ವಿದ್ವಾಂಸರಿಗನುಸಾರ ಸುವಾರ್ತೆ
“ನನ್ನನ್ನು ಸಾಮಾನ್ಯ ಜನರು ಯಾರು ಅನ್ನುತ್ತಾರೆ”? (ಲೂಕ 9:18) ಬಹುಮಟ್ಟಿಗೆ ಎರಡು ಸಾವಿರ ವರ್ಷಗಳ ಹಿಂದೆ ಯೇಸು ಇದನ್ನು ತನ್ನ ಶಿಷ್ಯರಿಗೆ ಕೇಳಿದನು. ಆಗ ಆ ಪ್ರಶ್ನೆಯು ವಾದಾಸ್ಪದವಾಗಿತ್ತು. ಅದು ಈಗ ಇನ್ನೂ ಹೆಚ್ಚು ವಾದಾಸ್ಪದವಾಗಿರುವಂತೆ ತೋರುತ್ತದೆ—ವಿಶೇಷವಾಗಿ ಯೇಸುವಿನ ಮೇಲೆ ಕೇಂದ್ರೀಕರಿಸುವ ಕ್ರಿಸ್ಮಸ್ ಹಬ್ಬದ ಕಾಲದಲ್ಲಿ. ಅನೇಕರು, ಯೇಸು ಮಾನವಕುಲವನ್ನು ವಿಮೋಚಿಸುವುದಕ್ಕೋಸ್ಕರ ಸ್ವರ್ಗದಿಂದ ಕಳುಹಿಸಲ್ಪಟ್ಟನೆಂದು ನಂಬುತ್ತಾರೆ. ನೀವು ಅಭಿಪ್ರಯಿಸುವುದು ಅದನ್ನೆಯೊ?
ಕೆಲವು ವಿದ್ವಾಂಸರು ಬೇರೊಂದು ನೋಟವನ್ನು ಪ್ರಸ್ತಾಪಿಸುತ್ತಾರೆ. “ತಾನು ದೇವಕುಮಾರನಾಗಿದ್ದೆನೆಂದು ಕಲಿಸಿ, ಲೋಕದ ಪಾಪಗಳಿಗೋಸ್ಕರ ಸಾಯಲಿದ್ದವನೋಪಾದಿ ಯೇಸುವಿನ ಪ್ರತಿರೂಪವು ಐತಿಹಾಸಿಕವಾಗಿ ನಿಜವಲ್ಲ,” ಎಂದು ಧರ್ಮ ಮತ್ತು ಸಂಸ್ಕೃತಿಯ ಪ್ರೊಫೆಸರರಾದ ಮಾರ್ಕಸ್ ಜೆ. ಬೋರ್ಜ್ ಪ್ರತಿಪಾದಿಸುತ್ತಾರೆ.
ನಿಜವಾದ ಯೇಸುವು ನಾವು ಬೈಬಲಿನಲ್ಲಿ ಯಾರ ಕುರಿತಾಗಿ ಓದುತ್ತೇವೊ ಆ ವ್ಯಕ್ತಿಗಿಂತ ಭಿನ್ನನಾಗಿದ್ದನೆಂದು ಇತರ ವಿದ್ವಾಂಸರು ಪ್ರತಿಪಾದಿಸುತ್ತಾರೆ. ಎಲ್ಲಾ ಸುವಾರ್ತೆಗಳು ಯೇಸುವಿನ ಮರಣಾನಂತರದ ನಾಲ್ಕು ದಶಕಗಳು ಅಥವಾ ಹೆಚ್ಚಿನ ಸಮಯದ ಬಳಿಕ ಬರೆಯಲ್ಪಟ್ಟವು ಮತ್ತು ಅಷ್ಟರಲ್ಲಿ ಯೇಸುವಿನ ನಿಜ ಗುರುತಿನ ಸ್ವಾರಸ್ಯವು, ಕಲ್ಪಿತ ವಿಷಯಗಳನ್ನು ಹೆಣೆಯುವ ಮೂಲಕ ಹೆಚ್ಚಿಸಲ್ಪಟ್ಟಿತ್ತೆಂದು ಕೆಲವರು ನಂಬುತ್ತಾರೆ. ಸಮಸ್ಯೆಯು