ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w97 3/1 ಪು. 4-5
  • ಮೂಲಭೂತ ವಾದ ಅದೇನು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮೂಲಭೂತ ವಾದ ಅದೇನು?
  • ಕಾವಲಿನಬುರುಜು—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಮ್ಮ ಸಮಯಗಳಿಗೆ ಒಂದು ಪ್ರತಿಕ್ರಿಯೆ
  • ಒಬ್ಬ ಮೂಲಭೂತ ವಾದಿಯನ್ನು ಗುರುತಿಸುವುದು
  • ಮೂಲಭೂತ ವಾದದ ಹರಡುವಿಕೆ
    ಕಾವಲಿನಬುರುಜು—1997
  • ಭಾಗ 20: 19ನೇ ಶತಕದಿಂದ ಮುಂದಕ್ಕೆ ಪುನಃಸ್ಥಾಪನೆ ಸನ್ನಿಹಿತ!
    ಎಚ್ಚರ!—1991
  • ಹೆಚ್ಚು ಉತ್ತಮವಾದ ಒಂದು ಮಾರ್ಗ
    ಕಾವಲಿನಬುರುಜು—1997
  • ಯೆಹೋವನ ಸಾಕ್ಷಿಗಳ ಬಗ್ಗೆ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು
    ಎಚ್ಚರ!—2011
ಇನ್ನಷ್ಟು
ಕಾವಲಿನಬುರುಜು—1997
w97 3/1 ಪು. 4-5

ಮೂಲಭೂತ ವಾದ ಅದೇನು?

ಮೂಲಭೂತ ವಾದವು ಎಲ್ಲಿ ಆರಂಭವಾಯಿತು? ಕಳೆದ ಶತಮಾನದ ಅಂತ್ಯದಷ್ಟಕ್ಕೆ, ವಿಕಾಸ ವಾದದಂತಹ ವೈಜ್ಞಾನಿಕ ಸಿದ್ಧಾಂತಗಳನ್ನೂ ಬೈಬಲಿನ ಮೂಲರಚನೆಯ ವಿಷಯವಾದ ವಿಮರ್ಶೆಯನ್ನೂ ಸರಿಹೊಂದಿಸಲಿಕ್ಕಾಗಿ, ಉದಾರಾಭಿಪ್ರಾಯವುಳ್ಳ ದೇವತಾಶಾಸ್ತ್ರಜ್ಞರು ತಮ್ಮ ನಂಬಿಕೆಗಳನ್ನು ಬದಲಾಯಿಸುತ್ತಿದ್ದರು. ಇದರ ಫಲಿತಾಂಶವಾಗಿ, ಜನರು ಬೈಬಲಿನಲ್ಲಿಟ್ಟಿದ್ದ ದೃಢಭರವಸೆಯು ಕದಲಿಸಲ್ಪಟ್ಟಿತು. ಅಮೆರಿಕದಲ್ಲಿನ ಸಂಪ್ರದಾಯಶೀಲ ಧಾರ್ಮಿಕ ಮುಖಂಡರು, ಅವರು ಯಾವುದನ್ನು ನಂಬಿಕೆಯ ಮೂಲಭೂತ ಸಂಗತಿಗಳು ಎಂದು ಕರೆದರೋ ಅದನ್ನು ಸ್ಥಾಪಿಸುವ ಮೂಲಕ ಪ್ರತಿಕ್ರಿಯಿಸಿದರು.a 20ನೆಯ ಶತಮಾನದ ಆದಿ ಭಾಗದಲ್ಲಿ, ಮೂಲಭೂತ ಸಂಗತಿಗಳು: ಸತ್ಯಕ್ಕೆ ಒಂದು ಸಾಕ್ಷ್ಯ (ದ ಫಂಡಮೆಂಟಲ್ಸ್‌: ಎ ಟೆಸ್ಟಿಮನಿ ಟು ದ ಟ್ರೂಥ್‌) ಎಂಬ ಶಿರೋನಾಮವುಳ್ಳ ಅನುಕ್ರಮ ಸಂಪುಟಗಳಲ್ಲಿ, ಈ ಮೂಲಭೂತ ಸಂಗತಿಗಳ ಒಂದು ಚರ್ಚೆಯನ್ನು ಅವರು ಪ್ರಕಾಶಿಸಿದರು. ಈ ಶಿರೋನಾಮದಿಂದಲೇ “ಮೂಲಭೂತ ವಾದ” ಎಂಬ ಶಬ್ದವು ಬರುತ್ತದೆ.

