“ನಮಗೂ ಪ್ರಾರ್ಥನೆಮಾಡುವದನ್ನು ಕಲಿಸು”
“ಸ್ವಾಮೀ, . . . ನಮಗೂ ಪ್ರಾರ್ಥನೆಮಾಡುವದನ್ನು ಕಲಿಸು.” ಆ ಬಿನ್ನಹವು ಯೇಸು ಕ್ರಿಸ್ತನ ಶಿಷ್ಯರಲ್ಲಿ ಒಬ್ಬನಿಂದ ಮಾಡಲ್ಪಟ್ಟಿತು. (ಲೂಕ 11:1) ಆ ಅನಾಮಧೇಯ ಶಿಷ್ಯನು ಪ್ರಾರ್ಥನೆಗಾಗಿ ಆಳವಾದ ಗಣ್ಯತೆಯಿದ್ದ ಪುರುಷನಾಗಿದ್ದನೆಂಬುದು ಸುವ್ಯಕ್ತ. ಇಂದು ಸತ್ಯಾರಾಧಕರು ಅದೇ ರೀತಿ ಅದರ ಪ್ರಮುಖತೆಯನ್ನು ಮಾನ್ಯಮಾಡುತ್ತಾರೆ. ಎಷ್ಟೆಂದರೂ, ಪ್ರಾರ್ಥನೆಯು ವಿಶ್ವದ ಪರಮ ವ್ಯಕ್ತಿಯೊಂದಿಗೆ ಮಾತನಾಡುವ ಅವಕಾಶವನ್ನು ನಾವು ಪಡೆಯುವ ಮಾಧ್ಯಮವಾಗಿದೆ! ಮತ್ತು ತುಸು ಯೋಚಿಸಿ! ‘ಪ್ರಾರ್ಥನೆಯನ್ನು ಕೇಳುವವನು’ ನಮ್ಮ ಚಿಂತೆಗಳಿಗೆ ಮತ್ತು ವ್ಯಾಕುಲಗಳಿಗೆ ವೈಯಕ್ತಿಕ ಗಮನವನ್ನು ಕೊಡುತ್ತಾನೆ. (ಕೀರ್ತನೆ 65:2) ಹೆಚ್ಚು ಪ್ರಾಮುಖ್ಯವಾಗಿ, ಪ್ರಾರ್ಥನೆಯ ಮೂಲಕ ನಾವು ದೇವರಿಗೆ ಉಪಕಾರಗಳನ್ನೂ ಸ್ತುತಿಯನ್ನೂ ಸಲ್ಲಿಸುತ್ತೇವೆ.—ಫಿಲಿಪ್ಪಿ 4:6.
ಆದರೂ, “ನಮಗೂ ಪ್ರಾರ್ಥನೆಮಾಡುವದನ್ನು ಕಲಿಸು” ಎಂಬ ಮಾತುಗಳು, ಕೆಲವು ಗಂಭೀರವಾದ ಪ್ರಶ್ನೆಗಳನ್ನು ಎಬ್ಬಿಸುತ್ತವೆ. ಲೋಕವ್ಯಾಪಕವಾಗಿ ದೇವರನ್ನು ಸಮೀಪಿಸುವ ಅನೇಕ ವಿಧಾನಗಳು ವಿವಿಧ ಧರ್ಮಗಳಿಂದ ಬಳಸಲ್ಪಡುತ್ತವೆ. ಆದರೆ ಪ್ರಾರ್ಥಿಸಲು ಒಂದು ಸರಿಯಾದ ಮತ್ತು ಒಂದು ತಪ್ಪಾದ ಮಾರ್ಗವಿದೆಯೆ? ಉತ್ತರವಾಗಿ, ಪ್ರಾರ್ಥನೆಯನ್ನು ಒಳಗೊಂಡಿರುವ ಕೆಲವು ಜನಪ್ರಿಯ ಧಾರ್ಮಿಕ ಪದ್ಧತಿಗಳ ಕಡೆಗೆ ನಾವು ಪ್ರಥಮವಾಗಿ ನೋಡೋಣ. ಲ್ಯಾಟಿನ್ ಅಮೆರಿಕದಲ್ಲಿ ಆಚರಿಸಲ್ಪಡುವ ವಿಷಯಗಳ ಮೇಲೆ ನಾವು ಕೇಂದ್ರೀಕರಿಸುವೆವು.
