ಅವರು ಯೆಹೋವನ ಚಿತ್ತವನ್ನು ಮಾಡಿದರು
ಮೋಶೆ ಮತ್ತು ಆರೋನರು—ದೇವರ ವಾಕ್ಯದ ಧೀರ ಘೋಷಕರು
ದೃಶ್ಯವನ್ನು ಕಲ್ಪಿಸಿಕೊಳ್ಳಿ: ಎಂಬತ್ತು ವರ್ಷಪ್ರಾಯದವನಾದ ಮೋಶೆ ಮತ್ತು ಅವನ ಸಹೋದರ ಆರೋನನು, ಭೂಮಿಯಲ್ಲಿಯೇ ಅತ್ಯಂತ ಬಲಾಢ್ಯನಾದ—ಐಗುಪ್ತದ ಫರೋಹನ ಮುಂದೆ ನಿಂತಿದ್ದಾರೆ. ಐಗುಪ್ತ್ಯರಿಗೆ ಈ ಮನುಷ್ಯನು ದೇವರುಗಳ ಒಬ್ಬ ಪ್ರತಿನಿಧಿಗಿಂತ ಹೆಚ್ಚಿನವನು. ಅವನು ಸ್ವತಃ ಒಬ್ಬ ದೇವನೆಂದು ಅವರು ನಂಬುತ್ತಾರೆ. ಅವನು ಶೇನ್ಯಶಿರದ ದೇವತೆಯಾದ ಹೋರಸ್ನ ನೇರವಾದ ಅವತಾರವೆಂದು ನೋಡಲಾಗುತ್ತಿತ್ತು. ಐಸಿಸ್ ಮತ್ತು ಓಸೈರಿಸ್ನ ಜೊತೆಯಲ್ಲಿ ಹೋರಸನು ಐಗುಪ್ತದ ದೇವ-ದೇವತೆಗಳಲ್ಲಿ ಪ್ರಧಾನ ತ್ರಯೈಕ್ಯವನ್ನು ರೂಪಿಸಿದನು.
ಫರೋಹನನ್ನು ಸಮೀಪಿಸುವ ಯಾವನಾದರೂ ಅವನ ಕಿರೀಟದ ಮಧ್ಯದಿಂದ ಹೊರಚಾಚುವ ಒಂದು ನಾಗರ ಹಾವಿನ ತಲೆಯ ಭಯಸೂಚಕ ಪ್ರತಿರೂಪವನ್ನು ಗಮನಿಸದಿರಲು ಸಾಧ್ಯವಿದ್ದಿಲ್ಲ. ಈ ಸರ್ಪವು ಫರೋಹನ ಯಾವನೇ ಶತ್ರುವಿನ ಮೇಲೆ ಬೆಂಕಿ ಮತ್ತು ನಾಶನವನ್ನು ತರಶಕ್ತವಾಗಿತ್ತೆಂದು ಭಾವಿಸಲಾಗುತ್ತಿತ್ತು. ಈಗ ಮೋಶೆ ಮತ್ತು ಆರೋನರು ಈ ರಾಜ-ದೇವನ ಮುಂದೆ ಒಂದು ಅಭೂತಪೂರ್ವ ವಿನಂತಿಯೊಂದಿಗೆ ಬಂದಿದ್ದಾರೆ—ದಾಸ್ಯದಲ್ಲಿರುವ ಇಸ್ರಾಯೇಲ್ಯರನ್ನು ಅವರು ತಮ್ಮ ದೇವರಾದ ಯೆಹೋವನಿಗೆ ಒಂದು ಹಬ್ಬವನ್ನು ನಡಸುವಂತೆ ಅವನು ಹೋಗಗೊಡಿಸಬೇಕು.—ವಿಮೋಚನಕಾಂಡ 5:1.
