ಸತ್ಯಾರಾಧನೆಯು ದೇವರ ಆಶೀರ್ವಾದವನ್ನು ಪಡೆಯುವುದಕ್ಕೆ ಕಾರಣ
“ಹಲ್ಲೆಲೂಯಾ! ರಕ್ಷಣೆಯೂ ಪ್ರಭಾವವೂ ಶಕ್ತಿಯೂ ನಮ್ಮ ದೇವರಿಗೆ ಸಲ್ಲುತ್ತವೆ, ಕಾರಣ ಆತನ ತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ.”—ಪ್ರಕಟನೆ 19:1, 2, NW.
1. ಮಹಾ ಬಾಬೆಲ್ ಹೇಗೆ ಕೊನೆಗೊಳ್ಳುವಳು?
“ಮಹಾ ಬಾಬೆಲ್” ದೇವರ ದೃಷ್ಟಿಯಲ್ಲಿ ಬಿದ್ದಿದೆ ಮತ್ತು ಈಗ ನಿರ್ನಾಮವನ್ನು ಎದುರಿಸುತ್ತದೆ. ಈ ಲೋಕವ್ಯಾಪಕ ಧಾರ್ಮಿಕ ವೇಶ್ಯೆಯು ತನ್ನ ರಾಜಕೀಯ ಪ್ರಿಯಕರರ ಹಸ್ತಗಳಲ್ಲಿ ಹತಿಸುವಿಕೆಯನ್ನು ಬೇಗನೆ ಎದುರಿಸುವಳೆಂದು ಬೈಬಲ್ ಪ್ರವಾದನೆಯು ಸೂಚಿಸುತ್ತದೆ; ಅವಳ ಅಂತ್ಯವು ತತ್ಕ್ಷಣ ಮತ್ತು ಕ್ಷಿಪ್ರವಾಗಿರುವುದು. ಯೋಹಾನನಿಗೆ ಕೊಡಲ್ಪಟ್ಟ ಯೇಸುವಿನ ಪ್ರಕಟನೆಯು ಈ ಪ್ರವಾದನಾತ್ಮಕ ಮಾತುಗಳನ್ನು ಒಳಗೂಡಿತ್ತು: “ಬಲಿಷ್ಠನಾದ ಒಬ್ಬ ದೇವದೂತನು ದೊಡ್ಡ ಬೀಸುವ ಕಲ್ಲಿನಂತಿರುವ ಒಂದು ಕಲ್ಲನ್ನು ಎತ್ತಿ ಸಮುದ್ರದೊಳಗೆ ಹಾಕಿ—ಮಹಾ ಪಟ್ಟಣವಾದ ಬಾಬೆಲು ಹೀಗೆಯೇ ದಡದಡನೆ ಕೆಡವಲ್ಪಟ್ಟು ಇನ್ನೆಂದಿಗೂ ಕಾಣಿಸುವದಿಲ್ಲ . . . ಎಂದು ಹೇಳಿದನು.”—ಪ್ರಕಟನೆ 18:2, 21, 24.
2. ಯೆಹೋವನ ಸೇವಕರು ಬಾಬೆಲಿನ ನಾಶನಕ್ಕೆ ಹೇಗೆ ಪ್ರತಿಕ್ರಿಯಿಸುವರು?
2 ಮಹಾ ಬಾಬೆಲಿನ ನಾಶನವು ಸೈತಾನನ ಲೋಕದ ಕೆಲವು ಘಟಕಾಂಶಗಳಿಂದ ಪ್ರಲಾಪಿಸಲ್ಪಡುವುದು, ಆದರೆ ನಿಶ್ಚಯವಾಗಿಯೂ ದೇವರ ಸ್ವರ್ಗೀಯ ಅಥವಾ ಭೂಸೇವಕರಿಂದಲ್ಲ. ದೇವರಿಗೆ ಅವರ ಹರ್ಷಕರ ಘೋಷವು ಇದಾಗಿರುವುದು: “ಹಲ್ಲೆಲೂಯಾ! ರಕ್ಷಣೆಯೂ ಪ್ರಭಾವವೂ ಶಕ್ತಿಯೂ ನಮ್ಮ ದೇವರಿಗೆ ಸಲ್ಲುತ್ತವೆ, ಕಾರಣ ಆತನ ತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ. ಯಾಕಂದರೆ ತನ್ನ ಜಾರತ್ವದಿಂದ ಭೂಲೋಕವನ್ನು ಕೆಡಿಸಿದ ಆ ಮಹಾ ಜಾರಸ್ತ್ರೀಗೆ ಆತನು ನ್ಯಾಯ ತೀರಿಸಿದ್ದಾನೆ, ಮತ್ತು ಅವಳ ಕೈಯಲ್ಲಿ ಆತನ ಸೇವಕರ ರಕ್ತಕ್ಕಾಗಿ ಅವನು ಪ್ರತಿದಂಡನೆಯನ್ನು ಮಾಡಿದ್ದಾನೆ.”—ಪ್ರಕಟನೆ 18:9, 10, NW; 19:1, 2.
ಸತ್ಯ ಧರ್ಮವು ಯಾವ ಫಲವನ್ನು ಉತ್ಪಾದಿಸಬೇಕು?
3. ಯಾವ ಪ್ರಶ್ನೆಗಳಿಗೆ ಒಂದು ಉತ್ತರದ ಆವಶ್ಯಕತೆಯಿದೆ?
3 ಭೂಮಿಯಿಂದ ಸುಳ್ಳು ಧರ್ಮವು ತೆಗೆದುಹಾಕಲ್ಪಡಲಿರುವುದರಿಂದ, ಯಾವ ರೀತಿಯ ಆರಾಧನೆಯು ಉಳಿಯುವುದು? ಸೈತಾನನ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯದ ನಾಶನವನ್ನು ಯಾವ ಧಾರ್ಮಿಕ ಗುಂಪು ಪಾರಾಗುವುದೆಂದು ನಾವು ಇಂದು ಹೇಗೆ ನಿರ್ಧರಿಸಬಲ್ಲವು? ಈ ಗುಂಪು ಉತ್ಪಾದಿಸಬೇಕಾದ ನೀತಿಯುಕ್ತ ಫಲವು ಯಾವುದು? ಯೆಹೋವನ ಸತ್ಯಾರಾಧನೆಯನ್ನು ಗುರುತಿಸಲು ಕಡಿಮೆಪಕ್ಷ ಹತ್ತು ನಿರ್ಧಾರಕ ಅಂಶಗಳಿವೆ.—ಮಲಾಕಿಯ 3:18; ಮತ್ತಾಯ 13:43.
4. ಸತ್ಯಾರಾಧನೆಗಾಗಿರುವ ಪ್ರಥಮ ಆವಶ್ಯಕತೆಯು ಯಾವುದು, ಮತ್ತು ಈ ವಿಷಯದಲ್ಲಿ ಯೇಸು ಹೇಗೆ ಮಾದರಿಯನ್ನಿಟ್ಟನು?
