ಸರ್ವ ಧರ್ಮಗಳೂ ದೇವರನ್ನು ಮೆಚ್ಚಿಸುತ್ತವೆಯೆ?
ಸರ್ವ ಧರ್ಮಗಳೂ ದೇವರನ್ನು ಮೆಚ್ಚಿಸುತ್ತವೆಂದು ನೀವು ಅಭಿಪ್ರಯಿಸುತ್ತೀರೊ? ಪ್ರಾಯಶಃ ನಿಮಗೆ ತಿಳಿದಿರುವ ಯಾವುದೇ ಆರಾಧನಾ ವಿಧವು, ಕಡಿಮೆಪಕ್ಷ ಸ್ವಲ್ಪ ಮಟ್ಟಿಗಾದರೂ ಸ್ವದರ್ತನೆಯನ್ನು ಪ್ರೋತ್ಸಾಹಿಸುತ್ತದೆ. ಆದರೆ ದೇವರನ್ನು ಮೆಚ್ಚಿಸಲು ಅದು ಸಾಕೊ?
‘ನಿನ್ನ ಆರಾಧನೆಯಲ್ಲಿ ಯಥಾರ್ಥನಾಗಿರು, ಆಗ ದೇವರಿಗೆ ಮೆಚ್ಚಿಕೆಯಾಗುವುದು. ಸರ್ವ ಧರ್ಮಗಳಲ್ಲಿಯೂ ಒಳಿತಿದೆ,’ ಎನ್ನುತ್ತಾರೆ ಕೆಲವರು. ಉದಾಹರಣೆಗಾಗಿ, ಬಾಹಾಯೀ ನಂಬಿಕೆಯು ಈ ವೀಕ್ಷಣವನ್ನು, ಜಗತ್ತಿನ ಒಂಭತ್ತು ಪ್ರಧಾನ ಧರ್ಮಗಳ ನಂಬಿಕೆಗಳನ್ನು ಆಯ್ದುಕೊಳ್ಳುವ ಹಂತದ ಮಟ್ಟಿಗೆ ಸ್ವೀಕರಿಸಿದೆ. ಈ ಧಾರ್ಮಿಕ ಗುಂಪು, ಈ ಎಲ್ಲ ಧರ್ಮಗಳು ದೈವಿಕ ಮೂಲದವುಗಳೂ ಒಂದೇ ಸತ್ಯದ ಅಂಶಗಳೂ ಆಗಿವೆಯೆಂದು ಭಾವಿಸುತ್ತದೆ. ಇದು ಹೇಗೆ ಸಾಧ್ಯ?
ಅಲ್ಲದೆ, ಒಂದು ಧರ್ಮವು ತನ್ನ ಸದಸ್ಯರನ್ನು, ಅನೇಕ ಜನರನ್ನು ಸಾಯಿಸುವ ಸಾಧ್ಯತೆಯೊಂದಿಗೆ, ಸಾರ್ವಜನಿಕ ಸ್ಥಳಗಳಲ್ಲಿ ನರಾನಿಲವನ್ನು ಇಡುವಂತೆ ಅವರಿಗೆ ಆಜ್ಞಾಪಿಸುವಾಗ, ಅದು ಹೇಗೆ ದೇವರನ್ನು ಮೆಚ್ಚಿಸಸಾಧ್ಯವಿದೆಯೆಂದು ಕುತೂಹಲಪಡುವ ಹಕ್ಕು ನಿಮಗಿದೆ. ಆ ಅಪವಾದವು ಜಪಾನಿನಲ್ಲಿನ ಒಂದು ಧರ್ಮನಿಷ್ಠ ಪಂಗಡದ ಮೇಲೆ ಹಾಕಲ್ಪಟ್ಟಿದೆ. ಅಥವಾ, ತನ್ನ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಒಂದು ಧರ್ಮವು ಮಾಡುವುದಾದರೆ, ದೇವರು ಅದನ್ನು ಮೆಚ್ಚುತ್ತಾನೆಯೆ? ಕೆಲವು ವರ್ಷಗಳ ಹಿಂದೆ, ಮತೀಯ ನಾಯಕ ಜಿಮ್ ಜೋನ್ಸ್ನ ಹಿಂಬಾಲಕರಿಗೆ ಅದು ಸಂಭವಿಸಿತು.
ಆರಂಭದ ಸಮಯಗಳಿಗೆ ಹಿಂದಿರುಗಿ ನೋಡುವಾಗ, ನಾವು ಸೂಕ್ತವಾಗಿ ಹೀಗೆ ಪ್ರಶ್ನಿಸಬಹುದು, ಧರ್ಮಗಳು, 1618ರಿಂದ 1648ರ ವರೆಗೆ ಹೋರಾಡಲ್ಪಟ್ಟ ಮೂವತ್ತು ವರ್ಷಗಳ ಯುದ್ಧದಲ್ಲಿನ ವಿದ್ಯಮಾನದಲ್ಲಿ ಮಾಡಿದಂತೆ, ಯುದ್ಧೋದ್ಯಮವನ್ನು ಉತ್ತೇಜಿಸುವಾಗ, ಅವು ದೇವರನ್ನು ಮೆಚ್ಚಿಸಸಾಧ್ಯವಿದೆಯೆ? ದಿ ಯೂನಿವರ್ಸಲ್ ಹಿಸ್ಟರಿ ಆಫ್ ದ ವರ್ಲ್ಡ್ಗನುಸಾರ, ಕ್ಯಾಥೊಲಿಕ್ ಮತ್ತು ಪ್ರಾಟೆಸ್ಟಂಟರ ನಡುವೆ ನಡೆದ ಆ ಧಾರ್ಮಿಕ ಹೋರಾಟವು, “ಯೂರೋಪಿಯನ್ ಇತಿಹಾಸದ ಅತಿ ಭಯಂಕರ ಯುದ್ಧಗಳಲ್ಲಿ ಒಂದು” ಆಗಿತ್ತು.
