ಯೆಹೋವನ ಚಿತ್ತವನ್ನು ಮಾಡುವಂತೆ ಕಲಿಸಲ್ಪಟ್ಟದ್ದು
“ನಿನ್ನ ಚಿತ್ತವನ್ನು ಮಾಡಲು ನನಗೆ ಕಲಿಸು, ಏಕೆಂದರೆ ನೀನು ನನ್ನ ದೇವರಾಗಿದ್ದೀ.—ಕೀರ್ತನೆ 143:10, NW.
1, 2. (ಎ) ನಾವು ಯಾವಾಗ ಕಲಿಸಲ್ಪಡಬೇಕು, ಮತ್ತು ಯಾವ ವಾಸ್ತವಿಕವಾದ ನೋಟದೊಂದಿಗೆ? (ಬಿ) ಯೆಹೋವನಿಂದ ಕಲಿಸಲ್ಪಡುವುದು ಅಷ್ಟೊಂದು ಮಹತ್ವವುಳ್ಳದ್ದೇಕೆ?
ಒಬ್ಬ ವ್ಯಕ್ತಿಯು ಜೀವಿತನೂ ಕ್ರಿಯಾಶೀಲನೂ ಆಗಿರುವ ಪ್ರತಿಯೊಂದು ದಿನ, ಅವನಿಗೆ ಯೋಗ್ಯವಾದ ಯಾವುದಾದರೂ ವಿಷಯವು ಕಲಿಸಲ್ಪಡಸಾಧ್ಯವಿದೆ. ಅದು ನಿಮ್ಮ ವಿಷಯದಲ್ಲಿಯೂ ಇತರರ ವಿಷಯದಲ್ಲಿಯೂ ಸತ್ಯ. ಆದರೆ ಮರಣದಲ್ಲಿ ಏನು ಸಂಭವಿಸುತ್ತದೆ? ಆ ಸ್ಥಿತಿಯಲ್ಲಿರುವಾಗ ಏನನ್ನಾದರೂ ಕಲಿಸುವುದು, ಅಥವಾ ಏನನ್ನಾದರೂ ಕಲಿಯುವುದು ಅಸಾಧ್ಯ. ಸತ್ತವರಿಗೋ “ಯಾವ ತಿಳುವಳಿಕೆಯೂ ಇಲ್ಲ”ವೆಂದು ಬೈಬಲು ಸ್ಪಷ್ಟವಾಗಿ ಹೇಳುತ್ತದೆ. ಮಾನವಕುಲದ ಸಾಮಾನ್ಯ ಸಮಾಧಿಯಾದ ಷೀಓಲ್ನಲ್ಲಿ ಜ್ಞಾನವಿಲ್ಲ. (ಪ್ರಸಂಗಿ 9:5, 10, NW) ನಮಗೆ ಕಲಿಸಲಾಗುವುದು, ನಾವು ಜ್ಞಾನವನ್ನು ಸಂಗ್ರಹಿಸಿಕೊಳ್ಳುವುದು, ವ್ಯರ್ಥವೆಂದು ಇದರ ಅರ್ಥವೊ? ಅದು, ನಮಗೆ ಏನು ಕಲಿಸಲಾಗುತ್ತಿದೆಯೊ ಮತ್ತು ಆ ಜ್ಞಾನವನ್ನು ನಾವು ಹೇಗೆ ಉಪಯೋಗಿಸುತ್ತೇವೊ ಅದರ ಮೇಲೆ ಹೊಂದಿಕೊಳ್ಳುತ್ತದೆ.
2 ನಮಗೆ ಲೌಕಿಕವಾದುದು ಮಾತ್ರ ಕಲಿಸಲ್ಪಡುವುದಾದರೆ, ಬಾಳಿಕೆ ಬರುವ ಭವಿಷ್ಯತ್ತು ನಮಗಿಲ್ಲ. ಆದರೆ ಸಂತೋಷಕರವಾಗಿ, ಸಕಲ ರಾಷ್ಟ್ರಗಳಲ್ಲಿ ಲಕ್ಷಾಂತರ ಜನರಿಗೆ, ನಿತ್ಯಜೀವದ ದೃಷ್ಟಿಯಲ್ಲಿ ದೈವಿಕ ಚಿತ್ತವು ಕಲಿಸಲ್ಪಡುತ್ತ ಇದೆ. ಈ ನಿರೀಕ್ಷೆಗೆ ಆಧಾರವು ಜೀವದಾಯಕ ಜ್ಞಾನದ ಮೂಲನಾದ ಯೆಹೋವನಿಂದ ಕಲಿಸಲ್ಪಡುವುದರಲ್ಲಿ ಅಡಕವಾಗಿದೆ.—ಕೀರ್ತನೆ 94:9-12.
3. (ಎ) ಯೇಸುವು ದೇವರ ಪ್ರಥಮ ವಿದ್ಯಾರ್ಥಿಯಾಗಿದ್ದನೆಂದು ಏಕೆ ಹೇಳಸಾಧ್ಯವಿದೆ? (ಬಿ) ಮಾನವರು ಯೆಹೋವನಿಂದ ಕಲಿಸಲ್ಪಡುವರೆಂಬುದಕ್ಕೆ ನಮಗೆ ಯಾವ ಆಶ್ವಾಸನೆಯಿದೆ, ಮತ್ತು ಯಾವ ಪರಿಣಾಮದೊಂದಿಗೆ?
3 ದೇವರ ಪ್ರಥಮ ವಿದ್ಯಾರ್ಥಿಯೋಪಾದಿ, ದೇವರ ಜ್ಯೇಷ್ಠಪುತ್ರನಿಗೆ ತನ್ನ ತಂದೆಯ ಚಿತ್ತವನ್ನು ಮಾಡುವಂತೆ ಕಲಿಸಲಾಗಿತ್ತು. (ಜ್ಞಾನೋಕ್ತಿ 8:22-30; ಯೋಹಾನ 8:28) ಸರದಿಯಾಗಿ, ಲಕ್ಷಾನುಲಕ್ಷ ಮಾನವರು ತನ್ನ ತಂದೆಯಿಂದ ಕಲಿಸಲ್ಪಡುವರೆಂದು ಯೇಸು ಸೂಚಿಸಿದನು. ದೇವರಿಂದ ಕಲಿಯುವವವರಾದ ನಮಗೆ ಇರುವ ಪ್ರತೀಕ್ಷೆಗಳೇನು? ಯೇಸು ಹೇಳಿದ್ದು: “ಅವರೆಲ್ಲರು ದೇವರಿಂದ ಶಿಕ್ಷಿತರಾಗಿರುವರು ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದದೆ; ತಂದೆಯಿಂದ ಕೇಳಿ ಕಲಿತವರೆಲ್ಲರು ನನ್ನ ಬಳಿಗೆ ಬರುತ್ತಾರೆ. . . . ನಂಬಿರುವವನು ನಿತ್ಯಜೀವವನ್ನು ಹೊಂದಿದ್ದಾನೆಂದು ನಿಮಗೆ ನಿಜನಿಜವಾಗಿ ಹೇಳುತ್ತೇನೆ.”—ಯೋಹಾನ 6:45-47.
4. ದೈವಿಕ ಬೋಧನೆಯಿಂದ ಲಕ್ಷಾಂತರ ಜನರು ಹೇಗೆ ಪ್ರಭಾವಿತರಾಗುತ್ತಾರೆ, ಮತ್ತು ಅವರಿಗೆ ಯಾವ ಪ್ರತೀಕ್ಷೆಗಳಿವೆ?
