ನಾವು ದೇವರಿಗೆ ಹೇಗೆ ಪ್ರಾರ್ಥಿಸಬೇಕು?
ಶಿಷ್ಯನೊಬ್ಬನು ಪ್ರಾರ್ಥನೆಯ ಕುರಿತಾದ ಉಪದೇಶಕ್ಕಾಗಿ ಕೇಳಿಕೊಂಡಾಗ, ಯೇಸು ಅವನಿಗೆ ಅದನ್ನು ಒದಗಿಸಲು ನಿರಾಕರಿಸಲಿಲ್ಲ. ಲೂಕ 11:2-4ಕಕ್ಕನುಸಾರ, ಅವನು ಪ್ರತ್ಯುತ್ತರಿಸಿದ್ದು: “ನೀವು ಪ್ರಾರ್ಥಿಸುವಾಗ, ಹೀಗೆ ಹೇಳಿರಿ: ತಂದೆಯೇ, ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ಈ ದಿನ ನಮ್ಮ ಅನುದಿನದ ಆಹಾರವನ್ನು ನಮಗೆ ದಯಪಾಲಿಸು. ಮತ್ತು ನಮಗೆ ತಪ್ಪುಮಾಡಿರುವ ಪ್ರತಿಯೊಬ್ಬನನ್ನು ನಾವು ಸಹ ಕ್ಷಮಿಸುತ್ತಿರುವಂತೆ, ನಮ್ಮ ಪಾಪಗಳನ್ನು ಕ್ಷಮಿಸು. ಮತ್ತು ನಮ್ಮನ್ನು ಶೋಧನೆಯೊಳಗೆ ನಡಿಸಬೇಡ.” (ಕ್ಯಾಥೊಲಿಕ್ ಡೂಯೆ ವರ್ಷನ್) ಇದು ಸಾಮಾನ್ಯವಾಗಿ ಕರ್ತನ ಪ್ರಾರ್ಥನೆಯೆಂಬುದಾಗಿ ಪ್ರಖ್ಯಾತವಾಗಿದೆ. ಇದು ಅತ್ಯಧಿಕ ಮಾಹಿತಿಯನ್ನು ತಿಳಿಯಪಡಿಸುತ್ತದೆ.
ಆರಂಭದಲ್ಲಿ, ಪ್ರಪ್ರಥಮ ಮಾತು, ನಮ್ಮ ಪ್ರಾರ್ಥನೆಗಳು ಯಾರಿಗೆ ಸಂಬೋಧಿಸಲ್ಪಡಬೇಕು ಎಂಬುದನ್ನು ನಮಗೆ ಹೇಳುತ್ತದೆ—ನಮ್ಮ ತಂದೆಗೆ. ಯಾವನೇ ಇತರ ವ್ಯಕ್ತಿಗೆ, ವಿಗ್ರಹಕ್ಕೆ, “ಸಂತ”ನಿಗೆ ಅಥವಾ ತನಗೆ ಸಹ, ಪ್ರಾರ್ಥಿಸಲಿಕ್ಕಾಗಿ ಯೇಸು ಯಾವುದೇ ಅವಕಾಶವನ್ನು ಮಾಡಿಕೊಡಲಿಲ್ಲವೆಂಬುದನ್ನು ಗಮನಿಸಿರಿ. ಹೇಗೂ ದೇವರು ಹೀಗೆ ಪ್ರಕಟಿಸಿದ್ದನು: “ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು, ನನ್ನ ಸ್ತೋತ್ರವನ್ನು ವಿಗ್ರಹಗಳ ಪಾಲು ಮಾಡೆನು.” (ಯೆಶಾಯ 42:8) ಆದುದರಿಂದ, ನಮ್ಮ ಸ್ವರ್ಗೀಯ ತಂದೆಯ ಹೊರತಾಗಿ, ಯಾವುದೇ ವಸ್ತುವಿಗೆ ಅಥವಾ ಯಾವನೇ ವ್ಯಕ್ತಿಗೆ ನಿರ್ದೇಶಿಸಲ್ಪಟ್ಟ ಪ್ರಾರ್ಥನೆಗಳು, ಆರಾಧಕರು ಎಷ್ಟೇ ಪ್ರಾಮಾಣಿಕರಾಗಿರಬಹುದಾದರೂ, ಆತನಿಂದ ಆಲಿಸಲ್ಪಡುವುದಿಲ್ಲ. ಬೈಬಲಿನಲ್ಲಿ, ಯೆಹೋವ ದೇವರೊಬ್ಬನೇ “ಪ್ರಾರ್ಥನೆಯನ್ನು ಕೇಳುವವ”ನು ಎಂದು ಕರೆಯಲ್ಪಟ್ಟಿದ್ದಾನೆ.—ಕೀರ್ತನೆ 65:2.
