“ದುಡಿಯಿರಿ; ಕೆಟ್ಟುಹೋಗುವ ಆಹಾರಕ್ಕಾಗಿ ದುಡಿಯಬೇಡಿರಿ”
ಡೇವಿಡ್ ಲನ್ಸ್ಟ್ರಮ್ ಹೇಳಿದಂತೆ
ನನ್ನ ತಮ್ಮ ಎಲ್ವುಡ್ ಮತ್ತು ನಾನು, ವಾಚ್ಟವರ್ ಫ್ಯಾಕ್ಟರಿ ಕಟ್ಟಡದ ಮೇಲೆ ಒಂದು ಹೊಸ ಸೂಚನಾಫಲಕವನ್ನು ಪೆಯಿಂಟ್ ಮಾಡುತ್ತಾ, ನೆಲದ ಮೇಲಿನಿಂದ ಒಂಬತ್ತು ಮೀಟರ್ಗಳಷ್ಟು ಮೇಲುಗಡೆಯಿದ್ದ ಅಟ್ಟಣೆಯೊಂದರ ಮೇಲೆ ನಿಂತಿದ್ದೆವು. 40ಕ್ಕಿಂತಲೂ ಹೆಚ್ಚು ವರ್ಷಗಳ ಬಳಿಕ, ಅದು ಇನ್ನೂ ಅಲ್ಲಿದೆ; ಅದು ಹೀಗೆ ಪ್ರಚೋದಿಸುತ್ತದೆ: “ದೇವರ ವಾಕ್ಯವಾದ ಪವಿತ್ರ ಬೈಬಲನ್ನು ಪ್ರತಿದಿನವೂ ಓದಿರಿ.” ಪ್ರತಿ ವಾರ, ಸಾವಿರಾರು ಜನರು ಪ್ರಸಿದ್ಧವಾದ ಬ್ರೂಕ್ಲಿನ್ ಬ್ರಿಡ್ಜನ್ನು ದಾಟುವಾಗ, ಈ ಸೂಚನಾಫಲಕವನ್ನು ನೋಡುತ್ತಾರೆ.
ನನ್ನ ಬಾಲ್ಯಾವಸ್ಥೆಯ ಅತ್ಯಾರಂಭದ ನೆನಪುಗಳು, ಕುಟುಂಬದ ಬಟ್ಟೆಗಳನ್ನು ಒಗೆಯುವ ದಿನವನ್ನು ಒಳಗೂಡುತ್ತವೆ. ಬೆಳಗ್ಗೆ 5 ಗಂಟೆಯಷ್ಟಕ್ಕೆ ತಾಯಿಯವರು ಹಾಸಿಗೆಯಿಂದ ಎದ್ದು, ನಮ್ಮ ದೊಡ್ಡ ಕುಟುಂಬಕ್ಕಾಗಿ ಬಟ್ಟೆಗಳನ್ನು ಒಗೆಯುತ್ತಿದ್ದರು, ಮತ್ತು ತಂದೆಯವರು ಕೆಲಸಕ್ಕಾಗಿ ತಯಾರಾಗುತ್ತಿದ್ದರು. ತಮ್ಮ ಉದ್ರೇಕದ ಚರ್ಚೆಗಳಲ್ಲಿ ಇನ್ನೊಂದನ್ನು ಅವರು ನಡೆಸುತ್ತಿದ್ದರು—ಕೋಟಿಗಟ್ಟಲೆ ವರ್ಷಗಳಿಂದ ಮನುಷ್ಯನು ಹೇಗೊ ವಿಕಾಸವಾದನೆಂದು ತಂದೆಯವರು ವಾಗ್ವಾದಿಸುತ್ತಿದ್ದರು ಮತ್ತು ಮಾನವರು ದೇವರ ನೇರವಾದ ಸೃಷ್ಟಿಯಾಗಿದ್ದರೆಂಬುದನ್ನು ರುಜುಪಡಿಸಲಿಕ್ಕಾಗಿ ತಾಯಿಯವರು ಬೈಬಲಿನಿಂದ ಉಲ್ಲೇಖಿಸುತ್ತಿದ್ದರು.
ನಾನು ಕೇವಲ ಏಳು ವರ್ಷ ಪ್ರಾಯದವನಾಗಿದ್ದಾಗಲೇ, ತಾಯಿಯವರಲ್ಲಿ ಸತ್ಯವಿತ್ತೆಂಬುದನ್ನು ನಾನು ಗ್ರಹಿಸಿದೆ. ನಾನು ತಂದೆಯವರನ್ನು ಬಹಳ ಪ್ರೀತಿಸುತ್ತಿದ್ದರೂ, ಅವರ ನಂಬಿಕೆಯು ಭವಿಷ್ಯತ್ತಿಗಾಗಿ ಯಾವುದೇ ನಿರೀಕ್ಷೆಯನ್ನು ಒದಗಿಸಲಿಲ್ಲವೆಂಬುದನ್ನು ನಾನು ಅವಲೋಕಿಸಸಾಧ್ಯವಿತ್ತು. ಅನೇಕ ವರ್ಷಗಳ ನಂತರ, ತಾನು ಬಹಳವಾಗಿ ಪ್ರೀತಿಸುತ್ತಿದ್ದ ಪುಸ್ತಕವಾದ ಬೈಬಲನ್ನು ಓದುವಂತೆ ಜನರನ್ನು ಉತ್ತೇಜಿಸಿದ ಸೂಚನಾಫಲಕವೊಂದನ್ನು ತನ್ನ ಪುತ್ರರಲ್ಲಿ ಇಬ್ಬರು ಪೆಯಿಂಟ್ ಮಾಡಿದ್ದರು ಎಂಬುದನ್ನು ತಿಳಿಯಲು ತಾಯಿಯವರು ಎಷ್ಟು ಸಂತೋಷಪಡುತ್ತಿದ್ದರು!
ಆದರೆ ನಾನು ನನ್ನ ಕಥೆಯನ್ನು ಕ್ರಮಾನುಗತವಾದ ವಿಧಾನದಲ್ಲಿ ಹೇಳುತ್ತಿಲ್ಲ. ಇಂತಹ ಸುಯೋಗದ ಕೆಲಸವು ನನಗೆ ಸಿಕ್ಕುವಂತಾದದ್ದು ಹೇಗೆ? ನಾನು ಜನಿಸುವುದಕ್ಕೆ ಮೂರು ವರ್ಷಗಳ ಮೊದಲು, 1906ರ ವರ್ಷಕ್ಕೆ ನಾನು ಹಿಂದಿರುಗಿಹೋಗುವ ಅಗತ್ಯವಿದೆ.
ತಾಯಿಯವರ ನಂಬಿಗಸ್ತ ಮಾದರಿ
ಆ ಸಮಯದಲ್ಲಿ ತಾಯಿ ಮತ್ತು ತಂದೆ ಹೊಸದಾಗಿ ಮದುವೆಯಾಗಿದ್ದರು ಮತ್ತು ಆ್ಯರಿಸೋನದಲ್ಲಿನ ಡೇರೆಯೊಂದರಲ್ಲಿ ವಾಸಿಸುತ್ತಿದ್ದರು. ಬೈಬಲ್ ವಿದ್ಯಾರ್ಥಿಯೊಬ್ಬಳು—ಆಗ ಯೆಹೋವನ ಸಾಕ್ಷಿಗಳು ಹೀಗೆ ಕರೆಯಲ್ಪಟ್ಟಿದ್ದರು—ಅಲ್ಲಿಗೆ ಬಂದು, ಸ್ಟಡೀಸ್ ಇನ್ ದ ಸ್ಕ್ರಿಪ್ಚರ್ಸ್ ಎಂಬ ಶಿರೋನಾಮವುಳ್ಳ, ಚಾರ್ಲ್ಸ್ ಟೇಸ್ ರಸಲ್ರಿಂದ ಬರೆಯಲ್ಪಟ್ಟಿದ್ದ ಪುಸ್ತಕಗಳ ಸರಣಿಯನ್ನು ತಾಯಿಯವರಿಗೆ ನೀಡಿದಳು. ಅವುಗಳನ್ನು ಓದುತ್ತಾ ಅವರು ಇಡೀ ರಾತ್ರಿ ಎಚ್ಚರವಾಗಿ ಉಳಿದರು ಮತ್ತು ತಾವು ಹುಡುಕುತ್ತಿದ್ದ ಸತ್ಯವು ಇದಾಗಿತ್ತೆಂಬುದನ್ನು ಅವರು ಬೇಗನೆ ಗ್ರಹಿಸಿದರು. ತಂದೆಯವರು ಉದ್ಯೋಗವನ್ನು ಹುಡುಕುವುದರಿಂದ ಹಿಂದಿರುಗುವ ವರೆಗೆ ಅವರಿಗೆ ಕಾಯಲು ಸಾಧ್ಯವಾಗುತ್ತಿರಲಿಲ್ಲ.
