ದೇವರ ವಾಕ್ಯವು “ಅದ್ಭುತಗಳನ್ನು” ಮಾಡುತ್ತದೆ
ಟೇರೆಸ್ ಏಆ ಹೇಳಿದಂತೆ
ನಾನು 1965ರಲ್ಲಿ ಒಂದು ದಿನ, ಒಂದು ವ್ಯಾಪಾರ ಸಂಸ್ಥೆಯನ್ನು ಪ್ರವೇಶಿಸಿ, ವರ್ತಕರಿಗೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಪ್ರತಿಗಳನ್ನು ನೀಡಿದೆ. ನಾನು ಹೊರಬರಲಿಕ್ಕಾಗಿ ತಿರುಗಿದಾಗ, ನಾನು ಒಂದು ಹೊಡೆತದ ಶಬ್ದವನ್ನು ಕೇಳಿಸಿಕೊಂಡೆ. ಬಂದೂಕಿನ ಗುಂಡೊಂದು ನನ್ನ ಪಾದಗಳ ಬಳಿಯಲ್ಲಿ, ನೆಲಕ್ಕೆ ಬಡಿಯಿತು. “ಯೆಹೋವನ ಸಾಕ್ಷಿಗಳೊಂದಿಗೆ ವ್ಯವಹರಿಸುವ ವಿಧವು ಅದೇ ಆಗಿದೆ” ಎಂದು ವರ್ತಕರಲ್ಲಿ ಒಬ್ಬನು ಹಂಗಿಸಿದನು.
ಆ ಅನುಭವವು ನನ್ನನ್ನು ಭಯಗೊಳಿಸಿತು—ಆದರೆ ನಾನು ಪೂರ್ಣ ಸಮಯದ ಶುಶ್ರೂಷೆಯನ್ನು ತೊರೆಯುವಂತೆ ಮಾಡುವಷ್ಟು ಭಯಗೊಳಿಸಲಿಲ್ಲ. ನಾನು ಕಲಿತಿದ್ದಂತಹ ಬೈಬಲ್ ಸತ್ಯಗಳು, ಯಾವುದೇ ವಿಷಯವು ನನ್ನ ಶುಶ್ರೂಷೆಯನ್ನು ತೊರೆಯುವಂತೆ ಅನುಮತಿಸುವುದಕ್ಕೆ ತೀರ ಅಮೂಲ್ಯವಾದವುಗಳಾಗಿದ್ದವು. ನಾನು ಇದನ್ನು ಏಕೆ ಹೇಳುತ್ತೇನೆಂಬುದನ್ನು ವಿವರಿಸಲು ನನಗೆ ಅವಕಾಶ ಕೊಡಿರಿ.
1918ರ ಜುಲೈ ತಿಂಗಳಿನಲ್ಲಿ ನಾನು ಜನಿಸಿದ ಬಳಿಕ, ಕೆನಡ, ಕ್ವಿಬೆಕ್ನಲ್ಲಿ ಒಂದು ಸಣ್ಣ ಹಳ್ಳಿಯಾಗಿದ್ದು, ಅದ್ಭುತಗಳ ಸ್ಥಳವೆಂದು ಪ್ರಸಿದ್ಧವಾಗಿರುವ ಕ್ಯಾಪ್ಡಿಲಾಮೆಡಲೇನ್ನಲ್ಲಿ ನನ್ನ ಹೆತ್ತವರು ನೆಲೆಸಿದರು. ಇಲ್ಲಿನ ಕನ್ಯೆ ಮರಿಯಳ ದೇವಾಲಯದಲ್ಲಿ ಗೌರವಾರ್ಪಣವನ್ನು ಸಲ್ಲಿಸಲಿಕ್ಕಾಗಿ ಸಂದರ್ಶಕರು ಒಟ್ಟುಗೂಡಿದ್ದರು. ಮರಿಯಳಿಂದ ಆಗಿವೆ ಎಂದು ಹೇಳಲ್ಪಟ್ಟಿರುವ ಅದ್ಭುತಗಳನ್ನು ನಿಜವೆಂದು ರುಜುಪಡಿಸುವುದು ಅಸಾಧ್ಯವಾಗಿರುವುದಾದರೂ, ಈ ಹಳ್ಳಿಯು 30,000ಕ್ಕಿಂತಲೂ ಹೆಚ್ಚಿನ ನಿವಾಸಿಗಳಿಂದ ಕೂಡಿದ ಒಂದು ಪಟ್ಟಣವಾಗಿ ಬೆಳೆದಿರುವಂತೆ, ಅನೇಕ ಜನರ ಜೀವಿತಗಳಲ್ಲಿ ಯಾವುದು ಕಾರ್ಯತಃ ಅದ್ಭುತಕರವಾಗಿದೆಯೊ ಅಂತಹ ವಿಷಯವನ್ನು ದೇವರ ವಾಕ್ಯವು ನಡೆಸಿದೆ.
