“ಯೆಹೋವನು ತನ್ನ ಜನರನ್ನು ತೊರೆದುಬಿಡನು”
“ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ.”—ಕೀರ್ತನೆ 34:19.
1, 2. (ಎ) ಯೆಹೋವನು ಇಂದು ತನ್ನ ಜನರನ್ನು ಹೇಗೆ ಆಶೀರ್ವದಿಸುತ್ತಿದ್ದಾನೆ? (ಬಿ) ಅನೇಕ ಕ್ರೈಸ್ತರು ಏನನ್ನು ಎದುರಿಸುತ್ತಾರೆ, ಮತ್ತು ಯಾವ ಪ್ರಶ್ನೆಗಳು ಏಳುತ್ತವೆ?
ಬೈಬಲ್ ಪ್ರವಾದನೆಯ ನೆರವೇರಿಕೆಯಲ್ಲಿ, ಯೆಹೋವನ ಆರಾಧಕರು ಒಂದು ಆತ್ಮಿಕ ಪ್ರಮೋದವನದಲ್ಲಿ ವಾಸಿಸುತ್ತಾರೆ. (2 ಕೊರಿಂಥ 12:1-4) ಯೆಹೋವನ ಸಾಕ್ಷಿಗಳು, ಪ್ರೀತಿ ಮತ್ತು ಐಕ್ಯವು ಮುಖ್ಯ ಲಕ್ಷಣಗಳಾಗಿರುವ ಒಂದು ಅಂತಾರಾಷ್ಟ್ರೀಯ ಒಕ್ಕೂಟಕ್ಕೆ ಸೇರಿರುತ್ತಾರೆ. (ಯೋಹಾನ 13:35) ಬೈಬಲ್ ಸತ್ಯಗಳ ಆಳವಾದ ಹಾಗೂ ವ್ಯಾಪಕವಾದ ಜ್ಞಾನದಲ್ಲಿ ಅವರು ಆನಂದಿಸುತ್ತಾರೆ. (ಯೆಶಾಯ 54:13) ಯೆಹೋವನು, ತನ್ನ ಆತ್ಮಿಕ ಗುಡಾರದಲ್ಲಿ ಅತಿಥಿಗಳಾಗಿರುವ ಸುಯೋಗವನ್ನು ಅವರಿಗೆ ದಯಪಾಲಿಸುತ್ತಿದ್ದಾನೆಂಬುದಕ್ಕೆ ಅವರು ಎಷ್ಟು ಕೃತಜ್ಞರಾಗಿದ್ದಾರೆ!—ಕೀರ್ತನೆ 15:1.
2 ಯೆಹೋವನ ಸಂಸ್ಥೆಯಲ್ಲಿರುವ ಸಕಲರೂ ಆತ್ಮಿಕ ಏಳಿಗೆಯನ್ನು ಅನುಭವಿಸುತ್ತಾರಾದರೂ, ಕೆಲವರು ಸಾಪೇಕ್ಷವಾದ ಶಾಂತಿ ಮತ್ತು ನೆಮ್ಮದಿಯಲ್ಲಿ ಜೀವಿಸುವಂತೆ ತೋರುವಾಗ, ಇತರರು ಒಂದಲ್ಲ ಒಂದು ಬಗೆಯ ಸಂಕಟಗಳನ್ನು ಅನುಭವಿಸುತ್ತಾರೆ. ಅನೇಕ ಕ್ರೈಸ್ತರು ತಾವು ಬಹಳ ದೀರ್ಘ ಸಮಯದ ವರೆಗೆ ಒಂದು ಶೋಚನೀಯ ಸನ್ನಿವೇಶದಲ್ಲಿರುವುದನ್ನು ಮತ್ತು ನಿಕಟ ಭವಿಷ್ಯತ್ತಿನಲ್ಲಿ ಪರಿಹಾರದ ಯಾವ ನಿರೀಕ್ಷೆಯೂ ಇಲ್ಲದಿರುವುದನ್ನು ಕಂಡುಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಗಳಲ್ಲಿ ನಿರಾಶೆಯು ಸ್ವಾಭಾವಿಕ. (ಜ್ಞಾನೋಕ್ತಿ 13:12) ವಿಪತ್ತುಗಳು ದೇವರ ಅಪ್ರಸನ್ನತೆಯ ಪ್ರಮಾಣಗಳೊ? ಯೆಹೋವನು ಕೆಲವು ಕ್ರೈಸ್ತರಿಗೆ ವಿಶೇಷವಾದ ಸಂರಕ್ಷಣೆಯನ್ನು ಒದಗಿಸುತ್ತಿರುವಾಗ ಇತರರನ್ನು ತೊರೆದುಬಿಡುತ್ತಿದ್ದಾನೊ?
3. (ಎ) ತನ್ನ ಜನರು ಅನುಭವಿಸುವ ಕೇಡುಗಳಿಗೆ ಯೆಹೋವನು ಕಾರಣನೊ? (ಬಿ) ಯೆಹೋವನ ನಂಬಿಗಸ್ತ ಆರಾಧಕರು ಸಹ ಮಾನವ ಕಷ್ಟವನ್ನು ಏಕೆ ಅನುಭವಿಸುತ್ತಾರೆ?
3 ಬೈಬಲು ಉತ್ತರಿಸುವುದು: “ಯಾವನಾದರೂ ಪಾಪಮಾಡುವದಕ್ಕೆ ಪ್ರೇರೇಪಿಸಲ್ಪಡುವಾಗ—ಈ ಪ್ರೇರಣೆಯು ನನಗೆ ದೇವರಿಂದ ಉಂಟಾಯಿತೆಂದು ಹೇಳಬಾರದು. ದೇವರು ಕೆಟ್ಟದ್ದಕ್ಕೇನೂ ಸಂಬಂಧಪಟ್ಟವನಲ್ಲ; ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸುವದಿಲ್ಲ.” (ಯಾಕೋಬ 1:13) ಯೆಹೋವನು ತನ್ನ ಜನರ ಸಂರಕ್ಷಕನೂ ಪೋಷಕನೂ ಆಗಿದ್ದಾನೆ. (ಕೀರ್ತನೆ 91:2-6) “ಯೆಹೋವನು ತನ್ನ ಜನರನ್ನು ತೊರೆದುಬಿಡನು.” (ಕೀರ್ತನೆ 94:14, NW) ಇದು, ನಂಬಿಗಸ್ತ ಆರಾಧಕರು ಕಷ್ಟಾನುಭವಿಸುವುದಿಲ್ಲವೆಂಬುದನ್ನು ಅರ್ಥೈಸುವುದಿಲ್ಲ. ಈ ಪ್ರಚಲಿತ ವಿಷಯಗಳ ಲೋಕ ವ್ಯವಸ್ಥೆಯು, ಅಂತರ್ಗತವಾಗಿ ಅಪರಿಪೂರ್ಣರಾಗಿರುವ ವ್ಯಕ್ತಿಗಳಿಂದ ಆಳಲ್ಪಡುತ್ತದೆ. ಅನೇಕರು ಭ್ರಷ್ಟರಾಗಿದ್ದಾರೆ, ಮತ್ತು ಕೆಲವರು ಸಂಪೂರ್ಣವಾಗಿ ದುಷ್ಟರಾಗಿದ್ದಾರೆ. ವಿವೇಕಕ್ಕಾಗಿ, ಅವರಲ್ಲೊಬ್ಬರೂ ಯೆಹೋವನ ಕಡೆಗೆ ನೋಡುವುದಿಲ್ಲ. ಇದು ಬಹಳಷ್ಟು ಮಾನವ ಕಷ್ಟಾನುಭವದಲ್ಲಿ ಫಲಿಸುತ್ತದೆ. ಮಾನವ ಅಪರಿಪೂರ್ಣತೆ ಮತ್ತು ದುಷ್ಟತನದ ದುಃಖಕರ ಪರಿಣಾಮಗಳನ್ನು, ಯೆಹೋವನ ಜನರು ಯಾವಾಗಲೂ ದೂರವಿರಿಸಸಾಧ್ಯವಿಲ್ಲವೆಂದು ಬೈಬಲು ಸ್ಪಷ್ಟಗೊಳಿಸುತ್ತದೆ.—ಅ. ಕೃತ್ಯಗಳು 14:22.
