ಹೆಚ್ಚು ಉತ್ತಮವಾದ ಒಂದು ಮಾರ್ಗ
ಯೆಹೋವನ ಸಾಕ್ಷಿಗಳು, ಲೋಕದಲ್ಲಿನ ಆತ್ಮಿಕತೆಯ ಶಿಥಿಲತೆಯ ಕುರಿತಾಗಿಯೂ, ಸಮಾಜದಲ್ಲಿ ವ್ಯಾಪಿಸುತ್ತಿರುವ ಅನೈತಿಕತೆ ಹಾಗೂ ಧಾರ್ಮಿಕ ಅನಿಶ್ಚಿತತೆಯ ಕುರಿತಾಗಿಯೂ ಚಿಂತಿತರಾಗಿದ್ದಾರೆ. ಫಲಿತಾಂಶವಾಗಿ, ಕೆಲವೊಮ್ಮೆ ಅವರನ್ನು ಮೂಲಭೂತ ವಾದಿಗಳೆಂದು ಕರೆಯಲಾಗುತ್ತದೆ. ಆದರೆ ಅವರು ಮೂಲಭೂತ ವಾದಿಗಳಾಗಿದ್ದಾರೊ? ಇಲ್ಲ. ಅವರಿಗೆ ಬಲವಾದ ಧಾರ್ಮಿಕ ನಿಶ್ಚಿತಾಭಿಪ್ರಾಯಗಳಿರುವುದಾದರೂ, ಆ ಶಬ್ದವು ಉಪಯೋಗಿಸಲ್ಪಡುವಂತಹ ಅರ್ಥದಲ್ಲಿ ಅವರು ಮೂಲಭೂತ ವಾದಿಗಳಾಗಿಲ್ಲ. ಒಂದು ನಿರ್ದಿಷ್ಟ ದೃಷ್ಟಿಕೋನವನ್ನು ಪ್ರವರ್ಧಿಸುವಂತೆ ಅವರು ರಾಜಕೀಯ ಮುಖಂಡರನ್ನು ಒತ್ತಾಯಪಡಿಸುವುದಿಲ್ಲ. ಹಾಗೂ ಅವರು ಯಾರೊಂದಿಗೆ ಅಸಮ್ಮತಿಯನ್ನು ಸೂಚಿಸುತ್ತಾರೋ ಅವರ ವಿರುದ್ಧವಾಗಿ ಸಾರ್ವಜನಿಕ ಮೆರವಣಿಗೆಗಳು ಹಾಗೂ ಹಿಂಸಾಕೃತ್ಯವನ್ನು ನಡೆಸುವುದನ್ನು ಆಶ್ರಯಿಸುವುದಿಲ್ಲ. ಅವರು ಹೆಚ್ಚು ಉತ್ತಮವಾದ ಒಂದು ಮಾರ್ಗವನ್ನು ಕಂಡುಕೊಂಡಿದ್ದಾರೆ. ಅವರು ತಮ್ಮ ಮುಖಂಡನಾದ ಯೇಸು ಕ್ರಿಸ್ತನನ್ನು ಅನುಕರಿಸುತ್ತಾರೆ.