ಇಪ್ಪತ್ತನೆಯ ಶತಮಾನದ ಮೊದಲ ಅರ್ಧಭಾಗದಲ್ಲಿ, ಮೂಲಭೂತ ವಾದವು ಆಗಾಗ ಚರ್ಚಾಸ್ಪದ ವಿಷಯವಾಗಿ ಪರಿಣಮಿಸಿತು. ಉದಾಹರಣೆಗಾಗಿ, 1925ರಲ್ಲಿ ಮೂಲಭೂತ ವಾದಿಗಳು, ಅಮೆರಿಕದ ಟೆನೆಸಿಯ ಜಾನ್‌ ಸ್ಕೋಪ್ಸ್‌ ಎಂಬ ಹೆಸರಿನ ಶಾಲಾ ಶಿಕ್ಷಕನೊಬ್ಬನನ್ನು ಕೋರ್ಟಿಗೆ ಕರೆದೊಯ್ದರು; ಅದು ಸ್ಕೋಪ್ಸ್‌ ವಿಚಾರಣೆಯೆಂದು ಪ್ರಸಿದ್ಧವಾಯಿತು. ಅವನ ಅಪರಾಧವೇನು? ಅವನು ವಿಕಾಸ ವಾದವನ್ನು ಬೋಧಿಸುತ್ತಿದ್ದನು. ಮತ್ತು ಅದು ಸರಕಾರದ ನಿಯಮಕ್ಕೆ ವಿರುದ್ಧವಾಗಿತ್ತು. ಮೂಲಭೂತ ವಾದವು ಅಲ್ಪಕಾಲ ಬಾಳುವುದೆಂದು ಕೆಲವರು ಆ ದಿನಗಳಲ್ಲಿ ನಂಬಿದರು. 1926ರಲ್ಲಿ, ಕ್ರಿಸ್ಟಿಯನ್‌ ಸೆಂಚುರಿ ಎಂಬ ಪ್ರಾಟೆಸ್ಟಂಟ್‌ ಪತ್ರಿಕೆಯೊಂದು ಹೇಳಿದ್ದೇನಂದರೆ, ಅದು “ಅರ್ಥಹೀನವಾದದ್ದೂ ಕೃತಕವಾದದ್ದೂ” ಆಗಿತ್ತು ಮತ್ತು “ಸೃಜನಾತ್ಮಕ ಸಾಧನೆ ಅಥವಾ ದೀರ್ಘ ಕಾಲಾವಧಿಯ ವರೆಗೆ ಉಳಿಯುವ ಗುಣಗಳಲ್ಲಿ ಪೂರ್ತಿಯಾಗಿ ಕೊರತೆಯುಳ್ಳ”ದ್ದಾಗಿದೆ. ಆ ಮೌಲ್ಯಮಾಪನವು ಎಷ್ಟು ತಪ್ಪಾಗಿತ್ತು!