ನಿಷ್ಠಾವಂತ ಕ್ರೈಸ್ತರು ಕಷ್ಟಾನುಭವಿಸಲು ನಿರೀಕ್ಷಿಸುತ್ತಾರೆ
4. ಈ ದುಷ್ಟ ವಿಷಯಗಳ ವ್ಯವಸ್ಥೆಯಲ್ಲಿ ಅವರು ಜೀವಿಸುವ ವರೆಗೆ ಕ್ರೈಸ್ತರೆಲ್ಲರೂ ಏನನ್ನು ನಿರೀಕ್ಷಿಸಬಲ್ಲರು, ಮತ್ತು ಏಕೆ?
4 ಈ ಲೋಕದ ಭಾಗವಾಗಿರದಿದ್ದರೂ, ಯೇಸುವಿನ ಹಿಂಬಾಲಕರು ಈ ವಿಷಯಗಳ ವ್ಯವಸ್ಥೆಯ ಮಧ್ಯದಲ್ಲಿ ಜೀವಿಸುತ್ತಾರೆ. (ಯೋಹಾನ 17:15, 16) ಬೈಬಲಿನಲ್ಲಿ ಸೈತಾನನು, ಈ ಲೋಕದ ಮರೆಯಲ್ಲಿರುವ ಪ್ರಬಲವಾದ ಶಕ್ತಿಯಾಗಿ ಬಯಲುಮಾಡಲ್ಪಟ್ಟಿದ್ದಾನೆ. (1 ಯೋಹಾನ 5:19) ಆದಕಾರಣ, ಎಲ್ಲ ಕ್ರೈಸ್ತರು ಇಂದೊ ಮುಂದೊ ಗಂಭೀರವಾದ ಸಮಸ್ಯೆಗಳನ್ನು ಎದುರಿಸಬೇಕಾಗುವುದನ್ನು ನಿರೀಕ್ಷಿಸಬಲ್ಲರು. ಆ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾ, ಅಪೊಸ್ತಲ ಪೇತ್ರನು ಹೇಳಿದ್ದು: “ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ; ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ. ನೀವು ನಂಬಿಕೆಯಲ್ಲಿ ದೃಢವಾಗಿದ್ದು ಅವನನ್ನು ಎದುರಿಸಿರಿ; ಲೋಕದಲ್ಲಿರುವ ನಿಮ್ಮ ಸಹೋದರರೂ ಅಂಥ ಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂದು ನಿಮಗೆ ತಿಳಿದದೆಯಲ್ಲಾ.” (1 ಪೇತ್ರ 5:8, 9) ಹೌದು, ಕ್ರೈಸ್ತರ ಇಡೀ ಸಂಘವು ಕಷ್ಟಾನುಭವಗಳನ್ನು ನಿರೀಕ್ಷಿಸಬಲ್ಲದು.
5. ನಂಬಿಗಸ್ತ ಕ್ರೈಸ್ತರು ಜೀವನದಲ್ಲಿ ದುಃಖಕರ ಸಂಗತಿಗಳನ್ನು ಅನುಭವಿಸುವರೆಂದು ಯೇಸು ಸ್ಪಷ್ಟಗೊಳಿಸಿದ್ದು ಹೇಗೆ?
5 ನಾವು ಯೆಹೋವನನ್ನು ಗಾಢವಾಗಿ ಪ್ರೀತಿಸಿ, ಆತನ ಮೂಲತತ್ವಗಳಿಗೆ ನಿಷ್ಠರಾಗಿರುವುದಾದರೂ, ನಾವು ಜೀವನದಲ್ಲಿ ದುಃಖಕರ ಸಂಗತಿಗಳನ್ನು ಅನುಭವಿಸುವೆವು. ಯೇಸು ಇದನ್ನು, ಮತ್ತಾಯ 7:24-27ರಲ್ಲಿ ದಾಖಲಿಸಲ್ಪಟ್ಟ ತನ್ನ ದೃಷ್ಟಾಂತದಲ್ಲಿ ಸ್ಪಷ್ಟಗೊಳಿಸಿದನು. ಅಲ್ಲಿ ಅವನು ತನ್ನ ಮಾತುಗಳಿಗೆ ವಿಧೇಯರಾಗುವ ಹಾಗೂ ವಿಧೇಯರಾಗದವರ ನಡುವಿನ ವ್ಯತ್ಯಾಸವನ್ನು ತೋರಿಸಿದನು. ಅವನು ವಿಧೇಯ ಶಿಷ್ಯರನ್ನು, ಗಟ್ಟಿಯಾದ ಕಲ್ಲುಬಂಡೆಯ ಮೇಲೆ ಮನೆಯನ್ನು ಕಟ್ಟುವ ಒಬ್ಬ ಬುದ್ಧಿವಂತ ಮನುಷ್ಯನಿಗೆ ಹೋಲಿಸಿದನು. ತನ್ನ ಮಾತುಗಳಿಗೆ ವಿಧೇಯರಾಗದವರನ್ನು ಅವನು, ಉಸುಬಿನ ಮೇಲೆ ತನ್ನ ಮನೆಯನ್ನು ಕಟ್ಟುವ ಮೂರ್ಖ ಮನುಷ್ಯನಿಗೆ ಹೋಲಿಸಿದನು. ಉಗ್ರವಾದ ಬಿರುಗಾಳಿಯ ಅನಂತರ, ಕಲ್ಲುಬಂಡೆಯ ಮೇಲೆ ಕಟ್ಟಿದ ಮನೆಯು ಮಾತ್ರ ಉಳಿಯುತ್ತದೆ. ಬುದ್ಧಿವಂತ ಮನುಷ್ಯನ ಮನೆಯ ವಿಷಯದಲ್ಲಿ, “ಮಳೆ ಸುರಿಯಿತು; ಹಳ್ಳಗಳು ಬಂದವು; ನಾಲ್ಕು ಕಡೆಯಿಂದ ಗಾಳಿ ಬೀಸಿ ಆ ಮನೆಗೆ ಬಡಿಯಿತು. ಆದಾಗ್ಯೂ . . . ಅದು ಬೀಳಲಿಲ್ಲ” ಎಂಬುದನ್ನು ಗಮನಿಸಿರಿ. ಬುದ್ಧಿವಂತ ಮನುಷ್ಯನು ಯಾವಾಗಲೂ ಶಾಂತಿ ಮತ್ತು ನೆಮ್ಮದಿಯನ್ನು ಅನುಭವಿಸುವನೆಂದು ಯೇಸು ವಾಗ್ದಾನಿಸಲಿಲ್ಲ. ಬದಲಿಗೆ, ಆ ಮನುಷ್ಯನ ಬುದ್ಧಿಯು, ಕಷ್ಟಗಳನ್ನು ನಿಭಾಯಿಸುವಂತೆ ಅವನನ್ನು ಸಿದ್ಧಗೊಳಿಸುವುದು. ತದ್ರೀತಿಯ ವಿಚಾರವು, ಬಿತ್ತುವವನ ದೃಷ್ಟಾಂತದಲ್ಲಿ ತಿಳಿಸಲ್ಪಟ್ಟಿದೆ. ಅದರಲ್ಲಿ ಯೇಸು ವಿವರಿಸುವುದೇನೆಂದರೆ, “ಸುಗುಣವುಳ್ಳ ಒಳ್ಳೆಯ ಹೃದಯದ” ವಿಧೇಯ ಆರಾಧಕರು ಸಹ, “ತಾಳ್ಮೆಯಿಂದ ಫಲವನ್ನು ಕೊಡು”ವರು.—ಲೂಕ 8:4-15.
6. ಅಗ್ನಿನಿರೋಧಕ ವಿಷಯಗಳ ಕುರಿತಾದ ಪೌಲನ ದೃಷ್ಟಾಂತದಲ್ಲಿ, ಅಗ್ನಿಮಯ ಪರೀಕ್ಷೆಗೆ ಯಾರು ಒಳಗಾಗುತ್ತಾರೆ?