11ರಿಂದ 13ನೆಯ ಶತಮಾನಗಳ ತನಕ ನಡೆದ ಧರ್ಮಯುದ್ಧಗಳು ಕೂಡ ಭಯಂಕರವಾದ ರಕ್ತಪಾತವನ್ನು ಫಲಿಸಿದವು. ಉದಾಹರಣೆಗೆ, ಒಂದನೆಯ ಧರ್ಮಯುದ್ಧದಲ್ಲಿ, ಕ್ರೈಸ್ತ ಧರ್ಮಯೋಧರು ಅನಿಸಿಕೊಂಡಿದ್ದವರು ಯೆರೂಸಲೇಮಿನ ಮುಸ್ಲಿಮ್ ಮತ್ತು ಯೆಹೂದಿ ನಿವಾಸಿಗಳನ್ನು ಕ್ರೂರವಾಗಿ ಹತಿಸಿದರು.
13ನೆಯ ಶತಮಾನದಲ್ಲಿ ತೊಡಗಿ, ಸುಮಾರು 600 ವರ್ಷಗಳ ವರೆಗೆ ಮುಂದುವರಿದ ಮಠೀಯ ನ್ಯಾಯಸ್ಥಾನದ ಸಮಯದಲ್ಲಿ ಏನು ಸಂಭವಿಸಿತೆಂಬುದನ್ನೂ ಪರಿಗಣಿಸಿರಿ. ಧಾರ್ಮಿಕ ನಾಯಕರ ಆಜ್ಞೆಯ ಮೇರೆಗೆ, ಸಾವಿರಾರು ಜನರು ಚಿತ್ರಹಿಂಸೆ ಮಾಡಲ್ಪಟ್ಟು, ಸುಡುವ ಮೂಲಕ ಕೊಲ್ಲಲ್ಪಟ್ಟರು. ಕ್ರಿಸ್ತನ ಪ್ರತಿನಿಧಿಗಳು—ಪೋಪರ ಅಧಿಕಾರಾವಧಿಯ ದೋಷದ ಪಕ್ಕ (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ ಪೀಟರ್ ಡೇ ರೋಸ ಹೇಳುವುದು: “ಪೋಪನ ಹೆಸರಿನಲ್ಲಿ, [ಮಠೀಯ ನ್ಯಾಯಾಧಿಪತಿಗಳು] [ಮಾನವ] ಕುಲದ ಇತಿಹಾಸದಲ್ಲೇ ಮಾನವ ಶಿಷ್ಟತೆಯ ಮೇಲೆ ಅತಿ ಭಯಂಕರವಾದ ಮತ್ತು ಲಂಬಿಸಿದ ಆಕ್ರಮಣಕ್ಕೆ ಜವಾಬ್ದಾರರಾಗಿದ್ದರು.” ಡೊಮಿನಿಕನ್ ಮಠೀಯ ನ್ಯಾಯಾಧಿಪತಿಯಾಗಿದ್ದ ಸ್ಪೆಯ್ನ್ನ ಟಾರ್ಕ್ವಿಮಾಡ ಎಂಬವನ ಕುರಿತು ಡೇ ರೋಸ ಹೇಳುವುದು: “1483ರಲ್ಲಿ ನೇಮಿಸಲ್ಪಟ್ಟ ಅವನು, ಹದಿನೈದು ವರ್ಷಗಳ ಕಾಲ ದಬ್ಬಾಳಿಕೆಯಿಂದ ಆಳಿದನು. ಅವನಿಗೆ ಬಲಿಯಾದವರ ಸಂಖ್ಯೆಯು 1,14,000ಕ್ಕೂ ಹೆಚ್ಚಾಗಿದ್ದು, ಅವರಲ್ಲಿ 10,220 ಮಂದಿ ಸುಡಲ್ಪಟ್ಟರು.”
ರಕ್ತಾಪರಾಧಿಗಳಾಗಿರುವವರು, ಕ್ರೈಸ್ತಪ್ರಪಂಚದ ಧರ್ಮಗಳು ಮಾತ್ರವಲ್ಲ ಎಂಬುದು ನಿಶ್ಚಯ. ಪಾನ್ಸೇ ಎಂಬ ತನ್ನ ಕೃತಿಯಲ್ಲಿ, ಫ್ರೆಂಚ್ ತತ್ವಜ್ಞಾನಿ ಬ್ಲ್ಯಾಸ್ ಪಾಸ್ಕಲ್ ಗಮನಿಸಿದ್ದು: “ಮನುಷ್ಯರು ಕೆಟ್ಟದ್ದನ್ನು ಧಾರ್ಮಿಕ ನಿಶ್ಚಿತಾಭಿಪ್ರಾಯದಿಂದ ಮಾಡುವಷ್ಟು ಪೂರ್ತಿಯಾಗಿ ಮತ್ತು ಹರ್ಷಚಿತ್ತರಾಗಿ ಇನ್ನೆಂದೂ ಮಾಡುವುದಿಲ್ಲ.”