ಫರೋಹನ ಹೃದಯವು ಮೊಂಡಾಗಿರುವುದೆಂದು ಯೆಹೋವನು ಈ ಮೊದಲೇ ಮುಂತಿಳಿಸಿದ್ದನು. ಆದುದರಿಂದ ಅವನ ಪ್ರತಿಭಟನೆಯ ಪ್ರತ್ಯುತ್ತರವು ಮೋಶೆ ಮತ್ತು ಆರೋನರನ್ನು ಆಶ್ಚರ್ಯಪಡಿಸಲಿಲ್ಲ: “ಯೆಹೋವನೆಂಬವನು ಯಾರು? ನಾನು ಅವನ ಮಾತನ್ನು ಕೇಳಿ ಇಸ್ರಾಯೇಲ್ಯರನ್ನು ಹೋಗಗೊಡಿಸುವದೇಕೆ? ಯೆಹೋವನು ಯಾರೋ ನನಗೆ ಗೊತ್ತಿಲ್ಲ. ಇದು ಮಾತ್ರವಲ್ಲದೆ ಇಸ್ರಾಯೇಲ್ಯರು ಹೊರಟುಹೋಗುವದಕ್ಕೆ ನಾನು ಒಪ್ಪುವದೇ ಇಲ್ಲ.” (ವಿಮೋಚನಕಾಂಡ 4:21; 5:2) ಹೀಗೆ, ಒಂದು ನಾಟಕೀಯ ಮುಕಾಬಿಲೆಗಾಗಿ ರಂಗಸ್ಥಳವು ಸಿದ್ಧವಾಯಿತು. ಮುಂದಿನ ಸಂಧಿಸುವಿಕೆಯಲ್ಲಿ, ತಾವು ಸತ್ಯನೂ ಸರ್ವಶಕ್ತನೂ ಆದ ದೇವರನ್ನು ಪ್ರತಿನಿಧಿಸುತ್ತೇವೆಂಬ ಸ್ತಬ್ಧಗೊಳಿಸುವ ಪುರಾವೆಯನ್ನು ಮೋಶೆ ಮತ್ತು ಆರೋನರು ಸಾದರಪಡಿಸಿದರು.
ಒಂದು ಅದ್ಭುತ ಸಂಭವಿಸುತ್ತದೆ
ಯೆಹೋವನಿಂದ ನಿರ್ದೇಶಿಸಲ್ಪಟ್ಟ ಪ್ರಕಾರ, ಐಗುಪ್ತದ ದೇವರುಗಳ ಮೇಲೆ ಯೆಹೋವನ ಶ್ರೇಷ್ಠತ್ವವನ್ನು ರುಜುಪಡಿಸಿದ ಒಂದು ಅದ್ಭುತವನ್ನು ಆರೋನನು ನಡಸಿದನು. ಅವನು ಫರೋಹನ ಮುಂದೆ ನೆಲಕ್ಕೆ ತನ್ನ ಕೋಲನ್ನು ಬಿಸಾಡಿದನು, ಅದು ಕೂಡಲೇ ಒಂದು ದೊಡ್ಡ ಹಾವಾಯಿತು! ಈ ಅದ್ಭುತದಿಂದ ಕಂಗೆಟ್ಟ ಫರೋಹನು, ಮಂತ್ರವಿದ್ಯೆಯನ್ನು ನಡಸುವ ತನ್ನ ಪುರೋಹಿತರಿಗಾಗಿ ಕರೇಕಳುಹಿಸಿದನು.a ದುರಾತ್ಮ ಶಕ್ತಿಗಳ ಮೂಲಕ ಈ ಮನುಷ್ಯರು ತಮ್ಮ ಸ್ವಂತ ಕೋಲುಗಳಿಂದ ತತ್ಸಮಾನದ ಅದ್ಭುತವನ್ನು ಮಾಡಶಕ್ತರಾದರು.
ಫರೋಹ ಮತ್ತು ಅವನ ಪುರೋಹಿತರು ಉಬ್ಬಿಕೊಂಡಿದ್ದರೆ, ಅದು ತೀರ ಕ್ಷಣಿಕವಾಗಿತ್ತು. ಆರೋನನ ಹಾವು ಅವರ ಹಾವುಗಳಲ್ಲಿ ಒಂದೊಂದನ್ನು ನುಂಗಿಬಿಟ್ಟಾಗ ಅವರ ಮುಖಗಳನ್ನು ಚಿತ್ರಿಸಿಕೊಳ್ಳಿ! ಸತ್ಯ ದೇವರಾದ ಯೆಹೋವನಿಗೆ ಐಗುಪ್ತದ ದೇವತೆಗಳು ಏನೂ ಸರಿಸಾಟಿಯಲ್ಲವೆಂದು ಉಪಸ್ಥಿತರೆಲ್ಲರು ಕಾಣಶಕ್ತರಾದರು.—ವಿಮೋಚನಕಾಂಡ 7:8-13.