ನಾನು ಸುಮಾರು 20 ವರ್ಷ ಪ್ರಾಯದವಳಾಗಿದ್ದಾಗ, ಧಾರ್ಮಿಕ ವಿಷಯಗಳಲ್ಲಿ ನನಗಿದ್ದ ಆಸಕ್ತಿಯನ್ನು ನೋಡಿ, ನನ್ನ ತಂದೆ ನನಗೆ ತಮ್ಮ ಬೈಬಲನ್ನು ಕೊಟ್ಟರು. ನಾನು ಅದನ್ನು ಓದಲು ಆರಂಭಿಸಿದಾಗ, ವಿಗ್ರಹಾರಾಧನೆಯು ಸ್ಪಷ್ಟವಾಗಿ ಖಂಡಿಸಲ್ಪಟ್ಟಿದೆ ಎಂಬುದನ್ನು, ವಿಮೋಚನಕಾಂಡ 20ನೆಯ ಅಧ್ಯಾಯದಿಂದ ತಿಳಿದುಕೊಳ್ಳಲು ನಾನು ಆಘಾತಗೊಂಡೆ. ಆ ಕೂಡಲೆ ನಾನು ಕ್ಯಾಥೊಲಿಕ್ ಚರ್ಚಿನ ಬೋಧನೆಗಳಲ್ಲಿ ಭರವಸೆಯನ್ನು ಕಳೆದುಕೊಂಡೆ ಹಾಗೂ ಮಾಸ್ಗೆ ಹಾಜರಾಗುವುದನ್ನು ನಿಲ್ಲಿಸಿಬಿಟ್ಟೆ. ನಾನು ಪ್ರತಿಮೆಗಳನ್ನು ಆರಾಧಿಸಲು ಬಯಸಲಿಲ್ಲ. “ಟೇರೆಸ್, ನೀನು ಚರ್ಚಿಗೆ ಹೋಗುವುದಿಲ್ಲವೇ?” ಎಂದು ನನ್ನ ತಂದೆಯವರು ಕೇಳುತ್ತಿದ್ದುದನ್ನು ನಾನು ಇನ್ನೂ ಜ್ಞಾಪಿಸಿಕೊಳ್ಳಬಲ್ಲೆ. “ಇಲ್ಲ, ನಾನು ಬೈಬಲನ್ನು ಓದುತ್ತಿದ್ದೇನೆ” ಎಂದು ನಾನು ಉತ್ತರಿಸಿದೆ.
1938ರ ಸೆಪ್ಟೆಂಬರ್ ತಿಂಗಳಿನಲ್ಲಿ ನಾನು ವಿವಾಹವಾದ ಬಳಿಕವೂ, ಬೈಬಲ್ ವಾಚನವು ನನ್ನ ಜೀವಿತದ ಒಂದು ಭಾಗವಾಗಿ ಮುಂದುವರಿಯಿತು. ನನ್ನ ಗಂಡನಾದ ರೋಸರ್, ಅನೇಕವೇಳೆ ರಾತ್ರಿಯಲ್ಲಿ ಕೆಲಸ ಮಾಡುತ್ತಿದ್ದುದರಿಂದ, ಅವರು ಕೆಲಸಕ್ಕೆ ಹೋಗಿದ್ದಂತಹ ಸಮಯದಲ್ಲಿ ಬೈಬಲನ್ನು ಓದುವುದನ್ನು ಅಭ್ಯಾಸಮಾಡಿಕೊಂಡೆ. ನಾನು ಬೇಗನೆ ದೇವರು ತನ್ನ ಜನರನ್ನು ಹೊಂದಿರಲೇಬೇಕೆಂಬ ತೀರ್ಮಾನಕ್ಕೆ ಬಂದೆ, ಹಾಗೂ ನಾನು ಅವರಿಗಾಗಿ ಹುಡುಕಲಾರಂಭಿಸಿದೆ.
ದೇವಜನರಿಗಾಗಿ ನನ್ನ ಅನ್ವೇಷಣೆ
ಚರ್ಚಿನಲ್ಲಿ ನಾನು ಏನನ್ನು ಕಲಿತಿದ್ದೆನೊ ಆ ವಿಷಯದ ಕಾರಣದಿಂದ, ನಾನು ಎಳೆಯವಳಾಗಿದ್ದಾಗ, ನರಕದಲ್ಲಿ ಎದ್ದೇಳುವ ಭಯದಿಂದಾಗಿ, ನಾನು ನಿದ್ರೆಮಾಡಲು ಹೆದರುತ್ತಿದ್ದೆ. ಅಂತಹ ಭಯವನ್ನು ಹೊಡೆದೋಡಿಸಲಿಕ್ಕಾಗಿ, ಪ್ರೀತಿಯ ದೇವರು ಅಷ್ಟು ಘೋರವಾದ ಯಾವುದೇ ವಿಷಯವು ಸಂಭವಿಸುವಂತೆ ಅನುಮತಿಸುವುದಿಲ್ಲ ಎಂದು ನಾನು ಸ್ವತಃ ಹೇಳಿಕೊಳ್ಳುತ್ತಿದ್ದೆ. ಭರವಸೆಯಿಂದಲೇ, ನಾನು ಬೈಬಲನ್ನು ಓದುತ್ತಾ, ಸತ್ಯಕ್ಕಾಗಿ ಅನ್ವೇಷಣೆ ನಡೆಸುತ್ತಾ ಇದ್ದೆ. ನಾನು, ಯಾರು ಧರ್ಮಶಾಸ್ತ್ರವನ್ನು ಓದಿ, ಅದನ್ನು ಅರ್ಥಮಾಡಿಕೊಳ್ಳಲಿಲ್ಲವೋ ಆ ಐಥಿಯೋಪ್ಯದ ಕಂಚುಕಿಯಂತಿದ್ದೆ.—ಅ. ಕೃತ್ಯಗಳು 8:26-39.
