ವಿಶ್ವಾಸಾರ್ಹನಾದ ದೇವರ ಸೇವೆಮಾಡುವುದು
ಕೀಮಾನ್ ಪ್ರೋಗಾಕೀಸ್ ಹೇಳಿದಂತೆ
ಅದು 1955ರಲ್ಲಿನ ಕೊರೆಯುವ ಚಳಿಯ ಒಂದು ಸಂಜೆಯಾಗಿತ್ತು. ನಮ್ಮ 18 ವರ್ಷ ಪ್ರಾಯದ ಮಗನಾದ ಯಾರ್ಗೊಸ್, ತಾನು ಕೆಲಸಮಾಡಿದ ವ್ಯಾಪಾರಕಟ್ಟೆಯಿಂದ ಹಿಂದಿರುಗಲು ತಪ್ಪಿದ ಕಾರಣ, ನನ್ನ ಹೆಂಡತಿ ಯಾನೂಲೇ ಹಾಗೂ ನಾನು ಚಿಂತಿಸಲಾರಂಭಿಸಿದೆವು. ಅನಿರೀಕ್ಷಿತವಾಗಿ, ಒಬ್ಬ ಪೊಲೀಸ್ ಸಿಪಾಯಿಯು ನಮ್ಮ ಬಾಗಿಲು ತಟ್ಟಿದನು. “ತನ್ನ ಸೈಕಲನ್ನು ಚಲಾಯಿಸುತ್ತಾ ಮನೆಗೆ ಹಿಂದಿರುಗುತ್ತಿರುವಾಗ, ನಿಮ್ಮ ಮಗನು ಒಂದು ವಾಹನದಿಂದ ಹೊಡೆಯಲ್ಪಟ್ಟು, ಸತ್ತುಹೋದನು” ಎಂದು ಅವನು ಹೇಳಿದನು. ಅನಂತರ ಅವನು ಮುಂದೆ ಬಾಗಿ, ಪಿಸುಗುಟ್ಟಿದ್ದು: “ಅದೊಂದು ಅಪಘಾತವಾಗಿತ್ತೆಂದು ಅವರು ನಿಮಗೆ ಹೇಳುವರು, ಆದರೆ ನನ್ನನ್ನು ನಂಬಿ, ಅವನ ಕೊಲೆಮಾಡಲಾಯಿತು.” ಸ್ಥಳಿಕ ಪಾದ್ರಿಯೂ ಕೆಲವು ಪ್ಯಾರಮಿಲಿಟರಿ (ಮಿಲಿಟರಿ ಸದೃಶ) ನಾಯಕರೂ ಅವನನ್ನು ಕೊಲ್ಲಲು ಹೂಟಹೂಡಿದ್ದರು.
ಕಲಹ ಮತ್ತು ತೊಂದರೆಯ ಅವಧಿಗಳಿಂದ ಗ್ರೀಸ್ ಸಾಮಾನ್ಯ ಸ್ಥಿತಿಗೆ ಬರುತ್ತಿದ್ದ ಆ ವರ್ಷಗಳಲ್ಲಿ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿರುವುದು ಅಪಾಯಕರವಾಗಿತ್ತು. ಗ್ರೀಕ್ ಆರ್ತೊಡಾಕ್ಸ್ ಚರ್ಚಿನ ಮತ್ತು ಪ್ಯಾರಮಿಲಿಟರಿ ಸಂಘಟನೆಗಳ ಶಕ್ತಿಯ ಕುರಿತು ನನಗೆ ಸಾಕ್ಷಾತ್ತಾಗಿ ಗೊತ್ತಿತ್ತು ಏಕೆಂದರೆ, 15ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ, ನಾನು ಅವುಗಳ ಸಕ್ರಿಯ ಸದಸ್ಯನಾಗಿದ್ದೆ. 40ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ನಮ್ಮ ಕುಟುಂಬದಲ್ಲಿ ಸಂಭವಿಸಿದ ಈ ದುರಂತಕ್ಕೆ ನಡೆಸಿದ ಘಟನೆಗಳ ಕುರಿತು ನಾನು ನಿಮಗೆ ಹೇಳುತ್ತೇನೆ.
ಗ್ರೀಸ್ನಲ್ಲಿ ಬೆಳೆದು ದೊಡ್ಡವನಾಗುವುದು
ನಾನು 1902ರಲ್ಲಿ, ಗ್ರೀಸ್ನಲ್ಲಿನ ಕಾಲ್ಕೀಸ್ ಎಂಬ ಪಟ್ಟಣದ ಹತ್ತಿರವಿರುವ ಒಂದು ಚಿಕ್ಕ ಹಳ್ಳಿಯಲ್ಲಿನ ಒಂದು ಶ್ರೀಮಂತ ಕುಟುಂಬದಲ್ಲಿ ಜನಿಸಿದೆ. ನನ್ನ ತಂದೆಯು ಸ್ಥಳಿಕ ರಾಜಕೀಯದಲ್ಲಿ ಸಕ್ರಿಯರಾಗಿದ್ದರು, ಮತ್ತು ನಮ್ಮ ಕುಟುಂಬದವರು ಗ್ರೀಕ್ ಆರ್ತೊಡಾಕ್ಸ್ ಚರ್ಚಿನ ಧರ್ಮನಿಷ್ಠ ಸದಸ್ಯರಾಗಿದ್ದರು. ನನ್ನ ಸಹದೇಶೀಯರಲ್ಲಿ ಹೆಚ್ಚಿನವರು ಅನಕ್ಷರಸ್ಥರಾಗಿದ್ದ ಒಂದು ಸಮಯದಲ್ಲಿ, ನಾನು ರಾಜಕೀಯ ಹಾಗೂ ಧಾರ್ಮಿಕ ಪುಸ್ತಕಗಳ ಒಬ್ಬ ಅತ್ಯಾಸಕ್ತಿಯ ವಾಚಕನಾದೆ.
