ಸಂಚರಣ ಮೇಲ್ವಿಚಾರಕರು ನಂಬಿಗಸ್ತ ಮನೆವಾರ್ತೆಗಾರರಾಗಿ ಸೇವೆಮಾಡುವ ವಿಧ
“ಪ್ರತಿಯೊಬ್ಬನು ಪಡೆದಿರುವ ವರಕ್ಕೆ ಪ್ರಮಾಣಾನುಗುಣವಾಗಿ, ವಿವಿಧ ವಿಧಗಳಲ್ಲಿ ವ್ಯಕ್ತವಾಗಿರುವ ದೇವರ ಅಪಾತ್ರ ದಯೆಯ ಉತ್ತಮ ಮನೆವಾರ್ತೆಗಾರರಾಗಿ, ಒಬ್ಬರು ಇನ್ನೊಬ್ಬರ ಶುಶ್ರೂಷೆಯನ್ನು ಮಾಡಲಿಕ್ಕಾಗಿ ಅದನ್ನು ಬಳಸಿರಿ.” —1 ಪೇತ್ರ 4:10, NW.
1, 2. (ಎ) “ಮನೆವಾರ್ತೆಗಾರ” ಎಂಬ ಪದವನ್ನು ನೀವು ಹೇಗೆ ನಿರೂಪಿಸುವಿರಿ? (ಬಿ) ದೇವರು ಉಪಯೋಗಿಸುವ ಮನೆವಾರ್ತೆಗಾರರಲ್ಲಿ ಯಾರು ಸೇರಿಸಲ್ಪಟ್ಟಿದ್ದಾರೆ?
ಯೆಹೋವನು ಸಕಲ ನಂಬಿಗಸ್ತ ಕ್ರೈಸ್ತರನ್ನು ಮನೆವಾರ್ತೆಗಾರರನ್ನಾಗಿ ಉಪಯೋಗಿಸುತ್ತಾನೆ. ಒಬ್ಬ ಮನೆವಾರ್ತೆಗಾರನು ಅನೇಕ ವೇಳೆ ಒಂದು ಮನೆವಾರ್ತೆಯ ಮೇಲ್ವಿಚಾರಣೆ ಮಾಡುವ ಸೇವಕನಾಗಿದ್ದಾನೆ. ಅವನು ತನ್ನ ಯಜಮಾನನ ವ್ಯವಹಾರವನ್ನೂ ನಿರ್ವಹಿಸಬಹುದು. (ಲೂಕ 16:1-3; ಗಲಾತ್ಯ 4:1, 2) ಯೇಸು ಭೂಮಿಯಲ್ಲಿರುವ ತನ್ನ ಕರ್ತವ್ಯನಿಷ್ಠ ಅಭಿಷಿಕ್ತ ಜನರ ಸಮೂಹವನ್ನು ‘ನಂಬಿಗಸ್ತ ಮನೆವಾರ್ತೆಯವನು’ ಎಂದು ಕರೆದನು. ಈ ಮನೆವಾರ್ತೆಯವನಿಗೆ ಅವನು, ರಾಜ್ಯ ಸಾರುವ ಚಟುವಟಿಕೆಗಳ ಸಮೇತ, “ತನ್ನ ಎಲ್ಲಾ ಆಸ್ತಿ”ಗಳನ್ನು ಒಪ್ಪಿಸಿಕೊಟ್ಟಿದ್ದಾನೆ.—ಲೂಕ 12:42-44; ಮತ್ತಾಯ 24:14, 45.
2 ಸಕಲ ಕ್ರೈಸ್ತರು ವಿವಿಧ ವಿಧಗಳಲ್ಲಿ ವ್ಯಕ್ತಪಡಿಸಲ್ಪಟ್ಟಿರುವ ದೇವರ ಅಪಾತ್ರ ದಯೆಯ ಮನೆವಾರ್ತೆಯವರೆಂದು ಅಪೊಸ್ತಲ ಪೇತ್ರನು ಹೇಳಿದನು. ಪ್ರತಿಯೊಬ್ಬ ಕ್ರೈಸ್ತನಿಗೆ, ಅವನು ಒಂದು ನಂಬಿಗಸ್ತಿಕೆಯ ಮನೆವಾರ್ತೆತನವನ್ನು ನಿರ್ವಹಿಸಬಲ್ಲ ಒಂದು ಸ್ಥಾನವಿದೆ. (1 ಪೇತ್ರ 4:10) ನೇಮಿತ ಕ್ರೈಸ್ತ ಹಿರಿಯರು ಮನೆವಾರ್ತೆಗಾರರಾಗಿದ್ದಾರೆ ಮತ್ತು ಅವರಲ್ಲಿ ಸಂಚರಣ ಮೇಲ್ವಿಚಾರಕರೂ ಇದ್ದಾರೆ. (ತೀತ 1:7) ಈ ಸಂಚರಣ ಮೇಲ್ವಿಚಾರಕರು ಹೇಗೆ ವೀಕ್ಷಿಸಲ್ಪಡಬೇಕು? ಅವರಲ್ಲಿ ಯಾವ ಗುಣಗಳು ಮತ್ತು ಲಕ್ಷ್ಯಗಳಿರಬೇಕು? ಮತ್ತು ಅವರು ಅತ್ಯಂತ ಹೆಚ್ಚಿನ ಒಳಿತನ್ನು ಹೇಗೆ ಸಾಧಿಸಬಲ್ಲರು?
ಅವರ ಸೇವೆಗಾಗಿ ಕೃತಜ್ಞರು
3. ಸಂಚರಣ ಮೇಲ್ವಿಚಾರಕರನ್ನು “ಒಳ್ಳೆಯ ಮನೆವಾರ್ತೆಯವರು” ಎಂದು ಏಕೆ ಕರೆಯಸಾಧ್ಯವಿದೆ?
3 ಒಬ್ಬ ಸಂಚರಣ ಮೇಲ್ವಿಚಾರಕನಿಗೂ ಅವನ ಪತ್ನಿಗೂ ಬರೆಯುತ್ತ, ಒಬ್ಬ ಕ್ರೈಸ್ತ ವಿವಾಹಿತ ದಂಪತಿಗಳು ಹೇಳಿದ್ದು: “ನೀವು ನಮಗೆ ನೀಡಿರುವ ಎಲ್ಲ ಸಮಯ ಮತ್ತು ಪ್ರೀತಿಗಾಗಿ ನಾವು ಕೃತಜ್ಞತೆಯನ್ನು ವ್ಯಕ್ತಪಡಿಸಲಿಚ್ಛಿಸುತ್ತೇವೆ. ನಾವು ಒಂದು ಕುಟುಂಬವಾಗಿ, ನಿಮ್ಮ ಸಕಲ ಪ್ರೋತ್ಸಾಹ ಮತ್ತು ಸಲಹೆಯಿಂದ ಮಹತ್ತರವಾಗಿ ಪ್ರಯೋಜನ ಪಡೆದಿದ್ದೇವೆ. ನಾವು ಆತ್ಮಿಕವಾಗಿ ಬೆಳೆಯುತ್ತ ಹೋಗಬೇಕೆಂದು ನಮಗೆ ತಿಳಿದಿದೆಯಾದರೂ, ಯೆಹೋವನ ಸಹಾಯದಿಂದ ಮತ್ತು ನಿಮ್ಮಂತಹ ಸಹೋದರ ಸಹೋದರಿಯರಿಂದ, ಬೆಳವಣಿಗೆಯ ಕಾಲದ ತೊಂದರೆಗಳು ಸುಲಭಮಾಡಲ್ಪಡುತ್ತವೆ.” ಇಂತಹ ರೀತಿಯ ಮಾತುಗಳು ಪದೇ ಪದೇ ಹೇಳಲ್ಪಡುತ್ತವೆ, ಏಕೆಂದರೆ ಸಂಚರಣ ಮೇಲ್ವಿಚಾರಕರು, ಒಬ್ಬ ಒಳ್ಳೆಯ ಮನೆವಾರ್ತೆಗಾರನು ತನ್ನ ಮನೆವಾರ್ತೆಯ ಅಗತ್ಯಗಳ ಜೋಕೆ ವಹಿಸುವಂತೆಯೇ, ಜೊತೆವಿಶ್ವಾಸಿಗಳಲ್ಲಿ ವೈಯಕ್ತಿಕ ಆಸಕ್ತಿಯನ್ನು ವಹಿಸುತ್ತಾರೆ. ಕೆಲವರು ಎದ್ದುಕಾಣುವ ಭಾಷಣಕಾರರು. ಅನೇಕರು ಸಾರುವ ಕೆಲಸದಲ್ಲಿ ಶ್ರೇಷ್ಠರಾಗಿರುವಾಗ, ಇತರರು ತಮ್ಮ ಹೃದಯೋಲ್ಲಾಸ ಮತ್ತು ಸಹಾನುಭೂತಿಗೆ ಪ್ರಸಿದ್ಧರಾಗಿದ್ದಾರೆ. ಇಂತಹ ವರಗಳನ್ನು ಇತರರ ಶುಶ್ರೂಷೆ ಮಾಡುವುದರಲ್ಲಿ ಬೆಳೆಸಿ, ಬಳಸುವುದರಿಂದಾಗಿ, ಸಂಚರಣ ಮೇಲ್ವಿಚಾರಕರನ್ನು, “ಒಳ್ಳೇ ಮನೆವಾರ್ತೆಯವರು” ಎಂದು ಯೋಗ್ಯವಾಗಿಯೇ ಕರೆಯಸಾಧ್ಯವಿದೆ.
