ವಾಚಕರಿಂದ ಪ್ರಶ್ನೆಗಳು
ಯೇಸು ಹೇಳಿದ್ದು: “ನೀವು ಯಾರ ಪಾಪಗಳನ್ನು ಕ್ಷಮಿಸಿಬಿಡುತ್ತೀರೋ ಅವರಿಗೆ ಅವುಗಳ ಕ್ಷಮಾಪಣೆಯಾಗುತ್ತದೆ; ಯಾರ ಪಾಪಗಳನ್ನು ಕ್ಷಮಿಸದೆ ಉಳಿಸುತ್ತೀರೋ ಅವರಿಗೆ ಅವುಗಳು ಉಳಿಯುತ್ತವೆ.” ಕ್ರೈಸ್ತರು ಪಾಪಗಳನ್ನು ಕ್ಷಮಿಸಬಲ್ಲರೆಂಬುದನ್ನು ಈ ಮಾತುಗಳು ಅರ್ಥೈಸುತ್ತವೊ?
ಸಾಮಾನ್ಯ ಕ್ರೈಸ್ತರು ಅಥವಾ ಸಭೆಗಳಲ್ಲಿರುವ ನೇಮಿತ ಹಿರಿಯರೂ, ಪಾಪಗಳನ್ನು ಕ್ಷಮಿಸಲು ದೈವಿಕ ಅಧಿಕಾರವನ್ನು ಹೊಂದಿರುತ್ತಾರೆಂದು ತೀರ್ಮಾನಿಸಲು ಯಾವ ಶಾಸ್ತ್ರೀಯ ಆಧಾರವೂ ಇಲ್ಲ. ಆದರೂ, ಮೇಲೆ ಉಲ್ಲೇಖಿಸಲ್ಪಟ್ಟಿರುವ, ಯೋಹಾನ 20:23ರಲ್ಲಿ ಯೇಸು ತನ್ನ ಶಿಷ್ಯರಿಗೆ ಏನನ್ನು ಹೇಳಿದನೋ ಅದು, ದೇವರು ಅಪೊಸ್ತಲರಿಗೆ ಈ ಸಂಬಂಧದಲ್ಲಿ ವಿಶೇಷ ಅಧಿಕಾರಗಳನ್ನು ಕೊಟ್ಟನೆಂಬುದನ್ನು ಸೂಚಿಸುತ್ತದೆ. ಮತ್ತು ಅಲ್ಲಿರುವ ಯೇಸುವಿನ ಹೇಳಿಕೆಯು, ಅವನು ಮತ್ತಾಯ 18:18ರಲ್ಲಿ ಸ್ವರ್ಗೀಯ ನಿರ್ಣಯಗಳ ಕುರಿತಾಗಿ ಹೇಳಿದಂತಹ ವಿಷಯಕ್ಕೆ ಸಂಬಂಧಿಸಬಹುದು.
ಕ್ರೈಸ್ತರು, ಎಫೆಸ 4:32ರಲ್ಲಿ ದಾಖಲಿಸಲ್ಪಟ್ಟಿರುವ ಅಪೊಸ್ತಲ ಪೌಲನ ಸಲಹೆಗೆ ಹೊಂದಿಕೆಯಲ್ಲಿ, ನಿರ್ದಿಷ್ಟ ತಪ್ಪುಗಳನ್ನು ಕ್ಷಮಿಸಸಾಧ್ಯವಿದೆ: “ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರ್ರಿ.” ಅಜಾಗರೂಕ ಮಾತುಕತೆಯಂತಹ, ಕ್ರೈಸ್ತರ ನಡುವಿನ ವೈಯಕ್ತಿಕ ಸಮಸ್ಯೆಗಳ ಕುರಿತಾಗಿ ಪೌಲನು ಇಲ್ಲಿ ಮಾತಾಡುತ್ತಿದ್ದನು. ಒಬ್ಬರು ಇನ್ನೊಬ್ಬರನ್ನು ಕ್ಷಮಿಸುತ್ತಾ, ಅವರು ಈ ವಿಷಯಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು. ಯೇಸುವಿನ ಮಾತುಗಳನ್ನು ಜ್ಞಾಪಿಸಿಕೊಳ್ಳಿ: “ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವದೆ ಎಂಬದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು [“ಮತ್ತೆ ಸ್ನೇಹ ಬೆಳೆಸು,” NW]; ಆ ಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು.”—ಮತ್ತಾಯ 5:23, 24; 1 ಪೇತ್ರ 4:8.