ಇಸವಿ 1970ಗಳಿಂದ, ಮೂಲಭೂತ ವಾದವು ಸತತವಾಗಿ ಸುದ್ದಿಯಲ್ಲಿದೆ. ಅಮೆರಿಕ, ಕ್ಯಾಲಿಫಾರ್ನಿಯದ, ಫುಲರ್‌ ಥಿಯೊಲಾಜಿಕಲ್‌ ಸೆಮಿನರಿಯ ಪ್ರೊಫೆಸರರಾದ ಮ್ಯಿರೋಸ್ಲಾವ್‌ ವಾಲ್ಫ್‌ ಹೇಳುವುದು: “ಮೂಲಭೂತ ವಾದವು ದೀರ್ಘ ಕಾಲಾವಧಿಯ ವರೆಗೆ ಉಳಿದಿದೆ ಮಾತ್ರವಲ್ಲ, ಅದು ವ್ಯಾಪಕವಾಗಿ ಹಬ್ಬಿದೆ ಸಹ.” ಇಂದು, “ಮೂಲಭೂತ ವಾದ” ಎಂಬ ಶಬ್ದವು, ಪ್ರಾಟೆಸ್ಟಂಟ್‌ ಚಳವಳಿಗಳಿಗೆ ಮಾತ್ರವಲ್ಲ, ಕ್ಯಾಥೊಲಿಕ್‌ಮತ, ಇಸ್ಲಾಮ್‌ಮತ, ಯೆಹೂದ್ಯಮತ, ಮತ್ತು ಹಿಂದೂಮತಗಳಂತಹ ಇನ್ನಿತರ ಧರ್ಮಗಳಲ್ಲಿರುವ ಚಳವಳಿಗಳಿಗೆ ಸಹ ಅನ್ವಯಿಸುತ್ತದೆ.

ನಮ್ಮ ಸಮಯಗಳಿಗೆ ಒಂದು ಪ್ರತಿಕ್ರಿಯೆ

ಮೂಲಭೂತ ವಾದವು ಏಕೆ ಹರಡುತ್ತಿದೆ? ಅದನ್ನು ಯಾರು ಅಭ್ಯಾಸಿಸುತ್ತಾರೋ ಅವರು, ಕಡಿಮೆಪಕ್ಷ ಕೊಂಚಮಟ್ಟಿಗೆ, ನಮ್ಮ ಸಮಯಗಳ ನೈತಿಕ ಹಾಗೂ ಧಾರ್ಮಿಕ ಅನಿಶ್ಚಿತತೆಯೇ ಇದಕ್ಕೆ ಕಾರಣವೆಂದು ಹೇಳುತ್ತಾರೆ. ಆರಂಭದ ವರ್ಷಗಳಲ್ಲಿ, ಅಧಿಕಾಂಶ ಸಮಾಜಗಳು, ಸಾಂಪ್ರದಾಯಿಕ ನಂಬಿಕೆಗಳ ಮೇಲಾಧಾರಿತವಾದ ನೈತಿಕ ನಿಶ್ಚಿತತೆಯ ವಾತಾವರಣದಲ್ಲಿ ಜೀವಿಸಿದವು. ಈಗ ಆ ನಂಬಿಕೆಗಳು ಪಂಥಾಹ್ವಾನಕ್ಕೊಳಗಾಗಿವೆ ಅಥವಾ ತಿರಸ್ಕರಿಸಲ್ಪಟ್ಟಿವೆ. ಅನೇಕ ಪ್ರಜ್ಞಾಶಾಲಿಗಳು, ದೇವರೇ ಇಲ್ಲ, ಇದರಿಂದಾಗಿ ಅನಾದರದ ಒಂದು ವಿಶ್ವದಲ್ಲಿ ಮಾನವನು ಒಂಟಿಯಾಗಿದ್ದಾನೆ ಎಂದು ಒತ್ತಿಹೇಳುತ್ತಾರೆ. ಮಾನವಕುಲವು ಪ್ರೀತಿಪೂರ್ಣ ಸೃಷ್ಟಿಕರ್ತನೊಬ್ಬನ ಸೃಷ್ಟಿಕ್ರಿಯೆಯಲ್ಲ, ಬದಲಾಗಿ ಅದು ಆಕಸ್ಮಿಕ ವಿಕಾಸದ ಫಲಿತಾಂಶವಾಗಿದೆ ಎಂದು ಅನೇಕ ವಿಜ್ಞಾನಿಗಳು ಕಲಿಸುತ್ತಾರೆ. ಒಂದು ಸ್ವೇಚ್ಛಾಚಾರದ ಮಾನಸಿಕ ಸ್ವಭಾವವು ಬಳಕೆಯಲ್ಲಿದೆ. ಎಲ್ಲಾ ಸಾಮಾಜಿಕ ಮಟ್ಟಗಳಲ್ಲಿ ಈ ಲೋಕವು, ನೈತಿಕ ಮೌಲ್ಯಗಳ ನಷ್ಟದಿಂದ ಪೀಡಿಸಲ್ಪಟ್ಟಿದೆ.—2 ತಿಮೊಥೆಯ 3:4, 5, 13.

