ನಮ್ಮ ನಿಷ್ಪಕ್ಷಪಾತ ದೇವರನ್ನು ನೀವು ಅನುಕರಿಸುತ್ತಿದ್ದೀರೊ?
ನಿಷ್ಪಕ್ಷಪಾತ—ಅದನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ? ಪೂರ್ವಾಗ್ರಹ, ಸ್ವಪಕ್ಷಪಾತ ಮತ್ತು ಭೇದಭಾವದಿಂದ ಮುಕ್ತನಾಗಿರುವ, ಸಂಪೂರ್ಣವಾಗಿ ನಿಷ್ಪಕ್ಷಪಾತನಾಗಿರುವ ಒಬ್ಬನು ಇದ್ದಾನೆ. ಆತನು, ಮಾನವಕುಲದ ಸೃಷ್ಟಿಕರ್ತನಾದ ಯೆಹೋವ ದೇವರಾಗಿದ್ದಾನೆ. ಆದಾಗಲೂ, ಮನುಷ್ಯರ ಕುರಿತಾಗಿ, 19ನೆಯ ಶತಮಾನದ ಇಂಗ್ಲಿಷ್ ಲೇಖಕ ಚಾರ್ಲ್ಸ್ ಲ್ಯಾಂಬ್, ಮುಚ್ಚುಮರೆಯಿಲ್ಲದೆ ಬರೆದುದು: “ಸರಳವಾಗಿ ಹೇಳುವುದಾದರೆ, ನಾನು ಇಷ್ಟಾನಿಷ್ಟಗಳಿಂದ ರಚಿಸಲ್ಟಟ್ಟಿರುವ—ಪೂರ್ವಾಗ್ರಹಗಳಿಂದ ತುಂಬಿದವನಾಗಿದ್ದೇನೆ.”
ನಿಷ್ಪಕ್ಷಪಾತದ ವಿಷಯದಲ್ಲಿ, ಮಾನವ ಸಂಬಂಧಗಳು ವಿಷಾದಕರವಾಗಿ ಕೊರತೆಯಲ್ಲಿವೆ. ಅನೇಕ ಶತಮಾನಗಳ ಹಿಂದೆ ಇಸ್ರಾಯೇಲಿನ ಬುದ್ಧಿವಂತ ರಾಜನಾದ ಸೊಲೊಮೋನನು “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟು”ಮಾಡಿದ್ದಾನೆಂಬುದನ್ನು ಅವಲೋಕಿಸಿದನು. (ಪ್ರಸಂಗಿ 8:9) ಜಾತೀಯ ದ್ವೇಷ, ರಾಷ್ಟ್ರೀಯ ಸಂಘರ್ಷಗಳು, ಮತ್ತು ಕುಟುಂಬ ಕಚ್ಚಾಟಗಳು ವೃದ್ಧಿಯಾಗುತ್ತಾ ಇವೆ. ಆದುದರಿಂದ, ಮನುಷ್ಯರು ತಮ್ಮಷ್ಟಕ್ಕೆ ಒಂದು ನಿಷ್ಪಕ್ಷಪಾತ ಸಮಾಜವನ್ನು ಬೆಳೆಸಬಲ್ಲರೆಂಬುದನ್ನು ನಂಬುವುದು ವಾಸ್ತವಿಕವೊ?
