ಮೈಕಲ್ ಫ್ಯಾರಡೆ—ವಿಜ್ಞಾನಿ ಮತ್ತು ನಂಬಿಕೆಯ ಮನುಷ್ಯ
“ವಿದ್ಯುಚ್ಛಕ್ತಿಯ ಜನಕ.” “ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪ್ರಯೋಗಾತ್ಮಕ ವಿಜ್ಞಾನಿ.” ಇವು, 1791ರಲ್ಲಿ ಇಂಗ್ಲೆಂಡ್ನಲ್ಲಿ ಜನಿಸಿದ ಮೈಕಲ್ ಫ್ಯಾರಡೆಯ ಕುರಿತಾದ ಎರಡು ವರ್ಣನೆಗಳಾಗಿವೆ. ವಿದ್ಯುತ್ಕಾಂತಕ ಚೋದನೆಯ ಕುರಿತಾದ ಇವನ ಕಂಡುಹಿಡಿತವು ವಿದ್ಯುತ್ತಿನ ಚಾಲಕ ಯಂತ್ರಗಳ ಹಾಗೂ ವಿದ್ಯುಚ್ಛಕ್ತಿಯ ಉತ್ಪಾದನೆಯ ವಿಕಸನದ ಕಡೆಗೆ ನಡೆಸಿದವು.
ಫ್ಯಾರಡೆ, ಲಂಡನ್ನಲ್ಲಿರುವ ದ ರಾಯಲ್ ಇನ್ಸ್ಟಿಟ್ಯೂಷನ್ನಲ್ಲಿ, ರಸಾಯನ ವಿಜ್ಞಾನ ಹಾಗೂ ಭೌತವಿಜ್ಞಾನದ ಕುರಿತು ಸವಿಸ್ತಾರವಾಗಿ ಉಪನ್ಯಾಸನೀಡಿದನು. ವಿಜ್ಞಾನವನ್ನು ಜನಪ್ರಿಯಗೊಳಿಸಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿದ್ದ ಅವನ ಉಪನ್ಯಾಸಗಳು, ಜಟಿಲವಾದ ಪರಿಕಲ್ಪನೆಗಳನ್ನು ಗ್ರಹಿಸಿಕೊಳ್ಳುವಂತೆ ಯುವ ಜನರಿಗೆ ಸಹಾಯಮಾಡಿದವು. ಹಲವಾರು ವಿಶ್ವವಿದ್ಯಾನಿಲಯಗಳಿಂದ ಅವನು ಪದವಿಗಳನ್ನು ಪಡೆದನು. ಆದರೂ ಅವನು ಪ್ರಸಿದ್ಧಿಯನ್ನು ದೂರವಿರಿಸಿದನು. ಅವನು ಅತ್ಯಂತ ಧಾರ್ಮಿಕನಾಗಿದ್ದು, ತನ್ನ ಮೂರು ಕೋಣೆಯ ವಾಸದ ಮಹಡಿಯ ಏಕಾಂತದಲ್ಲಿ ಮತ್ತು ತನ್ನ ಕುಟುಂಬ ಹಾಗೂ ಜೊತೆ ವಿಶ್ವಾಸಿಗಳ ಸಹವಾಸದಲ್ಲಿ ಬಹಳಷ್ಟು ಸಂತುಷ್ಟನಾಗಿದ್ದನು. ಫ್ಯಾರಡೆ, “ಸ್ಯಾಂಡಿಮೆನಿಯರು ಎಂಬುದಾಗಿ . . . ವಿದಿತವಾದ, ಕ್ರೈಸ್ತರ ಬಹಳ ಚಿಕ್ಕ ಹಾಗೂ ಕಡೆಗಣಿಸಲ್ಪಟ್ಟ ಪಂಗಡ,” ಎಂಬುದಾಗಿ ಅವನು ವರ್ಣಿಸಿದ ಒಂದು ಪಂಗಡಕ್ಕೆ ಸೇರಿದ್ದನು. ಅವರು ಯಾರಾಗಿದ್ದರು? ಅವರು ಏನನ್ನು ನಂಬಿದರು? ಮತ್ತು ಇದು ಫ್ಯಾರಡೆಯನ್ನು ಹೇಗೆ ಪ್ರಭಾವಿಸಿತು?
ಸ್ಯಾಂಡಿಮೆನಿಯರು
“ಫ್ಯಾರಡೆ ಕುಟುಂಬ ಮತ್ತು ಸ್ಯಾಂಡಿಮೆನಿಯನ್ ಚರ್ಚಿನ ನಡುವಿನ ಆರಂಭಿಕ ಸಂಬಂಧವು, ಮೈಕಲ್ ಫ್ಯಾರಡೆಯ ಅಜ್ಜಅಜ್ಜಿಯರಿಂದ ನಿಶ್ಚಯಿಸಲ್ಪಟ್ಟಿತ್ತು,” ಎಂಬುದಾಗಿ ಮೈಕಲ್ ಫ್ಯಾರಡೆ: ಸ್ಯಾಂಡಿಮೆನಿಯನು ಹಾಗೂ ವಿಜ್ಞಾನಿ (ಇಂಗ್ಲಿಷ್) ಎಂಬ ಪುಸ್ತಕದ ಗ್ರಂಥಕರ್ತನಾದ ಜೆಫ್ರಿ ಕ್ಯಾಂಟರ್ ಗಮನಿಸುತ್ತಾನೆ. ಯಾರ ಸಹವಾಸಿಗಳು ಸ್ಯಾಂಡಿಮೆನಿಯರ ವಿಶ್ವಾಸಗಳನ್ನು ಸಮರ್ಥಿಸಿದರೊ, ಆ ಸಂಚಾರಿ ಪ್ರಾಟೆಸ್ಟಂಟ್ ಶುಶ್ರೂಷಕನ ಹಿಂಬಾಲಕರೊಂದಿಗೆ ಅವನ ಅಜ್ಜಅಜ್ಜಿಯರು ಸಹವಸಿಸಿದರು.
ರಾಬರ್ಟ್ ಸ್ಯಾಂಡಿಮನ್ (1718-71) ಎಡಿನ್ಬರ್ಗ್ನಲ್ಲಿ ಒಬ್ಬ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದು, ಗಣಿತಶಾಸ್ತ್ರ, ಗ್ರೀಕ್, ಮತ್ತು ಇತರ ಭಾಷೆಗಳನ್ನು ಅಭ್ಯಸಿಸುತ್ತಿದ್ದನು. ಒಂದು ದಿನ ಅವನು ಜಾನ್ ಗ್ಲಾಸ್ ಎಂಬ ಮಾಜಿ ಪ್ರೆಸ್ಬಿಟೇರಿಯನ್ ಶುಶ್ರೂಷಕನು ಸಾರುವುದನ್ನು ಆಲಿಸಿದನು. ಅವನು ಏನನ್ನು ಕೇಳಿದನೊ ಆ ವಿಷಯವು, ಅವನು ವಿಶ್ವವಿದ್ಯಾನಿಲಯವನ್ನು ಬಿಡುವಂತೆ, ಪರ್ತ್ನಲ್ಲಿದ್ದ ತನ್ನ ಮನೆಗೆ ಹಿಂದಿರುಗುವಂತೆ ಮತ್ತು ಗ್ಲಾಸ್ ಹಾಗೂ ಅವನ ಸಹವಾಸಿಗಳನ್ನು ಸೇರುವಂತೆ ಮಾಡಿತು.