ಅವುಗಳ ಫಲಗಳಿಂದ ಗುರುತಿಸಲ್ಪಡುವುದು
ದೇವರ ದೃಷ್ಟಿಕೋನದಿಂದ, ಒಂದು ಧರ್ಮದ ಸ್ವೀಕಾರಾರ್ಹತೆಯು ಒಂದೇ ಒಂದು ಅಂಶದ ಮೇಲೆ ಆಧಾರಿಸಿರುವುದಿಲ್ಲ. ಒಂದು ಧರ್ಮವು ಆತನಿಗೆ ಸ್ವೀಕಾರಾರ್ಹವಾಗಿರಬೇಕಾದರೆ, ಅದರ ಬೋಧನೆಗಳೂ ಚಟುವಟಿಕೆಗಳೂ ಆತನ ಲಿಖಿತ ಸತ್ಯವಾಕ್ಯವಾದ ಬೈಬಲಿಗನುಸಾರವಾಗಿರಬೇಕು. (ಕೀರ್ತನೆ 119:160; ಯೋಹಾನ 17:17) ದೇವಾನುಮೋದಿತ ಆರಾಧನೆಯ ಫಲವು ಯೆಹೋವ ದೇವರ ಮಟ್ಟಗಳಿಗೆ ಹೊಂದಿಕೆಯಾಗಿರಬೇಕು.
ತನ್ನ ಪರ್ವತ ಪ್ರಸಂಗದಲ್ಲಿ, ದೇವರನ್ನು ಪ್ರತಿನಿಧಿಸುತ್ತೇವೆಂದು ಸುಳ್ಳಾಗಿ ಪ್ರತಿಪಾದಿಸುವ ಪ್ರವಾದಿಗಳಿರುವರೆಂದು ಯೇಸು ಕ್ರಿಸ್ತನು ಸೂಚಿಸಿದನು. ಯೇಸು ಹೇಳಿದ್ದು: “ಸುಳ್ಳುಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರ್ರಿ. ಅವರು ಕುರೀವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುತ್ತಾರೆ; ಆದರೆ ಒಳಗೆ ನೋಡಿದರೆ ಅವರು ಹಿಡುಕೊಂಡು ಹೋಗುವ ತೋಳಗಳೇ. ಅವರ ಫಲಗಳಿಂದ ಅವರನ್ನು ತಿಳುಕೊಳ್ಳುವಿರಿ. ಮುಳ್ಳುಗಿಡಗಳಲ್ಲಿ ದ್ರಾಕ್ಷೇಹಣ್ಣುಗಳನ್ನೂ ಮದ್ದುಗುಣಿಕೇಗಿಡಗಳಲ್ಲಿ ಅಂಜೂರಗಳನ್ನೂ ಕೊಯ್ಯುವದುಂಟೇ? ಹಾಗೆಯೇ ಒಳ್ಳೇ ಮರಗಳೆಲ್ಲಾ ಒಳ್ಳೇ ಫಲವನ್ನು ಕೊಡುವವು; ಹುಳುಕು ಮರವು ಕೆಟ್ಟ ಫಲವನ್ನು ಕೊಡುವದು. ಒಳ್ಳೇ ಮರವು ಕೆಟ್ಟ ಫಲವನ್ನು ಕೊಡಲಾರದು; ಹುಳುಕು ಮರವು ಒಳ್ಳೇ ಫಲವನ್ನು ಕೊಡಲಾರದು. ಒಳ್ಳೇ ಫಲವನ್ನು ಕೊಡದ ಎಲ್ಲಾ ಮರಗಳನ್ನು ಕಡಿದು ಬೆಂಕಿಯಲ್ಲಿ ಹಾಕುತ್ತಾರೆ. ಹೀಗಿರಲಾಗಿ ಅವರ ಫಲಗಳಿಂದ ಅವರನ್ನು ತಿಳಿದುಕೊಳ್ಳುವಿರಿ.” (ಮತ್ತಾಯ 7:15-20) ನಾವು ಆತ್ಮಿಕವಾಗಿ ಎಚ್ಚರಿಕೆಯಿಂದಿರಬೇಕೆಂದು ಈ ಮಾತುಗಳು ತೋರಿಸುತ್ತವೆ. ಒಬ್ಬ ಧಾರ್ಮಿಕ ಮುಖಂಡನೊ ಗುಂಪೊ ದೇವರಿಗೂ ಕ್ರಿಸ್ತನಿಗೂ ಸ್ವೀಕಾರಾರ್ಹವಾಗಿದೆಯೆಂದು ನಾವು ನೆನಸಬಹುದು, ಆದರೆ ನಮ್ಮ ಗ್ರಹಿಕೆ ತಪ್ಪಾಗಿರಸಾಧ್ಯವಿದೆ.
