ಇಷ್ಟೊಂದು ಕಷ್ಟಾನುಭವ
“ಭೀಕರವಾದ ಈ ಎಲ್ಲಾ ವ್ಯಕ್ತಿಗತ ಮತ್ತು ಸಾಮುದಾಯಿಕ ಕಷ್ಟಾನುಭವ ಏಕೆ ಇದೆ . . . ? ದೇವರು ಎಲ್ಲಾ ಉದ್ದೇಶದ ಮೂರ್ತರೂಪವೆಂದು ಭಾವಿಸಲಾಗುತ್ತದೆ, ಆದರೂ ಈ ಲೋಕದಲ್ಲಿ ಅರ್ಥವಿಲ್ಲದ ಎಷ್ಟೊಂದು ವಿಷಯಗಳಿವೆ, ಉದ್ದೇಶರಹಿತವಾದ ಎಷ್ಟೊಂದು ಕಷ್ಟಾನುಭವ ಮತ್ತು ಉದ್ದೇಶರಹಿತವಾದ ಪಾಪವಿದೆ. ಈ ದೇವರು, ಯಾರನ್ನು ನೀಟ್ಚ ಒಬ್ಬ ನಿರಂಕುಶಪ್ರಭು, ಸೋಗುಗಾರ, ವಂಚಕ, ವಧಕಾರನೆಂದು ಆಪಾದಿಸಿದನೊ ಅಂತಹವನಾಗಿರಬಹುದೊ?”—ಒಬ್ಬ ಕ್ರೈಸ್ತನಾಗಿರುವ ಕುರಿತಾಗಿ (ಇಂಗ್ಲಿಷ್), ಹಾನ್ಸ್ ಕುಂಗ್‌ರಿಂದ.
ಕ್ಯಾಥೊಲಿಕ್ ದೇವತಾಶಾಸ್ತ್ರಜ್ಞನಾದ ಹಾನ್ಸ್ ಕುಂಗ್, ಅನೇಕ ಜನರನ್ನು ಗಲಿಬಿಲಿಗೊಳಿಸುವಂತಹ ಒಂದು ಸಮಸ್ಯೆಯನ್ನು ಸಾದರಪಡಿಸುತ್ತಿದ್ದಾನೆಂಬುದನ್ನು ನೀವು ಕಾಣಬಹುದು—ಒಬ್ಬ ಸರ್ವ ಶಕ್ತಿವಂತ, ಪ್ರೀತಿಪರನಾದ ದೇವರು ಇಷ್ಟೊಂದು ಕಷ್ಟಾನುಭವವನ್ನು ಏಕೆ ಅನುಮತಿಸುತ್ತಾನೆ? ಜನರು ಹಾಗೆ ಪ್ರಶ್ನಿಸುವುದನ್ನು ನೀವು ಕೇಳಿಸಿಕೊಂಡಿಲ್ಲವೊ? ಕುಂಗ್ ಯಾವುದನ್ನು “ರಕ್ತ, ಬೆವರು ಮತ್ತು ಕಣ್ಣೀರು, ನೋವು, ದುಃಖ ಮತ್ತು ಭಯ, ಏಕಾಂಗಿತನ ಮತ್ತು ಮರಣದ ಒಂದು ಅಂತ್ಯವಿಲ್ಲದ ಪ್ರವಾಹ” ಎಂದು ವರ್ಣಿಸಿದನೊ ಅದಕ್ಕಾಗಿ, ಕನಿಕರವಿರುವ ಯಾರೇ ಆಗಲಿ ದುಃಖಿಸುತ್ತಾನೆ. ವಾಸ್ತವದಲ್ಲಿ ಅದು ಹೆಚ್ಚಾಗಿ, ಒಂದು ರಭಸದ ಪ್ರವಾಹ, ಇತಿಹಾಸದಾದ್ಯಂತ ಕೋಟಿಗಟ್ಟಲೆ ಜೀವಗಳನ್ನು ಬತ್ತಿಸಿರುವ ಭೀತಿ ಮತ್ತು ಯಾತನೆಯ ಒಂದು ನೆರೆಯಂತಿದೆ.—ಯೋಬ 14:1.