“ಸಂತರು” ದೇವರೊಂದಿಗೆ ಕೇವಲ ಮಧ್ಯಸ್ಥರೋಪಾದಿ ಕಾರ್ಯನಡಿಸುತ್ತಾರೆಂದು ಕೆಲವರು ಹೇಳಬಹುದು. ಆದರೆ ಸ್ವತಃ ಯೇಸುವೇ ಬೋಧಿಸಿದ್ದು: “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ. ಇದಲ್ಲದೆ ನೀವು ನನ್ನ ಹೆಸರಿನಲ್ಲಿ ಏನೇನು ಬೇಡಿಕೊಳ್ಳುವಿರೋ, ಅದನ್ನು ನೆರವೇರಿಸುವೆನು; ಹೀಗೆ ಮಗನ ಮೂಲಕವಾಗಿ ತಂದೆಗೆ ಮಹಿಮೆ ಉಂಟಾಗುವದು.” (ಯೋಹಾನ 14:6, 13) ಹೀಗೆ ಒಬ್ಬ ಸಂತನೆಂದು ಕರೆಯಲ್ಪಡುವ ಯಾವನಾದರೂ ಮಧ್ಯಸ್ಥಗಾರನ ಪಾತ್ರವನ್ನು ನಿರ್ವಹಿಸಸಾಧ್ಯವಿದೆಯೆಂಬ ಕಲ್ಪನೆಯನ್ನು ಯೇಸು ತಳ್ಳಿಹಾಕಿದನು. ಕ್ರಿಸ್ತನ ವಿಷಯವಾಗಿ ಅಪೊಸ್ತಲ ಪೌಲನು ಏನಂದನು ಎಂಬುದನ್ನು ಸಹ ಗಮನಿಸಿರಿ: “ಕ್ರಿಸ್ತ ಯೇಸು ಮರಣವನ್ನು ಹೊಂದಿದ್ದಲ್ಲದೆ ಜೀವಿತನಾಗಿ ಎದ್ದು ದೇವರ ಬಲಗಡೆಯಲ್ಲಿದ್ದು ನಮಗೋಸ್ಕರ ಬೇಡುವವನಾಗಿದ್ದಾನೆ.” “ಆತನು ತನ್ನ ಮೂಲಕ ದೇವರ ಬಳಿಗೆ ಬರುವವರೆಲ್ಲರಿಗಾಗಿ ಮಧ್ಯಸ್ಥಿಕೆ ವಹಿಸಲು, ಸದಾಕಾಲ ಬದುಕುವವನಾಗಿದ್ದಾನೆ.”—ರೋಮಾಪುರ 8:34; ಇಬ್ರಿಯ 7:25, ಕ್ಯಾಥೊಲಿಕ್ ಜೆರೂಸಲೇಮ್ ಬೈಬಲ್.
ಪವಿತ್ರೀಕರಿಸಲ್ಪಡತಕ್ಕ ನಾಮ
ಯೇಸುವಿನ ಪ್ರಾರ್ಥನೆಯ ಮುಂದಿನ ಮಾತುಗಳು ಹೀಗಿದ್ದವು: “ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ.” ಒಬ್ಬನಿಗೆ ದೇವರ ನಾಮವು ತಿಳಿದಿದ್ದು, ಅದನ್ನು ಉಪಯೋಗಿಸಿದ ಹೊರತಾಗಿ, ಅವನು ಅದನ್ನು ಪವಿತ್ರೀಕರಿಸಲು, ಅಂದರೆ, ಪರಿಶುದ್ಧಗೊಳಿಸಲು ಅಥವಾ ಪ್ರತ್ಯೇಕಿಸಲು ಹೇಗೆ ಸಾಧ್ಯವಿದೆ? “ಹಳೆಯ ಒಡಂಬಡಿಕೆ”ಯಲ್ಲಿ, 6,000ಕ್ಕಿಂತಲೂ ಅಧಿಕ ಬಾರಿ ದೇವರು, ಯೆಹೋವ ಎಂಬ ವೈಯಕ್ತಿಕ ಹೆಸರಿನಿಂದ ಗುರುತಿಸಲ್ಪಟ್ಟಿದ್ದಾನೆ.