ವಿಗ್ರಹಗಳು ಮತ್ತು “ರಕ್ಷಕ ಸಂತರು”
ಸಾಮಾನ್ಯವಾಗಿ, ಲ್ಯಾಟಿನ್ ಅಮೆರಿಕನ್ ದೇಶಗಳು ಗಾಢವಾಗಿ ಧರ್ಮಾಸಕ್ತಿಯುಳ್ಳವುಗಳು. ಉದಾಹರಣೆಗೆ, ಮೆಕ್ಸಿಕೊದಾದ್ಯಂತ, “ರಕ್ಷಕ ಸಂತ”ರಿಗೆ ಪ್ರಾರ್ಥಿಸುವ ಜನಪ್ರಿಯ ಪದ್ಧತಿಯನ್ನು ಒಬ್ಬನು ಗಮನಿಸಬಲ್ಲನು. ವಾಸ್ತವವಾಗಿ, ಮೆಕ್ಸಿಕೊದ ಪಟ್ಟಣಗಳಿಗೆ “ರಕ್ಷಕ ಸಂತರು” ಇರುವುದು ಮತ್ತು ಅವರಿಗಾಗಿ ನಿರ್ದಿಷ್ಟ ದಿನಗಳಲ್ಲಿ ಉತ್ಸವಗಳನ್ನು ನಡೆಸುವುದು ವಾಡಿಕೆಯಾಗಿದೆ. ಮೆಕ್ಸಿಕೊದ ಕ್ಯಾಥೊಲಿಕರು ಅನೇಕ ವಿಧದ ವಿಗ್ರಹಗಳಿಗೂ ಪ್ರಾರ್ಥಿಸುತ್ತಾರೆ. ಆದರೂ, ಯಾವ “ಸಂತ”ನಿಗೆ ಪ್ರಾರ್ಥಿಸುವುದೆಂಬುದು ಆರಾಧಕನು ಯಾವ ರೀತಿಯ ಬಿನ್ನಹವನ್ನು ಮಾಡಬಯಸುತ್ತಾನೆಂಬುದರ ಮೇಲೆ ಹೊಂದಿಕೊಂಡಿದೆ. ಒಬ್ಬನು ಮದುವೆ ಮಾಡಿಕೊಳ್ಳಲು ಒಬ್ಬ ವ್ಯಕ್ತಿಗಾಗಿ ನೋಡುತ್ತಿರುವುದಾದರೆ, ಅವನು “ಸಂತ” ಆ್ಯಂಟನಿಗೆ ಮೊಂಬತ್ತಿಯೊಂದನ್ನು ಹೊತ್ತಿಸಬಹುದು. ಒಬ್ಬನು ಮೋಟಾರುಗಾಡಿಯಲ್ಲಿ ಪಯಣವನ್ನು ಆರಂಭಿಸಲಿಕ್ಕಿರುವಲ್ಲಿ, ಅವನು ಪಯಣಿಗರ, ವಿಶೇಷವಾಗಿ ಮೋಟಾರುಗಾರರ ರಕ್ಷಕನಾದ “ಸಂತ” ಕ್ರಿಸ್ಟಫರನಿಗೆ ತನ್ನನ್ನು ಒಪ್ಪಿಸಿಕೊಟ್ಟಾನು.
ಆದರೆ ಇಂತಹ ಪದ್ಧತಿಗಳು ಎಲ್ಲಿ ಉತ್ಪತ್ತಿಯಾದವು? ಸ್ಪೆಯ್ನ್ ದೇಶಸ್ಥರು ಮೆಕ್ಸಿಕೊದಲ್ಲಿ ಬಂದಿಳಿದಾಗ, ವಿಧರ್ಮಿ ದೇವತೆಗಳ ಆರಾಧನೆಯಲ್ಲಿ ಅನುರಕ್ತರಾಗಿದ್ದ ಒಂದು ಜನತೆಯನ್ನು ಅವರು ಕಂಡುಕೊಂಡರು ಎಂದು ಇತಿಹಾಸವು ತೋರಿಸುತ್ತದೆ. ಲೋಸ್ ಆಸ್ಟೆಕಾಸ್ ಹಾಂಬರ್ ಈ ಟ್ರೀಬು (ಆ್ಯಸ್ಟೆಕರು, ಮನುಷ್ಯ ಮತ್ತು ಕುಲ) ಎಂಬ ತನ್ನ ಪುಸ್ತಕದಲ್ಲಿ, ವಿಕ್ಟಾರ್ ವಾಲ್ಫ್ಗಾಂಗ್ ವಾನ್ ಹಾಗೆನ್ ಹೇಳುವುದು: “ವ್ಯಕ್ತಿಪರವಾದ ದೇವತೆಗಳಿದ್ದವು, ಪ್ರತಿ ಸಸ್ಯಕ್ಕೆ ಅದರ ದೇವತೆಯಿತ್ತು, ಪ್ರತಿ ಕಾರ್ಯಕ್ಕೆ ಅದರ ದೇವನೊ ದೇವಿಯೊ ಇದ್ದರು, ಆತ್ಮಹತ್ಯೆಗಳಿಗೂ ಒಬ್ಬನಿದ್ದನು. ಯಾಕಾಟೆಕೂಟ್ಲೀ ವ್ಯಾಪಾರಿಯ ದೇವನಾಗಿದ್ದನು. ಈ ಬಹುದೇವತಾ ಲೋಕದಲ್ಲಿ, ಎಲ್ಲ ದೇವತೆಗಳಿಗೆ ಸ್ಪಷ್ಟವಾಗಿ ನಿರೂಪಿಸಿದ ಪ್ರವೃತ್ತಿಗಳೂ ಕಾರ್ಯಗಳೂ ಇದ್ದವು.”
