ಬೈಬಲ್ ನಮಗೆ ಲಭ್ಯವಾದ ವಿಧ—ಭಾಗ 2
ಅಬ್ಬರಿಸುತ್ತಿದ್ದ ಉತ್ಸವಾಗ್ನಿಯ ಮೇಲೆ ಹೆಚ್ಚೆಚ್ಚು ಇಂಧನವು ಸೇರಿಸಲ್ಪಡುತ್ತಿದ್ದಂತೆ ಜ್ವಾಲೆಗಳು ಗಗನದತ್ತ ಹಾರಿದವು. ಆದರೆ ಇದೇನೂ ಸಾಮಾನ್ಯ ಬೆಂಕಿಯಾಗಿರಲಿಲ್ಲ. ಪಾದ್ರಿಗಳೂ ಧರ್ಮಾಧ್ಯಕ್ಷರೂ ನೋಡುತ್ತಿದ್ದಾಗ ಆ ತೀಕ್ಷ್ಣ ದಳ್ಳುರಿಗೆ ಬೈಬಲ್‌ಗಳು ಗ್ರಾಸವಾಗುತ್ತಿದ್ದವು. ಆದರೆ, ಬೈಬಲ್‌ಗಳನ್ನು ನಾಶಮಾಡಲಿಕ್ಕಾಗಿ ಅವುಗಳನ್ನು ಖರೀದಿಸುವ ಮೂಲಕ, ಲಂಡನಿನ ಬಿಷಪನು ಅಜ್ಞಾತವಾಗಿ ಭಾಷಾಂತರಕಾರನಾದ ವಿಲ್ಯಮ್ ಟಿಂಡಲ್‌ಗೆ, ಹೆಚ್ಚಿನ ಆವೃತ್ತಿಗಳನ್ನು ಮುದ್ರಿಸುವಂತೆ ಧನಸಹಾಯ ಮಾಡುತ್ತಿದ್ದನು!
ಹೋರಾಟ ಮಾಡುತ್ತಿದ್ದ ಈ ಎರಡೂ ಪಕ್ಷಗಳು ಇಂತಹ ದೃಢನಿಶ್ಚಯ ಮಾಡುವಂತೆ ಯಾವುದು ನಡೆಸಿತು? ಹಿಂದಿನ ಒಂದು ಸಂಚಿಕೆಯಲ್ಲಿ, ಮಧ್ಯಯುಗಗಳ ಅಂತ್ಯಭಾಗದ ವರೆಗಿನ ಬೈಬಲ್ ಪ್ರಕಾಶನದ ಇತಿಹಾಸವನ್ನು ನಾವು ಪರ್ಯಾಲೋಚಿಸಿದೆವು. ಈಗ ನಾವು ಒಂದು ಹೊಸ ಯುಗದ ಅರುಣೋದಯಕ್ಕೆ, ದೇವರ ವಾಕ್ಯದ ಸಂದೇಶವೂ ಅಧಿಕಾರವೂ ಸಮಾಜದ ಮೇಲೆ ಗಾಢವಾದ ಪರಿಣಾಮವನ್ನು ಬೀರಲಿದ್ದ ಸಮಯಕ್ಕೆ ಬರುತ್ತೇವೆ.
ಆದ್ಯಪ್ರವರ್ತಕನೊಬ್ಬನು ತೋರಿಬರುತ್ತಾನೆ
ಗೌರವಾನಿತ್ವ ಆಕ್ಸ್‌ಫರ್ಡ್ ಪಂಡಿತನಾಗಿದ್ದ ಜಾನ್ ವಿಕ್ಲಿಫ್, ‘ದೇವರ ನಿಯಮ’ದ ಮೇಲೆ, ಅಂದರೆ ಬೈಬಲಿನ ಮೇಲೆ ತನ್ನ ಅಧಿಕಾರವನ್ನು ಆಧಾರಿಸುತ್ತ, ಕ್ಯಾಥೊಲಿಕ್ ಚರ್ಚಿನ ಬೈಬಲಿಗನುಸಾರವಲ್ಲದ ಆಚಾರಗಳ ವಿರುದ್ಧ ಪ್ರಬಲವಾಗಿ ಸಾರಿದನು ಮತ್ತು ಬರೆದನು. ಲಾಲರ್ಡ್ಸ್ ಎಂಬ ತನ್ನ ವಿದ್ಯಾರ್ಥಿಗಳು, ಇಂಗ್ಲೆಂಡಿನ ಗ್ರಾಮಪ್ರದೇಶಗಳಲ್ಲಿ ಬೈಬಲಿನ ಸಂದೇಶವನ್ನು ಆಲಿಸುವವರೆಲ್ಲರಿಗೆ ಇಂಗ್ಲಿಷ್ ಭಾಷೆಯಲ್ಲಿ ಸಾರುವಂತೆ ಅವನು ಅವರನ್ನು ಕಳುಹಿಸಿದನು. 1384ರಲ್ಲಿ ತಾನು ಸಾಯುವುದಕ್ಕೆ ಮೊದಲು, ಅವನು ಬೈಬಲನ್ನು ಲ್ಯಾಟಿನ್‌ನಿಂದ ತನ್ನ ದಿನದ ಇಂಗ್ಲಿಷ್ ಭಾಷೆಗೆ ಭಾಷಾಂತರಿಸುವುದನ್ನು ಆರಂಭಿಸಿದನು.
ವಿಕ್ಲಿಫ್‌ನನ್ನು ತುಚ್ಛವಾಗಿ ಕಾಣಲು ಚರ್ಚಿಗೆ ಅನೇಕ ಕಾರಣಗಳಿದ್ದವು. ಪ್ರಥಮವಾಗಿ, ಅವನು ಪುರೋಹಿತ ವರ್ಗವನ್ನು, ಅವರ ವೈಪರೀತ್ಯಗಳಿಗಾಗಿಯೂ ಅನೈತಿಕ ನಡತೆಗಾಗಿಯೂ ಖಂಡಿಸಿದನು. ಕೂಡಿಕೆಯಾಗಿ, ವಿಕ್ಲಿಫ್‌ನ ಪ್ರಶಂಸಕರಲ್ಲಿ ಅನೇಕರು, ತಮ್ಮ ಸಶಸ್ತ್ರ ದಂಗೆಗಳನ್ನು ನ್ಯಾಯವೆಂದು ಸಮರ್ಥಿಸಲು ಅವನ ಬೋಧನೆಗಳನ್ನು ದುರುಪಯೋಗಿಸಿದರು. ಅವನು ಹಿಂಸಾತ್ಮಕ ಬಂಡಾಯಗಳನ್ನು ಎಂದಿಗೂ ಸಮರ್ಥಿಸಿದ್ದಿಲ್ಲವಾದರೂ, ಅವನು ಸತ್ತ ಮೇಲೂ ಪುರೋಹಿತ ವರ್ಗವು ವಿಕ್ಲಿಫ್‌ನ ಮೇಲೆ ತಪ್ಪುಹೊರಿಸಿತು.