ಮೂಲಭೂತ ವಾದಿಗಳು ಹಳೆಯ ನಿಶ್ಚಿತತೆಗಳಿಗಾಗಿ ಹಂಬಲಿಸುತ್ತಾರೆ. ಮತ್ತು ಅವರಲ್ಲಿ ಕೆಲವರು, ತಾವು ಯಾವ ವಿಷಯಗಳನ್ನು ಸೂಕ್ತವಾದ ನೈತಿಕ ಹಾಗೂ ತಾತ್ತ್ವಿಕ ಮೂಲತತ್ವಗಳೆಂದು ಭಾವಿಸುತ್ತಾರೋ ಅವುಗಳನ್ನು ಅನುಸರಿಸುವಂತೆ, ತಮ್ಮ ಪಂಗಡಗಳನ್ನು ಹಾಗೂ ಜನಾಂಗಗಳನ್ನು ಅನುಮೋದಿಸಲು ಹೆಣಗಾಡುತ್ತಾರೆ. ತಾತ್ತ್ವಿಕ ನಂಬಿಕೆಗಳ “ಸರಿಯಾದ” ನೈತಿಕ ನಿಯಮಾವಳಿ ಹಾಗೂ ವ್ಯವಸ್ಥೆಗನುಸಾರ ಜೀವಿಸುವಂತೆ ಇತರರನ್ನು ಒತ್ತಾಯಿಸಲಿಕ್ಕಾಗಿ ಅವರು, ತಮ್ಮ ಶಕ್ತಿಯಿಂದಾದುದೆಲ್ಲವನ್ನೂ ಮಾಡುತ್ತಾರೆ. ಒಬ್ಬ ಮೂಲಭೂತ ವಾದಿಯು, ತಾನೇ ಸರಿಯೆಂದೂ ಇತರರು ತಪ್ಪೆಂದೂ ಬಲವಾಗಿ ಮನಗಾಣಿಸಲ್ಪಟ್ಟಿರುತ್ತಾನೆ. ಮೂಲಭೂತ ವಾದ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ, ಪ್ರೊಫೆಸರ್‌ ಜೇಮ್ಸ್‌ ಬಾರ್‌ ಹೇಳುವುದೇನಂದರೆ, ಮೂಲಭೂತ ವಾದವು “ಅನೇಕವೇಳೆ ಶತ್ರುತ್ವದ ಹಾಗೂ ನಿಂದಾತ್ಮಕ ಶಬ್ದವಾಗಿ ಪರಿಗಣಿಸಲ್ಪಟ್ಟಿದ್ದು, ಸಂಕುಚಿತ ಸ್ವಭಾವ, ಅಂಧಾಭಿಮಾನ, ಪ್ರಗತಿವಿರೋಧಿತನ ಹಾಗೂ ಪಂಥಾಭಿಮಾನವನ್ನು ಸೂಚಿಸುತ್ತದೆ.”