ಸುವಾರ್ತಾ ಬರಹಗಾರರ ಜ್ಞಾಪಕಶಕ್ತಿಯದ್ದಲ್ಲ, ಬದಲಾಗಿ ಅವರ ಅರ್ಥವಿವರಣೆಯದ್ದೇ ಆಗಿತ್ತೆಂದು ವಿದ್ವಾಂಸರು ಪ್ರತಿಪಾದಿಸುತ್ತಾರೆ. ಯೇಸುವಿನ ಮರಣಾನಂತರ ಅವನ ಶಿಷ್ಯರು ಅವನನ್ನು ವಿಭಿನ್ನವಾಗಿ—ದೇವಕುಮಾರನೋಪಾದಿ, ರಕ್ಷಕನೋಪಾದಿ ಹಾಗೂ ಮೆಸ್ಸೀಯನೋಪಾದಿ ದೃಷ್ಟಿಸಲಾರಂಭಿಸಿದರು. ಯೇಸು ಒಬ್ಬ ಅಲೆಮಾರಿ ಸಂತ, ಒಬ್ಬ ಸಾಮಾಜಿಕ ಕ್ರಾಂತಿಕಾರಿ ಮಾತ್ರವೇ ಆಗಿದ್ದನೆಂದು ಕೆಲವರು ಧೈರ್ಯದಿಂದ ಪ್ರತಿಪಾದಿಸುತ್ತಾರೆ. ಅದೇ ಸುವಾರ್ತಾ ಸತ್ಯವಾಗಿದೆ ಎಂದು ವಿದ್ವಾಂಸರು ಹೇಳುತ್ತಾರೆ.
ಯೇಸುವಿನ ಕುರಿತಾದ “ಪಾಂಡಿತ್ಯಪೂರ್ಣ” ನೋಟ
ತಮ್ಮ “ಪಾಂಡಿತ್ಯಪೂರ್ಣ” ನೋಟವನ್ನು ಸಮರ್ಥಿಸಿಕೊಳ್ಳಲಿಕ್ಕಾಗಿ, ಯೇಸುವಿನ ಕುರಿತು ಅತಿಮಾನುಷವಾಗಿ ತೋರುವ ಯಾವುದೇ ವಿಷಯವನ್ನು ನಿರಾಕರಿಸಲು ಟೀಕಾಕಾರರು ಆತುರರಾಗಿರುವಂತೆ ಕಂಡುಬರುತ್ತದೆ. ಉದಾಹರಣೆಗೆ, ಕನ್ಯಾಜನನವು ಯೇಸುವಿನ ಜಾರಜ ಜನನವನ್ನು ಮರೆಮಾಚುವಂತಹ ಒಂದು ಹಂಚಿಕೆಯಾಗಿತ್ತೆಂದು ಕೆಲವರು ಹೇಳುತ್ತಾರೆ. ಇನ್ನಿತರರು ಯೆರೂಸಲೇಮಿನ ನಾಶನದ ಕುರಿತ ಯೇಸುವಿನ ಪ್ರವಾದನೆಗಳನ್ನು ತಿರಸ್ಕರಿಸಿ, ಅವುಗಳ “ನೆರವೇರಿಕೆ”ಯ ಬಳಿಕವೇ ಅವು ಸುವಾರ್ತೆಗಳೊಳಗೆ ಸೇರಿಸಲ್ಪಟ್ಟವೆಂದು ಪಟ್ಟುಹಿಡಿಯುತ್ತಾರೆ. ಯೇಸುವಿನ ವಾಸಿಮಾಡುವಿಕೆಗಳು ಬರಿಯ ಮನೋಶಾರೀರಿಕ ಚಿಕಿತ್ಸೆಗಳಾಗಿದ್ದವು ಎಂದೂ ಕೆಲವರು ಹೇಳುತ್ತಾರೆ. ಅಂತಹ ಪ್ರಸ್ತಾಪಗಳನ್ನು ನೀವು ನಿಜವೆಂದು ಕಂಡುಕೊಳ್ಳುತ್ತೀರೊ ಅಥವಾ ಅಸಂಬದ್ಧವೆಂದು ಕಂಡುಕೊಳ್ಳುತ್ತೀರೊ?
