ಯೆಹೋವನು ದಣಿದವರಿಗೆ ಬಲವನ್ನು ಕೊಡುತ್ತಾನೆ
“ಆದರೆ ಯೆಹೋವನನ್ನು ನಿರೀಕ್ಷಿಸುತ್ತಿರುವವರು ಪುನಃ ಬಲವನ್ನು ಪಡೆಯುವರು; ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು ಏರುವರು.”—ಯೆಶಾಯ 40:31, NW.
1, 2. ತನ್ನಲ್ಲಿ ಭರವಸೆಯಿಡುವವರಿಗೆ ಯೆಹೋವನು ಏನನ್ನು ಕೊಡುತ್ತಾನೆ, ಮತ್ತು ನಾವು ಈಗ ಏನನ್ನು ಪರಿಗಣಿಸುವೆವು?
ಆಕಾಶದಲ್ಲಿ ಹಾರಾಡುವ ಅತ್ಯಂತ ಬಲಶಾಲಿ ಪಕ್ಷಿಗಳಲ್ಲಿ ಹದ್ದುಗಳು ಸೇರಿವೆ. ತಮ್ಮ ರೆಕ್ಕೆಗಳನ್ನು ಬಡಿಯದೇ ಅವು ಬಹಳ ದೂರದ ತನಕ ತೇಲಿಕೊಂಡು ಹೋಗಬಲ್ಲವು. ಎರಡು ಮೀಟರ್ಗಳಿಗಿಂತಲೂ ಹೆಚ್ಚಿರಬಹುದಾದ ರೆಕ್ಕೆಗಳ ಹರವಿನೊಂದಿಗೆ, “ಪಕ್ಷಿಗಳ ರಾಜನಾದ” ಹೊಂಬಣ್ಣದ ಹದ್ದು “ಸಕಲ ಹದ್ದುಗಳಲ್ಲಿ ಅತ್ಯಂತ ಪ್ರಭಾವಯುಕ್ತ ಪಕ್ಷಿ; ಅದು ಗುಡ್ಡಗಳ ಮತ್ತು ಬಯಲುಗಳ ಮೇಲಿನಿಂದ ಏರುತ್ತಾ, ಕೆಲವು ಬೆಟ್ಟದಿಂಡಿನ ಮೇಲೆ ಬಹಳ ಎತ್ತರದಲ್ಲಿ ಗಂಟೆಗಟ್ಟಲೆ ಹಾರುತ್ತಾ, ಗಗನದಲ್ಲಿ ಒಂದು ಕಪ್ಪಗಿನ ಚುಕ್ಕೆಯಾಗಿ ತೋರುವ ತನಕ ಸುರುಳಿ ಸುತ್ತುತ್ತಾ ಇರುತ್ತದೆ.”—ದ ಆಒಡ್ಯುಬನ್ ಸೊಸೈಟಿ ಎನ್ಸೈಕ್ಲೊಪೀಡಿಯ ಆಫ್ ನಾರ್ತ್ ಅಮೆರಿಕನ್ ಬರ್ಡ್ಸ್.
2 ಹದ್ದಿನ ಆ ಹಾರಾಟ ಸಾಮರ್ಥ್ಯಗಳನ್ನು ಮನಸ್ಸಿನಲ್ಲಿಟ್ಟವನಾಗಿ ಯೆಶಾಯನು ಬರೆದುದು: “[ಯೆಹೋವನು] ಸೋತವನಿಗೆ [“ದಣಿದವನಿಗೆ,” NW] ತ್ರಾಣವನ್ನು ಅನುಗ್ರಹಿಸಿ ನಿರ್ಬಲನಿಗೆ ಬಹು ಬಲವನ್ನು ದಯಪಾಲಿಸುತ್ತಾನೆ. ಯುವಕರೂ ದಣಿದು ಬಳಲುವರು, ತರುಣರೂ ಸೊರಗಿ ಮುಗ್ಗರಿಸುವರು. ಆದರೆ ಯೆಹೋವನನ್ನು ನಿರೀಕ್ಷಿಸುತ್ತಿರುವವರು ಪುನಃ ಬಲವನ್ನು ಪಡೆಯುವರು; ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು ಏರುವರು; ಓಡಿ ದಣಿಯರು, ನಡೆದು ಬಳಲರು.” (ಯೆಶಾಯ 40:29-31, NW) ಬಹಳ ಎತ್ತರಕ್ಕೇರುವ ಹದ್ದಿನ ದಣಿಯದ ರೆಕ್ಕೆಗಳಿಂದ ಸನ್ನದ್ಧಗೊಳಿಸಿದ್ದಾನೋ ಎಂಬಂತೆ, ತನ್ನಲ್ಲಿ ಭರವಸೆಯಿಡುವವರಿಗೆ ಮುಂದೆ ಸಾಗಲು ಯೆಹೋವನು ಬಲವನ್ನು ಕೊಡುತ್ತಾನೆಂದು ತಿಳಿಯುವುದು ಎಷ್ಟು ಸಾಂತ್ವನಕರ! ದಣಿದವನಿಗೆ ಬಲವನ್ನು ಕೊಡಲು ಆತನು ಮಾಡಿರುವ ಕೆಲವು ಒದಗಿಸುವಿಕೆಗಳನ್ನು ಈಗ ಪರಿಗಣಿಸಿರಿ.
ಪ್ರಾರ್ಥನೆಯ ಬಲ
3, 4. (ಎ) ಯೇಸು ತನ್ನ ಶಿಷ್ಯರನ್ನು ಏನು ಮಾಡುವಂತೆ ಪ್ರೋತ್ಸಾಹಿಸಿದನು? (ಬಿ) ನಮ್ಮ ಪ್ರಾರ್ಥನೆಗಳಿಗೆ ಉತ್ತರವಾಗಿ ಯೆಹೋವನು ಏನು ಮಾಡುವಂತೆ ನಾವು ನಿರೀಕ್ಷಿಸಬಹುದು?
3 “ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರು”ವಂತೆ ಯೇಸು ತನ್ನ ಶಿಷ್ಯರನ್ನು ಪ್ರೋತ್ಸಾಹಿಸಿದನು. (ಲೂಕ 18:1) ಯೆಹೋವನಿಗೆ ನಮ್ಮ ಹೃದಯವನ್ನು ತೋಡಿಕೊಳ್ಳುವುದು, ಹೊಸ ಬಲವನ್ನು ಹೊಂದುವಂತೆಯೂ ಜೀವಿತದ ಒತ್ತಡಗಳು ಕಂಗೆಡಿಸುವಂತೆ ತೋರುವಾಗ ಬಿಟ್ಟುಕೊಡದಂತೆಯೂ ತಡೆಯಲು ನಮಗೆ ನಿಜವಾಗಿ ಸಹಾಯ ಮಾಡಬಲ್ಲದೋ? ಹೌದು, ಆದರೆ ನಾವು ಮನಸ್ಸಿನಲ್ಲಿಡಬೇಕಾದ ಕೆಲವು ವಿಷಯಗಳಿವೆ.
