುದಾಗಿದ್ದರೂ, ಮ್ಯಾಸರೀಟರ ಕೃತಿಯು ತಾನೇ ವಿಚಾರಶಾಸ್ತ್ರ ವಾದಾಂಶಗಳಿಂದ ಪ್ರಭಾವಿತವಾಗಿಲ್ಲವೆಂಬುದು ವ್ಯಕ್ತ. ಅತಿ ಸಂಕ್ಷಿಪ್ತವಾದ ಪಕ್ಕ ಅಂಚಿನ ಟಿಪ್ಪಣಿಗಳು ವೇದಶಾಸ್ತ್ರದ ವಾದಗಳಿಗೆ ಕೊಂಚವೂ ಅವಕಾಶ ಕೊಡಲಿಲ್ಲ. ಬೈಬಲ್ ಮೂಲಗ್ರಂಥವೇ ಅವರ ಜೀವಿತದ ಆಸಕ್ತಿಯಾಗಿತ್ತು; ಅದನ್ನು ತಿದ್ದಿಬರೆಯಲು ಅವರು ಹೋಗಲಿಲ್ಲ.
ಅವರ ಕೃತಿಯಿಂದ ಪ್ರಯೋಜನ ಪಡೆಯುವುದು
ಮಾಂಸಿಕ ಇಸ್ರಾಯೇಲ್ ಇನ್ನುಮುಂದೆ ದೇವರಾದುಕೊಂಡ ಜನಾಂಗವಾಗಿರದಿದ್ದರೂ, ಈ ಯೆಹೂದಿ ನಕಲುಗಾರರು ದೇವರ ವಾಕ್ಯದ ನಿಷ್ಕೃಷ್ಟವಾದ ಸಂರಕ್ಷಣೆಗಾಗಿ ಪೂರ್ಣವಾಗಿ ಮೀಸಲಾಗಿದ್ದರು. (ಮತ್ತಾಯ 21:42-44; 23:37, 38) ಬೆನ್ ಆ್ಯಶರ್ ಕುಟುಂಬದ ಮತ್ತು ಇತರ ಮ್ಯಾಸರೀಟರ ಸಾಧನೆಯನ್ನು, ರಾಬರ್ಟ್ ಗಾರ್ಡಿಸ್, ಸೂಕ್ತವಾಗಿ ಸಾರಾಂಶಿಸುತ್ತಾ ಬರೆದದ್ದು: “ಆ ನಮ್ರರಾದ ಆದರೆ ಪಟುಬ್ಟಿಡದ ಕೆಲಸಗಾರರು . . . ಬೈಬಲ್ ಮೂಲಗ್ರಂಥವನ್ನು ಅದರ ನಷ್ಟ ಅಥವಾ ಭಿನ್ನ ಪಾಠಾಂತರದ ವಿರುದ್ಧವಾಗಿ ಕಾಯುವ, ತಮ್ಮ ಅತ್ಯಂತ ಸಾಹಸದ ಕೆಲಸವನ್ನು ಪ್ರಸಿದ್ಧಿಯಿಲ್ಲದೆ ನಡೆಸಿದರು.” (ದ ಬಿಬ್ಲಿಕಲ್ ಟೆಕ್ಟ್ಸ್ ಇನ್ ದ ಮೇಕಿಂಗ್) ಪರಿಣಾಮವಾಗಿ, 16 ನೆಯ ಶತಕದ ಲೂತರ್ ಮತ್ತು ಟಿಂಡೆಲರಂತಹ ಮತ ಸುಧಾರಕರು ಚರ್ಚ್ ಅಧಿಕಾರವನ್ನು ವಿರೋಧಿಸಿ, ಬೈಬಲನ್ನು ಎಲ್ಲರು ಓದುವಂತೆ ಸಾಮಾನ್ಯ ಭಾಷೆಗಳಿಗೆ ಭಾಷಾಂತರಿಸಲು ತೊಡಗಿದಾಗ, ತಮ್ಮ ಕೃತಿಗೆ ಆಧಾರವಾಗಿ ಬಳಸಲು ಸುಸಂರಕ್ಷಿತ ಹೀಬ್ರು ಮೂಲಗ್ರಂಥವು ಅವರಿಗಿತ್ತು.