“ಕಷ್ಟಸಂಕಟ”ಗಳಿಂದ ತುಂಬಿರುವುದು
ಯುದ್ಧದಿಂದ ಫಲಿಸುವ ಕಷ್ಟಾನುಭವ, ನರಳಿ ಸಾಯುವ ಬಲಿಗಳಿಂದ ಅನುಭವಿಸಲ್ಪಡುವ ನೋವಿನ ಕುರಿತಾಗಿ ಮಾತ್ರವಲ್ಲ, ಪಾಶವೀಯವಾಗಿ ಉಪಚರಿಸಲ್ಪಟ್ಟಿರುವ ಶಿಶು ಬಲಿಗಳು ಮತ್ತು ಇತರರ ಹೆತ್ತವರು ಮತ್ತು ಸಂಬಂಧಿಗಳಂತಹ, ದುಃಖಿಸಲಿಕ್ಕಾಗಿ ಹಿಂದೆ ಬಿಡಲ್ಪಟ್ಟಿರುವವರಿಂದಲೂ ಅನುಭವಿಸಲ್ಪಡುವ ವೇದನೆಯ ಕುರಿತಾಗಿ ಯೋಚಿಸಿರಿ. “ಕಳೆದ 10 ವರ್ಷಗಳಲ್ಲಿ, 15 ಲಕ್ಷ ಮಕ್ಕಳು ಸಶಸ್ತ್ರ ಸಂಘರ್ಷಗಳಲ್ಲಿ ಕೊಲ್ಲಲ್ಪಟ್ಟರು” ಎಂದು ರೆಡ್ ಕ್ರಾಸ್ ಸಂಸ್ಥೆಯು ಇತ್ತೀಚೆಗೆ ಹೇಳಿತು. 1994ರಲ್ಲಿ ರುಆಂಡದಲ್ಲಿ, “ನೂರಾರು ಸಾವಿರ ಪುರುಷರು, ಸ್ತ್ರೀಯರು ಮತ್ತು ಮಕ್ಕಳು, ಪಾಶವೀಯವಾಗಿ ಮತ್ತು ವ್ಯವಸ್ಥಿತವಾಗಿ ಹತಿಸಲ್ಪಟ್ಟಿದ್ದರು” ಎಂದು ರೆಡ್ ಕ್ರಾಸ್ ಸಂಸ್ಥೆಯು ವರದಿಸುತ್ತದೆ.
ಮಕ್ಕಳಕಾಮಿಗಳಿಂದ ಉಂಟುಮಾಡಲ್ಪಡುವ ನೋವನ್ನೂ ನಾವು ಅಲಕ್ಷಿಸಬಾರದು. ಬಾಲ ಆರೈಕೆಯ ಕಾರ್ಮಿಕನೊಬ್ಬನಿಂದ ಅಪಪ್ರಯೋಗಿಸಲ್ಪಟ್ಟ ಬಳಿಕ, ತನ್ನ ಮಗನು ಆತ್ಮಹತ್ಯೆಮಾಡಿಕೊಂಡನೆಂದು ಹೇಳುತ್ತಾ, ದುಃಖಿಸುತ್ತಿರುವ ಒಬ್ಬ ತಾಯಿ ತಿಳಿಸಿದ್ದು: “ನನ್ನ ಮಗನನ್ನು ಅಪಪ್ರಯೋಗಿಸಿದ ಪುರುಷನು . . . ಅವನನ್ನು ಮತ್ತು ಇತರ ಅನೇಕ ಹುಡುಗರನ್ನು, ಊಹಿಸಬಹುದಾದ ಅತಿ ವ್ಯವಸ್ಥಿತ, ವಕ್ರ ರೀತಿಯಲ್ಲಿ ನಾಶಮಾಡಿದನು.” ಮತ್ತು “25 ವರ್ಷಗಳ ವರೆಗೆ ಶಿಕ್ಷೆಯ ಭಯವಿಲ್ಲದೆ ಅಪಹರಣಮಾಡಿದ, ಬಲಾತ್ಕಾರ ಸಂಭೋಗ ಮಾಡಿದ, ಚಿತ್ರಹಿಂಸೆ ನೀಡಿದ ಮತ್ತು ಕೊಂದಂತಹ,” ಬ್ರಿಟನಿನಲ್ಲಿ ಸೆರೆಹಿಡಿಯಲ್ಪಟ್ಟ ನಿಷ್ಕರುಣಿ ಕೊಲೆಗಾರರು ಮತ್ತು ಸರಣಿ ಹಂತಕರಂಥವರ ಬಲಿಗಳಿಂದ ಅನುಭವಿಸಲ್ಪಟ್ಟ ನೋವಿನ ಘೋರಸ್ವಪ್ನದ ಕುರಿತಾಗಿ ಏನು? ಇತಿಹಾಸದಾದ್ಯಂತ ಸ್ತ್ರೀಪುರುಷರು ಒಬ್ಬರು ಇನ್ನೊಬ್ಬರ ಮೇಲೆ ಹೇರಿರುವ ನೋವು ಮತ್ತು ಕಷ್ಟಾನುಭವಕ್ಕೆ, ಯಾವ ಪರಿಮಿತಿಯೂ ಇಲ್ಲದಿರುವಂತೆ ತೋರುತ್ತದೆ.—ಪ್ರಸಂಗಿ 4:1-3.