4 ನಮ್ಮ ಪ್ರಾರ್ಥನೆಗಳಿಗೆ ಉತ್ತರವಾಗಿ ಯೆಹೋವನು ಏನು ಮಾಡುವಂತೆ ನಾವು ಅಪೇಕ್ಷಿಸುತ್ತೇವೂ ಅದರಲ್ಲಿ ನಾವು ವಾಸ್ತವಿಕವಾಗಿರಬೇಕು. ಆಳವಾದ ಖಿನ್ನತೆಗೆ ಬಿದ್ದಿದ್ದ ಒಬ್ಬಾಕೆ ಕ್ರೈಸ್ತಳು ಅನಂತರ ಅವಲೋಕಿಸಿದ್ದು: “ಬೇರೆ ಕಾಯಿಲೆಗಳ ವಿಷಯದಲ್ಲಿರುವಂತೆ, ಈ ಸಮಯದಲ್ಲೂ ಯೆಹೋವನು ಅದ್ಭುತಗಳನ್ನು ನಡಿಸುವುದಿಲ್ಲ. ಆದರೆ ಈ ವ್ಯವಸ್ಥೆಯಲ್ಲಿ ನಮಗೆ ಸಾಧ್ಯವಾಗುವಷ್ಟು ಮಟ್ಟಿಗೆ, ಅದನ್ನು ನಿಭಾಯಿಸುವಂತೆ ಮತ್ತು ಗುಣಹೊಂದುವಂತೆ ಯೆಹೋವನು ನಮಗೆ ಸಹಾಯ ಮಾಡುತ್ತಾನೆಂಬುದು ನಿಶ್ಚಯ. ತನ್ನ ಪ್ರಾರ್ಥನೆಗಳು ಒಂದು ವ್ಯತ್ಯಾಸವನ್ನು ಮಾಡಿದ್ದೇಕೆಂದು ವಿವರಿಸುತ್ತಾ, ಅವಳು ಕೂಡಿಸಿದ್ದು: “ದಿನದಲ್ಲಿ 24 ತಾಸು ನನಗೆ ಯೆಹೋವನ ಪವಿತ್ರಾತ್ಮಕ್ಕೆ ಪ್ರವೇಶಹಾದಿ ಇತ್ತು.” ಹೀಗೆ, ನಮ್ಮನ್ನು ಎದೆಗುಂದಿಸಬಲ್ಲ ಜೀವನದ ಒತ್ತಡಗಳಿಂದ ಯೆಹೋವನು ನಮ್ಮನ್ನು ಕಾಪಾಡುವುದಿಲ್ಲ, ಆದರೆ, “ತನ್ನನ್ನು ಬೇಡಿಕೊಳ್ಳುವವರಿಗೆ . . . ಪವಿತ್ರಾತ್ಮವರವನ್ನು” ಕೊಡುತ್ತಾನೆಂಬುದು ನಿಶ್ಚಯ. (ಲೂಕ 11:13; ಕೀರ್ತನೆ 88:1-3) ಆ ಆತ್ಮವು ನಮ್ಮನ್ನು, ನಾವು ಎದುರಿಸಬಹುದಾದ ಯಾವುದೇ ಸಂಕಟ ಅಥವಾ ಒತ್ತಡವನ್ನು ಸಹಿಸಲು ಶಕ್ತರಾಗುವಂತೆ ಮಾಡಬಲ್ಲದು. (1 ಕೊರಿಂಥ 10:13) ಅವಶ್ಯವಿರುವಲ್ಲಿ, ಅದು ನಮ್ಮಲ್ಲಿ “ಬಲಾಧಿಕ್ಯವನ್ನು” ತುಂಬಿ, ಈಗ ಬಹು ಹತ್ತಿರವಾಗಿರುವ ನೂತನ ಲೋಕದಲ್ಲಿ ಸಕಲ ಒತ್ತಡಭರಿತ ಸಮಸ್ಯೆಗಳನ್ನು ದೇವರ ರಾಜ್ಯವು ತೆಗೆದುಹಾಕುವ ತನಕ ತಾಳಿಕೊಳ್ಳುವಂತೆ ಮಾಡಬಲ್ಲದು.—2 ಕೊರಿಂಥ 4:7.
5. (ಎ) ನಮ್ಮ ಪ್ರಾರ್ಥನೆಗಳು ಪರಿಣಾಮಕಾರಿಯಾಗಿರಬೇಕಾದರೆ ಯಾವ ಎರಡು ವಿಷಯಗಳು ಅತ್ಯಾವಶ್ಯಕ? (ಬಿ) ಶರೀರದ ಒಂದು ಬಲಹೀನತೆಯೊಂದಿಗೆ ನಾವು ಹೋರಾಡುತ್ತಿರುವಲ್ಲಿ, ನಾವು ಹೇಗೆ ಪ್ರಾರ್ಥನೆ ಮಾಡಬಹುದು? (ಸಿ) ನಮ್ಮ ಪಟ್ಟುಹಿಡಿದ ಮತ್ತು ವಿಶಿಷ್ಟ ಪ್ರಾರ್ಥನೆಗಳು ಯೆಹೋವನಿಗೆ ಏನನ್ನು ಪ್ರದರ್ಶಿಸುವುವು?
5 ಆದರೂ ನಮ್ಮ ಪ್ರಾರ್ಥನೆಗಳು ಪರಿಣಾಮಕಾರಿಯಾಗಿರಬೇಕಾದರೆ ನಾವು ಪಟ್ಟುಹಿಡಿದು ಮಾಡಬೇಕು, ಮತ್ತು ಸಂಬಂಧಿಸಿದ ವಿಷಯವನ್ನು ವಿಶಿಷ್ಟವಾಗಿ ತಿಳಿಸಬೇಕು. (ರೋಮಾಪುರ 12:12) ದೃಷ್ಟಾಂತಕ್ಕಾಗಿ, ಶರೀರದ ಒಂದು ಬಲಹೀನತೆಯೊಂದಿಗೆ ನೀವು ಹೋರಾಡುತ್ತಿರುವ ಕಾರಣ ಆಗಾಗ ಬಳಲಿಹೋಗುತ್ತೀರಾದರೆ, ಆ ದಿನದಲ್ಲಿ ಆ ನಿರ್ದಿಷ್ಟ ಬಲಹೀನತೆಗೆ ಬಲಿಯಾಗುವುದನ್ನು ವರ್ಜಿಸಲು, ಸಹಾಯಕ್ಕಾಗಿ ಯೆಹೋವನಿಗೆ ಪ್ರತಿದಿನದ ಆರಂಭದಲ್ಲಿ ವಿಜ್ಞಾಪಿಸಿರಿ. ತದ್ರೀತಿ ದಿನವಿಡೀ ಮತ್ತು ಪ್ರತಿ ರಾತ್ರಿ ಮಲಗುವ ಮುಂಚೆ ಪ್ರಾರ್ಥನೆಯನ್ನು ಮಾಡಿರಿ. ನಿಮಗೆ ಒಂದು ಮರುಕೊಳಿಸುವಿಕೆ ಇದ್ದರೆ ಕ್ಷಮೆಗಾಗಿ ಯೆಹೋವನನ್ನು ಬೇಡಿಕೊಳ್ಳಿರಿ, ಮತ್ತು ಆ ಮರುಕೊಳಿಸುವಿಕೆಗೆ ನಡಿಸಿದ್ದು ಯಾವುದು ಮತ್ತು ಭವಿಷ್ಯತ್ತಿನಲ್ಲಿ ಆ ಸನ್ನಿವೇಶಗಳನ್ನು ವರ್ಜಿಸಲು ನೀವೇನು ಮಾಡಬಹುದೆಂಬುದರ ಕುರಿತು ಆತನೊಂದಿಗೆ ಮಾತನಾಡಿರಿ. ಅಂತಹ ಪಟ್ಟುಹಿಡಿದ ಮತ್ತು ವಿಶಿಷ್ಟ ಪ್ರಾರ್ಥನೆಯು, “ಪ್ರಾರ್ಥನೆಯನ್ನು ಕೇಳುವವ”ನಿಗೆ ಆ ಹೋರಾಟವನ್ನು ಜಯಿಸಲು ನಿಮಗಿರುವ ಅಪೇಕ್ಷೆಯ ಯಥಾರ್ಥತೆಯನ್ನು ಪ್ರದರ್ಶಿಸುವುದು.—ಕೀರ್ತನೆ 65:2; ಲೂಕ 11:5-13.
6. ನಾವು ಪ್ರಾರ್ಥಿಸಲು ಅನರ್ಹರಾಗಿದ್ದೇವೆಂದು ಭಾವಿಸುವಾಗಲೂ, ನಮ್ಮ ಪ್ರಾರ್ಥನೆಯನ್ನು ಯೆಹೋವನು ಕೇಳುತ್ತಾನೆಂದು ನಾವು ಏಕೆ ಯೋಗ್ಯವಾಗಿ ಅಪೇಕ್ಷಿಸಬಹುದು?