4 ಎಲ್ಲಕ್ಕಿಂತ ಮೊದಲಾಗಿ, ಸತ್ಯ ಕ್ರೈಸ್ತರು ಯೇಸು ಯಾವುದಕ್ಕಾಗಿ ಸತ್ತನೋ—ಆತನ ತಂದೆಯ ಪರಮಾಧಿಕಾರ—ಆ ಪರಮಾಧಿಕಾರವನ್ನು ಎತ್ತಿಹಿಡಿಯಬೇಕು. ಯೇಸು ಯಾವುದೇ ರಾಜಕೀಯ, ಗೋತ್ರಸಂಬಂಧಿತ, ಕುಲಸಂಬಂಧಿತ, ಅಥವಾ ಸಾಮಾಜಿಕ ಕಾರಣಕ್ಕಾಗಿ ತನ್ನ ಜೀವವನ್ನು ಕೊಡಲಿಲ್ಲ. ಅವನು ತನ್ನ ತಂದೆಯ ರಾಜ್ಯವನ್ನು ಎಲ್ಲಾ ಯೆಹೂದಿ ರಾಜಕೀಯ ಅಥವಾ ಕ್ರಾಂತಿಕಾರಿ ಉತ್ಕಾಂಕ್ಷೆಗಳಿಗಿಂತ ಮುಂದಿಟ್ಟನು. ಲೌಕಿಕ ಅಧಿಕಾರದ ಸೈತಾನನ ನೀಡಿಕೆಯನ್ನು ಅವನು ಈ ಮಾತುಗಳೊಂದಿಗೆ ಉತ್ತರಿಸಿದನು: “ಸೈತಾನನೇ, ನೀನು ತೊಲಗಿ ಹೋಗು. ನಿನ್ನ ದೇವರಾಗಿರುವ ಕರ್ತನಿಗೆ [“ಯೆಹೋವನಿಗೆ,” NW] ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು ಎಂಬದಾಗಿ ಬರೆದದೆ.” ಯೆಹೋವನೇ ಇಡೀ ಭೂಮಿಯ ಮೇಲಿನ ನಿಜ ಪರಮಾಧಿಕಾರಿಯಾಗಿದ್ದಾನೆಂದು ಅವನಿಗೆ ಹೀಬ್ರು ಶಾಸ್ತ್ರಗಳಿಂದ ತಿಳಿದಿತ್ತು. ಈ ಲೋಕದ ರಾಜಕೀಯ ವ್ಯವಸ್ಥಾಪನೆಗಳ ಬದಲಿಗೆ, ಯೆಹೋವನ ಆಳ್ವಿಕೆಯನ್ನು ಯಾವ ಧಾರ್ಮಿಕ ಗುಂಪು ನಿಸ್ಸಂದಿಗ್ಧವಾಗಿ ಬೆಂಬಲಿಸುತ್ತದೆ?—ಮತ್ತಾಯ 4:10; ಕೀರ್ತನೆ 83:18.
5. (ಎ) ಸತ್ಯಾರಾಧಕರು ದೇವರ ನಾಮವನ್ನು ಹೇಗೆ ದೃಷ್ಟಿಸಬೇಕು? (ಬಿ) ಯೆಹೋವನ ಸಾಕ್ಷಿಗಳು ಆ ನಾಮವನ್ನು ಸನ್ಮಾನಿಸುತ್ತಾರೆಂದು ಯಾವುದು ತೋರಿಸುತ್ತದೆ?
5 ಎರಡನೆಯ ಆವಶ್ಯಕತೆಯು ಏನಂದರೆ, ಸತ್ಯಾರಾಧನೆಯು ದೇವರ ನಾಮವನ್ನು ಉತ್ಪ್ರೇಕ್ಷಿಸಿ, ಪವಿತ್ರೀಕರಿಸಬೇಕು. ಸರ್ವಶಕ್ತನು ಯೆಹೋವ (ಕೆಲವು ಬೈಬಲ್ ತರ್ಜುಮೆಗಳಲ್ಲಿ, ಯಾವೇ ಎಂದು ಭಾಷಾಂತರಿಸಲ್ಪಟ್ಟಿದೆ) ಎಂಬ ತನ್ನ ಹೆಸರನ್ನು ತನ್ನ ಜನರಾದ ಇಸ್ರಾಯೇಲಿಗೆ ಪ್ರಕಟಪಡಿಸಿದನು, ಮತ್ತು ಅದು ಹೀಬ್ರು ಶಾಸ್ತ್ರಗಳಲ್ಲಿ ಸಾವಿರಾರು ಸಲ ಉಪಯೋಗಿಸಲ್ಪಟ್ಟಿದೆ. ಅದಕ್ಕಿಂತಲೂ ಮುಂಚೆ ಆದಾಮ, ಹವ್ವ ಮತ್ತು ಇತರರಿಗೆ—ಅವರು ಅದನ್ನು ಯಾವಾಗಲೂ ಗೌರವಿಸದಿದ್ದರೂ—ಆ ಹೆಸರು ತಿಳಿದಿತ್ತು. (ಆದಿಕಾಂಡ 4:1; 9:26; 22:14; ವಿಮೋಚನಕಾಂಡ 6:2) ಕ್ರೈಸ್ತಪ್ರಪಂಚದ ಮತ್ತು ಯೆಹೂದ್ಯ ಭಾಷಾಂತರಕಾರರು ತಮ್ಮ ಬೈಬಲುಗಳಿಂದ ಆ ದೈವಿಕ ಹೆಸರನ್ನು ಸಾಮಾನ್ಯವಾಗಿ ಬಿಟ್ಟುಬಿಟ್ಟಿರುವಾಗ, ಯೆಹೋವನ ಸಾಕ್ಷಿಗಳು ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ನಲ್ಲಿ, ಆ ನಾಮಕ್ಕೆ ಅದರ ತಕ್ಕದ್ದಾದ ಸ್ಥಾನ ಮತ್ತು ಗೌರವವನ್ನು ಕೊಟ್ಟಿದ್ದಾರೆ. ಆರಂಭದ ಕ್ರೈಸ್ತರು ಮಾಡಿದಂತೆಯೇ ಅವರು ಆ ಹೆಸರನ್ನು ಸನ್ಮಾನಿಸುತ್ತಾರೆ. ಯಾಕೋಬನು ಸಾಕ್ಷ್ಯ ನೀಡಿದ್ದು: “ದೇವರು ಮೊದಲಲ್ಲಿ ಅನ್ಯಜನರನ್ನು ಕಟಾಕ್ಷಿಸಿನೋಡಿ ತನ್ನ ಹೆಸರಿಗಾಗಿ ಅವರೊಳಗಿಂದ ಒಂದು ಪ್ರಜೆಯನ್ನು ಆರಿಸಿಕೊಂಡ ವಿಧವನ್ನು ಸಿಮೆಯೋನನು ವಿವರಿಸಿದನಷ್ಟೆ. ಇದಕ್ಕೆ ಪ್ರವಾದಿಗಳ ಮಾತುಗಳೂ ಒಪ್ಪುತ್ತವೆ. . . . ‘ಮನುಷ್ಯರಲ್ಲಿ ಉಳಿದವರು, ನನ್ನ ಹೆಸರಿನಿಂದ ಕರೆಯಲ್ಪಡುವ ಜನರು, ಸಕಲ ಜನಾಂಗಗಳ ಜನರೊಂದಿಗೆ, ಯೆಹೋವನನ್ನು ಶ್ರದ್ಧಾಪೂರ್ವಕವಾಗಿ ಹುಡುಕಲಿಕ್ಕಾಗಿ, ಎಂದು ಈ ಸಂಗತಿಗಳನ್ನು ಮಾಡುವ ಯೆಹೋವನು ಹೇಳುತ್ತಾನೆ.’”—ಅ. ಕೃತ್ಯಗಳು 15:14-17, NW; ಆಮೋಸ 9:11, 12.
