ಸುಳ್ಳು ಸಂದೇಶವಾಹಕರಿಗೆ ಶಾಂತಿಯಿಲ್ಲ!
“ಕೆಡುಕರು ತೆಗೆದುಹಾಕಲ್ಪಡುವರು; . . . ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ [“ಅಪಾರ ಶಾಂತಿಯಿಂದ,” NW] ಆನಂದಿಸುವರು.”—ಕೀರ್ತನೆ 37:9, 11.
1. “ಅಂತ್ಯಕಾಲ”ದಲ್ಲಿ ಸತ್ಯ ಮತ್ತು ಸುಳ್ಳು ಸಂದೇಶವಾಹಕರು—ಇವರಿಬ್ಬರನ್ನೂ ಕಂಡುಕೊಳ್ಳಲು ನಾವೇಕೆ ನಿರೀಕ್ಷಿಸಬೇಕು?
ಸಂದೇಶವಾಹಕರು—ಸುಳ್ಳರೊ ಸತ್ಯವಂತರೊ? ಬೈಬಲ್ ಸಮಯಗಳಲ್ಲಿ ಎರಡು ರೀತಿಯವರೂ ಇದ್ದರು. ನಮ್ಮ ದಿನಗಳ ಕುರಿತೇನು? ದಾನಿಯೇಲ 12:9, 10ರಲ್ಲಿ, ಸ್ವರ್ಗೀಯ ಸಂದೇಶವಾಹಕನೊಬ್ಬನು ದೇವರ ಪ್ರವಾದಿಗೆ ಹೀಗೆ ಹೇಳಿದನೆಂದು ನಾವು ಓದುತ್ತೇವೆ: “ಈ ಮಾತುಗಳು ಅಂತ್ಯಕಾಲದವರೆಗೆ ಮುಚ್ಚಲ್ಪಟ್ಟು ಮುದ್ರಿತವಾಗಿವೆ, ಹೋಗು. ಅನೇಕರು ತಮ್ಮನ್ನು ಶುದ್ಧೀಕರಿಸಿ ಶುಭ್ರಮಾಡಿಕೊಂಡು ಶೋಧಿತರಾಗುವರು; ದುಷ್ಟರು ದುಷ್ಟರಾಗಿಯೇ ನಡೆಯುವರು, ಅವರಲ್ಲಿ ಯಾರಿಗೂ ವಿವೇಕವಿರದು; ಜ್ಞಾನಿಗಳಿಗೆ [“ಅಂತರ್ದೃಷ್ಟಿಯುಳ್ಳವರಿಗೆ,” NW] ವಿವೇಕವಿರುವದು.” ನಾವೀಗ ಆ “ಅಂತ್ಯಕಾಲ”ದಲ್ಲಿ ಜೀವಿಸುತ್ತಿದ್ದೇವೆ. “ದುಷ್ಟರ” ಮತ್ತು “ಅಂತರ್ದೃಷ್ಟಿಯುಳ್ಳವರ” ಮಧ್ಯೆ ನಾವು ತೀಕ್ಷ್ಣ ವ್ಯತ್ಯಾಸವನ್ನು ಕಾಣುತ್ತೇವೊ? ನಿಶ್ಚಯವಾಗಿಯೂ ಕಾಣುತ್ತೇವೆ!
2. ಇಂದು ಯೆಶಾಯ 57:20, 21 ಹೇಗೆ ನೆರವೇರುತ್ತಿದೆ?
2 ದೇವರ ಸಂದೇಶವಾಹಕನಾದ ಯೆಶಾಯನ ಮಾತುಗಳನ್ನು ನಾವು 57ನೆಯ ಅಧ್ಯಾಯದ 20 ಮತ್ತು 21ನೆಯ ವಚನಗಳಲ್ಲಿ ಓದುತ್ತೇವೆ: “ದುಷ್ಟರಾದರೋ ಅಲ್ಲೋಲಕಲ್ಲೋಲವಾದ ಸಮುದ್ರದಂತಿದ್ದಾರೆ; ಅದು ಸುಮ್ಮನಿರದು, ಅದರ ತೆರೆಗಳು ಕೆಸರನ್ನೂ ಬುರುದೆಯನ್ನೂ ಕಾರುತ್ತಲಿರುತ್ತವೆ. ದುಷ್ಟರಿಗೆ ಸಮಾಧಾನ [“ಶಾಂತಿ,” NW]ವೇ ಇಲ್ಲವೆಂದು ನನ್ನ ದೇವರು ನುಡಿಯುತ್ತಾನೆ.” ಈ ಲೋಕವು 21ನೆಯ ಶತಮಾನವನ್ನು ಸಮೀಪಿಸುವಾಗ ಈ ಮಾತುಗಳು ಅದನ್ನು ಎಷ್ಟು ಯೋಗ್ಯವಾಗಿ ವರ್ಣಿಸುತ್ತವೆ! ‘ನಾವು ಆ ಶತಮಾನವನ್ನು ಎಂದಾದರೂ ಮುಟ್ಟುವೆವೊ?’ ಎಂದೂ ಕೆಲವರು ಕೇಳುತ್ತಾರೆ. ಅಂತರ್ದೃಷ್ಟಿಯುಳ್ಳ ಸಂದೇಶವಾಹಕರಿಗೆ ನಮಗೇನು ಹೇಳಲಿಕ್ಕಿದೆ?
3. (ಎ) 1 ಯೋಹಾನ 5:19ರಲ್ಲಿ ಯಾವ ವ್ಯತ್ಯಾಸವು ತೋರಿಸಲ್ಪಟ್ಟಿದೆ? (ಬಿ) ಪ್ರಕಟನೆ 7ನೆಯ ಅಧ್ಯಾಯದಲ್ಲಿ, “ಅಂತರ್ದೃಷ್ಟಿ” ಉಳ್ಳವರನ್ನು ಹೇಗೆ ವರ್ಣಿಸಲಾಗುತ್ತದೆ?
3 ಅಪೊಸ್ತಲ ಯೋಹಾನನಿಗೆ ದೈವಪ್ರೇರಿತವಾದ ಅಂತರ್ದೃಷ್ಟಿಯಿತ್ತು. 1 ಯೋಹಾನ 5:19ರಲ್ಲಿ ಹೀಗೆ ಹೇಳಲಾಗಿದೆ: “ನಾವು ದೇವರಿಂದ ಹುಟ್ಟಿದವರೆಂದೂ ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ ಎಂದೂ ನಮಗೆ ಗೊತ್ತದೆ.” ಈ ಲೋಕದೊಂದಿಗೆ ವೈದೃಶ್ಯದಲ್ಲಿ, 1,44,000 ಮಂದಿ ಆತ್ಮಿಕ ಇಸ್ರಾಯೇಲ್ಯರಲ್ಲಿ ವೃದ್ಧರಾಗಿರುವ ಉಳಿಕೆಯವರು ಇನ್ನೂ ನಮ್ಮೊಂದಿಗಿದ್ದಾರೆ. ಇಂದು ಇವರನ್ನು, “ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲ ಭಾಷೆಗಳನ್ನಾಡುವವರೂ” ಆದ, 50 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು ಅಂತರ್ದೃಷ್ಟಿಯೂ ಇರುವ ಒಂದು “ಮಹಾ ಸಮೂಹ”ವು ಜೊತೆಗೂಡುತ್ತಿದೆ. “ಆ ಮಹಾ ಸಂಕಟದಿಂದ ಹೊರಬರುವವರು ಇವರೇ.” ಅವರಿಗೇಕೆ ಪ್ರತಿಫಲ? ಏಕೆಂದರೆ ಅವರು ಸಹ ಯೇಸುವಿನ ಪ್ರಾಯಶ್ಚಿತ್ತದಲ್ಲಿ ನಂಬಿಕೆಯಿಡುವ ಮೂಲಕ, “ತಮ್ಮ ನಿಲುವಂಗಿಗಳನ್ನು ಕುರಿಮರಿಯ ರಕ್ತದಲ್ಲಿ ತೊಳೆದುಕೊಂಡು ಅವುಗಳನ್ನು ಶುಭ್ರಮಾಡಿಕೊಂಡಿದ್ದಾರೆ.” ಬೆಳಕಿನ ಸಂದೇಶವಾಹಕರಾಗಿದ್ದು, ಅವರೂ “ಹಗಲಿರುಳು ಆತನಿಗೆ [ದೇವರಿಗೆ] ಪವಿತ್ರ ಸೇವೆಯನ್ನು ಸಲ್ಲಿಸುತ್ತಾ ಇದ್ದಾರೆ.”—ಪ್ರಕಟನೆ 7:4, 9, 14, 15, NW.
