ಎಲ್ಲರಿಗೂ ಪ್ರೋತ್ಸಾಹದ ವಿನಿಮಯ
1. ಸಂಚರಣಾ ಮೇಲ್ವಿಚಾರಕರ ಸಂದರ್ಶನಗಳು ಯಾವ ವಿಶೇಷ ಸಂದರ್ಭಗಳನ್ನು ಒದಗಿಸುತ್ತವೆ?
1 ಅಪೊಸ್ತಲ ಪೌಲನು ರೋಮಾಪುರದ ಸಭೆಗೆ ಬರೆದದ್ದು: “ನಿಮ್ಮನ್ನು ದೃಢಪಡಿಸುವುದಕ್ಕಾಗಿ ನಾನು ನಿಮಗೆ ಕೆಲವು ಆತ್ಮಿಕ ವರಗಳನ್ನು ಕೊಡಲು ನಿಮ್ಮನ್ನು ನೋಡಬೇಕೆಂದು ಅಪೇಕ್ಷಿಸುತ್ತೇನೆ. ಹೀಗೆ ನಾವು ಒಬ್ಬರಿಂದೊಬ್ಬರ ನಂಬಿಕೆಯಿಂದ ಪರಸ್ಪರ ಪ್ರೋತ್ಸಾಹಗೊಳ್ಳಬೇಕು.” (ರೋಮಾ. 1:11, 12, NIBV) ಆಧುನಿಕ ದಿನದಲ್ಲಿ ಸಂಚರಣಾ ಮೇಲ್ವಿಚಾರಕರ ಸಂದರ್ಶನಗಳು ಪ್ರೋತ್ಸಾಹದ ವಿನಿಮಯಕ್ಕೆ ತದ್ರೀತಿಯ ಸಂದರ್ಭಗಳನ್ನು ಒದಗಿಸುತ್ತವೆ.
2. ಸರ್ಕಿಟ್ ಮೇಲ್ವಿಚಾರಕನ ಸಂದರ್ಶನವನ್ನು ಸಮಯಕ್ಕೆ ಮುಂಚಿತವಾಗಿಯೇ ಪ್ರಕಟಿಸಲಾಗುತ್ತದೆ ಏಕೆ?
2 ಸಭೆ: ಸರ್ಕಿಟ್ ಮೇಲ್ವಿಚಾರಕನ ಸಂದರ್ಶನವನ್ನು ಸಾಮಾನ್ಯವಾಗಿ ಸುಮಾರು ಮೂರು ತಿಂಗಳು ಮುಂಚಿತವಾಗಿಯೇ ಸಭೆಗೆ ಪ್ರಕಟಿಸಲಾಗುತ್ತದೆ. ಆ ಸಂದರ್ಶನದಿಂದ ಪೂರ್ಣವಾಗಿ ಪ್ರಯೋಜನ ಹೊಂದಲು ಮುಂಚಿತವಾಗಿ ಯೋಜನೆಮಾಡುವಂತೆ ಇದು ನಮಗೆ ಸಮಯ ಕೊಡುತ್ತದೆ. (ಎಫೆ. 5:15, 16) ನೀವು ಐಹಿಕ ಉದ್ಯೋಗವನ್ನು ಮಾಡುತ್ತಿರುವಲ್ಲಿ, ಆ ವಾರದ ಕ್ಷೇತ್ರ ಸೇವೆಯನ್ನು ಬೆಂಬಲಿಸಲು ಒಂದುವೇಳೆ ರಜೆಗಾಗಿ ವಿನಂತಿಸಸಾಧ್ಯವಾಗುವುದು. ಕೆಲವರಾದರೋ ಸಂದರ್ಶನದ ತಿಂಗಳಲ್ಲಿ ಆಕ್ಸಿಲಿಯರಿ ಪಯನೀಯರರಾಗಲು ಏರ್ಪಡಿಸುತ್ತಾರೆ. ಆ ಸಮಯದಲ್ಲಿ ಬೇರೆಲ್ಲಿಗಾದರೂ ಹೋಗಲು ನೀವು ಮೊದಲೇ ಯೋಜಿಸಿದ್ದರೆ, ನಿಮ್ಮ ಯೋಜನೆಗಳನ್ನು ಬದಲಾಯಿಸಿ ಸಂದರ್ಶನದ ವಾರದಲ್ಲಿ ಉಪಸ್ಥಿತರಿರುವಂತೆ ಏರ್ಪಡಿಸಿಕೊಳ್ಳಲು ಸಾಧ್ಯವಿದೆಯೋ?
