ನಿಷ್ಪಕ್ಷಪಾತಿಯಾದ ಯೆಹೋವನನ್ನು ಅನುಕರಿಸಿರಿ
1 ಯೆಹೋವನು ಜನರ ಕುರಿತು ಚಿಂತಿಸುವವನಾಗಿದ್ದಾನೆ. ತನ್ನ ಚಿತ್ತವನ್ನು ಮಾಡುವವರು ಯಾರೇ ಆಗಿರಲಿ, ಆತನು ಭೇದಭಾವವನ್ನು ತೋರಿಸದೆ ಅವರನ್ನು ಬರಮಾಡಿಕೊಳ್ಳುತ್ತಾನೆ. (ಅ. ಕೃ. 10:34, 35) ಯೇಸು ಜನರಿಗೆ ಸಾರಿದಾಗ, ಅವನೂ ತನ್ನ ತಂದೆಯಂತೆ ನಿಷ್ಪಕ್ಷಪಾತಿಯಾಗಿದ್ದನು. (ಲೂಕ 20:21) ಪೌಲನಂತೆ ನಾವೂ ಅವರ ಮಾದರಿಯನ್ನು ಅನುಕರಿಸಬೇಕಾಗಿದೆ. ಅವನು ಬರೆದದ್ದು: “ಎಲ್ಲರಿಗೂ ಒಬ್ಬನೇ ಕರ್ತ; ಆತನು ತನ್ನ ನಾಮವನ್ನು ಹೇಳಿಕೊಳ್ಳುವವರಿಗೆ ಹೇರಳವಾಗಿ ಕೊಡುವವನಾಗಿದ್ದಾನೆ.”—ರೋಮಾ. 10:12.
2 ನಾವು ಸಂಧಿಸುವ ಪ್ರತಿಯೊಬ್ಬರಿಗೂ ದೇವರ ರಾಜ್ಯದ ಸುವಾರ್ತೆಯನ್ನು ತಿಳಿಯಪಡಿಸುವುದು ದೇವರಿಗೆ ಮಹಿಮೆಯನ್ನು ತರುತ್ತದೆ. ಜನರ ಕುಲ, ಸಾಮಾಜಿಕ ಸ್ಥಾನಮಾನ, ಶಿಕ್ಷಣ ಅಥವಾ ಆರ್ಥಿಕ ಸ್ಥಿತಿ ಏನೇ ಆಗಿರಲಿ, ಈ ಅದ್ಭುತಕರ ಸಂದೇಶವನ್ನು ಇತರರೊಂದಿಗೂ ಹಂಚಿಕೊಳ್ಳುವ ಕೆಲಸದಲ್ಲಿ ನಾವು ಮುಂದುವರಿಯುತ್ತಾ ಇರಬೇಕು. (ರೋಮಾ. 10:11-13) ಇದರ ಅರ್ಥ, ನಮ್ಮ ಸಂದೇಶಕ್ಕೆ ಕಿವಿಗೊಡುವ ಗಂಡಸರು, ಹೆಂಗಸರು, ಹಿರಿಯರು ಮತ್ತು ಕಿರಿಯರಿಗೆ ಸಾರುವುದಾಗಿದೆ. ಸತ್ಯದ ಕುರಿತು ಕೇಳಿಸಿಕೊಳ್ಳುವ ಸಂದರ್ಭವು ಪ್ರತಿಯೊಬ್ಬರಿಗೂ ಸಿಗಬೇಕಾದರೆ, ನಾವು ಪ್ರತಿಯೊಂದು ಮನೆಯನ್ನು ಭೇಟಿಮಾಡಬೇಕು.
3 ಪ್ರತಿಯೊಬ್ಬರಲ್ಲೂ ಆಸಕ್ತಿಯನ್ನು ತೋರಿಸಿ: ನಮ್ಮಿಂದ ಸಾಧ್ಯವಾದಷ್ಟು ಜನರನ್ನು ಸಂಪರ್ಕಿಸುವುದೇ ನಮ್ಮ ಗುರಿಯಾಗಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲವು ಪ್ರಚಾರಕರು ಡಾಕ್ಟರುಗಳ ಆಫೀಸುಗಳಲ್ಲಿ, ಆಸ್ಪತ್ರೆಗಳಲ್ಲಿ, ನರ್ಸಿಂಗ್ಹೋಮ್ಗಳಲ್ಲಿ, ಕ್ಷೇಮಾಭಿವೃದ್ಧಿ ಕಾರ್ಯಾಲಯಗಳಲ್ಲಿ ಮತ್ತು ಪುನರ್ವಸತಿ ಕೇಂದ್ರಗಳಲ್ಲಿ ಜನರಿಗೆ ಸಾಕ್ಷಿನೀಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟುಮಾತ್ರವಲ್ಲ, ಪ್ರಚಾರಕರು ಪೋಲೀಸ್ ಇಲಾಖೆಯ ಸಿಬ್ಬಂದಿ ವರ್ಗಕ್ಕೆ, ಶಾಲಾ ಮೇಲ್ವಿಚಾರಕರಿಗೆ ಮತ್ತು ಸಲಹೆಗಾರರಿಗೆ ಹಾಗೂ ನ್ಯಾಯಾಧಿಪತಿಗಳಿಗೂ ಸಾಕ್ಷಿನೀಡಿದ್ದಾರೆ. ಅಧಿಕಾರಿಗಳನ್ನು ಭೇಟಿಯಾಗುವಾಗ, ಅವರು ಸಮಾಜಕ್ಕಾಗಿ ಸಲ್ಲಿಸುತ್ತಿರುವ ಉಪಯುಕ್ತ ಸೇವೆಗಳಿಗಾಗಿ ಗಣ್ಯತೆಯನ್ನು ವ್ಯಕ್ತಪಡಿಸುವುದು ಯೋಗ್ಯವಾಗಿದೆ. ಗೌರವದಿಂದ ನಡೆದುಕೊಳ್ಳಿ ಮತ್ತು ವಿಶೇಷವಾಗಿ ಅವರು ಮಾಡುವಂಥ ಕೆಲಸ ಹಾಗೂ ಅದರೊಂದಿಗೆ ಸಂಬಂಧಿಸಿರುವ ಸಮಸ್ಯೆಗಳ ಕುರಿತಾಗಿರುವ ಸಮಯೋಚಿತ ಲೇಖನಗಳನ್ನು ಆಯ್ಕೆಮಾಡಿರಿ.