ಕ್ಯಾಥೊಲಿಕ್ ಡೂಯೆ ವರ್ಷನ್ನಲ್ಲಿ, ವಿಮೋಚನಕಾಂಡ 6:3ರಲ್ಲಿರುವ ಪಾದಟಿಪ್ಪಣಿಯೊಂದು, ದೇವರ ಹೆಸರಿನ ಕುರಿತಾಗಿ ಹೇಳುವುದು: “ಕೆಲವು ಆಧುನಿಕ ವ್ಯಕ್ತಿಗಳು ಯೆಹೋವ ಎಂಬ ಹೆಸರನ್ನು ರಚಿಸಿದ್ದಾರೆ . . . , ಏಕೆಂದರೆ ಹೀಬ್ರು ಮೂಲಗ್ರಂಥದಲ್ಲಿರುವ [ದೇವರ] ಹೆಸರಿನ ಸರಿಯಾದ ಉಚ್ಚಾರಣೆಯು, ದೀರ್ಘಸಮಯದಿಂದ ಬಳಕೆಯಲ್ಲಿಲ್ಲದ ಕಾರಣದಿಂದಾಗಿ ಈಗ ಅಜ್ಞಾತವಾಗಿದೆ.” ಆದುದರಿಂದ, ಕ್ಯಾಥೊಲಿಕ್ ನ್ಯೂ ಜೆರೂಸಲೆಮ್ ಬೈಬಲ್ ಯಾಹ್ವೆ (Yahweh) ಎಂಬ ಹೆಸರನ್ನು ಉಪಯೋಗಿಸುತ್ತದೆ. ಆ ಉಚ್ಚಾರಣೆಯನ್ನು ಕೆಲವು ವಿದ್ವಾಂಸರು ಇಷ್ಟಪಡುವುದಾದರೂ, “ಯೆಹೋವ” ಎಂಬುದು ಇಂಗ್ಲಿಷ್ ಭಾಷೆಯಲ್ಲಿ ದೈವಿಕ ಹೆಸರಿನ ಉಚ್ಚಾರಣೆಮಾಡುವ ಕ್ರಮಬದ್ಧವಾದ ಹಾಗೂ ದೀರ್ಘಸ್ಥಾಪಿತ ವಿಧವಾಗಿದೆ. ಇತರ ಭಾಷೆಗಳಿಗೆ, ದೈವಿಕ ಹೆಸರನ್ನು ಉಚ್ಚಾರಣೆಮಾಡುವುದರಲ್ಲಿ ಅವುಗಳದ್ದೇ ಆದ ವಿಧಗಳಿವೆ. ಆ ಹೆಸರನ್ನು ಪವಿತ್ರೀಕರಿಸುವುದಕ್ಕಾಗಿ ನಾವು ಅದನ್ನು ಉಪಯೋಗಿಸುವುದು ಪ್ರಾಮುಖ್ಯವಾದ ವಿಷಯವಾಗಿದೆ. ಪ್ರಾರ್ಥನೆಯಲ್ಲಿ ಯೆಹೋವ ಎಂಬ ಹೆಸರನ್ನು ಉಪಯೋಗಿಸುವಂತೆ ನಿಮ್ಮ ಚರ್ಚು ನಿಮಗೆ ಕಲಿಸಿದೆಯೊ?
