ದೇವರ ವಾಕ್ಯದ ಪದವಿಪಡೆಯುತ್ತಿರುವ ವಿದ್ಯಾರ್ಥಿಗಳು
ಪ್ರಥಮ ಶತಮಾನದ ಕ್ರೈಸ್ತರ ಅನುಕರಣೆಯಲ್ಲಿ, ಯೆಹೋವನ ಸಾಕ್ಷಿಗಳು ತಮ್ಮ ಮನೆಯಿಂದ ಮನೆಯ ಸಾರುವಿಕೆಗಾಗಿ ಲೋಕವ್ಯಾಪಕವಾಗಿ ಪ್ರಸಿದ್ಧರಾಗಿದ್ದಾರೆ. ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ, 102ನೆಯ ತರಗತಿಯ ಪದವಿಪ್ರಾಪ್ತಿ ಕಾರ್ಯಕ್ರಮದಲ್ಲಿನ ಆರಂಭದ ಹೇಳಿಕೆಗಳಲ್ಲಿ, ಈ ಕೆಲಸವನ್ನು ಒತ್ತಿಹೇಳಲಾಯಿತು.
ಮಾರ್ಚ್ 1, 1997ರಂದು, ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯ ಒಬ್ಬ ಸದಸ್ಯರಾದ ಆಲ್ಬರ್ಟ್ ಷ್ರೋಡರ್, ಫ್ರೆಂಚ್ ಪತ್ರಿಕೆಯಾದ ಲಾ ಪ್ವಾನ್ನಲ್ಲಿನ ಒಂದು ಇತ್ತೀಚಿನ ಲೇಖನಕ್ಕೆ ಗಮನಸೆಳೆದರು. ಇಟಲಿಯಲ್ಲಿ ಮನೆಯಿಂದ ಮನೆಯ ಸಾರುವಿಕೆಯನ್ನು ಆರಂಭಿಸಲಿಕ್ಕಾಗಿರುವ ರೋಮನ್ ಕ್ಯಾತೊಲಿಕ್ ಯೋಜನೆಗಳ ಕುರಿತಾಗಿ ಅದರಲ್ಲಿ ಬರೆದಿತ್ತು. “ಅವರು [ವ್ಯಾಟಿಕನಿನ ಮಿಷನೆರಿಗಳು] ಯೆಹೋವನ ಸಾಕ್ಷಿಗಳ ಕ್ಷೇತ್ರದಲ್ಲಿ ಸ್ಪರ್ಧಿಸಿದಂತೆ ಬರಿಗೈಯೊಂದಿಗೆ ಆಗಮಿಸದಂತೆ, ವ್ಯಾಟಿಕನ್, ಸಂತ ಮಾರ್ಕನ ಸುವಾರ್ತೆಯ ಹತ್ತು ಲಕ್ಷ ಪ್ರತಿಗಳನ್ನು ಮುದ್ರಿಸುವಂತೆ ಏರ್ಪಡಿಸುವಷ್ಟು ಮುಂದೆ ಹೋಗಿದೆ. ಯಾಕಂದರೆ ವ್ಯಾಟಿಕನಿನ ಪ್ರತಿನಿಧಿಗಳು, ಮನೆಯಿಂದ ಮನೆಯ ಸುವಾರ್ತೆಯ ‘ಕೊಡಿಕೆ’ಯಲ್ಲಿ ಪರಿಣತರನ್ನು [ಸಾಕ್ಷಿಗಳನ್ನು] ಎದುರಿಸುತ್ತಾರೆ” ಎಂದು ಆ ಲೇಖನವು ಹೇಳಿತು.
ದೇವರ ವಾಕ್ಯವನ್ನು ಹಬ್ಬಿಸುವುದರಲ್ಲಿ ಯೇಸುವಿನ ಸಾರುವಿಕೆಯ ನಿಪುಣ ವಿಧಾನಗಳನ್ನು ಅನುಕರಿಸಿರುವವರ ನಡುವೆ 48 ಪದವೀಧರರು ಇದ್ದಾರೆ. ಅವರು ನ್ಯೂ ಯಾರ್ಕಿನ ಪ್ಯಾಟರ್ಸನ್ನಲ್ಲಿರುವ, ವಾಚ್ಟವರ್ ಎಡ್ಯೂಕೇಷನಲ್ ಸೆಂಟರ್ಗೆ ಎಂಟು ದೇಶಗಳಿಂದ ಬಂದವರಾಗಿದ್ದರು. ತಮ್ಮ ಶಿಕ್ಷಣದ ಐದು ತಿಂಗಳುಗಳ ಸಮಯದಲ್ಲಿ, ಅವರು ಬೈಬಲನ್ನು ಮೊದಲಿನಿಂದ ಕೊನೆಯ ವರೆಗೂ ಅಭ್ಯಾಸಿಸಿದರು. ಅವರ ಪಾಠಕ್ರಮದಲ್ಲಿ, ದೇವರ ಸಂಸ್ಥೆಯ ಇತಿಹಾಸ, ಮಿಷನೆರಿ ಜೀವನದ ವ್ಯಾವಹಾರಿಕ ಅಂಶಗಳು ಮತ್ತು ದೇವರಾತ್ಮದ ಫಲವೂ ಒಳಗೊಂಡಿತ್ತು. ಇದೆಲ್ಲವೂ, ಅವರು ಕಳುಹಿಸಲ್ಪಡುತ್ತಿರುವ 17 ದೇಶಗಳಲ್ಲಿನ ವಿದೇಶ ಮಿಷನೆರಿ ಸೇವೆಗಾಗಿ, ಅವರನ್ನು ತಯಾರಿಸುವ ಏಕೈಕ ಗುರಿಯೊಂದಿಗೆ ಮಾಡಲ್ಪಟ್ಟಿತು. ಅವರು ಪದವಿಪಡೆಯುತ್ತಿದ್ದಂತೆ, 5,015 ಮಂದಿಯುಳ್ಳ ಒಂದು ಅಂತಾರಾಷ್ಟ್ರೀಯ ಶ್ರೋತೃ ವರ್ಗವು ಆ ಸಂದರ್ಭದ ಆನಂದದಲ್ಲಿ ಪಾಲ್ಗೊಂಡಿತು. ಆ ಗಿಲ್ಯಡ್ ವಿದ್ಯಾರ್ಥಿಗಳು ಯಾವ ಅಂತಿಮ ವ್ಯಾವಹಾರಿಕ ಸಲಹೆಯನ್ನು ಪಡೆದರು?
