ಯೆಹೋವನಿಗೆ ನ್ಯಾಯವಾಗಿ ಸಲ್ಲತಕ್ಕದ್ದನ್ನು ಸಲ್ಲಿಸುವುದು
ಟೀಮಾಲಿಯಾನ್ ವಾಸೀಲಿಯೂ ಅವರು ಹೇಳಿದಂತೆ
ಐಯಿತೋನೋಹಾರೀ ಎಂಬ ಹಳ್ಳಿಯಲ್ಲಿ ಬೈಬಲನ್ನು ಬೋಧಿಸುತ್ತಿದ್ದುದಕ್ಕಾಗಿ ನನ್ನನ್ನು ಬಂಧಿಸಲಾಯಿತು. ಪೊಲೀಸರು ನನ್ನ ಷೂಗಳನ್ನು ಬಿಚ್ಚಿ, ನನ್ನ ಅಂಗಾಲುಗಳ ಮೇಲೆ ಹೊಡೆಯಲಾರಂಭಿಸಿದರು. ಹಾಗೆ ಹೊಡೆಯುತ್ತಿದ್ದಾಗ ನನ್ನ ಕಾಲು ಮರಗಟ್ಟಿಹೋಯಿತು ಮತ್ತು ಆ ಬಳಿಕ ನನಗೆ ನೋವೇ ಆಗಲಿಲ್ಲ. ಆ ಸಮಯದಲ್ಲಿ ಸರ್ವಸಾಮಾನ್ಯವಾಗಿದ್ದ ಇಂತಹ ದೌರ್ಜನ್ಯಕ್ಕೆ ಕಾರಣವೇನು ಎಂಬುದನ್ನು ವಿವರಿಸುವುದಕ್ಕೆ ಮೊದಲು, ನಾನು ಹೇಗೆ ಒಬ್ಬ ಬೈಬಲ್ ಶಿಕ್ಷಕನಾದೆ ಎಂಬುದನ್ನು ತಿಳಿಸಲು ಬಯಸುತ್ತೇನೆ.
ಇಸವಿ 1921ರಲ್ಲಿ ನಾನು ಜನಿಸಿದ ಕೂಡಲೆ, ಉತ್ತರ ಗ್ರೀಸ್ನಲ್ಲಿರುವ ರಾಡಾಲೀವಾಸ್ ಪಟ್ಟಣಕ್ಕೆ ನಮ್ಮ ಕುಟುಂಬವು ಸ್ಥಳಾಂತರಿಸಿತು. ನಾನು ಯುವಕನಾಗಿದ್ದಾಗ ತೀರ ಸ್ವಚ್ಛಂದ ಜೀವಿತವನ್ನು ನಡೆಸುತ್ತಿದ್ದೆ. ಸುಮಾರು 11 ವರ್ಷ ಪ್ರಾಯದವನಾಗಿದ್ದಾಗ ಧೂಮಪಾನಮಾಡಲು ಆರಂಭಿಸಿದೆ. ತದನಂತರ, ನಾನು ಕುಡುಕನಾದೆ, ಜೂಜುಕೋರನಾದೆ, ಮತ್ತು ಹೆಚ್ಚುಕಡಿಮೆ ಪ್ರತಿದಿನ ಪಾರ್ಟಿಗಳಿಗೆ ಹೋಗುತ್ತಿದ್ದೆ. ನನ್ನಲ್ಲಿ ಸಂಗೀತದ ಕಲೆಯಿತ್ತು, ಆದುದರಿಂದ ನಮ್ಮ ಊರಿನಲ್ಲೇ ಇದ್ದ ಮ್ಯೂಸಿಕ್ ಬ್ಯಾಂಡಿಗೆ ನಾನು ಸೇರಿಕೊಂಡೆ. ಒಂದೇ ವರ್ಷದಲ್ಲಿ ನಾನು ಮ್ಯೂಸಿಕ್ ಬ್ಯಾಂಡ್ನ ಬಹುತೇಕ ವಾದ್ಯಗಳನ್ನು ಬಾರಿಸಲು ಕಲಿತುಕೊಂಡಿದ್ದೆ. ಆದರೂ, ಅದೇ ಸಮಯದಲ್ಲಿ ನಾನು ಓದುವುದರಲ್ಲಿ ತುಂಬ ಆಸಕ್ತನಾಗಿದ್ದೆ ಮತ್ತು ನ್ಯಾಯಪ್ರಿಯನಾಗಿದ್ದೆ.
1940ರ ಆರಂಭದಲ್ಲಿ, IIನೆಯ ಲೋಕ ಯುದ್ಧವು ಪ್ರಬಲವಾಗುತ್ತಿದ್ದಾಗ, ಒಂದು ಚಿಕ್ಕ ಹುಡುಗಿಯ ಶವಸಂಸ್ಕಾರದಲ್ಲಿ ವಾದ್ಯವನ್ನು ನುಡಿಸುವಂತೆ ನಮ್ಮ ಮ್ಯೂಸಿಕ್ ಬ್ಯಾಂಡಿಗೆ ಕರೆಬಂತು. ಶ್ಮಶಾನದಲ್ಲಿ, ಸಂಬಂಧಿಕರು ಮತ್ತು ಸ್ನೇಹಿತರು ತುಂಬ ದುಃಖದಿಂದ ರೋದಿಸುತ್ತಿದ್ದರು. ಅವರ ಆಶಾರಹಿತಸ್ಥಿತಿಯು ನನ್ನ ಮೇಲೆ ಗಾಢವಾದ ಪರಿಣಾಮವನ್ನು ಬೀರಿತು. ‘ನಾವೇಕೆ ಸಾಯುತ್ತೇವೆ? ನಾವು ಸ್ವಲ್ಪ ಕಾಲಾವಧಿಯ ವರೆಗೆ ಜೀವಿಸುವುದಕ್ಕಿಂತಲೂ ಹೆಚ್ಚಿನದ್ದು ಈ ಜೀವಿತಕ್ಕೆ ಇದೆಯೊ? ಇವುಗಳಿಗೆ ಉತ್ತರಗಳನ್ನು ನಾನೆಲ್ಲಿ ಕಂಡುಕೊಳ್ಳಬಲ್ಲೆ?’ ಎಂದು ನಾನು ಯೋಚಿಸಲಾರಂಭಿಸಿದೆ.