4 ಯೇಸುವು, ಯಾವುದು ದೇವರ ಸಾಂಕೇತಿಕ ಸ್ತ್ರೀಯಾದ ಸ್ವರ್ಗೀಯ ಚೀಯೋನನ್ನು ಸಂಬೋಧಿಸಿ ಹೇಳಲಾಗಿತ್ತೊ ಆ ಯೆಶಾಯ 54:13ರಿಂದ ಉದ್ಧರಿಸುತ್ತಿದ್ದನು. ಆ ಪ್ರವಾದನೆಯು ನಿರ್ದಿಷ್ಟವಾಗಿ ಆಕೆಯ ಪುತ್ರರಿಗೆ, ಯೇಸು ಕ್ರಿಸ್ತನ 1,44,000 ಮಂದಿ ಆತ್ಮಜನಿತ ಶಿಷ್ಯರಿಗೆ ಅನ್ವಯವಾಗುತ್ತದೆ. ಆ ಆತ್ಮಿಕ ಪುತ್ರರಲ್ಲಿ ಉಳಿಕೆಯವರು ಇಂದು ಕ್ರಿಯಾಶೀಲರಾಗಿದ್ದು, ಒಂದು ಭೌಗೋಲಿಕ ಶಿಕ್ಷಣ ಕಾರ್ಯಕ್ರಮದ ನುಗ್ಗುಮೊನೆಯಾಗಿರುತ್ತಾರೆ. ಈ ಪರಿಣಾಮವಾಗಿ, “ಮಹಾ ಸಮೂಹ”ವನ್ನು ರಚಿಸುವ ಲಕ್ಷಾಂತರ ಮಂದಿ ಇತರರು ಸಹ, ಯೆಹೋವನಿಂದ ಕಲಿಸಲ್ಪಡುವುದರಿಂದ ಪ್ರಯೋಜನ ಪಡೆಯುತ್ತಾರೆ. ಅವರಿಗೆ ಮರಣವನ್ನನುಭವಿಸದೇ ಕಲಿಯುತ್ತಾ ಇರುವ ಅದ್ವಿತೀಯ ಪ್ರತೀಕ್ಷೆಯಿದೆ. ಅದು ಹೇಗೆ? ಹೇಗೆಂದರೆ, ಅವರು ಧಾವಿಸಿ ಬರುತ್ತಿರುವ “ಮಹಾಸಂಕಟ”ವನ್ನು ಪಾರಾಗಿ, ಒಂದು ಪ್ರಮೋದವನ ಭೂಮಿಯ ಮೇಲೆ ನಿತ್ಯಜೀವವನ್ನು ಅನುಭವಿಸುವವರ ಸಾಲಿನಲ್ಲಿದ್ದಾರೆ.—ಪ್ರಕಟನೆ 7:9, 10, 13-17.
ದೇವರ ಚಿತ್ತವನ್ನು ಮಾಡುವುದರ ಮೇಲೆ ಹೆಚ್ಚಿನ ಪ್ರಾಧಾನ್ಯ
5. (ಎ) 1997ರ ವರ್ಷವಚನವು ಯಾವುದು? (ಬಿ) ಕ್ರೈಸ್ತ ಕೂಟಗಳನ್ನು ಹಾಜರಾಗುವುದರ ಕುರಿತು ನಮಗೆ ಹೇಗನಿಸಬೇಕು?
5 1997ರಲ್ಲಿ, ಲೋಕವ್ಯಾಪಕವಾಗಿ 80,000ಕ್ಕಿಂತಲೂ ಹೆಚ್ಚು ಸಭೆಗಳಲ್ಲಿ, ಯೆಹೋವನ ಸಾಕ್ಷಿಗಳು ಕೀರ್ತನೆ 143:10ರ (NW) ಆರಂಭದ ಈ ಮಾತುಗಳನ್ನು ಮನಸ್ಸಿನಲ್ಲಿ ನಿಕಟವಾಗಿಡುವರು: “ನಿನ್ನ ಚಿತ್ತವನ್ನು ಮಾಡಲು ನನಗೆ ಕಲಿಸು.” ಅದು 1997ರ ವರ್ಷವಚನವಾಗಿರುವುದು. ರಾಜ್ಯ ಸಭಾಗೃಹಗಳಲ್ಲಿ ಎದ್ದುಕಾಣುವಂತೆ ಪ್ರದರ್ಶಿಸಲಾಗುವ ಆ ಮಾತುಗಳು, ಎಲ್ಲಿ ನಾವು ಮುಂದುವರಿಯುತ್ತಿರುವ ಒಂದು ಶಿಕ್ಷಣ ಕಾರ್ಯಕ್ರಮದಲ್ಲಿ ಪಾಲಿಗರಾಗಸಾಧ್ಯವಿದೆಯೊ, ಅಂತಹ ಸಭಾಕೂಟಗಳು ದೈವಿಕ ಶಿಕ್ಷಣವನ್ನು ಪಡೆಯುವ ಒಂದು ಗಮನಾರ್ಹ ಸ್ಥಳವಾಗಿವೆಯೆಂಬ ಮರುಜ್ಞಾಪನವನ್ನು ಕೊಡಲು ಸಹಾಯಮಾಡುವುವು. ನಮ್ಮ ಪ್ರಧಾನ ಶಿಕ್ಷಕನಿಂದ ಕಲಿಸಲ್ಪಡುವರೆ ನಾವು ಕೂಟಗಳಲ್ಲಿ ನಮ್ಮ ಸೋದರರೊಂದಿಗೆ ಕೂಡಿಬರುವಾಗ, ನಮಗೆ ಕೀರ್ತನೆಗಾರನಂತಹ ಅನಿಸಿಕೆಯಾಗಬಲ್ಲದು. ಅವನು ಬರೆದುದು: “ಯೆಹೋವನ ಮಂದಿರಕ್ಕೆ ಹೋಗೋಣ, ಬಾ ಎಂದು ಜನರು ನನ್ನನ್ನು ಕರೆದಾಗ ನನಗೆ ಸಂತೋಷವಾಯಿತು.”—ಕೀರ್ತನೆ 122:1; ಯೆಶಾಯ 30:20.
6. ದಾವೀದನ ಮಾತುಗಳಲ್ಲಿ, ನಾವು ಏನನ್ನು ಒಪ್ಪಿಕೊಳ್ಳುತ್ತೇವೆ?
6 ಹೌದು, ನಮ್ಮ ವಿರೋಧಿಯಾದ ಪಿಶಾಚನ ಚಿತ್ತದ ಅಥವಾ ಅಪರಿಪೂರ್ಣ ಮಾನವರ ಚಿತ್ತದ ಬದಲು ದೇವರ ಚಿತ್ತವನ್ನು ಮಾಡುವಂತೆ ಕಲಿಸಲ್ಪಡಲು ನಾವು ಬಯಸುತ್ತೇವೆ. ಆದಕಾರಣ ದಾವೀದನಂತೆ, ನಾವು ಆರಾಧಿಸುವ ಮತ್ತು ಸೇವಿಸುವ ದೇವರನ್ನು ನಾವು ಒಪ್ಪಿಕೊಳ್ಳುತ್ತೇವೆ: “ನನ್ನ ದೇವರು ನೀನಲ್ಲವೋ? ಶುಭಕಾರಿಯಾಗಿರುವ ನಿನ್ನ ಆತ್ಮನು ನನ್ನನ್ನು ಮಟ್ಟನೆಲದಲ್ಲಿ ನಡಿಸಲಿ.” (ಕೀರ್ತನೆ 143:10) ಅಸತ್ಯದ ಜನರೊಂದಿಗೆ ಬೆರೆಯಲು ಬಯಸುವ ಬದಲು, ಯೆಹೋವನ ಆರಾಧನೆಯು ನಡೆಯುತ್ತಿರುವಲ್ಲಿ ದಾವೀದನು ಇರಬಯಸಿದನು. (ಕೀರ್ತನೆ 26:4-6) ತನ್ನ ಹೆಜ್ಜೆಗಳನ್ನು ಮಾರ್ಗದರ್ಶಿಸಲು, ದೇವರ ಆತ್ಮವು ಇದ್ದುದರಿಂದ, ದಾವೀದನು ನೀತಿಪಥದಲ್ಲಿ ನಡೆಯಸಾಧ್ಯವಿತ್ತು.—ಕೀರ್ತನೆ 17:5; 23:3.
7. ದೇವರ ಆತ್ಮವು ಕ್ರೈಸ್ತ ಸಭೆಯ ಮೇಲೆ ಹೇಗೆ ಕಾರ್ಯನಡೆಸಿದೆ?
