ರಬ್ಬಿ—ಎಂದು ಕರೆಯಲ್ಪಡಲು ಯಾರು ಅರ್ಹರು?
ಜನಸಂದಣಿಯಿದ್ದ ವಾಹನ ಸಂಚಾರ ಸನ್ನಿವೇಶವನ್ನು ನಿರೀಕ್ಷಿಸಿರದಿದ್ದ ಪ್ರವಾಸಿಗನೊಬ್ಬನಿಗೆ, ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ತಲಪುವ ಸಂಭವನೀಯತೆಯು ಕಡಿಮೆಯಿತ್ತು. ನೂರಾರು ಪೊಲೀಸರು ವಾಹನ ಸಂಚಾರವನ್ನು ನಿರ್ದೇಶಿಸಲು ಪ್ರಯತ್ನಿಸುತ್ತಿದ್ದರು ಮತ್ತು ಅದೇ ಸಮಯದಲ್ಲಿ ಜೆರೂಸಲೇಮಿನ ಬೀದಿಗಳಲ್ಲಿ ತುಂಬಿದ್ದ 3,00,000ಕ್ಕಿಂತಲೂ ಹೆಚ್ಚು ಮಂದಿ ಶೋಕಿತರಿಗೆ ರಕ್ಷಣೆಕೊಡುತ್ತಿದ್ದರು. ದ ಜೆರೂಸಲೇಮ್ ಪೋಸ್ಟ್ ಇದನ್ನು “ಸರ್ವಸಾಮಾನ್ಯವಾಗಿ ಕೇವಲ ರಾಷ್ಟ್ರಪತಿಗಳು, ಅರಸರು ಅಥವಾ ನಿರಂಕುಶ ಸರ್ವಾಧಿಕಾರಿಗಳಿಗಾಗಿ ಮೀಸಲಾಗಿಡಲ್ಪಡುವಂತಹ ಗಾತ್ರದ ಒಂದು ಶವಸಂಸ್ಕಾರ ಮೆರವಣಿಗೆ” ಎಂದು ಕರೆಯಿತು. ಇಸ್ರೇಲ್ನ ರಾಜಧಾನಿಯನ್ನು ಅನೇಕ ತಾಸುಗಳ ವರೆಗೆ ಸ್ಥಗಿತಗೊಳಿಸುತ್ತಾ, ಭಕ್ತಿಯ ಅಂತಹ ಪ್ರವಹಿಸುವಿಕೆಯನ್ನು ಯಾರು ಉಂಟುಮಾಡಿದ್ದಿರಸಾಧ್ಯವಿತ್ತು? ಒಬ್ಬ ಗೌರವಾನಿತ್ವ ರಬ್ಬಿಯೇ. ಯೆಹೂದ್ಯರ ನಡುವೆ, ರಬ್ಬಿಯ ಸ್ಥಾನವು ಅಂತಹ ಗೌರವ ಮತ್ತು ಭಕ್ತಿಗೆ ಏಕೆ ಅರ್ಹವಾಗುತ್ತದೆ? “ರಬ್ಬಿ” ಎಂಬ ಶಬ್ದವು ಪ್ರಥಮವಾಗಿ ಯಾವಾಗ ಉಪಯೋಗಕ್ಕೆ ಬಂತು? ಅದು ಸೂಕ್ತವಾಗಿ ಯಾರಿಗೆ ಅನ್ವಯವಾಗುತ್ತದೆ?
ಮೋಶೆಯು ಒಬ್ಬ ರಬ್ಬಿಯಾಗಿದ್ದನೊ?
ಯೆಹೂದ್ಯಮತದಲ್ಲಿನ ಅತ್ಯಂತ ಗೌರವಾನಿತ್ವ ಹೆಸರು, ಇಸ್ರಾಯೇಲಿನ ನಿಯಮಶಾಸ್ತ್ರದೊಡಂಬಡಿಕೆಯ ಮಧ್ಯಸ್ಥಗಾರನಾದ ಮೋಶೆಯದ್ದಾಗಿದೆ. ಧಾರ್ಮಿಕ ಯೆಹೂದ್ಯರು ಅವನನ್ನು “‘ನಮ್ಮ ರಬ್ಬಿ’ಯಾದ ಮೋಶೆ” ಎಂದು ಕರೆಯುತ್ತಾರೆ. ಹಾಗಿದ್ದರೂ, ಮೋಶೆಯು ಬೈಬಲಿನಲ್ಲಿ ಎಲ್ಲಿಯೂ “ರಬ್ಬಿ” ಎಂಬ ಬಿರುದಿನಿಂದ ನಿರ್ದೇಶಿಸಲ್ಪಡುವುದಿಲ್ಲ. ವಾಸ್ತವದಲ್ಲಿ, ಹೀಬ್ರು ಶಾಸ್ತ್ರಗಳಲ್ಲಿ ಎಲ್ಲಿಯೂ “ರಬ್ಬಿ” ಎಂಬ ಶಬ್ದವು ಕಂಡುಬರುವುದಿಲ್ಲ. ಹಾಗಾದರೆ, ಯೆಹೂದ್ಯರು ಮೋಶೆಗೆ ಈ ರೀತಿಯಲ್ಲಿ ಹೇಗೆ ನಿರ್ದೇಶಿಸಲಾರಂಭಿಸಿದರು?
ಹೀಬ್ರು ಶಾಸ್ತ್ರಗಳಿಗನುಸಾರ, ನಿಯಮಶಾಸ್ತ್ರವನ್ನು ಬೋಧಿಸಿ, ವಿವರಿಸುವ ಜವಾಬ್ದಾರಿ ಹಾಗೂ ಅಧಿಕಾರವು, ಲೇವಿ ಕುಲದ ಯಾಜಕರಿಗೆ, ಆರೋನನ ವಂಶದವರಿಗೆ ಕೊಡಲ್ಪಟ್ಟಿತು. (ಯಾಜಕಕಾಂಡ 10:8-11; ಧರ್ಮೋಪದೇಶಕಾಂಡ 24:8; ಮಲಾಕಿಯ 2:7) ಹಾಗಿದ್ದರೂ, ಸಾ.ಶ.ಪೂ. ಎರಡನೆಯ ಶತಮಾನದಲ್ಲಿ, ಆ ಸಮಯಾವಧಿಯಂದಿನಿಂದ ಯೆಹೂದ್ಯರನ್ನು ನಿತ್ಯವಾಗಿ ಬಾಧಿಸಿದ ಕ್ಷೋಭೆರಹಿತ ಕ್ರಾಂತಿಯೊಂದು ಯೆಹೂದ್ಯಮತದೊಳಗೆ ಆರಂಭವಾಯಿತು.