4. ಯಾವ ಪ್ರಶ್ನೆಗಳನ್ನು ಈಗ ಪರಿಗಣಿಸಲಾಗುವುದು?
4 “ಮನೆವಾರ್ತೆಯವನು ನಂಬಿಗಸ್ತನಾಗಿ ಕಂಡುಬರುವದು ಅವಶ್ಯವಲ್ಲವೇ,” ಎಂದು ಅಪೊಸ್ತಲ ಪೌಲನು ಬರೆದನು. (1 ಕೊರಿಂಥ 4:2) ಬೇರೆ ಬೇರೆ ಸಭೆಯಲ್ಲಿ ವಾರ ವಾರ, ಜೊತೆ ಕ್ರೈಸ್ತರ ಶುಶ್ರೂಷೆ ಮಾಡುವುದು ಅದ್ವಿತೀಯವಾದ ಹಾಗೂ ಆನಂದದಾಯಕವಾದ ಸುಯೋಗ. ಆದರೆ ಅದು ಗಂಭೀರವಾದ ಜವಾಬ್ದಾರಿಯೂ ಆಗಿದೆ. ಹಾಗಾದರೆ, ಸಂಚರಣ ಮೇಲ್ವಿಚಾರಕರು ನಂಬಿಗಸ್ತಿಕೆಯಿಂದ ಮತ್ತು ಯಶಸ್ವಿಯಾಗಿ ತಮ್ಮ ಮನೆವಾರ್ತೆತನವನ್ನು ಹೇಗೆ ನಿರ್ವಹಿಸಬಲ್ಲರು?
ತಮ್ಮ ಮನೆವಾರ್ತೆತನವನ್ನು ಯಶಸ್ವಿಯಾಗಿ ನಿರ್ವಹಿಸುವುದು
5, 6. ಒಬ್ಬ ಸಂಚರಣ ಮೇಲ್ವಿಚಾರಕನ ಜೀವನದಲ್ಲಿ ಯೆಹೋವನ ಮೇಲೆ ಪ್ರಾರ್ಥನಾಪೂರ್ವಕವಾದ ಭರವಸೆಯು ಏಕೆ ಅಷ್ಟು ಪಾಮುಖ್ಯ?
5 ಸಂಚರಣ ಮೇಲ್ವಿಚಾರಕರು ಯಶಸ್ವಿಯಾದ ಮನೆವಾರ್ತೆಗಾರರಾಗಿರಬೇಕಾದರೆ, ಯೆಹೋವನ ಮೇಲೆ ಪ್ರಾರ್ಥನಾಪೂರ್ವಕವಾದ ಭರವಸೆ ಅತ್ಯಾವಶ್ಯಕ. ತಮ್ಮ ವೇಳಾಪಟ್ಟಿ ಮತ್ತು ಅನೇಕ ಜವಾಬ್ದಾರಿಗಳ ಕಾರಣ, ಅವರಿಗೆ ಕೆಲವು ಬಾರಿ ತುಂಬಾ ಹೊರೆಹೊತ್ತಿರುವ ಅನಿಸಿಕೆ ಆಗಬಲ್ಲದು. (ಹೋಲಿಸಿ 2 ಕೊರಿಂಥ 5:4.) ಆದಕಾರಣ ಅವರು ಕೀರ್ತನೆಗಾರ ದಾವೀದನ ಹಾಡಿಗನುಗುಣವಾಗಿ ವರ್ತಿಸುವುದು ಅಗತ್ಯ: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.” (ಕೀರ್ತನೆ 55:22) ದಾವೀದನ ಈ ಮಾತುಗಳೂ ಸಾಂತ್ವನದಾಯಕ: “ಅನುದಿನವೂ ನಮಗಾಗಿ ಭಾರವನ್ನು ಹೊರುವ ಯೆಹೋವನಿಗೆ ಸ್ತೋತ್ರವಾಗಲಿ.”—ಕೀರ್ತನೆ 68:19, NW.
6 ತನ್ನ ಆತ್ಮಿಕ ಜವಾಬ್ದಾರಿಗಳ ಜಾಗ್ರತೆ ವಹಿಸಲು ಪೌಲನಿಗೆ ಬಲವು ಎಲ್ಲಿಂದ ಸಿಕ್ಕಿತು? “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ” ಎಂಬುದಾಗಿ ಅವನು ಬರೆದನು. (ಫಿಲಿಪ್ಪಿ 4:13) ಹೌದು, ಯೆಹೋವ ದೇವರು ಪೌಲನ ಶಕ್ತಿಯ ಮೂಲನಾಗಿದ್ದನು. ತದ್ರೀತಿ, ಪೇತ್ರನು ಸಲಹೆ ಕೊಟ್ಟದ್ದು: “ಒಬ್ಬನು ಸಭೆಯ ಸೇವೆ ಮಾಡುವವನಾದರೆ ದೇವರಿಂದ ಶಕ್ತಿಯನ್ನು ಹೊಂದಿದವನಾಗಿ ಮಾಡಲಿ. ಇದರಿಂದ ಎಲ್ಲಾದರಲ್ಲಿ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ ಉಂಟಾಗುವದು.” (1 ಪೇತ್ರ 4:11) ಅನೇಕ ವರ್ಷಗಳ ಕಾಲ ಸಂಚರಣ ಮೇಲ್ವಿಚಾರಕನಾಗಿದ್ದ ಒಬ್ಬ ಸಹೋದರನು ದೇವರ ಮೇಲೆ ಭರವಸೆಯ ಅಗತ್ಯವನ್ನು ಒತ್ತಿಹೇಳುತ್ತಾ ಅಂದದ್ದು: “ಸಮಸ್ಯೆಗಳನ್ನು ನಿರ್ವಹಿಸುವುದರಲ್ಲಿ ಯಾವಾಗಲೂ ಯೆಹೋವನ ಕಡೆಗೆ ನೋಡಿರಿ, ಮತ್ತು ಆತನ ಸಂಸ್ಥೆಯ ಸಹಾಯವನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ.”
7. ಸಂಚರಣ ಮೇಲ್ವಿಚಾರಕನ ಕೆಲಸದಲ್ಲಿ ಸಮತೆಯು ಯಾವ ಒಂದು ಪಾತ್ರವನ್ನು ವಹಿಸುತ್ತದೆ?
7 ಒಬ್ಬ ಯಶಸ್ವಿ ಸಂಚರಣ ಮೇಲ್ವಿಚಾರಕನಿಗೆ ಸಮತೆ ಅಗತ್ಯ. ಇತರ ಕ್ರೈಸ್ತರಂತೆ ಅವನು, “ಹೆಚ್ಚು ಪ್ರಮುಖ ವಿಷಯಗಳ ಖಾತರಿ ಮಾಡಿಕೊಳ್ಳಲು” ಪ್ರಯಾಸಪಡುತ್ತಾನೆ. (ಫಿಲಿಪ್ಪಿ 1:10, NW)a ಸ್ಥಳಿಕ ಹಿರಿಯರಿಗೆ ಒಂದು ನಿರ್ದಿಷ್ಟ ವಿಷಯದ ಮೇಲೆ ಪ್ರಶ್ನೆಗಳಿರುವಾಗ, ಅವರು ಸಂದರ್ಶಿಸುವ ಸರ್ಕಿಟ್ ಮೇಲ್ವಿಚಾರಕನನ್ನು ವಿಚಾರಿಸುವುದು ವಿವೇಕಪ್ರದವು. (ಜ್ಞಾನೋಕ್ತಿ 11:14; 15:22) ಅವನು ಸಭೆಯನ್ನು ಬಿಟ್ಟುಹೋದ ಬಳಿಕ, ಹಿರಿಯರು ಆ ವಿಷಯವನ್ನು ನಿರ್ವಹಿಸುತ್ತಾ ಹೋಗುವಾಗ ಅವನ ಸಮತೆಯ ಅವಲೋಕನಗಳು ಮತ್ತು ಶಾಸ್ತ್ರೀಯ ಸಲಹೆಗಳು ಅತಿ ಸಹಾಯಕರವಾಗಿ ಪರಿಣಮಿಸುವುದು ಸಂಭಾವ್ಯ. ಸ್ವಲ್ಪಮಟ್ಟಿಗೆ ಇದೇ ಯೋಚನಾಸರಣಿಯಲ್ಲಿ ಪೌಲನು ತಿಮೊಥೆಯನಿಗೆ ಹೇಳಿದ್ದು: “ನೀನು ನನ್ನಿಂದ ಅನೇಕ ಸಾಕ್ಷಿಗಳ ಮುಂದೆ ಕೇಳಿದ ಉಪದೇಶವನ್ನು ಇತರರಿಗೆ ಬೋಧಿಸ ಶಕ್ತರಾದ ನಂಬಿಗಸ್ತ ಮನುಷ್ಯರಿಗೆ ಒಪ್ಪಿಸಿಕೊಡು.”—2 ತಿಮೊಥೆಯ 2:2.