ಧಾರ್ಮಿಕ ಸತ್ಯವು ಅಸ್ತಿತ್ವದಲ್ಲಿದೆ, ಅದು ಬೈಬಲಿನಲ್ಲಿ ಕಂಡುಬರುತ್ತದೆ ಎಂದು ಯೆಹೋವನ ಸಾಕ್ಷಿಗಳು ಮನಗಂಡಿದ್ದಾರೆ. (ಯೋಹಾನ 8:32; 17:17) ಆದರೆ ಕ್ರೈಸ್ತರು ದಯಾಪರರೂ, ಒಳ್ಳೆಯವರೂ, ಮೃದು ಸ್ವಭಾವದವರೂ, ವಿವೇಚನೆಯುಳ್ಳವರೂ ಆಗಿರುವಂತೆ ಬೈಬಲು ಕಲಿಸುತ್ತದೆ. ಈ ಗುಣಗಳು ಧರ್ಮಾಂಧತೆಯನ್ನು ಅನುಮತಿಸವು. (ಗಲಾತ್ಯ 5:22, 23; ಫಿಲಿಪ್ಪಿ 4:5) ಬೈಬಲಿನ ಯಾಕೋಬ ಪುಸ್ತಕದಲ್ಲಿ, ಕ್ರೈಸ್ತರು “ಮೇಲಣಿಂದ ಬರುವ ಜ್ಞಾನ”ವನ್ನು ರೂಢಿಸಿಕೊಳ್ಳುವಂತೆ ಉತ್ತೇಜಿಸಲ್ಪಟ್ಟಿದ್ದಾರೆ. ಅದು “ಮೊದಲು ಪರಿಶುದ್ಧವಾದದ್ದು, ಆ ಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸಂತೋಷವಾಗಿ ಒಪ್ಪಿಕೊಳ್ಳುವಂಥದು, ಕರುಣೆ ಮುಂತಾದ ಒಳ್ಳೇ ಫಲಗಳಿಂದ ತುಂಬಿರುವಂಥದು ಆಗಿದೆ.” ಯಾಕೋಬನು ಕೂಡಿಸಿದ್ದು: “ಸಮಾಧಾನಪಡಿಸುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ನೀತಿಯೆಂಬ ಫಲವನ್ನು ಕೊಯ್ಯುವರು.”—ಯಾಕೋಬ 3:17, 18.
ಯೇಸು ಸತ್ಯದ ಕುರಿತು ಬಹಳವಾಗಿ ಚಿಂತಿತನಾಗಿದ್ದನು ಎಂಬುದನ್ನು ಯೆಹೋವನ ಸಾಕ್ಷಿಗಳು ಜ್ಞಾಪಿಸಿಕೊಳ್ಳುತ್ತಾರೆ. ಅವನು ಪೊಂತ್ಯ ಪಿಲಾತನಿಗೆ ಹೇಳಿದ್ದು: “ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವುದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ.” (ಯೋಹಾನ 18:37) ಅವನು ಸತ್ಯದ ಧೈರ್ಯಶಾಲಿ ಸಮರ್ಥಕನಾಗಿದ್ದರೂ, ತನ್ನ ನಿಶ್ಚಿತಾಭಿಪ್ರಾಯಗಳನ್ನು ಇತರರ ಮೇಲೆ ಹೊರಿಸುವ ಪ್ರಯತ್ನವನ್ನು ಅವನು ಮಾಡಲಿಲ್ಲ. ಬದಲಾಗಿ, ಅವನು ಅವರ ಮನಸ್ಸುಗಳಿಗೂ ಹೃದಯಗಳಿಗೂ ಹಿಡಿಸುವಂತೆ ಮಾತಾಡಿದನು. ತನ್ನ ಸ್ವರ್ಗೀಯ ಪಿತನು, “ಒಳ್ಳೆಯವನೂ ಯಥಾರ್ಥವಂತನೂ” (NW) ಆದ ದೇವರು, ಭೂಮಿಯಿಂದ ಅಸತ್ಯವನ್ನೂ ಅನ್ಯಾಯವನ್ನೂ ಹೇಗೆ ನಿರ್ಮೂಲಮಾಡುವನು ಹಾಗೂ ಯಾವಾಗ ನಿರ್ಮೂಲಮಾಡುವನು ಎಂಬುದು ಅವನಿಗೆ ತಿಳಿದಿತ್ತು. (ಕೀರ್ತನೆ 25:8) ಆದುದರಿಂದ, ತನ್ನ ವಿಷಯದಲ್ಲಿ ಅಸಮ್ಮತಿ ಸೂಚಿಸಿದಂತಹವರನ್ನು ನಿಗ್ರಹಿಸಲು ಅವನು ಪ್ರಯತ್ನಿಸಲಿಲ್ಲ. ಅದಕ್ಕೆ ಬದಲಾಗಿ, ಯೇಸುವನ್ನು ನಿಗ್ರಹಿಸಲು ಪ್ರಯತ್ನಿಸಿದವರು, ಅವನ ದಿನದಲ್ಲಿದ್ದ ಸಾಂಪ್ರದಾಯಿಕ ಧಾರ್ಮಿಕ ಮುಖಂಡರೇ ಆಗಿದ್ದರು.—ಯೋಹಾನ 19:5, 6.