ಈ ಆತ್ಮಿಕ ರೂಪಾಂತರದ ಕುರಿತಾಗಿ, ಎ ಹಿಸ್ಟರಿ ಆಫ್ ಜುಡೆಯಿಸ್ಮ್ನಲ್ಲಿ ಡ್ಯಾನಿಯೆಲ್ ಜೆರಮಿ ಸಿಲ್ವರ್ ಬರೆಯುವುದು: “[ಆ] ಸಮಯದಲ್ಲಿ ಯಾಜಕರಲ್ಲದ ಶಾಸ್ತ್ರಿಗಳು ಹಾಗೂ ಪಂಡಿತರ ಒಂದು ವರ್ಗವು, ಟೋರಾ [ಮೋಶೆಯ ನಿಯಮಶಾಸ್ತ್ರ] ಅರ್ಥವಿವರಣೆಯ ಕುರಿತಾದ ಯಾಜಕರ ಪೂರ್ಣಾಧಿಕಾರದ ಮೇಲಿನ ಶಾಸನಬದ್ಧತೆಯನ್ನು ಪಂಥಾಹ್ವಾನಿಸಲಾರಂಭಿಸಿತು. ದೇವಾಲಯದ ಕಾರ್ಯಕರ್ತರೋಪಾದಿ ಯಾಜಕರು ಆವಶ್ಯಕವಾಗಿದ್ದರು ಎಂಬುದನ್ನು ಪ್ರತಿಯೊಬ್ಬರೂ ಒಪ್ಪಿಕೊಂಡರಾದರೂ, ಟೋರಾ ಸಂಬಂಧಿತ ವಿಷಯಗಳಲ್ಲಿ ಅವರಿಗೆ ಅಂತಿಮ ಅಧಿಕಾರವು ಏಕಿರಬೇಕು?” ಯಾಜಕರ ವರ್ಗದ ಅಧಿಕಾರಕ್ಕೆ ಹಾಕಲ್ಪಟ್ಟ ಈ ಪಂಥಾಹ್ವಾನದ ಚಿತಾವಣೆಗಾರರು ಯಾರಾಗಿದ್ದರು? ಫರಿಸಾಯರೆಂದು ಕರೆಯಲ್ಪಟ್ಟ ಯೆಹೂದ್ಯಮತದೊಳಗಿನ ಒಂದು ಹೊಸ ಗುಂಪು. ಸಿಲ್ವರ್ ಮುಂದುವರಿಸುವುದು: “ಫರಿಸಾಯರು ತಮ್ಮ ವಿದ್ಯಾಸಂಸ್ಥೆಗಳಿಗೆ ಪ್ರವೇಶವನ್ನು, ಜನನ [ಯಾಜಕ ವಂಶ]ದ ಮೇಲಲ್ಲ, ಬದಲಾಗಿ ಯೋಗ್ಯತೆಗಳ ಮೇಲೆ ಆಧಾರಿಸಿದರು, ಮತ್ತು ಅವರು ಯೆಹೂದ್ಯರ ಹೊಸ ವರ್ಗವೊಂದನ್ನು ಧಾರ್ಮಿಕ ನಾಯಕತ್ವದೊಳಗೆ ತಂದರು.”
ಸಾ.ಶ. ಮೊದಲನೆಯ ಶತಮಾನದಷ್ಟಕ್ಕೆ, ಈ ಫರಿಸಾಯ ಸಂಬಂಧಿತ ವಿದ್ಯಾಸಂಸ್ಥೆಗಳ ಪದವೀಧರರು, ಯೆಹೂದಿ ನಿಯಮಶಾಸ್ತ್ರದ ಬೋಧಕರು, ಅಥವಾ ಗುರುಗಳೋಪಾದಿ ಪ್ರಸಿದ್ಧರಾದರು. ಗೌರವದ ಒಂದು ಸಂಕೇತವಾಗಿ, ಇತರ ಯೆಹೂದ್ಯರು ಅವರನ್ನು “ನನ್ನ ಬೋಧಕ” ಅಥವಾ “ನನ್ನ ಗುರು”—ಹೀಬ್ರು ಭಾಷೆಯಲ್ಲಿ, ರಬ್ಬಿ—ಎಂದು ನಿರ್ದೇಶಿಸಲಾರಂಭಿಸಿದರು.
ಯೆಹೂದಿ ಇತಿಹಾಸದಲ್ಲೇ ಅತ್ಯಂತ ಮಹಾನ್ ಬೋಧಕನೆಂಬುದಾಗಿ ವೀಕ್ಷಿಸಲ್ಪಟ್ಟಿರುವವನಾದ ಮೋಶೆಗೆ ಅನ್ವಯಿಸುವುದಕ್ಕಿಂತಲೂ ಹೆಚ್ಚಿನ ಅಧಿಕಾರಯುಕ್ತತೆಯನ್ನು ಈ ಹೊಸ ಬಿರುದಿಗೆ ಇನ್ನಾವುದೂ ಕೊಡಸಾಧ್ಯವಿರಲಿಲ್ಲ. ರಬ್ಬಿ ಎಂಬ ಬಿರುದನ್ನು ಮೋಶೆಗೆ ಅನ್ವಯಿಸುವುದರ ಪರಿಣಾಮವು, ಯಾಜಕತ್ವದ ಮೇಲಿನ ಒತ್ತನ್ನು ಇನ್ನೂ ಹೆಚ್ಚು ಕುಂದಿಸುವಾಗ, ಅತ್ಯಧಿಕವಾಗಿ ಪ್ರಭಾವಯುಕ್ತವಾಗಿರುವ ಫರಿಸಾಯ ಸಂಬಂಧಿತ ನಾಯಕತ್ವದ ಪ್ರತೀಕವನ್ನು ಎತ್ತಿಹಿಡಿಯಲಿತ್ತು. ಹೀಗೆ, ಮೋಶೆಯ ಮರಣದ 1,500ಕ್ಕಿಂತಲೂ ಹೆಚ್ಚಿನ ವರ್ಷಗಳ ಬಳಿಕ, ಅವನು “ರಬ್ಬಿ” ಎಂದು ಹಿಮ್ಮೊಗವಾಗಿ ನಿರ್ದೇಶಿಸಲ್ಪಟ್ಟನು.