8. ಬೈಬಲ್ ಅಧ್ಯಯನ, ಸಂಶೋಧನೆ ಮತ್ತು ಮನನ ಅತ್ಯಾವಶ್ಯಕವೇಕೆ?
8 ಸ್ವಸ್ಥ ಸಲಹೆಯನ್ನು ಕೊಡಲಿಕ್ಕಾಗಿ ಶಾಸ್ತ್ರೀಯ ಅಧ್ಯಯನ, ಸಂಶೋಧನೆ, ಮತ್ತು ಮನನ ಅತ್ಯಾವಶ್ಯಕ. (ಜ್ಞಾನೋಕ್ತಿ 15:28) ಒಬ್ಬ ಡಿಸ್ಟ್ರಿಕ್ಟ್ ಮೇಲ್ವಿಚಾರಕನು ಹೇಳಿದ್ದು: “ಹಿರಿಯರೊಂದಿಗಿನ ಕೂಟದಲ್ಲಿ, ಒಂದು ನಿರ್ದಿಷ್ಟ ಪ್ರಶ್ನೆಗೆ ಉತ್ತರವು ನಮಗೆ ಗೊತ್ತಿಲ್ಲವೆಂದು ಒಪ್ಪಿಕೊಳ್ಳಲು ನಾವು ಭಯಪಡಬಾರದು.” ಒಂದು ವಿಷಯದ ಮೇಲೆ “ಕ್ರಿಸ್ತನ ಮನಸ್ಸ”ನ್ನು ಪಡೆದುಕೊಳ್ಳಲು ಪ್ರಯತ್ನಿಸುವುದು, ಇತರರು ದೇವರ ಚಿತ್ತಾನುಸಾರ ವರ್ತಿಸುವಂತೆ ಸಹಾಯಮಾಡುವ ಬೈಬಲಾಧಾರಿತ ಸಲಹೆಯನ್ನು ಕೊಡುವಂತೆ ಸಾಧ್ಯಮಾಡುತ್ತದೆ. (1 ಕೊರಿಂಥ 2:16) ಕೆಲವು ಬಾರಿ ಒಬ್ಬ ಸಂಚರಣ ಮೇಲ್ವಿಚಾರಕನು ನಿರ್ದೇಶನಕ್ಕಾಗಿ ವಾಚ್ ಟವರ್ ಸೊಸೈಟಿಗೆ ಬರೆಯುವ ಅಗತ್ಯವಿರುತ್ತದೆ. ಯಾವುದೇ ವಿದ್ಯಮಾನದಲ್ಲಿ, ನಾವು ಮೂಡಿಸುವ ಅಭಿಪ್ರಾಯ ಅಥವಾ ವಾಕ್ಚಾತುರ್ಯಕ್ಕಿಂತ ಯೆಹೋವನಲ್ಲಿ ನಂಬಿಕೆ ಮತ್ತು ಸತ್ಯಕ್ಕಾಗಿ ಪ್ರೀತಿ ಎಷ್ಟೋ ಹೆಚ್ಚು ಪ್ರಾಮುಖ್ಯ. ಪೌಲನು “ವಾಕ್ಚಾತುರ್ಯದಿಂದಾಗಲಿ ಜ್ಞಾನಾಡಂಬರದಿಂದಾಗಲಿ” ಬರದೆ, ಕೊರಿಂಥದಲ್ಲಿ ತನ್ನ ಶುಶ್ರೂಷೆಯನ್ನು, “ಬಲಹೀನನೂ ಭಯಪಡುವವನೂ ಬಹು ನಡುಗುವವನೂ” ಆಗಿ ಆರಂಭಿಸಿದನು. ಇದು ಅವನನ್ನು ಅಸಮರ್ಥನನ್ನಾಗಿ ಮಾಡಿತೊ? ಅದಕ್ಕೆ ಪ್ರತಿಯಾಗಿ, ಅದು ಕೊರಿಂಥದವರು “ಮಾನುಷ ಜ್ಞಾನ”ದಲ್ಲಲ್ಲ, “ದೇವರ ಶಕ್ತಿ”ಯಲ್ಲಿ ನಂಬಿಕೆಯನ್ನಿಡುವಂತೆ ಸಹಾಯಮಾಡಿತು.—1 ಕೊರಿಂಥ 2:1-5.
ಇತರ ಆವಶ್ಯಕ ಗುಣಗಳು
9. ಸಂಚರಣ ಹಿರಿಯರಿಗೆ ಅನುಭೂತಿ ಶಕ್ತಿಯು ಅಗತ್ಯವೇಕೆ?
9 ಅನುಭೂತಿ ಶಕ್ತಿಯು ಸಂಚರಣ ಮೇಲ್ವಿಚಾರಕರು ಉತ್ತಮ ಫಲಿತಾಂಶಗಳನ್ನು ಸಾಧಿಸುವಂತೆ ಸಹಾಯಮಾಡುತ್ತದೆ. ‘ಸಹಾನುಭೂತಿ,’ ಅಥವಾ “ಅನುಕಂಪ”ವನ್ನು ತೋರಿಸುವಂತೆ ಪೇತ್ರನು ಎಲ್ಲ ಕ್ರೈಸ್ತರಿಗೆ ಪ್ರೋತ್ಸಾಹಿಸಿದನು. (1 ಪೇತ್ರ 3:8, NW, ಪಾದಟಿಪ್ಪಣಿ) ಒಬ್ಬ ಸರ್ಕಿಟ್ ಮೇಲ್ವಿಚಾರಕನು, ‘ಸಭೆಯಲ್ಲಿ ಪ್ರತಿಯೊಬ್ಬನಲ್ಲಿ ಆಸಕ್ತಿ ತೋರಿಸುವ ಮತ್ತು ಯಥಾರ್ಥವಾದ ಲಕ್ಷ್ಯವಿಡುವ’ ಅಗತ್ಯವಿದೆಯೆಂದು ಅಭಿಪ್ರಯಿಸುತ್ತಾನೆ. ತದ್ರೀತಿಯ ಮನೋಭಾವದಿಂದ, ಪೌಲನು ಬರೆದುದು: “ಸಂತೋಷಪಡುವವರ ಸಂಗಡ ಸಂತೋಷಪಡಿರಿ, ಅಳುವವರ ಸಂಗಡ ಅಳಿರಿ.” (ರೋಮಾಪುರ 12:15) ಇಂತಹ ಮನೋಭಾವವು, ಸಂಚರಣ ಮೇಲ್ವಿಚಾರಕರು ಜೊತೆವಿಶ್ವಾಸಿಗಳ ಸಮಸ್ಯೆಗಳನ್ನೂ ಸನ್ನಿವೇಶಗಳನ್ನೂ ಅರ್ಥಮಾಡಿಕೊಳ್ಳಲು ಶ್ರದ್ಧಾಪೂರ್ವಕವಾದ ಪ್ರಯತ್ನಗಳನ್ನು ಮಾಡುವಂತೆ ಪ್ರಚೋದಿಸುತ್ತದೆ. ಆಗ, ಅದನ್ನು ಅನ್ವಯಿಸಿಕೊಳ್ಳುವಲ್ಲಿ ನಿಜವಾಗಿ ಒಳಿತನ್ನು ಸಾಧಿಸುವ ಆತ್ಮೋನ್ನತಿಯ ಶಾಸ್ತ್ರೀಯ ಸಲಹೆಯನ್ನು ಅವರು ಕೊಡಬಲ್ಲರು. ಅನುಭೂತಿಯನ್ನು ತೋರಿಸುವುದರಲ್ಲಿ ಅತ್ಯುತ್ತಮನಾಗಿರುವ ಒಬ್ಬ ಸರ್ಕಿಟ್ ಮೇಲ್ವಿಚಾರಕನು, ಇಟಲಿಯ ಟ್ಯುರಿನ್ನ ಸಮೀಪದ ಒಂದು ಸಭೆಯಿಂದ ಈ ಪತ್ರವನ್ನು ಪಡೆದುಕೊಂಡನು: “ನೀವು ಆಸಕ್ತಿಯುಳ್ಳವರಾಗಿರಲು ಬಯಸುವಲ್ಲಿ, ಆಸಕ್ತಿಯನ್ನು ತೋರಿಸುವವರಾಗಿರಿ; ಸಂತೋಷಪಡಿಸುವವರಾಗಬಯಸುವಲ್ಲಿ, ಹರ್ಷದಾಯಕರಾಗಿರಿ; ಪ್ರೀತಿಸಲ್ಪಡಲು ಬಯಸುವುವಲ್ಲಿ, ಪ್ರೀತಿಪೂರ್ಣರಾಗಿರಿ; ಸಹಾಯ ಮಾಡಲ್ಪಡಲು ಬಯಸುವಲ್ಲಿ, ಸಹಾಯಕೊಡಲು ಸಿದ್ಧರಾಗಿರಿ. ನಾವು ನಿಮ್ಮಿಂದ ಇದನ್ನೇ ಕಲಿತಿದ್ದೇವೆ!”
10. ದೀನರಾಗಿರುವ ಕುರಿತು ಸರ್ಕಿಟ್ ಮತ್ತು ಡಿಸ್ಟ್ರಿಕ್ಟ್ ಮೇಲ್ವಿಚಾರಕರು ಏನು ಹೇಳಿದ್ದಾರೆ, ಮತ್ತು ಈ ಸಂಬಂಧದಲ್ಲಿ ಯೇಸು ಯಾವ ಮಾದರಿಯನ್ನಿಟ್ಟನು?
10 ದೀನರೂ ಸುಲಭಗಮ್ಯರೂ ಆಗಿರುವುದು, ಹೆಚ್ಚು ಒಳ್ಳೆಯದನ್ನು ಮಾಡುವಂತೆ ಸಂಚರಣ ಮೇಲ್ವಿಚಾರಕರಿಗೆ ನೆರವಾಗುತ್ತದೆ. ಒಬ್ಬ ಸರ್ಕಿಟ್ ಮೇಲ್ವಿಚಾರಕನು ಗಮನಿಸಿದ್ದು: “ದೈನ್ಯಭಾವವನ್ನು ಕಾಪಾಡಿಕೊಳ್ಳುವುದು ಅತಿ ಪ್ರಾಮುಖ್ಯ.” ಅವನು ಹೊಸ ಸಂಚರಣ ಮೇಲ್ವಿಚಾರಕರನ್ನು ಎಚ್ಚರಿಸಿದ್ದು: “ಶ್ರೀಮಂತ ಸಹೋದರರು ನಿಮಗಾಗಿ ಏನು ಮಾಡುತ್ತಾರೋ ಅದರಿಂದ ನೀವು ಅನುಚಿತವಾಗಿ ಪ್ರಭಾವಿತರಾಗುವಂತೆ ಬಿಡಲೂ ಬಾರದು, ಇಲ್ಲವೇ ನಿಮ್ಮ ಮಿತ್ರತ್ವವು ಅಂತಹವರಿಗೆ ಸೀಮಿತವಾಗಿರಲೂ ಬಾರದು, ಬದಲಿಗೆ ಇತರರೊಂದಿಗೆ ನಿಷ್ಪಕ್ಷಪಾತದಿಂದ ವ್ಯವಹರಿಸಲು ಪ್ರಯತ್ನಿಸಿರಿ.” (2 ಪೂರ್ವಕಾಲವೃತ್ತಾಂತ 19:6, 7) ಮತ್ತು ನಿಜವಾಗಿಯೂ ದೀನನಾಗಿರುವ ಒಬ್ಬ ಸಂಚರಣ ಮೇಲ್ವಿಚಾರಕನು, ಸೊಸೈಟಿಯ ಪ್ರತಿನಿಧಿಯೋಪಾದಿ ತನ್ನ ಸ್ವಂತ ಪ್ರಮುಖತೆಯ ಕುರಿತು ಅತಿಶಯಿಸಿದ ವೀಕ್ಷಣವುಳ್ಳವನಾಗಿರುವುದಿಲ್ಲ. ಒಬ್ಬ ಡಿಸ್ಟ್ರಿಕ್ಟ್ ಮೇಲ್ವಿಚಾರಕನು ತಕ್ಕದ್ದಾಗಿಯೆ ಹೇಳಿದ್ದು: “ದೀನರಾಗಿದ್ದು ಸಹೋದರರಿಗೆ ಕಿವಿಗೊಡುವ ಅಪೇಕ್ಷೆಯುಳ್ಳವರಾಗಿರಿ. ಯಾವಾಗಲೂ ಸುಲಭಗಮ್ಯರಾಗಿರಿ.” ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷನಾದ ಯೇಸು ಕ್ರಿಸ್ತನು, ಜನರಿಗೆ ಅಸಂತೃಪ್ತಿಯ ಅನಿಸಿಕೆಯನ್ನು ಉಂಟುಮಾಡಸಾಧ್ಯವಿತ್ತಾದರೂ, ಅವನು ಎಷ್ಟು ದೀನನೂ ಸುಲಭಗಮ್ಯನೂ ಆಗಿದ್ದನೆಂದರೆ, ಮಕ್ಕಳೂ ಅವನ ಉಪಸ್ಥಿತಿಯಲ್ಲಿ ಹಾಯಾಗಿದ್ದರು. (ಮತ್ತಾಯ 18:5; ಮಾರ್ಕ 10:13-16) ಸಂಚರಣ ಮೇಲ್ವಿಚಾರಕರು, ಮಕ್ಕಳು, ಹದಿಪ್ರಾಯದವರು, ವೃದ್ಧರು—ವಾಸ್ತವವಾಗಿ, ಸಭೆಯಲ್ಲಿರುವ ಪ್ರತಿಯೊಬ್ಬರೂ, ಎಲ್ಲರೂ—ಹಿಂಜರಿಯದೆ ತಮ್ಮನ್ನು ಸಮೀಪಿಸುವಂತೆ ಬಯಸುತ್ತಾರೆ.
11. ಅಗತ್ಯಬೀಳುವಾಗ, ಕ್ಷಮಾಯಾಚನೆಯ ಪರಿಣಾಮ ಏನಾಗಿರಬಲ್ಲದು?
11 “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವುದುಂಟು,” ನಿಶ್ಚಯ, ಮತ್ತು ಯಾವ ಸಂಚರಣ ಮೇಲ್ವಿಚಾರಕನೂ ಇದಕ್ಕೆ ಹೊರತಾಗಿಲ್ಲ. (ಯಾಕೋಬ 3:2) ಅವರು ತಪ್ಪುಗಳನ್ನು ಮಾಡುವಾಗ, ಪ್ರಾಮಾಣಿಕವಾದ ಒಂದು ಕ್ಷಮಾಯಾಚನೆಯು ಇತರ ಹಿರಿಯರಿಗೆ ದೈನ್ಯದ ಒಂದು ಮಾದರಿಯನ್ನು ಕೊಡುತ್ತದೆ. ಜ್ಞಾನೋಕ್ತಿ 22:4ಕಕ್ಕನುಸಾರ, “ಧನ ಮಾನ ಜೀವಗಳು ದೀನಭಾವಕ್ಕೂ ಯೆಹೋವನ [ಪೂಜ್ಯ ಭಾವದ] ಭಯಕ್ಕೂ ಫಲ.” ಮತ್ತು ದೇವರ ಸೇವಕರಲ್ಲಿ ಎಲ್ಲರೂ, ‘ತಮ್ಮ ದೇವರೊಂದಿಗೆ ನಮ್ರರಾಗಿ ನಡೆಯುವುದು’ ಅವಶ್ಯವಲ್ಲವೊ? (ಮೀಕ 6:8) ಒಬ್ಬ ಹೊಸ ಸಂಚರಣ ಹಿರಿಯನಿಗೆ ಅವನಲ್ಲಿ ಯಾವ ಬುದ್ಧಿವಾದವಿದೆಯೆಂದು ಕೇಳಲಾಗಿ, ಒಬ್ಬ ಸರ್ಕಿಟ್ ಮೇಲ್ವಿಚಾರಕನು ಹೇಳಿದ್ದು: “ಎಲ್ಲ ಸಹೋದರರಿಗೆ ಉಚ್ಚ ಮಟ್ಟದ ಗೌರವ ಮತ್ತು ಮನ್ನಣೆಯನ್ನು ತೋರಿಸಿ, ಅವರು ನಿಮಗಿಂತ ಉತ್ತಮರೆಂದು ಭಾವಿಸಿರಿ. ನೀವು ಸಹೋದರರಿಂದ ಹೆಚ್ಚನ್ನು ಕಲಿಯುವಿರಿ. ದೀನರಾಗಿ ಉಳಿಯಿರಿ. ಸಹಜ ವ್ಯಕ್ತಿತ್ವವನ್ನು ತೋರಿಸಿರಿ. ಜಂಬ ತೋರಿಸಬೇಡಿರಿ.”—ಫಿಲಿಪ್ಪಿ 2:3.