20ನೆಯ ಶತಮಾನದ ಆರಂಭದಲ್ಲಿ ಪ್ರಚಲಿತವಾಗಿದ್ದ ಬಡತನ ಹಾಗೂ ಅನ್ಯಾಯವು, ಉತ್ತಮ ಪರಿಸ್ಥಿತಿಗಳುಳ್ಳ ಒಂದು ಲೋಕಕ್ಕಾಗಿ ನನ್ನಲ್ಲಿ ಒಂದು ಬಯಕೆಯನ್ನು ಹುಟ್ಟಿಸಿತು. ಧರ್ಮವು ನನ್ನ ಸಹದೇಶೀಯರ ದುಃಖಕರ ಸನ್ನಿವೇಶವನ್ನು ಉತ್ತಮಗೊಳಿಸಲು ಶಕ್ತಿಯುಳ್ಳದ್ದಾಗಿರಬೇಕೆಂದು ನಾನು ನೆನಸಿದೆ. ನನ್ನ ಧಾರ್ಮಿಕ ಒಲವಿನಿಂದಾಗಿ, ನಾನು ನಮ್ಮ ಸಮುದಾಯದ ಗ್ರೀಕ್ ಆರ್ತೊಡಾಕ್ಸ್ ಪಾದ್ರಿಯಾಗುವಂತೆ ನನ್ನ ಹಳ್ಳಿಯ ಪ್ರಮುಖ ಪುರುಷರು ಪ್ರಸ್ತಾಪಿಸಿದರು. ಆದರೆ, ನಾನು ಅನೇಕ ಸಂನ್ಯಾಸಿ ಮಠಗಳನ್ನು ಸಂದರ್ಶಿಸಿ, ಬಿಷಪರು ಮತ್ತು ಕ್ರೈಸ್ತ ಮಠಾಧಿಪತಿಗಳೊಂದಿಗೆ ದೀರ್ಘವಾದ ಚರ್ಚೆಗಳನ್ನು ನಡೆಸಿದ್ದರೂ, ಇಂತಹ ಒಂದು ಜವಾಬ್ದಾರಿಯನ್ನು ಸ್ವೀಕರಿಸಿಕೊಳ್ಳಲು ಸಿದ್ಧಮನಸ್ಕನೂ ಇಷ್ಟವುಳ್ಳವನೂ ಆಗಿರಲಿಲ್ಲ.
ಅಂತರ್ಯುದ್ಧದ ಮಧ್ಯದಲ್ಲಿ
ವರ್ಷಗಳ ನಂತರ, ಎಪ್ರಿಲ್ 1941ರಲ್ಲಿ, ಗ್ರೀಸ್ ದೇಶ ನಾಸಿ ಆಕ್ರಮಣಕ್ಕೊಳಗಾಯಿತು. ಇದು ಹತ್ಯೆಗಳು, ಬರ, ಅಭಾವ, ಮತ್ತು ಹೇಳಲಾಗದ ಮಾನವ ಕಷ್ಟಾನುಭವದ ಸಂಕಟಕರ ಅವಧಿಯನ್ನು ಆರಂಭಿಸಿತು. ಬಲವಾದ ಒಂದು ಪ್ರತಿಭಟನಾ ಚಳವಳಿಯು ವಿಕಾಸಗೊಂಡಿತು, ಮತ್ತು ನಾಸಿ ಆಕ್ರಮಣಕಾರರ ವಿರುದ್ಧ ಹೋರಾಡಿದ ಗೆರಿಲ ಗುಂಪುಗಳಲ್ಲೊಂದನ್ನು ನಾನು ಸೇರಿದೆ. ಫಲಸ್ವರೂಪವಾಗಿ, ನನ್ನ ಮನೆಗೆ ಹಲವಾರು ಬಾರಿ ಬೆಂಕಿ ಹೊತ್ತಿಸಲಾಯಿತು, ನಾನು ಗುಂಡಿನ ಹೊಡೆತದಿಂದ ಗಾಯಗೊಂಡೆ, ಮತ್ತು ನನ್ನ ಬೆಳೆಗಳು ನಾಶಗೊಳಿಸಲ್ಪಟ್ಟವು. 1943ರ ಆರಂಭದಲ್ಲಿ, ನನ್ನ ಕುಟುಂಬ ಹಾಗೂ ನನಗೆ, ಒಡ್ಡೊಡ್ಡಾದ ಪರ್ವತಗಳಿಗೆ ಓಡಿಹೋಗುವುದರ ಹೊರತು ಬೇರೆ ಆಯ್ಕೆಯಿರಲಿಲ್ಲ. ನಾವು ಅಲ್ಲಿ ಅಕ್ಟೋಬರ್ 1944ರಲ್ಲಿ ಜರ್ಮನ್ ಆಕ್ರಮಣದ ಅಂತ್ಯದ ತನಕ ತಂಗಿದೆವು.
ಜರ್ಮನರು ಹೋದ ಬಳಿಕ ಆಂತರಿಕ ರಾಜಕೀಯ ಹಾಗೂ ಅಂತರ್ಕಲಹವು ಹೊರಚಿಮ್ಮಿತು. ನಾನು ಸೇರಿಕೊಂಡಿದ್ದ ಗೆರಿಲ ಪ್ರತಿಭಟನಾ ಗುಂಪು, ಅಂತರ್ಯುದ್ಧದಲ್ಲಿ ಹೋರಾಡುತ್ತಿದ್ದ ಪ್ರಧಾನ ಶಕ್ತಿಗಳಲ್ಲಿ ಒಂದಾಗಿ ಪರಿಣಮಿಸಿತು. ಸಮುದಾಯ ಸ್ವಾಮ್ಯವಾದಕ್ಕೆ ಸಂಬಂಧಿಸಿದ ನ್ಯಾಯ, ಸಮಾನತೆ, ಮತ್ತು ಗೆಳೆತನದ ಆದರ್ಶ ಧ್ಯೇಯಗಳು ನನ್ನನ್ನು ಆಕರ್ಷಿಸಿದವಾದರೂ, ಅದರ ವಾಸ್ತವಿಕತೆಯು ಕಟ್ಟಕಡೆಗೆ ನನ್ನನ್ನು ಸಂಪೂರ್ಣವಾಗಿ ಭ್ರಮನಿರಸನಗೊಳಿಸಿತು. ಗುಂಪಿನಲ್ಲಿ ನನಗೆ ಒಂದು ಉನ್ನತ ಸ್ಥಾನವಿದ್ದ ಕಾರಣ, ಅಧಿಕಾರವು ಜನರನ್ನು ಭ್ರಷ್ಟಗೊಳಿಸುವ ಪ್ರವೃತ್ತಿಯುಳ್ಳದ್ದಾಗಿರುತ್ತದೆ ಎಂದು ನಾನು ಸಾಕ್ಷಾತ್ತಾಗಿ ನೋಡಿದೆ. ಸ್ಪಷ್ಟವಾಗಿ ಶ್ರೇಷ್ಠವಾದ ಸಿದ್ಧಾಂತಗಳು ಹಾಗೂ ಆದರ್ಶ ಧ್ಯೇಯಗಳ ಹೊರತೂ, ಸ್ವಾರ್ಥಪರತೆ ಹಾಗೂ ಅಪರಿಪೂರ್ಣತೆಯು ಅತ್ಯುತ್ತಮವಾದ ರಾಜಕೀಯ ಉದ್ದೇಶಗಳನ್ನು ದುರ್ಬಲಗೊಳಿಸುತ್ತವೆ.
