ರಾಜ್ಯ ಘೋಷಕರು ವರದಿ ಮಾಡುತ್ತಾರೆ
“ದೇವರ ವಾಕ್ಯವು ಪ್ರಬಲವಾಗುತ್ತಾ ಹೋಯಿತು”
ಕ್ರೈಸ್ತ ಸಭೆಯು ರಚಿಸಲ್ಪಟ್ಟ ಕೆಲವು ತಾಸುಗಳೊಳಗೆ ಅದು ಸುಮಾರು 120 ಸದಸ್ಯರಿಂದ 3,000ಕ್ಕೂ ಹೆಚ್ಚು ಬೆಳೆಯಿತು. (ಅ. ಕೃತ್ಯಗಳು 1:15; 2:41) ಬೈಬಲು ವಿವರಿಸುವುದೇನೆಂದರೆ “ದೇವರ ವಾಕ್ಯವು ಪ್ರಬಲವಾಗುತ್ತಾ ಹೋಯಿತು, ಮತ್ತು ಯೆರೂಸಲೇಮಿನಲ್ಲಿದ್ದ ಶಿಷ್ಯರ ಸಂಖ್ಯೆಯು ಬಹಳವಾಗಿ ಹೆಚ್ಚುತ್ತಾ ಬಂತು.” (ಅ. ಕೃತ್ಯಗಳು 6:7, NW) ಕೇವಲ ಕೆಲವೇ ವರ್ಷಗಳಲ್ಲಿ, ಹೊಸತಾಗಿ ರಚಿಸಲ್ಪಟ್ಟ ಸಭೆಯು, ಆಫ್ರಿಕ, ಏಷ್ಯಾ ಮತ್ತು ಯೂರೋಪಿನಲ್ಲಿ ಕ್ರೈಸ್ತರ ಭೂಖಂಡಮಧ್ಯದ ಒಂದು ಸಂಸ್ಥೆಯಾಯಿತು.
ತದ್ರೀತಿಯಲ್ಲಿ ಇಂದು ಕ್ರೈಸ್ತ ಸಭೆಯು ತೀವ್ರ ಬೆಳವಣಿಗೆಯನ್ನು ಅನುಭವಿಸುತ್ತಿದೆ. ಉದಾಹರಣೆಗಾಗಿ, ಮೆಕ್ಸಿಕೊದಲ್ಲಿ, ಕೇವಲ ಐದು ವರ್ಷಗಳೊಳಗೆ ರಾಜ್ಯ ಘೋಷಕರ ಸಂಖ್ಯೆಯು 1,30,000ದಿಂದ 4,43,640ಕ್ಕಿಂತಲೂ ಹೆಚ್ಚು ಬೆಳೆದಿದೆ! 1995ರಲ್ಲಿ ಮೆಕ್ಸಿಕೊದಲ್ಲಿರುವ 59 ಜನರಲ್ಲಿ ಒಬ್ಬನು, ಯೆಹೋವನ ಸಾಕ್ಷಿಗಳಿಂದ ಆಚರಿಸಲ್ಪಟ್ಟಂತೆ ಕ್ರಿಸ್ತನ ಮರಣದ ಜ್ಞಾಪಕವನ್ನು ಹಾಜರಾದನು. ಆದರೂ, ಮುಂದಿನ ಅನುಭವದಿಂದ ದೃಷ್ಟಾಂತಿಸಲ್ಪಟ್ಟಿರುವಂತೆ, ಆ ದೇಶದಲ್ಲಿನ ಆತ್ಮಿಕ ಕೊಯ್ಲು ಪೂರ್ಣಗೊಂಡಿಲ್ಲ.—ಮತ್ತಾಯ 9:37, 38.