ಯೇಸುವಿನ ಶಿಷ್ಯರು ತಮ್ಮ ಕ್ರೈಸ್ತ ಕಾರ್ಯಾಚರಣೆಯನ್ನು ಕುಸಿಯುವುದರಿಂದ ತಡೆಯಲಿಕ್ಕಾಗಿ, ಪುನರುತ್ಥಾನವನ್ನು ಕಲ್ಪಿಸಿದರೆಂದೂ ಕೆಲವು ವಿದ್ವಾಂಸರು ಪ್ರತಿಪಾದಿಸುತ್ತಾರೆ. ಎಷ್ಟೆಂದರೂ, ಯೇಸುವಿನ ಹಿಂಬಾಲಕರು ಅವನಿಲ್ಲದೆ ಶಕ್ತಿಹೀನರಾಗಿದ್ದರು, ಇದರಿಂದಾಗಿ ಅವರು ಯೇಸುವಿನ ಪ್ರಮುಖ ಪಾತ್ರವನ್ನು ಪುನಸ್ಸ್ಥಾಪಿಸಲಿಕ್ಕಾಗಿ ತಮ್ಮ ಬರಹಗಳಲ್ಲಿ ಇತಿಹಾಸವನ್ನು ರಚಿಸಿದರೆಂದು ವಿದ್ವಾಂಸರು ತರ್ಕಿಸುತ್ತಾರೆ. ಕಾರ್ಯತಃ, ಪುನರುತ್ಥಾನಗೊಳಿಸಲ್ಪಟ್ಟವನು ಕ್ರಿಸ್ತನಲ್ಲ, ಬದಲಾಗಿ ಕ್ರೈಸ್ತತ್ವವಾಗಿತ್ತು. ಅದು ಪಾಂಡಿತ್ಯಪೂರ್ಣ ಪರವಾನೆಯನ್ನು ಪಡೆದುಕೊಂಡಂತೆ ತೋರುವುದಾದರೆ, ದೇವತಾಶಾಸ್ತ್ರಜ್ಞೆ ಬಾರ್‌ಬ್ರ ತೈರಿಂಗ್‌ಳ, ಯೇಸು ವಧಿಸಲ್ಪಡಲೇ ಇಲ್ಲ ಎಂಬ ಪ್ರಸ್ತಾಪದ ಕುರಿತಾಗಿ ಏನು? ಯೇಸು ತನ್ನ ಮರಣದಂಡನೆಯಿಂದ ಪಾರಾಗಿ, ಎರಡು ಬಾರಿ ವಿವಾಹಮಾಡಿಕೊಂಡು, ಮೂವರು ಮಕ್ಕಳ ತಂದೆಯಾಗಿ ಜೀವಿಸುತ್ತಾ ಮುಂದುವರಿದನು ಎಂದು ಅವಳು ನಂಬುತ್ತಾಳೆ.
ಈ ಎಲ್ಲಾ ಪ್ರತಿಪಾದನೆಗಳು, ಅನೇಕ ವಿದ್ವಾಂಸರು ಯೇಸುವನ್ನು ಅಂಗೀಕರಿಸುವಂತಹ ಒಂದೇ ಮಟ್ಟಕ್ಕೆ ಅವನನ್ನು ತಂದುನಿಲ್ಲಿಸುತ್ತವೆ: ಅವನು ವಿವೇಕಿ ಮನುಷ್ಯ, ಬಹುಮಟ್ಟಿಗೆ ಯೆಹೂದ್ಯನು, ಸಮಾಜ ಸುಧಾರಕ—“ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡು ಕೊಡು”ವದಕ್ಕೆ ಬಂದ ದೇವಕುಮಾರನಂತೂ ಖಂಡಿತವಾಗಿಯೂ ಅಲ್ಲ.—ಮತ್ತಾಯ 20:28.