ಆದಾಗಲೂ, ಅವನು ಈ ನಿರ್ದಿಷ್ಟ ಸಭಿಕರಿಗೆ ಅನಂತರ ಇನ್ನೇನನ್ನು ಹೇಳಿದನೋ ಅದರಿಂದ ಸೂಚಿಸಲ್ಪಟ್ಟಿರುವಂತೆ, ಯೇಸು ಹೆಚ್ಚು ಗಂಭೀರವಾದ ಪಾಪಗಳಿಗೆ ನಿರ್ದೇಶಿಸುತ್ತಿದ್ದನೆಂದು ಯೋಹಾನ 20:23ರ ಪೂರ್ವಾಪರವು ಸೂಚಿಸುತ್ತದೆ. ಯಾಕೆಂದು ನಾವು ನೋಡೋಣ.
ಅವನು ಪುನರುತ್ಥಾನಗೊಳಿಸಲ್ಪಟ್ಟ ದಿನದಂದು, ಯೇಸು ತನ್ನ ಶಿಷ್ಯರಿಗೆ ಯೆರೂಸಲೇಮಿನಲ್ಲಿ ಬೀಗಹಾಕಲ್ಪಟ್ಟಿದ್ದ ಒಂದು ಕೋಣೆಯಲ್ಲಿ ಪ್ರತ್ಯಕ್ಷನಾದನು. ವೃತ್ತಾಂತವು ಹೇಳುವುದು: “ಯೇಸು ಅವರಿಗೆ—ನಿಮಗೆ ಸಮಾಧಾನವಾಗಲಿ ಎಂದು ತಿರಿಗಿ ಹೇಳಿ—ತಂದೆ ನನ್ನನ್ನು ಕಳುಹಿಸಿಕೊಟ್ಟ ಹಾಗೆಯೇ ನಾನೂ ನಿಮ್ಮನ್ನು ಕಳುಹಿಸಿಕೊಡುತ್ತೇನೆ ಅಂದನು. ಇದನ್ನು ಹೇಳಿ ಅವರ ಮೇಲೆ ಊದಿ ಅವರಿಗೆ—ಪವಿತ್ರಾತ್ಮವರವನ್ನು ತಕ್ಕೊಳ್ಳಿರಿ; ನೀವು ಯಾರ ಪಾಪಗಳನ್ನು ಕ್ಷಮಿಸಿಬಿಡುತ್ತೀರೋ ಅವರಿಗೆ ಅವುಗಳ ಕ್ಷಮಾಪಣೆಯಾಗುತ್ತದೆ; ಯಾರ ಪಾಪಗಳನ್ನು ಕ್ಷಮಿಸದೆ ಉಳಿಸುತ್ತೀರೋ ಅವರಿಗೆ ಅವುಗಳು ಉಳಿಯುತ್ತವೆ ಅಂದನು.”—ಯೋಹಾನ 20:21-23.
ಪ್ರಸ್ತಾಪಿಸಲ್ಪಟ್ಟಿದ್ದಂತಹ ಶಿಷ್ಯರು ಪ್ರಾಯಶಃ ಪ್ರಮುಖವಾಗಿ ನಂಬಿಗಸ್ತ ಅಪೊಸ್ತಲರಾಗಿದ್ದಿರುವುದು ಸಂಭವನೀಯ. (ವಚನ 24ನ್ನು ಹೋಲಿಸಿರಿ.) ಅವರ ಮೇಲೆ ಊದಿ “ಪವಿತ್ರಾತ್ಮವರವನ್ನು ತಕ್ಕೊಳ್ಳಿರಿ,” ಎಂದು ಹೇಳುವ ಮೂಲಕ, ಬಲು ಬೇಗನೆ ಪವಿತ್ರಾತ್ಮವರವು ಅವರ ಮೇಲೆ ಸುರಿಸಲ್ಪಡುವುದೆಂದು ಯೇಸು ಸಂಕೇತಾರ್ಥವಾಗಿ ಸೂಚನೆಯನ್ನು ಕೊಟ್ಟನು. ಪಾಪಗಳ ಕ್ಷಮಾಪಣೆಯ ವಿಷಯದಲ್ಲಿ ಅವರಿಗೆ ಅಧಿಕಾರವಿರುವುದೆಂದು ಯೇಸು ಮುಂದುವರಿಸುತ್ತಾ ಹೇಳಿದನು. ತರ್ಕಸಂಗತವಾಗಿ, ಅವನ ಎರಡು ಹೇಳಿಕೆಗಳು ಜೋಡಿಸಲ್ಪಟ್ಟಿವೆ, ಒಂದು ಇನ್ನೊಂದಕ್ಕೆ ನಡಿಸುತ್ತದೆ.