ಮ್ಯಾಸರೀಟರ ಕೃತಿಯು ಇಂದೂ ನಮಗೆ ಪ್ರಯೋಜನಕರವಾಗುತ್ತಾ ಇದೆ. ಅವರ ಹೀಬ್ರು ಮೂಲಗ್ರಂಥಗಳು, ನ್ಯೂ ವರ್ಲ್ಡ್ ಟ್ರಾನ್‌ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್‌ನ ಹೀಬ್ರು ಶಾಸ್ತ್ರಗಳ ರಚನೆಗೆ ಮೂಲಾಧಾರವಾಗಿವೆ. ಈ ಭಾಷಾಂತರವು, ಪುರಾತನ ಮ್ಯಾಸರೀಟರಿಂದ ನಿಷ್ಕೃಷ್ಟತೆಗಾಗಿ ತೋರಿಸಲ್ಪಟ್ಟ ಅದೇ ಸಮರ್ಪಣೆ ಮತ್ತು ಆಸಕ್ತಿಯ ಆತ್ಮದಿಂದ ಅನೇಕ ಭಾಷೆಗಳಿಗೆ ತರ್ಜುಮೆಯಾಗುತಲ್ತಿದೆ. ಯೆಹೋವ ದೇವರ ವಾಕ್ಯಕ್ಕೆ ಗಮನ ಕೊಡುವುದರಲ್ಲಿ ತದ್ರೀತಿಯ ಆತ್ಮವನ್ನು ನಾವು ತೋರಿಸಬೇಕು.—2 ಪೇತ್ರ 1:19.
[ಅಧ್ಯಯನ ಪ್ರಶ್ನೆಗಳು]
a ಹೀಬ್ರುವಿನಲ್ಲಿ “ಬೆನ್” ಅಂದರೆ “ಪುತ್ರ” ಎಂದರ್ಥ. ಆದುದರಿಂದ ಬೆನ್ ಆ್ಯಶರ್ ಅಂದರೆ “ಆ್ಯಶರನ ಪುತ್ರ” ಎಂದರ್ಥವಾಗುತ್ತದೆ.
b ಮ್ಯಾಸರೀಟರ ಪಕ್ಕ ಅಂಚುಗಳ ಟಿಪ್ಪಣಿಗಳು ಸ್ಮಾಲ್ (ಚಿಕ್ಕ) ಮಸೋರ ಎಂದು ಕರೆಯಲ್ಪಡುತ್ತವೆ. ತುದಿಯ ಮತ್ತು ಕೆಳ ಅಂಚುಗಳ ಟಿಪ್ಪಣಿಗಳನ್ನು ಲಾರ್ಜ್ (ದೊಡ್ಡ) ಮಸೋರ ಎಂದು ಕರೆಯಲಾಗುತ್ತದೆ. ಹಸ್ತಪ್ರತಿಯ ಮತ್ತೊಂದು ಸ್ಥಳದಲ್ಲಿ ಇಡಲಾದ ಪಟ್ಟಿಗಳು ಫೈನಲ್ (ಅಂತಿಮ) ಮಸೋರ ಎಂದು ಕರೆಯಲ್ಪಡುತ್ತವೆ.
c ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ ವಿದ್ ರೆಫರೆನ್ಸಸ್ ನಲ್ಲಿ ಅಪೆಂಡಿಕ್ಸ್ 1ಬಿ ನೋಡಿ.
d ಮೌಖಿಕ ನಿಯಮ ಮತ್ತು ರಬ್ಬಿಗಳ ಯೆಹೂದ್ಯ ಮತದ ಕುರಿತ ಅಧಿಕ ಮಾಹಿತಿಗಾಗಿ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್. ಇವರಿಂದ ಪ್ರಕಾಶಿತವಾದ ಯುದ್ಧರಹಿತವಾದ ಒಂದು ಲೋಕವು ಎಂದಾದರೂ ಇರುವುದೊ? (ಇಂಗ್ಲಿಷ್) ಎಂಬ ಬ್ರೋಷರ್‌ನ 8-11 ನೆಯ ಪುಟಗಳನ್ನು ನೋಡಿರಿ.