3. ಸಂದರ್ಶನದ ಸಮಯದಲ್ಲಿ ಪ್ರೋತ್ಸಾಹ ಪಡೆದುಕೊಳ್ಳಲಿಕ್ಕಾಗಿ ನಾವು ವೈಯಕ್ತಿಕವಾಗಿ ಏನು ಮಾಡಬಹುದು?
3 ಸರ್ಕಿಟ್ ಮೇಲ್ವಿಚಾರಕನ ಸಂದರ್ಶನದ ಒಂದು ಮುಖ್ಯ ಉದ್ದೇಶವು ವೈಯಕ್ತಿಕ ಪ್ರೋತ್ಸಾಹ ಮತ್ತು ಕ್ಷೇತ್ರ ಶುಶ್ರೂಷೆಯಲ್ಲಿ ತರಬೇತಿ ನೀಡುವುದೇ ಆಗಿದೆ. ನೀವು ಅವನೊಂದಿಗೆ ಅಥವಾ ಅವನು ವಿವಾಹಿತನಾಗಿದ್ದಲ್ಲಿ ಅವನ ಪತ್ನಿಯೊಂದಿಗೆ ಸೇವೆಮಾಡಲು ಕೇಳಿಕೊಳ್ಳಬಲ್ಲಿರಿ. ಶುಶ್ರೂಷೆಯಲ್ಲಿ ಕಡಿಮೆ ಅನುಭವ ಅಥವಾ ಸೇವಾ ಕೌಶಲದಲ್ಲಿ ಕೊರತೆ ಇರುವವರನ್ನೂ ಸೇರಿಸಿ ಬೇರೆ ಬೇರೆ ಪ್ರಚಾರಕರೊಂದಿಗೆ ಸೇವೆ ಮಾಡಲು ಸರ್ಕಿಟ್ ಮೇಲ್ವಿಚಾರಕನು ಸಂತೋಷಿಸುತ್ತಾನೆ. ಎಲ್ಲರೂ ಅವನ ಕ್ಷೇತ್ರಸೇವಾ ನಿರೂಪಣೆಗಳಿಂದ ಕಲಿಯಬಲ್ಲರು ಮತ್ತು ಅವನು ದಯೆಯಿಂದ ನೀಡಬಹುದಾದ ಯಾವುದೇ ಸಲಹೆಗಳನ್ನು ಅನ್ವಯಿಸಬಲ್ಲರು. (1 ಕೊರಿಂ. 4:16, 17) ಅವನನ್ನು ಒಂದು ಊಟಕ್ಕಾಗಿ ಆಮಂತ್ರಿಸುವುದಾದರೆ ಪ್ರೋತ್ಸಾಹನೀಯ ಸಹವಾಸಕ್ಕಾಗಿ ಅಧಿಕ ಸಂದರ್ಭವು ನಿಮಗೆ ದೊರೆಯುವುದು. (ಇಬ್ರಿ. 13:2) ಅವನ ಭಾಷಣಗಳು ಸಭಾ ಅಗತ್ಯಗಳಿಗೆ ಹೊಂದಿಕೆಯಾಗಿ ರಚಿಸಲಾಗುವುದರಿಂದ ಅವುಗಳಿಗೆ ತದೇಕಚಿತ್ತದಿಂದ ಕಿವಿಗೊಡಿರಿ.
4. ನಮ್ಮ ಸರ್ಕಿಟ್ ಮೇಲ್ವಿಚಾರಕನಿಗೆ ನಾವು ಹೇಗೆ ಪ್ರೋತ್ಸಾಹ ನೀಡಬಹುದು?
