ಯೆಹೋವನ ಸೇವೆಯಲ್ಲಿನ ದೀರ್ಘಾಯುಷ್ಯಕ್ಕಾಗಿ ಕೃತಜ್ಞಳು
ಓಟೀಲ್ಯ ಮಿಡ್ಲನ್ ಅವರಿಂದ ಹೇಳಲ್ಪಟ್ಟಂತೆ
ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ, ಪಶ್ಚಿಮ ನಾರ್ವೆಯಲ್ಲಿನ ಕಾಪರ್ವೀಕ್ ಬಂದರಿನಲ್ಲಿ, ಹಾಯಿ ಹಡಗುಗಳು ಒಂದರ ಪಕ್ಕದಲ್ಲಿ ಒಂದು ಸಾಲಾಗಿ ನಿಲ್ಲಿಸಲ್ಪಟ್ಟಿದ್ದವು. ಆ ದಿನಗಳಲ್ಲಿ ಪುರುಷರು ಹಾಗೂ ಕುದುರೆಗಳು ಬೀದಿಗಳಲ್ಲಿ ಬಂಡಿಗಳನ್ನು ಎಳೆದವು. ಬೆಳಕಿಗಾಗಿ ಜನರು ಫ್ಯಾರಫಿನ್ ದೀಪಗಳನ್ನು ಉಪಯೋಗಿಸಿದರು, ಮತ್ತು ಬಿಳಿ ರಂಗು ಬಳಿಯಲ್ಪಟ್ಟಿದ್ದ ಮರದ ಮನೆಗಳು, ಕಟ್ಟಿಗೆ ಹಾಗೂ ಕಲ್ಲಿದ್ದಲ ಕಿಟ್ಟದಿಂದ ಕಾಯಿಸಲ್ಪಟ್ಟವು. ನಾನು 1898ರ ಜೂನ್ ತಿಂಗಳಿನಲ್ಲಿ, ಐವರು ಮಕ್ಕಳಲ್ಲಿ ಎರಡನೆಯವಳಾಗಿ ಅಲ್ಲಿ ಜನಿಸಿದೆ.
ತಂ ದೆಯವರು 1905ರಲ್ಲಿ ನಿರುದ್ಯೋಗಿಯಾಗಿದ್ದರು. ಆದುದರಿಂದ ಅವರು ಅಮೆರಿಕಕ್ಕೆ ಹೋದರು. ಮೂರು ವರ್ಷಗಳ ಬಳಿಕ, ಮಕ್ಕಳಿಗಾಗಿ ಪುಳಕಗೊಳಿಸುವ ಉಡುಗೊರೆಗಳೂ ತಾಯಿಗಾಗಿ ರೇಷ್ಮೆಯ ಬಟ್ಟೆಗಳು ಹಾಗೂ ಇನ್ನಿತರ ವಸ್ತುಗಳೂ ತುಂಬಿದ್ದ ಒಂದು ಸೂಟ್ಕೇಸಿನೊಂದಿಗೆ ಅವರು ಹಿಂದಿರುಗಿದರು. ಆದರೆ ಅವರ ಅತ್ಯಮೂಲ್ಯ ಸ್ವತ್ತುಗಳು, ಚಾರ್ಲ್ಸ್ ಟೇಸ್ ರಸಲ್ರಿಂದ ಬರೆಯಲ್ಪಟ್ಟ ಸ್ಟಡೀಸ್ ಇನ್ ದ ಸ್ಕ್ರಿಪ್ಚರ್ಸ್ ಎಂಬ ಶಿರೋನಾಮವುಳ್ಳ ಸಂಪುಟಗಳಾಗಿದ್ದವು.
ಈ ಪುಸ್ತಕಗಳಿಂದ ತಾವು ಕಲಿತ ವಿಷಯಗಳನ್ನು ತಂದೆಯವರು, ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ಹೇಳಲಾರಂಭಿಸಿದರು. ಸ್ಥಳಿಕ ಆರಾಧನಾ ಮಂದಿರದ ಕೂಟಗಳಲ್ಲಿ, ಉರಿಯುತ್ತಿರುವ ನರಕವು ಇಲ್ಲವೆಂಬುದನ್ನು ತೋರಿಸಲಿಕ್ಕಾಗಿ ಅವರು ಬೈಬಲನ್ನು ಉಪಯೋಗಿಸಿದರು. (ಪ್ರಸಂಗಿ 9:5, 10) ತಂದೆಯವರು ಅಮೆರಿಕದಿಂದ ಹಿಂದಿರುಗಿದ ಮರು ವರ್ಷದಲ್ಲಿ, 1909ರಲ್ಲಿ, ಸಹೋದರ ರಸಲ್ ಅವರು ನಾರ್ವೆಗೆ ಭೇಟಿ ನೀಡಿದರು ಮತ್ತು ಬರ್ಗನ್ನಲ್ಲಿ ಹಾಗೂ ಈಗ ಆಸ್ಲೋ ಎಂದು ಕರೆಯಲ್ಪಡುವ ಕ್ರಿಶ್ಟಿಆ್ಯನಿಯದಲ್ಲಿ ಭಾಷಣಗಳನ್ನು ಕೊಟ್ಟರು. ಅವರ ಭಾಷಣವನ್ನು ಕೇಳಲಿಕ್ಕಾಗಿ ತಂದೆಯವರು ಬರ್ಗನ್ಗೆ ಹೋದರು.
ಸುಳ್ಳು ಬೋಧನೆಗಳನ್ನು ಪ್ರವರ್ಧಿಸುತ್ತಿರುವುದಾಗಿ ಅಧಿಕಾಂಶ ಜನರು ತಂದೆಯವರನ್ನು ನಿಂದಿಸಿದರು. ನಾನು ಅವರಿಗಾಗಿ ಮರುಗಿದೆ, ಮತ್ತು ನೆರೆಹೊರೆಯವರಿಗೆ ಬೈಬಲ್ ಟ್ರ್ಯಾಕ್ಟ್ಗಳನ್ನು ವಿತರಿಸಲು ಅವರಿಗೆ ಸಹಾಯ ಮಾಡಿದೆ. 1912ರಲ್ಲಿ, ವೈದಿಕನೊಬ್ಬನ ಮಗಳಿಗೆ ನಾನು ನರಕದ ಕುರಿತಾದ ಒಂದು ಟ್ರ್ಯಾಕ್ಟನ್ನು ನೀಡಿದೆ. ಅವಳು ನನ್ನನ್ನೂ ತಂದೆಯವರನ್ನೂ ಕೆಟ್ಟ ಶಬ್ದಗಳಿಂದ ಬೈದಳು. ವೈದಿಕನೊಬ್ಬನ ಮಗಳು ಅಂತಹ ಹೊಲಸು ಭಾಷೆಯನ್ನು ಉಪಯೋಗಿಸಸಾಧ್ಯವಿದೆಯೋ ಎಂದು ನಾನು ಆಘಾತಗೊಂಡೆ!