ಅವನ ಪುನರುತ್ಥಾನದ ಐವತ್ತು ದಿನಗಳ ಬಳಿಕ, ಪಂಚಾಶತ್ತಮ ದಿನದಂದು, ಯೇಸು ಪವಿತ್ರಾತ್ಮವನ್ನು ಸುರಿಸಿದನು. ಆದು ಏನನ್ನು ಸಾಧಿಸಿತು? ಒಂದು ಸಾಧನೆ ಏನಂದರೆ, ಆ ಆತ್ಮವನ್ನು ಪಡೆದವರು, ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಜೊತೆ ರಾಜರಾಗಿರುವ ನಿರೀಕ್ಷೆಯೊಂದಿಗೆ, ದೇವರ ಆತ್ಮಿಕ ಪುತ್ರರಾಗಿ ಪುನಃ ಜನಿಸಿದರು. (ಯೋಹಾನ 3:3-5; ರೋಮಾಪುರ 8:15-17; 2 ಕೊರಿಂಥ 1:22) ಆದರೆ ಆತ್ಮದ ಆ ಸುರಿಸುವಿಕೆಯು ಹೆಚ್ಚನ್ನು ಮಾಡಿತು. ಕೆಲವು ಗ್ರಾಹಕರು ಅದ್ಭುತಕರ ಶಕ್ತಿಗಳನ್ನು ಗಳಿಸಿದರು. ಅದರ ಮೂಲಕ ಕೆಲವರು ತಾವು ತಿಳಿದಿರದಿದ್ದ ವಿದೇಶೀಯ ಭಾಷೆಗಳಲ್ಲಿ ಮಾತಾಡಸಾಧ್ಯವಿತ್ತು. ಇತರರಿಗೆ ಪ್ರವಾದಿಸಲು ಸಾಧ್ಯವಾಯಿತು. ಇನ್ನೂ ಇತರರು ಅಸ್ವಸ್ಥರನ್ನು ಗುಣಪಡಿಸಲು ಮತ್ತು ಸತ್ತವರನ್ನು ಜೀವಕ್ಕೆ ಎಬ್ಬಿಸಲು ಶಕ್ತರಾದರು.—1 ಕೊರಿಂಥ 12:4-11.
ಯೋಹಾನ 20:22ರಲ್ಲಿರುವ ಯೇಸುವಿನ ಮಾತುಗಳು, ಶಿಷ್ಯರ ಮೇಲೆ ಪವಿತ್ರಾತ್ಮದ ಈ ಸುರಿಸುವಿಕೆಗೆ ನಿರ್ದೇಶಿಸಿದ್ದರಿಂದ, ಪಾಪಗಳನ್ನು ಕ್ಷಮಿಸುವ ಕುರಿತಾದ ಆತನ ಸಂಬಂಧಿತ ಮಾತುಗಳು, ಅಪೊಸ್ತಲರಿಗೆ ಪವಿತ್ರಾತ್ಮದ ಒಂದು ಕಾರ್ಯಾಚರಣೆಯ ಮೂಲಕ ಪಾಪಗಳನ್ನು ಕ್ಷಮಿಸುವ ಅಥವಾ ಅವನ್ನು ಉಳಿಸುವ ಒಂದು ಅಪೂರ್ವ ಅಧಿಕಾರವು ದೈವಿಕವಾಗಿ ಒದಗಿಸಲ್ಪಟ್ಟಿತ್ತೆಂಬುದನ್ನು ಅರ್ಥೈಸುವಂತೆ ತೋರುತ್ತದೆ.—ಮಾರ್ಚ್ 1, 1949ರ ದ ವಾಚ್‌ಟವರ್ ಪುಟ 78ನ್ನು ನೋಡಿರಿ.