6. (ಎ) ಸತ್ಯಾರಾಧನೆಗಾಗಿರುವ ಮೂರನೆಯ ಆವಶ್ಯಕತೆಯೇನು? (ಬಿ) ಯೇಸು ಮತ್ತು ದಾನಿಯೇಲ, ರಾಜ್ಯ ಆಳ್ವಿಕೆಯನ್ನು ಹೇಗೆ ಒತ್ತಿಹೇಳಿದರು? (ಲೂಕ 17:20, 21)
6 ಸತ್ಯಾರಾಧನೆಗಾಗಿರುವ ಮೂರನೆಯ ಆವಶ್ಯಕತೆಯು ಏನಂದರೆ, ಆಳ್ವಿಕೆಯ ಕುರಿತಾದ ಮಾನವಕುಲದ ಸಮಸ್ಯೆಗಳಿಗಾಗಿ ಯುಕ್ತವಾದ ಮತ್ತು ಸಾಮರ್ಥ್ಯವುಳ್ಳ ಏಕಮಾತ್ರ ಪರಿಹಾರದೋಪಾದಿ ಅದು ದೇವರ ರಾಜ್ಯವನ್ನು ಘನತೆಗೇರಿಸಬೇಕು. ಆ ರಾಜ್ಯವು ಬರುವಂತೆ, ದೇವರಾಳಿಕೆಯು ಈ ಭೂಮಿಯನ್ನು ಹತೋಟಿಯೊಳಗೆ ತೆಗೆದುಕೊಳ್ಳಲು ಪ್ರಾರ್ಥಿಸುವಂತೆ ಯೇಸು ತನ್ನ ಹಿಂಬಾಲಕರಿಗೆ ಸ್ಪಷ್ಟವಾಗಿ ಕಲಿಸಿದನು. ಕಡೇ ದಿವಸಗಳ ಕುರಿತಾಗಿ ಪ್ರವಾದಿಸಲು ದಾನಿಯೇಲನು ಪ್ರೇರಿಸಲ್ಪಟ್ಟನು: “ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, . . . ಆ [ಲೌಕಿಕ, ರಾಜಕೀಯ] ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” ಈ 20ನೆಯ ಶತಮಾನದಲ್ಲಿ ಆ ರಾಜ್ಯಕ್ಕೆ ತಾವು ಅವಿಭಜಿತ ಬೆಂಬಲವನ್ನು ಸಲ್ಲಿಸುತ್ತೇವೆಂಬುದನ್ನು ತಮ್ಮ ಮಾರ್ಗಕ್ರಮದಿಂದ ಯಾರು ತೋರಿಸಿದ್ದಾರೆ—ಮಹಾ ಬಾಬೆಲಿನ ಧರ್ಮಗಳೊ ಅಥವಾ ಯೆಹೋವನ ಸಾಕ್ಷಿಗಳೊ?—ದಾನಿಯೇಲ 2:44; ಮತ್ತಾಯ 6:10; 24:14.
7. ಸತ್ಯಾರಾಧಕರು ಬೈಬಲನ್ನು ಹೇಗೆ ದೃಷ್ಟಿಸುತ್ತಾರೆ?
7 ದೇವರ ಸಮ್ಮತಿಗಾಗಿರುವ ನಾಲ್ಕನೆಯ ಆವಶ್ಯಕತೆಯು ಏನಂದರೆ, ದೇವರ ನಿಜ ಸೇವಕರು ಬೈಬಲನ್ನು ದೇವರ ಪ್ರೇರಿತ ವಾಕ್ಯವಾಗಿ ಎತ್ತಿಹಿಡಿಯತಕ್ಕದ್ದು. ಆದುದರಿಂದ ಅವರು ಉಚ್ಚ ವಿಮರ್ಶೆಯ ಬಲಿಗಳಾಗಿ ಪರಿಣಮಿಸುವುದಿಲ್ಲ. ಅದು ಬೈಬಲನ್ನು ಒಂದು ಬರಿಯ ಮಾನವ ಸಾಹಿತ್ಯ ಕೃತಿಗೆ—ಇದು ಅರ್ಥೈಸುವ ಎಲ್ಲಾ ಕುಂದುಗಳೊಂದಿಗೆ—ಇಳಿಸಲು ಪ್ರಯತ್ನಿಸುತ್ತದೆ. ಪೌಲನು ತಿಮೊಥೆಯನಿಗೆ ಬರೆದಂತೆ ಯೆಹೋವನ ಸಾಕ್ಷಿಗಳು ಬೈಬಲನ್ನು ದೇವರ ಪ್ರೇರಿತ ವಾಕ್ಯವೆಂದು ನಂಬುತ್ತಾರೆ: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.”a ಆದುದರಿಂದ, ಯೆಹೋವನ ಸಾಕ್ಷಿಗಳು ಬೈಬಲನ್ನು ತಮ್ಮ ಮಾರ್ಗದರ್ಶಕದೋಪಾದಿ, ದಿನನಿತ್ಯದ ಜೀವಿತಕ್ಕೆ ತಮ್ಮ ಕೈಪಿಡಿಯೋಪಾದಿ, ಮತ್ತು ತಮ್ಮ ಭವಿಷ್ಯತ್ತಿಗಾಗಿರುವ ನಿರೀಕ್ಷೆಯ ಬುಗ್ಗೆಯಾಗಿ ತೆಗೆದುಕೊಳ್ಳುತ್ತಾರೆ.—2 ತಿಮೊಥೆಯ 3:16, 17.
ದ್ವೇಷದ್ದಲ್ಲ, ಪ್ರೀತಿಯ ಧರ್ಮ
8. ಸತ್ಯಾರಾಧನೆಗಾಗಿರುವ ಐದನೆಯ ಆವಶ್ಯಕತೆಯೇನು?
8 ಯೇಸು ತನ್ನ ನಿಜ ಹಿಂಬಾಲಕರ ವ್ಯತ್ಯಾಸವನ್ನು ಹೇಗೆ ತೋರಿಸಿದನು? ಅವನ ಉತ್ತರವು ಸತ್ಯಾರಾಧನೆಯ ಒಂದು ಪ್ರಾಮುಖ್ಯವಾದ ಐದನೆಯ ಗುರುತಿಸುವ ಚಿಹ್ನೆಗೆ ನಮ್ಮನ್ನು ತರುತ್ತದೆ. ಯೇಸು ಹೇಳಿದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ. ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:34, 35, ಓರೆಅಕ್ಷರಗಳು ನಮ್ಮವು.) ಯೇಸು ತನ್ನ ಪ್ರೀತಿಯನ್ನು ಹೇಗೆ ತೋರಿಸಿದನು? ತನ್ನ ಜೀವವನ್ನು ಒಂದು ಪ್ರಾಯಶ್ಚಿತ್ತ ಯಜ್ಞವಾಗಿ ಕೊಡುವ ಮೂಲಕವೇ. (ಮತ್ತಾಯ 20:28; ಯೋಹಾನ 3:16) ನಿಜ ಪ್ರೀತಿಯು ಸತ್ಕ್ರೈಸ್ತರಿಗೆ ಒಂದು ಅತ್ಯಾವಶ್ಯಕ ಗುಣವಾಗಿದೆ ಏಕೆ? ಯೋಹಾನನು ವಿವರಿಸಿದ್ದು: “ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಪ್ರೀತಿಯು ದೇವರಿಂದಾಗಿದೆ. . . . ಪ್ರೀತಿಯಿಲ್ಲದವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಸ್ವರೂಪಿಯು.”—1 ಯೋಹಾನ 4:7, 8.