ಬೇರೆ ಬೈಬಲ್ ವಿದ್ಯಾರ್ಥಿಗಳು—ಆಗ ಯೆಹೋವನ ಸಾಕ್ಷಿಗಳನ್ನು ಹೀಗೆ ಕರೆಯಲಾಗುತ್ತಿತ್ತು—ಆಗಿಂದಾಗ್ಗೆ ಕಾಪರ್ವೀಕ್ನಲ್ಲಿ ನಮ್ಮನ್ನು ಭೇಟಿಮಾಡಿದರು. ಅವರಲ್ಲಿ ಒಬ್ಬ ಸಮರ್ಥ ಭಾಷಣಕರ್ತರಾದ ಥಿಯೊಡೋರ್ ಸೀಮನ್ಸನ್ ಒಬ್ಬರಾಗಿದ್ದರು. ಅವರು ನಮ್ಮ ಮನೆಯಲ್ಲಿ ಕೊಟ್ಟಂತಹ ಭಾಷಣಗಳಿಗೆ ನಾನು ಜನರನ್ನು ಆಮಂತ್ರಿಸುತ್ತಿದ್ದೆ. ತಮ್ಮ ಭಾಷಣದ ಮುಂಚೆ ಅವರು ಸಿತಾರ್ ವಾದ್ಯವನ್ನು ನುಡಿಸಿ, ಹಾಡಿದರು, ಮತ್ತು ತಮ್ಮ ಭಾಷಣದ ಬಳಿಕ ಅವರು ಮುಕ್ತಾಯದ ಗೀತೆಯನ್ನು ಹಾಡಿದರು. ಅವರ ವಿಷಯದಲ್ಲಿ ನಮಗೆ ಗಾಢವಾದ ಗೌರವಭಾವವಿತ್ತು.
ಒಬ್ಬ ಕಾಲ್ಪೋರ್ಟರ್, ಅಥವಾ ಪೂರ್ಣ ಸಮಯದ ಶುಶ್ರೂಷಕಿಯಾದ ಆನಾ ಆಂಡರ್ಸನ್, ನಮ್ಮ ಮನೆಗೆ ಭೇಟಿ ನೀಡಿದ ಇನ್ನೊಬ್ಬ ಸಂದರ್ಶಕರಾಗಿದ್ದರು. ಜನರಿಗೆ ಬೈಬಲ್ ಸಾಹಿತ್ಯವನ್ನು ನೀಡುತ್ತಾ, ಅವರು ನಾರ್ವೆಯಾದ್ಯಂತ ಪಟ್ಟಣದಿಂದ ಪಟ್ಟಣಕ್ಕೆ, ಹೆಚ್ಚಾಗಿ ಸೈಕಲಿನಲ್ಲಿ ಪ್ರಯಾಣಿಸಿದರು. ಒಂದು ಕಾಲದಲ್ಲಿ ಅವರು ಮುಕ್ತಿ ಸೈನ್ಯದ ಒಬ್ಬ ಅಧಿಕಾರಿಯಾಗಿದ್ದು, ಕಾಪರ್ವೀಕ್ನಲ್ಲಿನ ಮುಕ್ತಿ ಸೈನ್ಯದ ಕೆಲವು ಅಧಿಕಾರಿಗಳ ಪರಿಚಯ ಅವರಿಗಿತ್ತು. ತಮ್ಮ ಕೂಟದ ಸ್ಥಳದಲ್ಲಿ ಒಂದು ಬೈಬಲ್ ಭಾಷಣವನ್ನು ಕೊಡುವಂತೆ ಆ ಅಧಿಕಾರಿಗಳು ಇವರಿಗೆ ಅನುಮತಿ ನೀಡಿದರು, ಮತ್ತು ಅವರ ಭಾಷಣಕ್ಕೆ ಬಂದು, ಕಿವಿಗೊಡುವಂತೆ ನಾನು ಜನರನ್ನು ಆಮಂತ್ರಿಸಿದೆ.
ಕಾಪರ್ವೀಕ್ನಲ್ಲಿ ನಮ್ಮನ್ನು ಭೇಟಿಮಾಡಿದ ಇನ್ನೊಬ್ಬ ಕಾಲ್ಪೋರ್ಟರ್, ಕಾರ್ಲ್ ಗುನ್ಬರ್ ಆಗಿದ್ದರು. ಸಭ್ಯ, ಶಾಂತ ಸ್ವಭಾವದ, ಆದರೆ ವಿನೋದಶೀಲರಾಗಿದ್ದ ಇವರು, ನಿಯತಕಾಲಿಕವಾಗಿ ಆಸ್ಲೋನಲ್ಲಿನ ಬ್ರಾಂಚ್ ಆಫೀಸಿನಲ್ಲಿ ಭಾಷಾಂತರಕಾರರಾಗಿ ಸಹ ಕೆಲಸಮಾಡಿದರು. ಅನೇಕ ವರ್ಷಗಳ ತರುವಾಯ, ನಾವು ಅಲ್ಲಿ ಒಟ್ಟಿಗೆ ಕೆಲಸಮಾಡಿದೆವು.
ಧಾರ್ಮಿಕ ವೀಕ್ಷಣೆಗಳಿಂದ ಪ್ರಭಾವಿಸಲ್ಪಟ್ಟದ್ದು
ಆ ಸಮಯದಲ್ಲಿ ಹೆಚ್ಚಿನ ಜನರಿಗೆ ದೇವರಲ್ಲಿ ಹಾಗೂ ಬೈಬಲಿನಲ್ಲಿ ಮಾತ್ರವಲ್ಲ, ನರಕಾಗ್ನಿ ಹಾಗೂ ತ್ರಯೈಕ್ಯದಂತಹ ಅತಿಕ್ರಮವಾಗಿ ಪ್ರವೇಶಿಸಿದ ನಂಬಿಕೆಗಳಲ್ಲೂ ಬಲವಾದ ನಂಬಿಕೆಯಿತ್ತು. ಆದುದರಿಂದ, ಈ ಸಿದ್ಧಾಂತಗಳು ಬೈಬಲಿನೊಂದಿಗೆ ಸಹಮತದಲ್ಲಿಲ್ಲ ಎಂಬುದನ್ನು ಬೈಬಲ್ ವಿದ್ಯಾರ್ಥಿಗಳು ಕಲಿಸಿದಾಗ, ಇದು ಬಹಳಷ್ಟು ಕೋಲಾಹಲವನ್ನು ಉಂಟುಮಾಡಿತು. ತಂದೆಯವರು ಒಬ್ಬ ಪಾಷಂಡಿಯಾಗಿದ್ದರೆಂಬ ನನ್ನ ನೆರೆಯವರ ಬಲವಾದ ಆರೋಪಗಳಿಂದ ನಾನು ಪ್ರಭಾವಿಸಲ್ಪಟ್ಟಿದ್ದೆ. ಒಂದು ಸಲ ನಾನು ಅವರಿಗೆ ಹೀಗೂ ಹೇಳಿದೆ: “ನೀವು ಕಲಿಸುವಂತಹ ವಿಷಯವು ಸತ್ಯವಲ್ಲ. ಅದು ಪಾಷಂಡವಾದವಾಗಿದೆ!”
“ಇಲ್ಲಿ ಬಾ ಓಟೀಲ್ಯ, ಬೈಬಲು ಏನು ಹೇಳುತ್ತದೆ ನೋಡು” ಎಂದು ಅವರು ನನ್ನನ್ನು ಉತ್ತೇಜಿಸಿದರು. ತದನಂತರ ಅವರು ಶಾಸ್ತ್ರವಚನಗಳನ್ನು ನನಗಾಗಿ ಓದಿದರು. ಫಲಿತಾಂಶವಾಗಿ, ಅವರಲ್ಲಿ ಹಾಗೂ ಅವರು ಏನನ್ನು ಕಲಿಸಿದರೋ ಆ ವಿಷಯದಲ್ಲಿನ ನನ್ನ ವಿಶ್ವಾಸವು ಬೆಳೆಯಿತು. ಸ್ಟಡೀಸ್ ಇನ್ ದ ಸ್ಕ್ರಿಪ್ಚರ್ಸ್ ಅನ್ನು ಓದುವಂತೆ ಅವರು ನನ್ನನ್ನು ಪ್ರೋತ್ಸಾಹಿಸಿದರು. ಆದುದರಿಂದ, 1914ರ ಬೇಸಗೆ ಕಾಲದಲ್ಲಿ, ಪಟ್ಟಣವು ಎಲ್ಲಿಂದ ಕಾಣುತ್ತಿತ್ತೋ ಆ ಸಣ್ಣ ಗುಡ್ಡದ ಮೇಲೆ ನಾನು ಅನೇಕವೇಳೆ ಓದುತ್ತಾ ಕುಳಿತುಕೊಂಡೆ.