ಕೆಲವು ದಿನಗಳ ಬಳಿಕ, ನನ್ನ ಮನೆಯ ಕಪಾಟಿನಲ್ಲಿ ಹೊಸ ಒಡಂಬಡಿಕೆಯ ಒಂದು ಪ್ರತಿಯನ್ನು ನಾನು ನೋಡಿದೆ. ನಾನು ಅದನ್ನು ತೆಗೆದುಕೊಂಡು ಓದಲಾರಂಭಿಸಿದೆ. ಯೇಸುವಿನ ಸಾನ್ನಿಧ್ಯದ ಸೂಚನೆಯ ಒಂದು ಭಾಗದೋಪಾದಿ ವ್ಯಾಪಕವಾಗಿ ನಡೆಯುವಂತಹ ಯುದ್ಧಗಳ ಕುರಿತು ಮತ್ತಾಯ 24:7ರಲ್ಲಿ ತಿಳಿಸಲ್ಪಟ್ಟಿರುವ ಅವನ ಮಾತುಗಳನ್ನು ನಾನು ಓದಿದಾಗ, ಅವು ನಮ್ಮ ಸಮಯಕ್ಕೇ ಅನ್ವಯವಾಗುತ್ತವೆ ಎಂಬುದನ್ನು ಅರ್ಥಮಾಡಿಕೊಂಡೆ. ಮುಂದಿನ ವಾರಗಳಲ್ಲಿ, ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳ ಈ ಪ್ರತಿಯನ್ನು ನಾನು ಅನೇಕಬಾರಿ ಓದಿದೆ.
ತದನಂತರ, 1940ರ ಡಿಸೆಂಬರ್ ತಿಂಗಳಿನಲ್ಲಿ, ಸಮೀಪದಲ್ಲಿದ್ದ ಒಂದು ಕುಟುಂಬವನ್ನು—ಒಬ್ಬ ವಿಧವೆ ಮತ್ತು ಅವಳ ಐದು ಮಂದಿ ಮಕ್ಕಳು—ನಾನು ಭೇಟಿಮಾಡಿದೆ. ಅವರ ಮನೆಯ ಅಟ್ಟದ ಮೇಲೆ ಅನೇಕ ಪುಸ್ತಿಕೆಗಳ ಒಂದು ರಾಶಿಯನ್ನು ನಾನು ನೋಡಿದೆ, ಮತ್ತು ಅವುಗಳ ಮಧ್ಯೆ ಒಂದು ಅಪೇಕ್ಷಿತ ಸರಕಾರ (ಇಂಗ್ಲಿಷ್) ಎಂಬ ಮೇಲ್ಬರಹವಿದ್ದ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿದ್ದ ಒಂದು ಪುಸ್ತಿಕೆಯಿತ್ತು. ಅಟ್ಟದ ಮೇಲೆಯೇ ಕುಳಿತುಕೊಂಡು ನಾನು ಇಡೀ ಪುಸ್ತಿಕೆಯನ್ನು ಓದಿಮುಗಿಸಿದೆ. ನಾನು ಏನನ್ನು ಓದಿದೆನೋ ಅದರಿಂದ, ನಾವು ಖಂಡಿತವಾಗಿಯೂ ಬೈಬಲು ಯಾವುದನ್ನು “ಕಡೇ ದಿವಸಗಳು” ಎಂದು ಕರೆಯುತ್ತದೋ ಆ ದಿನಗಳಲ್ಲಿ ಜೀವಿಸುತ್ತಿದ್ದೇವೆ ಮತ್ತು ಅತಿ ಬೇಗನೆ ಯೆಹೋವ ದೇವರು ಈ ವಿಷಯಗಳ ವ್ಯವಸ್ಥೆಗೆ ಅಂತ್ಯವನ್ನು ತರುವನು ಹಾಗೂ ಇದಕ್ಕೆ ಬದಲಾಗಿ ಒಂದು ನೀತಿಯ ಹೊಸ ಲೋಕವನ್ನು ನಿರ್ಮಿಸುವನು ಎಂಬುದು ನನಗೆ ಸಂಪೂರ್ಣವಾಗಿ ಮನದಟ್ಟಾಯಿತು.—2 ತಿಮೊಥೆಯ 3:1-5; 2 ಪೇತ್ರ 3:13.
ನಂಬಿಗಸ್ತ ಜನರು ಭೂಪ್ರಮೋದವನವೊಂದರಲ್ಲಿ ಸದಾಕಾಲ ಜೀವಿಸುವರು ಹಾಗೂ ದೇವರ ರಾಜ್ಯದ ಆಳ್ವಿಕೆಯ ಕೆಳಗೆ ಸ್ಥಾಪಿಸಲ್ಪಡುವ ಹೊಸ ಲೋಕದಲ್ಲಿ ಇನ್ನೆಂದಿಗೂ ಕಷ್ಟಾನುಭವ ಹಾಗೂ ಮರಣವು ಇರುವುದಿಲ್ಲ ಎಂಬ ಶಾಸ್ತ್ರೀಯ ಪುರಾವೆಯು ನನ್ನ ಮೇಲೆ ವಿಶೇಷವಾಗಿ ಪ್ರಭಾವ ಬೀರಿತು. (ಕೀರ್ತನೆ 37:9-11, 29; ಪ್ರಕಟನೆ 21:3, 4) ನಾನು ಓದುತ್ತಿದ್ದಾಗ, ಈ ಎಲ್ಲ ಸಂಗತಿಗಳಿಗಾಗಿ ಯೆಹೋವನಿಗೆ ಪ್ರಾರ್ಥನೆಯಲ್ಲಿ ಉಪಕಾರ ಹೇಳಿದೆ ಮತ್ತು ಆತನ ಆವಶ್ಯಕತೆಗಳೇನು ಎಂಬುದನ್ನು ತೋರಿಸುವಂತೆ ನಾನು ಆತನ ಬಳಿ ಬೇಡಿಕೊಂಡೆ. ಯೆಹೋವ ದೇವರು ನನ್ನ ಪೂರ್ಣಪ್ರಾಣದ ಆರಾಧನೆಗೆ ಅರ್ಹನಾಗಿದ್ದಾನೆ ಎಂಬುದು ನನಗೆ ಸ್ಪಷ್ಟವಾಗಿ ಗೊತ್ತಾಯಿತು.—ಮತ್ತಾಯ 22:37.