ನಮ್ಮ ಮನೋಭಾವಗಳನ್ನು ನಿಯಂತ್ರಿಸಲು ಮತ್ತು ಆಳವಾಗಿ ಬೇರೂರಿರುವ ಯಾವುದೇ ಪೂರ್ವಾಗ್ರಹಗಳನ್ನು ನಮ್ಮಿಂದ ತೆಗೆದುಹಾಕಲು ಪ್ರಜ್ಞಾಪೂರ್ವಕವಾದ ಪ್ರಯತ್ನವು ಅಗತ್ಯ. (ಎಫೆಸ 4:22-24) ನಮ್ಮ ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸರದಿಂದ ರೂಪಿಸಲ್ಪಟ್ಟ ಮತ್ತು ನಮ್ಮ ಕುಟುಂಬಸಂಬಂಧವಾದ, ಜಾತೀಯ, ಮತ್ತು ರಾಷ್ಟ್ರೀಯ ಹಿನ್ನೆಲೆಗಳಲ್ಲಿ ಬೇರೂರಿಸಲ್ಪಟ್ಟ ಮನೋಭಾವಗಳನ್ನು ನಾವು ಅರಿವಿಲ್ಲದೆ ಹೊಂದಿರುವ ಪ್ರವೃತ್ತಿಯುಳ್ಳವರಾಗಿರಬಹುದು. ಸೌಮ್ಯವೆಂದು ತೋರುವಂತಹ ಈ ಪ್ರವೃತ್ತಿಗಳು ಅನೇಕವೇಳೆ ಆಳವಾಗಿ ನೆಟ್ಟುಹೋಗಿರುವಂತಹವುಗಳು ಆಗಿರುತ್ತವೆ ಮತ್ತು ಪಕ್ಷಪಾತಿಗಳಾಗಿರುವಂತೆ ನಡೆಸುವ ಮನೋಭಾವಗಳನ್ನು ಪ್ರವರ್ಧಿಸುತ್ತವೆ. ಸ್ಕಾಟಿಷ್ ನ್ಯಾಯದರ್ಶಿ ಮತ್ತು ಸಂಪಾದಕರಾದ ಲಾರ್ಡ್ ಫ್ರ್ಯಾನ್ಸಿಸ್ ಜೆಫ್ರಿ ಇದನ್ನೂ ಒಪ್ಪಿಕೊಂಡರು: “ಆಳವಾಗಿ ಬೇರೂರಿದ ಒಬ್ಬನ ಪೂರ್ವಾಗ್ರಹಗಳಿಗಿಂತ ಹೆಚ್ಚು ದೀರ್ಘಕಾಲ ಅವನಿಗೆ ಅರಿವಿಲ್ಲದಿರುವ ಬೇರೆ ಯಾವುದೇ ವಿಷಯವಿರುವುದಿಲ್ಲ.”
ಲೀನಾ,a ಪಕ್ಷಪಾತಿಯಾಗಿರುವ ಪ್ರವೃತ್ತಿಯನ್ನು ಹೋರಾಡಲು ಪ್ರಜ್ಞಾಪೂರ್ವಕವಾದ ಪ್ರಯತ್ನವು ಅಗತ್ಯವೆಂದು ಒಪ್ಪಿಕೊಳ್ಳುವ ಒಬ್ಬ ವ್ಯಕ್ತಿಯಾಗಿದ್ದಾಳೆ. ಒಬ್ಬರೊಳಗೆ ಪೂರ್ವಾಗ್ರಹದ ಭಾವನೆಗಳನ್ನು ಅದುಮಿಡಲು, “ತುಂಬ ಪ್ರಯತ್ನವು ಬೇಕಾಗುತ್ತದೆ, ಯಾಕಂದರೆ ಪಾಲನೆಯು ನಿಜವಾಗಿಯೂ ಒಂದು ಅತಿ ಬಲವಾದ ಪ್ರಭಾವವಾಗಿರುತ್ತದೆ” ಎಂದು ಅವಳು ಹೇಳುತ್ತಾಳೆ. ಸತತವಾದ ಮರುಜ್ಞಾಪನಗಳು ಅಗತ್ಯವೆಂದೂ ಲೀನಾ ಒಪ್ಪಿಕೊಳ್ಳುತ್ತಾಳೆ.
ನಿಷ್ಪಕ್ಷಪಾತದ ವಿಷಯದಲ್ಲಿ ಯೆಹೋವನ ದಾಖಲೆ
ಯೆಹೋವನು ನಿಷ್ಪಕ್ಷಪಾತದ ಪರಿಪೂರ್ಣ ಮಾದರಿಯಾಗಿದ್ದಾನೆ. ಬೈಬಲಿನ ಆರಂಭದ ಪುಟಗಳಿಂದಾರಂಭಿಸಿ, ಆತನು ಮನುಷ್ಯರೊಂದಿಗಿನ ತನ್ನ ವ್ಯವಹಾರಗಳಲ್ಲಿ ತನ್ನ ನಿಷ್ಪಕ್ಷಪಾತವನ್ನು ಪ್ರದರ್ಶಿಸಿದ ವಿಧವನ್ನು ನಾವು ಓದುತ್ತೇವೆ. ಈ ಅತ್ಯುತ್ಕೃಷ್ಟವಾದ ಮಾದರಿಗಳು ಮತ್ತು ಮರುಜ್ಞಾಪನಗಳಿಂದ ನಾವು ಹೆಚ್ಚನ್ನು ಕಲಿಯಬಲ್ಲೆವು.