ಭಾವನಾತ್ಮಕ ಮತ್ತು ದೈಹಿಕ ಅಸ್ವಸ್ಥತೆಗಳಿಂದ ಉಂಟಾಗುವ ಕಷ್ಟಾನುಭವ ಮತ್ತು ಪ್ರಿಯ ಜನರು ಅಕಾಲಿಕವಾಗಿ ಸಾಯುವಾಗ, ಕುಟುಂಬಗಳನ್ನು ಧ್ವಂಸಗೊಳಿಸುವ ದುಃಖದ ಭೀಕರವಾದ ನೋವನ್ನು ಇದಕ್ಕೆ ಕೂಡಿಸಿರಿ. ಕ್ಷಾಮ ಅಥವಾ ಇತರ ನೈಸರ್ಗಿಕ ವಿಪತ್ತುಗಳೆಂದು ಕರೆಯಲ್ಪಡುವಂತಹವುಗಳಿಗೆ ಬಲಿಯಾದವರಿಂದ ಅನುಭವಿಸಲ್ಪಡುವ ಅಳಲು ಸಹ ಇದೆ. ನಮ್ಮ 70 ಅಥವಾ 80 ವರ್ಷಗಳು “ಕಷ್ಟಸಂಕಟ”ಗಳಿಂದ ತುಂಬಿವೆಯೆಂಬ ಮೋಶೆಯ ಹೇಳಿಕೆಯ ಕುರಿತಾಗಿ ವಾದ ಮಾಡುವವರು ಕೊಂಚ ಜನರೇ.—ಕೀರ್ತನೆ 90:10.
ದೇವರ ಉದ್ದೇಶದ ಭಾಗವೊ?
ಕೆಲವರು ಪ್ರತಿಪಾದಿಸಿರುವಂತೆ, ಈ ನಿರಂತರವಾದ ಕಷ್ಟಾನುಭವವು, ದೇವರ ಗ್ರಹಿಸಲಶಕ್ಯವಾದ ಯಾವುದೊ ಉದ್ದೇಶದ ಒಂದು ಭಾಗವಾಗಿರಬಹುದೊ? ‘ಮುಂದಿನ ಲೋಕದಲ್ಲಿ’ ಜೀವನವನ್ನು ಗಣ್ಯಮಾಡಲು ನಾವು ಈಗ ಕಷ್ಟಾನುಭವಿಸಬೇಕೊ? ಫ್ರೆಂಚ್ ತತ್ತ್ವಜ್ಞಾನಿ ಟೆಲ್ಹಾರ್ಡ್ ಡಾ ಚಾರ್ಡಿನ್ ನಂಬಿದಂತೆ, “ಕೊಂದು ಕೊಳೆಯುವಂತೆ ಮಾಡುವ ಕಷ್ಟಾನುಭವವು, ಮಾನವ ಜೀವಿಯು ಜೀವಿಸಿ, ಆತ್ಮವಾಗಲಿಕ್ಕೋಸ್ಕರ ದೇಹಕ್ಕೆ ಅವಶ್ಯವಾಗಿದೆ”ಯೊ? (ಟೆಲ್ಹಾರ್ಡ್ ಡಾ ಚಾರ್ಡಿನ್‌ನ ಧರ್ಮ [ಇಂಗ್ಲಿಷ್]; ಓರೆಅಕ್ಷರಗಳು ನಮ್ಮವು.) ನಿಶ್ಚಯವಾಗಿಯೂ ಇಲ್ಲ!
ಪರಿಗಣನೆಯುಳ್ಳ ಒಬ್ಬ ವಿನ್ಯಾಸಕನು, ಬೇಕುಬೇಕೆಂದೇ ಒಂದು ಮಾರಕವಾದ ಪರಿಸರವನ್ನು ಸೃಷ್ಟಿಸಿ, ಅನಂತರ ಜನರನ್ನು ಅದರ ಪರಿಣಾಮಗಳಿಂದ ರಕ್ಷಿಸಿದಾಗ, ಕನಿಕರವುಳ್ಳವನು ಎಂದು ಹೇಳಿಕೊಳ್ಳುವನೊ? ಇಲ್ಲವೇ ಇಲ್ಲ! ಒಬ್ಬ ಪ್ರೀತಿಪರ ದೇವರು ಅಂತಹ ಒಂದು ಸಂಗತಿಯನ್ನು ಏಕೆ ಮಾಡುವನು? ಹಾಗಾದರೆ ದೇವರು ಕಷ್ಟಾನುಭವವನ್ನು ಏಕೆ ಅನುಮತಿಸುತ್ತಾನೆ? ಕಷ್ಟಾನುಭವವು ಎಂದಾದರೂ ಕೊನೆಗೊಳ್ಳುವುದೊ? ಮುಂದಿನ ಲೇಖನವು ಈ ಪ್ರಶ್ನೆಗಳನ್ನು ಚರ್ಚಿಸುವುದು.
[ಪುಟ 3 ರಲ್ಲಿರುವ ಚಿತ್ರ ಕೃಪೆ]
WHO photo by P. Almasy