6 ಕೊರಿಂಥದವರಿಗೆ ಬರೆಯುವಾಗ, ಸಂಕಷ್ಟಗಳನ್ನು ಎದುರಿಸಲು ನಮಗೆ ಸಹಾಯ ಮಾಡಬಲ್ಲ ಸ್ಥಿರವಾದ ಗುಣಗಳ ಅಗತ್ಯವನ್ನು ದೃಷ್ಟಾಂತಿಸಲು, ಅಪೊಸ್ತಲ ಪೌಲನು ರೂಪಕ ಭಾಷೆಯನ್ನು ಉಪಯೋಗಿಸಿದನು. ಬಂಗಾರ, ಬೆಳ್ಳಿ, ಮತ್ತು ಅಮೂಲ್ಯವಾದ ರತ್ನಗಳಂತಹ ಅಗ್ನಿನಿರೋಧಕ ಸಾಮಗ್ರಿಗಳು, ದೈವಿಕ ಗುಣಗಳಿಗೆ ಅನುರೂಪವಾಗಿವೆ. (ಹೋಲಿಸಿ ಜ್ಞಾನೋಕ್ತಿ 3:13-15; 1 ಪೇತ್ರ 1:6, 7.) ಮತ್ತೊಂದು ಕಡೆಯಲ್ಲಿ, ಶಾರೀರಿಕ ಗುಣಗಳು ದಹನಶೀಲ ಸಾಮಗ್ರಿಗಳಿಗೆ ಹೋಲಿಸಲ್ಪಟ್ಟಿವೆ. ಅನಂತರ ಪೌಲನು ಹೇಳುವುದು: “ಅವನವನ ಕೆಲಸವು ವ್ಯಕ್ತವಾಗುವದು. ಕ್ರಿಸ್ತನು ಬರುವ ದಿನವು ಬೆಂಕಿಯೊಡನೆ ಉದಯವಾಗಿ ಆ ಕೆಲಸವನ್ನು ಸ್ಪಷ್ಟವಾಗಿ ತೋರಿಸುವದು; ಅವನವನ ಕೆಲಸವೆಂಥದೋ ಆ ಬೆಂಕಿ ಶೋಧಿಸುವದು. ಒಬ್ಬನು ಆ ಅಸ್ತಿವಾರದ ಮೇಲೆ ಕಟ್ಟಿದ್ದು ಉಳಿದರೆ ಅವನಿಗೆ ಸಂಬಳಬರುವದು.” (1 ಕೊರಿಂಥ 3:10-14) ಪುನಃ ಇಲ್ಲಿ, ನಮ್ಮಲ್ಲಿ ಸಕಲರೂ ಯಾವುದೊ ಬಗೆಯ ತೀಕ್ಷ್ಣ ಪರೀಕ್ಷೆಯನ್ನು ಅನಿವಾರ್ಯವಾಗಿ ಎದುರಿಸುವೆವೆಂದು ಬೈಬಲು ವಿವರಿಸುತ್ತದೆ.
7. ರೋಮಾಪುರ 15:4ಕ್ಕನುಸಾರ, ಪರೀಕ್ಷೆಗಳನ್ನು ತಾಳಿಕೊಳ್ಳುವಂತೆ ಶಾಸ್ತ್ರಗಳು ನಮಗೆ ಹೇಗೆ ಸಹಾಯ ಮಾಡಬಲ್ಲವು?
7 ಕೆಲವೊಮ್ಮೆ ದೀರ್ಘ ಸಮಯಾವಧಿಗಳ ವರೆಗೆ ವಿಪತ್ತುಗಳನ್ನು ತಾಳಿಕೊಳ್ಳಬೇಕಾಗಿದ್ದ, ದೇವರ ನಿಷ್ಠಾವಂತ ಸೇವಕರ ಕುರಿತ ಹಲವಾರು ವೃತ್ತಾಂತಗಳು ಬೈಬಲಿನಲ್ಲಿವೆ. ಆದರೂ, ಯೆಹೋವನು ಅವರನ್ನು ತೊರೆಯಲಿಲ್ಲ. ಅಪೊಸ್ತಲ ಪೌಲನು ಹೀಗೆ ಹೇಳಿದಾಗ, ಬಹುಶಃ ಅವನ ಮನಸ್ಸಿನಲ್ಲಿ ಇಂತಹ ಉದಾಹರಣೆಗಳಿದ್ದವು: “ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರುವಂತೆ ಆ ಗ್ರಂಥಗಳು ಬರೆಯಲ್ಪಟ್ಟವು.” (ರೋಮಾಪುರ 15:4) ದೇವರೊಂದಿಗೆ ಒಂದು ಆಪ್ತ ಸಂಬಂಧವನ್ನು ಅನುಭವಿಸುತ್ತಿದ್ದಾಗ, ಅನೇಕ ವಿಪತ್ತುಗಳನ್ನು ಅನುಭವಿಸಿದ ಮೂವರು ಪುರುಷರ ಉದಾಹರಣೆಗಳನ್ನು ಪರಿಗಣಿಸಿರಿ.
ಬೈಬಲ್ ವೃತ್ತಾಂತಗಳಿಂದ ನಾವು ಕಲಿಯುವ ವಿಷಯ
8. ಯೋಸೇಫನ ವಿಷಯದಲ್ಲಿ ಯೆಹೋವನು ಏನನ್ನು ಅನುಮತಿಸಿದನು, ಮತ್ತು ಎಷ್ಟು ಸಮಯದ ವರೆಗೆ?
8 ಯಾಕೋಬನ ಮಗನಾದ ಯೋಸೇಫನು, ಎಳೆಯ ಪ್ರಾಯದಿಂದಲೇ ಯೆಹೋವನ ಅನುಗ್ರಹಕ್ಕೆ ಒಳಗಾದನು. ಆದರೂ, ಅದು ತನ್ನ ಸ್ವಂತ ತಪ್ಪಾಗಿರದಿದ್ದರೂ, ಅವನು ವಿಪತ್ತುಗಳ ಸರಣಿಯನ್ನೇ ಅನುಭವಿಸಿದನು. ಅವನು ಅಪಹರಿಸಲ್ಪಟ್ಟು, ತನ್ನ ಸ್ವಂತ ಸಹೋದರರಿಂದ ಕ್ರೂರವಾಗಿ ಉಪಚರಿಸಲ್ಪಟ್ಟನು. ಅಪರಿಚಿತ ದೇಶವೊಂದರಲ್ಲಿ ಒಬ್ಬ ದಾಸನಾಗಿ ಅವನು ಮಾರಲ್ಪಟ್ಟನು, ಅಲ್ಲಿ ಅವನ ಮೇಲೆ ಸುಳ್ಳು ಆರೋಪ ಹೊರಿಸಿ, “ಸೆರೆ”ಯಲ್ಲಿ ಹಾಕಲಾಯಿತು. (ಆದಿಕಾಂಡ 40:15) ಅಲ್ಲಿ, “ಅವನ ಕಾಲುಗಳು ಕೋಳದಲ್ಲಿ ನೊಂದವು; ಕಬ್ಬಿಣದ ಬೇಡಿಗಳಿಂದ ಅವನು ಬಂಧಿತನಾದನು.” (ಕೀರ್ತನೆ 105:17, 18) ತನ್ನ ದಾಸತ್ವ ಹಾಗೂ ಸೆರೆಮನೆವಾಸದ ಸಮಯದಲ್ಲಿ, ನಿಸ್ಸಂದೇಹವಾಗಿ ಯೋಸೇಫನು ಬಿಡುಗಡೆಗಾಗಿ ಯೆಹೋವನಲ್ಲಿ ಸತತವಾಗಿ ಬೇಡಿಕೊಂಡನು. ಆದರೂ, ಸುಮಾರು 13 ವರ್ಷಗಳ ತನಕ, ಯೆಹೋವನಿಂದ ವಿಭಿನ್ನ ವಿಧಗಳಲ್ಲಿ ಬಲಗೊಳಿಸಲ್ಪಟ್ಟರೂ, ಅವನು ಪ್ರತಿದಿನ ಒಬ್ಬ ದಾಸ ಇಲ್ಲವೆ ಸೆರೆಯಾಳಾಗಿಯೇ ಉಳಿದನು.—ಆದಿಕಾಂಡ 37:2; 41:46.
