ಎಪಫ್ರ “ಕ್ರಿಸ್ತನ ನಂಬಿಗಸ್ತನಾದ ಸೇವಕನು”
ಕೊರಿಂಥ, ಎಫೆಸ, ಮತ್ತು ಫಿಲಿಪ್ಪಿಯಲ್ಲಿನ ಕ್ರೈಸ್ತ ಸಭೆಗಳನ್ನು ಸ್ಥಾಪಿಸಿದವನು ಯಾರು? ‘“ಅನ್ಯಜನರಿಗೆ ಅಪೊಸ್ತಲನಾಗಿ”ದ್ದ ಪೌಲನು’ ಎಂದು ಉತ್ತರಿಸಲು ನಿಮಗೆ ಯಾವುದೇ ಹಿಂಜರಿಕೆ ಇಲ್ಲದಿರಬಹುದು. (ರೋಮಾಪುರ 11:13) ನೀವು ಹೇಳಿದ್ದು ಸರಿ.
ಆದಾಗಲೂ, ಕೊಲೊಸ್ಸೆ, ಹಿರಿಯಾಪೊಲಿ ಮತ್ತು ಲವೊದಿಕೀಯದಲ್ಲಿನ ಸಭೆಗಳನ್ನು ಸ್ಥಾಪಿಸಿದವನು ಯಾರು? ನಮಗೆ ಖಂಡಿತವಾಗಿ ಹೇಳಲು ಸಾಧ್ಯವಿಲ್ಲದಿದ್ದರೂ, ಅವನು ಎಪಫ್ರ ಎಂಬ ಹೆಸರಿನ ಒಬ್ಬ ಪುರುಷನಾಗಿದ್ದಿರಬಹುದು. ಏನೇ ಆಗಲಿ, ಅವನನ್ನು “ಕ್ರಿಸ್ತನ ನಂಬಿಗಸ್ತನಾದ ಸೇವಕನು” ಎಂದು ಕರೆದಿರುವುದರಿಂದ, ನೀವು ಈ ಸೌವಾರ್ತಿಕನ ಕುರಿತಾಗಿ ಸ್ವಲ್ಪ ಹೆಚ್ಚನ್ನು ತಿಳಿಯಲು ಇಷ್ಟಪಡುತ್ತಿರಬಹುದು.—ಕೊಲೊಸ್ಸೆ 1:7.
ಲೈಕಸ್ ಕಣಿವೆಯ ಸೌವಾರ್ತಿಕನು
ಎಪಫ್ರ ಎಂಬ ಹೆಸರು ಎಪಫ್ರೋದೀತ ಎಂಬ ಹೆಸರಿನ ಸಂಕ್ಷಿಪ್ತನಾಮವಾಗಿದೆ. ಆದರೆ ಎಪಫ್ರನನ್ನು ಫಿಲಿಪ್ಪಿಯ ಎಪಫ್ರೋದೀತನೊಂದಿಗೆ ಗೊಂದಲಗೊಳಿಸಬಾರದು. ಎಪಫ್ರನು ಕೊಲೊಸ್ಸೆಯವನಾಗಿದ್ದನು. ಇದು ಏಷ್ಯಾ ಮೈನರ್ನಲ್ಲಿದ್ದ, ಲೈಕಸ್ ನದಿ ಕಣಿವೆಯಲ್ಲಿನ ಕ್ರೈಸ್ತ ಸಭೆಗಳ ಮೂರು ಕೇಂದ್ರಗಳಲ್ಲಿ ಒಂದಾಗಿತ್ತು. ಕೊಲೊಸ್ಸೆಯು ಲವೊದಿಕೀಯದಿಂದ ಕೇವಲ 18 ಕಿಲೊಮೀಟರ್ ದೂರದಲ್ಲಿತ್ತು ಮತ್ತು ಫ್ರುಗ್ಯದ ಪುರಾತನ ಪ್ರದೇಶದಲ್ಲಿನ ಹಿರಿಯಾಪೊಲಿನಿಂದ 19 ಕಿಲೊಮೀಟರ್ ದೂರದಲ್ಲಿ ನೆಲೆಸಿತ್ತು.