ಸಂಕುಚಿತ ಸ್ವಭಾವದವರು, ಅಂಧಾಭಿಮಾನಿಗಳು, ಅಥವಾ ಪಂಥಾಭಿಮಾನಿಗಳು ಎಂದು ಕರೆಸಿಕೊಳ್ಳುವುದನ್ನು ಯಾರೊಬ್ಬರೂ ಇಷ್ಟಪಡುವುದಿಲ್ಲವಾದುದರಿಂದ, ಯಾರು ಮೂಲಭೂತ ವಾದಿಗಳಾಗಿದ್ದಾರೆ ಮತ್ತು ಯಾರು ಮೂಲಭೂತವಾದಿಗಳಾಗಿಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುವುದಿಲ್ಲ. ಆದರೂ, ಧಾರ್ಮಿಕ ಮೂಲಭೂತ ವಾದವನ್ನು ವಿಶೇಷವಾದದ್ದಾಗಿ ಮಾಡುವ ಕೆಲವು ಅಂಶಗಳು ಇವೆ.

ಒಬ್ಬ ಮೂಲಭೂತ ವಾದಿಯನ್ನು ಗುರುತಿಸುವುದು

ಸಾಮಾನ್ಯವಾಗಿ ಧಾರ್ಮಿಕ ಮೂಲಭೂತ ವಾದವು, ಯಾವುದನ್ನು ಒಂದು ಸಂಸ್ಕೃತಿಯ ಮೂಲ ಸಂಪ್ರದಾಯಗಳು ಅಥವಾ ಧಾರ್ಮಿಕ ನಂಬಿಕೆಗಳೆಂದು ನಂಬಲಾಗುತ್ತದೋ ಅದನ್ನು ಜೋಪಾನಮಾಡುವ, ಮತ್ತು ಯಾವುದನ್ನು ಲೋಕದ ಐಹಿಕ ಮನೋಭಾವವೆಂದು ಗ್ರಹಿಸಲಾಗುತ್ತದೋ ಅದನ್ನು ವಿರೋಧಿಸುವ ಪ್ರಯತ್ನವಾಗಿದೆ. ಇದು ಮೂಲಭೂತ ವಾದಿಗಳು, ಆಧುನಿಕವಾಗಿರುವುದೆಲ್ಲವನ್ನೂ ವಿರೋಧಿಸುತ್ತಾರೆಂದು ಹೇಳಲಿಕ್ಕಾಗಿ ಅಲ್ಲ. ತಮ್ಮ ದೃಷ್ಟಿಕೋನವನ್ನು ಪ್ರವರ್ಧಿಸಲಿಕ್ಕಾಗಿ ಕೆಲವರು, ಆಧುನಿಕ ಸಂವಾದವನ್ನು ಹೆಚ್ಚು ಪರಿಣಾಮಕಾರಿಯಾಗಿ ಉಪಯೋಗಿಸುತ್ತಾರೆ. ಆದರೆ ಅವರು ಸಮಾಜದ ಜಾತ್ಯತೀಕರಣದ ವಿರುದ್ಧ ಹೋರಾಡುತ್ತಾರೆ.b