9. ಹಲವಾರು ವರ್ಷಗಳ ತನಕ ದಾವೀದನು ಏನನ್ನು ತಾಳಿಕೊಳ್ಳಬೇಕಿತ್ತು?
9 ದಾವೀದನ ವಿದ್ಯಮಾನವೂ ತದ್ರೀತಿಯದ್ದಾಗಿದೆ. ಇಸ್ರಾಯೇಲನ್ನು ಆಳಲು ಯೆಹೋವನು ಒಬ್ಬ ಅರ್ಹ ಮನುಷ್ಯನನ್ನು ಆಯ್ಕೆಮಾಡುತ್ತಿದ್ದಾಗ, ಆತನು ಹೇಳಿದ್ದು: “ಇಷಯನ ಮಗನಾದ ದಾವೀದನು ನನಗೆ ಸಿಕ್ಕಿದನು, ಅವನು ನನಗೆ ಒಪ್ಪುವ ಮನುಷ್ಯನು.” (ಅ. ಕೃತ್ಯಗಳು 13:22) ಯೆಹೋವನ ದೃಷ್ಟಿಯಲ್ಲಿ ತನ್ನ ಅನುಗ್ರಹಿತ ಸ್ಥಾನದ ಎದುರಿನಲ್ಲಿಯೂ ದಾವೀದನು ಬಹಳಷ್ಟು ಕಷ್ಟಾನುಭವಿಸಿದನು. ಮರಣದ ಅಪಾಯದಲ್ಲಿದ್ದು, ಅವನು ಹಲವಾರು ವರ್ಷಗಳ ಕಾಲ, ಅರಣ್ಯದಲ್ಲಿ, ಗುಹೆಗಳಲ್ಲಿ, ಸಂದುಗಳಲ್ಲಿ, ಮತ್ತು ಅಪರಿಚಿತ ಊರುಗಳಲ್ಲಿ ಅಡಗಿಕೊಂಡನು. ಕಾಡುಮೃಗದಂತೆ ಬೆನ್ನಟ್ಟಲ್ಪಟ್ಟ ಅವನು, ನಿರಾಶೆ ಮತ್ತು ಭಯವನ್ನು ಅನುಭವಿಸಿದನು. ಆದರೂ, ಅವನು ಯೆಹೋವನ ಬಲದಲ್ಲಿ ತಾಳಿಕೊಂಡನು. ದಾವೀದನು ಸೂಕ್ತವಾಗಿಯೇ, ತನ್ನ ಸ್ವಂತ ಅನುಭವದಿಂದ ಹೀಗೆ ಹೇಳಸಾಧ್ಯವಿತ್ತು: “ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ.”—ಕೀರ್ತನೆ 34:19.
10. ನಾಬೋತ ಮತ್ತು ಅವನ ಕುಟುಂಬದ ಮೇಲೆ ಯಾವ ಘೋರ ವಿಪತ್ತು ಎರಗಿತು?
10 ಪ್ರವಾದಿಯಾದ ಎಲೀಯನ ದಿನದಲ್ಲಿ, ಸುಳ್ಳು ದೇವನಾದ ಬಾಳನಿಗೆ ಮೊಣಕಾಲೂರದೆ ಇದ್ದವರು, ಇಸ್ರಾಯೇಲಿನಲ್ಲಿ ಕೇವಲ 7,000 ಜನರು. (1 ಅರಸುಗಳು 19:18; ರೋಮಾಪುರ 11:4) ಅವರಲ್ಲಿ ಬಹುಶಃ ಒಬ್ಬನಾಗಿದ್ದ ನಾಬೋತನು, ಭಯಂಕರ ಅನ್ಯಾಯದ ಬಲಿಪಶುವಾದನು. ದೇವದೂಷಣೆಯ ಅಪವಾದ ಹೊರಿಸಲ್ಪಟ್ಟ ಅವಮಾನವನ್ನು ಅವನು ಅನುಭವಿಸಿದನು. ಅಪರಾಧಿಯೆಂದು ತೀರ್ಮಾನಿಸಲ್ಪಟ್ಟ ಅವನಿಗೆ, ರಾಜಾಜ್ಞೆಯಿಂದ ಕಲ್ಲೆಸೆದು ಕೊಲ್ಲಲ್ಪಡುವ ತೀರ್ಪು ವಿಧಿಸಲಾಯಿತು, ಮತ್ತು ಅವನ ರಕ್ತವು ನಾಯಿಗಳಿಂದ ನೆಕ್ಕಲ್ಪಟ್ಟಿತು. ಅವನ ಪುತ್ರರಿಗೂ ಮರಣದಂಡನೆ ವಿಧಿಸಲಾಯಿತು! ಆದರೂ, ಆಪಾದನೆಯ ವಿಷಯವಾಗಿ ಅವನು ನಿರ್ದೋಷಿಯಾಗಿದ್ದನು. ಅವನ ವಿರುದ್ಧ ಇದ್ದ ಸಾಕ್ಷಿಗಳು ಸುಳ್ಳುಗಾರರಾಗಿದ್ದರು. ಈ ಇಡೀ ವ್ಯವಹಾರವು, ನಾಬೋತನ ದ್ರಾಕ್ಷಿ ತೋಟವನ್ನು ರಾಜನು ಪಡೆದುಕೊಳ್ಳಸಾಧ್ಯವಾಗುವಂತೆ ರಾಣಿ ಈಜೆಬೆಲಳು ಹೂಡಿದ ಸಂಚಾಗಿತ್ತು.—1 ಅರಸುಗಳು 21:1-19; 2 ಅರಸುಗಳು 9:26.
11. ಬೈಬಲ್ ಇತಿಹಾಸದಲ್ಲಿನ ನಂಬಿಗಸ್ತ ಸ್ತ್ರೀಪುರುಷರ ಬಗ್ಗೆ ಅಪೊಸ್ತಲ ಪೌಲನು ನಮಗೆ ಏನು ಹೇಳುತ್ತಾನೆ?
11 ಬೈಬಲಿನಲ್ಲಿ ಯಾರು ವಿಪತ್ತುಗಳನ್ನು ಅನುಭವಿಸಿದರೆಂದು ಉಲ್ಲೇಖಿಸಲ್ಪಟ್ಟಿದ್ದಾರೋ ಆ ಅನೇಕ ನಂಬಿಗಸ್ತ ಸ್ತ್ರೀಪುರುಷರಲ್ಲಿ, ಯೋಸೇಫ, ದಾವೀದ ಮತ್ತು ನಾಬೋತರು ಕೇವಲ ಮೂವರಾಗಿದ್ದಾರೆ. ಅಪೊಸ್ತಲ ಪೌಲನು ಅನೇಕ ಯುಗಗಳಲ್ಲಿದ್ದಂತಹ ಯೆಹೋವನ ಸೇವಕರ ಐತಿಹಾಸಿಕ ಪುನರ್ವಿಮರ್ಶೆಯೊಂದನ್ನು ಬರೆದನು. ಅದರಲ್ಲಿ ಅವನು, ಈ ಕೆಳಗಿನವುಗಳನ್ನು ಅನುಭವಿಸಿದವರ ಕುರಿತಾಗಿ ಬರೆದನು: “ಅಪಹಾಸ್ಯ ಕೊರಡೆಯ ಪೆಟ್ಟು ಬೇಡಿ ಸೆರೆಮನೆ ಇವುಗಳನ್ನು ಅನುಭವಿಸಿದರು. ಕೆಲವರನ್ನು ಜನರು ಕಲ್ಲೆಸೆದು ಕೊಂದರು; ಕೆಲವರನ್ನು ಗರಗಸದಿಂದ ಕೊಯ್ದು ಕೊಂದರು; ದೇವದ್ರೋಹಿಗಳಾಗಿ ಪ್ರಾಣವನ್ನು ಉಳಿಸಿಕೊಳ್ಳಿರೆಂದು ಕೆಲವರನ್ನು ಪ್ರೇರೇಪಿಸಿದರು; ಕೆಲವರನ್ನು ಕತ್ತಿಯಿಂದ ಕೊಂದರು. ಕೆಲವರು ಕೊರತೆ ಹಿಂಸೆ ಬಾಧೆ ಇವುಗಳನ್ನು ಅನುಭವಿಸುವವರಾಗಿದ್ದು ಕುರಿ ಮೇಕೆಗಳ ಚರ್ಮಗಳನ್ನು ಉಟ್ಟುಕೊಂಡವರಾಗಿ ತಿರುಗಾಡಿದರು. ಇಂಥವರಿಗೆ ಈ ಲೋಕವು ಯೋಗ್ಯಸ್ಥಳವಲ್ಲ; ಅವರು ತಮ್ಮ ದೇಶದ ಕಾಡು ಬೆಟ್ಟ ಗವಿ ಕುಣಿಗಳಲ್ಲಿ ಅಲೆಯುವವರಾಗಿದ್ದರು.” (ಇಬ್ರಿಯ 11:36-38) ಆದರೆ ಯೆಹೋವನು ಅವರನ್ನು ತೊರೆದುಬಿಡಲಿಲ್ಲ.