ಬಹುಶಃ ವರ್ಷದ ಈ ಸಮಯದಲ್ಲಿ, ಗೋದಣಿಗೆಯೊಂದರಲ್ಲಿನ ಯೇಸುವಿನ ಜನನದ ಕುರಿತಾದ ಭಾಗದಂತಹ ಸುವಾರ್ತೆಗಳ ಕೆಲವು ಭಾಗಗಳನ್ನು ನೀವು ಓದಿದ್ದೀರಿ. ಅಥವಾ ನೀವು ಚರ್ಚಿನಲ್ಲಿ ಅಂತಹ ವೃತ್ತಾಂತಗಳನ್ನು ಕೇಳಿದ್ದಿರಬಹುದು. ಆ ಸುವಾರ್ತೆಯ ವೃತ್ತಾಂತಗಳನ್ನು ನೀವು ಅಮೂಲ್ಯವಾದವುಗಳೆಂದೂ ನಂಬಲರ್ಹವಾದವುಗಳೆಂದೂ ಅಂಗೀಕರಿಸಿದ್ದೀರೊ? ಹಾಗಾದರೆ ಈ ಆಘಾತಕರ ಸನ್ನಿವೇಶವನ್ನು ಗಮನಿಸಿರಿ. ಜೀಸಸ್ ಸೆಮಿನಾರ್ ಎಂದು ಕರೆಯಲ್ಪಡುವ ಒಂದು ಸೆಮಿನಾರಿನಲ್ಲಿ, ಯೇಸುವಿನ ಮಾತುಗಳ ವಿಶ್ವಾಸಾರ್ಹತೆಯನ್ನು ಕಂಡುಹಿಡಿಯಲಿಕ್ಕಾಗಿ, ವಿದ್ವಾಂಸರ ಗುಂಪೊಂದು 1985ರಂದಿನಿಂದ ವರ್ಷವೊಂದಕ್ಕೆ ಎರಡು ಬಾರಿ ಸಂಧಿಸಿದೆ. ಯೇಸು ನಿಜವಾಗಿಯೂ ಬೈಬಲು ತನಗೆ ಅಧ್ಯಾರೋಪಿಸಿ ಹೇಳುವ ವಿಷಯಗಳನ್ನು ಹೇಳಿದನೊ? ಸೆಮಿನಾರಿನ ಸದಸ್ಯರು, ಯೇಸುವಿನ ಪ್ರತಿಯೊಂದು ಹೇಳಿಕೆಯ ಮೇಲೆ ಬಣ್ಣದ ಮಣಿಗಳಿಂದ ಮತನೀಡಿದರು. ಕೆಂಪು ಬಣ್ಣದ ಮಣಿಯು, ಈ ಹೇಳಿಕೆಯು ಖಂಡಿತವಾಗಿಯೂ ಯೇಸುವಿನಿಂದ ಹೇಳಲ್ಪಟ್ಟಿತು ಎಂಬುದನ್ನು ಅರ್ಥೈಸಿತು; ಗುಲಾಬಿ ಬಣ್ಣದ ಮಣಿಯು, ಯೇಸು ಅದನ್ನು ಬಹುಶಃ ಹೇಳಿದನು ಎಂಬುದನ್ನು ಅರ್ಥೈಸಿತು; ಬೂದಿ ಬಣ್ಣದ ಮಣಿಯು, ಸಂಶಯವನ್ನು ವ್ಯಕ್ತಪಡಿಸಿತು; ಮತ್ತು ಕಪ್ಪು ಬಣ್ಣದ ಮಣಿಯು ಸುಳ್ಳೆಂದು ನಿರೂಪಿಸುವುದನ್ನು ಅರ್ಥೈಸಿತು.