ಅಪೊಸ್ತಲರು ಅಂತಹ ಅಧಿಕಾರವನ್ನು ಉಪಯೋಗಿಸಿದ ಪ್ರತಿಯೊಂದು ಸಮಯದ ಸಂಪೂರ್ಣ ದಾಖಲೆಯನ್ನು ಬೈಬಲ್ ನಮಗೆ ಕೊಡುವುದಿಲ್ಲ, ಹಾಗೆಯೇ ವಿವಿಧ ಭಾಷೆಗಳಲ್ಲಿ ಮಾತಾಡಲು, ಪ್ರವಾದಿಸಲು ಅಥವಾ ಗುಣಪಡಿಸಲು ಅವರು ಅದ್ಭುತಕರವಾದೊಂದು ಕೊಡುಗೆಯನ್ನು ಉಪಯೋಗಿಸಿದ ಪ್ರತಿಯೊಂದು ವಿದ್ಯಮಾನವನ್ನೂ ಅದು ದಾಖಲಿಸುವುದಿಲ್ಲ.—2 ಕೊರಿಂಥ 12:12; ಗಲಾತ್ಯ 3:5; ಇಬ್ರಿಯ 2:4.
ಪಾಪಗಳನ್ನು ಕ್ಷಮಿಸಲು ಅಥವಾ ಉಳಿಸಿಕೊಳ್ಳಲು ಅಪೊಸ್ತಲ ಸಂಬಂಧಿತ ಅಧಿಕಾರವನ್ನು ಒಳಗೂಡಿದ್ದ ಒಂದು ವಿದ್ಯಮಾನವು, ಪವಿತ್ರಾತ್ಮಕ್ಕೆ ಮೋಸ ಮಾಡಿದ ಅನನೀಯ ಮತ್ತು ಸಪ್ಫೈರಳನ್ನು ಒಳಗೊಂಡಿತ್ತು. ಯೋಹಾನ 20:22, 23ರಲ್ಲಿ ನಾವೇನನ್ನು ಓದುತ್ತೇವೊ ಅದನ್ನು ಯೇಸು ಉಚ್ಚರಿಸುವುದನ್ನು ಕೇಳಿದ ಪೇತ್ರನು, ಅನನೀಯ ಮತ್ತು ಸಪ್ಫೈರಳನ್ನು ಬಯಲುಪಡಿಸಿದನು. ಪೇತ್ರನು ಪ್ರಥಮವಾಗಿ ಅನನೀಯನನ್ನು ಸಂಬೋಧಿಸಿದನು, ಅವನು ಸ್ಥಳದಲ್ಲೇ ಮೃತನಾದನು. ಅನಂತರ ಸಪ್ಫೈರಳು ಬಂದು ಆ ಸುಳ್ಳನ್ನು ಮುಂದುವರಿಸಿದಾಗ, ಪೇತ್ರನು ಆಕೆಯ ನ್ಯಾಯತೀರ್ಪನ್ನು ಘೋಷಿಸಿದನು. ಪೇತ್ರನು ಆಕೆಯ ಪಾಪವನ್ನು ಕ್ಷಮಿಸಲಿಲ್ಲ ಬದಲಾಗಿ ಹೇಳಿದ್ದು: “ಅಗೋ, ನಿನ್ನ ಗಂಡನನ್ನು ಹೂಣಿಟ್ಟವರು ಬಂದು ಬಾಗಿಲಿನಲ್ಲಿ ಕಾಲಿಟ್ಟಿದ್ದಾರೆ, ನಿನ್ನನ್ನೂ ಹೊತ್ತುಕೊಂಡು ಹೋಗುವರು.” ಅವಳೂ ಸ್ಥಳದಲ್ಲೇ ಮೃತಳಾದಳು.—ಅ. ಕೃತ್ಯಗಳು 5:1-11.