ಸಾವಧಾನದ ಆವಶ್ಯಕತೆ
ಒಂದು ಧರ್ಮವು ತನಗೆ ದೇವರ ಮನ್ನಣೆಯಿದೆಯೆಂದು ಹೇಳಿಕೊಂಡು, ಅದರ ಪುರೋಹಿತರು ಬೈಬಲಿನಿಂದ ವಚನಗಳನ್ನು ಓದುತ್ತಾರಾದರೂ, ಅದು ದೇವರನ್ನು ಮೆಚ್ಚಿಸುವ ಆರಾಧನಾ ವಿಧವಾಗಿದೆಯೆಂಬುದನ್ನು ಅದು ಅರ್ಥೈಸುವುದಿಲ್ಲ. ಅದರ ನಾಯಕರು, ದೇವರು ಅವರ ಮೂಲಕ ಕೆಲಸ ನಡೆಸುತ್ತಾನೊ ಎಂಬಂತೆ ತೋರಿಸಲು ಭಾವೋತ್ತೇಜಕ ಸಂಗತಿಗಳನ್ನೂ ಮಾಡಬಹುದು. ಹಾಗಿದ್ದರೂ, ಆ ಧರ್ಮವು, ದೇವರಿಗೆ ಅಂಗೀಕಾರಾರ್ಹವಾದ ಫಲವನ್ನು ಉತ್ಪಾದಿಸದೆ, ಇನ್ನೂ ಸುಳ್ಳಾಗಿರಸಾಧ್ಯವಿದೆ. ಮೋಶೆಯ ದಿನದ ಮಾಯಾವಿದ್ಯೆಯನ್ನು ಆಚರಿಸುತ್ತಿದ್ದ ಐಗುಪ್ತದೇಶದಲ್ಲಿನ ಮಂತ್ರಗಾರರು ಭಾವೋತ್ಪಾದಕ ಸಂಗತಿಗಳನ್ನು ಮಾಡಶಕ್ತರಾಗಿದ್ದರೂ, ಅವರಿಗೆ ನಿಶ್ಚಯವಾಗಿಯೂ ದೇವರ ಮನ್ನಣೆಯಿರಲಿಲ್ಲ.—ವಿಮೋಚನಕಾಂಡ 7:8-22.
ಹಿಂದಿನ ಕಾಲದಲ್ಲಿದ್ದಂತೆಯೇ ಇಂದು, ಅನೇಕ ಧರ್ಮಗಳು, ದೇವರು ಸತ್ಯವೆಂದು ಪ್ರಕಟಿಸುವ ವಿಷಯಗಳಿಗೆ ಅಂಟಿಕೊಳ್ಳುವ ಬದಲಾಗಿ, ಮಾನವ ಕಲ್ಪನೆಗಳನ್ನೂ ತತ್ವಜ್ಞಾನಗಳನ್ನೂ ಪ್ರವರ್ಧಿಸುತ್ತವೆ. ಹಾಗಾದರೆ, ಬೈಬಲಿನ ಈ ಎಚ್ಚರಿಕೆಯು ವಿಶೇಷವಾಗಿ ತಕ್ಕದ್ದಾಗಿದೆ: “ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕಬಾಲಬೋಧೆಯನ್ನೂ ಅನುಸರಿಸುವವರು ನಿಮ್ಮಲ್ಲಿ ಬಂದು ಮೋಸವಾದ ನಿರರ್ಥಕ ತತ್ವಜ್ಞಾನಬೋಧನೆಯಿಂದ ನಿಮ್ಮ ಮನಸ್ಸನ್ನು ಕೆಡಿಸಿ ನಿಮ್ಮನ್ನು ವಶಮಾಡಿಕೊಂಡಾರು, ಎಚ್ಚರಿಕೆಯಾಗಿರ್ರಿ.”—ಕೊಲೊಸ್ಸೆ 2:8.
ಒಳ್ಳೆಯ ಮತ್ತು ಕೆಟ್ಟ ಫಲದ ಕುರಿತು ಮಾತನಾಡಿದ ಬಳಿಕ, ಯೇಸು ಹೇಳಿದ್ದು: “ನನ್ನನ್ನು ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು. ಸ್ವಾಮೀ, ಸ್ವಾಮೀ, ನಿನ್ನ ಹೆಸರಿನ ಮೇಲೆ ನಾವು ಬೋಧನೆ ಹೇಳಲಿಲ್ಲವೇ? ನಿನ್ನ ಹೆಸರಿನ ಮೇಲೆ ದೆವ್ವಗಳನ್ನು ಬಿಡಿಸಲಿಲ್ಲವೇ? ನಿನ್ನ ಹೆಸರಿನ ಮೇಲೆ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ಆ ದಿನದಲ್ಲಿ ಎಷ್ಟೋ ಜನರು ನನಗೆ ಹೇಳುವರು. ಆಗ ನಾನು ಅವರಿಗೆ—ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮೀರಿನಡೆಯುವವರೇ, ನನ್ನಿಂದ ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು.”—ಮತ್ತಾಯ 7:21-23.