9. ಯಾರು ನಿಜ ಪ್ರೀತಿಯನ್ನು ತೋರಿಸಿದ್ದಾರೆ ಮತ್ತು ಹೇಗೆ?
9 ನಮ್ಮ ಸಮಯಗಳಲ್ಲಿ, ಜಾತೀಯ, ರಾಷ್ಟ್ರೀಯ ಅಥವಾ ಕುಲಸಂಬಂಧಿತ ದ್ವೇಷದ ಎದುರಿನಲ್ಲೂ ಈ ರೀತಿಯ ಪ್ರೀತಿಯನ್ನು ಯಾರು ಪ್ರದರ್ಶಿಸಿದ್ದಾರೆ? ತಮ್ಮ ಪ್ರೀತಿಯು ಜಯಗೊಳ್ಳುವಂತೆ ಮರಣದ ತನಕವೂ, ಅತ್ಯುಚ್ಚವಾದ ಪರೀಕ್ಷೆಯಲ್ಲಿ ಯಾರು ಉತ್ತೀರ್ಣರಾಗಿದ್ದಾರೆ? 1994ರಲ್ಲಿ ರುಆಂಡದಲ್ಲಿ ನಡೆದಂತಹ ಸಮೂಹನಾಶಕ್ಕಾಗಿ ಸ್ವಲ್ಪ ಹೊಣೆಗಾರಿಕೆಯಲ್ಲಿ ಪಾಲಿಗರೆಂದು ಒಪ್ಪಿಕೊಂಡಿರುವ ಕ್ಯಾಥೊಲಿಕ್ ಪಾದ್ರಿಗಳು ಅಥವಾ ಸಂನ್ಯಾಸಿನಿಯರು ಅವರಾಗಿದ್ದಾರೆಂದು ನಾವು ಹೇಳಸಾಧ್ಯವಿದೆಯೋ? “ಕುಲಸಂಬಂಧವಾದ ಶುದ್ಧೀಕರಣ”ದಲ್ಲಿ ಮತ್ತು ಬಾಲ್ಕಾನಿನ ಆ ಒಳಯುದ್ಧದಲ್ಲಿ ಇತರ ಅಕ್ರೈಸ್ತ ಕೃತ್ಯಗಳಲ್ಲಿ ತೊಡಗಿರುವ ಸರ್ಬಿಯದ ಅರ್ತೊಡಾಕ್ಸ್ ಅಥವಾ ಕ್ರೋಏಷಿಯದ ಕ್ಯಾಥೊಲಿಕರು ಅವರೊ? ಅಥವಾ ಕಳೆದ ಕೆಲವು ದಶಕಗಳಿಂದ ಉತ್ತರ ಐಯರ್ಲೆಂಡ್ನಲ್ಲಿ ಪೂರ್ವಾಗ್ರಹ ಮತ್ತು ದ್ವೇಷದ ಜ್ವಾಲೆಗಳನ್ನು ಹೆಚ್ಚಿಸಿರುವ ಕ್ಯಾಥೊಲಿಕ್ ಅಥವಾ ಪ್ರಾಟೆಸ್ಟಂಟ್ ವೈದಿಕರು ಅವರೊ? ಅಂತಹ ಸಂಘರ್ಷಗಳಲ್ಲಿ ಭಾಗವಹಿಸಿರುವುದಕ್ಕಾಗಿ ಯೆಹೋವನ ಸಾಕ್ಷಿಗಳನ್ನು ನಿಶ್ಚಯವಾಗಿಯೂ ಅಪಾದಿಸಸಾಧ್ಯವಿಲ್ಲ. ತಮ್ಮ ಕ್ರೈಸ್ತ ಪ್ರೀತಿಯನ್ನು ವಿಶ್ವಾಸಘಾತುಕಗೊಳಿಸುವ ಬದಲಿಗೆ, ಅವರು ಮರಣದ ಪರ್ಯಂತರವೂ, ಸೆರೆಮನೆಗಳು ಮತ್ತು ಕೂಟ ಶಿಬಿರಗಳಲ್ಲಿ ಕಷ್ಟಾನುಭವಿಸಿದ್ದಾರೆ.—ಯೋಹಾನ 15:17.
10. ಸತ್ಯ ಕ್ರೈಸ್ತರು ಏಕೆ ತಟಸ್ಥರಾಗಿ ನಿಲ್ಲುತ್ತಾರೆ?
10 ದೇವರಿಗೆ ಅಂಗೀಕಾರಾರ್ಹವಾದ ಆರಾಧನೆಗಾಗಿರುವ ಆರನೆಯ ಆವಶ್ಯಕತೆಯು, ಈ ಲೋಕದ ರಾಜಕೀಯ ವ್ಯವಹಾರಗಳ ವಿಷಯದಲ್ಲಿ ತಾಟಸ್ಥ್ಯ ಆಗಿದೆ. ಕ್ರೈಸ್ತರು ರಾಜಕೀಯದಲ್ಲಿ ಏಕೆ ತಟಸ್ಥರಾಗಿ ಉಳಿಯಬೇಕು? ಪೌಲ, ಯಾಕೋಬ ಮತ್ತು ಯೋಹಾನರು ಆ ನಿಲುವಿಗಾಗಿ ದೃಢವಾದ ಕಾರಣವನ್ನು ನಮಗೆ ಕೊಡುತ್ತಾರೆ. ಯಾರು ಅವಿಶ್ವಾಸಿಗಳ ಮನಸ್ಸುಗಳನ್ನು ಸಾಧ್ಯವಿರುವ ಪ್ರತಿಯೊಂದು ಮಾಧ್ಯಮದ—ವಿಭಜಿಸುವ ರಾಜಕೀಯವನ್ನು ಸೇರಿಸಿ—ಮೂಲಕ ಕುರುಡುಗೊಳಿಸುತ್ತಾನೋ ಆ ಸೈತಾನನು “ಈ ವಿಷಯಗಳ ವ್ಯವಸ್ಥೆಯ ದೇವರು” ಆಗಿದ್ದಾನೆಂದು ಅಪೊಸ್ತಲ ಪೌಲನು ಬರೆದನು. “ಇಹಲೋಕಸ್ನೇಹವು ದೇವವೈರವೆಂದು” ಶಿಷ್ಯನಾದ ಯಾಕೋಬನು ಹೇಳಿದನು, ಮತ್ತು “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ” ಎಂದು ಅಪೊಸ್ತಲ ಯೋಹಾನನು ಹೇಳಿದನು. ಹೀಗಿರುವುದರಿಂದ ಒಬ್ಬ ಸತ್ಕ್ರೈಸ್ತನು, ಸೈತಾನನ ರಾಜಕೀಯ ಮತ್ತು ಅಧಿಕಾರದ ಭ್ರಷ್ಟ ಲೋಕದಲ್ಲಿ ಒಳಗೂಡುವ ಮೂಲಕ ದೇವರಿಗೆ ತನ್ನ ಭಕ್ತಿಯಲ್ಲಿ ಸಂಧಾನ ಮಾಡಿಕೊಳ್ಳಸಾಧ್ಯವಿಲ್ಲ.—2 ಕೊರಿಂಥ 4:4, NW; ಯಾಕೋಬ 4:4; 1 ಯೋಹಾನ 5:19.