1914ರ ಆಗಸ್ಟ್ ತಿಂಗಳಿನಲ್ಲಿ, Iನೆಯ ಲೋಕ ಯುದ್ಧದ ತಲೆದೋರುವಿಕೆಯ ಕುರಿತಾಗಿ ಓದುತ್ತಾ, ಸ್ಥಳಿಕ ವಾರ್ತಾಪತ್ರಿಕೆಯ ಕಟ್ಟಡದ ಹೊರಗೆ ಜನರು ಗುಂಪುಗೂಡಿದರು. ತಂದೆಯವರು ಬಂದು, ಸಂಭವಿಸುತ್ತಿರುವುದನ್ನು ನೋಡಿದರು. “ಎಲ್ಲ ದೇವರ ಕೃಪೆ!” ಎಂದು ಅವರು ಉದ್ಗರಿಸಿದರು. ಅವರು ಯಾವುದರ ಕುರಿತಾಗಿ ಸಾರುತ್ತಿದ್ದರೋ ಆ ಬೈಬಲ್ ಪ್ರವಾದನೆಗಳ ನೆರವೇರಿಕೆಯನ್ನು, ಯುದ್ಧದ ತಲೆದೋರುವಿಕೆಯಲ್ಲಿ ಅವರು ಗ್ರಹಿಸಿದರು. (ಮತ್ತಾಯ 24:7) ಆಗ ಇದ್ದ ಅನೇಕ ಬೈಬಲ್ ವಿದ್ಯಾರ್ಥಿಗಳು, ತಾವು ಬೇಗನೆ ಸ್ವರ್ಗಕ್ಕೆ ಕರೆದೊಯ್ಯಲ್ಪಡುವೆವೆಂದು ನಂಬಿದರು. ಇದು ಸಂಭವಿಸದೆ ಹೋದಾಗ, ಕೆಲವರು ನಿರಾಶೆಗೊಂಡರು.
ಬೈಬಲ್ ಸತ್ಯತೆಗಾಗಿ ನನ್ನ ನಿಲುವು
1915ರಲ್ಲಿ, 17ರ ಪ್ರಾಯದಲ್ಲಿ, ನಾನು ಮಾಧ್ಯಮಿಕ ಶಾಲೆಯನ್ನು ಮುಗಿಸಿ, ಒಂದು ಆಫೀಸಿನಲ್ಲಿ ಐಹಿಕವಾಗಿ ಕೆಲಸಮಾಡಲಾರಂಭಿಸಿದೆ. ಆಗ ನಾನು ದ ವಾಚ್ ಟವರ್ ಪತ್ರಿಕೆಯನ್ನು ಕ್ರಮವಾಗಿ ಓದಲಾರಂಭಿಸಿದೆ. ಆದರೆ 1918ರ ವರೆಗೆ, ಕಾಪರ್ವೀಕ್ನಲ್ಲಿ ಕ್ರಮವಾದ ಕೂಟಗಳು ನಡೆಯುತ್ತಿರಲಿಲ್ಲ. ಮೊಟ್ಟಮೊದಲು, ಹಾಜರಾದವರಲ್ಲಿ ನಾವು ಐವರು ಮಾತ್ರವೇ ಇದ್ದೆವು. ನಾವು ಸ್ಟಡೀಸ್ ಇನ್ ದ ಸ್ಕ್ರಿಪ್ಚರ್ಸ್ನಂತಹ ವಾಚ್ ಟವರ್ ಸೊಸೈಟಿಯ ಪ್ರಕಾಶನಗಳನ್ನು ಓದಿ, ಪ್ರಶ್ನೋತ್ತರಗಳ ಮೂಲಕ ಆ ವಿಷಯವನ್ನು ಚರ್ಚಿಸಿದೆವು. ತಾಯಿಯವರು ಇತರರ ಬಳಿ ಬೈಬಲ್ ವಿದ್ಯಾರ್ಥಿಗಳ ಕುರಿತು ಬಹಳ ಅಭಿಮಾನದಿಂದ ಮಾತಾಡಿದರೂ, ಅವರೆಂದೂ ನಮ್ಮಲ್ಲಿ ಒಬ್ಬರಾಗಿ ಪರಿಣಮಿಸಲಿಲ್ಲ.
1918ರಿಂದ ಆರಂಭಿಸಿ, ನಾನು ಕೆಲಸಮಾಡುತ್ತಿದ್ದ ಆಫೀಸಿನಲ್ಲಿ, ಆಂಟಾನ್ ಸಾಲ್ಟ್ನಸ್ನೊಂದಿಗೆ ಚಿರಪರಿಚಿತಳಾದೆ; ಒಬ್ಬ ಬೈಬಲ್ ವಿದ್ಯಾರ್ಥಿಯಾಗುವಂತೆ ನಾನು ಅವನಿಗೆ ಸಹಾಯ ಮಾಡಲು ಶಕ್ತಳಾದೆ. ಈ ಸಮಯದಲ್ಲಿಯೇ ನಾನು ಒಬ್ಬ ಕ್ರಮದ ಪ್ರಚಾರಕಳಾದೆ ಮತ್ತು 1921ರಲ್ಲಿ ಬರ್ಗನ್ನಲ್ಲಿ ನಡೆದ ಸಮ್ಮೇಳನವೊಂದರಲ್ಲಿ ದೀಕ್ಷಾಸ್ನಾನ ಪಡೆದುಕೊಂಡೆ.
1925ರ ಮೇ ತಿಂಗಳಿನಲ್ಲಿ, ಸ್ವೀಡನಿನ ಅರಬ್ರೂನಲ್ಲಿ, ಸ್ಕ್ಯಾಂಡಿನೇವಿಯದ ಎಲ್ಲ ಪ್ರದೇಶಗಳಿಗಾಗಿ ಒಂದು ಸಮ್ಮೇಳನವಿತ್ತು. 500ಕ್ಕಿಂತಲೂ ಹೆಚ್ಚು ಮಂದಿ ಹಾಜರಿದ್ದರು. ಅವರಲ್ಲಿ ವಾಚ್ ಟವರ್ ಸೊಸೈಟಿಯ ಅಧ್ಯಕ್ಷರಾಗಿದ್ದ ಜೋಸೆಫ್ ಎಫ್. ರದರ್ಫರ್ಡರೂ ಇದ್ದರು. ಮುಂದಾಗಿಯೇ ಕಾದಿರಿಸಿದ್ದ ಒಂದು ರೈಲ್ರೋಡ್ ಕಾರಿನ ಮೂಲಕ, ಆಸ್ಲೋದಿಂದ ನಾವು ಸುಮಾರು 30 ಮಂದಿ ಅಲ್ಲಿಗೆ ಪ್ರಯಾಣಿಸಿದೆವು.