ಸುಮಾರು 1957ರಲ್ಲಿ, ನಮ್ಮ ವಾಸದಮಹಡಿಯ ಕೆಳಗಿನ ಮಹಡಿಯಲ್ಲಿ ವಾಸಿಸುತ್ತಿದ್ದ ನನ್ನ ಸಹೋದರನಾದ ಆಂಡ್ರೆ ಹಾಗೂ ಅವನ ಹೆಂಡತಿ, ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದರು. ಸಾಕ್ಷಿಗಳು ಆ ಕಟ್ಟಡದಲ್ಲಿ ಸಾರುವುದಕ್ಕೆ ಬಂದಾಗ, ಒಳಮಾಳಿಗೆಯ ಮೇಲೆ ತಟ್ಟಿ ಶಬ್ದಮಾಡುವ ಮೂಲಕ ನನಗೆ ಎಚ್ಚರಿಸುವಂತೆ ನಾನು ನನ್ನ ಅತ್ತಿಗೆಗೆ ಹೇಳಿದೆ. ಆ ರೀತಿಯಲ್ಲಿ ನನ್ನ ಬಾಗಿಲನ್ನು ತೆರೆಯಬಾರದೆಂಬುದು ನನಗೆ ತಿಳಿಯುತ್ತಿತ್ತು. ಒಂದು ದಿನ ನನಗೆ ಎಚ್ಚರಿಕೆ ನೀಡಲು ಅವಳು ಮರೆತುಹೋದಳು.
ಆ ದಿನ ನಾನು ಬಾಗಿಲನ್ನು ತೆರೆದು, ಒಬ್ಬ ಪಯನೀಯರಳಾದ—ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕರು ಕರೆಯಲ್ಪಡುವಂತೆ—ಕೇ ಮಂಡೇಯನ್ನು ಭೇಟಿಯಾದೆ. ದೇವರಿಗೆ ಯೆಹೋವ ಎಂಬ ಒಂದು ವೈಯಕ್ತಿಕವಾದ ಹೆಸರಿದೆ ಎಂಬುದನ್ನು ವಿವರಿಸುತ್ತಾ, ಅವಳು ನನ್ನೊಂದಿಗೆ ದೇವರ ಹೆಸರಿನ ಕುರಿತಾಗಿ ಮಾತಾಡಿದಳು. ಅವಳು ಹೊರಟುಹೋದ ಬಳಿಕ, ಅವಳು ಹೇಳಿದ್ದ ವಿಷಯಗಳು ವಾಸ್ತವವಾಗಿ ಬೈಬಲ್ ವಚನಗಳಿಂದ ಆಧಾರಿಸಲ್ಪಟ್ಟಿದ್ದವು ಎಂಬುದನ್ನು ದೃಢಪಡಿಸಿಕೊಳ್ಳಲಿಕ್ಕಾಗಿ ನಾನು ನನ್ನ ಬೈಬಲನ್ನು ಪರಿಶೋಧಿಸಿದೆ. ನನ್ನ ಸಂಶೋಧನೆಯು ನನ್ನನ್ನು ಬಹಳ ಸಂತೋಷಿತಳನ್ನಾಗಿ ಮಾಡಿತು.—ವಿಮೋಚನಕಾಂಡ 6:3, ಡೂಯೆ ವರ್ಷನ್, ಪಾದಟಿಪ್ಪಣಿ; ಮತ್ತಾಯ 6:9, 10; ಯೋಹಾನ 17:6.
ಕೇ ಪುನಃ ಭೇಟಿಮಾಡಿದಾಗ, ದೇವರು, ಒಬ್ಬ ದೇವರಲ್ಲಿರುವ ಮೂವರು ವ್ಯಕ್ತಿಗಳೆಂದು ಪ್ರತಿಪಾದಿಸುವ, ತ್ರಯೈಕ್ಯದ ಕುರಿತಾದ ಕ್ಯಾಥೊಲಿಕ್ ಸಿದ್ಧಾಂತವನ್ನು ನಾವು ಚರ್ಚಿಸಿದೆವು. ತದನಂತರ ನನ್ನ ಸ್ವಂತ ಬೈಬಲು ತ್ರಯೈಕ್ಯವನ್ನು ಬೋಧಿಸುವುದಿಲ್ಲ ಎಂದು ಸ್ವತಃ ನಾನು ತೃಪ್ತಿಪಟ್ಟುಕೊಳ್ಳಲಿಕ್ಕಾಗಿ ಅದನ್ನು ಜಾಗರೂಕತೆಯಿಂದ ಪರೀಕ್ಷಿಸಿದೆ. (ಅ. ಕೃತ್ಯಗಳು 17:11) ಯೇಸು ದೇವರಷ್ಟು ಮಹಾನ್ ಆಗಿಲ್ಲವೆಂಬುದನ್ನು ನನ್ನ ಅಧ್ಯಯನವು ದೃಢಪಡಿಸಿತು. ಅವನು ಸೃಷ್ಟಿಸಲ್ಪಟ್ಟನು. ಅವನಿಗೆ ಒಂದು ಆರಂಭವಿತ್ತು, ಯೆಹೋವನಿಗಾದರೋ ಆರಂಭವು ಇರಲಿಲ್ಲ. (ಕೀರ್ತನೆ 90:1, 2; ಯೋಹಾನ 14:28; ಕೊಲೊಸ್ಸೆ 1:15-17; ಪ್ರಕಟನೆ 3:14) ನಾನು ಕಲಿಯುತ್ತಿದ್ದ ವಿಷಯಗಳಿಂದ ತೃಪ್ತಳಾಗಿದ್ದು, ಬೈಬಲ್ ಚರ್ಚೆಗಳನ್ನು ಮುಂದುವರಿಸಲು ನಾನು ಸಂತೋಷಿತಳಾಗಿದ್ದೆ.
