“ಚಿನ್ನಕ್ಕೆ ಬದಲಾಗಿ ನಾನು ವಜ್ರಗಳನ್ನು ಕಂಡುಕೊಂಡೆ”
ಮೀಕಾಲೀಸ್ ಕಾಮೀನಾರಿಸ್ ಅವರು ಹೇಳಿದಂತೆ
ನಾನು ಚಿನ್ನದ ಅನ್ವೇಷಣೆಯಲ್ಲಿ ಎಲ್ಲಿಗೆ ಹೋಗಿದ್ದೆನೋ ಆ ದಕ್ಷಿಣ ಆಫ್ರಿಕದಲ್ಲಿ ಐದು ವರ್ಷಗಳನ್ನು ಕಳೆದ ಬಳಿಕ, ಹೆಚ್ಚು ಅತ್ಯಮೂಲ್ಯವಾದ ಯಾವುದೋ ಒಂದು ವಸ್ತುವಿನೊಂದಿಗೆ ನಾನು ಹಿಂದಿರುಗುತ್ತಿದ್ದೆ. ಈಗ ನಾನು ಸ್ವಾಧೀನಪಡಿಸಿಕೊಂಡಿದ್ದ ಮತ್ತು ಹಂಚಿಕೊಳ್ಳಲು ಬಯಸಿದ ಐಶ್ವರ್ಯದ ಕುರಿತಾಗಿ ನಾನು ನಿಮಗೆ ಹೇಳುತ್ತೇನೆ.
ನಾನು 1904ರಲ್ಲಿ, ಐಓನೀಯನ್ ಸಮುದ್ರದಲ್ಲಿರುವ ಸೆಫಲೋನ್ಯವೆಂಬ ಗ್ರೀಕ್ ದ್ವೀಪದಲ್ಲಿ ಜನಿಸಿದೆ. ತದನಂತರ ಸ್ವಲ್ಪದರಲ್ಲಿಯೇ ನನ್ನ ಹೆತ್ತವರಿಬ್ಬರೂ ಮೃತಪಟ್ಟರು. ಆದುದರಿಂದ ನಾನು ಒಬ್ಬ ಅನಾಥನೋಪಾದಿ ಬೆಳೆದು ದೊಡ್ಡವನಾದೆ. ನಾನು ಸಹಾಯಕ್ಕಾಗಿ ಹಂಬಲಿಸಿದೆ, ಮತ್ತು ನಾನು ಅನೇಕವೇಳೆ ದೇವರಿಗೆ ಪ್ರಾರ್ಥಿಸಿದೆ. ನಾನು ಗ್ರೀಕ್ ಆರ್ತೊಡಾಕ್ಸ್ ಚರ್ಚಿಗೆ ಕ್ರಮವಾಗಿ ಹಾಜರಾದೆನಾದರೂ, ನಾನು ಬೈಬಲಿನ ವಿಷಯದಲ್ಲಿ ಪೂರ್ಣ ಅಜ್ಞಾನಿಯಾಗಿದ್ದೆ. ನಾನು ಯಾವುದೇ ಸಂತೈಸುವಿಕೆಯನ್ನು ಕಂಡುಕೊಳ್ಳಲಿಲ್ಲ.
ಇಸವಿ 1929ರಲ್ಲಿ, ನಾನು ವಲಸೆಹೋಗಿ, ಹೆಚ್ಚು ಉತ್ತಮವಾದ ಒಂದು ಜೀವನವನ್ನು ಅನ್ವೇಷಿಸಬೇಕೆಂದು ನಿರ್ಧರಿಸಿದೆ. ನನ್ನ ಬಂಜರು ದ್ವೀಪವನ್ನು ಬಿಟ್ಟು, ನಾನು ಇಂಗ್ಲೆಂಡ್ ಮಾರ್ಗವಾಗಿ ದಕ್ಷಿಣ ಆಫ್ರಿಕಕ್ಕೆ ಹೋಗಲಿಕ್ಕಾಗಿ ಸಮುದ್ರಯಾನ ಮಾಡಿದೆ. ಸಮುದ್ರದಲ್ಲಿ 17 ದಿವಸಗಳನ್ನು ಕಳೆದ ಬಳಿಕ, ನಾನು ದಕ್ಷಿಣ ಆಫ್ರಿಕದ ಕೇಪ್ ಟೌನಿಗೆ ತಲಪಿದೆ. ಅಲ್ಲಿ ತತ್ಕ್ಷಣವೇ ಒಬ್ಬ ಸ್ವದೇಶೀಯನಿಂದ ಕೆಲಸಕ್ಕೆ ಹಿಡಿಯಲ್ಪಟ್ಟೆ. ಹಾಗಿದ್ದರೂ, ಪ್ರಾಪಂಚಿಕ ಐಶ್ವರ್ಯದಲ್ಲಿ ನಾನು ಸಂತೈಸುವಿಕೆಯನ್ನು ಕಂಡುಕೊಳ್ಳಲಿಲ್ಲ.
ಹೆಚ್ಚು ಅಮೂಲ್ಯವಾದ ಒಂದು ವಿಷಯ
ನಾನು ಸುಮಾರು ಎರಡು ವರ್ಷಗಳಿಂದ ದಕ್ಷಿಣ ಆಫ್ರಿಕದಲ್ಲಿದ್ದಾಗ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು ನನ್ನ ಕೆಲಸದ ಸ್ಥಳಕ್ಕೆ ಭೇಟಿ ನೀಡಿ, ಗ್ರೀಕ್ ಭಾಷೆಯಲ್ಲಿ ಬೈಬಲ್ ಸಾಹಿತ್ಯವನ್ನು ನನಗೆ ನೀಡಿದರು. ಮೃತರು ಎಲ್ಲಿದ್ದಾರೆ? ಮತ್ತು ದಬ್ಬಾಳಿಕೆ, ಅದು ಯಾವಾಗ ಕೊನೆಗೊಳ್ಳುವುದು? ಎಂಬ ಪುಸ್ತಿಕೆಗಳು ಅದರಲ್ಲಿ ಸೇರಿದ್ದವು. ನಾನು ಅವುಗಳನ್ನು ಅತ್ಯಾತುರದಿಂದ ಓದಿದ್ದನ್ನು ಇನ್ನೂ ಜ್ಞಾಪಿಸಿಕೊಳ್ಳುತ್ತೇನೆ—ಎಲ್ಲಾ ಉದ್ಧೃತ ಶಾಸ್ತ್ರವಚನಗಳನ್ನು ಬಾಯಿಪಾಠಮಾಡಿದೆ ಸಹ. ಒಂದು ದಿನ ನಾನು ಸಹೋದ್ಯೋಗಿಯೊಬ್ಬನಿಗೆ ಹೀಗೆ ಹೇಳಿದೆ: “ಈ ಎಲ್ಲಾ ವರ್ಷಗಳಲ್ಲಿ ನಾನು ಯಾವುದನ್ನು ಹುಡುಕುತ್ತಿದ್ದೆನೋ ಅದನ್ನು ನಾನು ಕಂಡುಕೊಂಡಿದ್ದೇನೆ. ನಾನು ಆಫ್ರಿಕಕ್ಕೆ ಬಂದದ್ದು ಚಿನ್ನಕ್ಕಾಗಿ, ಆದರೆ ಚಿನ್ನಕ್ಕೆ ಬದಲಾಗಿ ನಾನು ವಜ್ರಗಳನ್ನು ಕಂಡುಕೊಂಡೆ.”
ದೇವರಿಗೆ ಯೆಹೋವ ಎಂಬ ವೈಯಕ್ತಿಕ ಹೆಸರಿದೆ, ಆತನ ರಾಜ್ಯವು ಈಗಾಗಲೇ ಸ್ವರ್ಗದಲ್ಲಿ ಸ್ಥಾಪಿಸಲ್ಪಟ್ಟಿದೆ, ಮತ್ತು ನಾವು ಈ ವಿಷಯಗಳ ವ್ಯವಸ್ಥೆಯ ಕಡೆಯ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಎಂಬ ವಿಷಯಗಳನ್ನು ನಾನು ಮಹದಾನಂದದಿಂದ ಕಲಿತೆ. (ಕೀರ್ತನೆ 83:18; ದಾನಿಯೇಲ 2:44; ಮತ್ತಾಯ 6:9, 10; 24:3-12; 2 ತಿಮೊಥೆಯ 3:1-5; ಪ್ರಕಟನೆ 12:7-12) ಯೆಹೋವನ ರಾಜ್ಯವು, ಸರ್ವ ಮಾನವ ಕುಲಗಳಿಗೆ ಅಂತ್ಯರಹಿತ ಆಶೀರ್ವಾದಗಳನ್ನು ತರುವುದೆಂಬುದನ್ನು ಕಲಿಯುವುದು ಎಷ್ಟು ರೋಮಾಂಚಕವಾಗಿತ್ತು! ನನ್ನನ್ನು ಪ್ರಭಾವಿಸಿದ ಇನ್ನೊಂದು ವಿಷಯವು ಯಾವುದೆಂದರೆ, ಈ ಅಮೂಲ್ಯ ಸತ್ಯಗಳು ಲೋಕವ್ಯಾಪಕವಾಗಿ ಸಾರಲ್ಪಡುತ್ತಿದ್ದದ್ದೇ.—ಯೆಶಾಯ 9:6, 7; 11:6-9; ಮತ್ತಾಯ 24:14; ಪ್ರಕಟನೆ 21:3, 4.