ಫಲವನ್ನು ಪರೀಕ್ಷಿಸಿರಿ
ಹಾಗಾದರೆ ಸ್ಪಷ್ಟವಾಗಿ, ಒಂದು ಧರ್ಮವು ದೇವರಿಗೆ ಸ್ವೀಕಾರಾರ್ಹವಾಗಿದೆಯೆಂದು ತೀರ್ಮಾನಿಸುವ ಮೊದಲು ಅದರ ಫಲದ ಕಡೆಗೆ ನೋಡುವುದು ಅಗತ್ಯ. ಉದಾಹರಣೆಗೆ, ಆ ಧರ್ಮವು ರಾಜಕೀಯದಲ್ಲಿ ಒಳಗೂಡಿದೆಯೆ? ಹಾಗಿದ್ದರೆ, ಯಾಕೋಬ 4:4ರಲ್ಲಿ ದಾಖಲೆಯಾಗಿರುವ ಈ ಮಾತುಗಳನ್ನು ಗಮನಿಸಿರಿ: “ಲೋಕಕ್ಕೆ ಸ್ನೇಹಿತನಾಗಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ.” ಅದಲ್ಲದೆ, ಯೇಸು ತನ್ನ ನಿಜ ಹಿಂಬಾಲಕರ ಕುರಿತು ಹೇಳಿದ್ದು: “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ.” (ಯೋಹಾನ 17:16) ದೇವರ ದೃಷ್ಟಿಯಲ್ಲಿ ಒಳ್ಳೆಯದಾಗಿರುವ ಧರ್ಮವು, ಅದೃಶ್ಯ ಆತ್ಮಜೀವಿ, ಪಿಶಾಚನಾದ ಸೈತಾನನೆಂಬ “ಕೆಡುಕನ ವಶದಲ್ಲಿ ಬಿದ್ದಿ”ರುವಂತಹ ಈ ಲೋಕದ ರಾಜಕೀಯದಲ್ಲಿ ಒಳಗೂಡಿರುವುದಿಲ್ಲ. (1 ಯೋಹಾನ 5:19) ಬದಲಾಗಿ, ದೇವರು ಮನ್ನಣೆ ಕೊಡುವ ಧರ್ಮವು, ಯೇಸು ಕ್ರಿಸ್ತನ ಕೆಳಗಿರುವ ದೇವರ ರಾಜ್ಯವನ್ನು ನಿಷ್ಠೆಯಿಂದ ಸಮರ್ಥಿಸುತ್ತ, ಆ ಸ್ವರ್ಗೀಯ ರಾಜ್ಯದ ಕುರಿತ ಸುವಾರ್ತೆಯನ್ನು ಪ್ರಕಟಿಸುತ್ತದೆ.—ಮಾರ್ಕ 13:10.
ಒಂದು ಧರ್ಮವು ಅಸಹಕಾರ ಚಳುವಳಿಯನ್ನು ಸಮರ್ಥಿಸುವುದಾದರೆ, ಆ ಧರ್ಮವು ದೇವರಿಗೆ ಸ್ವೀಕಾರಾರ್ಹವಾಗಿದೆಯೊ? ನಾವು ಅಪೊಸ್ತಲ ಪೌಲನ ಸಲಹೆಗೆ ಕಿವಿಗೊಡುವಲ್ಲಿ, ಉತ್ತರವು ಸುವ್ಯಕ್ತ: “ಅಧಿಪತಿಗಳಿಗೂ ಅಧಿಕಾರಿಗಳಿಗೂ ಅಧೀನರಾಗಿ ವಿಧೇಯರಾಗಿರಬೇಕೆಂತಲೂ, ಸಕಲಸತ್ಕಾರ್ಯಗಳನ್ನು ಮಾಡುವದಕ್ಕೆ ಸಿದ್ಧರಾಗಿರಬೇಕೆಂತಲೂ, . . . ಅವರಿಗೆ ಜ್ಞಾಪಕಕೊಡು.” (ತೀತ 3:1, 2) ತನ್ನ ಹಿಂಬಾಲಕರು “ಕೈಸರನದನ್ನು ಕೈಸರನಿಗೆ . . . ದೇವರದನ್ನು ದೇವರಿಗೆ” ಕೊಡಬೇಕೆಂಬುದನ್ನು ಯೇಸು ತೋರಿಸಿದನೆಂಬುದು ನಿಶ್ಚಯ.—ಮಾರ್ಕ 12:17.
ಒಂದು ಧರ್ಮವು ರಾಷ್ಟ್ರಗಳ ಯುದ್ಧಗಳಲ್ಲಿ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆಂದು ಭಾವಿಸೋಣ. ಒಂದನೆಯ ಪೇತ್ರ 3:11, ‘ಒಳ್ಳೆಯದನ್ನು ಮಾಡಲು’ ಮತ್ತು “ಸಮಾಧಾನವನ್ನು ಹಾರೈಸಿ ಅದಕ್ಕೋಸ್ಕರ ಪ್ರಯತ್ನ”ಪಡಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. ಒಂದು ಧರ್ಮದ ಸದಸ್ಯರು ಇನ್ನೊಂದು ದೇಶದ ತಮ್ಮ ಜೊತೆ ಆರಾಧಕರನ್ನು ಯುದ್ಧದಲ್ಲಿ ಕೊಲ್ಲಲು ಸಿದ್ಧರಾಗಿರುವಾಗ, ಅದು ದೇವರನ್ನು ಹೇಗೆ ಮೆಚ್ಚಿಸಬಲ್ಲದು? ದೇವರ ಮನ್ನಣೆಯಿರುವ ಧರ್ಮದ ಸದಸ್ಯರು, ಆತನ ಪ್ರಧಾನ ಗುಣವಾದ ಪ್ರೀತಿಯನ್ನು ಪ್ರತಿಬಿಂಬಿಸುತ್ತಾರೆ. ಮತ್ತು ಯೇಸು ಹೇಳಿದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:35) ಆ ಪ್ರೀತಿಗೆ, ರಾಷ್ಟ್ರಗಳ ಯುದ್ಧಗಳಲ್ಲಿ ಬೆಳೆಸಲ್ಪಡುವ ಹಿಂಸಾತ್ಮಕ ದ್ವೇಷದೊಂದಿಗೆ ಯಾವ ಸಂಬಂಧವೂ ಇರುವುದಿಲ್ಲ.