12. ಕ್ರೈಸ್ತ ಶುಶ್ರೂಷೆಗಾಗಿ ಹುರುಪು ಅಷ್ಟು ಗಮನಾರ್ಹವೇಕೆ?
12 ಕ್ರೈಸ್ತ ಶುಶ್ರೂಷೆಗಾಗಿರುವ ಹುರುಪು, ಸಂಚರಣ ಮೇಲ್ವಿಚಾರಕನ ಮಾತುಗಳಿಗೆ ಮಹತ್ವವನ್ನು ಕೊಡುತ್ತದೆ. ವಾಸ್ತವವೇನಂದರೆ, ಅವನೂ ಅವನ ಪತ್ನಿಯೂ ಸುವಾರ್ತಾ ಕೆಲಸದಲ್ಲಿ ಹುರುಪಿನ ಮಾದರಿಯನ್ನು ಇಡುವಾಗ, ಹಿರಿಯರು, ಅವರ ಪತ್ನಿಯರು ಮತ್ತು ಸಭೆಯಲ್ಲಿ ಉಳಿದವರು ತಮ್ಮ ಶುಶ್ರೂಷೆಯಲ್ಲಿ ಹುರುಪನ್ನು ತೋರಿಸುವಂತೆ ಪ್ರೋತ್ಸಾಹಿಸಲ್ಪಡುತ್ತಾರೆ. “ಸೇವೆಗಾಗಿ ಹುರುಪುಳ್ಳವರಾಗಿರಿ,” ಎಂದು ಒಬ್ಬ ಸರ್ಕಿಟ್ ಮೇಲ್ವಿಚಾರಕನು ಪ್ರೋತ್ಸಾಹಿಸಿದನು. ಅವನು ಕೂಡಿಸಿ ಹೇಳಿದ್ದು: “ಸಭೆಯು ಶುಶ್ರೂಷೆಯಲ್ಲಿ ಎಲ್ಲಿ ಹೆಚ್ಚು ಹುರುಪುಳ್ಳದ್ದಾಗಿದೆಯೊ ಅಲ್ಲಿ ಅವರಿಗಿರುವ ಸಮಸ್ಯೆಗಳು ಕೊಂಚವೆಂದು ನಾನು ಸಾಮಾನ್ಯವಾಗಿ ಕಂಡುಕೊಂಡಿದ್ದೇನೆ.” ಇನ್ನೊಬ್ಬ ಸರ್ಕಿಟ್ ಮೇಲ್ವಿಚಾರಕನು ಹೇಳಿದ್ದು: “ಹಿರಿಯರು ಸಹೋದರ ಸಹೋದರಿಯರೊಂದಿಗೆ ಕ್ಷೇತ್ರದಲ್ಲಿ ಕೆಲಸಮಾಡಿ, ಅವರು ಶುಶ್ರೂಷೆಯಲ್ಲಿ ಆನಂದಿಸುವಂತೆ ಸಹಾಯಮಾಡಿದರೆ, ಅದು ಮನಶ್ಶಾಂತಿ ಮತ್ತು ಯೆಹೋವನನ್ನು ಸೇವಿಸುವುದರಲ್ಲಿ ಅತ್ಯಂತ ತೃಪ್ತಿಯನ್ನು ಫಲಿಸುವುದು ಎಂಬುದು ನನ್ನೆಣಿಕೆ.” ಅಪೊಸ್ತಲ ಪೌಲನು, ‘ಧೈರ್ಯಗೊಂಡು ಬಹು ವಿರೋಧವನ್ನು ಅನುಭವಿಸುವವನಾಗಿ ಥೆಸಲೊನೀಕದವರಿಗೆ ದೇವರ ಸುವಾರ್ತೆಯನ್ನು ತಿಳಿಸಿದನು.’ ಅವರಿಗೆ ಅವನ ಭೇಟಿಯ ಮತ್ತು ಸಾರುವ ಕಾರ್ಯದ ಮೆಚ್ಚಿನ ಸ್ಮೃತಿಗಳಿದ್ದುದರಿಂದ ಅವರು ಅವನನ್ನು ಪುನಃ ನೋಡಬಯಸಿದ್ದು ಆಶ್ಚರ್ಯಕರವಲ್ಲ!—1 ಥೆಸಲೊನೀಕ 2:1, 2; 3:6.
13. ಕ್ಷೇತ್ರ ಸೇವೆಯಲ್ಲಿ ಜೊತೆ ಕ್ರೈಸ್ತರೊಂದಿಗೆ ಕೆಲಸಮಾಡುತ್ತಿರುವಾಗ, ಒಬ್ಬ ಸಂಚರಣ ಮೇಲ್ವಿಚಾರಕನು ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾನೆ?
13 ಕ್ಷೇತ್ರ ಶುಶ್ರೂಷೆಯಲ್ಲಿ ಜೊತೆ ಕ್ರೈಸ್ತರೊಂದಿಗೆ ಕೆಲಸಮಾಡುವಾಗ ಸಂಚರಣ ಮೇಲ್ವಿಚಾರಕನು ಅವರ ಪರಿಸ್ಥಿತಿಗಳನ್ನೂ ಇತಿಮಿತಿಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾನೆ. ಅವನ ಸೂಚನೆಗಳು ಸಹಾಯಕರವಾಗಿರಬಹುದಾದರೂ, ಅನುಭವಸ್ಥ ಹಿರಿಯನೊಂದಿಗೆ ಸಾರುವಾಗ ಕೆಲವರು ಹೆದರಿಕೊಳ್ಳಬಹುದೆಂಬುದನ್ನು ಅವನು ತಿಳಿದಿದ್ದಾನೆ. ಆದುದರಿಂದ, ಕೆಲವು ಸಂದರ್ಭಗಳಲ್ಲಿ ಸಲಹೆಗಿಂತಲೂ ಪ್ರೋತ್ಸಾಹವು ಹೆಚ್ಚು ಉಪಯುಕ್ತವಾಗಿರಬಹುದು. ಒಂದು ಬೈಬಲ್ ಅಧ್ಯಯನಕ್ಕೆ ಪ್ರಚಾರಕರ ಅಥವಾ ಪಯನೀಯರರ ಜೊತೆಗೆ ಹೋಗುವಾಗ, ಅವನು ಅಧ್ಯಯನ ನಡೆಸುವಂತೆ ಅವರು ಇಷ್ಟಪಡಬಹುದು. ಇದು ಅವರ ಕಲಿಸುವ ವಿಧಾನಗಳನ್ನು ಅಭಿವೃದ್ಧಿಗೊಳಿಸುವ ಕೆಲವು ವಿಧಗಳನ್ನು ಅವರಿಗೆ ಪರಿಚಯಿಸುವುದು ಸಂಭಾವ್ಯ.
14. ಹುರುಪಿನ ಸಂಚರಣ ಮೇಲ್ವಿಚಾರಕರು ಇತರರಲ್ಲಿ ಹುರುಪನ್ನು ಹುರಿದುಂಬಿಸುತ್ತಾರೆಂದು ಏಕೆ ಹೇಳಸಾಧ್ಯವಿದೆ?