4 ಸರ್ಕಿಟ್ ಮೇಲ್ವಿಚಾರಕ: ಅಪೊಸ್ತಲ ಪೌಲನು ತಾನು ಸೇವೆನಡಿಸಿದ ಸಭೆಗಳಲ್ಲಿದ್ದ ಸಹೋದರರಿಗಿಂತ ಭಿನ್ನನಾಗಿರಲಿಲ್ಲ. ಅವರಂತೆ ಅವನಿಗೂ ಪಂಥಾಹ್ವಾನಗಳು ಮತ್ತು ಚಿಂತೆಗಳಿದ್ದವು; ಅವರ ಪ್ರೋತ್ಸಾಹ ಅವನಿಗೆ ಬೇಕಾಗಿತ್ತು ಮತ್ತು ಅದಕ್ಕಾಗಿ ಆಭಾರಿಯಾಗಿದ್ದನು. (2 ಕೊರಿಂ. 11:26-28) ಸೆರೆಯಲ್ಲಿದ್ದ ಪೌಲನು ಈಗ ಕೊನೆಗೂ ತಮ್ಮಲ್ಲಿಗೆ ಬರುತ್ತಿದ್ದಾನೆಂದು ರೋಮಾಪುರದ ಸಭೆಗೆ ತಿಳಿದಾಗ, ಅವನನ್ನು ಎದುರುಗೊಳ್ಳುವುದಕ್ಕಾಗಿ ಕೆಲವರು ಸುಮಾರು 74 ಕಿ.ಮೀ. ದೂರದಲ್ಲಿದ್ದ ಅಪ್ಪಿಯ ಪೇಟೆಯ ವರೆಗೂ ನಡೆದುಬಂದರು! “ಪೌಲನು ಅವರನ್ನು ನೋಡಿ ದೇವರ ಸ್ತೋತ್ರವನ್ನು ಮಾಡಿ ಧೈರ್ಯಗೊಂಡನು.” (ಅ. ಕೃ. 28:15) ತದ್ರೀತಿಯಲ್ಲಿ ನೀವು ಸಹ ನಿಮ್ಮ ಸರ್ಕಿಟ್ ಮೇಲ್ವಿಚಾರಕನಿಗೆ ಪ್ರೋತ್ಸಾಹವನ್ನು ನೀಡಬಲ್ಲಿರಿ. ಅವನ ಸಂದರ್ಶನಕ್ಕಾಗಿ ನಿಮ್ಮ ಉತ್ಸಾಹಭರಿತ ಬೆಂಬಲವನ್ನು ಕೊಡುವ ಮೂಲಕ ಅವನಿಗೆ “ಇಮ್ಮಡಿಯಾದ ಮಾನ”ವನ್ನು ತೋರಿಸಿರಿ. (1 ತಿಮೊ. 5:17) ನಿಮ್ಮ ಪರವಾಗಿ ಅವನು ಮಾಡುವ ಪ್ರಯತ್ನಗಳಿಗಾಗಿ ನಿಮ್ಮ ಯಥಾರ್ಥ ಗಣ್ಯತೆಯನ್ನು ತಿಳಿಸಿರಿ ಮತ್ತು ತೋರಿಸಿರಿ. ನಿಮ್ಮ ನಂಬಿಕೆ, ಪ್ರೀತಿ ಮತ್ತು ತಾಳ್ಮೆಯನ್ನು ನೋಡಿ ಅವನೂ ಅವನ ಪತ್ನಿಯೂ ನಿಜವಾಗಿ ಉಲ್ಲಾಸಿಸುವರು.—2 ಥೆಸ. 1:3, 4.
5. ಇಂದು ನಮಗೆಲ್ಲರಿಗೂ ಪ್ರೋತ್ಸಾಹದ ಅಗತ್ಯ ಇದೆ ಏಕೆ?
5 ವ್ಯವಹರಿಸಲು ಕಷ್ಟಕರವಾದ ಈ “ಕಠಿನಕಾಲ”ಗಳಲ್ಲಿ ಪ್ರೋತ್ಸಾಹದ ಅಗತ್ಯವಿಲ್ಲದವರು ನಮ್ಮಲ್ಲಿ ಯಾರಿದ್ದಾರೆ? ಯಾರೂ ಇಲ್ಲ. (2 ತಿಮೊ. 3:1) ಆದುದರಿಂದ ಸರ್ಕಿಟ್ ಮೇಲ್ವಿಚಾರಕನೊಂದಿಗೆ ಸೇವಾ ಚಟುವಟಿಕೆಯ ಆ ವಿಶೇಷ ವಾರದಲ್ಲಿ ಪೂರ್ಣವಾಗಿ ಭಾಗವಹಿಸುವಂತೆ ಈಗಲೇ ನಿರ್ಣಯಿಸಿರಿ. ಹೀಗೆ ನಾವೆಲ್ಲರೂ ಅಂದರೆ ಸಂಚರಣಾ ಮೇಲ್ವಿಚಾರಕರು ಹಾಗೂ ಸಭೆಗಳಲ್ಲಿರುವ ಪ್ರಚಾರಕರು ಸಮಾನವಾಗಿ ಒಂದು ಹರ್ಷಭರಿತ ಪ್ರೋತ್ಸಾಹದ ವಿನಿಮಯದಲ್ಲಿ ಭಾಗಿಗಳಾಗಬಲ್ಲೆವು. ಈ ರೀತಿಯಲ್ಲಿ ನಾವು “ಒಬ್ಬರನ್ನೊಬ್ಬರು ಸಂತೈಸಿಕೊಳ್ಳುತ್ತಾ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ” ಇರುವವರೂ ಆಗುತ್ತೇವೆ.—1 ಥೆಸ. 5:11.