1720ಗಳಲ್ಲಿ, ಜಾನ್ ಗ್ಲಾಸ್, ಚರ್ಚ್ ಆಫ್ ಸ್ಕಾಟ್ಲೆಂಡ್ನ ಕೆಲವೊಂದು ಬೋಧನೆಗಳ ಕುರಿತು ಸಂದೇಹಪಡಲು ತೊಡಗಿದ್ದನು. ದೇವರ ವಾಕ್ಯದ ಅವನ ಅಧ್ಯಯನವು, ಬೈಬಲ್ ಸಂಬಂಧಿತ ಇಸ್ರಾಯೇಲ್ ರಾಷ್ಟ್ರವು, ಯಾರ ಪ್ರಜೆಗಳು ಅನೇಕ ರಾಷ್ಟ್ರೀಯತೆಗಳಿಂದ ಬಂದರೊ, ಆ ಒಂದು ಆತ್ಮಿಕ ರಾಷ್ಟ್ರವನ್ನು ಪ್ರತಿನಿಧಿಸಿತೆಂದು ತೀರ್ಮಾನಿಸುವಂತೆ ಅವನನ್ನು ನಡೆಸಿತು. ಪ್ರತಿಯೊಂದು ರಾಷ್ಟ್ರಕ್ಕೆ ಒಂದು ಪ್ರತ್ಯೇಕವಾದ ಚರ್ಚಿನ ವಿಷಯದಲ್ಲಿ ಅವನು ಎಲ್ಲಿಯೂ ಸಮರ್ಥನೆಯನ್ನು ಕಂಡುಕೊಳ್ಳಲಿಲ್ಲ.
ಸ್ಕಾಟ್ಲೆಂಡ್ನ ಡಂಡೀಯ ಹೊರಗಿದ್ದ ಟೀಲ್ಲಿಂಗ್ನಲ್ಲಿನ ತನ್ನ ಚರ್ಚಿನ ಬೋಧನೆಗಳ ವಿಷಯವಾಗಿ ಇನ್ನುಮುಂದೆ ನೆಮ್ಮದಿಯಿಂದಿರದೆ, ಗ್ಲಾಸ್, ಚರ್ಚ್ ಆಫ್ ಸ್ಕಾಟ್ಲೆಂಡ್ನಿಂದ ಹೊರಟುಹೋಗಿ, ತನ್ನ ಸ್ವಂತ ಕೂಟಗಳನ್ನು ಏರ್ಪಡಿಸಿದನು. ಸುಮಾರು ನೂರು ಜನರು ಅವನನ್ನು ಸೇರಿದರು, ಮತ್ತು ತಮ್ಮ ಪಂಕ್ತಿಗಳಲ್ಲಿ ಐಕ್ಯವನ್ನು ಕಾಪಾಡಿಕೊಳ್ಳುವುದರ ಅಗತ್ಯವನ್ನು ಅವರು ಆರಂಭದಿಂದಲೇ ಮನಗಂಡರು. ತಮ್ಮಲ್ಲಿರಬಹುದಾದ ಯಾವುದೇ ಭಿನ್ನತೆಗಳನ್ನು ಬಗೆಹರಿಸಿಕೊಳ್ಳಲು, ಮತ್ತಾಯ 18ನೆಯ ಅಧ್ಯಾಯ, 15ರಿಂದ 17ನೆಯ ವಚನಗಳಲ್ಲಿ ದಾಖಲಿಸಲ್ಪಟ್ಟಿರುವ ಕ್ರಿಸ್ತನ ಉಪದೇಶಗಳನ್ನು ಅನುಸರಿಸಲು ಅವರು ನಿರ್ಧರಿಸಿದರು. ತದನಂತರ ಅವರು ಸಾಪ್ತಾಹಿಕ ಕೂಟಗಳನ್ನು ನಡೆಸಿದರು. ಅಲ್ಲಿ ಸದೃಶ ನಂಬಿಕೆಯುಳ್ಳವರು ಪ್ರಾರ್ಥನೆ ಮತ್ತು ಪ್ರಬೋಧನೆಗಾಗಿ ನೆರೆದುಬಂದರು.