11. (ಎ) ಕ್ರೈಸ್ತರು ಯುದ್ಧವನ್ನು ಹೇಗೆ ದೃಷ್ಟಿಸುತ್ತಾರೆ? (ಬಿ) ಈ ನಿಲುವಿಗಾಗಿ ಯಾವ ಶಾಸ್ತ್ರೀಯ ಆಧಾರವಿದೆ? (2 ಕೊರಿಂಥ 10:3-5)
11 ಈ ಹಿಂದಿನ ಎರಡು ಆವಶ್ಯಕತೆಗಳ ನೋಟದಲ್ಲಿ, ಏಳನೆಯದ್ದು ಸುವ್ಯಕ್ತವಾಗುತ್ತದೆ, ಅದೇನಂದರೆ ಸತ್ಕ್ರೈಸ್ತ ಆರಾಧಕರು ಯುದ್ಧಗಳಲ್ಲಿ ಭಾಗವಹಿಸಬಾರದು. ಸತ್ಯ ಧರ್ಮವು ಪ್ರೀತಿಯ ಮೇಲೆ ಆಧರಿತವಾದ ಒಂದು ಲೋಕವ್ಯಾಪಕ ಭ್ರಾತೃತ್ವವಾಗಿರುವುದರಿಂದ, ಯಾವುದೇ ವಿಷಯವು ‘ಲೋಕದಲ್ಲಿರುವ ಸಹೋದರರ ಇಡೀ ಸಹವಾಸವನ್ನು’ ವಿಭಜಿಸಲು ಅಥವಾ ಉರುಳಿಸಲು ಸಾಧ್ಯವಿಲ್ಲ. ಯೇಸು ದ್ವೇಷವನ್ನಲ್ಲ, ಪ್ರೀತಿಯನ್ನು; ಯುದ್ಧವನ್ನಲ್ಲ, ಶಾಂತಿಯನ್ನು ಕಲಿಸಿದನು. (1 ಪೇತ್ರ 5:9, NW; ಮತ್ತಾಯ 26:51, 52) ಹೇಬೆಲನನ್ನು ಕೊಲ್ಲಲು ಕಾಯಿನನನ್ನು ಪ್ರೇರಿಸಿದ ‘ಕೆಡುಕನಾದ’ ಸೈತಾನನೇ, ಮಾನವಕುಲದ ನಡುವೆ ದ್ವೇಷವನ್ನು ಬಿತ್ತುವುದನ್ನು ಮತ್ತು ರಾಜಕೀಯ, ಧಾರ್ಮಿಕ, ಹಾಗೂ ಕುಲಸಂಬಂಧಿತ ವಿಭಜನೆಗಳ ಆಧಾರದ ಮೇಲೆ ರಕ್ತಪಾತವನ್ನೂ ಸಂಘರ್ಷಗಳನ್ನೂ ಕೆರಳಿಸುವುದನ್ನು ಮುಂದುವರಿಸುತ್ತಿದ್ದಾನೆ. ಅವರು ತೆರಬೇಕಾದ ಬೆಲೆಯು ಎಷ್ಟೇ ಆಗಿರಲಿ, ಸತ್ಯ ಕ್ರೈಸ್ತರು ‘ಇನ್ನು ಮುಂದೆ ಯುದ್ಧವನ್ನು ಕಲಿಯುವುದಿಲ್ಲ’. ಸಾಂಕೇತಿಕವಾಗಿ, ಅವರು ಈಗಾಗಲೇ ‘ತಮ್ಮ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡಿಕೊಂಡಿದ್ದಾರೆ.’ ಅವರು ದೇವರ ಆತ್ಮದ ಶಾಂತಿಭರಿತ ಫಲವನ್ನು ಉತ್ಪಾದಿಸುತ್ತಾರೆ.—1 ಯೋಹಾನ 3:10-12; ಯೆಶಾಯ 2:2-4; ಗಲಾತ್ಯ 5:22, 23.
ದೇವರು ನಡತೆ ಹಾಗೂ ಬೋಧನೆಗಳ ಶುದ್ಧತೆಯನ್ನು ಆಶೀರ್ವದಿಸುತ್ತಾನೆ
12. (ಎ) ಎಂಟನೆಯ ಆವಶ್ಯಕತೆಯೇನು, ಆದರೆ ಯಾವ ಧಾರ್ಮಿಕ ವಿಭಜನೆಗಳನ್ನು ನೀವು ಉಲ್ಲೇಖಿಸಸಾಧ್ಯವಿದೆ? (ಬಿ) ಪೌಲನು ಈ ಎಂಟನೆಯ ಆವಶ್ಯಕತೆಯನ್ನು ಹೇಗೆ ಎತ್ತಿತೋರಿಸಿದನು?
