ಯಶಸ್ವಿಕರವಾದ ವಿದ್ಯಾರ್ಥಿಗಳಿಂದ ಯಶಸ್ವಿಕರವಾದ ಮಿಷನೆರಿಗಳು
ತಾನೂ ತನ್ನ ಹೆಂಡತಿಯಾದ ಪ್ಯಾಟ್ಸಿಯೂ ಪಡೆದುಕೊಂಡಿದ್ದ ತರಬೇತಿಯನ್ನು ಸೂಚಿಸುತ್ತಾ, “ನಮಗೆ ಈ ಸುಯೋಗವು ದೊರಕಿತ್ತೆಂಬುದನ್ನು ನನಗೆ ಈಗಲೂ ನಂಬಲಾಗುವುದಿಲ್ಲ!” ಎಂದು ವಿಲ್ ಉದ್ಗರಿಸಿದರು. ಅವರು ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ 103ನೇ ಕ್ಲಾಸಿನ ವಿದ್ಯಾರ್ಥಿಗಳೋಪಾದಿ ಈಗಷ್ಟೇ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿದ್ದರು. ಸೇಹೀಡ್ ಮತ್ತು ಜೆನೀ ಅದನ್ನೇ ಒಪ್ಪಿಕೊಂಡರು. “ನಾವು ಇಲ್ಲಿರಲು ಸುಯೋಗವುಳ್ಳವರು ಎಂಬ ಅನಿಸಿಕೆ ನಮಗಾಗುತ್ತದೆ” ಎಂದರವರು. ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಶ್ರದ್ಧಾಪೂರ್ವಕವಾಗಿ ಅಭ್ಯಾಸಮಾಡಿದ್ದರು. ಈಗ ಅವರು ಮಿಷನೆರಿಗಳೋಪಾದಿ ತಮ್ಮ ಜೀವನ ರೀತಿಯನ್ನು ಆರಂಭಿಸಲು ಕಾತುರರಾಗಿದ್ದರು. ಆದರೆ ಮೊದಲಾಗಿ, ಸೆಪ್ಟೆಂಬರ್ 6, 1997ರಂದು, ಪದವಿ ನೀಡುವ ಕಾರ್ಯಕ್ರಮದಲ್ಲಿ, ತಮ್ಮ ಮಿಷನೆರಿ ನೇಮಕಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುವಂತೆ ಸಹಾಯ ಮಾಡಸಾಧ್ಯವಿರುವ ಪ್ರೀತಿಪರ ಸಲಹೆಯು ಅವರಿಗೆ ದೊರಕಿತು.
ಆಡಳಿತ ಮಂಡಳಿಯ ಒಬ್ಬ ಸದಸ್ಯರಾಗಿರುವ ಥಿಯಡೋರ್ ಜಾರಸ್, ಕಾರ್ಯಕ್ರಮದ ಅಧ್ಯಕ್ಷರಾಗಿದ್ದರು. ಬೆತೆಲ್ ಕುಟುಂಬ ಮತ್ತು ವಾಚ್ ಟವರ್ ಸೊಸೈಟಿಯ ಬ್ರಾಂಚ್ಗಳಲ್ಲಿ 48 ಬ್ರಾಂಚ್ಗಳ ಪ್ರತಿನಿಧಿಗಳೊಂದಿಗೆ, ಅಮೆರಿಕ, ಕೆನಡ, ಪೋರ್ಟರೀಕೊ, ಮತ್ತು ಯೂರೋಪ್ನಿಂದ ಬಂದ ಸ್ನೇಹಿತರು ಹಾಗೂ ಸಂಬಂಧಿಕರು, ತಮ್ಮ ಬೆಂಬಲ ಮತ್ತು ತಮ್ಮ ಪ್ರೀತಿಯ ಖಾತ್ರಿಯನ್ನು ಕೊಡಲಿಕ್ಕಾಗಿ ಅಲ್ಲಿ ಹಾಜರಿದ್ದರು ಎಂದು ಅವರು ಸೂಚಿಸಿದರು. ಕ್ರೈಸ್ತಪ್ರಪಂಚದ ಚರ್ಚುಗಳಿಂದ ಕಳುಹಿಸಲ್ಪಟ್ಟ ಮಿಷನೆರಿಗಳು ಅನೇಕವೇಳೆ ಮಿಷನೆರಿ ಕೆಲಸದಿಂದ ಅಪಕರ್ಷಿತರಾಗಿದ್ದು, ಪಾಂಡಿತ್ಯಪೂರ್ಣ ಸಾಹಸಗಳನ್ನು ಬೆನ್ನಟ್ಟಲು ಆರಂಭಿಸಿದ್ದಾರೆ ಅಥವಾ ರಾಜಕೀಯದಲ್ಲೂ ಸಿಕ್ಕಿಕೊಂಡಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಗಿಲ್ಯಡ್ನ ಪದವೀಧರರಿಗೆ ಏನನ್ನು ಮಾಡುವಂತೆ ತರಬೇತಿ ನೀಡಲಾಗಿದೆಯೋ ಅದನ್ನೇ ಅವರು ಮಾಡುತ್ತಾರೆ. ಅವರು ಜನರಿಗೆ ಬೈಬಲನ್ನು ಕಲಿಸುತ್ತಾರೆ ಎಂದು ಸಹೋದರ ಜಾರಸ್ ಅವಲೋಕಿಸಿದರು.