ದೇವರ ರಾಜ್ಯದ ಸುವಾರ್ತೆಯು ಫ್ರುಗ್ಯಕ್ಕೆ ಹೇಗೆ ತಲಪಿತೆಂದು ಬೈಬಲ್ ಸುಸ್ಪಷ್ಟವಾಗಿ ತಿಳಿಸುವುದಿಲ್ಲ. ಆದಾಗಲೂ, ಸಾ.ಶ. 33ರಲ್ಲಿ ಪಂಚಾಶತ್ತಮದ ದಿನದಂದು ಫ್ರುಗ್ಯದವರು ಯೆರೂಸಲೇಮಿನಲ್ಲಿ ಉಪಸ್ಥಿತರಿದ್ದರು. ಅವರಲ್ಲಿ ಕೆಲವರು ಪ್ರಾಯಶಃ ಕೊಲೊಸ್ಸೆಯಿಂದ ಬಂದಿದ್ದರು. (ಅ. ಕೃತ್ಯಗಳು 2:1, 5, 10) ಪೌಲನ ಎಫೆಸದ ಶುಶ್ರೂಷೆಯ ಸಮಯದಲ್ಲಿ (ಸುಮಾರು ಸಾ.ಶ. 52-55), ಆ ಕ್ಷೇತ್ರದಲ್ಲಿ ಕೊಡಲ್ಪಟ್ಟಂತಹ ಸಾಕ್ಷಿಯು ಎಷ್ಟು ತೀವ್ರವೂ ಪರಿಣಾಮಕಾರಿಯೂ ಆಗಿತ್ತೆಂದರೆ, ಎಫೆಸದವರು ಮಾತ್ರವಲ್ಲ, “ಆಸ್ಯಸೀಮೆಯಲ್ಲಿ ವಾಸವಾಗಿದ್ದ ಯೆಹೂದ್ಯರೂ ಗ್ರೀಕರೂ ಎಲ್ಲರೂ ಕರ್ತನ ವಾಕ್ಯವನ್ನು ಕೇಳಿದರು.” (ಅ. ಕೃತ್ಯಗಳು 19:10) ಪೌಲನು ಲೈಕಸ್ ಕಣಿವೆಯಾದ್ಯಂತ ಸುವಾರ್ತೆಯನ್ನು ಸಾರಿರಲ್ಲಿಲ್ಲವೆಂದು ತೋರುತ್ತದೆ, ಯಾಕಂದರೆ ಆ ಪ್ರದೇಶದಲ್ಲಿ ಕ್ರೈಸ್ತರಾಗಿ ಪರಿಣಮಿಸಿದವರಲ್ಲಿ ಅನೇಕರು ಅವನನ್ನು ಎಂದೂ ನೋಡಿರಲಿಲ್ಲ.—ಕೊಲೊಸ್ಸೆ 2:1.
ಪೌಲನಿಗನುಸಾರ, ಕೊಲೊಸ್ಸೆಯವರಿಗೆ “ದೇವರ ಕೃಪೆಯನ್ನು ಕುರಿತು ಸತ್ಯಾರ್ಥವನ್ನು” ಕಲಿಸಿದವನು ಎಪಫ್ರನಾಗಿದ್ದನು. ಪೌಲನು ಈ ಸಹಕರ್ಮಿಯನ್ನು “[“ನಮ್ಮ ಪರವಾದ,” NW] ಕ್ರಿಸ್ತನ ನಂಬಿಗಸ್ತನಾದ ಸೇವಕನು” ಎಂದು ಕರೆಯುವ ವಾಸ್ತವಾಂಶವು, ಎಪಫ್ರನು ಆ ಕ್ಷೇತ್ರದಲ್ಲಿ ಒಬ್ಬ ಸಕ್ರಿಯ ಸೌವಾರ್ತಿಕನಾಗಿದ್ದನೆಂಬುದನ್ನು ತೋರಿಸುತ್ತದೆ.—ಕೊಲೊಸ್ಸೆ 1:6, 7.