6 ಕೆಲವು ಸಲವಾದರೋ ಬಳಲಿಹೋದವರು ತಾವು ಪ್ರಾರ್ಥಿಸಲು ಅನರ್ಹರಾಗಿದ್ದೇವೆಂದು ಭಾವಿಸಬಹುದು. ಆ ರೀತಿ ಭಾವಿಸಿದ ಒಬ್ಬ ಕ್ರೈಸ್ತ ಸ್ತ್ರೀಯು ಆಮೇಲೆ ಅವಲೋಕಿಸಿದ್ದು: “ಅದು ಬಹಳ ಅಪಾಯಕರವಾದ ಯೋಚನೆಯಾಗಿದೆ, ಯಾಕೆಂದರೆ ನಮಗೆ ತೀರ್ಪುಮಾಡಿಕೊಳ್ಳುವುದನ್ನು ನಾವೇ ವಹಿಸಿಕೊಂಡಿದ್ದೇವೆಂದು ಇದರರ್ಥ, ಆದರೆ ಅದು ನಮಗೆ ಸೇರಿದ್ದಲ್ಲ.” ನಿಶ್ಚಯವಾಗಿ, “ದೇವರು ತಾನೇ ನ್ಯಾಯಾಧಿಪತಿ.” (ಕೀರ್ತನೆ 50:6) “ನಮ್ಮ ಹೃದಯವು . . . ನಮ್ಮನ್ನು ದೋಷಿಗಳೆಂದು ನಿರ್ಣಯಿಸಿದರೂ ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನೂ ಬಲ್ಲವನಾಗಿದ್ದಾನೆ,” ಎಂದು ಬೈಬಲು ನಮಗೆ ಆಶ್ವಾಸನೆ ಕೊಡುತ್ತದೆ. (1 ಯೋಹಾನ 3:20) ಪ್ರಾರ್ಥಿಸಲು ಅನರ್ಹರೆಂಬುದಾಗಿ ನಾವು ಸ್ವತಃ ತೀರ್ಪುಮಾಡಿಕೊಳ್ಳುವಾಗ, ಯೆಹೋವನು ನಮ್ಮ ಕಡೆಗೆ ಆ ರೀತಿ ಭಾವಿಸಲಿಕ್ಕಿಲ್ಲವೆಂಬುದನ್ನು ತಿಳಿಯುವುದು ಎಷ್ಟೊಂದು ಸಾಂತ್ವನಕರ! ಅಷ್ಟು ಅನರ್ಹತೆಯ ಭಾವನೆಯನ್ನು ಉಂಟುಮಾಡಿರಬಹುದಾದ ನಮ್ಮ ಜೀವನ ಪರಿಸ್ಥಿತಿಗಳನ್ನೂ ಸೇರಿಸಿ, ಆತನು ನಮ್ಮ ಕುರಿತು “ಎಲ್ಲವನ್ನು ಬಲ್ಲವನಾಗಿದ್ದಾನೆ.” (ಕೀರ್ತನೆ 103:10-14, NW) ಆತನ ಕರುಣೆ ಮತ್ತು ತಿಳಿವಳಿಕೆಯ ಅಗಾಧತೆಯು “ಪಶ್ಚಾತ್ತಾಪದಿಂದ ಜಜ್ಜಿಹೋದ ಮನ [“ಹೃದಯ,” NW]”ಸ್ಸಿನಿಂದ ಬರುವ ಪ್ರಾರ್ಥನೆಯನ್ನು ಕೇಳುವಂತೆ ಆತನನ್ನು ಪ್ರೇರಿಸುತ್ತದೆ. (ಕೀರ್ತನೆ 51:17) “ಬಡವನ ಮೊರೆಗೆ ಕಿವಿಮುಚ್ಚಿಕೊಳ್ಳುವವ”ರನ್ನು ಆತನು ತಾನೇ ಖಂಡಿಸುವಾಗ, ಸಹಾಯಕ್ಕಾಗಿರುವ ನಮ್ಮ ಕೂಗುಗಳಿಗೆ ಕಿವಿಗೊಡಲು ಆತನು ಹೇಗೆ ನಿರಾಕರಿಸಾನು?—ಜ್ಞಾನೋಕ್ತಿ 21:13.
ಸಹೋದರತ್ವದ ಹೃದಯೋಲ್ಲಾಸ
7. (ಎ) ಪುನಃ ಬಲವನ್ನು ಪಡೆಯಲು ನಮಗೆ ಸಹಾಯಕ್ಕಾಗಿ ಯೆಹೋವನು ಮಾಡಿರುವ ಇನ್ನೊಂದು ಒದಗಿಸುವಿಕೆಯು ಯಾವುದು? (ಬಿ) ನಮ್ಮ ಸಹೋದರತ್ವದ ಕುರಿತಾಗಿ ಏನನ್ನು ತಿಳಿಯುವುದು ನಮಗೆ ಬಲವರ್ಧಕವಾಗಿರಬಲ್ಲದು?
7 ಪುನಃ ಬಲವನ್ನು ಪಡೆಯಲು ನಮ್ಮ ಸಹಾಯಕ್ಕಾಗಿ ಯೆಹೋವನು ಮಾಡಿರುವ ಇನ್ನೊಂದು ಒದಗಿಸುವಿಕೆಯು ನಮ್ಮ ಕ್ರಿಸ್ತೀಯ ಸಹೋದರತ್ವವಾಗಿದೆ. ಸಹೋದರ ಮತ್ತು ಸಹೋದರಿಯರ ಒಂದು ಲೋಕವ್ಯಾಪಕ ಕುಟುಂಬದ ಭಾಗವಾಗಿರುವುದು ಎಂತಹ ಒಂದು ಅಮೂಲ್ಯ ಸುಯೋಗ! (1 ಪೇತ್ರ 2:17) ಜೀವನದ ಒತ್ತಡಗಳು ನಮ್ಮನ್ನು ಎದೆಗುಂದಿಸುವಾಗ, ನಮ್ಮ ಸಹೋದರತ್ವದ ಹೃದಯೋಲ್ಲಾಸವು ಪುನಃ ಬಲವನ್ನು ಪಡೆಯುವಂತೆ ನಮಗೆ ನೆರವಾಗಬಲ್ಲದು. ಅದು ಹೇಗೆ? ಒತ್ತಡಯುಕ್ತ ಸಮಸ್ಯೆಗಳನ್ನು ಎದುರಿಸುವುದರಲ್ಲಿ ನಾವು ಒಂಟಿಗರಾಗಿಲವ್ಲೆಂದು ತಿಳಿಯುವುದು ತಾನೇ ಬಲವರ್ಧಕವು. ನಮ್ಮ ಸಹೋದರ ಮತ್ತು ಸಹೋದರಿಯರಲ್ಲಿ ತದ್ರೀತಿಯ ಒತ್ತಡಗಳನ್ನು ಮತ್ತು ಶೋಧನೆಗಳನ್ನು ಎದುರಿಸಿರುವ ಮತ್ತು ಬಹುಮಟ್ಟಿಗೆ ನಮ್ಮಂತಹದ್ದೇ ಅನಿಸಿಕೆಗಳನ್ನು ಅನುಭವಿಸಿರುವ ಕೆಲವರು ಇದ್ದಾರೆಂಬುದು ನಿಸ್ಸಂಶಯ. (1 ಪೇತ್ರ 5:9) ನಾವೇನನ್ನು ಅನುಭವಿಸುತ್ತಿದ್ದೇವೂ ಅದು ಅಸಾಮಾನ್ಯವಲ್ಲ ಮತ್ತು ನಮ್ಮ ಅನಿಸಿಕೆಗಳು ವಿಚಿತ್ರವಾದವುಗಳಲ್ಲವೆಂಬುದನ್ನು ತಿಳಿಯುವುದು ಪುನರ್ಆಶ್ವಾಸನೀಯ.
8. (ಎ) ನಮ್ಮ ಸಹೋದರತ್ವದಲ್ಲಿ ಬಹಳವಾಗಿ ಬೇಕಾಗಿರುವ ಸಹಾಯ ಮತ್ತು ಆದರಣೆಯನ್ನು ನಾವು ಹೇಗೆ ಪಡೆಯಬಹುದೆಂದು ಯಾವ ಉದಾಹರಣೆಗಳು ತೋರಿಸುತ್ತವೆ? (ಬಿ) ಯಾವ ರೀತಿಯಲ್ಲಿ ನೀವು ವೈಯಕ್ತಿಕವಾಗಿ “ಒಬ್ಬ ನಿಜ ಮಿತ್ರ”ನಿಂದ ಸಹಾಯ ಮಾಡಲ್ಪಟ್ಟಿದ್ದೀರಿ ಇಲ್ಲವೇ ಸಾಂತ್ವನಗೊಳಿಸಲ್ಪಟ್ಟಿದ್ದೀರಿ?