ನಾನು ಕಲಿತ ವಿಷಯಕ್ಕನುಸಾರ ಕಾರ್ಯನಡಿಸಿದ್ದು
ಆ ಸಮಯದಿಂದ ನಾನು ಧೂಮಪಾನವನ್ನು, ಕುಡಿತವನ್ನು, ಹಾಗೂ ಜೂಜಾಟವನ್ನು ನಿಲ್ಲಿಸಿಬಿಟ್ಟೆ. ಆ ವಿಧವೆಯ ಐದು ಮಂದಿ ಮಕ್ಕಳನ್ನು ಹಾಗೂ ನನ್ನ ಕಿರಿಯ ತಮ್ಮತಂಗಿಯರನ್ನು ಒಟ್ಟುಗೂಡಿಸಿಕೊಂಡು, ಆ ಪುಸ್ತಿಕೆಯಿಂದ ನಾನು ಏನನ್ನು ಕಲಿತಿದ್ದೆನೋ ಅದನ್ನು ಅವರಿಗೆ ವಿವರಿಸಿದೆ. ಸ್ವಲ್ಪ ಸಮಯಾನಂತರ, ನಮಗೆ ಗೊತ್ತಿದ್ದ ಅಲ್ಪಸ್ವಲ್ಪ ವಿಷಯಗಳನ್ನೇ ನಾವು ಬೇರೆಯವರಿಗೂ ಹೇಳತೊಡಗಿದೆವು. ನಮ್ಮ ಸಮುದಾಯದಲ್ಲಿ ನಾವು ಯೆಹೋವನ ಸಾಕ್ಷಿಗಳೆಂದು ಪ್ರಸಿದ್ಧರಾದೆವು, ಆದರೆ ಇಷ್ಟರ ತನಕ ನಾವು ಒಬ್ಬನೇ ಒಬ್ಬ ಸಾಕ್ಷಿಯನ್ನೂ ಸಂಧಿಸಿರಲಿಲ್ಲ. ಆರಂಭದಿಂದಲೇ, ನಾನು ಕಲಿತುಕೊಂಡಿದ್ದ ಅದ್ಭುತಕರ ವಿಷಯಗಳನ್ನು ಇತರರಿಗೆ ತಿಳಿಯಪಡಿಸುವುದರಲ್ಲಿ ಪ್ರತಿ ತಿಂಗಳು ನೂರಕ್ಕಿಂತಲೂ ಹೆಚ್ಚು ತಾಸುಗಳನ್ನು ವ್ಯಯಿಸಿದೆ.
ಸ್ಥಳಿಕ ಗ್ರೀಕ್ ಆರ್ತೊಡಾಕ್ಸ್ ಚರ್ಚಿನ ಪಾದ್ರಿಗಳಲ್ಲಿ ಒಬ್ಬನು ಮೇಯರ್ನ ಬಳಿಗೆ ಹೋಗಿ ನಮ್ಮ ಬಗ್ಗೆ ದೂರು ಹೇಳಿದನು. ಆದರೆ ಕೆಲವು ದಿನಗಳ ಮುಂಚೆ, ಒಬ್ಬ ಯುವ ಸಾಕ್ಷಿಯು ತಪ್ಪಿಸಿಕೊಂಡಿದ್ದ ಒಂದು ಕುದುರೆಯನ್ನು ಕಂಡುಹಿಡಿದು, ಅದರ ಒಡೆಯನಿಗೆ ಅದನ್ನು ಹಿಂದಿರುಗಿಸಿದ್ದನು. ಈ ವಿಚಾರವು ನಮಗೆ ಗೊತ್ತಿರಲಿಲ್ಲ. ಇಂತಹ ಪ್ರಾಮಾಣಿಕತೆಯ ಫಲಿತಾಂಶವಾಗಿ, ಮೇಯರ್ ಸಾಕ್ಷಿಗಳಿಗೆ ತುಂಬ ಮರ್ಯಾದೆ ತೋರಿಸುತ್ತಿದ್ದು, ಪಾದ್ರಿಯ ಮಾತಿಗೆ ಕಿವಿಗೊಡಲು ನಿರಾಕರಿಸಿದನು.
1941ರ ಅಕ್ಟೋಬರ್ ತಿಂಗಳಿನಲ್ಲಿ, ಒಂದು ದಿನ ನಾನು ಮಾರುಕಟ್ಟೆಯಲ್ಲಿ ಸಾಕ್ಷಿನೀಡುತ್ತಿದ್ದಾಗ, ಸಮೀಪದಲ್ಲಿಯೇ ಇದ್ದ ಒಂದು ಪಟ್ಟಣದಲ್ಲಿ ವಾಸಿಸುತ್ತಿದ್ದ ಯೆಹೋವನ ಸಾಕ್ಷಿಯೊಬ್ಬನ ಕುರಿತು ಯಾರೋ ನನಗೆ ಹೇಳಿದರು. ಈ ಮುಂಚೆ ಅವನು ಒಬ್ಬ ಪೊಲೀಸನಾಗಿದ್ದು, ಅವನ ಹೆಸರು ಕ್ರೀಸ್ಟಾಸ್ ಟ್ರೀಆಂಟಾಫೀಲೂ ಎಂದಾಗಿತ್ತು. ನಾನು ಹೋಗಿ ಅವನನ್ನು ಭೇಟಿಯಾದೆ ಮತ್ತು 1932ರಿಂದ ಅವನೊಬ್ಬ ಯೆಹೋವನ ಸಾಕ್ಷಿಯಾಗಿದ್ದನೆಂಬುದನ್ನು ತಿಳಿದುಕೊಂಡೆ. ಅನೇಕ ಹಳೆಯ ವಾಚ್ ಟವರ್ ಪ್ರಕಾಶನಗಳನ್ನು ಅವನು ನನಗೆ ಕೊಟ್ಟಾಗ ನನಗೆಷ್ಟು ಸಂತೋಷವಾಯಿತು! ಇವು ಆತ್ಮಿಕ ಪ್ರಗತಿಯನ್ನು ಮಾಡಲು ನನಗೆ ಖಂಡಿತವಾಗಿಯೂ ಸಹಾಯ ಮಾಡಿದವು.
1943ರಲ್ಲಿ, ನೀರಿನ ದೀಕ್ಷಾಸ್ನಾನದ ಮೂಲಕ ನಾನು ನನ್ನ ಸಮರ್ಪಣೆಯನ್ನು ಸಂಕೇತಿಸಿದೆ. ಅಷ್ಟರಲ್ಲಾಗಲೇ ನಾನು ಡ್ರಾವೀಸ್ಕಾಸ್, ಪಾಲಿಆಕಾಮೀ, ಮತ್ತು ಮಾವ್ರಾಲಾಫಾಸ್ ಎಂಬ ನೆರೆಹೊರೆಯ ಮೂರು ಹಳ್ಳಿಗಳಲ್ಲಿ ಬೈಬಲ್ ಅಭ್ಯಾಸಗಳನ್ನು ನಡಿಸುತ್ತಿದ್ದೆ. ದೇವರ ವೀಣೆ (ಇಂಗ್ಲಿಷ್) ಎಂಬ ಪುಸ್ತಕವನ್ನು ನಾನು ಬೈಬಲ್ ಅಭ್ಯಾಸದ ಸಹಾಯಕವಾಗಿ ಉಪಯೋಗಿಸುತ್ತಿದ್ದೆ. ಕಾಲಕ್ರಮೇಣ, ಈ ಕ್ಷೇತ್ರದಲ್ಲಿ ಯೆಹೋವನ ಸಾಕ್ಷಿಗಳ ನಾಲ್ಕು ಸಭೆಗಳನ್ನು ನೋಡುವ ಸುಯೋಗವು ನನಗೆ ದೊರಕಿತು.