ನನ್ನನ್ನು ವಿಶೇಷವಾಗಿ ತಲ್ಲಣಗೊಳಿಸಿದಂತಹ ವಿಷಯವು, ಆಂತರಿಕ ಘರ್ಷಣೆಯ ವಿಭಿನ್ನ ಪಕ್ಷಗಳಲ್ಲಿ, ಆರ್ತೊಡಾಕ್ಸ್ ಪಾದ್ರಿಗಳು ತಮ್ಮ ಸ್ವಂತ ಧರ್ಮದವರನ್ನು ಕೊಲ್ಲಲು ಶಸ್ತ್ರಗಳನ್ನು ತೆಗೆದುಕೊಳ್ಳುತ್ತಿದ್ದದ್ದೇ! ‘“ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು” ಎಂಬುದಾಗಿ ಎಚ್ಚರಿಸಿದ ಯೇಸು ಕ್ರಿಸ್ತನನ್ನು ತಾವು ಪ್ರತಿನಿಧಿಸುತ್ತೇವೆಂದು ಈ ಪಾದ್ರಿಗಳು ಹೇಗೆ ಹೇಳಬಲ್ಲರು?’ ಎಂದು ನಾನು ಸ್ವತಃ ಯೋಚಿಸಿದೆ.—ಮತ್ತಾಯ 26:52.
1946ರಲ್ಲಿ ನಡೆದ ಅಂತರ್ಯುದ್ಧದ ಸಂದರ್ಭದಲ್ಲಿ, ಮಧ್ಯ ಗ್ರೀಸ್ನಲ್ಲಿನ ಲಮೀಯ ಎಂಬ ಪಟ್ಟಣದ ಹತ್ತಿರ ನಾನು ಅವಿತುಕೊಂಡಿದ್ದೆ. ನನ್ನ ಬಟ್ಟೆಗಳು ಸಂಪೂರ್ಣವಾಗಿ ಜೀರ್ಣವಾಗಿಹೋಗಿದ್ದವು, ಆದುದರಿಂದ ವೇಷ ಬದಲಾಯಿಸಿ, ಕೆಲವು ಹೊಸ ಬಟ್ಟೆಗಳನ್ನು ಹೊಲಿಸಲಿಕ್ಕಾಗಿ ನಗರದಲ್ಲಿದ್ದ ದರ್ಜಿಯ ಬಳಿಹೋಗಲು ನಾನು ತೀರ್ಮಾನಿಸಿದೆ. ನಾನು ಆಗಮಿಸಿದಾಗ ಭಾವೋದ್ರೇಕದ ಒಂದು ಚರ್ಚೆಯು ನಡೆಯುತ್ತಾ ಇತ್ತು, ಮತ್ತು ಬೇಗನೆ ನಾನು ರಾಜಕೀಯದ ವಿಷಯವಾಗಿ ಅಲ್ಲ, ಬದಲಿಗೆ ಹಿಂದೆ ನನಗೆ ತೀವ್ರಾಸಕ್ತಿಯ ವಿಷಯವಾಗಿದ್ದ ಧರ್ಮದ ಕುರಿತು ಮಾತಾಡುತ್ತಿರುವುದನ್ನು ಕಂಡುಕೊಂಡೆ. ತಿಳಿವಳಿಕೆಯುಳ್ಳ ನನ್ನ ದೃಷ್ಟಿಕೋನಗಳನ್ನು ಗಮನಿಸುತ್ತಾ, ನಾನೊಬ್ಬ ‘ದೇವತಾಶಾಸ್ತ್ರದ ಪ್ರೊಫೆಸರ್’ನೊಂದಿಗೆ ಮಾತಾಡುವಂತೆ ಪ್ರೇಕ್ಷಕರು ಸೂಚಿಸಿದರು. ತತ್ಕ್ಷಣ ಅವನನ್ನು ಕರೆತರಲು ಅವರು ಹೊರಟುಹೋದರು.
ಭರವಸಾರ್ಹವಾದ ಒಂದು ನಿರೀಕ್ಷೆಯನ್ನು ಕಂಡುಕೊಳ್ಳುವುದು
ಅನುಸರಿಸಿದ ಚರ್ಚೆಯಲ್ಲಿ, ನನ್ನ ನಂಬಿಕೆಗಳಿಗೆ ಆಧಾರವೇನೆಂದು ಆ “ಪ್ರೊಫೆಸರ್” ನನ್ನನ್ನು ಕೇಳಿದನು. “ಪವಿತ್ರ ತಂದೆಗಳು ಮತ್ತು ಸಾರ್ವತ್ರಿಕ ಆಡಳಿತ ಸಭೆ,” ಎಂದು ನಾನು ಉತ್ತರಿಸಿದೆ. ನನ್ನನ್ನು ವಿರೋಧಿಸುವ ಬದಲಿಗೆ, ಅವನು ತನ್ನ ಚಿಕ್ಕ ಬೈಬಲನ್ನು ಮತ್ತಾಯ 23:9, 10ಕ್ಕೆ ತೆರೆದು, ಯೇಸುವಿನ ಮಾತುಗಳನ್ನು ಓದುವಂತೆ ನನ್ನನ್ನು ಕೇಳಿಕೊಂಡನು: “ಇದಲ್ಲದೆ ಭೂಲೋಕದಲ್ಲಿ ಯಾರನ್ನೂ ನಮ್ಮ ತಂದೆ ಎಂದು ಕರೆಯಬೇಡಿರಿ; ಪರಲೋಕದಲ್ಲಿರುವಾತನೊಬ್ಬನೇ ನಿಮಗೆ ತಂದೆ, ಮತ್ತು ಗುರುಗಳು ಅನ್ನಿಸಿಕೊಳ್ಳಬೇಡಿರಿ; ಕ್ರಿಸ್ತನೊಬ್ಬನೇ ನಿಮಗೆ ಗುರುವು.”