ಸಾ.ಶ. 36ರಲ್ಲಿ ಯೆಹೂದಿ ಅಪೊಸ್ತಲನಾದ ಪೇತ್ರನು, ಕೊರ್ನೇಲ್ಯನಿಗೆ ಮತ್ತು ಇತರ ಅನ್ಯಜಾತಿಯವರಿಗೆ ಸುವಾರ್ತೆಯನ್ನು ಘೋಷಿಸಲು ಸಾಧ್ಯವಾಗುವಂತೆ ವಿಷಯಗಳನ್ನು ನಿರ್ವಹಿಸುವ ಮೂಲಕ ಯೆಹೋವನು ನಿಷ್ಪಕ್ಷಪಾತವನ್ನು ತೋರಿಸಿದನು. ಆ ಸಮಯದಲ್ಲಿ ಪೇತ್ರನು ಹೇಳಿದ್ದು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.”—ಅ. ಕೃತ್ಯಗಳು 10:34, 35.
ಮಾನವ ಕುಟುಂಬದೊಂದಿಗಿನ ತನ್ನ ಎಲ್ಲಾ ವ್ಯವಹಾರಗಳಲ್ಲಿ, ಯೆಹೋವನು ತನ್ನ ನಿಷ್ಪಕ್ಷಪಾತವನ್ನು ನಿರಂತರವಾಗಿ ಪ್ರದರ್ಶಿಸಿದ್ದಾನೆ. ಕ್ರಿಸ್ತ ಯೇಸು ತನ್ನ ತಂದೆಯ ಕುರಿತಾಗಿ ಹೇಳಿದ್ದು: “ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ; ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.” (ಮತ್ತಾಯ 5:45) ಇನ್ನೂ ಮುಂದಕ್ಕೆ, ಯೆಹೋವನನ್ನು ಒಬ್ಬ ನಿಷ್ಪಕ್ಷಪಾತಿ ದೇವರಾಗಿ ಹೊಗಳುತ್ತಾ, ಪೇತ್ರನು ಸಾಕ್ಷ್ಯ ಕೊಟ್ಟದ್ದು: “ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ.”—2 ಪೇತ್ರ 3:9.
ನೋಹನ ದಿನದಲ್ಲಿ, “ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿರುವದನ್ನೂ ಅವರು ಹೃದಯದಲ್ಲಿ ಯೋಚಿಸುವದೆಲ್ಲವು ಯಾವಾಗಲೂ ಬರೀ ಕೆಟ್ಟದ್ದಾಗಿ”ದ್ದ ಸಮಯದಲ್ಲಿ, ಮಾನವಕುಲದ ಆ ಲೋಕದ ನಾಶನವನ್ನು ಯೆಹೋವನು ವಿಧಿಸಿದನು. (ಆದಿಕಾಂಡ 6:5-7, 11, 12) ಆದಾಗಲೂ, ದೇವರ ಆಜ್ಞೆಗನುಸಾರ ಮತ್ತು ತನ್ನ ಸಮಕಾಲೀನರ ನೆಟ್ಟ ನೋಟದ ಮುಂದೆ, ನೋಹನು ಒಂದು ನಾವೆಯನ್ನು ಕಟ್ಟಿದನು. ಅವನು ಮತ್ತು ಅವನ ಪುತ್ರರು ನಾವೆಯನ್ನು ನಿರ್ಮಿಸುತ್ತಿದ್ದಾಗ, ನೋಹನು “ಸುನೀತಿಯನ್ನು ಸಾರುವವ”ನೂ ಆಗಿದ್ದನು. (2 ಪೇತ್ರ 2:5) ಆ ಸಂತತಿಯ ದುಷ್ಟ ಹೃದಯ ಪ್ರವೃತ್ತಿಯನ್ನು ತಿಳಿದಿದ್ದ ಹೊರತೂ, ಯೆಹೋವನು ಅವರಿಗೆ ನಿಷ್ಪಕ್ಷಪಾತದಿಂದ ಒಂದು ಸ್ಪಷ್ಟವಾದ ಸಂದೇಶವನ್ನು ಕಳುಹಿಸಿದನು. ನೋಹನು ನಾವೆಯನ್ನು ಕಟ್ಟುವಂತೆ ಮತ್ತು ಸಾರುವಂತೆ ಮಾಡುವ ಮೂಲಕ ಆತನು ಅವರ ಮನಸ್ಸು ಮತ್ತು ಹೃದಯಗಳಿಗೆ ಅಪೀಲು ಮಾಡಿದನು. ಪ್ರತಿಕ್ರಿಯಿಸಲು ಅವರಿಗೆ ಪ್ರತಿಯೊಂದು ಅವಕಾಶವಿತ್ತು, ಆದರೆ ಅದರ ಬದಲಿಗೆ ಅವರು “ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಗುವ ತನಕ ಏನು ತಿಳಿಯದೇ ಇದ್ದ [“ಗಮನ ಕೊಡದೇ ಹೋದರು,” NW]”ರು.—ಮತ್ತಾಯ 24:39.