ಬೇಗನೆ ನಾನು ಕೇಪ್ ಟೌನಿನಲ್ಲಿದ್ದ ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿನ ವಿಳಾಸವನ್ನು ಕಂಡುಹಿಡಿದು, ಹೆಚ್ಚಿನ ಬೈಬಲ್ ಸಾಹಿತ್ಯವನ್ನು ಪಡೆದುಕೊಂಡೆ. ಬೈಬಲಿನ ಒಂದು ವೈಯಕ್ತಿಕ ಪ್ರತಿಯನ್ನು ಪಡೆದುಕೊಳ್ಳಲು ನಾನು ವಿಶೇಷವಾಗಿ ಹರ್ಷಿತನಾಗಿದ್ದೆ. ನಾನು ಓದಿದ ವಿಷಯಗಳು, ಸಾಕ್ಷಿಯನ್ನು ನೀಡುವಂತೆ ನನ್ನನ್ನು ಪ್ರಚೋದಿಸಿದವು. ಲಿಕ್ಸೂರೀಆನ್ ಎಂಬ ನನ್ನ ಹುಟ್ಟೂರಿನಲ್ಲಿದ್ದ ಸಂಬಂಧಿಕರಿಗೆ, ಸ್ನೇಹಿತರಿಗೆ, ಹಾಗೂ ಪರಿಚಯಸ್ಥರಿಗೆ ಬೈಬಲ್ ಪ್ರಕಾಶನಗಳನ್ನು ಕಳುಹಿಸುವ ಮೂಲಕ ನಾನು ಸಾಕ್ಷಿ ನೀಡುವುದನ್ನು ಆರಂಭಿಸಿದೆ. ನನ್ನ ಅಭ್ಯಾಸಗಳಿಂದ, ಯೆಹೋವನ ಒಪ್ಪಿಗೆಯನ್ನು ಪಡೆದುಕೊಳ್ಳಲಿಕ್ಕಾಗಿ ಒಬ್ಬನು ತನ್ನ ಜೀವಿತವನ್ನು ಆತನಿಗೆ ಸಮರ್ಪಿಸಿಕೊಳ್ಳಬೇಕು ಎಂಬುದನ್ನು ನಾನು ಕ್ರಮೇಣವಾಗಿ ಅರ್ಥಮಾಡಿಕೊಂಡೆ. ಆದುದರಿಂದ ನಾನು ಆ ಕೂಡಲೆ ಪ್ರಾರ್ಥನೆಯಲ್ಲಿ ನನ್ನನ್ನು ಸಮರ್ಪಿಸಿಕೊಂಡೆ.
ಒಂದು ಸಂದರ್ಭದಲ್ಲಿ, ನಾನು ಯೆಹೋವನ ಸಾಕ್ಷಿಗಳ ಕೂಟವೊಂದಕ್ಕೆ ಹಾಜರಾದೆ. ಆದರೆ ನನಗೆ ಇಂಗ್ಲಿಷ್ ಬರುತ್ತಿಲ್ಲವಾದುದರಿಂದ, ಒಂದು ಶಬ್ದವೂ ನನಗೆ ಅರ್ಥವಾಗಲಿಲ್ಲ. ಪೋರ್ಟ್ ಎಲಿಸಬೆತ್ನಲ್ಲಿ ಅನೇಕ ಗ್ರೀಕರು ವಾಸಿಸುತ್ತಿದ್ದರೆಂಬುದು ನನಗೆ ತಿಳಿದುಬಂದಾಗ, ನಾನು ಅಲ್ಲಿಗೆ ಸ್ಥಳಾಂತರಿಸಿದೆ, ಆದರೆ ಗ್ರೀಕ್ ಭಾಷೆಯನ್ನು ಮಾತಾಡುವ ಸಾಕ್ಷಿಗಳನ್ನು ಕಂಡುಕೊಳ್ಳುವುದರಲ್ಲಿ ನಾನು ವಿಫಲನಾದೆ. ಆದುದರಿಂದ ಒಬ್ಬ ಪೂರ್ಣ ಸಮಯದ ಸೌವಾರ್ತಿಕನಾಗಲಿಕ್ಕಾಗಿ ಗ್ರೀಸಿಗೆ ಹಿಂದಿರುಗಲು ನಿರ್ಧರಿಸಿದೆ. ‘ಏನೇ ನಷ್ಟವಾಗಲಿ, ನಾನು ಗ್ರೀಸಿಗೆ ಹಿಂದೆರಳುವೆ’ ಎಂದು ನನ್ನಷ್ಟಕ್ಕೇ ಹೇಳಿಕೊಂಡದ್ದನ್ನು ನಾನು ಜ್ಞಾಪಿಸಿಕೊಳ್ಳುತ್ತೇನೆ.
ಗ್ರೀಸಿನಲ್ಲಿ ಪೂರ್ಣ ಸಮಯದ ಶುಶ್ರೂಷೆ
ಇಸವಿ 1934ರ ವಸಂತಕಾಲದಲ್ಲಿ ನಾನು, ಇಟಲಿಯ ಡ್ವೀಲೀಓ ಎಂಬ ಪ್ರವಾಸಿ ಹಡಗನ್ನು ಹತ್ತಿದೆ. ನಾನು ಫ್ರಾನ್ಸಿನ ಮಾರ್ಸೇಗೆ ತಲಪಿದೆ. ಮತ್ತು ಅಲ್ಲಿ ಹತ್ತು ದಿವಸಗಳ ವರೆಗೆ ಉಳಿದುಕೊಂಡ ಬಳಿಕ, ಪಾಟ್ರೀಸ್ ಎಂಬ ಪ್ರಯಾಣಿಕ ಹಡಗಿನಲ್ಲಿ ಗ್ರೀಸ್ಗೆ ಪ್ರಯಾಣ ಬೆಳೆಸಿದೆ. ನಾವು ಸಮುದ್ರದಲ್ಲಿದ್ದಾಗ, ಹಡಗಿಗೆ ಯಂತ್ರಸಂಬಂಧವಾದ ಸಮಸ್ಯೆಗಳಿದ್ದವು, ಮತ್ತು ರಾತ್ರಿ ಸಮಯದಲ್ಲಿ, ಪ್ರಾಣರಕ್ಷಕ ದೋಣಿಗಳನ್ನು ಸಮುದ್ರದೊಳಗೆ ಇಳಿಸುವಂತೆ ಆಜ್ಞೆಯು ಕೊಡಲ್ಪಟ್ಟಿತು. ಆಗ ನಾನು, ಏನೇ ನಷ್ಟವಾದರೂ ಗ್ರೀಸ್ಗೆ ಹಿಂದೆರಳುವುದರ ಕುರಿತಾದ ನನ್ನ ಆಲೋಚನೆಗಳನ್ನು ಜ್ಞಾಪಿಸಿಕೊಂಡೆ. ಆದರೂ, ಕಟ್ಟಕಡೆಗೆ ಇಟಲಿಯ ಜಗ್ಗುದೋಣಿ (ಟಗ್ಬೋಟ್)ಯೊಂದು ಬಂದು, ನಮ್ಮನ್ನು ಇಟಲಿಯ ನೇಪ್ಲ್ಸ್ಗೆ ನೀರಿನಲ್ಲಿ ಎಳೆದೊಯ್ದಿತು. ತದನಂತರ ಕಟ್ಟಕಡೆಗೆ ನಾವು ಗ್ರೀಸಿನ ಪೀರೆವಿಫ್ಸ್ (ಪೈರೀಅಸ್)ಗೆ ಬಂದುಮುಟ್ಟಿದೆವು.
ಅಲ್ಲಿಂದ ನಾನು ಆ್ಯಥೆನ್ಸ್ಗೆ ಹೋದೆ. ಅಲ್ಲಿ ನಾನು ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿಗೆ ಭೇಟಿ ನೀಡಿದೆ. ಬ್ರಾಂಚ್ ಮೇಲ್ವಿಚಾರಕರಾದ ಆತಾನಾಸ್ಸ್ಯಾಸ್ ಕಾರಾನಾಸ್ಯಾಸ್ರೊಂದಿಗಿನ ಒಂದು ಸಂಭಾಷಣೆಯಲ್ಲಿ, ಪೂರ್ಣ ಸಮಯ ಸಾರುವ ಒಂದು ನೇಮಕವು ಕೊಡಲ್ಪಡುವಂತೆ ನಾನು ಕೇಳಿಕೊಂಡೆ. ಮರುದಿನವೇ ನಾನು ವಿಸ್ತಾರವಾದ ಗ್ರೀಸ್ ಭೂಭಾಗದ ದಕ್ಷಿಣ ಭಾಗದಲ್ಲಿರುವ ಪೆಲಪನೀಸಸ್ಗೆ ಪ್ರಯಾಣಿಸಿದೆ. ಈ ಇಡೀ ಜಿಲ್ಲೆಯು, ನನ್ನ ವೈಯಕ್ತಿಕ ಟೆರಿಟೊರಿಯಾಗಿ ನನಗೆ ನೇಮಿಸಲ್ಪಟ್ಟಿತ್ತು!