ಶಾಂತಿಯ ಸಂದೇಶವಾಹಕರೆನಿಸಿಕೊಳ್ಳುವವರು
4. (ಎ) ಸೈತಾನನ ಲೋಕದ ಸಂದೇಶವಾಹಕರೆನಿಸಿಕೊಳ್ಳುವವರು ಏಕೆ ವಿಫಲಗೊಳ್ಳಲಿದ್ದಾರೆ? (ಬಿ) ಎಫೆಸ 4:18, 19, ಇಂದು ಹೇಗೆ ಅನ್ವಯಿಸುತ್ತದೆ?
4 ಆದರೆ ಸೈತಾನನ ಲೌಕಿಕ ವ್ಯವಸ್ಥೆಯಲ್ಲಿ ಶಾಂತಿಯ ಸಂದೇಶವಾಹಕರೆನಿಸಿಕೊಳ್ಳುವವರ ವಿಷಯವೇನು? ಯೆಶಾಯ 33ನೆಯ ಅಧ್ಯಾಯ, 7ನೆಯ ವಚನದಲ್ಲಿ ನಾವು ಓದುವುದು: “ಇಗೋ, ಸಿಂಹವೀರರು ಹೊರಗೆ ಹಾಹಾಕಾರ ಮಾಡುತ್ತಿದ್ದಾರೆ; ಶಾಂತಿದಾಯಕ ರಾಯಭಾರಿಗಳು ಘೋರವಾಗಿ ಅಳುತ್ತಿದ್ದಾರೆ.” ಶಾಂತಿಯನ್ನು ತರಲಿಕ್ಕಾಗಿ ಪ್ರಯತ್ನಿಸುತ್ತಾ, ಲೋಕದ ಒಂದು ರಾಜಧಾನಿಯಿಂದ ಇನ್ನೊಂದು ರಾಜಧಾನಿಗೆ ಉದ್ವೇಗದಿಂದ ಓಟ ಕೀಳುತ್ತಿರುವ ಜನರ ಸಂಬಂಧದಲ್ಲಿ ಇದೆಷ್ಟು ಸತ್ಯ! ಎಷ್ಟು ನಿರರ್ಥಕ! ಅದೇಕೆ? ಏಕೆಂದರೆ ಅವರು ಲೋಕದ ರೋಗಗಳ ಮೂಲಕಾರಣಗಳೊಂದಿಗೆ ಹೆಣಗಾಡುವ ಬದಲಿಗೆ ರೋಗಸೂಚನೆಗಳೊಂದಿಗೆ ಹೆಣಗಾಡುತ್ತಾರೆ. ಪ್ರಥಮವಾಗಿ, ಅಪೊಸ್ತಲ ಪೌಲನು ಯಾರನ್ನು “ಈ ಪ್ರಪಂಚದ ದೇವರು” ಎಂದು ವರ್ಣಿಸಿದನೊ ಆ ಸೈತಾನನ ಅಸ್ತಿತ್ವಕ್ಕೆ ಅವರು ಕುರುಡರಾಗಿದ್ದಾರೆ. (2 ಕೊರಿಂಥ 4:4) ಸೈತಾನನು ಮಾನವಕುಲದಲ್ಲಿ ದುಷ್ಟತನದ ಬೀಜಗಳನ್ನು ಬಿತ್ತಿರುವುದರ ಫಲವಾಗಿ, ಅಧಿಪತಿಗಳೂ ಸೇರಿ, ಅಧಿಕಾಂಶ ಜನರು, ಈಗ ಎಫೆಸ 4:18, 19ರ, “ಅವರ ಮನಸ್ಸು ಮೊಬ್ಬಾಗಿ ಹೋಗಿದೆ, ಅವರು ತಮ್ಮ ಹೃದಯದ ಕಾಠಿಣ್ಯದ ನಿಮಿತ್ತದಿಂದಲೂ ತಮ್ಮಲ್ಲಿರುವ ಅಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ ಅನ್ಯರಾಗಿದ್ದಾರೆ. ಅವರು ತಮ್ಮ ದುಸ್ಥಿತಿಗಾಗಿ ಸ್ವಲ್ಪವೂ ಚಿಂತಿಸದೆ ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧಕೃತ್ಯಗಳನ್ನು ಅತ್ಯಾಶೆಯಿಂದ ನಡಿಸುವವರಾಗಿದ್ದಾರೆ,” ಎಂಬ ವರ್ಣನೆಯನ್ನು ಹೋಲುತ್ತಾರೆ.
5. (ಎ) ಮಾನವ ಸಂಸ್ಥೆಗಳು ಶಾಂತಿಕರ್ತರಾಗಿ ಏಕೆ ವಿಫಲಗೊಳ್ಳುತ್ತವೆ? (ಬಿ) ಕೀರ್ತನೆ 37 ಯಾವ ಸಾಂತ್ವನದ ಸಂದೇಶವನ್ನು ವ್ಯಕ್ತಪಡಿಸುತ್ತದೆ?
5 ಅಪೂರ್ಣ ಮಾನವರ ಯಾವ ಸಂಸ್ಥೆಯೂ, ಮಾನವ ಹೃದಯದಿಂದ, ಇಂದು ತೀರ ಚಾಲ್ತಿಯಲ್ಲಿರುವ ಲೋಭ, ಸ್ವಾರ್ಥ ಮತ್ತು ದ್ವೇಷಗಳನ್ನು ಬೇರುಸಹಿತ ಕಿತ್ತುಹಾಕಲಾರದು. ಪರಮಾಧಿಕಾರಿ ಕರ್ತ ಯೆಹೋವನಾದ ನಮ್ಮ ಸೃಷ್ಟಿಕರ್ತನೊಬ್ಬನೇ ಅದನ್ನು ಮಾಡಬಲ್ಲನು! ಅಲ್ಲದೆ, ಮಾನವಕುಲದಲ್ಲಿ ಅಲ್ಪಸಂಖ್ಯೆಯಲ್ಲಿರುವ ನಮ್ರ ಜನರು ಮಾತ್ರ ಆತನ ಮಾರ್ಗದರ್ಶನೆಗೆ ಅಧೀನರಾಗಬಯಸುತ್ತಾರೆ. ಇವರಿಗೂ ಲೋಕದ ದುಷ್ಟರಿಗೂ ಬರಲಿರುವ ಫಲಿತಾಂಶಗಳಲ್ಲಿನ ವ್ಯತ್ಯಾಸವನ್ನು, ಕೀರ್ತನೆ 37:9-11ರಲ್ಲಿ ಕೊಡಲಾಗಿದೆ: “ಕೆಡುಕರು ತೆಗೆದುಹಾಕಲ್ಪಡುವರು; ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು. ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; . . . ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”
6, 7. ಲೋಕ ಧರ್ಮಗಳ ಯಾವ ದಾಖಲೆಯು, ಶಾಂತಿ ಸಂದೇಶವಾಹಕರಾಗಿರುವುದರಲ್ಲಿ ಅವು ವಿಫಲಗೊಂಡಿವೆಯೆಂದು ತೋರಿಸುತ್ತದೆ?