ಹೊಸ ಮಿಷನೆರಿಗಳಿಗಾಗಿ ಸಮಯೋಚಿತ ಉತ್ತೇಜನ
ಅಧ್ಯಕ್ಷರ ಆರಂಭದ ಹೇಳಿಕೆಗಳ ನಂತರ, ಆಡಳಿತ ಮಂಡಳಿಯ ಪರ್ಸೆನಲ್ ಕಮಿಟಿಯ ಒಬ್ಬ ಸಹಾಯಕರಾದ ರಾಲ್ಫ್ ವಾಲ್ಸ್, ಹೊಸ ಮಿಷನೆರಿಗಳಿಗಾಗಿ ವ್ಯಾವಹಾರಿಕ ಬುದ್ಧಿವಾದವಿದ್ದ ಮೊದಲ ಚಿಕ್ಕ ಭಾಷಣವನ್ನು ಕೊಟ್ಟರು. ಅವರ ಶೀರ್ಷಿಕೆಯು, “ಪ್ರೀತಿಸುವುದನ್ನು ಜ್ಞಾಪಕದಲ್ಲಿಡಿರಿ” ಎಂದಾಗಿತ್ತು. 2 ತಿಮೊಥೆಯ ಅಧ್ಯಾಯ 3ರಲ್ಲಿ, ಲೋಕವು ಹೆಚ್ಚೆಚ್ಚು ಪ್ರೀತಿರಹಿತವಾಗುವುದೆಂದು ಬೈಬಲ್ ಮುಂತಿಳಿಸಿತೆಂಬುದನ್ನು ಅವರು ತೋರಿಸಿದರು. 1 ಕೊರಿಂಥ 13:1-7ರಲ್ಲಿ ಕಂಡುಬರುವ ಪ್ರೀತಿಯ ವರ್ಣನೆಗೆ ಹೊಂದಿಕೆಯಲ್ಲಿ, ಅವರು ಹೊಸ ಮಿಷನೆರಿಗಳಿಗೆ ಈ ಸಮಯೋಚಿತ ಜ್ಞಾಪನವನ್ನು ನೀಡಿದರು: “ಮಿಷನೆರಿಗಳೋಪಾದಿ ನೀವು ನಿಮ್ಮ ತಾಸಿನ ಕೋಟಾಗಳನ್ನು ಮೀರಿಹೋಗಬಹುದು. ನಿಮ್ಮ ಗಿಲ್ಯಡ್ ತರಬೇತಿಯಿಂದಾಗಿ ನಿಮ್ಮಲ್ಲಿ ಜ್ಞಾನದ ಭಂಡಾರವಿರಬಹುದು. ಅಥವಾ ನಮ್ಮ ಬ್ರಾಂಚ್ ನೇಮಕಗಳಲ್ಲಿ ನಾವು ಹುರುಪಿನಿಂದ ಹೊತ್ತುಮೀರಿ ಕೆಲಸ ಮಾಡಬಹುದು. ಆದರೆ ನಾವು ಪ್ರೀತಿಸಲು ಮರೆಯುವಲ್ಲಿ, ನಮ್ಮ ಎಲ್ಲ ಪ್ರಯತ್ನಗಳು ಮತ್ತು ತ್ಯಾಗಗಳು ನಿಷ್ಪ್ರಯೋಜಕವಾಗಿರುತ್ತವೆ.”
