ಪೂರ್ವಕಲ್ಪಿತ ಅಭಿಪ್ರಾಯವು ಇನ್ನಿಲ್ಲದಿರುವಾಗ!
ವರದಿಗನುಸಾರ, ವಿಜ್ಞಾನಿಯಾದ ಆ್ಯಲ್ಬರ್ಟ್ ಐನ್ಸ್ಟೈನ್ ಒಮ್ಮೆ ಹೇಳಿದ್ದೇನೆಂದರೆ, ಈ ದುಃಖಕರವಾದ ಲೋಕದಲ್ಲಿ, ಒಂದು ಪರಮಾಣುವನ್ನು ವಿಭಜಿಸುವುದಕ್ಕಿಂತ ಒಂದು ಪೂರ್ವಕಲ್ಪಿತ ಅಭಿಪ್ರಾಯವನ್ನು ಜಯಿಸುವುದು ಹೆಚ್ಚು ಕಷ್ಟಕರವಾಗಿದೆ. ತದ್ರೀತಿಯಲ್ಲಿ, IIನೆಯ ಜಾಗತಿಕ ಯುದ್ಧದ ಸಮಯದಲ್ಲಿ ಪ್ರಖ್ಯಾತರಾದ ಒಬ್ಬ ಪತ್ರಿಕೋದ್ಯೋಗಿ ಮತ್ತು ತದನಂತರ ಅಮೆರಿಕದ ಮಾಹಿತಿ ನಿಯೋಗದ ನಿರ್ದೇಶಕರಾಗಿದ್ದ ಎಡ್ವ್ರ್ಡ್ ಆರ್. ಮುರೋ ಹೇಳಿದ್ದೇನೆಂದರೆ, “ಯಾರೊಬ್ಬರೂ ಪೂರ್ವಕಲ್ಪಿತ ಅಭಿಪ್ರಾಯಗಳನ್ನು ನಿರ್ಮೂಲಗೊಳಿಸಸಾಧ್ಯವಿಲ್ಲ—ಅವರು ಕೇವಲ ಅವುಗಳನ್ನು ಅಂಗೀಕರಿಸಬಲ್ಲರು.”
ಈ ಹೇಳಿಕೆಗಳು ಸತ್ಯವಾಗಿರುವಂತೆ ತೋರುತ್ತವೊ? ಭೇದಭಾವ ಮತ್ತು ಜಾತಿವಾದವನ್ನು ನಿರ್ಮೂಲಗೊಳಿಸುವುದು ಅಸಾಧ್ಯವೊ? ಪೂರ್ವಕಲ್ಪಿತ ಅಭಿಪ್ರಾಯದ ಕುರಿತು ದೇವರಿಗೆ ಹೇಗನಿಸುತ್ತದೆ?
ದೇವರು ಪಕ್ಷಪಾತಿಯಲ್ಲ
ಬೈಬಲು ಪಕ್ಷಪಾತದ ವಿರುದ್ಧ ಮಾತಾಡುತ್ತದೆ. (ಜ್ಞಾನೋಕ್ತಿ 24:23; 28:21) ಅದು ಹೇಳುವುದೇನೆಂದರೆ, “ಮೇಲಣಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು, ಆ ಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸಂತೋಷವಾಗಿ ಒಪ್ಪಿಕೊಳ್ಳುವಂಥದು, ಕರುಣೆ ಮುಂತಾದ ಒಳ್ಳೇ ಫಲಗಳಿಂದ ತುಂಬಿರುವಂಥದು ಆಗಿದೆ; ಅದರಲ್ಲಿ ಚಂಚಲವೂ [“ಪಕ್ಷಪಾತವುಳ್ಳ ಭಿನ್ನತೆಗಳೂ,” NW] ಕಪಟವೂ ಇಲ್ಲ.” (ಯಾಕೋಬ 3:17) ಇಂತಹ ವಿವೇಕವು, ಪ್ರಾಚೀನ ಇಸ್ರಾಯೇಲಿನಲ್ಲಿದ್ದ ನ್ಯಾಯಾಧೀಶರಿಗೆ ಒತ್ತಿಹೇಳಲ್ಪಟ್ಟಿತು. “ವ್ಯಾಜ್ಯವನ್ನು ವಿಚಾರಿಸುವಾಗ ಅನ್ಯಾಯವಾದ ತೀರ್ಪನ್ನು ಮಾಡಬಾರದು,” ಎಂಬುದಾಗಿ ಅವರು ಉಪದೇಶಿಸಲ್ಪಟ್ಟಿದ್ದರು. “ಬಡವನ ಬಡತನವನ್ನಾಗಲಿ ದೊಡ್ಡ ಮನುಷ್ಯನ ಘನತೆಯನ್ನಾಗಲಿ ಲಕ್ಷ್ಯಮಾಡದೆ ಪಕ್ಷಪಾತವಿಲ್ಲದೆ ತೀರ್ಪನ್ನು ಕೊಡಬೇಕು.”—ಯಾಜಕಕಾಂಡ 19:15.