ಆರ್ಚ್‌ಬಿಷಪ್ ಅರಂಡಲ್, 1412ರಲ್ಲಿ XXIIIನೆಯ ಪೋಪ್ ಜಾನ್‌ಗೆ ಬರೆದ ಪತ್ರದಲ್ಲಿ, ವಿಕ್ಲಿಫ್‌ನನ್ನು ಸೂಚಿಸಿ, “ಆ ದಂಡಾರ್ಹ ಸ್ಮರಣೆಯ, ಆ ಹಳೆಯ ಸರ್ಪನ ಮಗನಾದ, ಕ್ರಿಸ್ತ ವಿರೋಧಿಯ ಸಾಕ್ಷಾತ್ ದೂತನೂ ಮಗುವೂ ಆದ, ಆ ನೀಚ ಮತ್ತು ಉಪದ್ರವಕಾರಿ ಆಸಾಮಿಯಾದ ಜಾನ್ ವಿಕ್ಲಿಫ್,” ಎಂದು ಬರೆದನು. ತನ್ನ ಖಂಡನೆಯನ್ನು ಪರಮಾವಧಿಗೇರಿಸುತ್ತ ಅರಂಡಲ್ ಬರೆದುದು: “ಅವನ ಹಗೆಸಾಧನೆಯನ್ನು ಪೂರ್ಣಗೊಳಿಸಲು ಅವನು ಶಾಸ್ತ್ರಗಳ ಹೊಸ ಭಾಷಾಂತರವೊಂದನ್ನು ಮಾತೃಭಾಷೆಗೆ ತರ್ಜುಮೆಮಾಡುವ ಔಚಿತ್ಯದ ಉಪಾಯ ಹೂಡಿದನು.” ವಿಕ್ಲಿಫ್ ಜನರಿಗೆ ಅವರ ಸ್ವಂತ ಭಾಷೆಗಳಲ್ಲಿ ಬೈಬಲನ್ನು ಕೊಡಲು ಬಯಸಿದ್ದೇ ಚರ್ಚ್ ನೇತಾರರನ್ನು ಅತಿಯಾಗಿ ಕೋಪಕ್ಕೊಳಪಡಿಸಿದ ವಿಷಯವಾಗಿತ್ತು ಎಂಬುದು ನಿಶ್ಚಯ.
ಆದರೂ, ಕೆಲವು ಪ್ರಮುಖರಿಗೆ ದೇಶೀಯ ಭಾಷೆಗಳಲ್ಲಿದ್ದ ಶಾಸ್ತ್ರಗಳು ಓದಲು ಲಭ್ಯವಾಗಿದ್ದವು. ಇವರಲ್ಲಿ ಒಬ್ಬಾಕೆ, ಇಂಗ್ಲೆಂಡ್‌ನ ಭಾವೀ ರಾಜ, IIನೆಯ ರಿಚರ್ಡ್ ಎಂಬವನನ್ನು 1382ರಲ್ಲಿ ಮದುವೆಯಾದ ಬೊಹೀಮಿಯದ ಆ್ಯನ್ ಎಂಬಾಕೆಯಾಗಿದ್ದಳು. ಆಕೆಯ ಬಳಿ ವಿಕ್ಲಿಫ್‌ನ ಸುವಾರ್ತೆಗಳ ಇಂಗ್ಲಿಷ್ ಭಾಷಾಂತರಗಳಿದ್ದವು ಮತ್ತು ಇವನ್ನು ಆಕೆ ಸತತವಾಗಿ ಅಭ್ಯಸಿಸಿದಳು. ಆಕೆ ರಾಣಿಯಾದಾಗ, ಆಕೆಯ ಅನುಕೂಲಕರ ಮನೋಭಾವವು, ಬೈಬಲಿನ ಗುರಿಯನ್ನು—ಇಂಗ್ಲೆಂಡ್‌ನಲ್ಲಿ ಮಾತ್ರವಲ್ಲ—ಮುಂದುವರಿಸಲು ಸಹಾಯ ನೀಡಿತು. ಬೊಹೀಮಿಯದ ಪ್ರಾಗ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಆಕ್ಸ್‌ಫರ್ಡ್‌ಗೆ ಬರುವಂತೆ ಆ್ಯನ್ ಪ್ರೋತ್ಸಾಹಿಸಿದಳು. ಅಲ್ಲಿ ಅವರು ವಿಕ್ಲಿಫ್‌ನ ಕೃತಿಗಳನ್ನು ಉತ್ಸಾಹದಿಂದ ಅಭ್ಯಸಿಸಿ, ಅವುಗಳಲ್ಲಿ ಕೆಲವನ್ನು ಪ್ರಾಗ್‌ಗೆ ಕೊಂಡೊಯ್ದರು. ಪ್ರಾಗ್ ವಿಶ್ವವಿದ್ಯಾನಿಲಯದಲ್ಲಿ ವಿಕ್ಲಿಫ್‌ನ ಬೋಧನೆಗಳ ಜನಪ್ರಿಯತೆಯು, ಅಲ್ಲಿ ಕಲಿತು ಕೊನೆಗೆ ಕಲಿಸಿದ ಜಾನ್ ಹಸ್‌ಗೆ ಬೆಂಬಲವಾಗಿ ಪರಿಣಮಿಸಿತು. ಹಳೆಯ ಸ್ಲವಾನಿಕ್ ಭಾಷಾಂತರದಿಂದ ಹಸ್, ವಾಚನಯೋಗ್ಯ ಚೆಕ್ ಭಾಷಾಂತರವನ್ನು ಮಾಡಿದನು. ಅವನ ಪ್ರಯತ್ನಗಳು ಬೊಹೀಮಿಯ ಮತ್ತು ನೆರೆಯ ದೇಶಗಳಲ್ಲಿ ಬೈಬಲಿನ ಸಾಮಾನ್ಯ ಉಪಯೋಗಕ್ಕೆ ಉತ್ತೇಜನವನ್ನು ಕೊಟ್ಟವು.
ಚರ್ಚಿನಿಂದ ಹಿಂದೇಟು
“ಅನಲಂಕೃತ ಗ್ರಂಥಪಾಠ,” ಅಂದರೆ ಯಾವುದನ್ನೂ ಸೇರಿಸದಿರುವ ಮೂಲ ಪ್ರೇರಿತ ಶಾಸ್ತ್ರಗಳು, “ವಿವರಣೆಗಳಿರುವ” ಗ್ರಂಥಪಾಠ, ಅಂದರೆ ಚರ್ಚ್ ಒಪ್ಪುವ ಬೈಬಲ್‌ಗಳ ಅಂಚುಗಳಲ್ಲಿರುವ ಪ್ರಯಾಸಕರವಾದ ಸಾಂಪ್ರದಾಯಿಕ ವಿವರಣೆಗಳಿರುವ ಬೈಬಲ್‌ಗಳಿಗಿಂತ ಹೆಚ್ಚು ಅಧಿಕೃತವಾಗಿವೆಯೆಂದು ವಿಕ್ಲಿಫ್ ಮತ್ತು ಹಸ್ ಕಲಿಸಿದ್ದರಿಂದಲೂ ಪುರೋಹಿತ ವರ್ಗವು ಕೋಪೋದ್ರೇಕದಿಂದಿತ್ತು. ಈ ಉಪದೇಶಿಗಳು ಜನಸಾಮಾನ್ಯರಿಗೆ ಲಭ್ಯವಾಗುವಂತೆ ಬಯಸಿದ್ದು, ದೇವರ ವಾಕ್ಯದ ಸಾರಗುಂದಿಸದ ಸಂದೇಶವೇ.