ಯೆಹೋವನ ನಿಷ್ಪಕ್ಷಪಾತದ ಎಂತಹ ಒಂದು ಅತ್ಯುತ್ಕೃಷ್ಟ ಮಾದರಿ! ಈ ಕಷ್ಟಕರವಾದ ಕಡೇ ದಿವಸಗಳಲ್ಲಿ, ಇದು ರಾಜ್ಯದ ಸುವಾರ್ತೆಯನ್ನು ತದ್ರೀತಿಯ ನಿಷ್ಪಕ್ಷಪಾತದೊಂದಿಗೆ ಘೋಷಿಸುವಂತೆ ದೇವರ ಸೇವಕರನ್ನು ಪ್ರಚೋದಿಸುತ್ತದೆ. ಇನ್ನೂ ಹೆಚ್ಚಾಗಿ, ಯೆಹೋವನ ಪ್ರತೀಕಾರದ ದಿನವನ್ನು ಪ್ರಕಟಿಸುವುದರಿಂದ ಅವರು ಹಿಂದೆಸರಿಯುವುದಿಲ್ಲ. ಬಹಿರಂಗವಾಗಿ, ಅವರು ಯೆಹೋವನ ಸಂದೇಶವನ್ನು, ಪ್ರತಿಯೊಬ್ಬರಿಗೂ ಕೇಳಿಸುವಂತೆ ಪಕ್ಷಪಾತವಿಲ್ಲದೆ ಸಾದರಪಡಿಸುತ್ತಾರೆ.—ಯೆಶಾಯ 61:1, 2.
ಮೂಲಪಿತೃಗಳಾದ ಅಬ್ರಹಾಮ, ಇಸಾಕ, ಮತ್ತು ಯಾಕೋಬರಿಗೆ ಯೆಹೋವನು ಮಾಡಿದ ವಾಗ್ದಾನಗಳು, ಆತನು ಒಬ್ಬ ನಿಷ್ಪಕ್ಷಪಾತ ದೇವರಾಗಿದ್ದಾನೆಂಬುದನ್ನು ರುಜುಪಡಿಸಿದವು. ಅವರ ನಿರ್ದಿಷ್ಟ ವಂಶಾವಳಿಯ ಮೂಲಕ ‘ಭೂಮಿಯ ಎಲ್ಲಾ ಜನಾಂಗಗಳಿಗೂ ಆಶೀರ್ವಾದವುಂಟಾಗು’ವಂತಹ ನಿಯಮಿತನು ಬರಲಿದ್ದನು. (ಆದಿಕಾಂಡ 22:18; 26:4; 28:14) ಕ್ರಿಸ್ತ ಯೇಸು ಆ ನಿಯಮಿತ ವ್ಯಕ್ತಿಯಾಗಿ ರುಜುವಾದನು. ಯೇಸುವಿನ ಮರಣ ಮತ್ತು ಪುನರುತ್ಥಾನದ ಮೂಲಕ, ಯೆಹೋವನು ಎಲ್ಲಾ ವಿಧೇಯ ಮಾನವಕುಲಕ್ಕಾಗಿ ರಕ್ಷಣೆಯ ಮಾರ್ಗವನ್ನು ಒದಗಿಸಿದನು. ಹೌದು, ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಪ್ರಯೋಜನಗಳು, ಪಕ್ಷಪಾತವಿಲ್ಲದೆ ಲಭ್ಯವಿವೆ.