ಅದು ನನಗೆ ಕಣ್ದೆರೆಯುವ ವಿಷಯವಾಗಿತ್ತು! ಈ ಮನುಷ್ಯನು ಸತ್ಯವನ್ನು ಹೇಳುತ್ತಿದ್ದಾನೆಂಬುದನ್ನು ನಾನು ಗ್ರಹಿಸಿದೆ. ಅವನು ತನ್ನನ್ನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನೆಂದು ಗುರುತಿಸಿಕೊಂಡಾಗ, ಓದಲು ಕೆಲವು ಸಾಹಿತ್ಯಕ್ಕಾಗಿ ನಾನು ಅವನಲ್ಲಿ ಕೇಳಿಕೊಂಡೆ. ಬೈಬಲ್ ಪುಸ್ತಕವಾದ ಪ್ರಕಟನೆಯ ಕುರಿತಾದ ಒಂದು ನಿರೂಪಣೆಯಾಗಿರುವ ಲೈಟ್ ಪುಸ್ತಕವನ್ನು ಅವನು ನನಗೆ ತಂದುಕೊಟ್ಟನು, ಮತ್ತು ನಾನು ಅದನ್ನು ನನ್ನ ಅವಿತುಕೊಳ್ಳುವ ಸ್ಥಳಕ್ಕೆ ಕೊಂಡೊಯ್ದೆ. ಬಹಳಷ್ಟು ಸಮಯದ ವರೆಗೆ, ಪ್ರಕಟನೆಯಲ್ಲಿ ಸೂಚಿಸಲ್ಪಟ್ಟಿದ್ದ ಪಶುಗಳು ನನಗೊಂದು ರಹಸ್ಯವಾಗಿ ಉಳಿದಿದ್ದವು, ಆದರೆ ಇವು ನಮ್ಮ 20ನೆಯ ಶತಮಾನದಲ್ಲಿ ಅಸ್ತಿತ್ವದಲ್ಲಿರುವ ರಾಜಕೀಯ ಸಂಸ್ಥೆಗಳನ್ನು ಪ್ರತಿನಿಧಿಸಿದವು ಎಂದು ನಾನು ಈಗ ತಿಳಿದುಕೊಂಡೆ. ನಮ್ಮ ಸಮಯಗಳಿಗಾಗಿ ಬೈಬಲಿನಲ್ಲಿ ಪ್ರಾಯೋಗಿಕ ಅರ್ಥವಿದೆಯೆಂದು ಮತ್ತು ನಾನು ಅದನ್ನು ಅಭ್ಯಸಿಸಬೇಕೆಂದು ಹಾಗೂ ಅದರ ಸತ್ಯಗಳಿಗನುಸಾರವಾಗಿ ನನ್ನ ಜೀವನವನ್ನು ಸರಿಹೊಂದಿಸಿಕೊಳ್ಳಬೇಕೆಂಬುದನ್ನು ನಾನು ಗ್ರಹಿಸಲಾರಂಭಿಸಿದೆ.
ಸೆರೆಹಿಡಿದು, ಬಂಧನದಲ್ಲಿಡಲ್ಪಟ್ಟದ್ದು
ಇದಾದ ಸ್ವಲ್ಪದರಲ್ಲಿ, ಸೈನಿಕರು ನನ್ನ ಅವಿತುಕೊಳ್ಳುವ ಸ್ಥಳದೊಳಕ್ಕೆ ನುಗ್ಗಿ, ನನ್ನನ್ನು ದಸ್ತಗಿರಿ ಮಾಡಿದರು. ನನ್ನನ್ನು ನೆಲಮಾಳಿಗೆಯ ಬಂದಿಖಾನೆಯೊಳಗೆ ಹಾಕಲಾಯಿತು. ಸ್ವಲ್ಪ ಸಮಯದಿಂದ ನಾನು, ಪೊಲೀಸರಿಗೆ ಬೇಕಾಗಿದ್ದ ದೇಶಭ್ರಷ್ಟನಾಗಿದ್ದ ಕಾರಣ, ನನಗೆ ಮರಣದಂಡನೆ ವಿಧಿಸಲಾಗುವುದೆಂದು ನಾನು ನಿರೀಕ್ಷಿಸಿದೆ. ಅಲ್ಲಿ, ನನ್ನ ಬಂದಿಖಾನೆಯಲ್ಲಿ, ನನ್ನೊಂದಿಗೆ ಮೊದಲು ಮಾತಾಡಿದ್ದ ಸಾಕ್ಷಿಯಿಂದ ನಾನು ಸಂದರ್ಶಿಸಲ್ಪಟ್ಟೆ. ಯೆಹೋವನಲ್ಲಿ ಸಂಪೂರ್ಣವಾಗಿ ಭರವಸೆಯಿಡುವಂತೆ ಅವನು ನನ್ನನ್ನು ಉತ್ತೇಜಿಸಿದನು, ಮತ್ತು ನಾನು ಹಾಗೆ ಮಾಡಿದೆ. ಇಜೀಯನ್ ದ್ವೀಪವಾದ ಈಕರೀಆಗೆ ಆರು ತಿಂಗಳುಗಳಿಗಾಗಿ ಗಡೀಪಾರು ಶಿಕ್ಷೆ ನನಗೆ ವಿಧಿಸಲಾಯಿತು.
ನಾನು ಆಗಮಿಸಿದ ಕೂಡಲೇ, ನನ್ನನ್ನು ಸಮತಾವಾದಿಯಾಗಿಯಲ್ಲ, ಬದಲಿಗೆ ಒಬ್ಬ ಯೆಹೋವನ ಸಾಕ್ಷಿಯಾಗಿ ಗುರುತಿಸಿಕೊಂಡೆ. ಬೈಬಲ್ ಸತ್ಯಗಳನ್ನು ಕಲಿತಿದ್ದ ಇತರರೂ ಅಲ್ಲಿಗೆ ಗಡೀಪಾರುಗೊಳಿಸಲ್ಪಟ್ಟಿದ್ದರು, ಆದುದರಿಂದ ನಾನು ಅವರನ್ನು ಗುರುತಿಸಿ, ಒಟ್ಟಿಗೆ ನಾವು ಕ್ರಮವಾಗಿ ಬೈಬಲನ್ನು ಅಭ್ಯಸಿಸಿದೆವು. ಶಾಸ್ತ್ರಗಳಿಂದ ಹೆಚ್ಚಿನ ಜ್ಞಾನವನ್ನು ಮತ್ತು ನಮ್ಮ ವಿಶ್ವಾಸಾರ್ಹ ದೇವರಾದ ಯೆಹೋವನ ಉತ್ತಮವಾದ ತಿಳಿವಳಿಕೆಯನ್ನು ಪಡೆಯುವಂತೆ ಅವರು ನನಗೆ ಸಹಾಯ ಮಾಡಿದರು.