ಒಂದು ದೊಡ್ಡ ಸಂಖ್ಯೆಯ ಜನರು ವಿಭಿನ್ನ ಗುಂಪುಗಳ ಕೂಟಗಳಿಗೆ ಕ್ರಮವಾಗಿ ಹಾಜರಾಗಲಾರಂಭಿಸಿದಾಗ, ಅವರ ಆರಾಧನೆಯ ಮೇಲ್ವಿಚಾರಣೆ ಮಾಡಲು ಜವಾಬ್ದಾರ ಪುರುಷರ ಅಗತ್ಯವಿತ್ತು. ಆದರೆ ಯಾರು ಅರ್ಹರಾದರು? ಜಾನ್ ಗ್ಲಾಸ್ ಮತ್ತು ಅವನ ಸಹವಾಸಿಗಳು ಈ ವಿಷಯದ ಮೇಲೆ ಅಪೊಸ್ತಲ ಪೌಲನು ಏನನ್ನು ಬರೆದನೊ, ಅದಕ್ಕೆ ವಿಶೇಷವಾದ ಗಮನವನ್ನು ನೀಡಿದರು. (1 ತಿಮೊಥೆಯ 3:1-7; ತೀತ 1:5-9) ಅವರು ಬೈಬಲಿನಲ್ಲಿ ಒಂದು ವಿಶ್ವವಿದ್ಯಾನಿಲಯದ ಶಿಕ್ಷಣ ಅಥವಾ ಹೀಬ್ರು ಹಾಗೂ ಗ್ರೀಕ್ ಭಾಷೆಗಳನ್ನು ಅರ್ಥಮಾಡಿಕೊಳ್ಳುವುದರ ಅಗತ್ಯದ ಕುರಿತು ಯಾವ ಉಲ್ಲೇಖವನ್ನು ಕಂಡುಕೊಳ್ಳಲಿಲ್ಲ. ಆದುದರಿಂದ ಶಾಸ್ತ್ರೀಯ ಮಾರ್ಗದರ್ಶನಗಳ ಪ್ರಾರ್ಥನಾಪೂರ್ವಕ ಪರ್ಯಾಲೋಚನೆಯ ನಂತರ, ಅವರು ಅರ್ಹ ಪುರುಷರನ್ನು ಹಿರಿಯರಾಗಲು ನೇಮಿಸಿದರು. ಚರ್ಚ್ ಆಫ್ ಸ್ಕಾಟ್ಲೆಂಡ್ಗೆ ನಿಷ್ಠಾವಂತರಾಗಿದ್ದವರು ಅದನ್ನು, “ಮಗ್ಗ, ಸೂಜಿ, ಅಥವಾ ನೇಗಿಲಿಗಾಗಿ ಹುಟ್ಟಿದ” ಅಶಿಕ್ಷಿತ ಪುರುಷರು, ಬೈಬಲನ್ನು ಅರ್ಥಮಾಡಿಕೊಳ್ಳುವಂತೆ ನಟಿಸುವುದು ಮತ್ತು ಅದರ ಸಂದೇಶವನ್ನು ಸಾರುವುದು “ಬಹುಮಟ್ಟಿಗೆ ಪಾಷಂಡ”ವೆಂದು ಪರಿಗಣಿಸಿದರು. 1733ರಲ್ಲಿ ಗ್ಲಾಸ್ ಮತ್ತು ಅವನ ಜೊತೆ ವಿಶ್ವಾಸಿಗಳು ತಮ್ಮ ಸ್ವಂತ ಕೂಟದ ಸಭಾಗೃಹವನ್ನು ಪರ್ತ್ ಪಟ್ಟಣದಲ್ಲಿ ಕಟ್ಟಿದಾಗ, ಅವರನ್ನು ಪಟ್ಟಣದಿಂದ ಓಡಿಸುವಂತೆ ಸ್ಥಳಿಕ ವೈದಿಕರು ನ್ಯಾಯಾಧಿಕಾರಿಗಳ ಮೇಲೆ ಒತ್ತಡಹಾಕಲು ಪ್ರಯತ್ನಿಸಿದರು. ವೈದಿಕರು ವಿಫಲರಾದರು, ಮತ್ತು ಚಳವಳಿಯು ಬೆಳೆಯಿತು.
ರಾಬರ್ಟ್ ಸ್ಯಾಂಡಿಮನ್ ಗ್ಲಾಸ್ನ ಹಿರಿಯ ಮಗಳನ್ನು ವಿವಾಹವಾದನು ಮತ್ತು 26ರ ಪ್ರಾಯದಲ್ಲಿ, ಗ್ಲಾಸೈಟ್ಸ್ರ ಪರ್ತ್ ಸಭೆಯಲ್ಲಿ ಒಬ್ಬ ಹಿರಿಯನಾದನು. ಹಿರಿಯನೋಪಾದಿ ಅವನ ಮೇಲೆ ಎಂತಹ ಭಾರವಾದ ಜವಾಬ್ದಾರಿಯಿತ್ತೆಂದರೆ, ತನ್ನ ಎಲ್ಲ ಸಮಯವನ್ನು ಅವನು ಕುರಿಪಾಲನೆಯ ಕೆಲಸಕ್ಕೆ ಸಮರ್ಪಿಸಲು ನಿರ್ಧರಿಸಿದನು. ತದನಂತರ, ಅವನ ಹೆಂಡತಿಯು ಸತ್ತ ತರುವಾಯ, ರಾಬರ್ಟ್ “ಚರ್ಚಿನ ಕೆಲಸಕ್ಕಾಗಿ ಅವನ ಅಗತ್ಯವು ಎಲ್ಲಿತ್ತೊ ಅಲ್ಲಿ ಸೇವೆಮಾಡಲು ಉಲ್ಲಾಸದಿಂದ ಸಮ್ಮತಿಸಿದನು,” ಎಂಬುದಾಗಿ ಒಂದು ಜೀವನ ಚರಿತ್ರೆಯ ರೂಪರೇಖೆಯು ಗಮನಿಸುತ್ತದೆ.
ಸ್ಯಾಂಡಿಮೆನಿಯನ್ ತತ್ವವು ಹಬ್ಬುತ್ತದೆ
ಸ್ಯಾಂಡಿಮನ್ ಹುರುಪಿನಿಂದ ತನ್ನ ಶುಶ್ರೂಷೆಯನ್ನು ಸ್ಕಾಟ್ಲೆಂಡ್ನಿಂದ ಇಂಗ್ಲೆಂಡ್ನ ವರೆಗೆ ವಿಸ್ತರಿಸಿದನು. ಅಲ್ಲಿ ಜೊತೆ ವಿಶ್ವಾಸಿಗಳ ಹೊಸ ಗುಂಪುಗಳು ಬೆಳೆದವು. ಆ ಸಮಯದಲ್ಲಿ, ಕ್ಯಾಲ್ವಿನ್ ಮತದ ಇಂಗ್ಲಿಷ್ ಅನುಯಾಯಿಗಳ ಮಧ್ಯದಲ್ಲಿ ವಾದ ವಿವಾದವು ಪ್ರಬಲವಾಗಿತ್ತು. ತಾವು ರಕ್ಷಣೆಗಾಗಿ ಮೊದಲೇ ಗೊತ್ತು ಮಾಡಲ್ಪಟ್ಟಿರುವೆವೆಂದು ಅವರಲ್ಲಿ ಕೆಲವರು ನಂಬಿದರು. ಮತ್ತೊಂದು ಕಡೆಯಲ್ಲಿ ಸ್ಯಾಂಡಿಮನ್, ರಕ್ಷಣೆಗಾಗಿ ನಂಬಿಕೆಯು ಒಂದು ಆವಶ್ಯಕವಾದ ಪೂರ್ವಾಪೇಕ್ಷಿತ ಗುಣವೆಂದು ವಾದಿಸಿದವರ ಪಕ್ಷವಹಿಸಿದನು. ಈ ನೋಟದ ಸಮರ್ಥನೆಯಲ್ಲಿ, ನಾಲ್ಕು ಬಾರಿ ಪುನರ್ಮುದ್ರಿಸಲ್ಪಟ್ಟ ಹಾಗೂ ಎರಡು ಅಮೆರಿಕನ್ ಮುದ್ರಣಗಳಲ್ಲಿಯೂ ಕಾಣಿಸಿಕೊಂಡ ಒಂದು ಪುಸ್ತಕವನ್ನು ಅವನು ಪ್ರಕಾಶಿಸಿದನು. ಜೆಫ್ರಿ ಕ್ಯಾಂಟರ್ನಿಗನುಸಾರ, ಈ ಸಂಪುಟದ ಪ್ರಕಾಶನವು, “[ಸ್ಯಾಂಡಿಮೆನಿಯನ್] ಪಂಗಡವನ್ನು ಅದರ ಕೊಂಚ ಸ್ಥಳೀಯ ಸ್ಕಾಟಿಷ್ ಆರಂಭಗಳಿಂದ ಮೇಲೆ ಏರಿಸಿದಂತಹ ಏಕಮಾತ್ರ ಅತ್ಯಂತ ಪ್ರಮುಖವಾದ ಘಟನೆ”ಯಾಗಿತ್ತು.