7 ಮಹಾ ದಾವೀದನಾದ ಯೇಸು ಕ್ರಿಸ್ತನು, ಪವಿತ್ರಾತ್ಮವು ಅಪೊಸ್ತಲರಿಗೆ ಎಲ್ಲ ವಿಷಯಗಳನ್ನು ಕಲಿಸಿ, ತಾನು ಅವರಿಗೆ ಹೇಳಿದ್ದ ಎಲ್ಲ ವಿಷಯಗಳನ್ನು ಅವರ ಮನಸ್ಸುಗಳು ಪುನಃ ಜ್ಞಾಪಿಸಿಕೊಳ್ಳುವಂತೆ ಮಾಡುವುದೆಂದು ನೆನಪಿಸುವುದೆಂದು ಆಶ್ವಾಸನೆ ಕೊಟ್ಟನು. (ಯೋಹಾನ 14:26) ಪಂಚಾಶತ್ತಮದಿಂದೀಚೆಗೆ ಯೆಹೋವನು ತನ್ನ ಲಿಖಿತ ವಾಕ್ಯದಲ್ಲಿ ಅಡಕವಾಗಿರುವ “ದೇವರ ಅಗಾಧವಾದ ವಿಷಯಗಳನ್ನು” ಪ್ರಗತಿಪರವಾಗಿ ಪ್ರಕಟಿಸುತ್ತಿದ್ದಾನೆ. (1 ಕೊರಿಂಥ 2:10-13) ಆತನು ಇದನ್ನು, ಯೇಸುವು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಎಂದು ಕರೆದ ಒಂದು ದೃಶ್ಯ ಮಾಧ್ಯಮದ ಮೂಲಕ ಮಾಡಿದ್ದಾನೆ. ಅದು ಲೋಕವ್ಯಾಪಕವಾಗಿರುವ ದೇವರ ಜನರ ಸಭೆಗಳಿಗೆ ಕಲಿಸುವ ಕಾರ್ಯಕ್ರಮದಲ್ಲಿ ಚರ್ಚಿಸಲಾಗುವ ಆತ್ಮಿಕ ಆಹಾರವನ್ನು ಒದಗಿಸುತ್ತದೆ.—ಮತ್ತಾಯ 24:45-47.
ನಮ್ಮ ಕೂಟಗಳಲ್ಲಿ ಯೆಹೋವನ ಚಿತ್ತವು ಕಲಿಸಲ್ಪಡುವುದು
8. ಕಾವಲಿನಬುರುಜು ಪತ್ರಿಕೆಯ ಅಭ್ಯಾಸದಲ್ಲಿ ಪಾಲುತೆಗೆದುಕೊಳ್ಳುವುದು ಅಷ್ಟು ಅಮೂಲ್ಯವೇಕೆ?
8 ಸಭೆಯ ಸಾಪ್ತಾಹಿಕ ಕಾವಲಿನಬುರುಜು ಅಧ್ಯಯನದ ವಿಷಯವು, ಆಗಿಂದಾಗ್ಗೆ ಬೈಬಲ್ ಮೂಲತತ್ವಗಳ ಅನ್ವಯವನ್ನು ಚರ್ಚಿಸುತ್ತದೆ. ಇದು ನಾವು ಜೀವನದ ವ್ಯಾಕುಲತೆಗಳನ್ನು ನಿಭಾಯಿಸುವರೆ ನಿಶ್ಚಯವಾಗಿ ಸಹಾಯಮಾಡುತ್ತದೆ. ಇತರ ಅಧ್ಯಯನಗಳಲ್ಲಿ ಗಹನವಾದ ಆತ್ಮಿಕ ಸತ್ಯಗಳು ಅಥವಾ ಬೈಬಲ್ ಪ್ರವಾದನೆಗಳು ಪರಿಗಣಿಸಲ್ಪಡುತ್ತವೆ. ಅಂತಹ ಅಧ್ಯಯನಗಳಲ್ಲಿ ನಮಗೆಷ್ಟು ವಿಷಯಗಳು ಕಲಿಸಲ್ಪಡುತ್ತವೆ! ಅನೇಕ ದೇಶಗಳಲ್ಲಿ, ಈ ಕೂಟಗಳಿಗೆ ರಾಜ್ಯ ಸಭಾಗೃಹಗಳು ಸಂಪೂರ್ಣವಾಗಿ ಭರ್ತಿಯಾಗಿಹೋಗಿರುತ್ತವೆ. ಆದರೂ, ಅನೇಕ ದೇಶಗಳಲ್ಲಿ, ಕೂಟದ ಹಾಜರಿಯು ಕೆಳಗಿಳಿದದೆ. ಇದು ಏಕೆಂದು ನೆನಸುತ್ತೀರಿ? ಐಹಿಕ ಕೆಲಸಗಳು ಕೆಲವರನ್ನು, ಅವರು ಕ್ರಮವಾಗಿ ‘ಪ್ರೀತಿ ಮತ್ತು ಸತ್ಕಾರ್ಯಗಳಿಗೆ ಪ್ರೇರಿಸಲ್ಪಡುವುದಕ್ಕಾಗಿ’ ಕೂಡಿಬರುವುದಕ್ಕೆ ಅಡ್ಡಬರುವಂತೆ ಬಿಡುತ್ತಿರಬಹುದೊ? ಅಥವಾ, ಸಮಾಜ ಚಟುವಟಿಕೆಗಳಲ್ಲಿ ಅಥವಾ ಟೆಲಿವಿಷನ್ ನೋಡುವುದರಲ್ಲಿ ಅನೇಕ ತಾಸುಗಳನ್ನು ಕಳೆಯುವುದರಿಂದ, ಎಲ್ಲ ಕೂಟಗಳಿಗೆ ಹೋಗಲು ವೇಳಾಪಟ್ಟಿಯು ತೀರ ತುಂಬಿದ್ದಾಗಿ ಕಂಡುಬರುತ್ತಿರಬಹುದೊ? ಇಬ್ರಿಯ 10:23-25ರ ಪ್ರೇರಿತ ಆಜ್ಞೆಯನ್ನು ಜ್ಞಾಪಿಸಿಕೊಳ್ಳಿ. ದೈವಿಕ ಶಿಕ್ಷಣಕ್ಕಾಗಿ ಕೂಡಿಬರುವುದು, ಈಗ, “ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೋಡು”ವಾಗ ಇನ್ನೂ ಹೆಚ್ಚು ಪ್ರಾಮುಖ್ಯವಲ್ಲವೆ?
9. (ಎ) ಸೇವಾ ಕೂಟವು ಶುಶ್ರೂಷೆಗೆ ನಮ್ಮನ್ನು ಹೇಗೆ ಸಜ್ಜುಗೊಳಿಸಬಲ್ಲದು? (ಬಿ) ಸಾಕ್ಷಿ ನೀಡುವ ಕುರಿತು ನಮ್ಮ ಮನೋಭಾವವು ಏನಾಗಿರಬೇಕು?