ಆದರೆ ಇದರ ಬಳಿಕವೂ, ಫರೋಹನ ಹೃದಯವು ಮೊಂಡಾಗಿ ಉಳಿಯಿತು. ದೇವರು ಐಗುಪ್ತದ ಮೇಲೆ ಹತ್ತು ವಿಪತ್ಕಾರಕ ಹೊಡೆತಗಳನ್ನು ಅಥವಾ ಬಾಧೆಗಳನ್ನು ತಂದ ಮೇಲೆ ಮಾತ್ರ ಫರೋಹನು ಕೊನೆಗೆ ಮೋಶೆ ಮತ್ತು ಆರೋನರಿಗೆ ಹೀಗೆ ಹೇಳಿದನು: “ನೀವೂ ಇಸ್ರಾಯೇಲ್ಯರೆಲ್ಲರೂ ನನ್ನ ಜನರ ಮಧ್ಯದಿಂದ ಹೊರಟುಹೋಗಿರಿ; ನೀವು ಕೇಳಿಕೊಂಡ ಮೇರೆಗೆ ಯೆಹೋವನನ್ನು ಆರಾಧಿಸಿರಿ.”—ವಿಮೋಚನಕಾಂಡ 12:31.
ನಮಗಾಗಿ ಪಾಠಗಳು
ಐಗುಪ್ತದ ಪ್ರಬಲ ಫರೋಹನನ್ನು ಸಮೀಪಿಸಲು ಮೋಶೆ ಮತ್ತು ಆರೋನರನ್ನು ಶಕ್ಯರನ್ನಾಗಿ ಮಾಡಿದ್ದು ಯಾವುದು? ಮೊದಮೊದಲು ಮೋಶೆಯು, “ಮಾತೂ ನಾಲಿಗೆಯೂ ಮಂದವಾಗಿವೆ” ಎಂದು ಹೇಳಿಕೊಳ್ಳುತ್ತಾ ತನ್ನ ಸಾಮರ್ಥ್ಯದಲ್ಲಿ ಆತ್ಮವಿಶ್ವಾಸದ ಕೊರತೆಯನ್ನು ವ್ಯಕ್ತಪಡಿಸಿದನು. ಯೆಹೋವನ ಬೆಂಬಲದ ಆಶ್ವಾಸನೆ ದೊರೆತ ಮೇಲೂ, ಅವನು ಬೇಡಿದ್ದು: “ಸ್ವಾಮೀ, ಈ ಕಾರ್ಯಕ್ಕೆ ಬೇರೊಬ್ಬನನ್ನು ನೇಮಿಸಬೇಕು.” ಬೇರೊಂದು ಮಾತಿನಲ್ಲಿ, ಬೇರೆ ಯಾರಾದರೊಬ್ಬನನ್ನು ಕಳುಹಿಸುವಂತೆ ಮೋಶೆಯು ದೇವರಿಗೆ ವಿನಂತಿಸಿದನು. (ವಿಮೋಚನಕಾಂಡ 4:10, 13) ಆದರೂ, ತನ್ನ ನೇಮಕವನ್ನು ನಿರ್ವಹಿಸಲು ಬೇಕಾದ ವಿವೇಕವನ್ನೂ ಬಲವನ್ನೂ ಮೋಶೆಗೆ ಕೊಟ್ಟು, ನಮ್ರನಾದ ಅವನನ್ನೇ ಯೆಹೋವನು ಉಪಯೋಗಿಸಿದನು.—ಅರಣ್ಯಕಾಂಡ 12:3.