ಈ ದೇವತೆಗಳಿಗೆ ಕ್ಯಾಥೊಲಿಕ್ “ಸಂತ”ರೊಂದಿಗೆ ಎಷ್ಟೊಂದು ಗಮನಾರ್ಹವಾದ ಹೋಲಿಕೆಯಿತ್ತೆಂದರೆ, ಸ್ಪ್ಯಾನಿಷ್ ಜಯಶಾಲಿಗಳು ನಾಡಿಗರನ್ನು “ಕ್ರೈಸ್ತೀಕರಿಸ”ಲು ಪ್ರಯತ್ನಿಸಿದಾಗ, ಇವರು ತಮ್ಮ ವಿಗ್ರಹಗಳಿಂದ ಚರ್ಚ್ “ಸಂತ”ರಿಗೆ ತಮ್ಮ ನಿಷ್ಠೆಯನ್ನು ಬದಲಾಯಿಸಿದರು ಅಷ್ಟೆ. ಮೆಕ್ಸಿಕೊದ ಕೆಲವು ಭಾಗಗಳಲ್ಲಿ ಆಚರಿಸಲ್ಪಡುತ್ತಿರುವ ಕಥೋಲಿಕತ್ವದ ವಿಧರ್ಮಿ ಮೂಲಗಳನ್ನು ದ ವಾಲ್ ಸ್ಟ್ರೀಟ್ ಜರ್ನಲ್ನಲ್ಲಿನ ಒಂದು ಲೇಖನವು ಒಪ್ಪಿಕೊಂಡಿತು. ಒಂದು ಪ್ರದೇಶದಲ್ಲಿ ಜನತೆಯು ಪೂಜ್ಯಭಾವದಿಂದ ನೋಡುತ್ತಿರುವ 64 ಮಂದಿ “ಸಂತ”ರಲ್ಲಿ ಹೆಚ್ಚಿನವರು “ನಿರ್ದಿಷ್ಟವಾದ ಮಾಯನ್ ದೇವತೆಗಳಿಗೆ” ಅನುರೂಪರಾಗಿದ್ದರು.
“ಸಂತ ಮತ್ತು ಭೂಮಿಯ ಮೇಲಿರುವವರ ಮಧ್ಯೆ ಒಂದು ಭರವಸೆಯ ಆತ್ಮೀಯತೆಯ ಬಂಧವು ಸ್ಥಾಪಿಸಲ್ಪಡುತ್ತದೆ, . . . ಈ ಬಂಧವು ಕ್ರಿಸ್ತನ ಮತ್ತು ದೇವರೊಂದಿಗಿನ ಸಂಬಂಧವನ್ನು ಕುಂಠಿತಗೊಳಿಸುವ ಬದಲಿಗೆ, ಅದನ್ನು ಪುಷ್ಟಿಗೊಳಿಸಿ ಆಳವಾಗಿಸುತ್ತದೆ,” ಎಂದು ನ್ಯೂ ಕ್ಯಾಥೊಲಿಕ್ ಎನ್ಸೈಕ್ಲೊಪೀಡಿಯ ವಾದಿಸುತ್ತದೆ. ಆದರೆ ಸ್ಪಷ್ಟವಾಗಿ ವಿಧರ್ಮದ ಭಾಗವಾಗಿರುವ ಒಂದು ಬಂಧವು ಸತ್ಯ ದೇವರೊಂದಿಗಿನ ಒಬ್ಬನ ಬಂಧವನ್ನು ಹೇಗೆ ಆಳವಾಗಿಸಸಾಧ್ಯವಿದೆ? ಅಂತಹ “ಸಂತ”ರಿಗೆ ಅರ್ಪಿಸುವ ಪ್ರಾರ್ಥನೆಗಳು ನಿಜವಾಗಿಯೂ ದೇವರನ್ನು ಮೆಚ್ಚಿಸಬಲ್ಲವೊ?
