ರಾಜ್ಯ ಘೋಷಕರು ವರದಿ ಮಾಡುತ್ತಾರೆ
ಸಾಕ್ಷಿನೀಡುವಿಕೆಯು ಮನೆಯಲ್ಲಿ ಮತ್ತು ಶಾಲೆಯಲ್ಲಿ ಫಲಕೊಡುತ್ತದೆ
ಒಬ್ಬ ಕ್ರೈಸ್ತನ ಜೀವನವು ಇತರರಿಗೆ ಒಳ್ಳೇದನ್ನು ಮಾಡುವುದರಲ್ಲಿ ಒಳಗೂಡಿರುತ್ತದೆ, ವಿಶೇಷವಾಗಿ ದೇವರ ರಾಜ್ಯದ ಸುವಾರ್ತೆಯನ್ನು ಅವರೊಂದಿಗೆ ಹಂಚುವ ಮೂಲಕ. ಜ್ಞಾನೋಕ್ತಿ 3:27 ಹೇಳುವುದು: “ಉಪಕಾರಮಾಡುವದಕ್ಕೆ ನಿನ್ನ ಕೈಲಾದಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ.” ಆರ್ಜೆಂಟೀನದಲ್ಲಿ ಒಬ್ಬ ಯುವ ಸಾಕ್ಷಿಯು ತನ್ನ ಹೈಸ್ಕೂಲ್ ಶಿಕ್ಷಣದ ಮೂರನೆಯ ವರ್ಷದಲ್ಲಿದ್ದಾಗ, ತನ್ನ ಶಾಲಾ ಮಿತ್ರನೊಬ್ಬನಿಗೆ ರಾಜ್ಯದ ಸುವಾರ್ತೆಯನ್ನು ಹಂಚಲು ಬಯಸಿದನು. ಅವನು ಹಾಗೆ ಮಾಡಿದುದರಿಂದಾಗಿ ಬಹು ವ್ಯಾಪಕವಾದ ಫಲಿತಾಂಶಗಳು ದೊರೆತವು.
ಎಲ್ಲ ಧರ್ಮಗಳು ಒಳ್ಳೆಯವುಗಳಲ್ಲ ಎಂದು ಒಂದು ದಿನ ಈ ಯುವ ಸಾಕ್ಷಿಯು ತನ್ನ ಮಿತ್ರನಿಗೆ ಹೇಳಿದನು. ತಾನು ಕೆಟ್ಟದ್ದನ್ನೇನೂ ಮಾಡಲಿಲ್ಲವೆಂದು ಆ ಯುವಕನು ಉತ್ತರಿಸಿದಾಗ, ಸಾಕ್ಷಿಯು ಹೇಳಿದ್ದು: “ದೇವರಿಗಾಗಿಯೂ ನೀನೇನನ್ನೂ ಮಾಡುವುದಿಲ್ಲ.” ಇದು ಆ ಯುವಕನನ್ನು ಯೋಚಿಸುವಂತೆ ಮಾಡಿತು. ಇವು ಕಡೇ ದಿವಸಗಳೆಂದೂ ದೇವರ ಮೆಚ್ಚಿಗೆಯನ್ನು ಪಡೆಯಬೇಕಾದರೆ ಒಬ್ಬನು ಬೈಬಲಿನ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಂಡು ಅದನ್ನು ಅನ್ವಯಿಸಿಕೊಳ್ಳಬೇಕೆಂದೂ ಬಳಿಕ ಸಾಕ್ಷಿಯು ವಿವರಿಸಿದನು. ಅವನ ಶಾಲಾ ಮಿತ್ರನು ಒಪ್ಪಿದನು. ಆದರೆ ಅವನ ಕುಟುಂಬವು ಅವನು ಬೈಬಲಭ್ಯಾಸ ಮಾಡಲು ಅನುಮತಿಸುವುದೋ? ತನ್ನ ಮಿತ್ರನನ್ನು ಯಾವುದಾದರೊಂದು ವಿಷಯದ ಕುರಿತು ಯೋಚಿಸುವಂತೆ ಮಾಡಲು, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವನ್ನು ಅವನು ಓದುವಂತೆ ಸಾಕ್ಷಿಯು ಹೇಳಿದನು.
ಸಮಯ ದಾಟಿತು, ಮಿತ್ರನು ಶಾಲೆ ಬಿಟ್ಟನು. ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಅವನ ಸುದ್ದಿಯೇ ಇರಲಿಲ್ಲ. ಅನಂತರ ಒಂದು ದಿನ, ಬೈಬಲ್ ಪ್ರವಾದನೆಗಳು ನಿಜವಾಗಿ ನೆರವೇರುವುದನ್ನು ತಾನು ಕಾಣುತ್ತಿದ್ದೇನೆ ಎಂಬ ಟೆಲಿಫೋನ್ ಕರೆಯನ್ನು ತನ್ನ ಮಿತ್ರನಿಂದ ಪಡೆಯಲು ಯುವ ಸಾಕ್ಷಿಯು ಆಶ್ಚರ್ಯಪಟ್ಟನು. ಕೂಡಲೇ ಅವನೊಂದಿಗೆ ಬೈಬಲ್ ಅಧ್ಯಯನವನ್ನು ಮಾಡುವಂತೆ ಸಾಕ್ಷಿಯು ಏರ್ಪಡಿಸಿದನು.