ಸತ್ಯ ಧರ್ಮವು, ಯುದ್ಧಸದೃಶ ಜನರನ್ನು ಶಾಂತಿಪ್ರಿಯರನ್ನಾಗಿ ಪರಿವರ್ತಿಸುತ್ತದೆ. ಇದನ್ನು ಈ ಮಾತುಗಳಲ್ಲಿ ಮುಂತಿಳಿಸಲಾಗಿತ್ತು: “ಅವರೋ ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.” (ಯೆಶಾಯ 2:4) ದ್ವೇಷದ ನುಡಿಗಳನ್ನು ಕಾರುವ ಬದಲು, ಸತ್ಯಾರಾಧನೆಯನ್ನು ಅಭ್ಯಸಿಸುವವರು ಈ ಆಜ್ಞೆಯೊಂದಿಗೆ ಅನುವರ್ತಿಸುತ್ತಾರೆ: “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.”—ಮತ್ತಾಯ 22:39.
ಸತ್ಯ ಧರ್ಮಾನುಸಾರಿಗಳು, ಅನೈತಿಕ ಜೀವನ ಶೈಲಿಗಳನ್ನು ಸ್ವೀಕರಿಸಲು ನಿರಾಕರಿಸುತ್ತ, ಯೆಹೋವ ದೇವರ ಉನ್ನತ ಮಟ್ಟಗಳಿಗನುಸಾರ ಜೀವಿಸಪ್ರಯತ್ನಿಸುತ್ತಾರೆ. ದೇವರ ವಾಕ್ಯವು ಹೇಳುವುದು: “ಅನ್ಯಾಯಗಾರರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂಬದು ನಿಮಗೆ ತಿಳಿಯದೋ? ಮೋಸಹೋಗಬೇಡಿರಿ, ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು ಕಳ್ಳರು ಲೋಭಿಗಳು ಕುಡಿಕರು ಬೈಯುವವರು ಸುಲುಕೊಳ್ಳುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ. ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ; ಆದರೂ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮದಲ್ಲಿಯೂ ತೊಳೆದುಕೊಂಡಿರಿ, ದೇವಜನರಾದಿರಿ, ನೀತಿವಂತರೆಂಬ ನಿರ್ಣಯವನ್ನು ಹೊಂದಿದಿರಿ.”—1 ಕೊರಿಂಥ 6:9-11.
ನಿರ್ಣಾಯಕ ಕಾರ್ಯಕ್ಕಾಗಿರುವ ಒಂದು ಸಮಯ
ಸುಳ್ಳು ಆರಾಧನೆ ಮತ್ತು ಸತ್ಯ ಧರ್ಮದ ಮಧ್ಯೆ ಇರುವ ವ್ಯತ್ಯಾಸವನ್ನು ಗ್ರಹಿಸುವುದು ಅತ್ಯಾವಶ್ಯಕ. ಬೈಬಲಿನ ಪ್ರಕಟನೆ ಪುಸ್ತಕದಲ್ಲಿ, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವನ್ನು, “ಭೂರಾಜರು ಜಾರತ್ವ ಮಾಡಿದ” ಸಾಂಕೇತಿಕ ವೇಶ್ಯೆಯಾದ, “ಮಹಾ ಬಾಬೆಲ್” ಆಗಿ ಗುರುತಿಸಲಾಗಿದೆ. ಆಕೆ ರಕ್ತಾಪರಾಧಿಯಾಗಿದ್ದು, “ಅಸಹ್ಯ ವಸ್ತುಗಳಿಂದ ಮತ್ತು ಆಕೆಯ ಜಾರತ್ವದ ಅಶುದ್ಧ ವಸ್ತುಗಳಿಂದ ತುಂಬಿರುವ” ಒಂದು ಚಿನ್ನದ ಪಾತ್ರೆಯನ್ನು ಹಿಡಿದುಕೊಳ್ಳುತ್ತಾಳೆ. (ಪ್ರಕಟನೆ 17:1-6, NW) ಆಕೆಯ ಸಂಬಂಧದಲ್ಲಿ ದೇವರಿಗೆ ಯಾವುದೂ ಸ್ವೀಕಾರಾರ್ಹವಾಗಿಲ್ಲ.
ಇದು ನಿರ್ಣಾಯಕ ಕಾರ್ಯಕ್ಕಾಗಿ ಒಂದು ಸಮಯವಾಗಿದೆ. ಇನ್ನೂ ಮಹಾ ಬಾಬೆಲಿನಲ್ಲಿರುವ ಯಥಾರ್ಥ ಜನರಿಗೆ, ನಮ್ಮ ಪ್ರೀತಿಯ ಸೃಷ್ಟಿಕರ್ತನು ಈ ಕರೆಯನ್ನು ಕಳುಹಿಸುತ್ತಾನೆ: “ಅವಳೊಂದಿಗೆ ಅವಳ ಪಾಪಗಳಲ್ಲಿ ಪಾಲುಗಾರರಾಗಲು ನೀವು ಬಯಸದಿದ್ದರೆ, ಮತ್ತು ಅವಳ ಉಪದ್ರವಗಳ ಅಂಶವನ್ನು ನೀವು ಪಡೆಯಲು ನೀವು ಬಯಸದಿದ್ದರೆ, ನನ್ನ ಜನರೇ, ಅವಳನ್ನು ಬಿಟ್ಟು ಹೊರಗೆ ಬನ್ನಿರಿ.”—ಪ್ರಕಟನೆ 18:4, NW.