ಯೆಹೋವನ ಸಾಕ್ಷಿಗಳಿಗೆ, ಧಾರ್ಮಿಕ ಸಿದ್ಧಾಂತಗಳ ವಿಷಯದಲ್ಲಿ ಪ್ರಬಲವಾದ ನಿಶ್ಚಿತಾಭಿಪ್ರಾಯಗಳಿವೆ. ಮತ್ತು ನೈತಿಕತೆಗಳ ವಿಷಯದಲ್ಲಿ ಅವರು ಸ್ವಸ್ಥಕರವಾದ ಮೌಲ್ಯಗಳನ್ನು ಪ್ರದರ್ಶಿಸುತ್ತಾರೆ. ಅಪೊಸ್ತಲ ಪೌಲನಂತೆ, “ಒಬ್ಬನೇ ಕರ್ತ, ಒಂದೇ ನಂಬಿಕೆ, ಒಂದೇ ದೀಕ್ಷಾಸ್ನಾನ” (NW) ಇದೆಯೆಂಬುದನ್ನು ಅವರು ಮನಗಂಡಿದ್ದಾರೆ. (ಎಫೆಸ 4:5) ಅವರು ಯೇಸುವಿನ ಈ ಕೆಳಗಿನ ಮಾತುಗಳ ಅರಿವುಳ್ಳವರಾಗಿದ್ದಾರೆ: “ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ.” (ಮತ್ತಾಯ 7:13, 14) ಆದರೂ, ತಮ್ಮ ನಂಬಿಕೆಗಳನ್ನು ಅನುಸರಿಸುವಂತೆ ಇತರರನ್ನು ಒತ್ತಾಯಿಸಲು ಅವರು ಪ್ರಯತ್ನಿಸುವುದಿಲ್ಲ. ಬದಲಾಗಿ, ಅವರು ಪೌಲನನ್ನು ಅನುಕರಿಸುತ್ತಾರೆ ಮತ್ತು “ದೇವರೊಂದಿಗೆ ಸಮಾಧಾನವಾಗಿ”ರಲು ಅಪೇಕ್ಷಿಸುವವರೆಲ್ಲರಿಗೂ ಹಾಗೆ ಮಾಡುವಂತೆ “ಬೇಡಿಕೊಳ್ಳು”ತ್ತಾರೆ. (2 ಕೊರಿಂಥ 5:20) ಇದು ಹೆಚ್ಚು ಉತ್ತಮವಾದ ಮಾರ್ಗವಾಗಿದೆ. ಅದು ದೇವರ ಮಾರ್ಗವಾಗಿದೆ.