8 ನಾವು ಕಷ್ಟದಲ್ಲಿರುವಾಗ ಬಹಳವಾಗಿ ಬೇಕಾದ ಸಹಾಯ ಮತ್ತು ಆದರಣೆಯನ್ನು ಒದಗಿಸಬಲ್ಲವರಾದ ‘ನಿಜ ಮಿತ್ರರನ್ನು’ ಆ ಸಹೋದರತ್ವದ ಒಲುಮೆಯಲ್ಲಿ ನಾವು ಕಾಣಬಲ್ಲೆವು. (ಜ್ಞಾನೋಕ್ತಿ 17:17, NW) ಕೆಲವು ಸಲ, ದಯೆಯ ಕೆಲವು ಮಾತುಗಳು ಅಥವಾ ಸುವಿಚಾರದ ಕ್ರಿಯೆಗಳೇ ಅದಕ್ಕೆ ಸಾಕು. ಅನರ್ಹತೆಯ ಭಾವನೆಯೊಂದಿಗೆ ಹೋರಾಡಿದ ಒಬ್ಬ ಕ್ರೈಸ್ತಳು ನೆನಪಿಸಿಕೊಳ್ಳುವುದು: “ನನ್ನ ನಕಾರಾತ್ಮಕ ವಿಚಾರಗಳನ್ನು ನಾನು ನೀಗಿಸುವಂತೆ ನನಗೆ ನೆರವಾಗಲು, ನನ್ನ ಕುರಿತು ಸಕಾರಾತ್ಮಕ ವಿಷಯಗಳನ್ನು ನನಗೆ ತಿಳಿಸುತ್ತಿದ್ದ ಮಿತ್ರರು ಇದ್ದರು.” (ಜ್ಞಾನೋಕ್ತಿ 15:23) ತನ್ನ ಎಳೆಯ ಮಗಳ ಮರಣವನ್ನು ಹಿಂಬಾಲಿಸಿ, ಸಭಾಕೂಟಗಳಲ್ಲಿ ರಾಜ್ಯ ಗೀತಗಳನ್ನು, ವಿಶೇಷವಾಗಿ ಪುನರುತ್ಥಾನದ ಕುರಿತು ತಿಳಿಸುವ ಸಂಗೀತಗಳನ್ನು ಹಾಡುವುದನ್ನು ಅವಳು ಮೊದಮೊದಲು ಕಷ್ಟಕರವಾದದ್ದಾಗಿ ಕಂಡುಕೊಂಡಳು. ಅವಳು ನೆನಪಿಸುವುದು: “ಒಂದು ಸಾರಿ, ಆಚೆ ಸಾಲಿನಲ್ಲಿ ಕೂತಿದ್ದ ಒಬ್ಬ ಸಹೋದರಿಯು ನಾನು ಅಳುತ್ತಿರುವುದನ್ನು ಕಂಡಳು. ಆಕೆ ಹತ್ತಿರ ಬಂದು, ನನ್ನನ್ನು ತೋಳಿನಿಂದಾವರಿಸಿ, ನನ್ನೊಂದಿಗೆ ಆ ಉಳಿದ ಸಂಗೀತವನ್ನು ಹಾಡಿದಳು. ಆ ಸಹೋದರ ಸಹೋದರಿಯರಿಗಾಗಿ ನಾನು ಪ್ರೀತಿಯಿಂದ ತುಂಬಿದವಳಾದೆ, ಮತ್ತು ನಮ್ಮ ಸಹಾಯವು ಇರುವುದು ಅಲ್ಲಿ ರಾಜ್ಯ ಸಭಾಗೃಹದಲ್ಲಿಯೇ ಎಂದು ಸ್ಪಷ್ಟವಾಗಿಗಿ ತಿಳಿಯುತ್ತಾ, ಆ ಕೂಟಗಳಿಗೆ ಹೋದದ್ದಕ್ಕಾಗಿ ನಾನು ಬಲು ಸಂತೋಷಗೊಂಡೆ.”
9, 10. (ಎ) ನಮ್ಮ ಸಹೋದರತ್ವದ ಹೃದಯೋಲ್ಲಾಸಕ್ಕೆ ನಾವು ಹೇಗೆ ನೆರವಾಗಬಹುದು? (ಬಿ) ವಿಶೇಷವಾಗಿ ಯಾರಿಗೆ ಹಿತಕರವಾದ ಸಾಹಚರ್ಯವು ಬೇಕು? (ಸಿ) ಪ್ರೋತ್ಸಾಹನೆಯ ಅಗತ್ಯವಿರುವವರಿಗೆ ಸಹಾಯ ಮಾಡಲು ನಾವೇನು ಮಾಡಬಲ್ಲೆವು?
9 ಕ್ರೈಸ್ತ ಸಹೋದರತ್ವದ ಹೃದಯೋಲ್ಲಾಸಕ್ಕೆ ನೆರವಾಗುವ ಜವಾಬ್ದಾರಿಯು ನಮ್ಮಲ್ಲಿ ಪ್ರತಿಯೊಬ್ಬರಿಗೆ ಇದೆ ನಿಶ್ಚಯ. ಹೀಗೆ ನಮ್ಮ ಎಲ್ಲ ಸಹೋದರ ಮತ್ತು ಸಹೋದರಿಯರನ್ನು ಒಳಗೂಡಿಸಲು ನಮ್ಮ ಹೃದಯಗಳು “ವಿಶಾಲ”ವಾಗಬೇಕು. (2 ಕೊರಿಂಥ 6:13) ತಮ್ಮ ಕಡೆಗೆ ಸಹೋದರತ್ವದ ಪ್ರೀತಿಯು ತಣ್ಣಗಾಗಿ ಹೋಗಿದೆಯೆಂಬ ಭಾವನೆ, ಬಳಲಿಹೋಗಿರುವ ಆ ಜನರಿಗಾಗುವುದು ಅದೆಷ್ಟು ಶೋಚನೀಯ! ಆದರೂ, ಕೆಲವು ಕ್ರೈಸ್ತರು ಒಂಟಿಗರಾಗಿರುವ ಮತ್ತು ಅಸಡ್ಡೆಮಾಡಲ್ಪಟ್ಟಿರುವ ಅನಿಸಿಕೆಯನ್ನು ವರದಿಸುತ್ತಾರೆ. ಸತ್ಯವನ್ನು ವಿರೋಧಿಸುವ ಗಂಡನಿರುವ ಒಬ್ಬ ಸಹೋದರಿಯು ಬೇಡಿಕೊಂಡದ್ದು: “ಯಾರು ಬಲವರ್ಧಕ ಗೆಳೆತನಗಳು, ಪ್ರೋತ್ಸಾಹ, ಮತ್ತು ಪ್ರೀತಿಯ ಸಾಹಚರ್ಯವನ್ನು ಅಪೇಕ್ಷಿಸದಿರುತ್ತಾರೆ ಮತ್ತು ಯಾರಿಗೆ ಅದರ ಅಗತ್ಯವಿಲ್ಲ? ನಮ್ಮ ಸಹೋದರ ಮತ್ತು ಸಹೋದರಿಯರ ಅಗತ್ಯ ನಮಗಿದೆಯೆಂದು ದಯವಿಟ್ಟು ಅವರಿಗೆ ಮರುಜ್ಞಾಪನವನ್ನು ಕೊಡಿರಿ!” ಹೌದು, ಜೀವನದ ಪರಿಸ್ಥಿತಿಗಳು ಯಾರನ್ನು ಕುಗ್ಗಿಹೋಗುವಂತೆ ಮಾಡುತ್ತವೋ—ಆ ಅವಿಶ್ವಾಸಿ ಸಂಗಾತಿಗಳಿರುವವರಿಗೆ, ಒಂಟಿ ಹೆತ್ತವರಿಗೆ, ಆರೋಗ್ಯದ ದೀರ್ಘಕಾಲದ ಸಮಸ್ಯೆಗಳಿರುವವರಿಗೆ, ವೃದ್ಧರಿಗೆ, ಮತ್ತು ಇತರರಿಗೆ—ವಿಶೇಷವಾಗಿ ಹಿತಕರವಾದ ಸಹವಾಸದ ಅಗತ್ಯವಿದೆ. ನಮ್ಮಲ್ಲಿ ಕೆಲವರಿಗೆ ಅದರ ಮರುಜ್ಞಾಪನವನ್ನು ಕೊಡುವ ಅಗತ್ಯವಿದೆಯೇ?
10 ಸಹಾಯ ಮಾಡಲು ನಾವೇನು ಮಾಡಬಲ್ಲೆವು? ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ ನಾವು ವಿಶಾಲಗೊಳ್ಳೋಣ. ಅತಿಥಿ ಸತ್ಕಾರವನ್ನು ಮಾಡುವಾಗ, ಯಾರಿಗೆ ಪ್ರೋತ್ಸಾಹದ ಅಗತ್ಯವಿದೆಯೋ ಅವರನ್ನು ಮರೆಯದಿರೋಣ. (ಲೂಕ 14:12-14; ಇಬ್ರಿಯ 13:2) ಅವರ ಪರಿಸ್ಥಿತಿಗಳು ಅದನ್ನು ಸ್ವೀಕರಿಸುವುದರಿಂದ ತಡೆಯತ್ತವೆಂದು ಊಹಿಸುವ ಬದಲಿಗೆ, ಹೇಗಾದರೂ ಅವರನ್ನು ಆಮಂತ್ರಿಸಬಾರದೇಕೆ? ಅನಂತರ ಅವರೇ ನಿರ್ಣಯ ಮಾಡಲಿ. ಅವರದನ್ನು ಸ್ವೀಕರಿಸಲು ಶಕ್ತರಾಗದೆ ಇರುವುದಾದರೂ, ಇತರರು ತಮ್ಮ ಕುರಿತಾಗಿ ಆಲೋಚಿಸಿದ್ದಾರೆಂದು ತಿಳಿಯಲು ಉತ್ತೇಜನವನ್ನು ಹೊಂದುವರೆಂಬುದು ನಿಸ್ಸಂಶಯ. ಪುನಃ ಬಲವನ್ನು ಪಡೆಯುವುದಕ್ಕಾಗಿ ಅವರಿಗೆ ಬೇಕಾಗಿರುವುದು ಕೇವಲ ಅದೇ ಆಗಿರಬಹುದು.
11. ಎದೆಗುಂದಿದವರಿಗೆ ಯಾವ ವಿಧಾನಗಳಲ್ಲಿ ಸಹಾಯವು ಬೇಕಾದೀತು?