ದೇವರನ್ನು ಮೆಚ್ಚಿಸುವ ಧರ್ಮವನ್ನು ಅನುಸರಣೆಮಾಡಲು ನೀವು ಬಯಸುವಲ್ಲಿ, ಯೆಹೋವನ ಸಾಕ್ಷಿಗಳ ಹೆಚ್ಚಿನ ಪರಿಚಯವನ್ನು ಏಕೆ ಮಾಡಿಕೊಳ್ಳಬಾರದು? ಜೊತೆಯಲ್ಲಿರುವ ತಖ್ತೆಯು ಅವರ ನಂಬಿಕೆಗಳಲ್ಲಿ ಕೆಲವನ್ನು, ಇವುಗಳಿಗಾಗಿರುವ ಶಾಸ್ತ್ರೀಯ ಕಾರಣಗಳೊಂದಿಗೆ ಪಟ್ಟಿಮಾಡುತ್ತದೆ. ಸಾಕ್ಷಿಗಳ ನಂಬಿಕೆಗಳು ದೇವರ ವಾಕ್ಯದೊಂದಿಗೆ ಸಮರಸವಾಗಿವೆಯೊ ಎಂದು ನೋಡಲು ನಿಮ್ಮ ಬೈಬಲನ್ನು ಪರೀಕ್ಷಿಸಿರಿ. ಅವರ ಧರ್ಮವು ಸತ್ಯಾರಾಧನೆಯಿಂದ ನೀವು ನಿರೀಕ್ಷಿಸುವ ಫಲವನ್ನು ಉತ್ಪಾದಿಸುತ್ತದೆಯೆ ಎಂಬುದನ್ನು ಕಂಡುಹಿಡಿಯಲು ತನಿಖೆಮಾಡಿರಿ. ಅದು ಹಾಗಿದೆಯೆಂದು ನೀವು ಕಂಡುಹಿಡಿಯುವಲ್ಲಿ, ದೇವರನ್ನು ಮೆಚ್ಚಿಸುವ ಧರ್ಮವನ್ನು ನೀವು ಪತ್ತೆಮಾಡಿರುವಿರಿ.
[ಪುಟ 5 ರಲ್ಲಿರುವ ಚೌಕ]
ಯೆಹೋವನ ಸಾಕ್ಷಿಗಳು ನಂಬುವ ವಿಷಯಗಳು
ನಂಬಿಕೆ ಬೈಬಲ್ಸಂಬಂಧಿತ ಆಧಾರ
ದೇವರ ಹೆಸರು ಯೆಹೋವ ಎಂದಾಗಿದೆ ವಿಮೋಚನಕಾಂಡ 6:3; ಕೀರ್ತನೆ 83:18
ಬೈಬಲು ದೇವರ ವಾಕ್ಯವಾಗಿದೆ ಯೋಹಾನ 17:17; 2 ತಿಮೊಥೆಯ 3:16, 17
ಯೇಸು ಕ್ರಿಸ್ತನು ದೇವರ ಪುತ್ರನು ಮತ್ತಾಯ 3:16, 17; ಯೋಹಾನ 14:28
ಮಾನವ ಕುಲವು ವಿಕಾಸಗೊಳ್ಳಲಿಲ್ಲ, ಆದಿಕಾಂಡ 1:27; 2:7
ಬದಲಾಗಿ ಸೃಷ್ಟಿಸಲ್ಪಟ್ಟಿತು
ಮಾನವ ಮರಣಕ್ಕೆ ಕಾರಣವು ರೋಮಾಪುರ 5:12
ಪ್ರಥಮ ಮಾನವನ ಪಾಪವಾಗಿದೆ
ಪ್ರಾಣವು ಮರಣದಲ್ಲಿ ಪ್ರಸಂಗಿ 9:5, 10;
ಇಲ್ಲದೆ ಹೋಗುತ್ತದೆ ಯೆಹೆಜ್ಕೇಲ 18:4
(ಹೆಲ್) ಮಾನವ ಕುಲದ ಯೋಬ 14:13;
ಸಾಮಾನ್ಯ ಸಮಾಧಿಯಾಗಿದೆ ಪ್ರಕಟನೆ 20:13,
ಕಿಂಗ್ ಜೇಮ್ಸ್ ವರ್ಷನ್
ಮೃತರಿಗಾಗಿರುವ ನಿರೀಕ್ಷೆಯು ಯೋಹಾನ 5:28, 29; 11:25;
ಪುನರುತ್ಥಾನವಾಗಿದೆ ಅ. ಕೃತ್ಯಗಳು 24:15
ಕ್ರಿಸ್ತನು ತನ್ನ ಮತ್ತಾಯ 20:28;
ಭೂಜೀವಿತವನ್ನು 1 ಪೇತ್ರ 2:24; 1 ಯೋಹಾನ 2:1, 2
ವಿಧೇಯ ಮಾನವರಿಗಾಗಿ ಪ್ರಾಯಶ್ಚಿತ್ತವಾಗಿ ಕೊಟ್ಟನು
ಪ್ರಾರ್ಥನೆಗಳು ಕೇವಲ ಮತ್ತಾಯ 6:9;
ಯೆಹೋವನಿಗೆ ಯೋಹಾನ 14:6, 13, 14
ಕ್ರಿಸ್ತನ ಮೂಲಕ ಮಾಡಲ್ಪಡಬೇಕು
ನೈತಿಕತೆಗಳ ಕುರಿತಾದ 1 ಕೊರಿಂಥ 6:9, 10
ಬೈಬಲ್ ನಿಯಮಗಳು ಪಾಲಿಸಲ್ಪಡಬೇಕು
ಆರಾಧನೆಯಲ್ಲಿ ವಿಗ್ರಹಗಳು ವಿಮೋಚನಕಾಂಡ 20:4-6;
ಬಳಸಲ್ಪಡಬಾರದು 1 ಕೊರಿಂಥ 10:14