ಧಾರ್ಮಿಕ ಮೂಲಭೂತ ವಾದವೆಂಬುದು, ಆ ಪದವು ಇಂದು ಉಪಯೋಗಿಸಲ್ಪಡುತ್ತಿರುವುದಕ್ಕಿಂತಲೂ ತೀರ ಭಿನ್ನವಾಗಿದೆ. ಮೂಲಭೂತ ವಾದಿಗಳು, ಸಮಾಜದ ಮೇಲೆ ತಮ್ಮ ಮೂಲತತ್ತ್ವಗಳನ್ನು ಹೇರಲಿಕ್ಕಾಗಿ ಅನೇಕ ಸಂಚಾಲನೋಪಾಯಗಳನ್ನು—ಹಿಂಸಾಚಾರವೂ ಇದರಲ್ಲಿ ಸೇರಿದೆ—ಉಪಯೋಗಿಸುತ್ತಾರೆ. ಹಾಗೆ ಮಾಡುವುದರಿಂದ, ಅವರು ರಾಜಕೀಯ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿ ಪರಿಣಮಿಸುತ್ತಾರೆ. ಆದರೂ, ತನ್ನ ಹಿಂಬಾಲಕರು “ಲೋಕದ ಭಾಗವಾಗಿರ”ಬಾರದು (NW) ಎಂದು ಯೇಸು ಹೇಳಿದನು. (ಯೋಹಾನ 15:19; 17:16; ಯಾಕೋಬ 4:4) ಆ ಮಾತುಗಳಿಗೆ ಹೊಂದಿಕೆಯಲ್ಲಿ, ಯೆಹೋವನ ಸಾಕ್ಷಿಗಳು ರಾಜಕೀಯ ವಾಗ್ವಾದಗಳಲ್ಲಿ ಕಟ್ಟುನಿಟ್ಟಾದ ತಾಟಸ್ಥ್ಯವನ್ನು ಕಾಪಾಡಿಕೊಳ್ಳುತ್ತಾರೆ. ಮತ್ತು, ಇಟಲಿಯ ಫುಆರೀಪಾಜೀನಾ ಎಂಬ ವಾರ್ತಾಪತ್ರಿಕೆಯು ಅಂಗೀಕರಿಸಿದಂತೆ, ಅವರು “ಯಾರ ಮೇಲೂ ಯಾವ ಒತ್ತಾಯವನ್ನೂ ಹೇರುವುದಿಲ್ಲ; ಅವರು ಹೇಳುವ ವಿಷಯಗಳನ್ನು ಅಂಗೀಕರಿಸಲು ಹಾಗೂ ತಿರಸ್ಕರಿಸಲು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿದೆ.” ಫಲಿತಾಂಶವೇನು? ಸಾಕ್ಷಿಗಳ ಸಮಾಧಾನಕರವಾದ ಬೈಬಲ್ ಸಂದೇಶವು ಎಲ್ಲ ರೀತಿಯ ಜನರನ್ನು ಆಕರ್ಷಿಸುತ್ತದೆ—ಒಂದು ಕಾಲದಲ್ಲಿ ಮೂಲಭೂತ ವಾದಿಗಳಾಗಿದ್ದವರನ್ನು ಸಹ.—ಯೆಶಾಯ 2:2, 3.
ಸ್ವಸ್ಥ ಮೌಲ್ಯಗಳುಳ್ಳ ಒಂದು ಲೋಕ
ಮೂಲಭೂತ ವಾದಿಗಳಿಗೆ ಚಿಂತೆಹಿಡಿಸಿರುವ ಸಮಸ್ಯೆಗಳನ್ನು, ಮಾನವರು ಪರಿಹರಿಸಲು ಸಾಧ್ಯವಿಲ್ಲವೆಂಬುದನ್ನು ಸಾಕ್ಷಿಗಳು ಗ್ರಹಿಸುತ್ತಾರೆ. ದೇವರಲ್ಲಿ ನಂಬಿಕೆಯಿಡುವಂತೆ ಅಥವಾ ನಿಮ್ಮ ವೈಯಕ್ತಿಕ ಧಾರ್ಮಿಕ ನಿಶ್ಚಿತಾಭಿಪ್ರಾಯಗಳನ್ನು ಅಂಗೀಕರಿಸುವಂತೆ ನೀವು ಒಬ್ಬ ವ್ಯಕ್ತಿಗೆ ಒತ್ತಾಯಪಡಿಸಲಾರಿರಿ. ಅದು ಸಾಧ್ಯವಿದೆ ಎಂದು ಆಲೋಚಿಸುವುದೇ, ಧಾರ್ಮಿಕ ಯುದ್ಧಗಳು, ಮಧ್ಯಯುಗದ ವಿಚಾರಣೆಗಳು, ಮತ್ತು ಅಮೆರಿಕದ ಮೂಲನಿವಾಸಿಗಳ “ಮತಪರಿವರ್ತನೆ”ಗಳಂತಹ, ಇತಿಹಾಸದ ಅತ್ಯಂತ ಕೆಟ್ಟ ಭೀತಿಗಳಲ್ಲಿ ಕೆಲವಕ್ಕೆ ಮುನ್ನಡಿಸಿತು. ಹಾಗಿದ್ದರೂ, ನೀವು ದೇವರ ಮೇಲೆ ಭರವಸೆಯಿಡುವಲ್ಲಿ, ಆ ವಿಷಯಗಳನ್ನು ಆತನ ವಶಕ್ಕೆ ಒಪ್ಪಿಸಲು ಸಿದ್ಧಮನಸ್ಕರಾಗಿರುವಿರಿ.