ಈ ಸಂದರ್ಭದಲ್ಲಿ ಅಪೊಸ್ತಲ ಪೇತ್ರನು, ಪಾಪದ ಒಂದು ಖಚಿತ ಉಳಿಸಿಕೊಳ್ಳುವಿಕೆಯನ್ನು, ಅನನೀಯ ಮತ್ತು ಸಪ್ಫೈರಳ ಪಾಪವನ್ನು ದೇವರು ಕ್ಷಮಿಸನು ಎಂಬ ಒಂದು ಅದ್ಭುತಕರ ಜ್ಞಾನವನ್ನು ವ್ಯಕ್ತಪಡಿಸಲು ವಿಶೇಷ ಅಧಿಕಾರವನ್ನು ಉಪಯೋಗಿಸಿದನು. ಕ್ರಿಸ್ತನ ಯಜ್ಞದ ಆಧಾರದ ಮೇಲೆ ಪಾಪಗಳು ಕ್ಷಮಿಸಲ್ಪಟ್ಟಿವೆಯೆಂದು ಅವರು ನಿಶ್ಚಿತರಾಗಿದ್ದ ವಿದ್ಯಮಾನಗಳಲ್ಲಿ ಅಪೊಸ್ತಲರಿಗೆ ಅತಿಲೌಕಿಕ ಒಳನೋಟವಿದ್ದಂತೆ ಸಹ ತೋರುತ್ತದೆ. ಆದುದರಿಂದ ಆತ್ಮದಿಂದ ಅಧಿಕಾರ ನೀಡಲ್ಪಟ್ಟ ಆ ಅಪೊಸ್ತಲರು, ಪಾಪಗಳ ಕ್ಷಮಾಪಣೆಯನ್ನು ಅಥವಾ ಉಳಿಸಿಕೊಳ್ಳುವಿಕೆಯನ್ನು ಪ್ರಕಟಿಸಶಕ್ತರಾಗಿದ್ದರು.a
ಆ ಸಮಯದಲ್ಲಿನ ಎಲ್ಲಾ ಆತ್ಮಾಭಿಷಿಕ್ತ ಹಿರಿಯರಿಗೆ ಅಂತಹ ಅದ್ಭುತಕರ ಅಧಿಕಾರವಿತ್ತೆಂದು ಇದರ ಅರ್ಥವಲ್ಲ. ಕೊರಿಂಥದ ಸಭೆಯಿಂದ ಬಹಿಷ್ಕೃತನಾದ ಮನುಷ್ಯನ ಕುರಿತಾಗಿ ಅಪೊಸ್ತಲ ಪೌಲನು ಏನು ಹೇಳಿದನೋ ಅದರಿಂದ ನಾವು ಅದನ್ನು ನೋಡಸಾಧ್ಯವಿದೆ. ಪೌಲನು ‘ಆ ಮನುಷ್ಯನ ಪಾಪಗಳನ್ನು ನಾನು ಕ್ಷಮಿಸುತ್ತೇನೆ’ ಅಥವಾ ‘ಸ್ವರ್ಗದಲ್ಲಿ ಆ ಮನುಷ್ಯನು ಕ್ಷಮಿಸಲ್ಪಟ್ಟಿದ್ದಾನೆ, ಆದುದರಿಂದ ಅವನನ್ನು ಪುನಃ ಸ್ವೀಕರಿಸಿರಿ’ ಎಂದೂ ಹೇಳಲಿಲ್ಲ. ಬದಲಾಗಿ, ಪುನಃಸ್ಥಾಪಿಸಲ್ಪಟ್ಟ ಈ ಕ್ರೈಸ್ತನನ್ನು ಕ್ಷಮಿಸಲು ಮತ್ತು ಅವನಿಗಾಗಿ ಪ್ರೀತಿಯನ್ನು ತೋರಿಸಲು ಪೌಲನು ಇಡೀ ಸಭೆಯನ್ನು ಉತ್ತೇಜಿಸಿದನು. ಪೌಲನು ಕೂಡಿಸಿದ್ದು: “ನೀವು ಯಾರಿಗೆ ಯಾವದನ್ನು ಮನ್ನಿಸುತ್ತೀರೋ [“ಕ್ಷಮಿಸುತ್ತೀರೋ,” NW] ನಾನು ಸಹ ಮನ್ನಿಸುತ್ತೇನೆ [“ಕ್ಷಮಿಸುತ್ತೇನೆ,” NW].”—2 ಕೊರಿಂಥ 2:5-11.