ಹಾನಿಯಾಗುವುದಿಲ್ಲವೆಂಬ ಅಭಯಪತ್ರವನ್ನು ಕೊಡುತ್ತೇವೆಂದು ಸುಳ್ಳು ವಚನವನ್ನು ಕೊಟ್ಟು, ಅವನು ತನ್ನ ಅಭಿಪ್ರಾಯಗಳನ್ನು ಸಮರ್ಥಿಸುವರೆ, 1414ರಲ್ಲಿ ಜರ್ಮನಿಯ ಕ್ಯಾಥೊಲಿಕ್ ಕೌನ್ಸಿಲ್ ಆಫ್ ಕಾನ್‌ಸ್ಟೆನ್ಸ್ ಮುಂದೆ ಹಾಜರಾಗುವಂತೆ ಹಸ್‌ನನ್ನು ವಂಚಿಸಲಾಯಿತು. ಆ ಕೌನ್ಸಿಲ್ 2,933 ಪಾದ್ರಿಗಳನ್ನೂ, ಬಿಷಪರನ್ನೂ, ಕಾರ್ಡಿನಲರನ್ನೂ ಒಳಗೊಂಡಿತ್ತು. ತನ್ನ ಬೋಧನೆಗಳು ತಪ್ಪೆಂದು ಶಾಸ್ತ್ರಗಳಿಂದ ರುಜುಪಡಿಸುವಲ್ಲಿ ತಪ್ಪೊಪ್ಪಿಕೊಳ್ಳಲು ಹಸ್ ಒಪ್ಪಿದನು. ಆದರೆ ಕೌನ್ಸಿಲ್‌ಗೆ ವಿವಾದಾಂಶವು ಅದಾಗಿರಲಿಲ್ಲ. ಅವರ ಅಧಿಕಾರಕ್ಕೆ ಅವನು ಕೊಟ್ಟ ಪಂಥಾಹ್ವಾನವು, ಅವರು ಅವನನ್ನು 1415ರಲ್ಲಿ, ಅವನು ಗಟ್ಟಿಯಾಗಿ ಪ್ರಾರ್ಥಿಸುತ್ತಿದ್ದಾಗ, ಕಂಬಕ್ಕೆ ಕಟ್ಟಿ, ಸುಡಲು ಸಾಕಷ್ಟು ಕಾರಣವನ್ನು ಕೊಟ್ಟಿತು.
ಅದೇ ಕೌನ್ಸಿಲ್ ಜಾನ್ ವಿಕ್ಲಿಫ್‌ಗೆ ಖಂಡನೆ ಮತ್ತು ಮುಖಭಂಗದ ಕೊನೆಯ ಇಂಗಿತ ಸೂಚನೆಯನ್ನೂ ಮಾಡಿತು. ಇಂಗ್ಲೆಂಡಿನಲ್ಲಿ ಅವನ ಎಲುಬುಗಳನ್ನು ಅಗೆದು ತೆಗೆದು ಸುಟ್ಟುಹಾಕಬೇಕೆಂದು ಅದು ಆಜ್ಞಾಪಿಸಿತು. ಈ ಆದೇಶವು ಎಷ್ಟು ಹೇವರಿಕೆ ಬರಿಸುವಂತಹದ್ದಾಗಿತ್ತೆಂದರೆ, 1428ರ ತನಕ, ಪೋಪನಿಂದ ಕೇಳಿಕೊಳ್ಳಲ್ಪಡುವ ವರೆಗೆ ಅದು ನಿರ್ವಹಿಸಲ್ಪಡಲಿಲ್ಲ. ಆದರೆ ಎಂದಿನಂತೆಯೇ, ಅಂತಹ ಕಠಿನ ವಿರೋಧವು ಇತರ ಸತ್ಯ ಪ್ರಿಯರ ಹುರುಪನ್ನು ಕುಂದಿಸಲಿಲ್ಲ. ಬದಲಿಗೆ, ದೇವರ ವಾಕ್ಯವನ್ನು ಪ್ರಚಾರಮಾಡುವ ಅವರ ದೃಢತೆಯನ್ನು ಅದು ವೃದ್ಧಿಸಿತು.
ಮುದ್ರಣದ ಪ್ರಭಾವ
ಹಸ್ ಮರಣಹೊಂದಿ ಕೇವಲ 35 ವರ್ಷಗಳ ಬಳಿಕ, 1450ರೊಳಗೆ, ಯೊಹಾನಸ್ ಗೂಟನ್‌ಬರ್ಗ್ ಎಂಬುವವನು ಜರ್ಮನಿಯಲ್ಲಿ ಚಲನ ವಿಧಾನದ ಮುದ್ರಣವನ್ನು ಉಪಯೋಗಿಸಿ ಮುದ್ರಿಸಲಾರಂಭಿಸಿದನು. ಅವನ ಪ್ರಥಮ ದೊಡ್ಡ ಕೆಲಸವು, ಸುಮಾರು 1455ರಲ್ಲಿ ಮುಗಿಸಿದ ಲ್ಯಾಟಿನ್ ವಲ್ಗೇಟ್‌ನ ಒಂದು ಆವೃತ್ತಿಯಾಗಿತು. ಇಸವಿ 1495ರೊಳಗೆ ಇಡೀ ಬೈಬಲ್ ಅಥವಾ ಅದರ ಭಾಗವು ಜರ್ಮನ್, ಇಟ್ಯಾಲಿಯನ್, ಫ್ರೆಂಚ್, ಚೆಕ್, ಡಚ್, ಹೀಬ್ರು, ಕ್ಯಾಟಲನ್, ಗ್ರೀಕ್, ಸ್ಪ್ಯಾನಿಷ್, ಸ್ಲವಾನಿಕ್, ಪೋರ್ಟ್ಯುಗೀಸ್ ಮತ್ತು ಸರ್ಬಿಯನ್—ಈ ಕ್ರಮದಲ್ಲಿ ಮುದ್ರಿಸಲ್ಪಟ್ಟಿತ್ತು.
ಡಚ್ ವಿದ್ವಾಂಸ ಡೇಸೀಡೆರ್ಯುಸ್ ಇರ್ಯಾಸ್ಮಸ್, 1516ರಲ್ಲಿ ಗ್ರೀಕ್ ಗ್ರಂಥಪಾಠದ ಪ್ರಥಮ ಪೂರ್ತಿ ಮುದ್ರಿತ ಆವೃತ್ತಿಯನ್ನು ತಯಾರಿಸಿದನು. ಶಾಸ್ತ್ರಗಳು “ಸಕಲ ಜನರ ಸಕಲ ಭಾಷೆಗಳಲ್ಲಿ ಭಾಷಾಂತರಗೊಂಡಿರಬೇಕೆಂದು” ಇರ್ಯಾಸ್ಮಸ್ ಬಯಸಿದನು. ಆದರೂ, ತಾನೇ ಅದನ್ನು ಭಾಷಾಂತರಿಸುವ ಮೂಲಕ ತನ್ನ ಮಹಾ ಜನಪ್ರಿಯತೆಯನ್ನು ಅಪಾಯಕ್ಕೊಳಪಡಿಸುವ ವಿಷಯದಲ್ಲಿ ಅವನು ಸಂಕೋಚಪಟ್ಟನು. ಆದರೂ, ಹೆಚ್ಚು ಧೈರ್ಯವಂತರಾಗಿದ್ದ ಇತರರು ಅವನನ್ನು ಅನುಸರಿಸಿ ಬಂದರು. ಈ ವ್ಯಕ್ತಿಗಳಲ್ಲಿ ವಿಲ್ಯಮ್ ಟಿಂಡಲನು ಪ್ರಮುಖನಾಗಿದ್ದನು.