ಇಂದು, ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ಸೇವಕರು “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡುವ” ಆಜ್ಞೆಯನ್ನು ನಿರ್ವಹಿಸುತ್ತಿದ್ದಾರೆ. (ಮತ್ತಾಯ 28:19, 20) ಈ ನಿಯೋಗವನ್ನು ನೆರವೇರಿಸುವುದರಲ್ಲಿ ನಮ್ಮ ಪಾಲನ್ನು ಮಾಡಲು, ಶಾಸ್ತ್ರೀಯ ಜ್ಞಾನದ ಅಥವಾ ನಮಗಿರಬಹುದಾದ ಯಾವುದೇ ಸಾಮರ್ಥ್ಯದ ಅತ್ಯುತ್ತಮ ಉಪಯೋಗವನ್ನು ನಾವು ಮಾಡಬೇಕು. (1 ತಿಮೊಥೆಯ 4:13-16) ನಮ್ಮ ಕುಂದು ಕೊರತೆಗಳ ಮೇಲೆ ಕೇಂದ್ರೀಕರಿಸುವ ಬದಲಿಗೆ, ದೇವರು ನಮಗೆ ಕೊಟ್ಟ ಯಾವುದೇ ನೇಮಕವನ್ನು ನಾವು ನಂಬಿಕೆಯಿಂದ ಸ್ವೀಕರಿಸೋಣ. ಆತನ ಚಿತ್ತವನ್ನು ಮಾಡಲು ಆತನು ನಮ್ಮನ್ನು ಯೋಗ್ಯರನ್ನಾಗಿ ಮಾಡಿ ಬಲಪಡಿಸಬಲ್ಲನು.—2 ಕೊರಿಂಥ 3:5, 6; ಫಿಲಿಪ್ಪಿ 4:13.
ಮೋಶೆಯು ಮಾನವ ಮತ್ತು ಪೈಶಾಚಿಕ ವಿರೋಧವನ್ನು ಎದುರಿಸಿದ್ದನಾದ ಕಾರಣ, ಅವನಿಗೆ ಖಂಡಿತವಾಗಿಯೂ ಅತಿಮಾನುಷ ಸಹಾಯದ ಅಗತ್ಯವಿತ್ತು. ಆದಕಾರಣ ಯೆಹೋವನು ಅವನಿಗೆ ಆಶ್ವಾಸನೆ ಕೊಟ್ಟದ್ದು: “ನಿನ್ನನ್ನು ಫರೋಹನಿಗೆ ದೇವರ ಸ್ಥಾನದಲ್ಲಿ ನೇಮಿಸಿದ್ದೇನೆ, ನೋಡು.” (ವಿಮೋಚನಕಾಂಡ 7:1) ಹೌದು, ಮೋಶೆಗೆ ದೈವಿಕ ಬೆಂಬಲ ಮತ್ತು ಅಧಿಕಾರವಿತ್ತು. ಯೆಹೋವನ ಆತ್ಮವು ಅವನ ಮೇಲೆ ಇದ್ದುದರಿಂದ, ಫರೋಹನಿಗಾಗಲಿ ಆ ಅಹಂಕಾರಿ ದೊರೆಯ ಸೇನೆಗಾಗಲಿ ಭಯಪಡಲು ಮೋಶೆಗೆ ಯಾವ ಕಾರಣವೂ ಇರಲಿಲ್ಲ.
ನಮ್ಮ ಶುಶ್ರೂಷೆಯನ್ನು ನೆರವೇರಿಸಲು ನಾವು ಸಹ ಯೆಹೋವನ ಪವಿತ್ರಾತ್ಮ ಅಥವಾ ಕಾರ್ಯಕಾರಿ ಶಕ್ತಿಯ ಮೇಲೆ ಆತುಕೊಳ್ಳಬೇಕು. (ಯೋಹಾನ 14:26; 15:26, 27) ದೈವಿಕ ಬೆಂಬಲದೊಂದಿಗೆ ನಾವು ದಾವೀದನು ಹಾಡಿದ ಮಾತುಗಳನ್ನು ಪ್ರತಿಧ್ವನಿಸಬಲ್ಲೆವು: “ದೇವರನ್ನು ನಂಬಿ ನಿರ್ಭಯದಿಂದಿರುವೆನು; ನರಪ್ರಾಣಿಗಳು ನನಗೆ ಮಾಡುವದೇನು?”—ಕೀರ್ತನೆ 56:11.