ಆ ಮನುಷ್ಯನು ಸಭೆಯೊಳಗೆ ಪುನಃಸ್ಥಾಪಿಸಲ್ಪಟ್ಟ ನಂತರ, ಎಲ್ಲಾ ಕ್ರೈಸ್ತ ಸಹೋದರ ಸಹೋದರಿಯರು, ಅವನು ಏನನ್ನು ಮಾಡಿದ್ದನೋ ಅದನ್ನು ಅವನ ವಿರುದ್ಧ ಹಿಡಿಯದ ಅರ್ಥದಲ್ಲಿ ಕ್ಷಮಿಸಸಾಧ್ಯವಿತ್ತು. ಆದಾಗಲೂ ಪ್ರಥಮವಾಗಿ ಅವನು ಪಶ್ಚಾತ್ತಾಪಪಟ್ಟು, ಪುನಃಸ್ಥಾಪಿಸಲ್ಪಟ್ಟವನಾಗಿರಬೇಕು. ಅದು ಹೇಗೆ ಸಂಭವಿಸುವುದು?
ಕಳ್ಳತನ, ಸುಳ್ಳುಹೇಳುವಿಕೆ ಅಥವಾ ಘೋರವಾದ ಅನೈತಿಕತೆಯಂತಹ ಗಂಭೀರ ಪಾಪಗಳನ್ನು ಸಭಾ ಹಿರಿಯರು ನಿರ್ವಹಿಸಲಿಕ್ಕಿರುತ್ತದೆ. ಅವರನ್ನು ಪಶ್ಚಾತ್ತಾಪಕ್ಕೆ ಪ್ರಚೋದಿಸುತ್ತಾ, ಅಂತಹ ತಪ್ಪಿತಸ್ಥರನ್ನು ಸರಿಪಡಿಸಲು ಮತ್ತು ಗದರಿಸಲು ಅವರು ಪ್ರಯತ್ನಿಸುತ್ತಾರೆ. ಆದರೆ ಯಾರಾದರೂ ಪಶ್ಚಾತ್ತಾಪರಹಿತವಾಗಿ ಘನವಾದ ಪಾಪವನ್ನು ಆಚರಿಸಿದರೆ, ಆ ತಪ್ಪಿತಸ್ಥನನ್ನು ಬಹಿಷ್ಕರಿಸಲು ಈ ಹಿರಿಯರು ದೈವಿಕ ಮಾರ್ಗದರ್ಶನೆಯನ್ನು ಅನ್ವಯಿಸುತ್ತಾರೆ. (1 ಕೊರಿಂಥ 5:1-5, 11-13) ಯೇಸು ಯೋಹಾನ 20:23ರಲ್ಲಿ ಏನನ್ನು ಹೇಳಿದನೋ, ಅದು ಅಂತಹ ವಿದ್ಯಮಾನಗಳಲ್ಲಿ ಅನ್ವಯಿಸುವುದಿಲ್ಲ. ಈ ಹಿರಿಯರಿಗೆ, ಶಾರೀರಿಕವಾಗಿ ಅಸ್ವಸ್ಥರಾಗಿರುವವರನ್ನು ಗುಣಪಡಿಸುವ ಅಥವಾ ಸತ್ತವರನ್ನು ಎಬ್ಬಿಸುವ ಸಾಮರ್ಥ್ಯದಂತಹ, ಆತ್ಮದ ಅದ್ಭುತಕರವಾದ ವರದಾನಗಳಿಲ್ಲ—ಆ ವರದಾನಗಳು ಪ್ರಥಮ ಶತಮಾನದಲ್ಲಿ ತಮ್ಮ ಉದ್ದೇಶವನ್ನು ಪೂರೈಸಿದವು ಮತ್ತು ಅನಂತರ ಕೊನೆಗೊಂಡವು. (1 ಕೊರಿಂಥ 13:8-10) ಇನ್ನೂ ಹೆಚ್ಚಾಗಿ, ಯೆಹೋವನ ದೃಷ್ಟಿಯಲ್ಲಿ ಒಬ್ಬ ಗುರುತರ ಪಾಪಿಯನ್ನು ಶುದ್ಧನೆಂದು ಘೋಷಿಸುವ ಅರ್ಥದಲ್ಲಿ ಇಂದು ಹಿರಿಯರಿಗೆ ಗುರುತರವಾದ ತಪ್ಪುಗೈಯುವಿಕೆಯನ್ನು ಕ್ಷಮಿಸುವ ದೈವಿಕ ಅಧಿಕಾರವಿಲ್ಲ. ಈ ರೀತಿಯ ಕ್ಷಮೆಯು ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ ಆಗಬೇಕು ಮತ್ತು ಕೇವಲ ಯೆಹೋವನು ಆ ಆಧಾರದ ಮೇಲೆ ಕ್ಷಮಿಸಬಲ್ಲನು.—ಕೀರ್ತನೆ 32:5; ಮತ್ತಾಯ 6:9, 12; 1 ಯೋಹಾನ 1:9.