ಕಷ್ಟತೊಂದರೆಗಳ ಎದುರಿನಲ್ಲಿಯೂ ಸಾರುವುದು
1944ರಲ್ಲಿ, ಜರ್ಮನ್ ಸ್ವಾಧೀನಾನುಭವದಿಂದ ಗ್ರೀಕ್ ಬಿಡುಗಡೆ ಪಡೆಯಿತು, ಮತ್ತು ಸ್ವಲ್ಪ ಸಮಯಾನಂತರ ಆ್ಯಥೆನ್ಸ್ನಲ್ಲಿರುವ ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿನೊಂದಿಗೆ ಸಂಪರ್ಕವು ಸ್ಥಾಪಿಸಲ್ಪಟ್ಟಿತು. ಇಷ್ಟರ ತನಕ ಯಾರೂ ರಾಜ್ಯದ ಸಂದೇಶವನ್ನು ಸಾರಿರದಂತಹ ಒಂದು ಟೆರಿಟೊರಿಯಲ್ಲಿ ಸಾರುವಂತೆ ನನಗೆ ಬ್ರಾಂಚ್ ಕರೆನೀಡಿತು. ಅಲ್ಲಿಗೆ ಹೋದ ಬಳಿಕ ನಾನು ಮೂರು ತಿಂಗಳುಗಳ ವರೆಗೆ ಒಂದು ಫಾರ್ಮಿನಲ್ಲಿ ಕೆಲಸಮಾಡಿದೆ ಮತ್ತು ವರ್ಷದ ಉಳಿದ ಸಮಯವನ್ನು ಶುಶ್ರೂಷೆಯಲ್ಲಿ ಕಳೆದೆ.
ಆ ವರ್ಷವೇ ನನ್ನ ತಾಯಿ, ಆ ವಿಧವೆ, ಮತ್ತು ಅವಳ ಮಕ್ಕಳಲ್ಲಿ ನಾಲ್ಕು ಮಂದಿ ದೀಕ್ಷಾಸ್ನಾನ ಪಡೆದುಕೊಳ್ಳುವುದನ್ನು ನೋಡುವಂತಹ ಅವಕಾಶ ನನಗೆ ಸಿಕ್ಕಿತು. ಆ ವಿಧವೆಯ ಕಿರಿಯ—ಐದನೆಯ—ಮಗಳಾದ ಮಾರೀಆಂತೀ, 1943ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡು, ಅದೇ ವರ್ಷದ ನವೆಂಬರ್ ತಿಂಗಳಿನಲ್ಲಿ ನನ್ನ ಪ್ರಿಯ ಪತ್ನಿಯಾದಳು. ಮೂವತ್ತು ವರ್ಷಗಳ ಬಳಿಕ, ಅಂದರೆ 1974ರಲ್ಲಿ, ನನ್ನ ತಂದೆಯವರು ಸಹ ದೀಕ್ಷಾಸ್ನಾನ ಪಡೆದುಕೊಂಡರು.
1945ರ ಆರಂಭದಲ್ಲಿ, ಪ್ರಪ್ರಥಮ ಬಾರಿಗೆ ಮಿಮಿಯೊಗ್ರಾಫ್ ಮಾಡಲ್ಪಟ್ಟ ಕಾವಲಿನಬುರುಜು ಪತ್ರಿಕೆಯ ಪ್ರತಿಯನ್ನು ಬ್ರಾಂಚ್ ನಮಗೆ ಕಳುಹಿಸಿತು. “ಹೋಗಿ, ಎಲ್ಲ ದೇಶಗಳವರನ್ನು ಶಿಷ್ಯರನ್ನಾಗಿ ಮಾಡಿರಿ” ಎಂಬುದು ಅದರ ಮುಖ್ಯ ಲೇಖನದ ಶೀರ್ಷಿಕೆಯಾಗಿತ್ತು. (ಮತ್ತಾಯ 28:19, ದಿ ಎಂಫಾಟಿಕ್ ಡಯಾಗ್ಲೊಟ್) ಆ ಕೂಡಲೆ ಮಾರೀಆಂತೀ ಹಾಗೂ ನಾನು ನಮ್ಮ ಮನೆಯನ್ನು ಬಿಟ್ಟು, ಸ್ಟ್ರೈಮಾನ್ ನದಿಯ ಪೂರ್ವದಲ್ಲಿ ಬಹು ದೂರದಲ್ಲಿದ್ದ ಟೆರಿಟೊರಿಗಳಲ್ಲಿ ಸುವಾರ್ತೆಯನ್ನು ಸಾರಲು ಹೋದೆವು. ಸಮಯಾನಂತರ ಬೇರೆ ಸಾಕ್ಷಿಗಳು ಸಹ ನಮ್ಮ ಜೊತೆಗೂಡಿದರು.
ಕೆಲವೊಮ್ಮೆ ಒಂದು ಹಳ್ಳಿಯನ್ನು ತಲಪಲಿಕ್ಕಾಗಿ ನಾವು, ಕಮರಿಗಳ ಮೂಲಕ ಮತ್ತು ಪರ್ವತಗಳ ಮೇಲೆ ಬರಿಗಾಲಿನಲ್ಲಿ ಮೈಲುಗಟ್ಟಲೆ ನಡೆಯುತ್ತಿದ್ದೆವು. ನಮ್ಮ ಪಾದರಕ್ಷೆಗಳು ಸವೆಯದೆ ಇರಲಿಕ್ಕಾಗಿ ಈ ರೀತಿ ನಾವು ಬರಿಗಾಲಿನಲ್ಲಿ ನಡೆಯುತ್ತಿದ್ದೆವು, ಏಕೆಂದರೆ ಅವು ಸವೆದುಹೋದರೆ, ಅವುಗಳಿಗೆ ಬದಲಾಗಿ ಉಪಯೋಗಿಸಲು ಬೇರೆ ಪಾದರಕ್ಷೆಗಳು ನಮ್ಮ ಬಳಿ ಇರಲಿಲ್ಲ. 1946ರಿಂದ 1949ರ ವರೆಗಿನ ವರ್ಷಗಳಲ್ಲಿ, ಗ್ರೀಸ್ ದೇಶದಲ್ಲಿ ಆಂತರಿಕ ಯುದ್ಧವು ತುಂಬ ಪ್ರಬಲವಾಗುತ್ತಿತ್ತು, ಮತ್ತು ಪ್ರಯಾಣಿಸುವುದು ತುಂಬ ಅಪಾಯಕರವಾಗಿತ್ತು. ರಸ್ತೆಯುದ್ದಕ್ಕೂ ಹೆಣಗಳು ಬಿದ್ದಿರುವುದನ್ನು ನೋಡುವುದೇನೂ ಅಸಾಮಾನ್ಯ ಸಂಗತಿಯಾಗಿರಲಿಲ್ಲ.