ಜಪಮಾಲೆಯ ಮೂಲ
ಇನ್ನೊಂದು ಜನಪ್ರಿಯ ಪದ್ಧತಿಯು ಜಪಮಾಲೆಯ ಉಪಯೋಗವನ್ನು ಒಳಗೂಡುತ್ತದೆ. ಡಿಕ್ಸ್ಯೊನಾರ್ಯೊ ಎನ್ಸೀಕ್ಲೊಪೆಡೀಕೊ ಹೀಸ್ಪಾನೊ-ಆಮೆರಿಕಾನೊ (ಸ್ಪ್ಯಾನಿಷ್-ಅಮೆರಿಕನ್ ವಿಶ್ವಕೋಶ ನಿಘಂಟು) ಜಪಮಾಲೆಯನ್ನು, “ಹತ್ತುಗಳಾಗಿ ಬೇರೆ ಹೆಚ್ಚು ದೊಡ್ಡದಾದ ಗಾತ್ರದ ಮಣಿಗಳಿಂದ ಪ್ರತ್ಯೇಕಿಸಲ್ಪಟ್ಟ, ಐವತ್ತರಿಂದ ಒಂದು ನೂರ ಐವತ್ತು ಮಣಿಗಳಿದ್ದು, ಕೊನೆಗಳಲ್ಲಿ ಶಿಲುಬೆಯಿಂದ ಜೋಡಿಸಲ್ಪಟ್ಟು ಮುಂದುಗಡೆ ಪ್ರಸ್ತುತ ಮೂರು ಮಣಿಗಳಿರುವ ಒಂದು ದಾರ,” ಎಂದು ವರ್ಣಿಸುತ್ತದೆ.
ಜಪಮಾಲೆಯು ಹೇಗೆ ಉಪಯೋಗಿಸಲ್ಪಡುತ್ತದೆಂಬುದನ್ನು ವಿವರಿಸುತ್ತ, ಒಂದು ಕ್ಯಾಥೊಲಿಕ್ ಪ್ರಕಾಶನವು ಹೇಳುವುದು: “ಪವಿತ್ರ ಜಪಮಾಲೆಯು ನಮ್ಮ ವಿಮೋಚನೆಯ ರಹಸ್ಯಗಳ ಕುರಿತ ವಾಚಿಕ ಹಾಗೂ ಮಾನಸಿಕ ಪ್ರಾರ್ಥನೆಯ ಒಂದು ರೂಪವಾಗಿದೆ. ಅದು ಹದಿನೈದು ಹತ್ತುಗಳ ತಂಡದಿಂದ ರಚಿತವಾಗಿದೆ. ಪ್ರತಿ ಹತ್ತರ ತಂಡದಲ್ಲಿ ಕರ್ತನ ಪ್ರಾರ್ಥನೆ, ಹತ್ತು ಮರಿಯಳಿಗೆ ಜಯಕಾರಗಳು ಮತ್ತು ಒಂದು ಗ್ಲೋರಿಯ ಪಾಟ್ರೀ (ಪಿತನಿಗೆ ಮಹಿಮೆ) ಇವೆ. ಪ್ರತಿ ಹತ್ತರ ತಂಡದ ಸಮಯದಲ್ಲಿ ಒಂದು ರಹಸ್ಯವು ಧ್ಯಾನಿಸಲ್ಪಡುತ್ತದೆ.” ರಹಸ್ಯಗಳು, ಕ್ಯಾಥೊಲಿಕರಿಗೆ ಗೊತ್ತಿರಬೇಕಾದ, ಈ ಸಂದರ್ಭದಲ್ಲಿ ಕ್ರಿಸ್ತ ಯೇಸುವಿನ ಜೀವನ, ಕಷ್ಟಾನುಭವ ಮತ್ತು ಮರಣಗಳನ್ನು ಸೂಚಿಸುವ ತತ್ವಗಳು, ಅಥವಾ ಬೋಧನೆಗಳಾಗಿವೆ.
ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುವುದು: “ಜಪಮಾಲೆಯೊಂದಿಗೆ ಪ್ರಾರ್ಥಿಸುವ ಆದಿರೂಪಗಳು ಮಧ್ಯಯುಗಗಳಲ್ಲಿ ಕ್ರೈಸ್ತತ್ವದಲ್ಲಿ ಆರಂಭಗೊಂಡವಾದರೂ ಅವು 1400ಗಳಲ್ಲಿ ಮತ್ತು 1500ಗಳಲ್ಲಿ ಮಾತ್ರ ಬಹುವ್ಯಾಪಕವಾದವು.” ಜಪಮಾಲೆಯ ಉಪಯೋಗವು ಕ್ಯಾಥೊಲಿಕತ್ವಕ್ಕೆ ವಿಶಿಷ್ಟವಾಗಿತ್ತೊ? ಇಲ್ಲ. ಡಿಕ್ಸ್ಯೊನಾರ್ಯೊ ಎನ್ಸೀಕ್ಲೊಪೆಡೀಕೊ ಹೀಸ್ಪಾನೊ-ಆಮೆರಿಕಾನೊ ಹೇಳುವುದು: “ತದ್ರೀತಿಯ ಮಣಿಗಳು ಇಸ್ಲಾಮಿನ, ಲಾಮಾಗಳ ಮತ್ತು ಬೌದ್ಧರ ಆರಾಧನೆಯಲ್ಲಿ ಉಪಯೋಗದಲ್ಲಿವೆ.” ವಾಸ್ತವವಾಗಿ, ಎನ್ಸೈಕ್ಲೊಪೀಡಿಯ ಆಫ್ ರಿಲಿಜಿಯನ್ ಆ್ಯಂಡ್ ರಿಲಿಜಿಯನ್ಸ್ ಗಮನಿಸುವುದು: “ಮಹಮ್ಮದೀಯರು ತಮ್ಮ ಜಪಮಾಲೆಯನ್ನು ಬೌದ್ಧರಿಂದ ಪಡೆದುಕೊಂಡರೆಂದೂ, ಕ್ರೈಸ್ತರು ಅದನ್ನು ಧಾರ್ಮಿಕ ಯುದ್ಧದ ಸಮಯದಲ್ಲಿ ಮಹಮ್ಮದೀಯರಿಂದ ಪಡೆದುಕೊಂಡರೆಂದೂ ಸೂಚಿಸಲ್ಪಟ್ಟಿದೆ.”
ಅನೇಕ ಪ್ರಾರ್ಥನೆಗಳ ಪುನರಾವೃತ್ತಿ ಅವಶ್ಯವಿರುವಾಗ ಜಪಮಾಲೆಯು ಕೇವಲ ಒಂದು ಜ್ಞಾಪನ ಸಹಾಯಕವೆಂದು ಕೆಲವರು ವಾದಿಸುತ್ತಾರೆ. ಆದರೆ ಅದರ ಬಳಕೆಯಿಂದ ದೇವರು ಪ್ರಸನ್ನನಾಗಿದ್ದಾನೊ?
ಇಂತಹ ಪದ್ಧತಿಗಳ ಕುರಿತು ಊಹೆಕಟ್ಟುವ ಅಥವಾ ಅವುಗಳ ಸಮಂಜಸತೆ ಅಥವಾ ನ್ಯಾಯಸಮ್ಮತತೆಯ ಕುರಿತು ಚರ್ಚಿಸುವ ಅಗತ್ಯ ನಮಗಿರುವುದಿಲ್ಲ. ಹೇಗೆ ಪ್ರಾರ್ಥಿಸಬೇಕೆಂದು ತನ್ನ ಹಿಂಬಾಲಕರಿಗೆ ಕಲಿಸುವ ಬಿನ್ನಹಕ್ಕೆ ಯೇಸು ಅಧಿಕೃತ ಪ್ರತ್ಯುತ್ತರವೊಂದನ್ನು ಕೊಟ್ಟನು. ಅವನು ಏನನ್ನು ಹೇಳಿದನೊ ಅದು, ಕೆಲವು ಓದುಗರಿಗೆ ಜ್ಞಾನೋದಯವನ್ನುಂಟುಮಾಡಿ, ಪ್ರಾಯಶಃ ಆಶ್ಚರ್ಯಪಡಿಸುವುದು.
[ಪುಟ 3 ರಲ್ಲಿರುವ ಚಿತ್ರಗಳು]
ಕ್ಯಾಥೊಲಿಕರು ಸಾಮಾನ್ಯವಾಗಿ ಜಪಮಾಲೆಯ ಮಣಿಗಳನ್ನು ಉಪಯೋಗಿಸುತ್ತಾರೆ. ಅವುಗಳ ಮೂಲವು ಯಾವುದು?