ಕಾರ್ಯಕ್ರಮದಲ್ಲಿ ಅನಂತರ ಬಂದವರು, ಆಡಳಿತ ಮಂಡಳಿಯ ಕ್ಯಾರಿ ಬಾರ್ಬರ್ ಆಗಿದ್ದರು. “ಯೆಹೋವನು ನಮ್ಮನ್ನು ವಿಜಯಕ್ಕೆ ನಡಿಸುತ್ತಾ ಇದ್ದಾನೆ” ಎಂಬ ವಿಷಯವನ್ನು ಅವರು ಪರಿಗಣಿಸಿದರು. Iನೆಯ ಜಾಗತಿಕ ಯುದ್ಧವನ್ನು ಹಿಂಬಾಲಿಸಿದ ಚಿಕ್ಕ ಆರಂಭಗಳಿಂದ ಹಿಡಿದು, ಯೆಹೋವ ದೇವರು ತನ್ನ ನಂಬಿಗಸ್ತ ಸೇವಕರನ್ನು, ಹಿಂಸೆಯ ಎದುರಿನಲ್ಲಿಯೂ ತನ್ನ ರಾಜ್ಯದ ಸುವಾರ್ತೆಯ ಘೋಷಣೆಯಲ್ಲಿ ವಿಜಯಕ್ಕೆ ನಡಿಸಿದ್ದಾನೆ. 1931ರಲ್ಲಿ, ಕ್ರೈಸ್ತಪ್ರಪಂಚದ ವೈದಿಕರು ಅಪಮಾನದಿಂದ ಕೊರಗುವಂತೆ ಮಾಡುತ್ತಾ, ಬೈಬಲ್ ವಿದ್ಯಾರ್ಥಿಗಳು—ಆಗ ಅವರು ಹೀಗೆ ಖ್ಯಾತರಾಗಿದ್ದರು—ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ಸ್ವೀಕರಿಸಿದರು. “ಗಿಲ್ಯಡ್ ಶಿಕ್ಷಿತ ಮಿಷನೆರಿಗಳ 102ನೆಯ ತರಗತಿಗೆ ಈಗ, ಆ ಪವಿತ್ರ ಹೆಸರನ್ನು ಸಾಧ್ಯವಿರುವಷ್ಟು ಹೆಚ್ಚು ಜನರು ಕಲಿಯುವ ಅವಕಾಶವನ್ನು ಕೊಡುವಂತಹ ಮಹಿಮಾಭರಿತ ಕೆಲಸದಲ್ಲಿ ಒಂದು ದೊಡ್ಡ ಪಾಲನ್ನು ಹೊಂದುವ ಒಂದು ಭವ್ಯ ಸುಯೋಗವಿದೆ,” ಎಂದು ಸಹೋದರ ಬಾರ್ಬರ್ ತಿಳಿಸಿದರು. ಗಿಲ್ಯಡ್ ಶಾಲೆಯಲ್ಲಿ ತರಬೇತಿಗೊಳಿಸಲ್ಪಟ್ಟಿರುವ ಮತ್ತು 1943ರಲ್ಲಿ 54 ದೇಶಗಳಿಂದ ಹಿಡಿದು, ಇಂದು 233 ದೇಶಗಳ ವರೆಗೆ ದೇವರ ವಾಕ್ಯದ ಸಾರುವಿಕೆಯನ್ನು ವಿಸ್ತರಿಸುವುದರಲ್ಲಿ ಸಹಾಯ ಮಾಡಿರುವ 7,131 ಮಿಷನೆರಿಗಳ ಒಂದು ಉದ್ದ ಪಟ್ಟಿಗೆ ಅವರು ಸೇರುತ್ತಾರೆ.
ಮುಂದಿನ ಭಾಷಣಕರ್ತರಾದ—ಆಡಳಿತ ಮಂಡಳಿಯ ಸದಸ್ಯರೂ ಆಗಿರುವ—ಲೈಡ್ ಬ್ಯಾರಿ, ಗಿಲ್ಯಡ್ನ 11ನೆಯ ತರಗತಿಯ ಪದವೀಧರರಾಗಿದ್ದರು ಮತ್ತು ಜಪಾನಿನಲ್ಲಿ 25ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ಒಬ್ಬ ಮಿಷನೆರಿಯಾಗಿ ಸೇವೆಸಲ್ಲಿಸಿದರು. “ಈ ಕಾರ್ಯಗಳಲ್ಲಿ ನಿರತರಾಗಿರಿ” ಎಂಬ ತಮ್ಮ ಶೀರ್ಷಿಕೆಯೊಂದಿಗೆ ಅವರು ಉತ್ತೇಜನವನ್ನು ಒದಗಿಸಿದರು. “ನಿಮ್ಮ ಆನಂದದಲ್ಲಿ ಹೆಚ್ಚಿನದ್ದು, ತಾಳಿಕೊಳ್ಳುವುದರಲ್ಲಿ ಕಂಡುಬರುವುದು,” ಎಂದು ಅವರು ವಿದ್ಯಾರ್ಥಿಗಳಿಗೆ ಹೇಳಿದರು. ಮಿಷನೆರಿ ಕೆಲಸದಲ್ಲಿ ಅಥವಾ ಯಾವುದೇ ದೇವಪ್ರಭುತ್ವ ನೇಮಕದಲ್ಲಿ ತಾಳಿಕೊಳ್ಳುವುದರಿಂದ ಯಾವ ಪ್ರತಿಫಲಗಳು ಸಿಗುತ್ತವೆ? “ಎಲ್ಲಕ್ಕಿಂತಲೂ ಮಿಗಿಲಾಗಿ, ನಮ್ಮ ತಾಳಿಕೊಳ್ಳುವಿಕೆಯು ಯೆಹೋವನ ಹೃದಯವನ್ನು ಹರ್ಷಿಸುವಂತೆ ಮಾಡುತ್ತದೆ . . . ಪರೀಕ್ಷೆಯ ಕೆಳಗೆ ಸಮಗ್ರತೆಯನ್ನು ಕಾಪಾಡಿಕೊಳ್ಳುವುದರಲ್ಲಿ ಮಹಾ ತೃಪ್ತಿಯನ್ನು ಕಂಡುಕೊಳ್ಳಸಾಧ್ಯವಿದೆ . . . ಮಿಷನೆರಿ ಸೇವೆಯನ್ನು ನಿಮ್ಮ ಜೀವನದ ವೃತ್ತಿಯನ್ನಾಗಿ ಮಾಡಿಕೊಳ್ಳಿರಿ . . . ನಿಮ್ಮ ಪ್ರತಿಫಲವು, ಹೃದಯೋಲ್ಲಾಸಗೊಳಿಸುವ ‘ಭಲಾ’ ಎಂಬ ಶ್ಲಾಘನೆಯಾಗಿರುವುದು.” (ಮತ್ತಾಯ 25:21; ಜ್ಞಾನೋಕ್ತಿ 27:11) ಮಿಷನೆರಿ ಕ್ಷೇತ್ರವು ತಮ್ಮ ಜೀವವೇ ಆಗಿ ಪರಿಣಮಿಸುವಂತೆ ನಿರ್ಧರಿತರಾಗಿರುವ ಮೂಲಕ, ಹೊಸ ಮಿಷನೆರಿಗಳು “ಈ ಕಾರ್ಯಗಳಲ್ಲಿ ನಿರತ”ರಾಗಿರುವಂತೆ ಸಹೋದರ ಬ್ಯಾರಿ ತಮ್ಮ ಭಾಷಣವನ್ನು ಸಮಾಪ್ತಿಗೊಳಿಸುವಾಗ ಹಾರ್ದಿಕವಾಗಿ ಶಿಫಾರಸ್ಸು ಮಾಡಿದರು.—1 ತಿಮೊಥೆಯ 4:16.
“ನೀವೇನನ್ನು ನೋಡುವಿರಿ?” ಎಂಬುದು, ಅನೇಕ ಗಿಲ್ಯಡ್ ತರಗತಿಗಳಲ್ಲಿ ಉಪದೇಶ ನೀಡುವುದರಲ್ಲಿ ಪಾಲ್ಗೊಂಡಿರುವ ಕಾರ್ಲ್ ಆ್ಯಡಮ್ಸ್ರಿಂದ ಎಬ್ಬಿಸಲ್ಪಟ್ಟ ಪ್ರಶ್ನೆಯಾಗಿತ್ತು. ಹೊಸ ಮಿಷನೆರಿಗಳು ತಮ್ಮ ನೇಮಕಗಳಲ್ಲಿ ನೋಡಲಿರುವ ವಿಷಯವು, ತಮ್ಮ ದೈಹಿಕ ದೃಷ್ಟಿಯ ಮೇಲೆ ಮಾತ್ರವಲ್ಲ ಬದಲಾಗಿ ತಮ್ಮ ಹೃದಯದ ನೇತ್ರಗಳ ಮೇಲೂ ಅವಲಂಬಿಸಿರುತ್ತದೆಂದು ಅವರು ತಿಳಿಸಿದರು. (ಎಫೆಸ 1:18) ವಾಗ್ದತ್ತ ದೇಶವನ್ನು ಇಸ್ರಾಯೇಲ್ಯ ಗೂಢಚಾರರು ಪರಿಶೀಲಿಸಿದಾಗ ಅವರು ಕಂಡಂತಹ ವಿಷಯದಿಂದ ಇದು ದೃಷ್ಟಾಂತಿಸಲ್ಪಟ್ಟಿತ್ತು. ಎಲ್ಲಾ 12 ಗೂಢಚಾರರು ದೈಹಿಕ ದೃಷ್ಟಿಕೋನದಿಂದ ಒಂದೇ ರೀತಿಯ ವಿಷಯಗಳನ್ನು ನೋಡಿದರು, ಆದರೆ ಕೇವಲ ಇಬ್ಬರು, ವಾಗ್ದತ್ತ ದೇಶವನ್ನು ದೇವರ ದೃಷ್ಟಿಕೋನದಿಂದ ನೋಡಿದರು. ಮಿಷನೆರಿಗಳು ಸಹ ವಿಷಯಗಳನ್ನು ವಿಭಿನ್ನ ರೀತಿಗಳಲ್ಲಿ ದೃಷ್ಟಿಸಸಾಧ್ಯವಿದೆ. ಅವರು ಸೇವೆಸಲ್ಲಿಸಲಿರುವ ಕೆಲವು ದೇಶಗಳಲ್ಲಿ ಅವರು ಬಡತನ, ಕಷ್ಟಾನುಭವ, ಮತ್ತು ನಿರೀಕ್ಷಾಹೀನತೆಯನ್ನು ನೋಡಬಹುದು. ಆದರೆ ಅವರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿ, ದೇಶವನ್ನು