11 ಕುಗ್ಗಿದವರಿಗೆ ಬೇರೆ ರೀತಿಗಳಲ್ಲಿ ಸಹಾಯವು ಬೇಕಾದೀತು. ಉದಾರಣೆಗಾಗಿ, ಏಕ ಮಾತೆಗೆ ತನ್ನ ತಂದೆಯಿಲ್ಲದ ಮಗನ ಮೇಲೆ, ಒಬ್ಬ ಪ್ರೌಢ ಸಹೋದರನು ಆಸಕ್ತಿವಹಿಸುವುದು ಅಗತ್ಯವಿದ್ದೀತು. (ಯಾಕೋಬ 1:27) ಗಂಭೀರವಾದ ಆರೋಗ್ಯ ಸಮಸ್ಯೆಗಳುಳ್ಳ ಒಬ್ಬ ಸಹೋದರ ಅಥವಾ ಸಹೋದರಿಗೆ, ಶಾಪಿಂಗ್ ಅಥವಾ ಮನೆಗೆಲಸಗಳಲ್ಲಿ ಸ್ವಲ್ಪ ಸಹಾಯವು ಬೇಕಾದೀತು. ವೃದ್ಧರಾಗಿರುವವರೊಬ್ಬರು ತುಸು ಸಾಹಚರ್ಯಕ್ಕಾಗಿ ಅಥವಾ ಕ್ಷೇತ್ರ ಶುಶ್ರೂಷೆಗಾಗಿ ಹೊರಗೆ ಹೋಗಲು ಸ್ಪಲ್ಪ ನೆರವಿಗಾಗಿ ಹಂಬಲಿಸಬಹುದು. ಅಂತಹ ಸಹಾಯಕ್ಕಾಗಿ ಅಗತ್ಯವು ಇರುವಾಗ, ಅದು ‘ನಮ್ಮ ಪ್ರೀತಿಯ ಯಥಾರ್ಥತೆಯನ್ನು ನಿಜ ಪರೀಕೆಗ್ಷೆ’ ಹಾಕುತ್ತದೆ. (2 ಕೊರಿಂಥ 8:8) ಒಳಗೂಡಿರುವ ಸಮಯ ಮತ್ತು ಪ್ರಯತ್ನದ ಕಾರಣ ಕೊರತೆಯುಳ್ಳವರಿಂದ ದೂರ ಸರಿಯುವ ಬದಲಿಗೆ, ಇತರರ ಅಗತ್ಯಗಳಿಗೆ ಸೂಕ್ಷ್ಮಸಂವೇದಿಗಳೂ ಪ್ರತಿಕ್ರಿಯಿಸುವವರೂ ಆಗಿರುವ ಮೂಲಕ ನಾವು ಕ್ರೈಸ್ತ ಪ್ರೀತಿಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವಂತಾಗಲಿ.
ದೇವರ ವಾಕ್ಯದ ಬಲ
12. ಪುನಃ ಬಲವನ್ನು ಪಡೆಯಲಿಕ್ಕೆ ದೇವರ ವಾಕ್ಯವು ನಮಗೆ ಹೇಗೆ ಸಹಾಯ ಮಾಡುತ್ತದೆ?
12 ತಿನ್ನುವುದನ್ನು ನಿಲ್ಲಿಸುವ ವ್ಯಕ್ತಿಯೊಬ್ಬನು ಬೇಗನೆ ಶಕ್ತಿಯನ್ನು ಅಥವಾ ಬಲವನ್ನು ಕಳೆದುಕೊಳ್ಳುವನು. ಅದಕ್ಕನುಗುಣವಾಗಿ, ನಾವು ಮುಂದೆ ಸಾಗುವಂತೆ ಯೆಹೋವನು ನಮಗೆ ಬಲವನ್ನು ಕೊಡುವ ಇನ್ನೊಂದು ವಿಧಾನವು, ನಾವು ಆತ್ಮಿಕವಾಗಿ ಸುಪುಷರ್ಟಾಗಿರುವಂತೆ ನೋಡಿಕೊಳ್ಳುವ ಮೂಲಕವೇ. (ಯೆಶಾಯ 65:13, 14) ಯಾವ ಆತ್ಮಿಕ ಆಹಾರವನ್ನು ಆತನು ಒದಗಿಸಿದ್ದಾನೆ? ಮುಖ್ಯವಾಗಿ, ಆತನ ವಾಕ್ಯವಾದ ಬೈಬಲ್. (ಮತ್ತಾಯ 4:4; ಹೋಲಿಸಿ ಇಬ್ರಿಯ 4:12.) ಪುನಃ ಬಲವನ್ನು ಪಡೆಯುವಂತೆ ಇದು ನಮಗೆ ಹೇಗೆ ನೆರವಾಗಬಲ್ಲದು? ನಾವು ಎದುರಿಸುವ ಒತ್ತಡಗಳು ಮತ್ತು ಸಮಸ್ಯೆಗಳು ನಮ್ಮ ಶಕ್ತಿಯನ್ನು ಹೀರಿಬಿಡಲು ತೊಡಗುವಾಗ, ಬೈಬಲಿನ ಕಾಲದ ನಂಬಿಗಸ್ತ ಪುರುಷರ ಮತ್ತು ಸ್ತ್ರೀಯರ ಅನಿಸಿಕೆಗಳನ್ನು ಮತ್ತು ನಿಜ ಜೀವನ ಹೋರಾಟಗಳನ್ನು ಕುರಿತು ಓದುವುದರಿಂದ ಬಲವನ್ನು ಪಡೆಯಬಲ್ಲೆವು. ಸಮಗ್ರತೆಯ ಮಹತ್ತಾದ ಮಾದರಿಗಳಾಗಿದ್ದರೂ, ಅವರು “ನಮ್ಮಂಥ ಸ್ವಭಾವವುಳ್ಳ” ಮನುಷ್ಯರಾಗಿದ್ದರು. (ಯಾಕೋಬ 5:17; ಅ. ಕೃತ್ಯಗಳು 14:15) ಸ್ವತಃ ನಮ್ಮವುಗಳಿಗೆ ಸದೃಶವಾಗಿರುವ ಶೋಧನೆಗಳನ್ನು ಮತ್ತು ಒತ್ತಡಗಳನ್ನು ಅವರು ಎದುರಿಸಿದರು. ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ.
13. ಬೈಬಲಿನ ಕಾಲಗಳ ನಂಬಿಗಸ್ತ ಪುರುಷರು ಮತ್ತು ಸ್ತ್ರೀಯರಿಗೆ ನಮಗಿರುವಂತಹ ಭಾವನೆಗಳೂ ಅನುಭವಗಳೂ ಇದ್ದವೆಂದು ಯಾವ ಶಾಸ್ತ್ರೀಯ ಉದಾಹರಣೆಗಳು ತೋರಿಸುತ್ತವೆ?
13 ಮೂಲಪಿತೃವಾದ ಅಬ್ರಹಾಮನು, ಪುನರುತ್ಥಾನದಲ್ಲಿ ಅವನಿಗೆ ನಂಬಿಕೆಯಿದ್ದರೂ, ತನ್ನ ಪತ್ನಿಯ ಮರಣಕ್ಕಾಗಿ ಬಹಳವಾಗಿ ದುಃಖಿಸಿದನು. (ಆದಿಕಾಂಡ 23:2; ಹೋಲಿಸಿ ಇಬ್ರಿಯ 11:8-10, 17-19.) ಯೆಹೋವನನ್ನು ಸೇವಿಸಲು ತನ್ನ ಪಾಪಗಳು ತನ್ನನ್ನು ಅನರ್ಹನನ್ನಾಗಿ ಮಾಡಿದ್ದವೆಂದು ಪಶ್ಚಾತ್ತಾಪಿಯಾದ ದಾವೀದನು ಭಾವಿಸಿದನು. (ಕೀರ್ತನೆ 55:11) ಮೋಶೆಯಲ್ಲಿ ಕೊರತೆಯ ಅನಿಸಿಕೆಗಳಿದ್ದವು. (ವಿಮೋಚನಕಾಂಡ 4:10) ಒಂದು ಗಂಭೀರವಾದ ಕಾಯಿಲೆಯು “ಕ್ರಿಸ್ತನ ಕೆಲಸ”ದಲ್ಲಿನ ತನ್ನ ಚಟುವಟಿಕೆಯನ್ನು ಸೀಮಿತಗೊಳಿಸಿತೆಂದು ತಿಳಿದು ಬಂದಾಗ ಎಪಫ್ರೊದೀತನು ಖಿನ್ನತೆಯುಳ್ಳವನಾದನು. (ಫಿಲಿಪ್ಪಿ 2:25-30) ಪೌಲನಿಗೆ ಪಾಪಮಯ ಶರೀರದ ವಿರುದ್ಧವಾಗಿ ಹೋರಾಡಲಿಕ್ಕಿತ್ತು. (ರೋಮಾಪುರ 7:21-25) ಫಿಲಿಪ್ಪಿ ಸಭೆಯ ಇಬ್ಬರು ಅಭಿಷಿಕ್ತ ಸಹೋದರಿಯರಾದ, ಯುವೊದ್ಯ ಮತ್ತು ಸಂತುಕೆಗೆ ಪರಸ್ಪರ ಹೊಂದಿಕೊಂಡು ಹೋಗಲು ಸ್ವಲ್ಪ ಕಷ್ಟವಿತ್ತೆಂದು ತೋರುತ್ತದೆ. (ಫಿಲಿಪ್ಪಿ 1:1; 4:2, 3) ನಮಗಿರುವಂಥ ಅನಿಸಿಕೆಗಳು ಮತ್ತು ಅನುಭವಗಳೇ ಈ ನಂಬಿಗಸ್ತ ಜನರಿಗೂ ಇದ್ದವೆಂದು ತಿಳಿಯುವುದು ಎಷ್ಟು ಪ್ರೋತ್ಸಾಹನೀಯ, ಆದರೂ ಅವರು ಬಿಟ್ಟುಕೊಡಲಿಲ್ಲ! ಮತ್ತು ಯೆಹೋವನು ಅವರನ್ನು ತ್ಯಜಿಸಲೂ ಇಲ್ಲ.