ಕೆಲವು ಮೂಲಭೂತ ವಾದಿಗಳು, ತಮಗಾಗಿ ಸಿದ್ಧಾಂತಗಳ ಸಾಂಪ್ರದಾಯಿಕ ರಚನೆಯನ್ನು ಅಥವಾ ಜೀವಿತ ಮಾರ್ಗವನ್ನು ಕಾಪಾಡಿಕೊಳ್ಳುವ ನಿರ್ಧಾರವನ್ನು ಮಾಡಿರುವುದು ಮಾತ್ರವಲ್ಲದೆ, ಅವರು ಮೂಲಭೂತ ವಾದಿಗಳ ನಂಬಿಕೆಗಳನ್ನು ಅನುಸರಿಸಲಿಕ್ಕಾಗಿ, ಸಾಮಾಜಿಕ ರೀತಿನೀತಿಗಳನ್ನು ಬದಲಾಯಿಸಲು, ಇವುಗಳನ್ನು ಇತರರ ಮೇಲೆ ಹೊರಿಸುವ ನಿರ್ಧಾರವನ್ನೂ ಮಾಡಿದ್ದಾರೆ. ಆದುದರಿಂದ, ಕ್ಯಾಥೊಲಿಕ್‌ ಮೂಲಭೂತ ವಾದಿಯು, ಗರ್ಭಪಾತವನ್ನು ನಿರಾಕರಿಸುವುದಕ್ಕೆ ಮಾತ್ರವೇ ತನ್ನನ್ನು ಸೀಮಿತಗೊಳಿಸಿಕೊಳ್ಳುವುದಿಲ್ಲ. ಗರ್ಭಪಾತವನ್ನು ಬಹಿಷ್ಕೃತಗೊಳಿಸುವ ನಿಯಮಗಳನ್ನು ಪ್ರವರ್ಧಿಸುವಂತೆ, ಅವನು ತನ್ನ ದೇಶದ ಶಾಸನಕಾರರನ್ನು ಒತ್ತಾಯಿಸುವುದು ಸಂಭವನೀಯ. ಲಾ ರೇಪೂಬ್ಲೀಕಾ ಎಂಬ ವಾರ್ತಾಪತ್ರಿಕೆಗನುಸಾರ, ಪೋಲೆಂಡ್‌ನಲ್ಲಿ, ಗರ್ಭಪಾತ ವಿರೋಧಿ ನಿಯಮವನ್ನು ಅಂಗೀಕಾರಾರ್ಹವಾಗಿ ಮಾಡಲಿಕ್ಕಾಗಿ, ಕ್ಯಾಥೊಲಿಕ್‌ ಚರ್ಚು “ಒಂದು ‘ಹೋರಾಟ’ವನ್ನು ನಡೆಸಿತು; ಅದರಲ್ಲಿ ಅದು ತನ್ನೆಲ್ಲಾ ಅಧಿಕಾರ ಹಾಗೂ ಪ್ರಭಾವವನ್ನು ವಿನಿಯೋಗಿಸಿತು.” ಹಾಗೆ ಮಾಡುವ ಮೂಲಕ, ಚರ್ಚಿನ ಅಧಿಕಾರಿಗಳು, ಮೂಲಭೂತ ವಾದಿಗಳಂತೆಯೇ ವರ್ತಿಸುತ್ತಿದ್ದರು. ಅಮೆರಿಕದಲ್ಲಿನ ಪ್ರಾಟೆಸ್ಟಂಟ್‌ ಕ್ರಿಸ್ಟಿಯನ್‌ ಕೋಅಲಿಶನ್‌ (ಕ್ರೈಸ್ತ ಒಕ್ಕೂಟ), ತದ್ರೀತಿಯ “ಹೋರಾಟಗಳ”ನ್ನು ನಡೆಸುತ್ತದೆ.