ಬಿಟ್ಟುಹೋಗಬಾರದು. ಇತ್ತೀಚಿನ ಒಂದು ತರಗತಿಯ ಮಿಷನೆರಿಯೊಬ್ಬಳು ಹೀಗೆ ಹೇಳಿದಳೆಂದು ಸಹೋದರ ಆ್ಯಡಮ್ಸ್ ತಿಳಿಸಿದರು: “ಈ ಅನುಭವಗಳು ನಾನು ಇಲ್ಲಿ ಉಳಿಯಲೇಬೇಕೆಂಬುದನ್ನು ನಾನು ಗ್ರಹಿಸುವಂತೆ ಮಾಡಿದವು. ಈ ಜನರಿಗೆ ಭವಿಷ್ಯತ್ತಿಗಾಗಿ ಒಂದು ನಿರೀಕ್ಷೆಯ ಅಗತ್ಯವಿದೆ. ಅವರ ಜೀವಿತಗಳಲ್ಲಿ ನಾನು ಏಳಿಗೆಯನ್ನು ಮಾಡಲು ಬಯಸುತ್ತೇನೆ.” ಹೊಸ ಮಿಷನೆರಿಗಳು, ತಾವು ನೇಮಿಸಲ್ಪಟ್ಟಿರುವ ದೇಶಗಳನ್ನು, ಯೆಹೋವನು ತನ್ನ ಭೌಗೋಲಿಕ ಪ್ರಮೋದವನದ ಭಾಗವನ್ನಾಗಿ ಮಾಡುವಂತೆ ನಿರ್ಧರಿಸಿರುವ ಕ್ಷೇತ್ರಗಳನ್ನಾಗಿ, ಮತ್ತು ಅಲ್ಲಿನ ಜನರನ್ನು ಹೊಸ ಲೋಕ ಸಮಾಜದ ಭಾವೀ ಸದಸ್ಯರನ್ನಾಗಿ ವೀಕ್ಷಿಸುವಂತೆ ಅವರನ್ನು ಉತ್ತೇಜಿಸುವ ಮೂಲಕ, ಸಹೋದರ ಆ್ಯಡಮ್ಸ್ ಸಮಾಪ್ತಿಗೊಳಿಸಿದರು.
ಕಾರ್ಯಕ್ರಮದ ಈ ಭಾಗದಲ್ಲಿನ ಕೊನೆಯ ಭಾಷಣವು, ಒಬ್ಬ ಗಿಲ್ಯಡ್ ಶಿಕ್ಷಕನಾಗುವ ಮುಂಚೆ, ಮಿಷನೆರಿ ಕ್ಷೇತ್ರದಲ್ಲಿ ಅನೇಕ ವರ್ಷಗಳ ವರೆಗೆ ಸೇವೆಸಲ್ಲಿಸಿದ, ವಾಲೆಸ್ ಲಿವರೆನ್ಸ್ರಿಂದ ನೀಡಲ್ಪಟ್ಟಿತು. “ದೇವರ ಅದ್ಭುತಕರ ಕೆಲಸಗಳ ಒಳನೋಟದೊಂದಿಗೆ ಕ್ರಿಯೆಗೈಯಿರಿ” ಎಂಬುದು ಅವರ ಶೀರ್ಷಿಕೆಯಾಗಿತ್ತು. ಒಳನೋಟದೊಂದಿಗೆ ಕ್ರಿಯೆಗೈಯುವುದು, ವ್ಯವಹಾರ ಕುಶಲತೆ, ವಿವೇಚನೆ, ಮತ್ತು ಸಾಮಾನ್ಯಜ್ಞಾನದೊಂದಿಗೆ ಕ್ರಿಯೆಗೈಯುವುದನ್ನು ಒಳಗೊಳ್ಳುತ್ತದೆ. ಇದು, ಇಸ್ರಾಯೇಲಿನ ರಾಜನಾದ ಸೌಲನು ಮಾಡಲು ತಪ್ಪಿದಂತಹ ವಿಷಯವಾಗಿತ್ತು.—1 ಸಮುವೇಲ 13:9-13; 15:1-22.
ಒಳನೋಟದೊಂದಿಗೆ ಕ್ರಿಯೆಗೈಯುವ ಒಂದು ವಿಧವು, ಒಂದು ಹೊಸ ಭಾಷೆಯನ್ನು ಕಲಿತುಕೊಳ್ಳುವುದನ್ನು ಮತ್ತು ಜನರನ್ನು ತಿಳಿದುಕೊಳ್ಳುವುದನ್ನು ಒಳಗೊಳ್ಳುತ್ತಾ, ಒಂದು ಹೊಸ ಜೀವನ ರೀತಿಗೆ ಹೊಂದಿಕೊಳ್ಳುವ ಪಂಥಾಹ್ವಾನಗಳನ್ನು ಸ್ವೀಕರಿಸುವುದಾಗಿದೆ. ಯೆಹೋಶುವ ಮತ್ತು ಕಾಲೇಬರು, ದೇವರು ಅವರಿಗೆ ನೇಮಿಸಿದ ದೇಶವನ್ನು ವಶಪಡಿಸಿಕೊಂಡಾಗ ದೃಢಪಡಿಸಲ್ಪಟ್ಟ ರೀತಿಯಲ್ಲೇ, ಪಂಥಾಹ್ವಾನಗಳನ್ನು ಎದುರಿಸುವುದರಲ್ಲಿ ಮತ್ತು ಅಡಚಣೆಗಳನ್ನು ಜಯಿಸುವುದರಲ್ಲಿ ಮಿಷನೆರಿಗಳಿಗಿರುವ ಅನುಭವಗಳು ಅವರನ್ನು ಆತ್ಮಿಕವಾಗಿ ಬಲಪಡಿಸಸಾಧ್ಯವಿದೆ.