ಕಷ್ಟತೊಂದರೆಗಳಿಂದ ನಿರುತ್ಸಾಹಗೊಳ್ಳುವುದಕ್ಕೆ ಬದಲಾಗಿ, ನಾವು ಅತ್ಯಂತ ಹುರುಪಿನಿಂದ ಸೇವೆಮಾಡುತ್ತಾ ಮುಂದುವರಿದೆವು. ಈ ಕೆಳಗಿನಂತೆ ಬರೆದ ಕೀರ್ತನೆಗಾರನ ಹಾಗೆ ನನಗೂ ಅನೇಕಬಾರಿ ಅನಿಸಿತು: “ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ ನೀನು ಹತ್ತಿರವಿರುವದರಿಂದ ಕೇಡಿಗೆ ಹೆದರೆನು; ನಿನ್ನ ದೊಣ್ಣೆಯೂ ನಿನ್ನ ಕೋಲೂ ನನಗೆ ಧೈರ್ಯಕೊಡುತ್ತವೆ.” (ಕೀರ್ತನೆ 23:4) ಈ ಕಾಲಾವಧಿಯಲ್ಲಿ, ನಾವು ಕೆಲವೊಮ್ಮೆ ವಾರಗಟ್ಟಲೆ ಮನೆಯಲ್ಲಿರುತ್ತಿರಲಿಲ್ಲ ಮತ್ತು ಕೆಲವೊಮ್ಮೆ ನಾನು ಒಂದು ತಿಂಗಳಿಗೆ 250 ತಾಸುಗಳನ್ನು ಶುಶ್ರೂಷೆಯಲ್ಲಿ ವಿನಿಯೋಗಿಸುತ್ತಿದ್ದೆ.
ಐಯಿತೋನೋಹಾರೀ
1946ರಲ್ಲಿ ನಾವು ಸಂದರ್ಶಿಸಿದ ಹಳ್ಳಿಗಳಲ್ಲಿ ಒಂದು ಹಳ್ಳಿಯು ಐಯಿತೋನೋಹಾರೀಯಾಗಿದ್ದು, ಇದು ಒಂದು ಬೆಟ್ಟದ ಮೇಲಿತ್ತು. ಅಲ್ಲಿ ನಾವು ಒಬ್ಬ ವ್ಯಕ್ತಿಯನ್ನು ಭೇಟಿಯಾದೆವು; ಬೈಬಲ್ ಸಂದೇಶವನ್ನು ಕೇಳಿಸಿಕೊಳ್ಳಲು ಇಷ್ಟಪಡುವ ಇಬ್ಬರು ಪುರುಷರು ಈ ಹಳ್ಳಿಯಲ್ಲಿದ್ದಾರೆ ಎಂದು ಅವನು ಹೇಳಿದನು. ಆದರೂ, ತನ್ನ ನೆರೆಹೊರೆಯವರಿಗೆ ಭಯಪಟ್ಟು ಅವನು ನಮ್ಮನ್ನು ಆ ಪುರುಷರ ಬಳಿಗೆ ಕರೆದುಕೊಂಡುಹೋಗಲು ಹಿಂಜರಿದನು. ಕೊನೆಗೂ ನಾವು ಅವರ ಮನೆಗಳನ್ನು ಕಂಡುಹಿಡಿಯಶಕ್ತರಾದೆವು, ಮತ್ತು ಅಲ್ಲಿ ನಮ್ಮನ್ನು ಒಳ್ಳೆಯ ರೀತಿಯಲ್ಲಿ ಸತ್ಕರಿಸಲಾಯಿತು. ಕೆಲವು ನಿಮಿಷಗಳ ಬಳಿಕ, ಅವರ ಮನೆಯ ಹಜಾರವು ಜನರಿಂದ ತುಂಬಿತ್ತು! ಈ ಜನರು ಅವರ ಸಂಬಂಧಿಕರಾಗಿದ್ದಿರಬಹುದು ಅಥವಾ ಆಪ್ತ ಮಿತ್ರರಾಗಿದ್ದಿರಬಹುದು. ಅವರು ತುಂಬ ಗಮನಕೊಟ್ಟು ಆಲಿಸುತ್ತಿದ್ದ ರೀತಿಯನ್ನು ನೋಡಿ ನಾನು ಬಹಳ ಬೆರಗಾದೆ. ತುಂಬ ಸಮಯದಿಂದಲೂ ಅವರು ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಲು ಅತ್ಯಾತುರದಿಂದ ಕಾಯುತ್ತಿದ್ದರು, ಆದರೆ ಜರ್ಮನ್ ಸ್ವಾಧೀನಾನುಭವದ ಕಾರಣ ಈ ಕ್ಷೇತ್ರದಲ್ಲಿ ಯಾವ ಸಾಕ್ಷಿಯೂ ಇರಲಿಲ್ಲ ಎಂಬುದು ನಮಗೆ ಗೊತ್ತಾಯಿತು. ಯಾವುದು ಅವರ ಆಸಕ್ತಿಯನ್ನು ಕೆರಳಿಸಿತ್ತು?
ಸ್ಥಳಿಕ ಕಮ್ಯೂನಿಸ್ಟ್ ಪಕ್ಷದಲ್ಲಿ, ಕುಟುಂಬದ ಶಿರಸ್ಸುಗಳಾಗಿದ್ದ ಇಬ್ಬರು ವ್ಯಕ್ತಿಗಳು ತುಂಬ ಅಗ್ರಗಣ್ಯರಾಗಿದ್ದರು, ಮತ್ತು ಜನರಿಗೆ ಕಮ್ಯೂನಿಸ್ಟ್ ವಿಚಾರಗಳನ್ನು ಅವರೇ ಕಲಿಸಿದ್ದರು. ಆದರೆ ತದನಂತರ ವಾಚ್ ಟವರ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿದ್ದ ಸರಕಾರ (ಇಂಗ್ಲಿಷ್) ಎಂಬ ಪುಸ್ತಕದ ಒಂದು ಪ್ರತಿಯು ಅವರಿಗೆ ಸಿಕ್ಕಿತು. ಈ ಪುಸ್ತಕವನ್ನು ಓದಿದ್ದರ ಫಲಿತಾಂಶವಾಗಿ, ಒಂದು ಪರಿಪೂರ್ಣವಾದ ನೀತಿಯ ಸರಕಾರಕ್ಕಾಗಿರುವ ನಿರೀಕ್ಷೆಯು ದೇವರ ರಾಜ್ಯವೇ ಆಗಿದೆ ಎಂಬುದನ್ನು ಅವರು ಮನಗಂಡರು.