1947ರಲ್ಲಿ ನನ್ನ ಶಿಕ್ಷೆಯ ಅವಧಿಯು ಕೊನೆಗೊಂಡಾಗ, ನಾನು ಸಾರ್ವಜನಿಕ ಫಿರ್ಯಾದಿಯ ಆಫೀಸಿಗೆ ಕರೆಯಲ್ಪಟ್ಟೆ. ನನ್ನ ನಡತೆಯಿಂದ ತಾನು ಪ್ರಭಾವಿಸಲ್ಪಟ್ಟಿದ್ದೇನೆಂದು ಮತ್ತು ನಾನು ಮುಂದೆ ಎಂದಾದರೂ ಗಡೀಪಾರುಗೊಳಿಸಲ್ಪಡುವಲ್ಲಿ ಅವನ ಹೆಸರನ್ನು ಭರವಸೆಯ ಹೆಸರಾಗಿ ಉಪಯೋಗಿಸಸಾಧ್ಯವಿತ್ತೆಂದು ಅವನು ನನಗೆ ಹೇಳಿದನು. ನಾನು ಗಡೀಪಾರುಗೊಳಿಸಲ್ಪಟ್ಟಿದ್ದ ಸಮಯದಲ್ಲಿ ನನ್ನ ಕುಟುಂಬವು ಸ್ಥಳಾಂತರಿಸಿದ್ದ ಆ್ಯಥೆನ್ಸ್ಗೆ ನಾನು ಆಗಮಿಸಿದ ತರುವಾಯ, ಯೆಹೋವನ ಸಾಕ್ಷಿಗಳ ಒಂದು ಸಭೆಯೊಂದಿಗೆ ಸಹವಸಿಸಲಾರಂಭಿಸಿದೆ ಮತ್ತು ಬೇಗನೆ ಯೆಹೋವನಿಗೆ ನನ್ನ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನ ಪಡೆದುಕೊಂಡೆ.
ಮತಾಂತರಕ್ಕಾಗಿ ಆರೋಪ ಹೊರಿಸಲ್ಪಟ್ಟದ್ದು
ದಶಕಗಳ ವರೆಗೆ, 1938 ಮತ್ತು 1939ರಲ್ಲಿ ಜಾರಿಗೊಳಿಸಲ್ಪಟ್ಟ, ಮತಾಂತರವನ್ನು ನಿಷೇಧಿಸುವ ನಿಯಮಗಳ ಕೆಳಗೆ ಗ್ರೀಸ್ ದೇಶವು, ಯೆಹೋವನ ಸಾಕ್ಷಿಗಳ ಮೇಲೆ ಕಾನೂನುಕ್ರಮವನ್ನು ಕೈಕೊಂಡಿತು. ಹೀಗೆ, 1938ರಿಂದ 1992ರ ವರೆಗೆ, ಗ್ರೀಸ್ನಲ್ಲಿ ಸಾಕ್ಷಿಗಳ 19,147 ದಸ್ತಗಿರಿಗಳು ಮಾಡಲ್ಪಟ್ಟವು, ಮತ್ತು ನ್ಯಾಯಾಲಯಗಳು ಒಟ್ಟು 753 ವರ್ಷಗಳ ಶಿಕ್ಷೆಗಳನ್ನು ವಿಧಿಸಿದವು, ಅವುಗಳಲ್ಲಿ 593 ವರ್ಷಗಳು ವಾಸ್ತವವಾಗಿ ಸೆರೆಮನೆಯಲ್ಲಿ ಅನುಭವಿಸಲ್ಪಟ್ಟವು. ವೈಯಕ್ತಿಕವಾಗಿ ನಾನು, ದೇವರ ರಾಜ್ಯದ ಸುವಾರ್ತೆಯನ್ನು ಸಾರಿದುದಕ್ಕಾಗಿ 40ಕ್ಕಿಂತಲೂ ಹೆಚ್ಚು ಬಾರಿ ದಸ್ತಗಿರಿ ಮಾಡಲ್ಪಟ್ಟೆ, ಮತ್ತು ಒಟ್ಟಿಗೆ ವಿಭಿನ್ನ ಸೆರೆಮನೆಗಳಲ್ಲಿ 27 ತಿಂಗಳುಗಳ ಕಾರಾಗೃಹವಾಸವನ್ನು ಅನುಭವಿಸಿದೆ.
ಕಾಲ್ಕೀಸ್ನಲ್ಲಿನ ಒಬ್ಬ ಗ್ರೀಕ್ ಆರ್ತೊಡಾಕ್ಸ್ ಪಾದ್ರಿಗೆ ನಾನು ಬರೆದಿದ್ದ ಒಂದು ಪತ್ರದ ಫಲಸ್ವರೂಪವಾಗಿ ನನ್ನ ದಸ್ತಗಿರಿಗಳಲ್ಲೊಂದು ಬಂದಿತು. 1955ರಲ್ಲಿ, ಯೆಹೋವನ ಸಾಕ್ಷಿಗಳ ಸಭೆಗಳು, ಕ್ರೈಸ್ತಪ್ರಪಂಚ ಅಥವಾ ಕ್ರೈಸ್ತತ್ವ—ಯಾವುದು “ಲೋಕದ ಬೆಳಕಾಗಿದೆ”? (ಇಂಗ್ಲಿಷ್) ಎಂಬ ಪುಸ್ತಿಕೆಯನ್ನು ಎಲ್ಲ ಪಾದ್ರಿಗಳಿಗೆ ಕಳುಹಿಸುವಂತೆ ಪ್ರೇರೇಪಿಸಲ್ಪಟ್ಟಿದ್ದವು. ನಾನು ಯಾವ ಪಾದ್ರಿಗೆ ಬರೆದಿದ್ದೆನೊ, ಆ ಉನ್ನತ ಶ್ರೇಣಿಯ ಪಾದ್ರಿಯು ಮತಾಂತರಕ್ಕಾಗಿ ನನ್ನ ಮೇಲೆ ದಾವೆಹೂಡಿದನು. ವಿಚಾರಣೆಯ ಸಮಯದಲ್ಲಿ, ಸಾಕ್ಷಿ ವಕೀಲನು ಮತ್ತು ಸ್ಥಳೀಯ ವಕೀಲನು, ಇಬ್ಬರೂ, ದೇವರ ರಾಜ್ಯದ ಕುರಿತಾದ ಸುವಾರ್ತೆಯನ್ನು ಸಾರಲು ನಿಜ ಕ್ರೈಸ್ತರಿಗಿರುವ ಕರ್ತವ್ಯವನ್ನು ವಿವರಿಸುತ್ತಾ, ಒಂದು ಪರಿಣತಿಯ ಪ್ರತಿವಾದವನ್ನು ಮಂಡಿಸಿದರು.—ಮತ್ತಾಯ 24:14.