ಇಂಟರ್ವ್ಯೂಗಳು
ಕಾರ್ಯಕ್ರಮದ ಮುಂದಿನ ಭಾಗದಲ್ಲಿ, ಇಂಟರ್ವ್ಯೂಗಳ ಸರಣಿಯು ಸೇರಿತ್ತು. ಈಗ 85 ವರ್ಷ ಪ್ರಾಯದವರಾಗಿರುವ, ಗಿಲ್ಯಡ್ ಶಾಲೆಯ ರೆಜಿಸ್ಟ್ರಾರ್ ಮತ್ತು ಬಹುಸಮಯದಿಂದ ಶಿಕ್ಷಕರಾಗಿರುವ ಯುಲೀಸಸ್ ಗ್ಲಾಸ್ರನ್ನು, ಹ್ಯಾರಲ್ಡ್ ಜ್ಯಾಕ್ಸನ್ ಇಂಟರ್ವ್ಯೂ ಮಾಡಿದರು. ಇನ್ನೂ ಕ್ಷೇತ್ರದಲ್ಲಿರುವ ಅನೇಕ ಮಿಷನೆರಿಗಳು, ಇವರ ಅನೇಕ ವರ್ಷಗಳ ನಂಬಿಗಸ್ತ ಕಲಿಸುವಿಕೆ ಮತ್ತು ತರಬೇತಿಯನ್ನು ನೆನಪಿಸಿಕೊಳ್ಳುತ್ತಾರೆ. ಅನಂತರ ಬಂದವರು ಮಾರ್ಕ್ ನೂಮ್ಯಾರ್. ಇವರು, ಗಿಲ್ಯಡ್ ಶಾಲಾ ಸಿಬ್ಬಂದಿಗೆ ಸೇರುವ ಮುಂಚೆ, ಆಫ್ರಿಕದಲ್ಲಿ ವಿದೇಶ ಸೇವೆಯಲ್ಲಿ ಅನೇಕ ವರ್ಷಗಳನ್ನು ಕಳೆದಂತಹ ಒಬ್ಬ ಗಿಲ್ಯಡ್ ಶಿಕ್ಷಕರಾಗಿದ್ದಾರೆ. ಅವರು, ವಿದ್ಯಾರ್ಥಿಗಳನ್ನು ಅವರ ಶಿಕ್ಷಣದ ಐದು ತಿಂಗಳುಗಳ ಸಮಯದಲ್ಲಿನ ತಮ್ಮ ಶುಶ್ರೂಷೆಯ ಕುರಿತಾಗಿ ಇಂಟರ್ವ್ಯೂ ಮಾಡಿದರು. ಸ್ಥಳಿಕ ಟೆರಿಟೊರಿಯಲ್ಲಿ ದೇವರ ವಾಕ್ಯದಲ್ಲಿ ಆಸಕ್ತರಾಗಿರುವ ಜನರು ಇದ್ದಾರೆಂಬುದನ್ನು ಅವರ ಅನುಭವಗಳು ಸ್ಪಷ್ಟವಾಗಿ ತೋರಿಸಿದವು.
ಅನಂತರ ರಾಬರ್ಟ್ ಸಿರಾಂಕೊ ಮತ್ತು ಚಾರ್ಲ್ಸ್ ಮಾಲಹನ್ರು, ಆ ಬ್ರಾಂಚ್ ಸೌಕರ್ಯಗಳಲ್ಲೇ ಇನ್ನೊಂದು ಶಾಲೆಯನ್ನು ಹಾಜರಾಗುತ್ತಿದ್ದ ಅನುಭವಿ ಪುರುಷರೊಂದಿಗೆ ಮಾತಾಡಿದರು. ಇದು ಬ್ರಾಂಚ್ ಸಿಬ್ಬಂದಿಗಾಗಿರುವ ಒಂದು ಶಾಲೆಯಾಗಿದೆ. ಪದವಿಪಡೆಯುತ್ತಿದ್ದ ತರಗತಿಗೆ ಅವರು ಕೊಟ್ಟ ಬುದ್ಧಿವಾದದಲ್ಲಿ, ನಮ್ರರೂ, ಸಭೆಯ ಐಕ್ಯಕ್ಕೆ ನೆರವನ್ನು ನೀಡುವವರೂ ಆಗಿರುವ ಅಗತ್ಯವು ಸೇರಿತ್ತು. ಮಿಷನೆರಿ ಕಾರ್ಯದಲ್ಲಿ ಏನು ಸಂಭವಿಸುವುದೆಂಬುದರ ಕುರಿತಾಗಿ ಪದವೀಧರರಿಗೆ ಪೂರ್ವಭಾವಿ ವಿಚಾರಗಳು ಇರಬಾರದು, ಬದಲಾಗಿ, ಏನೇ ಬರಲಿ ಅದನ್ನು ಸ್ವೀಕರಿಸಲು ಅವರು ಸಿದ್ಧರಾಗಿರಬೇಕು ಅಷ್ಟೇ ಎಂದು ಅವರು ಸಲಹೆಕೊಟ್ಟರು. ಈ ಸಲಹೆಯನ್ನು ಅನ್ವಯಿಸುವುದು ನಿಸ್ಸಂದೇಹವಾಗಿಯೂ, ಹೊಸ ಮಿಷನೆರಿಗಳಿಗೆ ದೇವರ ವಾಕ್ಯದ ಶಿಕ್ಷಕರೋಪಾದಿ ತಮ್ಮ ನೇಮಕಗಳನ್ನು ಪೂರೈಸುವಂತೆ ಸಹಾಯಮಾಡುವುದು.