1958ರಲ್ಲಿ ಒಂದು ದಿನ, ನವೆಂಬರ್ ತಿಂಗಳ ಮಂಜುಬಿರುಗಾಳಿಯ ಸಮಯದಲ್ಲಿ, ಬಾಡಿಗೆಗೆ ಪಡೆದುಕೊಂಡ ಒಂದು ಸಭಾಂಗಣದಲ್ಲಿ ಅದೇ ದಿವಸ ಸಾಯಂಕಾಲ ನಡೆಯಲಿದ್ದ ಸರ್ಕಿಟ್ ಸಮ್ಮೇಳನವೊಂದಕ್ಕೆ ಹಾಜರಾಗುವಂತೆ, ಕೇ ನನ್ನನ್ನು ಆಮಂತ್ರಿಸಿದಳು. ಆ ಆಮಂತ್ರಣವನ್ನು ನಾನು ಸ್ವೀಕರಿಸಿ, ಕಾರ್ಯಕ್ರಮದಲ್ಲಿ ಆನಂದಿಸಿದೆ. ಅನಂತರ, ನನ್ನನ್ನು ಸಮೀಪಿಸಿದ ಒಬ್ಬ ಸಾಕ್ಷಿಯೊಂದಿಗಿನ ಸಂಭಾಷಣೆಯಲ್ಲಿ, “ಸತ್ಕ್ರೈಸ್ತನೊಬ್ಬನು ಮನೆಯಿಂದ ಮನೆಗೆ ಸಾರಬೇಕೊ?” ಎಂದು ನಾನು ಕೇಳಿದೆ.
“ಹೌದು, ಸುವಾರ್ತೆಯು ಪ್ರಕಟಿಸಲ್ಪಡಲೇಬೇಕು, ಮತ್ತು ಜನರನ್ನು ಅವರ ಮನೆಗಳಲ್ಲಿ ಭೇಟಿಮಾಡುವುದು, ಸಾರುವಿಕೆಯ ಪ್ರಮುಖ ವಿಧಾನವಾಗಿದೆ ಎಂದು ಬೈಬಲು ತಿಳಿಸುತ್ತದೆ” ಎಂದು ಅವನು ಹೇಳಿದನು.—ಅ. ಕೃತ್ಯಗಳು 20:20.
ಅವನ ಉತ್ತರದಿಂದ ನಾನೆಷ್ಟು ಹರ್ಷಚಿತ್ತಳಾಗಿದ್ದೆ! ನಾನು ದೇವಜನರನ್ನು ಕಂಡುಕೊಂಡಿದ್ದೆನೆಂಬುದನ್ನು ಇದು ನನಗೆ ಮನದಟ್ಟುಮಾಡಿತು. “ಇಲ್ಲ, ಸಾರುವ ಅಗತ್ಯವಿಲ್ಲ” ಎಂದು ಅವನು ಹೇಳಿದ್ದಾದರೆ, ನಾನು ಸತ್ಯವನ್ನು ಕಂಡುಕೊಂಡಿದ್ದೆನೆಂಬುದನ್ನು ನಾನು ಸಂಶಯಿಸಿದ್ದಿರಸಾಧ್ಯವಿತ್ತು, ಏಕೆಂದರೆ ಮನೆಯಿಂದ ಮನೆಯ ಸಾರುವಿಕೆಯ ಕುರಿತಾಗಿ ಬೈಬಲು ಏನು ಹೇಳಿತ್ತೊ ಆ ವಿಷಯವು ನನಗೆ ತಿಳಿದಿತ್ತು. ಅಂದಿನಿಂದ, ನಾನು ತ್ವರಿತಗತಿಯ ಆತ್ಮಿಕ ಪ್ರಗತಿಯನ್ನು ಮಾಡಿದೆ.
ಆ ಸರ್ಕಿಟ್ ಸಮ್ಮೇಳನದ ನಂತರ, ಟ್ರೈರಿವೈರ್ನ ನೆರೆಹೊರೆಯ ಪಟ್ಟಣದಲ್ಲಿ ನಡೆಸಲ್ಪಡುತ್ತಿದ್ದಂತಹ ಯೆಹೋವನ ಸಾಕ್ಷಿಗಳ ಕೂಟಗಳಿಗೆ ನಾನು ಹಾಜರಾಗಲಾರಂಭಿಸಿದೆ. ಆಗ ಕ್ಯಾಪ್ಡಿಲಾಮೆಡಲೇನ್ನಲ್ಲಿ ವಾಸಿಸುತ್ತಿದ್ದಂತಹ ಸಾಕ್ಷಿಗಳೆಂದರೆ, ಕೇ ಹಾಗೂ ಅವಳ ಪಯನೀಯರ್ ಸಹಭಾಗಿ ಫ್ಲಾರೆನ್ಸ್ ಬೋಮನ್ ಮಾತ್ರವೇ ಆಗಿದ್ದರು. ಒಂದು ದಿನ ನಾನು ಹೇಳಿದ್ದು, “ನಾಳೆ ನಾನು ನಿಮ್ಮೊಂದಿಗೆ ಸಾರಲಿಕ್ಕಾಗಿ ಬರುವೆ.” ನನ್ನನ್ನು ಅವರೊಂದಿಗೆ ಜೊತೆಗೂಡಿಸಿಕೊಳ್ಳಲು ಅವರು ಸಂತೋಷಿತರಾಗಿದ್ದರು.