9 ನಮ್ಮ ಮೊತ್ತಮೊದಲ ಜವಾಬ್ದಾರಿಗಳಲ್ಲಿ ಒಂದು, ದೇವರ ಶುಶ್ರೂಷಕರಾಗಿ ಸೇವೆಮಾಡುವ ಜವಾಬ್ದಾರಿಯೇ ಆಗಿದೆ. ಇದನ್ನು ನಾವು ಹೇಗೆ ಕಾರ್ಯಸಾಧಕವಾಗಿ ನೆರವೇರಿಸಬಲ್ಲೆವೆಂಬುದನ್ನು ಕಲಿಸಲಿಕ್ಕಾಗಿ ಸೇವಾಕೂಟವು ವಿನ್ಯಾಸಿಸಲ್ಪಟ್ಟಿದೆ. ಜನರನ್ನು ಹೇಗೆ ಸಮೀಪಿಸಬೇಕು, ಏನು ಹೇಳಬೇಕು, ಅನುಕೂಲ ಪ್ರತಿವರ್ತನೆಯ ಸಮಯ ಹೇಗೆ ಪ್ರತಿಕ್ರಿಯಿಸಬೇಕು, ಮತ್ತು ಜನರು ನಮ್ಮ ಸಂದೇಶವನ್ನು ನಿರಾಕರಿಸುವಾಗ ಏನು ಮಾಡಬೇಕೆಂಬುದನ್ನೂ ನಾವು ಕಲಿಯುತ್ತೇವೆ. (ಲೂಕ 10:1-11) ಈ ಸಾಪ್ತಾಹಿಕ ಕೂಟದಲ್ಲಿ ಕಾರ್ಯಸಾಧಕವಾದ ವಿಧಾನಗಳನ್ನು ಚರ್ಚಿಸಿ, ಪ್ರತ್ಯಕ್ಷಾಭಿನಯಿಸುವಾಗ, ನಾವು ಮನೆಮನೆಗೆ ಹೋಗುವಾಗ ಮಾತ್ರವಲ್ಲ, ಬೀದಿಗಳಲ್ಲಿ, ಪಾರ್ಕಿಂಗ್ ಸ್ಥಳಗಳಲ್ಲಿ, ಸಾರ್ವಜನಿಕ ಸಾರಿಗೆಯಲ್ಲಿ, ವಿಮಾನ ನಿಲ್ದಾಣಗಳಲ್ಲಿ, ವ್ಯಾಪಾರ ಸ್ಥಳಗಳಲ್ಲಿ ಅಥವಾ ಶಾಲೆಗಳಲ್ಲಿಯೂ ಸಾರುವಾಗ, ಜನರನ್ನು ತಲಪಲು ಹೆಚ್ಚು ಉತ್ತಮವಾಗಿ ಸಿದ್ಧರಾಗಿರುತ್ತೇವೆ. “ನಿನ್ನ ಚಿತ್ತವನ್ನು ಮಾಡಲು ನನಗೆ ಕಲಿಸು,” ಎಂಬ ನಮ್ಮ ಬಿನ್ನಹಕ್ಕೆ ಹೊಂದಿಕೆಯಾಗಿ, “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು . . . ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು” ಎಂದು ನಮ್ಮ ಯಜಮಾನನು ಪ್ರೋತ್ಸಾಹಿಸಿದಂತೆ, ನಾವು ಪ್ರತಿಯೊಂದು ಸಂದರ್ಭದ ಪ್ರಯೋಜನವನ್ನು ಪಡೆದುಕೊಳ್ಳಲು ಬಯಸುವೆವು.—ಮತ್ತಾಯ 5:16.
10. ‘ಯೋಗ್ಯರಾಗಿ ಇರುವವರಿಗೆ’ ನಾವು ನಿಜವಾಗಿಯೂ ಹೇಗೆ ಸಹಾಯ ಮಾಡಬಲ್ಲೆವು?
10 ಅಂತಹ ಸಭಾಕೂಟಗಳಲ್ಲಿ, ನಮಗೆ ಇತರರನ್ನು ಶಿಷ್ಯರನ್ನಾಗಿ ಮಾಡಲು ಸಹ ಕಲಿಸಲಾಗುತ್ತದೆ. ಆಸಕ್ತಿಯು ಕಂಡುಕೊಳ್ಳಲ್ಪಡುವಲ್ಲಿ ಅಥವಾ ಸಾಹಿತ್ಯವು ಕೊಡಲ್ಪಡುವಲ್ಲಿ, ಪುನರ್ಭೇಟಿಗಳನ್ನು ಮಾಡುವಾಗ ನಮ್ಮ ಗುರಿಯು ಗೃಹ ಬೈಬಲ್ ಅಧ್ಯಯನಗಳನ್ನು ಪ್ರಾರಂಭಿಸುವುದೇ ಆಗಿದೆ. ಒಂದು ಅರ್ಥದಲ್ಲಿ, ಯೇಸು ಆಜ್ಞಾಪಿಸಿದ್ದ ವಿಷಯಗಳನ್ನು ಕಲಿಸಲು ಶಿಷ್ಯರು ‘ಯೋಗ್ಯರಲ್ಲಿ ಉಳಿದುಕೊಳ್ಳುವುದನ್ನು’ ಇದು ಹೋಲುತ್ತದೆ. (ಮತ್ತಾಯ 10:11; 28:19, 20) ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದಂತಹ ಶ್ರೇಷ್ಠ ರೀತಿಯ ಸಹಾಯಗಳಿರುವುದರಿಂದ, ನಾವು ನಮ್ಮ ಶುಶ್ರೂಷೆಯನ್ನು ಪೂರ್ತಿಯಾಗಿ ನೆರವೇರಿಸಲು ನಿಜವಾಗಿಯೂ ಸುಸನ್ನದ್ಧರಾಗಿದ್ದೇವೆ. (2 ತಿಮೊಥೆಯ 4:5) ಪ್ರತಿ ವಾರ ನೀವು ಸೇವಾ ಕೂಟ ಮತ್ತು ದೇವಪ್ರಭುತ್ವ ಶುಶ್ರೂಷಾ ಶಾಲೆಯನ್ನು ಹಾಜರಾಗುವಾಗ, ಸಹಾಯಕರವಾದ ಅಂಶಗಳನ್ನು ಗ್ರಹಿಸಿಕೊಳ್ಳಲು ಮತ್ತು ಬಳಿಕ ಬಳಸಲು ಪ್ರಯತ್ನಿಸಿರಿ. ಇದು ನಿಮ್ಮನ್ನು ದೇವರ ಚಿತ್ತವನ್ನು ನೆರವೇರಿಸುವ, ಸಾಕಷ್ಟು ಅರ್ಹರಾದ ದೇವರ ಶುಶ್ರೂಷಕರಲ್ಲಿ ಒಬ್ಬರನ್ನಾಗಿ ಶಿಫಾರಸ್ಸು ಮಾಡುವುದು.—2 ಕೊರಿಂಥ 3:3, 5; 4:1, 2.
11. ಕೆಲವರು ಮತ್ತಾಯ 6:33ರಲ್ಲಿ ಕಂಡುಬರುವ ಮಾತುಗಳಲ್ಲಿ ನಂಬಿಕೆಯನ್ನು ಹೇಗೆ ಪ್ರದರ್ಶಿಸಿದ್ದಾರೆ?
11 ನಾವು “ಮೊದಲಾಗಿ ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕ”ಪಡಬೇಕೆಂಬುದು ದೇವರ ಚಿತ್ತವಾಗಿದೆ. (ಮತ್ತಾಯ 6:33) ನಿಮ್ಮನ್ನು ಹೀಗೆ ಕೇಳಿಕೊಳ್ಳಿರಿ, ‘ನನ್ನ [ಅಥವಾ ನನ್ನ ಸಂಗಾತಿಯ] ಐಹಿಕ ಕೆಲಸದ ಒತ್ತಡವು, ನನ್ನ ಕೂಟದ ಹಾಜರಿಗೆ ಅಡ್ಡಬರುವುದಾದರೆ, ನಾನು ಈ ಮೂಲತತ್ವವನ್ನು ಹೇಗೆ ಅನ್ವಯಿಸೇನು?’ ಆತ್ಮಿಕವಾಗಿ ಪಕ್ವತೆಯುಳ್ಳ ಅನೇಕರು ತಮ್ಮ ಧಣಿಗಳ ಬಳಿ ಆ ವಿಷಯದ ಕುರಿತು ಮಾತಾಡಲು ಹೆಜ್ಜೆಯನ್ನು ತೆಗೆದುಕೊಳ್ಳುವರು. ಪೂರ್ಣ ಸಮಯದ ಒಬ್ಬ ಶುಶ್ರೂಷಕಿಯು, ಸಭಾಕೂಟಗಳಿಗೆ ಹಾಜರಾಗಲು ಪ್ರತಿ ವಾರ ತನಗೆ ಸಮಯದ ಅಗತ್ಯವಿದೆಯೆಂದು ತನ್ನ ಧಣಿಗೆ ತಿಳಿಯಪಡಿಸಿದಳು. ಅವನು ಆ ಬೇಡಿಕೆಗೆ ಸಮ್ಮತಿಕೊಟ್ಟನು. ಆದರೆ ಕೂಟಗಳಲ್ಲಿ ಏನು ನಡೆಯುತ್ತದೆಂಬುದರ ಕುರಿತು ಕುತೂಹಲಿಯಾಗಿದ್ದುದರಿಂದ, ತಾನೂ ಹಾಜರಾಗುವುದಾಗಿ ಹೇಳಿದನು. ಮುಂಬರುತ್ತಿರುವ ಜಿಲ್ಲಾ ಅಧಿವೇಶನದ ಕುರಿತ ಪ್ರಕಟನೆಯನ್ನು ಅಲ್ಲಿ ಅವನು ಕೇಳಿಸಿಕೊಂಡನು. ಇದರ ಪರಿಣಾಮವಾಗಿ, ಆ ಧಣಿಯು ಇಡೀ ದಿವಸವನ್ನು ಸಮ್ಮೇಳನದಲ್ಲಿ ಕಳೆಯುವಂತೆ ಏರ್ಪಡಿಸಿಕೊಂಡನು. ಈ ಉದಾಹರಣೆಯಿಂದ ನೀವು ಯಾವ ಪಾಠವನ್ನು ಕಲಿತುಕೊಳ್ಳುತ್ತೀರಿ?