ಪ್ರಾರ್ಥನೆಗಾಗಿ ಸೂಕ್ತ ವಿಷಯಗಳು
ಯೇಸು ತನ್ನ ಶಿಷ್ಯರಿಗೆ ನಂತರ ಪ್ರಾರ್ಥಿಸಲು ಕಲಿಸಿದ್ದು: “ನಿನ್ನ ರಾಜ್ಯವು ಬರಲಿ.” ಮತ್ತಾಯನ ಸುವಾರ್ತೆಯು ಈ ಮಾತುಗಳನ್ನು ಕೂಡಿಸುತ್ತದೆ: “ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾಯ 6:10, ಡೂಯೆ) ದೇವರ ರಾಜ್ಯವು ಯೇಸು ಕ್ರಿಸ್ತನ ವಶದಲ್ಲಿರುವ ಒಂದು ಸರಕಾರವಾಗಿದೆ. (ಯೆಶಾಯ 9:6, 7) ಬೈಬಲ್ ಪ್ರವಾದನೆಗನುಸಾರ, ಅದು ಬೇಗನೆ ಎಲ್ಲಾ ಮಾನವ ಸರಕಾರಗಳನ್ನು ಸ್ಥಾನಪಲ್ಲಟಮಾಡಿ, ಭೌಗೋಲಿಕ ಶಾಂತಿಯ ಒಂದು ಶಕವನ್ನು ಒಳತರುವುದು. (ಕೀರ್ತನೆ 72:1-7; ದಾನಿಯೇಲ 2:44; ಪ್ರಕಟನೆ 21:3-5) ಆದುದರಿಂದ ಸತ್ಯ ಕ್ರೈಸ್ತರು, ರಾಜ್ಯದ ಬರೋಣವನ್ನು ತಮ್ಮ ಪ್ರಾರ್ಥನೆಗಳಲ್ಲಿ ಒಂದು ಆವರ್ತನಾ ವಿಷಯವನ್ನಾಗಿ ಮಾಡುತ್ತಾರೆ. ಹಾಗೆ ಮಾಡುವಂತೆ ನಿಮ್ಮ ಚರ್ಚು ನಿಮಗೆ ಕಲಿಸಿದೆಯೊ?
ಆಸಕ್ತಿಕರವಾಗಿ, ನಮ್ಮ ಪ್ರಾರ್ಥನೆಗಳು, ನಮಗೆ ಸಂಬಂಧಿಸಿದ ವೈಯಕ್ತಿಕ ವಿಚಾರಗಳನ್ನು ಒಳಗೂಡಬಹುದೆಂಬುದನ್ನೂ ಯೇಸು ತೋರಿಸಿದನು. ಅವನು ಹೇಳಿದ್ದು: “ನಮ್ಮ ಅನುದಿನದ ಆಹಾರವನ್ನು ಈ ದಿನ ನಮಗೆ ದಯಪಾಲಿಸು. ಮತ್ತು ನಮಗೆ ತಪ್ಪುಮಾಡಿರುವ ಪ್ರತಿಯೊಬ್ಬನನ್ನು ನಾವು ಸಹ ಕ್ಷಮಿಸುತ್ತಿರುವಂತೆ, ನಮ್ಮ ಪಾಪಗಳನ್ನು ಕ್ಷಮಿಸು. ಮತ್ತು ನಮ್ಮನ್ನು ಶೋಧನೆಯೊಳಗೆ ನಡಿಸಬೇಡ.” (ಲೂಕ 11:3, 4, ಡೂಯೆ) ನಾವು ದೈನಂದಿನ ವಿಚಾರಗಳಲ್ಲಿ ದೇವರ ಚಿತ್ತವನ್ನು ಮಾಡಲು ಪ್ರಯತ್ನಿಸಸಾಧ್ಯವಿದೆಯೆಂಬುದನ್ನು ಯೇಸುವಿನ ಮಾತುಗಳು ಸೂಚಿಸುತ್ತವೆ; ಇದರಿಂದಾಗಿ ನಮಗೆ ಚಿಂತೆಯನ್ನುಂಟುಮಾಡುವ ಅಥವಾ ನಮ್ಮ ಮನಶ್ಶಾಂತಿಗೆ ತೊಂದರೆಯನ್ನುಂಟುಮಾಡುವ ಯಾವುದೇ ವಿಷಯದ ಕುರಿತಾಗಿ ನಾವು ಯೆಹೋವನನ್ನು ಸಮೀಪಿಸಬಲ್ಲೆವು. ಈ ರೀತಿಯಲ್ಲಿ ದೇವರಿಗೆ ಕ್ರಮವಾಗಿ ವಿಜ್ಞಾಪನೆಮಾಡುವುದು, ಆತನ ಮೇಲಿನ ನಮ್ಮ ಅವಲಂಬನೆಯನ್ನು ಗಣ್ಯಮಾಡುವಂತೆ ನಮಗೆ ಸಹಾಯ ಮಾಡುತ್ತದೆ. ಹೀಗೆ ನಾವು ನಮ್ಮ ಜೀವಿತಗಳಲ್ಲಿ ಆತನ ಪ್ರಭಾವದ ಕುರಿತಾಗಿ ಹೆಚ್ಚು ಅರಿವುಳ್ಳವರಾಗುತ್ತೇವೆ. ದಿನಾಲೂ ದೇವರನ್ನು ನಮ್ಮ ಅಪರಾಧಗಳಿಗಾಗಿ ಕ್ಷಮೆನೀಡುವಂತೆ ಕೇಳಿಕೊಳ್ಳುವುದು ತದ್ರೀತಿಯಲ್ಲಿ ಪ್ರಯೋಜನಕರವಾಗಿದೆ. ಇದರಿಂದಾಗಿ ನಾವು ನಮ್ಮ ಬಲಹೀನತೆಗಳ ಕುರಿತಾಗಿ ಹೆಚ್ಚು ಅರಿವುಳ್ಳವರಾಗುತ್ತೇವೆ ಮತ್ತು ಇತರರ ಕುಂದುಕೊರತೆಗಳ ಕುರಿತು ಹೆಚ್ಚು ಸಹನಾಶೀಲರಾಗುತ್ತೇವೆ. ಶೋಧನೆಯಿಂದ ಬಿಡುಗಡೆಗಾಗಿ ನಾವು ಪ್ರಾರ್ಥಿಸಬೇಕೆಂಬ ಯೇಸುವಿನ ಪ್ರಬೋಧನೆಯು ಸಹ ಸೂಕ್ತವಾದದ್ದಾಗಿದೆ—ವಿಶೇಷವಾಗಿ ಈ ಲೋಕದ ಅವನತಿಹೊಂದುತ್ತಿರುವ ನೈತಿಕತೆಗಳ ದೃಷ್ಟಿಯಲ್ಲಿ. ಆ ಪ್ರಾರ್ಥನೆಗೆ ಹೊಂದಿಕೆಯಲ್ಲಿ, ನಮ್ಮನ್ನು ತಪ್ಪುಮಾಡುವಿಕೆಯೊಳಗೆ ನಡಿಸಸಾಧ್ಯವಿರುವ ಪರಿಸ್ಥಿತಿಗಳನ್ನು ಹಾಗೂ ಸನ್ನಿವೇಶಗಳನ್ನು ತೊರೆಯಲು ನಾವು ಜಾಗರೂಕರಾಗುತ್ತೇವೆ.
ಹಾಗಾದರೆ, ಕರ್ತನ ಪ್ರಾರ್ಥನೆಯು ನಮಗೆ ದೇವರನ್ನು ಪ್ರಸನ್ನಗೊಳಿಸುವ ಪ್ರಾರ್ಥನೆಗಳನ್ನು ಮಾಡುತ್ತಿರುವುದರ ಕುರಿತಾಗಿ ಹೆಚ್ಚನ್ನು ಹೇಳುತ್ತದೆ ಎಂಬುದು ನಿಶ್ಚಯ. ಆದರೆ ನಾವು ಈ ಪ್ರಾರ್ಥನೆಯನ್ನು ಕಲಿತು, ಸುಮ್ಮನೆ ಅದನ್ನು ಕ್ರಮವಾಗಿ ಪಠಿಸಬೇಕೆಂದು ಯೇಸು ಉದ್ದೇಶಿಸಿದನೊ?