ಅಪೊಸ್ತಲ ಪೌಲ ಮತ್ತು ಸೌವಾರ್ತಿಕನಾದ ಎಪಫ್ರ—ಇಬ್ಬರಿಗೂ, ಲೈಕಸ್ ಕಣಿವೆಯಲ್ಲಿದ್ದ ತಮ್ಮ ಜೊತೆ ವಿಶ್ವಾಸಿಗಳ ಆತ್ಮಿಕ ಹಿತದ ಕುರಿತು ತುಂಬ ಚಿಂತೆಯಿತ್ತು. “ಅನ್ಯಜನರಿಗೆ ಅಪೊಸ್ತಲನಾಗಿ”ದ್ದ ಪೌಲನು, ಅವರ ಪ್ರಗತಿಯ ಕುರಿತಾದ ವಾರ್ತೆಯನ್ನು ಪಡೆದಾಗ ಸಂತೋಷಪಟ್ಟಿರಬೇಕು. ಕೊಲೊಸ್ಸೆಯವರ ಆತ್ಮಿಕ ಸ್ಥಿತಿಯ ಕುರಿತಾಗಿ ಪೌಲನು ಖಂಡಿತವಾಗಿಯೂ ಎಪಫ್ರನಿಂದಲೇ ಕೇಳಿದನು.—ಕೊಲೊಸ್ಸೆ 1:4, 8.
ಎಪಫ್ರನ ವರದಿ
ಪೌಲನೊಂದಿಗೆ ಈ ವಿಷಯಗಳನ್ನು ಚರ್ಚಿಸುವ ನಿರ್ದಿಷ್ಟ ಉದ್ದೇಶಕ್ಕಾಗಿ ರೋಮ್ಗೆ ಈ ದೀರ್ಘ ಪ್ರಯಾಣವನ್ನು ಮಾಡುವಂತೆ ಒತ್ತಾಯಿಸಿದಷ್ಟು ಗಂಭೀರವಾದ ಸಮಸ್ಯೆಗಳನ್ನು ಕೊಲೊಸ್ಸೆಯವರು ಎದುರಿಸಿದರು. ಎಪಫ್ರನಿಂದ ಕೊಡಲ್ಪಟ್ಟ ಸವಿವರವಾದ ವರದಿಯು, ಪೌಲನು ತನಗೆ ಅಜ್ಞಾತರಾಗಿದ್ದ ಆ ಸಹೋದರರಿಗೆ ಎರಡು ಪತ್ರಗಳನ್ನು ಬರೆಯುವಂತೆ ಮಾಡಿತೆಂಬುದು ಸುವ್ಯಕ್ತ. ಒಂದು ಪತ್ರವು ಕೊಲೊಸ್ಸೆಯವರಿಗೆ ಬರೆಯಲ್ಪಟ್ಟಂತಹದ್ದಾಗಿತ್ತು. ಇನ್ನೊಂದು ಪತ್ರವು—ಅದು ಪ್ರಾಯಶಃ ಸಂರಕ್ಷಿಸಿ ಇಡಲ್ಪಟ್ಟಿಲ್ಲ—ಲವೊದಿಕೀಯದವರಿಗೆ ಬರೆಯಲ್ಪಟ್ಟಿತು. (ಕೊಲೊಸ್ಸೆ 4:16) ಆ ಪತ್ರಗಳ ಒಳವಿಷಯಗಳು, ಎಪಫ್ರನಿಂದ ಗ್ರಹಿಸಲ್ಪಟ್ಟಂತಹ, ಆ ಕ್ರೈಸ್ತರ ಅಗತ್ಯಗಳಿಗೆ ಪ್ರತಿಕ್ರಿಯಿಸಲು ಉದ್ದೇಶಿಸಲ್ಪಟ್ಟಿದ್ದವೆಂಬುದನ್ನು ಯೋಚಿಸುವುದು ವಿವೇಚನಾಶೀಲ. ಅವನು ಯಾವ ಆವಶ್ಯಕತೆಗಳನ್ನು ಮನಗಂಡನು? ಮತ್ತು ಇದು ಅವನ ವ್ಯಕ್ತಿತ್ವದ ಕುರಿತಾಗಿ ನಮಗೆ ಏನನ್ನು ಹೇಳುತ್ತದೆ?