ಪುರಾತನ ಕೊರಿಂಥದಲ್ಲಿನ ಮನುಷ್ಯನ ವಿದ್ಯಮಾನದಲ್ಲಿದ್ದಂತೆ, ಒಬ್ಬ ಘೋರ ಪಾಪಿಯು ಪಶ್ಚಾತ್ತಾಪಪಡಲು ನಿರಾಕರಿಸುವಾಗ, ಅವನು ಬಹಿಷ್ಕರಿಸಲ್ಪಡಲೇಬೇಕು. ಅವನು ಅನಂತರ ಪಶ್ಚಾತ್ತಾಪಪಟ್ಟು, ಪಶ್ಚಾತ್ತಾಪಕ್ಕೆ ತಕ್ಕಂತಹ ಕ್ರಿಯೆಗಳನ್ನು ಉತ್ಪಾದಿಸಿದರೆ, ದೈವಿಕ ಕ್ಷಮೆಯು ಸಾಧ್ಯ. (ಅ. ಕೃತ್ಯಗಳು 26:20) ಅಂತಹ ಒಂದು ಪರಿಸ್ಥಿತಿಯಲ್ಲಿ, ಯೆಹೋವನು ಆ ತಪ್ಪಿತಸ್ಥನನ್ನು ನಿಜವಾಗಿಯೂ ಕ್ಷಮಿಸಿದ್ದಾನೆಂಬುದನ್ನು ಹಿರಿಯರು ನಂಬಲು ಶಾಸ್ತ್ರಗಳು ಕಾರಣವನ್ನು ಕೊಡುತ್ತವೆ. ವ್ಯಕ್ತಿಯು ಒಮ್ಮೆ ಪುನಃಸ್ಥಾಪಿಸಲ್ಪಟ್ಟ ನಂತರ, ನಂಬಿಕೆಯಲ್ಲಿ ದೃಢನಾಗಲು ಹಿರಿಯರು ಅವನಿಗೆ ಆತ್ಮಿಕವಾಗಿ ಸಹಾಯ ಮಾಡಸಾಧ್ಯವಿದೆ. ಆ ಸಮಯದಲ್ಲಿ ಪುನಃಸ್ಥಾಪಿಸಲ್ಪಟ್ಟಿದ್ದ ಬಹಿಷ್ಕೃತ ಮನುಷ್ಯನನ್ನು ಕೊರಿಂಥದ ಕ್ರೈಸ್ತರು ಕ್ಷಮಿಸಿದಂತಹ ರೀತಿಯಲ್ಲೇ, ಸಭೆಯಲ್ಲಿರುವ ಇತರರು ಕ್ಷಮಿಸಸಾಧ್ಯವಿದೆ.