ಗುರುವನ್ನು ಅನುಕರಿಸುವುದು
ಕೆಲವೊಮ್ಮೆ ಅಧಿಕಾಂಶ ಜನರಿಂದ “ರಬ್ಬಿ” (“ನನ್ನ ಗುರು”) ಎಂಬ ಅಭಿವ್ಯಕ್ತಿಯು, ಅವರು ಯಾರಿಗೆ ಗೌರವವನ್ನು ಕೊಟ್ಟರೋ ಅಂತಹ ಇತರ ಬೋಧಕರನ್ನು ನಿರ್ದೇಶಿಸಲಿಕ್ಕಾಗಿ ಉಪಯೋಗಿಸಲ್ಪಟ್ಟಿತ್ತಾದರೂ, ಈ ಶಬ್ದವು ಸಾಮಾನ್ಯವಾಗಿ ಫರಿಸಾಯರ ನಡುವೆ ಇದ್ದ ಪ್ರಧಾನ ಬೋಧಕರಿಗೆ, “ಮಹಾಜ್ಞಾನಿ”ಗಳಿಗೆ ಅನ್ವಯಿಸಲ್ಪಟ್ಟಿತು. ಸಾ.ಶ. 70ರಲ್ಲಿ ದೇವಾಲಯದ ನಾಶದೊಂದಿಗೆ, ಕಾರ್ಯತಃ ಯಾಜಕತ್ವದ ಅಧಿಕಾರವನ್ನು ಕೊನೆಗೊಳಿಸಿದಾಗ, ಫರಿಸಾಯ ಸಂಬಂಧಿತ ರಬ್ಬಿಗಳು ಯೆಹೂದ್ಯಮತದ ಸ್ಪರ್ಧಾರಹಿತ ನಾಯಕರಾದರು. ಅವರ ಅಪ್ರತಿಮ ಸ್ಥಾನವು, ರಬ್ಬಿ ಸಂಬಂಧಿತ ಮಹಾಜ್ಞಾನಿಗಳ ಮೇಲೆ ಕೇಂದ್ರೀಕರಿಸುವ ಒಂದು ವಿಧದ ಕುಪಂಥದ ವಿಕಸನವನ್ನು ಪ್ರೋತ್ಸಾಹಿಸಿತು.
ಸಾ.ಶ. ಪ್ರಥಮ ಶತಮಾನದ ಈ ಪರಿವರ್ತನೆಯ ಕಾಲಾವಧಿಯನ್ನು ಚರ್ಚಿಸುತ್ತಾ, ಪ್ರೊಫೆಸರ್ ಡೋವ್ ಸ್ಲಾಟ್ನೀಕ್ ಹೀಗೆ ಹೇಳಿಕೆನೀಡುತ್ತಾರೆ: “ಟೋರಾದ ಅಭ್ಯಾಸಕ್ಕಿಂತಲೂ ‘ಮಹಾಜ್ಞಾನಿಗಳನ್ನು ಲಕ್ಷ್ಯವಿಟ್ಟು ಗಮನಿಸುವುದು,’ ಹೆಚ್ಚು ಪ್ರಮುಖವಾಗಿ ಪರಿಣಮಿಸಿತು.” ಯೆಹೂದಿ ಪಂಡಿತನಾದ ಜೇಕಬ್ ನಾಯ್ಸ್ನರ್ ಇನ್ನೂ ವಿವರಿಸುವುದು: “ಒಬ್ಬ ರಬ್ಬಿಗೆ ತನ್ನನ್ನು ಒಳಪಡಿಸಿಕೊಂಡಿರುವ ವಿದ್ಯಾರ್ಥಿಯೊಬ್ಬನು, ‘ಮಹಾಜ್ಞಾನಿಗಳ ಶಿಷ್ಯ’ನಾಗಿದ್ದಾನೆ. ಅವನು ‘ಟೋರಾ’ವನ್ನು ಕಲಿಯಲು ಬಯಸುತ್ತಾನಾದುದರಿಂದ ಹಾಗೆ ಮಾಡುತ್ತಾನೆ. . . . ಮೋಶೆಯ ನಿಯಮಶಾಸ್ತ್ರದ ಮೂಲಕ ಟೋರಾವನ್ನು ಕಲಿಯಲಾಗುವುದಿಲ್ಲ, ಬದಲಾಗಿ ಜೀವಂತವಾಗಿರುವ ಮಹಾಜ್ಞಾನಿಗಳ ಭಾವಾಭಿನಯಗಳು ಹಾಗೂ ಕೃತ್ಯಗಳಲ್ಲಿ ಮೂರ್ತೀಕರಿಸಲ್ಪಟ್ಟಿರುವ ನಿಯಮಶಾಸ್ತ್ರವನ್ನು ನೋಡುವ ಮೂಲಕ ಕಲಿಯಲಾಗುತ್ತದೆ. ತಾವು ಹೇಳುವ ವಿಷಯಗಳಿಂದ ಮಾತ್ರವೇ ಅಲ್ಲ, ತಾವು ಮಾಡುವ ಕಾರ್ಯಗಳಿಂದ ಅವರು ನಿಯಮಶಾಸ್ತ್ರವನ್ನು ಬೋಧಿಸುತ್ತಾರೆ.”