ಕಷ್ಟಾನುಭವಿಸುವವರಿಗಾಗಿ ಯೆಹೋವನು ಚಿಂತಿಸುತ್ತಾನೆ
12. ಇಂದು ಯೆಹೋವನ ಸಾಕ್ಷಿಗಳು ಅನುಭವಿಸುವ ಕೆಲವು ಬಾಧೆಗಳಾವುವು?
12 ಇಂದು ಯೆಹೋವನ ಜನರ ಕುರಿತಾಗಿ ಏನು? ಒಂದು ಸಂಸ್ಥೆಯೋಪಾದಿ, ಕಡೇ ದಿವಸಗಳು ಹಾಗೂ ಮಹಾ ಸಂಕಟದಿಂದ ಪಾರಾಗಲಿಕ್ಕಾಗಿ ನಾವು, ದೈವಿಕ ಸಂರಕ್ಷಣೆ ಹಾಗೂ ಸುರಕ್ಷಿತ ದಾಟುವಿಕೆಯನ್ನು ನಿಶ್ಚಯ ಎದುರುನೋಡಸಾಧ್ಯವಿದೆ. (ಯೆಶಾಯ 54:17; ಪ್ರಕಟನೆ 7:9-17) ಹಾಗಿದ್ದರೂ, ವ್ಯಕ್ತಿಗಳೋಪಾದಿ ನಾವು, “ಸಮಯ ಮತ್ತು ಮುಂಗಾಣದ ಸಂಭವವು” (NW) ಎಲ್ಲ ಮಾನವರ ಮೇಲೆ ಬರುತ್ತದೆಂದು ಗ್ರಹಿಸುತ್ತೇವೆ. (ಪ್ರಸಂಗಿ 9:11) ಇಂದು ವಿಪತ್ತುಗಳನ್ನು ಅನುಭವಿಸುತ್ತಿರುವ ಅನೇಕ ನಂಬಿಗಸ್ತ ಕ್ರೈಸ್ತರು ಇದ್ದಾರೆ. ಕೆಲವರು ವಿಪರೀತ ಬಡತನವನ್ನು ತಾಳಿಕೊಳ್ಳುತ್ತಾರೆ. ಬೈಬಲು ಸಂಕಟವನ್ನು ಅನುಭವಿಸುತ್ತಿರುವ ಕ್ರೈಸ್ತ ‘ದಿಕ್ಕಿಲ್ಲದವರ [“ಅನಾಥರೂ,” NW] ಮತ್ತು ವಿಧವೆಯರ’ ಕುರಿತಾಗಿ ಮಾತಾಡುತ್ತದೆ. (ಯಾಕೋಬ 1:27) ಇತರರು, ನೈಸರ್ಗಿಕ ವಿಪತ್ತುಗಳು, ಯುದ್ಧಗಳು, ಅಪರಾಧ, ಅಧಿಕಾರದ ದುರುಪಯೋಗ, ಅಸ್ವಸ್ಥತೆ, ಮತ್ತು ಮರಣದ ಕಾರಣವಾಗಿ ಕಷ್ಟಾನುಭವಿಸುತ್ತಾರೆ.
13. ಯಾವ ಕಷ್ಟಕರ ಅನುಭವಗಳು ಇತ್ತೀಚೆಗೆ ವರದಿಸಲ್ಪಟ್ಟಿವೆ?
13 ಉದಾಹರಣೆಗೆ, ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಗೆ ತಾವು ಕಳುಹಿಸಿದ 1996ರ ತಮ್ಮ ವರದಿಗಳಲ್ಲಿ, ವಾಚ್ ಟವರ್ ಬ್ರಾಂಚ್ ಆಫೀಸುಗಳು ವರದಿಸಿದ್ದೇನೆಂದರೆ, ನಮ್ಮ ಸಹೋದರ ಸಹೋದರಿಯರಲ್ಲಿ ಕೆಲವರು, ಬೈಬಲ್ ಮೂಲತತ್ವಗಳಿಗೆ ತಾವು ಅಂಟಿಕೊಂಡಿರುವ ಕಾರಣ, ವಿಷಾದನೀಯ ಪರಿಸ್ಥಿತಿಗಳಲ್ಲಿ ಸೆರೆಮನೆವಾಸವನ್ನು ಅನುಭವಿಸುತ್ತಿದ್ದಾರೆ. ನೂರಾರು ಸಾಕ್ಷಿಗಳಿದ್ದ ಒಂದು ಕ್ಷೇತ್ರವನ್ನು ಖಾಲಿಮಾಡುವಂತೆ ಗೆರಿಲ ಗುಂಪುಗಳು ಅವರನ್ನು ಒತ್ತಾಯಿಸಿದಾಗ, ದಕ್ಷಿಣ ಅಮೆರಿಕದ ದೇಶವೊಂದರಲ್ಲಿದ್ದ ಮೂರು ಸಭೆಗಳು ರದ್ದುಗೊಳಿಸಲ್ಪಟ್ಟವು. ಪಶ್ಚಿಮ ಆಫ್ರಿಕದ ದೇಶವೊಂದರಲ್ಲಿ, ಒಂದು ಸಣ್ಣ ಆಂತರಿಕ ಯುದ್ಧದಲ್ಲಿ ಸಿಲುಕಿಕೊಂಡ ಕೆಲವು ಸಾಕ್ಷಿಗಳು, ಹತರಾದರು. ಮಧ್ಯ ಅಮೆರಿಕದ ದೇಶವೊಂದರಲ್ಲಿ, ಈಗಾಗಲೇ ಕಠಿನವಾಗಿದ್ದ ಕೆಲವು ಸಹೋದರರ ಹಣಕಾಸಿನ ಪರಿಸ್ಥಿತಿಯು, ಚಂಡಮಾರುತದ ಆಕ್ರಮಣದಿಂದ ಇನ್ನೂ ಕೀಳಾಯಿತು. ಎಲ್ಲಿ ಬಡತನ ಮತ್ತು ಆಹಾರದ ಅಭಾವಗಳು ಗಂಭೀರವಾದ ಸಮಸ್ಯೆಗಳಾಗಿರುವುದಿಲ್ಲವೊ ಆ ಇತರ ಸ್ಥಳಗಳಲ್ಲಿ, ನಕಾರಾತ್ಮಕ ಪ್ರಭಾವಗಳು ಕೆಲವರ ಆನಂದವನ್ನು ತಗ್ಗಿಸಬಹುದು. ಇತರರು ಆಧುನಿಕ ದಿನದ ಜೀವಿತದಿಂದ ಬರುವ ಒತ್ತಡಗಳಿಂದ ಕುಗ್ಗಿಹೋಗಿದ್ದಾರೆ. ಇನ್ನೂ ಇತರರು, ಸಾರ್ವಜನಿಕರ ನಿರಾಸಕ್ತಿಯ ಕಾರಣ, ರಾಜ್ಯದ ಸುವಾರ್ತೆಯನ್ನು ಸಾರುವಾಗ ನಿರುತ್ಸಾಹಗೊಳ್ಳಬಹುದು.
