ವಯಸ್ಸು ಒಂದು ನೂರಾದರೂ ಬಲವುಳ್ಳವನಾಗಿ ಮುಂದುವರಿಯುತ್ತಿರುವುದು
ರಾಲ್ಫ್ ಮಿಚಲ್ ಹೇಳಿದಂತೆ
ಸಾಧಾರಣ ಎತ್ತರದ ಒಬ್ಬ ಪುರುಷರಾಗಿದ್ದ ನನ್ನ ತಂದೆ ಒಬ್ಬ ಮೆತೊಡಿಸ್ಟ್ ಸೌವಾರ್ತಿಕರಾಗಿದ್ದರು. ಅನುಕ್ರಮವಾಗಿ ಪ್ರತಿ ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ಅವರನ್ನು ಹೆಚ್ಚಾಗಿ ಚಿಕ್ಕ ಊರುಗಳಲ್ಲಿ ಚರ್ಚಿನಿಂದ ಚರ್ಚಿಗೆ ಕಳುಹಿಸಲಾಗುತ್ತಿತ್ತು, ಇವುಗಳಲ್ಲಿ ಅಮೆರಿಕದ ನಾರ್ತ್ ಕ್ಯಾರೊಲಿನದ ಆ್ಯಷುಲ್ ಸೇರಿತ್ತು ಮತ್ತು ಇಲ್ಲಿ ಫೆಬ್ರವರಿ 1895ರಲ್ಲಿ ನಾನು ಜನಿಸಿದೆ. ಹೀಗೆ ಕ್ರೈಸ್ತಪ್ರಪಂಚದ ಚಿರಪರಿಚಯದೊಂದಿಗೆ ನಾನು ಬೆಳೆದೆ.
ಚಿಕ್ಕ ಹುಡುಗನಾಗಿದ್ದಾಗ ಪುನರುಜ್ಜೀವನ ಕೂಟಗಳಲ್ಲಿ ಪವಿತ್ರಾತ್ಮದಿಂದ ತುಂಬಲ್ಪಡಲು—ಅವರು ಅದನ್ನು ಕರೆದ ಪ್ರಕಾರ, “ಮತಶ್ರದ್ಧೆಯನ್ನು ಪಡೆ”ಯಲು, ಚರ್ಚಿನ ಎದುರಿನ ಸಾಲಿನಲ್ಲಿದ್ದ “ಶೋಕಿಸುವವರ ಬೆಂಚಿಗೆ” ನಾನು ನಡಿಸಲ್ಪಡುತ್ತಿದ್ದ ನೆನಪು ನನಗಿದೆ. ನನ್ನ ಪಾಪಗಳನ್ನು ಅರಿಕೆಮಾಡುವಂತೆ, ದಶಾಜ್ಞೆಗಳನ್ನು ಪಾಲಿಸುವಂತೆ, ಮತ್ತು ಒಳ್ಳೆಯವನಾಗಿರುವಂತೆ ನನಗೆ ಹೇಳಲಾಗುತ್ತಿತ್ತು. ಹೀಗೆ ನಾನು ಸತ್ತಾಗ ಪರಲೋಕಕ್ಕೆ ಹೋಗಲಿದ್ದೆ. “ಒಳ್ಳೇದು,” ನಾನು ನನ್ನಲ್ಲೇ ಅಂದುಕೊಂಡದ್ದು, “ನಾನು ನರಕಕ್ಕೇ ಹೋಗುವೆನೆಂದು ನನ್ನೆಣಿಕೆ, ಯಾಕೆಂದರೆ ನಾನು ಪರಲೋಕಕ್ಕೆ ಹೋಗುವಷ್ಟು ಒಳ್ಳೆಯವನಾಗಿರಸಾಧ್ಯವಿಲ್ಲ.” ವಯಸ್ಕರು ಮಾತ್ರ—ವಿಶೇಷವಾಗಿ ಸೌವಾರ್ತಿಕರು—ಬೈಬಲಿನ ಮಟ್ಟಗಳಿಗನುಸಾರ ಜೀವಿಸುತ್ತಿದ್ದರೆಂದು ನಾನು ನೆನಸಿದ್ದೆ.
ಆದರೆ ನನ್ನ ಹದಿಹರೆಯಕ್ಕೆ ಮುಂಚೆಯೇ, ಧರ್ಮದಲ್ಲಿನ ಕಪಟಾಚರಣೆಯನ್ನು ನಾನು ಪತ್ತೆಹಚ್ಚಲಾರಂಭಿಸಿದೆ. ದೃಷ್ಟಾಂತಕ್ಕೆ, ಸಾಮಾನ್ಯ ಅಧಿವೇಶನದಲ್ಲಿ ಕೇವಲ ಬಿಷಪರ ನಿಧಿಗೆ ಹಣದ ದೊಡ್ಡ ಮೊತ್ತವನ್ನು ಒದಗಿಸಲಿಕ್ಕಾಗಿ, ನನ್ನ ತಂದೆಯವರು ಕುಟುಂಬದ ಭೌತಿಕ ಅಗತ್ಯಗಳನ್ನು ತ್ಯಾಗಮಾಡುತ್ತಿದ್ದರು. ಇದು ತಮಗೆ ದೊಡ್ಡ ಚರ್ಚ್ ನೇಮಕವನ್ನು ದೊರಕಿಸಿಕೊಡಬಹುದೆಂದು ಅವರು ನಿರೀಕ್ಷಿಸಿದರು. ಒಬ್ಬ ಅರಳೆ ರೈತನೂ ಆಗಿದ್ದ ಒಬ್ಬ ಸ್ಥಳಿಕ ಸೌವಾರ್ತಿಕನ ನೆನಪು ನನಗಿದೆ. ಒಂದು ಪ್ರಧಾನ ಸ್ಥಾನವನ್ನು ಪಡೆದುಕೊಳ್ಳಲು ಅವನು ಆತುರದಿಂದಿದ್ದನು, ಆದುದರಿಂದ ಅವನು ನೂರು ಹತ್ತಿ ಮೂಟೆಗಳನ್ನು ಮಾರಿ, ಕಿಸೆ ತುಂಬಾ ಹಣದೊಂದಿಗೆ ಅಧಿವೇಶನಕ್ಕೆ ಹೋದನು. ಬಹುತೇಕ ಸೌವಾರ್ತಿಕರಿಂದ ಕೂಡಿದ್ದ ಸಭಿಕರಿಂದ ಹಿಂಡಸಾಧ್ಯವಿದ್ದ ಹಣವೆಲ್ಲವು ಅವರಿಗೆ ಸಿಕ್ಕಿತೆಂದು ತೋರಿದಾಗ, ಈ ಅರಳೆ ರೈತನು ಥಟ್ಟನೆ ನೆಗೆದು ಕೂಗಿದ್ದು: “ನಿಮ್ಮ ಬಿಷಪರಿಗೆ ನೀವು ಕೊಡುವುದು ಇಷ್ಟೆಯೋ? ಐದು ಡಾಲರ್ಗಳನ್ನು ನೀಡುವ ಪ್ರತಿ ಸೌವಾರ್ತಿಕನ ಪರವಾಗಿ ನಾನು ಹತ್ತು ಡಾಲರ್ಗಳನ್ನು ಹಾಕಿಕೊಡುವೆ!” ಒಂದು ಸಾವಿರ ಡಾಲರ್ಗಳಿಗಿಂತಲೂ ಹೆಚ್ಚು ಹಣವು ಒಟಾಯ್ಟಿತು ಮತ್ತು ಬಿಷಪನು ಈ ಮನುಷ್ಯನನ್ನು ನನ್ನ ತಂದೆಯ ಮೇಲೆ ಅಧ್ಯಕ್ಷತೆ ವಹಿಸುವ ಹಿರಿಯನಾಗಿ ನೇಮಿಸಿದನು. ಅಂತಹ ಒಂದು ನೇಮಕವು ದೇವರಿಂದ ಬಂದಿತೆಂದು ನನಗೆ ನಂಬಲಾಗಲಿಲ್ಲ. ಅಂದಿನಿಂದ ಧರ್ಮ ಸಂಬಂಧವಾದ ಯಾವುದೇ ವಿಷಯದಲ್ಲಿ ನಾನು ಸಂದೇಹಿಸುವವನಾದೆ.