ಚರ್ಚುಗಳು ಕಲಿಸುತ್ತಿದ್ದ ಬೋಧನೆಗಳಿಂದ ತಂದೆಯವರು ಸಹ ಅಸಂತೃಪ್ತರಾಗಿದ್ದರು, ಆದುದರಿಂದ ಸ್ವಲ್ಪ ಸಮಯದ ವರೆಗೆ ಅವರು ಈ ಬೈಬಲ್ ಸತ್ಯತೆಗಳನ್ನು ಅಂಗೀಕರಿಸಿದರು. ಆದರೂ, ತದನಂತರ ಅವರು ಧಾರ್ಮಿಕವಾಗಿ ತಮ್ಮದೇ ಆದ ದಾರಿಯಲ್ಲಿ ಸಾಗಿದರು ಮತ್ತು ತಾಯಿಯವರು ಸತ್ಯ ಆರಾಧನೆಯನ್ನು ಬೆನ್ನಟ್ಟುವುದನ್ನೂ ಕಷ್ಟಕರವನ್ನಾಗಿ ಮಾಡಿದರು. ಆದರೂ ತಮ್ಮ ಮಕ್ಕಳ ಶಾರೀರಿಕ ಹಾಗೂ ಆತ್ಮಿಕ ಆವಶ್ಯಕತೆಗಳ ಕಾಳಜಿ ವಹಿಸುವುದನ್ನು ಅವರು ಎಂದಿಗೂ ನಿಲ್ಲಿಸಲಿಲ್ಲ.
ತಾಯಿಯವರು ಇಡೀ ದಿನ ಕಷ್ಟಪಟ್ಟು ಕೆಲಸ ಮಾಡಿದ ಬಳಿಕ, ಬೈಬಲಿನ ಒಂದು ಭಾಗವನ್ನು ನಮಗೆ ಓದಿಹೇಳಲಿಕ್ಕಾಗಿ ಅಥವಾ ಕೆಲವು ಆತ್ಮಿಕ ರತ್ನಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲಿಕ್ಕಾಗಿ, ಪ್ರತಿ ರಾತ್ರಿ ಮಹಡಿಯಿಂದ ಕೆಳಗಿಳಿದು ಬರುತ್ತಿದ್ದುದನ್ನು ನಾನು ಎಂದಿಗೂ ಮರೆಯಲಾರೆ. ತಂದೆಯವರು ಸಹ ಉದ್ಯೋಗಶೀಲರಾಗಿದ್ದರು, ಮತ್ತು ನಾನು ದೊಡ್ಡವನಾದಂತೆ ಅವರು ತಮ್ಮ ಪೆಯಿಂಟಿಂಗ್ ವೃತ್ತಿಯನ್ನು ನನಗೆ ಕಲಿಸಿದರು. ಹೌದು, ತಂದೆಯವರು ನನಗೆ ಕೆಲಸ ಮಾಡಲು ಕಲಿಸಿದರು, ಆದರೆ ಯೇಸು ಉಪದೇಶಿಸಿದಂತೆ ‘ಕೆಟ್ಟುಹೋಗದಿರುವ ಆಹಾರ’ಕ್ಕಾಗಿ ದುಡಿಯುವಂತೆ ತಾಯಿಯವರು ನನಗೆ ಕಲಿಸಿದರು.—ಯೋಹಾನ 6:27.
ಕಾಲಕ್ರಮೇಣ ನಮ್ಮ ಕುಟುಂಬವು ವಾಷಿಂಗ್ಟನ್ ಸ್ಟೇಟ್ನಲ್ಲಿರುವ ಎಲೆನ್ಸ್ಬರ್ಗ್ನ ಸಣ್ಣ ಪಟ್ಟಣದಲ್ಲಿ—ಸಿಆ್ಯಟ್ಲ್ನ ಪೂರ್ವಕ್ಕೆ ಸುಮಾರು 180 ಕಿಲೊಮೀಟರ್ಗಳಷ್ಟು ದೂರ—ನೆಲೆಸಿತು. ಮಕ್ಕಳಾದ ನಾವು ತಾಯಿಯವರೊಂದಿಗೆ ಬೈಬಲ್ ವಿದ್ಯಾರ್ಥಿಗಳ ಕೂಟಗಳನ್ನು ಹಾಜರಾಗಲು ಆರಂಭಿಸಿದಾಗ, ನಾವು ಖಾಸಗಿ ಮನೆಗಳಲ್ಲಿ ಸಂಧಿಸಿದೆವು. ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವ ಅಗತ್ಯವು ಒತ್ತಿಹೇಳಲ್ಪಟ್ಟಾಗ, ಎಲ್ಲಾ ಪುರುಷರು ನಮ್ಮ ಅಭ್ಯಾಸದ ಗುಂಪನ್ನು ಬಿಟ್ಟುಬಿಟ್ಟರು. ಆದರೆ ತಾಯಿಯವರು ಎಂದಿಗೂ ಸ್ಥೈರ್ಯಗೆಡಲಿಲ್ಲ. ಯೆಹೋವನ ಸಂಸ್ಥೆಯ ಮಾರ್ಗದರ್ಶನೆಯಲ್ಲಿ ಯಾವಾಗಲೂ ಭರವಸೆಯಿಡುವಂತೆ, ಇದು ನನ್ನ ಮೇಲೆ ಶಾಶ್ವತವಾದ ಪ್ರಭಾವವನ್ನು ಬಿಟ್ಟುಹೋಯಿತು.
ಕ್ರಮೇಣ ತಂದೆತಾಯಿಯರಿಗೆ ಒಂಬತ್ತು ಮಕ್ಕಳಾದರು. ನಾನು ಅವರ ಮೂರನೆಯ ಮಗುವಾಗಿದ್ದು, 1909, ಅಕ್ಟೋಬರ್ 1ರಂದು ಜನಿಸಿದೆ. ನಮ್ಮಲ್ಲಿ ಒಟ್ಟಿಗೆ ಆರು ಮಂದಿ, ತಾಯಿಯವರ ಅತ್ಯುತ್ತಮ ಮಾದರಿಯನ್ನು ಅನುಸರಿಸಿದೆವು ಮತ್ತು ಯೆಹೋವನ ಹುರುಪಿನ ಸಾಕ್ಷಿಗಳಾಗಿ ಪರಿಣಮಿಸಿದೆವು.
ಸಮರ್ಪಣೆ ಮತ್ತು ದೀಕ್ಷಾಸ್ನಾನ
ನನ್ನ ಹದಿಪ್ರಾಯದ ಕೊನೆಯಲ್ಲಿದ್ದಾಗ, ನಾನು ಯೆಹೋವನಿಗೆ ಸಮರ್ಪಣೆಯನ್ನು ಮಾಡಿಕೊಂಡೆ ಹಾಗೂ ಇದನ್ನು 1927ರಲ್ಲಿ ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸಿದೆ. ಸಿಆ್ಯಟ್ಲ್ನಲ್ಲಿನ ಈ ಹಿಂದೆ ಬ್ಯಾಪ್ಟಿಸ್ಟ್ ಚರ್ಚ್ ಆಗಿದ್ದ ಹಳೆಯ ಕಟ್ಟಡವೊಂದರಲ್ಲಿ ದೀಕ್ಷಾಸ್ನಾನವು ನಡೆಯಿತು. ಅವರು ಹಳೆಯ ಚೂಪು ಗೋಪುರವನ್ನು ತೆಗೆದುಹಾಕಿದುದಕ್ಕೆ ನಾನು ಹರ್ಷಿತನಾಗಿದ್ದೆ. ನಮ್ಮನ್ನು ಕಟ್ಟಡದ ತಳಭಾಗದಲ್ಲಿದ್ದಂತಹ ಕೊಳಕ್ಕೆ ಕರೆದೊಯ್ಯಲಾಯಿತು; ಅಲ್ಲಿ ನಮಗೆ ಧರಿಸಲಿಕ್ಕಾಗಿ ಉದ್ದನೆಯ ಕಪ್ಪು ನೀಳುಡುಪುಗಳನ್ನು ಕೊಡಲಾಯಿತು. ನಾವು ಶವಸಂಸ್ಕಾರಕ್ಕೆ ಹೋಗುತ್ತಿದ್ದೆವೊ ಎಂಬಂತೆ ಅದು ತೋರಿತು.