14. (ಎ) ಯೋಬನ ಮಾದರಿಯಿಂದ ನಾವು ಏನನ್ನು ಕಲಿಯುತ್ತೇವೆ? (ಬಿ) ನಕಾರಾತ್ಮಕವಾಗಿ ಯೋಚಿಸುವ ಬದಲು, ನಾವು ಸಂಕಟವನ್ನು ಅನುಭವಿಸುತ್ತಿರುವಾಗ ಏನನ್ನು ಮಾಡಬೇಕು?
14 ಈ ಸನ್ನಿವೇಶಗಳು, ದೇವರ ಅಪ್ರಸನ್ನತೆಯ ಪುರಾವೆಯಾಗಿ ಅರ್ಥೈಸಲ್ಪಡಬಾರದು. ಯೋಬ ಮತ್ತು ಅವನು ಅನುಭವಿಸಿದ ಅನೇಕ ಕೇಡುಗಳ ವಿದ್ಯಮಾನವನ್ನು ಜ್ಞಾಪಿಸಿಕೊಳ್ಳಿರಿ. ಅವನು “ನಿರ್ದೋಷಿಯೂ ಯಥಾರ್ಥಚಿತ್ತನೂ” ಆಗಿದ್ದನು. (ಯೋಬ 1:8) ಯೋಬನು ತಪ್ಪುಮಾಡಿರುವುದಾಗಿ ಎಲೀಫಜನು ಆರೋಪ ಹೊರಿಸಿದಾಗ, ಅವನು ಎಷ್ಟೊಂದು ಎದೆಗುಂದಿದ್ದಿರಬೇಕು! (ಯೋಬ, ಅಧ್ಯಾಯಗಳು 4, 5, 22) ನಾವು ಯೆಹೋವನನ್ನು ಯಾವುದೊ ವಿಧದಲ್ಲಿ ನಿರಾಶೆಗೊಳಿಸಿರುವ ಕಾರಣ ಇಲ್ಲವೆ ಯೆಹೋವನು ತನ್ನ ಆಶೀರ್ವಾದವನ್ನು ಹಿಂತೆಗೆದುಕೊಂಡಿರುವ ಕಾರಣ, ನಾವು ವಿಪತ್ತುಗಳನ್ನು ಅನುಭವಿಸುತ್ತೇವೆಂದು ಬೇಗನೆ ತೀರ್ಮಾನಿಸಬಯಸುವುದಿಲ್ಲ. ಸಂಕಷ್ಟದ ಸಮಯದಲ್ಲಿ ನಕಾರಾತ್ಮಕ ಆಲೋಚನೆಯು, ನಮ್ಮ ನಂಬಿಕೆಯನ್ನು ಬಲಹೀನಗೊಳಿಸಬಲ್ಲದು. (1 ಥೆಸಲೊನೀಕ 3:1-3, 5) ಸಂಕಟವನ್ನು ಅನುಭವಿಸುತ್ತಿರುವಾಗ, ಏನೇ ಸಂಭವಿಸಲಿ ಯೆಹೋವ ಮತ್ತು ಯೇಸು ನೀತಿವಂತರ ಸಮೀಪವಿರುತ್ತಾರೆಂಬ ನಿಜತ್ವದ ಕುರಿತು ಮನನಮಾಡುವುದು ಅತ್ಯುತ್ತಮ.
15. ತನ್ನ ಜನರು ಅನುಭವಿಸುವ ವಿಪತ್ತುಗಳ ಕುರಿತು ಯೆಹೋವನು ಆಳವಾಗಿ ಚಿಂತಿಸುತ್ತಾನೆಂದು ನಮಗೆ ಹೇಗೆ ಗೊತ್ತು?
15 “ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರು ಯಾರು? ಕಷ್ಟವೋ ಸಂಕಟವೋ ಹಿಂಸೆಯೋ ಅನ್ನವಿಲ್ಲದಿರುವದೋ ವಸ್ತ್ರವಿಲ್ಲದಿರುವದೋ ಗಂಡಾಂತರವೋ ಖಡ್ಗವೋ? . . . ಹೇಗಂದರೆ ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ದುರಾತ್ಮಗಳಾಗಲಿ ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ ಮಹತ್ವಗಳಾಗಲಿ ಮೇಲಣ ಲೋಕವಾಗಲಿ ಕೆಳಗಣ ಲೋಕವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು,” ಎಂಬುದಾಗಿ ಅಪೊಸ್ತಲ ಪೌಲನು ಹೇಳುವಾಗ, ನಮಗೆ ಪುನರಾಶ್ವಾಸನೆ ನೀಡುತ್ತಾನೆ. (ರೋಮಾಪುರ 8:35, 38, 39) ಯೆಹೋವನು ನಮ್ಮ ಕುರಿತು ಆಳವಾಗಿ ಚಿಂತಿತನಾಗಿದ್ದಾನೆ ಮತ್ತು ನಮ್ಮ ಕಷ್ಟಾನುಭವದ ಅರಿವು ಆತನಿಗಿದೆ. ಇನ್ನೂ ಒಬ್ಬ ಪರಾಶ್ರಿತನಾಗಿದ್ದಾಗ, ದಾವೀದನು ಬರೆದುದು: “ಯೆಹೋವನು ನೀತಿವಂತರನ್ನು ಕಟಾಕ್ಷಿಸುತ್ತಾನೆ; ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ. ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ.” (ಕೀರ್ತನೆ 34:15, 18; ಮತ್ತಾಯ 18:6, 14) ನಮ್ಮ ಸ್ವರ್ಗೀಯ ಪಿತನು ನಮಗಾಗಿ ಚಿಂತಿಸುತ್ತಾನೆ ಮತ್ತು ಕಷ್ಟಾನುಭವಿಸುವವರಿಗಾಗಿ ಆತನು ಮರುಗುತ್ತಾನೆ. (1 ಪೇತ್ರ 5:6, 7) ನಾವು ಅನುಭವಿಸಬಹುದಾದ ಕಷ್ಟವು ಏನೇ ಆಗಿರಲಿ, ತಾಳಿಕೊಳ್ಳಲು ನಮಗೆ ಬೇಕಾದದ್ದನ್ನು ಆತನು ಒದಗಿಸುತ್ತಾನೆ.
ಯೆಹೋವನ ಕೊಡುಗೆಗಳು ನಮ್ಮನ್ನು ಪೋಷಿಸುತ್ತವೆ
16. ಯೆಹೋವನಿಂದ ಬರುವ ಯಾವ ಒದಗಿಸುವಿಕೆಯು ತಾಳಿಕೊಳ್ಳುವಂತೆ ನಮಗೆ ಸಹಾಯ ಮಾಡುತ್ತದೆ, ಮತ್ತು ಹೇಗೆ?
16 ಈ ಹಳೆಯ ವಿಷಯಗಳ ವ್ಯವಸ್ಥೆಯಲ್ಲಿ, ನಾವು ಒಂದು ಕೇಡುಮುಕ್ತ ಜೀವನವನ್ನು ನಿರೀಕ್ಷಿಸಸಾಧ್ಯವಿಲ್ಲದಿದ್ದರೂ, ನಾವು “ಕೈಬಿಡಲ್ಪಟ್ಟವರಲ್ಲ.” (2 ಕೊರಿಂಥ 4:8, 9) ಯೇಸು ತನ್ನ ಹಿಂಬಾಲಕರಿಗೆ ಒಬ್ಬ ಸಹಾಯಕನನ್ನು ಒದಗಿಸುವ ವಾಗ್ದಾನವನ್ನು ಮಾಡಿದನು. ಅವನು ಹೇಳಿದ್ದು: “ನಾನು ತಂದೆಯನ್ನು ಕೇಳಿಕೊಳ್ಳುವೆನು; ಆತನು ನಿಮಗೆ ಬೇರೊಬ್ಬ ಸಹಾಯಕನನ್ನು ಸದಾಕಾಲ ನಿಮ್ಮ ಸಂಗಡ ಇರುವದಕ್ಕೆ ಕೊಡುವನು. ಆ ಸಹಾಯಕನು ಯಾರಂದರೆ ಸತ್ಯದ ಆತ್ಮನೇ.” (ಯೋಹಾನ 14:16, 17) ಸಾ.ಶ. 33ರ ಪಂಚಾಶತ್ತಮದಲ್ಲಿ, ಅಪೊಸ್ತಲ ಪೇತ್ರನು ತನ್ನ ಕೇಳುಗರಿಗೆ, ಅವರು “ಪವಿತ್ರಾತ್ಮದಾನವನ್ನು” ಪಡೆದುಕೊಳ್ಳಬಲ್ಲರೆಂದು ಹೇಳಿದನು. (ಅ. ಕೃತ್ಯಗಳು 2:38) ಆ ಪವಿತ್ರಾತ್ಮವು ನಮಗಿಂದು ಸಹಾಯ ಮಾಡುತ್ತಿದೆಯೊ? ಹೌದು! ಯೆಹೋವನ ಸಕ್ರಿಯ ಶಕ್ತಿಯು ನಮಗೆ ಅದ್ಭುತಕರವಾದ ಫಲವನ್ನು ನೀಡುತ್ತದೆ: “ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ.” (ಗಲಾತ್ಯ 5:22, 23) ಇವೆಲ್ಲವುಗಳು, ತಾಳಿಕೊಳ್ಳುವಂತೆ ನಮಗೆ ಸಹಾಯಮಾಡುವ ಅಮೂಲ್ಯವಾದ ಗುಣಗಳಾಗಿವೆ.