14. (ಎ) ಆತನ ವಾಕ್ಯದಿಂದ ಬಲವನ್ನು ಪಡೆಯುವಂತೆ ನಮ್ಮ ಸಹಾಯಕ್ಕಾಗಿ ಯಾವ ಉಪಕರಣವನ್ನು ಯೆಹೋವನು ಬಳಸಿದ್ದಾನೆ? (ಬಿ) ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು, ಸಾಮಾಜಿಕ, ಕೌಟುಂಬಿಕ ಮತ್ತು ಭಾವನಾತ್ಮಕ ಪ್ರಶ್ನೆಗಳ ಮೇಲೆ ಏಕೆ ಲೇಖನಗಳನ್ನು ಪ್ರಕಟಿಸಿರುತ್ತವೆ?
14 ತನ್ನ ವಾಕ್ಯದಿಂದ ಬಲವನ್ನು ಪಡೆದುಕೊಳ್ಳಲು ಸಹಾಯಕ್ಕಾಗಿ, ನಮಗೆ “ಹೊತ್ತುಹೊತ್ತಿಗೆ ಆಹಾರ”ವು ಏಕಪ್ರಕಾರವಾಗಿ ಸಿಗುವಂತೆ ಯೆಹೋವನು ನಂಬಿಗಸ್ತನೂ ವಿವೇಕಿಯೂ ಆದ ಆಳು ವರ್ಗವನ್ನು ಉಪಯೋಗಿಸುತ್ತಾನೆ. (ಮತ್ತಾಯ 24:45) ಈ ನಂಬಿಗಸ್ತ ಆಳು, ಬೈಬಲ್ ಸತ್ಯವನ್ನು ಸಮರ್ಥಿಸುವುದಕ್ಕಾಗಿ ಮತ್ತು ದೇವರ ರಾಜ್ಯವು ಮಾನವನ ಏಕಮಾತ್ರ ನಿರೀಕ್ಷೆಯೆಂದು ಪ್ರಕಟಿಸುವುದಕ್ಕಾಗಿ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ದೀರ್ಘಕಾಲದಿಂದಲೂ ಉಪಯೋಗಿಸಿದೆ. ವಿಶೇಷವಾಗಿ, ಕಳೆದ ಕೆಲವು ದಶಮಾನಗಳಲ್ಲಿ, ಈ ಪತ್ರಿಕೆಗಳು ದೇವಜನರಲ್ಲಿ ಕೆಲವರಿಗೆ ಸಹ ಎದುರಾಗುವ ಸಾಮಾಜಿಕ, ಕೌಟುಂಬಿಕ, ಮತ್ತು ಭಾವನಾತ್ಮಕ ಪಂಥಾಹ್ವಾನಗಳ ಮೇಲೆ ಸಮಯೋಚಿತ ಶಾಸ್ತ್ರೀಯ ಲೇಖನಗಳನ್ನು ಪ್ರಕಟಿಸಿವೆ. ಅಂತಹ ಮಾಹಿತಿಯು ಯಾವ ಉದ್ದೇಶಕ್ಕಾಗಿ ಪ್ರಕಾಶಿಸಲ್ಪಟ್ಟಿದೆ? ನಿಶ್ಚಯವಾಗಿ ಯಾರು ಈ ಪಂಥಾಹ್ವಾನಗಳನ್ನು ಅನುಭವಿಸುತ್ತಿದ್ದಾರೋ ಅವರು, ದೇವರ ವಾಕ್ಯದಿಂದ ಬಲವನ್ನೂ ಉತ್ತೇಜನವನ್ನೂ ಪಡೆದುಕೊಳ್ಳುವುದಕ್ಕೋಸ್ಕರವೇ. ಆದರೆ ನಮ್ಮ ಸಹೋದರ ಮತ್ತು ಸಹೋದರಿಯರಲ್ಲಿ ಕೆಲವರು ಏನೆಲ್ಲ ಅನುಭವಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿಗಿ ತಿಳಿಯುವಂತೆ ಸಹ ನಮಗೆಲ್ಲರಿಗೆ ಅಂತಹ ಲೇಖನಗಳು ಸಹಾಯ ಮಾಡುತ್ತವೆ. ಹೀಗೆ ಪೌಲನ ಮಾತುಗಳನ್ನು ಪಾಲಿಸಲಿಕ್ಕೆ ನಾವು ಉತ್ತಮವಾಗಿ ಸನ್ನದ್ಧರಾಗಿದ್ದೇವೆ: “ಮನಗುಂದಿದವರನ್ನು ಧೈರ್ಯಪಡಿಸಿರಿ, ಬಲಹೀನರಿಗೆ ಆಧಾರವಾಗಿರಿ, ಎಲ್ಲರಲ್ಲಿಯೂ ದೀರ್ಘಶಾಂತರಾಗಿರಿ.”—1 ಥೆಸಲೊನೀಕ 5:14.
“ಗಾಳಿಯಲ್ಲಿ ಮರೆಯಂತೆ” ಇರುವ ಹಿರಿಯರು
15. ಹಿರಿಯರಾಗಿ ಸೇವೆ ಮಾಡುವವರ ಕುರಿತು ಯೆಶಾಯನ ಪ್ರವಾದನೆಯು ಏನು ಹೇಳಿದೆ, ಮತ್ತು ಇದು ಅವರ ಮೇಲೆ ಯಾವ ಜವಾಬ್ದಾರಿಯನ್ನು ಹಾಕುತ್ತದೆ?
15 ನಾವು ಬಳಲಿಹೋದಾಗ ನಮ್ಮ ಸಹಾಯಕ್ಕಾಗಿ ಯೆಹೋವನು ಇನ್ನೊಂದು ವಿಷಯವನ್ನು—ಸಭಾ ಹಿರಿಯರನ್ನು ಒದಗಿಸಿದ್ದಾನೆ. ಇವರ ವಿಷಯವಾಗಿ ಪ್ರವಾದಿಯಾದ ಯೆಶಾಯನು ಬರೆದುದು, ಪ್ರತಿ “ಒಬ್ಬ ಪುರುಷನು ಗಾಳಿಯಲ್ಲಿ ಮರೆಯಂತೆಯೂ ಅತಿವೃಷಿಯ್ಟಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ ಇರುವನು.” (ಯೆಶಾಯ 32:1, 2) ಆದುದರಿಂದ ಹಿರಿಯರಿಗೆ, ಯೆಹೋವನು ಅವರ ಕುರಿತು ಏನು ಮುಂತಿಳಿಸಿದ್ದಾನೋ ಅದಕ್ಕೆ ಹೊಂದಿಕೆಯಾಗಿ ಜೀವಿಸುವ ಒಂದು ಜವಾಬ್ದಾರಿಯಿದೆ. ಅವರು ಇತರರಿಗೆ ಆದರಣೆ ಮತ್ತು ಚೈತನ್ಯದ ಮೂಲಗಳಾಗಿ ‘ಕಂಡುಬರಬೇಕು’ ಮತ್ತು “ಒಬ್ಬರು ಇನ್ನೊಬ್ಬರ ಭಾರವನ್ನು [ಅಥವಾ, “ತೊಂದರೆಯ ವಿಷಯಗಳು”; ಅಕ್ಷರಶಃ “ಭಾರವಿರುವ ವಿಷಯಗಳು”] ಹೊತ್ತು”ಕೊಳ್ಳುತ್ತಾ ಮುಂದುವರಿಯಲು ಇಷ್ಟವುಳ್ಳವರಾಗಿರಬೇಕು. (ಗಲಾತ್ಯ 6:2, NW, ಪಾದಟಿಪ್ಪಣಿ) ಅವರು ಇದನ್ನು ಹೇಗೆ ಮಾಡಬಲ್ಲರು?