ಎಲ್ಲಕ್ಕಿಂತಲೂ ಹೆಚ್ಚಾಗಿ ಮೂಲಭೂತ ವಾದಿಗಳು, ಅವರ ಆಳವಾಗಿ ಬೇರೂರಿರುವ ಧಾರ್ಮಿಕ ನಿಶ್ಚಿತಾಭಿಪ್ರಾಯಗಳಿಂದ ಭಿನ್ನರಾಗಿ ಗುರುತಿಸಲ್ಪಡುತ್ತಾರೆ. ಹೀಗೆ, ಒಬ್ಬ ಪ್ರಾಟೆಸ್ಟಂಟ್‌ ಮೂಲಭೂತ ವಾದಿಯು, ಬೈಬಲಿನ ಅಕ್ಷರಾರ್ಥ ಅರ್ಥವಿವರಣೆಯ ದೃಢನಂಬಿಕೆಯುಳ್ಳ ಪ್ರತಿಪಾದಕನಾಗಿರುವನು. ಇದರಲ್ಲಿ ಭೂಮಿಯು ಅಕ್ಷರಶಃ ಆರು ದಿನಗಳಲ್ಲಿ ಸೃಷ್ಟಿಸಲ್ಪಟ್ಟಿತೆಂಬ ನಂಬಿಕೆಯೂ ಒಳಗೂಡಿರುವುದು ಸಂಭವನೀಯ. ಕ್ಯಾಥೊಲಿಕ್‌ ಮೂಲಭೂತ ವಾದಿಯೊಬ್ಬನಿಗೆ, ಪೋಪ್‌ನ ತಪ್ಪಿಗವಕಾಶವಿಲ್ಲದ ಗುಣದ ಕುರಿತಾಗಿ ಸಂಶಯಗಳೇ ಇರುವುದಿಲ್ಲ.

ಹಾಗಾದರೆ, “ಮೂಲಭೂತ ವಾದ” ಎಂಬ ಶಬ್ದವು, ಅಸಮಂಜಸವಾದ ಧರ್ಮಾಂಧತೆಯ ಪ್ರತೀಕವನ್ನು ಏಕೆ ಉದ್ರೇಕಿಸುತ್ತದೆ ಹಾಗೂ ಮೂಲಭೂತ ವಾದಿಗಳಲ್ಲದಿರುವವರು ಮೂಲಭೂತ ವಾದವು ಹರಡುತ್ತಿರುವುದನ್ನು ನೋಡುವಾಗ, ಏಕೆ ಕಳವಳಗೊಂಡಿದ್ದಾರೆ ಎಂಬುದು ಗ್ರಹಿಸಸಾಧ್ಯವಿರುವ ವಿಷಯವಾಗಿದೆ. ವ್ಯಕ್ತಿಗತವಾಗಿ, ನಾವು ಮೂಲಭೂತ ವಾದಿಗಳೊಂದಿಗೆ ಅಸಮ್ಮತಿ ಸೂಚಿಸಬಹುದು. ಹಾಗೂ ಅವರ ರಾಜಕೀಯ ಯೋಜನೆಗಳಿಂದ ಮತ್ತು ಕೆಲವೊಮ್ಮೆ ಅವರ ಹಿಂಸಾತ್ಮಕ ಕೃತ್ಯಗಳಿಂದ ನಾವು ಭಯಕ್ಕೀಡಾಗಬಹುದು. ನಿಜವಾಗಿಯೂ, ಒಂದು ಧರ್ಮದ ಮೂಲಭೂತ ವಾದಿಗಳು, ಇನ್ನೊಂದು ಧರ್ಮದ ಮೂಲಭೂತ ವಾದಿಗಳ ಕೃತ್ಯಗಳನ್ನು ಹೇಯವಾಗಿ ಪರಿಗಣಿಸಬಹುದು! ಆದರೂ, ಆಲೋಚನಾ ಮನೋಭಾವವುಳ್ಳ ಅನೇಕ ಜನರು, ಮೂಲಭೂತ ವಾದದ ಹರಡುವಿಕೆಯನ್ನು ಉದ್ರೇಕಿಸುವ ವಿಷಯಗಳ—ಬೆಳೆಯುತ್ತಿರುವ ನೈತಿಕ ಸಡಿಲತೆ, ನಂಬಿಕೆಯ ನಷ್ಟ, ಹಾಗೂ ಆಧುನಿಕ ಸಮಾಜದಲ್ಲಿನ ಆತ್ಮಿಕತೆಯ ತಿರಸ್ಕಾರ—ಕುರಿತಾಗಿ ಚಿಂತಿತರಾಗಿದ್ದಾರೆ.