ನನ್ನ ಸ್ವಂತ ಪಟ್ಟಣದಲ್ಲಿ ಸಾರುವುದು
ಪ್ರತಿಯೊಬ್ಬರೂ ಬೈಬಲ್ ಸಂದೇಶವನ್ನು ಅಂಗೀಕರಿಸುವರೆಂದು ನಾನು ಎಣಿಸಿದ್ದೆನಾದರೂ, ವಿದ್ಯಮಾನವು ಇದಾಗಿರಲಿಲ್ಲ ಎಂಬುದನ್ನು ನಾನು ಬೇಗನೆ ತಿಳಿದುಕೊಂಡೆ. ಕೇ ಹಾಗೂ ಫ್ಲಾರೆನ್ಸ್ ಬೇರೆ ಯಾವುದೋ ಸ್ಥಳಕ್ಕೆ ಹೋಗುವಂತೆ ನೇಮಿಸಲ್ಪಟ್ಟಾಗ, ಆ ಪಟ್ಟಣದಲ್ಲಿ ಮನೆಯಿಂದ ಮನೆಗೆ ಬೈಬಲ್ ಸತ್ಯಗಳನ್ನು ಸಾರುತ್ತಿದ್ದ ಏಕಮಾತ್ರ ವ್ಯಕ್ತಿ ನಾನಾಗಿದ್ದೆ. ಧೈರ್ಯಗೆಡದೆ, 1963, ಜೂನ್ 8ರಂದು ನನ್ನ ದೀಕ್ಷಾಸ್ನಾನವಾಗುವ ವರೆಗೆ, ನಾನು ಸುಮಾರು ಎರಡು ವರ್ಷಗಳಕಾಲ ಒಂಟಿಯಾಗಿಯೇ ಸಾರುವುದನ್ನು ಮುಂದುವರಿಸಿದೆ. ಆಗ ರಜಾ ಪಯನೀಯರ್ ಸೇವೆಯೆಂದು ಪ್ರಸಿದ್ಧವಾಗಿದ್ದ ಸೇವೆಯನ್ನು ಮಾಡಲಿಕ್ಕಾಗಿ, ಅದೇ ದಿನದಂದು ನಾನು ನನ್ನ ಹೆಸರನ್ನು ನಮೂದಿಸಿಕೊಂಡೆ.
ಒಂದು ವರ್ಷದ ವರೆಗೆ ನಾನು ರಜಾ ಪಯನೀಯರಳಾಗಿ ಮುಂದುವರಿದೆ. ತದನಂತರ, ನಾನು ಒಬ್ಬ ಕ್ರಮದ ಪಯನೀಯರಳಾಗುವುದಾದರೆ, ತಾನು ಕ್ಯಾಪ್ಡಿಲಾಮೆಡಲೇನ್ಗೆ ಬಂದು, ವಾರಕ್ಕೆ ಒಮ್ಮೆ ನನ್ನೊಂದಿಗೆ ಕೆಲಸ ಮಾಡುವೆನೆಂದು, ಡೆಲ್ವಿನಾ ಸಾನ್ ಲಾರ್ನ್ ವಾಗ್ದಾನಿಸಿದಳು. ಆದುದರಿಂದ ನಾನು ನನ್ನ ಪಯನೀಯರ್ ಅರ್ಜಿಯನ್ನು ಭರ್ತಿಮಾಡಿದೆ. ಆದರೂ, ದುಃಖಕರವಾಗಿಯೇ, ನಾನು ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಬೇಕಾಗಿದ್ದ ಎರಡು ವಾರಗಳಿಗೆ ಮೊದಲೇ, ಡೆಲ್ವಿನಾ ಮೃತಪಟ್ಟಳು. ನಾನು ಏನು ಮಾಡುವುದು? ಒಳ್ಳೇದು, ನಾನು ಅರ್ಜಿಯನ್ನು ಭರ್ತಿಮಾಡಿದ್ದೆ ಮತ್ತು ನಾನು ನನ್ನ ಯೋಜನೆಗಳನ್ನು ಬದಲಾಯಿಸಲು ಬಯಸಲಿಲ್ಲ. ಆದುದರಿಂದ 1964ರ ಅಕ್ಟೋಬರ್ ತಿಂಗಳಿನಲ್ಲಿ, ನಾನು ಪೂರ್ಣ ಸಮಯದ ಶುಶ್ರೂಷೆಯಲ್ಲಿನ ನನ್ನ ಜೀವನೋಪಾಯವನ್ನು ಆರಂಭಿಸಿದೆ. ಮುಂದಿನ ನಾಲ್ಕು ವರ್ಷಗಳ ವರೆಗೆ, ಒಂಟಿಯಾಗಿಯೇ ನಾನು ಮನೆಯಿಂದ ಮನೆಗೆ ಹೋದೆ.