ಅಪಾರ ಅತ್ಯುತ್ಸಾಹದಿಂದ ನಾನು, ಪಟ್ಟಣದಿಂದ ಪಟ್ಟಣಕ್ಕೆ, ಹಳ್ಳಿಯಿಂದ ಹಳ್ಳಿಗೆ, ಹೊಲಮನೆಯಿಂದ ಹೊಲಮನೆಗೆ, ಹಾಗೂ ದೂರದೂರದಲ್ಲಿದ್ದ ಮನೆಗಳಿಗೆ ಸಾರುವ ಕೆಲಸವನ್ನು ಆರಂಭಿಸಿದೆ. ಬೇಗನೆ ಮೈಕಲ್ ಟ್ರೀಆಂಡಾಫೀಲಾಪೂಲಾಸ್ ನನ್ನನ್ನು ಜೊತೆಗೂಡಿದರು. 1935ರ ಬೇಸಗೆಕಾಲದಲ್ಲಿ ಅವರು ನನಗೆ ದೀಕ್ಷಾಸ್ನಾನ ಮಾಡಿಸಿದರು—ನಾನು ಪೂರ್ಣ ಸಮಯದ ಶುಶ್ರೂಷೆಯ ಕೆಲಸವನ್ನು ಆರಂಭಿಸಿದ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದ ನಂತರ! ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಲಭ್ಯವಿರಲಿಲ್ಲ, ಆದುದರಿಂದ ನಾವು ಎಲ್ಲಾ ಸ್ಥಳಗಳಿಗೆ ನಡೆದುಕೊಂಡೇ ಹೋದೆವು. ನಮ್ಮ ಅತ್ಯಂತ ದೊಡ್ಡ ಸಮಸ್ಯೆಯು, ವೈದಿಕರ ವಿರೋಧವಾಗಿತ್ತು. ನಮ್ಮ ಕೆಲಸವನ್ನು ನಿಲ್ಲಿಸಲಿಕ್ಕಾಗಿ ಅವರು ಏನನ್ನೂ ಮಾಡಲು ಸಿದ್ಧರಿದ್ದರು. ಫಲಿತಾಂಶವಾಗಿ, ನಾವು ಹೆಚ್ಚು ಪೂರ್ವಕಲ್ಪಿತ ಅಭಿಪ್ರಾಯವನ್ನು ಎದುರಿಸಿದೆವು. ಆದರೂ, ವಿಘ್ನಗಳ ಹೊರತಾಗಿಯೂ, ಸಾಕ್ಷಿಕಾರ್ಯವು ಮಾಡಲ್ಪಟ್ಟಿತು, ಮತ್ತು ಯೆಹೋವನ ಹೆಸರು ವ್ಯಾಪಕವಾಗಿ ಪ್ರಸಿದ್ಧಪಡಿಸಲ್ಪಟ್ಟಿತು.
ವಿರೋಧವನ್ನು ಸಹಿಸುವುದು
ಒಂದು ಬೆಳಗ್ಗೆ, ಆರ್ಕೇಡಿಯದ ಪರ್ವತಮಯ ಜಿಲ್ಲೆಯಲ್ಲಿ ಸಾರುತ್ತಿದ್ದಾಗ, ನಾನು ಮಾಗೂಲ್ಯಾನಾ ಎಂಬ ಹಳ್ಳಿಗೆ ಬಂದುತಲಪಿದೆ. ಒಂದು ತಾಸು ಸಾಕ್ಷಿಕಾರ್ಯವನ್ನು ಮಾಡಿದ ಬಳಿಕ, ಚರ್ಚಿನ ಗಂಟೆಗಳು ಬಾರಿಸಲ್ಪಟ್ಟದ್ದನ್ನು ನಾನು ಕೇಳಿಸಿಕೊಂಡೆ. ಮತ್ತು ಅವು ನನಗಾಗಿ ಘಂಟಾನಾದಮಾಡುತ್ತಿದ್ದವು ಎಂಬುದನ್ನು ಆ ಕೂಡಲೆ ಗ್ರಹಿಸಿದೆ! ಒಬ್ಬ ಗ್ರೀಕ್ ಆರ್ತೊಡಾಕ್ಸ್ ಮುಖ್ಯಾಧಿಕಾರಿ (ಒಬ್ಬ ಬಿಷಪನಿಗೆ ಕೆಳದರ್ಜೆಯ ಸ್ಥಾನದಲ್ಲಿರುವ ಒಬ್ಬ ಚರ್ಚ್ ಅಧಿಕಾರಿ)ಯ ನಾಯಕತ್ವದ ಕೆಳಗೆ ಒಂದು ಗುಂಪು ಒಟ್ಟುಗೂಡಿತು. ತತ್ಕ್ಷಣವೇ ನಾನು ನನ್ನ ಬ್ರೀಫ್ಕೇಸನ್ನು ಮುಚ್ಚಿ, ಮೌನವಾಗಿ ಯೆಹೋವನಿಗೆ ಪ್ರಾರ್ಥಿಸಿದೆ. ತನ್ನ ಹಿಂದೆ ಹಿಂಬಾಲಿಸುತ್ತಿರುವ ಮಕ್ಕಳ ಒಂದು ಗುಂಪಿನೊಂದಿಗೆ, ಆ ಮುಖ್ಯಾಧಿಕಾರಿಯು ನೇರವಾಗಿ ನನ್ನ ಕಡೆಗೆ ಬಂದನು. “ಆ ವ್ಯಕ್ತಿ ಇವನೇ! ಆ ವ್ಯಕ್ತಿ ಇವನೇ!” ಎಂದು ಗಟ್ಟಿಯಾಗಿ ಕೂಗಿಹೇಳಲಾರಂಭಿಸಿದನು.
ಆ ಮಕ್ಕಳು ನನ್ನನ್ನು ಸುತ್ತುವರಿದರು, ಮತ್ತು ಆ ವೈದಿಕನು ಮುಂದೆ ಬಂದು, ತನ್ನ ಹೊರಚಾಚಿರುವ ದೊಡ್ಡ ಹೊಟ್ಟೆಯಿಂದ ನನ್ನನ್ನು ತಳ್ಳಲಾರಂಭಿಸಿದನು. ‘ಒಂದು ವೇಳೆ ತಾನು ಕಲುಷಿತಗೊಳಿಸಲ್ಪಡಬಹುದು’ ಎಂದು ನೆನಸುತ್ತಾ, ನನ್ನನ್ನು ತನ್ನ ಕೈಗಳಿಂದ ಮುಟ್ಟುವುದು ಅವನಿಗೆ ಇಷ್ಟವಿರಲಿಲ್ಲವೆಂದು ಅವನು ಹೇಳಿದನು. “ಅವನಿಗೆ ಹೊಡೆಯಿರಿ! ಅವನಿಗೆ ಹೊಡೆಯಿರಿ!” ಎಂದು ಅವನು ಚೀತ್ಕರಿಸಿದನು. ಆದರೆ ಆ ಸಮಯಕ್ಕೆ ಸರಿಯಾಗಿ ಒಬ್ಬ ಪೊಲೀಸ್ ಅಧಿಕಾರಿಯು ಬಂದು, ನಮ್ಮಿಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದನು. ಗಲಭೆಯ ಗುಂಪೊಂದನ್ನು ಪ್ರೇರೇಪಿಸಿದ್ದಕ್ಕಾಗಿ, ಆ ವೈದಿಕನನ್ನು ವಿಚಾರಣೆಗೆ ಗುರಿಪಡಿಸಲಾಯಿತು. ಮತ್ತು ಅವನ ಮೇಲೆ 300 ಡ್ರ್ಯಾಕ್ಮ (ಗ್ರೀಕ್ ನಾಣ್ಯ)ಗಳು, ಹಾಗೂ ಇದಕ್ಕೆ ಕೂಡಿಸಿ ಕೋರ್ಟಿನ ವೆಚ್ಚಗಳ ಜುಲ್ಮಾನೆ ಹಾಕಲಾಯಿತು. ನನ್ನನ್ನು ಬಿಡುಗಡೆಮಾಡಲಾಯಿತು.