17. ಯೆಹೋವನ ಮೇಲೆ ತಾಳ್ಮೆಯಿಂದ ಆತುಕೊಳ್ಳುವಂತೆ ಯಾವ ಕೆಲವು ಬೈಬಲ್ ಸತ್ಯತೆಗಳು ನಮ್ಮ ನಂಬಿಕೆ ಮತ್ತು ದೃಢಸಂಕಲ್ಪವನ್ನು ಬಲಪಡಿಸುತ್ತವೆ?
17 ನಿತ್ಯಜೀವದ ಪ್ರತಿಫಲದೊಂದಿಗೆ ಹೋಲಿಸುವಾಗ, ಪ್ರಚಲಿತ ಸಂಕಟಗಳು ‘ಕ್ಷಣಮಾತ್ರ ಹಾಗೂ ಹಗುರ’ವಾದವುಗಳೆಂದೂ ನಾವು ಅರ್ಥಮಾಡಿಕೊಳ್ಳುವಂತೆಯೂ, ಪವಿತ್ರಾತ್ಮವು ಸಹಾಯ ಮಾಡುತ್ತದೆ. (2 ಕೊರಿಂಥ 4:16-18) ದೇವರು ನಮ್ಮ ಕೆಲಸಗಳನ್ನು ಮತ್ತು ನಾವು ಆತನಿಗಾಗಿ ತೋರಿಸುವ ಪ್ರೀತಿಯನ್ನು ಮರೆಯಲಾರನೆಂದು ನಾವು ಮನಗಂಡಿದ್ದೇವೆ. (ಇಬ್ರಿಯ 6:9-12) ಬೈಬಲಿನ ಪ್ರೇರಿತ ಮಾತುಗಳನ್ನು ಓದುವ ಮೂಲಕ, ಅನೇಕ ವಿಪತ್ತುಗಳನ್ನು ತಾಳಿಕೊಂಡರೂ, ಧನ್ಯರೆಂದು ಘೋಷಿಸಲ್ಪಟ್ಟ ಪುರಾತನಕಾಲದ ನಂಬಿಗಸ್ತ ಸೇವಕರ ಮಾದರಿಗಳಿಂದ ನಾವು ಸಂತೈಸಲ್ಪಡುತ್ತೇವೆ. ಯಾಕೋಬನು ಬರೆಯುವುದು: “ಬಾಧೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ವಿಷಯದಲ್ಲಿ ಕರ್ತನ ಹೆಸರಿನಿಂದ ಮಾತಾಡಿದ ಪ್ರವಾದಿಗಳನ್ನೇ ಮಾದರಿಮಾಡಿಕೊಳ್ಳಿರಿ. ತಾಳಿಕೊಂಡಿರುವವರನ್ನು ಧನ್ಯರೆಂದು ಹೇಳುತ್ತೇವಲ್ಲವೇ.” (ಯಾಕೋಬ 5:10, 11) ಪರೀಕ್ಷೆಗಳನ್ನು ತಾಳಿಕೊಳ್ಳುವಂತೆ ನಮಗೆ ಸಹಾಯ ಮಾಡಲು, ಬೈಬಲು “ಬಲಾಧಿಕ್ಯ”ವನ್ನು ವಾಗ್ದಾನಿಸುತ್ತದೆ. ಯೆಹೋವನು ಪುನರುತ್ಥಾನದ ನಿರೀಕ್ಷೆಯಿಂದಲೂ ನಮ್ಮನ್ನು ಆಶೀರ್ವದಿಸುತ್ತಾನೆ. (2 ಕೊರಿಂಥ 1:8-10; 4:7) ಬೈಬಲನ್ನು ದಿನನಿತ್ಯ ಓದುವುದರಿಂದ ಮತ್ತು ಈ ವಾಗ್ದಾನಗಳ ಕುರಿತಾಗಿ ಮನನ ಮಾಡುವ ಮೂಲಕ, ನಾವು ನಮ್ಮ ನಂಬಿಕೆಯನ್ನು ಮತ್ತು ದೇವರ ಮೇಲೆ ತಾಳ್ಮೆಯಿಂದ ಆತುಕೊಳ್ಳುವ ನಮ್ಮ ದೃಢಸಂಕಲ್ಪವನ್ನು ಬಲಪಡಿಸಿಕೊಳ್ಳುವೆವು.—ಕೀರ್ತನೆ 42:5.
18. (ಎ) 2 ಕೊರಿಂಥ 1:3, 4ರಲ್ಲಿ, ನಾವು ಏನನ್ನು ಮಾಡುವಂತೆ ಉತ್ತೇಜಿಸಲ್ಪಟ್ಟಿದ್ದೇವೆ? (ಬಿ) ಕ್ರೈಸ್ತ ಮೇಲ್ವಿಚಾರಕರು ಹೇಗೆ ಸಾಂತ್ವನ ಹಾಗೂ ಚೈತನ್ಯದ ಮೂಲಗಳಾಗಿ ಪರಿಣಮಿಸಬಲ್ಲರು?
18 ಇದಕ್ಕೆ ಕೂಡಿಸಿ, ಯೆಹೋವನು ನಮಗೆ ಆತ್ಮಿಕ ಪ್ರಮೋದವನವನ್ನು ಕೊಟ್ಟಿದ್ದಾನೆ. ಅಲ್ಲಿ ನಾವು ನಮ್ಮ ಕ್ರೈಸ್ತ ಸಹೋದರ ಸಹೋದರಿಯರ ಯಥಾರ್ಥವಾದ ಪ್ರೀತಿಯನ್ನು ಅನುಭವಿಸಬಲ್ಲೆವು. ಒಬ್ಬರನ್ನೊಬ್ಬರು ಸಂತೈಸುವುದರಲ್ಲಿ ನಮಗೆಲ್ಲರಿಗೂ ನಿರ್ವಹಿಸಬೇಕಾದ ಒಂದು ಪಾತ್ರವಿದೆ. (2 ಕೊರಿಂಥ 1:3, 4) ವಿಶೇಷವಾಗಿ ಕ್ರೈಸ್ತ ಮೇಲ್ವಿಚಾರಕರು, ಸಾಂತ್ವನ ಹಾಗೂ ಚೈತನ್ಯದ ಒಂದು ಪ್ರಧಾನ ಮೂಲವಾಗಿರಬಲ್ಲರು. (ಯೆಶಾಯ 32:2) “ಮನುಷ್ಯರಲ್ಲಿ ವರ”ಗಳಂತೆ (NW) ಅವರು, ಕಷ್ಟಾನುಭವಿಸುವವರ ಆತ್ಮೋನ್ನತಿ ಮಾಡುವಂತೆ, “ಮನಗುಂದಿದವರನ್ನು ಧೈರ್ಯಪಡಿ”ಸುವಂತೆ ಮತ್ತು “ಬಲಹೀನರಿಗೆ ಆಧಾರವಾಗಿ”ರುವಂತೆ ಆದೇಶಿಸಲ್ಪಟ್ಟಿದ್ದಾರೆ. (ಎಫೆಸ 4:8, 11, 12; 1 ಥೆಸಲೊನೀಕ 5:14) ಹಿರಿಯರು, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಹಾಗೂ ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ’ನಿಂದ ಒದಗಿಸಲ್ಪಡುವ ಇತರ ಪ್ರಕಾಶನಗಳ ಸದುಪಯೋಗ ಮಾಡುವಂತೆ ಉತ್ತೇಜಿಸಲ್ಪಡುತ್ತಾರೆ. (ಮತ್ತಾಯ 24:45-47) ನಮಗೆ ವ್ಯಾಕುಲತೆಯನ್ನುಂಟುಮಾಡುವ ಕೆಲವು ಸಮಸ್ಯೆಗಳನ್ನು ಪರಿಹರಿಸಲು—ತಡೆಗಟ್ಟಲು ಸಹ—ನಮಗೆ ಸಹಾಯ ಮಾಡಬಲ್ಲ ಬೈಬಲಾಧಾರಿತ ಸಲಹೆಯ ಒಂದು ನಿಕ್ಷೇಪ ಅವುಗಳಲ್ಲಿದೆ. ಕಷ್ಟಕರ ಸಮಯಗಳಲ್ಲಿ ಒಬ್ಬರನ್ನೊಬ್ಬರು ಸಂತೈಸುವ ಹಾಗೂ ಉತ್ತೇಜಿಸುವ ಮೂಲಕ ನಾವು ಯೆಹೋವನನ್ನು ಅನುಕರಿಸುವಂತಾಗಲಿ!