ತದನಂತರ, ಸೊಸೈಟಿಯ ಬ್ರೂಕ್ಲಿನ್ ಆಫೀಸಿನ ರಾಬರ್ಟ್ ಬಟ್ಲರ್ ಅವರು, “ನಿಮ್ಮ ಮಾರ್ಗವನ್ನು ಯಶಸ್ವಿದಾಯಕವಾದದ್ದಾಗಿ ಮಾಡಿರಿ” ಎಂಬ ಮುಖ್ಯವಿಷಯದ ಕುರಿತು ಮಾತಾಡಿದರು. ಜನರು ಯಶಸ್ಸನ್ನು ಹಣಕಾಸು ಅಥವಾ ಇನ್ನಿತರ ವೈಯಕ್ತಿಕ ಲಾಭದ ರೂಪದಲ್ಲಿ ಅಳೆಯುವಾಗ, ದೇವರು ಯಶಸ್ಸನ್ನು ಹೇಗೆ ಅಳೆಯುತ್ತಾನೆ ಎಂಬುದೇ ನಿಜವಾಗಿಯೂ ಪ್ರಾಮುಖ್ಯವಾದ ವಿಷಯವಾಗಿದೆ ಎಂದು ಅವರು ವಿವರಿಸಿದರು. ಯೇಸುವಿನ ಶುಶ್ರೂಷೆಯು ಯಶಸ್ವಿಕರವಾಗಿತ್ತು; ಅವನು ದೊಡ್ಡ ಸಂಖ್ಯೆಯಲ್ಲಿ ಜನರನ್ನು ಮತಾಂತರಿಸಿದ ಕಾರಣದಿಂದಲ್ಲ, ಬದಲಾಗಿ ಅವನು ತನ್ನ ನೇಮಕದಲ್ಲಿ ನಂಬಿಗಸ್ತನಾಗಿದ್ದ ಕಾರಣದಿಂದಲೇ. ಯೇಸು ಯೆಹೋವನಿಗೆ ಘನತೆಯನ್ನು ತಂದನು, ಮತ್ತು ಲೋಕದಿಂದ ಕಲುಷಿತನಾಗದೆ ಉಳಿದನು. (ಯೋಹಾನ 16:33; 17:4) ಇವು ಪ್ರತಿಯೊಬ್ಬ ಕ್ರೈಸ್ತನು ಮಾಡಸಾಧ್ಯವಿರುವ ವಿಷಯಗಳಾಗಿವೆ.
“ಎಲ್ಲ ವ್ಯಕ್ತಿಗಳಿಗೆ ದಾಸರಾಗಿರಿ” ಎಂದು, ಈ ಹಿಂದೆ ಪೌರಸ್ತ್ಯ ದೇಶದಲ್ಲಿ ಒಬ್ಬ ಮಿಷನೆರಿಯಾಗಿದ್ದ ರಾಬರ್ಟ್ ಪೆವೀ ಸಲಹೆ ನೀಡಿದರು. ಅಪೊಸ್ತಲ ಪೌಲನು ಒಬ್ಬ ಯಶಸ್ವಿಕರ ಮಿಷನೆರಿಯಾಗಿದ್ದನು. ಅವನ ಯಶಸ್ಸಿಗೆ ಯಾವುದು ಕೀಲಿ ಕೈಯಾಗಿತ್ತು? ಅವನು ತನ್ನನ್ನು ಸರ್ವರ ದಾಸನನ್ನಾಗಿ ಮಾಡಿಕೊಂಡನು. (1 ಕೊರಿಂಥ 9:19-23) ಭಾಷಣಕರ್ತನು ವಿವರಿಸಿದ್ದು: “ಆ ಮನೋಭಾವವುಳ್ಳ ಒಬ್ಬ ಗಿಲ್ಯಡ್ ಪದವೀಧರನು, ಮಿಷನೆರಿ ಸೇವೆಯನ್ನು ಒಂದು ರೀತಿಯ ವೃತ್ತಿಜೀವನದ ಬಡತಿಯಾಗಿ, ಸಂಸ್ಥೆಯಲ್ಲಿ ಹೆಚ್ಚು ಪ್ರಾಮುಖ್ಯವಾದ ಸ್ಥಾನಗಳಿಗೆ ಒಂದು ಮೆಟ್ಟುಗಲ್ಲಾಗಿ ವೀಕ್ಷಿಸುವುದಿಲ್ಲ. ಮಿಷನೆರಿಯೊಬ್ಬನು ಸೇವೆಮಾಡುವ ಒಂದೇ ಒಂದು ಹೇತುವಿನಿಂದ ತನ್ನ ನೇಮಕಕ್ಕೆ ಹೋಗುತ್ತಾನೆ, ಏಕೆಂದರೆ ದಾಸರು ಮಾಡುವುದು ಅದನ್ನೇ.”