12 ಕ್ರೈಸ್ತ ಐಕ್ಯವು ಸತ್ಯಾರಾಧನೆಯ ಎಂಟನೆಯ ಆವಶ್ಯಕತೆಯಾಗಿದೆ. ಆದಾಗಲೂ, ಇದನ್ನು ಮಾಡಲು ಕ್ರೈಸ್ತಪ್ರಪಂಚದ ವಿಭಜನಾತ್ಮಕ ಧರ್ಮಗಳು ಸಹಾಯ ಮಾಡಿರುವುದಿಲ್ಲ. ಚಾಲ್ತಿಯಲ್ಲಿರುವ ಪಂಗಡಗಳೆಂದು ಕರೆಯಲ್ಪಡುವ ಅನೇಕ ಪಂಗಡಗಳು ವಿವಿಧ ಪಂಥಗಳಾಗಿ ಸೀಳಲ್ಪಟ್ಟಿವೆ, ಮತ್ತು ಫಲಿತಾಂಶವು ಗಲಿಬಿಲಿಯಾಗಿದೆ. ಉದಾಹರಣೆಗಾಗಿ, ಅಮೆರಿಕದಲ್ಲಿರುವ ಬ್ಯಾಪ್ಟಿಸ್ಟ್ ಧರ್ಮವನ್ನು ತೆಗೆದುಕೊಳ್ಳಿರಿ. ಅದು ನಾರ್ದರ್ನ್ ಬ್ಯಾಪ್ಟಿಸ್ಟ್ಸ್ (ಅಮೆರಿಕದಲ್ಲಿನ ಅಮೆರಿಕನ್ ಬ್ಯಾಪ್ಟಿಸ್ಟ್ ಚರ್ಚುಗಳು) ಮತ್ತು ಸದರ್ನ್ ಬ್ಯಾಪ್ಟಿಸ್ಟ್ (ಸದರ್ನ್ ಬ್ಯಾಪ್ಟಿಸ್ಟ್ ಕನ್ವೆನ್ಷನ್)ಗಳಾಗಿ, ಒಡಕುಗಳಿಂದ ಫಲಿಸಿರುವ ಇನ್ನಿತರ ಅನೇಕ ಬ್ಯಾಪ್ಟಿಸ್ಟ್ ಗುಂಪುಗಳಾಗಿ ವಿಭಾಗಿಸಲ್ಪಟ್ಟಿದೆ. (ವರ್ಲ್ಡ್ ಕ್ರಿಸ್ಟ್ಯನ್ ಎನ್ಸೈಕ್ಲೊಪೀಡಿಯ, ಪುಟ 714) ಬೋಧನೆ ಅಥವಾ ಚರ್ಚ್ ಸರಕಾರದ ಭಿನ್ನತೆಗಳಿಂದಾಗಿ ಅನೇಕ ವಿಭಜನೆಗಳು ಆರಂಭಿಸಿವೆ (ಉದಾಹರಣೆಗಾಗಿ, ಪ್ರೆಸ್ಬಿಟೇರಿಯನ್, ಇಪಿಸ್ಕೊಪೇಲಿಯನ್, ಕಾಂಗ್ರಿಗೇಷನಲ್). ಕ್ರೈಸ್ತಪ್ರಪಂಚದ ವಿಭಜನೆಗಳು, ಕ್ರೈಸ್ತಪ್ರಪಂಚದ ಹೊರಗಿರುವ ಧರ್ಮಗಳಿಂದ—ಅದು ಬೌದ್ಧಮತ, ಇಸ್ಲಾಮ್ಮತ ಅಥವಾ ಹಿಂದುಮತವಾಗಿರಲಿ—ಸಮಾಂತರಿಸಲ್ಪಟ್ಟಿವೆ. ಅಪೊಸ್ತಲ ಪೌಲನು ಆರಂಭದ ಕ್ರೈಸ್ತರಿಗೆ ಯಾವ ಸಲಹೆಯನ್ನು ಕೊಟ್ಟನು? “ಸಹೋದರರೇ, ನಿಮ್ಮೆಲ್ಲರ ಮಾತು ಒಂದೇ ಆಗಿರಬೇಕು; ನಿಮ್ಮಲ್ಲಿ ಭೇದಗಳಿರಬಾರದು, ನೀವು ಒಂದೇ ಮನಸ್ಸೂ ಒಂದೇ ಅಭಿಪ್ರಾಯವೂ ಉಳ್ಳವರಾಗಿದ್ದು ಹೊಂದಿಕೆಯಿಂದಿರಬೇಕು ಎಂಬದಾಗಿ ನಾನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮ್ಮನ್ನು ಬೇಡಿಕೊಳ್ಳುತ್ತೇನೆ.”—1 ಕೊರಿಂಥ 1:10; 2 ಕೊರಿಂಥ 13:11.
13, 14. (ಎ) ‘ಪರಿಶುದ್ಧರಾಗಿರು’ವದರಿಂದ ಏನು ಅರ್ಥೈಸಲ್ಪಟ್ಟಿದೆ? (ಬಿ) ಸತ್ಯಾರಾಧನೆಯು ಹೇಗೆ ಶುದ್ಧವಾಗಿರಿಸಲ್ಪಡುತ್ತದೆ?
13 ದೇವರಿಂದ ಸಮ್ಮತಿಸಲ್ಪಟ್ಟ ಧರ್ಮಕ್ಕಾಗಿರುವ, ಒಂಬತ್ತನೆಯ ಆವಶ್ಯಕತೆಯೇನಾಗಿದೆ? ಯಾಜಕಕಾಂಡ 11:45ರಲ್ಲಿ ಒಂದು ಬೈಬಲ್ ಮೂಲತತ್ತ್ವವು ವ್ಯಕ್ತಪಡಿಸಲ್ಪಟ್ಟಿದೆ: “ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು.” ಹೀಗೆ ಬರೆದಾಗ ಅಪೊಸ್ತಲ ಪೇತ್ರನು ಈ ಆವಶ್ಯಕತೆಯನ್ನು ಪುನರುಚ್ಚರಿಸಿದನು: “ನಿಮ್ಮನ್ನು ಕರೆದಾತನು ಪರಿಶುದ್ಧನಾಗಿರುವ ಪ್ರಕಾರವೇ ನೀವೂ ವಿಧೇಯರಿಗೆ ತಕ್ಕಂತೆ ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರಿ.” (ಓರೆಅಕ್ಷರಗಳು ನಮ್ಮವು.)—1 ಪೇತ್ರ 1:15.
14 ಪರಿಶುದ್ಧರಾಗಿರುವ ಈ ಅಗತ್ಯದಲ್ಲಿ ಏನು ಅರ್ಥೈಸಲ್ಪಟ್ಟಿದೆ? ಏನಂದರೆ ಯೆಹೋವನ ಆರಾಧಕರು ಆತ್ಮಿಕವಾಗಿ ಮತ್ತು ನೈತಿಕವಾಗಿ ಶುದ್ಧರಾಗಿರಬೇಕು. (2 ಪೇತ್ರ 3:14) ತಮ್ಮ ನಡತೆಯ ಮೂಲಕ ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞಕ್ಕಾಗಿ ತಿರಸ್ಕಾರವನ್ನು ತೋರಿಸುವ, ಪಶ್ಚಾತ್ತಾಪರಹಿತ, ಉದ್ದೇಶಪೂರ್ವಕ ಪಾಪಿಗಳಿಗೆ ಯಾವುದೇ ಸ್ಥಳವಿಲ್ಲ. (ಇಬ್ರಿಯ 6:4-6) ಕ್ರೈಸ್ತ ಸಭೆಯು ಸ್ವಚ್ಛವಾಗಿ, ಮತ್ತು ಪರಿಶುದ್ಧವಾಗಿರಿಸಲ್ಪಡುವುದನ್ನು ಯೆಹೋವನು ಅವಶ್ಯಪಡಿಸುತ್ತಾನೆ. ಅದು ಹೇಗೆ ಪೂರೈಸಲ್ಪಡುತ್ತದೆ? ಅಂಶಿಕವಾಗಿ, ಸಭೆಯನ್ನು ಕಳಂಕಗೊಳಿಸಬಹುದಾದವರನ್ನು ಬಹಿಷ್ಕರಿಸುವ ನ್ಯಾಯನಿರ್ವಾಹಕ ಕಾರ್ಯಗತಿಯ ಮೂಲಕವೇ.—1 ಕೊರಿಂಥ 5:9-13.
15, 16. ಅನೇಕ ಕ್ರೈಸ್ತರು ತಮ್ಮ ಜೀವಿತಗಳಲ್ಲಿ ಯಾವ ಬದಲಾವಣೆಗಳನ್ನು ಮಾಡಿದ್ದಾರೆ?