ದೈವಭಕ್ತಿಯುಳ್ಳ ಹೆತ್ತವರಿಂದ ಯೆಹೋವನ ಚಿತ್ತವು ಕಲಿಸಲ್ಪಡುವುದು
12. ಯೆಹೋವನ ಚಿತ್ತವನ್ನು ಮಕ್ಕಳಿಗೆ ಕಲಿಸಬೇಕಾದರೆ, ಕ್ರೈಸ್ತ ಹೆತ್ತವರು ತಾಳ್ಮೆ ಮತ್ತು ಸ್ಥಿರತೆಯಿಂದ ಏನು ಮಾಡಬೇಕು?
12 ಆದರೆ ಸಭಾಕೂಟಗಳು ಮತ್ತು ಅಧಿವೇಶನಗಳು, ದೈವಿಕ ಚಿತ್ತವನ್ನು ಮಾಡಲು ಕಲಿಸಲ್ಪಡುವಂತೆ ಇರುವ ಏಕಮಾತ್ರ ಒದಗಿಸುವಿಕೆಯಾಗಿರುವುದಿಲ್ಲ. ದೈವಭಕ್ತಿಯುಳ್ಳ ಹೆತ್ತವರಿಗೆ, ತಮ್ಮ ಮಕ್ಕಳು ಯೆಹೋವನನ್ನು ಸ್ತುತಿಸಿ ಆತನ ಚಿತ್ತವನ್ನು ಮಾಡುವಂತೆ ಅವರನ್ನು ತರಬೇತುಗೊಳಿಸಿ, ಶಿಸ್ತಿಗೊಳಪಡಿಸಿ, ಬೆಳೆಸುವಂತೆ ಆಜ್ಞಾಪಿಸಲಾಗಿದೆ. (ಕೀರ್ತನೆ 148:12, 13; ಜ್ಞಾನೋಕ್ತಿ 22:6, 15) ಹಾಗೆ ಮಾಡುವುದು, ನಾವು ನಮ್ಮ “ಮಕ್ಕಳನ್ನು” ಅವರು ‘ಕೇಳಿ ತಿಳಿದುಕೊಳ್ಳುವಂತೆ’ ಅವರನ್ನು ಕೂಟಗಳಿಗೆ ಕರೆದುಕೊಂಡು ಹೋಗುವುದನ್ನು ಕೇಳಿಕೊಳ್ಳುತ್ತದಾದರೂ, ಅವರಿಗೆ ಮನೆಯಲ್ಲಿ ಪವಿತ್ರ ಬರಹಗಳಿಂದ ಕಲಿಸುವುದರ ಕುರಿತೇನು? (ಧರ್ಮೋಪದೇಶಕಾಂಡ 31:12; 2 ತಿಮೊಥೆಯ 3:15) ಅನೇಕ ಕುಟುಂಬಗಳು ಶುದ್ಧಾಂತಃಕರಣದಿಂದ ಕ್ರಮದ ಕುಟುಂಬ ಬೈಬಲ್ ಅಧ್ಯಯನ ಕಾರ್ಯಕ್ರಮಗಳನ್ನು ಆರಂಭಿಸಿರುವುದಾದರೂ, ಆ ಬಳಿಕ ಸ್ವಲ್ಪದರಲ್ಲಿ ಅವು ಕಳೆಗುಂದುವಂತೆ ಅಥವಾ ಅಸಡ್ಡೆ ಮಾಡಲ್ಪಡುವಂತೆ ಬಿಟ್ಟಿವೆ. ಅಂತಹ ಅನುಭವ ನಿಮಗಾಗಿದೆಯೆ? ಅಂತಹ ಕ್ರಮದ ಬೈಬಲ್ ಅಧ್ಯಯನವನ್ನು ಮಾಡಬೇಕೆಂಬ ಶಿಫಾರಸ್ಸು ತಕ್ಕದ್ದಲ್ಲವೆಂದು ಅಥವಾ ನಿಮ್ಮ ಕುಟುಂಬವು ಎಷ್ಟು ವಿಭಿನ್ನವೆಂದರೆ ನಿಮ್ಮ ಸಂಬಂಧದಲ್ಲಿ ಅದು ಕಾರ್ಯಸಾಧಕವಲ್ಲವೆಂದು ನೀವು ತೀರ್ಮಾನಿಸುವಿರೊ? ಪರಿಸ್ಥಿತಿಯು ಏನೇ ಆಗಿರಲಿ, ಹೆತ್ತವರಾದ ನೀವು, ಆಗಸ್ಟ್ 1, 1995ರ ಕಾವಲಿನಬುರುಜು ಪತ್ರಿಕೆಯಲ್ಲಿರುವ, “ಸಮೃದ್ಧವಾದ ನಮ್ಮ ಆತ್ಮಿಕ ಪರಂಪರೆ,” ಮತ್ತು “ಪಟ್ಟುಹಿಡಿಯುವಿಕೆಯ ಪ್ರತಿಫಲಗಳು” ಎಂಬ ಉತ್ತಮ ಲೇಖನಗಳನ್ನು ದಯವಿಟ್ಟು ಪುನರ್ವಿಮರ್ಶಿಸಿರಿ.
13. ದಿನದ ವಚನವನ್ನು ಪರಿಗಣಿಸುವುದರಿಂದ ಕುಟುಂಬಗಳು ಹೇಗೆ ಪ್ರಯೋಜನಪಡೆಯಬಲ್ಲವು?
13 ಕುಟುಂಬಗಳು ದಿನದ ವಚನವನ್ನು ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು ಅದರಿಂದ ಪರಿಗಣಿಸುವ ಹವ್ಯಾಸವನ್ನು ಮಾಡುವಂತೆ ಪ್ರೋತ್ಸಾಹಿಸಲ್ಪಡುತ್ತವೆ. ವಚನ ಮತ್ತು ಹೇಳಿಕೆಗಳನ್ನು ಕೇವಲ ಓದುವುದು ಒಳ್ಳೆಯದಾದರೂ ವಚನವನ್ನು ಚರ್ಚಿಸಿ, ಅದನ್ನು ಅನ್ವಯಿಸುವುದು ಹೆಚ್ಚು ಪ್ರಯೋಜನಕರ. ಉದಾಹರಣೆಗೆ, ಎಫೆಸ 5:15-17ನ್ನು (NW) ಪರಿಗಣಿಸುವಲ್ಲಿ, ಕುಟುಂಬ ಸದಸ್ಯರು ವ್ಯಕ್ತಿಪರ ಅಧ್ಯಯನಕ್ಕಾಗಿ, ಪೂರ್ಣ ಸಮಯದ ಶುಶ್ರೂಷೆಯ ಯಾವುದಾದರೊಂದು ರೂಪದಲ್ಲಿ ಪಾಲುತೆಗೆದುಕೊಳ್ಳಲು ಮತ್ತು ಇತರ ದೇವಪ್ರಭುತ್ವ ನೇಮಕಗಳನ್ನು ನೋಡಿಕೊಳ್ಳಲು ಹೇಗೆ ‘ಅನುಕೂಲ ಸಮಯವನ್ನು ಕೊಂಡುಕೊಳ್ಳ”ಸಾಧ್ಯವಿದೆಯೆಂದು ವಿವೇಚಿಸಸಾಧ್ಯವಿದೆ. ಹೌದು, ದಿನದ ವಚನದ ಕುಟುಂಬ ಚರ್ಚೆಯು, ಒಬ್ಬರನ್ನು ಅಥವಾ ಅನೇಕರನ್ನು ಅವರು, “ಕರ್ತನ [“ಯೆಹೋವನ,” NW] ಚಿತ್ತವೇನೆಂದು ವಿಚಾರಿಸಿ ತಿಳಿದು”ಕೊಳ್ಳುವುದಕ್ಕೆ ನಡೆಸಬಲ್ಲದು.