ಆಡಳಿತ ಮಂಡಳಿಯ ಗೆರಟ್ ಲಾಶ್ ಅವರು ತಮ್ಮ ಸಲಹೆಯನ್ನು ಮುಖ್ಯವಾಗಿ 2 ಕೊರಿಂಥದ 3 ಮತ್ತು 4ನೆಯ ಅಧ್ಯಾಯಗಳ ಮೇಲಾಧಾರಿಸುತ್ತಾ, “ಯೆಹೋವನ ಮಹಿಮೆಯನ್ನು ಕನ್ನಡಿಗಳಂತೆ ಪ್ರತಿಫಲಿಸಿರಿ” ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ದೇವರ ಜ್ಞಾನವು ಬೆಳಕಿನಂತಿದ್ದು, ಅದನ್ನು ಪಡೆದುಕೊಳ್ಳಲಿಕ್ಕಾಗಿ ಕ್ರೈಸ್ತನೊಬ್ಬನು ತನ್ನ ಹೃದಯವನ್ನು ತೆರೆಯುವಾಗ, ಅದು ಅವನ ಮೇಲೆ ಕಾಂತಿಬೀರುತ್ತದೆಂದು ಅವರು ವಿದ್ಯಾರ್ಥಿಗಳಿಗೆ ಜ್ಞಾಪಕ ಹುಟ್ಟಿಸಿದರು. ಸುವಾರ್ತೆಯನ್ನು ಸಾರುವ ಮೂಲಕ ಮತ್ತು ಸುನಡತೆಯನ್ನು ಕಾಪಾಡಿಕೊಳ್ಳುವ ಮೂಲಕ ನಾವು ಆ ಬೆಳಕನ್ನು ಪ್ರತಿಫಲಿಸುತ್ತೇವೆ. “ಕೆಲವೊಮ್ಮೆ ನೀವು ಅದಕ್ಕೆ ತಕ್ಕವರಲ್ಲ ಎಂಬ ಅನಿಸಿಕೆ ನಿಮಗಾಗಬಹುದು. . . . ಅಂತಹ ಅನಿಸಿಕೆಗಳು ಉಂಟಾಗುವಾಗ, ಯೆಹೋವನ ಮೇಲೆ ಆತುಕೊಳ್ಳಿರಿ, ಏಕೆಂದರೆ ‘ಬಲಾಧಿಕ್ಯವು ದೇವರದ್ದಾಗಿರಬಹುದು’” ಎಂದು ಅವರು ಒಪ್ಪಿಕೊಂಡರು. (2 ಕೊರಿಂಥ 4:7, NW) 2 ಕೊರಿಂಥ 4:1ರಲ್ಲಿ ದಾಖಲಿಸಲ್ಪಟ್ಟಿರುವ ಪೌಲನ ಮಾತುಗಳನ್ನು ಪ್ರತಿಧ್ವನಿಸುತ್ತಾ, ಸಹೋದರ ಲಾಶ್ ವಿದ್ಯಾರ್ಥಿಗಳಿಗೆ ಕೇಳಿಕೊಂಡಿದ್ದು: “ನಿಮ್ಮ ಮಿಷನೆರಿ ನೇಮಕವನ್ನು ಬಿಟ್ಟುಬಿಡಬೇಡಿ. ನಿಮ್ಮ ಕನ್ನಡಿಗೆ ಹೊಳಪು ನೀಡುತ್ತಾ ಇರಿ!”
ಗಿಲ್ಯಡ್ ಶಾಖೆಯ ಒಬ್ಬ ಸದಸ್ಯರಾದ ಕಾರ್ಲ್ ಆ್ಯಡಮ್ಸ್, “ಯೆಹೋವನು ಎಲ್ಲಿದ್ದಾನೆ?” ಎಂಬ ಆಸಕ್ತಿಕರವಾದ ಮುಖ್ಯವಿಷಯದ ಕುರಿತು ಮಾತಾಡಿದರು. ಈ ಪ್ರಶ್ನೆಯು, ವಿಶ್ವದಲ್ಲಿನ ಯೆಹೋವನ ನಿವಾಸಕ್ಕಲ್ಲ, ಬದಲಾಗಿ ಯೆಹೋವನ ದೃಷ್ಟಿಕೋನವನ್ನು ಹಾಗೂ ಆತನ ಮಾರ್ಗದರ್ಶನೆಯ ಗುರುತುಗಳನ್ನು ಪರಿಗಣಿಸುವ ಅಗತ್ಯವನ್ನು ಸೂಚಿಸುತ್ತದೆ. “ಒತ್ತಡದ ಕೆಳಗೆ . . . ಯೆಹೋವನ ಸೇವೆಯಲ್ಲಿ ದೀರ್ಘಸಮಯದ ದಾಖಲೆಯಿರುವ ಒಬ್ಬ ವ್ಯಕ್ತಿಯೂ ಯೆಹೋವನ ದೃಷ್ಟಿಕೋನವನ್ನು ಮರೆತುಬಿಡಬಹುದು” ಎಂದು ಅವರು ಹೇಳಿದರು. (ಯೋಬ 35:10) ನಮ್ಮ ಆಧುನಿಕ ದಿನದ ಕುರಿತಾಗಿ ಏನು? 1942ರಲ್ಲಿ, ದೇವಜನರಿಗೆ ಮಾರ್ಗದರ್ಶನದ ಅಗತ್ಯವಿತ್ತು. ಸಾರುವಿಕೆಯ ಕೆಲಸವು ಕೊನೆಗೊಳ್ಳಲಿತ್ತೊ, ಅಥವಾ ಹೆಚ್ಚು ಕೆಲಸವನ್ನು ಮಾಡಲಿಕ್ಕಿತ್ತೊ? ತನ್ನ ಜನರಿಗಾಗಿ ಯೆಹೋವನ ಚಿತ್ತವು ಏನಾಗಿತ್ತು? ಅವರು ದೇವರ ವಾಕ್ಯವನ್ನು ಅಭ್ಯಾಸಿಸಿದಂತೆ, ಉತ್ತರವು ಸ್ಪಷ್ಟವಾಯಿತು. “ಆ ಕ್ಯಾಲೆಂಡರ್ ವರ್ಷವು ಮುಗಿಯುವುದಕ್ಕೆ ಮುಂಚೆ, . . . ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ಗಾಗಿ ಯೋಜನೆಗಳು ಹಾಕಲ್ಪಟ್ಟಿದ್ದವು” ಎಂದು ಸಹೋದರ ಆ್ಯಡಮ್ಸ್ ಘೋಷಿಸಿದರು. ಆ ಶಾಲೆಯಿಂದ ಕಳುಹಿಸಲ್ಪಟ್ಟ ಮಿಷನೆರಿಗಳ ಕೆಲಸವನ್ನು ಯೆಹೋವನು ನಿಶ್ಚಯವಾಗಿಯೂ ಆಶೀರ್ವದಿಸಿದ್ದಾನೆ.