ತನ್ನ ಕನಿಕರದಲ್ಲಿ ಯೆಹೋವನು ಮೋಶೆಯನ್ನು ಅವನ ನೇಮಕದಲ್ಲಿ ಒಬ್ಬಂಟಿಗನಾಗಿ ಬಿಡಲಿಲ್ಲ. ಬದಲಿಗೆ ದೇವರು ಹೇಳಿದ್ದು: “ನಿನ್ನ ಅಣ್ಣನಾದ ಆರೋನನು ನಿನಗೋಸ್ಕರ ಪ್ರವಾದಿಯಾಗಿರುವನು; ನಾನು ನಿನಗೆ ಆಜ್ಞಾಪಿಸಿಸುವದನ್ನೆಲ್ಲಾ ನೀನು ಹೇಳಬೇಕು; . . . ನಿನ್ನ ಅಣ್ಣನಾದ ಆರೋನನೇ ಫರೋಹನ ಮುಂದೆ ಮಾತಾಡಬೇಕು.” (ವಿಮೋಚನಕಾಂಡ 7:1, 2) ಯಾವುದನ್ನು ಮೋಶೆಯು ಸಮಂಜಸವಾಗಿ ನಿರ್ವಹಿಸಲು ಶಕ್ತನಿದ್ದನೋ ಅದರ ಪರಿಮಿತಿಯೊಳಗೆ ಯೆಹೋವನು ಕಾರ್ಯನಡಿಸಿದ್ದು ಎಂತಹ ಒಲುಮೆಯು!
ಮಹೋನ್ನತನಾದ ಯೆಹೋವನ ಸಾಕ್ಷಿಗಳಾಗಿರುವ ಪಂಥಾಹ್ವಾನವನ್ನು ಸ್ವೀಕರಿಸುವ ಜೊತೆ ಕ್ರೈಸ್ತರ ಒಂದು ಸಾಹಚರ್ಯವನ್ನು ದೇವರು ನಮಗೆ ಒದಗಿಸುತ್ತಾನೆ. (1 ಪೇತ್ರ 5:9) ಆದುದರಿಂದ, ನಾವು ಸಂಧಿಸಬಹುದಾದ ಅಡಚಣೆಗಳ ಮಧ್ಯೆಯೂ, ದೇವರ ವಾಕ್ಯದ ಧೀರ ಘೋಷಕರಾದ ಮೋಶೆ ಮತ್ತು ಆರೋನರಂತೆ ನಾವಿರೋಣ.
[ಪಾದಟಿಪ್ಪಣಿ]
a “ಮಂತ್ರ ವಿದ್ಯೆಯನ್ನು ನಡಸುವ ಪುರೋಹಿತರು” ಎಂದು ತರ್ಜುಮೆಯಾದ ಹೀಬ್ರು ಶಬ್ದವು, ದೆವ್ವಗಳಿಗೆ ಮೀರಿದ ಅತಿಲೌಕಿಕ ಶಕ್ತಿಯನ್ನು ಪಡೆದವರೆಂದು ಹೇಳುತ್ತಿದ್ದ ಮಂತ್ರವಾದಿಗಳ ಒಂದು ಗುಂಪಿಗೆ ಸೂಚಿತವಾಗಿದೆ. ಈ ಮನುಷ್ಯರು ದೆವ್ವಗಳನ್ನೂ ವಿಧೇಯರಾಗುವಂತೆ ಆಹ್ವಾನ ಮಾಡಶಕ್ತರೆಂದೂ ಮತ್ತು ದೆವ್ವಗಳಿಗೆ ಈ ಮಂತ್ರವಾದಿಗಳ ಮೇಲೆ ಯಾವ ಶಕ್ತಿಯೂ ಇದ್ದಿರಲಿಲ್ಲವೆಂದೂ ನಂಬಲಾಗುತಿತ್ತು.
[ಪುಟ 25 ರಲ್ಲಿರುವ ಚಿತ್ರ]
ಮೋಶೆ ಮತ್ತು ಆರೋನರು ಫರೋಹನ ಮುಂದೆ ಯೆಹೋವನನ್ನು ಧೈರ್ಯದಿಂದ ಪ್ರತಿನಿಧಿಸಿದರು