ತನ್ನ ಹಿಂದಿನ ಶಾಲಾ ಮಿತ್ರನ ಮನೆಗೆ ಹೋದಾಗ, ಅವನ ಹೆತ್ತವರು ತಮ್ಮ ಮಗನು ಯಾವುದರಲ್ಲಿ ಒಳಗೂಡುತ್ತಿದ್ದಾನೆಂಬ ವಿಷಯದಲ್ಲಿ ತೀರ ಚಿಂತಿತರಿದುದ್ದು ಅವನಿಗೆ ಕಂಡುಬಂತು. ಅವನು ಹುಚ್ಚನಾಗುತ್ತಿದ್ದಾನೆಂದು ಮಿತ್ರನ ಕಿರಿಯ ತಮ್ಮನು ಸಹ ನೆನಸಿದನು. ಆದುದರಿಂದ ಆ ಕಿರಿಯ ತಮ್ಮನನ್ನು ಮುಂದಿನ ಅಭ್ಯಾಸದಲ್ಲಿ ಹೆತ್ತವರು ಕುಳ್ಳಿರಿಸಿದರು. ತದನಂತರ, ಆ ಯುವಕನು ಕಣ್ಣೀರು ತುಂಬಿದವನಾಗಿ ಬಂದು, ತನ್ನ ಅಣ್ಣನು ಹುಚ್ಚನಲ್ಲವೆಂದು ಹೆತ್ತವರಿಗೆ ವರದಿ ಮಾಡಿದಾಗ, ತಾಯಿ ಉದ್ಗರಿಸಿದ್ದು: “ಒಂದರ ಬದಲಿಗೆ ನನಗೀಗ ಎರಡು ಸಮಸ್ಯೆಗಳಾದವು!”
ಆದಕಾರಣ, ಮುಂದಿನ ಅಭ್ಯಾಸದಲ್ಲಿ ಅವಳು ತಾನೇ ಉಪಸ್ಥಿತಳಾದಳು, ಮತ್ತು ಹುಡುಗರು ಹುಚ್ಚರಲ್ಲವೆಂದು ಅವಳು ಒಪ್ಪಬೇಕಾಯಿತು. ಆಮೇಲೆ ಅವಳೊಂದಿಗೆ ಮತ್ತು ಅವಳ ಗಂಡನೊಂದಿಗೆ ಒಂದು ಬೈಬಲ್ ಅಧ್ಯಯನವನ್ನು ಏರ್ಪಡಿಸಲಾಯಿತು. ಬೇಗನೆ ಇಡೀ ಕುಟುಂಬವು ರಾಜ್ಯ ಸಭಾಗೃಹದಲ್ಲಿ ಸಭಾಕೂಟಗಳಿಗೆ ಹಾಜರಾಗತೊಡಗಿತು. ಸಕಾಲದಲ್ಲಿ ಅಜ್ಜಅಜ್ಜಿಯರು ಸಹ ಬೈಬಲನ್ನು ಅಭ್ಯಾಸಿಸತೊಡಗಿ, ಕೂಟಗಳಿಗೆ ಹೋಗಲಾರಂಭಿಸಿದರು. ಅಂದಿನಿಂದ, ಮೊದಲನೆಯ ಯುವಕನಿಗೆ ದೀಕ್ಷಾಸ್ನಾನವಾಗಿದೆ. ಅವನು ವಿವಾಹವಾದನು, ಮತ್ತು ಅವನೂ ಅವನ ಪತ್ನಿಯೂ ಹುರುಪಿನ ಪ್ರಚಾರಕರಾಗಿದ್ದಾರೆ.
ಅದಲ್ಲದೆ, ಅನೌಪಚಾರಿಕ ಸಾಕ್ಷಿಯನ್ನು ಕೊಟ್ಟ ಮೂಲಕ ಈ ಯುವ ಸಾಕ್ಷಿಯು ಇನ್ನಿಬ್ಬರು ಸಹಪಾಠಿಗಳಿಗೆ ಹಾಗೂ ಅವರಲ್ಲೊಬ್ಬನ ತಾಯಿ ಮತ್ತು ಸೋದರಿಗೆ ಅವರು ಬೈಬಲ್ ಅಧ್ಯಯನವನ್ನು ಆರಂಭಿಸುವಂತೆ ಸಹಾಯ ಮಾಡಿದ್ದಾನೆ. ತನ್ನ ಸಹಪಾಠಿಗಳಿಗೆ ಒಳ್ಳೇದನ್ನು ಮಾಡುವುದರಿಂದ ಈ ಯುವ ಸಾಕ್ಷಿಯು ಹಿಂಜರಿಯದ ಕಾರಣ, ಒಟ್ಟಿಗೆ 11 ಜನರು ಬೈಬಲಿನ ಸತ್ಯವನ್ನು ಕಲಿತರು. ಎಂತಹ ಸಂತೋಷಕರ ಪರಿಣಾಮ! ನಿಜವಾಗಿಯೂ, “ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರು ಸಂತೋಷಿತರು!”—ಕೀರ್ತನೆ 144:15, NW.