1764ರಲ್ಲಿ, ಸ್ಯಾಂಡಿಮನ್ ಇತರ ಗ್ಲಾಸೈಟ್ ಹಿರಿಯರೊಂದಿಗೆ ಜೊತೆಸೇರಿ, ಅಮೆರಿಕಕ್ಕೆ ಪ್ರಯಾಣಿಸಿದನು. ಈ ಭೇಟಿಯು ಬಹಳಷ್ಟು ವಾಗ್ವಾದ ಹಾಗೂ ವಿರೋಧವನ್ನು ಕೆರಳಿಸಿತು. ಆದರೂ, ಕನೆಕ್ಟಿಕಟ್ನ ಡ್ಯಾನ್ಬರಿಯಲ್ಲಿ ಒಂದೇ ಮನೋಧರ್ಮವುಳ್ಳ ಕ್ರೈಸ್ತರ ಒಂದು ಗುಂಪಿನ ಸ್ಥಾಪನೆಯಲ್ಲಿ ಇದು ಫಲಿಸಿತು.a ಅಲ್ಲಿ, 1771ರಲ್ಲಿ, ಸ್ಯಾಂಡಿಮನ್ ಮೃತಪಟ್ಟನು.
ಫ್ಯಾರಡೆಯ ಧಾರ್ಮಿಕ ನಂಬಿಕೆಗಳು
ಯುವ ಮೈಕಲ್ ತನ್ನ ಹೆತ್ತವರ ಸ್ಯಾಂಡಿಮೆನಿಯನ್ ಬೋಧನೆಗಳನ್ನು ಅಂತರ್ಗತ ಮಾಡಿಕೊಂಡನು. ಬೈಬಲು ಏನನ್ನು ಕಲಿಸಿತೊ ಅದನ್ನು ಆಚರಿಸದೆ ಇರುವವರಿಂದ ಸ್ಯಾಂಡಿಮೆನಿಯನ್ ಮತದ ಅನುಯಾಯಿಗಳು ತಮ್ಮನ್ನು ಪ್ರತ್ಯೇಕಿಸಿಕೊಂಡರೆಂದು ಅವನು ತಿಳಿದುಕೊಂಡನು. ಉದಾಹರಣೆಗೆ, ಅವರು ತಮ್ಮ ವಿವಾಹದ ಆಚರಣೆಗಳನ್ನು ಯಾವುದು ನ್ಯಾಯಬದ್ಧವಾಗಿ ಅಗತ್ಯವಾಗಿತ್ತೊ ಅದಕ್ಕೆ ಮಾತ್ರ ಸೀಮಿತಗೊಳಿಸಲು ಇಷ್ಟಪಡುತ್ತಾ, ಆ್ಯಂಗ್ಲಿಕನ್ ವಿವಾಹದ ವಿಧ್ಯುಕ್ತವಾದ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಅವರು ನಿರಾಕರಿಸಿದರು.
ಸರಕಾರಗಳಿಗೆ ಅಧೀನತೆ, ಆದರೂ ರಾಜಕೀಯದಲ್ಲಿ ತಾಟಸ್ಥ್ಯ—ಇದು ಸ್ಯಾಂಡಿಮೆನಿಯರ ವೈಶಿಷ್ಟ್ಯವಾಗಿತ್ತು. ಸಮುದಾಯದ ಗೌರವಾರ್ಹ ಸದಸ್ಯರಾಗಿದ್ದರೂ, ಅವರು ಪೌರಯೋಗ್ಯ ಸ್ಥಾನಗಳನ್ನು ಸ್ವೀಕರಿಸಿದ್ದು ವಿರಳ. ಆದರೆ ಅವರು ಪೌರಯೋಗ್ಯ ಸ್ಥಾನಗಳನ್ನು ಸ್ವೀಕರಿಸಿದ ಕೆಲವೊಂದು ಸಂದರ್ಭಗಳಲ್ಲಿ, ಅವರು ಪಕ್ಷ ರಾಜಕೀಯವನ್ನು ವಿಸರ್ಜಿಸಿದರು. ಈ ನಿಲುವನ್ನು ಕಾಪಾಡಿಕೊಳ್ಳುವುದು ಅವರ ಮೇಲೆ ನಿಂದೆಯನ್ನು ತಂದಿತು. (ಹೋಲಿಸಿ ಯೋಹಾನ 17:14.) ದೇವರ ಸ್ವರ್ಗೀಯ ರಾಜ್ಯವು ಸರಕಾರಕ್ಕಾಗಿರುವ ಪರಿಪೂರ್ಣ ಏರ್ಪಾಡೆಂಬುದನ್ನು ಸ್ಯಾಂಡಿಮೆನಿಯರು ಎತ್ತಿಹಿಡಿದರು. ಅವರು ರಾಜಕೀಯವನ್ನು “ನೀತಿಧರ್ಮವನ್ನು ಕಳೆದುಕೊಂಡಿರುವ ಒಂದು ಕ್ಷುಲ್ಲಕವಾದ, ನೀಚ ತಂತ್ರ” ಎಂಬುದಾಗಿ ವೀಕ್ಷಿಸಿದರೆಂದು ಕ್ಯಾಂಟರ್ ಗಮನಿಸುತ್ತಾರೆ.
ಇತರರಿಂದ ಪ್ರತ್ಯೇಕವಾಗಿದ್ದರೂ, ಅವರು ಸ್ವ-ಸಾತ್ವಿಕ ಮನೋಭಾವಗಳನ್ನು ಅಂಗೀಕರಿಸಿಕೊಳ್ಳಲಿಲ್ಲ. ಅವರು ಪ್ರಕಟಿಸಿದ್ದು: “ಪ್ರಾಚೀನ ಫರಿಸಾಯರ ಆತ್ಮವನ್ನೂ ಆಚರಣೆಯನ್ನೂ ತೊರೆಯುವುದು ಸಂಪೂರ್ಣವಾಗಿಯೂ ಅಗತ್ಯವೆಂದು ನಾವು ತೀರ್ಮಾನಿಸುತ್ತೇವೆ, ಆದುದರಿಂದ ಶಾಸ್ತ್ರವು ಹೆಚ್ಚಿನ ಪಾಪಗಳನ್ನು ಅಥವಾ ಕರ್ತವ್ಯಗಳನ್ನು ಮಾಡುವುದನ್ನು, ಮತ್ತು ಮಾನವ ಸಂಪ್ರದಾಯಗಳು ಅಥವಾ ತರ್ಕಬದ್ಧ ನೆಪಗಳ ಮೂಲಕ ದೈವಿಕ ಆಜ್ಞೆಗಳನ್ನು ನಿರರ್ಥಕ ಮಾಡುವುದನ್ನು ನಾವು ತೊರೆಯುವೆವು.”