ಟ್ಯಾಲ್ಮುಡ್ ಪಂಡಿತ ಅಡೀನ್ ಸ್ಟೈನ್ಸಾಲ್ಟ್ಸ್, ಹೀಗೆ ಬರೆಯುತ್ತಾ ಇದನ್ನು ದೃಢೀಕರಿಸುತ್ತಾರೆ: “ಮಹಾಜ್ಞಾನಿಗಳು ತಾವೇ ಹೇಳಿದ್ದು, ‘ಮಹಾಜ್ಞಾನಿಗಳ ಸರ್ವಸಾಮಾನ್ಯ ಸಂಭಾಷಣೆಗಳು, ಪರಿಹಾಸ್ಯಗಳು, ಅಥವಾ ಔಪಚಾರಿಕ ಹೇಳಿಕೆಗಳು ಪರೀಕ್ಷಿಸಲ್ಪಡಬೇಕು.’” ಎಷ್ಟರ ಮಟ್ಟಿಗೆ ಈ ಪರೀಕ್ಷೆಯನ್ನು ಅನ್ವಯಿಸಸಾಧ್ಯವಿತ್ತು? ಸ್ಟೈನ್ಸಾಲ್ಟ್ಸ್ ಗಮನಿಸುವುದು: “ಇದರ ಕುರಿತಾದ ವಿಪರೀತ ಉದಾಹರಣೆಯು, ತನ್ನ ಮಹಾಜ್ಞಾನಿಯು ತನ್ನ ಹೆಂಡತಿಯೊಂದಿಗೆ ಹೇಗೆ ವರ್ತಿಸಿದನು ಎಂಬುದನ್ನು ಕಂಡುಹಿಡಿಯಲಿಕ್ಕಾಗಿ, ಅವನ ಮಂಚದ ಕೆಳಗೆ ಅವಿತುಕೊಂಡಿದ್ದನೆಂದು ವರದಿಸಲಾಗಿದ್ದ ಶಿಷ್ಯನದ್ದಾಗಿತ್ತು. ಅವನ ಅಧಿಕಪ್ರಸಂಗಿತನದ ಕುರಿತಾಗಿ ಪ್ರಶ್ನಿಸಲ್ಪಟ್ಟಾಗ, ಆ ಯುವ ಶಿಷ್ಯನು ಉತ್ತರಿಸಿದ್ದು: ‘ಅದು ಒಂದು ಟೋರಾ ಸಂಬಂಧಿತ ವಿಷಯವಾಗಿದೆ ಮತ್ತು ಪರೀಕ್ಷಿಸಲ್ಪಡಲು ಅರ್ಹವಾದದ್ದಾಗಿದೆ’—ರಬ್ಬಿಗಳಿಂದಲೂ ವಿದ್ಯಾರ್ಥಿಗಳಿಂದಲೂ ಸಮಂಜಸವೆಂದು ಅಂಗೀಕರಿಸಲ್ಪಟ್ಟ ಒಂದು ಪ್ರಸ್ತಾವ.”
ಟೋರಾಕ್ಕೆ ಬದಲಾಗಿ ರಬ್ಬಿಯ ಮೇಲೆ ಒತ್ತು—ರಬ್ಬಿಯ ಮೂಲಕ ಟೋರಾದ ಕಲಿಯುವಿಕೆ—ಹಾಕಿದ ಕಾರಣ, ಸಾ.ಶ. ಪ್ರಥಮ ಶತಮಾನದಿಂದಲೂ ಯೆಹೂದ್ಯಮತವು ರಬ್ಬಿ ಅಭಿಮುಖವಾದ ಧರ್ಮವಾಗಿ ಪರಿಣಮಿಸಿತು. ವ್ಯಕ್ತಿಯೊಬ್ಬನು ದೇವರಿಗೆ ನಿಕಟನಾದದ್ದು, ಪ್ರೇರಿತವಾದ ಲಿಖಿತ ವಾಕ್ಯದ ಮೂಲಕವಾಗಿ ಅಲ್ಲ, ಬದಲಾಗಿ ಒಬ್ಬ ವೈಯಕ್ತಿಕ ಆದರ್ಶಪ್ರಾಯನು, ಒಬ್ಬ ಗುರುವಾದ ರಬ್ಬಿಯ ಮೂಲಕವೇ. ಹೀಗೆ, ಆ ಒತ್ತು ಸಹಜವಾಗಿ, ಪ್ರೇರಿತ ಶಾಸ್ತ್ರದಿಂದ, ಈ ರಬ್ಬಿಗಳಿಂದ ಕಲಿಸಲ್ಪಟ್ಟ ವಾಚಿಕ ನಿಯಮಶಾಸ್ತ್ರ ಹಾಗೂ ಸಂಪ್ರದಾಯಗಳ ಕಡೆಗೆ ತಿರುಗಿಸಲ್ಪಟ್ಟಿತು. ಅಂದಿನಿಂದ, ಟ್ಯಾಲ್ಮುಡ್ನಂತಹ ಯೆಹೂದಿ ಸಾಹಿತ್ಯವು, ದೇವರ ಘೋಷಣೆಗಳ ಮೇಲೆ ಕೇಂದ್ರೀಕರಿಸುವುದಕ್ಕೆ ಬದಲಾಗಿ, ಚರ್ಚೆಗಳು, ಐತಿಹ್ಯಗಳು, ಹಾಗೂ ರಬ್ಬಿಗಳ ನಡವಳಿಕೆಯ ಮೇಲೆ ಹೆಚ್ಚು ಕೇಂದ್ರೀಕರಿಸುತ್ತದೆ.
ಯುಗಗಳಾದ್ಯಂತವಾಗಿ ರಬ್ಬಿಗಳ ಪಾತ್ರ
ಆರಂಭದ ರಬ್ಬಿಗಳು ಮಹತ್ತರವಾದ ಅಧಿಕಾರ ಹಾಗೂ ಪ್ರಭಾವವನ್ನು ಪ್ರಯೋಗಿಸುತ್ತಿದ್ದರಾದರೂ, ಅವರು ತಮ್ಮ ಧಾರ್ಮಿಕ ಚಟುವಟಿಕೆಯಿಂದ ಜೀವನೋಪಾಯಕ್ಕಾಗಿ ಹಣವನ್ನು ಸಂಪಾದಿಸಲಿಲ್ಲ. ಎನ್ಸೈಕ್ಲೊಪೀಡಿಯ ಜುಡೇಅಕ ಹೇಳುವುದು: “ಟ್ಯಾಲ್ಮುಡ್ನ ರಬ್ಬಿಯು . . . ಆಧುನಿಕ ದಿನದ ಬಿರುದನ್ನು ಪಡೆದಿರುವ ರಬ್ಬಿಗಳಿಗಿಂತ ಸಂಪೂರ್ಣವಾಗಿ ವಿಭಿನ್ನನಾಗಿದ್ದನು. ಟ್ಯಾಲ್ಮುಡ್ ಸಂಬಂಧಿತ ರಬ್ಬಿಯು, ಬೈಬಲಿನ ಹಾಗೂ ವಾಚಿಕ ನಿಯಮಶಾಸ್ತ್ರದ ಅರ್ಥವಿವರಣೆಮಾಡುವವನೂ ನಿರೂಪಕನೂ ಆಗಿದ್ದನು, ಮತ್ತು ಬಹುಮಟ್ಟಿಗೆ ಯಾವಾಗಲೂ ಒಂದು ಉದ್ಯೋಗದ ಮೂಲಕವಾಗಿ ತನ್ನ ಜೀವನೋಪಾಯಕ್ಕಾಗಿ ಹಣವನ್ನು ಸಂಪಾದಿಸಿದನು. ಮಧ್ಯ ಯುಗಗಳಲ್ಲಿ ಮಾತ್ರವೇ ರಬ್ಬಿಯು . . . ಯೆಹೂದಿ ಸಭೆಯ ಅಥವಾ ಸಮುದಾಯದ ಬೋಧಕನು, ಸುವಾರ್ತಿಕನು, ಮತ್ತು ಆತ್ಮಿಕ ಶಿರಸ್ಸಾಗಿ ಪರಿಣಮಿಸಿದನು.”