ಮಧ್ಯರಾತ್ರಿಯ ತನಕ ನಾವು ಈ ಪುರುಷರೊಂದಿಗೆ ಹಾಗೂ ಅವರ ಮಿತ್ರರೊಂದಿಗೆ ಮಾತಾಡುತ್ತಾ ಕುಳಿತುಕೊಂಡೆವು. ತಮ್ಮ ಪ್ರಶ್ನೆಗಳಿಗೆ ಕೊಡಲ್ಪಟ್ಟ ಬೈಬಲಾಧಾರಿತ ಉತ್ತರಗಳಿಂದ ಇವರು ಸಂಪೂರ್ಣವಾಗಿ ತೃಪ್ತರಾದರು. ಆದರೂ, ಇಷ್ಟರಲ್ಲಾಗಲೇ ಹಳ್ಳಿಯಲ್ಲಿದ್ದ ಕಮ್ಯೂನಿಸ್ಟ್ ಪಕ್ಷದ ಸದಸ್ಯರು ನನ್ನನ್ನು ಕೊಲ್ಲಲು ಸಂಚುಹೂಡಿದರು. ಏಕೆಂದರೆ ಈ ಮುಂಚೆ ನಾಯಕರಾಗಿದ್ದ ಈ ಪುರುಷರು ಮತಾಂತರಗೊಳ್ಳಲು ನಾನೇ ಕಾರಣನೆಂದು ಅವರು ನೆನಸಿದ್ದರು. ಆಕಸ್ಮಿಕವಾಗಿ, ಆ ರಾತ್ರಿಯ ಚರ್ಚೆಗೆ ಹಾಜರಾಗಿದ್ದ ಜನರಲ್ಲಿ, ಹಳ್ಳಿಯಲ್ಲಿದ್ದ ಆಸಕ್ತ ಪುರುಷರ ಬಗ್ಗೆ ನನಗೆ ತಿಳಿಸಿದ್ದ ವ್ಯಕ್ತಿಯೂ ಇದ್ದನು. ಕಾಲಕ್ರಮೇಣ ಅವನು ಸಹ ಬೈಬಲ್ ಜ್ಞಾನವನ್ನು ಪಡೆದುಕೊಂಡು ಪ್ರಗತಿಯನ್ನು ಮಾಡಿ, ದೀಕ್ಷಾಸ್ನಾನ ಪಡೆದುಕೊಂಡನು, ಮತ್ತು ಒಬ್ಬ ಕ್ರೈಸ್ತ ಹಿರಿಯನಾದನು.
ಮೃಗೀಯ ಹಿಂಸೆ
ಕಮ್ಯೂನಿಸ್ಟ್ ಪಕ್ಷದ ಈ ಮಾಜಿ ನಾಯಕರನ್ನು ಭೇಟಿಮಾಡಿದ ಸ್ವಲ್ಪ ಸಮಯಾನಂತರ, ಇಬ್ಬರು ಪೊಲೀಸರು ನಾವು ಕೂಟವನ್ನು ನಡಿಸುತ್ತಿದ್ದ ಮನೆಗೆ ನುಗ್ಗಿದರು. ಅವರು ಬಂದೂಕನ್ನು ನಮಗೆ ಗುರಿಯಾಗಿಟ್ಟು ನಮ್ಮಲ್ಲಿ ನಾಲ್ವರನ್ನು ಬಂಧಿಸಿ, ಪೊಲೀಸ್ ಠಾಣೆಗೆ ಕರೆದೊಯ್ದರು. ಅಲ್ಲಿ, ಗ್ರೀಕ್ ಆರ್ತೊಡಾಕ್ಸ್ ಚರ್ಚಿನ ಪಾದ್ರಿಯೊಂದಿಗೆ ನಿಕಟ ಸಂಬಂಧವನ್ನಿಟ್ಟುಕೊಂಡಿದ್ದ ಒಬ್ಬ ಪೊಲೀಸ್ ಮೇಲಧಿಕಾರಿಯೂ ಇದ್ದನು. ಅವನು ನಮ್ಮನ್ನು ಹೀನಾಮಾನವಾಗಿ ಬಯ್ದನು. ಕೊನೆಯದಾಗಿ, “ಈಗ ನಾನು ನಿಮಗೆ ಏನು ಮಾಡಲಿ?” ಎಂದು ಕೇಳಿದನು.
ನಮ್ಮ ಹಿಂದೆ ನಿಂತುಕೊಂಡಿದ್ದ ಪೊಲೀಸರು, “ನಾವು ಅವರಿಗೆ ಚೆನ್ನಾಗಿ ಹೊಡೆಯೋಣ!” ಎಂದು ಒಕ್ಕೊರಲಿನಿಂದ ಕೂಗಿದರು.
ಅಷ್ಟರಲ್ಲೇ ಮಧ್ಯರಾತ್ರಿಯು ಕಳೆದುಹೋಗಿತ್ತು. ಪೊಲೀಸರು ನಮ್ಮನ್ನು ಆ ಮನೆಯ ನೆಲಮಾಳಿಗೆಯಲ್ಲಿ ಕೂಡಿಹಾಕಿ, ಪಕ್ಕದಲ್ಲಿದ್ದ ಮದ್ಯದಂಗಡಿಗೆ ಹೋದರು. ಅವರು ಕಂಠಪೂರ್ತಿ ಕುಡಿದು ಬಂದು, ನನ್ನನ್ನು ಮಹಡಿಗೆ ಕರೆದೊಯ್ದರು.
ಅವರ ಸ್ಥಿತಿಯನ್ನು ನೋಡಿದಾಗ, ಯಾವುದೇ ಕ್ಷಣದಲ್ಲಿ ಇವರು ನನ್ನನ್ನು ಕೊಲ್ಲಬಹುದು ಎಂದು ನನಗನಿಸಿತು. ಆದುದರಿಂದ, ನಾನು ಅನುಭವಿಸಬೇಕಾದ ಕಷ್ಟಗಳನ್ನು ತಾಳಿಕೊಳ್ಳಲು ಬೇಕಾದ ಬಲವನ್ನು ಕೊಡುವಂತೆ ನಾನು ದೇವರಿಗೆ ಪ್ರಾರ್ಥಿಸಿದೆ. ಈ ಲೇಖನದ ಆರಂಭದಲ್ಲೇ ನಾನು ತಿಳಿಸಿದಂತೆ, ಅವರು ಕೆಲವು ದೊಣ್ಣೆಗಳನ್ನು ತೆಗೆದುಕೊಂಡು, ನನ್ನ ಅಂಗಾಲುಗಳ ಮೇಲೆ ಹೊಡೆಯತೊಡಗಿದರು. ತದನಂತರ ಅವರು ನನ್ನ ದೇಹದ ಮೇಲೆಲ್ಲ ಹೊಡೆದು, ಪುನಃ ನೆಲಮಾಳಿಗೆಯೊಳಗೆ ತಳ್ಳಿಬಿಟ್ಟರು. ಆ ಬಳಿಕ ಅವರು ಇನ್ನೊಬ್ಬ ಸಾಕ್ಷಿಯನ್ನು ಕರೆತಂದು ಅವನಿಗೂ ಹೊಡೆಯತೊಡಗಿದರು.