ಬೈಬಲಿಗನುಸಾರ, ಮಾನವರು ತನ್ನ ನಿಯಮಗಳನ್ನು ಉಲ್ಲಂಘಿಸಿ, ಕಷ್ಟಾನುಭವವನ್ನೂ ವೇದನೆಯನ್ನೂ ಉಂಟುಮಾಡುವಂತೆ ದೇವರು ಅನುಮತಿಸಿರುವ ಸಮಯಕ್ಕೆ ಆತನು ಮಿತಿಯನ್ನಿಟ್ಟಿದ್ದಾನೆ. ಆ ಸಮಯವು ಬಹುಮಟ್ಟಿಗೆ ಮುಗಿದುಹೋಗಿದೆ. ಈಗಾಗಲೇ, ಯೇಸು ದೇವರ ಸ್ವರ್ಗೀಯ ರಾಜ್ಯದಲ್ಲಿ ರಾಜನಾಗಿ ಆಳುತ್ತಿದ್ದಾನೆ. ಮತ್ತು ಬೇಗನೆ ಆ ರಾಜ್ಯವು, ಮಾನವ ಸರಕಾರಗಳನ್ನು ತೆಗೆದುಹಾಕಿ, ಮಾನವಕುಲದ ಅನುದಿನದ ಮೇಲ್ವಿಚಾರಣೆಯನ್ನು ಸ್ವಾಧೀನಪಡಿಸಿಕೊಳ್ಳಲು ಕ್ರಿಯೆಗೈಯುವುದು. (ಮತ್ತಾಯ 24:3-14; ಪ್ರಕಟನೆ 11:15, 18) ಲೋಕವ್ಯಾಪಕವಾದ ಪ್ರಮೋದವನವೇ ಇದರ ಫಲಿತಾಂಶವಾಗಿರುವುದು. ಅದರಲ್ಲಿ ಶಾಂತಿ ಹಾಗೂ ನೀತಿಯು ಸಮೃದ್ಧವಾಗಿರುವುದು. ಆ ಸಮಯದಲ್ಲಿ, ಸತ್ಯ ದೇವರನ್ನು ಹೇಗೆ ಆರಾಧಿಸಬೇಕು ಎಂಬುದರ ಕುರಿತಾಗಿ ಅನಿಶ್ಚಿತತೆಯಿರದು. “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:29) ಪ್ರೀತಿದಯೆ, ಸತ್ಯ, ನ್ಯಾಯ, ಹಾಗೂ ಒಳ್ಳೆಯತನಗಳಂತಹ ಅನಂತ ಮೌಲ್ಯಗಳು, ಸರ್ವ ವಿಧೇಯ ಮಾನವಕುಲದ ಒಳಿತಿಗಾಗಿ ವಿಜಯಿಯಾಗುವವು.