ಪಕ್ಷಪಾತ ಮತ್ತು ಪೂರ್ವಕಲ್ಪಿತ ಅಭಿಪ್ರಾಯದ ವಿರುದ್ಧ ಬೈಬಲಿನ ದೃಢವಾದ ಸ್ಥಾನವು, ಯೇಸು ಕ್ರಿಸ್ತನು ಮತ್ತು ಅವನ ಅಪೊಸ್ತಲರಾದ ಪೇತ್ರ ಹಾಗೂ ಪೌಲರಿಂದ ಒತ್ತಿಹೇಳಲ್ಪಟ್ಟಿತು. ಯೇಸು, “ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದ”ವರ ಕಡೆಗೆ ನಿಷ್ಪಕ್ಷಪಾತಿಯಾಗಿದ್ದನು. (ಮತ್ತಾಯ 9:36) ಅವನು ಕಲಿಸಿದ್ದು: “ಕಣ್ಣಿಗೆ ತೋರಿದ್ದರ ಮೇಲೆ ತೀರ್ಪುಮಾಡಬೇಡಿರಿ; ನ್ಯಾಯವಾದ ತೀರ್ಪುಮಾಡಿರಿ.”—ಯೋಹಾನ 7:24.
ಸ್ವತಃ ಯೆಹೋವ ದೇವರೇ ಪಕ್ಷಪಾತಿಯಾಗಿಲ್ಲವೆಂಬ ಪುನರಾಶ್ವಾಸನೆಯನ್ನು ಪೇತ್ರ ಮತ್ತು ಪೌಲರು ನಮಗೆ ಕೊಡುತ್ತಾರೆ. ಪೇತ್ರನು ಹೇಳಿದ್ದು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ.” (ಅ. ಕೃತ್ಯಗಳು 10:34, 35) ಅಪೊಸ್ತಲ ಪೌಲನು ನಮಗೆ ಹೇಳುವುದು: “ದೇವರಿಗೆ ಪಕ್ಷಪಾತವಿಲ್ಲ.”—ರೋಮಾಪುರ 2:11.
ಬೈಬಲಿನ ಪ್ರಭಾವ
ಬೈಬಲಿಗೆ, ಅದರ ಮೂಲಕ ಮಾರ್ಗದರ್ಶಿಸಲ್ಪಡುವವರ ವ್ಯಕ್ತಿತ್ವಗಳನ್ನು ಬದಲಾಯಿಸುವ ಶಕ್ತಿಯಿದೆ. ಇಬ್ರಿಯ 4:12 ಹೇಳುವುದು: “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು.” ಯೆಹೋವನ ಸಹಾಯದಿಂದ, ಪೂರ್ವಕಲ್ಪಿತ ಅಭಿಪ್ರಾಯವುಳ್ಳ ವ್ಯಕ್ತಿಯೊಬ್ಬನು ತನ್ನ ಯೋಚಿಸುವ ವಿಧವನ್ನೂ ಬದಲಾಯಿಸಿ, ಇತರರೊಂದಿಗಿನ ತನ್ನ ವ್ಯವಹಾರಗಳಲ್ಲಿ ನಿಷ್ಪಕ್ಷಪಾತಿಯಾಗಬಲ್ಲನು.