ಅಮೆರಿಕವು ಒಂದನೆಯ ಲೋಕ ಯುದ್ಧದಲ್ಲಿ ತೊಡಗಿದಾಗ ನಾನು ಸೇನೆಗೆ ಭರ್ತಿಮಾಡಲ್ಪಟ್ಟೆ. ನಮ್ಮ ದೇಶಕ್ಕಾಗಿ ನಾವು ನಿಷ್ಠೆಯಿಂದ ಹೋರಾಡುವಂತೆ ಸೈನಿಕರಾದ ನಮಗೆ ಸೇನಾ ಪಾದ್ರಿಗಳು ಸಾರುವುದನ್ನು ಕೇಳಿದ್ದು ನನಗೆ ಚೆನ್ನಾಗಿ ನೆನಪಿದೆ, ಮತ್ತು ಇದು ಧರ್ಮಕ್ಕಾಗಿ ನನ್ನ ಜುಗುಪ್ಸೆಯನ್ನು ಇನ್ನೂ ತೀವ್ರಗೊಳಿಸಿತು. ಬದುಕಿ ಉಳಿದು, ನನ್ನ ವಿದ್ಯಾಭ್ಯಾಸ ಮುಗಿಸಿ, ಅನಂತರ ಮದುವೆಯಾಗುವುದೇ ನನ್ನ ಗುರಿಗಳಾಗಿದ್ದವು. ಭವಿಷ್ಯತ್ತಿಗಾಗಿದ್ದ ನನ್ನ ಯೋಜನೆಗಳಲ್ಲಿ ಧರ್ಮಕ್ಕೆ ಯಾವ ಸ್ಥಳವೂ ಇರಲಿಲ್ಲ.
ಮನೋಭಾವದ ಬದಲಾವಣೆ
1922ರಲ್ಲಿ ಲೊವಿಸ್ ಎಂಬ ಯುವ ಸ್ತ್ರೀಯಲ್ಲಿ ನಾನು ಅನುರಕ್ತನಾದೆ. ಪರಿಣಮಿಸಿದ ಪ್ರಕಾರ, ಅವಳು ಒಬ್ಬ ಧರ್ಮನಿಷ್ಠ ಕ್ಯಾತೊಲಿಕಳಾಗಿದಳ್ದು, ಮತ್ತು ನಾವು ಮದುವೆಯಾಗಲು ನಿರ್ಣಯಿಸಿದಾಗ, ಅವಳು ಕ್ಯಾತೊಲಿಕ್ ಮದುವೆಯನ್ನು ಬಯಸಿದಳು. ಸರಿ, ನನಗೆ ಒಂದು ಧಾರ್ಮಿಕ ಸಂಸ್ಕಾರವು ಬೇಡವಾಗಿತ್ತು, ಆದುದರಿಂದ ನ್ಯೂ ಯಾರ್ಕ್ ನಗರದ ಒಂದು ಮ್ಯುನಿಸಿಪಲ್ ಕಟ್ಟಡದಲ್ಲಿ ನಾವು ಮದುವೆಯಾಗಲು ಅವಳು ಒಪ್ಪಿದಳು.
ಮೊದಮೊದಲು ನಮಗೆ ಯಾವ ಧಾರ್ಮಿಕ ಕಲಹಗಳೂ ಇರಲಿಲ್ಲ. ಧರ್ಮದಲ್ಲಿ ನನಗೆ ಯಾವ ಭರವಸೆಯೂ ಇಲ್ಲವೆಂದೂ ಮತ್ತು ಅದರ ಪ್ರಸ್ತಾಪವನ್ನು ಮಾಡದಿರುವ ತನಕ ನಾವು ಉತ್ತಮವಾಗಿ ಹೊಂದಿಕೊಳ್ಳುವೆವೆಂದು ನಾನು ಅವಳಿಗೆ ಸ್ಪಷ್ಟವಾಗಿಗಿ ಹೇಳಿಬಿಟ್ಟೆ. ಅನಂತರ, 1924 ಮತ್ತು 1937ರ ನಡುವಿನ ವರ್ಷಗಳಲ್ಲಿ ಮಕ್ಕಳು ಹುಟ್ಟಿದರು—ಒಬ್ಬರ ಹಿಂದೆ ಒಬ್ಬರು, ಒಟ್ಟಿಗೆ ಐವರು ಹುಡುಗರು ಮತ್ತು ಐವರು ಹುಡುಗಿಯರು ನಮಗಾಗುವ ತನಕ! ನಮ್ಮ ಮಕ್ಕಳು ಕ್ಯಾತೊಲಿಕ್ ಶಾಲೆಗೆ ಹಾಜರಾಗುವಂತೆ ಲೊವಿಸ್ ಬಯಸಿದಳು. ಅವರು ಯಾವುದೇ ರೀತಿಯ ಧಾರ್ಮಿಕ ತರಬೇತನ್ನು ಪಡೆಯುವುದು ನನಗೆ ಬೇಡವಾಗಿತ್ತು, ಆದುದರಿಂದ ಅದರ ಕುರಿತು ನಾವು ವಾಗ್ವಾದಿಸಿದೆವು.