ಸ್ಕ್ಯಾಂಡಿನೇವಿಯ ಹಾಗೂ ಬಾಲ್ಟಿಕ್ ದೇಶಗಳಾದ್ಯಂತ ಸಾರುವ ಕೆಲಸವನ್ನು ನೋಡಿಕೊಳ್ಳಲಿಕ್ಕಾಗಿ, ಡೆನ್ಮಾರ್ಕಿನ ಕೋಪನ್ಹೇಗನ್ನಲ್ಲಿ ಒಂದು ಉತ್ತರ ಯೂರೋಪಿಯನ್ ಬ್ರಾಂಚ್ ಆಫೀಸನ್ನು ಸ್ಥಾಪಿಸಲಾಗುವುದೆಂದು ಈ ಸಮ್ಮೇಳನದಲ್ಲಿ ಪ್ರಕಟಿಸಲಾಯಿತು. ಸಾರುವ ಕೆಲಸದ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು, ಸ್ಕಾಟ್ಲೆಂಡ್ನ ವಿಲಿಯಮ್ ಡೇ ಅವರನ್ನು ನೇಮಿಸಲಾಯಿತು. ಅವರನ್ನು ಎಲ್ಲರೂ ಇಷ್ಟಪಟ್ಟರು, ಮತ್ತು ಬೇಗನೆ ಅವರು ಬಿಗ್ ಸ್ಕಾಟ್ಸ್ಮನ್ ಎಂದು ಪ್ರಸಿದ್ಧರಾದರು. ಆರಂಭದಲ್ಲಿ ಸಹೋದರ ಡೇ ಅವರಿಗೆ ಸ್ಕ್ಯಾಂಡಿನೇವಿಯದ ಯಾವುದೇ ಭಾಷಾ ಜ್ಞಾನವು ಇರಲಿಲ್ಲ. ಆದುದರಿಂದ ಕೂಟಗಳು ಹಾಗೂ ಸಮ್ಮೇಳನಗಳಲ್ಲಿ ಅವರು ಹಿಂದುಗಡೆ ಕುಳಿತುಕೊಂಡು, ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಇದರಿಂದಾಗಿ ವೇದಿಕೆಯಿಂದ ಹೇಳಲ್ಪಡುತ್ತಿದ್ದ ವಿಷಯದ ಮೇಲೆ ಆ ಮಕ್ಕಳ ಹೆತ್ತವರು ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತಿತ್ತು.
ಮಾರ್ಚ್ 1, 1925ರ ದ ವಾಚ್ ಟವರ್ ಪತ್ರಿಕೆಯು, ಪ್ರಕಟನೆ 12ನೆಯ ಅಧ್ಯಾಯವನ್ನು ಚರ್ಚಿಸಿತು ಮತ್ತು ಈ ಅಧ್ಯಾಯವು ದೇವರ ರಾಜ್ಯದ ಜನನಕ್ಕೆ ಸಂಬಂಧಿಸಿದ್ದಾಗಿದ್ದು, ಈ ಜನನವು ಸ್ವರ್ಗದಲ್ಲಿ 1914ರಲ್ಲಿ ಸಂಭವಿಸಿತೆಂಬುದನ್ನು ವಿವರಿಸಿತು. ಅದನ್ನು ಅರ್ಥಮಾಡಿಕೊಳ್ಳುವುದು ನನಗೆ ಕಷ್ಟಕರವಾಗಿ ಕಂಡುಬಂತು, ಆದುದರಿಂದ ನಾನು ಆ ಲೇಖನವನ್ನು ಮತ್ತೆ ಮತ್ತೆ ಓದಿದೆ. ಕಟ್ಟಕಡೆಗೆ ನಾನು ಅದನ್ನು ಅರ್ಥಮಾಡಿಕೊಂಡಾಗ, ನನಗೆ ಬಹಳ ಸಂತೋಷವಾಯಿತು.
ಬೈಬಲ್ ವಿಷಯಗಳ ಕುರಿತಾದ ನಮ್ಮ ತಿಳುವಳಿಕೆಯಲ್ಲಿ ಹೊಂದಾಣಿಕೆಗಳು ಮಾಡಲ್ಪಟ್ಟಾಗ, ಕೆಲವರು ಮುಗ್ಗರಿಸಿ, ದೇವಜನರಿಂದ ದೂರ ಸರಿದಿದ್ದಾರೆ. ಆದರೆ ಅಂತಹ ಹೊಂದಾಣಿಕೆಯನ್ನು ಗ್ರಹಿಸುವುದು ಕಷ್ಟಕರವಾಗಿದ್ದಾಗ, ನಾನು ಯಾವಾಗಲೂ ಆ ವಿಷಯವನ್ನು ಮತ್ತೆ ಮತ್ತೆ ಓದಿ, ಅದರ ತರ್ಕಬದ್ಧ ನಿರೂಪಣೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ. ಹೊಸ ವಿವರಣೆಯನ್ನು ನಾನು ಇನ್ನೂ ಅರ್ಥಮಾಡಿಕೊಳ್ಳದಿದ್ದಾಗ, ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ನಾನು ಕಾಯುತ್ತೇನೆ. ಆಗಿಂದಾಗ್ಗೆ ಅಂತಹ ತಾಳ್ಮೆಗಾಗಿ ನಾನು ಪ್ರತಿಫಲವನ್ನು ಪಡೆದುಕೊಂಡಿದ್ದೇನೆ.
ಬೆತೆಲ್ನಲ್ಲಿ ಸೇವೆ
ಕೆಲವು ವರ್ಷಗಳ ವರೆಗೆ ನಾನು ಗುಮಾಸ್ತೆಯಾಗಿ, ಸೆಕ್ರಿಟರಿಯಾಗಿ, ಹಾಗೂ ಕೌಂಟಿ (ಪ್ರಾಂತದ) ಆಡಿಟರ್ ಆಗಿ ಕೆಲಸಮಾಡಿದೆ. 1928ರಲ್ಲಿ, ಸೊಸೈಟಿಯ ಹಣಕಾಸಿನ ಅಕೌಂಟುಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯು ಅಸ್ವಸ್ಥನಾದನು ಮತ್ತು ಅವನು ಬೆತೆಲನ್ನು ಬಿಡಬೇಕಾಯಿತು. ಅಂತಹ ಕೆಲಸದಲ್ಲಿ ನನಗೆ ಅನುಭವವಿದ್ದುದರಿಂದ, ಆ ಕೆಲಸವನ್ನು ಮಾಡುವಂತೆ ನನ್ನನ್ನು ಕೇಳಿಕೊಳ್ಳಲಾಯಿತು. 1928ರ ಜೂನ್ ತಿಂಗಳಿನಲ್ಲಿ ನಾನು ಬೆತೆಲ್ ಸೇವೆಯನ್ನು ಆರಂಭಿಸಿದೆ. ಯಾವಾಗಲಾದರೊಮ್ಮೆ ಸಹೋದರ ಡೇ ನಮ್ಮನ್ನು ಭೇಟಿಮಾಡಿ, ಸೊಸೈಟಿಯ ಅಕೌಂಟ್ಗಳನ್ನು ಆಡಿಟ್ಮಾಡಿದರು. ಆಸ್ಲೋದಲ್ಲಿನ ಸಾರ್ವಜನಿಕ ಸಾರುವ ಕೆಲಸದಲ್ಲಿಯೂ, ನಮ್ಮ ಬೆತೆಲ್ ಕುಟುಂಬವು ಮುಂದಾಳತ್ವವನ್ನು ವಹಿಸಿತು. ಆಗ ನಮಗೆ ಅಲ್ಲಿ ಕೇವಲ ಒಂದೇ ಒಂದು ಸಭೆ ಇತ್ತು.