6 ಹಾಗಾದರೆ ಈ ಬಾಧೆಪಡುತ್ತಿರುವ ಲೋಕದ ಧರ್ಮಗಳ ಮಧ್ಯೆ ಶಾಂತಿಯ ಸಂದೇಶವಾಹಕರನ್ನು ಕಾಣಬಹುದೊ? ಧರ್ಮಗಳು ಮಾಡಿರುವ ಇಂದಿನ ವರೆಗಿನ ದಾಖಲೆಯೇನು? ಧರ್ಮವು ಶತಮಾನಗಳಿಂದಲೂ ಹೆಚ್ಚಿನ ರಕ್ತಪಾತದಲ್ಲಿ ಭಾಗಿಯಾಗಿದೆ, ಹೌದು, ಪ್ರೇರೇಪಕವೂ ಆಗಿದೆಯೆಂದು ಇತಿಹಾಸವು ತಿಳಿಸುತ್ತದೆ. ಉದಾಹರಣೆಗೆ, ಆಗಸ್ಟ್ 30, 1995ನೆಯ ಕ್ರಿಸ್ಟ್ಯನ್ ಸೆಂಚುರಿ ಸಾಪ್ತಾಹಿಕವು, ಹಿಂದಿನ ಯುಗೊಸ್ಲಾವಿಯದಲ್ಲಾದ ಸಂಕ್ಷೋಭೆಯ ಕುರಿತು ವರದಿಮಾಡುತ್ತ ಹೇಳಿದ್ದು: “ಸರ್ಬ್ ಜನರ ವಶವಾಗಿರುವ ಬಾಸ್ನಿಯದಲ್ಲಿ, ಸ್ವಯಂ ಆರೋಪಿತ ಪಾರ್ಲಿಮೆಂಟಿನಲ್ಲಿ ಪಾದ್ರಿಗಳು ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುವುದಲ್ಲದೆ, ಕದನಗಳಿಗೆ ಮೊದಲಾಗಿ ಸೈನ್ಯಗಳನ್ನು ಮತ್ತು ಶಸ್ತ್ರಗಳನ್ನು ಆಶೀರ್ವದಿಸುವರೆ ರಣರಂಗದಲ್ಲಿಯೂ ಮುಂದಿದ್ದಾರೆ.”
7 ಆಫ್ರಿಕದಲ್ಲಿ ಕ್ರೈಸ್ತಪ್ರಪಂಚವು ನಡೆಸಿರುವ ಮಿಷನೆರಿ ಕೆಲಸವು, ಇದಕ್ಕಿಂತ ಉತ್ತಮವಾದ ಪರಿಣಾಮವನ್ನು ತಂದಿರುವುದಿಲ್ಲ. ಇದು, 80 ಪ್ರತಿಶತ ಕ್ಯಾಥೊಲಿಕ್ ಎಂದು ಪ್ರತೀತಿಯಿರುವ ರುವಾಂಡದಲ್ಲಿ ಸುಚಿತ್ರಿತವಾಗಿತ್ತು. ಜುಲೈ 7, 1995ರ ದ ನ್ಯೂ ಯಾರ್ಕ್ ಟೈಮ್ಸ್ ವರದಿಸಿದ್ದು: “ಲೀಓನ್ಸ್ [ಫ್ರಾನ್ಸ್]ನಲ್ಲಿ ಪ್ರಕಟವಾಗುವ ಉದಾರಾಭಿಪ್ರಾಯದ ಲೌಕಿಕ ಕ್ಯಾಥೊಲಿಕ್ ಪತ್ರಿಕೆಯೊಂದು, ಕಳೆದ ವರ್ಷ ರುವಾಂಡದಲ್ಲಿ ನಡೆದ ಹತ್ಯೆಗಳಲ್ಲಿ, ಕೊಂದರು ಅಥವಾ ಕೊಲ್ಲಲು ಪ್ರೋತ್ಸಾಹಿಸಿದರು ಎಂದು ಪತ್ರಿಕೆಯು ಹೇಳಿದ, ಇನ್ನೂ 27 ಜನ ರುವಾಂಡದ ಪಾದ್ರಿಗಳನ್ನೂ ನಾಲ್ಕು ಮಂದಿ ನನ್ಗಳನ್ನೂ ಗುರುತಿಸಲು ಯೋಜಿಸಿದೆ.” ಆಫ್ರಿಕನ್ ರೈಟ್ಸ್ ಎಂಬ ಲಂಡನಿನಲ್ಲಿನ ಮಾನವ ಹಕ್ಕು ಸಂಸ್ಥೆಯು ಈ ಹೇಳಿಕೆ ಕೊಟ್ಟಿತ್ತು: “ಮೌನಕ್ಕಿಂತಲೂ ಹೆಚ್ಚಾಗಿ, ಚರ್ಚುಗಳು ಜನಾಂಗ ಹತ್ಯೆಯಲ್ಲಿ ತಮ್ಮ ಕೆಲವು ಮಂದಿ ಪಾದ್ರಿಗಳ, ಪಾಸ್ಟರ್ಗಳ ಮತ್ತು ನನ್ಗಳ ಕ್ರಿಯಾಶೀಲ ಭಾಗಿತ್ವಕ್ಕೆ ಉತ್ತರಕೊಡಬೇಕಾಗಿದೆ.” ಯೆಹೋವನ ನಿಜ ಸಂದೇಶವಾಹಕನಾಗಿದ್ದ ಯೆರೆಮೀಯನು, ಇಸ್ರಾಯೇಲಿನ ಪ್ರಭುಗಳು, ಯಾಜಕರು ಮತ್ತು ಪ್ರವಾದಿಗಳೊಂದಿಗೆ ಅದರ “ನಾಚಿಕೆ”ಯನ್ನು ವರ್ಣಿಸಿ, “ಇದಲ್ಲದೆ ನಿರ್ದೋಷಿಗಳಾದ ದರಿದ್ರರ ಪ್ರಾಣರಕ್ತವು ನಿನ್ನ ನೆರಿಗೆಯಲ್ಲಿ ಅಂಟಿಕೊಂಡಿದ,” ಎಂದು ಕೂಡಿಸಿದಾಗ ಇಸ್ರಾಯೇಲಿನಲ್ಲಿದ್ದ ಪರಿಸ್ಥಿತಿಗೆ ಇದು ಹೋಲುತ್ತದೆ.—ಯೆರೆಮೀಯ 2:26, 34.
8. ಯೆರೆಮೀಯನು ಶಾಂತಿಯ ಸಂದೇಶವಾಹಕನಾಗಿದ್ದನೆಂದು ಏಕೆ ಹೇಳಬಹುದು?