ಯೇಸುವಿಗೆ ಅಧ್ಯಾರೋಪಿಸಿ ಹೇಳಿದ ಮಾತುಗಳಲ್ಲಿ 82 ಪ್ರತಿಶತ ಮಾತುಗಳು ಬಹುಶಃ ಆತನಿಂದ ಉಚ್ಚರಿಸಲ್ಪಟ್ಟಿರಲಿಲ್ಲವೆಂದು, ಜೀಸಸ್ ಸೆಮಿನಾರ್ ಘೋಷಿಸಿದೆಯೆಂದು ತಿಳಿದುಕೊಳ್ಳಲು ನೀವು ಕ್ಷೋಭೆಗೊಳ್ಳಬಹುದು. ಮಾರ್ಕನ ಸುವಾರ್ತೆಯಿಂದ ತೆಗೆದ ಒಂದೇ ಒಂದು ಉದ್ಧರಣೆಯು ವಿಶ್ವಾಸಾರ್ಹವಾಗಿ ಪರಿಗಣಿಸಲ್ಪಟ್ಟಿತು. ಲೂಕನ ಸುವಾರ್ತೆಯು “ಪುನಃ ಸರಿಪಡಿಸುವಿಕೆಗೆ ಮೀರಿರು”ವಷ್ಟು ಸಂಪೂರ್ಣವಾಗಿ ಪ್ರಚಾರತತ್ವದಿಂದ ತುಂಬಿದೆಯೆಂದು ಹೇಳಲ್ಪಟ್ಟಿತು. ಯೋಹಾನನ ಸುವಾರ್ತೆಯ ಮೂರು ಸಾಲುಗಳ ಹೊರತಾಗಿ, ಇನ್ನೆಲ್ಲವೂ ಸುಳ್ಳೆಂದು ನಿರೂಪಿಸಲ್ಪಟ್ಟು, ಕಪ್ಪು ಬಣ್ಣದ ಮಣಿಯ ಮತವನ್ನು ಪಡೆದುಕೊಂಡವು, ಮತ್ತು ಉಳಿದ ಸ್ವಲ್ಪ ಭಾಗಕ್ಕೆ, ಸಂಶಯ ಸೂಚಕವಾದ ಬೂದಿ ಬಣ್ಣದ ಮಣಿಯು ಕೊಡಲ್ಪಟ್ಟಿತು.
ಪಾಂಡಿತ್ಯಪೂರ್ಣತೆಗಿಂತಲೂ ಆಧಿಕ್ಯ
ಆ ವಿದ್ವಾಂಸರೊಂದಿಗೆ ನೀವು ಸಮ್ಮತಿಸುತ್ತೀರೊ? ಯೇಸುವಿನ ಕುರಿತಾಗಿ ಬೈಬಲಿನಲ್ಲಿ ಕಂಡುಬರುವುದಕ್ಕಿಂತಲೂ ಹೆಚ್ಚು ನಿಷ್ಕೃಷ್ಟವಾದ ವರ್ಣನೆಯನ್ನು ಅವರು ನಮಗೆ ನೀಡುತ್ತಿದ್ದಾರೊ? ಈ ಪ್ರಶ್ನೆಗಳು ಪಾಂಡಿತ್ಯಪೂರ್ಣ ವಾಗ್ವಾದಕ್ಕಾಗಿರುವ ಒಂದು ವಿಷಯಕ್ಕಿಂತ ಹೆಚ್ಚಿನವುಗಳಾಗಿವೆ. ವರ್ಷದ ಈ ಸಮಯದಲ್ಲಿ, ಬೈಬಲಿಗನುಸಾರ, ದೇವರು ಯೇಸುವನ್ನು “ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು” ಕಳುಹಿಸಿದನು ಎಂದು ನಿಮಗೆ ನೆನಪು ಹುಟ್ಟಿಸಲ್ಪಡಬಹುದು.—ಯೋಹಾನ 3:16.
ನಮಗೆ ಯಾರಾತನ ಕುರಿತಾಗಿ ಸ್ವಲ್ಪವೇ ವಿಷಯವು ತಿಳಿದಿದೆಯೋ ಆ ಯೇಸು ಕೇವಲ ಒಬ್ಬ ಅಲೆಮಾರಿ ಸಂತನಾಗಿರುತ್ತಿದ್ದಲ್ಲಿ, ಅವನಲ್ಲಿ ‘ನಂಬಿಕೆಯಿಡು’ವುದು ಅರ್ಥರಹಿತವಾದದ್ದಾಗಿರುತ್ತಿತ್ತು. ಇನ್ನೊಂದು ಕಡೆ, ಯೇಸುವಿನ ಕುರಿತಾದ ಬೈಬಲಿನ ವರ್ಣನೆಯು ಸತ್ಯಭರಿತವಾಗಿರುವಲ್ಲಿ, ನಮ್ಮ ನಿತ್ಯವಾದ ರಕ್ಷಣೆಯು ಅದರಲ್ಲಿ ಸೇರಿದೆ. ಆದುದರಿಂದ, ಯೇಸುವಿನ ಕುರಿತಾದ ಸತ್ಯವನ್ನು ಬೈಬಲು ಒಳಗೊಂಡಿದೆಯೋ? ಎಂಬುದನ್ನು ನಾವು ತಿಳಿದುಕೊಳ್ಳುವ ಅಗತ್ಯವಿದೆ.