ಮಾರ್ಕ್ ನೂಮ್ಯಾರ್ ಅವರು ಮಾತಾಡಲಿಕ್ಕಿದ್ದ ಎರಡನೆಯ ಶಿಕ್ಷಕರಾಗಿದ್ದರು. “ನಿಮ್ಮ ತಲಾಂತನ್ನು ನೀವು ಹೇಗೆ ಉಪಯೋಗಿಸುವಿರಿ?” ಎಂಬ ಶಿರೋನಾಮವುಳ್ಳ ತಮ್ಮ ಭಾಷಣದಲ್ಲಿ ಅವರು, ವಿದ್ಯಾರ್ಥಿಗಳು ತಮ್ಮ ಹೊಸ ನೇಮಕಗಳಿಗೆ ಆಗಮಿಸಿದ ಕೂಡಲೆ, ಅವರು ಗಿಲ್ಯಡ್ನಲ್ಲಿ ಪಡೆದುಕೊಂಡಿದ್ದ ತರಬೇತಿಯನ್ನು ಅನ್ವಯಿಸಿಕೊಳ್ಳುವಂತೆ ಅವರನ್ನು ಪ್ರೋತ್ಸಾಹಿಸಿದರು. “ಇತರರಲ್ಲಿ ಆಸಕ್ತಿಯನ್ನು ವಹಿಸಿಲು ನಿಮ್ಮನ್ನೇ ತೊಡಗಿಸಿಕೊಳ್ಳಿರಿ. . . . ಜನರಲ್ಲಿ ಹಾಗೂ ಅವರ ಸಂಸ್ಕೃತಿಯಲ್ಲಿ ಆಸಕ್ತರಾಗಿರಿ. ಆ ದೇಶದ ಪದ್ಧತಿಗಳು, ಇತಿಹಾಸ, ಹಾಸ್ಯಪ್ರವೃತ್ತಿಯನ್ನು ಕಲಿಯಲು ಕಾತುರರಾಗಿರಿ. ನೀವು ಎಷ್ಟು ಬೇಗ ಭಾಷೆಯನ್ನು ಕಲಿಯುತ್ತೀರೋ ಅಷ್ಟು ಬೇಗ ನೀವು ನಿಮ್ಮ ಹೊಸ ನೇಮಕಕ್ಕೆ ಹೊಂದಿಕೊಳ್ಳುತ್ತೀರಿ” ಎಂದರು ಅವರು.
ಹುರುಪಿನ ವಿದ್ಯಾರ್ಥಿಗಳು ಶುಶ್ರೂಷೆಯಲ್ಲಿ ಆನಂದವನ್ನು ಕಂಡುಕೊಳ್ಳುತ್ತಾರೆ
ಗಿಲ್ಯಡ್ನಲ್ಲಿರುವಾಗ ತಮ್ಮನ್ನು ತಮ್ಮ ಅಧ್ಯಯನಗಳಿಗೆ ಮೀಸಲಾಗಿರಿಸಿಕೊಳ್ಳುವುದರೊಂದಿಗೆ, ವಿದ್ಯಾರ್ಥಿಗಳು 11 ಸ್ಥಳಿಕ ಸಭೆಗಳಿಗೆ ನೇಮಿಸಲ್ಪಟ್ಟಿದ್ದರು. ವಾರಾಂತ್ಯಗಳಲ್ಲಿ, ಅವರು ಸಾರುವ ಚಟುವಟಿಕೆಯಲ್ಲಿ ಹುರುಪಿನಿಂದ ಪಾಲ್ಗೊಂಡರು. ಗಿಲ್ಯಡ್ ಶಾಖೆಯ ವಾಲೆಸ್ ಲಿವರೆನ್ಸ್ ಅವರು, ಸಭಿಕರೊಂದಿಗೆ ತಮ್ಮ ಅನುಭವಗಳಲ್ಲಿ ಕೆಲವನ್ನು ಹಂಚಿಕೊಳ್ಳುವಂತೆ ಅವರಲ್ಲಿ ಅನೇಕರನ್ನು ಆಮಂತ್ರಿಸಿದರು. ಮಾರುಕಟ್ಟೆಗಳಲ್ಲಿ, ವಾಹನ ನಿಲ್ದಾಣಗಳಲ್ಲಿ, ವ್ಯಾಪಾರ ಕ್ಷೇತ್ರದಲ್ಲಿ, ಬೀದಿಯಲ್ಲಿ, ಮತ್ತು ಮನೆಯಿಂದ ಮನೆಗೆ ಸಾಕ್ಷಿನೀಡುತ್ತಿರುವಾಗ ತಮಗಾದ ಅನುಭವಗಳನ್ನು ಅವರು ತಿಳಿಸಿದಂತೆ, ಅವರ ಆನಂದವು ಸುವ್ಯಕ್ತವಾಗಿತ್ತು. ಅವರಲ್ಲಿ ಕೆಲವರು, ತಮ್ಮ ಸಭೆಯ ಟೆರಿಟೊರಿಯಲ್ಲಿ ವಾಸಿಸುತ್ತಿದ್ದು ಕೆಲಸಮಾಡುತ್ತಿದ್ದ ವಿದೇಶಿ ಭಾಷೆಯನ್ನಾಡುವ ಜನರನ್ನು ತಲಪಲಿಕ್ಕಾಗಿರುವ ಮಾರ್ಗಗಳಿಗಾಗಿ ಹುಡುಕಿದರು. ಅವರ ತರಬೇತಿಯ ಐದು ತಿಂಗಳುಗಳ ಸಮಯದಲ್ಲಿ, 103ನೆಯ ಕ್ಲಾಸಿನ ಸದಸ್ಯರಿಂದ ಕಡಿಮೆಪಕ್ಷ ಹತ್ತು ಮನೆ ಬೈಬಲ್ ಅಭ್ಯಾಸಗಳು ಆರಂಭಿಸಲ್ಪಟ್ಟು, ನಡೆಸಲ್ಪಟ್ಟವು.