ಕೊನೆಯಲ್ಲಿ, “ಯಾರನ್ನು ಯಾವುದು ಪ್ರಭಾವಿಸುತ್ತಿದೆ?” ಎಂಬ ವಿಷಯದ ಮೇಲೆ ಆಡಳಿತ ಮಂಡಳಿಯ ಒಬ್ಬ ಸದಸ್ಯರಾದ ಥಿಯಡೋರ್ ಜರಸ್, ಸಭಿಕರನ್ನು ಸಂಬೋಧಿಸಿ ಮಾತಾಡಿದರು. ಕ್ರೈಸ್ತರೋಪಾದಿ ನಾವು ಆತ್ಮದ ಫಲವನ್ನು ಪ್ರದರ್ಶಿಸುವಾಗ, ನಾವು ಬೇರೆ ಜನರ ಮೇಲೆ ಒಂದು ಒಳ್ಳೆಯ ಪ್ರಭಾವವಾಗಿರಸಾಧ್ಯವಿದೆಯೆಂದು ಅವರು ವಿವರಿಸಿದರು. “ಯೆಹೋವನ ಸಂಸ್ಥೆಯಿಂದ ಕಳುಹಿಸಲ್ಪಡುವ ಮಿಷನೆರಿಗಳು, ಜನರನ್ನು ಒಂದು ಹಿತಕರವಾದ, ಆತ್ಮಿಕ ವಿಧದಲ್ಲಿ ಪ್ರಭಾವಿಸುವ ವಿಷಯದಲ್ಲಿ, ಒಂದು ಶ್ಲಾಘನೀಯ ದಾಖಲೆಯನ್ನು ರಚಿಸಿದ್ದಾರೆ,” ಎಂದು ಅವರು ಗಮನಿಸಿದರು. ಮಿಷನೆರಿಗಳಿಂದ ಇಡಲ್ಪಟ್ಟಿರುವ ಒಳ್ಳೆಯ ಮಾದರಿಗಳ ಫಲವಾಗಿ ದೇವರನ್ನು ಸೇವಿಸಲು ಸಹಾಯ ಮಾಡಲ್ಪಟ್ಟಿರುವ ವ್ಯಕ್ತಿಗಳಿಂದ ಮಾಡಲ್ಪಟ್ಟ ಕೆಲವು ಹೇಳಿಕೆಗಳನ್ನು ಅವರು ಅನಂತರ ಉಲ್ಲೇಖಿಸಿದರು. “ಯೆಹೋವನ ಜನರು ಸಂಪಾದಿಸಿಕೊಂಡಿರುವ ಖ್ಯಾತಿಯನ್ನು ನೀವು ಕಾಪಾಡಿಕೊಳ್ಳುವಂತಾಗಲಿ ಮತ್ತು ಅರ್ಹ ವ್ಯಕ್ತಿಗಳ ಅನ್ವೇಷಣೆಯಲ್ಲಿ ನಿಮ್ಮ ವಿದೇಶ ನೇಮಕದಲ್ಲಿನ ಆ ಬಾಗಿಲುಗಳ ಮೇಲೆ ತಟ್ಟುತ್ತಾ ಮುಂದುವರಿಯಿರಿ . . . ಅಲ್ಲದೆ, ನಿಮ್ಮ ಯಥಾರ್ಥ, ಶುದ್ಧ ನಡತೆಯ ಮೂಲಕ, ಈ ಲೋಕದ ಆತ್ಮವನ್ನು ವಿರೋಧಿಸಿರಿ ಮತ್ತು ಯೆಹೋವನಿಗೆ ಸ್ತುತಿ ಮತ್ತು ಗೌರವವನ್ನು ತರುವ ರೀತಿಯಲ್ಲಿ ಒಳ್ಳೆಯದಕ್ಕಾಗಿ ಒಂದು ಪ್ರಭಾವವಾಗಿರಿ,” ಎಂದು ಹೇಳುತ್ತಾ ಅವರು ಸಮಾಪ್ತಿಗೊಳಿಸಿದರು.