ಪ್ರಾರ್ಥನೆಯ ಕುರಿತಾಗಿ ಇನ್ನೂ ಹೆಚ್ಚಿನ ಸಲಹೆ
ಪ್ರಾರ್ಥನೆಯ ಕುರಿತಾಗಿ ಯೇಸು ಇನ್ನೂ ಹೆಚ್ಚಿನ ಉಪದೇಶಗಳನ್ನು ಕೊಟ್ಟನು. ಮತ್ತಾಯ 6:5, 6ರಲ್ಲಿ ನಾವು ಓದುವುದು: “ನೀವು ಪ್ರಾರ್ಥನೆಮಾಡುವಾಗ ಕಪಟಿಗಳ ಹಾಗೆ ಮಾಡಬೇಡಿರಿ. ಜನರು ನೋಡಬೇಕೆಂದು ಅವರು ಸಭಾಮಂದಿರಗಳಲ್ಲಿಯೂ ಬೀದೀಚೌಕಗಳಲ್ಲಿಯೂ ನಿಂತುಕೊಂಡು ಪ್ರಾರ್ಥನೆಮಾಡುವದಕ್ಕೆ ಇಷ್ಟಪಡುತ್ತಾರೆ. . . . ಆದರೆ ನೀನು ಪ್ರಾರ್ಥನೆಮಾಡಬೇಕಾದರೆ ನಿನ್ನ ಏಕಾಂತವಾದ ಕೋಣೆಯೊಳಗೆ ಹೋಗಿ ಬಾಗಲನ್ನು ಮುಚ್ಚಿಕೊಂಡು ಅಂತರಂಗದಲ್ಲಿಯೂ ಇರುವ ನಿನ್ನ ತಂದೆಗೆ ಪ್ರಾರ್ಥನೆಮಾಡು; ಅಂತರಂಗದಲ್ಲಿ ನಡೆಯುವದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು.” ಯಾರನ್ನಾದರೂ ಪ್ರಭಾವಿಸಲಿಕ್ಕಾಗಿ, ಒಂದು ತೋರಿಕೆಯ, ಡಾಂಭಿಕ ಪ್ರದರ್ಶನದ ರೀತಿಯಲ್ಲಿ ಪ್ರಾರ್ಥನೆಗಳು ಮಾಡಲ್ಪಡಬಾರದೆಂಬುದನ್ನು ಈ ಮಾತುಗಳು ನಮಗೆ ಕಲಿಸುತ್ತವೆ. ಬೈಬಲು ಪ್ರಚೋದಿಸುವಂತೆ, ನೀವು ಖಾಸಗಿಯಾಗಿ ಯೆಹೋವನ ಬಳಿ ನಿಮ್ಮ ಹೃದಯವನ್ನು ತೋಡಿಕೊಳ್ಳುತ್ತೀರೊ?—ಕೀರ್ತನೆ 62:8.
ಯೇಸು ಈ ಎಚ್ಚರಿಕೆಯನ್ನು ಕೊಟ್ಟನು: “ನಿನ್ನ ಪ್ರಾರ್ಥನೆಗಳಲ್ಲಿ ವಿಧರ್ಮಿಗಳು ಮಾಡುವ ಹಾಗೆ ಹೇಳಿದ್ದನ್ನೇ ಹೇಳಬೇಡ, ಏಕೆಂದರೆ ಅನೇಕ ಮಾತುಗಳನ್ನು ಉಪಯೋಗಿಸುವ ಮೂಲಕ ತಮ್ಮ ಪ್ರಾರ್ಥನೆಗಳು ಕೇಳಲ್ಪಡುವಂತೆ ಮಾಡುತ್ತೇವೆಂದು ಅವರು ನೆನಸುತ್ತಾರೆ.” (ಮತ್ತಾಯ 6:7, ಜೆಬೈ) ಸ್ಪಷ್ಟವಾಗಿ, ಯೇಸು ಪ್ರಾರ್ಥನೆಗಳನ್ನು ಬಾಯಿಪಾಠಮಾಡುವುದನ್ನಾಗಲಿ ಅಥವಾ ಯಾವುದೋ ಪುಸ್ತಕದಿಂದ ಅವುಗಳನ್ನು ಓದುವುದನ್ನಾಗಲಿ ಅನುಮೋದಿಸಲಿಲ್ಲ. ಅವನ ಮಾತುಗಳು, ಜಪಮಾಲೆಯ ಉಪಯೋಗವನ್ನು ಸಹ ತಳ್ಳಿಹಾಕುತ್ತವೆ.