ನ್ಯಾಯಾಲಯದ ಅಧ್ಯಕ್ಷತೆ ವಹಿಸುತ್ತಿದ್ದ ನ್ಯಾಯಾಧೀಶನು ಚರ್ಚಿನ ಮುಖ್ಯಾಧಿಕಾರಿ (ಬಿಷಪನಿಗಿಂತ ಕಡಿಮೆ ದರ್ಜೆಯ ಚರ್ಚಿನ ಒಬ್ಬ ಅಧಿಕಾರಿ)ಯನ್ನು ಹೀಗೆ ಕೇಳಿದನು: “ನೀನು ಪತ್ರವನ್ನೂ ಪುಸ್ತಿಕೆಯನ್ನೂ ಓದಿದೆಯೊ?”
“ಇಲ್ಲ, ನಾನು ಲಕೋಟೆಯನ್ನು ತೆರೆದ ಕೂಡಲೇ ಅವುಗಳನ್ನು ಹರಿದು, ಎಸೆದುಬಿಟ್ಟೆ!” ಎಂದು ಅವನು ಆವೇಶದಿಂದ ಉತ್ತರಿಸಿದನು.
“ಹಾಗಾದರೆ, ಈ ಮನುಷ್ಯನು ನಿನ್ನನ್ನು ಮತಾಂತರಿಸಿದನೆಂದು ನೀನು ಹೇಗೆ ಹೇಳಬಲ್ಲೆ?” ಎಂದು ಅಧ್ಯಕ್ಷತೆ ವಹಿಸುತ್ತಿದ್ದ ನ್ಯಾಯಾಧೀಶನು ಕೇಳಿದನು.
ಮುಂದೆ ನಮ್ಮ ವಕೀಲನು, ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳ ಇಡೀ ರಾಶಿಗಳನ್ನು ದಾನವಾಗಿ ನೀಡಿದ ಪ್ರೊಫೆಸರುಗಳ ಹಾಗೂ ಇತರರ ಉದಾಹರಣೆಗಳನ್ನು ಉದ್ಧರಿಸಿದನು. “ಆ ಜನರು ಇತರರನ್ನು ಮತಾಂತರಿಸಲು ಪ್ರಯತ್ನಿಸಿದರೆಂದು ನೀನು ಹೇಳುವಿಯೊ?” ಎಂದು ಅವನು ಕೇಳಿದನು.
ಸ್ಪಷ್ಟವಾಗಿಯೇ ಇಂತಹ ಚಟುವಟಿಕೆಯು ಮತಾಂತರಿಸುವುದನ್ನು ಅರ್ಥೈಸಲಿಲ್ಲ. “ತಪ್ಪಿತಸ್ಥನಲ್ಲ” ಎಂಬ ತೀರ್ಮಾನವನ್ನು ನಾನು ಕೇಳಿದಾಗ, ಯೆಹೋವನಿಗೆ ನಾನು ಉಪಕಾರ ಸಲ್ಲಿಸಿದೆ.
ನನ್ನ ಮಗನ ಮರಣ
ನನ್ನ ಮಗನಾದ ಯಾರ್ಗೊಸ್ ಸಹ ಸತತವಾಗಿ ಪೀಡಿಸಲ್ಪಟ್ಟನು, ಸಾಮಾನ್ಯವಾಗಿ ಆರ್ತೊಡಾಕ್ಸ್ ಪಾದ್ರಿಗಳ ಪ್ರೇರೇಪಣೆಯಿಂದಾಗಿ. ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ತನ್ನ ಯೌವನಭರಿತ ಹುರುಪಿನಿಂದಾಗಿ, ಅವನು ಸಹ ಹಲವಾರು ಬಾರಿ ದಸ್ತಗಿರಿ ಮಾಡಲ್ಪಟ್ಟನು. ಕೊನೆಗೆ, ವಿರೋಧಿಗಳು ಅವನನ್ನು ಕೊಲ್ಲಲು ಮತ್ತು ಅದೇ ಸಮಯದಲ್ಲಿ ಸಾರುವುದನ್ನು ನಿಲ್ಲಿಸುವಂತೆ ನಮ್ಮಲ್ಲಿ ಉಳಿದವರಿಗೆ ಒಂದು ಎಚ್ಚರಿಕೆಯನ್ನು ತಲಪಿಸಲು ನಿರ್ಧರಿಸಿದರು.
ಯಾರ್ಗೊಸ್ನ ಮರಣವನ್ನು ವರದಿಸಲು ನಮ್ಮ ಮನೆಗೆ ಬಂದ ಪೊಲೀಸ್ ಸಿಪಾಯಿಯು ಹೇಳಿದ್ದೇನೆಂದರೆ, ನಮ್ಮ ಮಗನನ್ನು ಕೊಲ್ಲಲು ಗ್ರೀಕ್ ಆರ್ತೊಡಾಕ್ಸ್ ಪಾದ್ರಿಯು ಮತ್ತು ಕೆಲವು ಪ್ಯಾರಮಿಲಿಟರಿ ನಾಯಕರು ಹೂಟಹೂಡಿದ್ದರು. ಇಂತಹ “ಅಪಘಾತಗಳು” ಆ ಅಪಾಯಕರ ಸಮಯಗಳಲ್ಲಿ ಸಾಮಾನ್ಯವಾದ ವಿಷಯವಾಗಿದ್ದವು. ಅವನ ಮರಣವು ಉಂಟುಮಾಡಿದ ದುಃಖದ ಹೊರತೂ, ಸಾರುವ ಕೆಲಸದಲ್ಲಿ ಸಕ್ರಿಯರಾಗಿ ಉಳಿಯುವ ಮತ್ತು ಯೆಹೋವನಲ್ಲಿ ಸಂಪೂರ್ಣವಾಗಿ ಭರವಸೆಯಿಡುವ ನಮ್ಮ ನಿರ್ಧಾರವು ಬಲಗೊಳಿಸಲ್ಪಟ್ಟಿತು.