ಕೆಲವು ತಿಂಗಳುಗಳ ಬಳಿಕ ನಾನು ಪುನಃ ಸಿಆ್ಯಟ್ಲ್ನಲ್ಲಿದ್ದೆ, ಮತ್ತು ಈ ಸಲ ನಾನು ಮನೆಯಿಂದ ಮನೆಯ ಸಾಕ್ಷಿಕಾರ್ಯದ ನನ್ನ ಮೊದಲ ಅನುಭವವನ್ನು ಪಡೆದುಕೊಂಡೆ. “ಬೀದಿಯ ಈ ಭಾಗದಲ್ಲಿ ನೀನು ಸಾಕ್ಷಿನೀಡು, ನಾನು ಆ ಭಾಗಕ್ಕೆ ಹೋಗುವೆನು” ಎಂದು ಮುಂದಾಳುತ್ವವನ್ನು ವಹಿಸುತ್ತಿದ್ದವರೊಬ್ಬರು ನನ್ನನ್ನು ಮಾರ್ಗದರ್ಶಿಸಿದರು. ನನ್ನ ಪುಕ್ಕಲು ಸ್ವಭಾವದ ಹೊರತಾಗಿಯೂ, ಒಬ್ಬ ಬಹಳ ಒಳ್ಳೆಯ ಸ್ತ್ರೀಗೆ ನಾನು ಎರಡು ಜೊತೆ ಪುಸ್ತಿಕೆಗಳನ್ನು ನೀಡಿದೆ. ನಾನು ಎಲೆನ್ಸ್ಬರ್ಗ್ಗೆ ಹಿಂದಿರುಗಿದಾಗ, ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಭಾಗವಹಿಸುವುದನ್ನು ನಾನು ಮುಂದುವರಿಸಿದೆ, ಮತ್ತು ಈಗ ಸುಮಾರು 70 ವರ್ಷಗಳ ಬಳಿಕವೂ ಅಂತಹ ಸೇವೆಯು ಇನ್ನೂ ನನಗೆ ಒಂದು ಮಹಾ ಆನಂದವಾಗಿದೆ.
ಜಾಗತಿಕ ಮುಖ್ಯಕಾರ್ಯಾಲಯದಲ್ಲಿ ಸೇವೆ
ತದನಂತರ ಸ್ವಲ್ಪ ಸಮಯದಲ್ಲೇ, ಬ್ರೂಕ್ಲಿನ್ ಬೆತೆಲ್ನಲ್ಲಿ ವಾಚ್ ಟವರ್ ಸೊಸೈಟಿಯ ಜಾಗತಿಕ ಮುಖ್ಯಕಾರ್ಯಾಲಯದಲ್ಲಿ ಸೇವೆ ಮಾಡಿದ್ದವರೊಬ್ಬರು, ಅಲ್ಲಿ ಸೇವೆ ಮಾಡಲಿಕ್ಕಾಗಿ ನೀಡಿಕೊಳ್ಳುವಂತೆ ನನ್ನನ್ನು ಉತ್ತೇಜಿಸಿದರು. ನಮ್ಮ ಸಂಭಾಷಣೆಯು ನಡೆಸಲ್ಪಟ್ಟ ಸ್ವಲ್ಪ ಸಮಯಾನಂತರ, ಬೆತೆಲ್ನಲ್ಲಿ ಸಹಾಯದ ಅಗತ್ಯವಿದೆ ಎಂಬುದನ್ನು ತಿಳಿಯಪಡಿಸಿದ ಒಂದು ನೋಟೀಸು, ಕಾವಲಿನಬುರುಜು ಪತ್ರಿಕೆಯಲ್ಲಿ ಕಂಡುಬಂದಿತು. ಆದುದರಿಂದ ನಾನು ಅರ್ಜಿ ಹಾಕಿದೆ. 1930ರ ಮಾರ್ಚ್ 10ರಂದು, ನ್ಯೂ ಯಾರ್ಕ್, ಬ್ರೂಕ್ಲಿನ್ನಲ್ಲಿ ಬೆತೆಲ್ ಸೇವೆಗಾಗಿ ಬಂದು ವರದಿಮಾಡಿಕೊಳ್ಳುವಂತೆ ತಿಳಿಸಿದ ನೋಟೀಸನ್ನು ಪಡೆದುಕೊಂಡಾಗ ನನಗಾದ ಆನಂದವನ್ನು ನಾನೆಂದಿಗೂ ಮರೆಯಲಾರೆ. ‘ಕೆಟ್ಟುಹೋಗದಿರುವ ಆಹಾರ’ಕ್ಕಾಗಿ ಕೆಲಸಮಾಡುವ ನನ್ನ ಪೂರ್ಣ ಸಮಯದ ಜೀವನೋಪಾಯವು ಹೀಗೆ ಆರಂಭವಾಯಿತು.
ಒಬ್ಬ ಪೆಯಿಂಟರ್ನಾಗಿ ನನಗೆ ಅನುಭವವಿದ್ದುದರಿಂದ, ಏನನ್ನಾದರೂ ಪೆಯಿಂಟ್ ಮಾಡಲು ನಾನು ನೇಮಿಸಲ್ಪಟ್ಟಿದ್ದಿರಬಹುದೆಂದು ಒಬ್ಬನು ಆಲೋಚಿಸಬಹುದು. ಅದಕ್ಕೆ ಬದಲಾಗಿ, ಫ್ಯಾಕ್ಟರಿಯಲ್ಲಿನ ಹೊಲಿಗೆ ಯಂತ್ರದಲ್ಲಿ ಕೆಲಸ ಮಾಡುವುದು ನನ್ನ ಮೊದಲ ಉದ್ಯೋಗವಾಗಿತ್ತು. ಇದು ಬಹಳ ಬೇಸರ ಹಿಡಿಸುವಂತಹ ಒಂದು ಕೆಲಸವಾಗಿತ್ತಾದರೂ, ಆರಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ನಾನು ಆ ಕೆಲಸದಲ್ಲಿ ಆನಂದಿಸಿದೆ. ನಾವು ಅಕ್ಕರೆಯಿಂದ ಹಳೆಯ ಸಮರ ನೌಕೆಯೆಂದು ಕರೆದ ದೊಡ್ಡಗಾತ್ರದ ರೋಟರಿ ಪ್ರೆಸ್, ಪುಸ್ತಿಕೆಗಳನ್ನು ಉತ್ಪಾದಿಸಿತು; ಇವು ಒಂದು ಸಾಗಣೆ ಬೆಲ್ಟಿನ ಮೂಲಕ ನಮ್ಮ ಕೆಳ ಮಹಡಿಗೆ ಕಳುಹಿಸಲ್ಪಡುತ್ತಿದ್ದವು. ನಾವು ಸಮರ ನೌಕೆಯಿಂದ ಪುಸ್ತಿಕೆಗಳನ್ನು ಪಡೆದುಕೊಂಡಷ್ಟು ತೀವ್ರಗತಿಯಲ್ಲಿ ಅವುಗಳನ್ನು ನಾವು ಹೊಲಿಯಸಾಧ್ಯವೋ ಎಂಬುದನ್ನು ಅವಲೋಕಿಸಿ ಆನಂದಿಸಿದೆವು.
ತದನಂತರ ನಾವು ಎಲ್ಲಿ ಫೋನೋಗ್ರಾಫ್ಗಳನ್ನು ಮಾಡಿದೆವೊ ಆ ಒಂದು ಡಿಪಾರ್ಟ್ಮೆಂಟನ್ನೂ ಒಳಗೊಂಡು, ಇನ್ನೂ ಅನೇಕ ಡಿಪಾರ್ಟ್ಮೆಂಟ್ಗಳಲ್ಲಿ ನಾನು ಕೆಲಸ ಮಾಡಿದೆ. ಮನೆಯವರ ಹೊರಬಾಗಿಲಿನ ಮೆಟ್ಟಲುಗಳ ಬಳಿ ಬೈಬಲ್ ಸಂದೇಶಗಳನ್ನು ನುಡಿಸಲಿಕ್ಕಾಗಿ ನಾವು ಈ ಯಂತ್ರಗಳನ್ನು ಉಪಯೋಗಿಸಿದೆವು. ನಮ್ಮ ಡಿಪಾರ್ಟ್ಮೆಂಟ್ನಲ್ಲಿನ ಸ್ವಯಂಸೇವಕರಿಂದ ಲಂಬವಾಗಿರುವ ಒಂದು ಫೋನೋಗ್ರಾಫ್ ವಿನ್ಯಾಸಿಸಲ್ಪಟ್ಟು, ಉತ್ಪಾದಿಸಲ್ಪಟ್ಟಿತು. ಈ ಫೋನೋಗ್ರಾಫ್ ಮುಂದಾಗಿಯೇ ರೆಕಾರ್ಡ್ ಮಾಡಲ್ಪಟ್ಟ ಸಂದೇಶಗಳನ್ನು ನುಡಿಸಿತು ಮಾತ್ರವಲ್ಲ, ಪುಸ್ತಿಕೆಗಳನ್ನು ಮತ್ತು ಬಹುಶಃ ಒಂದು ಸ್ಯಾಂಡ್ವಿಚ್ ಅನ್ನು ಕೊಂಡೊಯ್ಯಲಿಕ್ಕಾಗಿ ವಿಶೇಷವಾದ ವಿಭಾಗಗಳನ್ನೂ ಹೊಂದಿತ್ತು. 1940ರಲ್ಲಿ, ಮಿಶಿಗನ್ನ ಡಿಟ್ರಯಿಟ್ ಅಧಿವೇಶನವೊಂದರಲ್ಲಿ, ಈ ಹೊಸ ಉಪಕರಣದ ಉಪಯೋಗವನ್ನು ಪ್ರತ್ಯಕ್ಷಾಭಿನಯಿಸುವ ಸುಯೋಗವು ನನಗೆ ದೊರಕಿತು.