8 ಯೆರೆಮೀಯನನ್ನು ಅನೇಕ ವೇಳೆ ದುರ್ಗತಿಯ ಪ್ರವಾದಿಯೆಂದು ಕರೆಯಲಾಗಿದೆ. ಆದರೆ ಅವನನ್ನು ದೇವರ ಶಾಂತಿಯ ಸಂದೇಶವಾಹಕನೆಂದೂ ಕರೆಯಸಾಧ್ಯವಿದೆ. ಅವನಿಗಿಂತ ಮೊದಲಾಗಿ, ಯೆಶಾಯನು ಶಾಂತಿಯನ್ನು ಎಷ್ಟು ಬಾರಿ ಸೂಚಿಸಿದ್ದನೊ ಅಷ್ಟು ಬಾರಿ ಇವನೂ ಸೂಚಿಸಿದನು. ಯೆಹೋವನು ಯೆರೆಮೀಯನನ್ನು, “ಈ ಪಟ್ಟಣವು ಕಟ್ಟಿದಂದಿನಿಂದ ಇಂದಿನ ವರೆಗೂ ನನ್ನ ಕೋಪರೋಷಗಳಿಗೆ ಆಸ್ಪದವಾಗಿದೆ. ಅರಸರು, ಪ್ರಧಾನರು, ಯಾಜಕರು, ಪ್ರವಾದಿಗಳು, ಯೆಹೂದದ ಪ್ರಜೆಗಳು, ಯೆರೂಸಲೇಮಿನ ನಿವಾಸಿಗಳು, ಅಂತು ಎಲ್ಲಾ ಇಸ್ರಾಯೇಲ್ಯರೂ ಯೆಹೂದ್ಯರೂ ನನ್ನನ್ನು ರೇಗಿಸತಕ್ಕ ಅಧರ್ಮವನ್ನು ತುಂಬಾ ಮಾಡಿದ್ದರಿಂದ ನಾನು ಈ ಪಟ್ಟಣವನ್ನು ನನ್ನ ಸನ್ನಿಧಿಯಿಂದ ತೊಲಗಿಸಬೇಕಾಗಿ ಬಂತು” ಎಂದು ಹೇಳುತ್ತ, ಯೆರೂಸಲೇಮಿನ ಮೇಲೆ ದಂಡನೆಯನ್ನು ಸಾರಲು ಉಪಯೋಗಿಸಿದನು. (ಯೆರೆಮೀಯ 32:31, 32) ಇದು ಇಂದು ಪ್ರಭುಗಳ ಮತ್ತು ಕ್ರೈಸ್ತಪ್ರಪಂಚದ ಪುರೋಹಿತರ ಮೇಲೆ ಯೆಹೋವನ ತೀರ್ಪನ್ನು ಮುನ್ಸೂಚಿಸಿತು. ನಿಜ ಶಾಂತಿಯು ನೆಲೆಸಬೇಕಾದರೆ, ದುಷ್ಟತ್ವ ಮತ್ತು ಹಿಂಸಾಚಾರದ ಈ ಪ್ರೇರೇಪಕರು ತೊಲಗಿಸಲ್ಪಡಬೇಕು! ಅವರು ನಿಶ್ಚಯವಾಗಿಯೂ ಶಾಂತಿಯ ಸಂದೇಶವಾಹಕರಲ್ಲ.
ವಿಶ್ವ ಸಂಸ್ಥೆ ಶಾಂತಿಕರ್ತನಾಗಿ?
9. ವಿಶ್ವ ಸಂಸ್ಥೆಯು, ತಾನು ಸಂದೇಶವಾಹಕನೆಂದು ಹೇಗೆ ವಾದಿಸಿದೆ?
9 ವಿಶ್ವ ಸಂಸ್ಥೆಯು ನಿಜ ಶಾಂತಿಯ ಸಂದೇಶವಾಹಕನಾಗಲಾರದೊ? ಎಷ್ಟೆಂದರೂ, ಹಿರೊಶೀಮವನ್ನು ಪರಮಾಣು ಬಾಂಬು ಧ್ವಂಸಗೊಳಿಸುವುದಕ್ಕೆ ಕೇವಲ 41 ದಿನಗಳಿಗೆ ಮುಂಚಿತವಾಗಿ, ಜೂನ್ 1945ರಲ್ಲಿ ಮಂಡಿಸಿದ ಅದರ ಸನ್ನದಿನ ಪೀಠಿಕಾ ಭಾಗವು, ಅದರ ಉದ್ದೇಶವು “ಮುಂಬರುವ ಸಂತತಿಗಳನ್ನು ಯುದ್ಧಪೀಡೆಯಿಂದ ರಕ್ಷಿಸುವುದೇ,” ಎಂದು ಹೇಳಿತು. ವಿಶ್ವ ಸಂಸ್ಥೆಯ 50 ಭಾವೀ ಸದಸ್ಯರು, “ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಲು [ತಮ್ಮ] ಶಕ್ತಿಯನ್ನು ಏಕೀಕರಿಸ”ಬೇಕಾಗಿತ್ತು. ಇಂದು ವಿಶ್ವ ಸಂಸ್ಥೆಯಲ್ಲಿ 185 ಸದಸ್ಯ ರಾಷ್ಟ್ರಗಳಿದ್ದು, ಅವೆಲ್ಲವೂ ಅದೇ ಉದ್ದೇಶಕ್ಕಾಗಿ ಅರ್ಪಿಸಿಕೊಂಡಿವೆ ಎಂದು ಭಾವಿಸಲಾಗುತ್ತದೆ.
10, 11. (ಎ) ಧಾರ್ಮಿಕ ನಾಯಕರು ವಿಶ್ವ ಸಂಸ್ಥೆಗೆ ತಮ್ಮ ಬೆಂಬಲವನ್ನು ಹೇಗೆ ಹೇಳಿ ತೋರಿಸಿದ್ದಾರೆ? (ಬಿ) ಪೋಪರು “ದೇವರ ರಾಜ್ಯದ ಸುವಾರ್ತೆ”ಯನ್ನು ಹೇಗೆ ತಪ್ಪಾಗಿ ಪ್ರತಿನಿಧಿಸಿದ್ದಾರೆ?
10 ಸಂದ ವರುಷಗಳಲ್ಲೆಲ್ಲ ವಿಶ್ವ ಸಂಸ್ಥೆಯನ್ನು, ವಿಶೇಷವಾಗಿ ಧಾರ್ಮಿಕ ನಾಯಕರು ಜೋರಾಗಿ ಪ್ರಶಂಸಿಸಿದ್ದಾರೆ. ಎಪ್ರಿಲ್ 11, 1963ರಲ್ಲಿ XXIIIನೆಯ ಪೋಪ್ ಜಾನ್, “ಪಾಕೆಮ್ ಇನ್ ಟೆರಿಸ್” (ಭೂಮಿಯ ಮೇಲೆ ಶಾಂತಿ) ಎಂಬ ಶಿರೋನಾಮದ ತಮ್ಮ ನಿರೂಪಕ್ಕೆ ಸಹಿಹಾಕಿದರು. ಅದರಲ್ಲಿ ಅವರು ಹೇಳಿದ್ದು: “ವಿಶ್ವ ಸಂಸ್ಥೆಯು ಅದರ ರಚನೆ ಮತ್ತು ಸಂಪನ್ಮೂಲಗಳಲ್ಲಿ, ಅದರ ಕೆಲಸಗಳ ಬೃಹತ್ತ್ವ ಮತ್ತು ಘನತೆಗೆ ಸದಾ ಹೆಚ್ಚು ಯೋಗ್ಯತೆಯುಳ್ಳದ್ದಾಗಿರಲಿ ಎಂಬುದು ನಮ್ಮ ಶ್ರದ್ಧಾಪೂರ್ವಕವಾದ ಬಯಕೆ.” ತರುವಾಯ, ಜೂನ್ 1965ರಲ್ಲಿ, ಲೋಕದ ಅರ್ಧಾಂಶ ಜನರನ್ನು ಪ್ರತಿನಿಧಿಸುತ್ತಿದ್ದೇವೆಂದು ಹೇಳಿಕೊಂಡ ಧಾರ್ಮಿಕ ನೇತಾರರು, ವಿಶ್ವ ಸಂಸ್ಥೆಯ 20ನೆಯ ಹುಟ್ಟುಹಬ್ಬವನ್ನು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಆಚರಿಸಿದರು. ಅಲ್ಲದೆ 1965ರಲ್ಲಿ, VIನೆಯ ಪೋಪ್ ಪೌಲ್, ವಿಶ್ವ ಸಂಸ್ಥೆಗೆ ಕೊಟ್ಟ ತಮ್ಮ ಭೇಟಿಯಲ್ಲಿ ಅದನ್ನು, “ಸಾಮರಸ್ಯ ಮತ್ತು ಶಾಂತಿಯ ಕೊನೆಯ ನಿರೀಕ್ಷೆ”ಯೆಂದು ವರ್ಣಿಸಿದರು. 1986ರಲ್ಲಿ, IIನೆಯ ಪೋಪ್ ಜಾನ್ ಪೌಲ್, ವಿಶ್ವ ಸಂಸ್ಥೆಯ ಅಂತಾರಾಷ್ಟ್ರೀಯ ಶಾಂತಿ ವರ್ಷವನ್ನು ಪ್ರವರ್ಧಿಸುವುದರಲ್ಲಿ ಸಹಕಾರವನ್ನಿತ್ತರು.