ಧರ್ಮದ ಕುರಿತಾದ ನನ್ನ ಹೊರನೋಟವನ್ನು ಸಂಪೂರ್ಣವಾಗಿ ಬದಲಾಯಿಸಿದ ಒಂದು ಸಂಗತಿ 1939ರ ಆರಂಭದಲ್ಲಿ ಸಂಭವಿಸಿತು. ಹೆನ್ರಿ ವೆಬರ್ ಮತ್ತು ಹ್ಯಾರಿ ಪಯಟ್ ಎಂಬ ಇಬ್ಬರು ಯೆಹೋವನ ಸಾಕ್ಷಿಗಳು, ನ್ಯೂ ಜರ್ಸಿಯ ರೊಸೆಲ್ನಲ್ಲಿದ್ದ ನನ್ನ ಮನೆಗೆ ಬಂದರು. ಚರ್ಚಿಸಲು ನನಗೆ ಯಾವ ಆಸಕ್ತಿಯೂ ಇರದಿದ್ದ ಒಂದು ವಿಷಯ—ಧರ್ಮದ ಕುರಿತು ಅವರು ಮಾತಾಡಲು ಬಯಸಿದರೆಂದು ಬೇಗನೆ ವ್ಯಕ್ತವಾಯಿತು. ಊರಿನಲ್ಲಿದ್ದ ಪಾದ್ರಿಗಳು “ಕೊಲ್ಲಬಾರದು” ಎಂದು ಹೇಳುವಾಗ, ಸೇನೆಯ ಪಾದ್ರಿಗಳು ‘ನಿಮ್ಮ ದೇಶಕ್ಕಾಗಿ ಹೋರಾಡಿರಿ’ ಎಂದು ಹೇಳುವ ನಿಜತ್ವದಿಂದ ನನ್ನ ನಂಬಿಕೆ ಇನ್ನೂ ಕಹಿಯಾಗಿತ್ತು. ಎಂತಹ ಕಪಟತನ! ಈ ಇಬ್ಬರು ಸಾಕ್ಷಿಗಳನ್ನು ಸರಿಮಾಡಿಬಿಡುತ್ತೇನೆ ಎಂದು ನಾನು ಎಣಿಸಿದೆ. “ಒಂದು ವಿಷಯವನ್ನು ನಿಮಗೆ ತಿಳಿಸುತ್ತೇನೆ,” ಎಂದೆ ನಾನು ಅವರಿಗೆ. “ನಿಮ್ಮ ಧರ್ಮವು ಸತ್ಯವಾಗಿರುವುದಾದರೆ ಬೇರೆಲ್ಲ ಧರ್ಮಗಳು ಸುಳ್ಳಾಗಿರಬೇಕು. ಮತ್ತು ಆ ಬೇರೆಯವುಗಳಲ್ಲಿ ಕೇವಲ ಒಂದು ಸತ್ಯವಾದರೂ, ಆಗ ನಿಮ್ಮದೂ ಸೇರಿ ಬೇರೆಲ್ಲ ಧರ್ಮಗಳು ಸುಳ್ಳಾಗಿವೆ. ಕೇವಲ ಒಂದೇ ಒಂದು ಸತ್ಯ ಧರ್ಮವು ಇರಸಾಧ್ಯವಿದೆ.” ತೀರ ಅನಿರೀಕ್ಷಿತವಾಗಿ, ಅವರು ನನ್ನೊಂದಿಗೆ ಸಮ್ಮತಿಸಿದರು!
ಬಳಿಕ, ನನ್ನ ಬೈಬಲನ್ನು ತಂದು, ಅದರಲ್ಲಿ 1 ಕೊರಿಂಥ 1:10ನ್ನು ತೆರೆಯುವಂತೆ ಅವರು ನನಗೆ ಹೇಳಿದರು. ಅಲ್ಲಿ ನಾನು ಓದಿದ್ದು: “ಈಗ ಸಹೋದರರೇ, ನಾನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ಕೇಳಿಕೊಳ್ಳುವುದೇನಂದರೆ, ನೀವೆಲ್ಲರು ಒಂದೇ ವಿಷಯವನ್ನು ಮಾತಾಡಬೇಕು ಮತ್ತು ನಿಮ್ಮಲ್ಲಿ ಭೇದಗಳಿರಬಾರದು; ಬದಲಿಗೆ ನೀವು ಒಂದೇ ಮನಸ್ಸಿನಲ್ಲಿ ಮತ್ತು ಒಂದೇ ತೀರ್ಮಾನದಲ್ಲಿ ಪರಿಪೂರ್ಣವಾಗಿ ಜೋಡಿಸಲ್ಪಟ್ಟವರಾಗಿರಬೇಕು.” (ಕಿಂಗ್ ಜೇಮ್ಸ್ ವರ್ಷನ್) ಈ ವಚನದಿಂದ ನನ್ನ ಕುತೂಹಲ ಕೆರಳಿತು. ಅದೇ ಸಮಯದಲ್ಲಿ, ಈ ಇಬ್ಬರು ಪುರುಷರು ಒಂದು ವಿಧದ ಕುಪಂಥದಲ್ಲಿ ನನ್ನನ್ನು ಒಳಗೂಡಿಸಲು ಪ್ರಯತ್ನಿಸುತ್ತಿದ್ದರೆಂದು ನನಗೆ ಭಯವಾಯಿತು. ಆದರೂ ನಾನೊಂದು ವಿಷಯ ಕಲಿತಿದ್ದೆ—ಕ್ರೈಸ್ತರಲ್ಲಿ ಯಾವ ಭೇದಗಳೂ ಇರಬಾರದು. ನನ್ನ ಮನಸ್ಸಿನಲ್ಲಿ ಬೇರೆ ಅನೇಕ ಪ್ರಶ್ನೆಗಳಿದ್ದವು. ಉದಾಹರಣೆಗೆ, ಮರಣದಲ್ಲಿ ಪ್ರಾಣಕ್ಕೆ ಏನು ಸಂಭವಿಸುತ್ತದೆ? ಆ ಪ್ರಶ್ನೆಯನ್ನು ಅವರೊಂದಿಗೆ ಚರ್ಚಿಸಲು ನಾನೆಷ್ಟು ಆನಂದಗೊಳ್ಳುತ್ತಿದ್ದೆ! ಆದರೆ, ಅದು ಮನೆಯಲ್ಲಿ ತೀರ ಹೆಚ್ಚಿನ ಧಾರ್ಮಿಕ ವಾಗ್ವಾದವನ್ನು ನಿರ್ಮಿಸುವುದೆಂದು ನಾನು ನೆನಸಿದೆ.