ನಾವು ಒಂದು ಹೊಸ ಕ್ಷೇತ್ರಕ್ಕೆ ಆಗಮಿಸಿದಾಗ, ಹೆಚ್ಚು ದೊಡ್ಡದಾದ ಒಂದು ಪಟ್ಟಣವನ್ನು, ನಮ್ಮ ಕಾರ್ಯಚಟುವಟಿಕೆಯ ಕೇಂದ್ರ ಸ್ಥಾನವಾಗಿ ಆಯ್ದುಕೊಂಡೆವು. ಮತ್ತು ಅಲ್ಲಿಂದ ನಾವು ನಾಲ್ಕು ತಾಸಿನ ನಡಿಗೆಯ ದೂರದೊಳಗಿನ ಎಲ್ಲಾ ಟೆರಿಟೊರಿಯನ್ನು ಆವರಿಸಿದೆವು. ಅಂದರೆ ನಾವು ಬೆಳಗಿನ ಜಾವದಲ್ಲಿ ಇನ್ನೂ ಕತ್ತಲಿದ್ದಾಗಲೇ ಮನೆಯನ್ನು ಬಿಟ್ಟು, ಸಂಜೆಯ ಕತ್ತಲು ಕವಿದಾದ ಬಳಿಕ ಹಿಂದಿರುಗಿದೆವು. ಸಾಮಾನ್ಯವಾಗಿ ನಾವು ಪ್ರತಿ ದಿನ ಒಂದೆರಡು ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದೆವು. ಸುತ್ತುಮುತ್ತಲಿನ ಹಳ್ಳಿಗಳನ್ನು ಆವರಿಸಿದ ನಂತರ, ನಾವು ಕೇಂದ್ರ ಭಾಗದಲ್ಲಿ ಸಾರಿದೆವು ಮತ್ತು ನಂತರ ಇನ್ನೊಂದು ಕ್ಷೇತ್ರಕ್ಕೆ ಮುಂದುವರಿದೆವು. ಅನೇಕವೇಳೆ ನಮ್ಮನ್ನು ಬಂಧಿಸಲಾಯಿತು. ಏಕೆಂದರೆ ವೈದಿಕರು ನಮ್ಮ ವಿರುದ್ಧವಾಗಿ ಜನರನ್ನು ಉದ್ರೇಕಿಸಿದರು. ಮಧ್ಯ ಗ್ರೀಸಿನ ಪಾರ್ನ್ಯಾಸಸ್ ಪ್ರಾಂತದಲ್ಲಿ, ಅನೇಕ ತಿಂಗಳುಗಳ ವರೆಗೆ ಪೊಲೀಸರು ನನ್ನನ್ನು ಹುಡುಕುತ್ತಿದ್ದರು. ಆದರೂ, ಅವರೆಂದೂ ನನ್ನನ್ನು ಸೆರೆಹಿಡಿಯಲಿಲ್ಲ.
ಒಂದು ದಿನ ಸಹೋದರ ಟ್ರೀಆಂಡಾಫೀಲಾಪುಲಾಸ್ ಮತ್ತು ನಾನು, ಬೀಓಷೀಯ ಜಿಲ್ಲೆಯಲ್ಲಿರುವ ಮೂರೀಕೀ ಹಳ್ಳಿಯಲ್ಲಿ ಸಾರುತ್ತಿದ್ದೆವು. ನಾವು ಆ ಹಳ್ಳಿಯನ್ನು ಎರಡು ವಿಭಾಗಗಳಾಗಿ ವಿಂಗಡಿಸಿದೆವು. ಮತ್ತು ನಾನು ಅವರಿಗಿಂತ ಎಳೆಯವನಾಗಿದ್ದುದರಿಂದ, ಕಡಿದಾದ ಇಳುಕಲುಗಳಲ್ಲಿರುವ ಮನೆಗಳಲ್ಲಿ ಸಾಕ್ಷಿಕಾರ್ಯವನ್ನು ಮಾಡಲಾರಂಭಿಸಿದೆ. ಒಮ್ಮೆಲೆ ಕೆಳಭಾಗದಿಂದ ಕೂಗುವಿಕೆಗಳನ್ನು ನಾನು ಕೇಳಿಸಿಕೊಂಡೆ. ನಾನು ಕೆಳಗೆ ಓಡುತ್ತಿರುವಾಗ, ‘ಸಹೋದರ ಟ್ರೀಆಂಡಾಫೀಲಾಪುಲಾಸ್ರಿಗೆ ಹೊಡೆಯಲಾಗುತ್ತಿದೆಯೋ ಏನೋ’ ಎಂದು ನನ್ನಷ್ಟಕ್ಕೇ ಆಲೋಚಿಸಿದೆ. ಸ್ಥಳಿಕ ಕಾಫಿಗೃಹದಲ್ಲಿ ಗ್ರಾಮಸ್ಥರು ಒಟ್ಟುಗೂಡಿದ್ದು, ಪಾದ್ರಿಯೊಬ್ಬನು ಕೆರಳಿದ ಗೂಳಿಯಂತೆ ಅತ್ತಿಂದಿತ್ತ ಓಡಾಡುತ್ತಿದ್ದನು. “ಈ ಜನರು ನಮ್ಮನ್ನು ‘ಸರ್ಪನ ಸಂತತಿ’ ಎಂದು ಕರೆಯುತ್ತಾರೆ” ಎಂಬುದಾಗಿ ಅವನು ಕೂಗುತ್ತಿದ್ದನು.
ಈಗಾಗಲೇ ಆ ಪಾದ್ರಿಯು ಸಹೋದರ ಟ್ರೀಆಂಡಾಫೀಲಾಪುಲಾಸ್ರ ತಲೆಯ ಮೇಲೆ ನಡಗೆಕೋಲು (ವಾಕಿಂಗ್ ಸ್ಟಿಕ್)ನಿಂದ ಹೊಡೆದು, ಅದನ್ನು ಮುರಿದುಹಾಕಿದ್ದನು. ಅವರ ಮುಖದಿಂದ ರಕ್ತವು ಪ್ರವಹಿಸುತ್ತಿತ್ತು. ನಾನು ಆ ರಕ್ತವನ್ನು ಸ್ವಚ್ಛಗೊಳಿಸಿದ ಬಳಿಕ, ನಾವು ಅಲ್ಲಿಂದ ಹೊರಟುಬರಲು ಶಕ್ತರಾದೆವು. ನಾವು ತೀಬ್ಸ್ ನಗರವನ್ನು ತಲಪುವ ವರೆಗೆ, ಮೂರು ತಾಸುಗಳ ಕಾಲ ನಡೆದೆವು. ಅಲ್ಲಿ ಚಿಕಿತ್ಸಾಲಯವೊಂದರಲ್ಲಿ ಗಾಯಕ್ಕೆ ಚಿಕಿತ್ಸೆನೀಡಲಾಯಿತು. ನಾವು ಆ ಘಟನೆಯನ್ನು ಪೊಲೀಸರಿಗೆ ವರದಿಸಿದೆವು. ಮತ್ತು ಒಂದು ಮೊಕದ್ದಮೆಯನ್ನು ದಾಖಲಿಸಲಾಯಿತು. ಆದರೂ, ಆ ಪಾದ್ರಿಯು ರಾಜಕೀಯ ಪ್ರಭಾವವುಳ್ಳವನಾಗಿದ್ದರಿಂದ, ಕೊನೆಗೂ ಬಿಡುಗಡೆಮಾಡಲ್ಪಟ್ಟನು.
ನಾವು ಲೂಕಸ್ ಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದಾಗ, ಆ ಕ್ಷೇತ್ರದ ರಾಜಕೀಯ ನಾಯಕರಲ್ಲಿ ಒಬ್ಬನ ಅನುಯಾಯಿಗಳು ನಮ್ಮನ್ನು “ಬಂಧಿಸಿ,” ಹಳ್ಳಿಯ ಕಾಫಿಗೃಹಕ್ಕೆ ಕರೆದುತಂದರು. ಅಲ್ಲಿ ಜನ ನ್ಯಾಯಾಲಯದಲ್ಲಿ ನಮ್ಮ ಮೇಲೆ ದೋಷಾರೋಪಣೆಮಾಡಲಾಯಿತು. ಆ ರಾಜಕೀಯ ನಾಯಕನೂ ಅವನ ಜನರೂ ಸರದಿಪ್ರಕಾರವಾಗಿ ನಮ್ಮ ಬಳಿ ಸುಳಿದಾಡುತ್ತಾ, ಜೋರಾದ ಅಬ್ಬರದಿಂದ ಭಾಷಣಕೊಡುತ್ತಿದ್ದರು ಮತ್ತು ತಮ್ಮ ಬಿಗಿಮುಷ್ಟಿಗಳಿಂದ ನಮಗೆ ಬೆದರಿಕೆ ಹಾಕುತ್ತಿದ್ದರು. ಅವರೆಲ್ಲರೂ ಕುಡಿದಿದ್ದರು. ನಮ್ಮ ವಿರುದ್ಧವಾಗಿ ನಡೆಸಿದ ಅವರ ದೀರ್ಘ ನಿಂದಾಭಾಷಣಗಳು ಮಧ್ಯಾಹ್ನದಿಂದ ಸಾಯಂಕಾಲದ ವರೆಗೆ ಮುಂದುವರಿದವು. ಆದರೆ ನಾವು ಶಾಂತರಾಗಿ ಉಳಿದೆವು. ಮತ್ತು ನಾವು ನಮ್ಮ ನಿರಪರಾಧಿತ್ವವನ್ನು ರುಜುಪಡಿಸುತ್ತಿದ್ದಾಗ, ನಸುನಗುತ್ತಾ, ಸಹಾಯಕ್ಕಾಗಿ ಯೆಹೋವನಿಗೆ ಮೌನವಾಗಿ ಪ್ರಾರ್ಥಿಸಿದೆವು.