11 ಅಕ್ಟೋಬರ್ 1995ರ ತಮ್ಮ ಭೇಟಿಯಲ್ಲಿ, ಪುನಃ ಪೋಪರು ಪ್ರಕಟಿಸಿದ್ದು: “ಇಂದು ನಾವು ದೇವರ ರಾಜ್ಯದ ಸುವಾರ್ತೆಯನ್ನು ಆಚರಿಸುತ್ತಿದ್ದೇವೆ.” ಆದರೆ ಅವರು ನಿಜವಾಗಿಯೂ ರಾಜ್ಯ ಸುವಾರ್ತೆಯ ದೇವರ ಸಂದೇಶವಾಹಕರಾಗಿದ್ದರೊ? ಲೋಕ ಸಮಸ್ಯೆಗಳ ಕುರಿತು ಮಾತಾಡುತ್ತಾ, ಅವರು ಮುಂದುವರಿಸಿದ್ದು: “ನಾವು ಈ ಭಾರೀ ಪಂಥಾಹ್ವಾನಗಳನ್ನು ಎದುರಿಸುವಾಗ, ವಿಶ್ವ ಸಂಸ್ಥೆಯ ಪಾತ್ರವನ್ನು ನಾವು ಹೇಗೆ ಅಂಗೀಕರಿಸದೆ ಇರಬಲ್ಲೆವು?” ದೇವರ ರಾಜ್ಯದ ಬದಲಿಗೆ ವಿಶ್ವ ಸಂಸ್ಥೆಯು ಪೋಪರ ಆಯ್ಕೆಯಾಗಿದೆ.
‘ಘೋರವಾಗಿ ಅಳುವುದಕ್ಕೆ’ ಕಾರಣಗಳು
12, 13. (ಎ) ಯೆರೆಮೀಯ 6:14ರಲ್ಲಿ ವರ್ಣಿಸಿದ ವಿಧದಲ್ಲಿ ವಿಶ್ವ ಸಂಸ್ಥೆಯು ಹೇಗೆ ವರ್ತಿಸಿದೆ? (ಬಿ) ಯೆಶಾಯ 33:7ರ ವರ್ಣನೆಯಲ್ಲಿ ವಿಶ್ವ ಸಂಸ್ಥೆಯ ನಾಯಕತ್ವವನ್ನು ಏಕೆ ಸೇರಿಸಲಾಗುತ್ತದೆ?
12 ವಿಶ್ವ ಸಂಸ್ಥೆಯ 50ನೆಯ ವಾರ್ಷಿಕೋತ್ಸವವು, “ಭೂಮಿಯ ಮೇಲಿನ ಶಾಂತಿ”ಗೆ ಯಾವುದೇ ನಿಜ ಪ್ರತೀಕ್ಷೆಯನ್ನು ತಿಳಿಯಪಡಿಸುವುದರಲ್ಲಿ ನಿಷ್ಫಲಗೊಂಡಿತು. ಕೆನಡದ ದ ಟೊರಾಂಟೊ ಸ್ಟಾರ್ ಪತ್ರಿಕೆಯ ಒಬ್ಬ ಲೇಖಕನಿಂದ ಒಂದು ಕಾರಣವು ಸೂಚಿಸಲ್ಪಟ್ಟಿತು. ಅವನು ಬರೆದುದು: “ವಿಶ್ವ ಸಂಸ್ಥೆಯು ಹಲ್ಲಿಲ್ಲದ ಸಿಂಹ. ಅದು ಮಾನವ ಕ್ರೌರ್ಯವನ್ನು ಮುಕಾಬಿಲೆ ಮಾಡುವಾಗ ಗರ್ಜಿಸುತ್ತದೆ. ಆದರೆ ಅದಕ್ಕೆ ಕಚ್ಚಸಾಧ್ಯವಾಗುವ ಮೊದಲು ಅದರ ಸದಸ್ಯರು ಕೃತಕ ದಂತಪಂಕ್ತಿಯನ್ನು ಅದರ ಬಾಯೊಳಗೆ ಹಾಕಲು ಅದಕ್ಕೆ ಕಾಯಬೇಕಾಗುತ್ತದೆ.” ಹೆಚ್ಚಿನ ಸಲ, ಅದರ ಕಡಿತ ತೀರ ಕೊಂಚವೂ ತೀರ ತಡವಾಗಿಯೂ ಬಂದಿದೆ. ಈಗಿನ ಲೋಕ ವ್ಯವಸ್ಥೆಯ, ಅದರಲ್ಲೂ ಕ್ರೈಸ್ತಪ್ರಪಂಚದ ಶಾಂತಿ ಸಂದೇಶವಾಹಕರು, ಯೆರೆಮೀಯ 6:14 (NW)ರ, “ಶಾಂತಿಯಿಲ್ಲದಿದ್ದರೂ, ‘ಶಾಂತಿಯಿದೆ! ಶಾಂತಿಯಿದೆ!’ ಎಂದು ಹೇಳುತ್ತಾ, ಅವರು ನನ್ನ ಜನರ ಗಾಯವನ್ನು ಮೇಲೆ ಮೇಲೆ ವಾಸಿಮಾಡಲು ಪ್ರಯತ್ನಿಸುತ್ತಾರೆ,” ಎಂಬ ಮಾತುಗಳನ್ನು ಪ್ರತಿಧ್ವನಿಸಿದ್ದಾರೆ.
13 ವಿಶ್ವ ಸಂಸ್ಥೆಯ ಅನುಕ್ರಮವಾಗಿ ಬಂದ ಪ್ರಧಾನ ಸಚಿವರು, ವಿಶ್ವ ಸಂಸ್ಥೆಯು ಸಫಲಗೊಳ್ಳುವಂತೆ ಯಥಾರ್ಥವಾಗಿ ಶ್ರಮಿಸಿದ್ದಾರೆ ನಿಶ್ಚಯ. ಆದರೆ ಯುದ್ಧವನ್ನು ಅಡಗಿಸುವುದು, ಪಾಲಿಸಿಯನ್ನು ರಚಿಸುವುದು, ಹಣಕಾಸನ್ನು ನಿರ್ವಹಿಸುವುದು—ಇವುಗಳ ವಿಷಯದಲ್ಲಿ ವಿವಿಧೋದ್ದೇಶಗಳಿರುವ 185 ಮಂದಿ ಸದಸ್ಯರ ಮಧ್ಯೆ ಸತತವಾಗಿ ನಡೆಯುವ ವಾಗ್ವಾದಗಳು, ಯಶಸ್ಸಿನ ಪ್ರತೀಕ್ಷೆಗಳನ್ನು ಕಡಿಮೆಮಾಡಿವೆ. 1995ರ ತನ್ನ ವಾರ್ಷಿಕ ವರದಿಯಲ್ಲಿ ಆಗಿನ ಪ್ರಧಾನ ಸಚಿವರು, “ರಾಷ್ಟ್ರಗಳು ಇಡೀ ಮಾನವಕುಲದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯ ಕಡೆಗೆ ಕೂಡಿ ಕೆಲಸಮಾಡಲಿಕ್ಕಾಗಿ” ದಾರಿ ತೆರೆಯಲು, “ಭೌಗೋಳಿಕ ನ್ಯೂಕ್ಲಿಯರ್ ವಿಪತ್ತಿನ” ಕಡಮೆಯಾಗುತ್ತಿರುವ “ಭಯಂಕರ ಬಿಂಬ”ದ ಕುರಿತು ಬರೆದರು. ಆದರೆ ಅವರು ಕೂಡಿಸಿ ಹೇಳಿದ್ದು: “ದುಃಖಕರವಾಗಿ, ಈ ಆಶಾವಾದದ ನಿರೀಕ್ಷಣೆಗಳನ್ನು, ಕಳೆದ ಕೆಲವು ವರುಷಗಳ ಲೋಕ ವಿಚಾರಗಳ ದಾಖಲೆಯು ಅಧಿಕಾಂಶ ಸುಳ್ಳಾಗಿಸಿದೆ.” ನಿಜವಾಗಿಯೂ, ಭಾವೀ ಶಾಂತಿ ಸಂದೇಶವಾಹಕರು ‘ಘೋರವಾಗಿ ಅಳುತ್ತಿದ್ದಾರೆ.’