ಚಿಯಾಪಾಸ್ ರಾಜ್ಯದ ಒಂದು ಪಟ್ಟಣದಲ್ಲಿ, ಯೆಹೋವನ ಸಾಕ್ಷಿಗಳು ಆ ಕ್ಷೇತ್ರದಲ್ಲಿ ಸುಮಾರು 20 ವರ್ಷಗಳಿಂದ ಸುವಾರ್ತೆಯನ್ನು ಸಾರಿದ ನಂತರವೂ, ಯಾರೊಬ್ಬರೂ ಅವರೊಂದಿಗೆ ಒಂದು ಮನೆ ಬೈಬಲ್ ಅಭ್ಯಾಸವನ್ನು ಸ್ವೀಕರಿಸಲಿಲ್ಲ. ಪಟ್ಟಣದ ಅನೇಕ ಜನರು, ಹಿಂಸಾಚಾರಿ ಎಂಬ ಖ್ಯಾತಿಯನ್ನು ಹೊಂದಿದ್ದ ಒಬ್ಬ ಮನುಷ್ಯನಿಂದಾಗಿ ಭಯಗೊಂಡಿದ್ದರೆಂದು ವ್ಯಕ್ತವಾಗುತ್ತಿತ್ತು. ತಾವು ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸುತ್ತಿರುವುದನ್ನು ಅವನು ಕಂಡುಹಿಡಿಯುವಲ್ಲಿ ಅವನು ತೋರಿಸುವ ಪ್ರತಿವರ್ತನೆಯ ಕುರಿತಾಗಿ ಅವರು ಭಯದಿಂದಿದ್ದರು.
ಈ ಕ್ಷೇತ್ರಕ್ಕೆ ಸ್ಥಳಾಂತರಿಸಿದ ಇಬ್ಬರು ಧೈರ್ಯಶಾಲಿ ಸಾಕ್ಷಿಗಳು, ಸಂಬಂಧಪಟ್ಟ ಮನುಷ್ಯನ ಹತ್ತಿರ ನೇರವಾಗಿ ಹೋಗಿ ಸಮಸ್ಯೆಯನ್ನು ನಿರ್ವಹಿಸಲು ನಿರ್ಣಯಿಸಿದರು. ಅವನ ಮನೆಗೆ ಅವರು ಆಗಮಿಸಿದಾಗ, ಅವನ ಹೆಂಡತಿ ಬಾಗಿಲಿಗೆ ಬಂದಳು ಮತ್ತು ಅವರ ಸಂದೇಶಕ್ಕೆ ಸೌಜನ್ಯದಿಂದ ಕಿವಿಗೊಟ್ಟಳು. ಭೂಮಿಯ ಮೇಲೆ ಪ್ರಮೋದವನವೊಂದರಲ್ಲಿ ಜೀವಿಸುವುದರ ಕುರಿತಾಗಿ ಬೈಬಲ್ ಏನು ಹೇಳುತ್ತದೊ, ಅದರಲ್ಲಿ ಅವಳು ವಿಶೇಷವಾಗಿ ಆಸಕ್ತಳಾಗಿದ್ದಳು. ಆದರೆ ತಾನು ಬೈಬಲನ್ನು ಅಭ್ಯಾಸಿಸಿದರೆ ತನ್ನ ಗಂಡನು ತುಂಬ ಕಷ್ಟಗಳನ್ನು ಉಂಟುಮಾಡುವನೆಂಬುದನ್ನು ಅವಳು ಒಪ್ಪಿಕೊಂಡಳು. ಬೈಬಲ್ ಏನು ಹೇಳುತ್ತದೋ ಅದನ್ನು ಅವಳು ಜಾಗರೂಕತೆಯಿಂದ ಪರಿಶೀಲಿಸದಿರುವಲ್ಲಿ, ದೇವರಿಗೆ ಸೇವೆ ಸಲ್ಲಿಸುವ ಮತ್ತು ಭೂಮಿಯ ಮೇಲೆ ಸದಾಕಾಲ ಜೀವನವನ್ನು ಆನಂದಿಸುವ ವಿಧವನ್ನು ಆಕೆ ಎಂದೂ ಕಲಿಯಲಾರಳೆಂದು ಸಾಕ್ಷಿಗಳು ವಿವರಿಸಿದರು. ಅವಳು ಒಂದು ಬೈಬಲ್ ಅಭ್ಯಾಸವನ್ನು ಸ್ವೀಕರಿಸಿದಳು.