ವಿಷಯಗಳನ್ನು ಈ ರೀತಿಯಲ್ಲಿ ನಿರ್ವಹಿಸುವುದರಲ್ಲಿ, ಹಿರಿಯರು ನ್ಯಾಯತೀರ್ಪಿನ ತಮ್ಮ ಸ್ವಂತ ಮಟ್ಟಗಳನ್ನು ರಚಿಸಿಕೊಳ್ಳುವುದಿಲ್ಲ. ಅವರು ಬೈಬಲ್ ಸೂತ್ರಗಳನ್ನು ಅನ್ವಯಿಸಿಕೊಳ್ಳುತ್ತಾರೆ ಮತ್ತು ಯೆಹೋವನು ಇಟ್ಟಿರುವ ಶಾಸ್ತ್ರೀಯ ಕಾರ್ಯವಿಧಾನಗಳನ್ನು ನಿಕಟವಾಗಿ ಅನುಸರಿಸುತ್ತಾರೆ. ಹೀಗೆ, ಹಿರಿಯರ ವತಿಯಿಂದ ಯಾವುದೇ ಕ್ಷಮಿಸುವಿಕೆ ಅಥವಾ ಕ್ಷಮಿಸದಿರುವಿಕೆಯು, ಮತ್ತಾಯ 18:18ರಲ್ಲಿರುವ ಯೇಸುವಿನ ಮಾತುಗಳ ಅರ್ಥದಲ್ಲಿರುವುದು: “ಭೂಲೋಕದಲ್ಲಿ ನೀವು ಏನೇನು ಕಟ್ಟುತ್ತೀರೋ ಅದು ಪರಲೋಕದಲ್ಲಿಯೂ ಕಟ್ಟಿರುವದು; ಮತ್ತು ಭೂಲೋಕದಲ್ಲಿ ನೀವು ಏನೇನು ಬಿಚ್ಚುತ್ತೀರೋ ಅದು ಪರಲೋಕದಲ್ಲಿಯೂ ಬಿಚ್ಚಿರುವದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.” ಅವರ ಕ್ರಿಯೆಗಳು, ಬೈಬಲಿನಲ್ಲಿ ಪ್ರಸ್ತುತಪಡಿಸಲ್ಪಟ್ಟಿರುವಂತೆ, ವಿಷಯಗಳ ಕುರಿತಾದ ಯೆಹೋವನ ದೃಷ್ಟಿಕೋನವನ್ನು ಪ್ರತಿಬಿಂಬಿಸುವವಷ್ಟೇ.
ಫಲಸ್ವರೂಪವಾಗಿ, ಯೋಹಾನ 20:23ರಲ್ಲಿ ದಾಖಲಿಸಲ್ಪಟ್ಟಂತೆ, ಯೇಸು ಏನು ಹೇಳಿದನೋ ಅದು, ಶಾಸ್ತ್ರಗಳ ಉಳಿದ ಭಾಗದೊಂದಿಗೆ ಸಂಘರ್ಷಿಸುವುದಿಲ್ಲ, ಬದಲಾಗಿ ಕ್ರೈಸ್ತ ಸಭೆಯ ಶೈಶವಾವಸ್ಥೆಯಲ್ಲಿ ಅವರ ವಿಶೇಷ ಪಾತ್ರಕ್ಕೆ ಹೊಂದಿಕೆಯಲ್ಲಿ, ಕ್ಷಮಿಸುವ ವಿಷಯದಲ್ಲಿ ಅಪೊಸ್ತಲರಿಗೆ ಒಂದು ವಿಶೇಷ ಅಧಿಕಾರವಿತ್ತೆಂಬುದನ್ನು ಅದು ಸೂಚಿಸುತ್ತದೆ.
[ಪಾದಟಿಪ್ಪಣಿ]
a ಸಾಯುವ ಮತ್ತು ಪ್ರಾಯಶ್ಚಿತ್ತವನ್ನು ಒದಗಿಸುವ ಮುಂಚೆಯೂ, ಯಾರಾದರೊಬ್ಬರ ಪಾಪಗಳು ಕ್ಷಮಿಸಲ್ಪಟ್ಟಿವೆಯೆಂದು ಹೇಳುವ ಅಧಿಕಾರವನ್ನು ಯೇಸು ಹೊಂದಿದ್ದನು.—ಮತ್ತಾಯ 9:2-6; ಜೂನ್ 1, 1995ರ ಕಾವಲಿನಬುರುಜುವಿನಲ್ಲಿರುವ “ವಾಚಕರಿಂದ ಪ್ರಶ್ನೆಗಳು” ಇದನ್ನು ಹೋಲಿಸಿರಿ.