ವಿಲ್ಯಮ್ ಟಿಂಡಲ್ ಮತ್ತು ಇಂಗ್ಲಿಷ್ ಬೈಬಲ್
ಟಿಂಡಲ್‌ನ ವಿದ್ಯಾಭ್ಯಾಸ ಆಕ್ಸ್‌ಫರ್ಡ್‌ನಲ್ಲಾಯಿತು ಮತ್ತು ಸುಮಾರು 1521ರಲ್ಲಿ ಅವನು ಸರ್ ಜಾನ್ ವಾಲ್ಶ್ ಅವರ ಮನೆಗೆ, ಅವರ ಮಕ್ಕಳ ಖಾಸಗಿ ಉಪಾಧ್ಯಾಯನಾಗಿ ಹೋದನು. ಊಟದ ಕೋಣೆಯಲ್ಲಿ, ವಾಲ್ಶ್ ಅವರ ಸಮೃದ್ಧ ಮೇಜಿನ ಸುತ್ತಲೂ, ಅನೇಕ ವೇಳೆ ಯುವ ಟಿಂಡಲ್ ಸ್ಥಳಿಕ ಪುರೋಹಿತ ವರ್ಗದೊಂದಿಗೆ ವಾಗ್ವಾದಿಸುವುದು ಕಂಡಿತು. ಅವರ ಅಭಿಪ್ರಾಯಗಳನ್ನು ಟಿಂಡಲ್ ಸಾಧಾರಣ ರೀತಿಯಲ್ಲಿ ಬೈಬಲನ್ನು ತೆರೆದು, ಅವರಿಗೆ ವಚನಗಳನ್ನು ತೋರಿಸುವ ಮೂಲಕ ಪಂಥಾಹ್ವಾನಿಸಿದನು. ಸಕಾಲದಲ್ಲಿ, ವಾಲ್ಶ್ ದಂಪತಿಗಳು ಟಿಂಡಲ್ ಹೇಳುತ್ತಿದ್ದ ವಿಷಯಗಳನ್ನು ಮನಗಂಡರು, ಮತ್ತು ಅವರು ಪುರೋಹಿತರನ್ನು ಕಡಮೆ ಬಾರಿ ಆಮಂತ್ರಿಸಿದರು ಹಾಗೂ ಅವರನ್ನು ಕಡಮೆ ಉತ್ಸಾಹದಿಂದ ಸ್ವಾಗತಿಸಿದರು. ಸ್ವಾಭಾವಿಕವಾಗಿ, ಇದು ಟಿಂಡಲ್ ಮತ್ತು ಅವನ ನಂಬಿಕೆಗಳನ್ನು ಪುರೋಹಿತರಿಗೆ ಹೆಚ್ಚು ಕಹಿಯಾಗಿಸಿತು.
ಒಮ್ಮೆ ಒಂದು ವಾಗ್ವಾದದ ಸಮಯದಲ್ಲಿ, ಟಿಂಡಲ್‌ನ ಧಾರ್ಮಿಕ ವಿರೋಧಿಗಳಲ್ಲೊಬ್ಬನು, “ಪೋಪನ ನಿಯಮಗಳು ಇಲ್ಲದಿರುವುದಕ್ಕಿಂತ ದೇವರ ನಿಯಮಗಳೇ ಇಲ್ಲದಿರುವುದು ಲೇಸು” ಎಂದು ಹೇಳಿದನು. ಇದಕ್ಕೆ ಉತ್ತರಕೊಟ್ಟಾಗ, ಟಿಂಡಲ್‌ನ ಗಾಢನಂಬಿಕೆಯನ್ನು ಊಹಿಸಿಕೊಳ್ಳಿರಿ: “ನಾನು ಪೋಪನನ್ನೂ ಅವನ ಎಲ್ಲ ನಿಯಮಗಳನ್ನೂ ಉಪೇಕ್ಷಿಸುತ್ತೇನೆ. ದೇವರು ನನಗೆ ಜೀವಿಸಲು ಅನುಮತಿಸುವಲ್ಲಿ, ಅನೇಕ ವರ್ಷಗಳು ದಾಟಿಹೋಗುವ ಮೊದಲು ನೇಗಿಲು ಹೊಡೆಯುವ ಹುಡುಗನೊಬ್ಬನು ಶಾಸ್ತ್ರದಲ್ಲಿ ನಿನಗೆ ತಿಳಿದಿರುವುದಕ್ಕಿಂತ ಹೆಚ್ಚನ್ನು ತಿಳಿದುಕೊಳ್ಳುವಂತೆ ಮಾಡುವೆನು.” ಟಿಂಡಲ್‌ನ ನಿರ್ಧಾರಕ್ಕೆ ನಿರ್ದಿಷ್ಟವಾದ ಆಕಾರವು ಕೊಡಲ್ಪಟ್ಟಿತ್ತು. ಅವನು ತರುವಾಯ ಬರೆದುದು: “ಜನಸಾಮಾನ್ಯರ ಕಣ್ಣುಗಳ ಮುಂದೆ, ಅವರ ಮಾತೃಭಾಷೆಯಲ್ಲಿ, ಅವರು ವಚನದ ಕಾರ್ಯವಿಧಾನ, ಕ್ರಮ ಮತ್ತು ಅರ್ಥವನ್ನು ನೋಡುವಂತೆ ಶಾಸ್ತ್ರವನ್ನು ಸ್ಪಷ್ಟವಾಗಿ ಇಟ್ಟ ಹೊರತು, ಅವರನ್ನು ಯಾವ ಸತ್ಯದಲ್ಲಿಯೂ ಸ್ಥಾಪಿಸುವುದು ಅಸಾಧ್ಯವೆಂದು ನಾನು ಅನುಭವದಿಂದ ಗ್ರಹಿಸಿದ್ದೆ.”