14. (ಎ) ವಿಶ್ವ ಸಂಸ್ಥೆಯು ಹಣಕಾಸಿನ ವಿಷಯದಲ್ಲಿ ಮತ್ತು ನೈತಿಕವಾಗಿ—ಇವೆರಡು ವಿಧದಲ್ಲೂ ದಿವಾಳಿಯಾಗಿದೆ ಎಂದು ಏಕೆ ಹೇಳಸಾಧ್ಯವಿದೆ? (ಬಿ) ಯೆರೆಮೀಯ 8:15 ಹೇಗೆ ನೆರವೇರುತ್ತಿದೆ?
14 ಕ್ಯಾಲಿಫಾರ್ನಿಯದ ದಿ ಆರೆಂಜ್ ಕೌಂಟಿ ರೆಜಿಸ್ಟರ್ನಲ್ಲಿನ ಒಂದು ಶಿರೋನಾಮವು, “ವಿಶ್ವ ಸಂಸ್ಥೆಯು ಹಣಕಾಸಿನಲ್ಲಿಯೂ ನೈತಿಕವಾಗಿಯೂ ದಿವಾಳಿಯಾಗಿದೆ,” ಎಂದು ಹೇಳಿತು. 1945ರಿಂದ 1990ರ ಮಧ್ಯೆ ನಡೆದ 80ಕ್ಕೂ ಹೆಚ್ಚು ಯುದ್ಧಗಳು, ಮೂರು ಕೋಟಿಗೂ ಹೆಚ್ಚು ಜೀವಗಳನ್ನು ಆಹುತಿತೆಗೆದುಕೊಂಡವು ಎಂದು ಲೇಖನವು ಹೇಳಿತು. ಅಕ್ಟೋಬರ್ 1995ರ ರೀಡರ್ಸ್ ಡೈಜೆಸ್ಟ್ ಸಂಚಿಕೆಯಲ್ಲಿ, “ವಿಶ್ವ ಸಂಸ್ಥೆಯ ಮಿಲಿಟರಿ ಕಾರ್ಯಭಾರಗಳು, ‘ಅನರ್ಹ ಸೇನಾಧಿಕಾರಿಗಳು, ಅಶಿಸ್ತಿನ ಸೈನಿಕರು, ಆಕ್ರಮಣಕಾರರೊಂದಿಗೆ ಒಕ್ಕೂಟಗಳು, ಅತಿ ಪಾಶವೀಯತೆಗಳನ್ನು ನಿಲ್ಲಿಸುವುದರಲ್ಲಿ ವೈಫಲ್ಯ ಮತ್ತು ಆಗಾಗ ಭಯಂಕರತೆಗೆ ಮಾಡಿದ ಸಹಾಯವನ್ನು’ ಸಹ ವರ್ಣಿಸಿ” ಬರೆದ ಒಬ್ಬ ಲೇಖಕನನ್ನು ಅದು ಉಲ್ಲೇಖಿಸಿತು. ಇದಲ್ಲದೆ, “‘ಉಪಯೋಗಿಸದೆ ವ್ಯರ್ಥವಾದ ವಸ್ತು, ವಂಚನೆ ಮತ್ತು ಅಪಪ್ರಯೋಗವು ಅತಿ ಹೇರಳವಾಗಿದೆ.’” “ವಿಶ್ವ ಸಂಸ್ಥೆ, 50ನೆಯ ವಯಸ್ಸಿನಲ್ಲಿ,” ಎಂಬ ಶಿರೋನಾಮದ ವಿಭಾಗದಲ್ಲಿ ದ ನ್ಯೂ ಯಾರ್ಕ್ ಟೈಮ್ಸ್, “ದುರ್ನಿರ್ವಹಣೆ ಮತ್ತು ದುಂದುವ್ಯಯ ವಿಶ್ವ ಸಂಸ್ಥೆಯ ಅತ್ಯುತ್ತಮ ಉದ್ದೇಶಗಳನ್ನು ಸವೆಯಿಸುತ್ತದೆ,” ಎಂಬ ಶೀರ್ಷಿಕೆಯನ್ನು ಕೊಟ್ಟಿತು. ಇಂಗ್ಲೆಂಡ್ನ ಲಂಡನ್ನ ದ ಟೈಮ್ಸ್ ಪತ್ರಿಕೆಯು, ಒಂದು ಲೇಖನದ ತಲೆಬರಹವಾಗಿ, “ಐವತ್ತರಲ್ಲಿ ದೌರ್ಬಲ್ಯ—ತಕ್ಕ ಆರೋಗ್ಯಕ್ಕೆ ಹಿಂದಿರುಗಲು ವಿಶ್ವ ಸಂಸ್ಥೆಗೆ ಫಿಟ್ನೆಸ್ ಕಾರ್ಯಕ್ರಮ ಅಗತ್ಯ” ಎಂದು ಹೇಳಿತು. ವಾಸ್ತವಿಕವಾಗಿ, ನಾವು ಯೆರೆಮೀಯ 8ನೆಯ ಅಧ್ಯಾಯದ 15ನೆಯ ವಚನದಲ್ಲಿ ಓದುವಂತೆ ಇದಿದೆ: “ನಾವು ಸುಖವನ್ನು ನಿರೀಕ್ಷಿಸಿದೆವು, ಯಾವ ಮೇಲೂ ಆಗಲಿಲ್ಲ; ಕ್ಷೇಮಕಾಲವನ್ನು ಎದುರುನೋಡಿದೆವು, ಹಾ, ಅಂಜಿಕೆಯೇ!” ಮತ್ತು ನ್ಯೂಕ್ಲಿಯರ್ ಸರ್ವನಾಶದ ಬೆದರಿಕೆ ಇನ್ನೂ ಮಾನವಕುಲದ ಮೇಲಿದೆ. ವಿಶ್ವ ಸಂಸ್ಥೆಯು ಮಾನವಕುಲಕ್ಕೆ ಅಗತ್ಯವಾಗಿರುವ ಶಾಂತಿ ಸಂದೇಶವಾಹಕನಲ್ಲವೆಂಬುದು ಸತ್ಯ.
15. ಪುರಾತನದ ಬಾಬೆಲ್ ಮತ್ತು ಅದರ ಧಾರ್ಮಿಕ ಸಂತಾನಗಳು, ಹೇಗೆ ನಾಶಕಾರಕವೂ ಮಂಪರ ಬರಿಸುವಂತಹವುಗಳೂ ಆಗಿ ಪರಿಣಮಿಸಿವೆ?
