ರಾಜ್ಯ ಘೋಷಕರು ವರದಿಮಾಡುತ್ತಾರೆ
ಯೆಹೋವನ ದೇವಪ್ರಭುತ್ವ ಸಂಸ್ಥೆಗೆ ಓಡಿಹೋಗುವುದು
ಬಹು ಸಮಯದ ಹಿಂದೆ ಪ್ರವಾದಿಯಾದ ಯೆಶಾಯನು ಹೀಗೆ ಪ್ರಕಟಿಸುವಂತೆ ಪ್ರೇರಿಸಲ್ಪಟ್ಟನು: ‘ಅವರು ಯೆಹೋವನನ್ನು ಸಮುದ್ರದ ದ್ವೀಪಗಳಲ್ಲಿ ಮಹಿಮೆಪಡಿಸಬೇಕು’ (NW). (ಯೆಶಾಯ 24:15) ಯೆಹೋವನ ಸಾಕ್ಷಿಗಳು ಸಮುದ್ರದ ದ್ವೀಪಗಳನ್ನು, ಎಲ್ಲಿ ‘ಸುವಾರ್ತೆಯು ಸಾರಲ್ಪಡಬೇಕು’ ಎಂದು ಯೇಸು ಹೇಳಿದನೊ, ಆ ‘ಸರ್ವಲೋಕದ’ ಭಾಗವಾಗಿ ವೀಕ್ಷಿಸುತ್ತಾರೆ.—ಮತ್ತಾಯ 24:14; ಮಾರ್ಕ 13:10.
ಮಾರ್ಕೆಸಾಸ್ ದ್ವೀಪಗಳು, ಟಹೀಟಿಯ ನೈರುತ್ಯಕ್ಕೆ ಸುಮಾರು 1,400 ಕಿಲೊಮೀಟರ್ಗಳಷ್ಟು ದೂರದಲ್ಲಿವೆ. ಅವು, ದಕ್ಷಿಣ ಶಾಂತಸಾಗರದ ಪ್ರದೇಶದಲ್ಲಿ, ದೂರದಲ್ಲಿರುವ ಫ್ರೆಂಚ್ ಪಾಲಿನೀಷಿಯಾ ಎಂದು ಕರೆಯಲ್ಪಡುವ ದ್ವೀಪಗಳ ಸಮೂಹದ ಭಾಗವಾಗಿವೆ. ಫಲವತ್ತಾದ, ಜ್ವಾಲಾಮುಖಿ ಮಣ್ಣು ಮತ್ತು ಒಂದು ಬೆಚ್ಚಗಿನ, ತೇವಾಂಶವುಳ್ಳ ವಾತಾವರಣದೊಂದಿಗೆ, ಈ ದ್ವೀಪಗಳಲ್ಲಿ ಸಸ್ಯಗಳು ಹುಲುಸಾಗಿ ಬೆಳೆಯುತ್ತವೆ. ಆದಾಗಲೂ, ಮಾರ್ಕೆಸಾಸ್ ದ್ವೀಪಗಳು ಇನ್ನೊಂದು ವಿಧದ ಫಲವನ್ನೂ ಉತ್ಪಾದಿಸುತ್ತಿವೆ. ಹಿವಾ ಓಆ ಎಂಬ ದ್ವೀಪದಲ್ಲಿ ರಾಜ್ಯ ಸಂದೇಶಕ್ಕೆ ಪ್ರತಿಕ್ರಿಯೆ ತೋರಿಸಿದ ಒಂದು ಕುಟುಂಬದ ವಿದ್ಯಮಾನವನ್ನು ಪರಿಗಣಿಸಿರಿ.