ಉದಾಹರಣೆಗೆ, ತಾರ್ಸದ ಸೌಲನ ವಿಷಯವನ್ನು ತೆಗೆದುಕೊಳ್ಳಿ. ಬೈಬಲ್ ವೃತ್ತಾಂತಕ್ಕನುಸಾರ, ಅವನು ನಿಷ್ಠುರವಾದ ಧಾರ್ಮಿಕ ಸಂಪ್ರದಾಯಗಳನ್ನು ಅನುಸರಿಸಿದ ಕಾರಣ, ಒಂದು ಸಮಯದಲ್ಲಿ ಅವನು ಕ್ರೈಸ್ತ ಸಭೆಯನ್ನು ಹಿಂಸಾತ್ಮಕವಾಗಿ ವಿರೋಧಿಸಿದನು. (ಅ. ಕೃತ್ಯಗಳು 8:1-3) ಎಲ್ಲ ಕ್ರೈಸ್ತರು ಧರ್ಮಭ್ರಷ್ಟರೂ ಸತ್ಯಾರಾಧನೆಯ ವೈರಿಗಳೂ ಆಗಿದ್ದರೆಂದು, ಅವನು ಯೆಹೂದಿ ಸಂಪ್ರದಾಯದ ಮೂಲಕ ಪೂರ್ಣವಾಗಿ ಮನಗಾಣಿಸಲ್ಪಟ್ಟಿದ್ದನು. ಅವನ ಪೂರ್ವಕಲ್ಪಿತ ಅಭಿಪ್ರಾಯವು ಕ್ರೈಸ್ತರ ಕೊಲ್ಲುವಿಕೆಗೆ ಬೆಂಬಲಕೊಡುವಂತೆ ಅವನನ್ನು ನಡೆಸಿತು. ಅವನು “ಕರ್ತನ ಶಿಷ್ಯರ ಮೇಲೆ ರೌದ್ರನಾಗಿದ್ದು ಬೆದರಿಕೆಯ ಮಾತುಗಳನ್ನಾಡುತ್ತಾ ಅವರನ್ನು ಸಂಹರಿಸಬೇಕೆಂದು ಆಶೆಪಡುತ್ತಾ” ಇದ್ದನೆಂದು ಬೈಬಲು ಹೇಳುತ್ತದೆ. (ಅ. ಕೃತ್ಯಗಳು 9:1) ಹಾಗೆ ಮಾಡುತ್ತಿರುವಾಗ, ತಾನು ದೇವರಿಗೆ ಪವಿತ್ರ ಸೇವೆಯನ್ನು ಸಲ್ಲಿಸುತ್ತಿದ್ದೇನೆಂದು ಅವನು ಊಹಿಸಿಕೊಂಡನು.—ಹೋಲಿಸಿ ಯೋಹಾನ 16:2.
ಆದರೂ, ತಾರ್ಸದ ಸೌಲನು ತನ್ನ ವಿಪರೀತ ಪೂರ್ವಕಲ್ಪಿತ ಅಭಿಪ್ರಾಯವನ್ನು ತೊಲಗಿಸಲು ಶಕ್ತನಾಗಿದ್ದನು. ಅವನು ಸ್ವತಃ ಒಬ್ಬ ಕ್ರೈಸ್ತನೂ ಆದನು! ತದನಂತರ, ಯೇಸು ಕ್ರಿಸ್ತನ ಒಬ್ಬ ಅಪೊಸ್ತಲನಾದ ಪೌಲನಾಗಿ, ಅವನು ಬರೆದುದು: “ಮೊದಲು ದೂಷಕನೂ ಹಿಂಸಕನೂ ಬಲಾತ್ಕಾರಿಯೂ ಆಗಿದ್ದ ನನ್ನನ್ನು . . . ನಾನು ಅವಿಶ್ವಾಸಿಯಾಗಿ ತಿಳಿಯದೆ ಹಾಗೆ ಮಾಡಿದ್ದರಿಂದ ನನ್ನ ಮೇಲೆ ಕರುಣೆ ಉಂಟಾಯಿತು.”—1 ತಿಮೊಥೆಯ 1:13.