ಆಗ ಆ ಇಬ್ಬರು ಪುರುಷರಲ್ಲಿ ಒಬ್ಬನು ಅಂದದ್ದು: “ಮುಂದಿನ ವಾರ ಪುನಃ ಬಂದು ನಿಮ್ಮೊಡನೆ ಮಾತನಾಡಲು ನಾವು ಬಯಸುತ್ತೇವೆ.” ಜಾಣ್ಮೆಯಿಂದ ಅವರನ್ನು ಕಳುಹಿಸಿಬಿಡಲು ನಾನು ಪ್ರಯತ್ನಿಸಿದೆ, ಆದರೆ ನನ್ನ ಪತ್ನಿ ಮಾತಾಡಿದಳು. “ರಾಲ್ಫ್, ಅವರು ಯಾವಾಗ ಮರಳಿ ಬರಬಹುದೆಂದು ಅವರು ಕೇಳುತ್ತಿದ್ದಾರೆ,” ಎಂದಳಾಕೆ. ಇದು ನನ್ನನ್ನು ಆಶ್ಚರ್ಯಗೊಳಿಸಿತು, ಯಾಕೆಂದರೆ ಅವಳೊಬ್ಬ ಹುರುಪಿನ ಕ್ಯಾತೊಲಿಕಳಾಗಿದಳ್ದು! ಆದರೂ, ನಾನು ಯೋಚಿಸಿದ್ದು, ‘ಕೊನೆಗಾದರೂ ಧರ್ಮದ ಕುರಿತ ಕೆಲವೊಂದು ಸಮ್ಮತಿಯ ಅಂಶಗಳನ್ನು ನಾವು ಕಂಡುಕೊಂಡೇವು.’ ಹೀಗೆ ಹೆನ್ರಿ ವೆಬರ್ ಮತ್ತು ಹ್ಯಾರಿ ಪಯಟ್ ಮುಂದಿನ ಶುಕ್ರವಾರ ಮರಳಿ ಬರುವಂತೆ ನಾನು ಒಪ್ಪಿದೆ.
ಯೆಹೋವನ ಸಾಕ್ಷಿಗಳೊಂದಿಗೆ ನಾನು ಬೈಬಲಧ್ಯಯನಕ್ಕೆ ತೊಡಗಿದ್ದು ಹೀಗೆಯೇ. ಇದಾದ ಸ್ವಲ್ಪ ಸಮಯದಲ್ಲಿ, ನ್ಯೂ ಯಾರ್ಕ್ ನಗರದ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ಒಂದು ಅಧಿವೇಶನಕ್ಕೆ ಹಾಜರಾಗಲು ನಾನು ಆಮಂತ್ರಿಸಲ್ಪಟ್ಟೆ. ಜೂನ್ 25, 1939ರಲ್ಲಿ, ಜೋಸೆಫ್ ಎಫ್. ರದರ್ಫರ್ಡರು ಕೊಟ್ಟ “ಸರಕಾರ ಮತ್ತು ಶಾಂತಿ” ಎಂಬ ಭಾಷಣವನ್ನು ನಾನು ಸ್ಫುಟವಾಗಿ ನೆನಪಿಸಿಕೊಳ್ಳಬಲ್ಲೆ. ಉಪಸ್ಥಿತರಿದ್ದ 18,000 ವ್ಯಕ್ತಿಗಳಲ್ಲಿ ನಾನು ಒಬ್ಬನಾಗಿದ್ದೆ. ರೇಡಿಯೊ-ಫೋನ್ ತಂತಿಗಳನ್ನು ಬಳಸಿದ ಅಂತಾರಾಷ್ಟ್ರೀಯ ಪ್ರಸರಣಾ ಸಂಯೋಜನೆಯ ಮೂಲಕ ಜೋಡಿಸಲ್ಪಟ್ಟ ಜನರನ್ನೂ ಸೇರಿಸುವುದಾದರೆ, ವಾಸ್ತವವಾಗಿ ಭಾಷಣ ಕೇಳಿದವರು 75,000 ಮಂದಿ.
ಆದರೂ ವಿಷಯಗಳು ಸರಾಗವಾಗಿ ನಡೆಯಲಿಲ್ಲ. ಕ್ಯಾತೊಲಿಕ್ ಪಾದ್ರಿಯಾದ ಚಾರ್ಲ್ಸ್ ಕಾಗಲಿನ್ನ ಹಿಂಬಾಲಕರು ಸಮ್ಮೇಳನವನ್ನು ನಿಲ್ಲಿಸಿಬಿಡುವ ಬೆದರಿಕೆ ಹಾಕಿದ್ದರು, ಮತ್ತು ನಿಜವಾಗಿ ಹಾಗೆಯೇ ಆಯಿತು. ಸಹೋದರ ರದರ್ಫರ್ಡರ ಭಾಷಣವು ಸುಮಾರು ಅರ್ಧದಲ್ಲಿದ್ದಾಗ, ನೂರಾರು ಮಂದಿ ಕುಪಿತ ಜನರು “ಹಿಟ್ಲರನಿಗೆ ಜಯ!” ಮತ್ತು “ಫ್ರ್ಯಾಂಕೊಗೆ ಜಯ!” ಎಂದು ಪರಿಹಾಸ್ಯಮಾಡುತ್ತಾ ಕೂಗತೊಡಗಿದರು. ಎಷ್ಟು ಗಲಭೆಯಾಗಿತ್ತೆಂದರೆ ಫೋನಿನ ತಂತಿಗಳಲ್ಲೂ ದೊಂಬಿಯನ್ನು ಕೇಳಸಾಧ್ಯವಿತ್ತು! ದೊಂಬಿಯನ್ನು ಅಡಗಿಸಲು ದ್ವಾರಪಾಲಕರಿಗೆ ಸುಮಾರು 15 ನಿಮಿಷಗಳು ತಗಲಿದವು. ಈ ಸಮಯದಲ್ಲೆಲ್ಲ ಸಹೋದರ ರದರ್ಫರ್ಡರು, ಸಭಿಕರಿಂದ ಮತ್ತೆ ಮತ್ತೆ ಕರತಾಡನವು ಅವರಿಗೆ ಬೆಂಬಲ ಕೊಟ್ಟಂತೆ, ನಿರ್ಭೀತಿಯಿಂದ ಮಾತಾಡುತ್ತಲೇ ಇದ್ದರು.