14 ಹುರುಪಿನ ಸಂಚರಣ ಮೇಲ್ವಿಚಾರಕರು ಇತರರಲ್ಲಿ ಹುರುಪನ್ನು ಉತ್ತೇಜಿಸುತ್ತಾರೆ. ಯುಗಾಂಡದಲ್ಲಿನ ಒಬ್ಬ ಸರ್ಕಿಟ್ ಮೇಲ್ವಿಚಾರಕನು, ಕೊಂಚವೇ ಪ್ರಗತಿಮಾಡುತ್ತಿದ್ದ ಒಂದು ಬೈಬಲ್ ಅಧ್ಯಯನಕ್ಕೆ ಒಬ್ಬ ಸಹೋದರನೊಂದಿಗೆ ಹೋಗಲಿಕ್ಕಾಗಿ ದಟ್ಟವಾದ ಅರಣ್ಯದ ಮಧ್ಯೆ ಒಂದು ತಾಸು ನಡೆದನು. ಅವರ ನಡಗೆಯ ಸಮಯದಲ್ಲಿ ಎಷ್ಟು ಜೋರಾಗಿ ಮಳೆಬಂತೆಂದರೆ, ಅವರು ಪೂರ್ತಿ ಒದ್ದೆಯಾಗಿಹೋದರು. ಆ ಆರು ಜನರಿದ್ದ ಕುಟುಂಬಕ್ಕೆ, ತಮ್ಮ ಭೇಟಿಕಾರನು ಒಬ್ಬ ಸಂಚರಣ ಮೇಲ್ವಿಚಾರಕನಾಗಿದ್ದನೆಂದು ತಿಳಿದುಬಂದಾಗ ಅವರು ತೀರ ಪ್ರಭಾವಿತರಾದರು. ಚರ್ಚಿನ ತಮ್ಮ ಪಾದ್ರಿಗಳು ಮಂದೆಯ ಕಡೆಗೆ ಅಂತಹ ಆಸಕ್ತಿಯನ್ನು ಎಂದಿಗೂ ತೋರಿಸುವುದಿಲ್ಲವೆಂದು ಅವರಿಗೆ ಗೊತ್ತಿತ್ತು. ಮುಂದಿನ ಭಾನುವಾರ, ಅವರು ತಮ್ಮ ಪ್ರಥಮ ಕೂಟಕ್ಕೆ ಹಾಜರಾಗಿ, ಯೆಹೋವನ ಸಾಕ್ಷಿಗಳಾಗುವ ಬಯಕೆಯನ್ನು ವ್ಯಕ್ತಪಡಿಸಿದರು.
15. ಮೆಕ್ಸಿಕೋವಿನಲ್ಲಿ ಒಬ್ಬ ಹುರುಪಿನ ಸರ್ಕಿಟ್ ಮೇಲ್ವಿಚಾರಕನಿಗೆ ಯಾವ ಉತ್ತಮ ಅನುಭವವಾಯಿತು?
15 ಮೆಕ್ಸಿಕೋದ ವಹಾಕ ಪ್ರಾಂತ್ಯದಲ್ಲಿ, ಒಬ್ಬ ಸರ್ಕಿಟ್ ಮೇಲ್ವಿಚಾರಕನು ನಿಜವಾಗಿಯೂ ತನ್ನಿಂದ ಅಪೇಕ್ಷಿಸಲ್ಪಡದ ಪ್ರಯತ್ನವೊಂದನ್ನು ಮಾಡಿದನು. ರಾಜ್ಯ ಪ್ರಚಾರಕರಾಗಿದ್ದ ಏಳು ಮಂದಿ ಸೆರೆವಾಸಿಗಳ ಗುಂಪೊಂದನ್ನು ಸಂದರ್ಶಿಸಲು, ನಾಲ್ಕು ರಾತ್ರಿಗಳ ವರೆಗೆ ಸೆರೆಕೋಣೆಯಲ್ಲಿ ಉಳಿಯುವಂತೆ ಅವನು ಏರ್ಪಡಿಸಿದನು. ಕೆಲವು ದಿನಗಳ ವರೆಗೆ ಈ ಕೈದಿಗಳು ಸೆರೆಕೋಣೆಯಿಂದ ಸೆರೆಕೋಣೆಗೆ ಹೋಗಿ ಸಾಕ್ಷಿನೀಡಿ, ಬೈಬಲ್ ಅಧ್ಯಯನಗಳನ್ನು ನಡೆಸಿದಾಗ, ಅವನು ಅವರ ಜೊತೆಗೆ ಹೋದನು. ತೋರಿಸಲ್ಪಟ್ಟ ಆಸಕ್ತಿಯ ಕಾರಣ, ಈ ಅಧ್ಯಯನಗಳಲ್ಲಿ ಕೆಲವು ತುಂಬ ರಾತ್ರಿಯ ತನಕ ನಡೆದವು. “ಸಂದರ್ಶನಾಂತ್ಯದಲ್ಲಿ, ಪರಸ್ಪರ ಪ್ರೋತ್ಸಾಹದ ಫಲವಾಗಿ, ಆ ಸೆರೆವಾಸಿಗಳೂ ನಾನೂ ಹರ್ಷಭರಿತರಾದೆವು,” ಎಂದು ಬರೆಯುತ್ತಾನೆ, ಈ ಹುರುಪಿನ ಸರ್ಕಿಟ್ ಮೇಲ್ವಿಚಾರಕನು.
16. ಸಂಚರಣ ಮೇಲ್ವಿಚಾರಕರು ಮತ್ತು ಅವರ ಪತ್ನಿಯರು ಪ್ರೋತ್ಸಾಹವನ್ನು ನೀಡುವಾಗ, ಅದು ಏಕೆ ಅಷ್ಟು ಪ್ರಯೋಜನಕರವಾದದ್ದಾಗಿದೆ?
16 ಸಂಚರಣ ಮೇಲ್ವಿಚಾರಕರು ಪ್ರೋತ್ಸಾಹದಾಯಕರಾಗಿರಲು ಪ್ರಯತ್ನಿಸುತ್ತಾರೆ. ಪೌಲನು ಮಕೆದೋನ್ಯದಲ್ಲಿದ್ದ ಸಭೆಗಳನ್ನು ಸಂದರ್ಶಿಸಿದಾಗ, ‘ಅವನು ಅವರನ್ನು ಅನೇಕ ಮಾತುಗಳಿಂದ ಧೈರ್ಯಪಡಿಸಿದನು.’ (ಅ. ಕೃತ್ಯಗಳು 20:1, 2) ಕಿರಿಯರನ್ನೂ ಹಿರಿಯರನ್ನೂ ಆತ್ಮಿಕ ಗುರಿಗಳ ಕಡೆಗೆ ನಿರ್ದೇಶಿಸಲು ಪ್ರೋತ್ಸಾಹದ ಮಾತುಗಳು ಬಹು ಸಹಾಯಕರವಾಗಿರಬಲ್ಲವು. ವಾಚ್ ಟವರ್ ಸೊಸೈಟಿಯ ಒಂದು ದೊಡ್ಡ ಬ್ರಾಂಚ್ ಆಫೀಸಿನಲ್ಲಿ, ಒಂದು ಅನೌಪಚಾರಿಕ ಸಂಖ್ಯಾಸಂಗ್ರಹಣವು, ಪೂರ್ಣ ಸಮಯದ ಸೇವೆಯನ್ನು ತೆಗೆದುಕೊಳ್ಳಲು ಮುಂದಾದವರಲ್ಲಿ ಸುಮಾರು 20 ಪ್ರತಿಶತ ಮಂದಿಯನ್ನು ಸರ್ಕಿಟ್ ಮೇಲ್ವಿಚಾರಕರು ಪ್ರೋತ್ಸಾಹಿಸಿದ್ದರೆಂದು ತಿಳಿಸಿತು. ಪೂರ್ಣ ಸಮಯದ ರಾಜ್ಯ ಘೋಷಕಿಯೋಪಾದಿ ಉತ್ತಮ ಮಾದರಿಯ ಮೂಲಕ, ಸಂಚರಣ ಮೇಲ್ವಿಚಾರಕನ ಪತ್ನಿಯು ಸಹ, ಪ್ರೋತ್ಸಾಹದ ಮಹಾ ಮೂಲವಾಗಿ ಪರಿಣಮಿಸುತ್ತಾಳೆ.
17. ಇತರರಿಗೆ ಸಹಾಯ ನೀಡುವ ತನ್ನ ಸುಯೋಗದ ಕುರಿತು ಒಬ್ಬ ವೃದ್ಧ ಸರ್ಕಿಟ್ ಮೇಲ್ವಿಚಾರಕನಿಗೆ ಹೇಗೆನಿಸುತ್ತದೆ?
17 ವೃದ್ಧರು ಮತ್ತು ಖಿನ್ನರು, ವಿಶೇಷವಾಗಿ ಪ್ರೋತ್ಸಾಹದ ಅಗತ್ಯವುಳ್ಳವರಾಗಿರುತ್ತಾರೆ. ಒಬ್ಬ ವೃದ್ಧನಾದ ಸರ್ಕಿಟ್ ಮೇಲ್ವಿಚಾರಕನು ಬರೆಯುವುದು: “ನನ್ನ ಕೆಲಸದಲ್ಲಿ ಅವರ್ಣನೀಯವಾದ ಆಂತರಿಕ ಆನಂದವನ್ನು ಉಂಟುಮಾಡುವ ಒಂದು ಅಂಶವು, ದೇವರ ಮಂದೆಯ ಮಧ್ಯೆ ಇರುವ ನಿಷ್ಕ್ರಿಯರಿಗೆ ಮತ್ತು ನಿರ್ಬಲರಿಗೆ ಸಹಾಯವನ್ನು ನೀಡುವ ಸುಯೋಗವೇ. ‘ಅವರು ದೃಢವಾಗುವಂತೆ ಮಾಡಲಿಕ್ಕಾಗಿ ನನ್ನ ಮೂಲಕ ಅವರಿಗೆ ಆತ್ಮಿಕ ವರವೇನಾದರೂ ದೊರಕುವಾಗ’ ನಾನು ಬಹಳ ಪ್ರೋತ್ಸಾಹ ಮತ್ತು ಶಕ್ತಿಯನ್ನು ಪಡೆಯುವದರಿಂದ, ರೋಮಾಪುರ 1:11, 12ರ ಮಾತುಗಳು ನನಗೆ ವಿಶೇಷ ಅರ್ಥವುಳ್ಳವುಗಳಾಗಿವೆ.”