ಕ್ಯಾಪ್ಡಿಲಾಮೆಡಲೇನ್ನ ಧರ್ಮನಿಷ್ಠ ಕ್ಯಾಥೊಲಿಕರು, ಅನೇಕವೇಳೆ ವಿರೋಧಿಗಳಾಗಿದ್ದರು. ಸಾರುವುದರಿಂದ ನನ್ನನ್ನು ತಡೆಯುವ ಒಂದು ಪ್ರಯತ್ನದಲ್ಲಿ ಕೆಲವರು ಪೊಲೀಸರಿಗೆ ಕರೆನೀಡಿದರು. ಒಂದು ದಿನ, ಆರಂಭದಲ್ಲಿ ನಾನು ಉಲ್ಲೇಖಿಸಿದಂತೆ, ಒಬ್ಬ ವರ್ತಕನು ನನ್ನ ಪಾದಗಳ ಬಳಿಯಲ್ಲಿ ಗುಂಡುಹಾರಿಸುವ ಮೂಲಕ ನನಗೆ ಭಯಹುಟ್ಟಿಸಲು ಪ್ರಯತ್ನಿಸಿದನು. ಒಳ್ಳೇದು, ಇದು ಪಟ್ಟಣದಲ್ಲಿ ತೀವ್ರವಾದ ಕಲಹವನ್ನುಂಟುಮಾಡಿತು. ಸ್ಥಳಿಕ ಟೆಲಿವಿಷನ್ ಸ್ಟೇಶನ್ ಇದನ್ನು, ಯೆಹೋವನ ಸಾಕ್ಷಿಗಳ ವಿರುದ್ಧವಾದ ಒಂದು ಧರ್ಮಯುದ್ಧವೆಂದು ಕರೆಯಿತು. ಇಡೀ ಘಟನೆಯು ಒಂದು ಅನುಕೂಲಕರವಾದ ಸಾಕ್ಷಿಯಲ್ಲಿ ಫಲಿಸಿತು. ಸಂಭವನೀಯವಾಗಿ, ಹತ್ತು ವರ್ಷಗಳ ಬಳಿಕ, ನನ್ನೆಡೆಗೆ ಗುಂಡುಹಾರಿಸಿದ್ದ ವರ್ತಕನ ಸಂಬಂಧಿಕನೊಬ್ಬನು ಸ್ವತಃ ಒಬ್ಬ ಸಾಕ್ಷಿಯಾದನು.
ದೇವರ ವಾಕ್ಯದಿಂದ ಮಾಡಲ್ಪಟ್ಟ “ಅದ್ಭುತಗಳು”
ಗತ ವರ್ಷಗಳಲ್ಲಿ, ಕ್ಯಾಪ್ಡಿಲಾಮೆಡಲೇನ್ನಲ್ಲಿ, ಬೈಬಲ್ ಸತ್ಯಗಳ ಕಡೆಗಿನ ವಿರೋಧದ ಗೋಡೆಯು ಕ್ರಮೇಣವಾಗಿ ಮುರಿದುಬೀಳುವುದನ್ನು ನಾನು ನೋಡಿದ್ದೇನೆ. ಸುಮಾರು 1968ರಲ್ಲಿ, ಬೇರೆ ಸಾಕ್ಷಿಗಳು ಇಲ್ಲಿಗೆ ಸ್ಥಳಾಂತರಿಸಿದರು, ಮತ್ತು ಸ್ಥಳಿಕ ನಿವಾಸಿಗಳು ಬೈಬಲ್ ಸತ್ಯಗಳಿಗೆ ಪ್ರತಿಕ್ರಿಯೆ ತೋರಿಸಲು ಆರಂಭಿಸಿದರು. ವಾಸ್ತವವಾಗಿ, 1970ಗಳ ಆರಂಭದಷ್ಟಕ್ಕೆ, ಬೈಬಲ್ ಅಭ್ಯಾಸಗಳ ಸಂಖ್ಯೆಯಲ್ಲಿ ಮಹತ್ತರವಾದ ವೃದ್ಧಿಯಿತ್ತು. ನನಗೆ ಎಷ್ಟೊಂದು ಅಭ್ಯಾಸಗಳಿದ್ದವೆಂದರೆ, ನಾನು ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಪಾಲ್ಗೊಳ್ಳಲಿಕ್ಕಾಗಿ ಸಮಯವನ್ನು ಮಾಡಿಕೊಳ್ಳಸಾಧ್ಯವಾಗುವಂತೆ, ನಾನು ನಡೆಸುತ್ತಿದ್ದ ಬೈಬಲ್ ಅಭ್ಯಾಸಗಳಲ್ಲಿ ಹಲವಾರು ಬೈಬಲ್ ಅಭ್ಯಾಸಗಳನ್ನು ನಡೆಸುವಂತೆ ಇತರ ಸಾಕ್ಷಿಗಳಿಗೆ ನಾನು ಕೇಳಿಕೊಳ್ಳಬೇಕಾದ ಹಂತಕ್ಕೆ ತಲಪಿತು.