ದೀರ್ಘಸಮಯದ ಮಿಷನೆರಿಗಳು ಯಶಸ್ಸಿನ ಗುಟ್ಟುಗಳನ್ನು ಹಂಚಿಕೊಳ್ಳುತ್ತಾರೆ
ಕಾರ್ಯಕ್ರಮದ ಈ ಆನಂದದಾಯಕ ಭಾಗದ ತರುವಾಯ, ಪ್ಯಾಟ್ರಿಕ್ ಲಫ್ರಾಂಕ್ ಮತ್ತು ವಿಲಿಯಮ್ ವ್ಯಾನ್ ಡೀ ವಾಲ್ ಅವರು, ಕ್ಲಾಸಿನ ಪ್ರಯೋಜನಕ್ಕಾಗಿ, ಏಳು ಬ್ರಾಂಚ್ ಕಮಿಟಿ ಸದಸ್ಯರು, ಅವರು ತಮ್ಮ ಮಿಷನೆರಿ ಜೀವನ ರೀತಿಯಲ್ಲಿ ಕಲಿತುಕೊಂಡಿದ್ದ ಪಾಠಗಳನ್ನು ವಿವರಿಸುವಂತೆ ಕರೆಕೊಟ್ಟರು. ತಮ್ಮ ಮಿಷನೆರಿ ನೇಮಕವು ಯೆಹೋವನಿಂದ ಬಂದದ್ದಾಗಿದೆಯೆಂದು ಪರಿಗಣಿಸುವಂತೆ ಮತ್ತು ಆ ನೇಮಕಕ್ಕೆ ದೃಢವಾಗಿ ಅಂಟಿಕೊಳ್ಳುವ ನಿರ್ಧಾರ ಮಾಡಿರುವವರಾಗಿರುವಂತೆ ಅವರು ಪದವೀಧರರಿಗೆ ಬುದ್ಧಿಹೇಳಿದರು. ಬೇರೆ ದೇಶಗಳಲ್ಲಿನ ಕಾರ್ಯದಲ್ಲಿ ಗಿಲ್ಯಡ್ ತರಬೇತಿ ಪಡೆದ ಮಿಷನೆರಿಗಳು ಪಡೆದುಕೊಂಡಿದ್ದ ಸಕಾರಾತ್ಮಕ ಪರಿಣಾಮಗಳ ಕುರಿತು ಅವರು ಮಾತಾಡಿದರು.
ಸಂತೋಷಭರಿತ, ಫಲದಾಯಕ ಮಿಷನೆರಿಗಳೋಪಾದಿ ಅನೇಕ ದಶಕಗಳ ವರೆಗೆ ಸೇವೆಮಾಡುವಂತೆ ಈ ಬ್ರಾಂಚ್ ಕಮಿಟಿ ಸದಸ್ಯರಿಗೆ ಯಾವುದು ಸಹಾಯ ಮಾಡಿತು? ಅವರು ಸ್ಥಳಿಕ ಸಹೋದರರೊಂದಿಗೆ ನಿಕಟವಾಗಿ ಕಾರ್ಯನಡಿಸಿದರು ಮತ್ತು ಅವರಿಂದ ಕಲಿತುಕೊಂಡರು. ಅವರು ತಮ್ಮ ನೇಮಕಗಳಿಗೆ ಆಗಮಿಸಿದ ಕೂಡಲೆ, ಅಲ್ಲಿನ ಭಾಷೆಯನ್ನು ಕಲಿಯಲಿಕ್ಕಾಗಿ ತಮ್ಮನ್ನು ಪ್ರಯೋಗಿಸಿಕೊಂಡರು. ಅವರು ಸ್ಥಳಿಕ ಪದ್ಧತಿಗಳಿಗೆ ಮಣಿಯುವವರಾಗಿರಲು ಹಾಗೂ ತಕ್ಕಂತೆ ಹೊಂದಿಕೊಳ್ಳಲು ಕಲಿತರು. ಗಿಲ್ಯಡ್ನ ಮೊದಲನೆಯ ಕ್ಲಾಸಿನ ಪದವೀಧರರೂ 54 ವರ್ಷಗಳಿಂದ ಒಬ್ಬ ಮಿಷನೆರಿಯೂ ಆಗಿರುವ ಚಾರ್ಲ್ಸ್ ಐಸೆನ್ಹಾವರ್ ಅವರು, ಯಶಸ್ವಿಕರ ಮಿಷನೆರಿಗಳು ಕಲಿತುಕೊಂಡಿರುವ ಐದು “ಗುಟ್ಟುಗಳ”ನ್ನು ಹಂಚಿಕೊಂಡರು: (1) ಬೈಬಲನ್ನು ಕ್ರಮವಾಗಿ ಅಭ್ಯಾಸಿಸಿರಿ, (2) ಭಾಷೆಯನ್ನು ಕಲಿಯಿರಿ, (3) ಶುಶ್ರೂಷೆಯಲ್ಲಿ ಕ್ರಿಯಾಶೀಲರಾಗಿರಿ, (4) ಮಿಷನೆರಿ ಗೃಹದಲ್ಲಿನ ಶಾಂತಿಗಾಗಿ ಕಾರ್ಯನಡಿಸಿರಿ, ಮತ್ತು (5) ಕ್ರಮವಾಗಿ ಯೆಹೋವನಿಗೆ ಪ್ರಾರ್ಥಿಸಿರಿ. ಆ ವಿದ್ಯಾರ್ಥಿಗಳು ತಾವು ಪಡೆದುಕೊಂಡ ಪ್ರಾಯೋಗಿಕ ಸಲಹೆಯಿಂದ ಮಾತ್ರವಲ್ಲ, ಯೆಹೋವನ ಸೇವೆಯಲ್ಲಿ ಈ ಅನುಭವಸ್ಥ ಮಿಷನೆರಿಗಳಿಗಿರುವ ಸುವ್ಯಕ್ತವಾದ ಆನಂದದಿಂದಲೂ ಪ್ರಭಾವಿತರಾದರು. ಆರ್ಮಾಂಡೋ ಮತ್ತು ಲೂಪ್ ಹೇಳುವಂತೆ, “ಬ್ರಾಂಚ್ ಕಮಿಟಿ ಸದಸ್ಯರು ತಮ್ಮ ಜೀವನಗಳ ಕುರಿತಾಗಿ ಮಾತಾಡುತ್ತಿರುವಾಗ, ಸಂತೋಷಿತರಾಗಿದ್ದಾರೆ.”
ಇಂಟರ್ವ್ಯೂಗಳ ಅನಂತರ, ಒಂದು ಭಾಷಣವು ಉಳಿಯಿತು. ಆಡಳಿತ ಮಂಡಳಿಯ ಒಬ್ಬ ಸದಸ್ಯರಾದ ಆ್ಯಲ್ಬರ್ಟ್ ಶ್ರೋಡರ್, “ದೇವರ ವಾಕ್ಯದ ನಂಬಿಗಸ್ತ ಮನೆವಾರ್ತೆಯು ಸತ್ಯದ ಅಮೂಲ್ಯ ರತ್ನಗಳನ್ನು ಪ್ರಕಟಪಡಿಸುತ್ತದೆ” ಎಂಬುದನ್ನು ತಮ್ಮ ಮುಖ್ಯವಿಷಯವಾಗಿ ಆರಿಸಿಕೊಂಡರು. ಬೈಬಲು ಗಿಲ್ಯಡ್ ಶಾಲೆಯ ಪ್ರಮುಖ ಪಠ್ಯಪುಸ್ತಕವಾಗಿರುವುದರಿಂದ, ಅವರು ಹೇಳಲಿಕ್ಕಿದ್ದ ವಿಷಯದಲ್ಲಿ ವಿದ್ಯಾರ್ಥಿಗಳು ಆಸಕ್ತರಾಗಿದ್ದರು. ಸಹೋದರ ಶ್ರೋಡರ್ ಸೂಚಿಸಿದ್ದೇನೆಂದರೆ, 50 ವರ್ಷಗಳ ಹಿಂದೆ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ನ ಕುರಿತಾದ ಕೆಲಸವು ಆರಂಭವಾದಾಗ, ನ್ಯೂ ವರ್ಲ್ಡ್ ಬೈಬಲ್ ಟ್ರಾನ್ಸ್ಲೇಶನ್ ಕಮಿಟಿಯ ಅಭಿಷಿಕ್ತ ಸದಸ್ಯರು ಮನುಷ್ಯರ ಒಪ್ಪಿಗೆಗಾಗಿ ಎದುರುನೋಡಲಿಲ್ಲ, ಬದಲಾಗಿ ಪವಿತ್ರಾತ್ಮದ ಮಾರ್ಗದರ್ಶನದ ಮೇಲೆ ಆತುಕೊಂಡರು. (ಯೆರೆಮೀಯ 17:5-8) ಆದರೂ, ಇತ್ತೀಚಿಗೆ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ನಿಂದ ಸ್ಥಾಪಿಸಲ್ಪಟ್ಟ ಅತ್ಯುತ್ತಮ ಮಟ್ಟವನ್ನು ಕೆಲವು ಪ್ರಾಧಿಕಾರಿಗಳು ಗ್ರಹಿಸಿದ್ದಾರೆ. ಸೊಸೈಟಿಗೆ ಬರೆದ ಒಂದು ಪತ್ರದಲ್ಲಿ, ಬೈಬಲ್ ವಿದ್ವಾಂಸನೊಬ್ಬನು ಬರೆದುದು: “ನಾನೊಂದು ಗುಣಮಟ್ಟವುಳ್ಳ ಪ್ರಕಾಶನವನ್ನು ನೋಡಿದಾಗ, ಅದನ್ನು ಗ್ರಹಿಸುತ್ತೇನೆ, ಮತ್ತು ನಿಮ್ಮ ‘ನ್ಯೂ ವರ್ಲ್ಡ್ ಬೈಬಲ್ ಟ್ರಾನ್ಸ್ಲೇಶನ್ ಕಮಿಟಿ’ಯು ಅತ್ಯುತ್ತಮವಾಗಿ ಕಾರ್ಯವೆಸಗಿದೆ.”