ಕುಡುಕನು, ಸುಲುಕೊಳ್ಳುವವನು, ಜಾರನೂ ಆಗಿ ಪರಿಣಮಿಸಿದ ಒಬ್ಬನನ್ನು, ಅಥವಾ ಇತರ ಗಂಭೀರ ಪಾಪಗಳನ್ನು ಆಚರಿಸಿದ ಯಾವುದೇ ಸದಸ್ಯನನ್ನು ಬಹಿಷ್ಕರಿಸುವ ಶಾಸ್ತ್ರೀಯ ಆಚರಣೆಯನ್ನು ಅವರು ಸ್ವೀಕರಿಸಿಕೊಂಡರು. ಪಾಪಿಯು ನಿಜವಾಗಿಯೂ ಪಶ್ಚಾತ್ತಾಪಪಟ್ಟಲ್ಲಿ, ಅವನನ್ನು ಪುನಃಸ್ಥಾಪಿಸಲು ಅವರು ಪ್ರಯತ್ನಿಸಿದರು. ಇಲ್ಲದಿದ್ದರೆ, “ಆ ದುಷ್ಟನನ್ನು . . . ತೆಗೆದುಹಾಕಬೇಕು,” ಎಂಬ ಶಾಸ್ತ್ರೀಯ ಕಟ್ಟಳೆಯನ್ನು ಅವರು ಅನುಸರಿಸಿದರು.—1 ಕೊರಿಂಥ 5:5, 11, 13.
ರಕ್ತವನ್ನು ವರ್ಜಿಸಬೇಕೆಂಬ ಬೈಬಲ್ ಸಂಬಂಧಿತ ಆಜ್ಞೆಗೆ ಸ್ಯಾಂಡಿಮೆನಿಯರು ವಿಧೇಯರಾದರು. (ಅ. ಕೃತ್ಯಗಳು 15:29) ದೇವರು ಪ್ರಥಮ ಮಾನವರನ್ನು ಒಳ್ಳೆಯದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ತಿನ್ನುವುದರಿಂದ ದೂರವಿರುವಂತೆ ಆಜ್ಞಾಪಿಸಿದ್ದಂತೆಯೇ, ರಕ್ತದ ಮೇಲಿನ ನಿರ್ಬಂಧಕ್ಕೆ ವಿಧೇಯರಾಗುವ ಹಂಗಿನ ಕೆಳಗೆ ದೇವರ ಜನರಿದ್ದಾರೆಂದು ಜಾನ್ ಗ್ಲಾಸ್ ವಾದಿಸಿದ್ದನು. (ಆದಿಕಾಂಡ 2:16, 17) ರಕ್ತದ ಕುರಿತಾದ ಆಜ್ಞೆಗೆ ಅವಿಧೇಯತೆಯು, ಕ್ರಿಸ್ತನ ರಕ್ತದ ಯೋಗ್ಯವಾದ ಉಪಯೋಗ—ಅಂದರೆ, ಪಾಪಪರಿಹಾರ—ದ ತಿರಸ್ಕಾರಕ್ಕೆ ಸರಿಸಮಾನವಾಗಿತ್ತು. ಗ್ಲಾಸ್ ಮುಕ್ತಾಯಗೊಳಿಸಿದ್ದು: “ರಕ್ತವನ್ನು ಸೇವಿಸುವುದರ ಕುರಿತಾದ ಈ ನಿರ್ಬಂಧವು ಯಾವಾಗಲೂ, ಮತ್ತು ಇನ್ನೂ ಅತ್ಯಂತ ಮಹತ್ತಾದದ್ದೂ ಅತ್ಯುನ್ನತ ಪ್ರಾಧಾನ್ಯತೆಯುಳ್ಳದ್ದೂ ಆಗಿದೆ.”
ಶಾಸ್ತ್ರಗಳ ಬಗ್ಗೆ ಸ್ಯಾಂಡಿಮೆನಿಯರು ಮಾಡಿದ ವಿವೇಚನೆಯು, ಅನೇಕ ಅಪಾಯಗಳಿಂದ ದೂರವಿರುವಂತೆ ಅವರಿಗೆ ಸಹಾಯ ಮಾಡಿತು. ಉದಾಹರಣೆಗೆ, ಮನೋರಂಜನೆಯ ವಿಷಯದಲ್ಲಿ, ಮಾರ್ಗದರ್ಶಕಗಳೋಪಾದಿ ಅವರು ಕ್ರಿಸ್ತನ ಉಪದೇಶಗಳ ಕಡೆಗೆ ನೋಡಿದರು. “ಕ್ರಿಸ್ತನು ಮಾಡದೆ ಇರುವಲ್ಲಿ ನಾವು ನಿಯಮಗಳನ್ನು ಮಾಡಲು ಯತ್ನಿಸೆವು, ಇಲ್ಲವೆ ಅವನು ನಮಗೆ ಕೊಟ್ಟಿರುವ ಯಾವುದೇ ನಿಯಮಗಳನ್ನು ನಾವು ತಿರಸ್ಕರಿಸೆವು,” ಎಂಬುದಾಗಿ ಅವರು ಹೇಳಿದರು. “ಆದುದರಿಂದ, ವಿನೋದವು—ಸಾರ್ವಜನಿಕವಾಗಲಿ ಖಾಸಗಿಯಾಗಲಿ—ನಿಷೇಧಿಸಲ್ಪಟ್ಟಿರುವುದನ್ನು ನಾವು ಕಂಡುಕೊಳ್ಳಸಾಧ್ಯವಿಲ್ಲದ ಕಾರಣ, ಯಾವುದೇ ವಿನೋದವನ್ನು—ಆ ವಿನೋದವು ನಿಜವಾಗಿಯೂ ಪಾಪಕರವಾಗಿರುವ ಪರಿಸ್ಥಿತಿಗಳೊಂದಿಗೆ ಸಂಬಂಧಿಸದೆ ಇರುವ ವರೆಗೆ—ನ್ಯಾಯಬದ್ಧವೆಂಬುದಾಗಿ ಪರಿಗಣಿಸುತ್ತೇವೆ.”