ರಬ್ಬಿಗಳು ತಮ್ಮ ಸ್ಥಾನವನ್ನು ಸಂಬಳ ದೊರಕುವ ಉದ್ಯೋಗವನ್ನಾಗಿ ಮಾರ್ಪಡಿಸಲಾರಂಭಿಸಿದಾಗ, ಕೆಲವು ರಬ್ಬಿಗಳು ಅದರ ವಿರುದ್ಧವಾಗಿ ಮಾತಾಡಿದರು. ತನ್ನ ಜೀವನೋಪಾಯಕ್ಕಾಗಿ ಒಬ್ಬ ವೈದ್ಯನೋಪಾದಿ ಹಣವನ್ನು ಸಂಪಾದಿಸಿದ, 12ನೆಯ ಶತಮಾನದ ಪ್ರಸಿದ್ಧ ರಬ್ಬಿಯಾದ ಮೈಮಾನಡೀಸ್, ಅಂತಹ ರಬ್ಬಿಗಳನ್ನು ಟೀಕಿಸಿದನು. “[ಅವರು] ತಮಗಾಗಿ ವ್ಯಕ್ತಿಗಳಿಂದಲೂ ಸಮಾಜಗಳಿಂದಲೂ ಹಣಕಾಸಿನ ತಗಾದೆಗಳಿಗಾಗಿ ಏರ್ಪಾಡುಗಳನ್ನು ಮಾಡಿಕೊಂಡರು ಮತ್ತು ಮಹಾಜ್ಞಾನಿಗಳಿಗೆ, ಪಂಡಿತರಿಗೆ, ಹಾಗೂ ಟೋರಾವನ್ನು ಅಭ್ಯಾಸಿಸುತ್ತಿರುವ ಜನರಿಗೆ [ಹಣಕಾಸಿನ ಮೂಲಕ] ಸಹಾಯ ಮಾಡುವುದು ಸೂಕ್ತವಾದದ್ದೂ ಹಂಗಿನದ್ದೂ ಆದ ವಿಷಯವಾಗಿದೆಯೆಂದು ಜನರು ಸಂಪೂರ್ಣ ಮೂರ್ಖತನದಿಂದ ಆಲೋಚಿಸುವಂತೆ ಮಾಡಿದರು, ಹೀಗೆ ಅವರ ಟೋರಾವು ಅವರ ಉದ್ಯೋಗವಾಗಿದೆ. ಆದರೆ ಇದೆಲ್ಲವೂ ತಪ್ಪಾಗಿದೆ. ಟೋರಾದಲ್ಲಾಗಲಿ ಅಥವಾ ಮಹಾಜ್ಞಾನಿಗಳ ಹೇಳಿಕೆಗಳಲ್ಲಾಗಲಿ, ಈ ಬೋಧನೆಯನ್ನು ಬೆಂಬಲಿಸುವ ಒಂದು ನುಡಿಯೂ ಇಲ್ಲ.” (ಕಾಮೆಂಟರಿ ಆನ್ ದ ಮಿಷ್ನ, Avot 4:5) ಆದರೆ ಮೈಮಾನಡೀಸನ ದೂಷಣೆಯು, ಭವಿಷ್ಯತ್ತಿನ ರಬ್ಬಿಗಳ ಸಂತತಿಗಳಿಂದ ಅಲಕ್ಷಿಸಲ್ಪಟ್ಟಿತು.
ಯೆಹೂದ್ಯಮತವು ಆಧುನಿಕ ಯುಗವನ್ನು ಪ್ರವೇಶಿಸಿದಂತೆ, ಅದು ಸುಧಾರಣೆಯ ಪಂಗಡಗಳು—ಸಂಪ್ರದಾಯವಾದಿಗಳು ಮತ್ತು ಧರ್ಮಾನುಸಾರಿಗಳು—ಆಗಿ ವಿಂಗಡವಾಯಿತು. ಅನೇಕ ಯೆಹೂದ್ಯರಿಗೆ ಧಾರ್ಮಿಕ ನಂಬಿಕೆ ಹಾಗೂ ಆಚರಣೆಯು, ಇತರ ಹಿತಾಸಕ್ತಿಗಳಿಗೆ ಎರಡನೆಯ ಸ್ಥಾನದ್ದಾಯಿತು. ಫಲಿತಾಂಶವಾಗಿ, ರಬ್ಬಿಯ ಸ್ಥಾನವು ಶಿಥಿಲಗೊಳಿಸಲ್ಪಟ್ಟಿತು. ಪ್ರಮುಖವಾಗಿ ರಬ್ಬಿಯು, ತನ್ನ ಗುಂಪಿನ ಸದಸ್ಯರಿಗೆ, ಸಂಬಳಕೊಡಲ್ಪಡುವ, ವೃತ್ತಿಪರ ಬೋಧಕನೂ ಸಲಹೆಗಾರನೂ ಆಗಿ ಕಾರ್ಯನಡಿಸುತ್ತಾ, ಒಂದು ಸಭೆಯ ನೇಮಿತ ಶಿರಸ್ಸಾಗಿ ಪರಿಣಮಿಸಿದನು. ಹಾಗಿದ್ದರೂ, ಅತಿ ಧರ್ಮಾನುಸಾರಿ ಹ್ಯಾಸಿಡಿಕ್ ಗುಂಪುಗಳ ನಡುವೆ, ಗುರು ಹಾಗೂ ಆದರ್ಶಪ್ರಾಯನೋಪಾದಿ ರಬ್ಬಿಯ ಭಾವರೂಪವು, ಇನ್ನೂ ಹೆಚ್ಚು ವಿಕಾಸಗೊಂಡಿತು.