ಸಾನ್ ಮತ್ತು ಅವನ ಹೆಂಡತಿಯಾದ ನಾಡೀನ್, ಅವರು ವಾಸಿಸುತ್ತಿದ್ದ ಪಾಶ್ಚಾತ್ಯ ಯೂರೋಪ್ನ ಸುಸಂಸ್ಕೃತವೆಂದು ಕರೆಯಲಾಗುತ್ತಿದ್ದ ಸಮಾಜದೊಂದಿಗೆ ಅಸಂತುಷ್ಟರಾಗಿದ್ದರು. ಆದುದರಿಂದ, ಅವರು ಆ ಕಾರ್ಯಮಗ್ನ ಜೀವನಶೈಲಿಯನ್ನು ಬಿಟ್ಟು, ತಮ್ಮ ಮಗನೊಂದಿಗೆ ಮಾರ್ಕೆಸಾಸ್ ದ್ವೀಪಗಳಿಗೆ ಸ್ಥಳಾಂತರಿಸಲು ನಿರ್ಣಯಿಸಿದರು. ಅವರ ಹೊಸ ಮನೆಯು, ಒಂದು ದೂರದ ಕಣಿವೆಯಲ್ಲಿದ್ದು, ಬಿದಿರಿನಿಂದ ನಿರ್ಮಿಸಲ್ಪಟ್ಟಿತ್ತು. ಅವರ ಅತಿ ಹತ್ತಿರದ ನೆರೆಹೊರೆಯವರನ್ನು ತಲಪಲು ಅವರು, ಎರಡು ತಾಸುಗಳ ವರೆಗೆ ಒಡ್ಡೊಡ್ಡಾದ ಪರ್ವತದ ಕಾಲುಹಾದಿಯಲ್ಲಿ ನಡೆದುಕೊಂಡು ಹೋಗಬೇಕಿತ್ತು. ಒಬ್ಬ ವೈದ್ಯ, ಒಂದು ಶಾಲೆ ಮತ್ತು ಕಿರಾಣಿ ಅಂಗಡಿಯಿರುವ ಅತಿ ಹತ್ತಿರದ ಹಳ್ಳಿಯನ್ನು ತಲಪಲು, ಜೀಪ್ನಲ್ಲಿ ಮೂರು ತಾಸುಗಳು ತಗಲುತ್ತಿದ್ದವು.
ಸಾನ್ ಮತ್ತು ನಾಡೀನ್ ಧರ್ಮದಲ್ಲಿ ಆಸಕ್ತರಾಗಿರಲಿಲ್ಲ. ಆದಾಗಲೂ, ಅವರು ಜೀವದ ಆರಂಭದ ಕುರಿತಾದ ಚರ್ಚೆಗಳಲ್ಲಿ ಒಳಗೂಡುತ್ತಿದ್ದರು. ಅನೇಕವೇಳೆ ಅವರು ವಿಕಾಸದ ಕುರಿತಾದ ಸಂಕ್ಲಿಷ್ಟಕರ ವಾದಗಳನ್ನು ವಿಕಸಿಸುತ್ತಿದ್ದರು. ಆದರೆ ಅವರ ಯಾವ ವಾದಗಳೂ ಅವರಿಗೆ ತೃಪ್ತಿಯನ್ನು ತರಲಿಲ್ಲ.
ಆರು ವರ್ಷಗಳ ಏಕಾಂತವಾಸದಲ್ಲಿ ಜೀವಿಸಿದ ಬಳಿಕ, ಯೆಹೋವನ ಸಾಕ್ಷಿಗಳಲ್ಲಿ ಇಬ್ಬರಿಂದ ಸಂದರ್ಶಿಸಲ್ಪಟ್ಟಾಗ ಅವರು ಆಶ್ಚರ್ಯಗೊಂಡರು. ಹತ್ತಿರದಲ್ಲಿದ್ದ ಹಳ್ಳಿಗರಿಂದ ಆ ಸಾಕ್ಷಿಗಳಿಗೆ ಸಾನ್ ಮತ್ತು ನಾಡೀನರು ಅಲ್ಲಿ ಜೀವಿಸುತ್ತಿದ್ದಾರೆಂಬುದು ತಿಳಿದುಬಂದಿತ್ತು. ಸ್ವಾಭಾವಿಕವಾಗಿ, ಸಂಭಾಷಣೆಯು, ವಿಕಾಸವಾದದ ಕುರಿತಾದ ಒಂದು ಚರ್ಚೆಗೆ ನಡಿಸಿತು. ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ, ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೊ ಸೃಷ್ಟಿಯಿಂದಲೊ? (ಇಂಗ್ಲಿಷ್) ಎಂಬ ಪುಸ್ತಕದ ಒಂದು ಪ್ರತಿಯನ್ನು ಆ ಸಾಕ್ಷಿಗಳು ತಂದಿದ್ದರು. ಇದು ದಂಪತಿಗಳನ್ನು ಹರ್ಷಗೊಳಿಸಿತು. ಜೀವವು ಇಲ್ಲಿಗೆ ಹೇಗೆ ಬಂತು ಎಂಬುದರ ಕುರಿತಾದ ಒಂದು ಸಮಗ್ರವಾದ ಪರಿಶೀಲನೆಯನ್ನು ಸಾದರಪಡಿಸುವ ಒಂದು ಪುಸ್ತಕವನ್ನು ಪಡೆದುಕೊಳ್ಳಲು ಸಾನ್ ಮತ್ತು ನಾಡೀನ್ ಸಂತೋಷಪಟ್ಟರು.