ಯೆಹೋವನಲ್ಲಿ ಭರವಸೆಯಿಡುವಂತೆ ಇತರರಿಗೆ ಸಹಾಯ ಮಾಡುವುದು
1960ಗಳ ಮಧ್ಯಭಾಗದಲ್ಲಿ, ನನ್ನ ಹೆಂಡತಿ ಮತ್ತು ಮಕ್ಕಳು, ಆ್ಯಥೆನ್ಸ್ನಿಂದ ಸುಮಾರು 50 ಕಿಲೊಮೀಟರುಗಳ ದೂರದಲ್ಲಿರುವ ಕರಾವಳಿ ಹಳ್ಳಿಯಾದ ಸ್ಕಾಲಾ ಆರೊಪಸ್ನಲ್ಲಿ, ಬೇಸಗೆಯ ತಿಂಗಳುಗಳನ್ನು ಕಳೆಯುತ್ತಿದ್ದರು. ಆ ಸಮಯದಲ್ಲಿ ಸಾಕ್ಷಿಗಳಾರೂ ಅಲ್ಲಿ ಜೀವಿಸಲಿಲ್ಲ, ಆದುದರಿಂದ ನೆರೆಯವರಿಗೆ ನಾವು ಅನೌಪಚಾರಿಕ ಸಾಕ್ಷಿನೀಡಿದೆವು. ಕೆಲವು ಸ್ಥಳೀಯ ರೈತರು ಅನುಕೂಲಕರವಾಗಿ ಪ್ರತಿಕ್ರಿಯಿಸಿದರು. ಹಗಲಿನಲ್ಲಿ ಪುರುಷರು ತಮ್ಮ ಹೊಲಗಳಲ್ಲಿ ದೀರ್ಘ ಸಮಯದ ವರೆಗೆ ಕೆಲಸಮಾಡಿದ ಕಾರಣ, ಅವರೊಂದಿಗೆ ನಾವು ರಾತ್ರಿಯಲ್ಲಿ ತಡವಾಗಿ ಬೈಬಲ್ ಅಧ್ಯಯನಗಳನ್ನು ನಡೆಸಿದೆವು, ಮತ್ತು ಅವರಲ್ಲಿ ಅನೇಕರು ಸಾಕ್ಷಿಗಳಾದರು.
ಯೆಹೋವನು ನಮ್ಮ ಪ್ರಯತ್ನಗಳನ್ನು ಆಶೀರ್ವದಿಸುತ್ತಿರುವುದನ್ನು ನೋಡಿ, ಸುಮಾರು 15 ವರ್ಷಗಳ ವರೆಗೆ, ಆಸಕ್ತ ಜನರೊಂದಿಗೆ ಬೈಬಲ್ ಅಧ್ಯಯನಗಳನ್ನು ನಡೆಸುವ ಸಲುವಾಗಿ ನಾವು ಪ್ರತಿ ವಾರ ಅಲ್ಲಿಗೆ ಪ್ರಯಾಣಿಸಿದೆವು. ಅಲ್ಲಿ ನಾವು ಅಭ್ಯಸಿಸಿದ ಸುಮಾರು 30 ಜನರು ದೀಕ್ಷಾಸ್ನಾನದ ಹಂತದ ವರೆಗೆ ಪ್ರಗತಿಮಾಡಿದ್ದಾರೆ. ಆರಂಭದಲ್ಲಿ ಒಂದು ಅಧ್ಯಯನ ಗುಂಪನ್ನು ರಚಿಸಲಾಯಿತು, ಮತ್ತು ಕೂಟಗಳನ್ನು ನಡೆಸಲು ನಾನು ನೇಮಿಸಲ್ಪಟ್ಟೆ. ತದನಂತರ ಆ ಗುಂಪು ಒಂದು ಸಭೆಯಾಯಿತು, ಮತ್ತು ಇಂದು ಆ ಕ್ಷೇತ್ರದಿಂದ ಬಂದ ಒಂದು ನೂರು ಸಾಕ್ಷಿಗಳಿಗಿಂತಲೂ ಹೆಚ್ಚಿನ ಜನರು, ಮಾಲಾಕಾಸಾ ಸಭೆಯನ್ನು ರೂಪಿಸುತ್ತಾರೆ. ನಾವು ಸಹಾಯ ಮಾಡಿದ ವ್ಯಕ್ತಿಗಳಲ್ಲಿ ನಾಲ್ವರು ಈಗ ಪೂರ್ಣ ಸಮಯದ ಶುಶ್ರೂಷಕರೋಪಾದಿ ಸೇವೆಮಾಡುತ್ತಿರುವುದಕ್ಕಾಗಿ ನಾವು ಹರ್ಷಿಸುತ್ತೇವೆ.
ಸಮೃದ್ಧವಾದೊಂದು ಪರಂಪರೆ
ಯೆಹೋವನಿಗೆ ನನ್ನ ಜೀವನವನ್ನು ನಾನು ಸಮರ್ಪಿಸಿದ ಸ್ವಲ್ಪ ಸಮಯದಲ್ಲೆ, ನನ್ನ ಹೆಂಡತಿಯು ಆತ್ಮಿಕವಾಗಿ ಪ್ರಗತಿಮಾಡಲಾರಂಭಿಸಿದಳು ಮತ್ತು ದೀಕ್ಷಾಸ್ನಾನಪಡೆದುಕೊಂಡಳು. ಹಿಂಸೆಯ ಕಷ್ಟಕರವಾದ ಆ ಅವಧಿಯಲ್ಲಿ, ಆಕೆಯ ನಂಬಿಕೆಯು ಬಲವಾಗಿ ಉಳಿಯಿತು ಮತ್ತು ಆಕೆ ತನ್ನ ಸಮಗ್ರತೆಯಲ್ಲಿ ದೃಢವಾಗಿಯೂ ಕದಲದೆಯೂ ಇದ್ದಳು. ನನ್ನ ಅಡಿಗಡಿಗೆ ಸಂಭವಿಸಿದ ಬಂಧನಗಳ ಫಲಸ್ವರೂಪವಾಗಿ ಅನುಭವಿಸಿದ ಅನೇಕ ತೊಂದರೆಗಳ ಕುರಿತು ಆಕೆ ಎಂದೂ ಗೊಣಗಲಿಲ್ಲ.
ಅನೇಕ ವರ್ಷಗಳ ತನಕ, ನಾವು ಒಟ್ಟಿಗೆ ಅನೇಕ ಬೈಬಲ್ ಅಧ್ಯಯನಗಳನ್ನು ನಡೆಸಿದೆವು, ಮತ್ತು ಆಕೆ ತನ್ನ ಸರಳ ಹಾಗೂ ಉತ್ಸಾಹಭರಿತ ಸಮೀಪಿಸುವಿಕೆಯಿಂದ ಅನೇಕರಿಗೆ ಪರಿಣಾಮಕಾರಿಯಾಗಿ ಸಹಾಯ ಮಾಡಿದಳು. ಪ್ರಚಲಿತವಾಗಿ, ಆಕೆಗೊಂದು ಪತ್ರಿಕಾ ಪಥವಿದೆ; ಅದು, ಆಕೆ ಕ್ರಮವಾಗಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ವಿತರಿಸುವ ಅನೇಕ ಜನರನ್ನು ಒಳಗೊಳ್ಳುತ್ತದೆ.