ಹಾಗಿದ್ದರೂ, ಚಾತುರ್ಯವುಳ್ಳ ಯಂತ್ರಗಳಿಗಿಂತಲೂ ಹೆಚ್ಚಿನದ್ದನ್ನು ನಾವು ಮಾಡುತ್ತಿದ್ದೆವು. ನಾವು ಪ್ರಮುಖವಾದ ಆತ್ಮಿಕ ಸರಿಹೊಂದಿಸುವಿಕೆಗಳನ್ನು ಸಹ ಮಾಡುತ್ತಿದ್ದೆವು. ಉದಾಹರಣೆಗಾಗಿ, ಯೆಹೋವನ ಸಾಕ್ಷಿಗಳು ಕ್ರಾಸ್ ಮತ್ತು ಕ್ರೌನ್ (ಶಿಲುಬೆ ಮತ್ತು ಕಿರೀಟ)ಗಳಿದ್ದ ಒಂದು ಪಿನ್ ಅನ್ನು ಧರಿಸುತ್ತಿದ್ದರು. ಆದರೆ ಯೇಸುವು ಒಂದು ಶಿಲುಬೆಯ ಮೇಲಲ್ಲ, ಬದಲಾಗಿ ಒಂದು ನೇರವಾದ ಕಂಬದ ಮೇಲೆ ವಧಿಸಲ್ಪಟ್ಟನೆಂಬುದನ್ನು ನಾವು ತದನಂತರ ತಿಳಿದುಕೊಂಡೆವು. (ಅ. ಕೃತ್ಯಗಳು 5:30) ಆದುದರಿಂದ ಈ ಪಿನ್ಗಳನ್ನು ಧರಿಸುವುದು ನಿಲ್ಲಿಸಲ್ಪಟ್ಟಿತು. ಪಿನ್ನುಗಳಿಂದ ಕೊಂಡಿಗಳನ್ನು ಬಿಚ್ಚುವುದು ನನ್ನ ಸುಯೋಗವಾಗಿತ್ತು. ತದನಂತರ ಆ ಪಿನ್ನುಗಳಿಂದ ತೆಗೆಯಲ್ಪಟ್ಟ ಚಿನ್ನವು ಕರಗಿಸಲ್ಪಟ್ಟು, ವಿಕ್ರಯಿಸಲ್ಪಟ್ಟಿತು.
ವಾರದಲ್ಲಿ ನಮಗೆ ತೀರ ಕಾರ್ಯಮಗ್ನವಾದ ಐದೂವರೆ ದಿನಗಳ ಕೆಲಸದ ಕಾರ್ಯತಖ್ತೆಯಿತ್ತಾದರೂ, ವಾರಾಂತ್ಯಗಳಲ್ಲಿ ನಾವು ಕ್ರೈಸ್ತ ಶುಶ್ರೂಷೆಯಲ್ಲಿ ಒಳಗೊಂಡಿದ್ದೆವು. ಒಂದು ದಿನ, ನಮ್ಮಲ್ಲಿ 16 ಮಂದಿ ಬಂಧಿಸಲ್ಪಟ್ಟು, ಬ್ರೂಕ್ಲಿನ್ನಲ್ಲಿರುವ ಸೆರೆಮನೆಯಲ್ಲಿ ಹಾಕಲ್ಪಟ್ಟೆವು. ಏಕೆ? ಒಳ್ಳೇದು, ಎಲ್ಲಾ ಧರ್ಮವು ಸುಳ್ಳು ಧರ್ಮದೊಂದಿಗೆ ಸಮನಾರ್ಥಕವಾಗಿದೆಯೆಂದು ನಾವು ಆ ದಿವಸಗಳಲ್ಲಿ ಪರಿಗಣಿಸಿದ್ದೆವು. ಆದುದರಿಂದ ಒಂದು ಪಕ್ಕದಲ್ಲಿ “ಧರ್ಮವು ಒಂದು ಪಾಶ ಮತ್ತು ಒಂದು ಹೂಟವಾಗಿದೆ” ಎಂದೂ, ಇನ್ನೊಂದು ಪಕ್ಕದಲ್ಲಿ “ದೇವರನ್ನು ಮತ್ತು ರಾಜನಾದ ಕ್ರಿಸ್ತನನ್ನು ಸೇವಿಸಿರಿ” ಎಂದೂ ತಿಳಿಸಿದ ಸೂಚನಾಫಲಕಗಳನ್ನು ನಾವು ಕೊಂಡೊಯ್ದೆವು. ಈ ಸೂಚನಾಫಲಕಗಳನ್ನು ಕೊಂಡೊಯ್ದದ್ದಕ್ಕಾಗಿ ನಾವು ಸೆರೆಮನೆಯಲ್ಲಿ ಹಾಕಲ್ಪಟ್ಟಿದ್ದೆವು, ಆದರೆ ವಾಚ್ ಟವರ್ ಸೊಸೈಟಿಯ ವಕೀಲರಾಗಿದ್ದ, ಹೇಡನ್ ಕವಿಂಗ್ಟನ್ರು ನಮ್ಮನ್ನು ಜಾಮಿನಿನ ಮೇಲೆ ಬಿಡಿಸಿದರು. ಆ ಸಮಯದಲ್ಲಿ ಆರಾಧನಾ ಸ್ವಾತಂತ್ರ್ಯವನ್ನು ಒಳಗೊಂಡ ಅನೇಕ ಮೊಕದ್ದಮೆಗಳು, ಅಮೆರಿಕದ ಸುಪ್ರೀಮ್ ಕೋರ್ಟಿನಲ್ಲಿ ಹೋರಾಡಲ್ಪಡುತ್ತಿದ್ದವು, ಮತ್ತು ಬೆತೆಲಿನಲ್ಲಿದ್ದು ನಮ್ಮ ವಿಜಯಗಳ ಕುರಿತಾಗಿರುವ ವರದಿಗಳನ್ನು ನೇರವಾಗಿ ಕೇಳುವುದು ರೋಮಾಂಚಕವಾಗಿತ್ತು.
ಕ್ರಮೇಣವಾಗಿ ನನ್ನ ಪೆಯಿಂಟಿಂಗ್ ಅನುಭವವನ್ನು ಉಪಯೋಗಿಸಿಕೊಳ್ಳುವಂತೆ ಮಾಡಿದ ಕೆಲಸಗಳನ್ನು ಮಾಡುವಂತೆ ನಾನು ನೇಮಿಸಲ್ಪಟ್ಟೆ. ನ್ಯೂ ಯಾರ್ಕ್ ನಗರದ ಐದು ವಲಯಗಳಲ್ಲಿ ಒಂದಾದ ಸ್ಟ್ಯಾಟನ್ ಐಲೆಂಡ್ನಲ್ಲಿ, ನಮ್ಮ ರೇಡಿಯೊ ಸ್ಟೇಶನ್ ಡಬ್ಲ್ಯೂಬಿಬಿಆರ್ (WBBR) ಇತ್ತು. ಸ್ಟೇಶನ್ನ ರೇಡಿಯೊ ಗೋಪುರಗಳು 60 ಮೀಟರ್ಗಳಷ್ಟು ಎತ್ತರದಲ್ಲಿದ್ದವು, ಮತ್ತು ಅವುಗಳಲ್ಲಿ ಮೂರುಜೊತೆ ಸರಪಣಿ ತಂತಿಗಳಿದ್ದವು. ನಾನು .9 ಮೀಟರಿನಷ್ಟು ಉದ್ದವೂ 20 ಸೆಂಟಿಮೀಟರ್ಗಳಷ್ಟು ಅಗಲವೂ ಆದ ಹಲಗೆಯ ಮೇಲೆ ಕುಳಿತುಕೊಂಡೆ; ನನ್ನ ಜೊತೆಕೆಲಸಗಾರನೊಬ್ಬನು ನನ್ನನ್ನು ಮೇಲಕ್ಕೇರಿಸಿದನು. ಆ ಸಣ್ಣ ಆಸನದ ಮೇಲೆ—ನೆಲದಿಂದ ಬಹಳಷ್ಟು ಎತ್ತರದಲ್ಲಿ ಕುಳಿತುಕೊಂಡು, ನಾನು ಸರಪಣಿ ತಂತಿಗಳಿಗೆ ಹಾಗೂ ಗೋಪುರಗಳಿಗೆ ಪೆಯಿಂಟ್ ಮಾಡಿದೆ. ಆ ಕೆಲಸವನ್ನು ಮಾಡುತ್ತಿದ್ದಾಗ ಸುರಕ್ಷೆಗಾಗಿ ನಾವು ಬಹಳಷ್ಟು ಪ್ರಾರ್ಥಿಸುತ್ತಿರಲಿಲ್ಲವೊ ಎಂದೂ ಕೆಲವರು ನನ್ನನ್ನು ಕೇಳಿದ್ದಾರೆ!