15 ಕ್ರೈಸ್ತ ಸತ್ಯವನ್ನು ತಿಳಿಯುವ ಮುಂಚೆ ಅನೇಕರು ನೀತಿಗೆಟ್ಟ, ಸೌಖ್ಯವೇ ಮುಖ್ಯ ಪುರುಷಾರ್ಥವೆಂಬ, ಸ್ವಾರ್ಥಮಗ್ನ ಜೀವಿತಗಳನ್ನು ನಡೆಸಿದರು. ಆದರೆ ಕ್ರಿಸ್ತನ ಕುರಿತಾದ ವಾಕ್ಯವು ಅವರನ್ನು ಬದಲಾಯಿಸಿತು, ಮತ್ತು ತಮ್ಮ ಪಾಪಗಳಿಗಾಗಿ ಕ್ಷಮಾಪಣೆಯನ್ನು ಅವರು ಪಡೆದಿದ್ದಾರೆ. ಪೌಲನು ಹೀಗೆ ಬರೆದಾಗ ಅದನ್ನು ಬಲವತ್ತಾಗಿ ವ್ಯಕ್ತಪಡಿಸಿದನು: “ಅನ್ಯಾಯಗಾರರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂಬದು ನಿಮಗೆ ತಿಳಿಯದೋ? ಮೋಸಹೋಗಬೇಡಿರಿ, ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು ಕಳ್ಳರು ಲೋಭಿಗಳು ಕುಡಿಕರು ಬೈಯುವವರು ಸುಲುಕೊಳ್ಳುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ. ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ; . . . ಆದರೂ . . . ತೊಳೆದುಕೊಂಡಿರಿ.” (ಓರೆಅಕ್ಷರಗಳು ನಮ್ಮವು.)—1 ಕೊರಿಂಥ 6:9-11.
16 ತಮ್ಮ ಅಶಾಸ್ತ್ರೀಯ ನಡತೆಯ ವಿಷಯದಲ್ಲಿ ಪಶ್ಚಾತ್ತಾಪಪಟ್ಟು, ತಿರುಗಿಕೊಂಡು, ಕ್ರಿಸ್ತನ ಮತ್ತು ಅವನ ಬೋಧನೆಗಳ ನಿಜ ಹಿಂಬಾಲಕರಾಗುವವರನ್ನು ಯೆಹೋವನು ಸಮ್ಮತಿಸುತ್ತಾನೆಂಬುದು ವ್ಯಕ್ತ. ಅವರು ತಮ್ಮ ನೆರೆಯವರನ್ನು ತಮ್ಮಂತೆಯೇ ನಿಜವಾಗಿಯೂ ಪ್ರೀತಿಸುತ್ತಾರೆ ಮತ್ತು ಅದನ್ನು, ಕಿವಿಗೊಡುವವರೆಲ್ಲರಿಗೆ ಜೀವದ ಸಂದೇಶವನ್ನು ನೀಡುವ ಒಂದು ಶುಶ್ರೂಷೆಯಲ್ಲಿ ಪಟ್ಟುಹಿಡಿಯುವಂತಹ, ಅನೇಕ ರೀತಿಗಳಲ್ಲಿ ತೋರಿಸುತ್ತಾರೆ.—2 ತಿಮೊಥೆಯ 4:5.
“ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು”
17. ಸತ್ಯಾರಾಧನೆಗಾಗಿರುವ ಹತ್ತನೆಯ ಆವಶ್ಯಕತೆಯೇನಾಗಿದೆ? ಉದಾಹರಣೆಗಳನ್ನು ಕೊಡಿರಿ.
17 ತನ್ನನ್ನು ಆತ್ಮ ಮತ್ತು ಸತ್ಯದಲ್ಲಿ ಆರಾಧಿಸುವವರಿಗಾಗಿ ಯೆಹೋವನ ಹತ್ತನೆಯ ಆವಶ್ಯಕತೆಯೊಂದಿದೆ—ಶುದ್ಧ ಬೋಧನೆ. (ಯೋಹಾನ 4:23, 24) ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದು: “ನೀವು . . . ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.” (ಯೋಹಾನ 8:31, 32) ಅಮರ ಪ್ರಾಣ, ನರಕಾಗ್ನಿ, ಮತ್ತು ಪರ್ಗಟರಿಯಂತಹ, ದೇವರನ್ನು ಅವಮಾನಿಸುವ ಬೋಧನೆಗಳಿಂದ ಬೈಬಲಿನ ಸತ್ಯವು ನಮ್ಮನ್ನು ಸ್ವತಂತ್ರಗೊಳಿಸುತ್ತದೆ. (ಪ್ರಸಂಗಿ 9:5, 6, 10; ಯೆಹೆಜ್ಕೇಲ 18:4, 20) ಅದು ನಮ್ಮನ್ನು ಕ್ರೈಸ್ತಪ್ರಪಂಚದ “ಅತಿ ಪವಿತ್ರ ತ್ರಯೈಕ್ಯ”ದ ಬಬಿಲೋನ್ಯ ರಹಸ್ಯದಿಂದ ಸ್ವತಂತ್ರಗೊಳಿಸುತ್ತದೆ. (ಧರ್ಮೋಪದೇಶಕಾಂಡ 4:35; 6:4; 1 ಕೊರಿಂಥ 15:27, 28) ಬೈಬಲ್ ಸತ್ಯಕ್ಕೆ ವಿಧೇಯತೆಯು, ಪ್ರೀತಿಪರ, ಚಿಂತಿಸುವ, ದಯಾಪರ, ಕೃಪಾಳು ಜನರನ್ನು ಫಲಿಸುತ್ತದೆ. ಸತ್ಯ ಕ್ರೈಸ್ತತ್ವವು, ಟೊಮಾಸ್ ಡಾ ಟಾರ್ಕ್ಮಾಡಾನಂತಹ ಬದ್ಧವೈರದ, ಅಸಹಿಷ್ಣುತೆಯ ಪಾಷಂಡ ವಿಚಾರಣಾಧಿಕಾರಿಗಳನ್ನು ಅಥವಾ ಧಾರ್ಮಿಕ ಯುದ್ಧಗಳ ಪೋಪ್ ಪದಾಧಿಕಾರದ ಪ್ರವರ್ಧಕರಂತಹ ದ್ವೇಷಭರಿತ ಯುದ್ಧ ಪ್ರೇರಕರನ್ನು ಎಂದೂ ಪೋಷಿಸಿಲ್ಲ. ಆದರೆ ಇತಿಹಾಸದಲ್ಲೆಲ್ಲಾ, ಕಡಿಮೆ ಪಕ್ಷ ನಿಮ್ರೋದನ ಸಮಯದಂದಿನಿಂದ ಇಂದಿನ ವರೆಗೆ, ಮಹಾ ಬಾಬೆಲ್ ಈ ರೀತಿಯ ಫಲವನ್ನು ಉತ್ಪಾದಿಸಿದೆ.—ಆದಿಕಾಂಡ 10:8, 9.