ನಿರೀಕ್ಷಿಸಿದಂತೆ, ಆಕೆಯ ಗಂಡನು ಅವಳ ನಿರ್ಣಯದೊಂದಿಗೆ ಸಂತೋಷಿತನಾಗಿರಲಿಲ್ಲ. ಅವಳು ತನ್ನ ವಾಹನವನ್ನು ಇತರ ಉದ್ದೇಶಗಳಿಗಾಗಿ ಉಪಯೋಗಿಸಬಹುದಿತ್ತಾದರೂ, ಕ್ರೈಸ್ತ ಕೂಟಗಳಿಗೆ ಹಾಜರಾಗಲು ಅದನ್ನು ಉಪಯೋಗಿಸುವುದರಿಂದ ಅವನು ಅವಳನ್ನು ನಿಷೇಧಿಸಿದನು. ಅವನ ವಿರೋಧದ ಹೊರತೂ, ಹತ್ತು ಕಿಲೊಮೀಟರ್ಗಳಷ್ಟು ದೂರದಲ್ಲಿದ್ದ, ಯೆಹೋವನ ಸಾಕ್ಷಿಗಳ ಅತಿ ಹತ್ತಿರದ ರಾಜ್ಯ ಸಭಾಗೃಹಕ್ಕೆ ಅವಳು ಕ್ರಮವಾಗಿ ನಡೆದುಕೊಂಡು ಹೋದಳು. ಬೇಗನೇ ಪಟ್ಟಣದಲ್ಲಿದ್ದ ಇತರರು ಅವಳ ಧೈರ್ಯ ಮತ್ತು ದೃಢನಿಶ್ಚಯವನ್ನು ಗಮನಿಸಿದರು. ತಮ್ಮ ಮನೆಗಳಿಗೆ ಸಾಕ್ಷಿಗಳು ಭೇಟಿ ನೀಡಿದಾಗ ಜನರು ಆಲಿಸಲಾರಂಭಿಸಿದರು. ಕೆಲವರು ಆ ಹೆಂಗಸಿನೊಂದಿಗೆ ಕೂಟಗಳಿಗೂ ಹೋಗಲು ಜೊತೆಗೂಡಲಾರಂಭಿಸಿದರು. ಸ್ವಲ್ಪ ಸಮಯದ ನಂತರ, ಆ ಸಾಕ್ಷಿಗಳು ಆ ಪಟ್ಟಣದಲ್ಲಿ ಸುಮಾರು 20 ಬೈಬಲ್ ಅಭ್ಯಾಸಗಳನ್ನು ನಡಿಸುತ್ತಿದ್ದರು!
ಈ ಹೆಂಗಸಿನ ಒಬ್ಬ ಸ್ನೇಹಿತೆಯೂ ತನ್ನ ಗಂಡನ ವಿರೋಧದ ಹೊರತೂ ಬೈಬಲನ್ನು ಅಭ್ಯಾಸಿಸಲು ನಿರ್ಣಯಿಸಿದಳು. ಆಶ್ಚರ್ಯಜನಕವಾಗಿ, ಅವಳು ಹೀಗೆ ಮಾಡುವಂತೆ ಆ ಮೊದಲ ಹೆಂಗಸಿನ ಗಂಡನಿಂದ ಉತ್ತೇಜಿಸಲ್ಪಟ್ಟಿದ್ದಳು. ಅವನು ಆಕೆಯ ಗಂಡನೊಂದಿಗೆ ಮಾತಾಡಿದ ನಂತರ, ವಿರೋಧವು ನಿಂತಿತು. ಹೀಗೆ ಬೈಬಲ್ ಸತ್ಯದ ಬೀಜವು ಕೊನೆಗೆ ಚಿಗುರಿದ್ದು 20 ವರ್ಷಗಳ ನಂತರ. ಈಗ ಸುವಾರ್ತೆಯನ್ನು ಸಾರುತ್ತಿರುವ ಈ ಇಬ್ಬರು ಹೆಂಗಸರನ್ನು ಒಳಗೂಡಿಸಿ, 15ಕ್ಕಿಂತಲೂ ಹೆಚ್ಚು ಜನರು ಬೈಬಲನ್ನು ಅಭ್ಯಾಸಿಸುತ್ತಿದ್ದಾರೆ ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿದ್ದಾರೆ.