ನಾನು ಎಂದಿಗೂ ಮರೆಯದಿರುವಂತಹ ಒಂದು ಬೇಸಗೆಕಾಲದ ಕೆಲಸವು ಯಾವುದೆಂದರೆ, ಕಿಟಕಿಗಳನ್ನು ತೊಳೆಯುವುದು ಮತ್ತು ಫ್ಯಾಕ್ಟರಿ ಕಟ್ಟಡದ ಕಿಟಕಿಯ ಹೊಸ್ತಿಲುಗಳಿಗೆ ಪೆಯಿಂಟ್ ಮಾಡುವುದಾಗಿತ್ತು. ನಾವು ಅದನ್ನು ನಮ್ಮ ಬೇಸಗೆ ರಜೆಯೆಂದು ಕರೆದೆವು. ನಾವು ನಮ್ಮ ಮರದ ಅಟ್ಟಣೆಯನ್ನು ಸಿದ್ಧಗೊಳಿಸಿದೆವು ಮತ್ತು ರಾಟೆ ಹಾಗೂ ಎತ್ತಿಗೆ ಯಂತ್ರದೊಂದಿಗೆ, ಎಂಟು ಅಂತಸ್ತಿನ ಕಟ್ಟಡದ ಮೇಲಕ್ಕೆ ಹಾಗೂ ಕೆಳಕ್ಕೆ ನಮ್ಮನ್ನು ಎಳೆದುಕೊಂಡೆವು.
ಬೆಂಬಲಾತ್ಮಕವಾದ ಒಂದು ಕುಟುಂಬ
1932ರಲ್ಲಿ ನನ್ನ ತಂದೆಯವರು ಮರಣಪಟ್ಟರು, ಮತ್ತು ನಾನು ಬೆತೆಲ್ ಸೇವೆಯನ್ನು ಬಿಟ್ಟು, ಮನೆಗೆ ಹೋಗಿ ತಾಯಿಯವರ ಕಾಳಜಿ ವಹಿಸಲಿಕ್ಕಾಗಿ ಸಹಾಯಮಾಡಬೇಕೋ ಎಂಬುದಾಗಿ ನಾನು ಚಿಂತಿಸಿದೆ. ಆದುದರಿಂದ ಒಂದು ದಿನ ಮಧ್ಯಾಹ್ನದೂಟಕ್ಕೆ ಮೊದಲು, ಸೊಸೈಟಿಯ ಅಧ್ಯಕ್ಷರಾಗಿದ್ದ ಸಹೋದರ ರದರ್ಫರ್ಡರು ಕುಳಿತುಕೊಂಡಂತಹ ಸ್ಥಳದಲ್ಲಿ—ಹೆಡ್ ಟೇಬಲ್—ಒಂದು ಚೀಟಿಯನ್ನು ಇಟ್ಟೆ. ಅದರಲ್ಲಿ ನಾನು ಅವರೊಂದಿಗೆ ಮಾತಾಡಲಿಕ್ಕಾಗಿ ಕೇಳಿಕೊಂಡೆ. ನನ್ನ ಚಿಂತೆಯ ಕುರಿತಾಗಿ ತಿಳಿದುಕೊಂಡು, ಇನ್ನೂ ಮನೆಯಲ್ಲಿ ವಾಸಿಸುತ್ತಿರುವ ಸಹೋದರರೂ ಸಹೋದರಿಯರೂ ನನಗಿದ್ದರೆಂಬುದನ್ನು ಕಂಡುಕೊಂಡ ಬಳಿಕ, ಅವರು ನನಗೆ ಕೇಳಿದ್ದು, “ಬೆತೆಲಿನಲ್ಲಿ ಉಳಿದುಕೊಂಡು ಕರ್ತನ ಕೆಲಸವನ್ನು ಮಾಡಲು ನೀನು ಬಯಸುತ್ತೀಯೊ?”
“ನಿಶ್ಚಯವಾಗಿ ಮಾಡಲು ಬಯಸುತ್ತೇನೆ” ಎಂದು ನಾನು ಉತ್ತರಿಸಿದೆ.
ಆದುದರಿಂದ ಬೆತೆಲಿನಲ್ಲಿ ಉಳಿಯಲಿಕ್ಕಾಗಿರುವ ನನ್ನ ನಿರ್ಧಾರದೊಂದಿಗೆ ಅವರು ಸಮ್ಮತಿಸುತ್ತಾರೊ ಇಲ್ಲವೊ ಎಂಬುದನ್ನು ನೋಡಲಿಕ್ಕಾಗಿ ತಾಯಿಯವರಿಗೆ ಪತ್ರ ಬರೆಯುವಂತೆ ಅವರು ನನಗೆ ಸಲಹೆ ನೀಡಿದರು. ನಾನು ಅದನ್ನೇ ಮಾಡಲಾಗಿ ನನ್ನ ನಿರ್ಧಾರದೊಂದಿಗಿನ ತಮ್ಮ ಸಂಪೂರ್ಣ ಸಮ್ಮತಿಯನ್ನು ವ್ಯಕ್ತಪಡಿಸುತ್ತಾ ಅವರು ನನಗೆ ಪುನಃ ಪತ್ರ ಬರೆದರು. ಸಹೋದರ ರದರ್ಫರ್ಡರ ದಯಾಪರತೆ ಮತ್ತು ಬುದ್ಧಿವಾದವನ್ನು ನಾನು ನಿಜವಾಗಿಯೂ ಗಣ್ಯಮಾಡಿದೆ.
ಬೆತೆಲ್ನಲ್ಲಿ ನಾನು ಕಳೆದ ಅನೇಕ ವರ್ಷಗಳ ಸಮಯದಲ್ಲಿ, ನಾನು ನನ್ನ ಕುಟುಂಬಕ್ಕೆ ಕ್ರಮವಾಗಿ ಪತ್ರಗಳನ್ನು ಬರೆದೆ ಮತ್ತು ತಾಯಿಯವರು ನನಗೆ ಉತ್ತೇಜನ ನೀಡಿದ್ದಂತೆಯೇ, ಯೆಹೋವನನ್ನು ಸೇವಿಸುವಂತೆ ಅವರನ್ನು ಉತ್ತೇಜಿಸಿದೆ. 1937ರ ಜುಲೈ ತಿಂಗಳಲ್ಲಿ ತಾಯಿಯವರು ಮರಣಪಟ್ಟರು. ನಮ್ಮ ಕುಟುಂಬಕ್ಕೆ ಅವರು ಎಂತಹ ಒಂದು ಸ್ಫೂರ್ತಿಯಾಗಿದ್ದರು! ಕೇವಲ ನನ್ನ ಹಿರಿಯ ಅಣ್ಣ ಮತ್ತು ಅಕ್ಕ—ಪೌಲ್ ಮತ್ತು ಎಸ್ತೆರ್—ಮತ್ತು ನನ್ನ ತಂಗಿ ಲೋಯಿಸ್ ಸಾಕ್ಷಿಗಳಾಗಲಿಲ್ಲ. ಹಾಗಿದ್ದರೂ, ಪೌಲ್ ನಮ್ಮ ಕೆಲಸಕ್ಕೆ ಅನುಕೂಲಕರವಾಗಿದ್ದನು ಮತ್ತು ನಾವು ನಮ್ಮ ಪ್ರಥಮ ರಾಜ್ಯ ಸಭಾಗೃಹವನ್ನು ಯಾವುದರ ಮೇಲೆ ಕಟ್ಟಿದೆವೊ, ಆ ಜಮೀನನ್ನು ಒದಗಿಸಿದನು.