16. ಪ್ರಾರ್ಥನೆ ಮಾಡಲು ಅನರ್ಹನೆಂದು ಭಾವಿಸುವ ಒಬ್ಬನಿಗೆ ನೆರವಾಗಲು ಹಿರಿಯರು ಏನು ಮಾಡಬಲ್ಲರು?
16 ಹಿಂದೆ ತಿಳಿಸಲ್ಪಟ್ಟ ಪ್ರಕಾರ, ಕೆಲವು ಸಾರಿ ಬಳಲಿಹೋದ ವ್ಯಕ್ತಿಯೊಬ್ಬನು ತಾನು ಪ್ರಾರ್ಥನೆ ಮಾಡಲು ಅನರ್ಹನಾಗಿದ್ದೇನೆಂದು ಭಾವಿಸಬಹುದು. ಹಿರಿಯರು ಏನು ಮಾಡಸಾಧ್ಯವಿದೆ? ಅವರು ಆ ವ್ಯಕ್ತಿಯೊಂದಿಗೆ ಮತ್ತು ಅವನಿಗಾಗಿ ಪ್ರಾರ್ಥಿಸಬಲ್ಲರು. (ಯಾಕೋಬ 5:14) ಬಳಲಿಹೋದವನಿಗೆ ಕೇಳಿಸುವಂತೆ, ಯೆಹೋವನಿಂದ ಮತ್ತು ಇತರರಿಂದ ಅವನು ಅಥವಾ ಅವಳು ಎಷ್ಟು ಪ್ರೀತಿಸಲ್ಪಡುತ್ತಾರೆಂದು ತಿಳಿಯುವಂತೆ ಅವರಿಗೆ ಸಹಾಯ ಮಾಡಲು ಸುಮ್ಮನೆ ಯೆಹೋವನನ್ನು ಕೇಳಿಕೊಳ್ಳುವುದು ನಿಶ್ಚಯವಾಗಿಯೂ ಸಾಂತ್ವನದಾಯಕವಾಗಿರುವುದು. ಒಬ್ಬ ಹಿರಿಯನ ಗಾಢವಾದ, ಹೃದಯಪೂರ್ವಕ ಪ್ರಾರ್ಥನೆಯನ್ನು ಕೇಳುವುದು ಸಂಕಟದಲ್ಲಿರುವ ವ್ಯಕ್ತಿಯ ಭರವಸೆಯನ್ನು ಬಲಗೊಳಿಸಬಹುದು. ಅವರ ಸಲುವಾಗಿ ಮಾಡಲ್ಪಟ್ಟ ಪ್ರಾರ್ಥನೆಗಳನ್ನು ಯೆಹೋವನು ಉತ್ತರಿಸುತ್ತಾನೆಂಬ ಭರವಸೆಯು ಹಿರಿಯರಿಗಿರುವಲ್ಲಿ, ತಾವೂ ಆ ಭರವಸೆಯಲ್ಲಿ ಪಾಲಿಗರಾಗಬಲ್ಲೆವೆಂದು ವಿವೇಚಿಸುವಂತೆ ಅವನಿಗೆ ಅಥವಾ ಅವಳಿಗೆ ಸಹಾಯವಾಗಬಹುದು.
17. ಹಿರಿಯರು ಸಹಾನುಭೂತಿಯುಳ್ಳ ಕೇಳುಗರಾಗಿರಬೇಕು ಏಕೆ?
17 “ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ” ಇರಬೇಕೆಂದು ಯಾಕೋಬ 1:19 ಹೇಳುತ್ತದೆ. ಬಳಲಿದವರು ಪುನಃ ಬಲವನ್ನು ಪಡೆಯುವಂತೆ ಸಹಾಯ ಮಾಡಲು, ಹಿರಿಯರು ಸಹಾನುಭೂತಿಯುಳ್ಳ ಕೇಳುಗರೂ ಆಗಿರತಕ್ಕದ್ದು. ಕೆಲವು ಸನ್ನಿವೇಶಗಳಲ್ಲಿ ಸಭಾ ಸದಸ್ಯರು ಈ ವಿಷಯಗಳ ವ್ಯವಸ್ಥೆಯಲ್ಲಿ ಪರಿಹರಿಸಲಾಗದೇ ಇರುವ ಸಮಸ್ಯೆಗಳೊಂದಿಗೆ ಅಥವಾ ಒತ್ತಡಗಳೊಂದಿಗೆ ಒದ್ದಾಡುತ್ತಿರಬಹುದು. ಆದುದರಿಂದ ಅವರಿಗೆ ಬೇಕಾಗಿರುವುದು ಅವರ ಸಮಸ್ಯೆಗಳನ್ನು “ನೀಗಿಸುವ” ಒಂದು ಪರಿಹಾರಕವಾಗಿರುವುದಿಲ್ಲ, ಬದಲಿಗೆ, ಮಾತಾಡಲು ಕೇವಲ ಒಬ್ಬ ಒಳ್ಳೆಯ ಕೇಳುಗನು—ಅವರು ಹೇಗೆ ಭಾವಿಸಬೇಕೆಂದು ಸೂಚಿಸುವವನಲ್ಲ, ಬದಲಿಗೆ ತೀರ್ಪುಮಾಡದೆ ಕಿವಿಗೊಡುವವನು ಅವರಿಗೆ ಬೇಕಾಗಿದ್ದಾನೆ.—ಲೂಕ 6:37; ರೋಮಾಪುರ 14:13.
18, 19. (ಎ) ಬಳಲಿದವನ ಹೊರೆಯನ್ನು ಮತ್ತಷ್ಟು ಭಾರವಾಗಿ ಮಾಡುವುದನ್ನು ತಡೆಯಲು, ತೀವ್ರವಾಗಿ ಕಿವಿಗೊಡುವುದು ಒಬ್ಬ ಹಿರಿಯನಿಗೆ ಹೇಗೆ ನೆರವಾಗಬಲ್ಲದು? (ಬಿ) ಹಿರಿಯರು ‘ಅನುಕಂಪವನ್ನು’ ತೋರಿಸುವಾಗ ಪರಿಣಾಮಗಳೇನಾಗುವುವು?
18 ಹಿರಿಯರೇ, ಅರಿವಿಲ್ಲದೆ ಬಳಲಿದವನ ಹೊರೆಯನ್ನು ಇನ್ನೂ ಭಾರವಾಗಿ ಮಾಡುವುದನ್ನು ವರ್ಜಿಸಲು, ತೀವ್ರವಾಗಿ ಕಿವಿಗೊಡುವುದು ನಿಮಗೆ ನೆರವಾಗಬಲ್ಲದು. ದೃಷ್ಟಾಂತಕ್ಕೆ, ಒಬ್ಬ ಸಹೋದರ ಅಥವಾ ಸಹೋದರಿಯು ಕೆಲವು ಕೂಟಗಳನ್ನು ತಪ್ಪಿಸಿಕೊಂಡಿರುವುದಾದರೆ, ಅಥವಾ ಕ್ಷೇತ್ರ ಶುಶ್ರೂಷೆಯಲ್ಲಿ ನಿಧಾನಿಸಿರುವುದಾದರೆ, ಶುಶ್ರೂಷೆಯಲ್ಲಿ ಹೆಚ್ಚನ್ನು ಮಾಡಬೇಕು ಅಥವಾ ಕೂಟಗಳಿಗೆ ಹೆಚ್ಚು ಕ್ರಮವಾಗಿ ಬರಬೇಕೆಂಬುದರ ಕುರಿತು ಅವನಿಗೆ ಅಥವಾ ಅವಳಿಗೆ ನಿಜವಾಗಿ ಸಲಹೆಯನ್ನು ನೀಡುವ ಅಗತ್ಯವಿದೆಯೊ? ಪ್ರಾಯಶಃ ನೀಡಬೇಕಾದೀತು. ಆದರೆ ಇಡೀ ಸನ್ನಿವೇಶವು ನಿಮಗೆ ಗೊತ್ತಿದೆಯೇ? ಅಧಿಕವಾಗುತ್ತಿರುವ ಆರೋಗ್ಯ ಸಮಸ್ಯೆಗಳು ಇವೆಯೋ? ಕುಟುಂಬ ಜವಾಬ್ದಾರಿಗಳು ಇತ್ತೀಚೆಗೆ ಬದಲಾಗಿವೆಯೋ? ಅವನನ್ನು ಅಥವಾ ಅವಳನ್ನು ಎದೆಗುಂದಿಸುತ್ತಿರುವ ಇತರ ಸನ್ನಿವೇಶಗಳು ಅಥವಾ ಒತ್ತಡಗಳು ಇವೆಯೋ? ನೆನಪಿಸಿಕೊಳ್ಳಿರಿ, ಆ ವ್ಯಕ್ತಿಯು ಹೆಚ್ಚನ್ನು ಮಾಡಲು ಶಕ್ತನಾಗಿರದದಕ್ಕಾಗಿ ಈ ಮೊದಲೇ ಅತಿಯಾದ ದೋಷಿ ಭಾವವನ್ನು ತಾಳಿರಲೂಬಹುದು.