15 ಇದೆಲ್ಲದರ ಫಲಿತಾಂಶವೇನಾಗಿರುವುದು? ಯೆಹೋವನ ಪ್ರವಾದನಾ ವಾಕ್ಯವು ಯಾವ ಸಂದೇಹಕ್ಕೂ ಎಡೆಗೊಡುವುದಿಲ್ಲ. ಪ್ರಥಮವಾಗಿ, ವಿಶ್ವ ಸಂಸ್ಥೆಯೊಂದಿಗೆ ಎಷ್ಟೋ ಬಾರಿ ವಿಪರೀತವಾಗಿ ಸ್ನೇಹದಿಂದಿದ್ದ ಲೋಕದ ಸುಳ್ಳು ಧರ್ಮಗಳಿಗೆ ಯಾವ ಭವಿಷ್ಯವಿದೆ? ಅವು ಪುರಾತನಕಾಲದ ಬಾಬೆಲೆಂಬ ಒಂದು ವಿಗ್ರಹಾರಾಧಕ ಉಗಮಸ್ಥಾನದ ಸಂತಾನಗಳಾಗಿವೆ. ಯೋಗ್ಯವಾಗಿಯೇ, ಪ್ರಕಟನೆ 17:5ರಲ್ಲಿ ಅವು, “ಮಹಾ ಬಾಬೆಲ್, ಭೂಮಿಯಲ್ಲಿರುವ ಜಾರಸ್ತ್ರೀಯರ ಮತ್ತು ಅಸಹ್ಯವಾದ ವಸ್ತುಗಳ ತಾಯಿ” ಎಂದು ವರ್ಣಿಸಲ್ಪಟ್ಟಿವೆ. ಈ ಕಪಟಾಚಾರದ ಸಂಘಟಿತ ಸಂಸ್ಥೆಯ ನಾಶನವನ್ನು ಯೆರೆಮೀಯನು ವರ್ಣಿಸಿದನು. ವೇಶ್ಯೆಗೆ ಸದೃಶವಾಗಿ, ಅವು ಭೂಮಿಯ ರಾಜಕಾರಣಿಗಳನ್ನು ಭ್ರಷ್ಟಗೊಳಿಸಿ, ವಿಶ್ವ ಸಂಸ್ಥೆಯ ಮುಖಸ್ತುತಿ ಮಾಡಿ, ಅದರ ಸದಸ್ಯ ರಾಜಕೀಯ ಶಕ್ತಿಗಳೊಂದಿಗೆ ನಿಷಿದ್ಧ ಸಂಬಂಧವನ್ನು ಇಟ್ಟುಕೊಂಡಿವೆ. ಇತಿಹಾಸದ ಯುದ್ಧಗಳಲ್ಲಿ ಅವು ದೊಡ್ಡ ಪಾಲುದಾರರಾಗಿದ್ದವು. ಭಾರತದ ಧಾರ್ಮಿಕ ಯುದ್ಧದ ಸಂಬಂಧದಲ್ಲಿ ಒಬ್ಬ ವ್ಯಾಖ್ಯಾನಕಾರನು ಹೇಳಿದ್ದು: “ಕಾರ್ಲ್ ಮಾಕ್ಸ್ ಧರ್ಮವನ್ನು ಸೂಚಿಸಿ, ಅದು ಜನರ ಆಫೀಮೆಂದು ಹೇಳಿದನು. ಆದರೆ ಆ ಹೇಳಿಕೆ ಅಷ್ಟೊಂದು ಸರಿಯಾಗಸಾಧ್ಯವಿಲ್ಲ. ಏಕೆಂದರೆ ಆಫೀಮು ಶಾಮಕ ವಸ್ತು, ಅದು ಜನರಿಗೆ ಮಂಪರ ಬರಿಸುತ್ತದೆ. ಇಲ್ಲ, ಧರ್ಮವು ಹೆಚ್ಚು ಕ್ರ್ಯಾಕ್ ಕೊಕೇನ್ನಂತಿದೆ. ಇದು ಬಿರುಸಾದ ಹಿಂಸಾಚಾರವನ್ನು ಬಿಡುಗಡೆಮಾಡುವ, ಅತಿ ನಾಶಕರವಾದ ಶಕ್ತಿಯಾಗಿದೆ.” ಆದರೆ ಆ ಲೇಖಕನ ಅಭಿಪ್ರಾಯವೂ ಅಷ್ಟೊಂದು ಸರಿಯಲ್ಲ. ಸುಳ್ಳು ಧರ್ಮವು ಮಂಪರ ಬರಿಸುವಂತಹದ್ದು ಮತ್ತು ನಾಶಕಾರಕವಾದದ್ದು—ಇವೆರಡೂ ಆಗಿದೆ.
16. ಪ್ರಾಮಾಣಿಕ ಹೃದಯಿಗಳು ಈಗ ಮಹಾ ಬಾಬೆಲಿನಿಂದ ಏಕೆ ಪಲಾಯನಮಾಡಬೇಕು? (ಪ್ರಕಟನೆ 18:4, 5ನ್ನು ಸಹ ನೋಡಿ.)
16 ಹಾಗಾದರೆ ಪ್ರಾಮಾಣಿಕ ಹೃದಯದ ಜನರೇನು ಮಾಡಬೇಕು? ದೇವರ ಸಂದೇಶವಾಹಕನಾದ ಯೆರೆಮೀಯನು ನಮಗೆ ಉತ್ತರ ಕೊಡುತ್ತಾನೆ: “ನೀವು ಬಾಬೆಲಿನೊಳಗಿಂದ ಓಡಿಹೋಗಿ ನಿಮ್ಮ ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಿರಿ; . . . ಯೆಹೋವನು ಮುಯ್ಯಿತೀರಿಸುವ ಕಾಲ ಬಂದಿದೆ.” ಲಕ್ಷಗಟ್ಟಲೆ ಮಂದಿ ಮಹಾ ಬಾಬೆಲಿನ, ಅಂದರೆ ಮಿಥ್ಯಾ ಧರ್ಮದ ಲೋಕ ಸಾಮ್ರಾಜ್ಯದೊಳಗಿನಿಂದ ಪಲಾಯನ ಮಾಡಿದ್ದಾರೆಂಬುದಕ್ಕೆ ನಾವು ಹರ್ಷಿತರು. ನೀವು ಅವರಲ್ಲಿ ಒಬ್ಬರೊ? ಹಾಗಿರುವಲ್ಲಿ ಮಹಾ ಬಾಬೆಲ್ ಭೂರಾಷ್ಟ್ರಗಳ ಮೇಲೆ ಎಷ್ಟು ಪರಿಣಾಮ ಬೀರಿದೆಯೆಂದು ನೀವು ಗ್ರಹಿಸಬಲ್ಲಿರಿ: “ಲೋಕದವರೆಲ್ಲರೂ ಅದರಲ್ಲಿ ಕುಡಿದು ಮತ್ತರಾದರು; ಜನಾಂಗಗಳು ಅದರಲ್ಲಿನ ದ್ರಾಕ್ಷಾರಸವನ್ನು ಕುಡಿದು ಹುಚ್ಚಾದವು.”—ಯೆರೆಮೀಯ 51:6, 7.
17. ಮಹಾ ಬಾಬೆಲಿನ ಮೇಲೆ ಯಾವ ತೀರ್ಪು ಇನ್ನೇನು ವಿಧಿಸಲ್ಪಡಲಿಕ್ಕಿದೆ, ಮತ್ತು ಆ ಕ್ರಿಯೆಯನ್ನು ಯಾವುದು ಹಿಂಬಾಲಿಸುತ್ತದೆ?