ಆ ಸಮಯದಲ್ಲಿ, ಇಂಗ್ಲಿಷ್‌ನಲ್ಲಿ ಇನ್ನೂ ಯಾವ ಬೈಬಲೂ ಮುದ್ರಿಸಲ್ಪಟ್ಟಿರಲಿಲ್ಲ. ಆದುದರಿಂದ 1523ರಲ್ಲಿ, ಒಂದು ಭಾಷಾಂತರ ಯೋಜನೆಗೆ ಬಿಷಪ್ ಟನ್‌ಸ್ಟಲ್‌ನ ಬೆಂಬಲವನ್ನು ಬೇಡಲು ಟಿಂಡಲ್ ಲಂಡನಿಗೆ ಹೋದನು. ತಿರಸ್ಕರಿಸಲ್ಪಟ್ಟವನಾಗಿ, ಅವನು ತನ್ನ ಉದ್ದೇಶವನ್ನು ಬೆನ್ನಟ್ಟಲಿಕ್ಕಾಗಿ ಇಂಗ್ಲೆಂಡನ್ನು ಬಿಟ್ಟುಹೋದನು, ಹಿಂದಿರುಗಿ ಬರಲೇ ಇಲ್ಲ. ಜರ್ಮನಿಯ ಕೊಲೋನ್‌ನಲ್ಲಿ, ಅವನ ಪ್ರಥಮ ಮುದ್ರಣಾಲಯದ ಮೇಲೆ ಹಠಾತ್ ದಾಳಿಮಾಡಲಾಯಿತು. ಟಿಂಡಲ್ ರಟ್ಟುಕಟ್ಟಿರದ ಕೆಲವು ಅಮೂಲ್ಯ ಪುಟಗಳೊಂದಿಗೆ ಕಷ್ಟದಿಂದ ತಪ್ಪಿಸಿಕೊಂಡನು. ಆದರೆ ಜರ್ಮನಿಯ ವರ್ಮ್ಸ್‌ನಲ್ಲಿ, ಅವನ ಇಂಗ್ಲಿಷ್ “ಹೊಸ ಒಡಂಬಡಿಕೆ”ಯ ಕಡಮೆ ಪಕ್ಷ 3,000 ಪ್ರತಿಗಳನ್ನು ಮಾಡಿ ಮುಗಿಸಲಾಯಿತು. ಇವು ಇಂಗ್ಲೆಂಡಿಗೆ ಕಳುಹಿಸಲ್ಪಟ್ಟು, ಅಲ್ಲಿ 1526ರ ಆದಿಭಾಗದಲ್ಲಿ ಅದರ ವಿತರಣೆ ಆರಂಭಗೊಂಡಿತು. ಬಿಷಪ್ ಟನ್‌ಸ್ಟಲ್ ಖರೀದಿಸಿ ಸುಟ್ಟುಹಾಕಿದ ಬೈಬಲ್‌ಗಳಲ್ಲಿ ಕೆಲವು ಇವೇ. ಹೀಗೆ ಅಜ್ಞಾತವಾಗಿ, ಟಿಂಡಲ್ ತನ್ನ ಕೆಲಸವನ್ನು ಮುಂದವರಿಸುವಂತೆ ಬಿಷಪನು ಸಹಾಯಮಾಡಿದನು!
ಸಂಶೋಧನೆಯು ಸ್ಪಷ್ಟ ತಿಳಿವಳಿಕೆಯನ್ನು ತರುತ್ತದೆ
ಟಿಂಡಲ್ ತನ್ನ ಕೆಲಸದಲ್ಲಿ ಸಂತೋಷಿಸಿದ್ದೇನೊ ಸ್ಪಷ್ಟ. ಬೈಬಲಿನ ಕೇಂಬ್ರಿಜ್ ಇತಿಹಾಸ (ಇಂಗ್ಲಿಷ್) ಪುಸ್ತಕವು ತಿಳಿಸುವಂತೆ, “ಶಾಸ್ತ್ರವು ಅವನನ್ನು ಸಂತೋಷಗೊಳಿಸಿತು. ಅವನ ಮಿಡಿತದಲ್ಲಿ ಸಂತೋಷವನ್ನು ವ್ಯಕ್ತಪಡಿಸುವ ಯಾವುದೋ ಕ್ಷಿಪ್ರತೆ ಮತ್ತು ಗೆಲುವು ಇದೆ.” ಶಾಸ್ತ್ರಗಳು ಸಾಮಾನ್ಯ ವ್ಯಕ್ತಿಗೆ ಸಾಧ್ಯವಾದಷ್ಚು ನಿಷ್ಕೃಷ್ಟ ಮತ್ತು ಸರಳ ಮಾತುಗಳಲ್ಲಿ ಮಾತಾಡುವಂತೆ ಬಿಡುವುದು ಟಿಂಡಲ್‌ನ ಗುರಿಯಾಗಿತ್ತು. ಶತಮಾನಗಳಲ್ಲಿ ಚರ್ಚ್ ಸಿದ್ಧಾಂತದಲ್ಲಿ ಮರೆಮಾಡಲ್ಪಟ್ಟಿದ್ದ ಬೈಬಲ್ ಪದಗಳ ಅರ್ಥವನ್ನು ಅವನ ಅಧ್ಯಯನಗಳು ಅವನಿಗೆ ತೋರಿಸುತ್ತಿದ್ದವು. ಮರಣದ ಬೆದರಿಕೆಯಿಂದಾಗಲಿ, ತನ್ನ ಬಲಾಢ್ಯ ವೈರಿಯಾಗಿದ್ದ ಸರ್ ಥಾಮಸ್ ಮೋರ್ ಎಂಬವನ ದುಷ್ಟ ಬರಹಗಳಿಂದಾಗಲಿ ಬೆದರಿಸಲ್ಪಡದವನಾಗಿ, ಟಿಂಡಲ್ ತನ್ನ ಭಾಷಾಂತರದಲ್ಲಿ ತನ್ನ ಶೋಧಗಳನ್ನು ಸೇರಿಸಿದನು.
ಲ್ಯಾಟಿನ್ ಗ್ರಂಥಪಾಠಕ್ಕೆ ಬದಲಾಗಿ ಇರ್ಯಾಸ್ಮಸ್‌ನ ಮೂಲ ಗ್ರೀಕ್ ಗ್ರಂಥಪಾಠದಿಂದ ಟಿಂಡಲ್, ಅಗಾಪೆ ಎಂಬ ಗ್ರೀಕ್ ಪದದ ಅರ್ಥವನ್ನು ಅಧಿಕ ಪೂರ್ಣವಾಗಿ ವ್ಯಕ್ತಪಡಿಸಲು “ಚ್ಯಾರಿಟಿ” (ಧರ್ಮಶೀಲತೆ)ಯ ಬದಲಿಗೆ “ಲವ್” (ಪ್ರೀತಿ)ಅನ್ನು ಆರಿಸಿಕೊಂಡನು. “ಚರ್ಚ್”ನ ಬದಲಿಗೆ “ಕಾಂಗ್ರಿಗೇಷನ್” (ಸಭೆ), “ಹ್ಯಾವ್ ಪೆನನ್ಸ್” (ದಂಡಿತನಾಗು) ಎಂಬುದರ ಬದಲಾಗಿ “ರಿಪೆಂಟ್” (ಪಶ್ಚಾತ್ತಾಪಪಡು) ಮತ್ತು “ಪ್ರೀಸ್ಟ್ಸಿ” (ಪುರೋಹಿತರು)ನ ಬದಲಿಗೆ “ಎಲ್ಡರ್ಸ್” (ಹಿರಿಯರು) ಎಂಬ ಪದಗಳನ್ನೂ ಅವನು ಉಪಯೋಗಿಸಿದನು. (1 ಕೊರಿಂಥ 13:1-3; ಕೊಲೊಸ್ಸೆ 4:15, 16; ಲೂಕ 13:3, 5; 1 ತಿಮೊಥೆಯ 5:17, ಟಿಂಡಲ್) ಚರ್ಚಿನ ಅಧಿಕಾರಕ್ಕೆ ಮತ್ತು ಪುರೋಹಿತರಿಗೆ ಪಾಪನಿವೇದನೆ ಮಾಡುವಂತಹ ಸಾಂಪ್ರದಾಯಿಕ ಧಾರ್ಮಿಕ ಆಚಾರಗಳಿಗೆ ಈ ಹೊಂದಾಣಿಕೆಗಳು ಧ್ವಂಸಕಾರಕವಾಗಿದ್ದವು.