ಈ ಪ್ರವೃತ್ತಿಗಳಿಗೆ ಮೂಲಭೂತ ವಾದವು ತಾನೇ ಏಕಮಾತ್ರ ಪ್ರತ್ಯುತ್ತರವಾಗಿದೆಯೊ? ಹಾಗಿಲ್ಲದಿದ್ದಲ್ಲಿ, ಅದಕ್ಕೆ ಬದಲಿಯೇನು?

[ಅಧ್ಯಯನ ಪ್ರಶ್ನೆಗಳು]

a ಇಸವಿ 1895ರಲ್ಲಿ ವಿಶದೀಕರಿಸಲ್ಪಟ್ಟಿರುವ, ಮೂಲಭೂತ ವಾದದ ಐದು ಅಂಶಗಳೆಂದು ಕರೆಯಲಾಗುವ ವಿಷಯಗಳು ಹೀಗಿದ್ದವು: “(1) ಶಾಸ್ತ್ರಗಳ ಸಂಪೂರ್ಣ ದೈವಪ್ರೇರಣೆ ಹಾಗೂ ತಪ್ಪಿಗವಕಾಶವಿಲ್ಲದಿರುವಿಕೆ; (2) ಯೇಸು ಕ್ರಿಸ್ತನ ದೈವಸ್ವಭಾವ; (3) ಯೇಸು ಕ್ರಿಸ್ತನ ನಿಷ್ಕಳಂಕ ಜನನ; (4) ಶಿಲುಬೆಯ ಮೇಲೆ ಕ್ರಿಸ್ತನ ಪ್ರತಿನಿಧ್ಯಾತ್ಮಕ ಪ್ರಾಯಶ್ಚಿತ್ತ; (5) ಕ್ರಿಸ್ತನ ದೈಹಿಕ ಪುನರುತ್ಥಾನ ಮತ್ತು ವೈಯಕ್ತಿಕ ಹಾಗೂ ಶಾರೀರಿಕ ಎರಡನೆಯ ಬರೋಣ.”—ಸ್ಟೂಡೀ ಡೀ ಟೇಓಲೋಸೀಆ (ದೇವತಾಶಾಸ್ತ್ರದ ಅಧ್ಯಯನಗಳು).

b “ಜಾತ್ಯತೀಕರಣ”ವು, ಆತ್ಮಿಕ ಅಥವಾ ಪವಿತ್ರವಾಗಿರುವುದಕ್ಕೆ ವಿರೋಧವಾಗಿ, ಐಹಿಕತೆಯನ್ನು ಬಲಾತ್ಕರಿಸುವುದನ್ನು ಅರ್ಥೈಸುತ್ತದೆ. ಐಹಿಕತೆಯು ಧರ್ಮದೊಂದಿಗಾಗಲಿ ಧಾರ್ಮಿಕ ನಂಬಿಕೆಗಳೊಂದಿಗಾಗಲಿ ಸಂಬಂಧಿಸಿದ ವಿಷಯವಾಗಿರುವುದಿಲ್ಲ.

[ಪುಟ 5 ರಲ್ಲಿರುವ ಸಂಕ್ಷಿಪ್ತ ವಿವರಣೆ]

1926ರಲ್ಲಿ, ಒಂದು ಪ್ರಾಟೆಸ್ಟಂಟ್‌ ಪತ್ರಿಕೆಯು ಮೂಲಭೂತ ವಾದವನ್ನು, “ಅರ್ಥಹೀನವಾದದ್ದೂ ಕೃತಕವಾದದ್ದೂ” ಹಾಗೂ “ಸೃಜನಾತ್ಮಕ ಸಾಧನೆ ಅಥವಾ ದೀರ್ಘ ಕಾಲಾವಧಿಯ ವರೆಗೆ ಉಳಿಯುವ ಗುಣಗಳಲ್ಲಿ ಪೂರ್ತಿಯಾಗಿ ಕೊರತೆಯುಳ್ಳ”ದ್ದೆಂದು ವರ್ಣಿಸಿತು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