ಹೀಗೆ ಸ್ಯಾಂಡಿಮೆನಿಯರು ಶಾಸ್ತ್ರದ ಮೇಲೆ ನಿಷ್ಕೃಷ್ಟವಾಗಿ ಆಧರಿಸಿದ್ದ ಅನೇಕ ದೃಷ್ಟಿಕೋನಗಳನ್ನು ಎತ್ತಿಹಿಡಿದರಾದರೂ, ನಿಜ ಕ್ರೈಸ್ತರ ಸ್ವರೂಪವನ್ನು ನಿರೂಪಿಸುವ, ಅಂದರೆ, ಪ್ರತಿಯೊಬ್ಬನು ಇತರರಿಗೆ ರಾಜ್ಯದ ಸುವಾರ್ತೆಯನ್ನು ಸಾರಬೇಕೆಂಬ ಚಟುವಟಿಕೆಯ ಪ್ರಮುಖತೆಯನ್ನೇ ಅವರು ಗ್ರಹಿಸಲಿಲ್ಲ. (ಮತ್ತಾಯ 24:14) ಆದರೂ, ಅವರ ಕೂಟಗಳು ಸಕಲರಿಗಾಗಿದ್ದವು, ಮತ್ತು ತಮ್ಮ ನಿರೀಕ್ಷೆಗಾಗಿ ಕಾರಣವೊಂದನ್ನು ಕೇಳಿದವರೆಲ್ಲರಿಗೆ ಉತ್ತರವನ್ನು ನೀಡಲು ಅವರು ಪ್ರಯತ್ನಿಸಿದರು.—1 ಪೇತ್ರ 3:15.
ನಂಬಿಕೆಗಳ ಈ ನಮೂನೆಯು ವಿಜ್ಞಾನಿಯಾದ ಮೈಕಲ್ ಫ್ಯಾರಡೆಯನ್ನು ಹೇಗೆ ಪ್ರಭಾವಿಸಿದವು?
ಸ್ಯಾಂಡಿಮೆನಿಯನ್ನಾದ ಫ್ಯಾರಡೆ
ಗೌರವಿಸಲ್ಪಟ್ಟ, ಪ್ರಾಧಾನ್ಯತೆ ಕೊಡಲ್ಪಟ್ಟ, ತನ್ನ ಗಮನಾರ್ಹವಾದ ಕಂಡುಹಿಡಿತಗಳಿಗಾಗಿ ಬಹಳಷ್ಟು ಗಣ್ಯತೆಯಿಂದ ಕಾಣಲ್ಪಟ್ಟ ಮೈಕಲ್ ಫ್ಯಾರಡೆ, ಒಂದು ಸರಳ ಜೀವಿತವನ್ನು ಜೀವಿಸಿದನು. ಜನಪ್ರಿಯ ವ್ಯಕ್ತಿಗಳು ಸತ್ತಾಗ ಮತ್ತು ಸಾರ್ವಜನಿಕ ಅಧಿಕಾರದಲ್ಲಿದ್ದವರು ಅಂತಹವರ ಶವಸಂಸ್ಕಾರಗಳನ್ನು ಹಾಜರಾಗುವಂತೆ ಅಪೇಕ್ಷಿಸಲ್ಪಟ್ಟಾಗ, ಫ್ಯಾರಡೆ ಗಮನಾರ್ಹನಾದ ಅನುಪಸ್ಥಿತನಾಗಿದ್ದನು. ಹಾಜರಾಗಲು ಮತ್ತು ಚರ್ಚ್ ಆಫ್ ಇಂಗ್ಲೆಂಡ್ನ ವಿಧ್ಯುಕ್ತವಾದ ಸಂಸ್ಕಾರದಲ್ಲಿ ಒಳಗೊಳ್ಳಲು ಅವನ ಮನಸ್ಸಾಕ್ಷಿಯು ಅವನನ್ನು ಅನುಮತಿಸುತ್ತಿರಲಿಲ್ಲ.
ವಿಜ್ಞಾನಿಯೋಪಾದಿ ಫ್ಯಾರಡೆ, ಯಾವುವನ್ನು ನಿಜಾಂಶಗಳಾಗಿವೆ ಎಂದು ಅವನು ಪ್ರತ್ಯಕ್ಷಾಭಿನಯಿಸಸಾಧ್ಯವಿತ್ತೊ, ಅವುಗಳಿಗೆ ನಿಕಟವಾಗಿ ಅಂಟಿಕೊಂಡನು. ಹೀಗೆ ಅವನು ತಮ್ಮ ಸ್ವಂತ ಊಹೆಗಳನ್ನು ಪ್ರವರ್ಧಿಸಿದ ಮತ್ತು ವಿವಾದಾಂಶಗಳ ವಿಷಯದಲ್ಲಿ ಪಕ್ಷವಹಿಸಿದ ಸುಶಿಕ್ಷಿತ ಪುರುಷರೊಂದಿಗೆ ಆಪ್ತ ಸಹವಾಸವನ್ನು ದೂರವಿರಿಸಿದನು. ಅವನೊಮ್ಮೆ ಒಂದು ಸಭೆಗೆ ಹೇಳಿದಂತೆ, ‘ಒಂದು ಮೂಲಭೂತ ನಿಜಾಂಶವು ಎಂದಿಗೂ ನಮ್ಮನ್ನು ನಿರೀಕ್ಷೆಗೆಡಿಸದು, ಅದರ ಸಾಕ್ಷ್ಯವು ಸದಾ ಸತ್ಯವಾಗಿದೆ.’ ವಿಜ್ಞಾನವನ್ನು ಅವನು, ‘ಜಾಗರೂಕವಾಗಿ ಅವಲೋಕಿಸಲ್ಪಟ್ಟ ನಿಜಾಂಶಗಳ ಮೇಲೆ’ ಅವಲಂಬಿಸಿರುವುದಾಗಿ ವರ್ಣಿಸಿದನು. ನಿಸರ್ಗದ ಮೂಲ ಶಕ್ತಿಗಳ ಕುರಿತಾದ ಒಂದು ನಿರೂಪಣೆಯನ್ನು ಮುಕ್ತಾಯಗೊಳಿಸುತ್ತಾ, “ಅವುಗಳನ್ನು ಸೃಷ್ಟಿಸಿದ ದೇವರ” ಕುರಿತು ಯೋಚಿಸುವಂತೆ ಫ್ಯಾರಡೆ ತನ್ನ ಸಭಿಕರಿಗೆ ಉತ್ತೇಜನ ನೀಡಿದನು. ಅನಂತರ ಅವನು ಕ್ರೈಸ್ತ ಅಪೊಸ್ತಲ ಪೌಲನನ್ನು ಉಲ್ಲೇಖಿಸಿ ಹೇಳಿದನು: “ಆತನ ಅದೃಶ್ಯವಾದ ವಿಷಯಗಳು ಲೋಕದ ಸೃಷ್ಟಿಯಿಂದ ಸ್ಪಷ್ಟವಾಗಿ ಕಾಣಲ್ಪಡುತ್ತವೆ, ಮಾಡಲ್ಪಟ್ಟಿರುವ ವಿಷಯಗಳ ಮೂಲಕ—ಆತನ ಅನಂತ ಶಕ್ತಿಯೂ ದೇವತ್ವವೂ—ಅರ್ಥಮಾಡಿಕೊಳ್ಳಲ್ಪಡುತ್ತಿದೆ.”—ರೋಮಾಪುರ 1:20, ಕಿಂಗ್ ಜೇಮ್ಸ್ ವರ್ಷನ್.