ಆ ಸಮಯವನ್ನು ಮುನ್ನೋಡುತ್ತಾ, ಕೀರ್ತನೆಗಾರನು ಕವಿತಾ ಶೈಲಿಯಲ್ಲಿ ಹೇಳುವುದು: “ಕೃಪೆಯೂ ಸತ್ಯವೂ ಒಂದನ್ನೊಂದು ಕೂಡಿರುವವು; ನೀತಿಯೂ ಸಮಾಧಾನವೂ ಮುದ್ದಿಟ್ಟುಕೊಳ್ಳುವವು. ಸತ್ಯತೆಯು ಭೂಮಿಯಿಂದ ಹುಟ್ಟುವದು; ನೀತಿಯು ಆಕಾಶದಿಂದ ಕೆಳಗೆ ದೃಷ್ಟಿಸುವದು. ನಿಜವಾಗಿ ಯೆಹೋವನು ಒಳ್ಳೆಯದನ್ನು ಅನುಗ್ರಹಿಸುವನು; ನಮ್ಮ ದೇಶವು ತನ್ನ ಬೆಳೆ ಕೊಡುವದು. ನೀತಿಯು ಆತನ ಮುಂದೆ ಹೋಗುತ್ತಾ ನಾವು ಆತನ ಹೆಜ್ಜೆ ಹಿಡಿದು ನಡೆಯುವಂತೆ ದಾರಿ ಮಾಡುವದು.”—ಕೀರ್ತನೆ 85:10-13.
ನಾವು ಲೋಕವನ್ನು ಬದಲಾಯಿಸಲು ಸಾಧ್ಯವಿಲ್ಲದಿದ್ದರೂ, ಇಂದು ಸಹ ನಾವು ವ್ಯಕ್ತಿಗತವಾಗಿ ದೈವಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬಲ್ಲೆವು. ಹೀಗೆ, ಆ ಹೊಸ ಲೋಕದಲ್ಲಿ ದೇವರು ತನ್ನ ಆರಾಧಕರಾಗಿರುವಂತೆ ಬಯಸುವ ರೀತಿಯ ಜನರಾಗಿರಲು ನಾವು ಪ್ರಯತ್ನಿಸಸಾಧ್ಯವಿದೆ. ಆಗ ಕೀರ್ತನೆಗಾರನಿಂದ ನಿರ್ದೇಶಿಸಲ್ಪಟ್ಟ ದೀನ ಜನರ ನಡುವೆ ನಾವೂ ಇರುವೆವು: “ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” (ಕೀರ್ತನೆ 37:11) ತನ್ನ ಚಿತ್ತವನ್ನು ಮಾಡುವವರನ್ನು ದೇವರು ಬೆಂಬಲಿಸಿ, ಆಶೀರ್ವದಿಸುತ್ತಾನೆ. ಮತ್ತು ಅವರ ಭವಿಷ್ಯತ್ತಿಗಾಗಿ ಆತನು ಅದ್ಭುತಕರವಾದ ವಿಷಯಗಳನ್ನು ವಾಗ್ದಾನಿಸುತ್ತಾನೆ. ಅಪೊಸ್ತಲ ಯೋಹಾನನು ಹೇಳಿದ್ದು: “ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”—1 ಯೋಹಾನ 2:17.
[ಪುಟ 7 ರಲ್ಲಿರುವ ಚಿತ್ರ]
ದೇವರ ರಾಜ್ಯದ ಸುವಾರ್ತೆಯೊಂದಿಗೆ ಚಿರಪರಿಚಿತರಾಗುವಂತೆ, ಯೆಹೋವನ ಸಾಕ್ಷಿಗಳು ಎಲ್ಲರನ್ನೂ ಆಮಂತ್ರಿಸುತ್ತಾರೆ
[ಪುಟ 6 ರಲ್ಲಿರುವ ಚಿತ್ರ ಕೃಪೆ]
3, 4, 5 ಮತ್ತು 6ನೆಯ ಪುಟಗಳಲ್ಲಿರುವ ದೀಪ: Printer’s Ornaments/by Carol Belanger Grafton/Dover Publications, Inc.