ಒಂದು ದಿನ, ಯುವ ಸ್ತ್ರೀಯೊಬ್ಬಳು ನನ್ನಿಂದ ನಿತ್ಯ ಜೀವಕ್ಕೆ ನಡಿಸುವ ಸತ್ಯವು ಎಂಬ ಬೈಬಲ್ ಅಭ್ಯಾಸ ಸಹಾಯಕವನ್ನು ಸ್ವೀಕರಿಸಿದಳು. ಆ ಸಮಯದಲ್ಲಿ ಆಂಡ್ರೆ ಎಂಬ ಹೆಸರಿನ ಒಬ್ಬ ಯುವ ಪುರುಷನು—ರೌಡಿಯಂತಹ ತೋರಿಕೆಯಿದ್ದ ಒಬ್ಬ ಅಪರಾಧಿ—ಅವಳ ಸಂಗಾತಿಯಾಗಿದ್ದು, ಅವನು ಸಂಭಾಷಣೆಯಲ್ಲಿ ಜೊತೆಗೂಡಿದನು. ಆಂಡ್ರೆಯೊಂದಿಗಿನ ಒಂದು ಚರ್ಚೆಯು ಅವನ ಆಸಕ್ತಿಯನ್ನು ಕೆರಳಿಸಿತು, ಮತ್ತು ಒಂದು ಬೈಬಲ್ ಅಭ್ಯಾಸವು ಆರಂಭಿಸಲ್ಪಟ್ಟಿತು. ತದನಂತರ ಬೇಗನೆ ತಾನು ಕಲಿಯುತ್ತಿದ್ದ ವಿಷಯಗಳ ಕುರಿತಾಗಿ ಅವನು ತನ್ನ ಸ್ನೇಹಿತರೊಂದಿಗೆ ಮಾತಾಡಲಾರಂಭಿಸಿದನು.
ಒಂದು ಸಮಯದಲ್ಲಿ, ಪುಂಡತಂಡದ ನಾಲ್ಕು ಜನರೊಂದಿಗೆ ನಾನು ಅಭ್ಯಾಸಮಾಡುತ್ತಿದ್ದೆ; ಅವರಲ್ಲಿ ಒಬ್ಬನು ಹೆಚ್ಚು ಮಾತಾಡಲಿಲ್ಲ, ಆದರೆ ಬಹಳ ಕಿವಿಗೊಟ್ಟನು. ಅವನ ಹೆಸರು ಪಿಯೆರ್ ಎಂದಾಗಿತ್ತು. ಒಂದು ಬೆಳಗ್ಗೆ ಸುಮಾರು ಎರಡು ಗಂಟೆಗೆ, ನನ್ನ ಗಂಡನೂ ನಾನೂ ಬಾಗಿಲು ತಟ್ಟುವಿಕೆಯನ್ನು ಕೇಳಿದೆವು. ಈ ದೃಶ್ಯವನ್ನು ಚಿತ್ರಿಸಿಕೊಳ್ಳಿರಿ: ನನ್ನ ಬಳಿ ಪ್ರಶ್ನೆಗಳನ್ನು ಕೇಳಲಿಕ್ಕಾಗಿ ಪುಂಡತಂಡದ ನಾಲ್ಕು ಜನರು ಬಾಗಿಲ ಬಳಿಯಲ್ಲಿ ನಿಂತಿದ್ದರು. ಸಂತೋಷಕರವಾಗಿ, ಅಂತಹ ಅಕಾಲಿಕ ಭೇಟಿಗಳ ಕುರಿತಾಗಿ ರೋಸರ್ ಎಂದೂ ಆಕ್ಷೇಪಣೆ ಮಾಡಲಿಲ್ಲ.
ಆರಂಭದಲ್ಲಿ ಆ ನಾಲ್ವರು ಪುರುಷರು ಕೂಟಗಳಿಗೆ ಹಾಜರಾದರು. ಆದರೂ, ಆಂಡ್ರೆ ಮತ್ತು ಪಿಯೆರ್ ಮಾತ್ರ ಪಟ್ಟುಹಿಡಿದು ಮುಂದುವರಿದರು. ಅವರು ತಮ್ಮ ಜೀವಿತಗಳನ್ನು ದೇವರ ಮಟ್ಟಗಳಿಗೆ ಹೊಂದಿಕೆಯಲ್ಲಿ ತಂದು, ದೀಕ್ಷಾಸ್ನಾನಪಡೆದುಕೊಂಡರು. ಈಗ 20 ವರ್ಷಗಳಿಂದ, ಇಬ್ಬರು ಪುರುಷರೂ ನಂಬಿಗಸ್ತಿಕೆಯಿಂದ ಯೆಹೋವನ ಸೇವೆಮಾಡಿದ್ದಾರೆ. ಅವರು ಅಭ್ಯಾಸಿಸಲು ಆರಂಭಿಸಿದಾಗ, ಅವರು ತಮ್ಮ ಅಪರಾಧಿ ಕೃತ್ಯಗಳಿಗಾಗಿ ಪ್ರಸಿದ್ಧರಾಗಿದ್ದರು ಮತ್ತು ಅವರ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು. ನಮ್ಮ ಬೈಬಲ್ ಅಭ್ಯಾಸಗಳಲ್ಲಿ ಒಂದರ ನಂತರ ಅಥವಾ ಒಂದು ಸಭಾ ಕೂಟದ ಸಮಯದಲ್ಲಿ, ಕೆಲವೊಮ್ಮೆ ಪೊಲೀಸರು ಅವರಿಗಾಗಿ ಹುಡುಕುತ್ತಾ ಬಂದರು. ನಾನು “ಎಲ್ಲಾ ರೀತಿಯ ಮನುಷ್ಯ”ರಿಗೆ ಸಾರಿದೆನೆಂಬ ವಿಷಯದಲ್ಲಿ ನಾನು ಸಂತೋಷಿತಳಾಗಿದ್ದೇನೆ, ಮತ್ತು ಹೀಗೆ ನಿಜವಾಗಿಯೂ ಅದ್ಭುತಕರವೆಂಬಂತೆ ತೋರುವ ಬದಲಾವಣೆಗಳನ್ನು ದೇವರ ವಾಕ್ಯವು ಹೇಗೆ ಮಾಡುತ್ತದೆಂಬುದನ್ನು ಪ್ರತ್ಯಕ್ಷವಾಗಿ ನೋಡಿದೆ.—1 ತಿಮೊಥೆಯ 2:4, NW.