ತನ್ನ ಯೋಚನಾ ವಿಧದಲ್ಲಿ ಇಂತಹ ಪ್ರಚಂಡವಾದ ಬದಲಾವಣೆಗಳನ್ನು ಮಾಡಿದ ವ್ಯಕ್ತಿಯು, ಪೌಲನು ಮಾತ್ರ ಆಗಿರಲಿಲ್ಲ. ಜೊತೆಸೌವಾರ್ತಿಕನಾದ ತೀತನಿಗೆ ಬರೆದ ತನ್ನ ಪತ್ರದಲ್ಲಿ, ಪೌಲನು ಕ್ರೈಸ್ತರಿಗೆ “ಯಾರನ್ನೂ ದೂಷಿಸದೆ ಕುತರ್ಕಮಾಡದೆ ಎಲ್ಲಾ ಮನುಷ್ಯರಿಗೆ ಪೂರ್ಣಸಾಧುಗುಣವನ್ನು ತೋರಿಸುತ್ತಾ ಸಾತ್ವಿಕರಾಗಿರಬೇಕೆಂತಲೂ” ಬುದ್ಧಿಹೇಳಿದನು. ಯಾಕಂದರೆ “ನಾವು ಸಹ ಮೊದಲು ಅವಿವೇಕಿಗಳೂ ಅವಿಧೇಯರೂ ಮೋಸಹೋದವರೂ ನಾನಾ ವಿಧವಾದ ದುರಾಶೆಗಳಿಗೆ ಮತ್ತು ಭೋಗಗಳಿಗೆ ಅಧೀನರೂ ಕೆಟ್ಟತನ ಹೊಟ್ಟೇಕಿಚ್ಚುಗಳಲ್ಲಿ ಕಾಲಕಳೆಯುವವರೂ ಅಸಹ್ಯರೂ ಒಬ್ಬರನ್ನೊಬ್ಬರು ಹಗೆಮಾಡುವವರೂ ಆಗಿದ್ದೆವು.”—ತೀತ 3:2, 3.
ಪೂರ್ವಕಲ್ಪಿತ ಅಭಿಪ್ರಾಯದ ತಡೆಗಳನ್ನು ಮುರಿದು ಹಾಕುವುದು
ಇಂದು, ಯಥಾರ್ಥ ಕ್ರೈಸ್ತರು ಆ ಸಲಹೆಯನ್ನು ಅನುಸರಿಸಲು ಕಠಿನವಾಗಿ ಪ್ರಯತ್ನಿಸುತ್ತಾರೆ. ಬಾಹ್ಯ ತೋರಿಕೆಗಳ ಆಧಾರದ ಮೇಲೆ ಜನರ ತೀರ್ಪು ಮಾಡುವುದನ್ನು ತೊರೆಯಲು ಅವರು ಬಯಸುತ್ತಾರೆ. ಇದು ಇತರರ ಕುರಿತು ‘ಹಾನಿಕಾರಕವಾಗಿ ಮಾತಾಡುವುದರಿಂದ’ ಅವರನ್ನು ತಡೆಯುತ್ತದೆ. ಅವರು ಈ ಲೋಕದ ಸಕಲ ರಾಷ್ಟ್ರೀಯ, ಕುಲ ಸಂಬಂಧವಾದ ಹಾಗೂ ಜಾತೀಯ ಮೇರೆಗಳ ಆಚೆ ವಿಸ್ತರಿಸುವ ಒಂದು ಅಂತಾರಾಷ್ಟ್ರೀಯ ಸಹೋದರತ್ವವನ್ನು ಆನಂದಿಸುತ್ತಾರೆ.