1936ರಲ್ಲಿ ನನ್ನ ತಂಗಿ ಈವ ಪಯನೀಯರಳಾದಳು—ಅಥವಾ ಪೂರ್ಣ ಸಮಯದ ಪ್ರಚಾರಕಳಾದಳು. ಅದೇ ವರ್ಷದಲ್ಲಿ ಅವಳು ರಾಲ್ಫ್ ತಾಮಸ್ನನ್ನು ವಿವಾಹವಾದಳು, ಮತ್ತು 1939ರಲ್ಲಿ ಅವರು ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ಸೇವೆಸಲ್ಲಿಸಲಿಕ್ಕಾಗಿ ಸಂಚರಣಾ ಕೆಲಸಕ್ಕೆ ನೇಮಿಸಲ್ಪಟ್ಟರು. ತದನಂತರ ಅವರು ಎಲ್ಲಿ ರಾಜ್ಯ ಕಾರ್ಯದೊಂದಿಗೆ ಸಹಾಯ ಮಾಡುತ್ತಾ 25 ವರ್ಷಗಳನ್ನು ಕಳೆದರೋ ಆ ಮೆಕ್ಸಿಕೊ ದೇಶಕ್ಕೆ ಸ್ಥಳಾಂತರಿಸಿದರು.
1939ರಲ್ಲಿ ನನ್ನ ತಂಗಿಯರಾದ ಆ್ಯಲಿಸ್ ಮತ್ತು ಫ್ರ್ಯಾನ್ಸಸ್ ಕೂಡ ಪಯನೀಯರ್ ಸೇವೆಯನ್ನು ಸ್ವೀಕರಿಸಿದರು. 1941ರಲ್ಲಿ ಸೆಂಟ್ ಲೂಯಿಸ್ ಅಧಿವೇಶನದಲ್ಲಿ, ಯಾವುದನ್ನು ಉತ್ಪಾದಿಸಲಿಕ್ಕಾಗಿ ನಾನು ಸಹಾಯ ಮಾಡಿದ್ದೆನೊ ಆ ಫೋನೋಗ್ರಾಫ್ ಸಲಕರಣೆಯ ಉಪಯೋಗವನ್ನು ಪ್ರತ್ಯಕ್ಷಾಭಿನಯಿಸುತ್ತಾ, ಆ್ಯಲಿಸಳು ಒಂದು ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುತ್ತಿದ್ದುದನ್ನು ನೋಡುವುದು ಎಂತಹ ಒಂದು ಆನಂದವಾಗಿತ್ತು! ಕುಟುಂಬದ ಜವಾಬ್ದಾರಿಗಳ ಕಾರಣದಿಂದಾಗಿ ಆ್ಯಲಿಸಳು ಆಗಿಂದಾಗ್ಗೆ ತನ್ನ ಪಯನೀಯರ್ ಸೇವೆಯನ್ನು ನಿಲ್ಲಿಸಬೇಕಾಗಿತ್ತಾದರೂ, ಒಟ್ಟಿಗೆ ಅವಳು 40ಕ್ಕಿಂತಲೂ ಹೆಚ್ಚು ವರ್ಷಗಳನ್ನು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಕಳೆದಿದ್ದಾಳೆ. 1944ರಲ್ಲಿ ಫ್ರ್ಯಾನ್ಸಸ್ಳು ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ಗೆ ಹಾಜರಾದಳು ಮತ್ತು ಸ್ವಲ್ಪ ಕಾಲದ ವರೆಗೆ ಪೋರ್ಟರೀಕೊದಲ್ಲಿ ಒಬ್ಬ ಮಿಷನೆರಿಯೋಪಾದಿ ಸೇವೆಸಲ್ಲಿಸಿದಳು.
1940ಗಳ ಆರಂಭದಲ್ಲಿ, ಜೋಅಲ್ ಮತ್ತು ಎಲ್ವುಡ್—ಕುಟುಂಬದಲ್ಲಿನ ಅತ್ಯಂತ ಚಿಕ್ಕ ತಮ್ಮಂದಿರು—ಮೊಂಟ್ಯಾನದಲ್ಲಿ ಪಯನೀಯರರಾದರು. ಜೋಅಲ್ ಒಬ್ಬ ನಂಬಿಗಸ್ತ ಸಾಕ್ಷಿಯೋಪಾದಿ ಉಳಿದಿದ್ದು, ಈಗ ಒಬ್ಬ ಶುಶ್ರೂಷಾ ಸೇವಕನೋಪಾದಿ ಸೇವೆಸಲ್ಲಿಸುತ್ತಾನೆ. ನನ್ನ ಹೃದಯಕ್ಕೆ ತುಂಬಾ ಆನಂದವನ್ನು ತರುತ್ತಾ, 1944ರಲ್ಲಿ ಎಲ್ವುಡ್ ಬೆತೆಲ್ನಲ್ಲಿ ನನ್ನೊಂದಿಗೆ ಜೊತೆಗೂಡಿದನು. ನಾನು ಮನೆಬಿಟ್ಟಾಗ ಅವನು ಐದು ವರ್ಷಗಳಿಗಿಂತಲೂ ಚಿಕ್ಕ ಪ್ರಾಯದವನಾಗಿದ್ದನು. ಈ ಮುಂಚೆ ಗಮನಿಸಲಾದಂತೆ, ಫ್ಯಾಕ್ಟರಿ ಕಟ್ಟಡದ ಮೇಲಿನ “ದೇವರ ವಾಕ್ಯವಾದ ಪವಿತ್ರ ಬೈಬಲನ್ನು ಪ್ರತಿದಿನವೂ ಓದಿರಿ” ಎಂಬ ಆ ಸೂಚನಾಫಲಕವನ್ನು ಪೆಯಿಂಟ್ ಮಾಡುತ್ತಾ ನಾವಿಬ್ಬರೂ ಒಟ್ಟಿಗೆ ಕೆಲಸಮಾಡಿದೆವು. ಅನೇಕ ವರ್ಷಗಳಿಂದ ಆ ಸೂಚನಾಫಲಕವನ್ನು ನೋಡಿರುವ ಜನರಲ್ಲಿ ಎಷ್ಟು ಮಂದಿ ತಮ್ಮ ಬೈಬಲನ್ನು ಓದುವಂತೆ ಉತ್ತೇಜಿಸಲ್ಪಟ್ಟಿದ್ದಾರೆಂದು ನಾನು ಅನೇಕವೇಳೆ ಕುತೂಹಲಗೊಂಡಿದ್ದೇನೆ.
ಎಲ್ವುಡ್ ಎಮ ಫ್ಲೈಟ್ಳನ್ನು 1956ರಲ್ಲಿ ವಿವಾಹವಾಗುವ ವರೆಗೆ ಬೆತೆಲ್ನಲ್ಲಿ ಸೇವೆಮಾಡಿದನು. ಅನೇಕ ವರ್ಷಗಳ ವರೆಗೆ ಎಲ್ವುಡ್ ಮತ್ತು ಎಮ, ಸ್ವಲ್ಪ ಸಮಯದ ತನಕ ಆಫ್ರಿಕದ ಕೆನ್ಯದಲ್ಲಿ ಹಾಗೂ ಸ್ಪೆಯ್ನ್ನಲ್ಲಿ ಸೇವೆಮಾಡುತ್ತಾ, ಪೂರ್ಣ ಸಮಯದ ಶುಶ್ರೂಷೆಯಲ್ಲಿ ಒಟ್ಟಿಗೆ ಕೆಲಸಮಾಡಿದರು. ಎಲ್ವುಡ್ ಕ್ಯಾನ್ಸರ್ನಿಂದ ಬಾಧಿಸಲ್ಪಟ್ಟು, 1978ರಲ್ಲಿ ಸ್ಪೆಯ್ನ್ನಲ್ಲಿ ಮರಣಪಟ್ಟನು. ಇಂದಿನ ತನಕ ಎಮಳು ಸ್ಪೆಯ್ನ್ನಲ್ಲಿ ಪಯನೀಯರ್ ಕೆಲಸದಲ್ಲಿ ಉಳಿದಿದ್ದಾಳೆ.