[ಪುಟ 28 ರಲ್ಲಿರುವ ಚೌಕ/ಚಿತ್ರಗಳು]
ಹೀಬ್ರು ಉಚ್ಚಾರಣಾ ಪದ್ಧತಿ
ಸರ್ವ ಚಿಹ್ನೆಗಳನ್ನು ಮತ್ತು ಉಚ್ಚಾರ ಗುರುತುಗಳನ್ನು ದಾಖಲಿಸುವ ಅತ್ಯುತ್ತಮ ವಿಧಾನಕ್ಕಾಗಿ ಅನ್ವೇಷಣೆಯು, ಮ್ಯಾಸರೀಟರಲ್ಲಿ ಶತಮಾನಗಳ ತನಕ ಬಾಳಿತು. ಆದುದರಿಂದ, ಬೆನ್ ಆ್ಯಶರ್ ಕುಟುಂಬದ ಪ್ರತಿ ಸಂತತಿಯಲ್ಲಿ ಇದರ ಮುಂದರಿಯುವ ವಿಕಸನವನ್ನು ಕಾಣುವುದೇನೂ ಆಶ್ಚರ್ಯವಲ್ಲ. ಅಸ್ತಿತ್ವದಲ್ಲಿರುವ ಹಸ್ತಪ್ರತಿಗಳು ಕೇವಲ ಬೆನ್ ಆ್ಯಶರ್ ಕುಟುಂಬದ ಕೊನೆಯ ಇಬ್ಬರು ಮ್ಯಾಸರೀಟರಾದ ಮೋಸಸ್ ಮತ್ತು ಏರನನ ಶೈಲಿ ಮತ್ತು ವಿಧಾನಗಳನ್ನು ಪ್ರತಿನಿಧಿಸುತ್ತವೆ.e ಈ ಹಸ್ತಪ್ರತಿಗಳ ಒಂದು ತುಲನಾತ್ಮಕ ಅಧ್ಯಯನವು, ಉಚ್ಚಾರಣೆ ಮತ್ತು ಚಿಹ್ನೆಯ ನಿರ್ದಿಷ್ಟವಾದ ಚಿಕ್ಕ ವಿಷಯಗಳ ಮೇಲೆ ಏರನನು ತನ್ನ ತಂದೆಯಾದ ಮೋಸಸ್‌ಗಿಂತ ಭಿನ್ನವಾದ ನಿಯಮಗಳನ್ನು ವಿಕಸಿಸಿದನೆಂದು ತೋರಿಸುತ್ತದೆ.
ಬೆನ್ ನೆಫ್ತಾಲಿ, ಏರನ್ ಬೆನ್ ಆ್ಯಶರ್‌ನ ಒಬ್ಬ ಸಮಕಾಲೀನನಾಗಿದ್ದನು. ಮೋಸಸ್ ಬೆನ್ ಆ್ಯಶರ್‌ನ ಕೈರೋ ಕೋಡೆಕ್ಸ್‌ನಲ್ಲಿ, ಬೆನ್ ನೆಫ್ತಾಲಿಗೆ ಅಧ್ಯಾರೋಪಿತವಾದ ಅನೇಕ ಪಾಠಾಂತರಗಳು ಅಡಕವಾಗಿವೆ. ಆದುದರಿಂದ, ಬೆನ್ ನೆಫ್ತಾಲಿ ತಾನೇ ಮೋಸಸ್ ಬೆನ್ ಆ್ಯಶರ್‌ನ ಕೈಕೆಳಗೆ ಕಲಿತಿರಬೇಕು ಇಲ್ಲವೇ ಅವರಿಬ್ಬರೂ ಒಂದು ಹೆಚ್ಚು ಪ್ರಾಚೀನವಾದ ಸಾಮಾನ್ಯ ಸಂಪ್ರದಾಯವನ್ನು ಕಾಪಾಡಿ ಉಳಿಸಿರಬೇಕು. ಅನೇಕ ವಿದ್ವಾಂಸರು ಬೆನ್ ಆ್ಯಶರ್ ಮತ್ತು ಬೆನ್ ನೆಫ್ತಾಲಿಯ ಪದ್ಧತಿಗಳ ನಡುವಣ ಭಿನ್ನತೆಗಳ ಕುರಿತು ಹೇಳುತ್ತಾರಾದರೂ, ಎಮ್. ಏಚ್. ಗೋಷನ್-ಗಾಟ್‌ಸ್ಟೈನ್ ಬರೆಯುವುದು: “ಬೆನ್ ಆ್ಯಶರ್ ಕುಟುಂಬದೊಳಗೆ ಎರಡು ಉಪಪದ್ಧತಿಗಳ ಕುರಿತು ಮಾತಾಡುವುದು ಮತ್ತು ವೈದೃಶ್ಯ ಪಾಠಾಂತರಗಳನ್ನು: ಬೆನ್ ಆ್ಯಶರ್ ಎದುರಾಗಿ ಬೆನ್ ಆ್ಯಶರ್ ಎಂದು ಹೇಳುವುದು ನಿಷ್ಕೃಷ್ಟವೆಂದು ತೋರುತ್ತದೆ.” ಹೀಗೆ ಏಕಮಾತ್ರ ಬೆನ್ ಆ್ಯಶರ್ ವಿಧಾನದ ಕುರಿತು ಮಾತಾಡುವುದು ಅನಿಷ್ಕೃಷ್ಟವಾಗುವುದು. ಏರನ್ ಬೆನ್ ಆ್ಯಶರ್‌ನ ವಿಧಾನವು ಅಂತಿಮವಾಗಿ ಸ್ವೀರಿಸಲ್ಪಟ್ಟ ರೂಪಕ್ಕೆ ಬಂದದ್ದು ಅಂತರ್ಗತ ಶ್ರೇಷ್ಠತ್ವದ ಪರಿಣಾಮದಿಂದಲ್ಲ. 12 ನೆಯ ಶತಮಾನದ ಟ್ಯಾಲ್ಮಡಿನ ವಿದ್ವಾಂಸ ಮೋಸಸ್ ಮೈಮಾನಡೀಸ್, ಏರನ್ ಬೆನ್ ಆ್ಯಶರ್ ಮೂಲಗ್ರಂಥವನ್ನು ಹೊಗಳಿದ ಕಾರಣದಿಂದ ಮಾತ್ರ ಅದಕ್ಕೆ ಮೆಚ್ಚಿಕೆ ತೋರಿಸಲ್ಪಟ್ಟಿತ್ತು.
[Artwork—Hebrew characters]
ಸ್ವರಾಕ್ಷರ ಬಿಂದುಗಳು ಮತ್ತು ಉಚ್ಚಾರ ಚಿಹ್ನೆಗಳು ಇರುವ ಮತ್ತು ಇರದ ವಿಮೋಚನಕಾಂಡ 6:2ರ ಭಾಗ
[ಅಧ್ಯಯನ ಪ್ರಶ್ನೆಗಳು]
e ಹಿಂದಿನ ಮತ್ತು ಈಚಿನ ಪ್ರವಾದಿಗಳು ಮಾತ್ರ ಅಡಕವಾಗಿರುವ ಕೈರೋ ಕೋಡೆಕ್ಸ್ (ಸಾ.ಶ. 895), ಮೋಸಸ್‌ನ ವಿಧಾನಗಳ ಒಂದು ದೃಷ್ಟಾಂತವನ್ನು ಒದಗಿಸುತ್ತದೆ. ದಿ ಅಲೆಪ್ಪೊ (ಸುಮಾರು ಸಾ.ಶ. 930) ಮತ್ತು ಲೆನಿನ್‌ಗ್ರಾಡ್ (ಸಾ.ಶ. 1008) ಕೋಡಿಸೀಸ್‌ಗಳು, ಏರನ್ ಬೆನ್ ಆ್ಯಶರ್‌ನ ವಿಧಾನಗಳ ಮಾದರಿಗಳಾಗಿ ಪರಿಗಣಿಸಲ್ಪಟ್ಟಿವೆ.
[ಪುಟ 26 ರಲ್ಲಿರುವ ಚಿತ್ರ]
ತಿಬೇರಿಯ, ಎಂಟರಿಂದ ಹತ್ತನೆಯ ಶತಮಾನದ ಮ್ಯಾಸರೀಟರ ಚಟುವಟಿಕೆಯ ಕೇಂದ್ರಸ್ಥಾನ
[ಕೃಪೆ]
Pictorial Archive (Near Eastern History) Est.