ಹಾಗೆಯೇ ಟಿಂಡಲ್, ಪರ್ಗೆಟರಿ (ಶುದ್ಧಿಲೋಕ) ಮತ್ತು ಮರಣಾನಂತರ ಪ್ರಜ್ಞೆಯಿಂದಿರುವಿಕೆಯನ್ನು ಬೈಬಲಿಗನುಸಾರವಾದುದಲ್ಲವೆಂದು ತಳ್ಳಿಹಾಕಿ, “ರೆಸರೆಕ್ಷನ್” (ಪುನರುತ್ಥಾನ) ಎಂಬ ಪದಕ್ಕೆ ಅಂಟಿಕೊಂಡನು. ಮೃತರ ಕುರಿತು ಅವನು ಮೋರ್‌ಗೆ ಬರೆದುದು: “ಅವರನ್ನು ಸ್ವರ್ಗ, ನರಕ ಮತ್ತು ಪರ್ಗೆಟರಿಯಲ್ಲಿ ಹಾಕುವ ಮೂಲಕ, [ನೀನು] ಕ್ರಿಸ್ತ ಮತ್ತು ಪೌಲರು ಪುನರುತ್ಥಾನವನ್ನು ರುಜುಪಡಿಸುವ ವಾದಗಳನ್ನು ನಾಶಪಡಿಸುತ್ತೀ.” ಈ ಸಂಬಂಧದಲ್ಲಿ, ಟಿಂಡಲ್ ಮತ್ತಾಯ 22:30-32 ಮತ್ತು 1 ಕೊರಿಂಥ 15:12-19ರ ವಚನಗಳನ್ನು ಸೂಚಿಸಿದನು. ಒಂದು ಭಾವೀ ಪುನರುತ್ಥಾನದ ತನಕ ಮೃತರು ಪ್ರಜ್ಞಾಹೀನರಾಗಿರುತ್ತಾರೆಂದು ಅವನು ಸರಿಯಾಗಿಯೇ ನಂಬುವವನಾದನು. (ಕೀರ್ತನೆ 146:4; ಪ್ರಸಂಗಿ 9:5; ಯೋಹಾನ 11:11, 24, 25) ಇದು ಮರಿಯಳಿಗೆ ಮತ್ತು “ಸಂತರಿಗೆ” ಮಾಡುವ ಪ್ರಾರ್ಥನೆಯ ಇಡೀ ಏರ್ಪಾಡನ್ನು ಉದ್ದೇಶರಹಿತವಾಗಿಸಿತು, ಏಕೆಂದರೆ ಅವರು ತಮ್ಮ ಪ್ರಜ್ಞಾಹೀನಾವಸ್ಥೆಯಲ್ಲಿ ಆಲಿಸಲೂ ಸಾಧ್ಯವಿರಲಿಲ್ಲ, ಮಧ್ಯಸ್ಥಿಕೆ ವಹಿಸಲೂ ಸಾಧ್ಯವಿರಲಿಲ್ಲ.
ಟಿಂಡಲ್ ಹೀಬ್ರು ಶಾಸ್ತ್ರಗಳನ್ನು ಭಾಷಾಂತರಿಸುತ್ತಾನೆ
ಟಿಂಡಲ್ 1530ರಲ್ಲಿ, ಪೆಂಟಟ್ಯೂಕ್‌ನ, ಅಂದರೆ ಹೀಬ್ರು ಶಾಸ್ತ್ರಗಳ ಮೊದಲನೆಯ ಐದು ಪುಸ್ತಕಗಳ ಒಂದು ಆವೃತ್ತಿಯನ್ನು ತಯಾರಿಸಿದನು. ಹೀಗೆ, ಹೀಬ್ರುವಿನಿಂದ ನೇರವಾಗಿ ಇಂಗ್ಲಿಷ್‌ಗೆ ಭಾಷಾಂತರಿಸಿದ ಪ್ರಥಮ ವ್ಯಕ್ತಿ ಅವನಾದನು. ಯೆಹೋವ ಎಂಬ ಹೆಸರನ್ನು ಉಪಯೋಗಿಸಿದ ಪ್ರಥಮ ಇಂಗ್ಲಿಷ್ ಭಾಷಾಂತರಕಾರನೂ ಟಿಂಡಲ್ ಆಗಿದ್ದನು. ಲಂಡನ್ ವಿದ್ವಾಂಸ ಡೇವಿಡ್ ಡ್ಯಾನಿಯೆಲ್ ಬರೆಯುವುದು: “ದೇವರ ಹೆಸರು ಹೊಸದಾಗಿ ಪ್ರಕಟಿಸಲ್ಪಟ್ಟಿದೆಯೆಂಬುದು ಟಿಂಡಲ್‌ನ ಓದುಗರಿಗೆ ಬಲವತ್ತಾಗಿ ಮನದಟ್ಟಾಗಿದ್ದಿರಬೇಕು.”
ಸ್ಪಷ್ಟತೆಯನ್ನು ಸಾಧಿಸುವ ತನ್ನ ಪ್ರಯತ್ನದಲ್ಲಿ, ಒಂದು ಹೀಬ್ರು ಪದವನ್ನು ಭಾಷಾಂತರಿಸಲು ಟಿಂಡಲ್ ವಿವಿಧ ಇಂಗ್ಲಿಷ್ ಪದಗಳನ್ನು ಉಪಯೋಗಿಸಿದನು. ಆದರೂ, ಅವನು ಹೀಬ್ರು ವಾಕ್ಯರಚನೆಯನ್ನು ಒತ್ತಾಗಿ ಅನುಸರಿಸಿದನು. ಇದರ ಪರಿಣಾಮವಾಗಿ ಹೀಬ್ರು ಭಾಷೆಯ ಶಕ್ತಿಯುತವಾದ ಶೈಲಿಯು ಉಳಿಸಲ್ಪಟ್ಟಿದೆ. ಅವನು ತಾನೇ ಹೇಳಿದ್ದು: “ಹೀಬ್ರು ಭಾಷೆಯ ಗುಣವು ಲ್ಯಾಟಿನ್‌ಗಿಂತ ಸಾವಿರ ಪಾಲು ಹೆಚ್ಚಾಗಿ ಇಂಗ್ಲಿಷ್‌ನೊಂದಿಗೆ ಒಗ್ಗುತ್ತದೆ. ಮಾತಾಡುವ ರೀತಿಯು ಒಂದೇ ಆಗಿದೆ; ಆದಕಾರಣ ಅಸಂಖ್ಯಾತ ಸ್ಥಳಗಳಲ್ಲಿ ನೀವು ಇಂಗ್ಲಿಷ್‌ಗೆ ಕೇವಲ ಪದಕ್ಕೆ ಪದವನ್ನು ಭಾಷಾಂತರಿಸುವುದಷ್ಟೇ ಆವಶ್ಯಕ.”