ಒಬ್ಬ ಕಪ್ಪು ಮೈಬಣ್ಣದ ಬ್ರಸಿಲಿನವನಾದ ಎನ್ರಿಕ್ನ ಅನುಭವವನ್ನು ಪರಿಗಣಿಸಿರಿ. ಸ್ವತಃ ಜಾತೀಯ ಭೇದಭಾವದ ಒಬ್ಬ ಬಲಿಯಾಗಿದ್ದು, ಬಿಳಿಯ ಜನರಿಗಾಗಿ ಅವನು ಆಳವಾಗಿ ಬೇರೂರಿದ ದ್ವೇಷವನ್ನು ಬೆಳಸಿಕೊಂಡನು. ಅವನು ವಿವರಿಸುವುದು: “ಇಬ್ಬರು ಬಿಳಿ ಮೈಬಣ್ಣದ ಸಾಕ್ಷಿಗಳು ದೇವರ ಹೆಸರಿನ ಕುರಿತು ಮಾತಾಡಲು ನನ್ನ ಮನೆಗೆ ಬಂದರು. ಆರಂಭದಲ್ಲಿ ನಾನು ಕಿವಿಗೊಡಲು ಬಯಸಲಿಲ್ಲ, ಏಕೆಂದರೆ ನನಗೆ ಬಿಳಿ ಜನರ ಮೇಲೆ ಭರವಸೆಯಿರಲಿಲ್ಲ. ಆದರೆ ಅವರ ಸಂದೇಶವು ಸತ್ಯವಾಗಿರುವಂತೆ ತೋರಿತ್ತೆಂಬುದನ್ನು ನಾನು ಬೇಗನೆ ನೋಡಸಾಧ್ಯವಿತ್ತು. ಒಳ್ಳೆಯದು, ನಾನೊಂದು ಬೈಬಲ್ ಅಧ್ಯಯನವನ್ನು ಸ್ವೀಕರಿಸಿದೆ. ನನಗಿದ್ದ ಪ್ರಥಮ ಪ್ರಶ್ನೆಯು ಹೀಗಿತ್ತು, ‘ನಿಮ್ಮ ಚರ್ಚಿನಲ್ಲಿ ಅನೇಕ ಕಪ್ಪು ಜನರಿದ್ದಾರೊ?’ ಅವರು ‘ಹೌದು’ ಎಂದು ಉತ್ತರಿಸಿದರು. ಆಮೇಲೆ ಅವರು ನನಗೆ, ವಿಭಿನ್ನ ಜಾತಿಗಳ ಯುವ ಜನರನ್ನು ಚಿತ್ರಿಸುತ್ತಾ, ಬೈಬಲ್ ಕಥೆಗಳ ನನ್ನ ಪುಸ್ತಕa (ಇಂಗ್ಲಿಷ್) ಎಂಬ ಪುಸ್ತಕದಲ್ಲಿನ ಕೊನೆಯ ಚಿತ್ರವನ್ನು ತೋರಿಸಿದರು. ಕಪ್ಪು ಹುಡುಗನೊಬ್ಬನು ಅವರಲ್ಲಿ ಸೇರಿಸಲ್ಪಟ್ಟಿದ್ದನು, ಮತ್ತು ಇದು ನನ್ನನ್ನು ಉತ್ತೇಜಿಸಿತು. ತದನಂತರ ನಾನು ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹವನ್ನು ಸಂದರ್ಶಿಸಿದೆ, ಅಲ್ಲಿ ನಾನು ಒಬ್ಬರನ್ನೊಬ್ಬರು ಗೌರವದಿಂದ ಉಪಚರಿಸುತ್ತಿರುವ ವಿಭಿನ್ನ ಜಾತಿಗಳ ಜನರನ್ನು ಕಂಡೆ. ಇದು ನನಗೆ ಬಹಳ ಪ್ರಾಮುಖ್ಯವಾಗಿತ್ತು.”
ಈಗ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಂತೆ, ಯಥಾರ್ಥವಾದ ಕ್ರೈಸ್ತ ಸಹೋದರತ್ವಕ್ಕೆ ಸೇರಿರಲು ಎನ್ರಿಕ್ ಹರ್ಷಿಸುತ್ತಾನೆ. ಪ್ರಶಂಸೆಯು ಯಾವುದೇ ಮಾನವನಿಗೆ ಸಲ್ಲುವುದಿಲ್ಲವೆಂದು ಅವನು ಗ್ರಹಿಸುತ್ತಾನೆ. ಅವನು ಹೇಳುವುದು: “ನನ್ನ ಪರವಾಗಿ ಅವರು ಮಾಡಿರುವ ಎಲ್ಲ ವಿಷಯಕ್ಕಾಗಿ ನಾನು ಇಂದು ಯೆಹೋವನಿಗೆ ಮತ್ತು ಯೇಸುವಿಗೆ ಕೃತಜ್ಞನಾಗಿದ್ದೇನೆ. ಒಂದೇ ಉದ್ದೇಶದಲ್ಲಿ ಐಕ್ಯರಾಗಿರುವ ಎಲ್ಲ ಜಾತಿಗಳ, ವರ್ಣಗಳ ಹಾಗೂ ಹಿನ್ನೆಲೆಗಳ ಯೆಹೋವನ ಲಕ್ಷಾಂತರ ನಿಷ್ಠಾವಂತ ಸೇವಕರೊಂದಿಗೆ ನಾನು ಕೆಲಸ ಮಾಡುತ್ತೇನೆ.”