ಭಿನ್ನತಾಸೂಚಕವಾದ ಒಂದು ಹೆಸರು
18. (ಎ) ಸತ್ಯಾರಾಧನೆಗಾಗಿರುವ ಹತ್ತು ಆವಶ್ಯಕತೆಗಳನ್ನು ಯಾರು ತಲಪುತ್ತಾರೆ ಮತ್ತು ಹೇಗೆ? (ಬಿ) ನಮ್ಮ ಮುಂದಿರುವ ಆಶೀರ್ವಾದವನ್ನು ಬಾಧ್ಯವಾಗಿ ಪಡೆಯಲು ನಾವು ವ್ಯಕ್ತಿಗತವಾಗಿ ಏನನ್ನು ಮಾಡಬೇಕು?
18 ಸತ್ಯಾರಾಧನೆಯ ಈ ಹತ್ತು ಆವಶ್ಯಕತೆಗಳನ್ನು ಇಂದು ಯಾರು ನಿಜವಾಗಿ ಪೂರೈಸುತ್ತಾರೆ? ತಮ್ಮ ಸಮಗ್ರತೆ ಮತ್ತು ಶಾಂತಿಯ ದಾಖಲೆಗಾಗಿ ಜ್ಞಾತರಾಗಿದ್ದು ಇತರರಿಂದ ಗುರುತಿಸಲ್ಪಡುವವರು ಯಾರಾಗಿದ್ದಾರೆ? “ಲೋಕದ ಭಾಗವಾಗಿರ”ದೇ ಇರುವುದಕ್ಕಾಗಿ ಯೆಹೋವನ ಸಾಕ್ಷಿಗಳು ಭೂಗೋಲದ ಸುತ್ತಲೂ ಹೆಸರುವಾಸಿಯಾಗಿದ್ದಾರೆ. (ಯೋಹಾನ 15:19, NW; 17:14, 16; 18:36) ಯೇಸು ಕ್ರಿಸ್ತನು ತನ್ನ ತಂದೆಗೆ ಒಬ್ಬ ನಂಬಿಗಸ್ತ ಸಾಕ್ಷಿಯಾಗಿದ್ದಂತೆ, ಯೆಹೋವನ ಜನರು ಆತನ ನಾಮವನ್ನು ಧರಿಸಿಕೊಳ್ಳಲು ಮತ್ತು ಆತನ ಸಾಕ್ಷಿಗಳಾಗಿರಲು ಸನ್ಮಾನಿತರಾಗಿದ್ದಾರೆ. ಅದು ಏನನ್ನು ಪ್ರತಿನಿಧಿಸುತ್ತದೊ ಅದರ ಪ್ರಕಾರ ಜೀವಿಸುವ ನಮ್ಮ ಜವಾಬ್ದಾರಿಯ ಕುರಿತಾಗಿ ಪ್ರಜ್ಞೆಯುಳ್ಳವರಾಗಿರುತ್ತಾ ನಾವು ಆ ನಾಮದ ಧಾರಕರಾಗಿದ್ದೇವೆ. ಮತ್ತು ಆತನ ಸಾಕ್ಷಿಗಳೋಪಾದಿ, ಎಂತಹ ಒಂದು ಮಹಿಮಾಭರಿತ ಪ್ರತೀಕ್ಷೆಯು ನಮ್ಮ ಮುಂದಿದೆ! ಇಲ್ಲಿ ಭೂಮಿಯಲ್ಲಿ ಪುನಸ್ಸ್ಥಾಪಿತವಾದೊಂದು ಪ್ರಮೋದವನದಲ್ಲಿ, ವಿಶ್ವ ಪರಮಾಧಿಕಾರಿಯನ್ನು ಆರಾಧಿಸುವ, ಒಂದು ವಿಧೇಯ, ಐಕ್ಯ ಮಾನವ ಕುಟುಂಬದ ಭಾಗವಾಗಿರುವ ಪ್ರತೀಕ್ಷೆ. ಅಂತಹ ಒಂದು ಆಶೀರ್ವಾದವನ್ನು ಪಡೆಯಲು, ನಾವು ನಮ್ಮನ್ನೇ ಸತ್ಯಾರಾಧನೆಯೊಂದಿಗೆ ಸ್ಪಷ್ಟವಾಗಿ ಗುರುತಿಸಿಕೊಳ್ಳುವುದನ್ನು ಮತ್ತು “ಆತನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ” ಆಗಿರುವುದರಿಂದ ಯೆಹೋವನ ಸಾಕ್ಷಿಗಳೆಂಬ ಹೆಸರನ್ನು ಹೆಮ್ಮೆಯಿಂದ ಧರಿಸುವುದನ್ನು ನಾವು ಮುಂದುವರಿಸೋಣ!—ಪ್ರಕಟನೆ 19:2; ಯೆಶಾಯ 43:10-12; ಯೆಹೆಜ್ಕೇಲ 3:11.
[ಪಾದಟಿಪ್ಪಣಿ]
a ಬೈಬಲ್ ಭಾಷಾಂತರಗಳು ತಾವಾಗಿಯೇ ದೇವರಿಂದ ಪ್ರೇರಿತವಾಗಿಲ್ಲ. ಭಾಷಾಂತರಗಳು ವಸ್ತುತಃ ಬೈಬಲು ದಾಖಲಿಸಲ್ಪಟ್ಟಂತಹ ಮೂಲ ಭಾಷೆಗಳ ತಿಳಿವಳಿಕೆಯ ವ್ಯತ್ಯಾಸಗಳನ್ನು ಪ್ರತಿಬಿಂಬಿಸಬಹುದು.
ನೀವು ಹೇಗೆ ಉತ್ತರಿಸುವಿರಿ?
◻ ಮಹಾ ಬಾಬೆಲಿನ ನಾಶನವನ್ನು ಯೆಹೋವನ ಸೇವಕರು ಹೇಗೆ ಪರಿಗಣಿಸುತ್ತಾರೆ?
◻ ಸತ್ಯಾರಾಧನೆಗಾಗಿರುವ ಮುಖ್ಯ ಆವಶ್ಯಕತೆಗಳು ಯಾವುವು?
◻ ಸತ್ಯವು ನಿಮ್ಮನ್ನು ಹೇಗೆ ಸ್ವತಂತ್ರಗೊಳಿಸುತ್ತದೆ?
◻ ಯೆಹೋವನ ಸಾಕ್ಷಿಗಳೋಪಾದಿ ನಮಗೆ ಯಾವ ವಿಶೇಷ ಗೌರವವಿದೆ?
[ಪುಟ 17 ರಲ್ಲಿರುವ ಚಿತ್ರಗಳು]
ಯೆಹೋವನ ಸಾಕ್ಷಿಗಳು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಿದ್ದಾರೆ ಮತ್ತು ಕಲಿಸುತ್ತಿದ್ದಾರೆ
[ಪುಟ 18 ರಲ್ಲಿರುವ ಚಿತ್ರ]
ಸತ್ಯ ಕ್ರೈಸ್ತರು ಲೌಕಿಕ ರಾಜಕೀಯ ಮತ್ತು ಯುದ್ಧಗಳ ವಿಷಯದಲ್ಲಿ ಯಾವಾಗಲೂ ತಟಸ್ಥರಾಗಿ ಉಳಿದಿದ್ದಾರೆ
[ಕೃಪೆ]
Airplane: Courtesy of the Ministry of Defense, London