14. ಹೆತ್ತವರು ಯಾವ ರೀತಿಯ ಬೋಧಕರಾಗಿರಬೇಕೆಂದು ಧರ್ಮೋಪದೇಶಕಾಂಡ 6:6, 7 ಸೂಚಿಸುತ್ತದೆ, ಏನನ್ನು ಕೇಳಿಕೊಳ್ಳುತ್ತದೆ?
14 ಹೆತ್ತವರು ತಮ್ಮ ಮಕ್ಕಳ ಶ್ರದ್ಧೆಯುಳ್ಳ ಬೋಧಕರಾಗಿರಬೇಕು. (ಧರ್ಮೋಪದೇಶಕಾಂಡ 6:6, 7) ಇದು ಕೇವಲ ತಮ್ಮ ಮಕ್ಕಳಿಗೆ ಗದರಿಸಿ ಬುದ್ಧಿಹೇಳುವ ಅಥವಾ ಆಜ್ಞಾಪಿಸುವ ವಿಷಯವಲ್ಲ. ತಂದೆ ಮತ್ತು ತಾಯಿ ಸಹ ಕಿವಿಗೊಡಬೇಕು. ಹೀಗೆ, ಯಾವುದನ್ನು ವಿವರಿಸುವ, ಸ್ಪಷ್ಟೀಕರಿಸುವ, ಚಿತ್ರೀಕರಿಸುವ ಅಥವಾ ಪುನರಾವರ್ತಿಸುವ ಅವಶ್ಯವಿದೆಯೆಂದು ನೋಡಲು ಅವರು ಹೆಚ್ಚು ಶಕ್ತರಾಗುವರು. ಒಂದು ಕ್ರೈಸ್ತ ಕುಟುಂಬದಲ್ಲಿ ಹೆತ್ತವರು ತಮ್ಮ ಮಕ್ಕಳನ್ನು, ಅವರಿಗೆ ತಿಳಿಯದಿರುವ ಅಥವಾ ಚಿಂತಿಸುವಂತೆ ಮಾಡುವ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳುವಂತೆ ಪ್ರೋತ್ಸಾಹಿಸುವ ಮೂಲಕ ತೆರೆದ ಸಂವಾದವನ್ನು ಉತ್ತೇಜಿಸುತ್ತಾರೆ. ಒಬ್ಬ ಹದಿಹರೆಯದ ಮಗನಿಗೆ ಯೆಹೋವನಿಗೆ ಆದಿಯಿಲ್ಲವೆಂಬ ವಿಷಯವನ್ನು ಗ್ರಹಿಸುವುದು ಕಷ್ಟವಾಗಿತ್ತು ಎಂದು ಹೀಗೆ ಅವರಿಗೆ ತಿಳಿದುಬಂತು. ಹೆತ್ತವರು ವಾಚ್ ಟವರ್ ಸೊಸೈಟಿಯ ಪ್ರಕಾಶನಗಳಿಂದ, ಕಾಲವೂ ಬಾಹ್ಯಾಕಾಶವೂ ಅನಂತವೆಂದು ಅಂಗೀಕರಿಸಲ್ಪಡುತ್ತದೆಂಬ ಮಾಹಿತಿಯನ್ನು ಉಪಯೋಗಿಸಶಕ್ತರಾದರು. ಅದು ವಿಷಯವನ್ನು ದೃಷ್ಟಾಂತಿಸುವ ಕೆಲಸವನ್ನು ಮಾಡಿತು ಮತ್ತು ಇದು ಅವರ ಮಗನನ್ನು ತೃಪ್ತಿಗೊಳಿಸಿತು. ಆದಕಾರಣ ನಿಮ್ಮ ಮಕ್ಕಳ ಪ್ರಶ್ನೆಗಳನ್ನು ಸ್ಪಷ್ಟವಾಗಿ ಹಾಗೂ ಶಾಸ್ತ್ರದಿಂದ ಉತ್ತರಿಸಲು ಸಮಯವನ್ನು ತೆಗೆದುಕೊಂಡು, ದೇವರ ಚಿತ್ತವನ್ನು ಮಾಡಲು ಕಲಿಯುವುದು ಅತಿ ತೃಪ್ತಿದಾಯಕವಾಗಿರಬಲ್ಲದೆಂದು ಅವರು ನೋಡುವಂತೆ ಸಹಾಯಮಾಡಿರಿ. ದೇವರ ಜನರಿಗೆ—ಎಳೆಯರಿಗೂ ಪ್ರಾಯಸ್ಥರಿಗೂ—ಇಂದು ಇನ್ನೇನು ಕಲಿಸಲಾಗುತ್ತ ಇದೆ?
ಪ್ರೀತಿಸುವಂತೆ ಮತ್ತು ಹೋರಾಡುವಂತೆ ಕಲಿಸಲ್ಪಡುವುದು
15. ನಮ್ಮ ಸಹೋದರ ಪ್ರೀತಿಯ ಯಥಾರ್ಥತೆಯು ಯಾವಾಗ ಪರೀಕ್ಷಿಸಲ್ಪಟ್ಟೀತು?
15 ಯೇಸುವಿನ ಹೊಸ ಆಜ್ಞೆಗೆ ಹೊಂದಿಕೆಯಾಗಿ, ನಾವು “ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಉಪದೇಶವನ್ನು . . . ದೇವರಿಂದ” ಹೊಂದಿದ್ದೇವೆ. (1 ಥೆಸಲೊನೀಕ 4:9) ವಿಷಯಗಳು ಪ್ರಶಾಂತವಾಗಿದ್ದು, ಸುಗಮವಾಗಿ ಸಾಗುವಾಗ, ನಾವು ನಮ್ಮ ಎಲ್ಲ ಸಹೋದರರನ್ನು ಪ್ರೀತಿಸುತ್ತೇವೆಂದು ನಮಗನಿಸಬಹುದು. ಆದರೆ ವ್ಯಕ್ತಿಪರವಾದ ಭಿನ್ನಾಭಿಪ್ರಾಯಗಳು ಏಳುವಾಗ ಅಥವಾ ಇನ್ನೊಬ್ಬ ಕ್ರೈಸ್ತನು ಏನು ಹೇಳುತ್ತಾನೊ ಅಥವಾ ಮಾಡುತ್ತಾನೊ ಅದರಿಂದ ನಮಗೆ ಮನನೋಯುವುದಾದರೆ ಏನಾಗುತ್ತದೆ? ಈ ಹಂತದಲ್ಲಿ ನಮ್ಮ ಪ್ರೀತಿಯ ಯಥಾರ್ಥತೆಯು ಪರೀಕ್ಷೆಗೊಳಗಾಗಬಹುದು. (2 ಕೊರಿಂಥ 8:8ನ್ನು ಹೋಲಿಸಿ.) ಇಂತಹ ಸನ್ನಿವೇಶಗಳಲ್ಲಿ ನಾವೇನು ಮಾಡಬೇಕೆಂದು ಬೈಬಲು ಕಲಿಸುತ್ತದೆ? ಪೂರ್ಣಾರ್ಥದಲ್ಲಿ ಪ್ರೀತಿಯನ್ನು ತೋರಿಸಲು ಶ್ರಮಿಸುವುದು, ಮಾಡಬಹುದಾದ ಒಂದು ವಿಷಯವಾಗಿದೆ. (1 ಪೇತ್ರ 4:8) ಸ್ವಹಿತಗಳಿಗಾಗಿ ನೋಡಿ, ಚಿಕ್ಕಪುಟ್ಟ ದೋಷಗಳಿಂದ ಕೆರಳುವ ಬದಲಿಗೆ ಅಥವಾ ಹಾನಿಯ ಬಗ್ಗೆ ಲೆಕ್ಕವನ್ನಿಟ್ಟುಕೊಳ್ಳುವ ಬದಲಿಗೆ, ಪ್ರೀತಿಯು ಬಹುಪಾಪಗಳನ್ನು ಮುಚ್ಚುವಂತೆ ನಾವು ಪ್ರಯತ್ನಿಸಬೇಕು. (1 ಕೊರಿಂಥ 13:5) ಇದು ದೇವರ ಚಿತ್ತವೆಂಬುದು ನಮಗೆ ಗೊತ್ತು, ಏಕೆಂದರೆ ಆತನ ವಾಕ್ಯವು ಅದನ್ನೇ ಕಲಿಸುತ್ತದೆ.