ನಾನೀಗ ನಿಜವಾಗಿಯೂ ಕುತೂಹಲಭರಿತನಾದೆ. ಒಬ್ಬ ಕ್ಯಾತೊಲಿಕ್ ಪಾದ್ರಿಯು ಯೆಹೋವನ ಸಾಕ್ಷಿಗಳ ವಿರುದ್ಧ ಅಷ್ಟೊಂದು ದ್ವೇಷವನ್ನು ಯಾಕೆ ಚಿತಾಯಿಸಬೇಕು? ರದರ್ಫರ್ಡರು ಸಾರುತ್ತಿರುವ ವಿಷಯದಲ್ಲಿ ಒಂದು ಸತ್ಯಾಂಶವು—ನನ್ನಂತಹ ಜನರು ಕೇಳದಿರುವಂತೆ ವೈದಿಕರು ಬಯಸುವ ಒಂದು ವಿಷಯವು ಇರಲೇಬೇಕೆಂದು ನಾನು ಊಹಿಸಿದೆ. ಆದುದರಿಂದ ನಾನು ಬೈಬಲಧ್ಯಯನವನ್ನು ಮುಂದುವರಿಸುತ್ತಾ ಪ್ರಗತಿಮಾಡಿದೆ. ಕೊನೆಗೆ ಅಕ್ಟೋಬರ್ 1939ರಲ್ಲಿ ನೀರಿನ ದೀಕ್ಷಾಸ್ನಾನದ ಮೂಲಕ ನಾನು ಯೆಹೋವನಿಗೆ ನನ್ನ ಸಮರ್ಪಣೆಯನ್ನು ಸೂಚಿಸಿದೆ. ನನ್ನ ಮಕ್ಕಳಲ್ಲಿ ಕೆಲವರು ಮರುವರ್ಷದಲ್ಲಿ ಸ್ನಾತರಾದರು, ಮತ್ತು ನನ್ನ ಪತ್ನಿ ಲೊವಿಸ್ 1941ರಲ್ಲಿ ದೀಕ್ಷಾಸ್ನಾನಪಡೆದಳು.
ಪರೀಕ್ಷೆಗಳನ್ನು ಎದುರಿಸುವುದು
ಸತ್ಯವನ್ನು ಸ್ವೀಕರಿಸಿದ ತುಸು ಸಮಯದ ಬಳಿಕ ನನ್ನ ತಾಯಿ ತೀರಿಕೊಂಡದ್ದರಿಂದ, ಅವರ ಶವ ಸಂಸ್ಕಾರಕ್ಕಾಗಿ ನಾರ್ತ್ ಕ್ಯಾರೊಲೈನಕ್ಕೆ ನಾನು ಹಿಂದಿರುಗಬೇಕಾಯಿತು. ಮೆತೊಡಿಸ್ಟ್ ಚರ್ಚಿನೊಳಗೆ ನಡೆಸಲ್ಪಡಲಿದ್ದ ಆ ಸಂಸ್ಕಾರಗಳಿಗೆ ನಾನು ಸದ್ಮನಾಸಾಕ್ಷಿಯಿಂದ ಉಪಸ್ಥಿತನಿರಲು ಶಕ್ತನಲ್ಲವೆಂದು ಭಾವಿಸಿದೆ. ಆದುದರಿಂದ ನನ್ನ ಪ್ರಯಾಣಕ್ಕೆ ಮುಂಚೆ ತಂದೆಗೆ ಫೋನ್ ಮಾಡಿ, ಶವ ಪೆಟ್ಟಿಗೆಯನ್ನು ಶವ-ಗೃಹದಲ್ಲಿ ಇಡುವಂತೆ ಕೇಳಿಕೊಂಡೆ. ಅವರು ಒಪ್ಪಿದರು, ಆದರೆ ನಾನು ಅಲ್ಲಿಗೆ ಮುಟ್ಟಿದಾಗ, ಅವರು ಚರ್ಚಿಗೆ ಹೋಗುವ ದಾರಿಯಲಿದ್ದರು, ನಿಶ್ಚಯವಾಗಿಯೂ ನಾನು ಅವರನ್ನು ಅಲ್ಲಿ ಜೊತೆಗೂಡುವೆನೆಂದು ಅವರು ನೆನಸಿದರು.
ಒಳ್ಳೇದು, ನಾನು ಜೊತೆಗೂಡಲಿಲ್ಲ, ಮತ್ತು ಇದು ನನ್ನ ಕುಟುಂಬದಲ್ಲಿ ದೊಡ್ಡ ಕಲಹವನ್ನು ಉಂಟುಮಾಡಿತು. ನನ್ನ ಸೋದರಿ ಎಡ್ನ ಮತ್ತು ನಾನು ಯಾವಾಗಲೂ ಆಪ್ತ ಸ್ನೇಹಿತರಾಗಿದ್ದರೂ, ತಾಯಿಯ ಶವ ಸಂಸ್ಕಾರದ ಬಳಿಕ ಅವಳು ನನ್ನೊಡನೆ ಮಾತಾಡದಾದಳು. ನಾನು ಪತ್ರಗಳನ್ನು ಬರೆದೆ, ಆದರೆ ಅವಳು ಉತ್ತರ ಬರೆಯಲಿಲ್ಲ. ಪ್ರತಿ ಬೇಸಗೆಯಲ್ಲಿ ಶಿಕ್ಷಕರ ಪಾಠಕ್ರಮಗಳನ್ನು ಸಿಟಿ ಕಾಲೇಜ್ನಲ್ಲಿ ಹಾಜರಾಗಲು ಎಡ್ನ ನ್ಯೂ ಯಾರ್ಕ್ಗೆ ಬಂದಾಗ, ನಾನು ಅವಳನ್ನು ನೋಡಲು ಪ್ರಯತ್ನಿಸಿದೆ. ತನಗೆ ಬಿಡುವಿಲ್ಲವೆಂದು ಹೇಳಿ ಅವಳು ನನ್ನನ್ನು ನೋಡಲು ನಿರಾಕರಿಸುತ್ತಿದ್ದಳು. ನಾನು ಕೇವಲ ಅವಳನ್ನು ಬಾಧಿಸುತ್ತಿದ್ದೇನೆಂದು ತೋರಿಬಂದುದರಿಂದ, ಕಟ್ಟಕಡೆಗೆ ನಾನು ಬಿಟ್ಟುಬಿಟ್ಟೆ. ನಾನು ಅವಳ ವಿಷಯವಾಗಿ ಪುನಃ ಕೇಳುವ ಮುಂಚೆ ಅನೇಕ ವರ್ಷಗಳು ದಾಟಲಿದ್ದವು.