ಕೊಲೊಸ್ಸೆಯಲ್ಲಿದ್ದ ಕ್ರೈಸ್ತರು, ಸಂನ್ಯಾಸ ತತ್ತ್ವ, ಮಂತ್ರವಿದ್ಯೆ, ಮತ್ತು ವಿಗ್ರಹಾರಾಧಕ ಮೂಢನಂಬಿಕೆಯನ್ನು ಒಳಗೊಂಡಿರುವ ವಿಧರ್ಮಿ ತತ್ತ್ವಜ್ಞಾನಗಳಿಂದ ಅಪಾಯಕ್ಕೊಳಗಾಗಿರುವುದರ ಕುರಿತು ಎಪಫ್ರನು ಚಿಂತಿತನಾಗಿದ್ದನೆಂದು, ಕೊಲೊಸ್ಸೆಯವರಿಗೆ ಬರೆಯಲ್ಪಟ್ಟ ಪತ್ರವು ಸೂಚಿಸುವಂತೆ ತೋರುತ್ತದೆ. ಇನ್ನೂ ಹೆಚ್ಚಾಗಿ, ಆಹಾರಗಳಿಂದ ದೂರವಿರುವ ಮತ್ತು ನಿರ್ದಿಷ್ಟ ದಿನಗಳ ಆಚರಣೆಯ ಕುರಿತಾದ ಯೆಹೂದಿ ಬೋಧನೆಯು, ಸಭೆಯ ಕೆಲವು ಸದಸ್ಯರನ್ನು ಪ್ರಭಾವಿಸಿದ್ದಿರಬಹುದು.—ಕೊಲೊಸ್ಸೆ 2:4, 8, 16, 20-23.
ಪೌಲನು ಈ ವಿಷಯಗಳ ಕುರಿತಾಗಿ ಬರೆಯುವ ವಾಸ್ತವಾಂಶವು, ಎಪಫ್ರನು ತನ್ನ ಜೊತೆ ಕ್ರೈಸ್ತರ ಅಗತ್ಯಗಳಿಗೆ ಎಷ್ಟು ಎಚ್ಚರದಿಂದಿದ್ದನು ಮತ್ತು ಸೂಕ್ಷ್ಮಗ್ರಾಹಿಯಾಗಿದ್ದನೆಂಬುದನ್ನು ನಮಗೆ ತೋರಿಸುತ್ತದೆ. ಅವರು ಜೀವಿಸುತ್ತಿದ್ದ ಪರಿಸರದ ಅಪಾಯಗಳ ಕುರಿತಾಗಿ ಅರಿವುಳ್ಳವನಾಗಿದ್ದು, ಅವರ ಆತ್ಮಿಕ ಹಿತಕ್ಕಾಗಿ ಅವನು ಪ್ರೀತಿಯ ಚಿಂತೆಯನ್ನು ತೋರಿಸಿದನು. ಎಪಫ್ರನು ಪೌಲನ ಸಲಹೆಯನ್ನು ಕೋರಿದನು ಮತ್ತು ಇದು ಅವನು ನಮ್ರನಾಗಿದ್ದನೆಂಬುದನ್ನು ತೋರಿಸುತ್ತದೆ. ಹೆಚ್ಚು ಅನುಭವ ಇರುವವರೊಬ್ಬರಿಂದ ಬುದ್ಧಿವಾದವನ್ನು ಪಡೆಯುವ ಅಗತ್ಯವನ್ನು ಅವನು ಭಾವಿಸಿದ್ದಿರಬಹುದು. ಏನೇ ಆದರೂ, ಎಪಫ್ರನು ವಿವೇಕದಿಂದ ಕ್ರಿಯೆಗೈದನು.—ಜ್ಞಾನೋಕ್ತಿ 15:22.