ಬೆಳೆಯುತ್ತಿದ್ದಾಗ, ಡ್ಯಾರಿಯೊ ಪೂರ್ವಕಲ್ಪಿತ ಅಭಿಪ್ರಾಯದ ಮತ್ತೊಬ್ಬ ಬಲಿಯಾಗಿದ್ದನು. 16 ವರ್ಷಗಳ ಪ್ರಾಯದಲ್ಲಿ, ಅವನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಸಿಸಲು ತೊಡಗಿದನು. ಅವನು ಗಮನಿಸಿದ್ದು: “ಸಾಕ್ಷಿಗಳ ಮಧ್ಯದಲ್ಲಿ, ಜಾತೀಯ ಶ್ರೇಷ್ಠತೆಯ ಭಾವನೆಗಳಿರುವುದಿಲ್ಲವೆಂಬುದನ್ನು ನಾನು ಕಂಡುಕೊಂಡಿದ್ದೇನೆ.” ಯಥಾರ್ಥ ಪ್ರೀತಿಯ ವಾತಾವರಣದಿಂದ ಅವನು ಪ್ರಭಾವಿತನಾದನು. ಸಭೆಯೊಳಗೆ ವಿಭಿನ್ನ ಜಾತಿಯ ವ್ಯಕ್ತಿಗಳು, ಜವಾಬ್ದಾರಿಯ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದರೆಂಬುದನ್ನು ಅವನು ವಿಶೇಷವಾಗಿ ಗಮನಿಸಿದನು. ಸಭೆಯ ಹೊರಗಿನ ಜನರಿಂದ ಯಾವುದೊ ಪ್ರಕಾರದ ಪೂರ್ವಕಲ್ಪಿತ ಅಭಿಪ್ರಾಯ ಅಥವಾ ಭೇದಭಾವಕ್ಕೆ ಅವನು ಗುರಿಯಾದಾಗಲೆಲ್ಲ, ಯೆಹೋವನು ಎಲ್ಲ ರಾಷ್ಟ್ರಗಳ, ಕುಲಗಳ ಹಾಗೂ ಭಾಷೆಗಳ ಜನರನ್ನು ಪ್ರೀತಿಸುತ್ತಾನೆಂಬುದನ್ನು ಡ್ಯಾರಿಯೊ ಜ್ಞಾಪಿಸಿಕೊಳ್ಳುತ್ತಾನೆ.
ನಿಭಾಯಿಸುವ ವಿಧ
ನಾವೆಲ್ಲರೂ ಘನತೆ ಹಾಗೂ ಗೌರವದಿಂದ ಉಪಚರಿಸಲ್ಪಡಲು ಇಚ್ಛಿಸುತ್ತೇವೆ. ಆದುದರಿಂದಲೇ, ಪೂರ್ವಕಲ್ಪಿತ ಅಭಿಪ್ರಾಯದ ಬಲಿಯಾಗಿರುವುದು, ತಾಳಿಕೊಳ್ಳಲು ಕಷ್ಟಕರವಾದ ಒಂದು ಪರೀಕ್ಷೆಯಾಗಿದೆ. ಕ್ರೈಸ್ತ ಸಭೆಯು, ಈ ದುಷ್ಟ ಲೋಕದ ಪೂರ್ವಕಲ್ಪಿತ ಅಭಿಪ್ರಾಯಾತ್ಮಕ ಮನೋಭಾವಗಳಿಗೆ ಪೂರ್ಣವಾದ ಒಡ್ಡುವಿಕೆಯಿಂದ ನಮ್ಮನ್ನು ರಕ್ಷಿಸುವುದಿಲ್ಲ. ಪಿಶಾಚನಾದ ಸೈತಾನನು ಈ ಲೋಕದ ವ್ಯವಹಾರಗಳನ್ನು ನಿಯಂತ್ರಿಸುತ್ತಿರುವ ವರೆಗೆ, ಅನ್ಯಾಯಗಳು ಇರುವವು. (1 ಯೋಹಾನ 5:19) ಪ್ರಕಟನೆ 12:12 ನಮಗೆ ಎಚ್ಚರಿಕೆಯನ್ನೀಯುವುದು: “ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.” ಅವನ ಉದ್ದೇಶವು ಕೇವಲ ಅನಾನುಕೂಲತೆಯನ್ನು ಉಂಟುಮಾಡುವುದಾಗಿರುವುದಿಲ್ಲ. ಅವನೊಂದು ಕೊಂದು ತಿನ್ನುವ ಪ್ರಾಣಿಗೆ ಹೋಲಿಸಲ್ಪಟ್ಟಿದ್ದಾನೆ. ಅಪೊಸ್ತಲನಾದ ಪೇತ್ರನು ನಮಗೆ ಹೇಳುವುದು: “ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.”—1 ಪೇತ್ರ 5:8.