ಧ್ವಜವಂದನೆಯನ್ನು ಮಾಡಲು ಅವರು ನಿರಾಕರಿಸಿದ ಕಾರಣ, ಅಮೆರಿಕ ಮತ್ತು ಕೆನಡದ ಬೇರೆ ಅನೇಕ ಮಕ್ಕಳಂತೆ, ನನ್ನ ಮಕ್ಕಳಲ್ಲಿ ಆರು ಮಂದಿ 1941ರಲ್ಲಿ ಶಾಲೆಯಿಂದ ಹೊರಹಾಕಲ್ಪಟ್ಟರು. ನ್ಯಾಯಬದ್ಧ ಶೈಕ್ಷಣಿಕ ಆವಶ್ಯಕತೆಯನ್ನು ಮುಟ್ಟಲಿಕ್ಕಾಗಿ, ಯೆಹೋವನ ಸಾಕ್ಷಿಗಳು ರಾಜ್ಯ ಶಾಲೆಗಳೆಂದು ಕರೆಯಲ್ಪಟ್ಟ ತಮ್ಮ ಸ್ವಂತ ಶಾಲೆಗಳನ್ನು ಏರ್ಪಡಿಸಿದರು. ನ್ಯೂ ಜರ್ಸಿಯ ಲೇಕ್ವುಡ್ನ ಮುಂಚಿನ ಹೋಟೆಲೊಂದು ನನ್ನ ಮಕ್ಕಳು ಹಾಜರಾದ ಶಾಲೆಯ ಸ್ಥಳವಾಗಿತ್ತು. ಮೊದಲನೆಯ ಮಹಡಿಯಲ್ಲಿ ರಾಜ್ಯ ಸಭಾಗೃಹ, ಪಕ್ಕದಲ್ಲಿ ಒಂದು ಶಾಲಾ ಕ್ಲಾಸ್ರೂಂ, ಅಡಿಗೆಮನೆ, ಮತ್ತು ಭೋಜನ ಗೃಹವಿತ್ತು. ಹುಡುಗಿಯರ ಮಲಗುವ ಕೋಣೆಗಳು ಎರಡನೆಯ ಮಹಡಿಯಲ್ಲಿ, ಮತ್ತು ಹುಡುಗರ ಮಲಗುವ ಕೋಣೆಗಳು ಮೂರನೆಯ ಮಹಡಿಯಲ್ಲಿದ್ದವು. ಅದೊಂದು ಉತ್ತಮ ಶಾಲೆಯಾಗಿತ್ತು. ಅಲ್ಲಿ ಉಳಿದುಕೊಂಡಿದ್ದ ಹೆಚ್ಚಿನ ಮಕ್ಕಳು ವಾರಾಂತ್ಯಗಳಲ್ಲಿ ಮಾತ್ರ ಮನೆಗೆ ಹೋಗುತ್ತಿದ್ದರು. ಹೆಚ್ಚು ದೂರದಲ್ಲಿ ವಾಸಿಸುತ್ತಿದ್ದವರು ಎರಡು ವಾರಗಳಿಗೊಮ್ಮೆ ಹೋಗುತ್ತಿದ್ದರು.
ಸತ್ಯದಲ್ಲಿನ ನನ್ನ ಆರಂಭದ ವರ್ಷಗಳಿಂದ, ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಸೌವಾರ್ತಿಕರು ಕರೆಯಲ್ಪಡುವಂತೆ, ಒಬ್ಬ ಪಯನೀಯರನಾಗುವ ಉತ್ಕಟ ಬಯಕೆ ನನಗಿತ್ತು. ಮಿಸೂರಿಯ ಸೆಂಟ್ ಲೂವಿಸ್ನ 1941ರ ಅಧಿವೇಶನದಲ್ಲಿ, ಒಬ್ಬ ಸಹೋದರನು ತಾನು 12 ಮಕ್ಕಳನ್ನು ಬೆಳೆಸುತ್ತಿದ್ದಾಗಲೂ ಹೇಗೆ ಪಯನೀಯರನಾಗಶಕ್ತನಾದನೆಂದು ಕಾರ್ಯಕ್ರಮದಲ್ಲಿ ಹೇಳಿದನು. ನಾನು ಆಲೋಚಿಸಿದ್ದು, ‘12 ಮಕ್ಕಳುಳ್ಳ ಅವನು ಪಯನೀಯರನಾಗಬಲ್ಲನಾದರೆ, ಹತ್ತು ಮಕ್ಕಳುಳ್ಳ ನಾನೂ ಆಗಬಲ್ಲೆ.’ ಆದರೂ, ತರುವಾಯ 19 ವರ್ಷಗಳ ತನಕ ಪಯನೀಯರ್ ಸೇವೆ ಪ್ರಾರಂಭಿಸುವಂತೆ ಪರಿಸ್ಥಿತಿಗಳು ನನ್ನನ್ನು ಬಿಡಲಿಲ್ಲ. ಕೊನೆಗೆ, ಅಕ್ಟೋಬರ್ 1, 1960ರಲ್ಲಿ ಕ್ರಮದ ಪಯನೀಯರನಾಗಿ ಯೆಹೋವನನ್ನು ಸೇವಿಸತೊಡಗಲು ಶಕ್ತನಾದೆ.