ವಿವಾಹ ಮತ್ತು ಒಂದು ಕುಟುಂಬ
1953ರ ಸೆಪ್ಟೆಂಬರ್ ತಿಂಗಳಲ್ಲಿ, ನಾನು ಹಾಜರಾಗುತ್ತಿದ್ದ ಬ್ರೂಕ್ಲಿನ್ ಸೆಂಟರ್ ಕಾಂಗ್ರಿಗೇಶನ್ನಲ್ಲಿನ ಒಬ್ಬ ಪಯನೀಯರಳಾದ ಆ್ಯಲಿಸ್ ರಿವೇರಳನ್ನು ಮದುವೆಯಾಗಲಿಕ್ಕಾಗಿ ನಾನು ಬೆತೆಲನ್ನು ಬಿಟ್ಟೆ. ನನಗೆ ಸ್ವರ್ಗೀಯ ನಿರೀಕ್ಷೆಯಿತ್ತೆಂಬುದನ್ನು ಆ್ಯಲಿಸಳಿಗೆ ನಾನು ತಿಳಿಯಪಡಿಸಿದೆ, ಆದರೆ ನನ್ನನ್ನು ವಿವಾಹವಾಗುವುದರಲ್ಲಿ ಅವಳು ಇನ್ನೂ ಆಸಕ್ತಳಾಗಿದ್ದಳು.—ಫಿಲಿಪ್ಪಿ 3:14.
ಬೆತೆಲ್ನಲ್ಲಿ 23 ವರ್ಷಗಳ ಕಾಲ ಜೀವಿಸಿದ ಬಳಿಕ, ಆ್ಯಲಿಸಳನ್ನೂ ನನ್ನನ್ನೂ ಪಯನೀಯರ್ ಕೆಲಸದಲ್ಲಿ ಇರಿಸಿಕೊಳ್ಳಲಿಕ್ಕಾಗಿ ಪೆಯಿಂಟರ್ನೋಪಾದಿ ಸ್ಥಳಿಕ ಉದ್ಯೋಗವನ್ನು ಆರಂಭಿಸುವುದು ಒಂದು ದೊಡ್ಡ ಸರಿಹೊಂದಿಸುವಿಕೆಯಾಗಿತ್ತು. ಆರೋಗ್ಯದ ಕಾರಣಗಳಿಗಾಗಿ ಆ್ಯಲಿಸಳು ಪಯನೀಯರ್ ಸೇವೆಯನ್ನು ನಿಲ್ಲಿಸಬೇಕಾಗಿದ್ದಾಗಲೂ, ಅವಳು ಸದಾ ಬೆಂಬಲಾತ್ಮಕಳಾಗಿದ್ದಳು. 1954ರಲ್ಲಿ ನಾವು ನಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದೆವು. ಹೆರಿಗೆಯು ಸುಲಭವಾಗಿ ಆಗಲಿಲ್ಲವಾದರೂ, ನಮ್ಮ ಮಗನಾದ ಜಾನ್ ಸೌಖ್ಯವಾಗಿದ್ದನು. ಸಿಸೇರಿಯನ್ ಶಸ್ತ್ರಕ್ರಿಯೆಯ ಸಮಯದಲ್ಲಿ ಆ್ಯಲಿಸ್ ಎಷ್ಟು ರಕ್ತವನ್ನು ಕಳೆದುಕೊಂಡಿದ್ದಳೆಂದರೆ, ಅವಳು ಬದುಕುವಳೆಂದು ವೈದ್ಯರು ಸಹ ಆಲೋಚಿಸಿರಲಿಲ್ಲ. ಒಂದು ಬಿಂದುವಿನಲ್ಲಿ ಅವರಿಗೆ ನಾಡಿಯ ಮಿಡಿತವನ್ನು ಸಹ ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಆದರೂ ಅವಳು ಆ ರಾತ್ರಿ ಬದುಕುಳಿದಳು ಮತ್ತು ಸಕಾಲದಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡಳು.
ಕೆಲವು ವರ್ಷಗಳ ಬಳಿಕ, ಆ್ಯಲಿಸಳ ತಂದೆ ಮರಣಪಟ್ಟಾಗ, ಅವಳ ತಾಯಿಯೊಂದಿಗೆ ಇರಲಿಕ್ಕಾಗಿ ನಾವು ಲಾಂಗ್ ಐಲೆಂಡ್ಗೆ ಸ್ಥಳಾಂತರಿಸಿದೆವು. ನಮ್ಮಲ್ಲಿ ಒಂದು ಕಾರ್ ಇರಲಿಲ್ಲವಾದುದರಿಂದ ನಾನು ನಡೆದೆ ಅಥವಾ ಸಾಗಣೆಗಾಗಿ ನಾನು ಬಸ್ ಅಥವಾ ರೈಲುದಾರಿಯನ್ನು ಉಪಯೋಗಿಸಿದೆ. ಹೀಗೆ ಪಯನೀಯರ್ ಕೆಲಸದಲ್ಲಿ ಮುಂದುವರಿಯಲು ಹಾಗೂ ನನ್ನ ಕುಟುಂಬವನ್ನು ಬೆಂಬಲಿಸಲು ನಾನು ಶಕ್ತನಾದೆ. ಪೂರ್ಣ ಸಮಯದ ಸೇವೆಯ ಆನಂದಗಳು ಯಾವುದೇ ತ್ಯಾಗಗಳಿಗಿಂತ ಬಹಳ ಹೆಚ್ಚು ಭಾರಾಧಿಕ್ಯವಾಗಿವೆ. ಒಬ್ಬ ಸಾಕ್ಷಿಯಾಗಿ ಪರಿಣಮಿಸಲಿಕ್ಕಾಗಿ ಆಶಾಜನಕವಾದ ಬೇಸ್ ಬಾಲ್ ಜೀವನೋಪಾಯವನ್ನು ಬಿಟ್ಟುಬಿಟ್ಟ ಜೋ ನಾಟಾಲಿಯಂತಹ ಜನರಿಗೆ ಸಹಾಯ ಮಾಡುವುದು, ನನ್ನ ಅನೇಕ ಆಶೀರ್ವಾದಗಳಲ್ಲಿ ಕೇವಲ ಒಂದಾಗಿದೆ.
1967ರಲ್ಲಿ, ನ್ಯೂ ಯಾರ್ಕ್ ಕ್ಷೇತ್ರದಲ್ಲಿನ ಪರಿಸ್ಥಿತಿಗಳು ಹೆಚ್ಚು ಕೆಟ್ಟವುಗಳಾಗಿ ಪರಿಣಮಿಸಿದಂತೆ, ಆ್ಯಲಿಸ್ಳನ್ನೂ ಜಾನ್ನನ್ನೂ ನನ್ನ ಸ್ವಂತ ಊರಾದ ಎಲೆನ್ಸ್ಬರ್ಗ್ಗೆ ಹಿಂದಿರುಗಿ ಕರೆದುಕೊಂಡುಹೋಗಲು ನಾನು ನಿರ್ಧರಿಸಿದೆ. ನನ್ನ ತಾಯಿಯವರ ಅನೇಕ ಮಕ್ಕಳು ಹಾಗೂ ಮೊಮ್ಮಕ್ಕಳು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಅವಲೋಕಿಸುವುದನ್ನು ನಾನು ಈಗ ಪ್ರತಿಫಲದಾಯಕವಾದದ್ದಾಗಿ ಕಂಡುಕೊಳ್ಳುತ್ತೇನೆ. ಕೆಲವರು ಬೆತೆಲ್ನಲ್ಲಿಯೂ ಸೇವೆಮಾಡುತ್ತಾರೆ. ಜಾನ್ ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಿದ್ದಾನೆ.
ದುಃಖಕರವಾಗಿ, 1989ರಲ್ಲಿ ನನ್ನ ಪ್ರಿಯ ಹೆಂಡತಿಯಾದ ಆ್ಯಲಿಸ್ಳನ್ನು ನಾನು ಮರಣದಲ್ಲಿ ಕಳೆದುಕೊಂಡೆ. ಪೂರ್ಣ ಸಮಯದ ಸೇವೆಯಲ್ಲಿ ನನ್ನನ್ನು ಕಾರ್ಯಮಗ್ನನಾಗಿ ಇಟ್ಟುಕೊಳ್ಳುವುದು, ಆ ನಷ್ಟವನ್ನು ತಾಳಿಕೊಳ್ಳಲು ನನಗೆ ಸಹಾಯ ಮಾಡಿದೆ. ನನ್ನ ತಂಗಿ ಆ್ಯಲಿಸ್ ಮತ್ತು ನಾನು ಈಗ ಜೊತೆಯಾಗಿ ಪೂರ್ಣ ಸಮಯದ ಸೇವೆಯಲ್ಲಿ ಸಂತೋಷಿಸುತ್ತೇವೆ. ಒಂದೇ ಚಾವಣಿಯ ಕೆಳಗೆ ಪುನಃ ಜೀವಿಸುವುದು ಮತ್ತು ಈ ಅತ್ಯಂತ ಪ್ರಮುಖ ಕೆಲಸದಲ್ಲಿ ನಮ್ಮನ್ನು ಕಾರ್ಯಮಗ್ನರಾಗಿ ಕಂಡುಕೊಳ್ಳುವುದು ಎಷ್ಟು ಅತ್ಯುತ್ತಮವಾದದ್ದಾಗಿದೆ!