ಕಾರ್ಯಕ್ರಮವನ್ನು ಸಾರಾಂಶಿಸುತ್ತಾ, ಅಧ್ಯಕ್ಷರು ದೂರದಿಂದಲೂ ಹತ್ತಿರದಿಂದಲೂ ಬಂದ ಶುಭಾಶಯಗಳನ್ನು ಹಂಚಿಕೊಂಡರು ಮತ್ತು ಅನಂತರ ಡಿಪ್ಲೋಮಗಳನ್ನು ನೀಡಿ, ಮಿಷನೆರಿ ನೇಮಕಗಳನ್ನು ಘೋಷಿಸಿದರು. ಅನಂತರ, ಪದವೀಧರರಲ್ಲಿ ಒಬ್ಬನು, ಒದಗಿಸಲ್ಪಟ್ಟ ಉಪದೇಶಕ್ಕಾಗಿ ಉಪಕಾರಗಳನ್ನು ವ್ಯಕ್ತಪಡಿಸುವ ತರಗತಿಯ ಠರಾವನ್ನು ಓದಿಹೇಳಿದನು. ಸ್ಪಷ್ಟವಾಗಿ, 102ನೆಯ ತರಗತಿಯ ಪದವಿಪ್ರಾಪ್ತಿ ಕಾರ್ಯಕ್ರಮವು, ಹಾಜರಿದ್ದವರೆಲ್ಲರಿಗೂ ದೇವರ ವಾಕ್ಯವನ್ನು ಪ್ರಕಟಪಡಿಸುವುದರಲ್ಲಿ ಮುಂದೊತ್ತಲಿಕ್ಕಾಗಿ ಹೆಚ್ಚು ನಿರ್ಧರಿತರಾಗಿರುವಂತೆ ಮಾಡಿತು.
[ಪುಟ 31 ರಲ್ಲಿರುವ ಚಿತ್ರ]
ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ ಪದವಿಪಡೆಯುತ್ತಿರುವ 102ನೆಯ ತರಗತಿ
ಕೆಳಗಣ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಎಣಿಸಲ್ಪಟ್ಟು, ಪ್ರತಿ ಸಾಲಿನಲ್ಲಿ ಹೆಸರುಗಳು ಎಡದಿಂದ ಬಲಕ್ಕೆ ಪಟ್ಟಿಮಾಡಲ್ಪಟ್ಟಿವೆ.
(1) ಡಫಿ, ಸಿ.; ಅಲೆಕ್ಸಿಸ್, ಡಿ.; ಹಾರ್ಫ್, ಆರ್.; ಲೀ, ಜೆ.; ಕಾರೀ, ವಿ.; ನಾರ್ಟಮ್, ಟಿ.; ಮೊರಾ, ಎನ್.; ಜಾರ್ನೆಟ್, ಎಫ್. (2) ಯೂಪ್ವಿಕ್, ಎಲ್.; ಸಿಂಗ್, ಕೆ.; ಹಾರ್ಟ್, ಬಿ.; ಕರ್ಕಾರೀಯನ್, ಎಮ್.; ಲೀ, ಎಸ್.; ರಾಸ್ಟಲ್, ಎಸ್.; ಸೂಲನ್, ಕೆ.; ಕೋಲಟ್, ಕೆ. (3) ಸಿಂಗ್, ಡಿ.; ಪೀಟ್ಲೂ, ಜೆ.; ಪೀಟ್ಲೂ, ಎಫ್.; ಬೋಕಾಕ್, ಎನ್.; ಟಾರ್ಮ, ಸಿ.; ಮಸ್ಲೋ, ಎ.; ರಿಚರ್ಡ್ಸನ್, ಸಿ; ನಾರ್ಟಮ್, ಡಿ. (4) ಹಾರ್ಫ್, ಜೆ.; ಜಾರ್ನೆಟ್, ಕೆ.; ಬಾರ್ಬರ್, ಎ.; ಲೋಬೆರ್ಟೊ, ಜೆ.; ಲೋಬೆರ್ಟೊ, ಆರ್.; ಮಸ್ಲೋ, ಎಮ್.; ಮೊರಾ, ಆರ್.; ಹಾರ್ಟ್, ಎಮ್. (5) ಟಾರ್ಮ, ಎಸ್.; ರಾಸ್ಟಲ್, ಎ.; ಡಾಯಸ್, ಆರ್.; ಡಾಯಸ್, ಎಚ್.; ವೈಸರ್, ಎಮ್.; ವೈಸರ್, ಜೆ.; ಕರ್ಕಾರೀಯನ್, ಜಿ.; ಸೂಲನ್, ಎ. (6) ಅಲೆಕ್ಸಿಸ್, ಆರ್.; ಬಾರ್ಬರ್, ಡಿ.; ಯೂಪ್ವಿಕ್, ಎಚ್.; ಡಫೀ, ಸಿ; ಕೋಲಟ್, ಟಿ.; ರಿಚರ್ಡ್ಸನ್, ಎಮ್.; ಬೋಕಾಕ್, ಎಸ್.; ಕಾರೀ, ಜಿ.