ಮೋಶೆಯ ದಿನಗಳಲ್ಲಿ, ಯೆಹೋವನ ನಿಷ್ಪಕ್ಷಪಾತವು, ಚಲ್ಪಹಾದನ ಪುತ್ರಿಯರ ಸಂಬಂಧದಲ್ಲಿ ಒಂದು ಅತಿ ಆಸಕ್ತಿಕರವಾದ ವಿಧದಲ್ಲಿ ಪ್ರದರ್ಶಿಸಲ್ಪಟ್ಟಿತು. ಈ ಐವರು ಸ್ತ್ರೀಯರು, ವಾಗ್ದತ್ತ ದೇಶದಲ್ಲಿನ ತಮ್ಮ ತಂದೆಯ ಆಸ್ತಿಯ ಕುರಿತಾಗಿ ಒಂದು ಸಮಸ್ಯೆಯನ್ನು ಎದುರಿಸಿದರು. ಇದು ಯಾಕಂದರೆ, ಆಸ್ತಿಯ ಉತ್ತರಾಧಿಕಾರವು ಒಬ್ಬ ಮನುಷ್ಯನ ಪುತ್ರರ ಮೂಲಕ ದಾಟಿಸಲ್ಪಡುವುದು ಇಸ್ರಾಯೇಲಿನಲ್ಲಿ ರೂಢಿಯಾಗಿತ್ತು. ಆದಾಗಲೂ, ಚಲ್ಪಹಾದನು ಆಸ್ತಿಯನ್ನು ಪಡೆಯಲು ಒಬ್ಬ ಮಗನನ್ನು ಬಿಟ್ಟುಹೋಗದೆ ಸತ್ತನು. ಆದುದರಿಂದ ಚಲ್ಪಹಾದನ ಐವರು ಪುತ್ರಿಯರು, ನಿಷ್ಪಕ್ಷಪಾತ ಉಪಚಾರಕ್ಕಾಗಿ ತಮ್ಮ ಬೇಡಿಕೆಯನ್ನು ಮೋಶೆಯ ಮುಂದೆ ತರುತ್ತಾ, ಹೇಳಿದ್ದು: “ನಮ್ಮ ತಂದೆಗೆ ಗಂಡುಮಗನಿಲ್ಲದ ಮಾತ್ರದಿಂದ ಅವನ ಹೆಸರು ಕುಲದಿಂದ ತೆಗೆಯಲ್ಪಡುವದು ನ್ಯಾಯವೋ? ತಂದೆಯ ಕುಲದವರೊಂದಿಗೆ ನಮಗೂ ಸ್ವಾಸ್ತ್ಯವನ್ನು ಕೊಡಬೇಕು.” ಯೆಹೋವನು ಅವರ ಭಿನ್ನಹಗಳಿಗೆ ಕಿವಿಗೊಟ್ಟು, ಮೋಶೆಗೆ ಆಜ್ಞೆಯಿತ್ತದ್ದು: “ಯಾವನಾದರೂ ಮಗನಿಲ್ಲದೆ ಸತ್ತರೆ ಅವನ ಸ್ವಾಸ್ತ್ಯವು ಅವನ ಮಗಳಿಗೆ ಆಗಬೇಕು.”—ಅರಣ್ಯಕಾಂಡ 27:1-11.
ಎಂತಹ ಒಂದು ನಿಷ್ಪಕ್ಷಪಾತ ಪೂರ್ವನಿದರ್ಶನ! ಪುತ್ರಿಯರು ವಿವಾಹವಾದಾಗ, ಕುಲಸಂಬಂಧವಾದ ಆಸ್ತಿಯು ಇನ್ನೊಂದು ಕುಲಕ್ಕೆ ದಾಟಿಹೋಗದಂತೆ ಖಚಿತಪಡಿಸಿಕೊಳ್ಳಲು, ಅವರು ಕೇವಲ “ತಮ್ಮ ಕುಲದ ಕುಟುಂಬಗಳಲ್ಲಿ . . . ಮದುವೆಮಾಡಿಕೊಳ್ಳಬೇಕೆಂದು” ಅವಶ್ಯಪಡಿಸಲ್ಪಟ್ಟರು.—ಅರಣ್ಯಕಾಂಡ 36:5-12.