ಹ್ಯಾಸಿಡಿಕ್ ಶಬಾಡ್-ಲೂಬವಿಚ್ರ್ ಆಂದೋಲನದ ಕುರಿತಾಗಿ, ಎಡ್ವರ್ಡ್ ಹಾಫ್ಮನ್ ತನ್ನ ಪುಸ್ತಕದಲ್ಲಿ ಕೊಟ್ಟಿರುವ ಹೇಳಿಕೆಗಳನ್ನು ಗಮನಿಸಿರಿ: “ಪ್ರತಿಯೊಂದು ಸಂತತಿಯಲ್ಲಿ ಒಬ್ಬ ಏಕಮಾತ್ರ ಯೆಹೂದಿ ನಾಯಕ, ಒಬ್ಬ ಸ್ಯಾಡಿಕ್ [ಒಬ್ಬ ನೀತಿವಂತನು] ಅಸ್ತಿತ್ವದಲ್ಲಿರುತ್ತಾನೆ, ಅವನು ತನ್ನ ಕಾಲದ ‘ಮೋಶೆ’ಯಾಗಿದ್ದಾನೆ, ಇತರರಿಗೆ ಅವನ ಪಾಂಡಿತ್ಯ ಮತ್ತು ಭಕ್ತಿಯು ಸಮಗೊಳಿಸಲಾರದಂತಹದ್ದಾಗಿದೆ ಎಂಬುದನ್ನು ಆರಂಭದ ಹ್ಯಾಸಿಡಿಕ್ಮತವು ಸಹ ಒತ್ತಿಹೇಳಿತು. ತನ್ನ ಭಯಭಕ್ತಿಪ್ರೇರಕ ದೈವ ಭಕ್ತಿಯ ಮೂಲಕವಾಗಿ, ರೆಬ್ಬಿ [“ರಬ್ಬಿ”ಗಾಗಿರುವ ಯಿಡ್ಡಿಶ್ ಭಾಷೆ]ಯು ಸರ್ವಶಕ್ತನ ಕಟ್ಟಳೆಗಳನ್ನು ಸಹ ಪ್ರಭಾವಿಸಸಾಧ್ಯವಿದೆಯೆಂದು ಹ್ಯಾಸಿಡಿಕ್ಮತದ ಪ್ರತಿಯೊಂದು ಗುಂಪು ಭಾವಿಸಿತು. ತನ್ನ ಪ್ರಕಟನ ಸಂಬಂಧಿತ ಉಪದೇಶಗಳ ಮೂಲಕವಾಗಿ ರಬ್ಬಿಯು ಒಬ್ಬ ಆದರ್ಶಪ್ರಾಯನೋಪಾದಿ ಪೂಜ್ಯಭಾವದಿಂದ ಕಾಣಲ್ಪಟ್ಟನು ಮಾತ್ರವಲ್ಲ, ಅವನು ತನ್ನ ಜೀವಿತವನ್ನು ಜೀವಿಸಿದ ವಿಧವು (‘ಅವನು ತನ್ನ ಷೂಗಳ ಲೇಸನ್ನು ಕಟ್ಟುವ ವಿಧ’ ಎಂಬುದಾಗಿ ವ್ಯಕ್ತಪಡಿಸಲ್ಪಟ್ಟಂತೆ), ಮಾನವತ್ವವನ್ನು ಉನ್ನತಿಗೇರಿಸುವುದಾಗಿ ಮತ್ತು ದೈವಿಕ ಹಾದಿಗೆ ಹೋಗುವ ವ್ಯಾಪಕವಾದ ಸೂಚನೆಗಳನ್ನು ತಿಳಿಸುವುದಾಗಿ ಅವಲೋಕಿಸಲ್ಪಟ್ಟಿತು.”
“ನೀವು ರಬ್ಬಿಯೆನ್ನಿಸಿಕೊಳ್ಳಬೇಡಿರಿ”
ಕ್ರೈಸ್ತತ್ವವನ್ನು ಸ್ಥಾಪಿಸಿದ, ಪ್ರಥಮ ಶತಮಾನದ ಯೆಹೂದ್ಯನಾದ ಯೇಸುವು, ರಬ್ಬಿಯ ಕುರಿತಾದ ಫರಿಸಾಯ ಸಂಬಂಧಿತ ಭಾವರೂಪವು ಯೆಹೂದ್ಯಮತದ ಸಮಕ್ಕೆ ಬೆನ್ನುಹಿಡಿಯಲಾರಂಭಿಸುತ್ತಿದ್ದ ಸಮಯದಲ್ಲಿ ಜೀವಿಸಿದನು. ಅವನು ಒಬ್ಬ ಫರಿಸಾಯನಾಗಿರಲಿಲ್ಲ, ಅಥವಾ ಅವರ ವಿದ್ಯಾಸಂಸ್ಥೆಗಳಲ್ಲಿ ತರಬೇತುಗೊಳಿಸಲ್ಪಟ್ಟಿರಲೂ ಇಲ್ಲವಾದರೂ, ಅವನು ಕೂಡ ರಬ್ಬಿಯೆಂದು ಕರೆಯಲ್ಪಟ್ಟನು.—ಮಾರ್ಕ 9:5; ಯೋಹಾನ 1:38; 3:2.