17 ಶೀಘ್ರವೇ, ವಿಶ್ವ ಸಂಸ್ಥೆಯ “ಹುಚ್ಚು” ಸದಸ್ಯರು, ಸುಳ್ಳು ಧರ್ಮದ ಮೇಲೆ ಬೀಳುವಂತೆ ಯೆಹೋವನು ಅವರನ್ನು ತಿರುಗಿಸುವನು. ಪ್ರಕಟನೆ 17:16ರಲ್ಲಿ ಹೀಗೆ ವರ್ಣಿಸಲ್ಪಟ್ಟಿದೆ: “ಇವುಗಳಿಂದ ಸೂಚಿತರಾದವರು ಆ ಜಾರಸ್ತ್ರೀಯನ್ನು ದ್ವೇಷಿಸಿ ಅವಳನ್ನು ಗತಿಗೆಟ್ಟವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು ಅವಳನ್ನು ಬೆಂಕಿಯಿಂದ ಸುಟ್ಟುಬಿಡುವರು.” ಇದು ಮತ್ತಾಯ 24:21ರಲ್ಲಿ ಸೂಚಿಸಲ್ಪಟ್ಟಿರುವ, ಸರ್ವಶಕ್ತನಾದ ದೇವರ ಮಹಾದಿನದಲ್ಲಾಗುವ ಯುದ್ಧವಾದ ಅರ್ಮಗೆದೋನ್ನಲ್ಲಿ ಪರಮಾವಧಿಗೇರುವ ಮಹಾ ಸಂಕಟದ ಆರಂಭವನ್ನು ಗುರುತಿಸುವುದು. ಪುರಾತನ ಬಾಬೆಲಿನಂತೆ, ಮಹಾ ಬಾಬೆಲು ಯೆರೆಮೀಯ 51:13, 25ರಲ್ಲಿ ಕೊಡಲ್ಪಟ್ಟಿರುವ ತೀರ್ಪನ್ನು ಸಂಧಿಸುವುದು: “ಆಹಾ, ಬಹುಜಲ ಮಧ್ಯನಿವಾಸಿನಿಯಾದ ನಗರಿಯೇ, ಧನಭರಿತಪುರಿಯೇ, ನಿನ್ನ ಅಂತ್ಯವು ಬಂದಿದೆ, ನೀನು ಸೂರೆಮಾಡಿದ್ದು ಸಾಕು. ಯೆಹೋವನು ಇಂತೆನ್ನುತ್ತಾನೆ—ಆಹಾ, ಲೋಕವನ್ನೆಲ್ಲಾ ಹಾಳುಮಾಡುವ ನಾಶಕಪರ್ವತವೇ, ನಾನು ನಿನಗೆ ವಿರುದ್ಧನಾಗಿದ್ದೇನೆ; ನಾನು ನಿನ್ನ ಮೇಲೆ ಕೈಮಾಡಿ ನಿನ್ನನ್ನು ಜರಿಯ ಮೇಲಿಂದ ಕೆಳಕ್ಕೆ ಉರುಳಿಸುವೆನು, ಸುಟ್ಟ ಬೆಟ್ಟವನ್ನಾಗಿ ಮಾಡುವೆನು.” ಭ್ರಷ್ಟರಾದ, ಯುದ್ಧ ಹರಡಿಸುವ ರಾಷ್ಟ್ರಗಳು, ಯೆಹೋವನ ಸೇಡು ತೀರಿಸುವ ದಿನವು ಅವರ ಬೆನ್ನನ್ನೂ ಹಿಡಿಯುವಾಗ, ಸುಳ್ಳು ಧರ್ಮದ ಹಿಂದಿನಿಂದ ನಾಶಕ್ಕೆ ಹೋಗುವುವು.
18. ಯೆಶಾಯ 48:22 ಯಾವಾಗ ಮತ್ತು ಹೇಗೆ ಮುಂದಕ್ಕೆ ನೆರವೇರಲಿದೆ?
18 ದುಷ್ಟರ ಕುರಿತು 1 ಥೆಸಲೊನೀಕ 5:3ರಲ್ಲಿ ಹೀಗೆ ಹೇಳಲಾಗಿದೆ: “ಸಮಾಧಾನವಾಗಿಯೂ ನಿರ್ಭಯವಾಗಿಯೂ ಇರುತ್ತೇವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆಬರುವ ಪ್ರಕಾರ ಬರುವದು; ಅವರು ಹೇಗೂ ತಪ್ಪಿಸಿಕೊಳ್ಳಲಾರರು.” ಯೆಶಾಯನು ಇವರ ಕುರಿತು ಹೇಳಿದ್ದು: “ಇಗೋ, . . . ಸಮಾಧಾಯಕ ರಾಯಭಾರಿಗಳು ಘೋರವಾಗಿ ಅಳುತ್ತಿದ್ದಾರೆ.” (ಯೆಶಾಯ 33:7) ಹೌದು, ನಾವು ಯೆಶಾಯ 48:22ರಲ್ಲಿ ಓದುವಂತೆ: “ದುಷ್ಟರಿಗೆ ಸಮಾಧಾನವೇ ಇಲ್ಲ ಎಂದು ಯೆಹೋವನು ನುಡಿಯುತ್ತಾನೆ.” ಆದರೆ ದಿವ್ಯ ಶಾಂತಿಯ ನಿಜ ಸಂದೇಶವಾಹಕರಿಗೆ ಯಾವ ಭವಿಷ್ಯತ್ತು ಕಾದಿದೆ? ನಮ್ಮ ಮುಂದಿನ ಲೇಖನವು ತಿಳಿಸುವುದು.
ಪುನರ್ವಿಮರ್ಶೆಗೆ ಪ್ರಶ್ನೆಗಳು
◻ ದೇವರ ಪ್ರವಾದಿಗಳು ಸುಳ್ಳು ಸಂದೇಶವಾಹಕರನ್ನು ಯಾವ ಬಲವಾದ ಮಾತುಗಳಿಂದ ಬಯಲುಪಡಿಸಿದ್ದಾರೆ?
◻ ಬಾಳುವ ಶಾಂತಿಯನ್ನು ತರಲು ಪ್ರಯತ್ನಿಸುವುದರಲ್ಲಿ ಮಾನವ ಸಂಸ್ಥೆಗಳು ವಿಫಲಗೊಳ್ಳುವುದೇಕೆ?
◻ ಶಾಂತಿಯ ನಿಜ ಸಂದೇಶವಾಹಕರು ವಿಶ್ವ ಸಂಸ್ಥೆಯ ಪಕ್ಷವಾದಿಗಳಿಗಿಂತ ಹೇಗೆ ಭಿನ್ನರಾಗಿದ್ದಾರೆ?
◻ ಯೆಹೋವನ ವಾಗ್ದತ್ತ ಶಾಂತಿಯಲ್ಲಿ ಆನಂದಿಸಬೇಕಾದರೆ ನಮ್ರರು ಏನು ಮಾಡಬೇಕು?
[ಪುಟ 15 ರಲ್ಲಿರುವ ಚಿತ್ರ]
ಯೆಶಾಯ, ಯೆರೆಮೀಯ ಮತ್ತು ದಾನಿಯೇಲರು ಬರಿಯ ಮಾನವ ಶಾಂತಿ ಪ್ರಯತ್ನಗಳ ವೈಫಲ್ಯವನ್ನು ಮುಂತಿಳಿಸಿದರು
[ಪುಟ 16 ರಲ್ಲಿರುವ ಚಿತ್ರ]
“ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ.” —ಅಪೊಸ್ತಲ ಯೋಹಾನ
[ಪುಟ 17 ರಲ್ಲಿರುವ ಚಿತ್ರ]
“ಅವರ ಮನಸ್ಸು ಮೊಬ್ಬಾಗಿ ಹೋಗಿದೆ.” —ಅಪೊಸ್ತಲ ಪೌಲ