19 ಹಾಗಾದರೆ ಆ ಸಹೋದರ ಅಥವಾ ಸಹೋದರಿಗೆ ನೀವು ಹೇಗೆ ಸಹಾಯ ಮಾಡಬಲ್ಲಿರಿ? ತೀರ್ಮಾನಗಳನ್ನು ಮಾಡುವ ಮತ್ತು ಸಲಹೆಯನ್ನು ಕೊಡುವ ಮುಂಚೆ, ಕಿವಿಗೊಡಿರಿ! (ಜ್ಞಾನೋಕ್ತಿ 18:13) ವಿವೇಚನಾಭರಿತ ಪ್ರಶ್ನೆಗಳ ಮೂಲಕ ಆ ವ್ಯಕ್ತಿಯ ಹೃದಯದ ಭಾವನೆಗಳನ್ನು ‘ಹೊರ ಸೆಳೆಯಿರಿ.’ (ಜ್ಞಾನೋಕ್ತಿ 20:5) ಈ ಭಾವನೆಗಳನ್ನು ಅಸಡ್ಡೆಮಾಡಬೇಡಿ—ಅವುಗಳನ್ನು ಅಂಗೀಕರಿಸಿರಿ. ಯೆಹೋವನು ನಮ್ಮ ಕಾಳಜಿವಹಿಸುತ್ತಾನೆಂಬ ಮತ್ತು ಕೆಲವು ಸಾರಿ ನಮ್ಮ ಪರಿಸ್ಥಿತಿಗಳು ನಮ್ಮನ್ನು ಪರಿಮಿತಗೊಳಿಸುತ್ತವೆಂದು ಆತನು ತಿಳಿದುಕೊಳ್ಳುತ್ತಾನೆಂಬ ಪುನರ್ಆಶ್ವಾಸನೆಯು ಬಳಲಿದವನಿಗೆ ಬೇಕಾದೀತು. (1 ಪೇತ್ರ 5:7) ಹಿರಿಯರು ಅಂತಹ ‘ಅನುಕಂಪವನ್ನು’ ತೋರಿಸುವಾಗ, ಬಳಲಿಹೋದವರು ‘ತಮ್ಮ ಪ್ರಾಣಗಳಿಗೆ ವಿಶ್ರಾಂತಿ’ಯನ್ನು ಕಂಡುಕೊಳ್ಳುವರು. (1 ಪೇತ್ರ 3:8; ಮತ್ತಾಯ 11:28-30) ಅಂತಹ ವಿಶ್ರಾಂತಿಯನ್ನು ಅವರು ಕಂಡುಕೊಳ್ಳುವಾಗ, ಹೆಚ್ಚನ್ನು ಮಾಡುವಂತೆ ಅವರಿಗೆ ಹೇಳುವ ಅಗತ್ಯವಿರುವುದಿಲ್ಲ; ಯೆಹೋವನ ಸೇವೆಯಲ್ಲಿ ತಾವು ಸಮಂಜಸವಾಗಿ ಮಾಡಸಾಧ್ಯವಿರುವುದೆಲ್ಲವನ್ನು ಮಾಡುವಂತೆ ಅವರ ಹೃದಯವು ಅವರನ್ನು ಪ್ರೇರೇಪಿಸುವುದು.—ಹೋಲಿಸಿ 2 ಕೊರಿಂಥ 8:12; 9:7.
20. ಈ ದುಷ್ಟ ಸಂತತಿಯ ಅಂತ್ಯವು ಇಷ್ಟು ಹತ್ತಿರವಾಗಿರುವಾಗ, ನಾವೇನನ್ನು ಮಾಡಲು ದೃಢನಿಶ್ಚಯದಿಂದಿರಬೇಕು?
20 ನಿಜವಾಗಿಯೂ ನಾವು ಇಡೀ ಮಾನವ ಇತಿಹಾಸದಲ್ಲೇ ಅತ್ಯಂತ ಕಷ್ಟದ ಸಮಯದಲ್ಲಿ ಜೀವಿಸುತ್ತಿದ್ದೇವೆ. ನಾವು ಅಂತ್ಯಕಾಲಕ್ಕೆ ತೀವ್ರವಾಗಿ ಸಮೀಪಿಸುತ್ತಿರುವಂತೆ, ಸೈತಾನನ ಲೋಕದಲ್ಲಿ ಜೀವಿಸುವ ಒತ್ತಡಗಳು ಹೆಚ್ಚಾಗುತ್ತಾ ಬರುತ್ತಿವೆ. ನೆನಪಿಡಿರಿ, ಬೇಟೆಯಾಡುವ ಸಿಂಹದೋಪಾದಿ, ಪಿಶಾಚನು ನಮ್ಮನ್ನು ಸುಲಭ ಬೇಟೆಯಾಗಿ ಮಾಡಿ ತನ್ನ ಸಾನ್ವುಕೂಲಕ್ಕೆ ತಿರುಗಿಸಲು, ನಾವು ಬಳಲಿಹೋಗುವಂತೆಯೂ ಬಿಟ್ಟುಕೊಡುವಂತೆಯೂ ಕಾಯುತ್ತಾನೆ. ಯೆಹೋವನು ದಣಿದವರಿಗೆ ಬಲವನ್ನು ಕೊಡುತ್ತಾನೆಂಬುದಕ್ಕೆ ನಾವೆಷ್ಟು ಕೃತಜ್ಞರಾಗಿರಬಲ್ಲೆವು! ಎತ್ತರಕ್ಕೇರುತ್ತಿರುವ ಹದ್ದಿನ ಪ್ರಬಲವಾದ ರೆಕ್ಕೆಗಳನ್ನು ನಮಗೆ ಒದಗಿಸುತ್ತಾನೋ ಎಂಬಂತೆ, ಮುಂದುವರಿಯಲು ಬೇಕಾದ ಬಲವನ್ನು ನಮಗೆ ಕೊಡಲು ಯೆಹೋವನು ಮಾಡಿರುವ ಒದಗಿಸುವಿಕೆಯ ಪೂರ್ಣ ಸದುಪಯೋಗವನ್ನು ನಾವು ಮಾಡುವಂತಾಗಲಿ. ಈ ದುಷ್ಟ ಸಂತತಿಯ ಅಂತ್ಯವು ಇಷ್ಟು ಹತ್ತಿರವಿರಲಾಗಿ, ನಿತ್ಯ ಜೀವದ ಬಹುಮಾನಕ್ಕಾಗಿರುವ ನಮ್ಮ ಓಟದಲ್ಲಿ ಈಗ ಓಡುವುದನ್ನು ನಿಲ್ಲಿಸುವ ಸಮಯವಾಗಿರುವುದಿಲ್ಲ.—ಇಬ್ರಿಯ 12:1.
ನಿಮ್ಮ ಉತ್ತರವೇನು?
◻ ನಮ್ಮ ಪ್ರಾರ್ಥನೆಗಳಿಗೆ ಉತ್ತರವಾಗಿ ಯೆಹೋವನು ಏನು ಮಾಡುವಂತೆ ನಾವು ಅಪೇಕ್ಷಿಸಬಲ್ಲೆವು?
◻ ನಮ್ಮ ಕ್ರೈಸ್ತ ಸಹೋದರತ್ವದಿಂದ ನಾವು ಯಾವ ವಿಧಗಳಲ್ಲಿ ಬಲವನ್ನು ಪಡೆಯಬಹುದು?
◻ ಪುನಃ ಬಲವನ್ನು ಪಡೆಯುವಂತೆ ದೇವರ ವಾಕ್ಯವು ನಮಗೆ ಹೇಗೆ ಸಹಾಯ ಮಾಡುತ್ತದೆ?
◻ ಬಳಲಿದವರು ಬಲವನ್ನು ಪುನಃ ಹೊಂದುವಂತೆ ಸಹಾಯ ಮಾಡಲು ಹಿರಿಯರು ಏನು ಮಾಡಬಲ್ಲರು?
[ಪುಟ 17 ರಲ್ಲಿರುವ ಚಿತ್ರ]
ಅತಿಥಿ ಸತ್ಕಾರವನ್ನು ಮಾಡುವಾಗ, ಯಾರಿಗೆ ಪ್ರೋತ್ಸಾಹದ ಅಗತ್ಯವಿದೆಯೋ ಅವರನ್ನು ಮರೆಯದಿರೋಣ
[ಪುಟ 18 ರಲ್ಲಿರುವ ಚಿತ್ರ]
ಬಳಲಿದವರಿಗೆ ತಾವೆಷ್ಟು ಪ್ರೀತಿಸಲ್ಪಡುತ್ತೇವೆಂದು ತಿಳಿಯುವಂತೆ ಸಹಾಯ ಮಾಡಲು ಹಿರಿಯರು ಯೆಹೋವನನ್ನು ಕೇಳಿಕೊಳ್ಳಬಲ್ಲರು.