ಈ ಭಾಷಣದ ಬಳಿಕ, ವಿದ್ಯಾರ್ಥಿಗಳಿಗೆ ಅವರ ಡಿಪ್ಲೋಮಗಳು ಕೊಡಲ್ಪಟ್ಟವು, ಮತ್ತು ಅವರ ನೇಮಕಗಳು ಸಭಿಕರಿಗೆ ಪ್ರಕಟಿಸಲ್ಪಟ್ಟವು. ಕ್ಲಾಸಿನ ಸದಸ್ಯರಿಗೆ ಅದೊಂದು ಹೃದಯಸ್ಪರ್ಶಿ ಕ್ಷಣವಾಗಿತ್ತು. ಕ್ಲಾಸಿನ ಪ್ರತಿನಿಧಿಯೊಬ್ಬನು ಒಂದು ಗಣ್ಯತಾ ಪತ್ರವನ್ನು ಓದಿದಾಗ, ಅನೇಕರಿಗೆ ಭಾವನಾತ್ಮಕ ಕೃತಜ್ಞತೆಯ ಅನಿಸಿಕೆಯಾಯಿತು ಮತ್ತು ಅವರು ಅಶ್ರುಭರಿತರಾಗಿದ್ದರು. ವಿದ್ಯಾರ್ಥಿಗಳಲ್ಲಿ ಕೆಲವರು ಅನೇಕ ವರ್ಷಗಳಿಂದ ಮಿಷನೆರಿ ಕೆಲಸಕ್ಕಾಗಿ ತಯಾರಿಮಾಡುತ್ತಿದ್ದರು. ಗಿಲ್ಯಡ್ ಕೋರ್ಸ್ ಇಂಗ್ಲಿಷ್ ಭಾಷೆಯಲ್ಲಿ ನಡೆಸಲ್ಪಡುತ್ತದೆಂದು ಅರಿತವರಾಗಿದ್ದು, ಇಂಗ್ಲಿಷ್ ಭಾಷೆಯ ತಮ್ಮ ಉಪಯೋಗವನ್ನು ಉತ್ತಮಗೊಳಿಸಲಿಕ್ಕಾಗಿ ಕೆಲವರು ಇಂಗ್ಲಿಷ್ ಮಾತಾಡುವ ಸಭೆಗಳಿಗೆ ಹೋಗಿದ್ದರು. ಇನ್ನಿತರರು, ಎಲ್ಲಿ ಪಯನೀಯರರ ಅಗತ್ಯವು ಹೆಚ್ಚಾಗಿತ್ತೋ ಆ ಸ್ಥಳಗಳಿಗೆ—ತಮ್ಮ ಸ್ವಂತ ದೇಶದಲ್ಲಿ ಅಥವಾ ಹೊರದೇಶದಲ್ಲಿ—ಸ್ಥಳಾಂತರಿಸಿದ್ದರು. ಇನ್ನೂ ಇತರರು, ಅನುಭವಗಳನ್ನು ಓದುವ ಮೂಲಕ, ಸಂಶೋಧನೆಯನ್ನು ಮಾಡುವ ಮೂಲಕ, ಅಥವಾ ಭೂಮಿಯ ಕಟ್ಟಕಡೆಯ ವರೆಗೆ (ಇಂಗ್ಲಿಷ್) ಎಂಬ ಸೊಸೈಟಿಯ ವಿಡಿಯೊಕ್ಯಾಸೆಟ್ ಅನ್ನು ಪುನಃ ಪುನಃ ನೋಡುವ ಮೂಲಕ ಅದಕ್ಕಾಗಿ ಸಿದ್ಧರಾಗಿದ್ದರು.
ಆರಂಭದಲ್ಲಿ ಹೆಸರಿಸಲಾದ ವಿಲ್ ಹಾಗೂ ಪ್ಯಾಟ್ಸಿಯರು, ವಿದ್ಯಾರ್ಥಿಗಳಿಗೆ ತೋರಿಸಲ್ಪಟ್ಟ ವೈಯಕ್ತಿಕ ಆಸಕ್ತಿಯಿಂದ ಭಾವಪರವಶರಾಗಿದ್ದರು. “ನಮ್ಮ ಪರಿಚಯವೇ ಇಲ್ಲದ ಜನರು ನಮ್ಮನ್ನು ಆಲಿಂಗಿಸಿ, ನಮ್ಮ ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದರು. ಆಡಳಿತ ಮಂಡಳಿಯ ಸದಸ್ಯರೊಬ್ಬರು ನಮ್ಮ ಕೈಕುಲುಕಿ, ‘ನಿಮ್ಮ ವಿಷಯದಲ್ಲಿ ನಮಗೆ ಹೆಮ್ಮೆಯನಿಸುತ್ತದೆ!’ ಎಂದು ಹೇಳಿದರು.” 103ನೆಯ ಕ್ಲಾಸಿನ ವಿದ್ಯಾರ್ಥಿಗಳು ಆತ್ಮೀಯವಾಗಿ ಪ್ರೀತಿಸಲ್ಪಟ್ಟಿದ್ದಾರೆ ಎಂಬುದರ ಕುರಿತು ಸಂದೇಹವೇ ಇಲ್ಲ. ಅವರನ್ನು ಚೆನ್ನಾಗಿ ತರಬೇತಿಗೊಳಿಸಲಾಗಿದೆ. ಗಿಲ್ಯಡ್ನಲ್ಲಿ ಅವರು ಪಡೆದುಕೊಂಡ ಶಿಕ್ಷಣವು, ಯಶಸ್ವಿಕರವಾದ ವಿದ್ಯಾರ್ಥಿಗಳಿಂದ ಯಶಸ್ವಿಕರವಾದ ಮಿಷನೆರಿಗಳಾಗುವಷ್ಟು ಪರಿವರ್ತನೆಮಾಡುವಂತೆ ಅವರನ್ನು ಅನುಮತಿಸುವುದು.