ಕ್ಯಾಥೊಲಿಕ್ ಚರ್ಚಿನ ಪೂಜಾ ವಿಧಿಯ ಪುಸ್ತಕವೊಂದು ಈ ಒಪ್ಪಿಗೆಯನ್ನು ಮಾಡುತ್ತದೆ: “ನಮ್ಮ ಅತ್ಯುತ್ತಮವಾದ ಪ್ರಾರ್ಥನೆಯು, ನಾವು ಕೃತಜ್ಞತೆಯಿಂದ ಅಥವಾ ಅಗತ್ಯದಲ್ಲಿರುವಾಗ, ದುಃಖದ ಸಮಯಗಳಲ್ಲಿ, ಅಥವಾ ಆತನ ಕುರಿತಾದ ನಮ್ಮ ದೈನಂದಿನ ಕ್ರಮವಾದ ಆರಾಧನೆಯಲ್ಲಿ ಆತನೆಡೆಗೆ ತಿರುಗುವಾಗ, ನಮ್ಮ ಸ್ವಂತ ಇಷ್ಟದಿಂದ ಪ್ರೇರಿತವಾದ ಆಲೋಚನೆಗಳಾಗಿರಬಹುದು.” ಯೇಸುವಿನ ಸ್ವಂತ ಪ್ರಾರ್ಥನೆಗಳು ಬಾಯಿಪಾಠಮಾಡಿದವುಗಳಾಗಿರಲಿಲ್ಲ, ಅವು ಸ್ವಪ್ರೇರಣೆಯವುಗಳಾಗಿದ್ದವು. ಉದಾಹರಣೆಗಾಗಿ, ಯೋಹಾನ 17ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಪ್ರಾರ್ಥನೆಯನ್ನು ಓದಿರಿ. ಯೆಹೋವನ ನಾಮವು ಪರಿಶುದ್ಧಗೊಳಿಸಲ್ಪಡುವುದನ್ನು ನೋಡಲಿಕ್ಕಾಗಿರುವ ಯೇಸುವಿನ ಅಪೇಕ್ಷೆಯನ್ನು ಒತ್ತಿಹೇಳುತ್ತಾ, ಅದು ಮಾದರಿ ಪ್ರಾರ್ಥನೆಗೆ ಅನುಸಾರವಾಗಿದೆ. ಯೇಸುವಿನ ಪ್ರಾರ್ಥನೆಯು ಸ್ವಪ್ರೇರಿತವೂ ಬಹಳವಾಗಿ ಹೃತ್ಪೂರ್ವಕವಾದದ್ದೂ ಆಗಿತ್ತು.
ದೇವರು ಕಿವಿಗೊಡುವ ಪ್ರಾರ್ಥನೆಗಳು
ಬಾಯಿಪಾಠಮಾಡಲ್ಪಟ್ಟ ಪ್ರಾರ್ಥನೆಗಳನ್ನು ಮಾಡುವಂತೆ, “ಸಂತ”ರಿಗೆ ಅಥವಾ ವಿಗ್ರಹಗಳಿಗೆ ಪ್ರಾರ್ಥಿಸುವಂತೆ, ಅಥವಾ ಜಪಮಾಲೆಯಂತಹ ಧಾರ್ಮಿಕ ವಸ್ತುವನ್ನು ಉಪಯೋಗಿಸುವಂತೆ ನಿಮಗೆ ಕಲಿಸಲ್ಪಟ್ಟಿರುವುದಾದರೆ, ಯೇಸು ರೇಖಿಸಿದ ವಿಧಾನದಲ್ಲಿ ಪ್ರಾರ್ಥಿಸುವ ಕಲ್ಪನೆಯು ಆರಂಭದಲ್ಲಿ ಭಯಹುಟ್ಟಿಸುವಂತಹದ್ದಾಗಿ ತೋರಬಹುದು. ಆದರೂ ದೇವರನ್ನು—ಆತನ ನಾಮ, ಆತನ ಉದ್ದೇಶಗಳು, ಆತನ ವ್ಯಕ್ತಿತ್ವ—ತಿಳಿದುಕೊಳ್ಳುವುದು ಕೀಲಿ ಕೈಯಾಗಿದೆ. ಬೈಬಲಿನ ಕೂಲಂಕಷ ಅಭ್ಯಾಸವೊಂದರ ಮೂಲಕ ನೀವು ಇದನ್ನು ಪೂರೈಸಸಾಧ್ಯವಿದೆ. (ಯೋಹಾನ 17:3) ಈ ವಿಷಯದಲ್ಲಿ ನಿಮಗೆ ಸಹಾಯ ಮಾಡಲು ಯೆಹೋವನ ಸಾಕ್ಷಿಗಳು ಸಿದ್ಧಮನಸ್ಕರೂ ಇಷ್ಟವುಳ್ಳವರೂ ಆಗಿದ್ದಾರೆ. ಅವರು ಲೋಕದಾದ್ಯಂತವಾಗಿ ಲಕ್ಷಾಂತರ ಜನರಿಗೆ “ಯೆಹೋವನು ಸರ್ವೋತ್ತಮನೆಂದು ಅನುಭವದಿಂದ ತಿಳಿ”ಯಲು ಸಹಾಯ ಮಾಡಿದ್ದಾರೆ! (ಕೀರ್ತನೆ 34:8, NW) ನೀವು ದೇವರನ್ನು ಎಷ್ಟು ಹೆಚ್ಚು ತಿಳಿದುಕೊಳ್ಳುತ್ತೀರೊ ಅಷ್ಟು ಹೆಚ್ಚಾಗಿ ನೀವು ಆತನನ್ನು ಪ್ರಾರ್ಥನೆಯಲ್ಲಿ ಸ್ತುತಿಸುವಂತೆ ಪ್ರಚೋದಿಸಲ್ಪಡುವಿರಿ. ಮತ್ತು ನೀವು ಪೂಜ್ಯಭಾವದಿಂದ ಕೂಡಿದ ಪ್ರಾರ್ಥನೆಯಲ್ಲಿ ಯೆಹೋವನಿಗೆ ಹೆಚ್ಚು ಆಪ್ತರಾದಂತೆ, ಆತನೊಂದಿಗಿನ ನಿಮ್ಮ ಸಂಬಂಧವು ಹೆಚ್ಚು ನಿಕಟವಾಗುವುದು.
ಆದುದರಿಂದ ದೇವರ ಸತ್ಯಾರಾಧಕರೆಲ್ಲರೂ “ಎಡೆಬಿಡದೆ ಪ್ರಾರ್ಥನೆಮಾಡು”ವಂತೆ ಪ್ರಚೋದಿಸಲ್ಪಡುತ್ತಾರೆ. (1 ಥೆಸಲೊನೀಕ 5:17) ನಿಮ್ಮ ಪ್ರಾರ್ಥನೆಗಳು, ಯೇಸು ಕ್ರಿಸ್ತನ ಉಪದೇಶಗಳನ್ನೂ ಒಳಗೊಂಡು, ಬೈಬಲಿನೊಂದಿಗೆ ಹೊಂದಿಕೆಯಲ್ಲಿವೆ ಎಂಬುದರ ಕುರಿತು ಖಾತರಿಯಿಂದಿರಿ. ಈ ರೀತಿಯಲ್ಲಿ ನಿಮ್ಮ ಪ್ರಾರ್ಥನೆಗಳು ದೇವರ ಒಪ್ಪಿಗೆಯನ್ನು ಪಡೆದುಕೊಳ್ಳುವವೆಂದು ನೀವು ನಿಶ್ಚಯತೆಯಿಂದಿರಸಾಧ್ಯವಿದೆ.
[ಪುಟ 7 ರಲ್ಲಿರುವ ಚಿತ್ರ]
ಯೆಹೋವನ ಕುರಿತು ನಾವು ಎಷ್ಟು ಹೆಚ್ಚು ಕಲಿಯುತ್ತೇವೊ ಅಷ್ಟು ಹೆಚ್ಚು ಹೃದಯದಿಂದ ಆತನಿಗೆ ಪ್ರಾರ್ಥಿಸಲು ನಾವು ಪ್ರಚೋದಿಸಲ್ಪಡುತ್ತೇವೆ