ಮುಂಗತ್ತಲೆಯಾದಾಗ ಇಬ್ಬರು ಪೊಲೀಸರು ನಮ್ಮನ್ನು ಕಾಪಾಡಿದರು. ಅವರು ನಮ್ಮನ್ನು ಪೊಲೀಸ್ ಠಾಣೆಗೆ ಕರೆದೊಯ್ದು, ನಮ್ಮನ್ನು ಚೆನ್ನಾಗಿ ಉಪಚರಿಸಿದರು. ತನ್ನ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲಿಕ್ಕಾಗಿ, ಮರುದಿನ ಆ ರಾಜಕೀಯ ನಾಯಕನು ಬಂದು, ಗ್ರೀಸಿನ ರಾಜನ ವಿರುದ್ಧವಾಗಿ ನಾವು ಪ್ರಚಾರಕಾರ್ಯವನ್ನು ಹಬ್ಬಿಸುತ್ತಿದ್ದೇವೆಂದು ನಮ್ಮನ್ನು ನಿಂದಿಸಿದನು. ಆದುದರಿಂದ ಆ ಪೊಲೀಸನು, ಇಬ್ಬರು ವ್ಯಕ್ತಿಗಳ ಬೆಂಗಾವಲಿನಲ್ಲಿ, ಇನ್ನೂ ಹೆಚ್ಚಿನ ಪರೀಕ್ಷೆಗಾಗಿ ನಮ್ಮನ್ನು ಲಮೀಯ ಪಟ್ಟಣಕ್ಕೆ ಕಳುಹಿಸಿದನು. ಏಳು ದಿವಸಗಳ ವರೆಗೆ ನಾವು ಬಂಧನದಲ್ಲಿಡಲ್ಪಟ್ಟಿದ್ದೆವು. ತದನಂತರ ನಮಗೆ ಕೈಬೇಡಿ ಹಾಕಿ, ವಿಚಾರಣೆಗಾಗಿ ಲರಿಸ ಪಟ್ಟಣಕ್ಕೆ ಕರೆದೊಯ್ಯಲಾಯಿತು.
ಈ ಮುಂಚೆಯೇ ನಮ್ಮ ವಿಷಯವಾಗಿ ತಿಳಿಯಪಡಿಸಲ್ಪಟ್ಟಿದ್ದ ಲರಿಸದಲ್ಲಿರುವ ನಮ್ಮ ಕ್ರೈಸ್ತ ಸಹೋದರರು, ನಮ್ಮ ಆಗಮನಕ್ಕಾಗಿ ಕಾಯುತ್ತಿದ್ದರು. ಅವರು ನಮಗೆ ತೋರಿಸಿದ ಭಾರಿ ಮಮತೆಯು, ಆ ಗಾರ್ಡ್ಗಳಿಗೆ ಒಂದು ಒಳ್ಳೆಯ ಸಾಕ್ಷಿಯಾಗಿತ್ತು. ಯೆಹೋವನ ಸಾಕ್ಷಿಗಳಲ್ಲಿ ಒಬ್ಬನೂ, ಮಾಜಿ ಲೆಫ್ಟೆನಂಟ್ ಕರ್ನೆಲೂ ಆಗಿದ್ದ ನಮ್ಮ ವಕೀಲನು, ಆ ಪಟ್ಟಣದಲ್ಲಿ ಸುಪ್ರಸಿದ್ಧನಾಗಿದ್ದನು. ಅವನು ಕೋರ್ಟಿಗೆ ಬಂದು, ನಮ್ಮ ಕೇಸಿನ ವಿಷಯವಾಗಿ ವಾಗ್ವಾದಮಾಡಿದಾಗ, ನಮ್ಮ ವಿರುದ್ಧವಾಗಿ ಹೊರಿಸಲ್ಪಟ್ಟಿದ್ದ ದೋಷಾರೋಪಣೆಗಳು ಸುಳ್ಳೆಂದು ಬಹಿರಂಗಪಡಿಸಲ್ಪಟ್ಟು, ನಾವು ಬಿಡುಗಡೆಗೊಳಿಸಲ್ಪಟ್ಟೆವು.
ಯೆಹೋವನ ಸಾಕ್ಷಿಗಳ ಸಾರುವಿಕೆಯ ಸರ್ವಸಾಮಾನ್ಯ ಯಶಸ್ವಿಯು, ವಿರೋಧದ ತೀವ್ರತೆಗೆ ಮುನ್ನಡಿಸಿತು. 1938 ಹಾಗೂ 1939ರಲ್ಲಿ, ಮತಪರಿವರ್ತನೆಯನ್ನು ನಿಷೇಧಿಸುವಂತಹ ನಿಯಮಗಳು ಜಾರಿಗೆ ತರಲ್ಪಟ್ಟವು. ಮತ್ತು ಈ ವಿವಾದದಲ್ಲಿ ಮೈಕಲ್ ಹಾಗೂ ನಾನು ಡಸನ್ಗಟ್ಟಲೆ ಕೋರ್ಟ್ ಕೇಸುಗಳಲ್ಲಿ ಒಳಗೂಡಿದ್ದೆವು. ತದನಂತರ, ನಮ್ಮ ಚಟುವಟಿಕೆಗೆ ಕಡಿಮೆ ಗಮನವನ್ನು ಸೆಳೆಯಲಾಗುವಂತೆ, ಬ್ರಾಂಚ್ ಆಫೀಸು ನಮಗೆ ಪ್ರತ್ಯೇಕವಾಗಿ ಕೆಲಸ ಮಾಡುವಂತೆ ಸಲಹೆ ನೀಡಿತು. ಒಬ್ಬ ಸಂಗಡಿಗನಿಲ್ಲದಿರುವುದು ನನಗೆ ಬಹಳ ಕಷ್ಟಕರವಾಗಿ ಕಂಡಿತು. ಆದರೂ, ಯೆಹೋವನಲ್ಲಿ ಭರವಸೆಯಿಡುತ್ತಾ, ನಾನು ಕಾಲುನಡಿಗೆಯಲ್ಲೇ, ಆ್ಯಟಿಕ, ಬೀಓಷೀಯ, ತೈಓಟೆಸ್, ಎವ್ಯ, ಈಟೋಲೀಯ, ಆ್ಯಕರ್ನೇನೀಯ, ಯುರಟೇನೀಯದ ಜಿಲ್ಲೆಗಳಾದ್ಯಂತವಾಗಿಯೂ, ಪೆಲಪನೀಸಸ್ನ ಜಿಲ್ಲೆಯಲ್ಲಿಯೂ ಸಾರಿದೆ.
ಈ ಕಾಲಾವಧಿಯಲ್ಲಿ ನನಗೆ ಸಹಾಯ ಮಾಡಿದ್ದು, ಯೆಹೋವನಲ್ಲಿ ಭರವಸೆಯಿಡುವುದರ ಕುರಿತಾದ ಕೀರ್ತನೆಗಾರನ ಸುಂದರ ಮಾತುಗಳೇ: “ನಿನ್ನ ಬಲದಿಂದ ದಂಡಿನ ಮೇಲೆ ಬೀಳುವೆನು; ನನ್ನ ದೇವರ ಸಹಾಯದಿಂದ ಪ್ರಾಕಾರವನ್ನು ಹಾರುವೆನು. ನನಗೆ ಶೌರ್ಯವೆಂಬ ನಡುಕಟ್ಟನ್ನು ಬಿಗಿಯುವವನೂ ನನ್ನ ಮಾರ್ಗವನ್ನು ಸರಾಗಮಾಡುವವನೂ ಆತನೇ. ನನ್ನ ಕಾಲನ್ನು ಜಿಂಕೆಯ ಕಾಲಿನಂತೆ ಚುರುಕು ಮಾಡುತ್ತಾನೆ; ನನ್ನನ್ನು ಉನ್ನತಪ್ರದೇಶಗಳಲ್ಲಿ ನಿಲ್ಲಿಸುತ್ತಾನೆ.”—ಕೀರ್ತನೆ 18:29, 32, 33.
ಇಸವಿ 1940ರಲ್ಲಿ, ಇಟಲಿಯು ಗ್ರೀಸಿನ ಮೇಲೆ ಯುದ್ಧವನ್ನು ಘೋಷಿಸಿತು. ಮತ್ತು ತದನಂತರ ಬೇಗನೆ ಜರ್ಮನ್ ಸೇನೆಗಳು ಈ ದೇಶದ ಮೇಲೆ ದಾಳಿಮಾಡಿದವು. ಸೈನಿಕ ಶಾಸನವು ಘೋಷಿಸಲ್ಪಟ್ಟಿತು, ಮತ್ತು ವಾಚ್ ಟವರ್ ಸೊಸೈಟಿಯ ಪುಸ್ತಕಗಳು ನಿಷೇಧಿಸಲ್ಪಟ್ಟವು. ಅವು ಗ್ರೀಸಿನಲ್ಲಿದ್ದ ಯೆಹೋವನ ಸಾಕ್ಷಿಗಳಿಗೆ ಕಷ್ಟಕರವಾದ ಸಮಯಗಳಾಗಿದ್ದವು; ಆದರೂ, ಅವರ ಸಂಖ್ಯೆಯು ತೀವ್ರಗತಿಯಲ್ಲಿ—1940ರಲ್ಲಿ 178 ಸಾಕ್ಷಿಗಳಿಂದ, 1945ರಲ್ಲಿ IIನೆಯ ಲೋಕ ಯುದ್ಧದ ಅಂತ್ಯದಷ್ಟಕ್ಕೆ 1,770 ಸಾಕ್ಷಿಗಳಿಗೆ—ಬೆಳೆಯಿತು!