ಬೆತೆಲ್ನಲ್ಲಿ ಷಿಪಿಂಗ್ ಇಲಾಖೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಹೋದರ ಸಾಕ್ಸ್ಹಮರ್ರಿಗೆ, ದ ಗೋಲ್ಡನ್ ಏಜ್ (ಈಗ ಅವೇಕ್!) ಪತ್ರಿಕೆಯನ್ನು ಪ್ಯಾಕ್ಮಾಡಿ, ರವಾನಿಸಲು ನಮ್ಮಲ್ಲಿ ಕೆಲವರು ಸಹಾಯ ಮಾಡಿದೆವು. ಸಹಾಯ ಹಸ್ತವನ್ನು ನೀಡಿದವರಲ್ಲಿ, ಸಹೋದರರಾದ ಸೀಮನ್ಸನ್ ಮತ್ತು ಗುನ್ಬರ್ ಸಹ ಇದ್ದರು. ನಾವು ಕೆಲಸಮಾಡುತ್ತಿದ್ದಾಗ, ಅನೇಕವೇಳೆ ಹಾಡುಗಳನ್ನು ಹಾಡುತ್ತಾ, ತುಂಬ ಸಂತೋಷದಿಂದ ಕಾಲಕಳೆದೆವು.
ರಾಜ್ಯ ನಿರೀಕ್ಷೆಯಲ್ಲಿ ಭರವಸೆ
1935ರಲ್ಲಿ, “ಮಹಾ ಸಮೂಹ”ವು ದ್ವಿತೀಯ ಸ್ವರ್ಗೀಯ ವರ್ಗವಾಗಿಲ್ಲವೆಂಬುದನ್ನು ನಾವು ಅರ್ಥಮಾಡಿಕೊಂಡೆವು. ಬದಲಾಗಿ, ಅದು ಮಹಾ ಸಂಕಟವನ್ನು ಪಾರಾಗಿ, ಪ್ರಮೋದವನ ಭೂಮಿಯಲ್ಲಿ ಸದಾಕಾಲ ಜೀವಿಸುವ ಸಂದರ್ಭವನ್ನು ಹೊಂದಿರುವ ಒಂದು ವರ್ಗಕ್ಕೆ ಸೂಚಿತವಾಗಿದೆ ಎಂಬುದನ್ನು ನಾವು ಕಲಿತುಕೊಂಡೆವು. (ಪ್ರಕಟನೆ 7:9-14) ಈ ಹೊಸ ತಿಳುವಳಿಕೆಯಿಂದಾಗಿ, ಜ್ಞಾಪಕದ ಕುರುಹುಗಳಲ್ಲಿ ಪಾಲುತೆಗೆದುಕೊಂಡಿದ್ದ ಕೆಲವರು, ತಮ್ಮದು ಭೂನಿರೀಕ್ಷೆಯಾಗಿತ್ತೆಂಬುದನ್ನು ಗ್ರಹಿಸಿಕೊಂಡು, ಅದರಲ್ಲಿ ಪಾಲುತೆಗೆದುಕೊಳ್ಳುವುದನ್ನು ನಿಲ್ಲಿಸಿದರು.
ನನ್ನ ಸ್ವರ್ಗೀಯ ನಿರೀಕ್ಷೆಯ ಕುರಿತಾಗಿ ನನಗೆ ಎಂದೂ ಸಂಶಯಗಳು ಇರಲಿಲ್ಲವಾದರೂ, ‘ದೇವರಿಗೆ ಏಕೆ ನನ್ನ ಅಗತ್ಯವಿದೆ?’ ಎಂದು ನಾನು ಅನೇಕವೇಳೆ ಆಲೋಚಿಸಿದೆ. ಅಂತಹ ದೊಡ್ಡ ಸುಯೋಗಕ್ಕೆ ನಾನು ಅನರ್ಹಳೆಂದು ನನಗನಿಸಿತು. ನಾನು ಒಬ್ಬ ಗಿಡ್ಡ, ನಾಚಿಕೆ ಸ್ವಭಾವದ ಸ್ತ್ರೀಯಾಗಿದ್ದು, ಸ್ವರ್ಗದಲ್ಲಿ ಕ್ರಿಸ್ತನೊಂದಿಗೆ ಒಬ್ಬ ರಾಜನೋಪಾದಿ ಒಟ್ಟಿಗೆ ಆಳುವುದರ ಕುರಿತು ಯೋಚಿಸುವುದು ನನಗೆ ವಿಚಿತ್ರವಾಗಿ ಕಂಡುಬಂತು. (2 ತಿಮೊಥೆಯ 2:11, 12; ಪ್ರಕಟನೆ 5:10) ಆದರೆ, “ಅನೇಕ ಬಲಿಷ್ಠರು” (NW) ಕರೆಯಲ್ಪಡಲಿಲ್ಲ, ಬದಲಾಗಿ “ದೇವರು ಬಲಿಷ್ಠರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡನು” ಎಂಬ ಅಪೊಸ್ತಲ ಪೌಲನ ಮಾತುಗಳನ್ನು ನಾನು ಪರ್ಯಾಲೋಚಿಸಿದೆ.—1 ಕೊರಿಂಥ 1:26, 27.
IIನೆಯ ಲೋಕ ಯುದ್ಧದ ಸಮಯದಲ್ಲಿನ ಚಟುವಟಿಕೆ
1940ರ ಎಪ್ರಿಲ್ 9ರಂದು, ಜರ್ಮನ್ ಸೇನೆಗಳು ನಾರ್ವೆಯ ಮೇಲೆ ದಂಡೆತ್ತಿ ಹೋದವು, ಮತ್ತು ಬೇಗನೆ ಆ ದೇಶವು ಆಕ್ರಮಿಸಲ್ಪಟ್ಟಿತು. ಯುದ್ಧದ ಫಲಿತಾಂಶವಾಗಿ, ರಾಜ್ಯ ಸಂದೇಶಕ್ಕೆ ಅನೇಕರು ಪ್ರತಿಕ್ರಿಯೆ ತೋರಿಸುವವರಾಗಿ ಪರಿಣಮಿಸಿದರು. ಅಕ್ಟೋಬರ್ 1940ರಿಂದ ಜೂನ್ 1941ರ ವರೆಗೆ, ನಾವು 2,72,000ಕ್ಕಿಂತಲೂ ಹೆಚ್ಚು ಪುಸ್ತಕಗಳು ಹಾಗೂ ಪುಸ್ತಿಕೆಗಳನ್ನು ನೀಡಿದೆವು. ಅಂದರೆ, ಆ ಒಂಬತ್ತು ತಿಂಗಳುಗಳಲ್ಲಿ, ಆಗ ನಾರ್ವೆಯಲ್ಲಿದ್ದ 470ಕ್ಕಿಂತಲೂ ಹೆಚ್ಚು ಸಾಕ್ಷಿಗಳಲ್ಲಿ ಪ್ರತಿಯೊಬ್ಬರೂ, ಸರಾಸರಿ 570ಕ್ಕಿಂತಲೂ ಹೆಚ್ಚು ಪುಸ್ತಕಗಳನ್ನೂ ಪುಸ್ತಿಕೆಗಳನ್ನೂ ನೀಡಿದರು!