ಬೈಬಲ್ ನಮಗೆ ಮತ್ತೂ ಹೇಳುವುದು: “ಹೀಗಿರಲಾಗಿ ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ, ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.” (ಯಾಕೋಬ 4:7) ಪೂರ್ವಕಲ್ಪಿತ ಅಭಿಪ್ರಾಯವನ್ನು ನಿಭಾಯಿಸುವ ಒಂದು ಅತ್ಯುತ್ತಮವಾದ ಸಹಾಯವು, ರಾಜ ದಾವೀದನು ಮಾಡಿದಂತೆ ಸಂರಕ್ಷಣೆಗಾಗಿ ದೇವರ ಕಡೆಗೆ ನೋಡುವುದಾಗಿದೆ: “ದೇವರೇ, ನನ್ನನ್ನು ದುಷ್ಟನ ಕೈಯಿಂದಲೂ ಅನ್ಯಾಯ ಬಲಾತ್ಕಾರಿಯ ವಶದಿಂದಲೂ ತಪ್ಪಿಸು.” (ಕೀರ್ತನೆ 71:4) ನಾವು ಕೀರ್ತನೆಗಾರನಂತೆ ಪ್ರಾರ್ಥಿಸಲೂಬಹುದು: “ದೇವರೇ, ಕರುಣಿಸು; ನರರು ನನ್ನನ್ನು ನುಂಗಿಬಿಡಬೇಕೆಂದು ಎದ್ದಿದ್ದಾರೆ. ಹಗಲೆಲ್ಲಾ ಯುದ್ಧಕ್ಕೆ ನಿಂತು ಬಾಧಿಸುತ್ತಾರೆ.”—ಕೀರ್ತನೆ 56:1.
ದೇವರು ಇಂತಹ ಪ್ರಾರ್ಥನೆಗಳಿಗೆ ಹೇಗೆ ಪ್ರತಿಕ್ರಿಯಿಸುವನು? ಬೈಬಲ್ ಉತ್ತರಿಸುವುದು: “ಯಾಕಂದರೆ ಅವನು ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು.” (ಕೀರ್ತನೆ 72:12, 13) ಯೆಹೋವನು ಸಕಾಲದಲ್ಲಿ ಅನ್ಯಾಯದ ಬಲಿಗಳಾಗಿರುವ ಎಲ್ಲರಿಗೆ, ಉಪಶಮನವನ್ನು ತರುವನೆಂಬುದನ್ನು ತಿಳಿಯುವುದು ಎಷ್ಟು ಒಳ್ಳೆಯದ್ದಾಗಿದೆ!