ಇತರ ಅನೇಕ ವಿಜ್ಞಾನಿಗಳಿಂದ ಫ್ಯಾರಡೆಯನ್ನು ಪ್ರತ್ಯೇಕಿಸಿದ ವಿಷಯವು, ದೇವರ ಪ್ರೇರಿತ ಗ್ರಂಥದಿಂದ ಅಷ್ಟೇ ಅಲ್ಲದೆ ನಿಸರ್ಗದ ಗ್ರಂಥದಿಂದ ಕಲಿಯಲಿಕ್ಕಾಗಿದ್ದ ಅವನ ಬಯಕೆಯಾಗಿತ್ತು. “ತನ್ನ ಸ್ಯಾಂಡಿಮೆನಿಯನ್ ತತ್ವದ ಮುಖಾಂತರ ಅವನು ದೇವರ ನೈತಿಕ ನಿಯಮ ಮತ್ತು ಅನಂತ ಜೀವನದ ವಾಗ್ದಾನದೊಂದಿಗೆ ವಿಧೇಯತೆಯಲ್ಲಿ ಜೀವಿಸುವ ಮಾರ್ಗವನ್ನು ಕಂಡುಹಿಡಿದನು,” ಎಂಬುದಾಗಿ ಕ್ಯಾಂಟರ್ ಗಮನಿಸುತ್ತಾನೆ. “ತನ್ನ ವಿಜ್ಞಾನದ ಮುಖಾಂತರ, ವಿಶ್ವವನ್ನು ಆಳಲು ದೇವರು ಆರಿಸಿಕೊಂಡಿದ್ದ ಭೌತಿಕ ನಿಯಮಗಳೊಂದಿಗೆ ಅವನು ನಿಕಟ ಸಂಪರ್ಕದೊಳಗೆ ಬಂದನು.” “ಬೈಬಲಿನ ಸರ್ವತಂತ್ರ ಅಧಿಕಾರವು ವಿಜ್ಞಾನದ ಮೂಲಕ ಶಿಥಿಲಗೊಳಿಸಲ್ಪಡಲು ಸಾಧ್ಯವಿಲ್ಲ, ಬದಲಿಗೆ ವಿಜ್ಞಾನವನ್ನು ನಿಜವಾಗಿಯೂ ಕ್ರೈಸ್ತೋಚಿತ ವಿಧದಲ್ಲಿ ಆಚರಿಸುವುದಾದರೆ, ಅದು ದೇವರ ಮತ್ತೊಂದು ಗ್ರಂಥವನ್ನು ವಿಶದಪಡಿಸುವುದು,” ಎಂದು ಫ್ಯಾರಡೆ ನಂಬಿದನು.
ತನ್ನ ಮೇಲೆ ಇತರರು ಅನುಗ್ರಹಿಸಲು ಬಯಸಿದ ಅನೇಕ ಗೌರವಗಳನ್ನು ಫ್ಯಾರಡೆ ದೈನ್ಯಭಾವದಿಂದ ನಿರಾಕರಿಸಿದನು. ನೈಟ್ ಪದವಿಯಲ್ಲಿ ತನ್ನ ಅನಾಸಕ್ತಿಯನ್ನು ಅವನು ಸತತವಾಗಿ ವ್ಯಕ್ತಪಡಿಸಿದನು. ಅವನು ‘ಬರಿಯ ಮಿಸ್ಟರ್ ಫ್ಯಾರಡೆ’ಯಾಗಿ ಉಳಿಯಲು ಬಯಸಿದನು. ಲಂಡನ್ನಿಂದ ಒಂದು ನಾರ್ಫಾಕ್ ಹಳ್ಳಿಗೆ—ಅಲ್ಲಿ ಜೀವಿಸುತ್ತಿದ್ದ ಒಂದೇ ಮನೋಧರ್ಮವುಳ್ಳ ವಿಶ್ವಾಸಿಗಳ ಸಣ್ಣ ಗುಂಪಿನ ಕಾಳಜಿ ವಹಿಸಲು—ಕ್ರಮವಾಗಿ ಪ್ರಯಾಣಿಸುವುದನ್ನು ಸೇರಿಸಿ, ಹಿರಿಯನೋಪಾದಿ ತನ್ನ ಚಟುವಟಿಕೆಗಳಿಗೆ ಅವನು ಹೆಚ್ಚಿನ ಸಮಯವನ್ನು ಸಮರ್ಪಿಸಿದನು.
ಮೈಕಲ್ ಫ್ಯಾರಡೆ 1867, ಆಗಸ್ಟ್ 25ರಂದು ಮೃತಪಟ್ಟನು, ಮತ್ತು ಉತ್ತರ ಲಂಡನ್ನ ಹೈಗೇಟ್ ಶ್ಮಶಾನದಲ್ಲಿ ಹೂಳಲ್ಪಟ್ಟನು. ಆತ್ಮ ಚರಿತ್ರೆಗಾರನಾದ ಜಾನ್ ಥಾಮಸ್ ನಮಗೆ ಹೇಳುವುದೇನೆಂದರೆ, ಫ್ಯಾರಡೆ “ಬೇರೆ ಯಾವುದೇ ಭೌತಶಾಸ್ತ್ರದ ವಿಜ್ಞಾನಿಗಿಂತಲೂ, ಶುದ್ಧವಾದ ವೈಜ್ಞಾನಿಕ ಸಾಧನೆಯ ಹೆಚ್ಚಿನ ಮೊತ್ತವನ್ನು ಮುಂದಿನ ಪೀಳಿಗೆಗೆ ಬಿಟ್ಟುಹೋದನು, ಮತ್ತು ಅವನ ಕಂಡುಹಿಡಿತಗಳ ಪ್ರಾಯೋಗಿಕ ಪರಿಣಾಮಗಳು, ಸುಸಂಸ್ಕೃತ ಜೀವಿತದ ಸ್ವರೂಪವನ್ನು ಅಗಾಧವಾಗಿ ಪ್ರಭಾವಿಸಿವೆ.” ಫ್ಯಾರಡೆಯ ವಿಧವೆಯಾದ ಸೇರ, ಬರೆದುದು: “ಅವರ ಮಾರ್ಗದರ್ಶಕ ಹಾಗೂ ಕಟ್ಟಳೆಯೋಪಾದಿ ನಾನು ಕೇವಲ ಹೊಸ ಒಡಂಬಡಿಕೆಗೆ ಸೂಚಿಸಬಲ್ಲೆ; ಅದನ್ನು ಅವರು ದೇವರ ವಾಕ್ಯವೆಂದು ಪರಿಗಣಿಸಿದರು . . . ಅದು ಬರೆಯಲ್ಪಟ್ಟ ಸಮಯದಲ್ಲಿ ಹೇಗೊ, ಹಾಗೆಯೇ ಪ್ರಚಲಿತ ದಿನದಲ್ಲಿನ ಕ್ರೈಸ್ತರ ಮೇಲೆಯೂ ಸಮವಾಗಿ ಬದ್ಧಪಡಿಸುವಂತಹದ್ದಾಗಿದೆ”—ತನ್ನ ನಂಬಿಕೆಯ ಮೂಲಕ ಭಕ್ತಿಪೂರ್ವಕವಾಗಿ ಜೀವಿಸಿದ ಒಬ್ಬ ಶ್ರೇಷ್ಠ ವಿಜ್ಞಾನಿಗೆ ಒಂದು ವಾಕ್ಚತುರ ಸಾಕ್ಷ್ಯ.