ಯೆಹೋವನ ನಿಷ್ಪಕ್ಷಪಾತದ ವಿಷಯದಲ್ಲಿ ಹೆಚ್ಚಿನ ಒಳನೋಟವು, ನ್ಯಾಯಸ್ಥಾಪಕನೂ ಪ್ರವಾದಿಯೂ ಆದ ಸಮುವೇಲನ ದಿನಗಳಲ್ಲಿ ಕಂಡುಬರುತ್ತದೆ. ಯೆಹೋವನು ಅವನನ್ನು ಬೇತ್ಲೆಹೇಮಿನವನಾದ ಇಷಯನ ಕುಟುಂಬದಲ್ಲಿ, ಯೆಹೂದ ಕುಲದ ಒಬ್ಬ ಹೊಸ ರಾಜನನ್ನು ಅಭಿಷೇಕಿಸಲು ನಿಯೋಗಿಸಿದನು. ಆದರೆ ಇಷಯನಿಗೆ ಎಂಟು ಪುತ್ರರಿದ್ದರು. ಯಾರನ್ನು ರಾಜನಾಗಿ ಅಭಿಷೇಕಿಸಲಾಗುವುದು? ಸಮುವೇಲನು ಎಲೀಯಾಬನ ದೈಹಿಕ ಎತ್ತರದಿಂದ ಪ್ರಭಾವಿಸಲ್ಪಟ್ಟನು. ಆದಾಗಲೂ, ಯೆಹೋವನು ಬಾಹ್ಯ ತೋರಿಕೆಯಿಂದ ಪ್ರಭಾವಿಸಲ್ಪಡುವುದಿಲ್ಲ. ಆತನು ಸಮುವೇಲನಿಗೆ ಹೇಳಿದ್ದು: “ನೀನು ಅವನ ಚೆಲುವಿಕೆಯನ್ನೂ ನೀಳವನ್ನೂ ನೋಡಬೇಡ . . . ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ.” ಇಷಯನ, ಕಿರಿಯ ಪುತ್ರನಾದ ದಾವೀದನು ಆರಿಸಿಕೊಳ್ಳಲ್ಪಟ್ಟನು.—1 ಸಮುವೇಲ 16:1, 6-13.
ಯೆಹೋವನ ನಿಷ್ಪಕ್ಷಪಾತದಿಂದ ಕಲಿಯುವುದು
ಒಬ್ಬ ಜೊತೆ ವಿಶ್ವಾಸಿಯ ಆತ್ಮಿಕ ಗುಣಗಳನ್ನು ನೋಡುವ ಮೂಲಕ ಕ್ರೈಸ್ತ ಹಿರಿಯರು ಯೆಹೋವನನ್ನು ಅನುಕರಿಸುವುದು ಒಳ್ಳೆಯದು. ನಮ್ಮ ವೈಯಕ್ತಿಕ ಭಾವನೆಗಳು ನಮ್ಮ ತೀರ್ಮಾನವನ್ನು ಮಬ್ಬುಗೊಳಿಸುವಂತೆ ಬಿಡುತ್ತಾ, ನಮ್ಮ ಸ್ವಂತ ಮಟ್ಟಗಳಿಂದ ವ್ಯಕ್ತಿಯೊಬ್ಬನನ್ನು ತೀರ್ಪುಮಾಡುವುದು ಸುಲಭ. ಒಬ್ಬ ಹಿರಿಯನು ಹೇಳಿದಂತೆ, “ನನ್ನ ಸ್ವಂತ ಪೂರ್ವನಿರೂಪಿಸಲ್ಪಟ್ಟ ವಿಚಾರಗಳ ಮೇಲೆ ಆಧಾರಿಸಲ್ಪಟ್ಟಿರದೆ, ಯೆಹೋವನನ್ನು ಮೆಚ್ಚುವಂತಹ ಒಂದು ವಿಧದಲ್ಲಿ ನಾನು ಇತರರೊಂದಿಗೆ ವ್ಯವಹರಿಸಲು ಪ್ರಯತ್ನಿಸುತ್ತೇನೆ.” ಯೆಹೋವನ ವಾಕ್ಯವನ್ನು ತಮ್ಮ ಮಟ್ಟವಾಗಿ ಉಪಯೋಗಿಸುವುದು ಆತನ ಸೇವಕರೆಲ್ಲರಿಗೆ ಎಷ್ಟೊಂದು ಪ್ರಯೋಜನಕರವು!