ಮೂಲಭೂತವಾಗಿ ಅಕ್ಷರಾರ್ಥಕವಾದ ಈ ಸಮೀಪಿಸುವಿಕೆಯು, ಟಿಂಡಲ್‌ನ ಭಾಷಾಂತರಕ್ಕೆ ಹೀಬ್ರು ಅಭಿವ್ಯಕ್ತಿಗಳ ರುಚಿಯನ್ನು ಕೊಟ್ಟಿತು. ಪ್ರಥಮ ವಾಚನದಲ್ಲಿ ಅವುಗಳಲ್ಲಿ ಕೆಲವು ತೀರ ವಿಚಿತ್ರವಾಗಿ ತೋರಿಬಂದಿರಬೇಕು. ಆದರೂ, ಕೊನೆಗೆ ಬೈಬಲು ಎಷ್ಟು ಸುಪರಿಚಿತವಾಯಿತೆಂದರೆ, ಈ ಅಭಿವ್ಯಕ್ತಿಗಳಲ್ಲಿ ಅನೇಕ ಅಭಿವ್ಯಕ್ತಿಗಳು ಈಗ ಇಂಗ್ಲಿಷ್ ಭಾಷೆಯ ಭಾಗವಾಗಿವೆ. ಇದಕ್ಕೆ ಉದಾಹರಣೆಗಳಲ್ಲಿ, “ಎ ಮ್ಯಾನ್ ಆಫ್ಟರ್ ಹಿಸ್ ಓನ್ ಹಾರ್ಟ್,” (1 ಸಮುವೇಲ 13:14ರಲ್ಲಿರುವಂತೆ, “ತನಗೆ ಒಪ್ಪುವ ಬೇರೊಬ್ಬ”) “ಪಾಸೋವರ್” (ಪಸ್ಕ), ಮತ್ತು “ಸ್ಕೇಪ್‌ಗೋಟ್” (“ಪಾಪಪಶು”) ಸೇರಿವೆ. ಇದಕ್ಕಿಂತ ಹೆಚ್ಚಾಗಿ, ಇಂಗ್ಲಿಷ್ ಬೈಬಲಿನ ಓದುಗರಿಗೆ ಹೀಗೆ ಹೀಬ್ರು ವಿಚಾರಶಕ್ತಿಯ ಪರಿಚಯವಾದುದರಿಂದ, ಇದು ಅವರಿಗೆ ಪ್ರೇರಿತ ಶಾಸ್ತ್ರಗಳ ಹೆಚ್ಚು ಉತ್ತಮವಾದ ಒಳನೋಟವನ್ನು ಕೊಟ್ಟಿತು.
ಬೈಬಲ್ ಮತ್ತು ಟಿಂಡಲ್ ನಿಷೇಧಾಜ್ಞೆಯ ಕೆಳಗೆ
ಒಬ್ಬನ ಸ್ವಂತ ಭಾಷೆಯಲ್ಲಿ ದೇವರ ವಾಕ್ಯದ ವಾಚನ ಸಾಧ್ಯತೆಯು ರೋಮಾಂಚಕವಾಗಿತ್ತು! ಬಟ್ಟೆಯ ಅಥವಾ ಇತರ ಸರಕುಗಳ ಮೂಟೆಗಳಂತೆ ತೋರುತ್ತ ದೇಶದೊಳಕ್ಕೆ ಕಳ್ಳಸಾಗಾಣಿಕೆಯಿಂದ ತರಸಾಧ್ಯವಿದ್ದ ಎಲ್ಲ ಬೈಬಲುಗಳನ್ನು ಖರೀದಿಸುವ ಮೂಲಕ ಇಂಗ್ಲಿಷ್ ಜನತೆ ಪ್ರತಿವರ್ತನೆ ತೋರಿಸಿತು. ಏತನ್ಮಧ್ಯೆ, ಬೈಬಲು ಅಂತಿಮ ಪ್ರಮಾಣಗ್ರಂಥವಾಗಿ ಎಣಿಸಲ್ಪಡುವಲ್ಲಿ ತಮ್ಮ ಸ್ಥಾನವು ನಿಶ್ಚಯವಾಗಿ ನಷ್ಟಹೊಂದುವುದೆಂದು ಪುರೋಹಿತ ವರ್ಗವು ಭಾವಿಸಿತು. ಆದಕಾರಣ ಈ ಪರಿಸ್ಥಿತಿಯು ಭಾಷಾಂತರಕಾರನಿಗೂ ಅವನ ಬೆಂಬಲಿಗರಿಗೂ ಇನ್ನೂ ಹೆಚ್ಚು ಅಳಿವು ಉಳಿವಿನ ಸಂಗತಿಯಾಯಿತು.
ಚರ್ಚ್ ಮತ್ತು ಸರಕಾರದಿಂದ ಸತತವಾಗಿ ಬೆನ್ನಟ್ಟಲ್ಪಟ್ಟವನಾಗಿ ಟಿಂಡಲ್, ಬೆಲ್ಜಿಯಮ್‌ನ ಆ್ಯಂಟ್ವರ್ಪ್‌ನಲ್ಲಿ ಅಡಗಿಕೊಂಡು ಕೆಲಸವನ್ನು ಮುಂದುವರಿಸಿದನು. ಆದರೂ, ವಾರಕ್ಕೆ ಎರಡು ದಿನಗಳನ್ನು, ತಾನು ಕಾಲಕ್ಷೇಪವೆಂದು ಯಾವುದನ್ನು ಕರೆದನೊ ಅದಕ್ಕೆ—ಇತರ ಇಂಗ್ಲಿಷ್ ನಿರಾಶ್ರಿತರ, ಬಡವರ ಮತ್ತು ರೋಗಿಗಳ ಶುಶ್ರೂಷೆಗೆ—ಮೀಸಲಾಗಿಟ್ಟನು. ಅವನು ತನ್ನಲ್ಲಿದ್ದ ಹೆಚ್ಚಿನ ಹಣವನ್ನು ಈ ರೀತಿ ವ್ಯಯಿಸಿದನು. ಹೀಬ್ರು ಶಾಸ್ತ್ರದ ಕೊನೆಯ ಅರ್ಧ ಭಾಗವನ್ನು ಅವನು ಭಾಷಾಂತರಿಸುವುದಕ್ಕೆ ಮೊದಲು, ಸ್ನೇಹಿತನೆಂದು ನಟಿಸಿದ ಆಂಗ್ಲನೊಬ್ಬನು ಹಣಕ್ಕಾಗಿ ಅವನಿಗೆ ದ್ರೋಹಮಾಡಿದನು. ಬೆಲ್ಜಿಯಮ್‌ನ ವಿಲ್‌ವೂರ್ಡ್‌ನಲ್ಲಿ, 1536ರಲ್ಲಿ ವಧಿಸಲ್ಪಟ್ಟ ಅವನ ಕೊನೆಯ ಉತ್ಸಾಹಪೂರಿತ ಮಾತುಗಳು, “ಕರ್ತನೇ! ಇಂಗ್ಲೆಂಡಿನ ಅರಸನ ಕಣ್ಣುಗಳನ್ನು ತೆರೆ” ಎಂದಾಗಿದ್ದವು.