ಪ್ರೇತವ್ಯವಹಾರವಾದವು ಧರ್ಮೋಪದೇಶಕಾಂಡ 18:10-12;
ವಿಸರ್ಜಿಸಲ್ಪಡಬೇಕು ಗಲಾತ್ಯ 5:19-21
ಒಬ್ಬನ ದೇಹದೊಳಕ್ಕೆ ಆದಿಕಾಂಡ 9:3, 4;
ರಕ್ತವನ್ನು ತೆಗೆದುಕೊಳ್ಳಬಾರದು ಅ. ಕೃತ್ಯಗಳು 15:28, 29
ಯೇಸುವಿನ ನಿಜ ಹಿಂಬಾಲಕರು ಯೋಹಾನ 15:19; 17:16;
ಲೋಕದಿಂದ ಪ್ರತ್ಯೇಕವಾಗಿರುತ್ತಾರೆ ಯಾಕೋಬ 1:27; 4:4
ಕ್ರೈಸ್ತರು ಸುವಾರ್ತೆಯನ್ನು ಯೆಶಾಯ 43:10-12;
ಸಾರುತ್ತ, ಸಾಕ್ಷಿನೀಡುತ್ತಾರೆ ಮತ್ತಾಯ 24:14; 28:19, 20
ಪೂರ್ತಿ ಜಲ ನಿಮಜ್ಜನದಿಂದಾಗುವ ಮಾರ್ಕ 1:9, 10;
ದೀಕ್ಷಾಸ್ನಾನವು ಯೋಹಾನ 3:22; ಅ. ಕೃತ್ಯಗಳು 19:4, 5
ದೇವರಿಗೆ ಮಾಡುವ ಸಮರ್ಪಣೆಯನ್ನು ಸೂಚಿಸುತ್ತದೆ
ಧಾರ್ಮಿಕ ಬಿರುದುಗಳು ಯೋಬ 32:21, 22;
ಅಶಾಸ್ತ್ರೀಯವಾಗಿವೆ ಮತ್ತಾಯ 23:8-12
ನಾವು “ಅಂತ್ಯಕಾಲ”ದಲ್ಲಿ ದಾನಿಯೇಲ 12:4; ಮತ್ತಾಯ 24:3-14;
ಜೀವಿಸುತ್ತಿದ್ದೇವೆ 2 ತಿಮೊಥೆಯ 3:1-5
ಕ್ರಿಸ್ತನ ಸಾನ್ನಿಧ್ಯವು ಮತ್ತಾಯ 24:3;
ಅದೃಶ್ಯವಾಗಿದೆ ಯೋಹಾನ 14:19; 1 ಪೇತ್ರ 3:18
ಸೈತಾನನು ಈ ಲೋಕದ ಯೋಹಾನ 12:31;
ಅದೃಶ್ಯ ಅಧಿಪತಿಯಾಗಿದ್ದಾನೆ 1 ಯೋಹಾನ 5:19
ದೇವರು ಈಗಿನ ದುಷ್ಟ ದಾನಿಯೇಲ 2:44;
ವಿಷಯಗಳ ವ್ಯವಸ್ಥೆಯನ್ನು ಪ್ರಕಟನೆ 16:14, 16;
ನಾಶಮಾಡುವನು 18:1-8
ಕ್ರಿಸ್ತನ ಕೆಳಗಿರುವ ಯೆಶಾಯ 9:6, 7;
ದೇವರ ರಾಜ್ಯವು ಭೂಮಿಯನ್ನು ದಾನಿಯೇಲ 7:13, 14; ಮತ್ತಾಯ 6:10
ನೀತಿಯಲ್ಲಿ ಆಳುವುದು
ಒಂದು “ಚಿಕ್ಕ ಹಿಂಡು” ಲೂಕ 12:32;
ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳುವುದು ಪ್ರಕಟನೆ 14:1-4; 20:4
ದೇವರ ಮನ್ನಣೆ ಲೂಕ 23:43;
ಪಡೆಯುವ ಇತರರು ಯೋಹಾನ 3:16;
ಪ್ರಮೋದವನವಾದ ಭೂಮಿಯಲ್ಲಿ ಪ್ರಕಟನೆ 21:1-4
ನಿತ್ಯಜೀವ ಪಡೆಯುವರು
[ಪುಟ 4 ರಲ್ಲಿರುವ ಚಿತ್ರ]
ಮಠೀಯ ನ್ಯಾಯವಿಚಾರಣೆಗಳ ಸಮಯದಲ್ಲಿ ಸಾವಿರಾರು ಜನರು ಕೊಲೆಗೈಯಲ್ಪಟ್ಟರು
[ಪುಟ 6 ರಲ್ಲಿರುವ ಚಿತ್ರ]
ಧರ್ಮಯುದ್ಧಗಳು ಭಯಂಕರ ರಕ್ತಪಾತವನ್ನು ಫಲಿಸಿದವು
[ಪುಟ 7 ರಲ್ಲಿರುವ ಚಿತ್ರ]
ಸತ್ಯ ಧರ್ಮವನ್ನು ಅದರ ಒಳ್ಳೆಯ ಫಲದಿಂದ ತಿಳಿಯಲಾಗುತ್ತದೆ
[ಪುಟ 2 ರಲ್ಲಿರುವ ಚಿತ್ರ ಕೃಪೆ]
Cover: Garo Nalbandian