ಒಂದು ಅನಿರೀಕ್ಷಿತ ಭೇಟಿ
1975ರಲ್ಲಿ, ನನಗೆ ನನ್ನ ಸೋದರಿ ಎಡ್ನಳಿಂದ ಒಂದು ಫೋನ್ ಕರೆಬಂತು. ನಾನು ಆಗ 80 ವರ್ಷ ಪ್ರಾಯದವನಾಗಿದ್ದೆ, ಮತ್ತು ಸುಮಾರು 20 ವರ್ಷಗಳಿಂದ ನಾನು ಅವಳನ್ನು ಕಂಡದ್ದೂ ಇಲ್ಲ, ಅವಳ ಸರ್ವವನ್ನು ಕೇಳಿದ್ದೂ ಇಲ್ಲ. ಅವಳು ವಿಮಾನ ನಿಲ್ದಾಣದಿಂದ ಕರೆಯುತ್ತಿದ್ದಳು. ಮತ್ತು ನಾನು ಬಂದು ಅವಳನ್ನೂ ಅವಳ ಗಂಡನನ್ನೂ ಒಯ್ಯುವಂತೆ ಕೇಳಿಕೊಂಡಳು. ಎಡ್ನಳನ್ನು ಪುನಃ ಕಾಣುವುದು ಒಳ್ಳೇದಾಗಿತ್ತು, ಆದರೆ ಅತಿ ದೊಡ್ಡ ಆಶ್ಚರ್ಯವು ಇನ್ನೂ ಬರಲಿಕ್ಕಿತ್ತು. ಮನೆಗೆ ಹೋಗುವ ದಾರಿಯಲ್ಲಿ ಅವಳ ಗಂಡನು ಅಂದದ್ದು: “ನಿನಗೆ ಪರಿವರ್ತಿತರೊಬ್ಬರು ಇದ್ದಾರೆ.” ಅವನು ಏನನ್ನು ಅರ್ಥೈಸಿದನೆಂದು ನನಗೆ ತಿಳಿಯಲಿಲ್ಲ. ಮನೆಗೆ ಬಂದಾಗ ಅವನು ಇನೊಮ್ಮೆ ಹೇಳಿದ್ದು: “ಇಲ್ಲಿ ನಿನಗೆ ಒಬ್ಬ ಪರಿವರ್ತಿತರು ಇದ್ದಾರೆ.” ನನ್ನ ಹೆಂಡತಿಗೆ ಕೂಡಲೆ ತಿಳಿಯಿತು. ನನ್ನ ಸೋದರಿಯೆಡೆಗೆ ತಿರುಗುತ್ತಾ “ಎಡ್ನ, ನೀನೊಬ್ಬ ಸಾಕ್ಷಿಯಾಗಿದ್ದೀಯೋ?” ಎಂದು ಆಕೆ ಕೇಳಿದಳು. “ಹೌದು, ನಿಶ್ಚಯವಾಗಿ,” ಎಂದು ಉತ್ತರಿಸಿದಳು ಎಡ್ನ.
ಎಡ್ನ ಸತ್ಯವನ್ನು ಸ್ವೀಕರಿಸುವಂತಾದುದು ಹೇಗೆ? ಒಳ್ಳೇದು, ನಮ್ಮ ಮನಸ್ತಾಪದ ಸಂಬಂಧವನ್ನು ಸರಿಪಡಿಸುವ ಪ್ರಯತ್ನದಲ್ಲಿ, 1972ರಲ್ಲಿ ನಾನು ಅವಳಿಗೆ ಒಂದು ಕಾವಲಿನಬುರುಜು ಕೊಡುಗೆ ಚಂದಾವನ್ನು ಕಳುಹಿಸಿದ್ದೆ. ಸುಮಾರು ಒಂದು ವರ್ಷದ ತರುವಾಯ, ಎಡ್ನ ಕಾಯಿಲೆ ಬಿದ್ದು ಮನೆಯಲ್ಲಿ ಉಳಿದಳು. ಪತ್ರಿಕೆಗಳಿನ್ನೂ ಸುತ್ತೋಲೆಯಲ್ಲಿ ಅವಳ ಡೆಸ್ಕಿನ ಮೇಲಿದ್ದವು. ಕುತೂಹಲದಿಂದ ಎಡ್ನ ಒಂದನ್ನು ತೆರೆದು ಓದತೊಡಗಿದಳು. ಅದನ್ನು ಮುಗಿಸಿದ ಬಳಿಕ ಅವಳು ತನ್ನಲ್ಲೇ ಯೋಚಿಸಿಕೊಂಡದ್ದು, ‘ಇದೇ ಸತ್ಯ!’ ಯೆಹೋವನ ಸಾಕ್ಷಿಗಳು ಅವಳ ಮನೆಗೆ ಭೇಟಿಮಾಡುವುದರೊಳಗೆ ಕಾವಲಿನಬುರುಜು ಪತ್ರಿಕೆಗಳ ಇಡೀ ರಾಶಿಯನ್ನು ಅವಳು ಓದಿಮುಗಿಸಿದಳ್ದು. ಆಕೆ ಬೈಬಲ್ ಅಧ್ಯಯನವನ್ನು ಸ್ವೀಕರಿಸಿದಳು, ಮತ್ತು ಕಾಲಕ್ರಮದಲ್ಲಿ ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾದಳು.
ನಷ್ಟವನ್ನು ನಿಭಾಯಿಸುವುದು
ನನ್ನ ಪತ್ನಿ ಲೊವಿಸ್ ಕೊನೆಗೆ ಮಧುಮೂತ್ರ ವ್ಯಾಧಿಗೆ ಗುರಿಯಾದಳು, ಅವಳ ಪರಿಸ್ಥಿತಿ ಕೆಟ್ಟಿತು, ಹೀಗೆ 1979ರಲ್ಲಿ, ತನ್ನ 82ನೆಯ ವಯಸ್ಸಿನಲ್ಲಿ ಅವಳು ತೀರಿಕೊಂಡಳು. ಲೊವಿಸ್ ಸತ್ತಾಗ, ನನ್ನ ಒಂದು ಅಂಶವೂ ಸತ್ತಿತು. ನನ್ನ ಇಡೀ ಲೋಕವು ಸ್ತಬ್ಧಗೊಂಡಿತು. ಏನು ಮಾಡಬೇಕೆಂದು ನನಗೆ ಹೊಳೆಯಲಿಲ್ಲ. ಭವಿಷ್ಯತ್ತಿಗಾಗಿ ಯಾವ ಯೋಜನೆಗಳೂ ನನಗಿರಲಿಲ್ಲ, ಪ್ರೋತ್ಸಾಹದ ಅತಿ ಹೆಚ್ಚಿನ ಅಗತ್ಯವು ನನಗಿತ್ತು. ನನ್ನ ಪಯನೀಯರ್ ಮಾರ್ಗಕ್ರಮವನ್ನು ಮುಂದುವರಿಸುವಂತೆ, ಒಬ್ಬ ಸಂಚರಣ ಸೇವಕರಾದ ರಿಚರ್ಡ್ ಸ್ಮಿತ್ ನನ್ನನ್ನು ಉತ್ತೇಜಿಸಿದರು. ಮರಣದಲ್ಲಿ ತಮ್ಮ ಪ್ರಿಯರನ್ನು ಕಳೆದುಕೊಂಡ ಇತರರನ್ನು ಸಂತೈಸುವುದರಲ್ಲಿ, ನನ್ನ ಅತ್ಯಂತ ಮಹಾನ್ ಸಾಂತ್ವನವು ಬಂತೆಂದು ನಾನು ಕಂಡುಕೊಂಡೆ.