ಅವರ ಹರ್ಷಭರಿತ ಕಾರ್ಯದ ಪ್ರತಿಫಲಗಳು
18. ಯಾವ ಶಾಸ್ತ್ರೀಯ ಲಕ್ಷ್ಯಗಳು ಸಂಚರಣ ಮೇಲ್ವಿಚಾರಕರಿಗಿರುತ್ತವೆ?
18 ಸಂಚರಣ ಮೇಲ್ವಿಚಾರಕರು ತಮ್ಮ ಜೊತೆ ವಿಶ್ವಾಸಿಗಳ ಹಿತಾಸಕ್ತಿಯನ್ನು ಬಯಸುತ್ತಾರೆ. ಅವರು ಸಭೆಗಳನ್ನು ಬಲಪಡಿಸಿ, ಅವುಗಳನ್ನು ಆತ್ಮಿಕವಾಗಿ ಕಟ್ಟಲು ಬಯಸುತ್ತಾರೆ. (ಅ. ಕೃತ್ಯಗಳು 15:41) ಒಬ್ಬ ಸಂಚರಣ ಮೇಲ್ವಿಚಾರಕನು, “ಪ್ರೋತ್ಸಾಹಿಸಲು, ಚೈತನ್ಯವನ್ನು ಒದಗಿಸಲು, ಶುಶ್ರೂಷೆಯನ್ನು ನೆರವೇರಿಸುವ ಬಯಕೆಯನ್ನು ಪ್ರವರ್ತಿಸಲು ಮತ್ತು ಸತ್ಯವನ್ನು ಜೀವಿಸುತ್ತ ಮುಂದುವರಿಯಲು” ಕಷ್ಟಪಟ್ಟು ಕೆಲಸಮಾಡುತ್ತಾನೆ. (3 ಯೋಹಾನ 3) ಇನ್ನೊಬ್ಬನು ಜೊತೆವಿಶ್ವಾಸಿಗಳನ್ನು ನಂಬಿಕೆಯಲ್ಲಿ ದೃಢಪಡಿಸಲು ಪ್ರಯತ್ನಿಸುತ್ತಾನೆ. (ಕೊಲೊಸ್ಸೆ 2:6, 7) ಸಂಚರಣ ಮೇಲ್ವಿಚಾರಕನು “ಸತ್ಯ ಸಯುಜನು” ಆಗಿದ್ದಾನೆ, ಇತರರ ನಂಬಿಕೆಯ ಮೇಲೆ ಯಜಮಾನನಲ್ಲವೆಂಬುದನ್ನು ನೆನಪಿನಲ್ಲಿಡಿರಿ. (ಫಿಲಿಪ್ಪಿ 4:3; 2 ಕೊರಿಂಥ 1:24) ಅವನ ಸಂದರ್ಶನವು ಪ್ರೋತ್ಸಾಹ ಮತ್ತು ಹೆಚ್ಚಿನ ಚಟುವಟಿಕೆಗಾಗಿ ಹಾಗೂ ಮಾಡಲ್ಪಟ್ಟ ಪ್ರಗತಿಯನ್ನು ಪುನರ್ವಿಮರ್ಶಿಸಿ, ಭಾವೀ ಗುರಿಗಳನ್ನು ಪರಿಗಣಿಸಲು ಹಿರಿಯರ ಮಂಡಳಿಗಿರುವ ಅವಕಾಶವಾಗಿದೆ. ಅವನ ಮಾತುಗಳು ಮತ್ತು ಮಾದರಿಯಿಂದ ಸಭಾ ಪ್ರಚಾರಕರು, ಪಯನೀಯರರು, ಶುಶ್ರೂಷಾ ಸೇವಕರು ಮತ್ತು ಹಿರಿಯರು ಆತ್ಮೋನ್ನತಿ ಮಾಡಲ್ಪಡುವಂತೆ ಮತ್ತು ಮುಂದಿರುವ ಕೆಲಸಕ್ಕಾಗಿ ಹುರಿದುಂಬಿಸಲ್ಪಡುವಂತೆ ನಿರೀಕ್ಷಿಸಸಾಧ್ಯವಿದೆ. (1 ಥೆಸಲೊನೀಕ 5:11ನ್ನು ಹೋಲಿಸಿರಿ.) ಹಾಗಾದರೆ, ಸರ್ಕಿಟ್ ಮೇಲ್ವಿಚಾರಕನ ಸಂದರ್ಶನಗಳನ್ನು ಪೂರ್ಣ ಹೃದಯದಿಂದ ಬೆಂಬಲಿಸಿರಿ, ಮತ್ತು ಡಿಸ್ಟ್ರಿಕ್ಟ್ ಮೇಲ್ವಿಚಾರಕನು ಮಾಡುವ ಸೇವೆಯ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಿರಿ.
19, 20. ತಮ್ಮ ನಂಬಿಗಸ್ತ ಸೇವೆಗಾಗಿ, ಸಂಚರಣ ಮೇಲ್ವಿಚಾರಕರು ಮತ್ತು ಅವರ ಪತ್ನಿಯರು ಹೇಗೆ ಪ್ರತಿಫಲಿತರಾಗಿದ್ದಾರೆ?
19 ಸಂಚರಣ ಮೇಲ್ವಿಚಾರಕರು ಮತ್ತು ಅವರ ಪತ್ನಿಯರು ತಮ್ಮ ನಂಬಿಗಸ್ತ ಸೇವೆಗಾಗಿ ಹೇರಳವಾದ ಪ್ರತಿಫಲವನ್ನು ಪಡೆಯುತ್ತಾರೆ, ಮತ್ತು ತಾವು ಮಾಡುವ ಒಳಿತಿಗಾಗಿ ಯೆಹೋವನು ತಮ್ಮನ್ನು ಆಶೀರ್ವದಿಸುವನೆಂದು ಅವರು ಭರವಸೆಯಿಡಸಾಧ್ಯವಿದೆ. (ಜ್ಞಾನೋಕ್ತಿ 19:17; ಎಫೆಸ 6:8) ಗೇಆರ್ಗ್ ಮತ್ತು ಮಾಗ್ದಾಲೇನ, ಅನೇಕ ವರ್ಷಗಳ ವರೆಗೆ ಸಂಚರಣ ಕೆಲಸದಲ್ಲಿ ಸೇವೆಮಾಡಿದ ಒಬ್ಬ ವೃದ್ಧ ದಂಪತಿಗಳು. ಲಕ್ಸೆಂಬರ್ಗಿನಲ್ಲಿ ನಡೆದ ಅಧಿವೇಶನದಲ್ಲಿ, ಯಾರಿಗೆ ಮಾಗ್ದಾಲೇನ 20ಕ್ಕೂ ಹೆಚ್ಚು ವರುಷಗಳ ಹಿಂದೆ ಸಾಕ್ಷಿಕೊಟ್ಟಿದ್ದಳೊ, ಆ ಒಬ್ಬ ಹೆಂಗಸು ಅವಳನ್ನು ಸಮೀಪಿಸಿದಳು. ಈ ಯೆಹೂದಿ ಹೆಂಗಸಿನಲ್ಲಿ ಸತ್ಯಾಸಕ್ತಿಯು ಮಾಗ್ದಾಲೇನ ಅವಳಲ್ಲಿ ಬಿಟ್ಟುಹೋಗಿದ್ದ ಬೈಬಲ್ ಸಾಹಿತ್ಯದಿಂದ ಕೆರಳಿಸಲ್ಪಟ್ಟಿತು, ಮತ್ತು ಸಕಾಲದಲ್ಲಿ ಆಕೆ ದೀಕ್ಷಾಸ್ನಾತಳಾದಳು. ಗೇಆರ್ಗ್ನನ್ನು ಆತ್ಮಿಕ ಸಹೋದರಿಯೊಬ್ಬಳು, ಸುಮಾರು 40 ವರ್ಷಗಳ ಹಿಂದೆ ಅವನು ತನ್ನ ಮನೆಗೆ ಭೇಟಿಕೊಟ್ಟದ್ದನ್ನು ನೆನಪಿಸಿಕೊಳ್ಳುತ್ತ ಸಮೀಪಿಸಿದಳು. ಅವನ ಉತ್ಸಾಹಪೂರ್ವಕವಾದ ಸುವಾರ್ತಾ ನೀಡುವಿಕೆಯು, ಅಂತಿಮವಾಗಿ ಆಕೆಯೂ ಆಕೆಯ ಗಂಡನೂ ಸತ್ಯವನ್ನು ಅಂಗೀಕರಿಸುವಂತೆ ನಡೆಸಿತು. ಗೇಆರ್ಗ್ ಮತ್ತು ಮಾಗ್ದಾಲೇನ ಇವರಿಬ್ಬರೂ ಆನಂದಪರವಶರಾದರೆಂದು ಹೇಳುವ ಅವಶ್ಯವಿಲ್ಲ.