ಯೆಹೂದ್ಯಮತದಲ್ಲಿದ್ದ ರಬ್ಬಿ ಸಂಬಂಧಿತ ಪ್ರವೃತ್ತಿಯನ್ನು ದೂಷಿಸುತ್ತಾ, ಯೇಸು ಹೇಳಿದ್ದು: “ಶಾಸ್ತ್ರಿಗಳೂ ಫರಿಸಾಯರೂ ಮೋಶೆಯ ಪೀಠದಲ್ಲಿ ಕೂತುಕೊಂಡಿದ್ದಾರೆ; ಇದಲ್ಲದೆ ಔತಣಪ್ರಸ್ತಗಳಲ್ಲಿ ಪ್ರಥಮಸ್ಥಾನ, ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳು, ಅಂಗಡೀಬೀದಿಗಳಲ್ಲಿ ನಮಸ್ಕಾರಗಳು, ಜನರಿಂದ ಬೋಧಕರನ್ನಿಸಿಕೊಳ್ಳುವದು [“ರಬ್ಬಿಯೆನ್ನಿಸಿಕೊಳ್ಳುವುದು,” NW], ಇವುಗಳೇ ಅವರಿಗೆ ಇಷ್ಟ. ಆದರೆ ನೀವು ಬೋಧಕರನ್ನಿಸಿಕೊಳ್ಳಬೇಡಿರಿ [“ರಬ್ಬಿಯೆನ್ನಿಸಿಕೊಳ್ಳಬೇಡಿರಿ,” NW], ಒಬ್ಬನೇ ನಿಮ್ಮ ಬೋಧಕನು, ನೀವೆಲ್ಲರು ಸಹೋದರರು.”—ಮತ್ತಾಯ 23:2, 6-8.
ಯೆಹೂದ್ಯಮತದೊಳಗೆ ವಿಕಸಿಸುತ್ತಿದ್ದ ಪುರೋಹಿತ-ಲೌಕಿಕ ಭಿನ್ನತೆಯ ವಿರುದ್ಧವಾಗಿ ಯೇಸು ಎಚ್ಚರಿಕೆ ನೀಡಿದನು. ಮನುಷ್ಯರಿಗೆ ಅಂತಹ ಅನರ್ಹ ಪ್ರಾಧಾನ್ಯವನ್ನು ಕೊಡುವುದನ್ನು ಅವನು ಖಂಡಿಸಿದನು. “ಒಬ್ಬನೇ ನಿಮ್ಮ ಬೋಧಕನು,” ಎಂದು ಅವನು ಧೈರ್ಯವಾಗಿ ಪ್ರಕಟಿಸಿದನು. ಈ ಒಬ್ಬನು ಯಾರಾಗಿದ್ದನು?
“ಯಾರನ್ನು ಯೆಹೋವನು ಮುಖಾಮುಖಿಯಾಗಿ ತಿಳಿದಿದ್ದನೋ” (NW) ಹಾಗೂ ಸ್ವತಃ ಮಹಾಜ್ಞಾನಿಗಳಿಂದ “ನಮ್ಮ ರಬ್ಬಿ” ಎಂದು ಯಾರು ಕರೆಯಲ್ಪಟ್ಟನೋ ಆ ಮೋಶೆಯು, ಒಬ್ಬ ಅಪರಿಪೂರ್ಣ ಮನುಷ್ಯನಾಗಿದ್ದನು. ಅವನು ಸಹ ತಪ್ಪುಗಳನ್ನು ಮಾಡಿದನು. (ಧರ್ಮೋಪದೇಶಕಾಂಡ 32:48-51; 34:10; ಪ್ರಸಂಗಿ 7:20) ಮೋಶೆಯನ್ನು ಅಂತಿಮ ಮಾದರಿಯೋಪಾದಿ ಅತ್ಯುಜ್ವಲಪಡಿಸುವುದಕ್ಕೆ ಬದಲಾಗಿ, ಯೆಹೋವನು ಅವನಿಗೆ ಹೇಳಿದ್ದು: “ಇವರ ಸ್ವದೇಶದವರಲ್ಲಿ ನಿನ್ನಂಥ ಪ್ರವಾದಿಯನ್ನು ಅವರಿಗೋಸ್ಕರ ಏರ್ಪಡಿಸುವೆನು; ಅವನ ಬಾಯಿಂದ ನನ್ನ ಮಾತುಗಳನ್ನು ನುಡಿಸುವೆನು; ನಾನು ಅವನಿಗೆ ಆಜ್ಞಾಪಿಸಿದ್ದನ್ನೆಲ್ಲಾ ಅವನು ಅವರಿಗೆ ತಿಳಿಸುವನು. ಅವನು ನನ್ನ ಹೆಸರಿನಲ್ಲಿ ಹೇಳಿದ ಮಾತುಗಳಿಗೆ ಯಾರು ಕಿವಿಗೊಡುವದಿಲ್ಲವೋ ಅಂಥವರನ್ನು ನಾನು ಶಿಕ್ಷಿಸುವೆನು.”—ಧರ್ಮೋಪದೇಶಕಾಂಡ 18:18, 19.
ಈ ಮಾತುಗಳು ಮೆಸ್ಸೀಯನಾದ ಯೇಸುವಿನಲ್ಲಿ ತಮ್ಮ ನೆರವೇರಿಕೆಯನ್ನು ಪಡೆದವು ಎಂಬುದಾಗಿ ಬೈಬಲ್ ಪ್ರವಾದನೆಗಳು ರುಜುಪಡಿಸುತ್ತವೆ.a ಯೇಸು ಮೋಶೆಯ “ಹಾಗೆ” ಇದ್ದನು ಮಾತ್ರವಲ್ಲ; ಅವನು ಮೋಶೆಗಿಂತಲೂ ಹೆಚ್ಚು ಮಹಾನ್ ವ್ಯಕ್ತಿಯಾಗಿದ್ದನು. (ಇಬ್ರಿಯ 3:1-3, NW) ಯೇಸು ಒಬ್ಬ ಪರಿಪೂರ್ಣ ಮನುಷ್ಯನೋಪಾದಿ ಜನಿಸಿದನು, ಮತ್ತು ಮೋಶೆಗೆ ಅಸದೃಶವಾಗಿ ಅವನು “ಪಾಪರಹಿತ”ನಾಗಿ ದೇವರ ಸೇವೆಮಾಡಿದನೆಂದು ಶಾಸ್ತ್ರವು ಪ್ರಕಟಿಸುತ್ತದೆ.—ಇಬ್ರಿಯ 4:15, NW.