1941ರ ಜುಲೈ 8ರಂದು, ಗೆಸ್ಟಾಪೊ ಪೊಲೀಸರು ಎಲ್ಲ ಅಧ್ಯಕ್ಷ ಮೇಲ್ವಿಚಾರಕರನ್ನು ಸಂದರ್ಶಿಸಿ, ಸಾರುವ ಕೆಲಸವನ್ನು ನಿಲ್ಲಿಸದಿರುವಲ್ಲಿ, ಅವರನ್ನು ಕೂಟ ಶಿಬಿರಗಳಿಗೆ ಕಳುಹಿಸಲಾಗುವುದೆಂದು ಅವರಿಗೆ ಹೇಳಿದರು. ಐವರು ಜರ್ಮನ್ ಪೊಲೀಸ್ ಅಧಿಕಾರಿಗಳು ಬೆತೆಲಿಗೆ ಬಂದು, ವಾಚ್ ಟವರ್ ಸೊಸೈಟಿಯ ಸ್ವತ್ತಿನಲ್ಲಿ ಹೆಚ್ಚಿನದ್ದನ್ನು ವಶಪಡಿಸಿಕೊಂಡರು. ಬೆತೆಲ್ ಕುಟುಂಬವು ಕರೆದೊಯ್ಯಲ್ಪಟ್ಟು, ಪ್ರಶ್ನಿಸಲ್ಪಟ್ಟಿತಾದರೂ, ನಮ್ಮಲ್ಲಿ ಯಾರೂ ಸೆರೆಯಲ್ಲಿ ಬಂಧಿಸಲ್ಪಡಲಿಲ್ಲ. ಅಂತಿಮವಾಗಿ, 1941ರ ಜುಲೈ 21ರಂದು, ಸೊಸೈಟಿಯ ಇನ್ಕಾಗ್ನಿಟಾಗಾಟನ್ 28 ಬಿ ಕಟ್ಟಡವು ವಶಪಡಿಸಿಕೊಳ್ಳಲ್ಪಟ್ಟಿತು, ಮತ್ತು ನಮ್ಮ ಸಾರುವ ಕೆಲಸವು ನಿಷೇಧಿಸಲ್ಪಟ್ಟಿತು. ನಾನು ಕಾಪರ್ವೀಕ್ಗೆ ಹಿಂದಿರುಗಿ, ನನ್ನನ್ನು ಪೋಷಿಸಿಕೊಳ್ಳಲಿಕ್ಕಾಗಿ ಐಹಿಕ ಕೆಲಸವನ್ನು ದೊರಕಿಸಿಕೊಂಡೆ.
ಆ ಸಮಯದಲ್ಲಿ, ತಂದೆಯವರು ಒಬ್ಬ ಪಯನೀಯರರಾಗಿ ಸೇವೆಮಾಡುತ್ತಿದ್ದರು. ಒಂದು ದಿನ ನಾಸಿಗಳು ಬಂದು, ನನ್ನ ತಂದೆಯ ಮನೆಯನ್ನು ಪರಿಶೋಧಿಸಿದರು. ಅವರು ತಂದೆಯವರ ಸಾಹಿತ್ಯವನ್ನೆಲ್ಲ—ಅವರ ಬೈಬಲುಗಳು ಹಾಗೂ ಬೈಬಲ್ ಕನ್ಕಾರ್ಡನ್ಸ್ಗಳೂ ಸೇರಿದ್ದವು—ತೆಗೆದುಕೊಂಡುಹೋದರು. ಈ ಕಾಲಾವಧಿಯಲ್ಲಿ ನಮಗೆ ಆತ್ಮಿಕ ಆಹಾರದ ಅತ್ಯಲ್ಪ ಸರಬರಾಯಿಯು ದೊರಕಿತು. ಆತ್ಮಿಕವಾಗಿ ಪ್ರಬಲರಾಗಿ ಉಳಿಯಲಿಕ್ಕಾಗಿ, ಸರಕಾರ (ಇಂಗ್ಲಿಷ್) ಪುಸ್ತಕದಂತಹ ಹಳೆಯ ಪುಸ್ತಕಗಳನ್ನು ನಾವು ಮತ್ತೆ ಮತ್ತೆ ಅಭ್ಯಾಸಿಸಿದೆವು, ಮತ್ತು ಸಾರುವುದನ್ನು ಮುಂದುವರಿಸಿದೆವು.
ದುಃಖಕರವಾಗಿ, ಅನೇಕ ಸ್ಥಳಗಳಲ್ಲಿ ಸಹೋದರರು ವಿಭಾಗಿತರಾಗಿದ್ದರು. ನಾವು ಮನೆಯಿಂದ ಮನೆಗೆ ಹೋಗಿ ಬಹಿರಂಗವಾಗಿ ಸಾರಬೇಕು ಎಂಬುದು ಕೆಲವರ ಅಭಿಪ್ರಾಯವಾಗಿದ್ದಾಗ, ಜನರನ್ನು ಬೇರೆ ರೀತಿಗಳಲ್ಲಿ ಸಂಪರ್ಕಿಸುತ್ತಾ, ನಾವು ಹೆಚ್ಚು ರಹಸ್ಯವಾಗಿ ಕೆಲಸಮಾಡಬೇಕೆಂಬುದು ಇನ್ನಿತರರ ಅಭಿಪ್ರಾಯವಾಗಿತ್ತು. ಹೀಗೆ, ಈ ಮುಂಚೆ ಚೆನ್ನಾಗಿ ಸಹಕರಿಸಿದ್ದ ಹಾಗೂ ನಾವು ಬಹಳವಾಗಿ ಪ್ರೀತಿಸುತ್ತಿದ್ದ ಗಣ್ಯ ಸಹೋದರರು, ಒಬ್ಬರೊಂದಿಗೊಬ್ಬರು ಮಾತಾಡುತ್ತಿರಲಿಲ್ಲ. ಅವರ ಮಧ್ಯೆ ಉಂಟಾದ ಈ ವಿಭಜನೆಯು, ಒಬ್ಬ ಸಾಕ್ಷಿಯೋಪಾದಿ ನನ್ನ ಜೀವಿತದಲ್ಲಿ ಬೇರೆ ಯಾವುದೇ ಸನ್ನಿವೇಶವು ತಂದಿರುವುದಕ್ಕಿಂತಲೂ ಹೆಚ್ಚು ಮನೋವೇದನೆಯನ್ನು ನನಗೆ ಉಂಟುಮಾಡಿತು.
ಯುದ್ಧಾನಂತರ ನವೀಕರಿಸಲ್ಪಟ್ಟ ಚಟುವಟಿಕೆ
ಯುದ್ಧಾನಂತರ, 1945ರ ಬೇಸಗೆ ಕಾಲದಲ್ಲಿ, ಸಹೋದರ ಡೇ ಅವರು ನಾರ್ವೆಯನ್ನು ಸಂದರ್ಶಿಸಿ, ಆಸ್ಲೋ, ಶೇಆನ್, ಮತ್ತು ಬರ್ಗನ್ನಲ್ಲಿ ಕೂಟಗಳನ್ನು ನಡೆಸಿದರು. ದ್ವೇಷವನ್ನು ಮರೆತುಬಿಡುವಂತೆ ಅವರು ಸಹೋದರರಿಗೆ ಮೊರೆಯಿಟ್ಟರು, ಮತ್ತು ಹಾಗೆ ಮಾಡಲು ಅಪೇಕ್ಷಿಸುವವರೆಲ್ಲರೂ ಎದ್ದುನಿಲ್ಲುವಂತೆ ಕೇಳಿಕೊಂಡರು. ಎಲ್ಲರೂ ಎದ್ದುನಿಂತರು! 1945ರ ಡಿಸೆಂಬರ್ ತಿಂಗಳಿನಲ್ಲಿ, ಆಗ ವಾಚ್ ಟವರ್ ಸೊಸೈಟಿಯ ಅಧ್ಯಕ್ಷರಾಗಿದ್ದ ನೇತನ್ ಏಚ್. ನಾರರ ಭೇಟಿಯ ಬಳಿಕ, ಆ ವಾಗ್ವಾದವು ಶಾಶ್ವತವಾಗಿ ಬಗೆಹರಿಸಲ್ಪಟ್ಟಿತು.