ಬೆತೆಲ್ನಲ್ಲಿ ಸೇವೆಮಾಡುವುದು
ಇಸವಿ 1945ರಲ್ಲಿ, ಆ್ಯಥೆನ್ಸ್ನಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿನಲ್ಲಿ ಸೇವೆಮಾಡುವಂತೆ ನನ್ನನ್ನು ಆಮಂತ್ರಿಸಲಾಯಿತು. ಬೆತೆಲ್, ಅಂದರೆ “ದೇವರ ಗೃಹ”ವು, ಆಗ ಲಾಂಬಾರ್ಡೂ ಸ್ಟ್ರೀಟ್ನಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ನೆಲೆಸಿತ್ತು. ಆಫೀಸುಗಳು ಮೊದಲ ಮಹಡಿಯಲ್ಲಿದ್ದವು. ಮತ್ತು ಮುದ್ರಣಾಲಯವು ನೆಲಮಾಳಿಗೆಯಲ್ಲಿತ್ತು. ಅದರಲ್ಲಿ ಒಂದು ಚಿಕ್ಕ ಪ್ರಿಂಟಿಂಗ್ ಪ್ರೆಸ್ ಹಾಗೂ ಟ್ರಿಮಿಂಗ್ ಯಂತ್ರಗಳು ಇದ್ದವು. ಆರಂಭದಲ್ಲಿ ಮುದ್ರಣಾಲಯ ಸಿಬ್ಬಂದಿಯು ಕೇವಲ ಇಬ್ಬರೇ ವ್ಯಕ್ತಿಗಳಿಂದ ರಚಿತವಾಗಿತ್ತಾದರೂ, ಬೇಗನೆ ಈ ಕೆಲಸದಲ್ಲಿ ನೆರವು ನೀಡಲಿಕ್ಕಾಗಿ ಬೇರೆ ಸ್ವಯಂಸೇವಕರು ತಮ್ಮ ಮನೆಗಳಿಂದ ಬರಲಾರಂಭಿಸಿದರು.
ನ್ಯೂ ಯಾರ್ಕಿನ ಬ್ರೂಕ್ಲಿನ್ನಲ್ಲಿರುವ ವಾಚ್ ಟವರ್ ಸೊಸೈಟಿಯ ಮುಖ್ಯಕಾರ್ಯಾಲಯದೊಂದಿಗಿನ ಸಂಪರ್ಕವು, 1945ರಲ್ಲಿ ಪುನಸ್ಸ್ಥಾಪಿಸಲ್ಪಟ್ಟಿತು. ಮತ್ತು ಆ ವರ್ಷದಲ್ಲಿ ನಾವು ಗ್ರೀಸಿನಲ್ಲಿ ಕಾವಲಿನಬುರುಜು ಪತ್ರಿಕೆಯನ್ನು ಕ್ರಮವಾಗಿ ಮುದ್ರಿಸಲು ಪುನರಾರಂಭಿಸಿದೆವು. ಬಳಿಕ, 1947ರಲ್ಲಿ, ನಾವು ನಮ್ಮ ಬ್ರಾಂಚನ್ನು 16 ಟೆನೆಡೂ ಸ್ಟ್ರೀಟ್ಗೆ ಸ್ಥಳಾಂತರಿಸಿದೆವು. ಆದರೆ ಮುದ್ರಣಾಲಯವು ಲಾಂಬಾರ್ಡೂ ಸ್ಟ್ರೀಟ್ನಲ್ಲಿಯೇ ಉಳಿಯಿತು. ತದನಂತರ ಮುದ್ರಣಾಲಯವು ಲಾಂಬಾರ್ಡೂ ಸ್ಟ್ರೀಟ್ನಿಂದ, ಸುಮಾರು ಐದು ಕಿಲೊಮೀಟರುಗಳಷ್ಟು ದೂರವಿದ್ದ, ಒಬ್ಬ ಸಾಕ್ಷಿಗೆ ಸೇರಿದ್ದ ಫ್ಯಾಕ್ಟರಿಯೊಂದಕ್ಕೆ ಸ್ಥಳಾಂತರಿಸಲ್ಪಟ್ಟಿತು. ಆದುದರಿಂದ ಸ್ವಲ್ಪ ಸಮಯದ ವರೆಗೆ ನಾವು ಈ ಮೂರು ಸ್ಥಳಗಳಲ್ಲಿ ಹಿಂದಕ್ಕೂ ಮುಂದಕ್ಕೂ ಪ್ರಯಾಣಿಸಬೇಕಿತ್ತು.
ಅರುಣೋದಯವಾಗುವುದಕ್ಕೆ ಮೊದಲೇ, ಟೆನೆಡೂ ಸ್ಟ್ರೀಟ್ನಲ್ಲಿರುವ ನಮ್ಮ ವಸತಿಯನ್ನು ಬಿಟ್ಟು, ಮುದ್ರಣಾಲಯಕ್ಕೆ ಪ್ರಯಾಣಿಸುತ್ತಿದ್ದುದನ್ನು ನಾನು ಜ್ಞಾಪಿಸಿಕೊಳ್ಳಬಲ್ಲೆ. ಅಲ್ಲಿ ಮಧ್ಯಾಹ್ನ 1 ಗಂಟೆಯ ವರೆಗೆ ಕೆಲಸ ಮಾಡಿದ ಬಳಿಕ, ನಾವು ಮುದ್ರಿಸಿದ್ದ ಕಾಗದದ ಹಾಳೆಗಳನ್ನು ತೆಗೆದುಕೊಂಡು, ನಾನು ಲಾಂಬಾರ್ಡೂ ಸ್ಟ್ರೀಟ್ಗೆ ಹೋಗುತ್ತಿದ್ದೆ. ಅಲ್ಲಿ ಈ ಹಾಳೆಗಳನ್ನು ಕೈಯಿಂದ ಪತ್ರಿಕೆಗಳಾಗಿ ಫೋಲ್ಡ್ಮಾಡಿ, ಹೊಲಿದು, ಟ್ರಿಮ್ಮಾಡುತ್ತಿದ್ದೆವು. ತದನಂತರ ನಾವು ಪೂರ್ಣಗೊಂಡ ಪತ್ರಿಕೆಗಳನ್ನು ಅಂಚೆ ಕಚೇರಿಗೆ ತೆಗೆದುಕೊಂಡುಹೋಗಿ, ಮೂರನೆಯ ಮಹಡಿಯ ವರೆಗೆ ಕೊಂಡೊಯ್ದು, ರವಾನಿಸಲಿಕ್ಕಾಗಿ ಅವುಗಳನ್ನು ವಿಂಗಡಿಸಿ, ಆ ಲಕೋಟೆಗಳ ಮೇಲೆ ಸ್ಟ್ಯಾಂಪ್ಗಳನ್ನು ಅಂಟಿಸಲು ಅಂಚೆ ಕಚೇರಿಯ ಸಿಬ್ಬಂದಿಗೆ ಸಹಾಯ ಮಾಡುತ್ತಿದ್ದೆವು.
ಇಸವಿ 1954ರಷ್ಟಕ್ಕೆ, ಗ್ರೀಸಿನಲ್ಲಿ ಯೆಹೋವನ ಸಾಕ್ಷಿಗಳ ಸಂಖ್ಯೆಯು 4,000ಕ್ಕಿಂತಲೂ ಹೆಚ್ಚಾಗಿದ್ದು, ವಿಸ್ತೃತವಾದ ಸೌಕರ್ಯಗಳು ಅಗತ್ಯವಾಗಿದ್ದವು. ಆದುದರಿಂದ, ಆ್ಯಥೆನ್ಸ್ ನಗರದ ಮಧ್ಯದಲ್ಲಿದ್ದ ಕಾರ್ಟಾಲೀ ಸ್ಟ್ರೀಟ್ನಲ್ಲಿನ ಮೂರು ಮಹಡಿಯ ಹೊಸ ಬೆತೆಲಿಗೆ ನಾವು ಸ್ಥಳಾಂತರಿಸಿದೆವು. 1958ರಲ್ಲಿ, ಅಡಿಗೆಮನೆಯ ಮೇಲ್ವಿಚಾರಣೆಯನ್ನು ವಹಿಸಿಕೊಳ್ಳುವಂತೆ ನನ್ನನ್ನು ಕೇಳಿಕೊಳ್ಳಲಾಯಿತು. 1983ರ ವರೆಗೆ ಅದೇ ನನ್ನ ಜವಾಬ್ದಾರಿಯಾಗಿತ್ತು. ಈ ಮಧ್ಯೆ, 1959ರಲ್ಲಿ, ಯೆಹೋವನ ಸೇವೆಯಲ್ಲಿ ಒಬ್ಬ ನಿಷ್ಠಾವಂತ ಸಂಗಾತಿಯಾಗಿ ಪರಿಣಮಿಸಿರುವ ಎಲಫ್ತಾರೀಯಳನ್ನು ನಾನು ವಿವಾಹವಾದೆ.
ಪುನಃ ವಿರೋಧವನ್ನು ಸಹಿಸಿಕೊಳ್ಳುವುದು
ಇಸವಿ 1967ರಲ್ಲಿ ಮಿಲಿಟರಿ ಆಡಳಿತ ಸಭೆಯು ಅಧಿಕಾರವನ್ನು ಸ್ವಾಧೀನಪಡಿಸಿಕೊಂಡಿತು. ಮತ್ತು ನಮ್ಮ ಸಾರುವ ಕೆಲಸದ ಮೇಲೆ ಪುನಃ ಒಮ್ಮೆ ನಿರ್ಬಂಧಗಳು ಹೊರಿಸಲ್ಪಟ್ಟಿದ್ದವು. ಆದರೂ, ನಮ್ಮ ಚಟುವಟಿಕೆಗಳ ಮೇಲಿನ ನಿಷೇಧಗಳನ್ನು ನಿಭಾಯಿಸುವುದರಲ್ಲಿ ನಮಗೆ ಈ ಹಿಂದೆ ಅನುಭವವಿದ್ದ ಕಾರಣದಿಂದಾಗಿ, ನಾವು ಆ ಕೂಡಲೆ ಸರಿಹೊಂದಿಸುವಿಕೆಗಳನ್ನು ಮಾಡಿಕೊಂಡು, ಭೂಗತಕಾರ್ಯವನ್ನು ಯಶಸ್ವಿಕರವಾಗಿ ಮುಂದುವರಿಸಿದೆವು.
ನಾವು ನಮ್ಮ ಕೂಟಗಳನ್ನು ಖಾಸಗಿ ಮನೆಗಳಲ್ಲಿ ನಡೆಸಿ, ನಮ್ಮ ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಎಚ್ಚರಿಕೆಯನ್ನು ವಹಿಸಿದೆವು. ಆದರೂ, ನಮ್ಮ ಸಹೋದರರು ಕ್ರಮವಾಗಿ ಬಂಧಿಸಲ್ಪಟ್ಟು, ಕೋರ್ಟ್ ಕೇಸುಗಳು ಬಹುಸಂಖ್ಯಾಕವಾದವು. ನಮ್ಮ ವಕೀಲರು ಯಾವಾಗಲೂ, ಈ ದೇಶದ ವಿವಿಧ ಭಾಗಗಳಲ್ಲಿ ನಡೆಸಲ್ಪಟ್ಟ ವಿಚಾರಣೆಗಳನ್ನು ನಿರ್ವಹಿಸಲಿಕ್ಕಾಗಿ ಪ್ರಯಾಣಿಸುವುದಲ್ಲಿ ಕಾರ್ಯನಿರತರಾಗಿದ್ದರು. ವಿರೋಧದ ಹೊರತಾಗಿಯೂ, ಅಧಿಕಾಂಶ ಸಾಕ್ಷಿಗಳು ತಮ್ಮ ಸಾರುವ ಚಟುವಟಿಕೆಯಲ್ಲಿ ತಮ್ಮನ್ನು ಕ್ರಮವಾಗಿರಿಸಿಕೊಂಡರು—ವಿಶೇಷವಾಗಿ ವಾರಾಂತ್ಯಗಳಲ್ಲಿ.
ಒಂದು ಪ್ರಾತಿನಿಧಿಕ ಶನಿವಾರ ಅಥವಾ ಆದಿತ್ಯವಾರದಂದು, ಆ ದಿನಕ್ಕಾಗಿರುವ ನಮ್ಮ ಸಾರುವ ಕಾರ್ಯವು ಪೂರ್ಣಗೊಳಿಸಲ್ಪಟ್ಟ ಬಳಿಕ, ನಮ್ಮ ಗುಂಪುಗಳಿಂದ ಯಾರು ಕಾಣೆಯಾಗಿದ್ದಾರೆ ಎಂಬುದನ್ನು ನೋಡಲಿಕ್ಕಾಗಿ ಪರಿಶೀಲನೆಯನ್ನು ಮಾಡಲಾಗುತ್ತಿತ್ತು. ಸಾಮಾನ್ಯವಾಗಿ, ನಮ್ಮ ಗುಂಪುಗಳಿಂದ ಕಾಣೆಯಾಗಿದ್ದವರನ್ನು, ಅತಿ ಸಮೀಪದ ಪೊಲೀಸ್ ಠಾಣೆಯಲ್ಲಿ ಬಂಧನದಲ್ಲಿ ಇರಿಸಲಾಗುತ್ತಿತ್ತು. ಆದುದರಿಂದ ನಾವು ಅವರಿಗೆ ಹೊದಿಕೆಗಳನ್ನೂ ಆಹಾರವನ್ನೂ ಕೊಂಡೊಯ್ದು, ಅವರಿಗೆ ಪ್ರೋತ್ಸಾಹವನ್ನು ನೀಡಿದೆವು. ಹಾಗೂ, ನಾವು ನಮ್ಮ ವಕೀಲರಿಗೆ ತಿಳಿಯಪಡಿಸಿದೆವು, ಆಗ ಬಂಧನದಲ್ಲಿಡಲ್ಪಟ್ಟಿದ್ದವರ ಪರವಾಗಿ ವಾದಿಸಲಿಕ್ಕಾಗಿ, ಅವರು ಸೋಮವಾರದಂದು ಪ್ರಾಸಿಕ್ಯೂಟರ್ನ ಸಮಕ್ಷಮದಲ್ಲಿ ಹಾಜರಾಗುತ್ತಿದ್ದರು. ಈ ಸನ್ನಿವೇಶವನ್ನು ನಾವು ಸಂತೋಷದಿಂದ ಎದುರಿಸಿದೆವು, ಏಕೆಂದರೆ ನಾವು ಸತ್ಯಕ್ಕಾಗಿಯೇ ಕಷ್ಟಾನುಭವಿಸುತ್ತಿದ್ದೆವು!
ನಿಷೇಧದ ಸಮಯದಲ್ಲಿ ಬೆತೆಲಿನಲ್ಲಿನ ನಮ್ಮ ಮುದ್ರಣ ಕಾರ್ಯಾಚರಣೆಗಳು ಮುಚ್ಚಲ್ಪಟ್ಟಿದ್ದವು. ಆದುದರಿಂದ ಆ್ಯಥೆನ್ಸಿನ ಉಪನಗರದಲ್ಲಿ ಎಲಫ್ತಾರೀಯ ಹಾಗೂ ನಾನು ವಾಸಿಸುತ್ತಿದ್ದ ವಾಸದ ಮಹಡಿಯು, ಒಂದು ರೀತಿಯ ಮುದ್ರಣಾಲಯವಾಗಿ ಪರಿಣಮಿಸಿತು. ಭಾರವಾದ ಒಂದು ಟೈಪ್ರೈಟರನ್ನು ಉಪಯೋಗಿಸಿ, ಕಾವಲಿನಬುರುಜು ಪತ್ರಿಕೆಯ ಲೇಖನಗಳ ಪ್ರತಿಗಳನ್ನು ಎಲಫ್ತಾರೀಯ ಟೈಪ್ಮಾಡಿದಳು. ಅವಳು ಟೈಪ್ರೈಟರಿನಲ್ಲಿ ಒಂದು ಬಾರಿಗೆ ಕಾರ್ಬನ್ ಕಾಗದದೊಂದಿಗೆ ಹತ್ತು ಹಾಳೆಗಳನ್ನು ಸೇರಿಸಿ, ತುಂಬ ಬಲವಾಗಿ ಒತ್ತಿ ಟೈಪ್ಮಾಡುತ್ತಿದ್ದಳು. ಇದರಿಂದಾಗಿ ಆ ಅಕ್ಷರಗಳು ಎಲ್ಲ ಹತ್ತು ಹಾಳೆಗಳ ಮೇಲೂ ಮುದ್ರಿತವಾಗುತ್ತಿದ್ದವು. ಬಳಿಕ ನಾನು ಆ ಪುಟಗಳನ್ನು ಸಂಗ್ರಹಿಸಿ, ಅವುಗಳನ್ನು ಒಟ್ಟಿಗೆ ಹೊಲಿಯುತ್ತಿದ್ದೆ. ಪ್ರತಿ ದಿನ ಸಂಜೆಯಿಂದ ಮಧ್ಯರಾತ್ರಿಯ ವರೆಗೆ ಹೀಗೆಯೇ ನಡೆಯುತ್ತಿತ್ತು. ನಮ್ಮ ವಾಸದ ಮಹಡಿಯ ಕೆಳಗಿನ ಅಂತಸ್ತಿನಲ್ಲಿ ಒಬ್ಬ ಪೊಲೀಸನು ವಾಸಿಸುತ್ತಿದ್ದನು, ಮತ್ತು ಅವನು ಏಕೆ ಎಂದೂ ಸಂದೇಹಾಸ್ಪದನಾಗಲಿಲ್ಲವೆಂದು ನಾವು ಇನ್ನೂ ಯೋಚಿಸುತ್ತೇವೆ.