ಮಹತ್ತರವಾಗಿ ನನ್ನ ಪ್ರಿಯ ಸಂಗಾತಿಯ ಬೆಂಬಲದಿಂದಾಗಿ, ಜೀವಿಸುತ್ತಿರುವ ನಮ್ಮ ಮೂವರು ಮಕ್ಕಳು ಮತ್ತು ಅವರ ಕುಟುಂಬಗಳು—ಅದು ಆರು ಮೊಮ್ಮಕ್ಕಳನ್ನು ಮತ್ತು ನಾಲ್ಕು ಮರಿಮೊಮ್ಮಕ್ಕಳನ್ನು ಒಳಗೊಳ್ಳುತ್ತದೆ—ಸಕಲರೂ ಯೆಹೋವನ ಸೇವೆಯಲ್ಲಿ ಸಕ್ರಿಯರಾಗಿರುತ್ತಾರೆ. ನನ್ನ ಹೆಂಡತಿ ಮತ್ತು ನಾನು ಎದುರಿಸಿದ ಹಿಂಸೆ ಮತ್ತು ಕಟುವಾದ ವಿರೋಧವನ್ನು ಅವರು ನಿಭಾಯಿಸಬೇಕಾಗಿರದಿದ್ದರೂ, ಅವರು ಯೆಹೋವನಲ್ಲಿ ತಮ್ಮ ಸಂಪೂರ್ಣವಾದ ಭರವಸೆಯನ್ನಿಟ್ಟಿದ್ದಾರೆ ಮತ್ತು ಆತನ ಮಾರ್ಗಗಳಲ್ಲಿ ನಡೆಯುವುದನ್ನು ಮುಂದುವರಿಸುತ್ತಾರೆ. ನಮ್ಮ ಪ್ರಿಯ ಯಾರ್ಗೊಸ್ ಪುನರುತ್ಥಾನದಲ್ಲಿ ಹಿಂದಿರುಗುವಾಗ ಅವನೊಂದಿಗೆ ನಾವೆಲ್ಲರೂ ಮತ್ತೆ ಒಂದಾಗಿ ಸೇರುವುದು ನಮಗೆಂತಹ ಒಂದು ಆನಂದವಾಗಿರುವುದು!
ಯೆಹೋವನಲ್ಲಿ ಭರವಸೆಯಿಡಲು ನಿಶ್ಚಯಿಸಿಕೊಂಡದ್ದು
ಈ ಎಲ್ಲ ವರ್ಷಗಳಲ್ಲಿ, ತನ್ನ ಜನರ ಮೇಲೆ ಯೆಹೋವನ ಆತ್ಮವು ಕಾರ್ಯಮಾಡುವುದನ್ನು ನಾನು ನೋಡಿದ್ದೇನೆ. ಆತನ ಆತ್ಮ-ನಿರ್ದೇಶಿತ ಸಂಸ್ಥೆಯು, ನಾವು ಮಾನವರ ಪ್ರಯತ್ನಗಳಲ್ಲಿ ನಮ್ಮ ಭರವಸೆಯನ್ನು ಇಡಸಾಧ್ಯವಿಲ್ಲ ಎಂಬುದನ್ನು ಮನಗಾಣುವಂತೆ ನನಗೆ ಸಹಾಯ ಮಾಡಿದೆ. ಉತ್ತಮ ಭವಿಷ್ಯತ್ತಿಗಾಗಿರುವ ಅವರ ವಾಗ್ದಾನಗಳು ವ್ಯರ್ಥ, ವಾಸ್ತವದಲ್ಲಿ ಅವು ಕೇವಲ ಒಂದು ದೊಡ್ಡ ಸುಳ್ಳಾಗಿವೆ.—ಕೀರ್ತನೆ 146:3, 4.
ವಯಸ್ಸಾಗುವಿಕೆ ಹಾಗೂ ತೀವ್ರವಾದ ಆರೋಗ್ಯ ಸಮಸ್ಯೆಗಳ ಹೊರತೂ, ನನ್ನ ಕಣ್ಣುಗಳು ರಾಜ್ಯ ನಿರೀಕ್ಷೆಯ ವಾಸ್ತವಿಕತೆಯ ಮೇಲೆ ಕೇಂದ್ರೀಕೃತವಾಗಿವೆ. ಸುಳ್ಳು ಧರ್ಮಕ್ಕೆ ಮೀಸಲಾಗಿಟ್ಟ ಮತ್ತು ರಾಜಕೀಯ ಮಾಧ್ಯಮಗಳ ಮುಖಾಂತರ ಉತ್ತಮ ಪರಿಸ್ಥಿತಿಗಳನ್ನು ತರಲು ಪ್ರಯತ್ನಿಸುತ್ತಾ ವ್ಯಯಿಸಿದ ವರ್ಷಗಳ ಕುರಿತು ನಾನು ನಿಜವಾಗಿಯೂ ವಿಷಾದಿಸುತ್ತೇನೆ. ನಾನು ಪುನಃ ನನ್ನ ಜೀವನವನ್ನು ಜೀವಿಸಸಾಧ್ಯವಿರುತ್ತಿದ್ದಲ್ಲಿ, ನಿಸ್ಸಂದೇಹವಾಗಿ ನಾನು ವಿಶ್ವಾಸಾರ್ಹ ದೇವರಾದ ಯೆಹೋವನ ಸೇವೆಮಾಡಲು ಪುನಃ ನಿರ್ಧರಿಸುವೆ.
(ಕೀಮಾನ್ ಪ್ರೋಗಾಕೀಸ್ ಇತ್ತೀಚೆಗೆ ಮರಣದಲ್ಲಿ ನಿದ್ರೆಹೋದರು. ಅವರಿಗೆ ಭೂನಿರೀಕ್ಷೆಯಿತ್ತು.)
[ಪುಟ 26 ರಲ್ಲಿರುವ ಚಿತ್ರ]
ತಮ್ಮ ಹೆಂಡತಿ ಯಾನೂಲೇಯೊಂದಿಗೆ ಕೀಮಾನ್ರ ಇತ್ತೀಚಿನ ಒಂದು ಭಾವಚಿತ್ರ