16. (ಎ) ಕ್ರೈಸ್ತರು ಯಾವ ರೀತಿಯ ಯುದ್ಧೋದ್ಯಮದಲ್ಲಿ ಒಳಗೂಡುವಂತೆ ಕಲಿಸಲ್ಪಡುತ್ತಾರೆ? (ಬಿ) ನಾವು ಹೇಗೆ ಸನ್ನದ್ಧರಾಗಿದ್ದೇವೆ?
16 ಅನೇಕರು ಪ್ರೀತಿಯನ್ನು ಯುದ್ಧೋದ್ಯಮದೊಂದಿಗೆ ಜೋಡಿಸುವುದಿಲ್ಲವಾದರೂ, ಯುದ್ಧೋದ್ಯಮವು—ಆದರೆ ಪ್ರತ್ಯೇಕ ರೀತಿಯ ಯುದ್ಧೋದ್ಯಮ—ನಮಗೆ ಕಲಿಸಲ್ಪಡುತ್ತಿರುವ ಇನ್ನೊಂದು ವಿಷಯವಾಗಿದೆ. ದಾವೀದನು ಯುದ್ಧವನ್ನು ಹೇಗೆ ನಿರ್ವಹಿಸುವುದೆಂಬುದನ್ನು ತನಗೆ ಕಲಿಸಲು—ಅವನ ಕಾಲದಲ್ಲಿ ಯುದ್ಧವು ಇಸ್ರಾಯೇಲ್ಯರ ವೈರಿಗಳ ವಿರುದ್ಧ ಅಕ್ಷರಾರ್ಥದ ಹೋರಾಟವನ್ನು ಒಳಗೊಂಡಿದ್ದರೂ—ಯೆಹೋವನ ಮೇಲೆ ತಾನು ಅವಲಂಬಿಯೆಂಬುದನ್ನು ಒಪ್ಪಿಕೊಂಡನು. (1 ಸಮುವೇಲ 17:45-51; 19:8; 1 ಅರಸು 5:3; ಕೀರ್ತನೆ 144:1) ಇಂದು ನಮ್ಮ ಹೋರಾಟದ ಕುರಿತೇನು? ನಮ್ಮ ಆಯುಧಗಳು ಲೋಕಸಂಬಂಧವಾದುವುಗಳಲ್ಲ. (2 ಕೊರಿಂಥ 10:4) ನಮ್ಮದು ಒಂದು ಆತ್ಮಿಕ ಹೋರಾಟವಾಗಿದೆ, ಇದಕ್ಕಾಗಿ ನಾವು ಆತ್ಮಿಕ ರಕ್ಷಾಕವಚದಿಂದ ಸನ್ನದ್ಧರಾಗಿರುವ ಅಗತ್ಯವಿದೆ. (ಎಫೆಸ 6:10-13) ಯೆಹೋವನು ತನ್ನ ವಾಕ್ಯ ಮತ್ತು ಸಭೆಯಾಗಿ ಕೂಡಿದ ಜನರ ಮೂಲಕ, ನಾವು ಜಯಪ್ರದವಾದೊಂದು ಆತ್ಮಿಕ ಹೋರಾಟವನ್ನು ನಡೆಸುವಂತೆ ಕಲಿಸುತ್ತಾನೆ.
17. (ಎ) ಪಿಶಾಚನು ನಮ್ಮನ್ನು ತಿರುಗಿಸಲು ಯಾವ ಉಪಾಯಗಳನ್ನು ಉಪಯೋಗಿಸುತ್ತಾನೆ? (ಬಿ) ನಾವು ವಿವೇಕದಿಂದ ಯಾವುದನ್ನು ದೂರವಿರಿಸಬೇಕು?
17 ಮೋಸಕರವಾದ, ಕುಶಾಗ್ರ ವಿಧಗಳಲ್ಲಿ ಪಿಶಾಚನು ಅನೇಕ ವೇಳೆ, ಅಮುಖ್ಯ ವಿಷಯಗಳ ಕಡೆಗೆ ನಮ್ಮನ್ನು ತಿರುಗಿಸುವ ಪ್ರಯತ್ನದಲ್ಲಿ, ಲೌಕಿಕ ಶೋಧನೆಗಳನ್ನು, ಧರ್ಮಭ್ರಷ್ಟರನ್ನು ಮತ್ತು ಇತರ ಸತ್ಯವಿರೋಧಿಗಳನ್ನು ಉಪಯೋಗಿಸುತ್ತಾನೆ. (1 ತಿಮೊಥೆಯ 6:3-5, 11; ತೀತ 3:9-11) ನೇರವಾದ, ಮುಂದಾಕ್ರಮಣದಿಂದ ನಮ್ಮನ್ನು ಜಯಿಸಲು ತನಗೆ ಕೊಂಚವೇ ಸಂದರ್ಭವಿರುತ್ತದೆಂಬುದನ್ನು ಅವನು ನೋಡುತ್ತಾನೆಯೊ ಎಂಬಂತೆ ಇದು ಇರುವುದರಿಂದ, ನಾವು ಆತ್ಮಿಕವಾಗಿ ತಿರುಳಿಲ್ಲದಿರುವ ವಾಡಿಕೆಯ ಗೊಣಗುವಿಕೆಗಳನ್ನೂ ಅವಿವೇಕದ ಪ್ರಶ್ನೆಗಳನ್ನೂ ಕೇಳುವಂತೆ ಮಾಡಿ ನಾವು ಮುಗ್ಗರಿಸಿಬೀಳುವಂತೆ ಪ್ರಯತ್ನಿಸುತ್ತಾನೆ. ಜಾಗರೂಕರಾದ ಯೋಧರೋಪಾದಿ ನಾವು ಮುಂದಾಕ್ರಮಣಗಳಿಗೆ ಎಚ್ಚರವಾಗಿರುವಷ್ಟೇ ಇಂತಹ ಅಪಾಯಗಳಿಗೂ ಎಚ್ಚರವಾಗಿರಬೇಕು.—1 ತಿಮೊಥೆಯ 1:3, 4.
18. ಇನ್ನು ಮುಂದೆ ನಮಗಾಗಿ ಜೀವಿಸದಿರುವುದು ನಿಜವಾಗಿ ಏನನ್ನು ಒಳಗೊಳ್ಳುತ್ತದೆ?