ಈ ಮಧ್ಯೆ, 1945ರ ಜುಲೈ 17ರಂದು, ಬ್ರಾಂಚ್ ಸೇವಕರಾದ ಸಹೋದರ ಎನಕ್ ಅಮನ್ರಿಂದ, ‘ನೀನು ಯಾವಾಗ ಬೆತೆಲಿಗೆ ಹಿಂದಿರುಗಬಲ್ಲೆ?’ ಎಂಬ ಹೇಳಿಕೆಯಿದ್ದ ಒಂದು ಟೆಲಿಗ್ರಾಮ್ ನನಗೆ ಬಂತು. ನಾನು ಮನೆಯಲ್ಲೇ ಇದ್ದುಕೊಂಡು, ಆಗ 70ಕ್ಕೂ ಹೆಚ್ಚು ಪ್ರಾಯವಾಗಿದ್ದ ನನ್ನ ತಂದೆಯನ್ನು ನೋಡಿಕೊಳ್ಳಬೇಕೆಂದು ಕೆಲವರು ಹೇಳಿದರು. ಆದರೆ ನಾನು ಬೆತೆಲ್ ಸೇವೆಯನ್ನು ಪುನರಾರಂಭಿಸುವಂತೆ ತಂದೆ ನನ್ನನ್ನು ಪ್ರೋತ್ಸಾಹಿಸಿದರು; ನಾನು ಅದನ್ನು ಮಾಡಿದೆ. 1946ರಲ್ಲಿ, ಅಮೆರಿಕದಿಂದ ಬಂದ ಒಬ್ಬ ಸಹೋದರರಾದ ಮಾರ್ವಿನ್ ಎಫ್. ಆಂಡರ್ಸನ್, ನಮ್ಮ ಬ್ರಾಂಚ್ ಮೇಲ್ವಿಚಾರಕರಾದರು ಮತ್ತು ಸಾರುವ ಕೆಲಸವು ಪುನರ್ಸಂಘಟಿಸಲ್ಪಟ್ಟಿತು.
ಬೇಸಗೆ ಕಾಲದ ರಜೆಗಳಲ್ಲಿ, ನನ್ನ ಕುಟುಂಬವನ್ನು ನೋಡಲಿಕ್ಕಾಗಿ ನಾನು ಕಾಪರ್ವೀಕ್ಗೆ ಹಿಂದಿರುಗುತ್ತಿದ್ದೆ. ನನ್ನ ಅಣ್ಣ ಹಾಗೂ ತಮ್ಮ ಮತ್ತು ಇಬ್ಬರು ತಂಗಿಯರು ಸಾಕ್ಷಿಗಳಾಗಲಿಲ್ಲವಾದರೂ, ಅವರು ಯಾವಾಗಲೂ ತಂದೆ ಮತ್ತು ನನ್ನೊಂದಿಗೆ ಸ್ನೇಹಪರರಾಗಿದ್ದರು. ನನ್ನ ಅಣ್ಣ, ಬಂದರಿನ ಅಧಿಕಾರಿ ಹಾಗೂ ಮಾರ್ಗನಿರ್ದೇಶಕನಾದನು, ಮತ್ತು ತಮ್ಮನು ಅಧ್ಯಾಪಕನಾಗಿದ್ದನು. ನನ್ನಲ್ಲಿ ಭೌತಿಕ ಸಂಪತ್ತು ಸ್ವಲ್ಪವೇ ಇತ್ತಾದರೂ, ತಂದೆಯವರು ಅವರಿಗೆ ಹೇಳುತ್ತಿದ್ದದ್ದು: “ನಿಮಗಿಂತಲೂ ಓಟೀಲ್ಯ ಹೆಚ್ಚು ಶ್ರೀಮಂತಳು.” ಮತ್ತು ಅದು ಸತ್ಯವಾಗಿತ್ತು! ಅವರು ಏನನ್ನು ಸಂಪಾದಿಸಿದ್ದರೋ ಅದನ್ನು, ನಾನು ಆನಂದಿಸುತ್ತಿದ್ದ ಆತ್ಮಿಕ ಐಶ್ವರ್ಯಗಳಿಗೆ ತುಲನೆಮಾಡಲು ಸಾಧ್ಯವಿರಲಿಲ್ಲ! 1951ರಲ್ಲಿ 78ರ ಪ್ರಾಯದಲ್ಲಿ ತಂದೆಯವರು ಮೃತಪಟ್ಟರು. ತಾಯಿಯವರು ಈ ಮೊದಲೇ 1928ರಲ್ಲಿ ಮೃತಪಟ್ಟಿದ್ದರು.
ನನ್ನ ಜೀವಿತದ ಒಂದು ಪ್ರಧಾನ ಭಾಗವು, 1953ರಲ್ಲಿ ನ್ಯೂ ಯಾರ್ಕ್ ನಗರದಲ್ಲಿನ ಯೆಹೋವನ ಜನರ ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಹಾಜರಾದುದಾಗಿತ್ತು. ಆ ವರ್ಷದಲ್ಲಿ ಲೋಕ ಕ್ಷೇತ್ರವು 5,00,000 ಪ್ರಚಾರಕರ ಮಟ್ಟವನ್ನು ಮೀರಿತು, ಮತ್ತು 1,65,000ಕ್ಕಿಂತಲೂ ಹೆಚ್ಚು ಜನರು ಅಧಿವೇಶನಕ್ಕೆ ಹಾಜರಾಗಿದ್ದರು! 1953ರ ಅಧಿವೇಶನಕ್ಕೆ ಮುಂಚೆ, ಭೂಮಿಯಲ್ಲಿ ಯೆಹೋವನ ಸಂಸ್ಥೆಯ ಮುಖ್ಯಕಾರ್ಯಾಲಯವಾಗಿರುವ ಬ್ರೂಕ್ಲಿನ್ ಬೆತೆಲ್ನಲ್ಲಿ ನಾನು ಒಂದು ವಾರದ ವರೆಗೆ ಕೆಲಸಮಾಡಿದೆ.
ನನ್ನಿಂದ ಸಾಧ್ಯವಿರುವುದನ್ನು ಮಾಡುವುದು
ಇತ್ತೀಚಿನ ವರ್ಷಗಳಲ್ಲಿ, ಕ್ಯಾಟರ್ಯಾಕ್ಟ್ನಿಂದಾಗಿ ನನ್ನ ದೃಷ್ಟಿಯು ಕ್ಷೀಣಿಸಿದೆ. ದಪ್ಪ ಕನ್ನಡಕಗಳು ಹಾಗೂ ಭೂತಗನ್ನಡಿಯ ಸಹಾಯದಿಂದ ನಾನು ಈಗಲೂ ದೊಡ್ಡಕ್ಷರದ ಆವೃತ್ತಿಯನ್ನು ಸ್ವಲ್ಪ ಓದಬಲ್ಲೆ. ಮತ್ತು ಕ್ರೈಸ್ತ ಸಹೋದರಿಯರು ನನ್ನನ್ನು ಭೇಟಿಮಾಡಿ, ವಾರಕ್ಕೆ ಎರಡು ಬಾರಿ ನನಗಾಗಿ ಓದುತ್ತಾರೆ. ಇದಕ್ಕಾಗಿ ನಾನು ತುಂಬ ಕೃತಜ್ಞಳು.