1979ರಲ್ಲಿ ವಾಚ್ ಟವರ್ ಸೊಸೈಟಿಯು ಇಸ್ರೇಲಿನ ಒಂದು ಪ್ರವಾಸವನ್ನು ಏರ್ಪಡಿಸಿತ್ತು, ಹೀಗೆ ನಾನೂ ಅದರಲ್ಲಿ ಸೇರಿಕೊಂಡೆ. ಈ ಸಂಚಾರವು ನನಗೆ ಮಹಾ ಪ್ರಚೋದನೆಯನ್ನು ನೀಡಿತು, ಮತ್ತು ಪುನಃ ಮನೆಸೇರಿದಾಗ, ನಾನು ಆ ಕೂಡಲೆ ಪುನಃ ಪಯನೀಯರ್ ಸೇವೆಗೆ ತೊಡಗಿದೆ. ಅಂದಿನಿಂದ ಪ್ರತಿ ವರ್ಷ ದೇಶದ ಇನ್ನೊಂದು ಭಾಗದ ಅನೇಮಿತ ಅಥವಾ ಆಗಿಂದಾಗ್ಗೆ ಸೇವೆಯಾಗದ ಕ್ಷೇತ್ರದಲ್ಲಿ ಸಹಾಯ ಮಾಡಲು ಹೋಗುವುದನ್ನು ನನ್ನ ಕರ್ತವ್ಯವನ್ನಾಗಿ ಮಾಡಿಕೊಂಡಿದ್ದೇನೆ. ನನ್ನ ಮುದಿ ಪ್ರಾಯದ ಹೊರತೂ ಈ ಸುಯೋಗಕ್ಕಾಗಿ ನನ್ನನ್ನು ದೊರಕಿಸಿಕೊಳ್ಳಲು ನಾನು ಇನ್ನೂ ಶಕ್ತನಾಗಿದ್ದೇನೆ.
ಗತಿಸಿಹೋದ ವರ್ಷಗಳಲ್ಲಿ, ಸುಮಾರು 50 ಮಂದಿಯನ್ನು ಜೀವದ ಹಾದಿಯಲ್ಲಿ ನಡೆಸಲು ನೆರವಾಗುವ ಆನಂದವು ನನ್ನದಾಗಿದೆ ಎಂದು ನನ್ನ ಅಂದಾಜು. ನನ್ನ ಮಕ್ಕಳಲ್ಲಿ ಹೆಚ್ಚಿನವರು ಸತ್ಯದಲ್ಲಿದ್ದಾರೆ. ನನ್ನ ಪುತ್ರಿಯರಲ್ಲಿ ಇಬ್ಬರು ಕ್ರಮದ ಪಯನೀಯರರಾಗಿ ಸೇವೆ ಮಾಡುತ್ತಾರೆ. ಇನ್ನೊಬ್ಬ ಮಗಳು, ಲೊವಿಸ್ ಬ್ಲ್ಯಾಂಟನ್, ತನ್ನ ಗಂಡನಾದ ಜಾರ್ಜ್ನೊಂದಿಗೆ ಬ್ರೂಕ್ಲಿನ್, ನ್ಯೂ ಯಾರ್ಕ್ನ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯದಲ್ಲಿ ಸೇವೆ ಮಾಡುತ್ತಾಳೆ, ಮತ್ತು ನನ್ನ ಪುತ್ರರಲ್ಲಿ ಒಬ್ಬನು ಅನೇಕ ವರ್ಷಗಳಿಂದ ಹಿರಿಯನಾಗಿ ಸೇವೆ ಮಾಡಿದ್ದಾನೆ.
ಹೌದು, ನಮ್ಮ ಮೊದಲನೆಯ ಮಾನವ ಹೆತ್ತವರಿಂದ ಬಾಧ್ಯತೆಯಾಗಿ ಪಡೆದ ಅಸಂಪೂರ್ಣತೆಯಿಂದಾಗಿ ನಾವೆಲ್ಲರು ಅಸೌಖ್ಯ ಮತ್ತು ಮರಣಕ್ಕೆ ಅಧೀನರಾಗಿದ್ದೇವೆ. (ರೋಮಾಪುರ 5:12) ನಿಶ್ಚಯವಾಗಿ ನನ್ನ ಜೀವನವು ಬೇನೆ ಮತ್ತು ಬೇಸರಗಳಿಂದ ಮುಕ್ತವಾಗಿಲ್ಲ. ಪ್ರಸ್ತುತವಾಗಿ ನಾನು ನನ್ನ ಎಡಗಾಲಿನಲ್ಲಿನ ಸಂಧಿವಾತದಿಂದ ಕಷ್ಟಾನುಭವಿಸುತ್ತಿದ್ದೇನೆ. ಕೆಲವೊಮ್ಮೆ ಅದು ನನಗೆ ತುಂಬ ಅಸೌಖ್ಯವನ್ನು ಕೊಡುತ್ತದೆ, ಆದರೆ ಕ್ರಿಯಾಶೀಲನಾಗಿರುವುದರಿಂದ ಅದು ನನ್ನನ್ನು ತಡೆದಿಲ್ಲ. ಮತ್ತು ಅದು ತಡೆಯದಿರುವಂತೆ ನಾನು ಪ್ರಾರ್ಥಿಸುತ್ತೇನೆ. ಮುಂದೆಸಾಗುತ್ತಾ ಇರಲು ನಾನು ಬಯಸುತ್ತೇನೆ. ಯೆಹೋವನ ನಾಮ ಮತ್ತು ಉದ್ದೇಶಗಳನ್ನು ಪ್ರಕಟಪಡಿಸಲು ನನ್ನಿಂದಾದುದೆಲ್ಲವನ್ನು ಮಾಡುತ್ತಾ, ಅಂತ್ಯದ ತನಕವೂ ಪಯನೀಯರ್ ಸೇವೆಯಲ್ಲಿ ಮುಂದುವರಿಯುವುದೇ ನನ್ನ ಅತ್ಯಾಕಾಂಕ್ಷೆ.
[ಪುಟ 23 ರಲ್ಲಿರುವ ಚಿತ್ರ]
ನನ್ನ ಮಗಳಾದ ರೀಟಳ ಸಂಗಡ