ಸ್ವಲ್ಪ ಸಮಯದ ಬಳಿಕ, ಒಂದು ಬೈಬಲ್ ಅಭ್ಯಾಸವು ಆರಂಭಿಸಲ್ಪಟ್ಟಿತು. ಸುಮಾರು ಮೂರು ವರ್ಷಗಳ ಅವಧಿಯ ಬಳಿಕ, ಸಾನ್ ಮತ್ತು ನಾಡೀನ್ ಸ್ಥಿರವಾದ ಪ್ರಗತಿಯನ್ನು ಮಾಡಿದರು. ಬೇಗನೆ ಇಡೀ ಭೂಮಿಯು ಒಂದು ಪ್ರಮೋದವನವಾಗುವುದು ಎಂಬುದರ ಕುರಿತಾಗಿ ಅವರು ಮನಗಂಡರು. ಅವರ ಕುಟುಂಬವು ಮೂರು ಮಕ್ಕಳಿಗೆ ಹೆಚ್ಚಿದ ಬಳಿಕ, ರಾಜ್ಯ ಸಭಾಗೃಹದಲ್ಲಿನ ಕ್ರೈಸ್ತ ಕೂಟಗಳಿಗೆ ಹಾಜರಾಗಲಿಕ್ಕಾಗಿ ನಾಲ್ಕು ತಾಸು ಪ್ರಯಾಣಿಸುವುದು ಒಂದು ಕಷ್ಟಕರ ಕೆಲಸವಾಯಿತು. ಆದರೂ, ಅದು ಅವರನ್ನು ಹಾಜರಾಗುವುದರಿಂದ ತಡೆಯಲಿಲ್ಲ. ಕಟ್ಟಕಡೆಗೆ ಸಾನ್ ಮತ್ತು ನಾಡೀನ್, ನೀರಿನ ದೀಕ್ಷಾಸ್ನಾನದ ಮೂಲಕ ಯೆಹೋವನಿಗೆ ತಮ್ಮ ಸಮರ್ಪಣೆಯನ್ನು ಸಂಕೇತಿಸಿದರು. ಇದನ್ನು ಅವರು ಪ್ರಧಾನ ಹಳ್ಳಿಯಲ್ಲಿ ನಡೆಸಲ್ಪಟ್ಟ ಒಂದು ಅಧಿವೇಶನದಲ್ಲಿ ಮಾಡಿದರು. ಅಲ್ಲಿ ಅತ್ಯುಚ್ಚ ಹಾಜರಿಯಿತ್ತು—38 ಜನರು ಹಾಜರಿದ್ದರು!
ರಾಜ್ಯ ಪ್ರಚಾರಕರ ಚಿಕ್ಕ ಗುಂಪಿಗೆ ಸಹಾಯ ಮಾಡಲಿಕ್ಕಾಗಿ, ಆ ಕುಟುಂಬವು ತಮ್ಮ ಏಕಾಂತವಾದ ಮನೆಯನ್ನು ಬಿಟ್ಟುಬಿಡಲು ನಿರ್ಣಯಿಸಿತು. ಸುಮಾರು ಒಂದು ಸಾವಿರ ನಿವಾಸಿಗಳಿದ್ದ ಒಂದು ಹಳ್ಳಿಗೆ ಅವರು ಸ್ಥಳಾಂತರಿಸಿದರು. ಸಾನ್ ಈಗ ಅಲ್ಲಿ, ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಯಲ್ಲಿ ಒಬ್ಬ ಶುಶ್ರೂಷಾ ಸೇವಕನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಈ ಹಿಂದೆ ನಾಗರಿಕತೆಯಿಂದ ಪಲಾಯನ ಮಾಡಲು ದ್ವೀಪಗಳಿಗೆ ಓಡಿಹೋದ ಈ ಕುಟುಂಬವು, ಏಕೈಕ ಆಶ್ರಯಸ್ಥಾನವಾದ, ಯೆಹೋವನ ದೇವಪ್ರಭುತ್ವ ಸಂಸ್ಥೆಯನ್ನು ಕಂಡುಕೊಂಡಿರುವುದನ್ನು ಒಂದು ಸುಯೋಗವಾಗಿ ಪರಿಗಣಿಸುತ್ತದೆ.