ಈ ಮೊದಲೇ ಹೇಳಲ್ಪಟ್ಟಿರುವ ಬೈಬಲ್ ಸಂಬಂಧಿತ ಉದಾಹರಣೆಗಳು, ಜಾತೀಯ ಅಥವಾ ರಾಷ್ಟ್ರೀಯಭಾವದ ಪೂರ್ವಾಗ್ರಹದ ಬಳಸಾಡುತ್ತಿರುವ ಭಾವನೆಗಳನ್ನು ಹೋರಾಡಲು ನಮಗೆ ಸಹಾಯ ಮಾಡುತ್ತವೆ. ಯೆಹೋವನ ನಿಷ್ಪಕ್ಷಪಾತವನ್ನು ಅನುಕರಿಸುವ ಮೂಲಕ, ನಾವು ಕ್ರೈಸ್ತ ಸಭೆಯನ್ನು ಪೂರ್ವಾಗ್ರಹ, ಭೇದಭಾವ ಮತ್ತು ಸ್ವಪಕ್ಷಪಾತದಿಂದ ಸಂರಕ್ಷಿಸುತ್ತೇವೆ.
“ದೇವರು ಪಕ್ಷಪಾತಿಯಲ್ಲ” ಎಂಬುದನ್ನು ಅಪೊಸ್ತಲ ಪೇತ್ರನು ತಿಳಿದುಕೊಂಡನು. (ಅ. ಕೃತ್ಯಗಳು 10:34) ಸ್ವಪಕ್ಷಪಾತವು, ನಿಷ್ಪಕ್ಷಪಾತದ ಒಂದು ಶತ್ರುವಾಗಿದೆ ಮತ್ತು ಪ್ರೀತಿ ಹಾಗೂ ಐಕ್ಯದ ತತ್ವಗಳನ್ನು ಉಲ್ಲಂಘಿಸುತ್ತದೆ. ಯೇಸು ಬಡವರು, ಬಲಹೀನರು ಮತ್ತು ದೀನರಿಗೆ ಅಪ್ಪೀಲು ಮಾಡಿದನು, ಮತ್ತು ಆತನು ಅವರ ಹೊರೆಯನ್ನು ಹಗುರಗೊಳಿಸಿದನು. (ಮತ್ತಾಯ 11:28-30) ಜನರ ಮೇಲೆ, ನಿಯಮಗಳ ಒಂದು ಭಾರವಾದ ಹೊರೆಯನ್ನು ಹೊರಿಸುತ್ತಾ, ಅವರ ಮೇಲೆ ಅಧಿಕಾರ ಚಲಾಯಿಸಿದ ಯೆಹೂದಿ ಧಾರ್ಮಿಕ ಮುಖಂಡರಿಗೆ ಹೋಲಿಕೆಯಲ್ಲಿ ಅವನು ತೀರ ವ್ಯತಿರಿಕ್ತವಾಗಿದ್ದನು. (ಲೂಕ 11:45, 46) ಇದನ್ನು ಮಾಡುವುದು ಮತ್ತು ಐಶ್ವರ್ಯವಂತರು ಹಾಗೂ ಪ್ರಮುಖ ವ್ಯಕ್ತಿಗಳಿಗೆ ಸ್ವಪಕ್ಷಪಾತವನ್ನು ತೋರಿಸುವುದು, ಖಂಡಿತವಾಗಿಯೂ ಕ್ರಿಸ್ತನ ಬೋಧನೆಗಳಿಗೆ ಹೊಂದಿಕೆಯಾಗಲಿಲ್ಲ.—ಯಾಕೋಬ 2:1-4, 9.