ಈ ಮಧ್ಯೆ, ಮುಂದಿರುವ ಪರೀಕ್ಷೆಯನ್ನು ಎದುರಿಸಲಿಕ್ಕಾಗಿ ಉಳಿದ ಇಬ್ಬರು ಸಾಕ್ಷಿಗಳನ್ನು ಸಿದ್ಧಗೊಳಿಸಲು ನಾನು ಪ್ರಯತ್ನಿಸಿದೆ. ಆದರೆ ಪೊಲೀಸರು ಪುನಃ ನನ್ನನ್ನೇ ಮಹಡಿಯ ಮೇಲೆ ಕರೆದೊಯ್ಯಲು ನಿರ್ಧರಿಸಿದರು. ಅವರು ನನ್ನ ಬಟ್ಟೆಗಳನ್ನು ಕಳಚಿದರು, ಮತ್ತು ಅವರಲ್ಲಿ ಐದು ಮಂದಿ ಸುಮಾರು ಒಂದು ತಾಸಿನ ತನಕ ನನಗೆ ಹೊಡೆದು, ಹಾಕಿಕೊಂಡಿದ್ದ ಸೇನಾ ಬೂಟುಗಳಿಂದ ನನ್ನ ತಲೆಯನ್ನು ತುಳಿದರು. ಆ ಮೇಲೆ ಅವರು ನನ್ನನ್ನು ಕೆಳಕ್ಕೆ ತಳ್ಳಿದರು, ಅಲ್ಲಿ ನಾನು ಸುಮಾರು 12 ತಾಸುಗಳ ವರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದೆ.
ಕೊನೆಗೂ ಅವರು ನಮ್ಮನ್ನು ಬಿಡುಗಡೆಮಾಡಿದಾಗ, ಆ ಹಳ್ಳಿಯಲ್ಲಿದ್ದ ಒಂದು ಕುಟುಂಬವು ನಮಗೆ ರಾತ್ರಿ ಉಳಿದುಕೊಳ್ಳಲು ಸ್ಥಳಾವಕಾಶ ನೀಡಿ, ನಮ್ಮನ್ನು ಚೆನ್ನಾಗಿ ಆರೈಕೆಮಾಡಿತು. ಮರುದಿನ ನಾವು ನಮ್ಮ ಮನೆಗೆ ಹೊರಟೆವು. ನಾವೆಷ್ಟು ದಣಿದು ಬಳಲಿಹೋಗಿದ್ದೆವೆಂದರೆ, ಸಾಮಾನ್ಯವಾಗಿ ಆ ದಾರಿಯಲ್ಲಿ ನಡೆಯಲು ಎರಡು ತಾಸುಗಳು ತಗಲುತ್ತಿದ್ದವು, ಆದರೆ ಅಂದು ನಮಗೆ ಎಂಟು ತಾಸುಗಳು ಹಿಡಿದವು. ಆ ಹೊಡೆತಗಳಿಂದ ನನ್ನ ಇಡೀ ದೇಹವು ಎಷ್ಟು ಊದಿತ್ತೆಂದರೆ, ಮಾರೀಆಂತೀ ಸಹ ನನ್ನ ಗುರುತು ಹಿಡಿಯಲಿಲ್ಲ.
ವಿರೋಧವಿದ್ದರೂ ಅಭಿವೃದ್ಧಿ
1949ರಲ್ಲಿ, ಆಂತರಿಕ ಯುದ್ಧವು ಇನ್ನೂ ನಡೆಯುತ್ತಿದ್ದಾಗಲೇ ನಾವು ಥೆಸಲೊನೀಕಕ್ಕೆ ಸ್ಥಳಾಂತರಿಸಿದೆವು. ಆ ನಗರದಲ್ಲಿದ್ದ ನಾಲ್ಕು ಸಭೆಗಳಲ್ಲೊಂದರಲ್ಲಿ ಸಹಾಯಕ ಸೇವಕನಾಗಿ ಕೆಲಸಮಾಡುವಂತೆ ನನ್ನನ್ನು ನೇಮಿಸಲಾಯಿತು. ಒಂದು ವರ್ಷದ ಬಳಿಕ ಆ ಸಭೆಯು ಎಷ್ಟು ಅಭಿವೃದ್ಧಿಹೊಂದಿತೆಂದರೆ, ಅದನ್ನು ವಿಭಾಗಿಸಿ ನಾವು ಇನ್ನೊಂದು ಸಭೆಯನ್ನು ರಚಿಸಿದೆವು, ಮತ್ತು ನನ್ನನ್ನು ಅದರ ಸಭಾ ಸೇವಕನನ್ನಾಗಿ ಅಥವಾ ಅಧ್ಯಕ್ಷ ಮೇಲ್ವಿಚಾರಕನನ್ನಾಗಿ ನೇಮಿಸಲಾಯಿತು. ಒಂದು ವರ್ಷದ ಬಳಿಕ ಈ ಹೊಸ ಸಭೆಯು ಬಹುಮಟ್ಟಿಗೆ ಎರಡರಷ್ಟು ಅಭಿವೃದ್ಧಿಹೊಂದಿತ್ತು, ಮತ್ತು ಇನ್ನೂ ಒಂದು ಸಭೆಯನ್ನು ರಚಿಸಲಾಯಿತು!
ಥೆಸಲೊನೀಕದಲ್ಲಿನ ಯೆಹೋವನ ಸಾಕ್ಷಿಗಳ ಬೆಳವಣಿಗೆಯನ್ನು ನೋಡಿ ವಿರೋಧಿಗಳು ಕೋಪಗೊಂಡರು. 1952ರಲ್ಲಿ, ಒಂದು ದಿನ ನಾನು ಕೆಲಸದಿಂದ ಮನೆಗೆ ಬಂದಾಗ, ನಮ್ಮ ಮನೆಯು ಉರಿದು ಭಸ್ಮವಾಗಿತ್ತು. ಮಾರೀಆಂತೀಯು ಮಾತ್ರ ತನ್ನ ಜೀವದೊಂದಿಗೆ ಅಲ್ಲಿಂದ ಬಚಾವಾಗಿದ್ದಳು. ಅದೇ ದಿನ ರಾತ್ರಿ ಕೂಟಕ್ಕೆ ಹೋದಾಗ, ನಮ್ಮ ಸ್ವತ್ತುಗಳೆಲ್ಲವೂ ಬೆಂಕಿಯಲ್ಲಿ ಸುಟ್ಟುಹೋದ ಕಾರಣ ನಾವು ಇನ್ನೂ ಕೊಳೆ ಬಟ್ಟೆಗಳನ್ನೇ ಧರಿಸಿದ್ದೇವೆ ಎಂದು ವಿವರಿಸಬೇಕಾಯಿತು. ನಮ್ಮ ಕ್ರೈಸ್ತ ಸಹೋದರರು ತುಂಬ ಸಹಾನುಭೂತಿಯುಳ್ಳವರೂ ಬೆಂಬಲ ನೀಡುವವರೂ ಆಗಿದ್ದರು.