ನನ್ನ ಶುಶ್ರೂಷೆಯ ಆರಂಭದಲ್ಲಿ, ಕ್ಯಾಪ್ಡಿಲಾಮೆಡಲೇನ್ನಲ್ಲಿ ಒಂದು ರಾಜ್ಯ ಸಭಾಗೃಹವಿರುವುದೆಂದೂ, ಅದು ಯೆಹೋವನ ಜನರಿಂದ ಭರಿತವಾಗುವುದೆಂದೂ ನನಗೆ ಹೇಳಲ್ಪಟ್ಟಿರುತ್ತಿದ್ದಲ್ಲಿ, ನಾನು ಅದನ್ನು ನಂಬಿರುತ್ತಿರಲಿಲ್ಲ. ನನ್ನ ಆನಂದಕ್ಕೆ, ಟ್ರೈರಿವೈರ್ನ ನೆರೆಹೊರೆಯ ನಗರದಲ್ಲಿರುವ ಒಂದು ಚಿಕ್ಕ ಸಭೆಯು, ಮೂರು ರಾಜ್ಯ ಸಭಾಗೃಹಗಳಲ್ಲಿ—ಕ್ಯಾಪ್ಡಿಲಾಮೆಡಲೇನ್ನಲ್ಲಿರುವ ಒಂದು ಸಭೆಯನ್ನೂ ಒಳಗೊಂಡು—ಕೂಡಿಬರುವ ಸಮೃದ್ಧಗೊಳ್ಳುತ್ತಿರುವ ಆರು ಸಭೆಗಳಾಗಿ ಬೆಳೆದಿದೆ.
ವೈಯಕ್ತಿಕವಾಗಿ ನನಗೆ ಸುಮಾರು 30 ವ್ಯಕ್ತಿಗಳಿಗೆ, ಸಮರ್ಪಣೆ ಹಾಗೂ ದೀಕ್ಷಾಸ್ನಾನದ ಹಂತಕ್ಕೆ ತಲಪಲು ಸಹಾಯ ಮಾಡಿರುವ ಆನಂದವಿದೆ. ಈಗ, 78 ವರ್ಷ ಪ್ರಾಯದಲ್ಲಿ, ನಾನು ನನ್ನ ಜೀವಿತವನ್ನು ಯೆಹೋವನಿಗೆ ಸಮರ್ಪಿಸಿದ್ದಕ್ಕಾಗಿ ಸಂತೋಷಿತಳಾಗಿದ್ದೇನೆ ಎಂದು ನಾನು ನಿಜವಾಗಿಯೂ ಹೇಳಬಲ್ಲೆ. ಹಾಗಿದ್ದರೂ, ನನಗೆ ನಿರುತ್ಸಾಹದ ಸರದಿಗಳಿದ್ದವು ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು. ಅಂತಹ ಕಾಲಾವಧಿಗಳನ್ನು ಯಶಸ್ವಿಕರವಾಗಿ ನಿವಾರಿಸಲು, ನಾನು ಯಾವಾಗಲೂ ನನ್ನ ಬೈಬಲನ್ನು ತೆರೆದು, ನನ್ನನ್ನು ಬಹಳವಾಗಿ ಚೈತನ್ಯಗೊಳಿಸುವ ಕೆಲವು ಭಾಗಗಳನ್ನು ಓದುತ್ತಿದ್ದೆ. ದೇವರ ವಾಕ್ಯವನ್ನು ಓದದೇ ಒಂದು ದಿನವನ್ನು ಕಳೆಯುವುದು ನನಗೆ ಯೋಚಿಸಲಸಾಧ್ಯವಾದ ವಿಷಯವಾಗಿದೆ. ವಿಶೇಷವಾಗಿ ಯೋಹಾನ 15:7 ಉತ್ತೇಜನದಾಯಕವಾಗಿದೆ, ಅದು ಹೀಗೆ ಹೇಳುತ್ತದೆ: “ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ಏನು ಬೇಕಾದರೂ ಬೇಡಿಕೊಳ್ಳಿರಿ, ಅದು ನಿಮಗೆ ದೊರೆಯುವದು.”
ತೀರ ಸಮೀಪವಿರುವ ಹೊಸ ಲೋಕದಲ್ಲಿ, ರೋಸರ್ನನ್ನು ನೋಡುವುದು ನನ್ನ ನಿರೀಕ್ಷೆಯಾಗಿದೆ. (2 ಪೇತ್ರ 3:13; ಪ್ರಕಟನೆ 21:3, 4) 1975ರಲ್ಲಿ ತನ್ನ ಮರಣಕ್ಕೆ ಸ್ವಲ್ಪ ಮುಂಚೆ, ಅವನು ದೀಕ್ಷಾಸ್ನಾನದ ಕಡೆಗೆ ಉತ್ತಮವಾಗಿ ಪ್ರಗತಿಮಾಡುತ್ತಾ ಇದ್ದನು. ಸದ್ಯಕ್ಕೆ, ನಾನು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಪಟ್ಟುಹಿಡಿದು ಮುಂದುವರಿಯಲು ಮತ್ತು ಯೆಹೋವನ ಕೆಲಸದಲ್ಲಿ ಆನಂದಿಸುತ್ತಾ ಮುಂದುವರಿಯಲು ನಿರ್ಧರಿಸಿದ್ದೇನೆ.