20 ಎಫೆಸದಲ್ಲಿ ಪೌಲನ ಫಲಭರಿತ ಶುಶ್ರೂಷೆಯು ಅವನಿಗೆ ಆನಂದವನ್ನು ತಂದಿತು ಮತ್ತು ಯೇಸುವಿನ, “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ” ಎಂಬ ಮಾತುಗಳನ್ನು ಉಲ್ಲೇಖಿಸಲು ಇದೇ ಅವನನ್ನು ಪ್ರಚೋದಿಸಿದ್ದಿರಬಹುದು. (ಅ. ಕೃತ್ಯಗಳು 20:35) ಸಂಚಾರ ಕೆಲಸದಲ್ಲಿ ಸತತವಾಗಿ ಕೊಡುವುದು ಸೇರಿಕೊಂಡಿರುವುದರಿಂದ, ಅದರಲ್ಲಿ ಭಾಗವಹಿಸುವವರು, ವಿಶೇಷವಾಗಿ ತಮ್ಮ ಶ್ರಮದ ಉತ್ತಮ ಪರಿಣಾಮಗಳನ್ನು ಅರಿತವರಾಗುವಾಗ ಸಂತೋಷವನ್ನು ಅನುಭವಿಸುತ್ತಾರೆ. ಒಬ್ಬ ನಿರುತ್ತೇಜಿತ ಹಿರಿಯನಿಗೆ ಸಹಾಯ ನೀಡಿದ ಸರ್ಕಿಟ್ ಮೇಲ್ವಿಚಾರನಿಗೆ ಒಂದು ಪತ್ರದಲ್ಲಿ ಹೀಗೆ ಹೇಳಲಾಯಿತು: “ನನ್ನ ಆತ್ಮಿಕ ಜೀವನದಲ್ಲಿ ನೀವು, ನಿಮಗೆ ತಿಳಿದಿರುವುದಕ್ಕಿಂತಲೂ ಹೆಚ್ಚು ಮಹಾ ‘ಉಪಶಮನ’ವಾಗಿದ್ದೀರಿ. . . . ಯಾರ ‘ಕಾಲುಗಳು ಇನ್ನೇನು ಜಾರಿದವುಗಳು ಆಗಿದ್ದವೊ’ ಅಂತಹ ಒಬ್ಬ ಆಧುನಿಕ ದಿನದ ಆಸಾಫನಿಗೆ ನೀವು ಎಷ್ಟೊಂದು ಸಹಾಯವಾಗಿದ್ದಿರೆಂದು ನೀವು ಎಂದಿಗೂ ಪೂರ್ಣವಾಗಿ ತಿಳಿಯಲಾರಿರಿ.”—ಕೊಲೊಸ್ಸೆ 4:11; ಕೀರ್ತನೆ 73:2.
21. ಸಂಚರಣ ಮೇಲ್ವಿಚಾರಕರ ಚಟುವಟಿಕೆಗಳಿಗೆ 1 ಕೊರಿಂಥ 15:58 ಅನ್ವಯಿಸುತ್ತದೆಂದು ನೀವು ಏಕೆ ಹೇಳುವಿರಿ?
21 ಅನೇಕ ವರ್ಷಗಳ ಕಾಲ ಸರ್ಕಿಟ್ ಕೆಲಸದಲ್ಲಿದ್ದ ಒಬ್ಬ ವೃದ್ಧ ಕ್ರೈಸ್ತನು, 1 ಕೊರಿಂಥ 15:58ನ್ನು ಜ್ಞಾಪಿಸಿಕೊಳ್ಳಲು ಇಷ್ಟಪಡುತ್ತಾನೆ. ಅಲ್ಲಿ ಪೌಲನು ಪ್ರೋತ್ಸಾಹಿಸಿದ್ದು: “ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರಿ.” ಖಂಡಿತವಾಗಿಯೂ ಸಂಚರಣ ಮೇಲ್ವಿಚಾರಕರಿಗೆ ಕರ್ತನ ಕೆಲಸದಲ್ಲಿ ಮಾಡಲು ತುಂಬ ಇದೆ. ಮತ್ತು ಅವರು ಯೆಹೋವನ ಅಪಾತ್ರ ದಯೆಯ ನಂಬಿಗಸ್ತ ಮನೆವಾರ್ತೆಯವರಾಗಿ ಅಷ್ಟು ಸಂತೋಷದಿಂದ ಸೇವೆಮಾಡುವುದಕ್ಕಾಗಿ ನಾವೆಷ್ಟು ಕೃತಜ್ಞರು!
[ಅಧ್ಯಯನ ಪ್ರಶ್ನೆಗಳು]
a ಮೇ 15, 1991ರ ದ ವಾಚ್ಟವರ್ನಲ್ಲಿ “ಕ್ಯಾನ್ ಯೂ ಬಿ ಹ್ಯಾಪಿ ವಿದ್ ಮಚ್ ಟು ಡು?” ಎಂಬ ಲೇಖನದ, 28-31 ಪುಟಗಳನ್ನು ನೋಡಿರಿ.
ನೀವು ಹೇಗೆ ಉತ್ತರಿಸುವಿರಿ?
◻ ಸಂಚರಣ ಮೇಲ್ವಿಚಾರಕರನ್ನು “ಒಳ್ಳೆಯ ಮನೆವಾರ್ತೆಯವರು” ಎಂಬುದಾಗಿ ಏಕೆ ವೀಕ್ಷಿಸಸಾಧ್ಯವಿದೆ?
◻ ಸರ್ಕಿಟ್ ಮತ್ತು ಡಿಸ್ಟ್ರಿಕ್ಟ್ ಮೇಲ್ವಿಚಾರಕರು ಹೆಚ್ಚು ಒಳ್ಳೆಯದನ್ನು ಸಾಧಿಸುವಂತೆ ಸಹಾಯಮಾಡುವ ಕೆಲವು ಸಂಗತಿಗಳಾವುವು?
◻ ಸಂಚರಣ ಕೆಲಸದಲ್ಲಿ ಭಾಗವಹಿಸುವವರಿಗೆ ದೈನ್ಯಭಾವ ಮತ್ತು ಹುರುಪು ಅಷ್ಟು ಪ್ರಾಮುಖ್ಯವೇಕೆ?
◻ ಸಂಚರಣ ಮೇಲ್ವಿಚಾರಕರಿಗೆ ಯಾವ ಉತ್ತಮ ಲಕ್ಷ್ಯಗಳಿವೆ?
[ಪುಟ 16 ರಲ್ಲಿರುವ ಚಿತ್ರ]
ಸಂಚರಣ ಮೇಲ್ವಿಚಾರಕರು ಜೊತೆ ವಿಶ್ವಾಸಿಗಳನ್ನು ಪ್ರೋತ್ಸಾಹಿಸಲು ಪ್ರಯತ್ನಿಸುತ್ತಾರೆ
[ಪುಟ 17 ರಲ್ಲಿರುವ ಚಿತ್ರ]
ಸಂಚರಣ ಮೇಲ್ವಿಚಾರಕರು ಮತ್ತು ಅವರ ಪತ್ನಿಯ ರೊಂದಿಗೆ ಮಾಡುವ ಒಡನಾಟದಿಂದ ಕಿರಿಯರೂ ಹಿರಿಯರೂ ಒಂದೇ ಸಮನಾಗಿ ಪ್ರಯೋಜನ ಪಡೆಯಬಲ್ಲರು
[ಪುಟ 18 ರಲ್ಲಿರುವ ಚಿತ್ರ]
ಸಂಚರಣ ಮೇಲ್ವಿಚಾರಕನ ಹುರುಪಿನ ಶುಶ್ರೂಷೆಯು ಇತರರಲ್ಲಿ ಹುರುಪನ್ನು ಪ್ರವರ್ತಿಸುತ್ತದೆ