ಇಂದು, ಕ್ರೈಸ್ತ ಹಿರಿಯರು ಕ್ರಿಸ್ತನ ತಲೆತನಕ್ಕೆ ಅಧೀನರಾಗುತ್ತಾ, ಯೆಹೋವನ ಸಮರ್ಪಿತ ಜನರೆಲ್ಲರಿಗೂ ನಿಷ್ಪಕ್ಷಪಾತವನ್ನು ತೋರಿಸುತ್ತಾರೆ. ‘ತಮ್ಮಲ್ಲಿರುವ ದೇವರ ಮಂದೆಯನ್ನು ಅವರು ಕಾಯುತ್ತಿರು’ವಂತೆಯೇ, ಅವರು ಆರ್ಥಿಕ ಸ್ಥಾನಮಾನ, ವ್ಯಕ್ತಿತ್ವ ಭಿನ್ನತೆಗಳು, ಅಥವಾ ಕುಟುಂಬ ಸಂಬಂಧಗಳ ಕಾರಣದಿಂದಾಗಿ ಸ್ವಪಕ್ಷಪಾತವನ್ನು ತೋರಿಸುವುದರಿಂದ ದೂರವಿರುತ್ತಾರೆ. (1 ಪೇತ್ರ 5:2) ನಿಷ್ಪಕ್ಷಪಾತ ದೇವರನ್ನು ಅನುಕರಿಸುವ ಮೂಲಕ ಮತ್ತು ಸ್ವಪಕ್ಷಪಾತದ ಕೃತ್ಯಗಳ ವಿರುದ್ಧವಾದ ಆತನ ಎಚ್ಚರಿಕೆಯನ್ನು ಪಾಲಿಸುವ ಮೂಲಕ, ಕ್ರೈಸ್ತ ಹಿರಿಯರು ಸಭೆಯಲ್ಲಿ ನಿಷ್ಪಕ್ಷಪಾತದ ಆತ್ಮವನ್ನು ಪ್ರವರ್ಧಿಸುತ್ತಾರೆ.
ಯೆಹೋವನ ಸಾಕ್ಷಿಗಳ ಕ್ರೈಸ್ತ ಸಭೆಯು ಒಂದು ಅಂತಾರಾಷ್ಟ್ರೀಯ ಸಹೋದರತ್ವವಾಗಿದೆ. ಯೇಸು ಕ್ರಿಸ್ತನ ನಿರ್ದೇಶನದ ಕೆಳಗೆ ಪೂರ್ವಾಗ್ರಹ ಮುಕ್ತ, ನಿಷ್ಪಕ್ಷಪಾತ ಸಮಾಜವು ಒಂದು ವಾಸ್ತವಿಕತೆಯಾಗಿರಬಲ್ಲದು ಎಂಬುದಕ್ಕೆ ಅದು ಒಂದು ಜೀವಂತ ಸಾಕ್ಷ್ಯವಾಗಿದೆ. ಸಾಕ್ಷಿಗಳು, ಯಾವುದು “ದೇವರ ಚಿತ್ತಕ್ಕನುಸಾರ ನಿಜ ನೀತಿ ಮತ್ತು ನಿಷ್ಠೆಯಲ್ಲಿ ಸೃಷ್ಟಿಸಲ್ಪಟ್ಟಿತೊ ಆ ನೂತನ ವ್ಯಕ್ತಿತ್ವವನ್ನು ಧರಿಸಿ”ಕೊಂಡಿದ್ದಾರೆ. (ಎಫೆಸ 4:24, NW) ಹೌದು, ನಿಷ್ಪಕ್ಷಪಾತ ದೇವರಾಗಿರುವ ಯೆಹೋವನ ಪರಿಪೂರ್ಣ ಮಾದರಿಯಿಂದ ಅವರು ಕಲಿಯುತ್ತಿದ್ದಾರೆ, ಮತ್ತು ಎಲ್ಲಾ ಪಕ್ಷಪಾತದಿಂದ ಮುಕ್ತವಾಗಿರುವ ಹೊಸ ಲೋಕದಲ್ಲಿ ನಿತ್ಯ ಜೀವದ ಪ್ರತೀಕ್ಷೆಯುಳ್ಳವರಾಗಿದ್ದಾರೆ.—2 ಪೇತ್ರ 3:13.
[ಅಧ್ಯಯನ ಪ್ರಶ್ನೆಗಳು]
a ಒಂದು ಬದಲಿ ಹೆಸರು.
[ಪುಟ 26 ರಲ್ಲಿರುವ ಚಿತ್ರ]
ದೇವರು ಪಕ್ಷಪಾತಿಯಲ್ಲವೆಂದು ಅಪೊಸ್ತಲ ಪೇತ್ರನು ತಿಳಿದುಕೊಂಡನು