ಪ್ರಾರ್ಥನೆಯನ್ನು ಬಹುಮೂಲ್ಯವೆಂದೆಣಿಸಿದ ಒಬ್ಬ ಪುರುಷ
ಕೊಲೊಸ್ಸೆಯ ಕ್ರೈಸ್ತರಿಗೆ ಕಳುಹಿಸಿದ ತನ್ನ ಪತ್ರದ ಸಮಾಪ್ತಿಯಲ್ಲಿ ಪೌಲನು ಹೇಳುವುದು: “ಕ್ರಿಸ್ತ ಯೇಸುವಿನ ದಾಸನಾಗಿರುವ ನಿಮ್ಮ ಊರಿನ ಎಪಫ್ರನು ನಿಮಗೆ ವಂದನೆಹೇಳುತ್ತಾನೆ; ಇವನು ಪ್ರಾರ್ಥನೆಮಾಡುವಾಗೆಲ್ಲಾ ನಿಮಗೋಸ್ಕರ ಹೋರಾಡಿ ನೀವು ಪ್ರವೀಣರಾಗಿಯೂ ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತವನ್ನು ಕುರಿತು ಪೂರ್ಣ ನಿಶ್ಚಯವುಳ್ಳವರಾಗಿಯೂ ನಿಂತಿರಬೇಕೆಂದು ವಿಜ್ಞಾಪನೆ ಮಾಡುತ್ತಾನೆ. ಇವನು ನಿಮಗೋಸ್ಕರವೂ ಲವೊದಿಕೀಯದವರಿಗೋಸ್ಕರವೂ ಹಿರಿಯಾಪೊಲಿಯವರಿಗೋಸ್ಕರವೂ ಬಹಳ ಪ್ರಯಾಸಪಡುತ್ತಾನೆಂದು ಸಾಕ್ಷಿಹೇಳುತ್ತೇನೆ.”—ಕೊಲೊಸ್ಸೆ 4:12, 13.
ಹೌದು, ಎಪಫ್ರನು ರೋಮ್ನಲ್ಲಿ ಪೌಲನ “ಜೊತೆ ಸೆರೆಯವ”ನಾಗಿದ್ದಾಗಲೂ, ಅವನು ಕೊಲೊಸ್ಸೆ, ಲವೊದಿಕೀಯ, ಮತ್ತು ಹಿರಿಯಾಪೊಲಿಯಲ್ಲಿದ್ದ ತನ್ನ ಪ್ರಿಯ ಸಹೋದರರ ಕುರಿತಾಗಿ ಯೋಚಿಸುತ್ತಿದ್ದನು ಮತ್ತು ಅವರಿಗಾಗಿ ಪ್ರಾರ್ಥಿಸುತ್ತಿದ್ದನು. (ಫಿಲೆಮೋನ 23) ಅಕ್ಷರಶಃವಾಗಿ, ಅವರಿಗಾಗಿ ಪ್ರಾರ್ಥನೆಯಲ್ಲಿ ‘ಅವನು ಹೋರಾಡಿದನು.’ ವಿದ್ವಾಂಸ ಡಿ. ಎಡ್ಮಂಡ್ ಹೀಬರ್ಟ್ಗನುಸಾರ, ಇಲ್ಲಿ ಉಪಯೋಗಿಸಲ್ಪಟ್ಟಿರುವ ಗ್ರೀಕ್ ಪದವು, “ಕಠಿನ ಶ್ರಮ ಮತ್ತು ಬಹು ತ್ಯಾಗದ ಚಟುವಟಿಕೆ”ಯ ಅರ್ಥವನ್ನು ಕೊಡುತ್ತದೆ. ಇದು ಯೇಸು ಕ್ರಿಸ್ತನು ಗೆತ್ಸೇಮನೆ ತೋಟದಲ್ಲಿ ಪ್ರಾರ್ಥಿಸುತ್ತಿದ್ದಾಗ ಅನುಭವಿಸಿದಂತಹ “ಮನೋವ್ಯಥೆ”ಗೆ ತದ್ರೀತಿಯದ್ದಾಗಿದೆ. (ಲೂಕ 22:44) ತನ್ನ ಆತ್ಮಿಕ ಸಹೋದರ ಸಹೋದರಿಯರು ಸ್ಥಿರತೆ ಮತ್ತು ಪೂರ್ಣ ಕ್ರೈಸ್ತ ಪ್ರೌಢತೆಯನ್ನು ಪಡೆದುಕೊಳ್ಳುವಂತೆ ಎಪಫ್ರನು ಶ್ರದ್ಧಾಪೂರ್ವಕವಾಗಿ ಬಯಸಿದನು. ಅಂತಹ ಆತ್ಮಿಕ ಮನಸ್ಸಿನ ಸಹೋದರನು ಆ ಸಭೆಗಳಿಗೆ ಎಂತಹ ಒಂದು ಆಶೀರ್ವಾದವಾಗಿದ್ದಿರಬೇಕು!