19. (ಎ) ಕೆಲವು ಕೇಡುಗಳಿಂದ ದೂರವಿರುವಂತೆ ನಮಗೆ ಯಾವುದು ಸಹಾಯ ಮಾಡುತ್ತದೆ? (ಬಿ) ಕಟ್ಟಕಡೆಗೆ ನಾವು ಯಾರಲ್ಲಿ ಭರವಸೆಯನ್ನಿಡಬೇಕು, ಮತ್ತು ಪರೀಕ್ಷೆಗಳನ್ನು ಎದುರಿಸುವಂತೆ ಯಾವುದು ನಮ್ಮನ್ನು ಶಕ್ತರನ್ನಾಗಿಮಾಡುವುದು?
19 ನಾವು ಕಡೇ ದಿವಸಗಳೊಳಗೆ ಇನ್ನೂ ಆಳವಾಗಿ ಪ್ರವೇಶಿಸಿದಂತೆ ಮತ್ತು ಪ್ರಚಲಿತ ವಿಷಯಗಳ ವ್ಯವಸ್ಥೆಯಲ್ಲಿನ ಪರಿಸ್ಥಿತಿಗಳು ಇನ್ನೂ ಕೀಳಾದಂತೆ, ಕ್ರೈಸ್ತರು ವಿಪತ್ತುಗಳಿಂದ ದೂರವಿರಲು ತಮ್ಮಿಂದ ಸಾಧ್ಯವಾಗುವುದನ್ನು ಮಾಡುತ್ತಾರೆ. (ಜ್ಞಾನೋಕ್ತಿ 22:3) ಯೋಗ್ಯವಾದ ತೀರ್ಮಾನ, ಸ್ವಸ್ಥ ಮನಸ್ಸು, ಮತ್ತು ಬೈಬಲ್ ಮೂಲತತ್ವಗಳ ಜ್ಞಾನವು, ವಿವೇಕಯುತ ನಿರ್ಣಯಗಳನ್ನು ಮಾಡುವಂತೆ ನಮಗೆ ಸಹಾಯ ಮಾಡಬಲ್ಲದು. (ಜ್ಞಾನೋಕ್ತಿ 3:21, 22) ಅನಾವಶ್ಯಕವಾದ ತಪ್ಪುಗಳನ್ನು ಮಾಡುವುದರಿಂದ ದೂರವಿರಲು, ನಾವು ಯೆಹೋವನ ವಾಕ್ಯಕ್ಕೆ ಕಿವಿಗೊಡುತ್ತೇವೆ ಮತ್ತು ಅದಕ್ಕೆ ವಿಧೇಯರಾಗುತ್ತೇವೆ. (ಕೀರ್ತನೆ 38:4) ಆದರೂ, ನಾವೆಷ್ಟೇ ಪ್ರಯತ್ನಿಸಿದರೂ, ನಮ್ಮ ಜೀವಿತಗಳಿಂದ ಕಷ್ಟಾನುಭವವನ್ನು ಸಂಪೂರ್ಣವಾಗಿ ನಿರ್ಮೂಲಮಾಡಲು ಸಾಧ್ಯವಿಲ್ಲವೆಂದು ನಾವು ಗ್ರಹಿಸುತ್ತೇವೆ. ಈ ವಿಷಯಗಳ ವ್ಯವಸ್ಥೆಯಲ್ಲಿ, ಅನೇಕ ನೀತಿವಂತರು ತೀಕ್ಷ್ಣವಾದ ಕೇಡುಗಳನ್ನು ಎದುರಿಸುತ್ತಾರೆ. ಆದಾಗಲೂ, “ಯೆಹೋವನು ತನ್ನ ಜನರನ್ನು ತೊರೆದುಬಿಡನು” (NW) ಎಂಬ ಸಂಪೂರ್ಣ ಭರವಸೆಯಿಂದ, ನಾವು ನಮ್ಮ ಪರೀಕ್ಷೆಗಳನ್ನು ಎದುರಿಸಬಲ್ಲೆವು. (ಕೀರ್ತನೆ 94:14) ಮತ್ತು ಈ ವಿಷಯಗಳ ವ್ಯವಸ್ಥೆಯು ಮತ್ತು ಅದರ ವ್ಯಥೆಗಳು ಬೇಗನೆ ಇಲ್ಲದಿರುವವೆಂದು ನಮಗೆ ಗೊತ್ತು. ಆದುದರಿಂದ, “ಒಳ್ಳೇದನ್ನು ಮಾಡುವುದರಲ್ಲಿ ಬೇಸರಗೊಳ್ಳದೆ” ಇರಲು ನಾವು ನಿರ್ಧರಿಸೋಣ, “ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು.”—ಗಲಾತ್ಯ 6:9.
ನಾವು ಏನನ್ನು ಕಲಿತೆವು?
◻ ಕ್ರೈಸ್ತರ ಇಡೀ ಸಂಘದಿಂದ ಯಾವ ಪರೀಕ್ಷೆಗಳು ಅನುಭವಿಸಲ್ಪಡುತ್ತವೆ?
◻ ವಿಪತ್ತುಗಳು ಯೆಹೋವನ ಅಪ್ರಸನ್ನತೆಯ ಪ್ರಮಾಣವಲ್ಲವೆಂಬುದನ್ನು ಅರ್ಥಮಾಡಿಕೊಳ್ಳಲು, ಯಾವ ಬೈಬಲ್ ಉದಾಹರಣೆಗಳು ನಮಗೆ ಸಹಾಯ ಮಾಡುತ್ತವೆ?
◻ ತನ್ನ ಜನರು ಅನುಭವಿಸುವ ಕೇಡುಗಳ ಕುರಿತು ಯೆಹೋವನಿಗೆ ಹೇಗೆ ಅನಿಸುತ್ತದೆ?
◻ ಪರೀಕ್ಷೆಗಳನ್ನು ತಾಳಿಕೊಳ್ಳಲು ನಮಗೆ ಸಹಾಯ ಮಾಡುವ, ಯೆಹೋವನಿಂದ ಬರುವ ಕೊಡುಗೆಗಳಲ್ಲಿ ಕೆಲವು ಯಾವುವು?
[ಪುಟ 10 ರಲ್ಲಿರುವ ಚಿತ್ರ]
ದಾವೀದ, ನಾಬೋತ, ಮತ್ತು ಯೋಸೇಫರು, ವಿಪತ್ತುಗಳನ್ನು ಅನುಭವಿಸಿದ ಮೂವರು ವ್ಯಕ್ತಿಗಳು