ಆದರ್ಶಪ್ರಾಯನನ್ನು ಹಿಂಬಾಲಿಸಿರಿ
ರಬ್ಬಿಯ ಪ್ರತಿಯೊಂದು ಕೃತ್ಯ ಹಾಗೂ ನುಡಿಯ ಕುರಿತಾದ ಆಳವಾದ ಅಧ್ಯಯನವು, ಯೆಹೂದ್ಯರನ್ನು ದೇವರಿಗೆ ಹೆಚ್ಚು ನಿಕಟರಾಗಿರುವಂತೆ ಮಾಡಿಲ್ಲ. ಅಪರಿಪೂರ್ಣ ಮನುಷ್ಯನೊಬ್ಬನು ನಂಬಿಗಸ್ತಿಕೆಯ ಒಂದು ಮಾದರಿಯಾಗಿರುವಾಗ, ನಾವು ಅವನ ಪ್ರತಿಯೊಂದು ಕೃತ್ಯವನ್ನು ಅಭ್ಯಾಸಿಸಿ, ಅನುಕರಿಸುವುದಾದರೆ, ನಾವು ಅವನ ತಪ್ಪುಗಳನ್ನು ಮತ್ತು ಅಪರಿಪೂರ್ಣತೆಗಳನ್ನು ಹಾಗೂ ಅವನ ಒಳ್ಳೆಯ ಗುಣಗಳನ್ನು ಅನುಕರಿಸುವೆವು. ಸೃಷ್ಟಿಕರ್ತನಿಗೆ ಬದಲಾಗಿ, ಸೃಷ್ಟಿಯಾದವನೊಬ್ಬನಿಗೆ ಅನರ್ಹವಾದ ಮಹಿಮೆಯನ್ನು ನಾವು ಕೊಡುತ್ತಿರುವೆವು.—ರೋಮಾಪುರ 1:25.
ಆದರೆ ಯೆಹೋವನು ಮಾನವಕುಲಕ್ಕಾಗಿ ಒಬ್ಬ ಆದರ್ಶಪ್ರಾಯ ವ್ಯಕ್ತಿಯನ್ನು ಒದಗಿಸಿದನು. ಶಾಸ್ತ್ರಕ್ಕನುಸಾರವಾಗಿ, ಯೇಸುವಿಗೆ ಒಂದು ಮಾನವಪೂರ್ವ ಅಸ್ತಿತ್ವವಿತ್ತು. ವಾಸ್ತವವಾಗಿ, ಅವನು “ಅದೃಶ್ಯನಾದ ದೇವರ ಪ್ರತಿರೂಪನೂ ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನ ಸ್ಥಾನಹೊಂದಿದವನೂ” ಎಂದು ಕರೆಯಲ್ಪಡುತ್ತಾನೆ. (ಕೊಲೊಸ್ಸೆ 1:15) ದೇವರ ಕುಶಲ “ಶಿಲ್ಪಿ”ಯೋಪಾದಿ ಅಗಣಿತ ಸಹಸ್ರ ವರ್ಷಗಳ ವರೆಗೆ ಸ್ವರ್ಗದಲ್ಲಿ ಸೇವೆಮಾಡಿರುವುದರಿಂದ, ಯೆಹೋವನನ್ನು ತಿಳಿದುಕೊಳ್ಳುವುದರಲ್ಲಿ ನಮಗೆ ಸಹಾಯ ಮಾಡಲು, ಯೇಸು ಅತ್ಯುತ್ತಮವಾದ ಸ್ಥಾನದಲ್ಲಿದ್ದಾನೆ.—ಜ್ಞಾನೋಕ್ತಿ 8:22-30; ಯೋಹಾನ 14:9, 10.
ಆದುದರಿಂದ, ಪೇತ್ರನು ಹೀಗೆ ಬರೆಯಸಾಧ್ಯವಿತ್ತು: “ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು.” (1 ಪೇತ್ರ 2:21) ಅಪೊಸ್ತಲ ಪೌಲನು ಕ್ರೈಸ್ತರಿಗೆ, “ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿ”ಯಿಡುವಂತೆ ಉತ್ತೇಜಿಸಿದನು. “ವಿವೇಕ ಮತ್ತು ಜ್ಞಾನದ ಸಕಲ ನಿಕ್ಷೇಪಗಳು ಅವನಲ್ಲಿ ಜೋಪಾನವಾಗಿ ಅಡಕವಾಗಿವೆ” ಎಂಬುದಾಗಿಯೂ ಅವನು ವಿವರಿಸಿದನು. (ಇಬ್ರಿಯ 12:2; ಕೊಲೊಸ್ಸೆ 2:3, NW) ಇನ್ನಾವ ಮನುಷ್ಯನೂ—ಮೋಶೆಯಾಗಲಿ ಯಾವನೇ ರಬ್ಬಿ ಸಂಬಂಧಿತ ಮಹಾಜ್ಞಾನಿಯಾಗಲಿ—ಅಂತಹ ಅವಧಾನಕ್ಕೆ ಅರ್ಹನಾಗಿಲ್ಲ. ಒತ್ತಾಗಿ ಅನುಕರಿಸಲ್ಪಡಬೇಕಾದ ಯಾವನಾದರೂ ಇರುವಲ್ಲಿ ಅವನು ಯೇಸುವೇ. ವಿಶೇಷವಾಗಿ ಅದರ ಆಧುನಿಕ ದಿನದ ಅಧಿಕಾರ್ಥತೆಯ ನೋಟದಲ್ಲಿ, ದೇವರ ಸೇವಕರಿಗೆ ರಬ್ಬಿಯಂತಹ ಒಂದು ಬಿರುದಿನ ಆವಶ್ಯಕತೆ ಇಲ್ಲ, ಆದರೆ ರಬ್ಬಿಯೆಂದು ಯಾರಾದರೂ ಕರೆಯಲ್ಪಡಲು ಅರ್ಹನಾಗಿದ್ದರೆ, ಅವನು ಯೇಸುವೇ ಆಗಿದ್ದನು.
[ಪಾದಟಿಪ್ಪಣಿ]
a ಯೇಸು ವಾಗ್ದತ್ತ ಮೆಸ್ಸೀಯನಾಗಿದ್ದಾನೆಂಬುದರ ಸಾಕ್ಷ್ಯದ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತವಾದ, ಯುದ್ಧರಹಿತವಾದ ಒಂದು ಲೋಕವು ಎಂದಾದರೂ ಇರುವುದೊ? (ಇಂಗ್ಲಿಷ್) ಎಂಬ ಬ್ರೋಷರಿನ 24-30ನೆಯ ಪುಟಗಳನ್ನು ನೋಡಿರಿ.
[ಪುಟ 28 ರಲ್ಲಿರುವ ಚಿತ್ರ ಕೃಪೆ]
© Brian Hendler 1995. All Rights Reserved