ಎಪಫ್ರನು ಒಬ್ಬ “ಪ್ರಿಯ ಜೊತೆಯ ದಾಸ”ನೆಂದು ಕರೆಯಲ್ಪಟ್ಟಿರುವುದರಿಂದ, ಜೊತೆ ಕ್ರೈಸ್ತರು ಅವನನ್ನು ಪ್ರಿಯನೆಂದೆಣಿಸುತ್ತಿದ್ದರೆಂಬುದಕ್ಕೆ ಸಂದೇಹವಿಲ್ಲ. (ಕೊಲೊಸ್ಸೆ 1:7) ಪರಿಸ್ಥಿತಿಗಳು ಅನುಮತಿಸುವಾಗ, ಸಭೆಯ ಎಲ್ಲಾ ಸದಸ್ಯರು ತಮ್ಮನ್ನು ಹೃದಯೋಲ್ಲಾಸ ಮತ್ತು ಪ್ರೀತಿಯಿಂದ ಮುಕ್ತವಾಗಿ ನೀಡಿಕೊಳ್ಳಬೇಕು. ಉದಾಹರಣೆಗಾಗಿ, ಅಸ್ವಸ್ಥರು, ವೃದ್ಧರು ಅಥವಾ ವಿಶೇಷ ಅಗತ್ಯಗಳುಳ್ಳ ಇತರರಿಗೆ ನೆರವು ನೀಡುವುದರಲ್ಲಿ ಗಮನವು ಕೊಡಲ್ಪಡಸಾಧ್ಯವಿದೆ. ಸಭೆಯಲ್ಲಿ ಪರಾಮರಿಸಲು ವಿಭಿನ್ನ ಜವಾಬ್ದಾರಿಗಳಿರಬಹುದು, ಅಥವಾ ದೇವಪ್ರಭುತ್ವ ನಿರ್ಮಾಣ ಕಾರ್ಯಯೋಜನೆಗಳಿಗೆ ನೆರವು ನೀಡುವ ಸಾಧ್ಯತೆಯಿರಬಹುದು.
ಎಪಫ್ರನು ಮಾಡಿದಂತೆ ಇತರರಿಗಾಗಿ ಪ್ರಾರ್ಥಿಸುವುದು, ಎಲ್ಲರೂ ಮಾಡಸಾಧ್ಯವಿರುವ ಪವಿತ್ರ ಸೇವೆಯ ಒಂದು ರೂಪವಾಗಿದೆ. ಅಂತಹ ಪ್ರಾರ್ಥನೆಗಳಲ್ಲಿ, ವಿವಿಧ ಪ್ರಕಾರದ ಅಪಾಯಗಳು ಅಥವಾ ಆತ್ಮಿಕ ಇಲ್ಲವೇ ಶಾರೀರಿಕ ರೀತಿಯ ಕಷ್ಟಗಳನ್ನು ಎದುರಿಸಬೇಕಾದ ಯೆಹೋವನ ಆರಾಧಕರಿಗಾಗಿ ಚಿಂತೆಯ ಅಭಿವ್ಯಕ್ತಿಗಳು ಸೇರಿರಬಹುದು. ಈ ರೀತಿಯಲ್ಲಿ ನಮ್ಮನ್ನು ಕಠಿನವಾಗಿ ವಿನಿಯೋಗಿಸಿಕೊಳ್ಳುವ ಮೂಲಕ, ನಾವು ಎಪಫ್ರನಂತೆ ಇರಸಾಧ್ಯವಿದೆ. ಯೆಹೋವನ ನಂಬಿಗಸ್ತ ಸೇವಕರ ಕುಟುಂಬದಲ್ಲಿ ಒಬ್ಬ “ಪ್ರಿಯ ಜೊತೆಯ ದಾಸ”ನಾಗಿ ಪರಿಣಮಿಸುವ ಸುಯೋಗ ಮತ್ತು ಆನಂದವು ನಮ್ಮಲ್ಲಿ ಪ್ರತಿಯೊಬ್ಬರಿಗೂ ಇರಸಾಧ್ಯವಿದೆ.