ಮುಂದುವರಿದ ವಿಸ್ತರಣೆಯಲ್ಲಿ ಉಲ್ಲಾಸಪಡುವುದು
ಗ್ರೀಸಿಗೆ 1974ರಲ್ಲಿ ಪ್ರಜಾಪ್ರಭುತ್ವವು ಪುನಸ್ಸ್ಥಾಪಿಸಲ್ಪಟ್ಟಿತು. ಮತ್ತು ನಮ್ಮ ಸಾರುವ ಕೆಲಸವು ಪುನಃ ಹೆಚ್ಚು ಬಹಿರಂಗವಾಗಿ ಮುಂದುವರಿಸಲ್ಪಟ್ಟಿತು. ಆದರೂ, ನಮ್ಮ ಕೆಲಸದ ಮೇಲಿನ ಏಳು ವರ್ಷಗಳ ನಿರ್ಬಂಧಗಳ ಸಮಯದಲ್ಲಿ, 6,000ಕ್ಕಿಂತಲೂ ಹೆಚ್ಚಿನ ಹೊಸ ಸಾಕ್ಷಿಗಳ ಅದ್ಭುತಕರವಾದ ಹೆಚ್ಚಳದಲ್ಲಿ ನಾವು ಆನಂದಿಸಿದೆವು. ಒಟ್ಟು 17,000ಕ್ಕಿಂತಲೂ ಹೆಚ್ಚು ರಾಜ್ಯ ಘೋಷಕರ ಸಂಖ್ಯೆಯನ್ನು ನಾವು ತಲಪಿದೆವು.
ಬ್ರಾಂಚ್ ಕಟ್ಟಡಗಳಲ್ಲಿನ ನಮ್ಮ ಕ್ರಮವಾದ ಮುದ್ರಣ ಚಟುವಟಿಕೆಯನ್ನೂ ನಾವು ಮತ್ತೆ ಆರಂಭಿಸಿದೆವು. ಫಲಿತಾಂಶವಾಗಿ, ಕಾರ್ಟಾಲೀ ಸ್ಟ್ರೀಟ್ನಲ್ಲಿನ ಬೆತೆಲ್ ಸೌಕರ್ಯವು ಬೇಗನೆ ಹೆಚ್ಚು ಚಿಕ್ಕದ್ದಾಗಿ ಪರಿಣಮಿಸಿತು. ಆದುದರಿಂದ, ಆ್ಯಥೆನ್ಸಿನ ಉಪನಗರವಾದ ಮಾರೂಸೀಯಲ್ಲಿ, 2.5 ಎಕ್ರೆ ಜಮೀನನ್ನು ಖರೀದಿಸಲಾಯಿತು. ಹೊಸ ಬೆತೆಲ್ ಕಟ್ಟಡಗಳನ್ನು ಕಟ್ಟಲಾಯಿತು; ಅದು 27 ಶಯನಗೃಹಗಳು, ಒಂದು ಫ್ಯಾಕ್ಟರಿ, ಆಫೀಸುಗಳು, ಹಾಗೂ ಇತರ ಸೌಕರ್ಯಗಳನ್ನು ಒಳಗೊಂಡಿತ್ತು. ಇವುಗಳನ್ನು 1979ರ ಅಕ್ಟೋಬರ್ ತಿಂಗಳಿನಲ್ಲಿ ಪ್ರತಿಷ್ಠಾಪಿಸಲಾಯಿತು.
ಸಕಾಲದಲ್ಲಿ ನಮಗೆ ಇನ್ನೂ ಹೆಚ್ಚು ಸ್ಥಳಾವಕಾಶ ಬೇಕಾಯಿತು. ಆದುದರಿಂದ, ಆ್ಯಥೆನ್ಸ್ನಿಂದ 60 ಕಿಲೊಮೀಟರುಗಳಷ್ಟು ಉತ್ತರಕ್ಕೆ 54 ಎಕ್ರೆಗಳ ಜಮೀನನ್ನು ಖರೀದಿಸಲಾಯಿತು. ಆ ನಿವೇಶನವು ಎಲೀಆನಾದಲ್ಲಿ, ಬೆಟ್ಟಗುಡ್ಡಗಳು ಹಾಗೂ ಚೆನ್ನಾಗಿ ನೀರುಹಾಯಿಸಲ್ಪಟ್ಟಿರುವ ಕಣಿವೆಗಳ ನೋಟವಿರುವ, ಪರ್ವತಪಕ್ಕದಲ್ಲಿದೆ. ಅಲ್ಲಿ 1991ರ ಎಪ್ರಿಲ್ ತಿಂಗಳಿನಲ್ಲಿ, 22 ಮನೆಗಳನ್ನು—ಅವುಗಳಲ್ಲಿ ಪ್ರತಿಯೊಂದು ಮನೆಯು, ಎಂಟು ಜನರಿಗೆ ವಾಸಸ್ಥಳವನ್ನು ಒದಗಿಸಬಲ್ಲವು—ಒಳಗೊಂಡಿದ್ದ ಹೆಚ್ಚು ದೊಡ್ಡದಾದ ಸೌಕರ್ಯವನ್ನು ನಾವು ಪ್ರತಿಷ್ಠಾಪಿಸಿದೆವು.
ಪೂರ್ಣ ಸಮಯದ ಶುಶ್ರೂಷೆಯಲ್ಲಿ 60ಕ್ಕಿಂತಲೂ ಹೆಚ್ಚು ವರ್ಷಗಳನ್ನು ಕಳೆದ ಬಳಿಕ, ನಾನಿನ್ನೂ ಉತ್ತಮ ಆರೋಗ್ಯದಿಂದ ಆಶೀರ್ವದಿಸಲ್ಪಟ್ಟಿದ್ದೇನೆ. ಸಂತೋಷಕರವಾಗಿ, ನಾನು “ತಲೆ ನರೆತ ಪ್ರಾಯದಲ್ಲಿ ಏಳಿಗೆಹೊಂದುತ್ತಿದ್ದೇನೆ.” (ಕೀರ್ತನೆ 92:14, NW) ಯೆಹೋವನ ಸತ್ಯ ಆರಾಧಕರ ಸಂಖ್ಯೆಯಲ್ಲಿನ ಮಹತ್ತರವಾದ ಹೆಚ್ಚಳವನ್ನು, ನನ್ನ ಸ್ವಂತ ಕಣ್ಣುಗಳಿಂದ ನೋಡಲು ಜೀವಿಸಿರುವುದಕ್ಕಾಗಿ, ನಾನು ಆತನಿಗೆ ವಿಶೇಷವಾಗಿ ಕೃತಜ್ಞನಾಗಿದ್ದೇನೆ. ಅಂತಹ ಒಂದು ಹೆಚ್ಚಳವನ್ನು ಪ್ರವಾದಿಯಾದ ಯೆಶಾಯನು ಮುಂತಿಳಿಸಿದನು: “ಜನಾಂಗಗಳ ಐಶ್ವರ್ಯವನ್ನು ನಿನ್ನಲ್ಲಿಗೆ ತರುತ್ತಿರುವರು, . . . ಇದರಿಂದ ನಿನ್ನ ಬಾಗಿಲುಗಳು ಹಗಲಿರುಳೂ ಮುಚ್ಚದೆ ಸದಾ ತೆರೆದಿರುವವು.”—ಯೆಶಾಯ 60:11.
ಎಲ್ಲ ಜನಾಂಗಗಳಿಂದ ಬಂದ ಲಕ್ಷಾಂತರ ಜನರು, ಯೆಹೋವನ ಸಂಸ್ಥೆಯೊಳಗೆ ಹಿಂಡುಹಿಂಡಾಗಿ ಒಟ್ಟುಗೂಡುತ್ತಿರುವುದು, ಹಾಗೂ ಮಹಾ ಸಂಕಟದಿಂದ ಪಾರಾಗಿ ಉಳಿದು, ದೇವರ ಹೊಸ ಲೋಕದೊಳಗೆ ಪ್ರವೇಶಿಸುವ ವಿಧವನ್ನು ಅವರಿಗೆ ಕಲಿಸಲಾಗುತ್ತಿರುವುದನ್ನು ನೋಡುವುದು ಎಷ್ಟು ಅದ್ಭುತಕರವಾದದ್ದಾಗಿದೆ! (2 ಪೇತ್ರ 3:13) ಈ ಲೋಕವು ಒದಗಿಸಲಿಕ್ಕಿರುವ ಯಾವುದೇ ವಿಷಯಕ್ಕಿಂತಲೂ, ಪೂರ್ಣ ಸಮಯದ ಸೇವೆಯು ನನಗೆ ಹೆಚ್ಚು ಅಮೂಲ್ಯವಾಗಿ ಪರಿಣಮಿಸಿದೆ ಎಂದು ನಾನು ಖಂಡಿತವಾಗಿ ಹೇಳಬಲ್ಲೆ. ಹೌದು, ನಾನು ಕಂಡುಕೊಂಡಿರುವುದು, ಚಿನ್ನದ ನಿಕ್ಷೇಪಗಳನ್ನಲ್ಲ, ಬದಲಾಗಿ ನನ್ನ ಜೀವಿತವನ್ನು ಅಪರಿಮಿತ ಪ್ರಮಾಣದಲ್ಲಿ ಸಂಪತ್ಭರಿತವನ್ನಾಗಿ ಮಾಡಿರುವ ಆತ್ಮಿಕ ವಜ್ರಗಳನ್ನೇ.
[ಪುಟ 23 ರಲ್ಲಿರುವ ಚಿತ್ರಗಳು]
ಮೀಕಾಲೀಸ್ ಮತ್ತು ಎಲಫ್ತಾರೀಯ ಕಾಮೀನಾರಿಸ್
(ಬಲಗಡೆ) ಲಾಂಬಾರ್ಡೂ ಸ್ಟ್ರೀಟ್ನಲ್ಲಿರುವ ಮುದ್ರಣಾಲಯ