[ಪುಟ 22 ರಲ್ಲಿರುವ ಚೌಕ]
ಕ್ಲಾಸಿನ ಸಂಖ್ಯಾಸಂಗ್ರಹಣಗಳು
ಪ್ರತಿನಿಧಿಸಲ್ಪಟ್ಟ ದೇಶಗಳ ಸಂಖ್ಯೆ: 9
ನೇಮಿಸಲ್ಪಟ್ಟ ದೇಶಗಳ ಸಂಖ್ಯೆ: 18
ವಿದ್ಯಾರ್ಥಿಗಳ ಸಂಖ್ಯೆ: 48
ವಿವಾಹಿತ ದಂಪತಿಗಳ ಸಂಖ್ಯೆ: 24
ಸರಾಸರಿ ಪ್ರಾಯ: 33
ಸತ್ಯದಲ್ಲಿ ಸರಾಸರಿ ವರ್ಷಗಳು: 16
ಪೂರ್ಣಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 12
[ಪುಟ 23 ರಲ್ಲಿರುವ ಚಿತ್ರ]
ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ 103ನೆಯ ಪದವಿಪಡೆಯುತ್ತಿರುವ ಕ್ಲಾಸ್
ಕೆಳಗಣ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಎಣಿಸಲ್ಪಟ್ಟು, ಪ್ರತಿ ಸಾಲಿನಲ್ಲಿ ಹೆಸರುಗಳು ಎಡದಿಂದ ಬಲಕ್ಕೆ ಪಟ್ಟಿಮಾಡಲ್ಪಟ್ಟಿವೆ.
(1) ಬನ್, ಎ.; ಡಾಲ್ಸ್ಟೆಡ್, ಎಮ್.; ಕಾಂಪಾನ್ಯ, ಸೆಡ್.; ಬೈಆಜೂಅಲೂ, ಆರ್.; ಓಗ್ಯಾಂಡೋ, ಜಿ.; ನಿಕನ್ಚಕ್, ಟಿ; ಮೆಲ್ವನ್, ಎಸ್. (2) ಮೇ, ಎಮ್.; ಮೇಪಲ, ಎಮ್.; ಲೂಅನ್, ಜೆ.; ಹೈಟಿಮಾ, ಡಿ.; ಹರ್ನಾಂಡೆಸ್, ಸಿ.; ಬೈಆಜೂಅಲೂ, ಎನ್.; ಸ್ಟರ್ಮ್, ಎ.; ಮೆಲ್ವನ್, ಕೆ. (3) ಟಾಮ್, ಜೆ.; ಮೇಪಲ, ಇ.; ನಾಲ್, ಎಮ್.; ಟೀಸ್ಡೇಲ್, ಡಿ.; ರೈಟ್, ಪಿ.; ಪೆರಸ್, ಎಲ್.; ಶೆನಫೆಲ್ಟ್, ಎಮ್.; ಪ್ಯಾಕ್, ಏಚ್. (4) ಮರ್ಫಿ, ಎಮ್.; ಕಾಂಪಾನ್ಯ, ಜೆ.; ಸ್ಟೂವರ್ಟ್, ಎಸ್.; ಚೇರೇಡಾ, ಎಮ್.; ರೀಡ್, ಎಮ್.; ಪೆರಸ್, ಎ.; ಟೀಸ್ಡೇಲ್, ಡಬ್ಲ್ಯೂ.; ಪ್ಯಾಕ್, ಜೆ. (5) ಸ್ಟೂವರ್ಟ್, ಡಿ.; ರೈಟ್, ಎ.; ಚೇರೇಡಾ, ಪಿ.; ನಿಕನ್ಚಕ್, ಎಫ್.; ರೀಡ್, ಜೆ.; ಹೈಟಿಮಾ, ಕೆ.; ಓಗ್ಯಾಂಡೋ, ಸಿ.; ಶೆನಫೆಲ್ಟ್, ಆರ್. (6) ಮರ್ಫಿ, ಟಿ.; ಹರ್ನಾಂಡೆಸ್, ಜೆ.; ನಾಲ್, ಎಮ್.; ಬನ್, ಬಿ.; ಟಾಮ್, ಆರ್.; ಡಾಲ್ಸ್ಟೆಡ್, ಟಿ.; ಲೂಅನ್, ಸೆಡ್.; ಮೇ, ಆರ್.; ಸ್ಟರ್ಮ್, ಎ.
[ಪುಟ 24 ರಲ್ಲಿರುವ ಚಿತ್ರ]
ನಾವೆಲ್ಲಿಗೆ ಹೋಗಲಿದ್ದೇವೆ?