[ಪಾದಟಿಪ್ಪಣಿ]
a ಅಮೆರಿಕದಲ್ಲಿ ಅಸ್ತಿತ್ವದಲ್ಲಿದ್ದ ಕೊನೆಯ ಸ್ಯಾಂಡಿಮೆನಿಯನ್ ಅಥವಾ ಗ್ಲಾಸೈಟ್ ಗುಂಪು, ಬಹುಮಟ್ಟಿಗೆ ಈ ಶತಮಾನದ ಆರಂಭದಲ್ಲಿ ಅಂತ್ಯಗೊಂಡಿತು.
[ಪುಟ 29 ರಲ್ಲಿರುವ ಚೌಕ]
ಬ್ರಿಟನಿನ ರಾಯಲ್ ಇನ್ಸ್ಟಿಟ್ಯುಷನ್ನಲ್ಲಿ ಒಬ್ಬ ಉಪನ್ಯಾಸಗಾರನಾಗಿ ನಿಯುಕ್ತನಾದ ಮೈಕಲ್ ಫ್ಯಾರಡೆ, ಎಳೆಯರೂ ಅರ್ಥಮಾಡಿಕೊಳ್ಳಲು ಸಾಧ್ಯವಿದ್ದ ವಿಧದಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಿದನು. ಜೊತೆ ಉಪನ್ಯಾಸಕಾರರಿಗೆ ಅವನು ನೀಡಿದ ಸಲಹೆಯು, ಸಾರ್ವಜನಿಕವಾಗಿ ಕಲಿಸುವ ಆಧುನಿಕ ದಿನದ ಕ್ರೈಸ್ತರು ಪರಿಗಣಿಸಬೇಕಾಗಿರುವ ಪ್ರಾಯೋಗಿಕ ಸೂಚನೆಗಳನ್ನು ಒಳಗೊಂಡಿದೆ.
◻ “ಮಾತುಕತೆಯು ತೀವ್ರತೆಯುಳ್ಳದ್ದೂ ಅವಸರದ್ದೂ, ಹೀಗೆ ಪರಿಣಾಮಸ್ವರೂಪವಾಗಿ ತಿಳಿಯಲಾರದ್ದಾಗಿ ಇರಬಾರದು, ಬದಲಿಗೆ ನಿಧಾನಗತಿಯುಳ್ಳದ್ದೂ ಸಾವಧಾನವಾದದ್ದೂ ಆಗಿರಬೇಕು.”
◻ ಒಬ್ಬ ಭಾಷಣಕಾರನು ತನ್ನ ಸಭಿಕರ ಆಸಕ್ತಿಯನ್ನು “ಉಪನ್ಯಾಸದ ಆರಂಭದಲ್ಲಿ” ಹೆಚ್ಚಿಸಲು ಪ್ರಯತ್ನಿಸಬೇಕು, “ಮತ್ತು ಅಗೋಚರವಾದ ಅನುಕ್ರಮಗಳ ಸರಣಿಯ ಮೂಲಕ, ಸಭಿಕರಿಂದ ಗ್ರಹಿಸಲ್ಪಡದೆ, ವಿಷಯವು ಅದನ್ನು ನಿರ್ಬಂಧಿಸುವ ವರೆಗೆ ಸಜೀವವಾಗಿ ಇಡಬೇಕು.”
◻ “ಚಪ್ಪಾಳೆಯನ್ನು ಆಹ್ವಾನಿಸಲು ತನ್ನ ಭಾಷಣವನ್ನು ಓಲಿಸಿ, ಪ್ರಶಂಸೆಗಾಗಿ ಕೇಳುವಷ್ಟು ಕೆಳದರ್ಜೆಗೆ ಇಳಿಯುವಾಗ, ಒಬ್ಬ ಉಪನ್ಯಾಸಗಾರನು ತನ್ನ ವ್ಯಕ್ತಿತ್ವದ ಘನತೆಗೆ ಬಹಳಷ್ಟು ಕುಂದನ್ನು ತರುತ್ತಾನೆ.”
◻ ಹೊರಮೇರೆಯ ಉಪಯೋಗದ ಕುರಿತು: “ಹಾಳೆಯ ಮೇಲೆ [ವಿಷಯದ] ಒಂದು ಯೋಜನೆಯನ್ನು ರೂಪಿಸಲು ಮತ್ತು ಸಂಬಂಧಿಸುವಿಕೆ ಅಥವಾ ಬೇರೆ ರೀತಿಯಲ್ಲಿ ಅವುಗಳನ್ನು ಮನಸ್ಸಿಗೆ ಬರಮಾಡಿಕೊಳ್ಳುವ ಮೂಲಕ ಭಾಗಗಳನ್ನು ಪೂರ್ಣಗೊಳಿಸಲು . . . ನಾನು ಹಂಗುಳ್ಳವನೆಂದು ಯಾವಾಗಲೂ ಕಂಡುಕೊಳ್ಳುತ್ತೇನೆ. . . . ಕ್ರಮವಾಗಿ ಪ್ರಮುಖ ಮತ್ತು ಪ್ರಮುಖವಲ್ಲದ ತಲೆ[ಬರಹ]ಗಳ ಒಂದು ಸರಣಿ ನನ್ನಲ್ಲಿದೆ, ಮತ್ತು ಇವುಗಳಿಂದ ನಾನು ನನ್ನ ವಿಷಯವಸ್ತುವನ್ನು ವಿಸ್ತಾರಗೊಳಿಸುತ್ತೇನೆ.”
[ಪುಟ 26 ರಲ್ಲಿರುವ ಚಿತ್ರ ಕೃಪೆ]
Both pictures: By courtesy of the Royal Institution