4 ಒಂದು ಸಂದರ್ಭದಲ್ಲಿ, ಓರ್ವ ಸಹೋದರಿಯು ಒಬ್ಬ ನ್ಯಾಯಾಧಿಪತಿಯೊಂದಿಗೆ ಅವನ ಕಛೇರಿಯಲ್ಲಿ ಮಾತನಾಡಲು ಶಕ್ತಳಾದಳು. ಲವಲವಿಕೆಯಿಂದ ಕೂಡಿದ ಸಂಭಾಷಣೆಯ ನಂತರ, ಈ ಮುಂದಿನ ಮಾತುಗಳನ್ನು ಹೇಳುವಂತೆ ಅವನು ಪ್ರಚೋದಿಸಲ್ಪಟ್ಟನು: “ಯೆಹೋವನ ಸಾಕ್ಷಿಗಳ ಬಗ್ಗೆ ನಾನು ಮೆಚ್ಚುವಂಥ ವಿಷಯವೇನು ಗೊತ್ತೇ? ಅವರ ತತ್ವಗಳು ಎಷ್ಟು ಸುದೃಢವಾಗಿವೆಯೆಂದರೆ, ಅವುಗಳನ್ನು ಅವರು ಎಂದೂ ಬಿಟ್ಟುಕೊಡುವುದಿಲ್ಲ.” ಈ ಪ್ರಭಾವಶಾಲಿಯಾದ ವ್ಯಕ್ತಿಗೆ ಉತ್ತಮ ಸಾಕ್ಷಿಯನ್ನು ನೀಡಲಾಯಿತು.
5 ಜನರ ಹೃದಯದಲ್ಲಿ ಏನಿದೆಯೆಂಬುದನ್ನು ನಾವು ತಿಳಿದುಕೊಳ್ಳಸಾಧ್ಯವಿಲ್ಲ. ಆದರೆ, ನಾವು ಸಂಧಿಸುವ ಪ್ರತಿಯೊಬ್ಬರೊಂದಿಗೆ ಮಾತನಾಡುವ ಮೂಲಕ, ನಮ್ಮ ಕೆಲಸವನ್ನು ಮಾರ್ಗದರ್ಶಿಸುವ ದೇವರ ಸಾಮರ್ಥ್ಯದಲ್ಲಿ ನಾವು ನಂಬಿಕೆಯನ್ನು ತೋರಿಸುವವರಾಗಿದ್ದೇವೆ. ಅಷ್ಟುಮಾತ್ರವಲ್ಲದೆ, ಇದು ನಿರೀಕ್ಷೆಯ ಸಂದೇಶವನ್ನು ಕೇಳಿಸಿಕೊಂಡು ಅದಕ್ಕೆ ಪ್ರತಿಕ್ರಿಯಿಸುವ ಸುಯೋಗವನ್ನು ಜನರಿಗೆ ನೀಡುತ್ತದೆ. (1 ತಿಮೊ. 2:3, 4) ನಮ್ಮಿಂದ ಸಾಧ್ಯವಿರುವಷ್ಟು ಮಟ್ಟಿಗೆ ಪ್ರತಿಯೊಬ್ಬರಿಗೂ ಸುವಾರ್ತೆಯನ್ನು ಸಾರುವ ಮೂಲಕ, ನಾವು ನಮ್ಮ ಸಮಯವನ್ನು ವಿವೇಕದಿಂದ ಉಪಯೋಗಿಸೋಣ ಹಾಗೂ ನಿಷ್ಪಕ್ಷಪಾತಿಯಾಗಿರುವ ಯೆಹೋವನಂತಿರಲು ಪ್ರಯಾಸಪಡೋಣ.—ರೋಮಾ. 2:11; ಎಫೆ. 5:1, 2.