1994ರ ವಸಂತ ಕಾಲದಲ್ಲಿ, ಸುಮಾರು 25 ವರ್ಷಗಳ ಸಮಯದಲ್ಲಿ ಮೊದಲ ಬಾರಿಗೆ ನಾನು ಬೆತೆಲನ್ನು ಸಂದರ್ಶಿಸಿದೆ. 40 ವರ್ಷಗಳಿಗಿಂತಲೂ ಹೆಚ್ಚು ಸಮಯದ ಹಿಂದೆ ನಾನು ಯಾರೊಂದಿಗೆ ಕೆಲಸಮಾಡಿದೆನೊ ಆ ಜನರಲ್ಲಿ ಡಸನ್ಗಟ್ಟಲೆ ಜನರನ್ನು ಕಾಣುವುದು ಎಂತಹ ಒಂದು ಆನಂದವಾಗಿತ್ತು! 1930ರಲ್ಲಿ ನಾನು ಬೆತೆಲಿಗೆ ಹೋದಾಗ, ಆ ಕುಟುಂಬದಲ್ಲಿ ಕೇವಲ 250 ಸದಸ್ಯರಿದ್ದರು, ಆದರೆ ಇಂದು ಬ್ರೂಕ್ಲಿನ್ನಲ್ಲಿರುವ ಬೆತೆಲ್ ಕುಟುಂಬದ ಸಂಖ್ಯೆಯು 3,500ಕ್ಕಿಂತಲೂ ಹೆಚ್ಚಾಗಿದೆ!
ಆತ್ಮಿಕ ಆಹಾರದಿಂದ ಪೋಷಿಸಲ್ಪಟ್ಟದ್ದು
ಹೆಚ್ಚಿನ ಮುಂಜಾವಗಳಲ್ಲಿ ನಾನು ನಮ್ಮ ಮನೆಯ ಸಮೀಪವಿರುವ ಯಾಕೀಮ ನದಿಯ ಉದ್ದಕ್ಕೂ ಸಂಚರಿಸುತ್ತೇನೆ. ಗಾಳಿಯಲ್ಲಿ 4,300 ಮೀಟರ್ಗಳಿಗಿಂತಲೂ ಹೆಚ್ಚು ಎತ್ತರಕ್ಕಿರುವ, ಭವ್ಯ ಹಿಮಾವೃತ ಮೌಂಟ್ ರೇನಿಯರ್ ಅನ್ನು ನಾನು ಅಲ್ಲಿಂದ ನೋಡಸಾಧ್ಯವಿದೆ. ವನ್ಯಮೃಗಗಳು ಹೇರಳವಾಗಿವೆ. ಕೆಲವೊಮ್ಮೆ ನಾನು ಜಿಂಕೆಯನ್ನು ನೋಡುತ್ತೇನೆ, ಮತ್ತು ಒಮ್ಮೆ ನಾನು ಒಂದು ಎಲ್ಕ್ ಮೃಗವನ್ನು ಸಹ ನೋಡಿದೆ.
ಈ ಮೌನವಾದ, ಏಕಾಂತದ ಸಮಯಗಳು, ಯೆಹೋವನ ಅದ್ಭುತಕರವಾದ ಒದಗಿಸುವಿಕೆಗಳ ಕುರಿತಾಗಿ ಧ್ಯಾನಿಸುವಂತೆ ನನ್ನನ್ನು ಅನುಮತಿಸುತ್ತವೆ. ನಮ್ಮ ದೇವರಾದ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಾ ಮುಂದುವರಿಯಲು ನಾನು ಬಲಕ್ಕಾಗಿ ಪ್ರಾರ್ಥಿಸುತ್ತೇನೆ. ನಾನು ನಡೆದಾಡುತ್ತಿರುವಾಗ—ವಿಶೇಷವಾಗಿ “ಯೆಹೋವನ ಹೃದಯವನ್ನು ಸಂತೋಷಗೊಳಿಸುವುದು” ಎಂಬ ಸಂಗೀತವನ್ನು—ಹಾಡಲು ಸಹ ಇಷ್ಟಪಡುತ್ತೇನೆ. ಅದರ ನುಡಿಗಳು ಹೀಗೆ ಹೇಳುತ್ತವೆ: “ದೇವಾ, ನಿನ್ನ ಚಿತ್ತವನ್ನು ವಿವೇಕದಿ ಮಾಡುವೆವು, ಆಗ ನಿನ್ನ ಮನವನ್ನು ಸಂತೋಷಪಡಿಸುವೆವು.”
ಯೆಹೋವನ ಹೃದಯವನ್ನು ಸಂತೋಷಗೊಳಿಸುವಂತಹ ಕೆಲಸವೊಂದನ್ನು ಮಾಡಲು ನಾನು ಆಯ್ದುಕೊಂಡದ್ದಕ್ಕಾಗಿ ನಾನು ಸಂತೋಷಿತನಾಗಿದ್ದೇನೆ. ವಾಗ್ದಾನಿಸಲ್ಪಟ್ಟಿರುವ ಸ್ವರ್ಗೀಯ ಬಹುಮಾನವನ್ನು ನಾನು ಪಡೆದುಕೊಳ್ಳುವ ತನಕ ನಾನು ಈ ಕೆಲಸವನ್ನು ಮಾಡುತ್ತಾ ಮುಂದುವರಿಯುವಂತಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ವೃತ್ತಾಂತವು, ‘ಕೆಟ್ಟುಹೋಗದಿರುವ ಆಹಾರಕ್ಕಾಗಿ ದುಡಿಯುವುದ’ರಲ್ಲಿ ತಮ್ಮ ಜೀವಿತಗಳನ್ನು ಉಪಯೋಗಿಸುವಂತೆ ಇತರರನ್ನು ಸಹ ಪ್ರಚೋದಿಸುವಂತಾಗಲಿ ಎಂಬುದೇ ನನ್ನ ಬಯಕೆಯಾಗಿದೆ.—ಯೋಹಾನ 6:27.
[ಪುಟ 23 ರಲ್ಲಿರುವ ಚಿತ್ರಗಳು]
“ದೇವರ ವಾಕ್ಯವಾದ ಪವಿತ್ರ ಬೈಬಲನ್ನು ಪ್ರತಿದಿನವೂ ಓದಿರಿ” ಎಂಬ ಸೂಚನಾಫಲಕವನ್ನು ಎಲ್ವುಡ್ ಪೆಯಿಂಟ್ ಮಾಡುತ್ತಿರುವುದು
[ಪುಟ 24 ರಲ್ಲಿರುವ ಚಿತ್ರ]
1940ರಲ್ಲಿನ ಅಧಿವೇಶನದಲ್ಲಿ, ಗ್ರ್ಯಾಂಟ್ ಸೂಟರ್ ಮತ್ತು ಜಾನ್ ಕರ್ಸನ್ರೊಂದಿಗೆ ಹೊಸ ಫೋನೋಗ್ರಾಫ್ ಅನ್ನು ಪ್ರತ್ಯಕ್ಷಾಭಿನಯಿಸುತ್ತಿರುವುದು
[ಪುಟ 25 ರಲ್ಲಿರುವ ಚಿತ್ರ]
1944ರಲ್ಲಿ ನಮ್ಮಲ್ಲಿ ಸತ್ಯದಲ್ಲಿದ್ದವರು ಪೂರ್ಣ ಸಮಯದ ಶುಶ್ರೂಷೆಯಲ್ಲಿದ್ದೆವು: ಡೇವಿಡ್, ಆ್ಯಲಿಸ್, ಜೋಅಲ್, ಈವ, ಎಲ್ವುಡ್, ಮತ್ತು ಫ್ರ್ಯಾನ್ಸಸ್
[ಪುಟ 25 ರಲ್ಲಿರುವ ಚಿತ್ರ]
ಇನ್ನೂ ಬದುಕಿರುವ ಸಹೋದರಸಹೋದರಿಯರು, ಎಡಭಾಗದಿಂದ: ಆ್ಯಲಿಸ್, ಈವ, ಜೋಅಲ್, ಡೇವಿಡ್, ಮತ್ತು ಫ್ರ್ಯಾನ್ಸಸ್