“ಯಾರೂ ಕೇಡು ಮಾಡುವದಿಲ್ಲ”
ಈ ಲೋಕದ ಸರಕಾರಗಳು, ತಮ್ಮ ನಿಯಮಗಳು ಹಾಗೂ ಯೋಜನೆಗಳ ಮೂಲಕ ಪೂರ್ವಕಲ್ಪಿತ ಅಭಿಪ್ರಾಯದ ವಿರುದ್ಧ ಹೋರಾಡುವುದನ್ನು ಮುಂದುವರಿಸಬಹುದು. ಅವರು ಸಮಾನತೆ ಹಾಗೂ ನ್ಯಾಯವನ್ನು ವಾಗ್ದಾನಿಸಲು ಮುಂದುವರಿಯಬಹುದು. ಆದರೆ ಅವರು ಸಫಲರಾಗಸಾಧ್ಯವಿಲ್ಲ. (ಕೀರ್ತನೆ 146:3) ದೇವರು ಮಾತ್ರ ಎಲ್ಲ ಪೂರ್ವಕಲ್ಪಿತ ಅಭಿಪ್ರಾಯಾತ್ಮಕ ಉಪಚಾರವನ್ನು ನಿರ್ಮೂಲಗೊಳಿಸಬಲ್ಲನು ಹಾಗೂ ನಿರ್ಮೂಲಗೊಳಿಸುವನು. ಆತನು ಮಾನವಜಾತಿಯನ್ನು ಒಂದು ಐಕ್ಯ ಕುಟುಂಬವಾಗಿ ರೂಪಾಂತರಿಸುವನು. ಈ ದುಷ್ಟ ವ್ಯವಸ್ಥೆಯ ಅಂತ್ಯವನ್ನು ‘ಯಾರಿಂದಲೂ ಎಣಿಸಲಾಗದಂಥ . . . ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ ಆಗಿರುವ . . . ಮಹಾ ಸಮೂಹವು’ ಬದುಕಿ ಉಳಿಯುವುದು ಮತ್ತು ಶಾಂತಿಯಲ್ಲಿ ಜೀವಿಸುವುದನ್ನು ಆನಂದಿಸುವುದು.—ಪ್ರಕಟನೆ 7:9, 10.
ಜಾತೀಯ ಹಾಗೂ ಸಾಮಾಜಿಕ ಪೂರ್ವಕಲ್ಪಿತ ಅಭಿಪ್ರಾಯದ ಮೂಲಕ ಉಂಟಾದ ಎಲ್ಲ ಹಾನಿಯನ್ನು ಯೆಹೋವನು ತೊಡೆದುಹಾಕುವನು. ಯಾರೂ ಅನ್ಯಾಯವಾಗಿ ಉಪಚರಿಸಲ್ಪಡದಿರುವುದನ್ನು ಕಲ್ಪಿಸಿಕೊಳ್ಳಿ! “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರ ಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು.” (ಮೀಕ 4:4) ಮತ್ತು ಯೆಶಾಯ 11:9 ಹೇಳುವುದು: “ಯಾರೂ ಕೇಡು ಮಾಡುವದಿಲ್ಲ.”
ಈಗ ನೀವು ಪೂರ್ವಕಲ್ಪಿತ ಅಭಿಪ್ರಾಯದ ಬಲಿಯಾಗಿರುವಲ್ಲಿ, ಭವಿಷ್ಯತ್ತಿಗಾಗಿರುವ ಈ ಅದ್ಭುತಕರವಾದ ನಿರೀಕ್ಷೆಯು ಯೆಹೋವನೊಂದಿಗಿನ ನಿಮ್ಮ ಸಂಬಂಧವನ್ನು ಬಲಪಡಿಸುವುದು. ಅದು, ಈ ದುಷ್ಟ ವ್ಯವಸ್ಥೆಯ ಅನ್ಯಾಯಗಳನ್ನು ತಾಳಿಕೊಳ್ಳುವಂತೆ ನಿಮಗೆ ಸಹಾಯ ಮಾಡುವುದು. ನೀವು ಪೂರ್ವಕಲ್ಪಿತ ಅಭಿಪ್ರಾಯವನ್ನು ನಿಭಾಯಿಸಿ, ಮುಂದೆ ನೋಡುತ್ತಿರುವಂತೆಯೇ, ಬೈಬಲಿನ ವಿವೇಕಯುತ ಸಲಹೆಯನ್ನು ಅನುಸರಿಸಿರಿ: “ಯೆಹೋವನನ್ನು ನಿರೀಕ್ಷಿಸುವವರೇ, ದೃಢವಾಗಿರ್ರಿ; ನಿಮ್ಮ ಹೃದಯವು ಧೈರ್ಯದಿಂದಿರಲಿ.”—ಕೀರ್ತನೆ 31:24.
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
[ಪುಟ 4 ರಲ್ಲಿರುವ ಚಿತ್ರ ಕೃಪೆ]
U.S. National Archives photo