18 ನಾವು ಮನುಷ್ಯರ ಬಯಕೆಗಳನ್ನಾಗಲಿ ರಾಷ್ಟ್ರಗಳ ಸಂಕಲ್ಪಗಳನ್ನಾಗಲಿ ಉತ್ತೇಜಿಸುವುದಿಲ್ಲ. ಯೆಹೋವನು ಯೇಸುವಿನ ಮಾದರಿಯ ಮೂಲಕ, ನಾವು ಇನ್ನು ಮುಂದೆ ನಮಗಾಗಿ ಜೀವಿಸಬಾರದು; ಅದಕ್ಕೆ ಬದಲಾಗಿ, ಕ್ರಿಸ್ತ ಯೇಸುವಿಗಿದ್ದ ಅದೇ ಮನೋವೃತ್ತಿಯಿಂದ ಸಜ್ಜಿತರಾಗಿದ್ದು, ದೇವರ ಚಿತ್ತವನ್ನು ಮಾಡಲು ಜೀವಿಸಬೇಕೆಂದು ಕಲಿಸಿದ್ದಾನೆ. (2 ಕೊರಿಂಥ 5:14, 15) ಈ ಹಿಂದೆ ನಾವು ತೀರ ಮಿತಿಯಿಲ್ಲದ, ವಿಷಯಲಂಪಟ ಜೀವನವನ್ನು ಸಾಗಿಸಿ, ಅಮೂಲ್ಯವಾದ ಸಮಯವನ್ನು ವ್ಯರ್ಥವಾಗಿ ಕಳೆದಿರಬಹುದು. ಸಂತೋಷಲೋಲುಪತೆಗಳು, ಕುಡಿಯುವ ಸ್ಪರ್ಧೆಗಳು ಮತ್ತು ಅನೈತಿಕತೆಗಳು ಈ ದುಷ್ಟ ಲೋಕದ ವಿಶೇಷ ಲಕ್ಷಣಗಳಾಗಿವೆ. ನಮಗೆ ಈಗ ದೇವರ ಚಿತ್ತವನ್ನು ಮಾಡಲು ಕಲಿಸಲ್ಪಟ್ಟಿರುವುದರಿಂದ, ಈ ಭ್ರಷ್ಟ ಲೋಕದಿಂದ ಪ್ರತ್ಯೇಕಿಸಲ್ಪಟ್ಟಿರುವುದಕ್ಕೆ ನಾವು ಕೃತಜ್ಞರಾಗಿರುವುದಿಲ್ಲವೆ? ಆದಕಾರಣ ಹೊಲೆಗೊಳ್ಳುತ್ತಿರುವ ಈ ಲೌಕಿಕ ಆಚಾರಗಳಲ್ಲಿ ಸಿಕ್ಕಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು, ನಾವು ಆತ್ಮಿಕವಾಗಿ ಕಠಿನವಾದ ಹೋರಾಟವನ್ನು ಮಾಡೋಣ.—1 ಪೇತ್ರ 4:1-3.
ಸ್ವತಃ ಪ್ರಯೋಜನಪಡೆದುಕೊಳ್ಳುವಂತೆ ನಮಗೆ ಕಲಿಸುವುದು
19. ಯೆಹೋವನ ಚಿತ್ತವು ಕಲಿಸಲ್ಪಡುವುದು ಮತ್ತು ಬಳಿಕ ಅದನ್ನು ಮಾಡುವುದು ಯಾವ ಪ್ರಯೋಜನಗಳಿಗೆ ನಡೆಸಬಲ್ಲದು?
19 ಯೆಹೋವನ ಚಿತ್ತವನ್ನು ಮಾಡಲು ಕಲಿಸಲ್ಪಡುತ್ತಿರುವುದು ನಮಗೆ ಮಹತ್ತಾದ ಪ್ರಯೋಜನವನ್ನು ತರುವುದೆಂಬುದನ್ನು ಒಪ್ಪಿಕೊಳ್ಳುವುದು ಅತ್ಯಗತ್ಯ. ನಾವು ಕಲಿತು, ಬಳಿಕ ನಮಗೆ ಆತನ ಪುತ್ರನ ಹಾಗೂ ಆತನ ವಾಕ್ಯ ಮತ್ತು ಸಭೆಯಾಗಿ ಕೂಡಿದ ಜನರ ಮೂಲಕ ಬರುವ ಉಪದೇಶಗಳನ್ನು ಅನುಸರಿಸುವರೆ, ನಿಕಟವಾದ ಗಮನವನ್ನು ಕೊಟ್ಟು ನಮ್ಮ ಪಾಲನ್ನು ಮಾಡಬೇಕೆಂಬುದು ಗ್ರಾಹ್ಯ. (ಯೆಶಾಯ 48:17, 18; ಇಬ್ರಿಯ 2:1) ಹಾಗೆ ಮಾಡುವುದರಿಂದ ನಾವು, ಈ ಆಪತ್ಕಾರಕ ಸಮಯಗಳಲ್ಲಿ ಸ್ಥಿರವಾಗಿ ನಿಂತು, ಮುಂದಿರುವ ಕ್ಷೋಭೆಗಳನ್ನು ಸಹಿಸಿಕೊಳ್ಳುವಂತೆ ಬಲಪಡಿಸಲ್ಪಡುವೆವು. (ಮತ್ತಾಯ 7:24-27) ಈಗ ಸಹ, ನಾವು ದೇವರ ಚಿತ್ತವನ್ನು ಮಾಡುತ್ತಾ ಆತನನ್ನು ಮೆಚ್ಚಿಸಿ, ನಮ್ಮ ಪ್ರಾರ್ಥನೆಗಳು ಉತ್ತರಿಸಲ್ಪಡುವುವೆಂಬ ಭರವಸೆಯಲ್ಲಿರುವೆವು. (ಯೋಹಾನ 9:31; 1 ಯೋಹಾನ 3:22) ಮತ್ತು ನಾವು ಯಥಾರ್ಥವಾದ ಸಂತೋಷವನ್ನು ಅನುಭವಿಸುವೆವು.—ಯೋಹಾನ 13:17.
20. 1997ರಾದ್ಯಂತ ನೀವು ವರ್ಷವಚನವನ್ನು ನೋಡುವಾಗ ಯಾವುದರ ಮೇಲೆ ಮನನ ಮಾಡುವುದು ಒಳ್ಳೆಯದು?
20 1997ರ ಅವಧಿಯಲ್ಲಿ ನಮಗೆ, “ನಿನ್ನ ಚಿತ್ತವನ್ನು ಮಾಡಲು ನನಗೆ ಕಲಿಸು” ಎಂಬ ವರ್ಷವಚನವಾದ ಕೀರ್ತನೆ 143:10ನ್ನು ಪದೇ ಪದೇ ಓದಿ ಆಲೋಚಿಸುವ ಸಂದರ್ಭವಿರುವುದು. ನಾವಿದನ್ನು ಮಾಡುವಾಗ, ಮೇಲೆ ಕೊಟ್ಟಿರುವಂತೆ, ಕೆಲವು ಸಂದರ್ಭಗಳನ್ನು ನಾವು ಕಲಿಸಲ್ಪಡುವಂತೆ ದೇವರು ಮಾಡಿರುವ ಒದಗಿಸುವಿಕೆಗಳನ್ನು ಪುನರಾಲೋಚಿಸಲು ಬಳಸೋಣ. ಮತ್ತು, “ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು,” ಎಂಬುದನ್ನು ತಿಳಿದವರಾಗಿ, ಆ ಮಾತುಗಳ ಕುರಿತಾದ ಅಂತಹ ಮನನವನ್ನು ಆ ಬೇಡಿಕೆಗೆ ಹೊಂದಿಕೆಯಾಗಿ ಕೆಲಸಮಾಡುವ ಉತ್ತೇಜನವಾಗಿ ಉಪಯೋಗಿಸೋಣ.—1 ಯೋಹಾನ 2:17.
ನೀವು ಹೇಗೆ ಉತ್ತರಿಸುವಿರಿ?
◻ ಇಂದು ಯಾರು ಯೆಹೋವನ ಚಿತ್ತವನ್ನು ಮಾಡುವಂತೆ ಕಲಿಸಲ್ಪಡುತ್ತಿದ್ದಾರೆ?
◻ ಕೀರ್ತನೆ 143:10 ನಮ್ಮನ್ನು 1997ರಲ್ಲಿ ಹೇಗೆ ಪ್ರಭಾವಿಸಬೇಕು?
◻ ನಾವು ಯೆಹೋವನ ಚಿತ್ತವನ್ನು ಮಾಡುವಂತೆ ಹೇಗೆ ಕಲಿಸಲ್ಪಡುತ್ತಿದ್ದೇವೆ?
◻ ತಮ್ಮ ಮಕ್ಕಳಿಗೆ ಕಲಿಸುವುದರಲ್ಲಿ ಕ್ರೈಸ್ತ ಹೆತ್ತವರಿಂದ ಏನು ಕೇಳಿಕೊಳ್ಳಲ್ಪಡುತ್ತದೆ?