ನನ್ನ ಸಾರುವ ಚಟುವಟಿಕೆಯು ಸಹ ಸೀಮಿತವಾಗಿದೆ. ಬೇಸಗೆ ಕಾಲದಲ್ಲಿ, ಕ್ರೈಸ್ತ ಸಹೋದರಿಯರು ಆಗಿಂದಾಗ್ಗೆ ನನ್ನನ್ನು, ನಾನು ಎಲ್ಲಿ ಸ್ವಲ್ಪ ಸಾರುವ ಕೆಲಸವನ್ನು ಮಾಡಸಾಧ್ಯವಿದೆಯೋ ಆ ಸ್ಥಳಕ್ಕೆ ನನ್ನ ಗಾಲಿಕುರ್ಚಿಯಲ್ಲಿ ಕರೆದುಕೊಂಡು ಹೋಗಿದ್ದಾರೆ. ಸುಮಾರು 100 ವರ್ಷಗಳ ಹಿಂದೆ ನಾನು ಯಾವ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯಾಗಿದ್ದೆನೋ ಆ ಶಾಲೆಯಂತಹ, ಕಾಪರ್ವೀಕ್ನಲ್ಲಿರುವ ಶಾಲೆಗಳಿಗೆ ನಾನು ಕ್ರಮವಾಗಿ ಪತ್ರಿಕೆಗಳನ್ನೂ ಬ್ರೋಷರ್ಗಳನ್ನೂ ರವಾನಿಸುತ್ತೇನೆ. ಇನ್ನು ಕೂಡ ನಾನು ಒಬ್ಬ ಕ್ರಮವಾದ ಪ್ರಚಾರಕಳಾಗಿರಲು ಸಾಧ್ಯವಾಗಿರುವುದಕ್ಕಾಗಿ ನನಗೆ ಸಂತೋಷವಾಗುತ್ತದೆ.
1983ರಂದಿನಿಂದ ಆಸ್ಲೋವಿನ ಹೊರಗೆ ಇಟ್ರೆ ಎನೆಬಾಕ್ನಲ್ಲಿ ಸ್ಥಾಪಿತವಾಗಿರುವ ಬೆತೆಲ್ನಲ್ಲಿ, ನನ್ನ ಕೊಠಡಿಯು ಇರುವ ಮಹಡಿಯಲ್ಲೇ ಡೈನಿಂಗ್ ರೂಮ್ ಹಾಗೂ ರಾಜ್ಯ ಸಭಾಗೃಹವಿರುವುದು ಅನುಕೂಲಕರವಾಗಿದೆ. ಆದುದರಿಂದಲೇ, ವಾಕರ್ನ ಸಹಾಯದಿಂದ ನಾನು ಬೆಳಗ್ಗಿನ ಆರಾಧನೆ (ಮಾರ್ನಿಂಗ್ ವರ್ಷಿಪ್), ಊಟಗಳು, ಹಾಗೂ ಕೂಟಗಳಿಗೆ ಬರಲು ಶಕ್ತಳಾಗಿದ್ದೇನೆ. ಮತ್ತು ನಾನು ಇನ್ನು ಕೂಡ ಅಧಿವೇಶನಗಳಿಗೆ ಹಾಗೂ ಸಮ್ಮೇಳನಗಳಿಗೆ ಹೋಗಲು ಶಕ್ತಳಾಗಿರುವುದೂ ನನಗೆ ಸಂತೋಷದ ಸಂಗತಿ. ಅನೇಕ ವರ್ಷಗಳಿಂದ ನನಗೆ ಪರಿಚಯವಿರುವ ಸ್ನೇಹಿತರನ್ನು, ಹಾಗೂ ಹೊಸ ಸಹೋದರ ಸಹೋದರಿಯರನ್ನು ಮತ್ತು ಮುದ್ದಾದ ಅನೇಕ ಮಕ್ಕಳನ್ನು ಸಂಧಿಸುವುದರಲ್ಲಿಯೂ ನಾನು ಆನಂದಿಸುತ್ತೇನೆ.
ಅಂತ್ಯದ ತನಕ ನಂಬಿಕೆಯನ್ನು ಕಾಪಾಡಿಕೊಳ್ಳುವುದು
ಇಲ್ಲಿ ಬೆತೆಲಿನಲ್ಲಿ ಕ್ರಿಯಾಶೀಲರು, ಸ್ನೇಹಪರರು ಹಾಗೂ ಆತ್ಮಿಕ ಮನೋಭಾವದವರಾಗಿರುವ ಜನರಿಂದ ಸುತ್ತುವರಿಯಲ್ಪಟ್ಟಿರುವುದು ಒಂದು ಆಶೀರ್ವಾದವಾಗಿದೆ. ನಾನು ನನ್ನ ಬೆತೆಲ್ ಸೇವೆಯನ್ನು ಆರಂಭಿಸಿದಾಗ, ಇಡೀ ಕುಟುಂಬವು ಸ್ವರ್ಗೀಯ ನಿರೀಕ್ಷೆಯಿದ್ದವರಿಂದಲೇ ರಚಿತವಾಗಿತ್ತು. (ಫಿಲಿಪ್ಪಿ 3:14) ಈಗ ಬೆತೆಲ್ನಲ್ಲಿರುವವರಲ್ಲಿ ನನ್ನನ್ನು ಬಿಟ್ಟು ಇನ್ನೆಲ್ಲರೂ, ಭೂಮಿಯಲ್ಲಿ ಸದಾಕಾಲ ಜೀವಿಸುವುದನ್ನು ಎದುರುನೋಡುತ್ತಾರೆ.
ನಿಜ, ಯೆಹೋವನು ಈ ಮುಂಚೆಯೇ ಕ್ರಿಯೆಕೈಕೊಳ್ಳಬಹುದಿತ್ತೆಂದು ನಾವು ನಿರೀಕ್ಷಿಸಿದೆವು. ಆದರೂ, ಮಹಾ ಸಮೂಹವು ಹೆಚ್ಚೆಚ್ಚು ದೊಡ್ಡದಾಗುತ್ತಾ ಬರುತ್ತಿರುವುದನ್ನು ನೋಡುವುದರಲ್ಲಿ ನಾನು ಹರ್ಷಗೊಳ್ಳುತ್ತೇನೆ. ಎಷ್ಟೊಂದು ಹೆಚ್ಚಳವನ್ನು ನಾನು ನೋಡಿದ್ದೇನೆ! ಮೊಟ್ಟಮೊದಲ ಬಾರಿ ನಾನು ಶುಶ್ರೂಷೆಯಲ್ಲಿ ಒಳಗೂಡಿದಾಗ, ಲೋಕವ್ಯಾಪಕವಾಗಿ ಸುಮಾರು 5,000 ಪ್ರಚಾರಕರಿದ್ದರು. ಈಗ 54,00,000ಕ್ಕಿಂತಲೂ ಹೆಚ್ಚು ಪ್ರಚಾರಕರಿದ್ದಾರೆ! ನಿಜವಾಗಿಯೂ, “ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗು”ವುದನ್ನು ನಾನು ನೋಡಿದ್ದೇನೆ. (ಯೆಶಾಯ 60:22) “ತಡವಾದರೂ ಅದಕ್ಕೆ ಕಾದಿರು [“ಅದನ್ನು ನಿರೀಕ್ಷಿಸುತ್ತಿರು,” NW]; ಅದು ಬಂದೇ ಬರುವದು” ಎಂದು ಪ್ರವಾದಿಯಾದ ಹಬಕ್ಕೂಕನು ಬರೆದಂತೆ, ನಾವು ಯೆಹೋವನನ್ನು ನಿರೀಕ್ಷಿಸುತ್ತಾ ಇರುವ ಅಗತ್ಯವಿದೆ.—ಹಬಕ್ಕೂಕ 2:3.