1961ರಲ್ಲಿ ನನ್ನನ್ನು ಸಂಚಾರ ಮೇಲ್ವಿಚಾರಕನ ಕೆಲಸಕ್ಕೆ ನೇಮಿಸಲಾಯಿತು. ಸಹೋದರರನ್ನು ಆತ್ಮಿಕವಾಗಿ ಬಲಪಡಿಸಲಿಕ್ಕಾಗಿ, ಪ್ರತಿವಾರ ನಾನು ಬೇರೆ ಬೇರೆ ಸಭೆಗಳನ್ನು ಭೇಟಿಮಾಡಬೇಕಾಗಿತ್ತು. ಮುಂದಿನ 27 ವರ್ಷಗಳ ವರೆಗೆ, ಮಾರೀಆಂತೀ ಹಾಗೂ ನಾನು ಜೊತೆಗೂಡಿ, ಮ್ಯಾಸಿಡೋನಿಯ, ಥ್ರೇಸ್, ಹಾಗೂ ಥೆಸಲೀಯಲ್ಲಿರುವ ಸರ್ಕಿಟ್ಗಳನ್ನು ಮತ್ತು ಡಿಸ್ಟ್ರಿಕ್ಟ್ಗಳನ್ನು ಸಂದರ್ಶಿಸಿದೆವು. 1948ರಿಂದ ನನ್ನ ಪ್ರೀತಿಯ ಪತ್ನಿಯಾದ ಮಾರೀಆಂತೀಯು ಬಹುಮಟ್ಟಿಗೆ ಕುರುಡಿಯಾಗಿದ್ದರೂ, ತುಂಬ ಧೈರ್ಯದಿಂದ ನನ್ನೊಂದಿಗೆ ಸೇವೆಮಾಡಿದಳು ಮತ್ತು ನಂಬಿಕೆಯ ಅನೇಕ ಪರೀಕ್ಷೆಗಳನ್ನು ತಾಳಿಕೊಂಡಳು. ಅವಳನ್ನು ಸಹ ಅನೇಕಬಾರಿ ಬಂಧಿಸಲಾಗಿತ್ತು, ತನಿಖೆಗೊಳಪಡಿಸಲಾಗಿತ್ತು, ಮತ್ತು ಸೆರೆಮನೆಗೆ ಹಾಕಲಾಗಿತ್ತು. ತದನಂತರ ಅವಳ ಆರೋಗ್ಯವು ಹದಗೆಡುತ್ತಾ ಹೋಯಿತು, ಮತ್ತು ಕ್ಯಾನ್ಸರ್ನೊಂದಿಗೆ ದೀರ್ಘಕಾಲ ಹೋರಾಡಿದ ಬಳಿಕ, 1988ರಲ್ಲಿ ಅವಳು ಮೃತಪಟ್ಟಳು.
ಅದೇ ವರ್ಷ, ಥೆಸಲೊನೀಕದಲ್ಲಿ ಒಬ್ಬ ವಿಶೇಷ ಪಯನೀಯರನಾಗಿ ಸೇವೆಮಾಡುವಂತೆ ನನ್ನನ್ನು ನೇಮಿಸಲಾಯಿತು. ಈಗ, ಸುಮಾರು 56ಕ್ಕಿಂತಲೂ ಹೆಚ್ಚು ವರ್ಷಗಳನ್ನು ಯೆಹೋವನ ಸೇವೆಯಲ್ಲಿ ಕಳೆದಿರುವುದಾದರೂ, ಇನ್ನು ಕೂಡ ನಾನು ಶ್ರಮಪಟ್ಟು, ಶುಶ್ರೂಷೆಯ ಎಲ್ಲ ಅಂಶಗಳಲ್ಲೂ ಪಾಲ್ಗೊಳ್ಳಬಲ್ಲೆ. ಕೆಲವೊಮ್ಮೆ, ಪ್ರತಿವಾರ ಆಸಕ್ತ ಜನರೊಂದಿಗೆ 20 ಬೈಬಲ್ ಅಭ್ಯಾಸಗಳನ್ನು ನಾನು ನಡೆಸಿದ್ದೇನೆ.
ಯೆಹೋವನ ಹೊಸ ಲೋಕದಲ್ಲಿ ಹಾಗೂ ಒಂದು ಸಾವಿರ ವರ್ಷಗಳ ವರೆಗೆ ಮುಂದುವರಿಯಲಿರುವ ಒಂದು ದೊಡ್ಡ ಕಲಿಸುವ ಕಾರ್ಯಕ್ರಮದ ಆರಂಭದಲ್ಲಿ ನಾವಿದ್ದೇವೆ ಎಂಬುದನ್ನು ನಾನು ತುಂಬ ಗಣ್ಯಮಾಡುತ್ತೇನೆ. ಆದರೂ, ನಮ್ಮ ಕೆಲಸವನ್ನು ನಿಧಾನಗೊಳಿಸಲು, ಕಾಲಹರಣಮಾಡಲು, ಅಥವಾ ನಮ್ಮ ಶಾರೀರಿಕ ಅಭಿಲಾಷೆಗಳನ್ನು ತೃಪ್ತಿಪಡಿಸುವುದರಲ್ಲಿ ಕಾಲಕಳೆಯಲು ಇದು ಸೂಕ್ತವಾದ ಸಮಯವಲ್ಲ ಎಂದು ನನಗನಿಸುತ್ತದೆ. ಅತ್ಯಾರಂಭದಲ್ಲೇ ನಾನು ಮಾಡಿದಂತಹ ವಾಗ್ದಾನಕ್ಕನುಸಾರ ನಡೆಯಲು ನನಗೆ ಸಹಾಯ ಮಾಡಿದ್ದಕ್ಕಾಗಿ ನಾನು ಯೆಹೋವನಿಗೆ ಉಪಕಾರ ಸಲ್ಲಿಸುತ್ತೇನೆ. ಏಕೆಂದರೆ ನಮ್ಮ ಪೂರ್ಣಪ್ರಾಣದ ಆರಾಧನೆ ಹಾಗೂ ಸೇವೆಗೆ ಯೆಹೋವನು ಖಂಡಿತವಾಗಿಯೂ ಅರ್ಹನಾಗಿದ್ದಾನೆ.
[ಪುಟ 24 ರಲ್ಲಿರುವ ಚಿತ್ರ]
ನಮ್ಮ ಸಾರುವ ಕೆಲಸವು ನಿಷೇಧಿಸಲ್ಪಟ್ಟಿದ್ದ ಸಮಯದಲ್ಲಿ ಒಂದು ಭಾಷಣವನ್ನು ಕೊಡುತ್ತಿರುವುದು
[ಪುಟ 24 ರಲ್ಲಿರುವ ಚಿತ್ರ]
ನನ್ನ ಪತ್ನಿಯಾದ ಮಾರೀಆಂತೀಯೊಂದಿಗೆ