1538ರೊಳಗೆ, ಅರಸ VIIIನೆಯ ಹೆನ್ರಿ, ತನ್ನ ಸ್ವಂತ ಕಾರಣಗಳಿಗಾಗಿ ಇಂಗ್ಲೆಂಡಿನ ಪ್ರತಿಯೊಂದು ಚರ್ಚಿನೊಳಗೆ ಬೈಬಲುಗಳನ್ನಿಡಬೇಕೆಂದು ಆಜ್ಞಾಪಿಸಿದ್ದನು. ಟಿಂಡಲ್‌ನಿಗೆ ಕೀರ್ತಿಯನ್ನು ಸಲ್ಲಿಸದಿದ್ದರೂ, ಆರಿಸಲ್ಪಟ್ಟ ಭಾಷಾಂತರವು ಮೂಲತಃ ಅವನದ್ದೇ ಆಗಿತ್ತು. ಈ ರೀತಿಯಲ್ಲಿ ಟಿಂಡಲ್‌ನ ಕೃತಿ ಎಷ್ಟೊಂದು ಪ್ರಸಿದ್ಧವಾಗಿ ಪ್ರಿಯವಾಯಿತೆಂದರೆ, ಅದು ಇಂಗ್ಲಿಷ್‌ನಲ್ಲಿ “ತದನಂತರದ ಹೆಚ್ಚಿನ ಭಾಷಾಂತರಗಳ ಮೂಲ ಸ್ವರೂಪವನ್ನು ನಿರ್ಧರಿಸಿತು.” (ಬೈಬಲಿನ ಕೇಂಬ್ರಿಜ್ ಇತಿಹಾಸ, ಇಂಗ್ಲಿಷ್) ಟಿಂಡಲ್‌ನ ಭಾಷಾಂತರದಲ್ಲಿ 90 ಪ್ರತಿಶತದಷ್ಟು 1611ರ ಕಿಂಗ್ ಜೇಮ್ಸ್ ವರ್ಷನ್‌ನೊಳಗೆ ನಕಲುಮಾಡಲ್ಪಟ್ಟಿತು.
ಬೈಬಲಿಗೆ ಮುಕ್ತ ಪ್ರವೇಶವು ಇಂಗ್ಲೆಂಡಿಗೆ ಮಹಾ ಬದಲಾವಣೆಯನ್ನು ಅರ್ಥೈಸಿತು. ಚರ್ಚುಗಳಲ್ಲಿ ಇಡಲ್ಪಟ್ಟಿದ್ದ ಬೈಬಲಿನ ಸಂಬಂಧದಲ್ಲಿ ನಡೆದ ಚರ್ಚೆಗಳು ಎಷ್ಟು ಆವೇಶದಿಂದ ತುಂಬಿದವುಗಳಾಗಿದ್ದವೆಂದರೆ, ಅವು ಕೆಲವು ಸಲ ಚರ್ಚ್ ಆರಾಧನೆಗಳಿಗೇ ಅಡ್ಡಬರುತ್ತಿದ್ದವು! “ತಾವು ದೇವರ ವಾಕ್ಯಕ್ಕೆ ನೇರವಾಗಿ ಬರಲಾಗುವಂತೆ ವೃದ್ಧರು ಓದಲು ಕಲಿತರು, ಮತ್ತು ಮಕ್ಕಳು ಕಿವಿಗೊಡಲಿಕ್ಕಾಗಿ ತಮ್ಮ ವೃದ್ಧರೊಂದಿಗೆ ಜೊತೆಗೂಡಿದರು.” (ಇಂಗ್ಲಿಷ್ ಬೈಬಲಿನ ಸಂಕ್ಷಿಪ್ತ ಇತಿಹಾಸ, ಇಂಗ್ಲಿಷ್) ಈ ಸಮಯಾವಧಿಯು, ಯೂರೋಪಿನ ಇತರ ದೇಶಗಳಲ್ಲಿ ಮತ್ತು ಭಾಷೆಗಳಲ್ಲಿ ಬೈಬಲ್ ವಿತರಣೆಯ ನಾಟಕೀಯ ಅಭಿವೃದ್ಧಿಯನ್ನು ಕಂಡಿತು. ಆದರೆ ಇಂಗ್ಲೆಂಡಿನ ಬೈಬಲ್ ಚಳವಳಿಯು ಲೋಕವ್ಯಾಪಕವಾದ ಪ್ರಭಾವವನ್ನು ಬೀರಲಿಕ್ಕಿತ್ತು. ಇದು ಹೇಗಾಯಿತು? ಮತ್ತು ಹೆಚ್ಚಿನ ಶೋಧ ಮತ್ತು ಸಂಶೋಧನೆಯು ನಾವಿಂದು ಉಪಯೋಗಿಸುವ ಬೈಬಲುಗಳನ್ನು ಹೇಗೆ ಪ್ರಭಾವಿಸಿದೆ? ನಾವು ಈ ಲೇಖನಮಾಲೆಯ ಮುಂದಿನ ಲೇಖನದಲ್ಲಿ ನಮ್ಮ ವೃತ್ತಾಂತವನ್ನು ಮುಗಿಸುವೆವು.
[ಪುಟ 26 ರಲ್ಲಿರುವ ಚಿತ್ರ]
ಟಿಂಡಲ್‌ನ 1526ರ “ಹೊಸ ಒಡಂಬಡಿಕೆ”—ಜ್ವಾಲೆಗಳಿಂದ ಪಾರಾಗಿದ್ದು, ಪ್ರಸಿದ್ಧವಾದ ಎರಡೇ ಸಂಪೂರ್ಣವಾದ ಪ್ರತಿಗಳಲ್ಲಿ ಇದು ಒಂದಾಗಿದೆ
[ಕೃಪೆ]
© The British Library Board
[ಪುಟ 26,27ರಲ್ಲಿರುವಚಿತ್ರ]
(For fully formatted text, see publication)
ಬೈಬಲಿನ ವಹನದಲ್ಲಿ ಮುಖ್ಯ ತಾರೀಖುಗಳು
ಸಾಮಾನ್ಯ ಶಕ
ವಿಕ್ಲಿಫ್ ಬೈಬಲಿನ ಆರಂಭ (1384ರ ಮೊದಲು)
1400
ಹಸ್ ವಧಿಸಲ್ಪಟ್ಟದ್ದು 1415
ಗೂಟನ್‌ಬರ್ಗ್—ಮುದ್ರಿತವಾದ ಪ್ರಥಮ ಬೈಬಲ್ ಸು. 1455
1500
ಆದಿ ಮುದ್ರಿತ ದೇಶಭಾಷೆಗಳ ಬೈಬಲುಗಳು
ಇರ್ಯಾಸ್ಮಸ್‌ನ ಗ್ರೀಕ್ ಗ್ರಂಥಪಾಠ 1516
ಟಿಂಡಲ್‌ನ 1526ರ “ಹೊಸ ಒಡಂಬಡಿಕೆ”
ಟಿಂಡಲ್ ವಧಿಸಲ್ಪಟ್ಟದ್ದು 1536
VIIIನೆಯ ಹೆನ್ರಿ 1538ರಲ್ಲಿ ಚರ್ಚುಗಳಲ್ಲಿ ಬೈಬಲ್‌ಗಳನ್ನಿಡುವಂತೆ ಆಜ್ಞಾಪಿಸುತ್ತಾನೆ
1600
ಕಿಂಗ್ ಜೇಮ್ಸ್ ವರ್ಷನ್ 1611
[ಚಿತ್ರಗಳು]
ವಿಕ್ಲಿಫ್
ಹಸ್
ಟಿಂಡಲ್
VIIIನೆಯ ಹೆನ್ರಿ